Friday, 13th December 2024

ಹುಲಿ ಉಗುರೂ, ನವಿಲುಗರಿಯೂ…

ಭಾಸ್ಕರಾಯಣ

ಎಂ.ಕೆ.ಭಾಸ್ಕರ ರಾವ್

ತಾನಾಗೇ ಉದುರಿ ಬಿದ್ದ ನವಿಲುಗರಿಯನ್ನು ಎತ್ತಿಟ್ಟುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ನವಿಲಿನ ಹತ್ಯೆ ಸಾಮಾನ್ಯವಾಗಿದೆ. ನವಿಲು ಕಂಡಾಕ್ಷಣ ಅದನ್ನು ಅಟ್ಟಿಸಿಕೊಂಡು ಹೋಗಿ ಕೊಲ್ಲುವುದರಿಂದ ಎರಡು ಲಾಭ, ದುಷ್ಟರಿಗೆ ಇದೆ. ಒಂದೇ ಪಕ್ಷಿಯಿಂದ ಹಿಡಿ ಹಿಡಿ ಗರಿಗಳು ಸಿಗುತ್ತವೆ. ಬಳಿಕ ಸುಗ್ರಾಸ ಭೋಜನಕ್ಕೆ ಅದರ ಮಾಂಸ ಸಿಗುತ್ತದೆ.

ಎಂಭತ್ತರ ದಶಕದ ಹಿಂದೆ ಮುಂದೆ. ಮಲೆ ಮಹದೇಶ್ವರ ಬೆಟ್ಟದ ದುರ್ಗಮ ಕಾಡಿನಲ್ಲಿ, ಮಧುಮಲೈ ಅರಣ್ಯದಲ್ಲಿ ಜನರು ಕಾಲಿಡಲಾಗದಂಥ ಭಯದ ವಾತಾವರಣವಿತ್ತು. ಆ ದಟ್ಟಡವಿಯೊಳಗೆ ಹೆಜ್ಜೆಯೂರಿದವರು ಜೀವಂತ ಮರಳಲಾರರೆಂಬ ಮಾತು ಚಾಲ್ತಿಯಲ್ಲಿದ್ದುದೇ ಈ ಭಯದ ಹಿಂದಿದ್ದ ಕಾರಣ. ಭೂತ ಪಿಶಾಚಿಗಳು ಜನರ ರಕ್ತ ಹೀರಿ ಸಾಯಿಸುತ್ತವೆ ಎಂಬಂಥ ಕಥೆಗಳು ದುರ್ಮರಣದ ದಾರುಣತೆಯನ್ನು ಹೆಚ್ಚಿಸಿದ್ದವು. ಅದೇ ಸಮಯದಲ್ಲಿ ಚಾಮರಾಜನಗರದ ಗುಂಡ್ಲುಪೇಟೆಯ ವಾರದ ಸಂತೆ ದಿವಸಗಳಲ್ಲಿ ಆನೆ ದಂತವನ್ನು ರಸ್ತೆ ಬದಿಗೆ ರಾಶಿ ಇಟ್ಟು ಮಾರುವ ದೊಡ್ಡ ದಂಧೆ ನಡೆದಿತ್ತು.

ಆರು ಅಡಿ, ಮೂರು ಅಡಿ, ಎರಡು ಅಡಿ ಉದ್ದವಿರುತ್ತಿದ್ದ ಆನೆ ದಂತದ ರಾಶಿಯ ಅಕ್ಕಪಕ್ಕದಲ್ಲಿ ಹುಲಿ, ಜಿಂಕೆ ಚರ್ಮ, ಹುಲಿ ಉಗುರು, ಹಲ್ಲುಗಳು, ಆನೆ ಬಾಲದ ಕೂದಲಿನ ರಾಶಿಯೂ ಒಡ್ಡಿಕೊಂಡಿರುತ್ತಿತ್ತು. ಸೌತೆಕಾಯಿ, ಬದನೆಕಾಯಿ, ಬೆಂಡೆ, ಕೊತ್ತಂಬರಿ ಸೊಪ್ಪು ಮಾರಿದಂತೆ ಇವೂ ಬೀದಿ ಬದಿ ಬಿಕರಿಗೆ ಇರುತ್ತಿದ್ದವು. ಕೊಳ್ಳುವವರು ಕೊಳ್ಳುತ್ತಿದ್ದರು, ನೋಡುವವರು ನೋಡುತ್ತಿದ್ದರು. ಅರಣ್ಯ ಇಲಾಖೆ ಮಾತ್ರ ಕಣ್ಮುಚ್ಚಿರುತ್ತಿತ್ತು.

ಸಂತೆ ಪುರಾಣ ನಿಲ್ಲಿಸಿ ಇತ್ತ ಬೆಂಗಳೂರಿಗೆ ಬರೋಣ. ವಿಧಾನಸೌಧಕ್ಕೆ ತೀರಾ ಸಮೀಪದಲ್ಲಿ ಸಿನಿಮಾ ಚಿತ್ರೀಕರಣ ಸ್ಟುಡಿಯೋ. ಅಲ್ಲಿ ಅಹೋರಾತ್ರಿ ಚಿತ್ರೀಕರಣ. ಹಗಲು ಹೊತ್ತು ಆ ಸ್ಟುಡಿಯೋ ಪ್ರಾಂಗಣದಲ್ಲಿ ಹುಲಿ ಉಗುರು, ಆನೆ ಕೂದಲು ಮಾರಾಟ ಎಗ್ಗಿಲ್ಲದೆ ನಡೆಯುತ್ತಿತ್ತು. ಆ ಕಾಲದ ಬಹುತೇಕ ನಟರು ಹುಲಿ ಉಗುರು ಖರೀದಿಸಿ ಪೆಂಡೆಂಟ್ ರೂಪದಲ್ಲಿ ಅದನ್ನು ಕೊರಳ ಮಾಲೆಯಾಗಿ ಧರಿಸುತ್ತಿದ್ದರು. ಅದು ತನ್ನ ಕೊರಳಲ್ಲಿರುವುದು ಎಲ್ಲರಿಗೂ ಕಾಣಿಸಲಿ ಎಂಬಂತೆ ಅದನ್ನು ಧರಿಸಿದ ನಟರು ಅಂಗಿಯ ಮೊದಲೆರಡು ಗುಂಡಿ ಹಾಕದೆ ಬೀಗುತ್ತಿದ್ದರು.

ಅಂಥ ಕೆಲವರ ಕೊರಳಲ್ಲಿ ಎರಡು ಉಗುರಿನ, ಮತ್ತೆ ಕೆಲವರ ಕೊರಳ ಸುತ್ತ ಒಂದು ಉಗುರಿನ ಲಾಕೆಟ್ ಉಳ್ಳ ಚೈನು. ಆನೆ ಕೂದಲಿಗೆ ಬಂಗಾರದ, ಬೆಳ್ಳಿಯ ಗುಂಡು ಪೋಣಿಸಿ ಕೈಗೆ ಬ್ರೇಸ್‌ಲೆಟ್ ರೂಪದಲ್ಲಿ ಧರಿಸುತ್ತಿದ್ದ ನಟರೂ ಅನೇಕಾನೇಕ. ಪೊಲೀಸ್ ಮತ್ತು ಅರಣ್ಯ ಇಲಾಖೆ ಮುಚ್ಚಿಟ್ಟಿರುವ ಅಥವಾ ಸುಟ್ಟು ಹಾಕಿರಲೂಬಹುದಾದ ದಾಖಲೆಗಳ ಪ್ರಕಾರ ಈ ಕಾಳದಂಧೆಯ ಹಿಂದಿದ್ದಾತ ಖೂಳ ವೀರಪ್ಪನ್. ಆಗಿನ್ನೂ ಆತ ಕಾಡುಗಳ್ಳ, ದಂತಚೋರ ಎಂದೆಲ್ಲ ಕುಖ್ಯಾತ ಆಗಿರಲಿಲ್ಲ.

ಆದರೆ ಆ ವೇಳೆಗೆಲ್ಲ ಆತ ಎಗ್ಗಿಲ್ಲದೆ ಆನೆಗಳನ್ನು ಸಾಯಿಸುತ್ತಿದ್ದ; ಜಿಂಕೆಯಂಥ ಪ್ರಾಣಿ ಗಳನ್ನು ಅವುಗಳ ಕೋಡು, ಚರ್ಮಕ್ಕಾಗಿ ಬೇಟೆಯಾಡುತ್ತಿದ್ದ. ತನ್ನ ಕಾರ್ಯಕ್ಷೇತ್ರ ಮಲೆ ಮಹದೇಶ್ವರ, ದಿಂಬಂ, ಮಧುಮಲೈ ಕಾಡಿನಲ್ಲಿ ಹೆಜ್ಜೆ ಇಟ್ಟ ಜನರನ್ನು ತರಿದುಹಾಕಿ ಭಯಭೀತ ವಾತಾವರಣ ಸೃಷ್ಟಿಸಿ ಇತರರು ಅತ್ತ ತಿರುಗಿಯೂ ನೋಡದಂತೆ ರಣಕೇಕೆ ಹಾಕಿದ್ದ. ಆತನ ಕರಾಳ ದಂಧೆಗೆ ಅರಣ್ಯ ಇಲ್ಲವೇ ಪೊಲೀಸ್ ಇಲಾಖೆ ಯಾವ ಕಡಿವಾಣವನ್ನೂ ಹಾಕಲಿಲ್ಲ. ನಿಯತ್ತಿನಿಂದ ಆತ ಒಪ್ಪಿಸುತ್ತಿದ್ದ ಮಾಮೂಲು ಇಲಾಖೆಯ ಕರ್ತವ್ಯ ಪ್ರಜ್ಞೆಗೆ ಮುಸುಕೆಳೆದಿತ್ತು.

ಕಣ್ಣಿದ್ದೂ ಕುರುಡಾಗಿದ್ದ ಇಲಾಖೆ ಅಧಿಕಾರಿ-ಸಿಬ್ಬಂದಿ ಧಾರಾಳವಾಗಿತ್ತ ರಿಯಾಯತಿ ವೀರಪ್ಪನ್ ನರನಾಡಿಗಳಲ್ಲಿ ಅವನೇ ಕಾಡಿನಲ್ಲಿ ಬೆಳೆಯುತ್ತಿದ್ದ
ಗಾಂಜಾದ ಅಮಲನ್ನು ಹೆಚ್ಚಿಸಿತ್ತು. ಆತನ ಹತ್ಯೆಯ ಪೂರ್ವದಲ್ಲಿ ಆತ ಕೊಂದ ಆನೆಯೇ ಮುಂತಾದ ಅರಣ್ಯ ಪ್ರಾಣಿಗಳಿಗೆ ಲೆಕ್ಕವಿಟ್ಟವರಿಲ್ಲ. ಬೆಳಗಿನ ಉಪಾಹಾರಕ್ಕೆ ಮೊಲದ ಮಾಂಸ, ಮಧ್ಯಾಹ್ನದ ಊಟಕ್ಕೆ ಜಿಂಕೆ ಮಾಂಸ, ರಾತ್ರಿ ಊಟಕ್ಕೆ ನವಿಲು ಮಾಂಸ ಹೀಗೆ ವರ್ಷಗಳ ಕಾಲ ನಡೆದ ಅವನ ದರ್ಬಾರಿಗೆ ಯಾವ ಇತಿಮಿತಿಯೂ ಇರಲಿಲ್ಲ. ಆನೆ ಇದ್ದರೂ ಸಾವಿರ, ಸತ್ತರೂ ಸಾವಿರ ಎಂದು ಅದರ ಮೌಲ್ಯವನ್ನು ಶತಮಾನಗಳ ಹಿಂದೆಯೇ ನಾಗರಿಕ ಸಮಾಜ ಗುರುತಿಸಿದೆ. ಆನೆಯ ಸೊಂಡಿಲಿನ ಎಡ ಬಲದಲ್ಲಿ ಹೊರಕ್ಕೆ ಚಾಚಿರುವುದಷ್ಟೇ ದಂತವಲ್ಲ.

ಆನೆಯ ಪ್ರತಿಯೊಂದು ಎಲುಬಿನ ಚೂರೂ ದಂತವೇ. ಒಳಬಾಯಿಯಲ್ಲಿರುವ ಒಂದೊಂದು ಹಲ್ಲೂ ದಂತವೇ. ಒಂದು ಆನೆಯನ್ನು ಸಾಯಿಸಿದರೆ
ವೀರಪ್ಪನ್ ಗಳಿಸುತ್ತಿದ್ದುದು ಹತ್ತಿರ ಹತ್ತಿರ ಕೋಟಿ ರೂಪಾಯಿ. ಆತನನ್ನು ಬೆಳೆಸಿದ ಅರಣ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಅದೆಷ್ಟು
ದುಡ್ಡು ದೋಚಿಕೊಂಡರೋ, ಅದೆಷ್ಟು ಬಗೆಯ ಪ್ರಾಣಿಗಳ ಮಾಂಸವನ್ನು ಭಕ್ಷಿಸಿ ಜನ್ಮ ಸಾರ್ಥಕ ಮಾಡಿಕೊಂಡರೋ, ಅದೆಷ್ಟು ಹುಲಿ ಉಗುರು,
ಜಿಂಕೆ ತೊಗಲು, ಆನೆ ದಂತ, ಕಡವೆ, ಕಾಡೆಮ್ಮೆ ಕೋಡುಗಳನ್ನು ಒಳಕ್ಕೆ ಶೇಖರಿಸಿಟ್ಟುಕೊಂಡರೋ ಯಾರು ಹೇಳಬೇಕು, ಯಾರು ಕೇಳಬೇಕು… ಇದೆಲ್ಲ ಘಟಿಸಿ ಎಷ್ಟೋ ವರ್ಷದ ಬಳಿಕ ಅರಣ್ಯ ಇಲಾಖೆ ನಿದ್ರೆಯಿಂದ ಎಚ್ಚೆತ್ತಂತೆ ಜಾಗೃತವಾಗಿದೆ.

ವನ್ಯಜೀವಿ ಸಂರಕ್ಷಣೆಗೆ ಉಗ್ರಕ್ರಮ ರೂಪಿಸಿರುವ ಅರಣ್ಯ ರಕ್ಷಣಾ ಕಾಯ್ದೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಾದ ೧೯೭೨ರಲ್ಲಿ ಜಾರಿಗೆ ಬಂತು. ಅಲ್ಲಿಂದ ಇಲ್ಲಿಯವರೆಗೆ ಈ ಕಾಯ್ದೆಯೇ ಅಸ್ತಿತ್ವದಲ್ಲಿಲ್ಲ ಎಂಬಂತಿದ್ದ ಅರಣ್ಯ ಇಲಾಖೆ ಈಗ ದಡಬಡಿಸಿ ಎದ್ದಿದೆ. ಬಿಗ್‌ಬಾಸ್ ಟಿವಿ ಕಾರ್ಯಕ್ರಮದಲ್ಲಿ ವರ್ತೂರು ಸಂತೋಷ್ ತನ್ನ ಕೊರಳಲ್ಲಿರುವ ಹುಲಿಯುಗುರಿನ ಪೆಂಡೆಂಟ್ ಪ್ರದರ್ಶಿಸಿದ ಬಳಿಕ ಅರಣ್ಯ ಇಲಾಖೆಗೆ ಜ್ಞಾನೋದಯವಾಯಿತೆನ್ನುವುದು ವಿಶೇಷ.

ಅವರನ್ನು ಬಂಽಸಿ ನ್ಯಾಯಾಲಯದ ಕಟಕಟೆಗೆ ಅಲ್ಲಿಂದ ಮುಂದಕ್ಕೆ ಸೆರೆಮನೆಗೆ ಅಟ್ಟಿದ ಇಲಾಖೆ ನಂತರದಲ್ಲಿ ದೃಷ್ಟಿ ಹರಿಸಿದ್ದು ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಮುಂತಾದವರತ್ತ. ಅಲ್ಲಿಂದ ಮುಂದಕ್ಕೆ ಯಾರ‍್ಯಾರ ಕತ್ತಿನಲ್ಲಿ ಹುಲಿ ಉಗುರಿನ ಪೆಂಡೆಂಟ್ ಇದೆ, ಯಾರ‍್ಯಾರ ಮನೆಯಲ್ಲಿ ಹುಲಿ, ಜಿಂಕೆ ಚರ್ಮವಿದೆ, ಯಾರ‍್ಯಾರ ಮನೆಯಲ್ಲಿ ಕಾಡೆಮ್ಮೆ, ಕಡವೆ, ಜಿಂಕೆಯ ಕೋಡುಗಳಿವೆ ಎಂದು ಹುಡುಕುವ ಪತ್ತೆದಾರಿ ಆರಂಭಿಸಿ ಈಗ ಏನೂ ನಡೆದೇ
ಇಲ್ಲವೇನೋ ಎಂಬಂತೆ ಮೌನಿಬಾಬಾ ಆಗಿದೆ. ಸಿನಿಮಾ ನಟರನ್ನು, ರಾಜಕಾರಣಿಗಳನ್ನು ಮತ್ತು ಇವರಿಬ್ಬರೂ ನಡುಬಾಗಿಸಿ ಗೌರವಿಸುವ ಮಠಗಳ ಸ್ವಾಮೀಜಿಗಳನ್ನು ಬೆನ್ನು ಹತ್ತಿದರೆ ಭರ್ಜರಿ ಪ್ರಚಾರ ಗ್ಯಾರಂಟಿ ಎನ್ನುವುದು ಇಲಾಖೆಗಳಿಗೆ ಗೊತ್ತಿದೆ.

ತಾವು ನಡೆಸುವ ದಾಳಿಯ ಮುನ್ಸೂಚನೆಯನ್ನು ಮುಖ್ಯವಾಗಿ ಟಿವಿ ಮಾಧ್ಯಮಕ್ಕೆ ಕೊಡುತ್ತಾರೆ. ಮೊದಲೇ ಹೇಳಲು ಅವಕಾಶ ಸಿಗದ ಸಂದರ್ಭಗಳಲ್ಲಿ ತಾವೇ ಮಾಡಿದ ದಾಳಿಯ ಸ್ವಯಂ ಚಿತ್ರೀಕರಿಸಿದ ವಿಡಿಯೋವನ್ನು ಟಿವಿ ಮಾಧ್ಯಮಕ್ಕೆ ಕೊಟ್ಟು ಅಬ್ಬರದ ಪ್ರಚಾರ ದೊರೆಯುವುದನ್ನು ಪಕ್ಕಾ ಮಾಡಿಕೊಳ್ಳುತ್ತಾರೆ. ಇವೆಲ್ಲವೂ ಸರಿಯೇ. ಆದರೆ ಈ ದಾಳಿ ಶುರುವಾದ ಎರಡು ಮೂರು ವಾರದ ಹಿಂದಿನ ಬಿಸಿ ಈಗ ಏಕಾಏಕಿ ತಣ್ಣಗಾಗಿಬಿಟ್ಟಿದೆ ಏಕೆ ಎನ್ನುವುದು ಜನರಿಗೆ ಮನವರಿಕೆ ಆಗಿಲ್ಲ. ಅನೇಕ ಮಂದಿ ಸಿನಿಮಾ ನಟರು, ರಾಜಕಾರಣಿಗಳು ತಮ್ಮಲ್ಲಿರುವುದು ಅಸಲಿ ಹುಲಿ ಉಗುರು ಅಲ್ಲವೇ ಅಲ್ಲ,
ನಕಲಿ ಎಂದು ಘೋಷಿಸಿಕೊಂಡಿದ್ದಾರೆ.

ದಾಳಿಯ ಕಾವು ತಣ್ಣಗಾಗುತ್ತಿರುವುದನ್ನು ಗಮನಿಸಿದರೆ ‘ಅಸಲಿಯಲ್ಲ ನಕಲಿ’ ಎಂಬ ಹೇಳಿಕೆಯನ್ನು ಅರಣ್ಯ ಇಲಾಖೆ ಯಾವುದೇ ತಕರಾರೂ ಇಲ್ಲದೆ
ಒಪ್ಪಿಕೊಂಡಿರುವಂತೆ ಭಾಸವಾಗುತ್ತಿದೆ. ಅತ್ತ ಅರಣ್ಯ ಸಚಿವ ಈಶ್ವರ ಖಂಡ್ರೆಯವರು ‘ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ’ ಎನ್ನುತ್ತಿದ್ದಾರೆ. ಅವರ ಮಾತು ನಿಜವೇ ಆಗಿದ್ದರೆ ದಾಳಿ ಮುಂದುವರಿಯಬೇಕಿತ್ತು. ಏಕೆಂದರೆ ಅನೇಕಾನೇಕರ ಮನೆಗಳಲ್ಲಿ ಜಿಂಕೆ ಚರ್ಮ ಇರುವುದು ಸಾಮಾನ್ಯ. ಬಹುತೇಕ ಎಲ್ಲ ಮಠಗಳಲ್ಲೂ ಗುರುಗಳು, ಸ್ವಾಮಿಗಳು, ಜಗದ್ಗುರುಗಳು ಕೂರುವುದು ಹುಲಿ ಅಥವಾ ಜಿಂಕೆ ಚರ್ಮದ ಹಾಸಿನ ಮೇಲೆಯೇ.

ಏತನ್ಮಧ್ಯೆ ನವಿಲುಗರಿಯ ಗರಿಗರಿ ಸಮಸ್ಯೆ ಸರಕಾರ ನಡೆಸುವ ಪಕ್ಷಕ್ಕೆ ಎದುರಾಗಿದ್ದು ದಾಳಿ ಎಂಬ ಪ್ರಹಸನದ ಕಾವು ತಗ್ಗಲು ಅದು ಕಾರಣವಾಗಿರಬಹುದೇ ಎಂಬ ಗುಮಾನಿ ಹುಟ್ಟಿಕೊಂಡಿದೆ. ನವಿಲು ಇರುವ ಪ್ರದೇಶದಲ್ಲೆಲ್ಲ ನವಿಲಿನ ಗರಿ ಕಳಚಿ ನೆಲಕ್ಕೆ ಬೀಳುವುದು ವಿಶೇಷವೇನಲ್ಲ. ಸಾಮಾನ್ಯವಾಗಿ ಇತರ ಹಕ್ಕಿಪುಕ್ಕಗಳನ್ನು ಮುಟ್ಟಲು ಹೇಸುವವರು, ಹಿಂದೆ ಮುಂದೆ ನೋಡುವವರು ನವಿಲುಗರಿ ಸಿಕ್ಕರೆ ಎತ್ತಿ ಜತನವಾಗಿ ಕಾಪಾಡಿಕೊಳ್ಳುತ್ತಾರೆ. ಶಾಲೆ ಕಾಲೇಜು ವಿದ್ಯಾರ್ಥಿಗಳು ತಮ್ಮ ಪುಸ್ತಕದ ಪುಟಗಳ ನಡುವೆ ನವಿಲುಗರಿಯನ್ನು ಜೋಪಾನವಾಗಿ ಇಟ್ಟುಕೊಂಡು ಆಗಾಗ ಗರಿಯ ನವಿರಾದ ಸ್ಪರ್ಶ ಪಡೆಯುತ್ತಿದ್ದುದು ಆ ದಿನಗಳ ಅನೇಕರ ನೆನಪಿನಲ್ಲಿರಲು ಸಾಕು. ಈಗಿನ ವಿದ್ಯಾರ್ಥಿಗಳ ಶೋಕಿ ಶೈಲಿ ಬದಲಾಗಿರುವುದರಿಂದ ಆ ಅಭ್ಯಾಸ ಇರಲಿಕ್ಕಿಲ್ಲ; ಗ್ರಾಮೀಣ ವಿದ್ಯಾರ್ಥಿಗಳಲ್ಲಿ  ಅಕಸ್ಮಾತ್ ಇದ್ದರೂ ಕಡಿಮೆ ಆಗಿರಬಹುದು.

ನವಿಲುಗರಿ ದಿನನಿತ್ಯದ ಬದುಕಿನಲ್ಲಿ ಕಾಣಿಸುವುದು ದರ್ಗಾಗಳಲ್ಲಿ. ದರ್ಗಾಕ್ಕೆ ನಡೆದುಕೊಳ್ಳುವ ಭಕ್ತರಲ್ಲಿ ಹೆಚ್ಚಿನವರು ಹಿಂದೂಗಳೇ. ಅಲ್ಲಿಗೆ ಹೋಗಿ ಬರುವರನ್ನು ಆಶೀರ್ವದಿಸಲು ನವಿಲುಗರಿಯ ಕಟ್ಟನ್ನು ಮುಲ್ಲಾಗಳು ಬಳಸುತ್ತಾರೆ. ಧೂಪದ ಹೊಗೆ ಹಾಕಿ ನವಿಲುಗರಿ ಕಟ್ಟಿನಿಂದ ಭಕ್ತರ ನೆತ್ತಿ ಮೇಲೆ ಅಟ್ಟುತ್ತ ತಟ್ಟುತ್ತ ಆಶೀರ್ವದಿಸುವ ದೃಶ್ಯ ಸರ್ವೇಸಾಮಾನ್ಯ. ಇನ್ನು ಕೆಲವು ಮುಲ್ಲಾಗಳು ಹಾದಿಬೀದಿಯಲ್ಲಿ ಅಲೆಯುತ್ತ ಇದೇ ಕೆಲಸ ಮಾಡಿ ನಾಲ್ಕು ಕಾಸು ಪೀಕುತ್ತ ಜೀವನೋಪಾಯದ ಮಾರ್ಗ ಕಂಡುಕೊಂಡಿದ್ದಾರೆ. ಇಂಥವರ ಸಂಖ್ಯೆ ಬೀದರ್ ಜಿಲ್ಲೆಯಿಂದ ಹಿಡಿದು ವೀರಪ್ಪನ್ ಆಡುಂಬೊಲವಾಗಿದ್ದ ಚಾಮರಾಜನಗರ ಜಿಲ್ಲೆಯವರೆಗೆ ಅಸಂಖ್ಯ. ಅಂಥವರ ಮನೆಯಲ್ಲಿರುವ ನವಿಲುಗರಿ ಎಷ್ಟು ಎನ್ನುವುದು ಇಲಾಖೆಗೂ ಗೊತ್ತಿಲ್ಲ. ದರ್ಗಾದಲ್ಲಿ ಮೂಟೆ
ಮೂಟೆ ಪ್ರಮಾಣದಲ್ಲಿರುವುದರ ಅಂದಾಜೂ ಇರಲಿಕ್ಕಿಲ್ಲ.

ನವಿಲು ಭಾರತದ ರಾಷ್ಟ್ರೀಯ ಪಕ್ಷಿ. ಅದರ ಗರಿ ತಾನಾಗೇ ಉದುರಿ ಬಿದ್ದುದನ್ನು ಎತ್ತಿಟ್ಟುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ನವಿಲಿನ ಹತ್ಯೆ
ಸಾಮಾನ್ಯವಾಗಿದೆ. ನವಿಲು ಕಂಡಾಕ್ಷಣ ಅದನ್ನು ಅಟ್ಟಿಸಿಕೊಂಡು ಹೋಗಿ ಕೊಲ್ಲುವುದರಿಂದ ಎರಡು ಲಾಭ, ದುಷ್ಟರಿಗೆ ಇದೆ. ಒಂದೇ ಪಕ್ಷಿಯಿಂದ ಹಿಡಿ
ಹಿಡಿ ಗರಿಗಳು ಸಿಗುತ್ತವೆ. ಗರಿ ಕಿತ್ತ ಬಳಿಕ ಸುಗ್ರಾಸ ಭೋಜನಕ್ಕೆ ಅದರ ಮಾಂಸ ಸಿಗುತ್ತದೆ. ಸಾಮಾನ್ಯವಾಗಿ ಒಂದು ಗರಿಯಲ್ಲಿ ಒಂದು ಕಣ್ಣಿರುತ್ತದೆ. ಎರಡು ಅಥವಾ ಅದಕ್ಕಿಂತ ಹೆಚ್ಚಿನ ಕಣ್ಣಿದ್ದರೆ ಅಂಥ ಗರಿಗಳಿಗೆ ಯಥೇಚ್ಛ ದರ ಸಿಗುತ್ತದೆ. ಮಾಟ ಮಂತ್ರ ಮಾಡುವ ವಾಮಾಚಾರಿಗಳಿಗೆ ಅದು
ಅವರು ಬಯಸಿದ್ದನ್ನು ಸಿದ್ಧಿಸಿಕೊಳ್ಳಲು ಒಂದು ಮಾರ್ಗ ಎನ್ನುತ್ತಾರೆ. ನವಿಲು ಹತ್ಯೆ ತಡೆಗೆ ಸರಕಾರ ಏನೇನು ಕ್ರಮ ತೆಗೆದುಕೊಳ್ಳುತ್ತದೆ ಎಂದು
ಕಾನೂನು ಹೇಳುತ್ತದೆ.

ಕಾನೂನಿನ ಪಾಡಿಗೆ ಕಾನೂನು, ಹತ್ಯೆ ಪಾಡಿಗೆ ಹತ್ಯೆ. ಭಕ್ತರ ಪ್ರಕಾರ ಈಶ್ವರ, ಗಜ ಚರ್ಮಾಂಬರ. ಶ್ರೀಕೃಷ್ಣನ ಕಿರೀಟದಲ್ಲಿ ನವಿಲುಗರಿ ದೃಷ್ಟಿಗೆ
ರಾಚುವ ಆಡಂಬರ. ಈಶ್ವರ, ಕೃಷ್ಣ ಮುಂತಾದವರ ಫೋಟೋ ಚಿತ್ರಗಳೂ ಕಾನೂನಿನ ಪ್ರಕಾರ ನಿಷಿದ್ಧವೆನಿಸಬಹುದು. ಜನರ ಮನಸ್ಸಿನ ಮೇಲೆ
ಪ್ರಭಾವ ಬೀರಬಹುದಾದ ಇಂಥ ಚಿತ್ರ, ಫೋಟೋ, ಸಿನಿಮಾ, ಧಾರಾವಾಹಿ ಮುಂತಾದವೂ ಆಕ್ಷೇಪಕ್ಕೆ ಗುರಿ ಆಗದು ಎನ್ನಲು ಕಾರಣವಿಲ್ಲ. ಒಂದಂತೂ ಸತ್ಯ, ನವಿಲು ಸೌಮ್ಯ ಪ್ರಾಣಿ. ಹುಲಿ ಉಗ್ರ ಹಿಂಸಾತ್ಮಕ ಪ್ರಾಣಿ. ಇಲ್ಲಿ ಹುಲಿ ಉಗುರಿನ ಪುರಾಣದ ಸದ್ದನ್ನು ನವಿಲುಗರಿ ಅಡಗಿಸುತ್ತಿರುವಂತಿದೆ.