ಅಲೆಮಾರಿಯ ಡೈರಿ
ಸಂತೋಷಕುಮಾರ ಮೆಹೆಂದಳೆ
ಇಲ್ಲಿರುವ ಎರಡು ಸಾವಿರ ಚಿಲ್ರೆ ಜನರಲ್ಲಿ ಒಬ್ಬನೂ ಸರಿಯಾಗಿ ಓದಿಕೊಂಡಿಲ್ಲ. ಆದರೆ ಯಾರೊಬ್ಬನೂ ತನ್ನ ಹೊಲ ಬಿಟ್ಟು ದುಡಿಮೆ, ದುಡ್ಡು ದುಗ್ಗಾಣಿ ಎಂದು ದೂರದ ಊರಿಗೆ ಗುಳೆ ಹೋಗುವ ಮಾತಾಡಿಲ್ಲ. ಈ ಹಳ್ಳಿ ತೋರಿದ ಸಾಹಸದ ಕತೆಯನ್ನು ಅಭ್ಯಸಿಸಲು ಇಲ್ಲಿಗೆ ಮ್ಯಾನೇಜ್ ಮೆಂಟ್ ಹುಡುಗರು ಎಡತಾಕುತ್ತಿದ್ದಾರೆ.
ಆದರೆ ಸುಲಭಕ್ಕೆ ಊರು ತಲುಪಲೂ ಅಸಾಧ್ಯವಾದ ಕಾರಣ ಅವರೂ ಫಜೀತಿ ಪಡುತ್ತಿದ್ದಾರೆ. ಅಲ್ಲಿಯೆ ಹುಟ್ಟಿ ಬೆಳೆದವರಿಗೆ ದಾರಿ ಇಲ್ಲದಿದ್ದರೂ ಬದುಕು ಸಲೀಸು. ಹಾಗಾಗಿ ಏನಾದರೂ ಆಗಲೇಬೇಕು ಎಂದು ಎದ್ದು ನಿಂತ ಈ ಊರಿನ ಜನ ತರಕಾರಿ ಕೃಷಿಯಲ್ಲಿ ಸಾಧಿಸಿದ ಹಿಡಿತ ಈ ಊರಿಗೆ ಮೂಲ ಹೆಸರಿನ ಬದಲಾಗಿ ‘ತರಕಾರಿ ಹಳ್ಳಿ.’ ಎಂಬ ಹೆಸರು ತಂದುಕೊಟ್ಟಿದೆ. ಝಾವಮೇ ಕ್ರಮೇಣ ತನ್ನ ಊರಿನ ಚಹರೆ ಬದಲಿಸಿಕೊಳ್ಳುತ್ತಿದೆ.
ಮಣಿಪುರದ ಪ್ರವಾಸದಲ್ಲಿದ್ದಾಗ ಆಕಸ್ಮಿಕವಾಗಿ ನಾಗಾಲ್ಯಾಂಡ್ ಗೆ ಹೊರಡುವ ಉಮೇದಿ ಬಂದದ್ದೇ ಓನಿಲ್ ಕ್ಯಾತ್ಸಂಗ್‌ನಿಗೆ
ಬುಲೆಟ್ಟು ಕೊಡಿಸುವಂತೆ ದುಂಬಾಲು ಬಿದ್ದು ಹೊರಟಿದ್ದಾಗಿತ್ತು. ಬೆಳಿಗ್ಗೆನೆ ಕೊಂಗ್ಲತುಂಗ್‌ಬಾಯ್ ಸರಹದ್ದು ದಾಟಿ ಸೇನಾಪತಿಯ ಆಚೆಗೆ ಕಾಲಿಕ್ಕಿದರೆ ಸೂರ್ಯ ನೆತ್ತಿಗೇರುವ ಮೊದಲೇ ಕೊಹಿಮಾ ವಸಾಹತು ಹಳತಾಗಿತ್ತು. ಬೆಳಕು ಅಡರುವ ಮೊದಲೇ ಎಂದಿನಂತೆ ಬಿಸಿಬಿಸಿ ಪರೋಟ ತಿಂದು ಕಟ್ಟಿಸಿಕೊಂಡೂ ಹೊರಟಿದ್ದೆ. ಕಾರಣ ಮುಖ್ಯ ಸ್ಥಳ ಹೊರತು ಪಡಿಸಿದರೆ ಊಟದ ಕತೆ ಬೇರೇಯೆ ಆಗುತ್ತದೆ ಈಶಾನ್ಯ ರಾಜ್ಯಗಳಲ್ಲಿ.
ಅಷ್ಟಕ್ಕೂ ನಾಗಾಲ್ಯಾಂಡ್ ಏನೂ ಸಾವಿರಾರು ಕಿ.ಮೀ. ದೂರವಲ್ಲವೇ ಅಲ್ಲ. ನಾನಿದ್ದ ಈಸ್ಟ್ ಇಂಫಾಲದ ಸರಹದ್ದು
ದಾಟಲು ಎರಡು ತಾಸೂ ಬೇಕಿಲ್ಲ. ಯಾವ ಬದೀಗೆ ಹೋದರೂ ಹೊಸ ರಾಜ್ಯವೇ. ಈ ಏಳು ಈಶಾನ್ಯ ರಾಜ್ಯಗಳೆಂದರೆ ನಮ್ಮ ಅಕ್ಕ ಪಕ್ಕದ ಜಿಲ್ಲೆಗಳಿಗೆ ಹೋದಷ್ಟೆ ಸಲೀಸು. ರಸ್ತೆ ಮತ್ತು ವಾಹನ ಸರಿ ಇರಬೇಕಷ್ಟೆ. ಹಾಗಾಗಿ ಈ ಬಸ್ಸುಗಳನ್ನು ನಂಬಿಕೊಂಡರೆ ಬದುಕಿಲ್ಲ ಎಂದು ಪ್ರತಿ ಬಾರಿಯಂತೆ ಈ ಬಾರಿಯೂ ಸ್ಥಳೀಯವಾಗಿ ಖಾಸಗಿ ವಾಹನ ವ್ಯವಸ್ಥೆ ಮಾಡಿಕೊಂಡು ಹೊರಟಿದ್ದೆ.
ಭಾರತಬಿಡಿ, ಸ್ವತಃ ರಾಜ್ಯದ ನಕ್ಷೆಯಲ್ಲಿ ಸೂಜಿ ಮೊನೆಯಷ್ಟೂ ಜಾಗ ಪಡೆಯದ ಈ ಹಳ್ಳಿಯ ಚಿತ್ರಗಳು ಇವತ್ತು ಗೂಗಲ್‌ನಲ್ಲಿ
ಪುಂಖಾನುಪುಂಖ. ಚಿಲ್ಲರೆ ಜನಸಂಖ್ಯೆಯ ಚಿಕ್ಕಹಳ್ಳಿ ಝಾವಮೇ ‘ಕಾಪಾಮೋಝಿ’ ಎಂಬ ದೈವಸಮಾನ ಪರ್ವತದ ಸೆರಗಿನಲ್ಲಿದೆ.
‘ಕಾಪಾಮೋಝಿ’ ಎಂದರೆ ದೇವಿಯ ಕೃಪೆ. ಯಾವ ಭಾಷೆ. ನಾಗಾಗಳಲ್ಲಿ ಪ್ರಚಲಿತವಿರುವ ಎಪ್ಪತ್ತಕ್ಕೂ ಹೆಚ್ಚಿನ ಸ್ಥಳೀಯ
ಭಾಷೆಯಲ್ಲಿ. ಲಿಪಿ..? ಅವೆಲ್ಲ ಇಲ್ಲ. ಅಗಾಧ ನೀರಿನ ಸಂಪರ್ಕ ಮತ್ತು ಒದ್ದೆ ಪ್ರದೇಶ ಇವರಿಗೆ ದೇವಿ ನೀಡಿದ ಸವಲತ್ತು.
ಅಪ್ಪಟ ನಾಗಾ ಬುಡಕಟ್ಟು ಸಮುದಾಯದ ನಿಯಮಗಳಿಗೊಳಪಟ್ಟು ಬದುಕುತ್ತಿರುವ ಜನ, ಜೀವನೋಪಾಯದ ಮತ್ತು
ಸ್ವಾವಲಂಬನೆಗಾಗಿ ಕ್ಯಾಬೇಜ್ ಮತ್ತು ಬಟಾಟೆ ಬೆಳೆಯಲು ತೊಡಗಿದ ರೀತಿಯಿದೆಯಲ್ಲ..? ದೇಶವೇ ನಿಬ್ಬೆರಗಾಗಿ ನೋಡುತ್ತಿದೆ. ನಾಗಾಲ್ಯಾಂಡ್ ಸರಕಾರ ಅಧಿಕೃತವಾಗಿ ಇದನ್ನು ತರಕಾರಿ ಹಳ್ಳಿ ಎಂದು ಘೋಷಿಸಿದೆ. ಅದಕ್ಕಾಗಿ ನಾಗಾ ಕೃಷಿ ಬೋರ್ಡ್ ೨೦೧೦ರಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ದಶಕದ ನಂತರ ತಿರುಗಿ ನೋಡುವ ಅಗತ್ಯವೇ ಇದ್ದಿಲ್ಲ. ಓದಲೆಂದು ಎಲ್ಲೆಲ್ಲೋ ಹೋಗಿದ್ದ ಹುಡುಗ ಹುಡುಗಿಯರೆಲ್ಲ
ವಾಪಸ್ಸು ಊರು ಸೇರಿದ್ದಾರೆ. ಮೂಲಭೂತ ಸೌಲಭ್ಯದಿಂದ ತೀರ ವಂಚಿತ, ಅತ್ಯಂತ ಸಂಕೀರ್ಣವಾದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳನ್ನೆದುರಿಸುತ್ತಿರುವ, ಅದರಲ್ಲೂ ಜನಾಂಗೀಯ ಮತ್ತು ಸಾಮಾಜಿಕ ಸ್ಥಿತ್ಯಂತರದ ಏಳು ಬೀಳುಗಳನ್ನು ಕಾಣುತ್ತಲೇ ಇರುವ ನಾಗಾಲ್ಯಾಂಡ್ ಅಕ್ಷರಶಃ ಪ್ರಕ್ಷುಬ್ಧ ನಾಡು.
ರಾಜಧಾನಿಯಿಂದ ಎಂಬತ್ತು ಕಿ.ಮೀ. ದೂರದಲ್ಲಿದ್ದು, ಮಣಿಪುರದೊಂದಿಗೆ ಸರಹದ್ದನ್ನು ಹಂಚಿಕೊಂಡಿರುವ ಝಾವಮೇ ಹಳ್ಳಿಯಲ್ಲಿ ಕಳೆದ ವರ್ಷದ ನಡೆದ ತರಕಾರಿ ವಹಿವಾಟು ಬರೊಬ್ಬರಿ ಹತ್ತು ಕೋಟಿ ದಾಟಿದೆ. ಐದೇ ವರ್ಷಗಳ ಹಿಂದೆ ಹತ್ತಾರು ಲಕ್ಷದ ಆಸುಪಾಸಿನಲ್ಲಿತ್ತು. ಸರಕು ಸಾಗಾಣೆಯ ತೀವ್ರ ಕಠಿಣತೆಯನ್ನೂ ಅವರು ಮೆಟ್ಟಿ ನಿಂತಿದ್ದಾರೆ. ಗುಡ್ಡಗಾಡಿನಲ್ಲಿದ್ದೂ ಸತತವಾಗಿ ಕೃಷಿ ಮತ್ತು ನೀರಾವರಿ ಸಂಬಂಧಿತ ಪರಿಣಿತರೊಂದಿಗೆ ಸಂಪರ್ಕದಲ್ಲಿದ್ದಾರೆ.
ಸ್ವಯಂ ಬದಲಾವಣೆಗೆ ತೆರೆದುಕೊಂಡ ಝಾವಮೇ ಜನರಲ್ಲೀಗ ಬೆವರಿಗೆ ತಕ್ಕ ಬೆಲೆ ಸಿಕ್ಕುತ್ತಿರುವ ಸಂತಸ ಅವರ ಊರಿನ ತುಂಬಾ ಹಸಿರು ಎದ್ದು ಕಾಣುತ್ತಿದೆ. ನೂರಾರು ಎಕರೆಗಟ್ಟಲೆ ಬೆಟ್ಟದ ಸೆರಗು ಪ್ರದೇಶದಲ್ಲಿ ನಿರಂತರವಾಗಿ ಹಲವು ಹಂತದಲ್ಲಿ ಮರು ಬಿತ್ತನೆ ಪದ್ಧತಿಯಲ್ಲಿ ಕ್ಯಾಬೇಜ್ ಮತ್ತು ಬಟಾಟೆಯ ಫೀಸಲು ತೆಗೆಯುತ್ತಿರುವ ಝಾವಮೇ ರೈತರಿಗೆ ಇಲ್ಲಿಂದ ಹೊರಕ್ಕೆ ಸಾಗಿಸುವುದೇ ಸಮಸ್ಯೆಯಾಗಿತ್ತು. ಈಶಾನ್ಯದ ಭಾಗವನ್ನು ಭಾರತಕ್ಕೆ ಸಂಪರ್ಕಿಸುವ ಚಿಕನ್ ನೆಕ್ ಎನ್ನುವ ಪ್ರದೇಶ ಇದೆಯಲ್ಲ ಅದು ನಿಜಕ್ಕೂ ಕುತ್ತಿಗೆ ಮೇಲೆ ಕೂತ ಅನುಭವಕ್ಕೀಡು ಮಾಡುತ್ತದೆ.
ಹಾಗಾಗಿ ಲಾರಿ ಮಾಲಿಕರ ಮತ್ತು ಸರಕು ಪೂರೈಸುವುದರ ಹಿಕಮತ್ತು ಅರಿತುಕೊಂಡು ಇದ್ದಕ್ಕಿದ್ದಂತೆ ಎಲ್ಲಾ ಪೂರೈಕೆದಾರರನ್ನು
ಸಾರಸಾಗಟಾಗಿ ತಿರಸ್ಕರಿಸಿಬಿಟ್ಟರು. ಮಾರುಕಟ್ಟೆಯ ಮಾಹಿತಿ ಸಿಕ್ಕುತ್ತಿದ್ದಂತೆ ತಮ್ಮ ತರಕಾರಿಗೆ, ಬೆಲೆಯಲ್ಲಿ ಆಗುತ್ತಿದ್ದ ಅನ್ಯಾಯ
ಮತ್ತು ದಲ್ಲಾಳಿಗಳ ದೌರ್ಜನ್ಯಕ್ಕೆ ವಿರುದ್ಧ ಜಗಳಕ್ಕೆ ಬದಲಾಗಿ ತಾವೇ ಕೆಲಸ ಕೈಗೆತ್ತಿಕೊಂಡರು.
ಇದರಿಂದ ಲಾಭದ ನಿರಂತರ ನಿರೀಕ್ಷೆಯಲಿದ್ದ ಸರಕು ಪೂರೈಕೆ ಮತ್ತು ಸಾಗಾಟಗರರು ಇತರ ಪೂರೈಕೆಯನ್ನು ತಡೆ ಹಿಡಿಯುವ
ಬೆದರಿಕೆ ಒಡ್ಡಿದರು. ಹೇಳಿ ಕೇಳಿ ಅದು ನಾಗ ಬುಡಕಟ್ಟು. ಅಹಾರ, ಸಂಪರ್ಕ, ಸಂವಹನ ಇಲ್ಲದೆಯೂ ಗುಡ್ಡಗಾಡಿನಲ್ಲಿ
ವಾರಗಟ್ಟಲೇ ಸೆಡ್ಡು ಹೊಡೆದು ಬದುಕುವುದನ್ನು ಪ್ರಕೃತಿಯೇ ಕಲಿಸಿದೆ. ಈ ಪುಟಗೋಸಿ ಟ್ರಕ್ಕಿನವರಿಗೆ ಬೆದರಿಯಾರೆ. ಬೇಡ
ಹೋಗಿ ಎಂದು ಬಿಟ್ಟರು.
ವಾರಾಂತ್ಯದೊಳಗೆ ಇದ್ದಬದ್ದ ನಾಲ್ಕು ಜನರ ಜನರ ನೇತೃತ್ವದಲ್ಲೆ ಸಂಘ ಸ್ಥಾಪನೆಯಾಗಿ ಸ್ವತಃ ಸಾಗಾಟ ವ್ಯವಸ್ಥೆಗೆ ಚಾಲನೆ ನೀಡಿಬಿಟ್ಟರು. ಅದಕ್ಕಾಗಿ ಮೊದಲು ತಮ್ಮಲ್ಲೇ ಸೊಸೈಟಿ ಸ್ಥಾಪಿಸಿಕೊಂಡು ಸಾರಿಗೆ ವ್ಯವಸ್ಥೆ ಮಾಡಿಕೊಂಡರು. ಯಾವಾಗ
ಸಾಗಾಟಕ್ಕಾಗಿ ಟ್ರಕ್ ಮಾಲಿಕರ ಶೋಷಣೆ ಮತ್ತು ಮಧ್ಯವರ್ತಿಗಳ ಸರಣಿಯನ್ನು ತುಂಡು ಮಾಡಲಾಯಿತೋ ಕಾಯಿಪಲ್ಯೆಗೆ
ಬಂಗಾರದ ಬೆಲೆ ಬರತೊಡಗಿತು. (ಅಂದ ಹಾಗೆ ಮೋದಿ ಸರಕಾರ ಜಾರಿಗೆ ತರುತ್ತಿರುವ ಕೃಷಿ ಕಾಯಿದೆಯೂ ಇದೇ ರೀತಿ ನೇರವಾಗಿ
ರೈತರಿಗೆ ಲಾಭ ದಕ್ಕಲಿ ಎಂದು ಕಾನೂನು ರೂಪಿಸಿ ನೇರ ವ್ಯವಹಾರಕ್ಕೆ ಅವಕಾಶ ಮಾಡಿಕೊಡುತ್ತಿದೆ.
ಆದರೆ ಇದರ ವಿರುದ್ಧ ದನಿ ಎತ್ತಿರುವ ಪ್ರಗತಿಪರ ಬೆಂಬಲಿತ ಪ್ಯಾದೆ ಗುಂಪುಗಳಿಗೆ ಇದೆಲ್ಲ ಅರ್ಥವೇ ಆಗುತ್ತಿಲ್ಲ.) ಟ್ರಕ್ಕಿನ ಸಮಸ್ಯೆ ಬಗೆಹರಿದು ಸಲೀಸಾಗಿ ಕಾಯಿಪಲ್ಯೆ ಹೊರಕ್ಕೆ ಹರಿಯಲಾರಂಭಿಸಿದ್ದು ಬೆಳೆಗೆ ಇರುವ ಮಹತ್ವ ಮತ್ತು ಬೆಲೆ ಎರಡೂ ಅರಿವಿಗೆ ಬಂತು. ನಂತರದ್ದು ಇತಿಹಾಸ. ಮಧ್ಯವರ್ತಿಗಳನ್ನು ತೆಗೆದುಹಾಕಿ ನೇರ ಪೂರೈಕೆ ಅಳವಡಿಸಿಕೊಂಡು, ಸಮಪಾಲು ಸಮಬಾಳು ಅನುಸರಿಸಿದರು.
ಸರ್ವ ಕಾರ್ಯದಲ್ಲೂ ಸಮಾನಾಂತರ ದಕ್ಷತೆ ಮತ್ತು ಜವಾಬ್ದಾರಿ ಹಂಚಿಕೆಯ ಮೇರೆಗೆ ಆಯಾ ಕ್ಷೇತ್ರ ಹಾಗೂ ವೈಯಕ್ತಿಕ
ಉತ್ಪನ್ನಕ್ಕನುಗುಣವಾಗಿ ಲಾಭ.. ಒಂದೆಕರೆಯವನಿಗೆ ಅವನ ಮಟ್ಟಕ್ಕೆ, ಹತ್ತಕೆರೆಯವನಿಗೆ ಅವನ ಮಟ್ಟಕ್ಕೆ. ಯಾರಿಗೆ ಬೇಡ.
ಬರೀ ಪರ್ವತಗಳ ಈ ನಾಡಿನಲ್ಲಿ ಈಗ ತುತ್ತ ತುದಿಯವರೆಗೂ ಜಾಗ ಇದ್ದಲ್ಲೆಲ್ಲ ಕ್ಯಾಬೆಝ್ ಹಸಿರಿಗೆ ನಳ ನಳಿಸುತ್ತಿದೆ. ಮೆಟ್ಟಿಲು ಮೆಟ್ಟಿಲಾಗಿ ಕಡೆದ ಪರ್ವತದ ಸೆರಗಿನವರೆಗೆ ಲಭ್ಯವಿರುವ ಜಾಗದಲ್ಲಿ ಕೃಷಿ ಮಾಡುತ್ತಾ, ಟೇರಸ್‌ನಲ್ಲೂ ಶುಂಠಿಯಂಥ ಸಾಮಗ್ರಿಗಳನ್ನು ಬೆಳೆಯುತ್ತಿದ್ದಾರೆ.
ಬಹುಮಹಡಿ ಪದ್ಧತಿಯ ಕೃಷಿಗಾರಿಕೆಯನ್ನೂ ಮಾಡಿದ್ದಾರೆ. ಕ್ಯಾಬೇಜ್ ಮತ್ತು ಬಟಾಟೆಯನ್ನು ಏಕಕಾಲಕ್ಕೆ ಬೆಳೆಯುತ್ತಾ, ಸಂಪೂರ್ಣ ರಸಾಯನಿಕ ಮುಕ್ತ ನೆಲವನ್ನು ರಕ್ಷಿಸುತ್ತಾ ಗುಣಮಟ್ಟ ಕಾಯ್ದುಕೊಳ್ಳುತ್ತಿರುವುದರಿಂದ ಅಗಾಧ ಬೇಡಿಕೆ ಬರುತ್ತಲೇ ಇದೆ. ಸುತ್ತ ಮುತ್ತಲ ೫೨ ಹಳ್ಳಿಗಳಲ್ಲಿ ಇವತ್ತು ಇದೇ ಮಾದರಿಯಲ್ಲಿ ಬೆಳವಣಿಗೆಯ ಹಾದಿಹಿಡಿಯುತ್ತಿರುವುದು ದುಡಿಮೆಯ
ಧನಾತ್ಮಕ ಸಂಗತಿ. -ಕ್ ಜಿಲ್ಲೆಯ -ಸ್ತೇರೋ ಪಂಚಾಯ್ತಿಯ ವ್ಯಾಪ್ತಿಯ ಝಾವಮೇ ಇವತ್ತು ನಾಗಾಲ್ಯಾಂಡ್ ರಾಜ್ಯದಲ್ಲಿ
ಮೊದಲು ಚರ್ಚೆಗೆ ಬರುತ್ತಿರುವ ಹೆಸರು.
ಸರಕಾರ ಮತ್ತು ಸಂಘಸಂಸ್ಥೆಗಳು, ಶಿಕ್ಷಣ ಮತ್ತು ಇತರ ಸೇವೆಗಳ ಬೆಂಬಲಕ್ಕೆ ಧಾವಿಸಿವೆ. ಎಲ್ಲಕ್ಕಿಂತ ಅಚ್ಚರಿ ಎಂದರೆ, ನಾಗಾಗಳ
ಸಾಂಪ್ರಾದಾಯಿಕ ಭಾಷೆ ಹೊರತು ಪಡಿಸಿದರೆ ಕೇಳಿಸುವುದು ಕೇವಲ ಇಂಗ್ಲೀಷು. ಎಂದಿನಂತೆ ಕದ್ದು ಕಾಲೂರಿ ನಂತರ ನೆಲ,
ಜಲ, ಜನ ಎಲ್ಲರನ್ನು ತಮ್ಮ ಮತಾಂತರದ ಮೂಲಕ ಒಳಗೆ ಸೆಳೆದುಕೊಳ್ಳುವ ಮಿಷನರಿಗಳ ಕಾರ್ಯ ಜಾಲ ಇಲ್ಲೂ ಕಾಲಿಟ್ಟಿದೆ.
ಹಾಗಾಗಿ ಸರಾಗವಾಗಿ ಇಂಗ್ಲೀಷ್ ಮಾಧ್ಯಮದ ಶಿಕ್ಷಣ ನಡೆಯುತ್ತಿದೆ. ಸಂವಹನ ಮಾಧ್ಯಮವಾಗಿ ಕಂಪ್ಯೂಟರ್ ಬಳಕೆಯಲ್ಲಿ ಇದು ಉಪಯೋಗಕ್ಕೆ ಬರುತ್ತಿದೆ.
ದೇಶದೆಲ್ಲೆಡೆ ಯಿಂದ ಪ್ರವಾಸಿಗರ ದಂಡು ದೌಡಾಯಿಸು ತ್ತಿರುವುದು ಝಾವಮೇ ಇತರ ವ್ಯವಸ್ಥೆಗಳಿಗೂ ತೆರೆದುಕೊಳ್ಳುತ್ತಾ, ನಮ್ಮನ್ನು ಹೊಸ ಲೋಕಕ್ಕೆ ಕಾಲಿರಿಸಿದಂತೆ ಮಾಡುತ್ತದೆ. ಪೂರ್ತಿ ಹಳ್ಳಿಯ ಆತಿಥ್ಯ ಅದ್ಭುತ. ಕಾರ್ಪೊರೇಟ್ ಕಲ್ಚರ್ ಇನ್ನೂ
ಕಾಲಿಡದಿರುವುದರಿಂದ ಝಾವಮೇ.. ಕೊಡುವ ಮುದವೇ ಬೇರೆ. ಅಲ್ಲಿನ ಬಟಾಟೆ ತಿಂಡಿಗಳು, ಕಡು ಕಪ್ಪು ಚಹ ಮತ್ತು
ಕ್ಯಾಬೇಜ್ ಸೂಪು ನಿಮ್ಮ ದಣಿವನ್ನು ನೀಗಿಸುತ್ತವೆ.
ಈಶಾನ್ಯ ರಾಜ್ಯಕ್ಕೆ ಕಾಲಿಟ್ಟರೆ ಝಾವಮೇಯ ಹೆಸರು ನಿಮ್ಮ ಪಟ್ಟಿಯಲ್ಲಿರಲಿ. ಅದಕ್ಕಿಂತ ಮೊದಲು ಇದೆಲ್ಲ ಓದಿದ ಮೇಲಾದರೂ ಇದ್ದಲ್ಲೆ ಎಲ್ಲ ಸವಲತ್ತು ಬಳಸಿಕೊಂಡು ಏನೂ ಮಾಡಬಹುದೆನ್ನುವುದಕ್ಕೆ ಚಾಲನೆ ನೀಡುವುದು ಒಂದೆಡೆಯಾ ದರೆ, ಪ್ರವಾಸ ಎಂದರೆ ಅದೇ ಬೀಚು, ರೆಸಾರ್ಟ್, ಕುಡಿತ, ಜಲಪಾತ ಆಗದೆ ಆದ್ಯತೆ ಬದಲಾಗಿ ಬದುಕು ಮತ್ತು ಜಗತ್ತು ನೋಡುವ ದೃಷ್ಟಿ ಎರಡೂ ಬದಲಾಗಲಿ ಎಂದು ಕೋರಿಕೊಳ್ಳುತ್ತಾ, ಮುಂದಿನ ವಾರ …ಧೂಳಿನ ದಾರಿಯಲ್ಲಿ ಆರ್ಯರ ಹೆಜ್ಜೆಗಳು…