ಪ್ರಸ್ತುತ
ಶ್ರೀನಿವಾಸ ರಾಘವೇಂದ್ರ, ಮೈಸೂರು
ಲೋಕದಲ್ಲಿ ಹುಟ್ಟುವ ಮಗುವಿಗೆ ತಂದೆ ತಾಯಿಗಳು ಮಗುವಿನ ಭವಿಷ್ಯದ ವ್ಯವಹಾರಕ್ಕಾಗಿ ಹೆಸರಿಡುವ ಸಮಾರಂಭವನ್ನು ನಾಮಕರಣ ಎನ್ನುತ್ತಾರೆ. ಇಡುವ ಹೆಸರು ಔಪಚಾರಿಕ ಸಂಜ್ಞೆವಾಗಿಲ್ಲದಿದ್ದರೆ, ಅರ್ಥಪೂರ್ಣವಾಗಿದ್ದರೆ ಕೆಲವು ಮಕ್ಕಗಳು ಹೆಸರಿನ ಸೂರ್ತಿಯನ್ನು ಮಾತಾಪಿತೃಗಳ ಮೇಲಿನ ಗೌರವ ಭಾವನೆಯಿಂದ ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಕೆಲವೊಮ್ಮೆ ಮಕ್ಕಳು ತದ್ವಿರುದ್ಧವಾಗಿ ಇರುವುದೂ ಉಂಟು. ಹೆಸರಿಗೆ ಅನುಗುಣವಾಗಿ ಇರಬೇಕೆಂದು ಸಮಾಜವೇನೂ ಅಪೇಕ್ಷಿಸುವುದಿಲ್ಲ. ಆದರೆ ಅಪರೂಪಕ್ಕೊಮ್ಮೆ, ಮಹಾತ್ಮರು, ಸಂತರೂ, ಜ್ಞಾನಶ್ರೇಷ್ಠರೂ ಎನಿಸಿಕೊಳ್ಳುವವರು, ಅಸಾಧಾರಣ ಸಾಧನೆಗೈಯ್ಯುವವರು ತಮ್ಮ ಆಚರಣೆಗಳಿಂದ
ತಮ್ಮ ಹೆಸರಿಗೆ ಅನ್ವಯವಾಗುವಂತೆ ನಡೆದು ಸಮಾಜದ ನೆನಪಿನಲ್ಲಿ ಚಿರಸ್ಥಾಯಿಯಾಗಿರುತ್ತಾರೆ. ಈ ಸಾಲಿಗೆ ಸೇರಿದವರು ಉಡುಪಿ ಪಲಿಮಾರು-ಭಂಡಾರಕೇರಿ ಉಭಯ ಪೀಠಾಧೀಪತಿಗಳಾಗಿದ್ದರು ಶ್ರೀವಿದ್ಯಾಮಾನ್ಯ ತೀರ್ಥರು.
ಶ್ರೀಮಧ್ವಾಚಾರ್ಯರ ಪರಂಪರೆಯಲ್ಲಿ ಒಬ್ಬರೇ ವ್ಯಕ್ತಿ ಎರಡು ಪೀಠಕ್ಕೆ ಗುರುವಾಗಿದ್ದು ಕಂಡು ಬರುತ್ತದೆ. ಶ್ರೀವಿಷ್ಣು ತೀರ್ಥರು ಸೋದೆ (ಉಡುಪಿ ಅಷ್ಟಮಠಗಳಲ್ಲಿ ಒಂದು) ಮತ್ತು ಕುಕ್ಕೆ ಸುಬ್ರಹ್ಮಣ್ಯಮಠಗಳಿಗೆ ಗುರುಗಳಾಗಿದ್ದವರು. ವಿದ್ಯಾಮಾನ್ಯರು ನಾರಾಯಣ ಹೆಸರಿನ ಬಾಲಕನಾಗಿದ್ದಾಗಲೇ ಭಂಡಾರಕೇರಿ ಮಠಕ್ಕೆ ಶ್ರೀವಿದ್ಯಾರ್ಣವ ತೀರ್ಥರ ಉತ್ತರಾಧಿಕಾರಿಗಳಾದರು. ಆಶ್ರಮ ನಾಮ ವಿದ್ಯಾಮಾನ್ಯ ತೀರ್ಥರು. ಸಂಸ್ಕೃತ ಬಲ್ಲ ವಿದ್ವಜ್ಜನರು ಈ ಹೆಸರನ್ನು ಎರಡು ರೀತಿಯಾಗಿ ವಿವೇಚಿಸುತ್ತಾರೆ. ‘ವಿದ್ಯಯಾ ಮಾನ್ಯಃ’ (ತತ್ಪುರುಷ ಸಮಾಸ). ಅಂದರೆ ತಾವು ಆರ್ಜಿಸಿದ ವಿದ್ಯೆಯಿಂದ ಎಲ್ಲರ ಗೌರವಕ್ಕೆ ಪಾತ್ರರಾದವರು. ಮತ್ತೊಂದು ವಿವೇಚನೆ ‘ವಿದ್ಯಾ ಮಾನ್ಯಾ ಯಸ್ಯ ಸಃ’(ಬಹುವ್ರಿಹೀ ಸಮಾಸ) ಅಂದರೆ ‘ಯಾರಿಂದ ವಿದ್ಯೆಯು ಗೌರವಿಸಲ್ಪಟ್ಟಿದೆಯೋ ಅವರು’ ಎಂದು. ಈ ಎರಡೂ ವಿವೇಚನೆಗಳಿಗೆ ಪಾತ್ರರಾಗಿದ್ದರು ವಿದ್ಯಾಮಾನ್ಯರು.
ವೇದಾಂತವಲ್ಲದೆ ನ್ಯಾಯ, ವ್ಯಾಕರಣ ಮುಂತಾದ ಆರು ಶಾಸಗಳಲ್ಲಿ ಅಗಾಧ ಪಾಂಡಿತ್ಯ. ಇವರಿಗೆ ವಿದ್ಯೆ ಹರಿದು ಬಂದಿದ್ದು ಶ್ರೀಸತ್ಯಧ್ಯಾನ ತೀರ್ಥರಿಂದ.
ವಿದ್ಯಾರ್ಥಿ ಜೀವನದ ನಂತರ ದೇಶಾದ್ಯಂತ ಸಂಚರಿಸಿ ತತ್ವ ಪ್ರಸಾರ ಮಾಡಿದರು. ತತ್ವಪ್ರಸಾರದಲ್ಲಿ ಎದುರಾದದ್ದು ಇವರ ವಿಚಾರ ಧಾರೆಯನ್ನು ಆಕ್ಷೇಪಿಸುವ, ವಾದಾಗ್ರಣಿಗಳಾದ ಕೋವಿದರು, ಪಂಡಿತರು. ಎಲ್ಲರನ್ನು ಎದುರಿಸಿ ನಿರ್ಭಿತಿಯಿಂದ ಗಂಟೆಗಟ್ಟಲೆ, ದಿನಗಟ್ಟಲೆ, ತಿಂಗಳುಗಟ್ಟಲೆ ತತ್ವ
ವಿಮರ್ಶೆ ಮಾಡಿದರು. ಇವರಿಗೆ ವಿದ್ವಜ್ಜನರೆಂದರೆ ಪಂಚ ಪ್ರಾಣ. ಅವರು ಸ್ವಮತೀಯರು ಪರಕೀಯ ಪರಾಮತೀಯರೆಂದು ಎಂದೂ ಬೇಧಮಾಡಲಿಲ್ಲ. ವಾದದ ಕಡೆಯಲ್ಲಿ ಅವರಿಗೆ ಸುವರ್ಣ, ರಜತ ಪಾತ್ರೆಗಳನ್ನು, ಧನ ಸಂಭಾವನೆಯನ್ನು ಮುಕ್ತ ಮನಿಸ್ಸಿನಿಂದ ಕೊಟ್ಟು ವಿದ್ಯೆಯನ್ನು ಗೌರವಿಸುತ್ತಿದ್ದರು.
ಪಕ್ಷಪಾತದ ಲವಲೇಶ ಇರುತ್ತಿರಲಿಲ್ಲ. ಇವರ ಕಾಲದಲ್ಲಿ ಮಠವೇನೂ ಶ್ರೀಮಂತವಾಗಿರಲಿಲ್ಲ. ಇವರೆಂದು ಮಠಕ್ಕೆ ಆಸ್ತಿಪಾಸ್ತಿ ಮಾಡಲಿಲ್ಲ. ಶಾಖಾ ಮಠಗಳನ್ನು ಕಟ್ಟಲಿಲ್ಲ. ಬಿಚ್ಚು ಮನಸ್ಸಿನ ಈ ಯತಿ ವರೇಣ್ಯರು ಶ್ರೀವಿಶ್ವೇಶ ತೀರ್ಥರನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜಕ್ಕೆ ಕೊಟ್ಟರು. ‘ಸ್ವಾಧ್ಯಾಯ ಪ್ರವಚನೇ ಏವೇತಿ ನಾಕೋ ಮೌದ್ಗಲ್ಯಃ’ ಎನ್ನುವುದನ್ನು ತೋರಿಸಿಕೊಟ್ಟರು. ಯತ್ಯಾಶ್ರಮ ಎಂದೂ ಶ್ರಮ ಎನಿಸಲಿಲ್ಲ. ಶ್ರೀಕೃಷ್ಣನನ್ನು ವಿಶ್ವೇಶ ತೀರ್ಥರು ಹೇಳಿದಂತೆ ‘ಅನಾವದ್ಯಾತ್ಮ ಚಾರಿತ್ರ್ಯರು’(ಜೀವನದಲ್ಲಿ ಒಂದೂ ಕಪ್ಪುಚುಕ್ಕೆ ಇಲ್ಲದವರು) ಎಂದು ಗೌರವಿಸಲ್ಪಟ್ಟರು. ಇಂತಹ ಯತಿಗೆ ಪುಣ್ಯಾರಾಧನೆ ನಿಮಿತ್ತ ನಮ್ಮ ನಮನಗಳು.