Sunday, 15th December 2024

ವಿಜಯನಗರ ಜಿಲ್ಲೆ ಕೇವಲ ರಾಜಕೀಯದ ವಿಜಯವೇ ?

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

ಭೌಗೋಳಿವಾಗಿ ಯಾವುದೇ ಜನವಾಸಿ ಪ್ರದೇಶವಾಗಲಿ ಅಲ್ಲಿ ಅದರದೇ ಆದ ವೈಚಾರಿಕತೆ, ಪರಂಪರೆ, ವೈಶೇಷಿಕವಾದ ಸೆಲೆ ಇರುತ್ತದೆ. ಅದರಲ್ಲೂ ವಿಶ್ವಕ್ಕೇ ಅತ್ಯುನ್ನತ ನಾಗರಿಕತೆ ಸಾರಿದ ಸನಾತನ ಸಂಸ್ಕೃತಿಯ ಭಾರತದಲ್ಲಂತೂ ಒಂದೊಂದು ಪ್ರದೇಶವೂ ಒಂದೊಂದು ಅದರದೇ ಆದ ಘನತೆ ಗೌರವವನ್ನು ಕಟ್ಟಿಕೊಂಡು

ಬಂದಿದೆ. ಅಂಥ ಒಂದು ಪ್ರದೇಶವೇ ಇಡೀ ದಕ್ಷಿಣ ಭಾರತವನ್ನು ಆಕ್ರಮಿಸಿಕೊಂಡು ಆವರಿಸಿಕೊಂಡು ವಿಶ್ವ ಶ್ರೇಷ್ಠ ಆಡಳಿತ ನೀಡಿದ ವಿಜಯನಗರ ಸಾಮ್ರಾಜ್ಯ. ಅಂದಿನ ವಿದೇಶಿ ಪ್ರವಾಸಿಗರಂತೂ ಇಂಥ ಸಾಮ್ರಾಜ್ಯ ನಾಗರಿಕತೆಯನ್ನು ಜಗತ್ತಿನಲ್ಲಿ ಎಲ್ಲೂ
ಕಾಣಲು ಸಾಧ್ಯವಿಲ್ಲವೆಂದೇ ವರ್ಣಿಸಿದ್ದಾರೆ. ಇದಕ್ಕೆ ಕಾರಣೀಭೂತರಾದವರಲ್ಲಿ ಪ್ರಮುಖರಾಗಿ ವಿದ್ಯಾರಣ್ಯರು, ಹರಿಹರಬುಕ್ಕ ಸಹೋದರರು, ಎರಡನೇ ದೇವರಾಯ (ಪ್ರೌಢದೇವರಾಯ), ಶ್ರೀ ಕೃಷ್ಣದೇವರಾಯ, ಅಚ್ಯುತದೇವರಾಯ ಮತ್ತು ಕೊನೆಯದಾಗಿ
ಎಂಬತ್ತರ ಇಳಿವಯಸ್ಸಿನಲ್ಲೂ ರಣರಂಗದಲ್ಲಿ ಕಾದಾಡಿದ ಅಳಿಯ ರಾಮರಾಯ.

ವಿಜಯ ನಗರ ಸಾಮ್ರಾಜ್ಯದ ಸ್ಥಾಪನೆಯ ಕುರಿತು ಒಂದು ವರ್ಣನೆಯಿದೆ. ಅದೇನೆಂದರೆ ಧರ್ಮ ಪುರುಷನು ಸೃಷ್ಠಿಕರ್ತನ ಮುಂದೆ ನಿಂತು, ದೇವಾ ನನಗಿರುವ ಒಂದೇ ಕಾಲಿನಲ್ಲಿ ನಿಲ್ಲಲು ಆಗುತ್ತಿಲ್ಲ ಎಂದು ಅಂಗಲಾಚುತ್ತಾನೆ. ಆಗ ಸೃಷ್ಠಿಕರ್ತನು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿ ಅದನ್ನೇ ಇನ್ನೊಂದು ಕಾಲನ್ನಾಗಿ ನೀಡುತ್ತಾನೆ. ಆಗಲೇ ಧರ್ಮ ಪುರುಷನು ಸದೃಡ ಗೊಂಡು ಸನಾತನ ಧರ್ಮ ಮತ್ತು ಸಂಸ್ಕೃತಿ ಭಾರತದಲ್ಲಿ ಉಳಿದುಕೊಳ್ಳುತ್ತದೆ. ಧರ್ಮ ಧ್ವಂಸಕ ದಾಳಿಯ ಇಸ್ಲಾಂ ಆಕ್ರಮಣ ವನ್ನು ಹಿಮ್ಮೆಟ್ಟಿಸಿ ಸನಾತನ ಪರಂಪರೆಯನ್ನು ಸಂರಕ್ಷಿಸಿದ ವಿಜಯನಗರ ಸಾಮ್ರಾಜ್ಯವನ್ನು ಮತ್ತು ಅದನ್ನು ಕಟ್ಟಿ ಬೆಳೆಸಿದ ರಾಜರುಗಳನ್ನು ಜಾತಿಭೇದವಿಲ್ಲದೆ ಇಂದು ಪ್ರತಿಯೊಬ್ಬ ಹಿಂದೂವೂ ಪ್ರಾತಃಸ್ಮರಣೀಯವಾಗಿ ಕಾಣಬೇಕಿದೆ.

ನಾವೀಗ ನಮ್ಮ ನಾಡಿನಲ್ಲಿ ಮೈಸೂರು ಜಿಲ್ಲೆಯನ್ನು ಸಾಂಸ್ಕೃತಿಕ ನಗರಿ ಎಂದು ಕರೆಯುತ್ತೇವೆ. ಏಕೆಂದರೆ ಅಲ್ಲಿ ರಾಜ ವಂಶಾ ಡಳಿತದ ಇತಿಹಾಸವಿದೆ. ಜೀವನದಿ ಕಾವೇರಿ ಹರಿಯುತ್ತಾಳೆ, ದುಷ್ಟಸಂಹಾರಿ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿದೇವಿಯ ನೆಲೆ ಯಿದೆ. ಸುಂದರವಾದ ನೈಸರ್ಗಿಕ ಸಂಪತ್ತಿದೆ. ಆಧುನಿಕವಾಗಿ ವಿಶ್ವವಿದ್ಯಾಲಯಗಳಿವೆ, ಸರ್ ಎಂ. ವಿಶ್ವೇಶ್ವರಯ್ಯನವರು ಮತ್ತು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಸಂವೇದನೆಯಲ್ಲಿ ಹಲವು ಅಭಿವೃದ್ಧಿ ಪ್ರಗತಿಗಳಾಗಿ ಕೃಷ್ಣರಾಜ ಸಾಗರ ಜಲಾಶಯ, ಪ್ರಾಣಿ ಸಂಗ್ರಹಾಲಯ ಇನ್ನು ಅನೇಕ ಸುಂದರ ತಾಣಗಳಿದ್ದು ಇಂದಿಗೂ ಸ್ವಚ್ಚನಗರ ಎಂಬ ಖ್ಯಾತಿ ಪಡೆದಿದೆ.

ಆದರೆ ನೆನಪಿರಲಿ ಈಗ ತಾನೇ ಒಂದು ಜಿಲ್ಲೆಯಾಗಿ ಅರಳಲಿರುವ ಹೊಸ ಪೇಟೆ ತಾಲೂಕು ಒಳಗೊಂಡ ವಿಜಯನಗರ ಜಿಲ್ಲೆ ಯಲ್ಲಿ ಏನಿಲ್ಲ ಎಂದು ಕೇಳಿದರೆ ಅದು ಖಂಡಿತಾ ಅತಿಶಯೋಕ್ತಿಯಲ್ಲ. ಬರಿಯ ಸಾಂಸ್ಕೃತಿಕ ನಗರವಲ್ಲ  ಸಂಸ್ಕೃತಿಯನ್ನು ಉಳಿಸಿದ ನಗರ ವಿಜಯನಗರವಾಗಿದ್ದು ನಾಡಿಗೆ ನವರಾತ್ರಿ ದಸರಾ ಉತ್ಸವವನ್ನು ಕಾಣಿಕೆಯಾಗಿ ನೀಡಿದ ಸಾಮ್ರಾಜ್ಯವಾಗಿದೆ. ದೇವಾಲಯ ಗುಡಿ ಗೋಪುರ ಮಂಟಪಗಳ ಜಾತ್ರೆಯಂತಿರುವ ಹಂಪಿಯಲ್ಲಿ ಸಾಮ್ರಾಜ್ಯದ ಆದಿದೊರೆ ಪಂಪಾವಿರೂಪಾಕ್ಷ ದೇವರ ಭೌತಿಕ ಧರ್ಮಾಡಳಿತವಿದೆ.

ಪಾರ್ವತಿ ಕಲ್ಯಾಣ ಸ್ಕಂದ ಪುರಾಣ, ಆ ನಂತರದ ರಾಮಾಯಣದ ಕಿಷ್ಕಿಂದಾ ಭೂಮಿಗೆ ಶ್ರೀರಾಮನ ಪಾದಸ್ಪರ್ಷ, ಶ್ರೀ ರಾಮನ ಚಾತುರ್ಮಾಸ, ಹನುಮನ ಜನ್ಮಭೂಮಿ ವಾಲಿಸುಗ್ರೀವರ ರಾಜ್ಯಭಾರವಿದೆ. ಇಂದಿನ ಆಧುನಿಕತೆಗೆ ಬಂದರೆ ನಮ್ಮ ನಾಡಿನಲ್ಲಿ
ಹುಟ್ಟಿ ಗುರುರಾಘವೇಂದ್ರಸ್ವಾಮಿಗಳ ಬೃಂದಾವನ ತಾಕಿ ಹೊರಟು ಸಮುದ್ರ ಸೇರುವ ತುಂಗಾಭದ್ರ ನದಿಯ ಚಕ್ರತಿರ್ಥವಿದೆ. ನಾಡಿನ ಅತ್ಯಂತ ವಿಶಾಲವಾದ ತುಂಗಭದ್ರ ಜಲಾಶವಿದೆ.

ಸಿರಿವಂತರ ಸಣ್ಣಕ್ಕಿ, ಬಾಳೆ, ಕಬ್ಬು ಬೆಳೆವ ಸಮೃದ್ಧ ಮಣ್ಣಿಗೆ ತುಂಗಭದ್ರೆಯ ಜೀವತೀರ್ಥವಿದೆ. ರಾಮನಿಗೆ ಬೆಂಬಲಿಸಿದ ಜಾಂಬವಂತನ ಸಂತತಿಯ ಕುರುಹು ಕರಡಿಗಳ ದರೋಜಿ ಧಾಮವಿದೆ. ವಾಲಿ ಸುಗ್ರೀವರ ರೂಪಗಳೆಂದು ಕರೆಸಿಕೊಂಡಿರುವ ಕಪ್ಪು ಕಪಿರಾಯ ಕೆಂಪುಕಪಿರಾಯರ ಮಹಾಸೈನ್ಯವಿದೆ. ಎಲ್ಲಕ್ಕಿಂತ ಮಿಗಿಲಾಗಿ ನಾಡಿನ ದೈವ ದನಿ ಕನ್ನಡ ಭಾಷೆಯ ಹಂಪಿ ಕನ್ನಡ ವಿಶ್ವವಿದ್ಯಾಲಯ ಕಮಲಾಪುರದ ವಿದ್ಯಾರಣ್ಯದಲ್ಲಿ ಸ್ಥಾಪನೆಗೊಂಡಿದೆ.

ಅದಕ್ಕೂ ಮಿಗಿಲಾಗಿ ಕನ್ನಡತಾಯಿ ಭುವನೇಶ್ವರಿದೇವಿಯ ಮೂಲಸ್ಥಾನ ಹಂಪಿಯ ವಿರೂಪಾಕ್ಷೇಶ್ವರ ದೇವಾಲಯದಲ್ಲಿದೆ. ಹಂಪಿ ಕಮಲಾಪುರ ಹೊಸ ಪೇಟೆ ಸುತ್ತಲಿನ ಪ್ರದೇಶಗಳ ವ್ಯವಸಾಯಕ್ಕೆ ಜನಜೀವನಕ್ಕೆ ವಿಜಯನಗರ ಕಾಲದಲ್ಲಿ  ನಿರ್ಮಾಣ ವಾದ ರಾಯನಕೆರೆ ಇಂದಿಗೂ ಒವರ್‌ಹೆಡ್ ಟ್ಯಾಂಕ್‌ನಂತೆ ಕಾರ್ಯನಿರ್ವಹಿಸುತ್ತಿದೆ. ಇನ್ನು ಜನಜೀವನಕ್ಕೆ ಬಂದರೆ ಅಂದು ಕೃಷ್ಣದೇವರಾಯ ವಾರಣಾಸಿ ಕಾಶಿಕ್ಷೇತ್ರದಿಂದ ಕರೆಸಿ ದೇವಾಲಯಗಳ ಪೂಜಾಸೇವೆಗಳಿಗೆ ನೇಮಿಸಿದ್ದ (ಆರವೇಲು ಬ್ರಾಹ್ಮಣುಲು) ವೈದಿಕ ಸ್ಮಾರ್ಥ ಬ್ರಾಹ್ಮಣರ ಪರಂಪರೆ ಇಂದಿಗೂ ಕಾರ್ಯನಿರ್ವಹಿಸುತ್ತಿದೆ.

ವಿದ್ಯಾರಣ್ಯರ ಗುರುಪರಂಪರೆಯಾಗಿ ಇಂದೂ ೪೭ನೇ ಯತಿಗಳಾಗಿ ವಿದ್ಯಾರಣ್ಯ ಭಾರತೀಶ್ರೀಗಳಿದ್ದು ವಿದ್ಯಾರಣ್ಯ ಮಠವಿದೆ. ಜತೆಗೆ ದೇವಾಗ ಮಠ, ಕೊಟ್ಟೂರು ಮಠ, ತೀರ್ಥಂಕರ ಮಠ ಹೀಗೆ ಒಂದೇ ಪ್ರದೇಶದಲ್ಲಿ ಸಮನ್ವಯ ಸಹಬಾಳ್ವೆಯ ಸಂಕೇತಗಳಿವೆ. ಸಾಮ್ರಾಜ್ಯದಲ್ಲಿ ಮೆರೆದ ಬೇಡ ವಾಲ್ಮೀಕಿ, ಕುರುಬ, ಬಲಜಿಗ, ತಳವಾರರು, ಕುಂಬಾರರು, ವಿಶ್ವಕರ್ಮ ಜನಾಂಗದವರು ಹೀಗೆ ಸಕಲ ಜಾತಿಗಳ ಶ್ರಮಜನಜೀವನವಿದೆ. ಅಲ್ಲದೇ ಕೃಷ್ಣದೇವರಾಯರ ಅಳಿಯ ರಾಮರಾಯನ ವಂಶಸ್ಥರಾದ ರಾಜಮಾತೆ
ಚಂದ್ರಕಾಂತದೇವಿ, ಪುತ್ರರಾದ ರಾಜ ಕೃಷ್ಣದೇವರಾಯರು ಈ ಪ್ರದೇಶದಲ್ಲಿ ನೆಲೆಸಿದ್ದಾರೆ.

ಇಂದಿಗೂ ಹಂಪಿಯಲ್ಲಿ ನಡೆಯುವ ಧಾರ್ಮಿಕ ಉತ್ಸವಗಳಲ್ಲಿ ಎಲ್ಲಾ ಜಾತಿಗಳ ಸಂವೇದನೆ ನಡೆದುಕೊಂಡು ಬಂದಿರುವುದು ಈ ಕ್ಷೇತ್ರದ ಹೆಮ್ಮೆ. ಇನ್ನು ದೇಶವಿದೇಶಗಳಿಂದ ಬರುವ ಪ್ರವಾಸಿಗರ ರೈಲುನಿಲ್ದಾಣ ಹೊಸಪೇಟೆಯಲ್ಲಿ ಸ್ಥಾಪಿತಗೊಂಡಿದೆ. ವಿಶ್ವದ ಗಮನ ಸೆಳೆಯುವ ವಿಶ್ವ ಪಾರಂಪರಿಕ ಸಂಸ್ಥೆ ಯುನೆಸ್ಕೊ ಹದ್ದಿನ ಕಣ್ಣಿನಲ್ಲಿ ಹಂಪಿ ಕಮಲಾಪುರ ಆನೆಗುಂದಿ ವಿರುಪಾಪುರಗಡ್ಡೆ
ಹೊಸಪೇಟೆ ಪ್ರದೇಶಗಳು ಒಳಗೊಂಡಿವೆ. ಇವೆಲ್ಲವೂ ಮೇಳೈಸಿರುವುದು ಮಾತ್ರ ವಿಜಯನಗರ ಸಾಮ್ರಾಜ್ಯದ ವೈಚಾರಿಕತೆ ಯಿಂದಲೇ ಹೊರತು ಇಂದಿನ ಕುಲಗೆಟ್ಟ ರಾಜಕೀಯದ ಪ್ರಭಾವದಿಂದಲ್ಲ ಎಂಬ ಸೂಕ್ಷ್ಮ ವಿಚಾರವನ್ನು ಇಲ್ಲಿನ ಪುಡಾರಿಗಳು ಮೊದಲು ಮನಗಾಣಬೇಕಿದೆ.

ಇಲ್ಲಿನ ರಾಜಕೀಯ ಬೆಳವಣಿಗೆಗಳು ರಾಷ್ಟ್ರಮಟ್ಟದ ದಿಕ್ಸೂಚಿಯಾಗಿ ನಿಂತಿವೆ. ದುರಂತವೆಂದರೆ ಇತ್ತೀಚೆಗೆ ಹಣವಂತರು ಗಣಿದಣಿಗಳೆಲ್ಲಾ ರಾಜಕೀಯದ ನಾಯಕರುಗಳಾಗಿ ಕಣಕ್ಕಿಳಿಯುತ್ತಿರುವುದು ಒಂದು ಕೆಟ್ಟ ಬೆಳವಣಿಗೆಯಾಗಿದೆ. ಯಥಾಪ್ರಕಾರ ಇದು ಜಾತಿಜಾತಿಗಳ ಮಧ್ಯೆ ಜಾಗೃತಿಗಳಿಗೆ ಇಲ್ಲಿನ ಪುಡಾರಿಗಳು ಅಡ್ಡಪರಿಣಾಮವಾಗಿ ವಿಕೇಂದ್ರಿಕರಣಗೊಳ್ಳವ ಅವಲಕ್ಷಣಗಳು ಗೋಚರಿಸುತ್ತಿದೆ. ಇನ್ನೊಂದು ಗಂಡಾಂತರಕಾರಿಯಾಗಿ ಅಂದಿನ ಇಸ್ಲಾಂ ಆಕ್ರಮಣದ ಮುಂದುವರೆದ ಭಾಗಗಳಾಗಿ ಇಂದೂ ಸಹ ಬಿಟ್ಟರೆ ಸಾಕು ಸ್ಮಾರಕಗಳಿಗೆ ಹಸಿರು ಹೊದಿಕೆ ಹೊದಿಸಿ ದರ್ಗಾ ಮಸೀದಿಗಳಾಗಿ ಮಂಟಪಗಳನ್ನು ಮತಾಂತರ ಮಾಡಿ
ತಾಜ್‌ ಮಹಲ್‌ಗಳನ್ನು ನಿರ್ಮಿಸುವ ಆಧುನಿಕ ಬಹುಮನಿ ಸುಲ್ತಾನರ ಸಂತತಿ ಇನ್ನೂ ಅಸ್ತಿತ್ವದಲ್ಲಿದೆ.

ಬೇಕಿದ್ದರೆ ಕಮಲಾಪುರದ ಜೈಭುನವೇಶ್ವರಿ ಪ್ರವಾಸಿ ಮಂದಿರದ ಎದುರಿಗಿರುವ ಮುಸ್ಲಿಂ ಸ್ಮಶಾಣದ ಕಟ್ಟಡವನ್ನು ಗಮನಿಸಿ. ಸಾಲು ಕಂಬಗಳ ಕೆತ್ತನೆಯ ಮಂಟಪದ ಕಂಬಗಳನ್ನು ಇಟ್ಟಿಗೆಗಳ ಮೂಲಕ ಮುಚ್ಚಿ ಗೋಲಾಕರ ರೂಪನೀಡಿದ್ದಾರೆ.  ಎಕರೆ ಗಟ್ಟಲೆ ಸರಕಾರಿ ಜಾಗಗಳಿಗೆ ಬೇಲಿ ಹಾಕಲಾಗಿದೆ. ಇಂಥ ಪ್ರಯತ್ನಗಳು ಸಾಕಷ್ಟಿದೆ. ಹಿಂದೂ ಸಾಮ್ರಾಜ್ಯದ ಹೃದಯ ಭಾಗ
ಎನಿಸಿರುವ ಹೊಸಪೇಟೆ ಹಂಪಿ ರಸ್ತೆಯಲ್ಲಿ ದಿಢೀರ್ ಚರ್ಚ್ ಒಂದು ತಲೆಯೆತ್ತಿದ್ದು, ಕ್ರಿಶ್ಚಿಯನ್‌ಗಳ ಇತಿಹಾಸವೇ ಇಲ್ಲದ ಜಾಗದಲ್ಲಿ ಚರ್ಚ್ ಬೇಕಾಗಿದೆಯೆಂದರೆ ಅದರ ಹಿಂದಿನ ಮತಾಂತರ ಯಾವ ಮಟ್ಟದಲ್ಲಿದೆ ನಡೆಯುತ್ತಿದೆ ಗಮನಿಸಬೇಕಿದೆ.

ಹಿಂದೆ ನಾಡೋಜ ಡಾ. ಎಂ.ಚಿದಾನಂದಮೂರ್ತಿಗಳು ಮತ್ತು ಇತಿಹಾಸಕಾರ ಡಾ.ಸೂರ್ಯನಾಥ ಕಾಮತ್ ಅವರ ಎಚ್ಚರಿಕೆಯ ನಡೆಯಿಂದಾಗಿ ಹಂಪಿ ಉಳಿಸಿ ಆಂದೋಲನ ಸ್ಥಾಪಿತಗೊಂಡು ಹಂಪಿ ಕಮಲಾಪುರ ಹೊಸಪೇಟೆಯಲ್ಲಿನ ಯುವಕರು ಜಾಗೃತ ಗೊಂಡು ಹಂಪಿಯ ಪಾವಿತ್ರ್ಯತೆಯನ್ನು ಉಳಿಸಿಕೊಂಡುಬರುತ್ತಿದ್ದಾರೆ. ಜತೆಗೆ ಹಿಂದೂ ಚಾರಣಾ ವೇದಿಕೆ, ಸಂಘ ಪರವಾರ, ಹಂಪಿ ಸ್ಮಾರಕ ಸಂಸ್ಕೃತಿ ರಕ್ಷಣಾ ವೇದಿಕೆಯಂಥ ಪ್ರಜ್ಞಾವಂತ ಯುವಸಮೂಹ ಸದಾ ಎಚ್ಚೆತ್ತುಕೊಂಡು ಹಂಪಿಯನ್ನು ರಕ್ಷಿಸುತ್ತಿವೆ. ಇಷ್ಟೆಲ್ಲಾ ಇಂದಿನ ಭಾವಿ ವಿಜಯನಗರ ಜಿಲ್ಲೆಯ ಸಾಂಸ್ಕೃತಿ ಮತ್ತು ಪಾರಂಪರಿಕ ವಿಚಾರಗಳು. ಇನ್ನು ನೂತನ ಜಿಲ್ಲೆಯ ಉದಯದಿಂದಾಗಿ ಹೊಸಪೇಟೆ ಕಂಪ್ಲಿ ಹಗರಿ ಬೊಮ್ಮನಹಳ್ಳಿ ಕೊಟ್ಟೂರು ಹೂವಿನಹಡಗಲಿ ಹರಪನಹಳ್ಳಿ ತಾಲೂಕುಗಳಲ್ಲಿನ ಜನವಾಸಿ ವಿಜಯಿಗರು ಕೊಂಚ ನಿಟ್ಟುಸಿರು ಪಡುವಂತ್ತಾಗಬಹುದು.

ಏಕೆಂದರೆ ಜಿಲ್ಲಾ ಕಚೇರಿಗಳಿಗೆ ಶ್ರೀಸಾಮಾನ್ಯರು ಗ್ರಾಮೀಣ ಹಳ್ಳಿನಿವಾಸಿಗಳು ಬಹುದೂರ ಅಲೆಯುವುದು ತಪಿಸ್ಪಬಹುದು. ಅಧಿಕಾರಿಗಳು ಕಾಮಗಾರಿಗಳು ಅನುದಾನಗಳು ಯೋಜನೆಗಳು ಮೊದಲಿಗಿಂತ ವ್ಯವಸ್ಥಿತವಾಗಿ ದಕ್ಕುಬಹುದಷ್ಟೆ. ಇಲ್ಲಿನ ರಾಜಕೀಯ ಅಧಿಕಾರಸ್ಥರು ಬೇರೇನೂ ಸಾಹಸ ಮಾಡಬೇಕಿಲ್ಲ. ಜಾತಿ ರಾಜಕೀಯ ಮಾಡದೆ ವಿಜಯನಗರ ಸಾಮ್ರಾಜ್ಯದ ಆಡಳಿತ ವ್ಯವಸ್ಥೆಯನ್ನೇ ಮಾದರಿಯಾಗಿ ಅಳವಡಿಸಿಕೊಂಡರಷ್ಟೇ ಸಾಕು ವಿಜಯನಗರ ಜಿಲ್ಲೆ ಆಧುನಿಕ ವಿಜಯನಗರ ಸಾಮ್ರಾಜ್ಯವಾಗಿ ವಿಶ್ವದ ಗಮನಸೆಳೆಯುವುದರಲ್ಲಿ ಸಂಶಯವಿಲ್ಲ.

ಮೈಸೂರಿನ ಒಡೆಯರ್ ಸಂಸ್ಥಾನವನ್ನು ಹೊರತು ಪಡಿಸಿದರೆ ನಾಡನ್ನು ಕಟ್ಟಿದ ಕದಂಬರಾದಿಯಾಗಿ ಎಲ್ಲಾ ಅರಸರ ವಂಶಸ್ಥರೆಲ್ಲಾ ಉತ್ತರಕರ್ನಾಟಕದ ಭಾಗದವರೇ ಆಗಿದ್ದಾರೆ. ಆದಿಕವಿ ಪಂಪನಿಂದ ಬಸವಣ್ಣ ಕನಕಪುರಂದರಾದಿಯಾಗಿ ಸಾಹಿತ್ಯಿಕ ಸಾಂಸ್ಕೃತಿಕ ಕೊಡುಗೆಗಳೆಲ್ಲಾ ಉತ್ತರ ಕರ್ನಾಟಕದಿಂದಲೇ ಹುಟ್ಟಿದೆ. ವಿಜಯನಗರ ಸಾಮ್ರಾಜ್ಯ ಮೆರೆದ ಅಂದಿನ
ನಾಗಲಾಪುರ ಇಂದಿನ ಹೊಸಪೇಟೆ ಆಧರಿತ ವಿಜಯ ನಗರ ಜಿಲ್ಲೆ ಇಡೀ ವಿಶ್ವಕ್ಕೆ ಮಾದರಿಯಾಗಿ ನಿಲ್ಲುವಂತೆ ಕಟ್ಟಬೇಕಾದ ಅನಿವಾರ್ಯತೆಯಿದೆ. ಬೇರೆ ಜಿಲ್ಲೆಗಳು ಅದರದೇ ಆದ ಘನತೆ ಹೆಮ್ಮೆ ಹೊಂದಿರಬಹುದು.

ಆದರೆ ವಿಜಯನಗರ ಹಿನ್ನಲೆಯಲ್ಲಿ ಮುನ್ನಲೆಗೆ ಬರುತ್ತಿರುವ ವಿಜಯನಗರ ಜಿಲ್ಲೆಗೆ ಪುರಾಣ, ರಾಮಾಯಣ, ಐತಿಹಾಸಿಕ, ವಾಸ್ತುಶಿಲ್ಪ, ವಿಜ್ಞಾನ, ನಾಗರಿಕತೆಯ ಸಹಬಾಳ್ವೆಯ ಪ್ರಭಾವಳಿಯಿದೆ. ಅಲ್ಲದೆ ಉತ್ತರದಲ್ಲಿ ರಾಮಜನ್ಮಭೂಮಿ ಅಯೋಧ್ಯೆ ಯಲ್ಲಿ ಶ್ರೀ ರಾಮನ ದೇಗುಲ ನಿರ್ಮಾಣಗೊಳ್ಳುತ್ತಿದೆ. ಅದಕ್ಕೆ ಸರಿಯಾಗಿ ಹನುಮ ಜನ್ಮಭೂಮಿಯ ತೂಕದೊಂದಿಗೆ ಹಂಪಿ ಕ್ಷೇತ್ರ ಎರಡನೇ ದೊಡ್ಡ ಪವಿತ್ರ ಯಾತ್ರಾಸ್ಥಳವಾಗುವುದರಲ್ಲಿ ಸಂಶಯವೇ ಇಲ್ಲ.

ಹೀಗಾಗಲೇ ಅಂಜನಾದ್ರಿಗೆ ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಂಪಿ ಆನೆಗುಂದಿಗೆ ಆಗಮಿಸು ಸುಲಭ ಮಾರ್ಗ ಮತ್ತು ಹೆಬ್ಬಾಗಿಲೇ ಹೊಸಪೇಟೆ ಕಂಪ್ಲಿಯ ಪ್ರದೇಶ. ಇಂಥ ಘನತೆಯನ್ನು ಕಾಪಾಡಿಕೊಂಡು ಜನಗಳ ಬದುಕಿಗೆ ಆಶ್ರಯವಾಗಿ ಅಭಿವೃದ್ಧಿ ಪ್ರಗತಿ ವಿದ್ಯೆ ಉದ್ಯೋಗ ಬಿತ್ತಿಬೆಳೆಯಬೇಕಿದೆ. ಪ್ರಜೆಗಳಿಗಾಗಿ ಉತ್ತಮ ಕೆಲಸಗಳನ್ನು ಅಖಂಡ ಬಳ್ಳಾರಿ ಜಿಲ್ಲೆಯಾಗಿ ದ್ದರೂ ಅಖಂಡ ಕರ್ನಾಟಕವಾಗಿದ್ದರೂ ಮಾಡಬಹುದು.

ಅದನ್ನು ಬಿಟ್ಟು ನನ್ನಿಂದ ಲೇ ಜಿಲ್ಲೆ, ನನ್ನಿಂದಲೇ ರಾಜ್ಯ, ನಾನೇ ರಾಜ ಎಂದೆಲ್ಲಾ ಸ್ವಾರ್ಥ ರಾಜಕೀಯ ಸೂತ್ರಗಳನ್ನು ಹೆಣೆದು ಕೊಂಡು ಮುಗ್ಧಜನರನ್ನು ಬಳಸಿಕೊಂಡು ರಾಜಕೀಯ ಅಧಿಕಾರ ಪದವಿಗಳಿಗಾಗಿ ಪವಿತ್ರವಾದ ಜಿಲ್ಲೆಯನ್ನು ಉಪಯೋಗಿಸಿ ಕೊಳ್ಳುವುದು, ಜಾತಿಗಳ ಮಧ್ಯೆ ಭೇದಭಾವ ಮೂಡಿಸುವುದು, ವಂಶರಾಜ ಕಾರಣ ಮಾಡುವುದು, ಅಲಂಕಾರಿಕ ಐಷರಾಮಿ
ವೈಭೋಗದಿಂದ ಮೆರೆಯುವುದನ್ನು ಬಿಡಬೇಕಿದೆ. ಅಂಥ ಯಾವ ನಾಯಕನಿಗೂ ಇಲ್ಲಿ ಉಳಿಗಾಲವಿಲ್ಲ ಅಂದಹಾಗೆ ಇಲ್ಲಿನ ಪ್ರದೇಶದಲ್ಲಿ ರಾಜಾಡಳಿತದ ಅವಶ್ಯಕತೆ ಇದೆ ಪರಂತೂ ರಾಜನ ಅವಶ್ಯಕತೆಯಿಲ್ಲ.

ಏಕೆಂದರೆ ನಿಜವಾದ ಚಕ್ರವರ್ತಿ ತುಂಗಭದ್ರಾ ತಟದಲ್ಲಿ ಕುಳಿತು ತ್ರಿಕಾಲಭಿಷೇಕ ಮಾಡಿಸಿಕೊಳ್ಳುತ್ತಿದ್ದಾನೆ. ಮತ್ತು ಆತನಿಗೊಂದು ನಡುಗಣ್ಣು ಹೆಚ್ಚುವರಿಯಾಗಿದ್ದು ಆತನ ಮುಂದೆ ದಾರಿತಪ್ಪಿ ನಡೆದರೆ ಮನ್ಮಥನಾಗಿ ದಹಿಸಿ ಬೂದಿಯಾಗುವುದು ನಿಶ್ಚಿತ.