Sunday, 24th November 2024

Vinayak M Bhatta, Amblihonda Column: ದುಡಿಮೆಗೊಂದು ಕೈ, ದಾನಕ್ಕೊಂದು ಕೈ..

ವಿದ್ಯಮಾನ

ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ

‘ಭಾರತೀಯ ಉದ್ಯಮಗಳ ಪಿತಾಮಹ’ ಮತ್ತು ಆಧುನಿಕ ಭಾರತೀಯ ಆರ್ಥಿಕತೆಯ ಪ್ರಮುಖ ನಿರ್ಮಾತೃ ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಜೆಆರ್‌ಡಿ ಟಾಟಾ ಅವರ ದೂರದೃಷ್ಟಿಯಿಂದಾಗಿ ಟಾಟಾ ಟ್ರಸ್ಟ್‌ಗಳು ಶತಮಾನ ದುದ್ದಕ್ಕೂ ರಾಷ್ಟ್ರಕ್ಕೆ ಮತ್ತು ಜನರಿಗೆ ಸಂಬಂಧಿಸಿದ ಸ್ವಾವಲಂಬಿ ಬೆಳವಣಿಗೆಗಳನ್ನು ಸಾಧಿಸಲು, ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ನಿರಂತರವಾಗಿ ಯತ್ನಿಸುತ್ತಾ ಬಂದಿವೆ.

ಟಾಟಾ ಸಾಮ್ರಾಜ್ಯದ ಮೂಲಪುರುಷ ಜೆಆರ್‌ಡಿ ಟಾಟಾ ಅವರ ಪ್ರಕಾರ, ಉದ್ಯಮಗಳನ್ನು ಅವುಗಳ ಮಾಲೀಕರ
ಹಿತಾಸಕ್ತಿಗಳಿಗಾಗಿ ಮಾತ್ರವಲ್ಲದೆ, ಅವುಗಳ ಉದ್ಯೋಗಿಗಳ, ಗ್ರಾಹಕರ, ಸ್ಥಳೀಯ ಸಮುದಾಯದ ಮತ್ತು ಅಂತಿ
ಮವಾಗಿ ಇಡೀ ದೇಶದ ಹಿತದೃಷ್ಟಿಯಿಂದ ಸಮಾನವಾಗಿ ನಿರ್ವಹಿಸಬೇಕು. ತನ್ನನ್ನು ನಂಬಿ ಹೂಡಿಕೆ ಮಾಡಿರುವ
ಷೇರುದಾರರು, ಉದ್ಯೋಗಿಗಳು, ಗ್ರಾಹಕರು, ಮಾರಾಟಗಾರರು, ನಿಯಂತ್ರಕರು ಮತ್ತು ಸಮಾಜ ಸೇರಿದಂತೆ ಎಲ್ಲಾ ಸಹಭಾಗಿಗಳ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ನ್ಯಾಯಯುತ, ಪಾರದರ್ಶಕ ಮತ್ತು ನೈತಿಕ ನೆಲೆಯಲ್ಲಿ ವ್ಯಾಪಾರೋದ್ಯಮವನ್ನು ನಿರ್ವಹಿಸಬೇಕಿರುವುದು ಮತ್ತು ಜವಾಬ್ದಾರಿಯುತ ಕಾರ್ಪೊರೇಟ್ ಅಸ್ತಿತ್ವವಾಗಿ ಈ ನೆಲದ ಕಾನೂನುಗಳನ್ನು ಅಕ್ಷರಶಃ ಅನುಸರಿಸುವುದು ಯಾವುದೇ ಸಂಸ್ಥೆಯ ಮೂಲ ತತ್ವ ವಾಗಿರಬೇಕು ಎಂಬುದು ಅವರ ಸಿದ್ಧಾಂತವಾಗಿತ್ತು.

ಹಾಗಾಗಿ, ಟಾಟಾ ಸಮೂಹದ ಎಲ್ಲಾ ಪೂರ್ಣಕಾಲಿಕ ಉದ್ಯೋಗಿಗಳು ಇಂದಿಗೂ ಈ ನೀತಿಸಂಹಿತೆಯನ್ನು ಅನುಸರಿಸಲು ಬದ್ಧರಾಗಿರುತ್ತಾರೆ. ಇದು ತಮ್ಮ ಸಮಗ್ರತೆ, ಜವಾಬ್ದಾರಿ, ಉತ್ಕೃಷ್ಟತೆ, ಪ್ರವರ್ತಕತ್ವ ಮತ್ತು ಏಕತೆಯ ಮೌಲ್ಯಗಳನ್ನು ಎತ್ತಿತೋರಿಸುತ್ತದೆ ಎಂಬುದು ಉದ್ಯೋಗಿಗಳ ಹೆಮ್ಮೆಯಾಗಿದೆ. ಭಾರತದ ಔದ್ಯೋಗೀಕರಣದ ಮೂಲಬೇರಾಗಿದ್ದ ಟಾಟಾ ಉದ್ಯಮ ಸಾಮ್ರಾಜ್ಯವು ಮೊದಲಿನಿಂದಲೂ ಎರಡೂ ಕೈಗಳಿಂದ ಕೆಲಸ ಮಾಡುತ್ತಾ ಬಂದಿದೆ. ಮೊದಲನೆ ಯದು ದುಡಿಯುವ ಕೈ ಆದರೆ, ಎರಡನೆಯದು ನೀಡಲಿಕ್ಕಾಗೇ ಇರುವ ಕೈ. 165 ಬಿಲಿಯನ್ ಡಾಲರ್ ಮೌಲ್ಯದ, ‘ಸಾಲ್ಟ್-ಟು-ಸಾಫ್ಟ್ ವೇರ್’ವರೆಗೆ ವ್ಯಾಪ್ತಿ ಹೊಂದಿರುವ ‘ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್’‌ ದುಡಿಯುವ ಕೈ ಆದರೆ, ನೀಡುವ ಕೈ ಆಗಿ ‘ಟಾಟಾ ಟ್ರಸ್ಟುಗಳು’ ಕಾರ್ಯನಿರ್ವಹಿಸುತ್ತಾ ಇತರರಿಗೆ ಮಾದರಿಯಾಗಿವೆ.

ಟಾಟಾ ಸಮೂಹ ಸಂಸ್ಥೆಗಳ ಪ್ರವರ್ತಕ ಅಥವಾ ಪ್ರಮುಖ ಹೂಡಿಕೆದಾರ ಕಂಪನಿಯಾಗಿ ‘ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್’ ಕೆಲಸ ಮಾಡುತ್ತದೆ. ಟಾಟಾ ಸಮೂಹದಿಂದ ಪ್ರವರ್ತಿತವಾದ ನೂರಾರು ಸಂಸ್ಥೆಗಳು ಈ ‘ಟಾಟಾ ಸನ್ಸ್’ನ ಅಡಿಯಲ್ಲಿ ಬರುತ್ತವೆ. ಇದು ಭಾರತದಾದ್ಯಂತ ತನ್ನ ಭೂಹಿಡುವಳಿಗಳು, ಚಹಾ ಎಸ್ಟೇಟ್‌ಗಳು, ಉಕ್ಕಿನ ಸ್ಥಾವರಗಳು ಸೇರಿದಂತೆ ಟಾಟಾ ಸಮೂಹ ಸಂಸ್ಥೆಗಳಲ್ಲಿ ಹೆಚ್ಚಿನ ಷೇರುಗಳನ್ನು ಹೊಂದಿದೆ ಮತ್ತು ಲಾಭಾಂಶ
ಹಾಗೂ ಬ್ರ್ಯಾಂಡ್ ರಾಯಲ್ಟಿ ಶುಲ್ಕಗಳ ಮೂಲಕ ಈ ಕಂಪನಿಗಳಿಂದ ತನ್ನ ಆದಾಯವನ್ನು ಪಡೆಯುತ್ತದೆ.

ಹೀಗೆ ವಿವಿಧ ಉದ್ದಿಮೆಗಳಿಂದ ಲಾಭಾಂಶದ ರೂಪದಲ್ಲಿ ‘ಟಾಟಾ ಸನ್ಸ್’ಗೆ ಹರಿದುಬರುವ ಅಗಾಧ ಸಂಪತ್ತು,
ಅದರ ಪ್ರವರ್ತಕರಾದ ಟಾಟಾ ಕುಟುಂಬದ ಸಂಪತ್ತು ಎನ್ನಬಹುದು. ಹಾಗಾಗಿ ಈ ಸಂಪತ್ತನ್ನು ಆ ಕುಟುಂಬವು
ತನಗೆ ಬೇಕಾದಂತೆ ವಿನಿಯೋಗಿಸಬಹುದಾಗಿದೆ. ಉದಾಹರಣೆಗೆ, ದೇಶದ ಇನ್ನೊಂದು ಪ್ರತಿಷ್ಠಿತ ಔದ್ಯಮಿಕ ಕುಟುಂಬದವರಾದ ಅಂಬಾನಿಗಳು ತಮ್ಮ ಮಕ್ಕಳ ಮದುವೆಯಂಥ ಕೌಟುಂಬಿಕ ಸಮಾರಂಭಗಳು ಮತ್ತು
ಐಷಾರಾಮಕ್ಕಾಗಿ ತಾವು ಗಳಿಸಿದ ಹಣದಲ್ಲಿ ಸಾವಿರಾರು ಕೋಟಿಗಳನ್ನು ಖರ್ಚುಮಾಡುವಂತೆಯೇ ಟಾಟಾ
ದವರೂ ಮಾಡಬಹುದಾಗಿತ್ತು. ಆದರೆ, ‘ಟಾಟಾ ಸನ್ಸ್’ಗೆ ಹರಿದುಬರುವ ಸಂಪತ್ತಿನ ವಿಲೇವಾರಿ ಹೇಗಾಗುತ್ತದೆ
ಎಂಬುದು ತಿಳಿದರೆ ನಿಮಗಚ್ಚರಿಯಾಗಬಹುದು.

ಈ ಸಂಪತ್ತಿನ ಹೆಚ್ಚುಕಡಿಮೆ ಶೇ.60ರಷ್ಟು ಭಾಗ ಲೋಕೋಪಕಾರಕ್ಕಾಗಿ ರಚಿಸಲ್ಪಟ್ಟ ಅವುಗಳದೇ ಆದ ವಿಶ್ವಸ್ಥ ಮಂಡಳಿ ಗಳಿಗೆ ಹೋದರೆ, ಉಳಿದ ಭಾಗವು ಹೊಸ ಉದ್ಯಮಗಳ ಖರೀದಿ ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಉದ್ಯಮಗಳ ಅಭಿವೃದ್ಧಿಯೆಡೆಗೆ ಹೋಗುತ್ತದೆ. ಟಾಟಾ ಮೋಟಾರ‍್ಸ್, ಟಾಟಾ ಸ್ಟೀಲ್ ಮತ್ತು ಐಟಿ ದೈತ್ಯ ಟಿಸಿಎಸ್
ನಂಥ ಪ್ರಮುಖ ಸಂಸ್ಥೆಗಳನ್ನೊಳಗೊಂಡು 10 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿರುವ ಟಾಟಾ ಸನ್ಸ್‌ನ
2023-24ರ ಆದಾಯವು 165 ಬಿಲಿಯನ್ ಡಾಲರ್ ಗಿಂತ ಹೆಚ್ಚು ಇತ್ತು ಎಂದರೆ ಟಾಟಾ ಸಮೂಹದೊಳಗಿನ
ಸಂಪತ್ತಿನ ಹರಿವನ್ನು ಊಹಿಸಬಹುದು.

ಸಂಪತ್ತಿಗೆ ಒದಗುವ 3 ಬಗೆಯ ಗತಿಗಳಲ್ಲಿ ‘ಅನುಭೋಗ’, ‘ದಾನ’ ಮತ್ತು ‘ನಾಶ’ ಸೇರಿವೆ. ಯಾರು ತನ್ನ ಸಂಪತ್ತನ್ನು ತಾನೂ ಅನುಭವಿಸದೆ ದಾನವನ್ನೂ ಮಾಡದಿದ್ದಲ್ಲಿ, ಮೂರನೆಯದ್ದಾದ ‘ನಾಶ’ವೇ ಅದಕ್ಕೆ ಗತಿಯಾಗುತ್ತದೆ. ಇದು ಸಾರ್ವಕಾಲಿಕ ಸತ್ಯ. ಅಂಬಾನಿಯಂಥವರು ಸಂಪತ್ತಿನ ಅನುಭೋಗದಲ್ಲಿ ಹೆಚ್ಚು ನಂಬಿಕೆಯಿಟ್ಟಿದ್ದರೆ, ಟಾಟಾ ಸಮೂಹದವರು ದಾನಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ, ಅಷ್ಟೇ. ಹಾಗೆ ನೋಡಿದರೆ ಎರಡೂ ಸರಿಯೇ. ಇರಲಿ, ಟಾಟಾ ಉದ್ಯಮ ಸಾಮ್ರಾಜ್ಯದ ‘ಕೊಡುಗೈ ಅಸ್ತಿತ್ವ’ ಎನಿಸಿಕೊಂಡಿರುವ ಟಾಟಾ ವಿಶ್ವಸ್ಥ ಮಂಡಳಿಗಳ (ಟಾಟಾ ಟ್ರಸ್ಟ್‌ಗಳು) ಕುರಿತು ಕೊಂಚ ಅವಲೋಕಿಸೋಣ.

‘ಟಾಟಾ ಸನ್ಸ್’ನ ಈಕ್ವಿಟಿ ಷೇರು ಬಂಡವಾಳದ ಶೇ.66 ರಷ್ಟನ್ನು ಈ ಲೋಕೋಪಕಾರಿ ಟ್ರಸ್ಟ್‌ಗಳು ಹೊಂದಿವೆ;
ಅಂದರೆ, ‘ಟಾಟಾ’ ಉದ್ಯಮ ಸಮೂಹದ ಬಹುಪಾಲು ನಿಯಂತ್ರಣ ಈ ‘ಟಾಟಾ ಟ್ರಸ್ಟ್ ಗಳ’ ಜತೆಗಿದೆ ಅಂದ
ಹಾಗಾಯಿತು. ಸಮಾಜದಲ್ಲಿ ಶಿಕ್ಷಣ, ಆರೋಗ್ಯ, ಜೀವನೋಪಾಯ ಸೃಷ್ಟಿ, ಕಲೆ-ಸಂಸ್ಕೃತಿಗಳ ಉಳಿವು- ಬೆಳೆಯು ವಿಕೆಗೆ ಸಹಕರಿಸುವುದು ‘ಟಾಟಾ ಟ್ರಸ್ಟ್‌ಗಳ’ ಮೂಲೋದ್ದೇಶವಾಗಿದೆ. ದೇಶದಲ್ಲಿ ಆಧುನಿಕ ಉಕ್ಕು ಸ್ಥಾವರ, ಜಲವಿದ್ಯುತ್ ಸ್ಥಾವರ ಮತ್ತು ವಿಜ್ಞಾನ ವಿಶ್ವ ವಿದ್ಯಾಲಯಗಳನ್ನು ನಿರ್ಮಿಸುವ ಜೆಆರ್‌ಡಿ ಟಾಟಾರ ಕನಸು ಗಳನ್ನು ಅವರ ಪುತ್ರರಾದ ಸರ್ ರತನ್‌ಜಿ ಟಾಟಾ ಮತ್ತು ಸರ್ ದೊರಾಬ್ಜಿ ಟಾಟಾ ಅವರುಗಳು ಈ ಟ್ರಸ್ಟ್‌ಗಳ ಮೂಲಕ ಈಡೇರಿಸುತ್ತಾ ಬಂದಿದ್ದಾರೆ.

ಇವರು ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ಅನೇಕಪಟ್ಟು ಬೆಳೆಸುವುದರ ಜತೆಗೆ ರಚನಾತ್ಮಕವಾದ ಲೋಕೋಪಕಾರಿ ದೃಷ್ಟಿಕೋನವನ್ನೂ ಪ್ರದರ್ಶಿಸಿದರು. ಜೆಆರ್‌ಡಿ ಟಾಟಾ ಅವರ ಉದಾತ್ತ ಚಾರಿತ್ರ್ಯದ ಕಾರಣದಿಂದಾಗಿ ಹಲವಾರು ಟ್ರಸ್ಟುಗಳು ಸ್ಥಾಪಿತವಾದವು. ಅವುಗಳಲ್ಲಿ ಎದ್ದು ಕಾಣುವಂಥವು ‘ಸರ್ ರತನ್ ಟಾಟಾ ಟ್ರಸ್ಟ್’ ಮತ್ತು ‘ಸರ್ ದೊರಾಬ್ಜಿ ಟಾಟಾ ಟ್ರಸ್ಟ್’. ಟಾಟಾ ಸಮೂಹಸಂಸ್ಥೆಗಳ ಅತ್ಯುನ್ನತ ಕಂಪನಿಯಾದ ‘ಟಾಟಾ ಸನ್ಸ್’ನ ಮೂರನೇ ಎರಡರಷ್ಟು ಷೇರುಗಳನ್ನು ಈ ಟ್ರಸ್ಟ್‌ಗಳು ಹೊಂದಿವೆ ಎಂದು ಈಗಾಗಲೇ ಉಲ್ಲೇಖಿಸಲಾಗಿದೆ.

2024ಕ್ಕೆ ಕೊನೆಗೊಂಡ ಹಣ ಕಾಸು ವರ್ಷದಲ್ಲಿ ಟಾಟಾ ಟ್ರಸ್ಟ್‌ಗಳು ಮೂಲಸಂಸ್ಥೆಯಿಂದ 934 ಕೋಟಿ ರು.ಗಳ ಅತ್ಯಧಿಕ ಲಾಭಾಂಶವನ್ನು ಪಡೆದಿವೆ. 2023ರ ವಾರ್ಷಿಕ ವರದಿಯ ಪ್ರಕಾರ ಟಾಟಾ ಟ್ರಸ್ಟ್‌ಗಳು ತಮ್ಮ ನಿಧಿಯ ಶೇ.48.5ರಷ್ಟನ್ನು ಆರೋಗ್ಯಕ್ಕಾಗಿ, ಶೇ.16.9ರಷ್ಟನ್ನು ಗ್ರಾಮೀಣ ಉನ್ನತಿಗಾಗಿ ಮತ್ತು ಶೇ.16.5ರಷ್ಟನ್ನು ಶಿಕ್ಷಣ ಕ್ಕಾಗಿ ವಿತರಿಸಿವೆ. ಶೇ.10.4ರಷ್ಟು ಹಣವನ್ನು ಇತರ ಸಂಸ್ಥೆಗಳಿಗೆ ಹಾಗೂ ಉಳಿದ ಹಣವನ್ನು ನೀರು, ನಗರ ಪ್ರದೇಶಗಳ ಬಡತನ ನಿರ್ಮೂಲನೆ ಮತ್ತು ಇಂಧನಕ್ಕಾಗಿ ಮೀಸಲಿಡಲಾಗಿದೆಯಂತೆ.

ಮೂಲ ಉದ್ದಿಮೆಗಳ ಪ್ರವರ್ತಕ ಸಂಸ್ಥೆಯಾದ ‘ಟಾಟಾ ಸನ್ಸ್’ ಮತ್ತು ಲೋಕೋಪಕಾರದ ಉದ್ದೇಶದಿಂದ ರಚನೆ
ಯಾದ ‘ಟಾಟಾ ಟ್ರಸ್ಟ್‌ಗಳು’ ಈ ಎರಡೂ ತಮ್ಮದೇ ಆದ ಪ್ರತ್ಯೇಕ ನಿರ್ದೇಶಕರ ಮಂಡಳಿಯ ಮಾರ್ಗದರ್ಶನ
ಹಾಗೂ ಮೇಲ್ವಿಚಾರಣೆಯಡಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತವೆ. ರತನ್ ಟಾಟಾ ಅವರು ಇರುವಾಗಲೇ
‘ಟಾಟಾ ಸನ್ಸ್’ನ ಅಧ್ಯಕ್ಷ ಸ್ಥಾನ ಮತ್ತು ‘ಟಾಟಾ ಟ್ರಸ್ಟ್‌ಗಳ’ ಅಧ್ಯಕ್ಷರ ಪಾತ್ರಗಳನ್ನು ಪ್ರತ್ಯೇಕಿಸಿ ಇಟ್ಟಿದ್ದರು.
‘ಭಾರತೀಯ ಉದ್ಯಮಗಳ ಪಿತಾಮಹ’ ಮತ್ತು ಆಧುನಿಕ ಭಾರತೀಯ ಆರ್ಥಿಕತೆಯ ಪ್ರಮುಖ ನಿರ್ಮಾತೃಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಜೆಆರ್‌ಡಿ ಟಾಟಾ ಅವರ ದೂರದೃಷ್ಟಿಯಿಂದಾಗಿ ಟಾಟಾ ಟ್ರಸ್ಟ್‌ಗಳು ಶತಮಾನ ದುದ್ದಕ್ಕೂ ರಾಷ್ಟ್ರಕ್ಕೆ ಮತ್ತು ಜನರಿಗೆ ಸಂಬಂಧಿಸಿದ ಸ್ವಾವಲಂಬಿ ಬೆಳವಣಿಗೆಗಳನ್ನು ಸಾಧಿಸಲು, ಸಾಮಾಜಿಕ- ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ನಿರಂತರವಾಗಿ ಯತ್ನಿಸುತ್ತಾ ಬಂದಿವೆ.

ಶಿಕ್ಷಣ, ಆರೋಗ್ಯ, ಪೌಷ್ಟಿಕಾಂಶ, ನೀರು ಮತ್ತು ನೈರ್ಮಲ್ಯ, ಜೀವನೋಪಾಯ, ಸಾಮಾಜಿಕ ನ್ಯಾಯ ಮತ್ತು ಒಳಗೊಳ್ಳುವಿಕೆ, ಕೌಶಲಾಭಿವೃದ್ಧಿ, ವಲಸೆ ಮತ್ತು ನಗರೀಕರಣ, ಪರಿಸರ, ಡಿಜಿಟಲ್ ಸಾಕ್ಷರತೆ, ಕ್ರೀಡೆ, ಕಲೆ, ಕರಕೌಶಲ, ಸಂಸ್ಕೃತಿ ಮತ್ತು ವಿಪತ್ತು ನಿರ್ವಹಣೆಯಂಥ ಕ್ಷೇತ್ರಗಳಲ್ಲಿ ಅವು ಉದಾರವಾಗಿ ದಾನ ಮಾಡುತ್ತಾ ಬಂದಿವೆ. ಭಾರತದ ಮೊದಲ ಕ್ಯಾನ್ಸರ್ ಆರೈಕೆ ಆಸ್ಪತ್ರೆಯನ್ನು ಸ್ಥಾಪಿಸಿದ್ದು ಇದೇ ಟಾಟಾ ಟ್ರಸ್ಟ್‌ಗಳು.

ಮಾತ್ರವಲ್ಲದೆ, ‘ಇಂಡಿಯನ್ ಇನ್‌ಸ್ಟಿಟೂಟ್ ಆಫ್ ಟೆಕ್ನಾಲಜಿ’, ಬಾಂಬೆಯ ‘ಟಾಟಾ ಸೆಂಟರ್ ಫಾರ್ ಟೆಕ್ನಾಲಜಿ
ಆಂಡ್ ಡಿಸೈನ್’, ‘ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ಮತ್ತು ಶಿಕಾಗೊ ವಿಶ್ವವಿದ್ಯಾಲಯದ ‘ಟಾಟಾ ಸೆಂಟರ್ ಫಾರ್ ಟೆಕ್ನಾಲಜಿ ಆಂಡ್ ಡಿಸೈನ್’, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ‘ಟಾಟಾ ಸೆಂಟರ್ ಫಾರ್ ಜೆನೆಟಿಕ್ಸ್ ಆಂಡ್ ಸೊಸೈಟಿ’ ಸೇರಿದಂತೆ ಹಲವಾರು ಪ್ರಮುಖ ಸಂಸ್ಥೆಗಳನ್ನು ಅವು ಸ್ಥಾಪಿಸಿವೆ ಮತ್ತು ಬೆಂಬಲಿಸಿವೆ.

ಭಾರತವೇ ಹೆಮ್ಮೆ ಪಡುವಂಥ ‘ಹಾರ್ವರ್ಡ್ ಯೂನಿವರ್ಸಿಟಿ ಸೌತ್ ಏಷ್ಯಾ ಇನ್ ಸ್ಟಿಟ್ಯೂಟ್’, ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್’, ‘ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್’, ‌‘ಟಾಟಾ ಮೆಮೊರಿಯಲ್ ಸೆಂಟರ್-ಮುಂಬೈ’, ‘ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್’ ಮತ್ತು ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್’ ಮುಂತಾದ ಸಮಾಜಸೇವಾ ಸಂಸ್ಥೆಗಳನ್ನು ಈ ಟ್ರಸ್ಟುಗಳು‌ ಸ್ಥಾಪಿಸಿವೆ. ಹಾಗೆ ನೋಡಿದರೆ, ಮಕ್ಕಳು-ಮರಿಯಿಲ್ಲದ ರತನ್ ಟಾಟಾ ಅವರಿಗೆ ಇಷ್ಟು ದೊಡ್ಡ ಸಮೂಹವನ್ನು ಉಳಿಸಿ ಬೆಳೆಸಲು ಪ್ರೇರಕವಾದದ್ದು ಅವರಲ್ಲಿನ ದೇಶಪ್ರೇಮ ಮತ್ತು ಜನಸೇವೆಯ ಕಾಳಜಿಯೇ ವಿನಾ ಮತ್ತೇನಲ್ಲ.

ಪಥನಿರ್ಮಾಪಕನೊಬ್ಬನ ಅನುಪಸ್ಥಿತಿಯಲ್ಲೂ ಅವನ ಧ್ಯೇಯ-ಧೋರಣೆಗಳಲ್ಲಿ ವ್ಯತ್ಯಾಸವಾಗದಂತೆ ಮತ್ತು ಅವನ ಅನುಪಸ್ಥಿತಿ ಅನುಭವಕ್ಕೆ ಬಾರದಂತೆ ಕಾರ್ಯ ಚಟುವಟಿಕೆಗಳು ಎಂದಿನಂತೆ ಮುಂದುವರಿದರೆ, ಅವನೇ
ನಿಜವಾದ ನಾಯಕ ಎನ್ನುತ್ತಾರೆ. ರತನ್ ಟಾಟಾ ಅವರು ಇಂಥ ನಾಯಕರಾಗಿದ್ದರು ಎನ್ನುವುದಕ್ಕೆ ಅವರ
ಉತ್ತರಾಧಿಕಾರಿಯ ಆಯ್ಕೆ ಸುಸೂತ್ರವಾಗಿರುವುದು, ಅವರ ನಿಧನದಿಂದಾಗಿ ಸಂಸ್ಥೆಯ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮವಾಗದೆ ಎಂದಿನಂತೆ ನಡೆಯುತ್ತಿರುವುದೇ ಸಾಕ್ಷಿ. ಟಾಟಾ ಟ್ರಸ್ಟ್‌ನ ಅಧ್ಯಕ್ಷರೂ, ಟಾಟಾ
ಸಮೂಹದ ಸರ್ವಸ್ವವೂ ಆಗಿದ್ದ ರತನ್ ಟಾಟಾ ಅವರು ನಿಧನರಾದ 48 ಗಂಟೆಗಳ ಒಳಗಾಗಿ, ಅವರ ಮಲ
ಸಹೋದರ ನೋಯಲ್ ಟಾಟಾರನ್ನು ಉತ್ತರಾಧಿಕಾರಿಯನ್ನಾಗಿ ಘೋಷಿಸಲಾಯಿತು.

ಕೇವಲ ಒಂದು ಗಂಟೆ ಕಾಲ ನಡೆದ ಟ್ರಸ್ಟಿಗಳ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಧಾರವನ್ನು ಕೈಗೊಳ್ಳ ಲಾಯಿತಂತೆ. ಸಣ್ಣ ಪುಟ್ಟ ಆಸ್ತಿ ಗಾಗಿ ಅಣ್ಣ-ತಮ್ಮಂದಿರುಗಳೇ ಹೊಡೆದಾಟ ಬಡಿದಾಟ ಮಾಡಿಕೊಳ್ಳು ವಾಗ, ಅತ್ಯಂತ ಸಂಪದ್ಭರಿತ ‘ಟಾಟಾ ಟ್ರಸ್ಟ್’ ನಲ್ಲಿ ಇಂಥ ಉನ್ನತ ಹುದ್ದೆಗೆ ಆಯ್ಕೆಯಾಗುವಾಗ, ಬೇರಾವುದೇ ಸ್ಪರ್ಧಿಯ ಬಗ್ಗೆ ಚರ್ಚೆ ಕೂಡಾ ಮಾಡದೆ ಅವಿರೋಧವಾಗಿ ನೇಮಕ ಪ್ರಕ್ರಿಯೆಯನ್ನು ಮಾಡಿ ಮುಗಿಸಿದ್ದಾರೆ ಎಂದರೆ ಅಚ್ಚರಿಯಾಗದಿರದು. ಟಾಟಾದವರ ಸಂಸ್ಕೃತಿಗೊಂದು ಸಲಾಂ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

ಇದನ್ನೂ ಓದಿ: Vinayak M Bhatta, Amblihonda Column: ನೀ ನನಗಾದರೆ ನಾ ನಿನಗೆ, ನನ್ನ ಸುದ್ದಿಗೆ ಬಂದರೆ…