Tuesday, 19th November 2024

Vinayaka Mathapati Column: ಮಹಾಯುತಿ ವ್ಯೂಹದಿಂದ ಪಾರಾಗುವರಾ ಉದ್ಧವ್‌ ?

ರಾಜಬೀದಿ

ವಿನಾಯಕ ಮಠಪತಿ

ಶಿವಸೈನಿಕರ ದಶಕಗಳ ಹೋರಾಟದ ಪ್ರಮುಖ ಅಸವೇ ‘ಉಗ್ರ ಹಿಂದುತ್ವ’. ದೇಶದ ಯಾವುದೇ ಭಾಗದಲ್ಲಿ ಹಿಂದೂಗಳು ಹಿಂಸೆ ಅನುಭವಿಸು ತ್ತಿದ್ದರೆ, ಶಿವಸೈನಿಕರ ಗಟ್ಟಿದನಿ ಅವರ ನೆರವಿಗೆ ಬರುತ್ತಿತ್ತು. ರಾಜಕೀಯ ಕಾರಣಕ್ಕಾಗಿ ಶಿವಸೇನೆ ಪಕ್ಷದವರ ಹೋರಾಟದ ದಿಕ್ಕು ಹಲವು ಬಾರಿ ಬದಲಾಗಿರಬಹುದು, ಆದರೆ ಪ್ರಬಲ ಹಿಂದುತ್ವದ ಮನೋಭಾವ ಬದಲಾಗಿರಲೇ ಇಲ್ಲ.

ಕಾಂಗ್ರೆಸ್ ಸೇರಿದಂತೆ ಎಡಪಕ್ಷಗಳಿಂದ ಸದಾಕಾಲವೂ ಸಮಾನ ಅಂತರ ಕಾಯ್ದುಕೊಂಡು, ಕೇವಲ ಬಲಪಂಥೀಯ ವಿಚಾರಧಾರೆಯವರ ಜತೆ
ಸುಮಾರು 25 ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದ ‘ಶಿವಸೈನಿಕ’ರಿಗೆ ಈಗ ಅಗ್ನಿಪರೀಕ್ಷೆ ಎದುರಾಗಿದೆ.

ಕೇಸರಿ ಸಾಮ್ರಾಜ್ಯದ ಪ್ರಶ್ನಾತೀತ ನಾಯಕನಾಗಿ, ಯಾವುದೇ ಸಾಂವಿಧಾನಿಕ ಹುದ್ದೆಯನ್ನು ಅನುಭವಿಸದೆಯೇ ಭಾರತೀಯ ರಾಜಕಾರಣ
ದಲ್ಲಿ ಸಿಂಹದಂತೆ ಗರ್ಜಿಸುತ್ತಿದ್ದ ಬಾಳಾಸಾಹೇಬ್ ಠಾಕ್ರೆ ಅವರ ಪುತ್ರ ಉದ್ಧವ್ ಠಾಕ್ರೆ ಇಂದು ವಿಚಿತ್ರ ರಾಜಕೀಯ ವ್ಯೂಹದಲ್ಲಿ ಸಿಲುಕಿದ್ದಾರೆ.
ಕಾಂಗ್ರೆಸ್ ಮತ್ತು ಎನ್‌ಸಿಪಿಯನ್ನು ಒಳಗೊಂಡಿರುವ ಮೈತ್ರಿಕೂಟದ ಜತೆ ಕಳೆದ 5 ವರ್ಷದಿಂದ ಗುರುತಿಸಿಕೊಂಡಿದ್ದ ಉದ್ಧವ್ ಠಾಕ್ರೆ, 2019ರಲ್ಲಿ ‘ಮಹಾವಿಕಾಸ್ ಅಘಾಡಿ’ ಜತೆಗೂಡಿ, ಮಹಾರಾಷ್ಟ್ರದ ಸಿಎಂ ಹುದ್ದೆ ಅಲಂಕರಿಸಿದ ಠಾಕ್ರೆ ಮನೆತನದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಾಜಕೀಯವಾಗಿ ಇಷ್ಟೆಲ್ಲಾ ದೂರ ಕ್ರಮಿಸಿರುವ ಉದ್ಧವ್ ಠಾಕ್ರೆ, ಸದ್ಯ ಬಲಪಂಥೀಯ ವಿಚಾರಧಾರೆಗಳನ್ನು ಒಡಲಲ್ಲಿರಿಸಿ ಕೊಂಡು ಎಡಪಂಥೀಯ ಸಹಚರರ ಜತೆಗೂಡಿಮೊದಲ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿದ್ದಾರೆ.

ಮಹಾರಾಷ್ಟ್ರ ರಾಜಕಾರಣ ಈ ಬಾರಿ ವಿಚಿತ್ರ ಸನ್ನಿವೇಶದಲ್ಲಿ ಸಿಲುಕಿದೆ. ದಶಕಗಳ ಕಾಲ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತಮ್ಮದೇ ಆದ ಅಸ್ತಿತ್ವ
ವನ್ನು ಉಳಿಸಿಕೊಂಡು ಬಂದಿದ್ದ 2 ಪ್ರಮುಖ ಪಕ್ಷಗಳು ಇಬ್ಭಾಗಗೊಂಡಿವೆ. ಸೈದ್ಧಾಂತಿಕ ಭಿನ್ನಾಭಿಪ್ರಾಯವಿಟ್ಟುಕೊಂಡು ಪರಸ್ಪರ ಹೋರಾಡು
ತ್ತಿದ್ದವರೇ ಈಗ ಒಂದುಗೂಡಿ ಮತ ಕೇಳುವ ಪರಿಸ್ಥಿತಿ ಸೃಷ್ಟಿಯಾಗಿದ್ದು, ಇದನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಚಿಂತೆ ಅನೇಕರನ್ನು
ಕಾಡುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಜನ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಹಾಗೂ ಮಿತ್ರಪಕ್ಷದ ಪರ
ಒಲವು ತೋರಿದ್ದರು.

ಆದರೀಗ, ವಿಧಾನಸಭಾ ಚುನಾವಣೆಯಲ್ಲಿ ಅವರು ಕೊಡಲಿರುವ ತೀರ್ಮಾನವು ಅನೇಕರ ‘ರಾಜಕೀಯ ಭವಿಷ್ಯ ನಿರ್ಣಯ’ದಲ್ಲಿ ಮಹತ್ತರ ಪಾತ್ರವನ್ನು ವಹಿಸುವುದರಲ್ಲಿ ಅನುಮಾನವಿಲ್ಲ. ಕಾಂಗ್ರೆಸ್, ಎನ್ ಸಿಪಿ (ಶರದ್ ಪವಾರ್ ಬಣ) ಹಾಗೂ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಸೇರಿ ರಚನೆಯಾದ ‘ಮಹಾವಿಕಾಸ್ ಅಘಾಡಿ’ ಮೈತ್ರಿಕೂಟಕ್ಕೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಜನರು ಭರ್ಜರಿ ಯಶಸ್ಸು ನೀಡಿದರು. 40ಕ್ಕೂ ಅಧಿಕ ಸ್ಥಾನ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿ ಮೈತ್ರಿಕೂಟ ಹೀನಾಯ ಸೋಲನುಭವಿಸಿತು. ರಾಷ್ಟ್ರಮಟ್ಟ ದಲ್ಲಿ ಇದರ ಪರಿಣಾಮವೇನಾಗಿದೆ ಎಂಬುದು ಗೊತ್ತಿರುವ ಸಂಗತಿಯೇ. ಸೈದ್ಧಾಂತಿಕ ಭಿನ್ನಾಭಿಪ್ರಾಯ ಮೆಟ್ಟಿನಿಂತ ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣವು 9 ಸ್ಥಾನಗಳನ್ನೂ, ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ 30 ಸ್ಥಾನಗಳನ್ನೂ ಗೆಲ್ಲುವ ಮೂಲಕ ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗವಾಗುವುದಕ್ಕೆ ಕಾರಣವಾದವು.

ಲೋಕಸಭಾ ಚುನಾವಣೆಯಲ್ಲಿ ‘ಅಘಾಡಿ’ ಕೂಟಕ್ಕೆ ಯಶಸ್ಸು ಸಿಕ್ಕಿರಬಹುದು, ಆದರೆ ದೇಶದ ಬಹುಪಾಲು ಜನರು ವಿಧಾನಸಭಾ
ಚುನಾವಣೆಯಲ್ಲಿ ವ್ಯತಿರಿಕ್ತ ಫಲಿತಾಂಶವನ್ನೇ ಕೊಡುವುದು ವಾಡಿಕೆ. ಸ್ಥಳೀಯ ನಾಯಕತ್ವ, ಜಾತಿ ರಾಜಕಾರಣದ ಸಮೀಕರಣದಲ್ಲಿ ಯಶಸ್ವಿ
ಯಾಗುವವರೇ ಈ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣಕ್ಕೆ ಸದ್ಯಕ್ಕಿರುವ ಸಮಸ್ಯೆಯೆಂದರೆ, ಅವರ
ಹಿಂದಿನ ರಾಜಕೀಯ ಸಿದ್ಧಾಂತ ಮತ್ತು ಈಗಿನ ಬದಲಾದ ಪರಿಸ್ಥಿತಿಯಲ್ಲಿನ ರಾಜಕೀಯ ನಿಲುವಿನ ನಡುವಿನ ಒಳತೋಟಿಯ ನಿರ್ವಹಣೆ. ಅಂದರೆ, ಒಂದು ಕಾಲಕ್ಕೆ ಪ್ರಬಲ ಹಿಂದುತ್ವದ ಅಲೆಯೊಂದಿಗೆ ಸಂಚಲನ ಮೂಡಿಸುತ್ತಿದ್ದ ಅವರ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಈಗ, ದಶಕಗಳ ಹಿಂದೆ ಯಾರ ವಿರುದ್ಧ ಮತ್ತು ಯಾವ ಸಿದ್ಧಾಂತದ ವಿರುದ್ಧ ತಾವು ಹೋರಾಡಿದ್ದರೋ ಅವರ ಪರವಾಗಿಯೇ ನಿಂತು ಕೆಲಸ ಮಾಡಬೇಕಾದ ಅನಿವಾರ್ಯತೆಯ ಶಿಶುಗಳಾಗಿದ್ದಾರೆ!

ಇದು ಎಷ್ಟರಮಟ್ಟಿಗೆ ಫಲ ನೀಡುತ್ತದೆ ಎಂಬುದನ್ನು ಕಾದುನೋಡಬೇಕು. ತಮ್ಮ ತಂದೆ ಹುಟ್ಟುಹಾಕಿದ್ದ ಶಿವಸೇನೆಯನ್ನು ಉದ್ಧವ್ ಠಾಕ್ರೆಯವರು ಅನೇಕ ಕಾರಣ ಗಳಿಂದಾಗಿ ಇಬ್ಭಾಗ ಮಾಡಿಕೊಂಡಿರುವುದು ಗೊತ್ತಿರುವ ಸಂಗತಿಯೇ. ಒಂದು ಕಾಲಕ್ಕೆ ಬಾಳಾ ಸಾಹೇಬ್ ಠಾಕ್ರೆಯವರ ಬಲಗೈನಂತಿದ್ದ ಏಕನಾಥ ಶಿಂದೆ ಈಗ ವಿರೋಧಿ ಪಾಳಯದಲ್ಲಿದ್ದಾರೆ. ಇನ್ನು, ಉದ್ಧವ್ ಪುತ್ರ ಹಾಗೂ ಮಾಜಿ ಸಚಿವ ಆದಿತ್ಯ ಠಾಕ್ರೆ, ಸೆಂಟ್ರಲ್ ಮುಂಬೈನ ವರ್ಲಿ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ. ಉದ್ಧವ್ ಬಣದ ಶಿವಸೇನೆ ಈ ಬಾರಿ ‘ಮಾಡು ಇಲ್ಲವೇ ಮಡಿ’ ಎಂಬ ನಿರ್ಧಾರಕ್ಕೆ ಬಂದಿದೆ.

ಒಂದೊಮ್ಮೆ ‘ಅಘಾಡಿ’ಗೆ ಸ್ಪಷ್ಟ ಬಹುಮತ ಬಂದರೂ, ಉದ್ಧವ್‌ರನ್ನು ಮತ್ತೊಂದು ಅವಧಿಗೆ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಶರದ್ ಪವಾರ್ ಇಲ್ಲ. ಕಡಿಮೆ ಸೀಟು ಪಡೆದರೆ ತಮ್ಮ ರಾಜಕೀಯ ಭವಿಷ್ಯ ಏನಾದೀತು ಎಂಬ ‘ಕೊಂಚ-ಭಯ’ ಉದ್ಧವ್‌ರನ್ನು ಆವರಿಸಿರುವುದು ಸ್ಪಷ್ಟ. ಈ ಬಾರಿಯ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಈ ಮಟ್ಟಿಗಿನ ಕುತೂಹಲ ಕೆರಳಿಸಲು ಕಾರಣ- ಇಬ್ಭಾಗಗೊಂಡ ರಾಜಕೀಯ ಪಕ್ಷಗಳನ್ನು ಜನ ಹೇಗೆ ಸ್ವೀಕರಿಸಿದ್ದಾರೆ ಎಂಬುದನ್ನು ಅದು ಹರವಿಡಲಿದೆ. ಜತೆಗೆ, ಮತದಾರರು ಕೈಗೊಳ್ಳುವ ನಿರ್ಧಾರದಲ್ಲೇ ಅನೇಕರ ರಾಜಕೀಯ ಭವಿಷ್ಯವೂ ಅಡಗಿದೆ. ಹಿಂದುತ್ವದ ಪ್ರಬಲ ಪ್ರತಿಪಾದನೆಯ ತೆಕ್ಕೆಯಿಂದ ಕೊಂಚ ಹೊರಬಂದಿರುವ ಶಿವಸೇನೆಯನ್ನು ಮಹಾರಾಷ್ಟ್ರದ ಹಿಂದೂಗಳು ಹೇಗೆ ನೋಡುತ್ತಾರೆ ಎಂಬುದು ಸದ್ಯದ ಕುತೂಹಲ.

ಕಾರಣ, ಕಾಂಗ್ರೆಸ್‌ನ ಮತ್ತು ಎನ್‌ಸಿಪಿ ಪಕ್ಷದ ಶರದ್ ಪವಾರರ ಸೈದ್ಧಾಂತಿಕ ನಿಲುವು ಬೇರೆ. ಆದರೆ ‘ಅಘಾಡಿ’ಯ ಮಿತ್ರಪಕ್ಷಗಳಿಗೆ ದಕ್ಕುವ
ಮತಗಳು ಉದ್ಧವ್‌ರನ್ನು ಯಾವ ರೀತಿಯಲ್ಲಿ ಗಟ್ಟಿಗೊಳಿಸಬಹುದು ಎಂಬ ಪ್ರಶ್ನೆಗೆ ಈಗ ಯಾರಲ್ಲೂ ಉತ್ತರವಿಲ್ಲ. ತನ್ನ ಸಾಂಪ್ರದಾಯಿಕ
ಮತಗಳನ್ನು ‘ಸಮಾನಮನಸ್ಕ’ ಪಕ್ಷಕ್ಕೆ ಕೊಡಿಸುವಲ್ಲಿ ಯಶಸ್ವಿಯಾಗುತ್ತಿದ್ದ ಬಿಜೆಪಿಯಂತೆ ಅಘಾಡಿ ಕೂಡ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ಜನರ ನಿರ್ಧಾರದಿಂದ ತಿಳಿದು ಬರಲಿದೆ.


ಅದೊಂದು ಕಾಲವಿತ್ತು. ಅಂದಿನ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಸಿಡಿದೆದ್ದರೆ ಇಡೀ ಮುಂಬೈ ಅರೆಕ್ಷಣ ಅವರತ್ತ ಚಿತ್ತ ಹರಿಸುತ್ತಿತ್ತು.
ವಿವಾದಗಳನ್ನು ಬೆನ್ನಿಗೆ ಕಟ್ಟಿಕೊಂಡೇ ತಿರುಗುತ್ತಿದ್ದ ಬಾಳಾ ಠಾಕ್ರೆ, ಇದ್ದಷ್ಟು ದಿನ ಹುಲಿಯಂತೆ ಮೆರೆದರು. ಆದರೆ ಅವರಿಲ್ಲದ ಮತ್ತು ಎರಡು
ಹೋಳಾಗಿರುವ ಶಿವಸೇನೆಯಲ್ಲಿ ಹಿಂದಿನ ಕಸುವಿಲ್ಲ. 1966ರಲ್ಲಿ ಸ್ಥಾಪನೆಗೊಂಡ ಶಿವಸೇನೆ, ವರ್ಷಗಳು ಉರುಳಿದಂತೆ ತನ್ನ ರಾಜಕೀಯ
ಪ್ರಭಾವವನ್ನು ಬೆಳೆಸಿಕೊಳ್ಳುತ್ತಾ ಸಾಗಿತ್ತು. ಹಾಗೆ ನೋಡಿದರೆ, ಜನತಾ ಪರಿವಾರದಿಂದ ಬೇರ್ಪಟ್ಟು ಹುಟ್ಟಿಕೊಂಡ ಬಿಜೆಪಿಗಿಂತ ಹಳೆಯ
ಪಕ್ಷ ಶಿವಸೇನೆ. ‘ಬಿಲ್ಲು-ಬಾಣ’ವನ್ನು ಚಿಹ್ನೆಯಾಗಿ ಹೊಂದಿದ್ದ ಇದರ ಮೊದಲ ಅಧಿವೇಶನ 1966ರ ಅಕ್ಟೋಬರ್ 30ರಂದು ಮುಂಬೈನ
ಶಿವಾಜಿ ಪಾರ್ಕ್‌ನಲ್ಲಿ ನಡೆದಿತ್ತು. ಆಗ ಸುಮಾರು 5 ಲಕ್ಷ ಜನ ಸೇರಿದ್ದು ಒಂದು ದಾಖಲೆ. ಮುಂಬೈ ಮಹಾನಗರಪಾಲಿಕೆ ಅಖಾಡಕ್ಕೆ ಇಳಿದು
ರಾಜಕೀಯ ಹಿಡಿತ ಸಾಧಿಸಿದ್ದ ಶಿವಸೇನೆ, ನಂತರ 1995ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿ ಜತೆ ಮೈತ್ರಿ
ಸರಕಾರ ರಚಿಸಿ ಇತಿಹಾಸ ನಿರ್ಮಿಸಿತ್ತು.

ಅಂದಿನ ಅವಿಭಜಿತ ಶಿವಸೇನೆಗೂ, ಇಂದಿನ ವಿಭಜಿತ ಶಿವಸೇನೆಗೂ ಸಾಕಷ್ಟು ವ್ಯತ್ಯಾಸಗಳಿವೆ. ರಾಜಕೀಯದ ಸ್ಥಿತ್ಯಂತರಗಳಿಗೆ ಸಿಲುಕಿ ಸದ್ಯ
ಇಬ್ಭಾಗಗೊಂಡಿರುವ ಶಿವಸೇನೆಗೆ ಕೊಂಚ ಹಿನ್ನಡೆ ಉಂಟಾಗಿದೆ. ಮಹಾವಿಕಾಸ್ ಅಘಾಡಿಯಲ್ಲಿ ಮಹಾರಾಷ್ಟ್ರದ ರಾಜಕೀಯದ ‘ಮಾಸ್ಟರ್
ಮೈಂಡ್’ ಶರದ್ ಪವಾರ್ ಇದ್ದಾರೆ. ಅವರು ಕಾಲಕಾಲಕ್ಕೆ ಕೈಗೊಳ್ಳುವ ನಿರ್ಧಾರಗಳು ಅಲ್ಲಿನ ರಾಜಕೀಯ ಸಮೀಕರಣವನ್ನೇ ಬದಲಿಸುತ್ತಾ
ಬಂದಿವೆ. ೨೦೧೯ರ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ, ‘ತನ್ನ ಬಳಿ ಬರದೆ ಶಿವಸೇನೆಗೆ ಬೇರೆ ದಾರಿಯಿಲ್ಲ’ ಎಂದು ಬಿಜೆಪಿ
ಯೋಚಿಸುವಷ್ಟರಲ್ಲಿ, ಶಿವಸೇನೆಗೆ ಅಧಿಕಾರ ಕೊಟ್ಟು ಬಿಜೆಪಿಗೆ ಮುಖಭಂಗ ಮಾಡುವಲ್ಲಿ ಶರದ್ ಪವಾರ್ ಯಶಸ್ವಿಯಾಗಿದ್ದರು. ಈ ಬಾರಿಯ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಏರಿಳಿತವಾದರೆ ಪವಾರರ ನಿರ್ಧಾರ ಉದ್ಧವ್ ಠಾಕ್ರೆಗೆ ಎಂಥ ಹೊಡೆತ ನೀಡುತ್ತದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ.


ಕಳೆದ ಒಂದು ವರ್ಷದಿಂದ, ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಹೋರಾಟದ ಕಿಚ್ಚು
ಹಚ್ಚಿದ್ದ ಜಾಲ್ನಾ ಮೂಲದ ಸಾಮಾಜಿಕ ಕಾರ್ಯಕರ್ತ ಮನೋಜ್ ಜಾರಂಗೆ ಪಾಟೀಲ್ ಅವರು, ಲೋಕಸಭಾ ಚುನಾವಣೆ ಹಾಗೂ
ಪ್ರಸ್ತುತ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಬಹುಚರ್ಚಿತ ವ್ಯಕ್ತಿಯಾಗಿದ್ದಾರೆ. ಕಾರಣ, ವಿಧಾನಸಭಾ ಚುನಾವಣೆಯಲ್ಲಿ
ಅವರು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರೆ ಎಂದು ಅನೇಕರು ನಿರೀಕ್ಷಿಸಿದ್ದರು. ಆದರೆ, ಕೊನೇಕ್ಷಣದಲ್ಲಿ ನಿರ್ಧಾರದಿಂದ
ಹಿಂದೆ ಸರಿಯುವ ಚಾಣಾಕ್ಷ ನಡೆ ಅನುಸರಿಸಿರುವ ಮನೋಜ್, ಮೀಸಲಾತಿ ಹೋರಾಟ ವನ್ನು ಮುಂದುವರಿಸುವುದಾಗಿ ಹೇಳಿಕೊಂಡಿ
ದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಸಾಲು ಸಾಲು ಮೀಸಲಾತಿ ಹೋರಾಟದಿಂದಾಗಿ ಅಂದಿನ ಆಡಳಿತಾರೂಢ ಬಿಜೆಪಿ ಯಾವ ಮಟ್ಟಿಗೆ ಸೋಲನುಭವಿಸಬೇಕಾಯಿತು ಎಂಬುದು ಗೊತ್ತಿರುವಂಥದ್ದೇ. ತಮ್ಮ ಉಪವಾಸ ಸತ್ಯಾಗ್ರಹದ ಮೂಲಕ ಆಡಳಿತ ಪಕ್ಷಕ್ಕೆ ತಲೆನೋವಾಗಿದ್ದ ಮನೋಜ್, ಈ ಬಾರಿಯ ಚುನಾವಣಾ ಕಣದಿಂದ ಹಿಂದೆ ಸರಿದಿರುವುದರಿಂದ, ಮರಾಠ ವಾಡ ಭಾಗದಲ್ಲಿ, ವಿದರ್ಭ ಮತ್ತು ಪಶ್ಚಿಮ ಮಹಾರಾಷ್ಟ್ರದ ಹಲವು ವಿಧಾನಸಭಾ ಕ್ಷೇತ್ರ ಗಳಲ್ಲಿ ಮಹಾಯುತಿ ಮೈತ್ರಿಕೂಟಕ್ಕೆ ಆಗುತ್ತಿದ್ದ ನಷ್ಟ ಕಡಿಮೆಯಾಗಲಿದೆ ಎಂಬ ಲೆಕ್ಕಾಚಾರವಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಇದೇ ಭಾಗದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸಾಕಷ್ಟು ಹಿನ್ನಡೆ ಅನುಭವಿಸಿತ್ತು.
ಒಟ್ಟಿನಲ್ಲಿ ವ್ಯಕ್ತಿಯೊಬ್ಬ ಪ್ರಾರಂಭಿಸಿದ ಹೋರಾಟವು ರಾಜಕೀಯ ವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಮನೋಜ್
ಪಾಟೀಲರೇ ಸ್ಪಷ್ಟ ಉದಾಹರಣೆ. ಈ ಎಲ್ಲ ಕಾರಣಗಳಿಂದಾಗಿ ಈ ಸಲದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯು ಸಾಕಷ್ಟು
ಕುತೂಹಲ ಕೆರಳಿಸಿರುವುದಂತೂ ಖರೆ.

(ಲೇಖಕರು ಪತ್ರಕರ್ತರು)

ಇದನ್ನೂ ಓದಿ: @Vinayakabhatmuroor