ವಿದ್ಯಮಾನ
ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ
ಕನ್ನಡದ ಹೆಮ್ಮೆಯ ವಿದ್ವಾಂಸರಾದ ಶತಾವಧಾನಿ ಆರ್.ಗಣೇಶ್ ಅವರು ನಿಷ್ಠುರವಾದಿಗಳಾಗಿದ್ದರೂ ಮೃದುಭಾಷಿಕರು ಎಂಬುದು ಬಹುತೇಕರಿಗೆ ತಿಳಿದ ವಿಷಯವೇ. ‘ಯಾರಿಗಾದರೂ ನೋವಾಗಿಬಿಡಬಹುದೇನೋ’ ಎನ್ನುವಷ್ಟರ ಮಟ್ಟಿಗೆ ಮೃದು-ಮಧುರ ಸ್ವರದಲ್ಲಿ ವಾದ ಮಂಡಿಸುವುದಕ್ಕೆ ಹೆಸರಾದ ಅವರ ಪ್ರವಚನಗಳಲ್ಲಿ ಅನವಶ್ಯಕವಾಗಿ ಪರದೂಷಣೆಯಂತೂ ಕಾಣಸಿಗುವುದಿಲ್ಲ.
ಅಪಶಬ್ದ ಮಾತಾಡಿದರೆ ತಮ್ಮ ಮುಖವೆಲ್ಲಿ ಮೈಲಿಗೆಯಾಗಿ ಬಿಡುವುದೋ ಎಂದು ಎಚ್ಚರಿಕೆಯಿಂದ ಪದಪ್ರಯೋಗ ಮಾಡುವ ಅಪರೂಪದ ವಿದ್ವಾಂಸರು ಮತ್ತು ವಾಗ್ಮಿಗಳೆಂದರೆ ಗಣೇಶ್ ಅವರು ಎನ್ನಬಹುದು. ಮಾತ್ರವಲ್ಲ, ಸ್ವತಃ ಸ್ಮಾರ್ತ ಪರಂಪರೆಯನ್ನು ಅನುಸರಿಸುತ್ತಿರುವವ ರಾದರೂ ಅನ್ಯಮತಗಳ ಕುರಿತು ಸಹಿಷ್ಣುತೆ ಹೊಂದಿರುವವರು. ಹಾಗಾಗಿ, ಸರಳ-ಸೌಮ್ಯ ಜೀವಿ ಗಣೇಶರು ತಮ್ಮ ವಿದ್ಯೋನ್ನತಿಯ, ಅದಕ್ಕಿಂತ ಹೆಚ್ಚಾಗಿ ವಿನಯವಂತಿಕೆಯ ಕಾರಣದಿಂದಾಗಿ ಸರ್ವತ್ರ ಸ್ವೀಕಾರವಾಗುವಂಥವರು.
ಆದರೆ, ಈ ವೈಶಿಷ್ಟ್ಯಕ್ಕೆ ವಿಭಿನ್ನವಾಗಿ ಎಂಬಂತೆ, ‘ಮಣಿ ಮಂಜರಿ’ ಎಂಬ ಗ್ರಂಥದ ಕುರಿತಾದ ಅವರ ಕಟುಶಬ್ದಗಳ ವಕ್ತವ್ಯವನ್ನು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿದಾಗ ಆಶ್ಚರ್ಯವಾಯಿತು. 13ನೇ ಶತಮಾನದ ಮಧ್ವಾನು ಯಾಯಿ ಎಂದು ಹೇಳಿಕೊಳ್ಳುವ ನಾರಾಯಣ ಪಂಡಿತರ ಮಣಿಮಂಜರಿ’ ಎಂಬ ಪುರಾತನ ಗ್ರಂಥದ ಕುರಿತು, “ಇದು ‘ರಿಲಿಜಿಯಸ್ ಪೋರ್ನೋಗ್ರಫಿ’ ಎನ್ನಲು ನನಗಾವ ದಾಕ್ಷಿಣ್ಯವಿಲ್ಲ. ಇಂಥ ಕೀಳು ಅಭಿರುಚಿಯ ಗ್ರಂಥಗಳ ರಚಯಿತರು, ಪಾಠ ಮಾಡುವವರು ಮತ್ತು ಓದುಗರು ಎಲ್ಲರೂ ಸಣ್ಣತನದವರೇ” ಎಂದು ಗಣೇಶ್ ಅಲ್ಲಿ ಕಟುವಾಗಿ ಜರಿದಿದ್ದಾರೆ.
ಮಾತ್ರವಲ್ಲ, ಈ ನಾರಾಯಣ ಪಂಡಿತರ ತಂದೆ ತ್ರಿವಿಕ್ರಮ ಪಂಡಿತಾಚಾರ್ಯರು ಬರೆದ ‘ಶ್ರೀ ವಾಯು ಸ್ತುತಿ’ಯ ಬಗ್ಗೆಯೂ ಮಾತನಾಡುತ್ತಾ, “ವಾಯುವಿನ ಸ್ತುತಿಗಿಂತ ಹೆಚ್ಚಾಗಿ ಇಲ್ಲೂ ಶಂಕರರ ಮತ್ತು ಸ್ಮಾರ್ತ ಸಂಪ್ರದಾಯದ ನಿಂದನೆಗೇ ಶ್ರಮ ವಹಿಸಲಾಗಿದೆ. ‘ಹಿರಿಯಕ್ಕನ
ಚಾಳಿ ಮನೆಮಂದಿಗೆಲ್ಲಾ’ ಎನ್ನುವ ಹಾಗೆ, ತಂದೆಯ ಸಂಸ್ಕಾರವೇ ಮಗನಿಗೂ ಬಂದಿರುವಂತೆ ಕಾಣಿಸುತ್ತದೆ” ಎಂದಿದ್ದಾರೆ. ಮಧ್ವಾಚಾರ್ಯರ ಚರಿತ್ರೆಯಾದ ‘ಶ್ರೀ ಸುಮಧ್ವ ವಿಜಯ’ವನ್ನು ಬರೆದಿದ್ದಾರೆ ಎನ್ನಲಾಗುವ ಹಾಗೂ ಮಧ್ವರ ಸಮಕಾಲೀನರಾದ ನಾರಾಯಣ ಪಂಡಿತರ ‘ಮಣಿಮಂಜರಿ’ ಕೃತಿಯಲ್ಲಿನ ಅಶ್ಲೀಲತೆಗಳ ಕುರಿತಾದ ಗಣೇಶರ ಸಂಕ್ಷಿಪ್ತ ವಿವರಣೆಯನ್ನು ಕೇಳಿದಾಗ, ಅವರು ಇನ್ನೊಬ್ಬ ಪಂಡಿತರ ಬಗ್ಗೆ ಹೀಗೆ ಕಟುವಾಗಿ ಮಾತಾಡುವಷ್ಟು ಕೆಟ್ಟದಾಗಿ ಆತ ಏನನ್ನು ಬರೆದಿರಬಹುದು ಎಂಬ ಕುತೂಹಲ ಉಂಟಾಯಿತು. ಹಾಗಾಗಿ, ‘ಮಣಿಮಂಜರಿ’ಯ ಪುಟ ಗಳನ್ನು ತಿರುವಿ ಹಾಕಬೇಕಾಯಿತು.
ಸುಮಾರು 13ನೇ ಶತಮಾನದಲ್ಲಿ ‘ಶ್ರೀ ಸುಮಧ್ವ ವಿಜಯ’ ಗ್ರಂಥಕ್ಕೆ ಮುನ್ನುಡಿಯಾಗಿ ರಚಿಸಲಾಗಿದೆ ಎನ್ನಲಾಗುವ ‘ಮಣಿಮಂಜರಿ’, 8 ಸರ್ಗಗಳಾಗಿ ವಿಂಗಡಿಸಲಾದ 301 ಶ್ಲೋಕಗಳ ಕೃತಿಯಾಗಿದೆ. ಕೆಲವರು, “ಇದು ಮಾಧ್ವ ಸಂಪ್ರದಾಯಸ್ಥರಿಗೆ ಸಾಂಪ್ರದಾಯಿಕವಾಗಿ ಕಲಿಸುವ
ಬಾಲಪಠ್ಯವಾಗಿದೆ” ಎಂದರೆ ಇನ್ನು ಕೆಲವರು, “ಬಹಳ ಮಧ್ವಾನುಯಾಯಿಗಳಿಗೆ ಈ ಗ್ರಂಥವಿರುವುದೇ ಗೊತ್ತಿಲ್ಲ; ಇದು ಸಾರ್ವತ್ರಿಕವಾಗಿ ಪಾಠಮಾಡುವ ಗ್ರಂಥವಲ್ಲ” ಎನ್ನುತ್ತಾರೆ. ಇರಲಿ, ‘ಮಣಿಮಂಜರಿ’ಯ ಮೊದಲೆರಡು ಸರ್ಗಗಳು ಸೃಷ್ಟಿ ಮತ್ತು ರಾಮಾವತಾರವನ್ನೂ, 3-4ನೆಯ ಸರ್ಗಗಳು ಕೃಷ್ಣಾವತಾರವನ್ನೂ ಕುರಿತು ಹೇಳುತ್ತವೆ. ತರುವಾಯ ದಲ್ಲಿ ಕ್ರಮವಾಗಿ ಬೌದ್ಧಧರ್ಮದ ಅವರೋಹಣ ಮತ್ತು ಶ್ರೀ ಶಂಕರಾ ಚಾರ್ಯರ ಅದ್ವೈತ ದರ್ಶನದ ಆರಂಭಿಕ ದಿನಗಳ ಸ್ಥಿತಿಗತಿಗಳು (5ನೇ ಸರ್ಗ), ಆದಿಶಂಕರರ ಜನನ ಮತ್ತು ಆರಂಭಿಕ ಚಟುವಟಿಕೆಗಳು (6ನೇ ಸರ್ಗ), ಅದ್ವೈತ ದರ್ಶನದ ಬಲವರ್ಧನೆ ಮತ್ತು ಆದಿಶಂಕರರ ಅವಸಾನ (7ನೇ ಸರ್ಗ), ವಿಷ್ಣುತತ್ತ್ವವಾದಿಗಳಿಗೆ ಅದ್ವೈತಿ ಗಳು ನೀಡಿದ್ದಾರೆ ಎನ್ನಲಾಗುವ ಚಿತ್ರಹಿಂಸೆಗಳು (8ನೇ ಸರ್ಗ) ಇವು ವಿವರಿಸಲ್ಪಟ್ಟಿವೆ. ಶ್ರೀ ಮಧ್ವರ ಜನನದೊಂದಿಗೆ ಕೃತಿ ಅಂತ್ಯಗೊಳ್ಳುತ್ತದೆ.
ಆದಿಶಂಕರರ, ಅವರ ತಾಯಿಯ ಮತ್ತು ಗುರುಜನರ ನಿಂದನೆಗೇ ಗುರಿಯಾಗಿರುವ 6-7ನೇ ಸರ್ಗಗಳನ್ನು ಓದಿದರೆ, ಈ ಗ್ರಂಥವನ್ನು ಗಣೇಶರು ‘ರಿಲಿಜಿಯಸ್ ಪೋರ್ನೋಗ್ರಫಿ’ ಎಂದಿದ್ದು ಕಡಿಮೆಯಾಯಿತು ಎಂದು ಯಾರಿಗಾದರೂ ಅನ್ನಿಸದಿರದು. ನಾರಾಯಣ ಪಂಡಿತರಿಗಿಂತ ಹೆಚ್ಚು ಕಡಿಮೆ 400 ವರ್ಷಗಳ ಮೊದಲು ಅವತರಿಸಿದವರು ಶ್ರೀ ಶಂಕರಾಚಾರ್ಯರು; ಆದರೆ, ಶ್ರೀ ಶಂಕರರ ಹುಟ್ಟಿನಿಂದ ಹಿಡಿದು ದೇಹತ್ಯಾಗದವರೆಗಿನ ಘಟನೆಗಳನ್ನು ಸ್ವತಃ ಕಣ್ಣಾರೆ ಕಂಡಿದ್ದೇನೆ ಎನ್ನುವಂತೆ ಸುಳ್ಳನ್ನೇ ಅವರು ಬರೆದಿದ್ದಾರೆ. “ಪೂರ್ವಜನ್ಮದಲ್ಲಿ ರಾಕ್ಷಸನಾಗಿದ್ದ ‘ಮಣಿಮಾನ್’ ಎನ್ನುವ
ವನೇ, ತಂದೆಯ ನಿಧನಾನಂತರ ಸಾಂಕರ್ಯದಿಂದ ಶಂಕರ ನಾಗಿ ಕಾಲಟಿಯಲ್ಲಿ ಹುಟ್ಟಿದವನು, ತಾಯಿ ನೀತಿಗೆಟ್ಟವಳು” ಎನ್ನುವಲ್ಲಿಯಿಂದ ಪ್ರಾರಂಭವಾಗಿ, ಪ್ರಸಿದ್ಧ ಮಂಡನ ಮಿಶ್ರರು ಮತ್ತು ಬಾಲಯತಿ ಶಂಕರರ ನಡುವೆ ನಡೆದ ಪ್ರಸಿದ್ಧ ವಾದಸರಣಿಯ ಕುರಿತು, ಆ ವಾದದಲ್ಲಿ ನಿರ್ಣಾಯಕಿಯ ಪಾತ್ರವಹಿಸಿದ ಶಾರದೆಯ ಅಪರಾವತಾರಿ ಎನ್ನಲಾಗುವ, ಮಂಡನಮಿಶ್ರರ ಪತ್ನಿ ಉಭಯಭಾರತಿಯವರು ಶಂಕರರ ಪರವಾಗಿ ತೀರ್ಪು ನೀಡುವಲ್ಲಿಯ ಘಟನೆಗಳನ್ನು ಅತ್ಯಂತ ಅಶ್ಲೀಲವಾಗಿ, ಸಭ್ಯರು ಕಲ್ಪಿಸಿಕೊಳ್ಳಲೂ ಸಾಧ್ಯವಾಗದಷ್ಟು ಕೆಳಮಟ್ಟದ ಭಾವನೆ-ಭಾಷೆಯನ್ನು ಬಳಸಿ ಚಿತ್ರಿಸಿದ್ದಾರೆ.
ಉಭಯಭಾರತಿಯವರ ಅಂಗಾಂಗಗಳ ವರ್ಣನೆ, ಅವರ ಜತೆಗೆ ಇನ್ನೂ 15 ವರ್ಷದ ಯತಿಯಾಗಿದ್ದ ಶಂಕರರ ಅನೈತಿಕ ಸಂಬಂಧದ ಕುರಿತಾದ ತೀರಾ ಅಶ್ಲೀಲ ವರ್ಣನೆಗಳು ಸಾತ್ವಿಕರ ರಕ್ತದೊತ್ತಡವನ್ನು ಹೆಚ್ಚಿಸುವಂಥವು. ಮುಂದೆ ಶ್ರೀ ಶಂಕರರು ರೋಗಗ್ರಸ್ತರಾಗಿ ಉತ್ತರದಲ್ಲಿ ಶೋಚನೀಯ ವಾಗಿ ಮರಣವನ್ನಪ್ಪಿದರು ಎನ್ನುವಲ್ಲಿಯವರೆಗೆ ಎರಡೂ ಅಧ್ಯಾಯಗಳು ಶ್ರೀ ಶಂಕರರ ನಿಂದನೆಗಾಗಿಯೇ ಮೀಸಲಾಗಿವೆ. ಈ ಸಂದರ್ಭಗಳನ್ನು, ನಾರಾಯಣ ಪಂಡಿತರು ಬರೆದ ಶ್ಲೋಕದ ಸಹಿತ ಯಥಾವತ್ತಾಗಿ ವಿವರಿಸಬಹುದಾಗಿದ್ದರೂ, ಸಂಭಾವಿತ ಓದುಗರಿಗೆ ಮುಜುಗರ ಮತ್ತು ನೋವು ಆಗಬಾರದು ಎಂಬ ಕಾರಣಕ್ಕೆ ಹಾಗೆ ಮಾಡದೆ ವಿವರಣೆ ಗಳನ್ನು ಹೃಸ್ವವಾಗಿಸಿದ್ದೇನೆ.
ಭಾರತದ ಆಧ್ಯಾತ್ಮಿಕ ಆಕಾಶದಲ್ಲಿ ಧ್ರುವತಾರೆಯಂತೆ ಶಾಶ್ವತವಾಗಿ ಮಿನುಗುತ್ತಿರುವ ಮಹಾಪುರುಷರಲ್ಲಿ ಶಂಕರಾಚಾರ್ಯರಿಗೆ ಅಗ್ರಸ್ಥಾನವಿದೆ. ಅಷ್ಟೇಕೆ, ಜಗತ್ತಿನ ತತ್ತ್ವಶಾಸ್ತ್ರದ ಇತಿಹಾಸದಲ್ಲಿ ಎಂದೆಂದಿಗೂ ಉಳಿಯುವ ಹೆಸರು ಅವರದು.
ಪ್ರಾಚೀನರಿಂದ ಹಿಡಿದು ಈ ಶತಮಾನದ ಸ್ವಾಮಿ ವಿವೇಕಾನಂದರು, ಬಾಲಗಂಗಾಧರ ತಿಲಕರು, ಮಹರ್ಷಿ ಅರವಿಂದರು ಮುಂತಾದ ಸಾಧಕರಿಗೆ ಪ್ರೇರಣೆಯಾದವರು ಅವರು. ಭಾರತದ ಉದ್ದಗಲಕ್ಕೂ ಸಂಚರಿಸಿ ತಮ್ಮ ಆಧ್ಯಾತ್ಮಿಕ ಸಾಮರಸ್ಯದ ಕಾರ್ಯಗಳಿಂದ ಕೇವಲ 32 ವರ್ಷಗಳ ಜೀವಿತಾವಧಿಯಲ್ಲಿ ಜನಮನ ಗೆದ್ದವರು, ತಮ್ಮ ಮಹತ್ಸಾಧನೆಗಳಿಂದ ಮತ್ತು ಯತಿಗಳಿಗೆ ಒಪ್ಪುವ ಆದರ್ಶ ಜೀವನ ಕ್ರಮದಿಂದ ಪೂಜ್ಯರಾದವರು.
‘ಪ್ರಸ್ಥಾನತ್ರಯ’ಕ್ಕೆ ಅವರು ಬರೆದ ಭಾಷ್ಯಗಳು ಅಂದಿಗೂ, ಇಂದಿಗೂ, ಎಂದೆಂದಿಗೂ ಎಲ್ಲರಿಗೂ ಆಧಾರಭೂತವಾಗಿರುವಂಥವು. ಅವರ ಸಮಗ್ರ
ಸ್ತೋತ್ರಸಾಹಿತ್ಯ ರಾಶಿಗಳಂತೂ 1200 ವರ್ಷಗಳ ನಂತರವೂ ಪ್ರಸ್ತುತವಾಗಿವೆ. ‘ವಿವೇಕ ಚೂಡಾಮಣಿ’ಯಂಥ ರಚನೆಗಳು ಜಾತಿಮತ ಗಳನ್ನು ಮೀರಿ ಎಲ್ಲರಿಗೂ ದಾರಿದೀಪವಾಗಿರುವ ಅನ್ಯಾಸದೃಶ ಕೃತಿಗಳಾಗಿವೆ.
‘ಶಿವಾನಂದ ಲಹರಿ’, ‘ಸೌಂದರ್ಯ ಲಹರಿ’, ‘ಮೋಹ ಮುದ್ಗರ’ (ಭಜಗೋವಿಂದಂ) ಕೃತಿಗಳು ಮಾತ್ರವಲ್ಲದೆ, “ಕೆಟ್ಟ ಮಕ್ಕಳು ಹುಟ್ಟಬಹುದು, ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ” ಎಂದು ಮಾತೃಸ್ಥಾನಕ್ಕೆ ಮಂಗಳಾಶಾಸನ ಮಾಡಿದ ಪ್ರಸಿದ್ಧ ‘ದೇವ್ಯಪರಾಧ ಕ್ಷಮಾಪಣ ಸ್ತೋತ್ರ’ ಮತ್ತು ‘ಮಾತೃಪಂಚಕ’ ಮುಂತಾದ ಸ್ತೋತ್ರರತ್ನಗಳು ಜನಮನದಲ್ಲಿ ಸದಾ ಹಸಿರಾಗಿರುವಂಥವು. “ಒಂದೊಮ್ಮೆ ಮಗನು ಸನ್ಯಾಸಿ ಯಾಗಿದ್ದರೂ, ತಾಯಿಗೆ ಆತ ಸದಾ ಮಗನಾಗೇ ಇರುತ್ತಾನೆ” ಎಂಬ ಸತ್ಯವನ್ನು ಸ್ವತಃ ತಾಯಿಯ ಅಂತ್ಯಸಂಸ್ಕಾರಗಳನ್ನು ನೆರವೇರಿಸುವ ಮೂಲಕ ತೋರಿಸಿಕೊಟ್ಟಿದ್ದು ಆಚಾರ್ಯ ಶಂಕರರ ಶ್ರೇಷ್ಠ ವ್ಯಕ್ತಿತ್ವಕ್ಕೆ ನಿದರ್ಶನ. ಅಪೂರ್ವ ಸನಾತನ ಭಾರತದ ಗುರುತಾದ ಮತ್ತು ಅಪೌರುಷೇಯವಾದ 4 ವೇದಗಳನ್ನು ಉಳಿಸಿ ಬೆಳೆಸಲು 4 ಆಮ್ನಾಯ ಪೀಠಗಳನ್ನು ಶ್ರೀ ಶಂಕರರು ಸ್ಥಾಪಿಸಿದ್ದು, ಭಾರತದ ಜ್ಞಾನ ಪರಂಪರೆಯನ್ನು ರಕ್ಷಿಸುವಲ್ಲಿನ ಅವರ ಕಾಳಜಿಯನ್ನು ತೋರಿಸುತ್ತದೆ.
‘ಬ್ರಹ್ಮತ್ವ ಪ್ರಜ್ಞೆ’ಯನ್ನು ಅರಿತವನು ಚಾಂಡಾಲನಾಗಿರಲಿ ಬ್ರಾಹ್ಮಣನಾಗಿರಲಿ, ಅಂಥವನು ನಿಶ್ಚಯವಾಗಿ ಗುರುವಾಗಲು ಯೋಗ್ಯನು ಎನ್ನುವ ಅವರ ‘ಮನೀಷಾ ಪಂಚಕ’ದ ಕ್ರಾಂತಿಕಾರಕ ಸಂದೇಶಗಳು, ಸಮಾಜದ ಸಾಮರಸ್ಯಕ್ಕೆ ದಾರಿ ಮಾಡಿಕೊಡುವಂಥವು. ಮುಂದೊಂದು ದಿನ, ಹಿಂದೂ ಧಾರ್ಮಿಕ ಪ್ರಜಾವರ್ಗವು ವಿವಿಧ ದೇವರುಗಳ ಹೆಸರಿನಲ್ಲಿ ಒಡೆದುಹೋಗುವುದನ್ನು ತಪ್ಪಿಸಲು, ಶಿವ-ಕೇಶವರಲ್ಲಿ ಅಭೇದವನ್ನು ಸಾರುವುದರ ಜತೆಗೆ, ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣುವನ್ನು ಒಳಗೊಂಡ ‘ಪಂಚಾಯತನ ಪೂಜಾ ವ್ಯವಸ್ಥೆ’ಯನ್ನು ರೂಪುಗೊಳಿಸಿ ಮತ-ಸಾಮರಸ್ಯ ಕ್ಕಾಗಿ ಶ್ರಮಿಸಿದವರು ಶ್ರೀ ಶಂಕರರು. ಅತ್ಯಂತ ಪ್ರಸಿದ್ಧವಾದ ಶ್ರೀ ವಿಷ್ಣು ಸಹಸ್ರನಾಮಕ್ಕೆ ಆದಿಯಲ್ಲೇ ಭಾಷ್ಯ ಬರೆದವರು (ಶ್ರೀವೈಷ್ಣವ ಮತ್ತು ಮಾಧ್ವ ಆಚಾರ್ಯರುಗಳು ಈ ಪ್ರಯತ್ನ ಮಾಡಿಲ್ಲ) ಮತ್ತು ಬದರಿ ಕ್ಷೇತ್ರದಲ್ಲಿ ಜಲಶಯನಿಯಾಗಿದ್ದ ವಿಷ್ಣುವಿನ ಮೂರ್ತಿಯ ಪುನರ್ಪ್ರತಿಷ್ಠೆ ಮಾಡಿದವರು.
ಈ ಎಲ್ಲಾ ಕಾರಣಗಳಿಂದಾಗಿ, ಶೈವರು, ಶಾಕ್ತರು ಮತ್ತು ವೈಷ್ಣವರು ಎನ್ನದೇ, ಹಿಂದೂಗಳೆಲ್ಲಾ ಒಂದಲ್ಲಾ ಒಂದು ಕಾರಣಕ್ಕೆ ಶ್ರೀ ಶಂಕರಾ ಚಾರ್ಯರಿಗೆ ಋಣಿಗಳಾಗಬೇಕಾಗುತ್ತದೆ. ಶ್ರೀ ಶಂಕರ ಭಗವತ್ಪಾದರ ಕುರಿತಾಗಿ, ಅವರ ಶಿಷ್ಯರೇ ಆಗಿದ್ದ ಪದ್ಮಪಾದರು ರಚಿಸಿದ ‘ಶಂಕರ ದಿಗ್ವಿಜಯ’ ಎಂಬ ಗ್ರಂಥ ಲಭ್ಯವಿಲ್ಲದಿದ್ದರೂ, ಪರಂಪರಾನುಗತವಾಗಿ ಬಂದಿ ರುವ ಐತಿಹ್ಯಗಳು, ‘ಮಾಧವೀಯ ಶಂಕರ ದಿಗ್ವಿಜಯ’ ಮತ್ತು ‘ಗುರು ವಂಶ ಕಾವ್ಯ’ ಮುಂತಾದ ಗ್ರಂಥ ಗಳ ತೌಲನಿಕ ಅಧ್ಯಯನದಿಂದ ಶ್ರೀ ಶಂಕರರ ಚರಿತ್ರೆಯನ್ನು ತಿಳಿಯಲು ಸಾಧ್ಯವಿದೆ.
‘ಮಣಿಮಂಜರಿ’ಯಂಥ ಕ್ಷುಲ್ಲಕ ಚಿಂತನೆಯ ಗ್ರಂಥಗಳಿಂದ ಶ್ರೀ ಶಂಕರಾಚಾರ್ಯರಿಗೆ ಏನೂ ಬಾಧಕವಾಗುವುದಿಲ್ಲ ಮತ್ತು ವಿಶ್ವಾದ್ಯಂತ ಅವರ ತತ್ತ್ವವನ್ನು ಪರಿಪಾಲಿಸುತ್ತಿರುವ ಕೋಟ್ಯಂತರ ಆಸ್ತಿಕರ ಬದ್ಧತೆಯು ಇಂಥ ಅಪಪ್ರಚಾರದಿಂದ ಸ್ವಲ್ಪವೂ ಅಲುಗಾಡುವುದಿಲ್ಲ ಎನ್ನವುದು
ವಿದಿತ. ಆದರೆ, ಇಂಥ ಅಪಸವ್ಯಗಳಿಂದ ಕೂಡಿರುವ ಗ್ರಂಥಗಳನ್ನು ದೂರವಿರಿಸಿ ಅವುಗಳಿಂದ ಅಂತರ ಕಾಯ್ದುಕೊಳ್ಳುವ ಬದಲು, ಇನ್ನೂ ತಲೆಯ ಮೇಲೆ ಹೊತ್ತು ಮೆರವಣಿಗೆ ಮಾಡುತ್ತಿರುವ ಕೆಲವು ಪ್ರಭೃತಿಗಳಿಂದಾಗಿ, ಶ್ರೇಷ್ಠ ವಿಷ್ಣುಭಕ್ತರೂ, ಭಕ್ತಿಮಾರ್ಗವನ್ನು ಲೋಕಕ್ಕೆ ಸಾರಿದ
ವರೂ, ಅವತಾರಿಗಳೂ ಆದ ಶ್ರೀ ಮಧ್ವಾಚಾರ್ಯರಿಗೆ ಅಪಚಾರ ಆಗುತ್ತಿರುವುದಂತೂ ಸತ್ಯ. ಈ ಗ್ರಂಥದ ಕುರಿತು ಸಾಮಾಜಿಕ ಮಾಧ್ಯಮ ಗಳಲ್ಲಿ ಟೀಕೆ-ಟಿಪ್ಪಣಿ ಮಾಡುವಾಗ ಕೆಲ ಜನರು ಶ್ರೀ ಮಧ್ವಾಚಾರ್ಯರನ್ನು ಕುರಿತೂ ಕೆಳಮಟ್ಟದಲ್ಲಿ ಅವಹೇಳನ ಮಾಡುತ್ತಿರುವುದನ್ನು ನೋಡಿದರೆ ನೋವಾಗುತ್ತದೆ. ‘ಏಕಶ್ಲೋಕಿ’ ಸೇರಿದಂತೆ ವಿಷ್ಣುವಿನ ಕುರಿತಾದ ಅನೇಕ ಸ್ತೋತ್ರಗಳನ್ನು ರಚಿಸಿದ್ದಲ್ಲದೆ, ಸ್ವತಃ ವಿಷ್ಣು
ಸಹಸ್ರನಾಮಕ್ಕೆ ಭಾಷ್ಯ ರಚಿಸಿ ಪರಮ ಭಾಗವತರೆನಿಸಿಕೊಂಡ ಶ್ರೀ ಶಂಕರಾಚಾರ್ಯರಿಗೆ ಅಪಚಾರವೆಸಗುವ ಯತ್ನದ ಇಂಥ ಕ್ಷುದ್ರಗ್ರಂಥಗಳಿಗೆ, ಶ್ರೀ ಮಧ್ವಾಚಾರ್ಯರಂಥ ಮಹಾಮಹಿಮರು ತಮ್ಮ ಅಂಗೀಕಾರದ ಮುದ್ರೆ ಒತ್ತಿದ್ದಾರೆಂದು ನನಗಂತೂ ಅನಿಸುವುದಿಲ್ಲ.
ಕಾರಣ, ಭಗವಂತನು ತನಗೆ ಅಪಚಾರವಾದರೆ ಸಹಿಸಿಕೊಂಡಾನು; ಆದರೆ ಭಗವಂತನ ಆತ್ಮಸ್ಥಾನದಲ್ಲಿರುವ ಶ್ರೀ ಶಂಕರರಂಥ ಭಾಗವತ ಜನರಿಗೆ ಅಪಚಾರವಾದರೆ ಆತ ಸಹಿಸಲಾರ ಎನ್ನುವುದನ್ನು ಶ್ರೀ ಮಧ್ವರೂ ಅರಿತವರೇ ಆಗಿದ್ದರು. ಯಾರದ್ದೋ ಮನೆಗೆ ಬೆಂಕಿಯಿಟ್ಟು ಅದರಲ್ಲಿ ಚಳಿ ಕಾಯಿಸಿಕೊಳ್ಳುವ ಮನಸ್ಥಿತಿಯ ನಾರಾಯಣ ಪಂಡಿತರಂಥ ವರು ಎಲ್ಲ ಕಾಲದಲ್ಲೂ ಮತ್ತು ಸಮುದಾಯಗಳಲ್ಲೂ ಕಾಣಸಿಗುತ್ತಾರೆ. ಇಂಥವರನ್ನು ಉದ್ದೇಶಿಸಿಯೇ ಶ್ರೀ ಶಂಕರ ಭಗವತ್ಪಾದಾಚಾರ್ಯರು ಭಜ ಗೋವಿಂದಂ, ಭಜ ಗೋವಿಂದಂ, ಗೋವಿಂದಂ ಭಜ
ಮೂಢಮತೇ’ ಎಂದು ಹೇಳಿ, ಕೆಳಮಟ್ಟದ ಯೋಚನೆಗಳನ್ನು ತೊಡೆಯುವಂತೆ ಅವರಿಗೆ ಬುದ್ಧಿ ಹೇಳಿರಲಿಕ್ಕೂ ಸಾಕು!
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)