Thursday, 12th December 2024

ಸ್ವಾತಂತ್ರ‍್ಯ ಹೋರಾಟದ ಬೆಂಕಿ ಚೆಂಡು ಸಾವರ್ಕರ್‌ !

ಸ್ಮರಣೆ

ಮಾರುತೀಶ್ ಅಗ್ರಾರ

ವಿನಾಯಕ ದಾಮೋದರ ಸಾವರ್ಕರ್ ತನ್ನ ಇಡೀ ಜೀವನವನ್ನೇ ರಾಷ್ಟ್ರಕ್ಕಾಗಿ ಸಮರ್ಪಿಸಿದ ದೇಶಪ್ರೇಮಿ. ಸ್ವಾತಂತ್ರ್ಯ ಪೂರ್ವದಲ್ಲಿ ಸಾವರ್ಕರ್ ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸುವ ಸಲುವಾಗಿ ಬ್ರಿಟಿಷರ ವಿರುದ್ಧ ಹೆಣೆದ ರಣತಂತ್ರ ಬಲು ರೋಚಕ. ನಿಜ ಹೇಳಬೇಕೆಂದರೆ, ಸಾವರ್ಕರ್ ಎಂದರೆ ಶಕ್ತಿ, ಸಾವರ್ಕರ್ ಎಂದರೆ ಸಾಹಸಿ, ಸಾವರ್ಕರ್ ಎಂದರೆ ಹೋರಾಟ ಹೀಗೆ ಅವರನ್ನು ಏನೆಂದು ಬಣ್ಣಿಸಿದರು ಸಾಲದು!

ಹೌದು, ಸಾವರ್ಕರ್ ಬಾಲಕರಾಗಿದ್ದಾಗಲೇ ಅವರಲ್ಲಿ ದೇಶಪ್ರೇಮವೆಂಬುದು ಮನೆಮಾಡಿತ್ತು. ಆಗ ಅವರಿಗಿನ್ನು ೧೨-೧೩ ವರ್ಷ ವಯಸ್ಸು! ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪುಟ್ಟ ಪುಟ್ಟ ಮಕ್ಕಳು, ಯುವಕರು ಸ್ವಾತಂತ್ರ್ಯ ಹೋರಾಟದ ಅರಿವಿಲ್ಲದೆ ತಾವಾಯಿತು ತಮ್ಮ ಆಟ-ಪಾಠವಾಯಿತೆಂದು ತಿರುಗಾಡುತ್ತಿದ್ದ ಸಮಯದಲ್ಲಿ ಬಾಲಕ ಸಾವರ್ಕರ್ ಮಾತ್ರ ತನ್ನ ತಂಡವೊಂದನ್ನು ಕಟ್ಟಿಕೊಂಡು ಬೀದಿ ಬೀದಿಗಳಲ್ಲಿ ‘ಸ್ವಾತಂತ್ರ್ಯ ಲಕ್ಷ್ಮೀ ಕೀ ಜೈ’
ಎನ್ನುತ್ತಾ ಎಲ್ಲರಲ್ಲೂ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸುತ್ತಿದ್ದ ಬಾಲಕನಾಗಿದ್ದ. ಆ ವಯಸ್ಸಿನಲ್ಲಿಯೇ ಸಾವರ್ಕರ್ ಅದೆಷ್ಟೋ ಕಿರಿಯ-ಹಿರಿಯರಿಗೂ ಸ್ಪೂರ್ತಿಯಾಗಿದ್ದರು ಎಂದರೆ ಅತಿಶಯೋಕ್ತಿಯಲ್ಲ.

ಅಂದ ಹಾಗೆ ಸಾವರ್ಕರ್ ಅವರ ಹೋರಾಟದ ಹಾದಿಯನ್ನು ಒಂದು ಕ್ಷಣ ನೆನೆದಾಗ ಮೈ ರೋಮಾಂಚನವಾಗುತ್ತದೆ ಹಾಗೂ ಎಲ್ಲರ ಎದೆಯಲ್ಲೂ ದೇಶಪ್ರೇಮದ ಛಾಯೆ ಮೂಡುತ್ತದೆ. ಅದು ೧೯೦೧ ಜನವರಿ ೨೨ರಂದು ಇಂಗ್ಲೆಂಡಿನ ರಾಣಿ ವಿಕ್ಟೋರಿಯಾ ಸಾವನ್ನಪ್ಪಿದ್ದರು. ಅದರ ನಿಮಿತ್ತ
ಭಾರತಾದ್ಯಂತ ಶೋಕಾಚರಣೆ, ಶ್ರದ್ಧಾಂಜಲಿ ಕಾರ್ಯಕ್ರಮಗಳು ಅಯೋಜನೆಗೊಂಡಿದ್ದವು. ಇದನ್ನು ಖಂಡತುಂಡವಾಗಿ ವಿರೋಧಿಸಿದವರು ಸಾವರ್ಕರ್. ನಾವು ವಿಕ್ಟೋರಿಯಾ ರಾಣಿಗೆ ಶ್ರದ್ಧಾಂಜಲಿಯನ್ನೇಕೆ ಅರ್ಪಿಸಬೇಕು? ಸತ್ತಿರುವುದು ಇಂಗ್ಲೆಂಡಿನ ರಾಣಿ, ಭಾರತದ ರಾಣಿಯಲ್ಲ!

ಅಷ್ಟಕ್ಕು ಅವಳು ಸತ್ತ ದಿನವೇ ಭಾರತದಲ್ಲಿ ಅನೇಕ ಸೀ-ಪುರುಷರು ಸತ್ತಿಲ್ಲವೇ? ಅವರ ಶೋಕಾಚರಣೆಯನ್ನೇಕೆ ಮಾಡುವುದಿಲ್ಲ? ನಮ್ಮ ಲಕ್ಷಾಂತರ ಜನರ ಸಾವು-ನೋವುಗಳಿಗೆ ಕಾರಣವಾಗಿದ್ದವಳಿಗೆ ಶ್ರದ್ಧಾಂಜಲಿ ಸಲ್ಲಿಸುವುದೇ! ಇದು ನಿಜಕ್ಕೂ ಅವಮಾನಕರ ಸಂಗತಿ ಎಂದು ಗುಡುಗಿದ್ದರು ಸಾವರ್ಕರ್. ಅಷ್ಟಕ್ಕೂ ಸಾವರ್ಕರ್ ಅವರ ದೇಶಸೇವೆಯನ್ನ ಯಾರಾದರೂ ಮರೆಯುವುದುಂಟೆ. ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಪುಟಗಳನ್ನು ತಿರುವಿ ಹಾಕುತ್ತಾ ಹೋದರೆ ಸಾವರ್ಕರ್ ಅವರ ಹೋರಾಟದ ಹಾದಿಯ ದಿಗ್ಧರ್ಶನವಾಗುತ್ತದೆ. ರಕ್ತದ ಕಣಕಣವನ್ನು ರಾಷ್ಟ್ರಕ್ಕಾಗಿ ಸಮರ್ಪಿಸಿದ ಕ್ರಾಂತಿ ಶಿರೋಮಣಿ ಸಾವರ್ಕರ್ ಅವರ ಬಗ್ಗೆ ತಿಳಿಯಲು ಇತಿಹಾಸದ ಪುಟಗಳನ್ನು ಮತ್ತಷ್ಟು ಕೆದಕುವುದು ಒಳ್ಳೆಯದು.

ಅದೆಷ್ಟೋ ಇತಿಹಾಸಕಾರರು ತಮ್ಮ ವೈಯಕ್ತಿಕ ತೀಟೆ-ತೆವಲುಗಳಿಗಾಗಿ ಸಾವರ್ಕರ್ ಅವರ ಬದುಕನ್ನು ಹಾಗೂ ಅವರ ಹೋರಾಟದ ಹಾದಿಯನ್ನು ತಿರುಚುವಂತ ಕೆಲಸ ಮಾಡಿರುವುದು ದುರ್ದೈವದ ಸಂಗತಿ. ಯಾರೇಷ್ಟೇ ತಿರುಚಿ-ಮಗುಚಿ ಬರೆದರೂ ಭಾರತೀಯರು ಮಾತ್ರ ಸಾವರ್ಕರ್ ಅವರ ದೇಶಪ್ರೇಮವನ್ನು ಒಂದಿನಿತು ಮರೆತಿಲ್ಲ. ಅವರಲ್ಲಿದ್ದ ದೇಶಭಕ್ತಿ ಕೋಟಿಕೋಟಿ ಭಾರತೀಯರಿಗೆ ಇಂದಿಗೂ ಪ್ರೇರಣಾದಾಯಿಯಾಗಿದೆ. ಸಾವರ್ಕರ್ ಅವರ ಬದುಕಿನ ಪ್ರತಿ ಘಟನೆಯೂ ರೋಮಾಂಚಕಾರಿ. ಸಾವರ್ಕರ್ ಅವರಿಗೆ ಇದ್ದದ್ದು ಒಂದೇ ಕನಸು, ‘ಭಾರತ ಬ್ರಿಟಿಷರ ಆಳ್ವಿಕೆಯಿಂದ  ಮುಕ್ತವಾಗ ಬೇಕು.

ಅಖಂಡ ಭಾರತ ವಿಶ್ವ ಮಾತೆಯಾಗಿ ಮೆರೆಯಬೇಕು’ . ಅದಕ್ಕಾಗಿ ಸಾವರ್ಕರ್ ಎಲ್ಲ ತ್ಯಾಗಕ್ಕೂ ಸಿದ್ಧರಾಗಿದ್ದರು. ರಾಷ್ಟ್ರಕ್ಕಾಗಿ ಐವತ್ತು ವರ್ಷಗಳ
ಕಾಲ ಅಂಡಮಾನಿನ ಕಾಲಾಪಾನಿ ಶಿಕ್ಷೆ ಅನುಭವಿಸಿದರು. ಅವತ್ತಿನ ಮಟ್ಟಿಗೆ ಕರಿನೀರಿನ ಶಿಕ್ಷೆಯೆಂದರೆ ಅದು ಸಾವಿನ ಮನೆಯೇ ಎಂಬಂತಾಗಿತ್ತು. ಹೊರಗಿನ ಯಾವ ಸಂಪರ್ಕವೂ ಇಲ್ಲದ, ದೇಶದ ಬಹುದೂರದ ಅಂಡಮಾನಿನ ಆ ಕ್ರೂರ ಜೈಲಿನಿಂದ ಮರಳಿ ಬರುವ ನಂಬಿಕೆಯೇ ಯಾರಿಗೂ
ಇರಲಿಲ್ಲ. ಕರಿನೀರಿನಂಥ ಘೋರ ಶಿಕ್ಷೆ ಕೇಳಿದಾಗಲೂ ವಿಚಲಿತರಾಗದ ಸಾವರ್ಕರ್, ಬ್ರಿಟಿಷರಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕೆಂದು ಹಡಗಿನಿಂದ ಜಿಗಿದು ತಪ್ಪಿಸಿಕೊಳ್ಳಲು ಪಯತ್ನಿಸಿದರು. ಅದು ಸಾಧ್ಯವಾಗದೆ ಶಿಕ್ಷೆಗೆ ಒಳಪಟ್ಟಾಗ, ಜೈಲಿನ ಬ್ರಿಟಿಷ್ ಅಧಿಕಾರಿ ಹೆದರಬೇಡಿ
ಬ್ಯಾರಿಸ್ಟರ್ (ಸಾವರ್ಕರ್) ಸಾಹೇಬರೇ ನಿಮ್ಮನ್ನು ನಮ್ಮ ಸರಕಾರ ೧೯೬೦ ರಲ್ಲಿ ಬಿಡುಗಡೆ ಮಾಡುತ್ತದೆ ಎಂದಾಗ, ಸಾವರ್ಕರ್ ಜೋರಾಗಿ ನಕ್ಕು ಇನ್ನು ಐವತ್ತು ವರ್ಷಗಳಲ್ಲಿ ನಿಮ್ಮ ಸರಕಾರ ಇದ್ದರೆ ತಾನೇ? ಎಂದು ಗತ್ತಿನಿಂದಲೇ ಜೈಲರನನ್ನು ಪ್ರಶ್ನಿಸಿದ್ದರು.

ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಎದುರಾಗಿ ನಿಂತು ಪ್ರಜ್ವಲಿಸಿದ, ರಾಷ್ಟ್ರಕ್ಕಾಗಿ ತಮ್ಮ ಇಡೀ ಕುಟುಂಬವನ್ನು ಸಮರ್ಪಿಸಿದ, ತಮ್ಮ ಹೆಸರು ಕೇಳಿದರೆ ಬ್ರಿಟಿಷರ ಎದೆ ನಡುಗುವಂತೆ ಮಾಡಿದವರು ವಿನಾಯಕ ದಾವೋದರ ಸಾವರ್ಕರ್. ಹಾಗಾಗಿಯೇ ಅವರನ್ನು ಸ್ವಾತಂತ್ರ್ಯ ಸಂಗ್ರಾಮದ ಬೆಂಕಿ ಚೆಂಡು ಎಂದು ಕರೆಯಲಾಗುತ್ತದೆ. ಸಾವರ್ಕರ್ ಅವರನ್ನು ಜಾತಿವಾದಿ ಎನ್ನುವವರು ನೆನಪಿಡಬೇಕಾದ ಸಂಗತಿಯೇನು ಗೊತ್ತಾ? ಅಸ್ಪೃಶ್ಯತಾ ನಿವಾರಣೆಗಾಗಿ
ಮಹಿಳೆಯರಿಂದ ಅರಿಶಿಣ-ಕುಂಕುಮ ಕಾರ್ಯಕ್ರಮ, ಪತಿತಪಾವನ ಮಂದಿರದ ಮೂಲಕ ಮೇಲುಕೀಳು ಎನ್ನದೆ ಸಮಾಜದ ಎಲ್ಲಾ ವರ್ಗದ ಜನರನ್ನು ಒಂದೆಡೆ ಸೇರಿಸುವ ಕೆಲಸವನ್ನು ಮಾಡಿದ್ದು ಇದೇ ಸಾವರ್ಕರ್.

ಇನ್ನು ೧೮೫೭ ರಲ್ಲಿ ನಡೆದಿದ್ದ ಕ್ರಾಂತಿಯನ್ನು ಬ್ರಿಟಿಷರು ಸಿಪಾಯಿದಂಗೆ ಎಂದು ಕರೆಯುತ್ತಿದ್ದರು. ಅನೇಕರು ಸಹ ಹಾಗೆಂದೇ ಭಾವಿಸಿದ್ದರು ಕೂಡ. ಆದರೆ ಸಾವರ್ಕರ್ ಅದನ್ನು ಸಿಪಾಯಿದಂಗೆ ಎಂದು ಕರೆಯದೆ ಅದನ್ನು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಘಂಟಾಘೋಷವಾಗಿ ಮೊದಲು ಹೇಳಿದ್ದೇ ಸಾವರ್ಕರ್. ಅದಕ್ಕಾಗಿ ಸಾವರ್ಕರ್ Seಛಿ ಐbಜಿZ UZ u ಐbಛಿmಛ್ಞಿbಛ್ಞ್ಚಿಛಿ-೧೮೫೭ ಎಂಬ ಪುಸ್ತಕವನ್ನೇ ಬರೆದರು. ಆ ಪುಸ್ತಕ ಬ್ರಿಟಿಷರನ್ನು ಯಾವ ಮಟ್ಟಿಗೆ ಭಯಭೀತಿಗೊಳಿಸಿತ್ತೆಂದರೆ ಕಂಪನಿ ಸರಕಾರ ಅದರ ಮಾರಾಟವನ್ನೇ ನಿಷೇಧ ಮಾಡಿತು. ಗಾಂಧಿ ಹತ್ಯೆ ಸಂದರ್ಭದಲ್ಲಿ ಸಾವರ್ಕರ್ ಮೇಲೆ ಹತ್ಯೆಯ ಆರೋಪ ಬಂದಾಗ ಅದಕ್ಕೆ ಯಾವುದೇ ಆಧಾರವಿಲ್ಲ ಎಂದು ಅಂದಿನ ಕಾನೂನು ಮಂತ್ರಿಯಾಗಿದ್ದ ಬಿ.ಆರ್.ಅಂಬೇಡ್ಕರ್ ಹೇಳಿದರೂ ಕೇಳದೆ ಸಾವರ್ಕರ್ ಅವರ ಮೇಲೆ ಸುಖಾಸುಮ್ಮನೇ ಆರೋಪ ಬರುವಂತೆ ನೋಡಿಕೊಂಡ ಅಂದಿನ ಪ್ರಧಾನಿ ನೆಹರೂ ಕೊನೆಗೂ ಹಠಕ್ಕೆ ಬಿದ್ದವರಂತೆ
ಅವರನ್ನು ಜೈಲಿಗಟ್ಟಿದರು. ಆದರೆ ನ್ಯಾಯಾಲಯ ಸಾವರ್ಕರ್ ಅವರನ್ನು ದೋಷ ಮುಕ್ತರೆಂದು ಘೋಷಿಸಿತು.

ಇದರಿಂದ ಕುಪಿತರಾದ ನೆಹರೂ ಸೇಡು ತೀರಿಸಿಕೊಳ್ಳಲು ೧೯೫೦ರಲ್ಲಿ ಲಿಯಾಖತ್ ಅಲಿಯ ಭಾರತ ಭೇಟಿಯ ಸಂದರ್ಭ ಮುಂದಿಟ್ಟುಕೊಂಡು ಅರವತ್ತೇಳು ವರ್ಷದ ವೃದ್ಧ, ಅನಾರೋಗ್ಯ ಪೀಡಿತ ಸಾವರ್ಕರ್ ಅವರನ್ನು ಬಂಧಿಸಿ ಅವರ ಮೇಲೆ ಅವಮಾನವೀಯವಾಗಿ ವರ್ತಿಸಿ, ಸೇಡು
ತೀರಿಸಿಕೊಂಡರು ನೆಹರೂ. ನಿಜವಾಗಿಯೂ ಸಾವರ್ಕರ್ ಅವರಿಗೆ ಬ್ರಿಟಿಷರು ಕೊಟ್ಟ ಕಿರುಕುಳಕ್ಕಿಂತ ಕಾಂಗ್ರೆಸಿಗರು ಕೊಟ್ಟ ಕಿರುಕುಳವೇ ಜಾಸ್ತಿಯಾಗಿತ್ತು!
ಗಾಂಧಿ ಹತ್ಯೆಯ ಆರೋಪದಲ್ಲಿ ಸಾವರ್ಕರ್ ದೋಷ ಮುಕ್ತನಾಗಿ ಹೊರಬಂದಾಗ ಆ ಸಮಯದಲ್ಲಿ ಏರ್ಪಡಿಸಿದ್ದ ಮೆರವಣಿಗೆಯ ಮೇಲೆ ಕೆಲ ಸೋಕಾಲ್ಡಗಳು ಕಲ್ಲು ತೂರಿ ಸಾವರ್ಕರ್‌ಗೆ ಅವಮಾನ ಮಾಡಿದ್ದನ್ನ ಯಾರಾದರೂ ಮರೆಯುವುದುಂಟೆ? ಇಂದು ರಾಜಕಾರಣಕ್ಕಾಗಿ ಸಾವರ್ಕರ್
ಅವರನ್ನು ಟೀಕಿಸುವವರಿದ್ದಾರೆ.

ಅವರೆಲ್ಲ ನೆನಪಿಡಬೇಕಾದ ಸಂಗತಿಯೆಂದರೆ, ಮಹಾತ್ಮ ಗಾಂಽಯವರೇ ಸಾವರ್ಕರ್ ಬುದ್ಧಿವಂತರು, ಧೈರ್ಯವಂತರು, ಶೌರ್ಯವಂತರು, ದೇಶಭಕ್ತರು ಎಂದು ಕರೆದು ಸಾವರ್ಕರ್ ಅವರ ರಾಷ್ಟ್ರಪ್ರೇಮವನ್ನು ಕೊಂಡಾಡಿದ್ದರು. ಜೊತೆಗೆ ಇಂಗ್ಲೆಂಡಿನಲ್ಲಿ ಆಯೋಜಿಸಿದ್ದ ವಿಜಯ ದಶಮಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಮಹಾತ್ಮ ಗಾಂಧಿಜೀಯವರು ಸಾವರ್ಕರ್ ಅವರ ಕಾರ್ಯ ಚಟುವಟಿಕೆಗಳನ್ನು ಕಂಡು, ‘ನನಗೆ ದೇಶಭಕ್ತ ಸಾವರ್ಕರ್ ಅವರ ಪಕ್ಕದಲ್ಲಿ ಕುಳಿತುಕೊಳ್ಳುವ ಸದಾವಕಾಶ ಸಿಕ್ಕಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ.

ಅವರ ಹೋರಾಟ, ತ್ಯಾಗ ಹಾಗೂ ದೇಶಭಕ್ತಿಯ ಅಮೃತ ಫಲ ನಮ್ಮ ದೇಶಕ್ಕೆ ಚಿರಕಾಲ ದೊರೆಯುವುದರಲ್ಲಿ ಸಂದೇಹವಿಲ್ಲ’ ಎಂದಿದ್ದರು. ಇನ್ನೂ
‘ಬ್ರಿಟಿಷ್ ಸರಕಾರಕ್ಕೆ ಸಾವರ್ಕರ್ ತೋರಿಸಿದ ದಿಟ್ಟ ಧಿಕ್ಕಾರವು ನಮ್ಮ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿತ್ತು’ ಎಂಬ ಅಭಿಮಾನದ ಮಾತನ್ನು ಸ್ವತಃ ಇಂದಿರಾ ಅವರೇ ಆ ದಿನಗಳಲ್ಲಿ ಹೇಳಿದ್ದರು. ಜತೆಗೆ ಇಂದಿರಾಗಾಂಧಿಯವರು ಸಾವರ್ಕರ್ ಅವರ
ದೇಶಪ್ರೇಮವನ್ನು ಪರಿಗಣಿಸಿ ತನ್ನ ಅಧಿಕಾರಾವಧಿಯಲ್ಲಿ ವೀರ ಸಾವರ್ಕರ್ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದ್ದಲ್ಲದೇ, ಸಾವರ್ಕರ್ ಟ್ರಸ್ಟ್‌ಗೆ ತನ್ನ ವೈಯುಕ್ತಿಕ ಖಾತೆಯಿಂದ ಹನ್ನೊಂದು ಸಾವಿರ ರುಪಾಯಿಗಳ ಕೊಡುಗೆಯನ್ನು ಕೊಟ್ಟಿದ್ದರು.

ಹೀಗೆ ಎಲ್ಲರಿಂದಲೂ ಪ್ರಶಂಸೆ, ಗೌರವಕ್ಕೆ ಒಳಗಾಗಿದ್ದ ಸಾವರ್ಕರ್ ತಮ್ಮ ಸಂಪೂರ್ಣ ಬದುಕನ್ನು ರಾಷ್ಟ್ರಕ್ಕಾಗಿ ಮುಡುಪಾಗಿಟ್ಟ ಮಹಾನಾಯಕ.
ಅಂದಹಾಗೆ ಇಂದು ಸಾವರ್ಕರ್ ಅವರ ೧೪೨ನೇ ಜನ್ಮದಿನ. ಈ ಸಂದರ್ಭದಲ್ಲಿ ಸಾವರ್ಕರ್ ಅವರನ್ನು ನಾವೆಲ್ಲರೂ ಗೌರವದಿಂದ ನೆನೆಯೋಣ.

(ಲೇಖಕರು: ಹವ್ಯಾಸಿ ಬರಗಾರರು)