Friday, 20th September 2024

ದಂಗೆ, ಪ್ರತಿಭಟನೆ, ಗುಂಪಿನ ಮನಸ್ಥಿತಿ ಮತ್ತಿತರ ವಿಚಾರಗಳು

ಶಿಶಿರಕಾಲ

ಶಿಶಿರ್‌ ಹೆಗಡೆ, ನ್ಯೂಜೆರ್ಸಿ

ಛೇ! ಇಂಥದ್ದೊಂದು ಘಟನೆ ನಡೆಯಲೇ ಬಾರದಿತ್ತು ಎಂದು ಕೇವಲ ಒಂದು ತಿಂಗಳಲ್ಲಿ ಇನ್ನೊಮ್ಮೆ ಅನ್ನಿಸಿದ್ದು ಮೂರು ದಿನ ಹಿಂದೆ. ದೆಹಲಿಯಲ್ಲಿ ನಡೆದ ದಂಗೆಯ ಚಿತ್ರಗಳನ್ನು ನೋಡಿದಾಗ. ಮೂರು ವಾರದ ಹಿಂದೆ ಟ್ರಂಪ್ ಗ್ಯಾಂಗ್ ಅಮೆರಿಕಾದ ಕ್ಯಾಪಿಟಲ್ ಬಿಲ್ಡಿಂಗ್‌ಗೆ ನುಗ್ಗಿ ಗಲಾಟೆ ನೋಡಿದಾಗಲೂ ಕೂಡ ಹೀಗೆಯೇ ಅನ್ನಿಸಿತ್ತು.

ಪರೇಡ್‌ನಲ್ಲಿ ವಿಜಯನಗರದ ವೈಭವವನ್ನು ಜಗತ್ತಿಗೇ ತೋರಿಸುವ ಅತಿ ಸುಂದರ ಟ್ಯಾಬ್ಲೋ, ಅದರಲ್ಲಿ ಕೃಷ್ಣದೇವರಾಯನಾಗಿ ಅಣ್ಣಾವ್ರು ಇವನ್ನೆಲ್ಲ ನೋಡಿದ ಕನ್ನಡಿಗ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಎದೆ ಉಬ್ಬಲೇಬೇಕು. ಇದು ನಮ್ಮ ದೇಶ – ಇದು ನಮ್ಮ ಸಂಸ್ಕೃತಿ ಎಂದು ಬೀಗಲೇ ಬೇಕು. ವಿಜಯನಗರ ಸಾಮ್ರಾಜ್ಯದ ಗತ ವೈಭವ ವನ್ನು ಓದಿ ತಿಳಿದವರಿಗೆ ರೋಮಾಂಚನ ಇನ್ನೊಂದಿಷ್ಟು ಜಾಸ್ತಿಯೇ ಆಗಿರುತ್ತದೆ. ಅದೆಲ್ಲದರ ಜತೆ ರಾಜ್ ಅಭಿಮಾನಿ ಯಾಗಿದ್ದರಂತೂ ಮುಗಿದೇ ಹೋಯಿತು – ರೋಮಾಂಚನ ಎನ್ನುವುದು ಕೂಡ ಪೂರ್ಣನ್ಯಾಯ ಒದಗಿಸದ ಶಬ್ದದಂತೆ ಭಾಸವಾಗುತ್ತದೆ.

ಏಳು ದಶಕದ ಹಿಂದಷ್ಟೇ ಸ್ವಾತಂತ್ರ್ಯ ಬಂದ ದೇಶ ನಮ್ಮದು. ಅಲ್ಲಿಂದ ಅದೆಷ್ಟೋ ತೊಂದರೆಗಳನ್ನು, ದುರಾಡಳಿತವನ್ನು ಎದುರಿಸಿ ಇಲ್ಲಿಯವರೆಗೂ ಬಂದಿದ್ದೇವೆ. ಇದು ಯಾವ ಅದ್ಭುತಕ್ಕೂ ಕಡಿಮೆಯಲ್ಲ. ನಮ್ಮ ಜತೆಯೇ ಸ್ವಾತಂತ್ರ್ಯ ಪಡೆದ ಪಾಕಿಸ್ತಾನ ಇಂದಿಗೂ ತೆವಳುತ್ತಲೇ ಇದೆ. ಅಲ್ಲಿ ಅದೆಷ್ಟೋ ಬಾರಿ ಪ್ರಜಾಪ್ರಭುತ್ವವೇ ಅಡಿಹೋಗಿದೆ. ಮುಷರ- ಸೈನ್ಯಾಧಿಕಾರಿ ದೇಶದ ಆಡಳಿತವನ್ನೇ ಕೈಗೆತ್ತಿಕೊಂಡದ್ದು, ಪ್ರಜಾಪ್ರಭುತ್ವವನ್ನು ಗಾಳಿಗೆ ತೂರಿದ್ದು, ಇವೆಲ್ಲ ನಡೆದು ಹೋಗಿದೆ.

ಹತ್ತೊಂಭತ್ತನೇ ಶತಮಾನದಲ್ಲಿ ನಮ್ಮ ಜತೆಯೇ ಸ್ವಾತಂತ್ಯ ಪಡೆದ ಉಳಿದ ದೇಶಗಳಿಗೆ ಪ್ರಜಾಪ್ರಭುತ್ವವನ್ನು ಅಳವಡಿಸಿ ಕೊಳ್ಳಲು ಅದೆಷ್ಟೋ ದಶಕಗಳು ಬೇಕಾಗಿವೆ. ಕೆಲವು ದೇಶಗಳು ನಮಗಿಂತ ಮೊದಲು ಸ್ವಾತಂತ್ರ್ಯ ಪಡೆದರೂ ಇನ್ನೂ ಒಂದು ಗಟ್ಟಿ
ಸಮಾಜವನ್ನು ಕಟ್ಟಿಕೊಳ್ಳಲು ಸಾಧ್ಯವಾಗದೇ ಹೆಣಗಾಡುತ್ತಿವೆ. ಆದರೆ ನಾವು ಹಾಗಲ್ಲ. ಲೆಕ್ಕ ಮೀರಿ ಬೆಳೆದ ಜನಸಂಖ್ಯೆ, ನೂರೆಂಟು ಭಾಷೆ, ಜಾತಿ, ಧರ್ಮ ಇವೆಲ್ಲ ಇದ್ದರೂ ಅದರ ಜತೆಯೇ ಬೆಳೆದು ನಿಂತವರು ನಾವು.

ನಮಗೆ ದೇಶಪ್ರೇಮವೇ ಶಕ್ತಿ. ಜಗತ್ತಿನಲ್ಲಿ ನಮಗಿರುವಷ್ಟು ದೇಶಪ್ರೇಮ ಇನ್ನೊಬ್ಬರಿಗಿಲ್ಲ. ಅಷ್ಟು ದೇಶವನ್ನು ಪ್ರೀತಿಸಿವುವರು ನಾವು. ಇಂದಿಗೂ ನಮ್ಮಲ್ಲಿನ ಒಗ್ಗಟ್ಟಿಗೆ ಬ್ರಿಟೀಷರನ್ನು ಓಡಿಸುವಾಗ ಹುಟ್ಟಿದ, ದೀರ್ಘ ಕಾಲ ಕಾಪಿಟ್ಟುಕೊಂಡು ಬಂದ ದೇಶಪ್ರೇಮವೇ ಕಾರಣ. ನಮ್ಮ ಸಮಾಜದಲ್ಲಿ ಈ ದೇಶಪ್ರೇಮ ಎನ್ನುವುದು ಆಗೀಗ ಹಲವು ರೀತಿಯಲ್ಲಿ ವ್ಯಕ್ತವಾಗುತ್ತಿರುತ್ತದೆ. ಇಂದಿಗೂ ನಮಗೆ ಸಾಂವಿಧಾನಿಕ ಕಟ್ಟಡಗಳ ಮೇಲೆ, ಧ್ವಜ – ರಾಷ್ಟ್ರ ಗೀತೆಯ ಮೇಲೆ ಕಾಟಾಚಾರಕ್ಕಲ್ಲ – ನಿಜವಾಗಿ ಪ್ರೀತಿಯಿದೆ, ಅಗಾಧವಾದ ಅಭಿಮಾನವಿದೆ.

ಅಮೆರಿಕಾ ಮತ್ತು ಅದೆಷ್ಟೋ ದೇಶಗಳಲ್ಲಿ ಆ ದೇಶದ ಧ್ವಜವನ್ನು ಹೋಲುವ ಡಿಸೈನ್‌ನ ಚಪ್ಪಲಿಗಳನ್ನು ಜನರು ಧರಿಸುತ್ತಾರೆ. ನಮಗೆ ಅದು ಸಾಧ್ಯವೇ ಇಲ್ಲ. ನಾವು ಆ ರೀತಿಯ ಉಡುಗೆ ಧರಿಸುವುದಿರಲಿ, ಅದನ್ನು ಅಮೆಜಾನ್ ಮೊದಲಾದ ಇ- ಅಂಗಡಿಗಳು ಮಾರಲು ಮುಂದಾದರೆ ಆ ಅಪ್ಲಿಕೇಶನ್ ಮೊಬೈಲ್‌ನಿಂದ ಡಿಲೀಟ್ ಮಾಡಿ ಪ್ರತಿಭಟಿಸು ತ್ತೇವೆ. ಚೀನಾ ಗಡಿಯಲ್ಲಿ ಗಲಾಟೆ ಮಾಡಿದರೆ ಚೈನೀಸ್ ವಸ್ತುಗಳನ್ನು ಬಳಸುವುದನ್ನೇ ಬಿಡಲು ಮುಂದಾಗುತ್ತೇವೆ.

ನಮಗೆ ಪಾಕಿಸ್ತಾನ ಎನ್ನುವ ದೇಶದ ಮೇಲಿನ ಸಿಟ್ಟು ಅವರ ವಿರುದ್ಧದ ಕ್ರಿಕೆಟ್ ಮ್ಯಾಚ್ ನೋಡುವಾಗಲೆಲ್ಲ ಜಾಗೃತವಾಗುತ್ತದೆ. ಆ ದೇಶ ಕುಚೇಷ್ಟೆ ಮಾಡಿದಾಗ ಉತ್ತರವಾಗಿ ನಮ್ಮ ಸೈನ್ಯ ದಾಳಿ ಮಾಡಿದರೆ – ಆ ಸುದ್ದಿ ನೋಡಲು ದೇಶಕ್ಕೆ ದೇಶವೇ ಟಿವಿ ಮುಂದೆ ಸ್ಥಾಪಿತ ವಾಗುತ್ತದೆ. ಅಭಿನಂದನ್ ವರ್ಧಮಾನ್ ದೇಶಕ್ಕೆ ಮರಳಿದರೆ ಗಲ್ಲಿ ಗಲ್ಲಿಯಲ್ಲಿ ಸಂಭ್ರಮಿಸುತ್ತೇವೆ.

ಸೋಷಿಯಲ್ ಮೀಡಿಯಾದಲ್ಲಿ ನಮ್ಮ ದೇಶವನ್ನು ಅವಹೇಳನ ಮಾಡುವ ಅದು ಯಾರೇ ಇರಲಿ – ಅವರನ್ನು ಹಿಗ್ಗಾ ಮುಗ್ಗಾ ಬಯ್ಯುತ್ತೇವೆ. ಭಾರತ್ ತೇರೇ ಟುಕ್ದೇ ಹೊಂಗೆ, ‘I hate India’ ಎನ್ನುವ ಅಡ್ಡನಾಡಿಗಳನ್ನು ಬೆಂಬಲಿಸುವ ಪಕ್ಷವನ್ನು ತಿರಸ್ಕರಿಸಿ ಹೆಸರಿಲ್ಲದಂತೆ ಮಾಡಿಬಿಡುತ್ತೇವೆ. ಇವೆಲ್ಲವೂ ನಮ್ಮಲ್ಲಿನ ಉತ್ಕಟ ದೇಶಪ್ರೇಮದ ಮುಂದುವರಿದ ಭಾಗವೇ. ಇಂದಿಗೂ ನಮಗೆ
ದೇಶವೇ ಮೊದಲು, ಆಮೇಲೆ ಉಳಿದದ್ದು.

ರೈತರೆಂದರೆ ಶೋಷಿತರು; ದಳಿಗಳಿಂದ, ಮಧ್ಯವರ್ತಿ ಗಳಿಂದ ಹಿಡಿದು ಎಲ್ಲರೂ ಅನ್ನದಾತನನ್ನು ಸುಲಿಗೆ ಮಾಡುವವರೇ ಎನ್ನುವುದು ಸಹಜ ಭಾವನೆ. ಹಲವು ಕಾರಣಗಳಿಂದ ರೈತರೆಡೆಗೆ ಇಡೀ ಸಮಾಜಕ್ಕೊಂದು ಸಾಫ್ಟ್ ಕಾರ್ನರ್ ಯಾವತ್ತೂ ಇದ್ದೇ ಇದೆ. ಆದರೆ ಈ ಪ್ರೀತಿ ಒಂದು ಘಟನೆಯಿಂದ ಬದಲಾಗಿಹೋಗುವಂಥ ಸ್ಥಿತಿ ನಿರ್ಮಾಣ ವಾಯಿತೇ? ಕಿಸಾನ್ ಎನ್ನುವ ಒಂದು ಶಬ್ದ ಈ ಎಲ್ಲ ಘಟನೆಯ ಜತೆ ಥಳಕು ಹಾಕಿಕೊಂಡು ದಂಗೆಯ ವರದಿಯ ವಾಕ್ಯದಲ್ಲ ಬಳಕೆಯಾಯಿತಲ್ಲ !

ಅದು ಎಲ್ಲಿಲ್ಲದ ಬೇಸರಕ್ಕೆ ಎರಡನೆಯ ಕಾರಣ. ಒಂದಿಂದು ರೀತಿಯಲ್ಲಿ ಎಲ್ಲ ಭಾರತೀಯರೂ ರೈತ ಮೂಲದವರೇ. ಅದೇ ಕಾರಣಕ್ಕೆ ಈ ಎಲ್ಲ ದಾಂಧಲೆ ಮಾಡಿದವರು ರೈತರೇ ಅಲ್ಲ – ಇವರೆಲ್ಲ ಸಮಾಜ ಘಾತಕರು ಎಂದು ಒತ್ತಿ ಒತ್ತಿ – ಕೂಗಿ
ಹೇಳಬೇಕೆನ್ನಿಸುತ್ತದೆ. ಅವರನ್ನು ರೈತರೆಂದು ಗುರುತಿಸಿ ಮಾತನಾಡುವುದನ್ನು ಒಪ್ಪಲು ಮನಸ್ಸು ಸುತರಾಂ ಒಪ್ಪುವುದೇ ಇಲ್ಲ. ಈ ಕೆಂಪುಕೋಟೆ ಸುತ್ತ ಗಲಾಟೆ ಮಾಡಿದವರು ಇಡೀ ದೇಶದ ಕಿಸಾನ್ ವರ್ಗದ ಪ್ರತೀಕವಲ್ಲ ಎಂದು ಮನಸ್ಸು disassociate ಮಾಡಲು ಹವಣಿಸುತ್ತದೆ.

ರೈತರ ಹೆಸರಿನಲ್ಲಿ ಮಾಡಿದ ಈ ದುರ್ವರ್ತನೆ ದೇಶಪ್ರೇಮದ ಜತೆ ಹಲವು ಭಾವನೆಗಳಿಗೆ ಪೆಟ್ಟು ಕೊಟ್ಟುಬಿಟ್ಟಿದೆ. ಸಮಾಜ ಕೆಲವೊಂದು ದಂಗೆಯನ್ನು – ಪ್ರತಿಭಟನೆಯನ್ನು ಒಪ್ಪಿಕೊಳ್ಳುತ್ತದೆ. ಅದು ಅವಶ್ಯವಿತ್ತು ಎಂದೇ ಅನಿಸುತ್ತದೆ. ಸಾಕಾರಣವಿದ್ದರೆ ದೇಶವೇ ಅಲ್ಲ, ಜಗತ್ತೇ ಒಂದು ದಂಗೆಯನ್ನು ಒಪ್ಪುತ್ತದೆ ಎನ್ನುವುದಕ್ಕೆ ಅಮೆರಿಕಾದಲ್ಲಿ ಹಿಂದಿನ ವರ್ಷ ನಡೆದ ಕಪ್ಪು ವರ್ಣೀಯರ ದಂಗೆ, ರಷ್ಯಾದಲ್ಲಿ ಈಗ ನಡೆಯುತ್ತಿರುವ ಪ್ರತಿಭಟನೆ, ಹಾಂಗ್ ಕಾಂಗ್‌ನಲ್ಲಿ ವರ್ಷದಿಂದ ನಡೆಯುತ್ತಿರುವ ಪ್ರತಿಭಟನೆ ಇವೆಲ್ಲ ಉತ್ತಮ ಉದಾಹರಣೆಗಳು.

ನಿರ್ಭಯಾ ಘಟನೆಯಾದಾಗ ದೆಹಲಿಯಲ್ಲಿ ಗಲಾಟೆ ಯಾಗಿತ್ತಲ್ಲ – ಇಡೀ ದೇಶ ಆ ಕ್ಷಣದಲ್ಲಿ ಅಲ್ಲಿ ಹುಟ್ಟಿಕೊಂಡ ಭಾವನೆ ಯೊಂದಿಗೆ ತನ್ನನ್ನು ಜೋಡಿಸಿ ಕೊಂಡಿತ್ತು. ಇದಾದ ನಂತರ ಮತ್ತು ಇದಕ್ಕೂ ಮೊದಲು ದೆಹಲಿಯಲ್ಲಿ ಅದೆಷ್ಟೋ ದಂಗೆ ಗಳಾಗಿವೆ – ಆದರೆ ಈಗ ನಡೆದ ದಂಗೆ ಮಾತ್ರ ಯಾವುದೇ ಕಾರಣಕ್ಕೆ ದೇಶ ಮೆಚ್ಚಲಿಲ್ಲ. ದಂಗೆಯೊಂದು ದೇಶಪ್ರೇಮ, ಸಾಮಾಜಿಕ ಕಳಕಳಿ, ಸಂಸ್ಕೃತಿ ಉಳಿವಿಗೆ, ದಬ್ಬಾಳಿಕೆಯ – ಪ್ರಜಾಪ್ರಭುತ್ವವೆನ್ನುವ ವಿಚಾರಕ್ಕೆ ಧಕ್ಕೆ ಬರುವ ಬೆಳವಣಿಗೆಯ ವಿರುದ್ಧ – ಹೀಗೆ ಒಂದು ಸಾಕಾರಣವಿದ್ದರೆ, ಅನ್ಯಾಯದ ವಿರುದ್ಧ ಎತ್ತಿದ ದನಿಯಾಗಿದ್ದರೆ ಸಾಮಾಜ ಒಪ್ಪುತ್ತದೆ.

ಅಂತಹ ಸಂದರ್ಭ ದಲ್ಲಿ ಆಗಬಾರದ್ದು ನಡೆದುಹೋದರೂ ಬದಲಾವಣೆಗೆ ಇದೆಲ್ಲ ಎಲ್ಲಾ ಒಂದು ಕಡೆ ಅವಶ್ಯಕತೆಯಿತ್ತು ಎಂದು ಅನಿಸಿಬಿಡುತ್ತದೆ. ಆದರೆ ದಂಗೆಯೊಂದು ನಡೆಯಲು ರಾಜಕೀಯ ಅಥವಾ ದೇಶದ್ರೋಹಿಗಳ ಗುಂಪೊಂದು ಕುಮ್ಮಕ್ಕು ನೀಡಿದೆ ಎಂದರೆ ಅದನ್ನು ಸಹಿಸಲು ಸಾಧ್ಯವಾಗುವುದಿಲ್ಲ.

ಇನ್ನು ಕೆಲವೊಮ್ಮೆ ದಂಗೆಗಳಿಗೆ ಕುಮ್ಮಕ್ಕು ಮತ್ತು ಕಾರಣ ಎರಡೂ ಇರುವುದಿಲ್ಲ. ಡಾಕ್ಟರ್ ರಾಜ್ ತೀರಿಕೊಂಡಾಗ
ಬೆಂಗಳೂರಿನಲ್ಲಿ ಗಲಾಟೆಯಾಯಿತು ನೋಡಿ – ಅದು ಅಂತಹ ಘಟನೆಗೆ ಒಂದು ಉದಾಹರಣೆ. ಆ ದಿನ ರಾಜಕುಮಾರ್ ನಂಬಿ ನಡೆದ ಆದರ್ಶಕ್ಕೆ ವ್ಯತಿರಿಕ್ತವಾಗಿ ಒಂದು ಚಿಕ್ಕ ವರ್ಗ ನಡೆದುಕೊಂಡುಬಿಟ್ಟಿತ್ತು. ಅಲ್ಲಿ ಅಸಲಿಗೆ ಕಾರಣವೇ ಅಲ್ಲಿರಲಿಲ್ಲ. ರಾಜ್ ನಿಧನದ ಬೇಸರವೆನ್ನುವುದು ಅಲ್ಲಿ ಒಂದು ನೆಪ ಅಷ್ಟೇ. ಇದನ್ನು ನೋಡಿದ ಉಳಿದ ಅಭಿಮಾನಿಗಳಿಗೆ ರಾಜ್ ಸಿನಿಮಾ ನೋಡಿ ಕಲಿತ ಆದರ್ಶಗಳೆಲ್ಲ ಆ ದಿನ ಬುಡಮೇಲಾದ ಅನುಭವವಾಗಿತ್ತು.

ಮಕ್ಕಳೇ ದೇವರು ಎನ್ನುತ್ತಿದ್ದರು ರಾಜ್. ಪರೀಕ್ಷೆ ಬರೆಯುತ್ತಿದ್ದ ಮಕ್ಕಳ ಮೇಲೆಯೇ ಅಟ್ಯಾಕ್ ಮಾಡಲಾಯಿತು. ಗೌರವಯುತ ಪೊಲೀಸ್ ಪಾತ್ರಗಳಲ್ಲಿ ರಾಜ್ ಅನ್ನು ನೋಡಿ ಶಿಳ್ಳೆ ಹೊಡೆದಿದ್ದ ಅಭಿಮಾನಿಗಳು ಆ ದಿನ ಪೊಲೀಸ್ ವಾಹನವನ್ನೇ ಸುಟ್ಟುಹಾಕಿದ್ದರು – ಅರಕ್ಷಕರನ್ನೇ ಥಳಿಸಿದ್ದರು. ರಾಜ್ ಪಾರ್ಥಿವ ಶರೀರವಿದ್ದ ವಾಹನಕ್ಕೇ ಕಲ್ಲು ಬಿದ್ದಿತ್ತು. ರಾಜ್ ಅಂತಿಮ ಯಾತ್ರೆಯನ್ನು ಬೆಂಗಳೂರಲ್ಲಿರದ ಅಭಿಮಾನಿಗಳು ಟಿವಿಯಲ್ಲಿ ನೋಡಿ ಬಿಕ್ಕಳಿಸುತ್ತಿದ್ದರು. ಆ ಸಾಧ್ಯತೆಗೆ ಕಾರಣವಾದ ಮೀಡಿಯಾದ ವಾಹನಗಳನ್ನು ಝಕಂ ಗೊಳಿಸಲಾಯಿತು.

ಹಾಗಂತ ರಾಜ್ ಅಭಿಮಾನಿ ಗಳೆಲ್ಲ ಹಾಗಲ್ಲ – ಅದು ನಮಗೆಲ್ಲ ಗೊತ್ತು. ಆ ದಿನ ಈ ರೀತಿ ಅತಿ ನಡವಳಿಕೆ ಕೆಲವೇ ಕೆಲವರದ್ದು. ಆದರೆ ಹೊರ ರಾಜ್ಯಕ್ಕೆಲ್ಲ ಇಡೀ ರಾಜ್ ಅಭಿಮಾನಿಗಳೇ ಹೀಗೆ ಎನ್ನುವ ಸಂದೇಶ ಸುಪ್ತವಾಗಿ ಅಂದು ಹೋಗಿ ಮುಟ್ಟಿತ್ತು. ಆಗ ಕೂಡ ರಾಜ್ ಅಭಿಮಾನಿಯಾದ ನಾವು ಈ ಘಟನೆಯಿಂದ ತಮ್ಮನ್ನು disassoiate ಮಾಡಿಕೊಳ್ಳಲು ಪ್ರಯತ್ನಿಸಿದೆವು.

ಇವರ‍್ಯಾರೂ ರಾಜ್  ಅಭಿಮಾನಿಗಳೇ ಅಲ್ಲ ಎನ್ನುವ ಮಾತುಗಳು ಕೇಳಿಬಂದವು. ಇದೇಕೆ ಹೀಗೆ ! ಅದೇಕೆ ಈ ರೀತಿಯ ಘಟನೆ ಗಳಾಗುತ್ತವೆ? ಸಾಮಾಜಿಕ ಕಳಕಳಿ, ದೇಶಪ್ರೇಮ ಇವೆಲ್ಲ ಒಬ್ಬರೇ ಇರುವಾಗ ಜಾಗ್ರತಾವಸ್ಥೆಯಲ್ಲಿರುವ ಭಾವಗಳು ಗುಂಪಿನಲ್ಲಿ ಇದ್ದಾಗ ಎಕ್ಸ್ಟ್ರೀಮ್ ವೈರುಧ್ಯಕ್ಕೆ ತಲುಪುವುದಾದರೂ ಹೇಗೆ ಮತ್ತು ಏಕೆ? ವ್ಯಕ್ತಿ ಗುಂಪಿನಲ್ಲಿದ್ದಾಗ, ಅದರಲ್ಲೂ ಆ ಗುಂಪು ವೈಯಕ್ತಿಕವಾಗಿ ಒಬ್ಬನನ್ನು ಗುರುತಿಸಲು ಸಾಧ್ಯವಾಗದಷ್ಟು ದೊಡ್ಡದಿದ್ದಾಗ ಅಲ್ಲಿ ಆ ವ್ಯಕ್ತಿಗೆ ಒಂದು ಅನಾಮಿಕತೆ ಲಭ್ಯ ವಾಗುತ್ತದೆ.

ಅಲ್ಲಿ ಗುಂಪು ವ್ಯಕ್ತಿಯ ಐಡೆಂಟಿಟಿಯನ್ನು ಮರೆಮಾಚುವ ವಾತಾವರಣವನ್ನು ನಿರ್ಮಿಸಿರುತ್ತದೆ. ಈ ಸಾಧ್ಯತೆಯೇ ಆತನಲ್ಲಿ ಕಾನೂನನ್ನು ಮೀರುವ ಧೈರ್ಯ ವನ್ನು ಹುಟ್ಟಿ ಹಾಕುತ್ತದೆ. ವ್ಯಕ್ತಿಯ ತನ್ನದೇ ಆದರ್ಶವನ್ನು ಒಂದು ಕ್ಷಣ ಮರೆಸಿಬಿಡುತ್ತದೆ. ಇಂತಹ ಸ್ಥಿತಿಯಲ್ಲಿ ಲಭ್ಯ ವಾಗುವ ಸ್ವಾತಂತ್ರ್ಯ ಸುಪ್ತವಾಗಿರುವ ಅತಿನಡವಳಿಕೆಗೆ ಪ್ರಚೋದನೆ ಕೂಡ ಅದೇ ಸಮಯದಲ್ಲಿ ನೀಡುತ್ತದೆ. ಗುಂಪಿನಲ್ಲಿ ಮೊದಲನೆಯವನು ಕಲ್ಲು ಕೈಗೆತ್ತಿಕೊಳ್ಳುವುದೇ ಇಂತಹ ಸಂದರ್ಭದಲ್ಲಿ. ಇಂತಹ ಒಂದು ಘಟನೆ ಗುಂಪಿನಲ್ಲಿದ್ದಾಗ ನಡೆದಲ್ಲಿ, ಆ ಅನಾಮಿಕತೆಯ ಅರಿವನ್ನು ಉಳಿದವ ರಲ್ಲಿಯೂ ಹುಟ್ಟಿಹಾಕುತ್ತದೆ.

ವ್ಯಕ್ತಿ ಗುಂಪಿನಲ್ಲಿದ್ದಾಗ ಮತ್ತು ಈ ಅನಾಮಿಕತೆ ಸಾಧ್ಯವಾಗದಿದ್ದಲ್ಲಿ ಆತ ದುರ್ನಡತೆ ಪ್ರದರ್ಶಿಸುವುದೇ ಇಲ್ಲ. ಮದುವೆ ಸಮಾರಂಭಗಳಲ್ಲಿ ಅದೆಷ್ಟೇ ಸಾವಿರ ಮಂದಿ ಸೇರಿದ್ದರೂ ಇಂತಹ ನಡವಳಿಕೆಗಳು ವ್ಯಕ್ತವಾಗದಿರುವುದಕ್ಕೆ ಇದೇ ಕಾರಣ. ಏಕೆಂದರೆ ಅಲ್ಲಿ ಒಬ್ಬರ ಪರಿಚಯ ಇನ್ನುಳಿದ ಹಲವರಿಗಿರುತ್ತದೆ. ಇನ್ನೊಂದು ಕಾರಣ ಮನುಷ್ಯನ ಸಾಂಕ್ರಾಮಿಕ ನಡವಳಿಕೆ.
ಒಂದೇ ರಸ್ತೆಯ ಎದುರು ಬದರು ಅದೇ ತಿಂಡಿ ಮಾಡಿ ಮಾರುವ ಎರಡು ಅಂಗಡಿಗಳು ಒಂದೇ ದಿನ ತೆರೆದಿವೆ ಎಂದಿಟ್ಟುಕೊಳ್ಳಿ.

ಮೊದಲ ದಿನ ಬರುವ ಮೊದಲ ಗ್ರಾಹಕ ಎರಡರಲ್ಲಿ ಒಂದು ಅಂಗಡಿಯ ಸ್ವಚ್ಛತೆ, ಬಣ್ಣ ಅಥವಾ ಆತನದೇ ಕಾರಣದಿಂದ, ವಿವೇಚನೆಯಿಂದ ಆಯ್ಕೆ ಮಾಡಿಕೊಳ್ಳುತ್ತಾನೆ. ಅದಾದ ನಂತರ ಎರಡನೇ ಬರುವ ಗ್ರಾಹಕ ಎರಡು ಅಂಗಡಿಯನ್ನು ದೂರದಿಂದ ನೋಡುತ್ತಾನೆ; ಒಂದರಲ್ಲಿ ಒಬ್ಬ ಗ್ರಾಹಕ ಮತ್ತು ಇನ್ನೊಂದರಲ್ಲಿ ಯಾರೂ ಇಲ್ಲ. ಆಗ ಆತನ ಎದುರು ಆಯ್ಕೆ ಇದ್ದರೂ ಮೊದಲು ಬಂದವನು ಯಾವುದೋ ಕಾರಣಕ್ಕೆ ಇದನ್ನು ಆಯ್ಕೆ ಮಾಡಿಕೊಂಡಿರಬೇಕು ಎಂದು ಆತ ಕೂಡ ಅದೇ ಅಂಗಡಿಗೆ
ಹೋಗುತ್ತಾನೆ. ಅಲ್ಲಿಂದ ಮುಂದೆ ನೀವೇ ಊಹಿಸಿದಂತೆ ಒಂದು ಅಂಗಡಿಗೆ ಜನರು ತುಂಬಿಕೊಳ್ಳುತ್ತಾರೆ – ಇನ್ನೊಂದರಲ್ಲಿ ಕೆಲವೇ ಗ್ರಾಹಕರು.

ಈ ಇಡೀ ಉದಾಹರಣೆಯಲ್ಲಿ ಮೊದಲು ಅಂಗಡಿಗೆ ಹೊಕ್ಕವರಲ್ಲಿ ಬಹುತೇಕರು ಇನ್ನೊಬ್ಬರಿಂದ, ಸೇರಿದ ಜನರಿಂದ ಪ್ರಭಾವಿತ ರಾದವರು. ಅವರಲ್ಲಿ ಬಹುತೇಕರು ತರ್ಕಬದ್ಧ ವಿಚಾರ ಮಾಡಿ ಆಯ್ಕೆ ಮಾಡಿಕೊಂಡವರಲ್ಲ. ಇಷ್ಟೊಂದು ಮಂದಿ ಸರಿ
ಇರಬೇಕಾದರೆ ಅದೇ ಸರಿ ಇರಬೇಕು, ಅದೇ ಉತ್ತಮ ಆಯ್ಕೆಯಿರಬೇಕು ಎಂದು ನಂಬಿ ಆಯ್ಕೆ ಮಾಡಿಕೊಂಡವರೇಹೆಚ್ಚಿನವರು. ಕುರಿಗಳು ಸಾರ್ ಕುರಿಗಳು ಎನ್ನುವ ಇಂತಹ ಅದೆಷ್ಟೋ ಉದಾಹರಣೆಗಳು ಸಾಮಾನ್ಯ. ಈ ರೀತಿ ಆಯ್ಕೆ ಮಾಡಿಕೊಂಡಾಗ ಆಯ್ಕೆ ಸರಿಯೋ ತಪ್ಪೋ ವಿಚಾರವೇ ಅಲ್ಲಿ ನಡೆದಿರುವುದಿಲ್ಲ.

ನಮಗೆ ನಾವೇ – ಇದೇ ಸರಿ ಎಂದು ಕನ್ವಿನ್ಸ್ ಮಾಡಿಕೊಂಡುಬಿಡುತ್ತೇವೆ. ಇದೇ ನಡವಳಿಕೆಯ ಇನ್ನೊಂದು ರೂಪ ದಂಗೆಯಲ್ಲೂ ಕಾಣಸಿಗುತ್ತದೆ. ಒಬ್ಬ ಕಲ್ಲು ಹೊಡೆದರೆ, ಇನ್ನೊಬ್ಬ ಬೆಂಕಿ ಹಚ್ಚಿದರೆ, ಮತ್ತೊಬ್ಬ ಘೋಷಣೆ ಕೂಗಿದರೆ ತಾನೂ ಏನೋ ಒಂದು ಅತಿ ವ್ಯವಹಾರ ಮಾಡಿದರಷ್ಟೇ ಈ ಗುಂಪಿನಲ್ಲಿ ಸಲ್ಲುತ್ತೇನೆ ಎಂದೇ ವ್ಯಕ್ತಿ ಭಾವಿಸತೊಡಗುತ್ತಾನೆ. ಇನ್ನೊಬ್ಬನನ್ನು ವಿವೇಚಿಸದೇ
ಅನುಸರಿಸಲು ಶುರುಮಾಡಿಬಿಡುತ್ತಾನೆ.

ಇದೇ ಸಾಂಕ್ರಾಮಿಕ ವಾಗಿ ಹಬ್ಬಿ ಇಡೀ ಗುಂಪು ದಾಂಧಲೆಗೆ ಇಳಿದುಬಿಡುತ್ತದೆ. ಇಲ್ಲಿ ಎಲ್ಲರ ಉದ್ದೇಶವೂ ಹಾನಿ ಮಾಡಬೇಕೆಂದೇ
ಮೂಲದಲ್ಲಿ ಇಲ್ಲದಿದ್ದರೂ ಗುಂಪಿನಲ್ಲಿ ಗೋವಿಂದ ಎನ್ನುತ್ತೇವೆಯಲ್ಲ ಹಾಗಾಗುತ್ತದೆ. ಈ ರೀತಿ ಅತಿ ವ್ಯವಹಾರ ಇನ್ನೊಂದು ಹಂತ ಮುಂದಕ್ಕೆ ಹೋಗಿ ಅಂದು ಸ್ಪರ್ಧೆಯ ಸ್ಥಿತಿ ಕೂಡ ನಂತರದಲ್ಲಿ ನಿರ್ಮಾಣವಾಗುತ್ತದೆ. ಒಬ್ಬ ಟೈರ್ ಸುಡುತ್ತಾನೆ, ಇನ್ನೊಬ್ಬ ಕಾರು ಸುಟ್ಟರೆ ಮಗದೊಬ್ಬ ಬಸ್ ಸುಡಲು ಮುಂದಾಗು ತ್ತಾನೆ, ಮತ್ತೊಬ್ಬ ರೈಲಿಗೇ ಬೆಂಕಿ ಇಡುತ್ತಾನೆ. ಇದೆಲ್ಲ ಗುಂಪಿನಲ್ಲಿ ಸುಪೀರಿಯರ್ ಎಂದು ತೋರ್ಪಡಿಸಲು, ತಾನು ಇನ್ನೊಬ್ಬರಿಗಿಂತ ಉತ್ತಮ ಎಂದು ತೋರಿಸಲು ಮುಂದಾಗಿ ಮಾಡುವ ಭಾನಗಡಿ. ಇದನ್ನೇ mob chain act ಎನ್ನುವುದು.

ಈ ರೀತಿ ಗುಂಪಿನಲ್ಲಿದ್ದಾಗ ಒಬ್ಬರಂತೆ ಇನ್ನೊಬ್ಬರು ಅತಾರ್ಕಿಕವಾಗಿ ವರ್ತಿಸುವುದು ಜೀವ ವಿಕಸನದಲ್ಲಿ ನಾವು ಉಳಿಸಿಕೊಂಡು ಬಂದ ಇನ್ಸ್ಟಿಂಕ್ಟ್‌ಗಳಲ್ಲಿ ಒಂದು. ಇದು ಮೂಲದಲ್ಲಿ ಪ್ರಾಣಿ ಜೀವನದ ಅತೀ ಅವಶ್ಯಕ ಗುಣಗಳಲ್ಲಿ ಒಂದು. ಹುಲಿಯೊಂದು ಗುಂಪಿನಲ್ಲಿನ ಕೊನೆಯ ಜಿಂಕೆಯ ಮೇಲೆ ದಾಳಿ ಮಾಡಿದಾಗ, ಒಂದು ಜಿಂಕೆ ನೆಗೆದು ಓದಿದರೆ ಉಳಿದ ಜಿಂಕೆಗಳು ಏನು ಎತ್ತ ಎಂದು ಯೋಚಿಸದೇ ಓಡಲು ಶುರುಮಾಡುವುದು ಇದೇ ಇನ್ಸ್ಟಿಂಕ್ಟ್‌ನಿಂದ. ಜಿಂಕೆಯ ಅತಾರ್ಕಿಕ ನಡವಳಿಕೆಯೇ ಅಲ್ಲಿ ಜೀವ ರಕ್ಷಕ. ಬಹುತೇಕ ಪ್ರಾಣಿಗಳು ಗುಂಪಿನಲ್ಲಿ ಈ ರೀತಿ ಗುಣವರ್ತನೆ ಮಾಡುವುದರಿಂದಲೇ ಅವು ಇಂದಿಗೂ ಉಳಿದುಕೊಳ್ಳಲು ಸಾಧ್ಯವಾಗಿವೆ.

ಎಲ್ಲ ಪ್ರಾಣಿಗಳಲ್ಲೂ ಇದು ಇದ್ದೇ ಇದೆ. ಮನುಷ್ಯನಲ್ಲಿ ಕೂಡ ಇದು ಉಳಿದುಬಿಟ್ಟಿದೆ. ಅದರ ಪ್ರದರ್ಶನವಾಗವುದು ಗುಂಪಿನಲ್ಲಿದ್ದಾಗ. ಈ ಸಾಮಾಜಿಕ ನಡವಳಿಕೆ ನಮ್ಮ ಡಿಎನ್‌ಎಯ ಇರುವಾಗ ಅದು ಮುನ್ನೆಲೆಗೆ ಬರಲು ಹೆಚ್ಚಿನ ಯಾವುದೇ ಪ್ರಚೋದನೆಯ ಅವಶ್ಯಕತೆಯೇ ಇರುವುದಿಲ್ಲ. ಕಾಲ್ತುಳಿತ, ಗುಂಪು ಘರ್ಷಣೆ ಇವೆಲ್ಲ ಆಗುವುದಕ್ಕೂ ಇದೇ ಇನ್ಸ್ಟಿಂಕ್ಟ್ ಕಾರಣ. ಪಾರ್ಟಿಗಳಲ್ಲಿ ಉಳಿದವರು ಕುಣಿಯಲು ಶುರುಮಾಡುವುದು, ಚಪ್ಪಾಳೆ ತಟ್ಟುವುದು ಹೀಗೆ. ಈ ಎಲ್ಲ ಹಿನ್ನೆಲೆಯಲ್ಲಿ ಒಂದು ದಂಗೆ – ಪ್ರತಿಭಟನೆಯ ಘಟನೆಯನ್ನು ನೋಡಬೇಕಾಗುತ್ತದೆ.

ದೆಹಲಿಯ ಘಟನೆಯಲ್ಲಿ ಹೃದಯಕ್ಕೆ ಚುಚ್ಚಿದ ಒಂದು ಸೀನ್ ಎಂದರೆ ಧ್ವಜ ಸ್ತಂಭ ಹತ್ತಿದ ವ್ಯಕ್ತಿ – ಆತನ ಕೈಗೆ ಕೊಟ್ಟ ದೇಶದ ಧ್ವಜವನ್ನು ಪಕ್ಕಕ್ಕೆಸೆದು ಇನ್ನೊಂದು ಧ್ವಜವನ್ನು ಕೈಗೆ ತೆಗೆದುಕೊಳ್ಳುವ ದೃಶ್ಯ. ಎಲ್ಲ ಮೀಡಿಯಾದಲ್ಲಿ ಇದು ಹೈಲೈಟ್ ಆದ ವಿಡಿಯೋ. ಆದರೆ ಈ ಘಟನೆಯಲ್ಲಿ, ಆ ಒಬ್ಬ ವ್ಯಕ್ತಿಯನ್ನು ಮಾತ್ರ ಮಹಾ ಅಪರಾಧಿ ಎಂದರೆ ಅದು ಸಂಪೂರ್ಣ ವೆನಿಸುವುದಿಲ್ಲ.

ಆತ ಮಾಡಿದ್ದು ಮಹಾ  ಹಲ್ಕಾ ಕೆಲಸ ಎನ್ನುವುದರಲ್ಲಿ ದೂಸರಾ ಮಾತೇ ಬೇಡ. ಆದರೆ ಈ ಇಡೀ ಘಟನೆ ನಡೆದ ಹಿನ್ನೆಲೆ, ಅದಕ್ಕೆ ಕುಮ್ಮಕ್ಕು ನೀಡಿದವರು, ಹಣ ಕೊಟ್ಟವರು, ಮಾಡಿಸಿದವರು ಇವರೆಲ್ಲ ಆತನಿಗಿಂತ ಹೆಚ್ಚಿನ ಪ್ರಮಾಣದ ಅಪರಾಧಿಗಳು.
ದಂಗೆ ಯಾದಾಗ ಅದಕ್ಕೆ ಪ್ರಚೋದನೆ ಕೊಟ್ಟವರೇ ಹೆಚ್ಚಿನ ಶಿಕ್ಷೆಗೆ ಅರ್ಹರು. ಅವರೆಲ್ಲರನ್ನು ಶಿಕ್ಷಿಸದಿದ್ದಲ್ಲಿ, ಕೇವಲ ದುರ್ವರ್ತನೆ ಮಾಡಿದ ನಾಲ್ಕು ಮಂದಿಯನ್ನು ಶಿಕ್ಷಿಸಿದಲ್ಲಿ ನ್ಯಾಯ ಅಪೂರ್ಣ. ಮುಂದಿನ ದಿನಗಳಲ್ಲಿ ಈ ಘಟನೆಯ ಹಿಂದಿರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯಕ್ತಿ, ಸಂಘಟನೆ, ಪಕ್ಷಗಳ ಕೈವಾಡ ಮುಂದೆ ಬರಬಹುದು – ಬರಬೇಕು.

ಕೊನೆಯಲ್ಲಿ: ಮನುಷ್ಯನ ಗುಂಪಿನ ನಡವಳಿಕೆ ಯಾವತ್ತೂ ಕೆಟ್ಟದ್ದು ಎಂದು ಹೇಳುತ್ತಿಲ್ಲ – ಹೇಳುವಂತೆಯೂ ಇಲ್ಲ. ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ದೇಶ – ರಾಜ್ಯ ಉಳಿಸಿಕೊಳ್ಳಲು ನಡೆದ ಎಲ್ಲ ಇತಿಹಾಸದ ಯುದ್ಧ – ಹೋರಾಟಗಳಲ್ಲಿ ಇದೇ ಇನ್ಸ್ಟಿಂಕ್ಟ್ ಕೆಲಸ ಮಾಡಿದ್ದು. ವಿಕಸನದ ಹಾದಿಯಲ್ಲಿ ಮನುಷ್ಯ ಇದನ್ನು ಕಳೆದುಕೊಂಡು ಬಿಟ್ಟಿದ್ದರೆ ಇಂದು ಇಷ್ಟು ಮುಂದುವರಿಯು
ತ್ತಲೇ ಇರಲಿಲ್ಲ.

ಒಳ್ಳೆಯ ಕೆಲಸ ಮಾಡುವಲ್ಲಿ ಸಮಾಜವನ್ನು ಪ್ರೇರೇಪಿಸುವುದು ಕೂಡ ಇದೇ ಇನ್ಸ್ಟಿಂಕ್ಟ್. ಆದರೆ ಹಲವು ಸಂದರ್ಭ ಗಳಲ್ಲಿ, ಗುಂಪಿನಲ್ಲಿದ್ದಾಗ, ಬೇಕಾಬಿಟ್ಟಿ ಸಾಧ್ಯತೆ ನಮ್ಮೆದುರಿಗಿದ್ದಾಗ ಸ್ಥಿತಪ್ರಜ್ಞನಾದವನು ಈ ಎಲ್ಲ ಇನ್ಸ್ಟಿಂಕ್ಟ್ ಗಳನ್ನು ತಡೆದು ನಿಲ್ಲಿಸಿ ಪ್ರಶ್ನಿಸಿಕೊಳ್ಳಬೇಕು – ಮಹಾಭಾರತ ಯುದ್ಧದ ಮಧ್ಯದಲ್ಲಿ ಅರ್ಜುನ ಕೃಷ್ಣನನ್ನು ಪ್ರಶ್ನಿಸಿದಂತೆ.