ನಾಡಿಮಿಡಿತ
ವಸಂತ ನಾಡಿಗೇರ
vasanth.nadiger@gmail.com
ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಬದಲಾವಣೆಯಾದ ಪರಿಣಾಮ ಬಸವರಾಜ ಬೊಮ್ಮಾಯಿ ಅವರು ನೂತನ ಮುಖ್ಯಮಂತ್ರಿಯಾಗಿದ್ದಾರೆ. ಅದಕ್ಕೆ ಅನುಗುಣವಾಗಿ
ಅವರ ಸಚಿವ ಸಂಪುಟದಲ್ಲೂ ಹಲವರು ಹೊಸದಾಗಿ ಸಚಿವರಾಗಿದ್ದಾರೆ. ಕೆಲವರ ಖಾತೆಗಳು ಬದಲಾಗಿವೆ.
ಇವೆಲ್ಲ ನಡೆಯುವಂಥದ್ದೇ ಬಿಡಿ. ಆದರೆ ಹೀಗೆ ಅಧಿಕಾರ ಬದಲಾವಣೆ ಆಗಿ ಹೊಸಬರು ಅಧಿಕಾರಕ್ಕೆ ಬರುತ್ತಲೇ ಹಿಂದಿನ ಕೆಲವು ಸಂಪ್ರದಾಯಗಳು ಬದಲಾಗು ತ್ತವೆ. ಹೊಸ ವ್ಯವಸ್ಥೆ, ನೀತಿ ನಿಯಮಗಳು ಜಾರಿಗೆ ಬರುತ್ತವೆ. ಆಗೆಲ್ಲ ಮುಖ್ಯಮಂತ್ರಿಗಳು, ಮಂತ್ರಿಗಳು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುತ್ತಾರೆ. ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ; ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎಂಬಿತ್ಯಾದಿ ಸುದ್ದಿಗಳು ಹರಿದಾಡುತ್ತವೆ.
ಅದಿರಲಿ. ಈ ಬಾರಿ ಹೊಸ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಒಂದಷ್ಟು ಪ್ರಮುಖ ಬದಲಾವಣೆಗಳು ಕಂಡು ಬಂದಿವೆ. ಮುಖ್ಯಮಂತ್ರಿಯವರೇ ಮುಂದೆ ನಿಂತು ಒಂದಷ್ಟು ಬದಲಾವಣೆ ಮಾಡಿರುವುದರಿಂದ ಇದಕ್ಕೆ ಹೆಚ್ಚು ಮಹತ್ವ ಬಂದಿದೆ, ಹೆಚ್ಚು ಗಮನ ಸೆಳೆದಿದೆ. ಇದನ್ನು ಇತರ ಕೆಲವು ಸಚಿವರೂ ಅನುಸರಿಸಿದ್ದಾರೆ. ಆ ಪೈಕಿ ಅತಿ ಪ್ರಮುಖದುದು ಎಂದರೆ ಇನ್ನು ಮುಂದೆ ಸರಕಾರಿ ಕಾರ್ಯಕ್ರಮಗಳಲ್ಲಿ ಹಾರ ತುರಾಯಿ, ಶಾಲು ಕೊಡುವಂತಿಲ್ಲ. ಇದರ ಬದಲು ಪುಸ್ತಕಗಳನ್ನು ಕೊಡಬಹುದು ಎಂಬ ಆದೇಶ ಹೊರಡಿಸಲಾಗಿದೆ. ಆದರೆ ಇದಕ್ಕೆ ಮೊದಲೇ, ಅಂದರೆ, ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸುನೀಲ್ ಕುಮಾರ್ ಅವರು ಇದೇ ರೀತಿಯ ಹೇಳಿಕೆ ನೀಡಿದ್ದರು.
’ನನ್ನನ್ನು ಅಭಿನಂದಿಸಲು, ಭೇಟಿ ಮಾಡಲು ಬರುವವರು ಹೂಗುಚ್ಛ ತರಬಾರದು. ಬೇಕಾದರೆ ಪುಸ್ತಕಗಳನ್ನು ತನ್ನಿ. ಅದನ್ನು ಕಾರ್ಕಳದ ಗ್ರಂಥಾಲಯಕ್ಕೆ ನೀಡುತ್ತೇನೆ’ ಎಂದು ತಿಳಿಸಿದ್ದರು. ಇದಾದ ಬಳಿಕ ತಮ್ಮ ಪಕ್ಕದಲ್ಲಿ ರಾಶಿಗಟ್ಟಲೆ ಪುಸ್ತಕಗಳಿರುವ ಫೋಟೊವನ್ನು ಫೇಸ್ಬುಕ್ನಲ್ಲಿ ಹಾಕಿಕೊಂಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬಗೆಬಗೆಯ ಪ್ರತಿಕ್ರಿಯೆಗಳು ಮತ್ತು ಅನಿಸಿಕೆಗಳು ವ್ಯಕ್ತವಾದವು.
ಈ ಬೊಕೆ ನೀಡುವ ಸಂಸ್ಕೃತಿ ಯಾವಾಗ ಆರಂಭವಾಯಿತೋ ಗೊತ್ತಿಲ್ಲ. ಆದರೆ ಅದರ ಬಗ್ಗೆ ಆಗಾಗ ಅಪಸ್ವರಗಳು, ವಿರೋಧಗಳು ವ್ಯಕ್ತವಾಗುತ್ತಲೇ ಇರುತ್ತದೆ. ಏಕೆಂದರೆ ಹೂಗುಚ್ಛ ನೀಡುವುದು ಬಹಳ ಯಾಂತ್ರಿಕ ಎಂಬಂತಾಗಿದೆ. ಕೊಡುವವರು ಬಣ್ಣಬಣ್ಣದ, ವಿವಿಧ ಹೂಗಳಿಂದ ಕೂಡಿದ ಹೂಗುಚ್ಛಗಳನ್ನು ತಂದಿರುತ್ತಾರೆ. ಆದರೆ ಪಡೆಯುವವರು ಮಾತ್ರ ಅದನ್ನು ಸರಿಯಾಗಿ ತೆಗೆದುಕೊಳ್ಳುವುದೂ ಇಲ್ಲ, ನೋಡುವುದೂ ಇಲ್ಲ. ಹಾಗೇ ಪಕ್ಕಕ್ಕೆ ಇಟ್ಟು ಬಿಡುತ್ತಾರೆ. ಅಂದು ಸಂಜೆ ಅವೆಲ್ಲ ಕಸದ ತೊಟ್ಟಿ ಸೇರುತ್ತವೆ. ಇದನ್ನೆಲ್ಲ ನೋಡಿದರೆ ಬಹಳಷ್ಟು ಜನರಿಗೆ ಹೊಟ್ಟೆ ಉರಿಯುವುದುಂಟು.
ಇದೇನಿದು ಉಂಡ ಹಾಗಲ್ಲ, ತಿಂದ ಹಾಗಲ್ಲ. ವೃಥಾ ಖರ್ಚು, ವ್ಯರ್ಥ ಎಂಬ ಭಾವನೆ ಸಾಕಷ್ಟು ಜನರಲ್ಲಿ ಉಂಟಾಗುವುದು ಸಹಜ. ಇದೇ ಭಾವನೆಯಿಂದ ಹೂಗುಚ್ಛ ಕೊಡುವುದನ್ನು ಮುಖ್ಯಮಂತ್ರಿ ನಿಷೇಧಿಸಿರಬೇಕು. ಹಾಗೆಂದು ಇದೇನೂ ಹೊಸ ಸಂಪ್ರದಾಯವಲ್ಲ. ಕೇಂದ್ರ ಸರಕಾರದಲ್ಲಿ ಈ ಪದ್ಧತಿ ಈಗಾಗಲೇ ಜಾರಿಯಲ್ಲಿದೆ. ಹೂಗುಚ್ಛ ನೀಡುವ ಪದ್ಧತಿಗೆ ತಿಲಾಂಜಲಿ ನೀಡಿ ಪ್ರಧಾನಿ ನರೇಂದ್ರ ಮೋದಿಯವರು ಆದೇಶ ಹೊರಡಿಸಿದ್ದಾರೆ. ಬೊಮ್ಮಾಯಿ ಸರಕಾರ ಕೇಂದ್ರದ ಕ್ರಮವನ್ನು ಅನುಸರಿಸಿದೆ ಬಿಡಿ ಎಂದು ಹೇಳಬಹುದು. ಆದರೆ ಅದು ಅಷ್ಟು ಸುಲಭವಾಗಿ ತಳ್ಳಿಹಾಕುವಂಥದದ್ದಲ್ಲ. ಏಕೆಂದರೆ ಈ ಹಿಂದೆ ಅಧಿಕಾರದಲ್ಲಿದ್ದ ಯಡಿಯೂರಪ್ಪನವರೇನೂ ಪ್ರತಿಪಕ್ಷದವರಲ್ಲ. ಅವರೂ ಬಿಜೆಪಿ ಮುಖ್ಯಮಂತ್ರಿಯೇ.
ಆವರ ಕಾಲದಲ್ಲೇ ಕೇಂದ್ರ ಸರಕಾರದಲ್ಲಿ ಈ ಸಂಪ್ರದಾಯವಿತ್ತು. ಆದರೆ ಅವರೇಕೆ ಜಾರಿಗೆ ತಂದಿರಲಿಲ್ಲ ಎಂಬ ಪ್ರಶ್ನೆ ಬರುತ್ತದೆ. ಹೌದಲ್ಲವೆ ಎನಿಸುತ್ತದೆ. ಈ
ನಿಟ್ಟಿನಲ್ಲಿ ಬೊಮ್ಮಾಯಿ ಅವರ ವಿಶೇಷ ಕಾಳಜಿ ಮತ್ತು ಮುತುವರ್ಜಿಯಿಂದ ಇದು ಸಾಧ್ಯವಾಯಿತು ಎಂಬುದು ಸ್ಪಷ್ಟ. ಬೊಮ್ಮಾಯಿ ಅವರು ಕೈಗೊಂಡ ಇನ್ನೊಂದು ನಿರ್ಧಾರ ಎಂದರೆ ಹೋದ ಹೋದಲ್ಲೆಲ್ಲ ಗಾರ್ಡ್ ಆಫ್ ಆನರ್ ಕೊಡುವುದು ಬೇಡ ಎಂಬುದು. ಇಂಥ ಕೆಲವು ಸಂಪ್ರದಾಯಗಳು ಅನೂಚಾನವಾಗಿ ನಡೆದುಕೊಂಡು ಬರುತ್ತಿವೆ. ಮುಖ್ಯಮಂತ್ರಿ ಮೊದಲಾದವರು ಯಾವುದೇ ಊರಿಗೆ ಹೋದಾಗ, ವಿಮಾನ ನಿಲ್ದಾಣಕ್ಕೆ ಬಂದಾಗ ಅವರನ್ನು ಸ್ವಾಗತಿಸುವ ಹಾಗೂ ನಿರ್ಗಮಿಸುವಾಗ ಬೀಳ್ಕೊಡುವ ವ್ಯವಸ್ಥೆ ಇದು.
ಆಗೆಲ್ಲ ಪೊಲೀಸರು ಗೌರವ ರಕ್ಷೆ ನೀಡುತ್ತಾರೆ. ಇವರು ಸೆಲ್ಯೂಟ್ ಹೊಡೆಸಿಕೊಂಡು ಹೊರಡಬೇಕು. ಇನ್ನು ಮುಂದೆ ಇದಕ್ಕೆ ತಿಲಾಂಜಲಿ ನೀಡಲಾಗುವುದು ಎಂದಿದ್ದಾರೆ ಮುಖ್ಯಮಂತ್ರಿ. ಸರಿಯಾದ ನಿರ್ಧಾರವೇ. ಅದೇ ರೀತಿ ನೂತನ ಗೃಹಸಚಿವರಾದ ಆರಗ ಜ್ಞಾನೇಂದ್ರ ಅವರೂ ಒಂದಷ್ಟು ಕ್ರಾಂತಿಕಾರಿ ಹಾಗೂ ಶ್ಲಾಘನೀಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಗೃಹ ಖಾತೆ ಎಂದರೆ ಪೊಲೀಸ್ ಇಲಾಖೆ. ಅಲ್ಲಿ ಪ್ರೊಟೊಕಾಲ್ ಅಥವಾ ಶಿಷ್ಟಾಚಾರಗಳು ತುಸು ಹೆಚ್ಚಾಗಿಯೇ ಇರುತ್ತವೆ. ಝೀರೊ ಟ್ರಾಫಿಕ್ ಆ ಪೈಕಿ ಮುಖ್ಯವಾದುದು. ಇದು ಅವರಿಗೆ ಗರಿ, ಆದರೆ ಜನಸಾಮಾನ್ಯರಿಗೆ ಕಿರಿಕಿರಿ.
ಏಕೆಂದರೆ ಮಂತ್ರಿಗಳು ಎಲ್ಲಿಗಾದರೂ ಸವಾರಿ ಹೊರಟರೆಂದರೆ ಸಾಮಾನ್ಯವಾಗಿ ಮಾರ್ಗದುದ್ದಕ್ಕೂ ರಸ್ತೆಯು ತಡೆರಹಿತ ಸಂಚಾರಕ್ಕೆ ಮುಕ್ತವಾಗಿರುತ್ತದೆ. ಅವರು ಹೋಗುವವರೆಗೂ ಎಲ್ಲ ವಾಹನ ಸವಾರರು ಕಾಯಬೇಕು. ತುರ್ತಾಗಿ ಹೋಗಬೇಕಾದವರಿಗಂತೂ ಇದೊಂದು ಶಿಕ್ಷೆ. ಆಂಬ್ಯುಲೆನ್ಸ್ ಗಳೂ ಕೆಲವೊಮ್ಮೆ ನಿಲ್ಲುವಂತಾಗಿ ರೋಗಿಗಳಿಗೆ ಸಮಸ್ಯೆಯಾಗಿದ್ದಿದೆ. ಆದರೀಗ ತಮಗೆ ಝೀರೊ ಟ್ರಾಫಿಕ್ ಸೌಲಭ್ಯ ಬೇಡ ಎಂದಿದ್ದಾರೆ. ಅಂದರೆ ಒಂದಷ್ಟು ಸಂಕೋಚ ಮತ್ತು ಸೂಕ್ಷ್ಮ ಮನಸ್ಸಿನವರಾಗಿದ್ದರೆ ಅತಿಯಾದ ಪ್ರಾಮುಖ್ಯ, ವಿಶೇಷವಾದ ಉಪಚಾರಗಳು ಆವರಿಗೇ ಕಿರಿಕಿರಿಯನ್ನು ಉಂಟು ಮಾಡುತ್ತದೆ.
ಆದರೆ ಬಹುತೇಕ ಮಂತ್ರಿ ಮಹೋದಯರಿಗೆ ಇಂಥ ವಿಶೇಷ ಸವಲತ್ತುಗಳು ಇರಬೇಕು. ಅದು ಅವರಿಗೆ ಒಂದು ರೀತಿ ಪ್ರತಿಷ್ಠೆಯ ವಿಷಯ. ಮಾಜಿ ಉಪ ಮುಖ್ಯಮಂತ್ರಿಯೊಬ್ಬರು ಬೆಂಗಳೂರಿನಿಂದ ತಮ್ಮ ಊರಿನವರೆಗೂ ಝೀರೊ ಟ್ರಾಫಿಕ್ನಲ್ಲೇ ಪ್ರಯಾಣಿಸುತ್ತಿದ್ದರು. ಆಗ ಅದು ಬಹುಚರ್ಚಿತ ವಿಷಯವಾಗಿತ್ತು. ತೀರ ಇತ್ತೀಚೆಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ವಿಮಾನ ನಿಲ್ದಾಣದಿಂದ ಝೀರೊ ಟ್ರಾಫಿಕ್ನಲ್ಲಿ ಒಬ್ಬರು ಬಂದಿದ್ದು ಸುದ್ದಿಯಾಗಿತ್ತು. ಅದರ ವಿರುದ್ಧ ಯಾರೋ ಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ರೀತಿಯ ಇನ್ನೂ ಅನೇಕ ಬಗೆಯ ಶಿಷ್ಟಾಚಾರಗಳು ಉಳಿದುಕೊಂಡಿವೆ. ಉದಾಹರಣೆಗೆ ಸಚಿವರು ಎಲ್ಲಿಗಾದರೂ ಹೊರಟರೆ ಅವರ ಹಿಂದೆ ಮುಂದೆ ವಾಹನ ಗಳ ದಂಡೇ ಇರುತ್ತದೆ. ಸುಮ್ಮನೆ ಅಷ್ಟು ಕಾರುಗಳ ಮೆರವಣಿಗೆ, ಅನಗತ್ಯ ಖರ್ಚು, ಸಮಯ ವ್ಯರ್ಥ. ಇನ್ನು ಜನರಿಗೆ ಟ್ರಾಫಿಕ್ ಜಾಮ್ನ ಬಿಸಿ ಮತ್ತು ಕಿರಿಕಿರಿ. ಅದೇ ರೀತಿ ಪೊಲೀಸ್ ಇಲಾಖೆಯಲ್ಲಿ ಆರ್ಡರ್ಲಿ ಎಂಬ ಪದ್ಧತಿ ಕುರಿತಾಗಿಯೂ ಸಾಕಷ್ಟು ಚರ್ಚೆಗಳಾಗಿವೆ. ಇದನ್ನು ರದ್ದು ಪಡಿಸಲಾಗುತ್ತದೆ ಎಂದು ಹೇಳಲಾಗು ತ್ತಿತ್ತು. ಆದರೆ ಸದ್ಯಕ್ಕೆ ಏನಾಗಿದೆ ಎಂಬುದು ಗೊತ್ತಿಲ್ಲ.
ಹೊಸ ಸರಕಾರದಲ್ಲಿ ಕೆಲವು ಅನಗತ್ಯ ಹಳೆಯ ಪದ್ಧತಿಗಳಿಗೆ ವಿದಾಯ ಹೇಳಿದ ಸಂಗತಿಗಳ ಬಗ್ಗೆ ಇಲ್ಲಿ ಚರ್ಚಿಸಲು ಕಾರಣವೂ ಇದೆ. ಮೊತ್ತ ಮೊದಲನೆಯದಾಗಿ
ಇಂಥದೊಂದು ಬದಲಾವಣೆಯನ್ನು ನಾವು ಕಾಣುತ್ತಿದ್ದೇವಲ್ಲ ಎಂಬುದೇ ಖುಷಿಯ ವಿಚಾರ. ಏಕೆಂದರೆ ಜನಸಾಮಾನ್ಯರಲ್ಲಿ ಆಳುವವರ ಬಗ್ಗೆ ಒಂದು ರೀತಿಯ
ಸಾತ್ವಿಕ ಸಿಟ್ಟು ಇರುತ್ತದೆ. ಅಽಕಾರಕ್ಕೆ ಬಂದ ಕೂಡಲೇ ತೋರುವ ದರ್ಪ, ಪ್ರತಿಷ್ಠೆ ಇವೆಲ್ಲ ಅವರಿಗೆ ಸಹ್ಯವಾಗುವುದಿಲ್ಲ. ನಮ್ಮಿಂದಲೇ ಆರಿಸಿಹೋಗುವ ಈ
ಜನಪ್ರತಿನಿಽಗಳು ಅನಂತರ ಅದೇಕೆ ಜನರಿಂದ ಅಂತರ ಕಾಯ್ದುಕೊಳ್ಳುತ್ತಾರೆ ಹಾಗೂ ಅವರಿಗೆ ಪ್ರತಿಷ್ಠೆಯ ಹಪಹಪಿ ಇಷ್ಟೊಂದು ಪ್ರಮಾಣದಲ್ಲೇಕೆ ಇರುತ್ತದೆ ಎಂಬುದು ಅರ್ಥವಾಗುವುದಿಲ್ಲ. ಇದು ಪ್ರಜಾಪ್ರಭುತ್ವವೋ ಇಲ್ಲ ರಾಜಪ್ರಭುತ್ವವೋ ಎಂಬ ಸಂಶಯ ಕೆಲವೊಮ್ಮೆ ಬರುವುದುಂಟು.
ಏಕೆಂದರೆ ಇವರೆಲ್ಲ ಜನಸೇವಕರು. ಆದರೆ ಅಽಕಾರಕ್ಕೆ ಬಂದ ಕೂಡಲೇ ಸೇವೆಯನ್ನು ಮರೆತು ಬರಿ ಇಂಥ ಅಧಿಕಾರ ಚಲಾವಣೆಯತ್ತಲೇ ಹೆಚ್ಚು ಗಮನ
ಹರಿಸುತ್ತಾರಲ್ಲ ಎಂಬ ಬೇಸರ ಬಹುತೇಕ ಜನರದ್ದು. ಆದರೆ ಈ ಮನೋಭಾವ ನಮ್ಮ ದೇಶದಲ್ಲಿ ಅದೇಕೊ ಹಾಸುಹೊಕ್ಕಾಗಿಬಿಟ್ಟಿದೆ. ಎಷ್ಟರ ಮಟ್ಟಿಗೆ ಎಂದರೆ ಈ ರೀತಿಯ ಐಷಾರಾಮಿ, ಪ್ರತಿಷ್ಠಿತ, ದರ್ಪದ ಜೀವನಕ್ಕೆ ಒಗ್ಗಿ ಹೋಗಿರುವ, ಅದನ್ನು ಬಿಡಲೊಪ್ಪದ ನಮ್ಮ ಅನೇಕ ರಾಜಕಾರಣಿಗಳು ನಿವೃತ್ತಿ ಅಥವಾ ಮಾಜಿ ಆದರೂ ಆ ಗುಂಗಿನಿಂದ, ಸ್ವಭಾವದಿಂದ ಹೊರಬರುವುದಿಲ್ಲ. ಅಧಿಕಾರ ಹೋದರೂ ಬಂಗಲೆಗಳನ್ನು ಖಾಲಿ ಮಾಡದೆ ಅಲ್ಲೇ ಉಳಿದುಕೊಳ್ಳುವುದು, ಏನೂ ಅಲ್ಲದಿದ್ದಾಗಲೂ ವಿಶೇಷ ಸೌಲಭ್ಯ, ಸವಲತ್ತು ವಿಐಪಿ ಟ್ರೀಟ್ಮೆಂಟ್ ಬಯಸುವುದನ್ನು ನಾವು ನೋಡಿದ್ದೇವೆ.
ಇದಕ್ಕೆ ಜನಸಾಮಾನ್ಯರೂ ಒಂದು ರೀತಿ ಒಗ್ಗಿ ಹೊಗಿದ್ದಾರೆ. ಹೆಚ್ಚೆಂದರೆ ಗೊಣಗುತ್ತಾರೆ. ಇನ್ನು ಕಾನೂನು ಪಾಲಿಸಬೇಕಾದ ಅಧಿಕಾರಿಗಳು ಕೂಡ ತಮಗ್ಯಾಕೆ
ಇಲ್ಲದ ಉಸಾಬರಿ ಎಂದು ಸುಮ್ಮನಾಗಿಬಿಡುತ್ತಾರೆ. ಅಥವಾ ಕೆಲವರು ಆ ರಾಜಕಾರಣಿ ಅಥವಾ ವಿಐಪಿ ಅಧಿಕಾರದಲ್ಲಿದ್ದಾಗ ಅವರಿಂದ ಯಾವುದೋ ರೀತಿಯಲ್ಲಿ ಉಪಕೃತರಾಗಿದ್ದ ಕಾರಣ ಆ ಋಣಭಾರದಿಂದಾಗಿ ಸುಮ್ಮನಾಗಬೇಕಾಗುತ್ತದೆ. ಹೀಗೆ ಇದೊಂದು ವಿಷವರ್ತುಲದಂತಾಗಿದೆ. ಹಾಗೆಂದು ಇದು ರಾಜಕಾರಣಿಗಳಿಗೆ ಮಾತ್ರ ಸೀಮಿತವಾದುದಲ್ಲ. ಅಧಿಕಾರ ಶಾಹಿಯಲ್ಲೂ ಇಂಥದೊಂದು ಮನಸ್ಥಿತಿ ಮನೆ ಮಾಡಿದೆ. ಅವರು ತಮ್ಮ ಅಧೀನ ನೌಕರರನ್ನು ಲಘುವಾಗಿ ಕಾಣುವುದು; ದರ್ಪ ತೋರುವುದು; ಅಧಿಕಾರ ಚಲಾವಣೆ ಇತ್ಯಾದಿ ಗುಣಗಳು ಅವರಲ್ಲೂ ಬೇಕಾದಷ್ಟಿವೆ.
ಹಾಗಾದರೆ ಇತರ ದೇಶಗಳಲ್ಲಿ ಪರಿಸ್ಥಿತಿ ಹೇಗಿದೆ ಎಂಬುದನ್ನೂ ನಾವು ಪರಿಗಣಿಸಬೇಕಾಗುತ್ತದೆ. ಅಮೆರಿಕ, ಬ್ರಿಟನ್, ಫ್ರಾನ್ಸ್, ಜಪಾನ್ ಮೊದಲಾದ ಮುಂದು ವರಿದ ದೇಶಗಳಲ್ಲಿ ಈ ವಿಐಪಿ ಸಂಸ್ಕೃತಿ ಇಲ್ಲವೇ ಇಲ್ಲ ಎಂದರೂ ತಪ್ಪಾಗುವುದಿಲ್ಲ. ಏಕೆಂದರೆ ಅಲ್ಲಿ ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಹಾಗೆಯೇ ಅಧಿಕಾರ ಇದೆ ಎಂದು ಅದನ್ನು ಅನಗತ್ಯವಾಗಿ ಚಲಾಯಿಸುವಂತಿಲ್ಲ, ಚಲಾಯಿಸುವುದಿಲ್ಲ. ಅಲ್ಲಿನ ಜನರೂ ಹಾಗೆ ಸುಮ್ಮನೆ ಬಿಡುವುದಿಲ್ಲ. ಸ್ವೀಡನ್ ಪ್ರಧಾನಿ ಲೋಕಲ್ ಟ್ರೇನ್ನಲ್ಲಿ ಹಾಯಾಗಿ ಪ್ರಯಾಣಿಸಬಹುದು. ಪ್ರಯಾಣಿಸುತ್ತಾರೆ ಕೂಡ. ಅವರಿಗೆ ಅಲ್ಲಿ ತಾನು ಗಣ್ಯವ್ಯಕ್ತಿ ಎಂಬ ಕೋಡು, ಹಮ್ಮು ಬಿಮ್ಮು ಇರುವುದಿಲ್ಲ. ಅಮೆರಿಕದ ಮಾಜಿ ಅಧ್ಯಕ್ಷರು ಅಽಕಾರದಿಂದ ಕೆಳಗಿಳಿದ ಕೂಡಲೆ ತಮ್ಮ ಪಾಡಿಗೆ ತಾವು ಇದ್ದು ಬಿಡುತ್ತಾರೆ.
ಬರಾಕ್ ಒಬಾಮಾ ಅವರು ಇತ್ತೀಚೆಗೆ ಡಿಪಾರ್ಟ್ಮೆಂಟ್ ಸ್ಟೋರ್ಗೆ ಬಂದು ತಮ್ಮ ಪಾಡಿಗೆ ವಸ್ತುಗಳನ್ನು ಖರೀದಿಸಿ ಹೋಗುತ್ತಿರುವ ವಿಡಿಯೊ ಇತ್ತೀಚೆಗೆ ಹರಿದಾಡಿತ್ತು. ಬ್ರಿಟನ್ ಪ್ರಧಾನಿ ಕೂಡ ಸೈಕಲ್ ನಲ್ಲಿ ಬಂದು ಅಂಗಡಿಯಲ್ಲಿ ಸಾಮಾನು ಖರೀದಿಸಿ ಮತ್ತೆ ಅದೇ ಸೈಕಲ್ನಲ್ಲಿ ಹೊರಟ ದೃಶ್ಯಗಳನ್ನು ನೋಡಿದ ನೆನಪು. ಈಗ ೨೦ ವರ್ಷಗಳ ಹಿಂದೆಯೇ ಬ್ರಿಟನ್ ಪ್ರಧಾನಿಯಾಗಿದ್ದ ಟೋನಿ ಬ್ಲೇರ್ ಪುತ್ರ ಸಾರ್ವಜನಿಕ ಸ್ಥಳದಲ್ಲಿ ಕುಡಿದು ಗಲಾಟೆ ಮಾಡಿದ ಕಾರಣದಿಂದ ಬಂಧನಕ್ಕೆ ಒಳಗಾದ ಸುದ್ದಿ ಪ್ರಕಟವಾಗಿತ್ತು. ಅದೇ ರೀತಿ ಜಾರ್ಜ್ ಬುಷ್ ಪುತ್ರಿಯರು ಇನ್ನೊಬ್ಬರ ಡ್ರೈವಿಂಗ್ ಲೈಸೆನ್ಸ್ ತೋರಿಸಿ ಮದ್ಯ ಖರೀದಿಸಿದ ವಿಷಯ ಆಗ ದೊಡ್ಡ ರಾದ್ಧಾಂತ ಸೃಷ್ಟಿಸಿತ್ತು.
ರಷ್ಯಾದ ಅಧ್ಯಕ್ಷರು ಪೆಟ್ರೋಲ್ ಬಂಕ್ನಲ್ಲಿ ಸ್ವತಃ ಪೆಟ್ರೋಲ್ ತುಂಬಿಸಿಕೊಳ್ಳುತ್ತಿರುವ ದೃಶ್ಯ, ಯಾವುದೋ ದೇಶದ ಪ್ರಧಾನಿ ತುರ್ತಾಗಿ ಹೋಗುವ ಭರದಲ್ಲಿ ಇನ್ನೊಬ್ಬರಿಗೆ ಡಿಕ್ಕಿ ಹೊಡೆದು ಕಾಫಿ ಚೆಲ್ಲಿದಾಗ, ಅವರೇ ಅದನ್ನು ಸ್ವಚ್ಛಗೊಳಿಸಿದ್ದು- ಹೀಗೆ ವಿಐಪಿಗಳು ಸಾಮಾನ್ಯರಂತೆ ವರ್ತಿಸಿ ಇತರರಿಗೆ ಮಾದರಿ ಆಗಿರುವು ದನ್ನು ನಾವು ನೋಡಿದ್ದೇವೆ. ಆದರೆ ನಮ್ಮ ದೇಶದಲ್ಲಿ ನಾವು ಇನ್ನೂ ವಿಐಪಿ ಸಂಸ್ಕೃತಿಗೇ ಜೋತುಬಿದ್ದಿದ್ದೇವೆ. ಈಗ ಕೆಲವು ವರ್ಷಗಳ ಹಿಂದೆ ರಾಜಕಾರಣಿಗಳು ತಮ್ಮ ವಾಹನಗಳ ಮೇಲೆ ಕೆಂಪು ದೀಪ ಹಾಕಿಕೊಂಡು, ಜೋರಾಗಿ ಸೈರನ್ ಮಾಡುತ್ತ ಹೋಗುವ ಪರಿಪಾಠವಿತ್ತು.
ಅದು ತುಂಬಾ ಚರ್ಚೆಗೆ ಗ್ರಾಸವಾಗಿ ಕೊನೆಗೆ ಕೋರ್ಟ್ ಮಧ್ಯಪ್ರವೇಶಿಸಿ, ಯಾರೆಲ್ಲ ಈ ದೀಪವನ್ನು ಬಳಸಬಹುದು ಎಂಬ ಮಾರ್ಗಸೂಚಿಯನ್ನು ಬಿಡುಗಡೆ
ಮಾಡಬೇಕಾಯಿತು. ಮಧ್ಯಪ್ರದೇಶದ ಮುಖ್ಯಮತ್ರಿ ಶಿವರಾಜ್ ಸಿಂಗ್ ಚೌಹಣ್ ಅವರು ಹಿಂದೊಮ್ಮೆ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದಾಗ, ಅಲ್ಲಿ ನೀರು
ಹೆಚ್ಚಾಗಿದ್ದರಿಂದ ಪೊಲೀಸರು ಅವರನ್ನು ಅನಾಮತ್ತಾಗಿ ಹೊತ್ತುಕೊಂಡು ಹೋದ ಚಿತ್ರ ಪ್ರಕಟವಾಗಿ ಅದರ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಮಾಜಿ ಸಚಿವೆ ರೇಣುಕಾ ಚೌಧರಿ, ಶಾಪಿಂಗ್ನಲ್ಲಿ ಬಿಸಿ ಆಗಿದ್ದ ಕಾರಣ ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದರು.
ಆದರೆ ಈ ವಿಐಪಿ ಪ್ರಯಾಣಿಕರ ಬಗ್ಗೆ ಅರಿವಿಲ್ಲದ ಕಾರಣವೋ ಅಥವಾ ಯಾರಾದರೇನು ಎಂಬ ಧೋರಣೆಯಿಂದಲೋ, ಅವರನ್ನು ಬಿಟ್ಟೇ ಪೈಲಟ್ ವಿಮಾನ
ಟೇಕ್ ಆ- ಮಾಡಿದ್ದರು. ಇದರಿಂದ ಕೆಂಡಾಮಂಡಲರಾದ ರೇಣುಕಾ, ಆಕಾಶ ಭೂಮಿ ಒಂದು ಮಾಡಿದ್ದರು. ರಾಜಕಾರಣಿಗಳ ಚಪ್ಪಲಿ ಬಿಚ್ಚುವುದು, ಹಾಕುವುದು,
ಅವುಗಳನ್ನು ಕೈಯಲ್ಲಿ ಹಿಡಿದುಕೊಂಡು ಬರುವುದು ಇತ್ಯಾದಿ ಅಪಸವ್ಯಗಳು ಆಗಾಗ ನಡೆಯುತ್ತಲೇ ಇರುತ್ತವೆ. ವಿಐಪಿಗಳ ಮಕ್ಕಳು ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದರೆನ್ನಿ. ಆಗ ತೆಪ್ಪಗೆ ದಂಡ ಕಟ್ಟುವುದಿಲ್ಲ. ಬದಲಾಗಿ ಪೊಲೀಸರಿಗೆ ಮೇಲಿನಿಂದ ಕರೆ ಬರುತ್ತದೆ. ಆಗ ಅನಿವಾರ್ಯವಾಗಿ ಅವರು ಈ ವಿಐಪಿ
ಅಪರಾಧಿಗಳನ್ನು ಬಿಟ್ಟುಬಿಡಬೇಕಾಗುತ್ತದೆ.
ನಿಜ ಹೇಳಬೇಕೆಂದರೆ ಇವರಿಗೆ ದಂಡ ಕಟ್ಟುವುದೇ ಅವಮಾನ. ಕಟ್ಟದೇ ಬರುವುದು ಪ್ರತಿಷ್ಠೆ, ಅವರ ಪ್ರಭಾವದ ಸಂಕೇತ. ದೇವಸ್ಥಾನಗಳಲ್ಲಿ ಸರತಿ ಸಾಲಿಲ್ಲದೆ ಹಾಗೇ ದರ್ಶನಕ್ಕೆ ನುಗ್ಗುವುದು; ವಿಮಾನ, ರೈಲು ಸಂಚಾರಗಳನ್ನು ವಿಳಂಬ ಮಾಡಿಸುವುದು, ಒಂದೇ ಎರಡೇ ಇವರ ಹಾವಳಿ ? ಆದರೆ ಪ್ರಧಾನಿ ಮೋದಿ ಅಽಕಾರಕ್ಕೆ ಬಂದ ಮೇಲೆ ಇಂಥ ಕೆಲವು ಅಭ್ಯಾಸಗಳಿಗೆ ಕಡಿವಾಣ ಬಿದ್ದಿದೆಯಾದರೂ ಇನ್ನೂ ಪೂರ್ಣವಾಗಿ ಹೋಗಿಲ್ಲ. ವಿಐಪಿ ಅಲ್ಲ ಇಪಿಐ ಸಂಸ್ಕೃತಿ (ಎವರಿ ಪರ್ಸನ್ ಈಸ್ ಇಂಪಾರ್ಟೆಂಟ್- ಅಂದರೆ ಪ್ರತಿ ವ್ಯಕ್ತಿಯೂ ಗಣ್ಯ) ಎಂಬ ಸಂಸ್ಕೃತಿ ನಮ್ಮಲ್ಲಿ ಬರಬೇಕಾಗಿದೆ ಎಂದು ಅವರು ಒಮ್ಮೆ ತಮ್ಮ ’ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ತಿಳಿಸಿದ್ದರು.
ಇವೆಲ್ಲದರ ನಡುವೆಯೂ, ತಡವಾಗಿಯಾದರೂ ಪರವಾಗಿಲ್ಲ, ಒಂದಷ್ಟು ಬದಲಾವಣೆಯ ಗಾಳಿ ಬೀಸತೊಡಗಿದೆಯಲ್ಲ ಎಂಬುದು ಸಂತಸ, ಸಮಾಧಾನ ಪಡುವ ವಿಚಾರ. ನಮ್ಮ ರಾಜ್ಯದ ಉದಾಹರಣೆಗೆ ಮರಳಿ ಬರುವುದಾದರೆ, ಇಂಥದೊಂದು ನಿರ್ಧಾರ ಇತರರ ಮೇಲೂ ಹೇಗೆ ಪರಿಣಾಮ ಬೀರುತ್ತದೆ ನೋಡಿ. ಇದೀಗ
ಕಾಂಗ್ರೆಸ್ ಪಕ್ಷವು ತನ್ನ ಕಾರ್ಯಕ್ರಮಗಳಲ್ಲಿ ಹಾರ ತುರಾಯಿಗೆ ಬ್ರೇಕ್ ಹಾಕಲು ಉದ್ದೇಶಿಸಿದೆ ಎಂಬ ಸುದ್ದಿ ಬಂದಿದೆ. ಅಂದರೆ ಇವೆಲ್ಲ ಮೇಲ್ಪಂಕ್ತಿ ಆಗಬಹುದು. ಅಥವಾ ಒಬ್ಬರು ಇಂಥದೊಂದು ಕ್ರಮಕ್ಕೆ ಮುಂದಾದಾಗ ಇತರರೂ ಮನಸಿಲ್ಲದ್ದಿದ್ದರೂ ಅನುಸರಿಸಬೇಕಾಗಬಹುದು. ಅಥವಾ ಜನರೂ ಅವರನ್ನು ಪ್ರಶ್ನೆ ಮಾಡಬಹುದು. ಸರಕಾರವೇ ಈ ರೀತಿಯ ನಿರ್ಧಾರ ಕೈಗೊಂಡಿರುವಾಗ ನೀವೇಕೆ ಹೀಗೆ ಎಂದು ಕೇಳಬಹುದು. ಹೀಗೆ ಇದು ಒಂದು ಪ್ರಮುಖ ಬದಲಾವಣೆಗೆ ಚಾಲನೆ ನೀಡಬಹುದು.
ಇವೆಲ್ಲಕ್ಕಿಂತಲೂ ಮುಖ್ಯವಾದುದು ಮತ್ತು ನಮ್ಮ ತಲೆ ಕೊರೇಯುವ ವಿಷಯವೆಂದರೆ, ಇಷ್ಟು ವರ್ಷಗಳ ಕಾಲ ಇದು ಹೀಗೆ ಮುಂದುವರಿದುಕೊಂಡೇ ಬಂದು,
ಉಳಿದುಕೊಂಡು ದಾದರೂ ಹೇಗೆ ಮತ್ತು ಏಕೆ ಎಂಬುದು. ಆದರೆ ಈ ಪ್ರಶ್ನೆಗೆ ಇದುವರೆಗೆ ಯಾರೂ ಉತ್ತರ ನೀಡುವ ಹಾಗೂ ಬದಲಾವಣೆಗೆ ಯತ್ನಿಸದಿರುವ ಕಾರಣಕ್ಕೆ ಬೇಸರವೂ ಆಗುತ್ತದೆ. ಆದರೂ ’ಬೆಟರ್ ಲೇಟ್ ದ್ಯಾನ್ ನೆವರ್’ ಎಂಬಂತೆ, ತಡವಾದರೂ ಚಿಂತೆ ಇಲ್ಲ. ಒಂದಷ್ಟು ಬದಲಾವಣೆ ಆಗುತ್ತಿದೆ ಎಂಬುದೇ ಮುಖ್ಯ.
ಒಟ್ಟಿನಲ್ಲಿ ಈ ವಿಐಪಿ ಸಂಸ್ಕೃತಿಗೆ ವಿದಾಯ ಹೇಳಬೇಕು. ಇದನ್ನು ರಾಜಕಾರಣಿಗಳು ಅರಿಯಬೇಕು. ಸಾರ್ವಜನಿಕರೂ ಅವರಿಗೆ ಅನಗತ್ಯ ಪ್ರಾಮುಖ್ಯತೆ ಕೊಡುವು ದನ್ನು ನಿಲ್ಲಿಸಬೇಕು. ಹಾಗೆಯೇ ಅವರು ದುರ್ವರ್ತನೆ ತೋರಿದರೆ, ಅಧಿಕಾರ ದುರುಪಯೋಗ ಕಂಡುಬಂದರೆ ಅದರ ವಿರುದ್ಧ ದನಿ ಎತ್ತಬೇಕು.
ನಾಡಿಶಾಸ್ತ್ರ
ಬರಿ ಗಣ್ಯ,ಗಣ್ಯ ಎಂದು ಗೊಣಗದಿರಿ
ಜನರ ಭಾವನೆಗಳನ್ನೂ ಪರಿಗಣಿಸಿರಿ
ಎಲ್ಲರೂ ಸಮಾನರೆಂದು ಭಾವಿಸಿರಿ
ಇಲ್ಲದಿದ್ರೆ ನೀವೇ ನಗಣ್ಯರಾಗುವಿರಿ