ಡಾ.ಎಚ್.ಎಸ್. ಮೋಹನ್
ವೈದ್ಯ ವೈವಿಧ್ಯ
ನಮ್ಮ ಕರುಳಿನಲ್ಲಿ ಅಸಂಖ್ಯಾತ ಜೀವಿಗಳಿವೆ. ಅವುಗಳಲ್ಲಿ ಮುಖ್ಯವಾಗಿ ಬ್ಯಾಕ್ಟೀರಿಯಾ, ವೈರಸ್ ಮತ್ತು ಇತರ ಜೀವಿಗಳು.
ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು ನಮ್ಮ ದೇಹದ ಆರೋಗ್ಯ ಮತ್ತು ಕಾಯಿಲೆ ಬರುವ ಸನ್ನಿವೇಶಗಳಲ್ಲಿ ಮುಖ್ಯ ಪಾತ್ರ ವಹಿಸುತ್ತವೆ ಎಂದು ವಿಜ್ಞಾನಿಗಳಿಗೆ ಗೊತ್ತಿದೆ.
ಅವು ನಮ್ಮ ದೇಹದ ಪಚನಕ್ರಿಯೆ, ಪ್ರತಿರೋಧ ವ್ಯವಸ್ಥೆ, ನರವ್ಯೂಹಗಳ ವ್ಯವಸ್ಥೆ – ಇವೆಲ್ಲವುಗಳ ಮೇಲೆ ಪ್ರಭಾವ ಹೊಂದಿವೆ. ಹಾಗಾಗಿ ಅವು ನಮ್ಮ ದೇಹಕ್ಕೆ ಆಹಾರ ಪೂರೈಕೆ ಸರಿಯಾಗಿ ಆಗದಿರುವಾಗ, ಹೃದಯದ ಕಾಯಿಲೆಗಳು, ಸ್ಥೂಲಕಾಯ ಮತ್ತು ಮಲ್ಟಿಪಲ್ ಸ್ಕ್ಲೆರೋಸಿಸ್‌ಗಳಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಹಾಗೆಯೇ ವಿಜ್ಞಾನಿಗಳಿಗೆ ಕರುಳಿನಲ್ಲಿರುವ ಬ್ಯಾಕ್ಟೀರಿಯೋಫೇಜ್
ಗಳ ಬಗ್ಗೆ ಹೆಚ್ಚಿಗೆ ಗೊತ್ತಿಲ್ಲ.
ಬ್ಯಾಕ್ಟೀರಿಯೋಫೇಜ್ ಗಳೆಂದರೆ ಬ್ಯಾಕ್ಟೀರಿಯಾಗಳನ್ನು ನುಂಗಿ ಹಾಕುವ ವೈರಸ್‌ಗಳು. ಅವುಗಳೂ ಸಹಿತ ಮನುಷ್ಯನ
ಆರೋಗ್ಯದ ಮೇಲೆ ಗಮನಾರ್ಹವಾದ ಪ್ರಭಾವ ಹೊಂದಿವೆ ಎನ್ನಲಾಗಿದೆ. ಈ ವೈರಸ್‌ಗಳು ಕರುಳಿನಲ್ಲಿರುವ ವಿವಿಧ ರೀತಿಯ
ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ನಿಯಂತ್ರಿಸುತ್ತವೆ. ಹಾಗೆಯೇ ಅವು ಬ್ಯಾಕ್ಟೀರಿಯಾಗಳ ಬೇರೆ ಬೇರೆ ವರ್ಗಗಳಲ್ಲಿನ ಜೀನ್‌ಗಳ ವರ್ಗಾವಣೆಯಲ್ಲಿ ಮಹತ್ತರ ಪಾತ್ರವನ್ನು ಹೊಂದಿವೆ. ಆದರೆ ನಮ್ಮ ಕರುಳಿನಲ್ಲಿರುವ ವೈರಸ್ ಗಳ ವೈವಿಧ್ಯಮಯ ರೀತಿ, ಅವುಗಳ ಸಂಖ್ಯೆ ಮತ್ತು ಅವು ನಮ್ಮ ದೇಹದ ಆರೋಗ್ಯದ ಮೇಲೆ ಹೊಂದಿದ ಪ್ರಭಾವ – ಇವೆಲ್ಲವೂ ವಿಜ್ಞಾನಿಗಳಿಗೆ ಸ್ಪಷ್ಟವಾಗಿ ಗೊತ್ತಿಲ್ಲ. ಈ ಬಗೆಗೆ ವಿವರವಾಗಿ ತಿಳಿಯಲು ಮತ್ತು ಅಧ್ಯಯನ ಮಾಡಲು ಯುನೈಟೆಡ್ ಕಿಂಗ್ಡಮ್ನ ಹಿಸ್ಕ್ಟನ್ ಹಿನ್ಕಸ್ ಟನ್‌ನ ವೆಲ್ಕಮ್ ಸ್ಯಾಂಗರ್ ಇನ್ ಸ್ಟಿಟ್ಯೂಟ್ ಮತ್ತು ಯುರೋಪಿಯನ್ ಬಯೋಇನರ್ಮ್ಯಾಟಿಕ್ಸ್ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ಈ
ಬ್ಯಾಕ್ಟೀರಿಯೋಫೇಜ್ (ವೈರಸ್)ಗಳ ಒಂದು ದೊಡ್ಡ ಸಂಗ್ರಹವನ್ನು ಮಾಡಿದ್ದಾರೆ.
ಅವರು ೨೮,೦೬೦ ಜನರ ಕರುಳಿನ ಮೆಟಾಜೀನೋಮ್ಸಗಳ ವೈರಲ್ ಡಿಎನ್‌ಎ ಅನ್ನು ಗುರುತಿಸಿದ್ದಾರೆ ಮತ್ತು ಅವುಗಳನ್ನು ವರ್ಗೀಕರಿಸಿದ್ದಾರೆ. ಈ ಮೆಟಾಜೀನೋಮ್ಸಗಳೆಂದರೆ ಮನುಷ್ಯರ ದೇಹದೊಳಗೆ ಇರುವ ಎಲ್ಲಾ ರೀತಿಯ ವೈರಸ್‌ಗಳ ಜೆನೆಟಿಕ್ ಸೀಕ್ವೆನ್ಸ್ ಗಳು. ಹಾಗೆಯೇ ಅವರು ಮಾನವ ದೇಹದ ೨೮೯೮ ಭಿನ್ನ ರೀತಿಯ ಕರುಳಿನ ಬ್ಯಾಕ್ಟೀರಿಯಾಗಳನ್ನು ಸಹಿತ ವಿಶ್ಲೇಷಣೆ ಗೈದರು.
ಹೀಗೆ ಅವರು ೧೪೦,೦೦೦ ಭಿನ್ನ ರೀತಿಯ ವೈರಸ್ ಗಳ ಜೀನೋಮ್‌ಗಳ ವಿವರಗಳನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ ಅರ್ಧಕ್ಕರ್ಧ ವೈರಸ್‌ಗಳ ಬಗೆಗೆ ವಿಜ್ಞಾನಿಗಳಿಗೆ ಈ ಮೊದಲು ಗೊತ್ತಿರಲಿಲ್ಲ. ಇವರು ವಿಶ್ಲೇಷಣೆಗೈದ ಹೆಚ್ಚಿನವು ಎಲ್ಲಾ ಆರೋಗ್ಯವಂತ
ಮಾನವ ದೇಹದವು. ಈ ವೈರಸ್‌ಗಳ ಜೆನೆಟಿಕ್ ಮೆಟೀರಿಯಲ್‌ಗಳು ಹೆಚ್ಚಾಗಿ ಡಿಎನ್‌ಎಯಿಂದ ಮಾಡಿದುದಾಗಿದೆ. ಹಾಗೆಯೇ ಮನುಷ್ಯನಿಗೆ ಕಾಯಿಲೆ ತರುವ ವೈರಸ್‌ಗಳಾದ ಸಾರ್ಸ್ ಸಿಒ ೨ (ಕೋವಿಡ್ ಕಾಯಿಲೆ ಉಂಟು ಮಾಡುವ ವೈರಸ್) ಮತ್ತು ಝೀಕಾ ವೈರಸ್‌ಗಳು ಆರ್‌ಎನ್‌ಎ ಅನ್ನು ಜೆನೆಟಿಕ್ ಮೆಟೀರಿಯಲ್ ಆಗಿ ಉಪಯೋಗಿಸುತ್ತವೆ.
ದೇಹದಲ್ಲಿನ ಎಲ್ಲಾ ವೈರಸ್‌ಗಳೂ ನಮಗೆ ಅಪಾಯ ತರುವ ವೈರಸ್‌ಗಳಲ್ಲ. ಅವು ನಮ್ಮ ಕರುಳಿನ ಇಕೋ ಸಿಸ್ಟಮ್‌ನ ಅವಿಭಾಜ್ಯ ಅಂಗ ಎಂದು ಯುರೋಪಿಯನ್ ಬಯೋಇನರ್ಮ್ಯಾಟಿಕ್ಸ್ ಮತ್ತು ವೆಲ್ಕಮ್ ಸ್ಯಾಂಗರ್ ಸಂಸ್ಥೆಯ ವಿಜ್ಞಾನಿಯಾದ ಡಾ
ಅಲೆಕ್ಸಾಂಡ್ರೆ ಅಲ್ ಮೀಡಾ ಅಭಿಪ್ರಾಯಪಡುತ್ತಾರೆ. ನಮ್ಮ ಕರುಳಿನಲ್ಲಿ ನಮಗೆ ಗೊತ್ತಿಲ್ಲದ ಎಷ್ಟು ವಿಧದ ಜೀವಿಗಳು ಜೀವಿಸುತ್ತವೆ ಮತ್ತು ಅವು ನಮ್ಮ ಆರೋಗ್ಯದ ಮೇಲೆ ಗಮನಾರ್ಹವಾದ ಪ್ರಭಾವ ಬೀರುತ್ತವೆ ಎಂಬುದು ವಿಸ್ಮಯಕಾರಿ ಅಂಶ ಎಂದು ಅವರ ಅಂಬೋಣ. ಈ ಬಗೆಗಿನ ಸಂಶೋಧನೆಯ ಪೇಪರ್ ಇತ್ತೀಚಿನ ಸೆಲ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.
ಇತರ ವಿಜ್ಞಾನಿಗಳು ಈ ಅಗಾಧ ಡೇಟಾ ಬೇಸ್‌ನ್ನು ಉಪಯೋಗಿಸಲು ಸಾಧ್ಯವಾಗಿದೆ. ಹಾಗೆ ಉಪಯೋಗಿಸಿ ಹೇಗೆ ಈ ವೈರಸ್‌ಗಳು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ಅಧ್ಯಯನ ಮಾಡಲು ಸಾಧ್ಯ ವಾಗುತ್ತದೆ. ಇದರ ಮುಂದಿನ ಮುಖ್ಯ ಉಪಯೋಗ ಎಂದರೆ ಕರುಳಿನಲ್ಲಿರುವ ಅನಾರೋಗ್ಯ ತರುವ ಬ್ಯಾಕ್ಟೀರಿಯಾಗಳ ಮೇಲೆ ಚಿಕಿತ್ಸೆಯಾಗಿ ಈ
ಬ್ಯಾಕ್ಟೀರಿಯೋಫೇಜ್ ಗಳನ್ನು ಅಥವಾ ವೈರಸ್‌ಗಳನ್ನು ಉಪಯೋಗಿಸಬಹುದು. ಈ ಅಧ್ಯಯನ ದಿಂದ ಕರುಳಿನ ಉತ್ತಮ ಗುಣಮಟ್ಟದ ವೈರಸ್‌ಗಳ ಜೀನೋಮ್‌ಗಳು ಆರೋಗ್ಯದ ಮೇಲೆ ಏನು ಪಾತ್ರ ವಹಿಸುತ್ತವೆ ಎಂಬುದನ್ನು ತಿಳಿಯಲು ಸಾಧ್ಯ.
ಹಾಗೆಯೇ ಅವು ಚಿಕಿತ್ಸೆಯ ಬಗೆಗೂ ಅವು ಉತ್ತಮ ಬೆಳಕು ಚೆಲ್ಲಬಲ್ಲವು ಎಂದು ವೆಲ್ಕಮ್ ಸ್ಯಾಂಗರ್ ಇನ್ ಸ್ಟಿಟ್ಯೂಟ್‌ನ ಈ ಅಧ್ಯಯನದ ಮುಖ್ಯ ವಿಜ್ಞಾನಿ ಲೂಯಿಸ್ ಎಫ್ ಕ್ಯಾಮರಿ – ಗಾರೆಲೋ ಅಭಿಪ್ರಾಯ ಪಡುತ್ತಾರೆ. ಹಿಂದಿನ ಅಧ್ಯಯನದಲ್ಲಿ
ಗೊತ್ತಾದ ಇನ್ನೊಂದು ಅಂಶ ಎಂದರೆ ಪ್ರತಿಯೊಂದು ವ್ಯಕ್ತಿಯ ಕರುಳಿನಲ್ಲಿರುವ ವೈರಸ್‌ಗಳು ಆ ವ್ಯಕ್ತಿಗೇ ಸೀಮಿತ. ಬೇರೊಬ್ಬ ವ್ಯಕ್ತಿಯಲ್ಲಿ ಬೇರೆ ರೀತಿಯ ವೈರಸ್‌ಗಳಿರುತ್ತವೆ ಎನ್ನಲಾಗಿದೆ. ಈ ಅಧ್ಯಯನದಲ್ಲಿ ಗೊತ್ತಾದ ಇನ್ನೊಂದು ಅಂಶ ಎಂದರೆ ಕರುಳಿನಲ್ಲಿರುವ ಈ ಬ್ಯಾಕ್ಟೀರಿಯೋಫೇಜ್ ಗಳ ರೀತಿಯು ಆಯಾಯಾ ವ್ಯಕ್ತಿಯ ಜೀವನ ಶೈಲಿಗೆ ಅನುಗುಣವಾಗಿರುತ್ತದೆ. ನಗರದ ಭಾಗದ ವ್ಯಕ್ತಿಗಳ ವೈರಸ್‌ಗಳು ಬ್ಯಾಕ್ಟೀರಿಯಾಡ್ಸ್ ಎಂಬ ವಿಧದ ಬ್ಯಾಕ್ಟೀರಿಯಾ ಗಳನ್ನು ಗುರಿಯಾಗಿರಿಸಿಕೊಂಡರೆ, ಪಟ್ಟಣ ಮತ್ತು ಹಳ್ಳಿಗಳಲ್ಲಿನ ವ್ಯಕ್ತಿಗಳ ವೈರಸ್‌ಗಳು ಪ್ರಿವೆಟಿಸೆ ಗುಂಪಿನ ಬ್ಯಾಕ್ಟೀರಿಯಾಗಳನ್ನು ಗುರಿಯಾಗಿರಿಸಿಕೊಳ್ಳುತ್ತವೆ.
ಹಾಗೆಯೇ ಹೆಚ್ಚಿನ ಬ್ಯಾಕ್ಟೀರಿಯೋ-ಜ್‌ಗಳು ಒಂದು ನಿರ್ದಿಷ್ಟ ಬ್ಯಾಕ್ಟೀರಿಯಾದ ಸೀಸಿಸ್ ಅನ್ನು ಗುರಿಯಾಗಿರಿಸಿಕೊಂಡರೆ ಶೇ.೩೬ಪೇಜ್‌ಗಳು ವಿವಿಧ ರೀತಿಯ ಬ್ಯಾಕ್ಟೀರಿಯಾಗಳನ್ನು ಇನ್ ಫ್ಯಾಕ್ಟ್ ಮಾಡುತ್ತವೆ ಎನ್ನಲಾಗಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ವೈರಸ್‌ಗಳು ಮನುಷ್ಯರಲ್ಲಿ ಸಿಡುಬು, ಹೆಪಟೈಟಿಸ, ಏಡ್ಸ್, ರೇಬೀಸ್ ಈ ರೀತಿಯ ಹಲವು ಕಾಯಿಲೆಗಳನ್ನು ಉಂಟು ಮಾಡುತ್ತವೆ. ಹಾಗಲ್ಲದೇ ಕಾಯಿಲೆ ಉಂಟು ಮಾಡದ ಮಿಲಿಯನ್ ಗಟ್ಟಲೆ ಮಾನವ ದೇಹದ ಹಲವೆಡೆ, ಮೂಗು ಮತ್ತು ಬಾಯಿಯ ಒಳಗಡೆ
ಹಾಗೂ ಕರುಳಿನ ಭಾಗದಲ್ಲಿರುತ್ತವೆ. ಈ ಹೆಚ್ಚಿನ ವೈರಸ್‌ಗಳಿಗೆ ಮಾನವ ದೇಹದಲ್ಲಿ ಕಾಯಿಲೆ ಉಂಟು ಮಾಡುವ ಯಾವ ಉದ್ದೇಶವೂ ಇಲ್ಲ. ಈಗಾಗಲೇ ತಿಳಿಸಿದಂತೆ ಕರುಳಿನಲ್ಲಿ ಮಿಲಿಯನ್‌ಗಟ್ಟಲೆ ಬ್ಯಾಕ್ಟೀರಿಯಾಗಳೂ ಇವೆ.
ಹಾಗೆಯೇ ಅವುಗಳನ್ನು ಆಹಾರವನ್ನಾಗಿಸಿಕೊಳ್ಳುವ ಬ್ಯಾಕ್ಟೀರಿಯೋಫೇಜ್ ಗಳೂ ಇವೆ. ಈ ಬ್ಯಾಕ್ಟೀರಿಯೋಫೇಜ್‌ಗಳ ಬಗ್ಗೆ
ಹೇಳುವುದಾದರೆ ಅವು ಎಲ್ಲಾ ಸ್ಥಳಗಳಲ್ಲೂ ಇವೆ. ಭೂಮಿಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವ ಈ ಜೀವಿಗಳು ಬಹಳ ಹಿಂದಿನಿಂದಲೂ ಇವೆ ಎನ್ನಲಾಗಿದೆ. ಹಲವು ಸಿಹಿ ನೀರಿನ ಆಕರದಲ್ಲಿ ೧ ಮಿಲಿ ಲೀಟರ್‌ನಲ್ಲಿ ೧೦ ಬಿಲಿಯನ್‌ಗಿಂತಲೂ ಅಧಿಕ ಸಂಖ್ಯೆಯಲ್ಲಿವೆ ಎನ್ನಲಾಗಿದೆ.
ಅವು ಬ್ಯಾಕ್ಟೀರಿಯಾ ವನ್ನು ಇನ್ ಫ್ಯಾಕ್ಟ್ ಮಾಡುತ್ತವೆ. ಆಗ ಬ್ಯಾಕ್ಟೀರಿಯಾಗಳಲ್ಲಿನ ಜೀವಕೋಶಗಳಲ್ಲಿ ಇವೇ ತಮಗೆ ಬೇಕಾದಂತೆ ವರ್ತಿಸುತ್ತವೆ. ಹಾಗೆಯೇ ತಮ್ಮ ಜೆನೆಟಿಕ್ ವಸ್ತುಗಳನ್ನೂ ಅಲ್ಲಿ ವೃದ್ಧಿಗೊಳಿಸಿಕೊಳ್ಳುತ್ತವೆ. ೧೯೨೦ರಿಂದ ೧೯೫೦ರ ವರೆಗೆ ವಿಜ್ಞಾನಿಗಳು ಬ್ಯಾಕ್ಟೀರಿಯಾಗಳ ಸೋಂಕಿನಲ್ಲಿ ಬ್ಯಾಕ್ಟೀರಿಯೋ -ಜ್‌ಗಳನ್ನು ಉಪಯೋಗಿಸ್ನಬಹುದಾ ಎಂದು
ಪ್ರಯತ್ನಿಸಿದರು. ಆಗ ಅವರಿಗೆ ಇದೊಂದು ಪರಿಣಾಮಕಾರಿ ಚಿಕಿತ್ಸೆಯಾಗಿಯೂ, ಪಾರ್ಶ್ವ ಪರಿಣಾಮಗಳು ಇಲ್ಲದ ಚಿಕಿತ್ಸೆ ಯಾಗಿಯೂ ಕಂಡು ಬಂದಿತು. ಆನಂತರ ಆಂಟಿಬಯೋಟಿಕ್ ಔಷಧಗಳು ಕಂಡು ಹಿಡಿಯಲ್ಪಟ್ಟಾಗ ಈ ಪೇಜ್ ಚಿಕಿತ್ಸೆ ಹಿನ್ನೆಲೆಗೆ
ಸರಿಯಿತು. ಆಗ ವಿಜ್ಞಾನಿಗಳು ಆಂಟಿಬಯೋಟಿಕ್ ಔಷಧಗಳನ್ನು ಸುಲಭವಾಗಿ ಉತ್ಪಾದಿಸಬಹುದು, ಅವು ಬ್ಯಾಕ್ಟೀರಿಯಾಗಳ ದೊಡ್ಡ ಸಮೂಹವನ್ನೇ ನಾಶಮಾಡುತ್ತವೆ.
ಆದರೆ ಇಂದಿನ ಹೈಟೆಕ್ ದಿನಗಳಲ್ಲಿಯೂ ಆಂಟಿಬಯೋಟಿಕ್‌ಗಳಿಗೆ ಬ್ಯಾಕ್ಟೀರಿಯಾಗಳು ಬಗ್ಗದಂಥ ಸ್ಥಿತಿ ಬಂದಿರುವುದರಿಂದ ಈ ಪೇಜ್ ಚಿಕಿತ್ಸೆ ಪುನಃ ಮುನ್ನೆಲೆಗೆ ಬರಬಹುದು ಎಂದು ವಿಜ್ಞಾನಿಗಳ ಅನಿಸಿಕೆ. ಈ ಫೇಜ್ ಚಿಕಿತ್ಸೆಯ ಮುಖ್ಯ ಅಂಶ ಎಂದರೆ ಅದರ ನಿರ್ದಿಷ್ಟತೆ. ಅದಕ್ಕೆ ವಿರುದ್ಧವಾಗಿ ಆಂಟಿಬಯೋಟಿಕ್‌ಗಳು ಬ್ಯಾಕ್ಟೀರಿಯಾಗಳ ದೊಡ್ಡ ಸಮೂಹವನ್ನೇ ನಾಶಪಡಿಸುತ್ತವೆ. ನಮಗೆ ನಮ್ಮ ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳ ಬಗ್ಗೆ ಗೊತ್ತಿರುವುದರಿಂದ ಈ ರೀತಿಯ ಬ್ಯಾಕ್ಟೀರಿಯಾಗಳ ನಾಶ ಒಳ್ಳೆಯದಲ್ಲ ಎಂದು ನಮ್ಮ ಭಾವನೆ.
ಅದೇ ಬ್ಯಾಕ್ಟೀರಿಯೋಫೇಜ್‌ಗಳು ಒಂದೇ ಬ್ಯಾಕ್ಟೀರಿಯಾ ಸ್ಪೀಸಿಸ್‌ನ ಒಂದು ಕಿರಿದಾದ ಸ್ಟ್ರ ನ್ ಗಳನ್ನು ಮಾತ್ರ ಗುರಿಯಾಗಿರಿಸಿ ಕೊಳ್ಳುತ್ತವೆ. ಹಾಗಾಗಿ ಅವು ಯಾವ ಬ್ಯಾಕ್ಟೀರಿಯಾಗಳು ನಮ್ಮ ಆರೋಗ್ಯಕ್ಕೆ ಹಾನಿಕಾರವೋ ಅಂತಹವನ್ನು ಮಾತ್ರ ಗುರಿಯಾಗಿರಿಸಿಕೊಂಡು ನಾಶಪಡಿಸುತ್ತವೆ. ಅವು ಸಂಪೂರ್ಣವಾಗಿ ಸೋಂಕನ್ನು ನಾಶ ಮಾಡುವವರೆಗೂ ತಮ್ಮ ಸಂಖ್ಯೆ
ಯನ್ನು ವೃದ್ಧಿಗೊಳಿಸುತ್ತಾ ಹೋಗುತ್ತವೆ. ಈ ಬ್ಯಾಕ್ಟೀರಿಯೋ-ಜ್‌ಗಳು ಮಾನವ ಜೀವನದ ಪಯಣದ ಆರಂಭದಲ್ಲಿಯೇ ಜೊತೆಗೂಡುತ್ತವೆ ಎನ್ನಲಾಗಿದೆ.
ಒಂದು ಅಧ್ಯಯನದಲ್ಲಿ ಮಗು ಜನನವಾದ ಕೂಡಲೇ ದೊರೆಯುವ ಮೆಕೋನಿಯಂ ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಆಗ ಅವುಗಳಲ್ಲಿ ವೈರಸ್‌ಗಳು ಪತ್ತೆಯಾಗಲಿಲ್ಲ. ಆದರೆ ಒಂದು ವಾರದ ನಂತರ ಪರೀಕ್ಷಿಸಲಾಗಿ ಮಗುವಿನ ಕೆಲವು ದ್ರವಗಳಲ್ಲಿ ೧೦೦ ಮಿಲಿಯನ್‌ಗೂ ಅಧಿಕ ವೈರಸ್ ಗಳಿರುವುದು ಗೊತ್ತಾಯಿತು. ಅದರಲ್ಲಿ ಹೆಚ್ಚಿನವುಬ್ಯಾಕ್ಟೀರಿಯೋ-ಜ್‌ಗಳು. ಹಾಗಾಗಿ ಈ ವೈರಸ್‌ಗಳು ಮಾನವನ ನಿಜವಾದ ಸಂಗಾತಿ ಎಂದು ಹೇಳಲಾಗಿದೆ.
ಪ್ರತಿಯೊಬ್ಬ ಮನುಷ್ಯನಲ್ಲಿಯೂ ನಿರ್ದಿಷ್ಟವಾಗಿ ಬೇರೆ ಬೇರೆ ರೀತಿಯ ಬ್ಯಾಕ್ಟೀರಿಯೋಫೇಜ್‌ಗಳು ಇರುತ್ತವೆ. ಅವುಗಳಿಗೆ -ಗಿಯೋಮ್ ಎನ್ನುತ್ತಾರೆ. ಒಂದೇ ರೀತಿಯ ಆಹಾರ ಕ್ರಮ ಇರುವ ವ್ಯಕ್ತಿಗಳು ಒಂದೇ ರೀತಿಯ -ಗಿಯೋಮ್ ಹೊಂದಿರುವ
ಸಾಧ್ಯತೆ ಇದೆ. ಹಾಗಿದ್ದರೂ ಪ್ರತಿಯೊಬ್ಬ ವ್ಯಕ್ತಿಯ -ಗಿಯೋಮ್ ಭಿನ್ನವಾಗಿರುತ್ತದೆ ಎನ್ನಲಾಗಿದೆ. ಸಾಮಾನ್ಯವಾಗಿ ಮೊದಲು ತಿಳಿಸಿದಂತೆ ಬ್ಯಾಕ್ಟೀರಿಯೋಫೇಜ್‌ಗಳು ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸುತ್ತವೆ.
ಆದರೆ ಇವು ಕೆಲವೊಮ್ಮ ಬ್ಯಾಕ್ಟೀರಿಯಾಗಳಿಗೆ ಪೂರಕವಾಗಿಯೂ ವರ್ತಿಸುತ್ತವೆ. ಮನುಷ್ಯನ ಕರುಳಿನಲ್ಲಿ ಈ ಬ್ಯಾಕ್ಟೀರಿಯೋಫೇಜ್‌ಗಳು ಪ್ರೊಫೇಜಸ್ ರೀತಿಯಲ್ಲಿ ಇರುತ್ತವೆ. ಅವುಗಳ ಜೆನೆಟಿಕ್ ಕೋಡ್ ಬ್ಯಾಕ್ಟೀರಿಯಾದ ಜೀನೋಮ್‌ಗಳಲ್ಲಿ
ಒಳಗೊಂಡಿರುತ್ತದೆ. ಈ ಹಂತದಲ್ಲಿ ಅವನ್ನು ಸಶಕ್ತೀಕರಿಸಿದರೆ ಬ್ಯಾಕ್ಟೀರಿಯೋಫೇಜ್‌ಗಳಾಗಿ ಬದಲಾಗುತ್ತವೆ. ಈ ರೀತಿಯ ಹಂತದಲ್ಲಿ ಅವು ಬ್ಯಾಕ್ಟೀರಿಯಾಗಳಿಗೆ ಹಾನಿಕಾರಕವಾಗಿ ವರ್ತಿಸುವುದಿಲ್ಲ. ಅವು ಪರಸ್ಪರ ಪೂರಕವಾಗಿ ಅವಲಂಬಿಗಳಾ ಗಿರುತ್ತವೆ.
ಬ್ಯಾಕ್ಟೀರಿಯಾಗಳು ತಮ್ಮ ಜೆನೆಟಿಕ್ ಕೋಡ್‌ಗಳನ್ನು ಬದಲಾಯಿಸಿಕೊಳ್ಳಲು ಶಕ್ತವಾಗಿರುವುದರಿಂದ ಪ್ರೊಫೇಜ್‌ಗಳ ಜೆನೆಟಿಕ್ ಕೋಡ್‌ಗಳು ಸಹಿತ ಬ್ಯಾಕ್ಟೀರಿಯಾಗಳ ಜತೆಗೆ ಬದಲಾಯಿಸಿ ಕೊಳ್ಳಬಹುದು. ಹಾಗಾಗಿ ಆಂಟಿಬಯೋಟಿಕ್ ರೆಸಿಸ್ಟನ್ಸ್, ವಿರುಲೆನ್ಸ್, ಬೇರೆ ಬೇರೆ ಬ್ಯಾಕ್ಟೀರಿಯಾಗಳ ಮೆಟಬಾಲಿಕ್ ಪಾಥ್ ವೇಸ್‌ಗಳ ಜೀನ್ ಗಳನ್ನು ಬದಲಿಸಿಕೊಳ್ಳಬಹುದು. ಇದು ಹಲವು ಬ್ಯಾಕ್ಟೀರಿಯಾ ಗಳ ವಂಶಗಳಿಗೆ ವರದಾನವಾಗಿ ಪರಿಣಮಿಸಬಹುದು. ಪ್ರೋಫೇಜಸ್‌ಗಳು ತಮ್ಮ ಬ್ಯಾಕ್ಟೀರಿಯಾಗಳ ಜತೆ ಸಹಜೀವನ ನಡೆಸುವುದರಿಂದ ಅವು ಕೊನೆಯಲ್ಲಿ ಮಾನವನಿಗೆ ಸಹಾಯಕವಾಗಿಯೇ ಇರುತ್ತವೆ.
ಈ ಪ್ರೊಫೇಜಸ್‌ಗಳು ಸಕ್ರಿಯವಾದಾಗ – ಅದರಲ್ಲಿಯೂ ಮನುಷ್ಯನಿಗೆ ಒತ್ತಡದ ಸನ್ನಿವೇಶ ಬಂದಾಗ, ಹಾಗಲ್ಲದೇ ಬ್ಯಾಕ್ಟೀರಿಯವು ಅಪಾಯದ ಸ್ಥಿತಿಯಲ್ಲಿದ್ದಾಗ ಅವು ಕರುಳಿನ ಮೈಕ್ರೋಬಿಯಲ್ ಕಮ್ಯುನಿಟಿಯಲ್ಲಿ ಅಗಾಧವಾದ ಬದಲಾವಣೆ ಉಂಟು
ಮಾಡಬಲ್ಲದು. ಅಪಾಯವಲ್ಲದ ಪ್ರೊಫೇಜ್ ಲೈಟಿಕ್ -ಜ್‌ಗೆ ಬದಲಾದಾಗ ಕರುಳಿನ ಹಲವಾರು ಬ್ಯಾಕ್ಟೀರಿಯಾಗಳ ಕುಲಗಳನ್ನೇ ನಾಶಪಡಿಸಬಹುದು. ಆಗ ಕರುಳಿನಲ್ಲಿನ ಕೆಟ್ಟ ಬ್ಯಾಕ್ಟೀರಿಯಾಗಳು ಸಜೀವವಾಗಿ ವೃದ್ಧಿಸುತ್ತವೆ.
ಇದನ್ನು ವೈದ್ಯಕೀಯ ಭಾಷೆಯಲ್ಲಿ ಕಮ್ಯುನಿಟಿ ಸ್ಥಾನಪಲ್ಲಟ ಎನ್ನುತ್ತಾರೆ. ಇದು ಕರುಳಿನಲ್ಲಿ ಮೈಕ್ರೋಬಿಯಲ್‌ಗಳಲ್ಲಿ ಅಸಮತೋಲನ ಉಂಟುಮಾಡುತ್ತದೆ. ಈ ರೀತಿಯ ಅಸಮತೋಲನವು ಹಲವು ಕರುಳಿನ ಕಾಯಿಲೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಮುಖ್ಯವಾಗಿ ಕರುಳಿನಲ್ಲಿನ ಉರಿಯೂತದ ಕಾಯಿಲೆ, ಸುದೀರ್ಘ ಸುಸ್ತಿನ ಕಾಯಿಲೆ (Chronic fatigue Syndrome), ಸ್ಥೂಲ ಕಾಯ, ಕ್ಲಾಸ್ಟ್ರೀಡಿಯಂ ಢಿಫಿಸಿಯ ಸೋಂಕು ಮತ್ತು ಕೋಲೈಟಿಸ್ (ಕರುಳಿನ ಉರಿಯೂತದ ಕಾಯಿಲೆ).
ಈ ಎಲ್‌ಆ ಕಾಯಿಲೆಗಳಲ್ಲಿ ಬ್ಯಾಕ್ಟೀರಿಯೋ ಫೇಜ್‌ಗಳ ಪಾತ್ರದ ಬಗ್ಗೆ ಸಂಶೋಧಕರಿಗೆ ಸರಿಯಾದ ಮಾಹಿತಿಯಿಲ್ಲ. ಅವು ಹಲವು ರೀತಿಯಲ್ಲಿ ಆಗುವ ಸಾಧ್ಯತೆ ಇದೆ ಎಂದು ಒಂದು ರೀತಿಯ ನಂಬಿಕೆ ಮತ್ತು ಊಹೆ. ಸಂಶೋಧಕರು ಹಲವು ಭಿನ್ನ ಕಾಯಿಲೆ ಗಳಾದ ಟೈಪ್ ೨ ರೀತಿಯ ಡಯಾಬಿಟಿಸ್, ಮಾನಸಿಕ ಕಾಯಿಲೆ ಸ್ಕಿಜೋಫೇನಿಯಾ, ಮಾನಸಿಕ ಖಿನ್ನತೆ, ಆತಂಕದ ಕಾಯಿಲೆ, ಪಾರ್ಕಿನ್ಸನ್ ಕಾಯಿಲೆ – ಈ ರೀತಿಯ ಕಾಯಿಲೆಗಳಲ್ಲಿ ಕರುಳಿನ ಬ್ಯಾಕ್ಟೀರಿಯಾಗಳಲ್ಲಿ ತೀವ್ರ ರೀತಿಯ ಬದಲಾವಣೆಗಳನ್ನು ಕಂಡುಕೊಂಡಿದ್ದಾರೆ.
ನಮ್ಮ ಕರುಳಿನಲ್ಲಿ ಬ್ಯಾಕ್ಟೀರಿಯಾ ಗಳಿಗಿಂತ ಬ್ಯಾಕ್ಟೀರಿಯೋಫೇಜ್ ಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅಲ್ಲದೆ ಈ ಫೇಜ್‌ಗಳಿಗೆ ವೃದ್ಧಿಗೊಳ್ಳಲು ಈ ಬ್ಯಾಕ್ಟೀರಿಯಾಗಳ ಅವಶ್ಯಕತೆ ಇದ್ದೇ ಇದೆ. ಹಾಗಾಗಿ ಕರುಳಿನ ಯಾವುದೇ ಬದಲಾವಣೆ ಯಲ್ಲಿಯೂ ಈ
ಬ್ಯಾಕ್ಟೀರಿಯೋ-ಜ್‌ಗಳು ಒಳಗಾಗುತ್ತವೆ. ಕರುಳಿನ ಬದಲಾವಣೆಯನ್ನೇ ಈ ಬ್ಯಾಕ್ಟೀರಿಯೋಫೇಜ್‌ಗಳು ಉಂಟು ಮಾಡಲಾರವು. ಆದರೆ ಬ್ಯಾಕ್ಟೀರಿಯಾಗಳಲ್ಲಿ ಆಗುವ ಬದಲಾವಣೆ ಗಳಿಂದ ಬ್ಯಾಕ್ಟೀರಿಯೋಫೇಜಸ್ ನ ಜನಸಂಖ್ಯೆ ಸಣ್ಣ ರೀತಿಯ ಬದಲಾವಣೆ ಗಳನ್ನಾದರೂ ಹೊಂದಿಯೇ ಹೊಂದುತ್ತವೆ.
ಒಂದು ಕಾಯಿಲೆಯ ಮುಖ್ಯ ಕಾರಣ ಇದು ಆಗದಿದ್ದರೂ ಈ ರೀತಿಯ ಬದಲಾವಣೆಯನ್ನು ಗಮನಿಸುವುದು ಹಲವು ಸಂದರ್ಭ
ಗಳಲ್ಲಿ ಮುಖ್ಯವಾಗುತ್ತದೆ. ಕೆಲವು ಕಾಯಿಲೆ ಗಳಲ್ಲಿ ಉದಾಹರಣೆಗೆ ಕರುಳಿನ ಉರಿಯೂತದ ಕಾಯಿಲೆ ಯಲ್ಲಿ ವಿಜ್ಞಾನಿಗಳು ಕಾಯಿಲೆಗೆ ತಕ್ಕ ರೀತಿಯ ಬದಲಾವಣೆಯನ್ನು ಈ ಫೇಜ್‌ಗಳಲ್ಲಿ ಕಂಡುಕೊಂಡಿದ್ದಾರೆ.
ಈ ಕಾಯಿಲೆ ಸ್ಪಷ್ಟವಾಗಿ ಪತ್ತೆ ಹಚ್ಚಲು ತುಂಬಾ ಕಷ್ಟ. ಬ್ಯಾಕ್ಟೀರಿಯಾಗಳ ಬಗ್ಗೆ ತಿಳಿಯಬೇಕಾದರೆ ಅವುಗಳ ಸರಿಯಾದ ಜೆನೆಟಿಕ್ ಮಾಹಿತಿಯನ್ನು ವಿಜ್ಞಾನಿಗಳಿಗೆ ಕಂಡುಕೊಳ್ಳಲು ಸಾಧ್ಯ. ಆದರೆ ವೈರಸ್‌ಗಳ ಬಗ್ಗೆ ತಿಳಿಯಬೇಕಾದರೆ ಅವು ಬ್ಯಾಕ್ಟೀರಿಯಾಗಳಂತೆ ನಿರ್ದಿಷ್ಟ ಜೀನ್‌ಗಳನ್ನು ಶೇರ್ ಮಾಡದೆ ಇರುವುದರಿಂದ ಅವುಗಳ ಅಧ್ಯಯನ ತುಂಬಾ ಕಷ್ಟ ಎನ್ನಲಾಗಿದೆ.
ಈಗಿರುವ ಜ್ಞಾನದ ಪ್ರಕಾರ ಮಾನವನ ಆರೋಗ್ಯ ಮತ್ತು ವಿವಿಧ ಕಾಯಿಲೆಗಳ ಸಂದರ್ಭಗಳಲ್ಲಿ ವೈರಸ್ ಪಾತ್ರ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂಬುದು ವಿಜ್ಞಾನಿಗಳ ಅಭಿಮತ.