Sunday, 15th December 2024

ವಿಷ್ಣು ಪುರಾಣ; 20 ವರ್ಷ ಜೈಲಲ್ಲಿ ಕಳೆದು ಹೈರಾಣ

ನಾಡಿಮಿಡಿತ

ವಸಂತ ನಾಡಿಗೇರ 

ವಿಷ್ಣು ತಿವಾರಿ. ಯಾರಿವನು ಎಂದಿರಾ? ವಿಐಪಿ ಅಲ್ಲ. ಖ್ಯಾತನೂ ಅಲ್ಲ, ಕುಖ್ಯಾತನೂ ಅಲ್ಲ. ಒಬ್ಬ ಬಡಪಾಯಿ. ಬಡವರಿ ಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯ ಎಂಬ ಮಾತಿಗೆ ಅನ್ವರ್ಥಕ ನಾದಂಥವ. ಜೀವಂತ ಉದಾಹರಣೆ.

ಇಷ್ಟಕ್ಕೂ ಯಾರೀತ? ಈತನ ಕಥೆ ಕೇಳಿದರೆ ಕರುಳು ಕಿತ್ತು ಬರುವಂತೆ, ಕಣ್ಣೀರು ಹರಿಯುವಂತಿದೆ. ಅದಕ್ಕಿಂತ ಹೆಚ್ಚಾಗಿ ನಮ್ಮ ವ್ಯವಸ್ಥೆಯ ಬಗ್ಗೆ ಬ್ರಹ್ಮಾಂಡ ಕೋಪ ಬರುವಂತಿದೆ. ಇಂಥ ಲಕ್ಷಾಂತರ ಬಡವರ, ಬಡಪಾಯಿಗಳ, ಬಾಯಿ ಸತ್ತವರ,  ಅಸಹಾಯ ಕರ ಪ್ರತಿನಿಧಿಯಂತಿದ್ದಾನೆ ಈ ತಿವಾರಿ. ಇನ್ನೂ ಹೆಚ್ಚು ಬಣ್ಣಿಸುವುದಕ್ಕಿಂತ ಆತನ ಕರುಣಾಜನಕ ಕಥೆಯನ್ನೊಮ್ಮೆ ನೋಡಿದರೆ ನಿಮಗೇ ಗೊತ್ತಾಗುತ್ತದೆ.

ವಿಷ್ಣು ತಿವಾರಿ ಉತ್ತರಪ್ರದೇಶದ ಲಲಿತ್‌ಪುರ ಜಿಲ್ಲೆಯೆ ಸಿಲಾವನ್ ಎಂಬ ಹಳ್ಳಿಯಲ್ಲಿ ಹುಟ್ಟಿ ಬೆಳೆದವನು. ಸ್ಥಿತಿವಂತ ಕುಟುಂಬ ವೇನೂ ಅಲ್ಲ. ಒಂದಷ್ಟು ಜಮೀನು, ಹಳೆಯ ಮನೆ ಒಂದೆರಡು ಹಸು ಕರು ಇದ್ದವು. ಹೇಗೋ ಜೀವನ ನಡೆಯುತ್ತಿತ್ತು. ಆದರೆ 23ನೇ ವಯಸ್ಸಿನಲ್ಲಿ, ಅಂದರೆ 2000ರಲ್ಲಿ ನಡೆದ ಘಟನೆಯೊಂದು ಆತನ ಜೀವನದ ದಿಕ್ಕನ್ನೇ ಬದಲಿಸಿತು. ಕತ್ತಲೆಯ ಕೂಪಕ್ಕೆ ತಳ್ಳಿತು. ಬದುಕನ್ನೇ ಬರಬಾದ್ ಮಾಡಿತು.

ಅದೇ ಗ್ರಾಮದ ಮಹಿಳೆ, ಆಕೆಯ ಗಂಡ ಹಾಗೂ ಮಾವ ಸೇರಿಕೊಂಡು ತಿವಾರಿ ಮೇಲೆ ಪೊಲೀಸ್ ಠಾಣೆಯಲ್ಲಿ ದೂರೊಂದನ್ನು ನೀಡಿದರು. ಅದೂ ಎಂಥಾ ದೂರು ಅಂತೀರಾ? ಆ ಮಹಿಳೆಯ ಮೇಲೆ ತಿವಾರಿ ಲೈಂಗಿಕ ದೌರ್ಜನ್ಯ ನಡೆಸಿ ಅತ್ಯಾಚಾರ ಎಸಗಿ ಹಾಗೂ ಥಳಿಸಿದ ಆರೋಪ. ಆಗ ಆಕೆ ಐದು ತಿಂಗಳ ಗರ್ಭಿಣಿ ಯಾಗಿದ್ದಳಂತೆ. ಪೊಲೀಸರು ದೂರು ಸ್ವೀಕರಿಸಿದರು. ಅನಂತರ ಆತನ ಮೇಲೆ ಅತ್ಯಾಚಾರ, ಎಸ್‌ಸಿ ಎಸ್‌ಟಿ ಕಾಯಿದೆ ಅನ್ವಯ ದೌರ್ಜನ್ಯ ಮೊದಲಾದ ಕೇಸುಗಳನ್ನು ಜಡಿಯಲಾಯಿತು.

ತಿವಾರಿ ಹೇಗೋ ಜಾಮೀನು ಪಡೆದನಾದರೂ 2001ರಲ್ಲಿ ಪೊಲೀಸರು ಪುನಃ ಬಂಧಿಸಿದರು. ಎರಡು ವರ್ಷ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ಕಳೆದ. ಬಳಿಕ ವಿಚಾರಣೆ ನಡೆಸಿದ ಲಲಿತಪುರ ವಿಚಾರಣಾ ನ್ಯಾಯಾಲಯವು ಆತನ ಮೇಲಿದ್ದ ಎಲ್ಲ
ಆರೋಪಗಳೂ ಸಾಬೀತಾಗಿವೆ ಎಂದು ತೀರ್ಪಿತ್ತಿತು. ಪರಿಣಾಮ 2003ರಲ್ಲಿ ಜೀವಾವಧಿ ಶಿಕ್ಷೆ ಜಾರಿಗೊಳಿಸಿತು. ಆ ಪ್ರಕಾರ ಆತ ಆಗ್ರಾದ ಜೈಲಿನಲ್ಲಿ ಶಿಕ್ಷೆ ಆರಂಭಿಸಿದ. ಎಲ್ಲರಿಗೂ ಆಗುವಂಥದ್ದೇ.

ನ್ಯಾಯಾಂಗ ವ್ಯವಸ್ಥೆಯಲ್ಲಿ ಇದೆಲ್ಲ ನಡೆಯುತ್ತಿರುತ್ತದೆ. ಇದರಲ್ಲೆನು ವಿಶೇಷ ಎಂದು ನೀವು ಕೇಳಬಹುದು. ವಿಶೇಷ ಇದೆ. ಅದೇನೆಂದರೆ ಮೊನ್ನೆ ಮೊನ್ನೆ, ಅಂದರೆ 2021ರಲ್ಲಿ ಆತನನ್ನು ನಿರ್ದೋಷಿ ಎಂದು ಅಲಹಾಬಾದ್ ಹೈಕೋರ್ಟ್ ಸಾರಿದೆ! ಇಪ್ಪತ್ತು ವರ್ಷಗಳ ಸುಖಾಸುಮ್ಮನೆ ಜೈಲು ವಾಸದ ಬಳಿಕ ತಿವಾರಿ ಇದೀಗ ಬಿಡುಗಡೆಯಾಗಿದ್ದಾನೆ. ಇದನ್ನು ಬಿಡುಗಡೆಯ ಭಾಗ್ಯ
ಎಂದು ಹೇಗೆ ಹೇಳುವುದು? ನಿಜಕ್ಕೂ ಇದು ದೌರ್ಭಾಗ್ಯ ವ್ಯವಸ್ಥೆಯ ಕ್ರೂರ ವ್ಯಂಗ್ಯ.

ತಾನು ಅಮಾಯಕ. ನಿರಪರಾಧಿ ಎಂದು ಗೊತ್ತಿದ್ದರೂ, ಸಂಚು, ವಂಚನೆಗೆ ಬಲಿಯಾಗಿರುವುದು ಗೊತ್ತಿದ್ದರೂ ತಿವಾರಿ ಏನೂ ಮಾಡಲಿಲ್ಲವೆ ಎಂಬ ಪ್ರಶ್ನೆ ಎದುರಾಗುತ್ತದೆ. ನಿಜ ಸಂಗತಿ ಏನೆಂದರೆ, ಆತ ಸುಮ್ಮನೆ ಕೂತಿರಲಿಲ್ಲ. ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ 2005ರಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಆದರೆ ದೋಷಪೂರಿತ ವಾಗಿದೆ ಎಂಬ ಕಾರಣ ನೀಡಿ ಕೋರ್ಟು ಈ ಅರ್ಜಿಯನ್ನು ತಿರಸ್ಕರಿಸಿತು. ಅಂದರೆ ಎಲ್ಲ ಅಗತ್ಯ ಮತ್ತು ಸೂಕ್ತ ದಾಖಲೆಗಳನ್ನು ಲಗತ್ತಿಸಿಲ್ಲ ಎಂಬುದು ಕೋರ್ಟ್ ನೀಡಿದ ಕಾರಣ.

ಮುಂದಿನ 16 ವರ್ಷಗಳ ಕಾಲ ಇದೇ ತಾಂತ್ರಿಕ ಅಂಶದ ಮೇಲೆ ಅವನ ಅರ್ಜಿ ಎಲ್ಲಿತ್ತೋ ಅಲ್ಲಿಯೇ ಕೊಳೆಯುತ್ತ ಬಿದ್ದಿತ್ತು. ಆತನೂ ಜೈಲಿನಲ್ಲಿ ಕೊಳೆಯುತ್ತಿದ್ದ. ತನ್ನವರೆಂಬುವವರು ಯಾರೂ ಇಲ್ಲದ  ಕಾರಣ ಮತ್ತೆ ಮತ್ತೆ ಅರ್ಜಿ ಸಲ್ಲಿಸಿ, ಫಾಲೋ ಅಪ್
ಮಾಡುವುದೂ ಸಾಧ್ಯವಾಗಲಿಲ್ಲ. ಕೊನೆಗೆ ಜೈಲಿನ ಮುಖಾಂತರವೇ ಅರ್ಜಿಯು ಅಲಹಾಬಾದ್ ಹೈಕೋರ್ಟ್ ತಲುಪಿದ್ದು. ಇದನ್ನು ಕೋರ್ಟ್ ಕೂಡ ಪ್ರಸ್ತಾಪಿಸಿದೆ. ಒಂದು ಅರ್ಜಿಯು ತಾಂತ್ರಿಕ ಕಾರಣದಿಂದ ವಿಚಾರಣೆಯಾಗದೆ ಉಳಿದಿದ್ದು ಹಾಗೂ ಆರೊಪಿಗೆ ಅರ್ಜಿ ಹಾಕಲು ಯಾರೂ ಸಿಗದೆ ಕೊನೆಗೆ ಜೈಲಿನ ಮೂಲಕವೇ ಸಲ್ಲಿಸಬೇಕಾದುದು ದೌರ್ಭಾಗ್ಯ ಎಂದು ಅದು ವಿಷಾದ ವ್ಯಕ್ತಪಡಿಸಿದೆ.

ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂಬ ಆ ಮಹಿಳೆಯ ವಾದದಲ್ಲಿ ಹುರುಳಿಲ್ಲ ಹಾಗೂ ಅದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಕ್ಕೆ ಯಾವ ಕುರುಹೂ ಇಲ್ಲ. ಅಲ್ಲದೆ
ವೈದ್ಯರೂ ಕೂಡ ತಮ್ಮ ವೈದ್ಯಕೀಯ ಪ್ರಮಾಣಪತ್ರದಲ್ಲಿ ಇದನ್ನು ತಿಳಿಸಿದ್ದಾರೆ. ಇದರ ಜತೆಗೆ ತನ್ನನ್ನು ಥಳಿಸಲಾಯಿತು,
ಹಲ್ಲೆ ನಡೆಸಲಾಯಿತು ಎಂಬ ಆರೋಪವೂ ನಿಜವಲ್ಲ ಎಂದಿದೆ.

ಬಹುಶಃ ಭೂ ವಿವಾದವೇ ಇದಕ್ಕೆಲ್ಲ ಕಾರಣವಾಗಿದ್ದು ಆ ಮಹಿಳೆ ಹಾಗೂ ಆಕೆಯ ಮನೆಯವರು ನಾನಾ ಕಾಯಿದೆಗಳ
ದುರ್ಬಳಕೆ ಮಾಡಿಕೊಂಡು ಅಮಾಯಕನಿಗೆ ಶಿಕ್ಷೆಯಾಗುವಂತೆ ನೋಡಿಕೊಂಡಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ವಿಷ್ಣು ತಿವಾರಿ ಹೇಳಿದ್ದು ಹಾಗೂ ಈಗಲೂ ಹೇಳುವುದೂ ಇದನ್ನೇ. ‘ನಮ್ಮ ಹಾಗೂ ಅವರ ಕುಟುಂಬದ ನಡುವೆ ಜಮೀನು ಮತ್ತು ದನಕರುಗಳ ವಿಚಾರದಲ್ಲಿದ್ದ ವಿರಸ, ವೈಷಮ್ಯ ಇತ್ತು. ಆದರೆ ಅಸಲಿಗೆ ನಾನು ಆ ಮಹಿಳೆಯೊಡನೆ ಮಾತು ಕೂಡ ಆಡಿಲ್ಲ. ಅವಳನ್ನು ‘ಬಹು’ ಎಂದು ಮಾತ್ರ ಬಲ್ಲೆ.

ಎಸ್‌ಸಿ, ಎಸ್‌ಟಿ ಕಾಯಿದೆಯ ಮೂಲಕ ಹಣ ಕೀಳಲು ಅವರು ಬಯಸಿದ್ದರು. ಅವರ ಈ ದುರಾಸೆ, ದುರ್ಬುದ್ಧಿ, ದುರುದ್ದೇಶ ಮತ್ತು ಕುತಂತ್ರಕ್ಕೆ ನಾನು ಬಲಿಯಾಗಬೇಕಾಯಿತು. ಈ ದುಷ್ಟರ ಸೇಡು ಮತ್ತು ಕೇಡಿಗಾಗಿ ನಾನು ಕಾರಣವಿಲ್ಲದೆ, ನನ್ನದಲ್ಲದ ತಪ್ಪಿಗೆ 20 ವರ್ಷ ಜೈಲಿನಲ್ಲಿರಬೇಕಾಯಿತು’ ಎನ್ನುತ್ತಾನೆ. ‘ನನಗೀಗ 43 ವರ್ಷ ವಯಸ್ಸು. ಜೀವನದ ಮುಖ್ಯ ಕಾಲಘಟ್ಟ ಕಳೆದುಹೋಗಿದೆ.

20 ಸುದೀರ್ಘ ವರ್ಷಗಳನ್ನು ಜೈಲಿನ ನಾಲ್ಕು ಗೋಡೆಗಳ ಒಳಗೇ ಕಳೆದಿದ್ದೇನೆ. ನನ್ನೆಲ್ಲ ಕನಸುಗಳು, ಜೀವನದ ಉದ್ದೇಶಗಳು ಸತ್ತುಹೋಗಿವೆ. ನನ್ನ ಬದುಕು ಅರ್ಥ ಕಳೆದುಕೊಂಡಿದೆ. ನಾನೀಗ ಯಾರಿಗಾಗಿ, ಯಾಕಾಗಿ ಬದುಕಿರಲಿ?’ ಎಂದು ಕೇಳುವಾಗ ಆತ ಜೈಲಿನಲ್ಲಿ ಎಷ್ಟು ಸಂಕಟ, ಸಂಕಷ್ಟ ಅನುಭವಿಸಿರಬೇಕು ಎಂಬುದರ ಅರಿವಾಗುತ್ತದೆ. ಗಾಯದ ಮೇಲೆ ಬರೆ ಎಳೆದಂತೆ ಆತನ
ಕುಟುಂಬದ ಎಲ್ಲ ಸದಸ್ಯರೂ ಈಗ ಮೃತಪಟ್ಟಿದ್ದಾರೆ. ಅರ್ಜಿ ಸಲ್ಲಿಸಲು ಅವನ ಕಡೆಯವರು ಎಂಬುವವವರು ಯಾರೂ
ಇರಲಿಲ್ಲ ಎಂಬುದು ಈ ಕಾರಣಕ್ಕೇ. ತಂದೆ ರಾಮೇಶ್ವರ ತಿವಾರಿ 2013ರಲ್ಲಿ ನಿಧನ ಹೊಂದಿದರು.

ಮರುವರ್ಷ ತಾಯಿಯೂ ತೀರಿಹೋದಳು. ಇಬ್ಬರು ಸೋದರರು ಸಹ ಹೃದಯಾಘಾತಕ್ಕೆ ಬಲಿಯಾದರು. ಯಾರೊಬ್ಬರ ಅಂತ್ಯಸಂಸ್ಕಾರದಲ್ಲೂ ವಿಷ್ಣು ಭಾಗಿಯಾಗಲಿಲ್ಲ. ಅಥವಾ ಅದು ಸಾಧ್ಯವಾಗಲಿಲ್ಲ. ‘ನಿಧನರಾದ ತನ್ನ ತಂದೆ ತಾಯಿಯರ ಮುಖವನ್ನು ಕೊನೆಯ ಬಾರಿಗೆ ನೋಡುವ ಭಾಗ್ಯವೂ ಸಿಗಲಿಲ್ಲ. ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಅಂತ್ಯಸಂಸ್ಕಾರ
ಮಾಡಲಾಗಲಿಲ್ಲ. ಒಬ್ಬ ಮಗನಿಗೆ ಇದಕ್ಕಿಂತ ದೊಡ್ಡ ದೌರ್ಭಾಗ್ಯ ಬೇರೇನಿದೆ’ ಎಂದು ವಿಷ್ಣು ಹೇಳುವಾಗ ಎಂಥವರಿಗೂ ಬೇಜಾರಾಗುತ್ತದೆ. ಆತನ ಜೈಲಿನ ದಿನಗಳ ಕಥೆಯನ್ನು ಕೇಳಿದರೆ ಕರುಳು ಮತ್ತೂ ಚುರ್ ಎನ್ನುತ್ತದೆ.

ಇವನ ಕಥೆಯನ್ನೇ ಇಟ್ಟುಕೊಂಡು ಒಂದು ಸಿನಿಮಾ ಮಾಡುವಷ್ಟು ಹೃದ್ಯವಾಗಿದೆ. ’ನಾನು ಅನಕ್ಷರಸ್ಥ. ಓದು ಬರಹ ಕಲಿತಿಲ್ಲ. ನನ್ನ ಮನೆಯವರು ಅಗಾಗ ಬರೆಯುತ್ತಿದ್ದ ಪತ್ರಗಳನ್ನು ಓದಿಸಿ ಸಮಾಚಾರ ತಿಳಿದುಕೊಳ್ಳುತ್ತಿದ್ದೆ ಅಷ್ಟೆ. ಆದರೆ ನನಗೆ
ಬೇಕಾದಾಗ, ಅಂದರೆ ನನ್ನ ಅಪ್ಪ ಅಮ್ಮ ತೀರಿಕೊಂಡಾಗ, ಮನೆಗೆ ಒಂದು ಫೋನ್ ಕಾಲ್ ಕೂಡ ಮಾಡುವುದು ನನಗೆ ಸಾಧ್ಯ ವಾಗಲಿಲ್ಲ’ ಎಂದು ವಿಷ್ಣು ಹೇಳುವಾಗ ಅವನಿಗೆ ಆಗ ಆಗಿದ್ದ ಮಾನಸಿಕ ಹಿಂಸೆಯ ಚಿತ್ರಣ ಕಣ್ಮುಂದೆ ಬರುತ್ತದೆ.

ಜೈಲಿನಲ್ಲಿ ಕಳೆದ ಒಂದೊಂದು ದಿನವೂ ಮಾನಸಿಕವಾಗಿ, ದೈಹಿಕವಾಗಿ ಅವನನ್ನು ಎಷ್ಟೊಂದು ಜರ್ಜರಿತ ಮಾಡಿದೆ
ಎಂಬುದನ್ನು ವಿಷ್ಣುವಿನ ಮಾತುಗಳಲ್ಲೇ ಕೇಳಬೇಕು. ‘ನನ್ನ ಸೆಲ್ಲಿನ ಗೋಡೆಯ ಮೇಲೆ ಗೆರೆ ಎಳೆಯುವ ಮೂಲಕ ದಿನ  ಎಣಿಸುತ್ತಿದ್ದೆ. ಆದರೆ ದಿನ ವಾರವಾಗಿ, ವಾರ ತಿಂಗಳಾಗಿ, ತಿಂಗಳು ವರ್ಷಗಳಾದಂತೆ ಅದನ್ನೂ ಬಿಟ್ಟುಬಿಟ್ಟೆ. ಏಕೆಂದರೆ ಇದು ನನ್ನನ್ನು ಖಿನ್ನತೆಗೆ ದೂಡುತ್ತಿತ್ತು. ಚಿಂತೆ, ನಿರಾಶೆಯಿಂದ ಮೊದಮೊದಲು ನಿದ್ದೆಯೇ ಬರುತ್ತಿರಲಿಲ್ಲ. ಆದರೆ ದೇಹವನ್ನು
ದಣಿಸುತ್ತ, ದಂಡಿಸುತ್ತ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡೆ.

ಜೈಲಿನಲ್ಲಿ ಹೀಗೆ ಅನಿರ್ದಿಷ್ಟ ಕಾಲ ಬಂದಿಯಾಗಿರುವುದಕ್ಕಿಂತ ಸಾಯುವುದೇ ಮೇಲೆ ಎಂದು ಅನೇಕ ಬಾರಿ ಅನಿಸಿದ್ದುಂಟು.
ಆದರೆ ‘ಮಾತಾ ರಾಣಿ’ ಆಗಾಗ ನನ್ನ ಕನಸಿನಲ್ಲಿ ಬಂದು, ನಿರಾಶನಾಗದಂತೆ ಧೈರ್ಯ ತುಂಬುತ್ತಿದ್ದಳು. ಆದರೂ ಬಾರಿ
ಬಾರಿ ನನಗೆ ಉಸಿರುಗಟ್ಟಿದಂತಾಗುತ್ತಿತ್ತು. ಚೀರುತ್ತಿದ್ದೆ, ಕೂಗುತ್ತಿದ್ದೆ, ಅಳುತ್ತಿದ್ದೆ. ಆದರೆ ಆ ಅಳಲು ಕೊನೆಗೊಳ್ಳುತ್ತಿರಲಿಲ್ಲ. ಸಾಯಬೇಕು ಎಂದು ಮತ್ತೆ ಮತ್ತೆ ಅನಿಸುತ್ತಿತ್ತು ಹಾಗೂ ಆ ನಿಟ್ಟಿನಲ್ಲಿ ಪದೇ ಪದೆ ಯೋಚನೆ ಬರುತ್ತಿತ್ತು. ಈ 20 ವರ್ಷಗಳಲ್ಲಿ ಅದೆಷ್ಟು ಬಾರಿ ಸತ್ತು ಬದುಕಿದ್ದೇನೋ ನನಗೇ ಗೊತ್ತಿಲ್ಲ. ಅಥವಾ ಬದುಕಿದ್ದೂ ನಾನು ಸತ್ತಿದ್ದೆ’.

ಈ ಎಲ್ಲ ಘಟನೆಗಳ ಬಳಿಕ ಆತನ ಕುಟುಂಬದ ಆರ್ಥಿಕ ಸ್ಥಿತಿಯೂ ಹದಗೆಟ್ಟಿತು. ‘ನಮ್ಮ ಬಳಿ ಆರು ಎಮ್ಮೆಗಳಿದ್ದವು. ಈಗ ಒಂದೂ ಇಲ್ಲ. ಪಿತ್ರಾರ್ಜಿತ ಆಸ್ತಿಯಾಗಿ ಬಂದಿದ್ದ ಒಂದಷ್ಟು ಭೂಮಿ ಇತ್ತು. ಆದರೆ ಕೋರ್ಟು, ಕೇಸು, ಲಾಯರ್ ಫೀಸು ಇದಕ್ಕೆಲ್ಲ ಹಣ ಬೇಕಲ್ಲ. ಹೀಗಾಗಿ ಅದನ್ನೂ ಮಾರಾಟ ಮಾಡಲಾಯಿತು. 43ನೇ ವಯಸ್ಸಿನಲ್ಲಿ ಜೈಲಿನಿಂದ ಬಿಡುಗಡೆಯಾಗಿ ಬಂದಿರುವ ನಾನೀಗ ಬರಿಗೈ ದಾಸ. ನಾನು ಶಾಲೆಗೆ ಹೋಗಿಲ್ಲ. ಯಾವುದೇ ಕಸುಬೂ ಗೊತ್ತಿಲ್ಲ.

ಮದುವೆ ಕೂಡ ಆಗಲು ಸಾಧ್ಯವಿಲ್ಲ. ಉಳಿದಿರುವ ಒಬ್ಬ ಸೋದರನೂ ಸನ್ಯಾಸಿಯಾಗಿದ್ದಾನೆ’ ಎಂದು ವಿಷ್ಣು ಹೇಳುವುದನ್ನು ಕೇಳಿದಾಗ ಈ ಪಾಡು ಯಾರಿಗೂ ಬರಬಾರದು ಎನಿಸುತ್ತದೆ. ವಿಷ್ಣು ತಿವಾರಿ ಜೈಲು ಸೇರಿದಾಗ ಮೊಬೈಲುಗಳ ಭರಾಟೆ ಅಷ್ಟಾಗಿ ಇರಲಿಲ್ಲ. ಲ್ಯಾಂಡ್‌ಲೈನ್‌ಗಳಿದ್ದವು ಅಷ್ಟೇ. ಹೀಗಾಗಿ ತನ್ನವರೊಡನೆ ಸಂಪರ್ಕ ಸುಲಭವಾಗೆನೂ ಇರಲಿಲ್ಲ. ಈಗ ಜೈಲಿನಿಂದ ಬಿಡುಗಡೆಯಾಗಿ ತನ್ನೂರಿಗೆ ಬಂದರೆ ಎಲ್ಲವೂ ಬದಲಾಗಿ ಹೋಗಿದೆ. ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಗಳು ರಾರಾಜಿಸುತ್ತವೆ. ಸಂಪರ್ಕ ಅತ್ಯಂತ ಸುಲಭವಾಗಿದೆ.

ಆದರೆ ತಂದೆ ತಾಯಿ ನಿಧನರಾದ ಸಂದರ್ಭದಲ್ಲಿ ಫೋನ್ ಸಿಗದೆ ಪರದಾಡಿದ್ದನ್ನು ಆತ ಮರೆಯಲಿಕ್ಕಿಲ್ಲ. ಈಗ ಬಂಧಮುಕ್ತ ನಾಗಿದ್ದರೂ 20 ವರ್ಷ ಹಿಂದೆ ಉಳಿದಿದ್ದಾನೆ. ಆ ಕೊರತೆಯನ್ನೆಲ್ಲ ನಿವಾರಿಸಿಕೊಂಡು ಹೊಸ ಜೀವನಕ್ಕೆ ಒಗ್ಗಿಕೊಳ್ಳುವುದು, ಜೀವನವನ್ನು ನಿಭಾಯಿಸುವುದು, ನಿರ್ವಹಿಸುವುದು ಸುಲಭವಲ್ಲ. ‘ನನ್ನ ಜೀವನದ ಅರ್ಧಕ್ಕೂ ಹೆಚ್ಚಿನ ಆಯುಷ್ಯ ಹೀಗೆ ವ್ಯರ್ಥವಾಗಿ, ಅನ್ಯಾಯವಾಗಿ ಕಳೆದುಹೋದ ಮೇಲೆ ನನಗೆ ಮುಂದೆ ಬದುಕುವ ಉತ್ಸಾಹವೇ ಇಲ್ಲದಾಗಿದೆ. ಹೇಗೆ ಬದುಕುವುದು ಎಂಬ ದಾರಿಯೂ ಕಾಣದಾಗಿದೆ’ ಎಂಬ ಅವನ ಮಾತನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ.

ಹಾಗೆಯೇ ಆತನ ಈ ಪ್ರಶ್ನೆಗೆ ಯಾರ ಬಳಿಯೂ ಉತ್ತರ ಇಲ್ಲ. ಹಾಗಾದರೆ ಈ ಪ್ರಕರಣದಲ್ಲಿ ತಪ್ಪು ಯಾರದು? ಪೊಲೀಸರದೇ? ವಿಚಾರಣೆ ನಡೆಸಿದ ನ್ಯಾಯಾಲಯದ್ದೇ? ಆತ ಮೇಲ್ಮನವಿ ಅರ್ಜಿ ಸಲ್ಲಿಸಿದಾಗ ಅದನ್ನು ತಾಂತ್ರಿಕ ಕಾರಣ ನೀಡಿ ತಿರಸ್ಕರಿಸಿದ ಮೇಲೆ 15 ವರ್ಷಗಳ ಕಾಲ ಅದು ಹಾಗೆಯೇ ಉಳಿಯುವಂತಾಗಲು ಬಿಟ್ಟ ವ್ಯವಸ್ಥೆಯದ್ದೇ? ಎಲ್ಲರದೂ ಇರಬಹುದು. ಹೋಗಲಿ. ಜೈಲಿನ ಅಧಿಕಾರಿಗಳಾದರೂ ಇತ್ತ ಗಮನ ಹರಿಸಲಿಲ್ಲವೇ? ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡುವಂಥ ಸೌಲಭ್ಯ ಇರುತ್ತದಲ್ಲ. ಅದಕ್ಕೂ ಅವನನ್ನು ಪರಿಗಣಿಸ ಲಿಲ್ಲವೆ? ನ್ಯಾಯಾಂಗ ಕ್ಷೇತ್ರದಲ್ಲಿನ ವಿಳಂಬದಿಂದಾಗಿ ಎಷ್ಟೋ ಅಮಾಯಕರು ಪಡಬಾರದ ಪಾಡು ಪಡುತ್ತಾರೆ.

ಇವರಲ್ಲಿ ಬಹುತೇಕರು ಬಡವರು, ಅಸಹಾಯಕರೇ ಆಗಿರುತ್ತಾರೆ. ಶ್ರೀಮಂತರು ಪ್ರಭಾವಿಗಳಿಗೆ ಸಮಸ್ಯೆ ಇಲ್ಲ. ಹೇಗೋ ಮಾಡಿ ಬಚಾವಾಗಬಹುದು. ಆದರೆ ಪಾಪದವರ ಅಳಲನ್ನು ಕೇಳುವವರೇ ಇಲ್ಲದಂತಾಗಿದೆ. ಏಕೆಂದರೆ ಅವರು ಎಲ್ಲ ದೃಷ್ಟಿಯಿಂದಲೂ ಅಶಕ್ತರು. ವಿಷ್ಣುವಿನ ಉದಾಹರಣೆಯನ್ನೇ ನೋಡುವುದಾದರೆ ಕುಟುಂಬದ ಸಹಾಯ ಸಹಕಾರ ಸಿಗದ ಕಾರಣ ಮೇಲ್ಮನವಿ ಅರ್ಜಿ ಸಲ್ಲಿಸುವುದೇ ಅವನಿಗೆ ಸಾಧ್ಯವಾಗಲಿಲ್ಲ. ಇದೇ ಆತನ ಬಿಡುಗಡೆಯಲ್ಲಿನ ವಿಳಂಬಕ್ಕೆ ಕಾರಣವಾದ ಅಂಶ.

ಇನ್ನು ಅಸಂಖ್ಯಾತ ಕೈದಿಗಳಿಗೆ ಜಾಮೀನು ಸಿಗುತ್ತದೆ ಅಥವಾ ಶಿಕ್ಷೆ ಮುಗಿಸಿ ಹೊರಬರುತ್ತಾರಲ್ಲ. ಆ ಸಂದರ್ಭದಲ್ಲಿ ಅದಕ್ಕೆ
ಆಗಬೇಕಾದ ಔಪಚಾರಿಕತೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದೇ ಮತ್ತೆ ಜೈಲಿನಲ್ಲೇ ಇರಬೇಕಾಗುತ್ತದೆ. ಕೆಲವರಿಗೆ
ಜಾಮೀನು ಪಡೆಯಲು ತುಂಬಬೇಕಾದ ಹಣ ಕೂಡ ಇರುವುದಿಲ್ಲ. ಆ ಕಾರಣಕ್ಕಾಗಿ ಮತ್ತೆ ಅಲ್ಲಿಯೇ ಮುಂದುವರಿಯುತ್ತಾರೆ.

ಹಾಗಾದರೆ ಇಲ್ಲಿ ಮಾನವ ಹಕ್ಕು, ವ್ಯಕ್ತಿಗತ ಸ್ವಾತಂತ್ರ್ಯ, ಗೌರವದಿಂದ ಬದುಕುವ ಹಕ್ಕು, ನ್ಯಾಯ ನೀತಿ, ಕಾಯಿದೆ ಕಾನೂನು ಇವಾವಕ್ಕೂ ಬೆಲೆಯೇ ಇಲ್ಲವೇ? ನ್ಯಾಯಾಂಗ ವ್ಯವಸ್ಥೆಯಲ್ಲಿನ ಕೊರತೆ, ಲೋಪ ದೋಷಗಳಿಂದಾಗಿ ನ್ಯಾಯವಂಚಿತರಾಗುವ ಎಷ್ಟೋ ಜನರ ಪರವಾಗಿ ದನಿ ಎತ್ತುವವರಾರು? ವಿಷ್ಣು ತಿವಾರಿಗೆ ಅನ್ಯಾಯವಾಗಿದೆ.

ವ್ಯವಸ್ಥೆಯ ಲೋಪದಿಂದಾಗಿ ಅನವಶ್ಯಕವಾಗಿ ಎರಡು ದಶಕಗಳ ಕಾಲ ಜೈಲಿನಲ್ಲಿ ಕಳೆದನಲ್ಲ. ಆ ದಿನಗಳನ್ನು ಯಾರಾದರೂ ಅವನಿಗೆ ಮರಳಿ ಕೊಡಲು ಸಾಧ್ಯವೆ? ಇಲ್ಲ. ಹೋಗಲಿ. ಈಗ ಬಿಡುಗಡೆ ಆಗಿ, ಪ್ರಕರಣದ ಅಸಲಿಯತ್ತು ಬಯಲಾದ ಬಳಿಕ ವಾದರೂ ಅವನಿಗೆ ನ್ಯಾಯ, ಪರಿಹಾರ ದೊರೆತೀತೆಂಬ ಯಾವ ಖಾತರಿಯೂ ಇಲ್ಲ. ಸ್ವಲ್ಪ ದಿನ ಈ ಪ್ರಕರಣ ಚಾಲ್ತಿಯಲ್ಲಿದ್ದು
ಅನಂತರ ಮರೆಯಾದರೂ ಅಚ್ಚರಿ ಇಲ್ಲ. ಆದರೆ ಹೀಗಾಗಬಾರದು, ವಿಷ್ಣು ತಿವಾರಿಗೆ ಸೂಕ್ತ ಪರಿಹಾರ ನೀಡಿ ಅವನ ಬದುಕು ರೂಪಿಸುವ ಹೊಣೆಯ್ನು ಸರಕಾರ ಮತ್ತು ಸಮಾಜ ಹೊರಬೇಕಾಗುತ್ತದೆ.

ಕಾನೂನಿನ ದೃಷ್ಟಿಯಿಂದ ಅಲ್ಲದಿದ್ದರೂ ನೈತಿಕತೆಯ ಆಧಾರದಲ್ಲಾದರೂ ಇದು ಅತ್ಯಂತ ಅಗತ್ಯ. ಇಲ್ಲಿ ಮತ್ತೊಂದು ಅಂಶ ಗಮನಾರ್ಹ. ವಿಷ್ಣುವಿನ ಪ್ರಕರಣವಾದರೋ ಸುದ್ದಿಯಾಯಿತು. ಸದ್ದು ಮಾಡಿತು. ಇನ್ನುಳಿದ ಸಹಸ್ರಾರು ಸಂಖ್ಯೆಯ ಉಳಿದವರ ಪಾಡೇನು? ವಿಷ್ಣು ಪ್ರಕರಣ ನಮಗೆಲ್ಲ ಅಂದರೆ ಈ ವ್ಯವಸ್ಥೆಯಲ್ಲಿರುವ ಎಲ್ಲರ ಕಣ್ತೆರೆಸಬೇಕು. ಇದೇ ನೆಪದಲ್ಲಿ ಇಂಥ ಅಮಾಯಕರು, ಅಸಹಾಯಕರ ಸಮಸ್ಯೆ, ಸಂಕಟಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಾವು ಏನಾದರೂ ವ್ಯವಸ್ಥೆ ರೂಪಿಸಬೇಕು.

ಇಲ್ಲವಾದರೆ ನಾವು ಸಮಾಜ ಜೀವಿಗಳು ಎಂದು ಕರೆಸಿಕೊಳ್ಳಲು ಅರ್ಹರೇ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬೇಕಾಗುತ್ತದೆ.
ಸಮಾನತೆ, ಸ್ವಾತಂತ್ರ್ಯ ಎಲ್ಲರ ಹಕ್ಕು. ಅದನ್ನು ರಕ್ಷಿಸುವುದು ಉಳಿದವರ ಕರ್ತವ್ಯ. ಈ ಕರ್ತವ್ಯವನ್ನು ನಾವು ಮಾಡದೇ
ಹೋದರೆ ನಾಗರಿಕ ಸಮಾಜವನ್ನೇ ಅಣಕಿಸಿದಂತಾಗುತ್ತದೆ.

ನಾಡಿಶಾಸ್ತ್ರ
ಬಡವರು ಅಮಾಯಕರಿಗೆ ಸಿಗದು ಬೇಲು
ಅವರಿಗೆ ಕೊಳೆಯಲು ಇದೆಯಲ್ಲ ಜೈಲು
ವಂಚನೆಗೆ ಪೂಜ್ಯತೆ ಎಲ್ಲ ಎಂಬ ಹಾಡು
ಇಂದಿಗೂ ನಿಜ, ಇದೇ ಅಶಕ್ತರ ಪಾಡು.