ವಿದೇಶವಾಸಿ
dhyapaa@gmail.com
‘ವಿಶ್ವತೋಮುಖ’ ಎಂಬ ಪದಕ್ಕೆ ‘ಎಲ್ಲ ದಿಕ್ಕುಗಳು’ ಎಂಬ ಅರ್ಥವಿದೆ. ಭಟ್ಟರ ವ್ಯಕ್ತಿತ್ವವೇ ಒಂದು ತೆರೆದ ಪುಸ್ತಕ. ಈ ಪುಸ್ತಕ ಭಟ್ಟರ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಪರಿಚಯಿಸುವ ಒಂದು ಸಣ್ಣ ಪ್ರಯತ್ನ ಮಾತ್ರ. ಮತ್ತೊಮ್ಮೆ ಹೇಳುತ್ತೇನೆ, ಈ ಪುಸ್ತಕದಲ್ಲಿರುವ ವಿಷಯಗಳು ‘ವಿಶ್ವೇಶ್ವರ ಭಟ್’ ಎಂಬ ಮಾಂತ್ರಿಕನ ವ್ಯಕ್ತಿತ್ವದ ಶರಧಿಯ ಒಂದು ಬಿಂದುವಿನ ಲವದ ಲೇಶ ಮಾತ್ರ.
ಸರ್, ಒಮಾನ್ ಪ್ರವಾಸಕ್ಕೆ ಹೋಗೋಣವಾ? ಎಂದು ವಿಶ್ವೇಶ್ವರ ಭಟ್ಟರಲ್ಲಿ ಕೇಳಿದೆ. ಏನು ವಿಶೇಷ? ಎಂದು ಕೇಳಿದರು. ಕಾರಿನಲ್ಲಿ ಒಮಾನ್ ದೇಶ ಸುತ್ತೋದು, ಸಾವಿರಾರು ಕಿಲೋಮೀಟರ್‌ನಿಂದ ಆಮೆಗಳು ಮೊಟ್ಟೆ ಇಡಲು ಕಡಲ ತೀರಕ್ಕೆ ಬರುತ್ತವೆ, ಅದನ್ನು ನೋಡಿಕೊಂಡು ಬರುವುದು ಎಂದೆ. ಓಕೆ, ನಾನು ಮತ್ತು ನಂಜನಗೂಡು ಮೋಹನ್ ಬರುತ್ತೇವೆ ಎಂದರು.
ಅದೇ ಸಂದರ್ಭದಲ್ಲಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಬಹರೇನ್‌ಗೆ ಬರುವವರಿದ್ದರು. ಅವರಲ್ಲಿಯೂ ವಿಷಯ ಹೇಳಿದಾಗ ಅವರೂ ಒಪ್ಪಿದರು. ಎಲ್ಲರೂ ದುಬೈನಲ್ಲಿ ಸೇರಿ, ಅಲ್ಲಿಂದ ಹೊರಡುವುದೆಂದು ನಿಗದಿ ಯಾಯಿತು. ಎರಡೇ ವಾರದಲ್ಲಿ ದುಬೈ ಮತ್ತು ಒಮಾನ್ ವೀಸಾ, ಟಿಕೆಟ್, ಉಳಿಯುವ ವ್ಯವಸ್ಥೆ, ಎಲ್ಲವೂ ಸಿದ್ಧವಾ ಯಿತು. ನಿರ್ಧರಿಸಿದಂತೆ ಎಲ್ಲರೂ ದುಬೈನಲ್ಲಿ ಸೇರಿದೆವು. ನಾನು ಬಹ್ರೈನ್ ನಿಂದ ಕಾರಿನಲ್ಲಿ ದುಬೈಗೆ ಹೋಗಿದ್ದೆ.
ಅಲ್ಲಿಂದ ಎಲ್ಲರೂ ಒಮಾನ್‌ಗೆ ಹೊರಟೆವು. ಆದರೆ, ದುಬೈ ಮತ್ತು ಒಮಾನ್ ಗಡಿ ದಾಟುವಾಗ ಸಾಹಸ ಮಾಡಬೇಕಾ ಯಿತು. ಅಧಿಕಾರಿಗಳು, ‘ಅವರೆಲ್ಲ ದುಬೈಗೆ ವಿಮಾನದಲ್ಲಿ ಬಂದಿದ್ದರಿಂದ ವಿಮಾನದಲ್ಲಿಯೇ ದೇಶದಿಂದ ಹೊರಕ್ಕೆ ಹೋಗಬೇಕು, ಭೂ ಮಾರ್ಗದಲ್ಲಿ ಹೋಗಲು ಸಾಧ್ಯವಿಲ್ಲ’ ಎಂದರು. ಏನು ಹೇಳಿದರೂ ಅಧಿಕಾರಿಗಳು ಕೇಳುವ ಸ್ಥಿತಿಯಲ್ಲಿರಲಿಲ್ಲ. ಅರ್ಧ ಗಂಟೆ ಕಾರಿನಲ್ಲಿ ಕುಳಿತು ಮುಂದೇನು ಎಂದು ಯೋಚಿಸುತ್ತಿದ್ದೆವು.
ಎಲ್ಲರೂ ಹೋಗಿ ಮತ್ತೊಮ್ಮೆ ಕೇಳೋಣ ಎಂದು ನಿರ್ಧರಿಸಿದೆವು. ಭಟ್ಟರು ಮೋಹನ್ ಅವರಲ್ಲಿ ‘ಮಂತ್ರಾಲಯದ ಗುರು
ರಾಯರನ್ನು ನೆನೆಯಿರಿ’ ಎಂದರು. ಮತ್ತೊಮ್ಮೆ ಅಧಿಕಾರಿಗಳ ಬಳಿ ಹೋಗಿ ಕೇಳಿದಾಗ, ‘ನಾವು ಬಿಡುತ್ತೇವೆ, ಒಮಾನ್ ದೇಶದ ಒಳಗೆ ನಿಮ್ಮನ್ನು ಬಿಡದಿದ್ದರೆ ನಾವು ಜವಾಬ್ದಾರರಲ್ಲ’ ಎನ್ನುತ್ತಾ, ಕೊನೆಗೂ ನಮ್ಮನ್ನು ಗಡಿ ದಾಟಲು ಬಿಟ್ಟರು. ನಂತರ ಸತತ ಏಳು ದಿನಗಳ ಪ್ರವಾಸ. ಒಂದು ಊರಿನಿಂದ ಇನ್ನೊಂದು ಊರಿಗೆ ನೂರಾರು ಮೈಲು ದೂರ. ಕೆಲವು ಕಡೆಯಂತೂ ನೂರಾರು
ಕಿಲೋಮೀಟರ್ ನಡುವೆ ಒಂದೇ ಒಂದು ಅಂಗಡಿ ಬಿಡಿ, ಪೆಟ್ರೋಲ್ ಪಂಪ್ ಕೂಡ ಸಿಗದಷ್ಟು ಗಾಢ ಮರುಭೂಮಿ.
ಹಳದಿ ಮರಳು ರಾಶಿಯನ್ನು ಸೀಳಿಕೊಂಡು ಹೋಗುವ ಕಪ್ಪು ನೀರವ ರಸ್ತೆ. ಕೆಲವೊಮ್ಮೆ ಮಧ್ಯ ರಾತ್ರಿಯವರೆಗೂ ನಮ್ಮ ಪ್ರಯಾಣ. ನಾವು ಆ ಏಳು ದಿನದಲ್ಲಿ ಸುಮಾರು ಐದು ಸಾವಿರ ಕಿಲೋಮೀಟರ್ ಸುತ್ತಿದ್ದೆವು. ಯಾವುದೇ ಪೂರ್ವಾಪರ
ಯೋಜನೆ ಇಲ್ಲದೇ ಯೆಮನ್ ದೇಶದ ಗಡಿಯವರೆಗೂ ಹೋಗಿ ಬಂದೆವು. ದುಬೈ ಗಡಿಯಲ್ಲಿ ಒಂದು ಅನುಭವವಾದರೆ, ಯೆಮನ್ ಗಡಿಯಲ್ಲಿ ಇನ್ನೊಂದು ರೀತಿಯ ಅನುಭವ.
ಆದರೂ ಸುಸ್ತು, ಬಳಲಿಕೆ ಇರಲಿಲ್ಲ. ಕಾರಣ, ವಿಶ್ವೇಶ್ವರ ಭಟ್ಟರ ಅವಿಶ್ರಾಂತ ಮಾತು, ಮಾತು, ಮಾತು. ಜತೆಗೆ ಮೋಹನ್ ಕಟ್ಟಿ ತರುತ್ತಿದ್ದ ತಿಂಡಿ. ಮನಸ್ಸು, ಹೊಟ್ಟೆ ಎರಡೂ ಸದಾ ಸಮೃದ್ಧವಾಗಿರುತ್ತಿತ್ತು. ಬೆಳಗ್ಗೆ ಕಾರಿನಲ್ಲಿ ಕುಳಿತರೆ, ರಾತ್ರಿ ಇಳಿಯು ವವರೆಗೂ ಮಾತು, ಹಾಸ್ಯ, ನಗು. ಮೋಹನ್ ಮತ್ತು ರವಿ ಹೆಗಡೆ ಆಗಾಗ ಮಾತಾಡುತ್ತಿದ್ದರಾದರೂ, ಮಾತಿನಲ್ಲಿ ಭಟ್ಟರದ್ದು ಸಿಂಹಪಾಲು.
ವಿಶೇಷವೆಂದರೆ ಅದರಲ್ಲಿ ದ್ವೇಷದ, ಕೊಂಕಿನ, ಹೊಟ್ಟೆಕಿಚ್ಚಿನ ಮಾತಿರಲಿಲ್ಲ. ಅರ್ಥಹೀನ ಗಾಸಿಪ್ ಇರಲಿಲ್ಲ. ವಿಷಯ ಮರು ಕಳಿಸುತ್ತಲೂ ಇರಲಿಲ್ಲ. ಕರ್ನಾಟಕದ ಅರಿಕೆರೆಯಿಂದ ಅಮೆರಿಕದವರೆಗಿನ ವಿಷಯ, ಪತ್ರಕರ್ತರು, ಪತ್ರಿಕೆಯ ಸುದ್ದಿ, ಸಿನಿಮಾ ದಿಂದ ಹಿಡಿದು ಅಡುಗೆಯವರೆಗಿನ ಹರಟೆ, ಒಂದಲ್ಲ ಎರಡಲ್ಲ. ಭಟ್ಟರ ಕಣಜದಲ್ಲಿ ಅಷ್ಟು ಸರಕು ಸರಿದು ಬಿದ್ದಿದೆ.
ಅವರೊಂದು ವಿಶ್ವವಿದ್ಯಾಲಯವಿದ್ದಂತೆ. ಅವರು ಮಾತಾಡುತ್ತಿದ್ದರೆ ನಾನಂತೂ ಬೆರಗಾಗಿ ಕೇಳಿಸಿಕೊಳ್ಳುತ್ತಿದ್ದೆ. ಅವರ ಮಾತು ಕೇಳುತ್ತಾ ಕೆಲವೊಮ್ಮೆ ದಾರಿ ತಪ್ಪಿ ನೂರಾರು ಕಿಲೋಮೀಟರ್ ಹೋಗಿ, ಹಿಂತಿರುಗಿ ಬಂದದ್ದಿದೆ. ಆದರೂ ಖುಷಿಯೇ.
ಏಕೆಂದರೆ, ಇನ್ನಷ್ಟು ಹೊತ್ತು ಭಟ್ಟರ ಮಾತು ಕೇಳಬಹುದು ಎಂದು. ಅಂತಹ ಭಟ್ಟರು ‘ನೀವು ಬರೆಯಬೇಕು’ ಎಂದು ಆಗಾಗ ನನ್ನಲ್ಲಿ ಹೇಳುತ್ತಿದ್ದರು. ‘ಏನು ಬರೆಯುತ್ತೇನೋ, ಬಿಡುತ್ತೇನೋ ಗೊತ್ತಿಲ್ಲ, ಭಟ್ಟರ ಕುರಿತಾಗಿ ಬರೆಯುತ್ತೇನೆ’ ಎಂದು ಆ
ಪ್ರವಾಸದಲ್ಲಿ ನಿರ್ಧರಿಸಿದ್ದೆ. ‘ವಿಶ್ವತೋಮುಖ’ದ ಬೀಜಾಂಕುರವಾದದ್ದು ಒಮಾನ್ ಮರುಭೂಮಿಯಲ್ಲಿ!
ಅದಾಗಿ ಸ್ವಲ್ಪ ದಿನಕ್ಕೆ ಕರೋನಾ ಮಹಾಮಾರಿ ವಿಶ್ವವನ್ನೇ ವ್ಯಾಪಿಸಿತ್ತು. ಜನರು ಹೊರಗೆ ಓಡಾಡಲಾಗದೇ ಅನಿವಾರ್ಯ ವಾಗಿ ಮನೆಗುಮ್ಮನಾಗಿ ಕುಳಿತುಕೊಳ್ಳಬೇಕಾಯಿತು. ಆ ಸಂದರ್ಭದಲ್ಲಿ ಮನೆಯಲ್ಲಿ ಕುಳಿತು ಏನು ಮಾಡುವುದು? ಎಷ್ಟೂ ಅಂತ ಸಿನಿಮಾ ನೋಡುವುದು? ಯುಟ್ಯೂಬ್, ಒಟಿಟಿಗಳೆಲ್ಲ ಸಾಕು ಅನಿಸತೊಡಗಿದ್ದವು. ಸಾಮಾಜಿಕ ಜಾಲತಾಣವೂ ಬೇಡ ಅನಿಸುವಷ್ಟು ರೋಸಿಹೋಗಿತ್ತು. ಲೇಖನ ಬರೆದು ಕಳಿಸುವಂತೆ ಭಟ್ಟರು ಕೆಲವು ವರ್ಷಗಳಿಂದ ಹೇಳುತ್ತಿದ್ದರು.
ಅವರ ಪ್ರೇರಣೆಯಿಂದ ಮತ್ತೆ ಬರೆಯುವ ಪ್ರಯತ್ನಕ್ಕಿಳಿದೆ. ಅಂಕಣಗಳ ಜತೆಗೆ ಅವರ ಕುರಿತೂ ಬರೆಯಲು ಆರಂಭಿಸಿದೆ.
ನೋಡ ನೋಡುತ್ತ ಒಂದು ಪುಸ್ತಕಕ್ಕೆ ಆಗುವಷ್ಟು ಸರಕು ಸಿದ್ಧವಾಯಿತು. ಆದರೆ ಇದನ್ನು ಯಾರ ಬಳಿಯಲ್ಲೂ ಹೇಳು ವಂತಿರಲಿಲ್ಲ. ಭಟ್ಟರಲ್ಲಂತೂ ವಿಷಯವನ್ನೇ ಪ್ರಸ್ತಾಪಿಸುವಂತಿರಲಿಲ್ಲ. ಏನೋ ಒಂದು ರೀತಿಯ ಅಳುಕು, ಹಿಂಜರಿತ. ತಿಳಿಸಿ ಮಾಡುವುದಕ್ಕೂ, ತಿಳಿಸದೇ ಮಾಡುವುದಕ್ಕೂ ಇರುವ ವ್ಯತ್ಯಾಸ ಅದು. ಇಲ್ಲಿ ಅವರಿಗೆ ತಿಳಿಸಿ ಮಾಡುವಂತಿರಲಿಲ್ಲ. ನಿಮ್ಮ ಬಗ್ಗೆ ಪುಸ್ತಕ ಬರೆಯುತ್ತೇನೆ ಎಂದರೆ ಅವರು ಒಪ್ಪುತ್ತಾರೆ ಎಂಬ ಭರವಸೆ ಇರಲಿಲ್ಲ.
ಮೊದಲೇ ಹೇಳಿದರೆ ಅವರು ಒಪ್ಪುವುದಿಲ್ಲ ಎಂದು ಗೊತ್ತಿತ್ತು. ಅವರ ಐವತ್ತನೆಯ ವರ್ಷದ ಅಭಿನಂದನಾ ಗ್ರಂಥ ಪ್ರಕಟಿಸಿದ ಜಿ.ಬಿ. ರವಿಕುಮಾರ ಅವರ ಅನುಭವವನ್ನೂ ಕೇಳಿ ತಿಳಿದಿದ್ದೆ. ರವಿಕುಮಾರ್ ಭಟ್ಟರನ್ನು ಒಪ್ಪಿಸಲು ಸಾಕಷ್ಟು ಶ್ರಮಪಟ್ಟಿ
ದ್ದರು. ಆಗ ಒಪ್ಪದ ಭಟ್ಟರು ಈಗ ಒಪ್ಪುತ್ತಾರೆ ಎಂದು ನಂಬುವುದು ಕಷ್ಟವಾಗಿತ್ತು. ಹಾಗಂತ ಹೇಳದೇ ಮಾಡಿ, ಅದರಲ್ಲಿ
ತಪ್ಪಾದರೆ? ಅಥವಾ ಅವರು ಆಗಲೂ ಒಪ್ಪದಿದ್ದರೆ? ಇನ್ನು ಅವರೇ ಒಪ್ಪದಿದ್ದಾಗ, ಊರೆಲ್ಲ ಟಾಂ ಟಾಂ ಹೊಡೆಯುವುದರಲ್ಲಿ ಏನು ಅರ್ಥ? ಈ ಎಲ್ಲ ಪ್ರಶ್ನೆ, ಗೊಂದಲಗಳ ನಡುವೆಯೇ ಪುಸ್ತಕದ ಕೆಲಸ ಆರಂಭವಾಯಿತು.
ಒಂದೇ ಕೈ ಬೆರಳೆಣಿಕೆಯ ಆತ್ಮೀಯರಿಗೆ ಮಾತ್ರ ವಿಷಯ ತಿಳಿಸಿದೆ. ಈ ವಿಷಯ ಮೊದಲು ತಿಳಿಸಿದ್ದು ಬಹ್ರೈನ್ ಸ್ನೇಹಿತ,
ವಿನ್ಯಾಸಕಾರ ಡಿ. ರಮೇಶ್‌ಗೆ. ’ಭಟ್ಟರಿಗೆ ಈ ಪುಸ್ತಕದ ವಿಷಯ ತಿಳಿದಿಲ್ಲ, ಅವರು ಒಪ್ಪುತ್ತಾರೋ ಇಲ್ಲವೋ ಎನ್ನುವುದೂ
ಗೊತ್ತಿಲ್ಲ, ಮೊಂಡು ಧೈರ್ಯ ಮಾಡುತ್ತಿದ್ದೇನೆ, ಒಪ್ಪಿದರೆ ಆಯಿತು, ಇಲ್ಲವಾದರೆ ಬಿಟ್ಟು ಬಿಡೋಣ’ ಎಂದೆ. ಭಟ್ಟರ ಬಗ್ಗೆ ತಿಳಿದುಕೊಂಡಿರುವ ರಮೇಶ್, ಸಂತೋಷದಿಂದಲೇ ಒಪ್ಪಿದರು, ನನ್ನ ಕನಸಿಗೆ ಬಣ್ಣ ತುಂಬಲು ಆರಂಭಿಸಿದರು.
ವಿಶ್ವೇಶ್ವರ ಭಟ್ ಅವರ ವ್ಯಕ್ತಿತ್ವವನ್ನು ಕೆಲವೇ ಪದಗಳಲ್ಲಿ ಅಥವಾ ಕೆಲವೇ ಪುಟಗಳಲ್ಲಿ ಕಟ್ಟಿಕೊಡುತ್ತೇನೆ ಎಂದರೆ ಅದರಂಥ ಮೂರ್ಖತನ ಮತ್ತೊಂದಿಲ್ಲ. ಅದು ಸಮುದ್ರವನ್ನು ಬೊಗಸೆಯಲ್ಲಿ ಹಿಡಿದು ತರುತ್ತೇನೆ ಎಂದಂತಾದೀತು. ಅವರ ಅಗಾಧ ಜ್ಞಾನ, ಅವರ ಅನೂಹ್ಯ ಆಸಕ್ತಿ, ಅನನ್ಯ ಗುಣ ವಿಶೇಷವನ್ನು ಒಂದೇ ಪುಸ್ತಕದಲ್ಲಿ ಬರೆದು ಮುಗಿಸಲು ಸಾಧ್ಯವಿಲ್ಲ. ಏಕೆಂದರೆ, ಕೆಲವು ವರ್ಷಗಳ ಒಡನಾಟದ ನಂತರವೂ, ಸಾಕಷ್ಟು ಆಪ್ತ ಮಾತಿನ ಬಳಿಕವೂ ’ವಿಶ್ವೇಶ್ವರ ಭಟ್’ ಎಂದರೆ ಇಂದಿಗೂ ಅದ್ಭುತ, ಸೋಜಿಗ, ಕೌತುಕ, ಕುತೂಹಲ.
ಅಂತೂ ಅವರಿಗೆ ಅರಿವಿಲ್ಲದೆಯೇ ಪುಸ್ತಕ ಸಿದ್ಧವಾಯಿತು. ಬೇರೆ ಏನೇ ಆದರೂ ತಿರಸ್ಕರಿಸಿಯಾರು, ಪುಸ್ತಕವನ್ನು ಎದೆಗೆ ಅವುಚಿಕೊಳ್ಳುವ ಅಕ್ಷರ ಪ್ರೇಮಿ ಇದನ್ನು ತಿರಸ್ಕರಿಸಲಾರರು ಎಂಬ ಭರವಸೆಯೊಂದಿಗೆ ಕೇವಲ ನಾಲ್ಕು ಪ್ರತಿಯನ್ನು ಮುದ್ರಿಸಿ ಅವರ ಜನ್ಮದಿನದಂದು ಅವರ ಕೈಗೆ ಕೊಟ್ಟೆ. ಹೆಚ್ಚು ಮುದ್ರಿಸುವ ಧೈರ್ಯ ಇರಲಿಲ್ಲ.
ಕಾರಣ, ಅವರಿಗೆ ಹೇಳದೇ-ಕೇಳದೇ ಅವರ ಕೆಲವು ವಕ್ರತುಂಡೋಕ್ತಿ, ದಾರಿ ದೀಪೋಕ್ತಿ, ಭಟ್ಟರ್ ಸ್ಕಾಚ್‌ನ ಪ್ರಶ್ನೋತ್ತರ, ಅವರ ಕೆಲವು ಬರಹ, ಭಾವಚಿತ್ರ ರೇಖಾಚಿತ್ರವನ್ನೆಲ್ಲ ಬಳಸಿಕೊಂಡಿದ್ದೆ. ಪುಸ್ತಕ ಕಾಣಿಕೆ ಅನಿರೀಕ್ಷಿತವಾಗಿದ್ದರಿಂದ ಅವರಿಗೆ ಅಚ್ಚರಿಯಾಗಿತ್ತಾದರೂ ‘ಏನ್ರಿ ಇದು? ಇದನ್ನೆಲ್ಲ ಯಾಕೆ ಮಾಡಿದ್ರಿ?’ ಎಂದರು. ‘ತಪ್ಪಾಗಿದ್ದರೆ ಕ್ಷಮಿಸಿ’ ಎಂದೆ. ನಂತರ ಕೆಲವು ತಿಂಗಳು ಹಾಗೆಯೇ ಮುಂದುವರಿಯಿತು. ಅಂತೂ ಕೊನೆಗೆ ಒಂದು ದಿನ ಪುಸ್ತಕ ಬಿಡುಗಡೆ ಮಾಡೋಣ ಎಂದು ಒಪ್ಪಿದರು.
ಇದೇ ಬರುವ ಶುಕ್ರವಾರ, ಪುಸ್ತಕ ಪ್ರಸವಕ್ಕೆ ಮುಹೂರ್ತ ನಿಗದಿಯಾಗಿದೆ. ಅಂದು ಒಟ್ಟೂ ನಾಲ್ಕು ಪುಸ್ತಕ ಲೋಕಾರ್ಪಣೆ. ವಿಶ್ವತೋಮುಖದೊಂದಿಗೆ, ವಿಶ್ವೇಶ್ವರ ಭಟ್ಟರು ಬರೆದಿರುವ ’ಸುದ್ದಿಮನೆ ಕತೆ’, ’ಇದೇ ಅಂತರಂಗ ಸುದ್ದಿ’ ಮತ್ತು ‘ನೂರೆಂಟು ವಿಶ್ವ’ ಕೂಡ ಬಿಡುಗಡೆಯಾಗಲಿದೆ. ಸುತ್ತೂರು ಮಹಾಸಂಸ್ಥಾನದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿ ಗಳ ದಿವ್ಯ ಸಾನ್ನಿಧ್ಯದಲ್ಲಿ ಚಿಂತಕರು, ಕಾದಂಬರಿಕಾರರಾದ ಎಸ್.ಎಲ್.ಭೈರಪ್ಪನವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಲೋಕಸಭಾ ಸದಸ್ಯರಾದ ಪ್ರತಾಪ ಸಿಂಹ, ಹಿರಿಯ ಪತ್ರಕರ್ತರಾದ ನಾಗೇಶ್ ಹೆಗಡೆ ಮುಖ್ಯ ಅತಿಥಿಗಳು. ನನ್ನ ಇಷ್ಟದ ಲೇಖಕರೊಂದಿಗೆ, ನಾನು ಗೌರವಿಸುವ ವ್ಯಕ್ತಿಗಳಿರುವ ವೇದಿಕೆಯಲ್ಲಿ ನನ್ನ ಒಂದು ಪುಸ್ತಕ ಬಿಡುಗಡೆ ಎಂದರೆ ಇನ್ನೇನು ಬೇಕು? ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ…! ‘ವಿಶ್ವತೋಮುಖ’ ಎಂಬ ಪದಕ್ಕೆ ’ಎಲ್ಲ ದಿಕ್ಕುಗಳು’ ಎಂಬ ಅರ್ಥವಿದೆ. ಭಟ್ಟರ ವ್ಯಕ್ತಿತ್ವವೇ ಒಂದು ತೆರೆದ ಪುಸ್ತಕ. ಈ ಪುಸ್ತಕ ಭಟ್ಟರ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಪರಿಚಯಿಸುವ ಒಂದು ಸಣ್ಣ ಪ್ರಯತ್ನ ಮಾತ್ರ. ಮತ್ತೊಮ್ಮೆ ಹೇಳುತ್ತೇನೆ, ಈ ಪುಸ್ತಕದಲ್ಲಿರುವ ವಿಷಯಗಳು ’ವಿಶ್ವೇಶ್ವರ ಭಟ್’ ಎಂಬ ಮಾಂತ್ರಿಕನ ವ್ಯಕ್ತಿತ್ವದ ಶರಧಿಯ ಒಂದು ಬಿಂದುವಿನ ಲವದ ಲೇಶ ಮಾತ್ರ.
ನನ್ನ ಬೊಗಸೆಯ ಅಳತೆಗೆ ಸಿಕ್ಕಷ್ಟನ್ನು ಮಾತ್ರ ಮೊಗೆದು ನಿಮಗೆ ನೀಡುತ್ತಿದ್ದೇನೆ. ಪುಸ್ತಕದ ಒಳಗೆ ಏನಿದೆ? ಭಟ್ಟರ ಕುರಿತಾದ
ಸಮಗ್ರವಾದ ಲೇಖನಗಳಿವೆ ಎಂದು ಖಂಡಿತ ಹೇಳಲಾರೆ. ಸದ್ಯಕ್ಕೆ, ಸುತ್ತೂರು ಶ್ರೀಗಳ ಮುನ್ನುಡಿ, ಎಸ್. ಷಡಕ್ಷರಿಯವರ ಬೆನ್ನುಡಿ ಇದೆ ಎಂದು ಮಾತ್ರ ಹೇಳಬ. ಉಳಿದಂತೆ, ಗೌಪ್ಯ ಬಯಲಾಗಲು ಇನ್ನು ನಾಲ್ಕು ದಿನ ಮಾತ್ರ ಬಾಕಿ ಇದೆ. ಬೆಂಗಳೂರಿನ ಜಯನಗರದ ಯುವಪಥದಲ್ಲಿರುವ ವಿವೇಕ ಸಭಾಂಗಣದಲ್ಲಿ ಬೆಳಿಗ್ಗೆ ಹತ್ತೂವರೆಗೆ ಕಾರ್ಯಕ್ರಮ. ಬನ್ನಿ.