Sunday, 15th December 2024

Vishweshwar Bhat Column: ಇನ್ನೂ ಯಾಕ ಬರಲಿಲ್ಲ ಈಜಲೂ ಹೋಂದಾವ..!

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್‌

vbhat@me.com

ಕೆಲ ತಿಂಗಳ ಹಿಂದೆ Who killed Harold Holt ಎಂಬ ಸಾಕ್ಷ್ಯಚಿತ್ರವನ್ನು ನೋಡಿದೆ. ಹೆರಾಲ್ಡ್ ಹೋಲ್ಟ್ ನನ್ನು ಕೊಂದವರಾರು, ಅವನು ಸತ್ತಿದ್ದು ಹೇಗೆ ಎಂಬುದು ಮಾತ್ರ ಕೊನೆಗೂ ತಿಳಿಯಲಿಲ್ಲ. ಆ ಸಾಕ್ಷ್ಯಚಿತ್ರವನ್ನು ನೋಡಿದ ಬಳಿಕ ಅವನ ಸಾವಿನ ಬಗೆಗಿನ ಗೊಂದಲಗಳು ಮತ್ತಷ್ಟು ಹೆಚ್ಚಾದವು.

ಹೆರಾಲ್ಡ್ ಹೋಲ್ಟ್ ಬಗ್ಗೆ ನಿಮಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ, ಇರಲಿ. ಈತ ಆಸ್ಟ್ರೇಲಿಯಾದ ಪ್ರಧಾನಿ ಯಾಗಿದ್ದವ. 1966ರಲ್ಲಿ 22 ತಿಂಗಳ ಕಾಲ ಪ್ರಧಾನಿಯಾಗಿ ಅಧಿಕಾರದಲ್ಲಿದ್ದ. ಹೋಲ್ಟ್‌ನಿಗೆ ಈಜುವುದೆಂದರೆ ಬಲು ಇಷ್ಟ. ಪ್ರತಿದಿನ ಕನಿಷ್ಠ ಅರ್ಧಗಂಟೆಯಾದರೂ ಈಜುತ್ತಿದ್ದ. ಆಗಾಗ ಸಮುದ್ರಕ್ಕೆ ಹೋಗಿ ಈಜುತ್ತಿದ್ದ. 1967ರ ಡಿಸೆಂಬರ್ 17ರಂದು ತನ್ನ ಪ್ರೇಯಸಿ, ಅವಳ ಮಗಳು, ಅವಳ ಲವರ್ ಜತೆಗೆ ಪೋರ್ಟ್‌ ಸೀಯಲ್ಲಿರುವ ಚೆವಿಟ್ ಬೀಚ್‌ಗೆ ಈಜಲು ಹೋದ. ಸಮುದ್ರಕ್ಕಿಳಿದು ಐದು -ಹತ್ತು ನಿಮಿಷವೂ ಆಗಿರಲಿಲ್ಲ, ನಾಪತ್ತೆಯಾಗಿಬಿಟ್ಟ. ನೋಡ ನೋಡುತ್ತಿದ್ದಂತೆ ಕಣ್ಮರೆಯಾದ ಪ್ರಧಾನಿಯ ಜತೆಗಿದ್ದವರು ಬಹುಶಃ ಪ್ರಧಾನಿ ಮುಳುಕು ಹಾಕಿದ್ದಿರಬಹುದು ಎಂದು ಭಾವಿಸಿದರು. ಹತ್ತು ಹದಿನೈದು ನಿಮಿಷವಾದರೂ ಮೇಲೆ ಬರದಿದ್ದರಿಂದ ಗಾಬರಿಗೊಂಡು ಕಿರುಚಲಾರಂಭಿಸಿದರು.

ತಕ್ಷಣ ಹೈ ಅಲರ್ಟ್ ಘೋಷಿಸಲಾಯಿತು. ರಾಯಲ್ ಆಸ್ಟ್ರೇಲಿಯನ್ ನೇವಿ, ರಾಯಲ್ ಆಸ್ಟ್ರೇಲಿಯನ್ ಏರ್ ಫೋರ್ಸ್, ನೌಕಾ ಪಡೆಯ ಪರಿಣತ ಮುಳುಕು ಹಾಕುವವರು ಸತತ 48 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ದರೂ ಪ್ರಧಾನಿ ಪತ್ತೆಯಾಗಲಿಲ್ಲ. ಡಿಸೆಂಬರ್ 19ರಂದು ಆಸ್ಟ್ರೇಲಿಯನ್ ಸರಕಾರ ಪ್ರಧಾನಿ ಹೋಲ್ಟ್ ಮುಳುಗಿ ಸತ್ತಿರಬಹುದೆಂದು ಘೋಷಿಸಿತು.

ಆತನಿಗೆ ಹೃದಯಾಘಾತವಾಯಿತಾ? ಶಾರ್ಕ್, ತಿಮಿಂಗಿಲ ಅವನನ್ನು ನುಂಗಿತಾ? ಬಿರುಸಾದ ಅಲೆಗಳ ಹೊಡೆತಕ್ಕೆ ಆತ ಕೊಚ್ಚಿ ಹೋದನಾ? ಯಾವುದೂ ಗೊತ್ತೇ ಆಗಲಿಲ್ಲ. ಆತನ ಮೃತದೇಹವೇನಾದರೂ ಸಿಕ್ಕಿದ್ದಿದ್ದರೆ ಸಾವಿಗೆ ಕಾರಣವಾದರೂ ತಿಳಿಯುತ್ತಿತ್ತು. ಅದೂ ಸಿಗಲಿಲ್ಲ. ಹೀಗಾಗಿ ಹೋಲ್ಟ್ ನಿಧನ ನಿಗೂಢವಾಗಿಯೇ ಇದೆ. ಕಾಲಕಾಲಕ್ಕೆ ಹೋಲ್ಟ್‌ನ ಭೂತ ಕಾಣಿಸಿಕೊಳ್ಳುತ್ತದೆ. ಆತನ ಸಾವಿಗೆ ಹೊಸ ಹೊಸ ಕಾರಣಗಳು, ಥಿಯರಿಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಹೋಲ್ಟ್‌ನ ಸಾವಿನ ಕುರಿತು ಐವತ್ತಕ್ಕೂ ಹೆಚ್ಚಿನ ಪುಸ್ತಕಗಳು ಪ್ರಕಟವಾಗಿವೆ. ಆದರೆ ಅವೆಲ್ಲವೂ ಊಹಾ ಪೋಹ ಅಥವಾ ಸುಂದರ ಕಲ್ಪನೆಗಳಾಗಿರಬಹುದೇ ಹೊರತು ಸತ್ಯಾಂಶ ಮಾತ್ರ ಸಮುದ್ರದ ಆಳದಲ್ಲಿಯೇ
ಇದೆ.

ಇತ್ತೀಚೆಗೆ ಪತ್ತೇದಾರಿ ಲೇಖಕ ಆಂಥೋನಿ ಗ್ರೇ ಎಂಬಾತ ಹೋಲ್ಟ್ ಸಾವಿನ ಬಗ್ಗೆ ಹೊಸ ಥಿಯರಿ ಬರೆದಿದ್ದ. ಹೋಲ್ಟ್
ಚೀನಾದ ಬೇಹುಗಾರನಾಗಿದ್ದ. ಚೀನಾ ಜತೆ ಕೈಜೋಡಿಸಿ ರಹಸ್ಯ ಮಾಹಿತಿ ರವಾನಿಸುತ್ತಿದ್ದ. ಹೋಲ್ಟ್ ಈಜಲು ಹೋಗುವುದನ್ನು ಮೊದಲೇ ತಿಳಿದಿದ್ದ ಚೀನಾದ ನೌಕಾಪಡೆಯ ಸಬ್‌ಮರಿನ್‌ಗಳು ಆತನನ್ನು ಎತ್ತಿಹಾಕಿಕೊಂಡು ಹೋಗಿರಬಹುದೆಂದು ಬರೆದಿದ್ದ. ಒಂದು ದೇಶದ ಪ್ರಧಾನಿ ಈಜಲು ಹೋದಾಗ ಸಾಯುವುದೆಂದರೇನು? ಮುಳುಗಿ ಸತ್ತರೂ ಆತನ ಕಳೇಬರ ಸಿಗದಿರುವುದೆಂದರೇನು? ಮಾನವ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಹಾಗೂ
ಸುದೀರ್ಘ ಅವಧಿಯ ಶೋಧ (manhunt)ಎಂದು ಕರೆಯಿಸಿಕೊಂಡರೂ, ಆತನ ನಿಧನದ ಅಂತಪಾರು ಇಲ್ಲಿ ತನಕ ಗೊತ್ತಾಗಿಲ್ಲ.

ಇದೂ ಒಂದು ರೀತಿಯಲ್ಲಿ ನೇತಾಜಿ ಸಾವಿನಂತೆ ನಿಗೂಢ. ಹೋಲ್ಟ್ ಸತ್ತು ಎಷ್ಟೊಂದು ವರ್ಷಗಳಾದವು, ಆದರೂ
ಕಾರಣ ಮಾತ್ರ ತಿಳಿದಿಲ್ಲ. ಯಾವುದೇ ಹೊಸ ಥಿಯರಿ ಹೊಸೆದರೂ ಜನ ಕುತೂಹಲದಿಂದ ಓದುತ್ತಾರೆ. ಆತನ ಸಾವಿನ ಕುರಿತು ಹತ್ತಕ್ಕೂ ಹೆಚ್ಚು ಸಿನಿಮಾಗಳು ಬಂದಿವೆ. ನಾಳೆ ಮತ್ತೊಂದು ಹೊಸ ಸಿನಿಮಾವಾಗಲೀ, ಪುಸ್ತಕ ವಾಗಲೀ ಬಂದರೂ ಮೊದಲಿನ ಕುತೂಹಲದಿಂದಲೇ ನೋಡುತ್ತಾರೆ, ಓದುತ್ತಾರೆ. ಬರಹಗಾರರಿಗೆ, ಸಿನಿಮಾ ನಿರ್ದೇಶಕರಿಗೆ ಹೋಲ್ಟ್ ಯಾವತ್ತೂ ಉತ್ತಮ ವಸ್ತು. ಹೋಲ್ಟ್ ನಿಧನನಾದ ಬೀಚ್‌ನಲ್ಲಿ ಅವನ ವಿಗ್ರಹದ ಕೆಳಗೆ ಹೀಗೆ ಬರೆಯಲಾಗಿದೆ. ‘”In memory of Harold Holt, Prime Minister of Australia who loved the sea and disappeared here abouts on 17 december 1967’’.

ಇಂದಿಗೂ ಸರಕಾರಿ ದಾಖಲೆಗಳಲ್ಲಿ ಆತ ಕಣ್ಮರೆ (disappear) ಆಗಿದ್ದಾನೆಂದಿದೆಯೇ ಹೊರತು, ಸತ್ತಿದ್ದಾನೆ
ಎಂದಿಲ್ಲ. ಆತ ಕಣ್ಮರೆಯಾಗುವಾಗ 59 ವರ್ಷವಾಗಿತ್ತು. ತನ್ನ ೨೭ನೇ ವಯಸ್ಸಿನಲ್ಲಿಯೇ ಸಂಸದನಾಗಿ ಆಯ್ಕೆ ಯಾಗಿದ್ದ. ಹೋಲ್ಟ್ 32 ವರ್ಷಗಳ ಕಾಲ ಪಾರ್ಲಿಮೆಂಟ್ ಸದಸ್ಯನಾಗಿದ್ದ. ಒಂದಂತೂ ಸತ್ಯ. ಹೋಲ್ಟ್ ಹೀಗೆ ಸತ್ತಿರಬಹುದೆಂದು ಯಾರಾದರೂ ಒಂದು ಥಿಯರಿ ಸುತ್ತಿದರೆ ಇಡೀ ಆಸ್ಟ್ರೇಲಿಯಾ ಅದನ್ನು ಕೇಳುತ್ತದೆ. ನಂಬು ವುದು, ಬಿಡುವುದು ಬೇರೆ. ‘ಈಜಲು ಹೋದ ಪ್ರಧಾನಿ ಇಷ್ಟು ವರ್ಷವಾದರೂ ವಾಪಸ್ ಬಂದಿಲ್ಲ’ ಎಂಬುದಷ್ಟೇ ಸತ್ಯ.

ನೋಡಿಯೇ ಜಂತಿ ಸವೆಸಿದವರು
ನಾನು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಓದುತ್ತಿರುವ ದಿನಗಳಲ್ಲಿ ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ‘ಸಂಯುಕ್ತ ಕರ್ನಾಟಕ’ ಆಫೀಸಿಗೆ ಆಗಾಗ ಹೋಗುತ್ತಿದ್ದೆ. ‘ಸಂಯುಕ್ತ ಕರ್ನಾಟಕ’ದ ಒಂದು ಬಾಜೂಗೆ ‘ಕಸ್ತೂರಿ’ ಮಾಸಪತ್ರಿಕೆಯ ಕಚೇರಿಯಿತ್ತು. ಅದು ಹತ್ತು ಅಡಿ ಅಗಲ, ಇಪ್ಪತ್ತು ಅಡಿ ಉದ್ದದ ಹಳೆ ಕಾಲದ ಅಂಕಣದ ಮನೆಯಂತಿರುವ ಪುಟ್ಟ ಕಚೇರಿ. ಅಲ್ಲಿ ಪಾ.ವೆಂ.ಆಚಾರ್ಯರು, ಮಾಧವ ಮಹಿಷಿ ಹಾಗೂ ಗೋಪಾಲ ವಾಜಪೇಯಿ ಅವರು ಕುಳಿತಿರುತ್ತಿದ್ದರು. ನನಗೆ ಮೂವರ ಜತೆಗೂ ಪರಿಚಯ, ಒಡನಾಟವಿತ್ತು. ಈ ಮೂವರು ಬರೆಯುತ್ತಿದ್ದ ಲೇಖನಗಳನ್ನು ಓದುತ್ತಿದ್ದುದರಿಂದ ಅವರ ಬಗ್ಗೆ ಗೌರವ ಭಾವ. ‘ಪಾವೆಂ’ ಬರೆಯುತ್ತಿದ್ದ ‘ಪದಾರ್ಥ ಚಿಂತಾಮಣಿ’ ಅಂಕಣವನ್ನು ನನ್ನ ಅಜ್ಜನಿಗೆ ತಪ್ಪದೇ ಓದಿ ಹೇಳಬೇಕಾಗುತ್ತಿತ್ತು. ನನಗೆ ಏಳನೇ ವಯಸ್ಸಾದಂದಿನಿಂದ ಹದಿನಾರ ರವರೆಗೆ ‘ಕಸ್ತೂರಿ’ಯ ಪ್ರತಿಯೊಂದು ಸಂಚಿಕೆಯನ್ನು ಆರಂಭದಿಂದ ಕೊನೆಯತನಕ ನನ್ನ ಅಜ್ಜನಿಗೆ ಓದಿ ಹೇಳುತ್ತಿದ್ದೆ. ಆನಂತರ ‘ಕಸ್ತೂರಿ’ ನನ್ನ ಓದಿನ ಭಾಗವೇ ಆಯಿತು. ಹೀಗಾಗಿ ‘ಕಸ್ತೂರಿ’ಯನ್ನು ರೂಪಿಸುತ್ತಿದ್ದ
ಈ ಮೂವರ ಬಗ್ಗೆ ವಿಶೇಷ ಆದರ.

‘ಕಸ್ತೂರಿ’ ಕಚೇರಿಗೆ ಹೋದರೆ ಆ ಮೂವರೂ ಪ್ರೀತಿಯಿಂದ ಮಾತಾಡಿಸುತ್ತಿದ್ದರು. ಆದರೆ ಈ ಮೂವರು ತಮ್ಮ ತಮ್ಮಲ್ಲಿ ಮಾತಾಡಿಕೊಳ್ಳುತ್ತಿದ್ದುದನ್ನು ನಾನು ನೋಡಿರಲಿಲ್ಲ. ಈ ಬಗ್ಗೆ ಅವೆಷ್ಟೋ ವರ್ಷಗಳ ನಂತರ ಗೋಪಾಲ ವಾಜಪೇಯಿ ಅವರಲ್ಲಿ ಕೇಳಿದಾಗ, ‘ಹೌದು, ನಿಮ್ಮ ಗ್ರಹಿಕೆ ಸರಿಯಾಗಿದೆ. ನಾವು ಮೂವರು ಎದುರಾಬದುರು ಹೆಚ್ಚಾಗಿ ಮಾತಾಡಿಕೊಳ್ಳುತ್ತಿರಲಿಲ್ಲ. ಬೆನ್ನ ಹಿಂದೆ ಮಾತಾಡಿಕೊಳ್ಳುತ್ತಿದ್ದೆವು’ ಎಂದು ತಮಾಷೆಯಾಗಿ ಹೇಳಿದ್ದರು.

ನಾನು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಓದುವಾಗ ಮಾಧವ ಮಹಿಷಿ ಅವರ ಜತೆ ಹೆಚ್ಚಿನ ಒಡನಾಟ ಬಂತು.
ಅಷ್ಟೊತ್ತಿಗೆ ‘ಪಾವೆಂ’ ನಿವೃತ್ತರಾಗಿದ್ದರು. ಮಹಿಷಿ ಹಾಗೂ ವಾಜಪೇಯಿ ಮಾತ್ರ ಕುಳಿತಿರುತ್ತಿದ್ದರು. ಇಡೀ ದಿನ ‘ಕಸ್ತೂರಿ’ ಕಚೇರಿಯಲ್ಲಿದ್ದರೂ, ಇವರಿಬ್ಬರಲ್ಲಿ ನಡೆಯುತ್ತಿದ್ದುದು ಮೌನ ಸಂಭಾಷಣೆಯೇ. ಕಾಟಾಚಾರಕ್ಕೂ ಮಾತಾಡುತ್ತಿರಲಿಲ್ಲ. ಆದರೆ ಪತ್ರಿಕೆ ಮಾತ್ರ ಸರಿಯಾದ ಕಾಲಕ್ಕೆ ಚೆಂದವಾಗಿಯೇ ಹೊರಬರುತ್ತಿತ್ತು. ಅದಕ್ಕೆ ಅವರ ನಡುವೆ ದಟ್ಟವಾಗಿ ಹಾಸಿದ್ದ ಆ ಮೌನವೇ ಕಾರಣವಿದ್ದಿರಬಹುದಾ ಎಂಬುದು ನಿಗೂಢವೇ. ‘ಕಸ್ತೂರಿ’ ಕಚೇರಿಯಲ್ಲಿ ಈ ‘ಮೌನ ಪರಂಪರೆ’ ಆರಂಭದಿಂದ ನಡೆದುಕೊಂಡು ಬಂದಿರುವುದಕ್ಕೆ ಪಕ್ಕದ ‘ಸಂಯುಕ್ತ ಕರ್ನಾಟಕ’ದ ಸಿಬ್ಬಂದಿಯೇ ಸಾಕ್ಷಿ.

ನಾನು ‘ಸಂಯುಕ್ತ ಕರ್ನಾಟಕ’ ಸೇರುವ ಹೊತ್ತಿಗೆ ‘ಕಸ್ತೂರಿ’ ಕಚೇರಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಸ್ಥಳಾಂತರ ವಾಗಿತ್ತು. ಪ್ರತಿಸಲ ಹುಬ್ಬಳ್ಳಿಯ ‘ಸಂಯುಕ್ತ ಕರ್ನಾಟಕ’ಕ್ಕೆ ಹೋದಾಗ ‘ಕಸ್ತೂರಿ’ ಕಡೆ ಮುಖ ಹಾಕಿದರೆ ಆ ಮೌನವೇ ಸ್ವಾಗತಿಸುತ್ತಿತ್ತು.

ಆಫೀಸಿನಲ್ಲಿದ್ದ ಪಾವೆಂ, ಮಹಿಷಿ ಹಾಗೂ ವಾಜಪೇಯಿ ಮೇಲಿನ ಜಂತಿ ನೋಡುತ್ತಾ ಸುಮ್ಮನೆ ಕುಳಿತು ಏನೋ ಯೋಚನೆಯಲ್ಲಿ ಮಗ್ನರಾಗಿರುತ್ತಿದ್ದರು. ಇದು ನನ್ನೊಬ್ಬನದೇ ಅನುಭವವಲ್ಲ. ‘ಸಂಯುಕ್ತ ಕರ್ನಾಟಕ’ದ ಹಿರಿಯ ಪತ್ರಕರ್ತರೂ ಈ ‘ಜಂತಿ ವೀಕ್ಷಣೆ’ಯ ಬಗ್ಗೆ ಆಡಿಕೊಂಡು ನಗುತ್ತಿದ್ದರು. ‘ಕಸ್ತೂರಿ’ ಕಚೇರಿಯ ಐದಾರು ಜಂತಿಗಳು ಕಪ್ಪಾಗಿ ಸವೆದು ಹೋಗಿದ್ದವು. ಗೋಡೆ ಸುಣ್ಣ ಬಣ್ಣ ಕಾಣದೇ ಬಹಳ ವರ್ಷಗಳೇ ಆಗಿದ್ದವು. ಅಲ್ಲಿನ ಮೇಜುಗಳು, ಕುರ್ಚಿಗಳು ಬೆವರಿನಿಂದ ಕಪ್ಪಾಗಿ ಹೋಗಿದ್ದವು. ಕಚೇರಿಯ ಜಂತಿ ಸವೆದಿದ್ದಕ್ಕೆ ಕಾರಣವೇನಿದ್ದಿ ರಬಹುದೆಂದು
ಒಮ್ಮೆ ‘ಸಂಯುಕ್ತ ಕರ್ನಾಟಕ’ದ ಕಚೇರಿಯಲ್ಲಿ ದೊಡ್ಡ ಚರ್ಚೆಯೇ ನಡೆದಿತ್ತು. ಕೊನೆಯಲ್ಲಿ ಗೊತ್ತಾಗಿದ್ದೇನೆಂದರೆ ಪಾವೆಂ, ಮಹಿಷಿ, ವಾಜಪೇಯಿ ಹತ್ತಾರು ವರ್ಷಗಳ ಕಾಲ ಸುಮ್ಮನೆ ಕುಳಿತು ದಿಟ್ಟಿಸಿ ನೋಡಿದ್ದೇ ಆ ಜಂತಿ ಸವೆದು ಹೋಗಲು ಕಾರಣ!

ಕಣ್ಣಿಲ್ಲದವರು ಅದೃಷ್ಟಹೀನರಾ?

ಆಕರ್ಷಕ ಯುವತಿಯೊಬ್ಬಳು ಕೈಯಲ್ಲಿ ಕೋಲು ಹಿಡಿದು, ತಡವುತ್ತಾ ನಿಧಾನವಾಗಿ ಬಸ್ ಹತ್ತಿದಳು. ಡ್ರೈವರ್‌ಗೆ ಹಣ ಕೊಟ್ಟು, ಕೈಯಿಂದ ತಡವುತ್ತಾ ಮುಂದೆ ನಡೆದು, ಅಲ್ಲೇ ಹತ್ತಿರದಲ್ಲಿ ಖಾಲಿಯಿದ್ದ ಸೀಟಿನ ಮೇಲೆ ಕುಳಿತಳು. ಬ್ರೀಫ್ ಕೇಸನ್ನು ತೊಡೆಯ ಮೇಲಿರಿಸಿಕೊಂಡು, ಕೋಲನ್ನು ಕಾಲಿನ‌ ಪಕ್ಕದಲ್ಲಿಟ್ಟುಕೊಂಡಳು. ಅಲ್ಲಿದ್ದ ಪ್ರಯಾಣಿಕ ರೆಲ್ಲರೂ ‘ಅಯ್ಯೋ ಪಾಪ’ ಎಂಬಂತೆ ನೋಡಿದರು. 34 ವರ್ಷದ ಸುಸಾನ್‌ಳಿಗೆ ದೃಷ್ಟಿ ಹೋಗಿ ಒಂದು ವರ್ಷ ವಾಗುತ್ತಾ ಬಂತು. ಯಾವುದೋ ರೋಗಕ್ಕೆ ಇನ್ಯಾವುದೋ ಚಿಕಿತ್ಸೆ ಕೊಟ್ಟಿದ್ದರಿಂದ ಆಕೆ ದೃಷ್ಟಿ ಕಳೆದುಕೊಂಡಳು. ಇದ್ದಕ್ಕಿದ್ದಂತೆ ವಿಧಿ ಅವಳನ್ನು ಕತ್ತಲೆಯ, ಹತಾಶೆಯ, ಖಿನ್ನತೆಯ, ಕೀಳರಿಮೆಯ ಲೋಕಕ್ಕೆ ದೂಡಿಬಿಟ್ಟಿತ್ತು. ಈಗ ಅವಳ ಪಾಲಿನ ಏಕೈಕ ಆಶಾಕಿರಣವೆಂದರೆ ಪತಿ ಮಾರ್ಕ್.

ಮಾರ್ಕ್ ಏರ್ ಫೋರ್ಸ್‌ನಲ್ಲಿ ಅಧಿಕಾರಿ. ಆತ ಹೆಂಡತಿಯನ್ನು ಬಹಳ ಪ್ರೀತಿಸುತ್ತಿದ್ದ. ದೃಷ್ಟಿ ಕಳೆದುಕೊಂಡಾಗ ಅವಳು ಖಿನ್ನತೆಗೆ ಜಾರುತ್ತಿರುವುದು ಮಾರ್ಕ್‌ನ ಗಮನಕ್ಕೆ ಬಂತು. ಹೇಗಾದರೂ ಸರಿ, ಹೆಂಡತಿ ಮತ್ತೆ ಮೊದಲಿ ನಂತಾಗಬೇಕು, ಕಣ್ಣಿಲ್ಲ ಎಂಬುದು ಕೊರತೆಯಾಗದೆ ಆಕೆ ಮೊದಲಿನಷ್ಟೇ ಆತ್ಮವಿಶ್ವಾಸದಿಂದ ತನ್ನ ಕೆಲಸ ಗಳೆಲ್ಲವನ್ನು ತಾನೇ ಮಾಡುವಂತಾಗಬೇಕು ಎಂದು ಮಾರ್ಕ್ ನಿರ್ಧರಿಸಿದ. ಕೊನೆಗೊಂದು ದಿನ ಸುಸಾನ್ ಮರಳಿ ಕೆಲಸಕ್ಕೆ ಹೋಗಲು ತಯಾರಾದಳು. ಆದರೆ ಕಚೇರಿಗೆ ಹೇಗೆ ಹೋಗುವುದು? ಮೊದಲು ಆಕೆ ಬಸ್‌ನಲ್ಲಿ ಹೋಗು ತ್ತಿದ್ದಳು.

ಆದರೀಗ ಅವಳಿಗೆ ಒಬ್ಬಳೇ ಮನೆಯಿಂದ ಹೊರಗೆ ಹೋಗಲು ಹೆದರಿಕೆಯಾಗುತ್ತಿದೆ. ಸಿಟಿಯ ಒಂದು ತುದಿಯಲ್ಲಿ ಅವನ ಕಚೇರಿಯಿದ್ದರೆ, ಇನ್ನೊಂದು ತುದಿಯಲ್ಲಿ ಸುಸಾನ್‌ಳ ಆಫೀಸಿತ್ತು. ಮೊದಲೆಲ್ಲ ಮಾರ್ಕ್ ಅವಳನ್ನು ಕಾರಿನಲ್ಲಿ ಆಫೀಸಿನವರಿಗೆ ಬಿಟ್ಟು ಹೋಗುತ್ತಿದ್ದ. ಆಕೆಗೂ ಇದು ಅನುಕೂಲ ಹಾಗೂ ನೆಮ್ಮದಿಯೆನಿಸಿತು. ಮಾರ್ಕ್‌ಗೆ ಹೆಂಡತಿಯನ್ನು ಜೋಪಾನವಾಗಿ ಕಚೇರಿ ಸೇರಿಸಿದ ಸಮಾಧಾನ. ಆದರೆ ದಿನ ಕಳೆದಂತೆ ಇದ್ಯಾಕೋ ಸರಿ ಹೋಗುತ್ತಿಲ್ಲ ಎಂದು ಮಾರ್ಕ್‌ಗೆ ಅನ್ನಿಸತೊಡಗಿತು.

ಸುಸಾನ್ ಒಬ್ಬಳೇ ಬಸ್‌ನಲ್ಲಿ ಓಡಾಡುವಂತಾಗಬೇಕು ಎಂದು ಮನಸ್ಸಿನಲ್ಲೇ ಅಂದುಕೊಂಡ. ಅದನ್ನು ಅವಳ ಬಳಿ ಹೇಳಿದ. ಆಕೆಗೆ ದೊಡ್ಡ ಶಾಕ್! ಅದು ಹೇಗೆ ತನ್ನ ಗಂಡ ಹೀಗೆ ಹೇಳಲು ಸಾಧ್ಯ? ‘ನಾನು ಕುರುಡಿ! ನಾನು ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಎಂಬುದು ನನಗೆ ಹೇಗೆ ಗೊತ್ತಾಗಬೇಕು? ನೀನು ನನ್ನನ್ನು ಬಿಡುವ ಯೋಚನೆ ಮಾಡುತ್ತಿದ್ದೀಯ?’ ಎಂದು ಸಿಟ್ಟಿನಲ್ಲಿ ಅರಚಿದಳು.

ಅದನ್ನು ಕೇಳಿ ಮಾರ್ಕ್‌ಗೆ ತುಂಬಾ ಬೇಸರವಾಯಿತು. ಅದರೆ ಏನು ಮಾಡಬೇಕು ಎಂಬುದು ಆತನಿಗೆ ಚೆನ್ನಾಗಿ ಗೊತ್ತಿತ್ತು. ಒಬ್ಬಳೇ ತಿರುಗಾಡಲು ಅಭ್ಯಾಸವಾಗುವವರೆಗೆ, ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತಾನೂ ಆಕೆಯೊಂದಿಗೆ ಬಸ್‌ನಲ್ಲಿ ಬರುವುದಾಗಿ ಹೇಳಿ ಸುಸಾನ್‌ಳನ್ನು ಒಪ್ಪಿಸಿದ. ಹಾಗೆಯೇ ನಡೆದುಕೊಂಡ ಕೂಡ. ಎರಡು ವಾರಗಳ ಕಾಲ ಮಾರ್ಕ್ ತನ್ನ ಮಿಲಿಟರಿ ಸಮವಸ್ತ್ರದಲ್ಲಿ ಸುಸಾನ್ ಜತೆ ಬಸ್‌ನಲ್ಲಿ ಕಚೇರಿಗೆ ಹೋಗಿ ಮತ್ತೆ ಸಂಜೆ ವಾಪಸ್ ಬರುವಾಗಲೂ ಜತೆಯಾದ. ಇತರೆ ಇಂದ್ರಿಯಗಳನ್ನು ಅದರಲ್ಲೂ ಮುಖ್ಯವಾಗಿ ಶಬ್ದಗಳನ್ನು ಸೂಕ್ಷ್ಮವಾಗಿ ಗ್ರಹಿಸಿ
ತಾನೆಲ್ಲಿದ್ದೇನೆ ಎಂದು ಅರಿತುಕೊಂಡು ಸುತ್ತಲಿನ ಪರಿಸರಕ್ಕೆ ಹೇಗೆ ಹೊಂದಿಕೊಳ್ಳಬೇಕು ಎಂಬುದೆಲ್ಲವನ್ನು ಆಕೆಗೆ ಕಲಿಸಿದ. ಆಕೆಗೆ ನೆರವಾಗಬಲ್ಲ ಕೆಲ ಡ್ರೈವರ್‌ಗಳನ್ನೂ ಆಕೆಗೆ ಪರಿಚಯ ಮಾಡಿಕೊಟ್ಟ.

ಸುಸಾನ್ ಏಕಾಂಗಿಯಾಗಿ ಬಸ್‌ನಲ್ಲಿ ಓಡಾಡುವುದಕ್ಕೆ ಕೊನೆಗೂ ಧೈರ್ಯ ಮಾಡಿದಳು. ಸೋಮವಾರ ಬೆಳಗ್ಗೆ ಬಂತು. ಮನೆಯಿಂದ ಹೊರಡುವುದಕ್ಕೆ ಮುಂಚೆ ಸ್ವಲ್ಪ ದಿನಗಳ ಬಸ್ ಸ್ಟ್ಯಾಂಡ್, ಜೀವಮಾನದ ಬೆಸ್ಟ್-ಂಡ್ ಮಾರ್ಕ್‌ನನ್ನು ಆಲಿಂಗಿಸಿದಳು. ಆತನ ತಾಳ್ಮೆ, ತ್ಯಾಗ, ಪ್ರೀತಿ, ನಿಯತ್ತನ್ನು ನೆನೆದು ಆಕೆಗೆ ಕೃತಜ್ಞತೆಯ ಕಣ್ಣೀರು ಬಂತು. ಎಷ್ಟೋ ದಿನಗಳ ನಂತರ ಅವತ್ತು ಇಬ್ಬರೂ ತಂತಮ್ಮ ದಾರಿ ಹಿಡಿದು ಹೊರಟರು. ಮಂಗಳವಾರ,
ಬುಧವಾರ, ಗುರುವಾರ… ಹೀಗೆ ದಿನಗಳು, ಆಕೆಯ ಬಸ್ ಪ್ರಯಾಣ ಎರಡೂ ಸುಸೂತ್ರವಾಗಿ ಸಾಗಿದವು. ತನಗೇ ಆಶ್ಚ
ರ್ಯವಾಗುವಂತೆ ಅವಳು ಒಬ್ಬಳೇ ಓಡಾಡುವುದನ್ನು ಅಭ್ಯಾಸ ಮಾಡಿಕೊಂಡಳು. ಶುಕ್ರವಾರ ಬೆಳಗ್ಗೆ ಸುಸಾನ್ ಎಂದಿನಂತೆ ಕೆಲಸಕ್ಕೆ ಹೊರಟು, ಬಸ್ ಏರಿದಳು. ಕಚೇರಿಯಿದ್ದ ಸ್ಥಳ ತಲುಪಿ ಇನ್ನೇನು ಬಸ್ ಇಳಿಯಬೇಕು ಎಂದುಕೊಳ್ಳುತ್ತಿರುವಾಗ ಡ್ರೈವರ್, ‘ಲೇಡಿ, ನನಗೆ ನಿನ್ನನ್ನು ನೋಡಿದರೆ ಹೊಟ್ಟೆಕಿಚ್ಚಾಗುತ್ತದೆ’ ಎಂದ. ಈ ಡ್ರೈವರ್ ತನ್ನೊಂದಿಗೆ ಮಾತಾಡುತ್ತಿರುವುದು ಹೌದೋ, ಅಲ್ಲವೋ ಎಂದು ಆಕೆಗೆ ಅನುಮಾನವಾಯ್ತು.

ಅಷ್ಟಕ್ಕೂ ಈ ಜಗತ್ತಿನಲ್ಲಿ ಯಾರಾದರು ಕುರುಡಿಯನ್ನು ನೋಡಿ ಹೊಟ್ಟೆಕಿಚ್ಚು ಪಡುವವರಿದ್ದಾರೆಯೇ ಎಂದು ಆಶ್ಚರ್ಯಪಟ್ಟಳು. ‘ನನ್ನನ್ನು ನೋಡಿ ಅಸೂಯೆ ಪಟ್ಟುಕೊಳ್ಳುತ್ತಿದ್ದೀರಾ?’ ಎಂದು ಅನುಮಾನದಿಂದಲೇ ಡ್ರೈವರ್‌ನನ್ನು ಕೇಳಿದಳು. ‘ಹೌದು, ನಿನಗೆ ಸಿಗುತ್ತಿರುವ ಕಾಳಜಿ, ರಕ್ಷಣೆ ಎಲ್ಲರಿಗೂ ಸಿಗುವುದಿಲ್ಲ’ ಎಂದ ಆ ಡ್ರೈವರ್. ಸುಸಾನ್‌ಳಿಗೆ ಅರ್ಥವಾಗಲಿಲ್ಲ. ‘ನೀವೇನು ಹೇಳುತ್ತಿದ್ದೀರಿ ನನಗೆ ಅರ್ಥವಾಗುತ್ತಿಲ್ಲ’ ಎಂದಳು.

‘ಕಳೆದ ಒಂದು ವಾರದಿಂದ ನಾನು ನೋಡುತ್ತಿದ್ದೇನೆ. ಒಬ್ಬ ಸುಂದರಕಾಯದ, ಮಿಲಿಟರಿ ಸಮವಸ್ತ್ರ ಧರಿಸಿದ ಸಭ್ಯ ವ್ಯಕ್ತಿ ನಿಮ್ಮನ್ನು ಹಿಂಬಾಲಿಸುತ್ತಿದ್ದಾನೆ. ನೀವು ಬಸ್‌ನಿಂದ ಇಳಿದು, ಸುರಕ್ಷಿತವಾಗಿ ರಸ್ತೆ ದಾಟಿ ನಿಮ್ಮ ಆಫೀಸ್ ತಲುಪುವವರೆಗೂ ಆತ ನಿಮ್ಮನ್ನು ಗಮನಿಸುತ್ತಿರುತ್ತಾನೆ. ಕೊನೆಗೆ ನಿಮಗೊಂದು ಸೆಲ್ಯೂಟ್ ಹೊಡೆದು ವಾಪಸಾಗು ತ್ತಾನೆ. ನೀವು ಬಹಳ ಅದೃಷ್ಟವಂತೆ’ ಅಂದ ಆ ಡ್ರೈವರ್. ಸುಸಾನ್‌ಳ ಕಣ್ಣುಗಳಿಂದ ಆನಂದ ಬಾಷ್ಪ ಹರಿಯಿತು. ಆಕೆಗೆ ಮಾರ್ಕ್‌ನನ್ನು ಕಣ್ಣಿನಿಂದ ನೋಡಲಾಗದಿದ್ದರೂ, ಆತ ಜತೆಗಿದ್ದಂತೆ ಭಾಸವಾಗುತ್ತಿತ್ತು. ಡ್ರೈವರ್ ಹೇಳಿದಂತೆಯೇ ಅವಳು ಅದೃಷ್ಟವಂತೆ, ಎಲ್ಲರಿ ಗಿಂತಲೂ ಹೆಚ್ಚು ಅದೃಷ್ಟವಂತೆ. ಮಾರ್ಕ್ ಅವಳಿಗೆ ಕಣ್ಣಿನ ದೃಷ್ಟಿಗಿಂತಲೂ ಶಕ್ತಿಶಾಲಿಯಾದ ಬಹುಮಾನ, ಕತ್ತಲೆಯಲ್ಲೂ ಬೆಳಕು ಮೂಡಿಸುವ ಪ್ರೀತಿಯನ್ನು ಕಾಣಲು ಕಣ್ಣುಗಳೇ ಬೇಡ ಎಂಬ ನಂಬಿಕೆಯ ಬಹುಮಾನವನ್ನು ನೀಡಿದ್ದ. ಸ್ನೇಹಿತೆಯೊಬ್ಬಳು ಕಳುಹಿಸಿದ ಈ ಕತೆಯನ್ನು ಯಾಕೋ ನಿಮಗೆ ಹೇಳಬೇಕೆನಿಸಿತು.

ಸೋಲುವುದೆಂದರೆ ಅಲರ್ಜಿ
ಬಹಳ ಜನರಿಗೆ ಗೊತ್ತಿಲ್ಲ, ಧೀರೂಭಾಯಿ ಅಂಬಾನಿ ತನ್ನ ಬಿಜಿನೆಸ್‌ನ ಆರಂಭಿಕ ದಿನಗಳಲ್ಲಿ ಚಂಪಕ್‌ಲಾಲ್ ದಮಾನಿ ಎಂಬುವನನ್ನು ಪಾಲುದಾರನನ್ನಾಗಿಟ್ಟುಕೊಂಡಿದ್ದರು. ಅದೊಂದು ಜಂಟಿ ಉದ್ಯಮ ಹಾಗೂ ಇಬ್ಬರೂ
ಸಮಪ್ರಮಾಣದ ಪಾಲುದಾರರು. ಆದರೆ ಅವರಿಬ್ಬರಲ್ಲಿ ಸಾಮ್ಯತೆ ಇರಲಿಲ್ಲ. ದಮಾನಿ ಬಹಳ ನಾಜೂಕಿನ, ಅಳುಕಿನ
ವ್ಯವಹಾರಸ್ಥ. ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧನಿರಲಿಲ್ಲ. ಆದರೆ ಅಂಬಾನಿ ಹಾಗಲ್ಲ, ದಮಾನಿಗೆ ಸರೀ ವಿರುದ್ಧ. ಈ ಬಿಜಿನೆಸ್‌ನಲ್ಲಿ ಬಹಳ ಹಣವಿದೆ ಎಂದೆನಿಸಿದರೆ ಅದನ್ನು ಗಳಿಸಲು ಎಂಥ ರಿಸ್ಕನ್ನಾದರೂ ಸ್ವೀಕರಿಸಲು ಸಿದ್ಧ. ಒಮ್ಮೆ ಅಂಬಾನಿ ಯಾರ್ನ್ ಮೇಲೆ ಬೃಹತ್ ಹಣವನ್ನು ಹೂಡಿದರು.

ಸದ್ಯದಲ್ಲಿಯೇ ಅದರ ಬೇಡಿಕೆ ಹೆಚ್ಚಾಗಿ ವಿಪರೀತ ಲಾಭವಾಗುತ್ತದೆಂಬುದು ಅವರ ಎಣಿಕೆಯಾಗಿತ್ತು. ಆದರೆ ಅಂಬಾನಿ ನಿರ್ಧಾರದಿಂದ ದಮಾನಿಗೆ ತೀವ್ರ ಅಸಮಾಧಾನವಾಯಿತು. ಯಾರ್ನ್ ಮೇಲೆ ತೊಡಗಿಸಿದ ಷೇರುಗಳನ್ನು ಮಾರುವಂತೆ ಒತ್ತಾಯ ಮಾಡಿದರು. ಅಂಬಾನಿ ಹೇಳುವಷ್ಟು ಹೇಳಿದರು, ದಮಾನಿ ಕೇಳಲಿಲ್ಲ. ಬೇರೆ ದಾರಿಯಿಲ್ಲದೆ ಆ ಎಲ್ಲ ಷೇರುಗಳನ್ನು ಮಾರಲು ಒಪ್ಪಿದರು. ಆಗ ಅಂಬಾನಿ ಒಂದು ಉಪಾಯ ಹೂಡಿದರು. ಆ ಎಲ್ಲ ಷೇರು ಗಳನ್ನು ಬೇರೆಯವರ ಹೆಸರಿನಲ್ಲಿ ತಾವೇ ಖರೀದಿಸಿದರು. ಕೆಲವೇ ದಿನಗಳಲ್ಲಿ ಯಾರ್ನ್ ಬೆಲೆ ವಿಪರೀತ ಏರಿತು. ಅಂಬಾನಿ ಲೆಕ್ಕಾಚಾರ ಫಲಿಸಿತು. ಈ ಒಂದು ನಿರ್ಧಾರದಿಂದ ಅಂಬಾನಿಗೆ ಭಾರಿ ಲಾಭ ಬಂತು. ಆಗ ಅಂಬಾನಿ ದಮಾನಿಯನ್ನು ಕರೆದು, ‘ಈ ಲಾಭವನ್ನು ನಾನು ನಿನ್ನೊಂದಿಗೆ ಹಂಚಿಕೊಳ್ಳಲು ಸಿದ್ಧ. ಆದರೆ ಇನ್ನು ಮುಂದೆ ನಾನು ತೆಗೆದುಕೊಳ್ಳುವ ಕ್ರಮವನ್ನು ನೀನು ಪ್ರಶ್ನಿಸಬಾರದು, ಮಧ್ಯೆ ಪ್ರವೇಶಿಸಕೂಡದು’ ಎಂದರು.

ದಮಾನಿ ಮಹಾ ಅಂಜುಬುರುಕ. ನಷ್ಟವಾದರೆ ಗತಿಯೇನು ಎಂದು ಹೆದರಿದ. ಇಂಥ ಮನುಷ್ಯನ ಜತೆ ಪಾಲುದಾರಿಕೆ
ಸಾಧ್ಯವೇ ಇಲ್ಲವೆಂದು ಅಂಬಾನಿ ಅದನ್ನು ಕಡಿದುಕೊಂಡರು. ಅದಾದ ಬಳಿಕ ಯಾರೂ ಚಂಪಕ್‌ಲಾಲ್ ದಮಾನಿಯ ಹೆಸರನ್ನು ಕೇಳಲಿಲ್ಲ!

ದಾವಲ್ ಭಾಟಿಯಾ ಬರೆದ He swan with sharks for an Icecream ಎಂಬ ಪುಸ್ತಕವನ್ನು ನಾನು ಇತ್ತೀಚೆಗೆ ಓದುತ್ತಿದ್ದೆ. ಆ ಪುಸ್ತಕದ ಶೀರ್ಷಿಕೆಯೇ ಆಕರ್ಷಕವಾಗಿದೆ. ಆ ಶೀರ್ಷಿಕೆಗೆ ಪ್ರೇರಣೆಯೇ ಧೀರೂಭಾಯಿ ಅಂಬಾನಿ. ಒಮ್ಮೆ ಅಂಬಾನಿ ಹಡಗಿನಲ್ಲಿ ಹೋಗುತ್ತಿದ್ದರಂತೆ. ಪಕ್ಕದಲ್ಲಿ ಏಳೆಂಟು ಮಂದಿ ಪೈಕಿ ಒಬ್ಬ ‘ಯಾರಾದರೂ ಅಲ್ಲಿ ಕಾಣುವ ದಡದ ತನಕ ಈಜಿ ವಾಪಸ್ ಬಂದಿದ್ದೇ ಆದಲ್ಲಿ ಅವರಿಗೆ ಐಸ್‌ಕ್ರೀಮ್ ಕೊಡಿಸುತ್ತೇನೆ’ ಎಂದಿದ್ದು ಅಂಬಾನಿ ಕಿವಿಗೆ ಬಿತ್ತು. ಅಂಬಾನಿ ಅವನ ಬಳಿ ಬಂದು, ‘ನಾನು ಈ ಬೆಟ್‌ನಲ್ಲಿ ಭಾಗವಹಿಸಬಹು ದಾ?’ ಎಂದು ಕೇಳಿದ್ದಕ್ಕೆ ಆಗಬಹುದೆಂಬಂತೆ ತಲೆಯಾಡಿಸಿದ.

ಆದರೆ ಅಲ್ಲಿ ಅಪಾಯಕಾರಿ ಶಾರ್ಕ್ ಮೀನುಗಳಿವೆ ಎಂಬುದನ್ನು ಹೇಳಲಿಲ್ಲ. ಅಂಬಾನಿಗೆ ಅದು ಗೊತ್ತಿರಲಿಲ್ಲ. ಹಿಂದೆ-ಮುಂದೆ ನೋಡದೆ ಅಂಬಾನಿ ನೀರಿಗೆ ಜಿಗಿದೇಬಿಟ್ಟರು! ಶಾರ್ಕ್ ತುಂಬಿದ ಆ ನೀರಿನಲ್ಲಿ ಸ್ವಲ್ಪವೂ ಹೆದರದೇ ದಡ ತಲುಪಿ ಪುನಃ ಹಡಗಿಗೆ ಬಂದರು. ಒಂದು ಐಸ್‌ಕ್ರೀಮ್‌ಗಾಗಿ ಅಂಬಾನಿ ಈ ಸಾಹಸಕ್ಕೆ ಮುಂದಾದರಾ? ಖಂಡಿತ ವಾಗಿಯೂ ಊಹುಂ- ಅಲ್ಲವೇ ಅಲ್ಲ. ಅಂಬಾನಿಗೆ ಆ ಬೆಟ್‌ನಲ್ಲಿ ಗೆಲ್ಲುವುದು ಮುಖ್ಯವಾಗಿತ್ತೇ ಹೊರತು ಐಸ್‌ಕ್ರೀಮ್ ತಿನ್ನುವುದಾಗಿರಲಿಲ್ಲ. ಅವರು ಐಸ್‌ಕ್ರೀಮ್‌ಗಾಗಿ ಪ್ರಾಣ ಕಳೆದುಕೊಳ್ಳುವುದಷ್ಟು ಹುಂಬರಾಗಿರಲಿಲ್ಲ. ಆದರೆ ಜಿದ್ದಿನಲ್ಲಿ ಪೈಪೋಟಿಯಲ್ಲಿ ಪ್ರಾಣವನ್ನೇ ಒತ್ತೆಯಿಡಲು ಸಿದ್ಧರಿದ್ದರು. ಗೆಲ್ಲುವುದೇ ಮುಖ್ಯವಾಗಿತ್ತು.

ಅಂಬಾನಿಗೆ ಜೀವನದಲ್ಲಿ ಕೊನೆ ಉಸಿರಿರುವ ತನಕ ತಮ್ಮ ವ್ಯವಹಾರದಲ್ಲಿ ಇಂಥದೇ ಧೈರ್ಯ, ದಾಢಸಿತನವನ್ನು ಪ್ರದರ್ಶಿಸಿದ್ದರಿಂದಲೇ ರಿಲಾಯನ್ಸ್ ಕಂಪನಿ ಭಾರತದಲ್ಲೇ ನಂಬರ್ 1 ಸಂಸ್ಥೆಯಾಯಿತು. ಪಾನಿಪೂರಿ ಮಾರುತ್ತಿದ್ದ ವ್ಯಕ್ತಿ ಲಕ್ಷಾಂತರ ಜನರಿಗೆ ನೌಕರಿ ಕೊಡುವ ತನಕ ಬೆಳೆದರು. ದೇಶದ ಅತ್ಯಂತ ಶ್ರೀಮಂತರಾದರು! ಮೋಸ ಮಾಡಿದರೆ ಇಷ್ಟೆಲ್ಲ ಹಣ ಗಳಿಸಲಾಗುವುದಿಲ್ಲ.

ಇದನ್ನೂ ಓದಿ: Vishweshwar Bhat Column: ಗೊಯೆಂಕಾ ಮಾಡಿದ ಸಾಹಸ