Saturday, 28th September 2024

Vishweshwar Bhat Column: ಸ್ವರ್ಗದಲ್ಲಿ ಪತ್ರಕರ್ತರಿರುವುದು ಸಾಧ್ಯವೇ ಇಲ್ಲ !

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ಬೇರೆಯವರ ಬಗ್ಗೆ ಬರೆದು ಬರೆದು ಬೇಸರವಾಗಿದೆ. ಎಷ್ಟು ದಿನ ಅಂತ ಬೇರೆಯವರನ್ನ ಟೀಕಿಸುವುದು, ಕಾಲೆಳೆಯುವುದು? ಈ ವಾರ, ಫಾರ್ ಎ ಚೇಂಚ್, ನಮ್ಮ ಬಗ್ಗೆ ಅಂದರೆ ಪತ್ರಕರ್ತರ ಕುರಿತು ಒಂದು ಕಾಲ್ಪನಿಕ ಪ್ರಸಂಗವನ್ನು ಹೇಳುತ್ತೇನೆ. ಒಮ್ಮೆ ಪತ್ರಕರ್ತ ನಿಧನನಾದ. ಆತ ನೇರವಾಗಿ ಸ್ವರ್ಗಕ್ಕೆ ಹೋದ. ಅಲ್ಲಿನ ಬಾಗಿಲು ಮುಚ್ಚಿತ್ತು. ಬಾಗಿಲು ಬಡಿದು ಅದನ್ನು ತೆರೆಯುವಂತೆ ಕೂಗಿದ.

ಒಂದು ಸಣ್ಣ ಕಿಟಕಿಯ ಬಾಗಿಲು ಬಡಿದು ಅದನ್ನು ತೆರೆಯುವಂತೆ ಕೂಗಿದ. ಬಾಗಿಲು ತೆರೆಯಿತು. ಒಳಗಿನಿಂದ ಚಿತ್ರಗುಪ್ತ ಹೇಳಿದ ‘ಕ್ಷಮಿಸು, ಸ್ವರ್ಗದಲ್ಲಿ ಪತ್ರಕರ್ತರಿಗೆ ಇಂತಿಷ್ಟು ಅಂತಾ ಕೋಟಾ ಇದೆ. ಅದು ಈಗ ಭರ್ತಿಯಾಗಿದೆ. ನಾವು ಇಲ್ಲಿ ಹನ್ನೆರಡು ಮಂದಿ ಪತ್ರಕರ್ತರನ್ನಷ್ಟೇ ಇಟ್ಟುಕೊಳ್ಳುತ್ತೇವೆ. ಅವರಿಗೂ ಇಲ್ಲಿ ಕೆಲಸ ಇಲ್ಲ. ಯಾಕೆಂದರೆ ಇದು ಸ್ವರ್ಗ. ಇಲ್ಲಿ ಯಾವ ಪಾಪಕಾರ‍್ಯ, ಅಹಿತಕರ ಘಟನೆ ನಡೆಯುವುದಿಲ್ಲವಲ್ಲ. ಹೀಗಾಗಿ ಅವರಿಗೆ ಇಲ್ಲಿ ಯಾವ ಸುದ್ದಿಯೂ ಸಿಗುವುದಿಲ್ಲ. ಪತ್ರಕರ್ತರು ಸ್ವರ್ಗದಲ್ಲಿ ಹೆಚ್ಚು ದಿನ ಇರಬಯಸುವುದಿಲ್ಲ. ಅವರಿಗೆ ಬೋರಾಗುತ್ತದೆ. ಹಾಗಾಗಿ ನಿನಗೇನು ಕೆಲಸ ಇಲ್ಲಿ?’. ಆದರೆ ಆ ಪತ್ರಕರ್ತ ಕೇಳಬೇಕಲ್ಲ? ‘ನನಗೊಂದು ಅವಕಾಶ ಕೊಡಿ.

ಬೇಕಾದರೆ ಇಪ್ಪತ್ನಾಲ್ಕು ಗಂಟೆ ಕಾಯುತ್ತೇನೆ ಇಲ್ಲೇ’ ಎಂದ. ‘ಇಪ್ಪತ್ನಾಲ್ಕು ಗಂಟೆ ಸ್ವರ್ಗದ ಬಾಗಿಲಲ್ಲಿ ಏನು ಮಾಡ್ತೀಯಾ?’ ಎಂದು ಚಿತ್ರಗುಪ್ತ ಕೇಳಿದ್ದಕ್ಕೆ, ‘ನಾನು ಇಲ್ಲಿ ಸುಮ್ಮನೆ ಕುಳಿತಿರುವುದಿಲ್ಲ. ನಾನು ಒಳಗಿರುವ ಪತ್ರಕರ್ತನನ್ನು ನರಕಕ್ಕೆ ಹೋಗುವಂತೆ ಮನವೊಲಿಸುತ್ತೇನೆ. ಆ ಜಾಗಕ್ಕೆ ನಾನು ಬರುತ್ತೇನೆ. ಆಗ ನಿಮ್ಮ ಕೋಟಾ ಪ್ರಕಾರ ನನಗೆ ಇಲ್ಲಿರಲು ಅವಕಾಶ ಸಿಗುತ್ತದೆ’ ಎಂದ ಪತ್ರಕರ್ತ.

ಅದಕ್ಕೆ ಚಿತ್ರಗುಪ್ತ ಸಮ್ಮತಿಸಿದ. ಸ್ವರ್ಗದ ಬಾಗಿಲನ್ನು ತೆರೆದು ಪತ್ರಕರ್ತನನ್ನು ಒಳಬಿಟ್ಟುಕೊಂಡ. ಇಪ್ಪತ್ನಾಲ್ಕು ಗಂಟೆ ಕಳೆಯುವುದರೊಳಗೆ ಪತ್ರಕರ್ತ ಎಲ್ಲರ ವಿಶ್ವಾಸ ಗಳಿಸಿ ತುರ್ತಾಗಿ ಸಭೆ ಕರೆದು ಅಲ್ಲಿ ಘೋಷಿಸಿದ ‘ಸದ್ಯದಲ್ಲಿಯೇ ನರಕದಲ್ಲಿ ಹೊಸ ಪತ್ರಿಕೆಯೊಂದು ಆರಂಭವಾಗ ಲಿದೆ. ದೊಡ್ಡ ಬಂಡವಾಳ ಹೂಡಿ ಭಾರಿ ಪ್ರಮಾಣದಲ್ಲಿ ಪತ್ರಿಕೆ ಆರಂಭಿಸಲು ತಯಾರಿ ನಡೆದಿದೆ. ಆ ಪತ್ರಿಕೆಗೆ ಸಂಪಾದಕರು, ಉಪಸಂಪಾದಕರು, ವರದಿಗಾರರು ಬೇಕಾಗಿದ್ದಾರೆ. ಆಕರ್ಷಕ ಸಂಬಳ, ಸವಲತ್ತುಗಳನ್ನು ನೀಡಲಾಗುವುದು’. ಮರುದಿನ ಬೆಳಗಾಗುವುದರೊಳಗೆ ಸ್ವರ್ಗದ ಬಾಗಿಲ ಬಳಿ ಈ ಪತ್ರಕರ್ತ ಹೋದರೆ ಚಿತ್ರಗುಪ್ತ ತಡೆದ. ‘ನೀನು ಇಲ್ಲಿಯೇ ಇರಬೇಕು. ನೀನು ನರಕಕ್ಕೆ ಹೋಗುವಂತಿಲ್ಲ’ ಎಂದ.

‘ಏಕೆ?’ ಎಂದು ಪ್ರಶ್ನಿಸಿದ್ದಕ್ಕೆ ‘ ಇಲ್ಲಿರುವ ಎಲ್ಲ ಹನ್ನೆರಡು ಪತ್ರಕರ್ತರು ಈಗಾಗಲೇ ಕಾಲ್ಕಿತ್ತಿದ್ದಾರೆ. ಅವರೆಲ್ಲ ನರಕದಲ್ಲಿನ ಪತ್ರಿಕೆ ಸೇರಲು
ಹೋಗುತ್ತಿರುವುದಾಗಿ ಹೇಳಿದ್ದಾರೆ. ನಾನು ಬೇರೆ ದಾರಿಯಿಲ್ಲದೇ ಸಮ್ಮತಿಸಿದ್ದೇನೆ. ಈಗ ಇಲ್ಲಿ ನೀನೊಬ್ಬನೇ ಪತ್ರಕರ್ತನಿರುವುದು. ಇಲ್ಲಿ ನಮಗೆ ಒಬ್ಬನಾದರೂ ಬೇಕೇ ಬೇಕು’ ಎಂದ ಚಿತ್ರಗುಪ್ತ. ಆದರೆ ಪತ್ರಕರ್ತ ‘ಬಿಲ್‌ಕುಲ್ ಸಾಧ್ಯವೇ ಇಲ್ಲ’ ಎಂದ. ಅದಕ್ಕೆ ಚಿತ್ರಗುಪ್ತ ‘ನೋಡು, ನೀನು ಸುಳ್ಳು ಹೇಳಿದೆ. ನರಕದಲ್ಲಿ ಯಾವ ಪತ್ರಿಕೆಯೂ ಆರಂಭವಾಗುತ್ತಿಲ್ಲ’ ಎಂದ. ಈ ಮಾತನ್ನು ಕೇಳಿದ ಪತ್ರಕರ್ತ ನುಡಿದ ‘ಹೌದು, ನಾನೊಂದು ಸುಳ್ಳನ್ನು ಸೃಷ್ಟಿಸಿದೆ. ಅದನ್ನು ಹನ್ನೆರಡು ಪತ್ರಕರ್ತರು ನಂಬಿದ್ದಾರೆ ಅಂದ್ರೆ ಅದರಲ್ಲಿ ಏನೋ ಇರಲೇಬೇಕು? ನನಗೂ ಇಲ್ಲಿರಲು ಇಷ್ಟವಿಲ್ಲ. ದಯವಿಟ್ಟು ಸ್ವರ್ಗದ ಬಾಗಿಲನ್ನು ತೆರೆಯಿರಿ. ನಾನು ನರಕಕ್ಕೆ ಹೋಗಬಯಸುವೆ. ನಾನು ಇಲ್ಲಿಗೆ ಸೇರಿದವನಲ್ಲ.

ನಾನಿರಬೇಕಾದ್ದು ನರಕದಲ್ಲೇ’. ಅಂದರೆ ಸ್ವರ್ಗದಲ್ಲಿ ಪತ್ರಕರ್ತರಿರುವುದು ಸಾಧ್ಯವೇ ಇಲ್ಲ! ಅಷ್ಟಕ್ಕೂ ಅಲ್ಲಿ ಅವರಿಗೆ ಕೆಲಸವೇನಿದೆ? ಅವರಿಗೆ ಅದೇ ಜಗತ್ತು ಅಮೆರಿಕದ ಪತ್ರಿಕೆಗಳಿಗೆ ಜಗತ್ತು ಅಂದ್ರೆ ಅಮೆರಿಕ! ಅಮೆರಿಕವೇ ಸರ್ವಸ್ವ! ಹೇಗೆ ಅಂತ ಕೇಳ್ತೀರಾ? ಹಾಗಿದ್ರೆ ಓದಿ. ಒಮ್ಮೆ ಅಮೆರಿಕ ಅಧ್ಯಕ್ಷ ರೋನಾಲ್ಡ್ ರೇಗನ್ ಹಾಗೂ ರಷ್ಯಾ ಅಧ್ಯಕ್ಷ ಮಿಖಾಯಿಲ್ ಗೋರ್ಬಚೇವ್ ಭೇಟಿಯಾದರು. ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು, ಯಾರ ದೇಶ ನಂಬರ್ 1 ಎಂಬ ಪ್ರಶ್ನೆ ಎದುರಾಯಿತು.

ಮ್ಯಾರಥಾನ್ ಓಟದಲ್ಲಿ ಯಾರು ಗೆಲ್ಲುತ್ತಾರೋ ಅವರ ದೇಶ ನಂಬರ್ 1 ಎಂದು ಅವರಲ್ಲಿ ತೀರ್ಮಾನವಾಯಿತು. ಆ ಮೂಲಕ ಮೂರನೆಯ ವಿಶ್ವಯುದ್ಧವನ್ನು ತಡೆಯುವುದು ಅವರ ಉದ್ದೇಶವಾಗಿತ್ತು. ಮರುದಿನ ಬೆಳಗ್ಗೆ ಎಂಟು ಗಂಟೆಗೆ ಎರಡೂ ದೇಶಗಳ ನಾಯಕರು ಓಟಕ್ಕೆ ಸಿದ್ಧರಾಗಿ ನಿಂತರು. ಎರಡೂವರೆ ತಾಸಿನ ನಂತರ ಗೋರ್ಬಚೇವ್ ಗುರಿ ತಲುಪಿದರು. ಇದಾದ ಆರು ಗಂಟೆಗಳ ನಂತರ ರೇಗನ್ ಸಹ ಗುರಿ ತಲುಪಿದರು.

ಮರುದಿನ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ಹೀಗೆ ಬರೆಯಲಾಗಿತ್ತು- ‘ವಿಶ್ವದೆಲ್ಲೆಡೆ ಕುತೂಹಲ ಮೂಡಿಸಿದ್ದ ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ಅಮೆರಿಕದ ಅಧ್ಯಕ್ಷರು ಅಭೂತಪೂರ್ವವೆಂಬಂತೆ ಎರಡನೇ ಸ್ಥಾನ ಗಿಟ್ಟಿಸಿದರು. ಈ ಓಟದಲ್ಲಿ ರಷ್ಯಾ ಅಧ್ಯಕ್ಷ ಗೋರ್ಬಚೇವ್ ಸಹ ಭಾಗವಹಿಸಿದ್ದರೆಂದು ತಿಳಿದುಬಂದಿದೆ. ಅವರು ಎರಡನೇ ಸ್ಥಾನ ಗಳಿಸಿದ ವರಿಗಿಂತ ಒಂದು ಸ್ಥಾನ ಹೆಚ್ಚು ಗಳಿಸಿದರೆಂದು ಗೊತ್ತಾಗಿದೆ’.

ಬಾಬುರಾವ್ ಪ್ರಶ್ನೋತ್ತರಗಳು
ಪತ್ರಕರ್ತ ಬಾಬುರಾವ್ ಪಟೇಲ್ ಬಗ್ಗೆ ಹಲವು ಬಾರಿ ಈ ಅಂಕಣದಲ್ಲಿ ಪ್ರಸ್ತಾಪಿಸಿದ್ದುಂಟು. ‘ಮದರ್ ಇಂಡಿಯಾ’ ಹಾಗೂ ‘ಫಿಲ್ಮ್ ಇಂಡಿಯಾ’ ಪತ್ರಿಕೆ ಗಳ ಸಂಪಾದಕರಾಗಿದ್ದ ಇವರ ಬಗ್ಗೆ ನಾನು ‘ಬಾಬುರಾವ್ ಪಟೇಲ್: ಮತ್ತೊಬ್ಬ ಉಕ್ಕಿನ ಮನುಷ್ಯ’ ಎಂಬ ಪುಸ್ತಕವನ್ನೇ ಬರೆದಿದ್ದೇನೆ, ಅದು ಬೇರೆ ಮಾತು. ಅವರ ಪತ್ರಿಕೆಗಳಲ್ಲಿ ಓದುಗರ ಪ್ರಶ್ನೆಗಳಿಗೆ ಪಟೇಲ್ ಉತ್ತರಿಸುತ್ತಿದ್ದ ಅಂಕಣ ಬಹಳ ಜನಪ್ರಿಯವಾಗಿತ್ತು. ಈ ಅಂಕಣದಲ್ಲಿ ಅವರು ಯಾರನ್ನೂ ಬಿಡುತ್ತಿರಲಿಲ್ಲ, ಎಲ್ಲರನ್ನೂ ಚುಚ್ಚುತ್ತಿದ್ದರು. ಅವರ ಪತ್ರಿಕೆಗಳ ಹಳೆಯ ಸಂಚಿಕೆಗಳನ್ನು ಇತ್ತೀಚೆಗೆ ಓದುತ್ತಿದ್ದೆ. ಕೆಲವು
ಪ್ರಶ್ನೋತ್ತರಗಳನ್ನು ಚಪ್ಪರಿಸುವುದಾದರೆ…

ರಷ್ಯಾದಲ್ಲಿ ದೇವರುಗಳು ಇಲ್ಲವೇ?

  • ಖಂಡಿತಾ ಇದ್ದಾರೆ. ಆದರೆ ಅವರಿಗೆ ಲೆನಿನ್, ಸ್ಟಾಲಿನ್ ಅಂತ ಕರೀತಾರೆ!
  • ನಿಮಗೀಗ ೫೨ ವರ್ಷ. ನಿಮಗೇನಾದರೂ ಕೆಟ್ಟ ಸ್ಥಳದಲ್ಲಿ ಹುಟ್ಟಿದೆ ಎಂದು ಪಶ್ಚಾತ್ತಾಪವಾಗಿದೆಯಾ?
  • ನಾನು ಯಾವುದೇ ಕೆಟ್ಟ ಸ್ಥಳಕ್ಕೆ ಹೋದರೂ ಅದನ್ನು ಸ್ವಚ್ಛಗೊಳಿಸುತ್ತೇನೆ. ಹೀಗಾಗಿ ಪಶ್ಚಾತ್ತಾಪವಾಗಿಲ್ಲ.
  • ಕೃಷ್ಣ ಮೆನನ್ ಅವರಿಗೆ ಖಾತೆ ಇಲ್ಲದ ಮಂತ್ರಿಗಿರಿ ಕೊಟ್ಟಿದ್ದೇಕೆ?
    -ಕೆಲವು ಸಲ ಬೆಲ್ಟ್‌ನಿಂದ ನಾಯಿಯ ಜಾತಿ ಯಾವುದೆಂದು ತಿಳಿಯಬಹುದಂತೆ. ಇದು ಒಂಥರಾ ಹಾಗೆ!
  • ಜೀವನದಲ್ಲಿ ಲತಾ ಮಂಗೇಶ್ಕರ್‌ಗೆ ಎಲ್ಲವೂ ಸಿಕ್ಕಿದೆಯಾ?
  • ಯಾವುದು ಸಿಗಬೇಕೋ ಅದೇ ಸಿಕ್ಕಿಲ್ಲ. ಉಳಿದವು ಸಿಕ್ಕಿ ಪ್ರಯೋಜನವೇನು?

  • ಹೇಮಾಮಾಲಿನಿ ಬಗ್ಗೆ ನಿಮ್ಮ ಅಭಿಪ್ರಾಯವೇನು?
  • ಆಕೆಯ ಜತೆ ಏನೂ ಹಂಚಿಕೊಳ್ಳದೇ ಅಭಿಪ್ರಾಯ ಹೇಳುವುದು ತಪ್ಪಾಗುತ್ತದೆ. ಆದರೆ ನನಗೆ ಈ ಬಗ್ಗೆ ವಿಷಾದವಿಲ್ಲ.

  • ನಾನೊಬ್ಬ ಮುಠ್ಠಾಳ ಎಂದು ರಾಜ್ ಕಪೂರ್ ಹೇಳಿದ್ದಾರಲ್ಲ?
  • ನಾನು ಅವರ ಈ ಮಾತನ್ನು ಸ್ವಲ್ಪವೂ ಪ್ರತಿಭಟಿಸದೇ ಸಮ್ಮತಿಸುತ್ತೇನೆ.
  • ಕಪೂರ್‌ಗಳ ಬಗ್ಗೆ ನಿಮ್ಮ ಅನಿಸಿಕೆ?
  • ಎಲ್ಲ ಕಪೂರ್ ನಟರೂ ವಿಕರಾಳರು. ಮಂಗಗಳ ಕೈಯಲ್ಲಿ ಮಾಣಿಕ್ಯ ಎಂಬುದು ಇವರನ್ನು ನೋಡಿದರೆ ತಿಳಿಯುತ್ತದೆ!

  • ಸಿಮಿ ಗರೇವಾಲಳಿಗೆ ರಾಜ್‌ಕಪೂರ್ ಕಿಸ್ ಕೊಟ್ಟರಂತೆ?
  • ಅರಣ್ಯದಲ್ಲಿ ನೀವು ಒಂದು ಸಸಿ ನೆಟ್ಟರೆ ಏನೂ ವ್ಯತ್ಯಾಸವಾಗೊಲ್ಲ!
  • ಕಾಶ್ಮೀರ ಭಾರತದಿಂದ ಕೈತಪ್ಪಿ ಹೋದರೆ?
  • ಮೂರ್ಖ! ಕಾಶ್ಮೀರ ಯಾವಾಗ ಭಾರತದಲ್ಲಿತ್ತು, ಕೈತಪ್ಪಿ ಹೋಗಲು?!

  • ಏಸು ಏಕೆ ಚೀನಾಕ್ಕೆ ಹೋಗಲಿಲ್ಲ?
  • ಅವರಿಗೆ ಭಾಷೆ ಅರ್ಥವಾಗಲಿಲ್ಲವಂತೆ!

  • ಕಾರಂತರ ಅನುವಾದ ಜಿಜ್ಞಾಸೆ
    ಒಮ್ಮೆ ಶಿವರಾಮ ಕಾರಂತರು ‘ಗ್ನಾನ’ ಎಂಬ ಜ್ಞಾನ ವಿಪರ್ಯಾಸವನ್ನು ಕುರಿತ ವ್ಯಂಗ್ಯಬರಹ ಬರೆದಿದ್ದರು. ಆನಂತರ
    ಕಾರಂತರ ಕೆಲವು ವ್ಯಂಗ್ಯಬರಹಗಳನ್ನು ಅದೇ ಶೀರ್ಷಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿತು. ಆ ಕೃತಿಗೆ ಮುನ್ನುಡಿ
    ಬರೆದು ಕೊಡುವಂತೆ ಕಾರಂತರು ವಿ. ಸೀತಾರಾಮಯ್ಯನವರನ್ನು ಕೋರಿದರು. ಅದಕ್ಕೆ ವಿ.ಸೀ ಅವರು ತಕ್ಷಣ
    ‘It is an ass that kicks on all sides’ ಎಂದು ಪ್ರತಿಕ್ರಿಯಿಸಿದರು.
  • ‘ಇದಕ್ಕೆ ಕನ್ನಡದಲ್ಲಿ ಏನಂತೀರಿ?’ ಎಂದು ಕೇಳಿದ್ದಕ್ಕೆ ‘ಎಲ್ಲ ಕಡೆಗಳಿಂದಲೂ ಒದೆಯುವ ಕತ್ತೆ’ ಎಂದರು. ಕಾರಂತರಿಗೆ ಈ ಅನುವಾದ ಯಾಕೋ ಸರಿ ಎನಿಸಲಿಲ್ಲ. ‘ಕನ್ನಡದಲ್ಲಿ ಈ ಸಾಲುಗಳನ್ನು ಸೊಗಸಾಗಿ ಹೇಗೆ ಅನುವಾದ ಮಾಡುವುದು? ನೋಡಿ, ಎಷ್ಟು ಸರಳವಾದ ವಾಕ್ಯ. ಇದನ್ನು ಕನ್ನಡದಲ್ಲಿ ಪರಿಣಾಮಕಾರಿಯಾಗಿ ಹೇಳಲು ನಾವು ತಿಣುಕಾಡುತ್ತೇವೆ’ ಎಂದು ಕಾರಂತರು ತಮ್ಮನ್ನು ಭೇಟಿ ಮಾಡಲು
    ಬಂದವರ ಮುಂದೆ ಹೇಳುತ್ತಿದ್ದರು. ಏನಿಲ್ಲವೆಂದರೂ ಕನಿಷ್ಠ ಹದಿನೈದು-ಇಪ್ಪತ್ತು ಮಂದಿ ಮುಂದೆ ಈ ಬಗ್ಗೆ ಕೇಳಿದರೂ ಕಾರಂತರಿಗೆ ಸಮರ್ಪಕ ಉತ್ತರ ಸಿಗಲಿಲ್ಲ. ಹಾಗಂತ ಕಾರಂತರು ಸುಲಭಕ್ಕೆ ಬಿಡುವ ವ್ಯಕ್ತಿಯಲ್ಲ, ಮಹಾ ಜಿಗುಟ. ಸುಮಾರು ಆರು ತಿಂಗಳ ನಂತರ ಕಾರಂತರಿಗೆ ಒಳ್ಳೆಯ ಅನುವಾದ ಹೊಳೆಯಿತು. ಅದಾದ ಬಳಿಕವೇ ಅವರು ಆ ಪುಸ್ತಕ ಪ್ರಕಟಣೆಗೆ ಅನುಮತಿ ನೀಡಿದರು. ಅಂದ ಹಾಗೆ ಕಾರಂತರು ಆ ಸಾಲನ್ನು ಹೀಗೆ ಅನುವಾದಿಸಿದ್ದರು- ‘ಇದು ಸುತ್ತಲೂ ಲತ್ತೆ ಕೊಡುವ ಕತ್ತೆ!’

  • ಸೀರೆ ಉಡಿಸುವುದು ಹೇಗೆ?
    ಈ ಘಟನೆ ನಡೆದದ್ದು ೧೯೪೮ರಲ್ಲಿ. ಭಾರತದ ಪ್ರಮುಖ ವ್ಯಕ್ತಿಯೊಬ್ಬರು ಲಂಡನ್‌ನಲ್ಲಿ ನಿಧನರಾದರು. ಅವರ ಅಂತ್ಯಕ್ರಿಯೆಯನ್ನು
    ಅಲ್ಲಿಯೇ ನೆರವೇರಿಸಲು ನಿರ್ಧರಿಸಲಾಯಿತು. ನಿಧನರಾದವರು ಮಂಡಿ ಪ್ರಾಂತದ ಮಹಾರಾಣಿ. ಹೀಗಾಗಿ ಸಕಲ ರಾಜಮರ್ಯಾ
    ದೆಗಳೊಂದಿಗೆ ಅಂತಿಮ ಸಂಸ್ಕಾರ ಮಾಡಬೇಕೆಂದು ಸೂಚಿಸಲಾಯಿತು. ಈ ಜವಾಬ್ದಾರಿಯನ್ನು ‘ಕೆನ್ಯಾನ್ ಅಂಡರ್‌ಟೇಕರ‍್ಸ್’
    ಎಂಬ ಸಂಸ್ಥೆಗೆ ವಹಿಸಲಾಯ್ತು. ಆ ಸಂಸ್ಥೆ ಅಂತ್ಯಕ್ರಿಯೆ ನೆರವೇರಿಸುವುದರಲ್ಲಿ ಪ್ರಸಿದ್ಧ.
  • ಮಹಾರಾಣಿ ತನ್ನ ಉಯಿಲಿನಲ್ಲಿ ಅಂತ್ಯಸಂಸ್ಕಾರದ ಸಮಯದಲ್ಲಿ ಕಳೇಬರಕ್ಕೆ ಮದುವೆಯಲ್ಲಿ ಧರಿಸಿದ ಸೀರೆಯನ್ನು ಉಡಿಸ ಬೇಕೆಂದು ಬರೆದಿದ್ದಳು. ಆ ಸೀರೆಯೇನೋ ಸಿಕ್ಕಿತು.ಆದರೆ ಪಾರ್ಥಿವ ಶರೀರಕ್ಕೆ ಹೇಗೆ ಸೀರೆ ಉಡಿಸುವುದು ಎಂಬ ಪ್ರಶ್ನೆ ಎದುರಾಯಿತು. ಆ ದಿನಗಳಲ್ಲಿ ಲಂಡನ್‌ನಲ್ಲಿ ಸೀರೆ ಉಡುವವರನ್ನು ಎಲ್ಲಿ ಹುಡುಕುವುದು? ಕೆನ್ಯಾನ್ ಅಂಡರ್ ಟೇಕರ‍್ಸ್ ಸಂಸ್ಥೆಯ ಅಽಕಾರಿಗಳು ಬಹಳ ತಲೆ ಕೆಡಿಸಿಕೊಂಡರು.
  • ಆನಂತರ ಲಂಡನ್‌ನಲ್ಲಿರುವ ಭಾರತೀಯ ಹೈ ಕಮಿಶನ್ ಕಚೇರಿಯ ಅಧಿಕಾರಿಗಳನ್ನು ಭೇಟಿ ಮಾಡಲು ನಿರ್ಧರಿಸಿದರು.
    ಆ ದಿನಗಳಲ್ಲಿ ಖುಷವಂತ್ ಸಿಂಗ್ ಭಾರತೀಯ ಹೈ ಕಮಿಶನ್ ಕಚೇರಿಯಲ್ಲಿ ಪ್ರೆಸ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದರು.
    ಅಲ್ಲದೇ, ಪಬ್ಲಿಕ್ ರಿಲೇಶನ್ಸ್ ವಿಭಾಗದ ಉಸ್ತುವಾರಿಯನ್ನೂ ನಿರ್ವಹಿಸುತ್ತಿದ್ದರು. ಕೆನ್ಯಾನ್ ಅಂಡರ್‌ಟೇಕರ‍್ಸ್ ಅಧಿಕಾರಿಯೊಬ್ಬ
    ಖುಷವಂತ್ ಸಿಂಗ್ ಅವರನ್ನು ಭೇಟಿ ಮಾಡಿ, ‘ಮಹಿಳೆಯೊಬ್ಬಳಿಗೆ ಸೀರೆ ಉಡಿಸಬೇಕಾಗಿದೆ. ಸೀರೆ ಉಡಿಸುವುದು ಹೇಗೆಂದು ನಮಗೆ
    ತಿಳಿಯುತ್ತಿಲ್ಲ. ಅದು ಹೇಗೆ ಎಂಬುದನ್ನು ತಿಳಿಸುತ್ತೀರಾ?’ ಎಂದು ಕೇಳಿದ.
  • ಖುಷವಂತ್ ಸಿಂಗ್‌ಗೆ ಅವರು ಬಂದ ಹಿನ್ನೆಲೆ, ಅಂತ್ಯಕ್ರಿಯೆಯ ಶಿಷ್ಟಾಚಾರದ ಅಗತ್ಯ ಮುಂತಾದ ವಿವರಗಳೇನೂ ಗೊತ್ತಿರಲಿಲ್ಲ. ‘ನೋಡಿ, ನೀವು ಒಬ್ಬ ರಾಂಗ್ ಪರ್ಸನ್ ಅನ್ನು ಭೇಟಿ ಮಾಡಿದ್ದೀರಿ. ನನಗೆ ಸೀರೆ ಬಿಚ್ಚುವುದು ಗೊತ್ತೇ ಹೊರತು, ಉಡಿಸುವುದು ಗೊತ್ತಿಲ್ಲ. ಕಾರಣ, ನಾನು ನನ್ನ ಜೀವನದಲ್ಲಿ ಒಂದು ಸಲವೂ ಸೀರೆ ಉಡಿಸಿಲ್ಲ. ಅವೆಷ್ಟೋ ಸಲ ಬಿಚ್ಚಿದ್ದೇನೆ’ ಎಂದರು ಖುಷವಂತ್ ಸಿಂಗ್. ಈ ಮಾತನ್ನು ಕೇಳಿದ ಕೆನ್ಯಾನ್ ಅಂಡರ್‌ಟೇಕರ‍್ಸ್ ಅಧಿಕಾರಿ ಸಿಟ್ಟಿಗೆದ್ದು, ಹೈ ಕಮಿಶನ್ ಆಫೀಸಿನ ಹಿರಿಯ ಅಧಿಕಾರಿಯೊಬ್ಬರನ್ನು ಭೇಟಿ ಮಾಡಿ ದೂರು ನೀಡಿದ. ಖುಷವಂತ್ ಸಿಂಗ್ ರನ್ನು ಅವರು ಕರೆಸಿದರು. ಅದಕ್ಕೆ ಸಿಂಗ್, ‘ನಿಮಗೆ ಗೊತ್ತಿದೆಯಾ ಸರ್? ಜೀವನದಲ್ಲಿ ನೀವು ಎಂದಾದರೂ ನಿಮ್ಮ ಹೆಂಡತಿಗೆ ಅಥವಾ ಬೇರೆ ಹೆಂಗಸರಿಗೆ ಸೀರೆ ಉಡಿಸಿದ್ದೀರಾ? ನೀನು ರಾಂಗ್ ಪರ್ಸನ್ ಅನ್ನು ಭೇಟಿ ಮಾಡಿದೆ ಅಂತ ಅವನಿಗೆ ಹೇಳಿದೆ. ನನ್ನ ತಪ್ಪೇನು ಬಂತು ಹೇಳಿ? ಇರೋ ವಿಷಯವನ್ನು ನೇರವಾಗಿ ಹೇಳಿದೆ ಅಷ್ಟೇ’ ಎಂದರು. ಮೇಲಧಿಕಾರಿಯೂ ಜೋರಾಗಿ ನಕ್ಕರು.
  • ಅವರು ಕುಡಿದಿದ್ದೇನು?
    ಐವರಿಗೆ ಜಾನಿವಾಕರ್ ಬ್ಲ್ಯಾಕ್‌ಲೇಬಲ್ ಕೊಡಿ ಹಾಗೂ ಅವರಿಗೆ ಇದು ಜಾನಿವಾಕರ್ ಬ್ಲ್ಯಾಕ್‌ಲೇಬಲ್ ಎಂದು ಹೇಳಿ.
    ಆನಂತರ ಆ ಐವರಿಗೆ ಜಾನಿವಾಕರ್ ಬ್ಲ್ಯಾಕ್‌ಲೇಬಲ್ ಕೊಟ್ಟು, ಅದು ಜಾಕ್ ಡೇನಿಯಲ್ಸ್ ಎಂದು ಹೇಳಿ. ಅವರು ಅದನ್ನು
    ಕುಡಿದ ನಂತರ ‘ನಿಮಗೆ ಯಾವುದು ಇಷ್ಟವಾಯಿತು?’ ಎಂದು ಕೇಳಿ. ಆ ಐವರೂ ಕುಡಿದಿದ್ದು ಒಂದೇ ಆದರೂ, ಎರಡು ಬೇರೆ ಬೇರೆ ಬ್ರ್ಯಾಂಡ್‌ಗಳ ವಿಸ್ಕಿಯನ್ನು ಕುಡಿದಿದ್ದೇವೆಂದು ಯೋಚಿಸಲಾರಂಭಿಸುತ್ತಾರೆ. ಅವರೆಲ್ಲ ಒಂದೇ ವಿಸ್ಕಿಯನ್ನು ಕುಡಿದು, ಎರಡು ಇಮೇಜ್‌ಗಳ ರುಚಿಯನ್ನು ಯೋಚಿಸಲಾರಂಭಿಸುತ್ತಾರೆ. Actually they are tasting images..

  • ಜಿರಳೆ ಕಲಿಸಿದ ಪಾಠ
    ಸಮಸ್ಯೆಯ ನಿರ್ವಹಣೆಯ ಬಗ್ಗೆ ಗೂಗಲ್‌ನ ಸಿಇಒ ಭಾರತೀಯ ಮೂಲದ ಸುಂದರ್ ಪಿಚೈ ಹೇಳಿದ ಮಾತು ನಾವೆಲ್ಲರೂ ನಮ್ಮ
    ಜೀವನದಲ್ಲಿ ಅಳವಡಿಸಿಕೊಳ್ಳುವಂತಿದೆ. ರೆಸ್ಟೋರೆಂಟ್ ಒಂದರಲ್ಲಿ ಎಲ್ಲಿಂದಲೋ ಒಂದು ಜಿರಳೆ ಹಾರಿ ಬಂದು ಒಬ್ಬ ಮಹಿಳೆಯ
    ಮೇಲೆ ಕುಳಿತುಕೊಂಡಿತು. ಗಾಬರಿಯಾದ ಆಕೆ ಒಂದೇ ಸಮನೇ ಸೂರು ಕಿತ್ತುಹೋಗುವ ಹಾಗೆ ಕಿರುಚಿಕೊಳ್ಳಲಾರಂಭಿಸಿದಳು. ಆ
    ಜಿರಳೆಯಿಂದ ತನ್ನನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಎರಡೂ ಕೈಗಳನ್ನು ಎತ್ತಿ, ಜೋರಾಗಿ ಕೂಗಿ, ಬೊಬ್ಬಿರಿದು ಒಂದು ಸುತ್ತು ತಾನಿದ್ದ
    ಟೇಬಲ್ ಸುತ್ತೆಲ್ಲ ಓಡಾಡಿ ರಂಪ ಮಾಡಿದಳು. ಎಷ್ಟೆಂದರೂ ಹೆಣ್ಣು ಧ್ವನಿ, ಆ ಕಿಟಾರ್ ಧ್ವನಿಗೆ ಜನರು ಸಹಜವಾಗಿಯೇ ಬೆಚ್ಚಿ
    ಬಿದ್ದರು, ಹೋಟೆಲ್‌ನಲ್ಲಿರುವವರೆಲ್ಲರೂ ಏನಾಯ್ತು ಏನಾಯ್ತು ಎಂದು ಮುಖ ಮುಖ ನೋಡಿಕೊಂಡರು.

  • ಇತ್ತ ಆ ಮಹಿಳೆ ಅದು ಹೇಗೋ ಮಾಡಿ ಜಿರಳೆಯನ್ನು ದೂಡಿ ನಿರಾಳವಾದಳು. ಆದರೆ ಆ ಜಿರಳೆ ಹಾರಿ ಅದೇ ಗುಂಪಿನಲ್ಲಿದ್ದ
    ಮತ್ತೊಬ್ಬ ಮಹಿಳೆಯ ಮೇಲೆ ಕುಳಿತುಕೊಂಡಿತು. ಒಂದೇ ಗುಂಪೆಂದ ಮೇಲೆ ಕೇಳಬೇಕೆ? ಮತ್ತೊಬ್ಬ ಮಹಿಳೆಯೂ ಡ್ರಾಮಾ
    ಮುಂದುವರಿಸಿದಳು. ಈ ಗೌಜು ಬಹಳ ಜೋರಾಗಿದ್ದರಿಂದ ವೇಯ್ಟರ್ ಅಲ್ಲಿಗೆ ಬಂದ. ಆಗ ಮಹಿಳೆಯ ಮೇಲಿದ್ದ ಜಿರಳೆ ಆ
    ವೇಯ್ಟರ್ ಮೇಲೆ ಕುಳಿತುಕೊಂಡಿತು. ಆದರೆ ವೇಯ್ಟರ್ ಒಂದು ಕ್ಷಣ ಸ್ತಬ್ಧನಾದ. ಶರ್ಟ್ ಮೇಲಿಂದ ಜಿರಳೆ ಹೇಗೆ ಓಡಾಡುತ್ತಿದೆ
    ಎಂದು ಗಮನಿಸಿ ಅದನ್ನು ಗಬಕ್ಕನೆ ಹಿಡಿದು, ನಿಧಾನವಾಗಿ ತೆಗೆದುಕೊಂಡು ಹೋಗಿ ಹೊರಗೆ ಹಾಕಿದ. ಎಲ್ಲವೂ ಸಹಜ ಸ್ಥಿತಿಗೆ ಬಂತು. ನಾನು ಕಾಫಿ ಹೀರುತ್ತಾ ಇನ್ನೊಂದು ಟೇಬಲ್‌ನಲ್ಲಿ ಕುಳಿತಿದ್ದೆ. ನನ್ನ ತಲೆಯ ಆಂಟೇನಾ ಈ ಘಟನೆಯಿಂದ ಒಂದೆರಡು ಅಂಶಗಳ ಬಗ್ಗೆ ಆಲೋಚಿಸಲು ಶುರು ಮಾಡಿತ್ತು. ಇಲ್ಲಿ ನಡೆದ ಈ ನಾಟಕೀಯ ಬೆಳವಣಿಗೆಗೆ ಆ ಜಿರಳೆ ಕಾರಣವಾ? ಹಾಗಾಗಿದ್ದಿದ್ದರೆ, ಆ ಮಹಿಳೆಯರ ಹಾಗೆ ವೇಯ್ಟರ್ ಏಕೆ ವಿಚಲಿತನಾಗಲಿಲ್ಲ? ಏಕೆ ಕೂಗಾಡಿ ರಂಪ ಮಾಡಲಿಲ್ಲ? ಅಷ್ಟು ಪರ್ಫೆಕ್ಟ್ ಆಗಿ ಹೇಗೆ ಆತ ಆ ಸಂದರ್ಭವನ್ನು ನಿಭಾಯಿಸಿದ? ಅಂದರೆ, ಅದರ ಅರ್ಥ ಆ ಸ್ಥಿತಿಗೆ ಕಾರಣ ಜಿರಳೆಯಲ್ಲ. ಬದಲಿಗೆ ಆ ಜಿರಳೆ ಸೃಷ್ಟಿ ಮಾಡಿದ್ದಂಥ ಸನ್ನಿವೇಶವನ್ನು ನಿಭಾಯಿಸುವುದಕ್ಕೆ ಆಗದೇ ಇರುವುದು. ಅದು ಆ ಮಹಿಳೆಯರನ್ನು ವಿಚಲಿತರನ್ನಾಗಿ ಮಾಡಿತು. ಇದರಿಂದ ನನಗೆ ಒಂದು ವಿಚಾರ ಅರ್ಥ ವಾಯಿತು.
  • ಅದೇನೆಂದರೆ, ನನ್ನ ಅಪ್ಪ, ಆಫೀಸಿನಲ್ಲಿರುವ ಬಾಸ್, ನನ್ನ ಹೆಂಡತಿ ಅಥವಾ ಇನ್ಯಾರೇ ನನ್ನ ಮೇಲೆ ಕೂಗಾಡುವುದು ನನ್ನನ್ನು ವಿಚಲಿ ತನನ್ನಾಗಿ ಮಾಡುತ್ತಿಲ್ಲ. ಬದಲಿಗೆ ಆ ಕೂಗುವಿಕೆಯಿಂದ ನನ್ನ ಮೇಲಾಗುವ ಪರಿಣಾಮ ವನ್ನು ನಿಭಾಯಿಸುವುದು ನನ್ನಿಂದಾಗುತ್ತಿಲ್ಲ.
    ರೋಡ್‌ನಲ್ಲಾಗುವ ಟ್ರಾಫಿಕ್ ಜ್ಯಾಮ್ ನನ್ನನ್ನು ತಾಳ್ಮೆ ಕಳೆದುಕೊಳ್ಳುವಂತೆ ಮಾಡುತ್ತಿಲ್ಲ. ಬದಲಿಗೆ ಟ್ರಾಫಿಕ್ ಜ್ಯಾಮ್ ನಿಂದಾದ ಕಿರಿಕಿರಿಯನ್ನು ನನ್ನಿಂದ ತಡೆದುಕೊಳ್ಳುವುದಕ್ಕೆ ಆಗದೇ ಇರುವುದೇ ನನ್ನ ಅಶಾಂತಿ, ತಾಳ್ಮೆ ರಹಿತ ವರ್ತನೆಗೆ ಕಾರಣ. ಇಲ್ಲಿ ವಿಷಯ ಸ್ಪಷ್ಟ- ಸಮಸ್ಯೆಗಿಂತಲೂ ಹೆಚ್ಚಾಗಿ ಆ ಸಮಸ್ಯೆಗೆ ನಾವು ಸ್ಪಂದಿಸುವ ರೀತಿ ನಮ್ಮ ಜೀವನದಲ್ಲಿ ಅಶಾಂತಿ ಉಂಟುಮಾಡುತ್ತಿರುವುದು.
    ಹೀಂಗಂದ್ರ ಹ್ಯಾಂಗ?

  • ಆಂಟಿಕ್ (antique) ಅಂದ್ರೆ ಹಳೆ, ಪುರಾತನ ಎಂದು ತಾನೆ. ಆಂಟಿಕ್ ಶಾಪ್ ಅಂದ್ರೆ ಅಂಥ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿ ಎಂದರ್ಥ ತಾನೆ. ಇತ್ತೀಚೆಗೆ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಕಂಡ ವರ್ಗೀಕೃತ (classifieds) ಜಾಹೀರಾತಿನಲ್ಲಿ ಹೀಗೆ ಬರೆದಿತ್ತು- Selling new antique sofa sets….…. ಕೆಲ ವರ್ಷಗಳ ಹಿಂದಿನ ಮಾತು. ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ಬಿಸಿ ಏರಿತ್ತು. ಆ ಸಂದರ್ಭದಲ್ಲಿ ಚುನಾವಣೆ ಆಯೋಗ ಹೊರಡಿಸಿದ ಪ್ರಕಟಣೆಯಲ್ಲಿ ಹೀಗೆ ಬರೆದಿತ್ತು- Do not accept any bride (bribe ಎನ್ನುವ ಬದಲು)or inducement in casting your voteʼ. ‌
  • ಪ್ರಸೆನ್ಸ್ ಆಫ್ ಮೈಂಡ್ ಹೊಸದಾಗಿ ಕಾರ್ಪೋರೆಟ್ ಕಂಪನಿ ಸೇರಿದ ಟ್ರೇನಿ ಉದ್ಯೋಗಿ, ಇಂಟರ್‌ಕಾಮ್‌ನಲ್ಲಿ ಕ್ಯಾಂಟೀನ್‌ಗೆ ಫೋನ್ ಮಾಡಿ ‘ಲೋ ಒಂದು ಕಪ್ ಕಾಫಿ ತೆಗೆದುಕೊಂಡು ಬಾ’ ಎಂದು ಗಡಸು ದನಿಯಲ್ಲಿ ಹೇಳಿದ. ಅತ್ತ ಕಡೆಯಿಂದ ‘ಈಡಿಯಟ್, ಇದು
    ರಾಂಗ್ ನಂಬರ್, ನೀನು ಯಾರ ಜತೆ ಮಾತಾಡುತ್ತಿದ್ದೀಯ ಎಂಬುದು ನಿನಗೆ ಗೊತ್ತಾ?’ ಎಂಬ ದನಿ ಕೇಳಿತು. ‘ಇಲ್ಲ, ಇಲ್ಲ’ ಎಂದ ಟ್ರೇನಿ.
    ‘ನಾನು ಈ ಕಂಪನಿಯ ಸಿಇಒ, ಮುಟ್ಠಾಳ’ ಎಂದ.
  • ಅಷ್ಟಕ್ಕೇ ಸುಮ್ಮನಾಗದ ಟ್ರೇನಿ ತುಸು ಜೋರಾಗಿ ‘ನೀನು ಯಾರು ಹತ್ತಿರ ಮಾತಾಡುತ್ತಿದ್ದೀಯಾ ಎಂಬುದು ಗೊತ್ತೇನೋ ಈಡಿಯಟ್’
    ಎಂದು ರೋಪು ಹಾಕಿದ. ಆ ಮಾತಿಗೆ ತಕ್ಷಣ ಜರ್ರನೆ ಇಳಿದು ಹೋದ ಸಿಇಒ ‘ಇಲ್ಲ ಸರ್, ನೀವು ಯಾರೋ ಗೊತ್ತಾಗಲಿಲ್ಲ, ಸಾರಿ ಸರ್’ ಎಂದ. ಅದಕ್ಕೆ ಟ್ರೇನಿ, ‘ನಾನು ಯಾರು ಅಂತ ಗೊತ್ತಾಗಲಿಲ್ಲ ತಾನೆ? ಬಿಡು’ ಎಂದು ಧಡಕ್ಕನೆ ಫೋನಿಟ್ಟು, ‘ಬಚಾವಾದೆ ಬಡಜೀವವೇ’ ಎಂದು ನಿಟ್ಟುಸಿರು ಬಿಟ್ಟ!

ಇದನ್ನೂ ಓದಿ: Vishweshwar Bhat Column: ಇಂದಿರಾ ನಿವೃತ್ತಿ ಚಿಂತನೆ