Saturday, 23rd November 2024

Vishweshwar Bhat Column: ಅನಂತಕುಮಾರ್‌ ಇಲ್ಲ ನಿಜ, ಆದರೆ ಅವರ ನೆನಪನ್ನು ಸಾಯಿಸಬೇಕಿಲ್ಲ!

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಕೇಂದ್ರ ಸರಕಾರದಲ್ಲಿ ಸಚಿವರೂ ಆಗಿದ್ದ, ಬಿಜೆಪಿ ನಾಯಕ ಅನಂತಕುಮಾರ ನಿಧನರಾಗಿ ಮೊನ್ನೆಗೆ (ನವೆಂಬರ್ 12) ಆರು ವರ್ಷಗಳಾದವು. ಅವರ ಪುಣ್ಯಸ್ಮರಣೆಯ ನಿಮಿತ್ತ ಅನಂತಕುಮಾರರ ಪತ್ನಿ ತೇಜಸ್ವಿನಿ ನೇತೃತ್ವದ ‘ಅನಂತಕುಮಾರ ಪ್ರತಿಷ್ಠಾನ’ ಮತ್ತು ‘ಅದಮ್ಯ ಚೇತನ’ ಸಂಸ್ಥೆಗಳು ‘ಅನಂತ ಸ್ಮೃತಿ ನಡಿಗೆ’ ಮತ್ತು ಪಂಜಿನ ಮೆರವಣಿಗೆಯನ್ನು ಬೆಂಗಳೂರಿನ ಸೌತ್ ಎಂಡ್ ಸರ್ಕಲ್‌ನಿಂದ ಲಾಲ್‌ಬಾಗ್ ಪಶ್ಚಿಮ
ದ್ವಾರ, ಗಾಂಽ ಬಜಾರ್‌ವರೆಗೆ ಹಮ್ಮಿಕೊಂಡಿದ್ದವು. ಕಳೆದ ಆರು ವರ್ಷಗಳಿಂದಲೂ ತೇಜಸ್ವಿನಿ ಅವರು ತಮ್ಮ ಪತಿಯ ನಪನ್ನು ಹಸಿರಾಗಿಡಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ. ಮೊನ್ನೆಯ ಈ ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗವಹಿಸಿದ್ದರು ಎಂಬ ಬಗ್ಗೆ ಕುತೂಹಲವಿತ್ತು. ಮಾಜಿ ಶಾಸಕ ಅರವಿಂದ ಲಿಂಬಾವಳಿ, ಹಾಲಿ ಶಾಸಕರಾದ ರವಿ ಸುಬ್ರಮಣ್ಯ, ಉದಯ ಗರುಡಾಚಾರ್, ಸಿ.ಕೆ.ರಾಮಮೂರ್ತಿ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು, ಅಭಿಮಾನಿಗಳು, ಆಪ್ತರು ಭಾಗವಹಿಸಿದ್ದರು.

ಬಿಜೆಪಿಯ ಹಿರಿಯ ನಾಯಕರು, ರಾಜ್ಯ ಪದಾಧಿಕಾರಿಗಳು, ಮಾಜಿ ಮಂತ್ರಿಗಳು, ಈ ಕಾರ್ಯಕ್ರಮದಿಂದ ದೂರವೇ ಉಳಿದಿದ್ದರು. ಕಳೆದ ಆರು ವರ್ಷಗಳಲ್ಲಿ ರಾಷ್ಟ್ರೀಯ ಬಿಜೆಪಿ ಬಿಡಿ, ರಾಜ್ಯ ಬಿಜೆಪಿ ಅನಂತಕುಮಾರ ಅವರನ್ನು ನೆನಪು ಮಾಡಿಕೊಳ್ಳುವುದಕ್ಕಿಂತ, ಮರೆಯುವುದರಲ್ಲಿಯೇ ಹೆಚ್ಚಿನ ರಾಜಕೀಯ ಅನುಕೂಲವನ್ನು ಪಡೆದಿರುವುದು ಪಕ್ಷದಲ್ಲಿ ಇರುವವರಿಗೆ ಮಾತ್ರವಲ್ಲ, ಸಾಮಾನ್ಯರ ಅನುಭವಕ್ಕೂ ಬಂದಿರಲಿಕ್ಕೆ ಸಾಕು. ಅನಂತಕುಮಾರರ ಹೆಸರನ್ನು ಹೇಳಲೇಬೇಕಾದ ಸಂದರ್ಭ ದಲ್ಲಿಯೂ, ಹೇಳಿದರೆ ಎಲ್ಲಿ ಪ್ರಮಾದವಾಗುವುದೋ ಎಂಬಂತೆ ಪಕ್ಷದ ರಾಜ್ಯ ನಾಯಕರೆಲ್ಲ ಅವರ ಹೆಸರನ್ನು ಪ್ರಸ್ತಾಪಿಸದೇ ಜಾಣ ಮರೆವು ಪ್ರದರ್ಶಿಸುತ್ತಿದ್ದಾರೆ.

ಪಕ್ಷದ ಯಾವ ವೇದಿಕೆಗಳಲ್ಲೂ ಅಪ್ಪಿತಪ್ಪಿಯೂ ಅವರ ಫೋಟೋವನ್ನು ಹಾಕುವುದಲ್ಲ. ಕಾಟಾಚಾರಕ್ಕೂ ಅವರ ಹೆಸರನ್ನು ಹೇಳುವುದಿಲ್ಲ. ಅನಂತಕುಮಾರ ನಿಧನರಾಗಿರಾಗಿದ್ದಾರೆ ನಿಜ, ಆದರೆ ಅವರ ನೆನಪುಗಳನ್ನು ಸಾಯಿಸಬೇಕಿಲ್ಲ. ಆದರೆ ಇಡೀ ಬಿಜೆಪಿ ಅವರ ನೆನಪನ್ನೂ ಸಾಯಿಸುವ ಪ್ರಯತ್ನ ಮಾಡುತ್ತಿದೆಯೇನೋ ಎಂಬ ಸಂದೇಹ ಎಂಥವರಿಗಾದರೂ ಬರುತ್ತದೆ. ಖಂಡಿತವಾಗಿಯೂ ಅನಂತಕುಮಾರ ಇಂಥ ನಿರ್ಲಕ್ಷ್ಯಕ್ಕೆ, ಉದಾಸೀನ ಧೋರಣೆಗೆ ಅರ್ಹರಾಗಿಲ್ಲ.

ಬಿಜೆಪಿ, ಅದರಲ್ಲೂ ವಿಶೇಷವಾಗಿ ಕರ್ನಾಟಕ ಬಿಜೆಪಿ ಯಾವಜ್ಜೀವ ಅವರನ್ನು ನೆನಪಿಸಿಕೊಳ್ಳಬೇಕು, ಅವರಿಗೆ ಉಪಕೃತವಾಗಿರಬೇಕು, ಅವರ ಸೇವೆಯನ್ನು ಸದಾ ಸ್ಮರಿಸಬೇಕು. ಕಾರಣ ಅವರ ಋಣ ಪಕ್ಷದ ಮೇಲೆ ಅನಂತ. ಅನಂತಕುಮಾರ ಅವರು ಬಿಜೆಪಿಯನ್ನು ಏಕಾಏಕಿ
ಸೇರಿದವರಲ್ಲ. ಅವರು ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನಲ್ಲಿ ಸಕ್ರಿಯವಾಗಿ ಇದ್ದವರು. ನಂತರ ಎಬಿವಿ ಪಿಯ ರಾಜ್ಯ ಕಾರ್ಯದರ್ಶಿ, ತರುವಾಯ ರಾಷ್ಟ್ರೀಯ ಕಾರ್ಯದರ್ಶಿಯೂ ಆದರು. ಬಿ.ಎಸ್.ಯಡಿಯೂರಪ್ಪ
ನವರು ಪಕ್ಷದ ಅಧ್ಯಕ್ಷರಾದ ಸಂದರ್ಭದಲ್ಲಿ 1987ರಲ್ಲಿ ಅನಂತಕುಮಾರ ಬಿಜೆಪಿಯನ್ನು ಸೇರಿದರು.

ಯಡಿಯೂರಪ್ಪ -ಅನಂತಕುಮಾರ ರಾಜ್ಯದ ಹಳ್ಳಿಹಳ್ಳಿಗಳಿಗೆ, ಸೈಕಲ್, ಸ್ಕೂಟರ್, ಕೆಂಪು ಬಸ್ಸಿನಲ್ಲಿ ಅಲೆದಾಡಿ ಪಕ್ಷವನ್ನು ಕಟ್ಟಿದರು. ರಾಜ್ಯದ ಉದ್ದಗಲದಲ್ಲಿರುವ ಬಿಜೆಪಿ ಕಾರ್ಯಕರ್ತರನ್ನೆಲ್ಲ ಅವರ ಇನಿಷಿಯಲ್ ಸಮೇತ ಹೆಸರು ಹೇಳಿ ಕರೆಯುವಷ್ಟು‌ ಸಂಪರ್ಕವನ್ನು ಅನಂತಕುಮಾರ ಹೊಂದಿದ್ದರು. ಯಡಿಯೂರಪ್ಪನವರು ಅನಂತಕುಮಾರ ಅವರನ್ನು ಕೇಳದೇ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುತ್ತಿರಲಿಲ್ಲ.
ಅನಂತ ಕುಮಾರರೂ ಯಡಿಯೂರಪ್ಪನವರಿಗೆ ಹೇಳಿಯೇ ಮುಂದಡಿ ಇಡುತ್ತಿದ್ದರು. ರಾಷ್ಟ್ರಮಟ್ಟದಲ್ಲಿ ವಾಜಪೇಯಿ- ಆಡ್ವಾಣಿ ಹೇಗೋ, ರಾಜ್ಯದಲ್ಲಿ ಯಡಿಯೂರಪ್ಪ- ಅನಂತಕುಮಾರ. ಪಕ್ಷದ ಸಂಘಟನೆ ಇಲ್ಲದ ಊರಲ್ಲಿ, ಚುನಾವಣೆಗೆ ನಿಲ್ಲಲು ಅಭ್ಯರ್ಥಿ ಮುಂದೆ ಬರದ ಕ್ಷೇತ್ರಗಳಲ್ಲಿ,
ಬಲವಾದ ಕಾರ್ಯಕರ್ತರ ಪಡೆ ಇಲ್ಲದ ಊರುಗಳಲ್ಲಿ ಇಬ್ಬರೂ ಪಕ್ಷದ ಸಂಘಟನೆ ಮಾಡಿದರು. ಕೆಲಕಾಲ ಈ ಇಬ್ಬರೂ ‘ಜೋಡೆತ್ತು’ಗಳು ತಮ್ಮ ಸಂಸಾರ ಸಹಿತ ಒಂದೇ ಮನೆಯಲ್ಲಿ ವಾಸವಾಗಿದ್ದರು. ಒಬ್ಬರನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ.

ಯಡಿಯೂರಪ್ಪನವರ ಮುಖ ಮತ್ತು ಅನಂತಕುಮಾರರ ಮಿದುಳು ಪಕ್ಷದ ಬಂಡವಾಳವಾಗಿತ್ತು. ಅನಂತಕುಮಾರರು ಕರ್ನಾಟಕ ಬಿಜೆಪಿಯ ಸೈದ್ಧಾಂತಿಕ, ವೈಚಾರಿಕ ಮತ್ತು ಹೋರಾಟದ ಭೂಮಿಕೆಯ ಅಡಿಪಾಯ ಹಾಕಿದರೆ, ಯಡಿಯೂರಪ್ಪನವರು ಅದನ್ನು ಸಮರ್ಥವಾಗಿ ಅನುಷ್ಠಾನಗೊಳಿಸುತ್ತಿದ್ದರು. ಇವರಿಬ್ಬರನ್ನು ಬಿಟ್ಟು ರಾಜ್ಯ ಬಿಜೆಪಿಯಲ್ಲಿ ಹುಲ್ಲು-ಕಡ್ಡಿಯೂ ಅಡುತ್ತಿರಲಿಲ್ಲ. ಪಕ್ಷದ ಆಗು-ಹೋಗುಗಳನ್ನು ಇಬ್ಬರೂ ತಮ್ಮ ಬಿಗಿಮುಷ್ಠಿಯಲ್ಲಿ ಹಿಡಿದುಕೊಂಡಿದ್ದರು.

ಯಾವುದೇ ಚುನಾವಣೆ ಬರಲಿ, ಈ ಇಬ್ಬರು ನಾಯಕರೇ ರಾಜ್ಯದ ಮಟ್ಟಿಗೆ ಪಕ್ಷದ ಮುಖ. ಅನಂತಕುಮಾರರು ತಂತ್ರ ಹೆಣೆಯುವು ದರಲ್ಲಿ ಕರಗತರಾದರೆ, ಯಡಿಯೂರಪ್ಪನವರು ಅದಕ್ಕೆ ಸಾರ್ವಜನಿಕ ಮನ್ನಣೆ ದೊರಕಿಸಿಕೊಟ್ಟು, ಹೋರಾಟವಾಗಿ ಪರಿವರ್ತಿಸುವುದರಲ್ಲಿ, ಜನಾಭಿಪ್ರಾಯ ರೂಪಿಸುವುದರಲ್ಲಿ ಎತ್ತಿದ ಕೈ.

ಸ್ಪರ್ಧಿಸಿದ ಅಭ್ಯರ್ಥಿಗಳೆಲ್ಲ ಠೇವಣಿ ಕಳೆದುಕೊಂಡು ಹತಾಶ ಸ್ಥಿತಿಯಲ್ಲಿದ್ದಾಗ, ಇವರಿಬ್ಬರೂ ಪಕ್ಷವನ್ನು ಹಂತಹಂತವಾಗಿ ಬೆಳೆಸಿದ ರೀತಿ
ಒಂದು ಅದ್ಭುತ ಗಾಥೆಯೇ ಸರಿ. ಅನಂತಕುಮಾರರಿಗೆ ಹಿಂದಿ ಮತ್ತು ಇಂಗ್ಲಿಷಿನಲ್ಲಿ ಹಿಡಿತವಿತ್ತು. ಯಡಿಯೂರಪ್ಪನವರಿಗೆ ಇವೆರಡೂ ತುಟ್ಟಿ. ಇದು ಅನಂತಕುಮಾರರಿಗೆ ವರದಾನವಾಗಿ ಪರಿಣಮಿಸಿತು. ರಾಜ್ಯ ಅಧ್ಯಕ್ಷರು ಯಡಿಯೂರಪ್ಪನವರಾದರೂ, ರಾಷ್ಟ್ರನಾಯಕರಾದ ವಾಜಪೇಯಿ ಅಥವಾ ಆಡ್ವಾಣಿ ಫೋನ್ ಮಾಡಿದರೆ, ಯಡಿಯೂರಪ್ಪನವರು ಪಕ್ಕದಲ್ಲಿಯೇ ಇದ್ದ ಅನಂತಕುಮಾರ ಅವರಿಗೆ ಮಾತಾಡಲು ಹೇಳುತ್ತಿದ್ದರು.

ಇದು ಅನಂತಕುಮಾರ ಅವರನ್ನು ಕೇಂದ್ರ ನಾಯಕರ ಸನಿಹಕ್ಕೆ ತಂದಿತು. ಇದೇ ಮುಂದೆ, ಯಡಿಯೂರಪ್ಪ ರಾಜ್ಯಕ್ಕೆ ಮತ್ತು ಅನಂತಕುಮಾರ ಕೇಂದ್ರಕ್ಕೆ ಎಂಬಂತಾಯಿತು. ಅದಕ್ಕೆ ಸರಿಯಾಗಿ, 1996ರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅನಂತಕುಮಾರ ಲೋಕಸಭೆಗೆ ಸ್ಪರ್ಧಿಸಿ ಗೆದ್ದುಬಿಟ್ಟರು. ಅದಾದ ಬಳಿಕ ಅವರು ರಾಷ್ಟ್ರ ರಾಜಕಾರಣದತ್ತ ವಾಲಿದರು. ಆದರೂ ಪಕ್ಷದ ರಾಜ್ಯ ವ್ಯವಹಾರಗಳ ಮೇಲೆ ಹಿಡಿತ ಇಟ್ಟುಕೊಂಡಿ ದ್ದರು. ಈ ಮಧ್ಯೆ ಅನಂತಕುಮಾರರು ರಾಷ್ಟ್ರ ನಾಯಕರಿಗೆ ಸಮೀಪರಾಗಿದ್ದರಿಂದ, ಸಹಜವಾಗಿ ರಾಜ್ಯದಲ್ಲೂ ಪ್ರಭಾವಿಯಾದರು. 1998ರಲ್ಲಿ ಅನಂತಕುಮಾರ ಎರಡನೇ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಂತೆ, ಕೇಂದ್ರ ದಲ್ಲಿ ನಾಗರಿಕ ವಿಮಾನಯಾನ ಖಾತೆ ಸಚಿವರಾದರು.

ಕೇಂದ್ರದಲ್ಲಿ ಕ್ಯಾಬಿನೆಟ್ ಸಚಿವ ಸ್ಥಾನಮಾನ ಗಿಟ್ಟಿಸಿದ ಅತ್ಯಂತ ಕಿರಿಯ ಸಚಿವ ಎಂಬ ಅಭಿದಾನಕ್ಕೂ ಪಾತ್ರರಾದರು. ಅದಾದ ಬಳಿಕ ಅನಂತಕುಮಾರ, ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪನವರಿಗಿಂತ ಹೆಚ್ಚು ಪ್ರಭಾವಿಯಾಗಿಬಿಟ್ಟರು. ಪಕ್ಷದ ಆಗು-ಹೋಗುಗಳನ್ನು ಅವರೇ ಹೆಚ್ಚಾಗಿ ನಿಯಂತ್ರಿಸುತ್ತಿದ್ದರು. ಪಕ್ಷದ ಖರ್ಚು-ವೆಚ್ಚಗಳನ್ನು ಅವರೇ ನೋಡಿಕೊಳ್ಳುತ್ತಿದ್ದರು. ಒಂದು ಹಂತದಲ್ಲಿ, ಯಡಿಯೂರಪ್ಪ ನವರು ವಿಧಾನಸಭೆ ಚುನಾವಣೆಯಲ್ಲಿ ಸೋತುಹೋಗಿದ್ದರು. ನಂತರ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ಪಾಟೀಲ ಸೇಡಂ ಬಂದರು. ಆಗ ಯಡಿಯೂರಪ್ಪನವರು ವಿಧಾನಮಂಡಲದ ಉಭಯ ಸದನಗಳ ಪೈಕಿ ಯಾವುದರ ಸದಸ್ಯರೂ ಆಗಿರಲಿಲ್ಲ. ಪಕ್ಷದ ಅಧ್ಯಕ್ಷಗಿರಿ ಬೇರೆ ಕೈತಪ್ಪಿ ಹೋಗಿತ್ತು. ಅಕ್ಷರಶಃ ಆ ಸಂದರ್ಭದಲ್ಲಿ ಯಡಿಯೂರಪ್ಪನವರು ರಾಜಕೀಯವಾಗಿ ನಿರುದ್ಯೋಗಿಯಾಗಿದ್ದರು. ಆ ದಿನಗಳಲ್ಲಿ ಅನಂತಕುಮಾರ ಅವರು ಯಡಿಯೂರಪ್ಪನವರಿಗೆ ತಿಂಗಳ ಕೊನೆಯಲ್ಲಿ ತಮ್ಮ ನಿಕಟವರ್ತಿ (ರಾಜ್ಯ ಬಿಜೆಪಿ ಹಾಲಿ ಖಚಾಂಚಿ) ಸುಬ್ಬ ನರಸಿಂಹ ಮೂಲಕ ಖರ್ಚಿಗೆ ಹಣ ಕಳಿಸಿಕೊಡುತ್ತಿದ್ದರು. ಚುನಾವಣೆ, ಹೋರಾಟ, ಪ್ರಚಾರಕ್ಕೆ ಕಾಸು ಹೊಂದಿಸುವುದಿರಲಿ, ಪಕ್ಷದ ವತಿಯಿಂದ ಕರಪತ್ರ ಮುದ್ರಿಸಿದರೆ, ಬ್ಯಾನರ್ ನೇತುಹಾಕಿದರೆ ಹಾಗೂ ಕೊನೆಗೆ ಬಂಟಿಂಗ್ಸ್ ಕಟ್ಟಿದರೂ ಅನಂತಕುಮಾರರೇ ಹಣ ಕೊಡಬೇಕಾಗಿತ್ತು. ಆ ಸಮಯದಲ್ಲಿ ರಾಜ್ಯ ಬಿಜೆಪಿಯಲ್ಲಿ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರು ಮತ್ತು ಗೂಟದ ಕಾರು‌ ಇದ್ದವರು ಅನಂತಕುಮಾರ ಅವರೊಬ್ಬರೇ.

ನಂತರದ ಗೂಟದ ಕಾರು ಬಂದಿದ್ದು, ಅನಂತಕುಮಾರರ ಕೃಪಾಕಟಾಕ್ಷದಿಂದ ರೇಷ್ಮೆ ಮಂಡಳಿ ಉಪಾಧ್ಯಕ್ಷರಾಗಿದ್ದಕ್ಕೆ ಕೆ.ಎಸ್.ಈಶ್ವರಪ್ಪನವರಿಗೆ. ಕರ್ನಾಟಕ ಬಿಜೆಪಿಯಲ್ಲಿ ಅನಂತಕುಮಾರ one point contact ಎನ್ನುವಷ್ಟರ ಮಟ್ಟಿಗೆ ಪ್ರವರ್ಧಮಾನಕ್ಕೆ ಬಂದಿದ್ದರು. ಯಡಿಯೂರಪ್ಪನ
ವರಿಗೆ ದಿಲ್ಲಿಯ ಗಲ್ಲಿಗಳ ಗಂಧ-ಗಾಳಿ ಗೊತ್ತಿರಲಿಲ್ಲ. ‘ಯಡಿಯೂರಪ್ಪನವರೇ, ಇದು ಸಂಸತ್ ಭವನ, ಇದು ಉದ್ಯೋಗ ಭವನ, ಇದಕ್ಕೆ ಪರ್ಯಟನ ಭವನ ಅಂತಾರೆ, ಇದು ಶಾಸ್ತ್ರೀ ಭವನ…’ ಎಂದು ರಾಜಧಾನಿಯನ್ನು ಪರಿಚ ಯಿಸಿದವರೂ ಅನಂತಕುಮಾರರೇ. ಕರ್ನಾಟಕ ಬಿಜೆಪಿಯ ನಾಯಕರಿಗೆ, ಕಾರ್ಯಕರ್ತರಿಗೆ ಅನಂತಕುಮಾರರ ಮನೆಯೇ ವಾಸಸ್ಥಳ. ಅಲ್ಲೂ ಭರ್ತಿಯಾದರೆ (ಪ್ರವಾಸೋ ದ್ಯಮ ಸಚಿವರಾಗಿದ್ದರಿಂದ) ಅಶೋಕಾ ಹೋಟೆಲ್ಲು. ಒಟ್ಟಾರೆ ಅನಂತಕುಮಾರರದೇ ಆತಿಥ್ಯ.

ಬಿಜೆಪಿಯೇನೋ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಾ ಹೋಯಿತು. ಆದರೆ ಅಽಕಾರದ ಹೊಸ್ತಿಲಿನಿಂದ ದೂರವೇ ಇತ್ತು. ಆಗ ಅನಂತಕುಮಾರ ರಾಜ್ಯಾಧ್ಯಕ್ಷರಾದರು. ಆ ಸಂದರ್ಭದಲ್ಲಿ ಅವರು ಮತ್ತು ಅರುಣ್ ಜೇಟ್ಲಿ ಇಬ್ಬರೂ ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಇಪ್ಪತ್ತೊಂದು ದಿನ ವಾಸ್ತವ್ಯ ಮಾಡಿ, ಕರ್ನಾಟಕ ರಾಜಕಾರಣದ ಕ್ಷೇತ್ರವಾರು ಜಾತಿ ನಕಾಶೆಯನ್ನು ಅತ್ಯಂತ ವೈeನಿಕವಾಗಿ ರೂಪಿಸಿದರು.
ಅಲ್ಲಿ ತನಕ ನಡೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ಕಾರಣವಾದ ಅಂಶಗಳನ್ನು ಅಧ್ಯಯನ ಮಾಡಿದರು. ಅಭ್ಯರ್ಥಿಗಳ ಆಯ್ಕೆಗೆ ಬೇಕಾಗುವ ಮಾನದಂಡಗಳನ್ನು ಸಿದ್ಧಪಡಿಸಿದರು.

ಚುನಾವಣೆ ಗೆಲ್ಲಲು ಮುಖ್ಯವಾದ ಸಾಮಾಜಿಕ ನ್ಯಾಯ ಮತ್ತು ಸ್ಥಳೀಯ ಸಂಗತಿಗಳನ್ನು ಪಟ್ಟಿ ಮಾಡಿದರು. ಇದಕ್ಕೆ ಪೂರಕ ವಾಗಿ ಎಲ್ಲ ಕೋಮಿಗೆ ಸೇರಿದ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆ ದೊಡ್ಡ ಮಟ್ಟದಲ್ಲಿ ಆರಂಭವಾಯಿತು. ಜಿಗಜಿಣಗಿ, ಶಾಣಪ್ಪ, ಕಾರಜೋಳ, ಸಾಂಗ್ಲಿಯಾನ, ಬಂಗಾರಪ್ಪ, ಸೋಮಣ್ಣ ಸೇರಿದಂತೆ ನೂರಾರು ನಾಯಕರು ಬಿಜೆಪಿ ಕಡೆ ಮುಖಮಾಡಲು ಆರಂಭಿಸಿದರು. ಅನಂತಕುಮಾರ
ಅಧ್ಯಕ್ಷರಾಗಿದ್ದ ಅವಽಯಲ್ಲಿ ಮೊದಲ ಬಾರಿಗೆ ಪಕ್ಷ ನೂರರ ಬಾಗಿಲಿಗೆ ಬಂದು ನಿಲ್ಲಲು ಸಾಧ್ಯವಾಯಿತು.

ಆ ಸಮಯದಲ್ಲಿ ಅನಂತಕುಮಾರ ಅವರು ತೆರೆಮರೆಯಲ್ಲಿ ಕುಮಾರಸ್ವಾಮಿ ಜತೆ ಸೇರಿ ಸರಕಾರ ರಚಿಸಲು ಮುಂದಡಿ ಇಡುತ್ತಿರುವ ಸುಳಿವು ಸಿಗುತ್ತಿದ್ದಂತೆ ಥಟ್ಟನೆ ಕಾರ್ಯಪ್ರವೃತ್ತರಾದ ಯಡಿಯೂರಪ್ಪ, ಆ ಓಟದಲ್ಲಿ ಅನಂತಕುಮಾರ ಅವರನ್ನು ಓವರಟೇಕ್ ಮಾಡಿದ್ದು ಇತಿಹಾಸ. ಅದಾದ ಬಳಿಕ ಅವರಿಬ್ಬರ ಮಧ್ಯೆ ಮೊದಲಿದ್ದ ವಿಶ್ವಾಸ, ನಂಬಿಕೆ ಮತ್ತು ಆತ್ಮೀಯತೆ ಕ್ಷೀಣಿಸುತ್ತಾ ಪರಸ್ಪರ ಅಪನಂಬಿಕೆ, ಸಂದೇಹಗಳು ದಟ್ಟವಾಗಲಾರಂಭಿಸಿದವು. ತರುವಾಯ ಯಡಿಯೂರಪ್ಪನವರು ಉಪಮುಖ್ಯಮಂತ್ರಿ ಯಾದರು, ನಂತರ ಮುಖ್ಯಮಂತ್ರಿಯಾದರು. ರಾಜೀ
ನಾಮೆ ನೀಡುವ ಪ್ರಸಂಗ ಬಂದಾಗ ತಮ್ಮ ಉತ್ತರಾಧಿಕಾರಿಯಾಗಿ ಎರಡು ಸಲ ಅಪ್ಪಿತಪ್ಪಿಯೂ ಅನಂತಕುಮಾರರನ್ನು ಮಾಡಲಿಲ್ಲ. ಸದಾನಂದಗೌಡ ಮತ್ತು ಜಗದೀಶ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿದರು. ಯುಪಿಎ ಸರಕಾರದ ಅವಽಯಲ್ಲಿ ಹತ್ತು ವರ್ಷಗಳ ಕಾಲ
ಅನಂತಕುಮಾರ ಅಽಕಾರದಿಂದ ದೂರವೇ ಉಳಿದಿದ್ದರು. ನಂತರ 2014 ರಲ್ಲಿ ನರೇಂದ್ರ ಮೋದಿ ಸಂಪುಟದಲ್ಲಿ ಮಂತ್ರಿಯಾಗಿ, ಕೊನೆಯುಸಿರೆಳೆಯುವ ತನಕ, ನಾಲ್ಕು ವರ್ಷಗಳ ಕಾಲ ಮತ್ತೆ ಪ್ರಭಾವಿಯಾಗಿಯೇ ಇದ್ದರು.

ವಾಜಪೇಯಿ ಮತ್ತು ಆಡ್ವಾಣಿಯವರನ್ನು ಬಿಟ್ಟರೆ, ಬಿಜೆಪಿಯ ನೀತಿ-ನಿರ್ಧಾರಗಳನ್ನು ರೂಪಿಸುವ ಪಕ್ಷದ ಗರಿಷ್ಠ ಪ್ರಭಾವಿ ಸಂಸದೀಯ ಮಂಡಳಿಗೆ ಅತಿ ಹೆಚ್ಚು ಕಾಲ ಸದಸ್ಯರಾ ದವರೆಂದರೆ ಅನಂತಕುಮಾರರೇ. ಆರು ಸಲ ಲೋಕಸಭಾ ಸದಸ್ಯರಾಗಿ, ಕೇಂದ್ರದಲ್ಲಿ ನಾಗರಿಕ ವಿಮಾನಯಾನ,
ಸಂಸ್ಕೃತಿ, ಪ್ರವಾಸೋದ್ಯಮ, ಯುವಜನ ಸೇವೆ, ಕ್ರೀಡೆ, ನಗರಾಭಿವೃದ್ಧಿ, ಬಡತನ ನಿರ್ಮೂಲನೆ, ರಾಸಾಯನಿಕ, ರಸಗೊಬ್ಬರ, ಸಂಸದೀಯ ವ್ಯವಹಾರ ಖಾತೆಯ ಸಚಿವರಾಗಿದ್ದ ಅನಂತಕುಮಾರ, ಪಕ್ಷದ ಪ್ರಮುಖ ಹೋರಾಟಗಳ ಉಸ್ತುವಾರಿ (ಅಯೋಧ್ಯಾ ರಥಯಾತ್ರೆ, ಏಕತಾ ಯಾತ್ರೆ ಇತ್ಯಾದಿ) ಯನ್ನು ಸಹ ನಿರ್ವಹಿಸಿದ್ದರು. ಬಿಹಾರ, ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗಳ ಮುಖ್ಯಸ್ಥರಾಗಿಯೂ ಹೊಣೆಗಾರಿಕೆ ನಿಭಾಯಿಸಿದ್ದರು.

1987ರಿಂದ ಮುಂದಿನ ಮೂವತ್ತೊಂದು ವರ್ಷಗಳ ತನಕ ಕರ್ನಾಟಕ ಬಿಜೆಪಿಯ ಅಗ್ರಗಣ್ಯ ನಾಯಕರಾಗಿದ್ದ ಅನಂತಕುಮಾರ ಒಬ್ಬ ಅಸಾಮಾನ್ಯ Crisis Manager ಮತ್ತು ನಿಷ್ಣಾತ ಟ್ರಬಲ್ ಶೂಟರ್. ರಾಜಕೀಯ ಪಟ್ಟು ಹೆಣೆಯುವುದರಲ್ಲಿ, ಪ್ರತಿತಂತ್ರ ರೂಪಿಸುವುದರಲ್ಲಿ ಪಳಗಿದ ಕೈ. ಒಬ್ಬ ಸಮರ್ಥ ನಾಯಕನಲ್ಲಿ ಇರಬೇಕಾದ ಎಲ್ಲ ಗುಣ ಗಳೂ ಅವರಲ್ಲಿದ್ದವು. ಈಗಲೂ ಪಕ್ಷದಲ್ಲಿ ಬಿಕ್ಕಟ್ಟು ಸಂಭವಿಸಿದಾಗ, ‘ಅನಂತಕುಮಾರ ಇರಬೇಕಾಗಿತ್ತು, ಅವರಿದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ, ಹೀಗಾಗಲು ಅವರು ಬಿಡುತ್ತಿರಲಿಲ್ಲ’ ಎಂದು ಆಪಸ್ನಾತಿಯಲ್ಲಿ, ಅವರವರೇ ಮಾತಾಡಿಕೊಳ್ಳುತ್ತಾರೆ. ಆದರೆ ಬಹಿರಂಗವಾಗಿ ಯಾರೂ ಹೇಳುವುದಿಲ್ಲ.

ಅವರಿಗೆ ಕ್ರೆಡಿಟ್ ಕೊಡಬೇಕಾದ ಸಂದರ್ಭದಲ್ಲಿ ಎಲ್ಲರೂ ತುಟಿ ಪಿಟಕ್ ಎನ್ನುವುದಿಲ್ಲ. ಮಾತು ಮರೆತವರಂತೆ ಸುಮ್ಮನಾಗಿಬಿಡುತ್ತಾರೆ. ಹಾಗಂತ ಇವರೆಲ್ಲ ಅವರಿಂದ ಉಪಕಾರ ಪಡೆದವರೇ. ಅವರ ಋಣ ಅನುಭವಿಸಿದವರೇ. ಆದರೆ ತಮ್ಮ ಭಾಷಣದಲ್ಲಿ ಅನಂತಕುಮಾರರ ಹೆಸರನ್ನು ಹೇಳಬೇಕೋ, ಬೇಡವೋ ಎಂದು ಹತ್ತು ಸಲ ಯೋಚಿಸುತ್ತಾರೆ. ಬೆಂಗಳೂರಿನ ಹೃದಯಭಾಗದಲ್ಲಿರುವ, ವಿಧಾನಸೌಧದ ಮಗ್ಗುಲಿಗಿರುವ ರೇಸ್‌ಕೋರ್ಸ್ ರಸ್ತೆಗೆ ಯಾರ ಹೆಸರಿಡಬೇಕು ಎಂಬ ಪ್ರಶ್ನೆ ಬಂದಾಗ, ತಮ್ಮ ಪಕ್ಷದವರಲ್ಲದ ಅಂಬರೀಶ್ ನೆನಪಾದರೇ ಹೊರತು ಬಿಜೆಪಿ ನಾಯಕರಿಗೆ ಅನಂತಕುಮಾರರ ನೆನಪಾಗಲೇ ಇಲ್ಲ.

ಹಾಗಂತ ಆಗ ಬಿಜೆಪಿ ಅಧಿಕಾರದಲ್ಲಿ ಇತ್ತು. ಅತ್ತ ವೃತ್ತವೂ ಅಲ್ಲದ, ಇತ್ತರಸ್ತೆಯೂ ಅಲ್ಲದ, ಯಡಿಯೂರು ಸನಿಹದ ಪುಟಗೋಸಿಯಷ್ಟು ಉದ್ದದ ಜಾಗಕ್ಕೆ, ಕಾಟಾಚಾರಕ್ಕೆ ‘ಅನಂತಕುಮಾರ ರಸ್ತೆ’ ಎಂದು ಹೆಸರಿಟ್ಟು ಕೈತೊಳೆದುಕೊಂಡರು. ಹಾಗೆ ನೋಡಿದರೆ, ಅದು ಅವರಿಗೆ ಮಾಡಿದ ಅಪಮಾನ. ಕಾರಣ ಎರಡು ದಶಕಗಳ ಕಾಲ ಅವರು ಸಂಸತ್ತಿನಲ್ಲಿ ಬೆಂಗಳೂರನ್ನು, ಕರ್ನಾಟಕವನ್ನು ಪ್ರತಿನಿಧಿಸಿದವರು. ಈ ಅವಽಯಲ್ಲಿ ಬೆಂಗಳೂರಿನ ಬೆಳವಣಿಗೆಗೆ ಕಾರಣರಾದವರು. ಬೆಂಗಳೂರಿನ ವಿಮಾನ ನಿಲ್ದಾಣ ನಿರ್ಮಾಣದಲ್ಲಿ ಅವರ ಪಾತ್ರ ದೊಡ್ಡದು. ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗಾದರೂ ಅವರ ಹೆಸರನ್ನಿಡಬಹುದಿತ್ತು.

ಹೋಗಲಿ, ಅವರzಂದು ಪುತ್ಥಳಿ ನಿಲ್ಲಿಸುವ ಪ್ರಸ್ತಾಪಕ್ಕೆ ಜೀವ ಕೊಡಲು ಬೆಂಗಳೂರಿನ ಬಿಜೆಪಿ ಶಾಸಕರಿಗೆ ಇನ್ನೂ ಸಮಯ ಒದಗಿ ಬಂದಿಲ್ಲ. ಹಾಗಂತ ಇವರೆಲ್ಲರನ್ನೂ ಅನಂತಕುಮಾರ ಅವರೇ ರಾಜಕೀಯಕ್ಕೆ ಕರೆತಂದು ಟಿಕೆಟ್ ಕೊಟ್ಟು ಗೆಲ್ಲಿಸಿದ್ದು. ಅವರಿಂದ ಉಪಕಾರ ಪಡೆದವರ ಪಟ್ಟಿ ಬಹಳ ದೊಡ್ಡದು. ಕೆರೋಸಿನ್, ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಪಂಪ್ ಏಜೆನ್ಸಿಯಿಂದ ಹಿಡಿದು, ಟಾಯ್ಲೆಟ್, ಪಾರ್ಕಿಂಗ್ ನಿರ್ವಹಣೆ ಟೆಂಡರ್ ಗಿಟ್ಟಿಸಿಕೊಂಡು ಹಣ ಮಾಡಿದವರಿಂದ ಹಿಡಿದು, ಶಾಸಕ, ಸಂಸದ, ಮಂತ್ರಿ, ಮುಖ್ಯಮಂತ್ರಿ ಖಾತೆ ಹೊಡೆದುಕೊಳ್ಳುವ ತನಕ ಉದ್ದುದ್ದ-ಅಡ್ಡಡ್ಡ ಬೆಳೆದವರೆಲ್ಲ ಇಂದು ಅವರನ್ನು ಸ್ಮರಿಸುವುದಿಲ್ಲ. ಅನಂತಕುಮಾರ ಬದುಕಿದ್ದಾಗ ಅವರ ಮುಂದೆ ಕುಳಿತುಕೊಳ್ಳಲು ಅನುಮಾನ ಪಡುತ್ತಿದ್ದವರೆಲ್ಲ ಇಂದು ಪಕ್ಷದಲ್ಲಿ ಏನೇನೋ ಆಗಿದ್ದಾರೆ, ಅಧಿಕಾರ ಗಿಟ್ಟಿಸಿಕೊಂಡುತಿಂದು-ತೇಗಿದ್ದಾರೆ.

ಆಗಲಿ ಬಿಡಿ. ಆದರೆ ತಾವು ಏರಿದ ಏಣಿಯನ್ನು ನೆನಪಿಸಿಕೊಳ್ಳದಷ್ಟು ಕೃತಘ್ನರಾಗಬಾರದಲ್ಲ. ಈ ಸ್ಥಿತಿ ನಾಳೆ ತಮಗೂ ಬರಬಹುದು ಎಂಬ ಕನಿಷ್ಠ ಪ್ರeಯಾದರೂ ಇರಬೇಕಲ್ಲವೇ? ಯಾರು ಚರಿತ್ರೆಯನ್ನುಮರೆಯುತ್ತಾರೋ, ಅವರಿಗೆ ಚರಿತ್ರೆ ಪಾಠ ಕಲಿಸದೇ ಹೋಗುವುದಿಲ್ಲ. ಅನಂತಕುಮಾರ ಅವರ ದೊಡ್ಡ ಋಣ ಒಂದಿಂದು ರೀತಿಯಲ್ಲಿ ತಮ್ಮ ಮೇಲಿದೆ ಎಂಬುದನ್ನು ಈಗ ಬಿಜೆಪಿಯಲ್ಲಿರುವ ಪ್ರತಿಯೊಬ್ಬ ನಾಯಕರು, ಶಾಸಕರು, ಸಂಸದರು ಮರೆಯಬಾರದು. ಅದಕ್ಕೆ ಅವರ ಕುಟುಂಬವೇನು ಆಸ್ತಿಯಲ್ಲಿ ಪಾಲು ಕೇಳುತ್ತಿಲ್ಲ. ಆತ್ಮಸಂತಸಕ್ಕಾದರೂ ಅವರನ್ನು
ಸಾರ್ವಜನಿಕ ವಾಗಿ ಸ್ಮರಿಸದಿದ್ದರೆ ಹೇಗೆ? ರಾಜ್ಯ ಬಿಜೆಪಿ ನಾಯಕರು ಎದೆ ಮುಟ್ಟಿಕೊಳ್ಳಲಿ, ಸಾಕು.