ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
vbhat@me.com
ಕೆಲ ವರ್ಷಗಳ ಹಿಂದೆ ನಮ್ಮ ಪತ್ರಿಕೆಯ ಮುಖಪುಟದಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ‘ಬಯಲಲ್ಲಿ ಮೂತ್ರ ವಿಸರ್ಜನೆ ಮಾಡೀರಿ ಜೋಕೆ, ದಂಡ ತೆರಬೇಕಾದೀತು’ ಎಂಬ ಶೀರ್ಷಿಕೆಯಡಿ ಪ್ರಕಟವಾಗಿದ್ದ ಸುದ್ದಿಯದು. “ಇನ್ನು ಮುಂದೆ ಕಂಡ ಕಂಡಲ್ಲಿ ಉಚ್ಚೆ ಹುಯ್ದರೆ, ಸರಕಾರ ಐದು ಸಾವಿರ ರುಪಾಯಿ ದಂಡ ಹಾಕುತ್ತದೆ. ಏಪ್ರಿಲ್ 30ರಿಂದ ಈ ಕಾನೂನು ಜಾರಿಗೆ ಬರಲಿದೆ.
ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ‘ಸ್ವಚ್ಛ ಭಾರತ’ ಯೋಜನೆಗೆ ನಿರೀಕ್ಷಿತ ಪ್ರತಿಸ್ಪಂದನ ಸಿಗದ
ಹಿನ್ನೆಲೆಯಲ್ಲಿ, ನಗರಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಉಗುಳುವ, ಮಲ-ಮೂತ್ರ ವಿಸರ್ಜಿಸುವ ವ್ಯಕ್ತಿಗಳಿಗೆ ದಂಡ
ವಿಽಸುವ ಕ್ರಮಕ್ಕೆ ಕೇಂದ್ರ ಸರಕಾರ ರಾಜ್ಯಗಳಿಗೆ ಸೂಚನೆ ನೀಡಲಿದೆ” ಎಂಬುದು ಆ ಸುದ್ದಿಯ ಸಾರಾಂಶವಾಗಿತ್ತು.
ತಪ್ಪೇನಿಲ್ಲ ಬಿಡಿ, ಇಂಥದ್ದೊಂದು ಕಾನೂನನ್ನು ಜಾರಿಗೊಳಿಸುವ ಅಗತ್ಯವಿತ್ತು. ‘ಕೋಣ ಉಚ್ಚೆ ಹುಯ್ದಂಗೆ’ ಎಂಬ
ಗಾದೆ, ಕೋಣಕ್ಕೆ ಮಾತ್ರ ಅಲ್ಲ, ಜಾಣರಿಗೂ ಅನ್ವಯವಾಗುವಂತಾಗಿದೆ. ಕಾರಣ ಸುಶಿಕ್ಷಿತರು, ಜಾಣರು ಸಹಿತ ಕಂಡ
ಕಂಡಲ್ಲಿ ಉಚ್ಚೆ ಹುಯ್ಯುವುದು ಸಾಮಾನ್ಯ ದೃಶ್ಯ. ಜಗತ್ತಿನ ಅತಿ ದೊಡ್ಡ ಮೂತ್ರಾಲಯ ಎಂಬ ಅಭಿದಾನವನ್ನು ಭಾರತೀಯ ರೈಲ್ವೆ ನಮ್ಮ ದೇಶಕ್ಕೆ ದಯಪಾಲಿಸಿ ಒಂದೂವರೆ ಶತಮಾನಗಳಾದವು. ಆದರೆ ನಾವು ಕಂಡಲ್ಲಿ ಹುಯ್ದು ಜಗತ್ತಿನ ವಿಶಾಲ ಬಯಲು ಮೂತ್ರಾಲಯ ಎಂಬ ಅಗ್ಗಳಿಕೆಗೆ ನಮ್ಮ ದೇಶ ಪಾತ್ರವಾಗುವ ಹಾಗೆ ಮಾಡಿ ದ್ದೇವೆ. ಉಗುಳಿದರೆ, ಮೂತ್ರ ವಿಸರ್ಜಿಸಿದರೆ ಸಿಂಗಾಪುರದಲ್ಲಿ ಬರೀ ದಂಡ ವಿಧಿಸುವುದಷ್ಟೇ ಅಲ್ಲ, ಸೆರೆಮನೆಗೂ ಅಟ್ಟುತ್ತಾರೆ. ನಮ್ಮ ದೇಶದಲ್ಲಿ ಅಂಥ ಕಾನೂನನ್ನು ಜಾರಿಗೆ ತಂದರೆ ಮನೆಯಲ್ಲಿರುವುದಕ್ಕಿಂತ ಹೆಚ್ಚು ಜನ ಸೆರೆಮನೆಗಳಲ್ಲೇ ಇರುತ್ತಾರೆ.
ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಸರಕಾರ ಇನ್ನೂ ಒಂದು ಹೆಜ್ಜೆ ಇಟ್ಟಿದೆ. ಅದೇನೆಂದರೆ, ಜನ ಬಯಲಲ್ಲಿ
ಮೂತ್ರ ವಿಸರ್ಜಿಸಬಾರದೆಂದರೆ, ಶೌಚಾಲಯಗಳು ಎಲ್ಲೆಡೆ ಇರುವಂತಾಗಬೇಕು, ಅವು ಸ್ವಚ್ಛವಾಗಿರಬೇಕು, ಜನರು
ಅದನ್ನು ಸ್ವಚ್ಛವಾಗಿರುವಂತೆ ಕಾಪಾಡಿಕೊಳ್ಳಬೇಕು. ಶೌಚಾಲಯಗಳನ್ನು ಸ್ವಚ್ಛ ಹಾಗೂ ಅಂದವಾಗಿಡುವ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಂಗವಾಗಿ, ಟಾಯ್ಲೆಟ್ ಗೋಡೆಗಳ ಮೇಲೆ ಬರೆಯುವುದನ್ನು ನಿಷೇಧಿಲು ಸರಕಾರ ಚಿಂತಿಸುತ್ತಿದೆಯಂತೆ.
ತಕರಾರು ಇರುವುದೇ ಇಲ್ಲಿ.
ಸರಕಾರವೇನಾದರೂ ಈ ಚಿಂತನೆಯನ್ನು ಕಾನೂನಾಗಿ ಕಾರ್ಯರೂಪಕ್ಕೆ ತಂದಿದ್ದೇ ಆದಲ್ಲಿ, ಈಗಿರುವ ಬಾತ್ ರೂಮು ಸಾಹಿತ್ಯವೆಲ್ಲ ಕಣ್ಮರೆಯಾಗುತ್ತವೆ. ಇನ್ನು ಮುಂದೆ ಟಾಯ್ಲೆಟ್ ಗೋಡೆ ಮೇಲೆ ಯಾರೂ ಬರೆಯುವಂತಿಲ್ಲ.
ಬರೆದರೆ ದಂಡ ವಿಧಿಸಲಾಗುತ್ತದೆ. ಟಾಯ್ಲೆಟ್ ಅನ್ನು ವಿರೂಪಗೊಳಿಸಿದ, ಅಸ್ವಚ್ಛಗೊಳಿಸಿದ ಅಪರಾಧಕ್ಕೆ ಕಾರಣ ವಾಗಬೇಕಾಗುತ್ತದೆ. ಅಂದರೆ, ಈ ಕಾನೂನು ಜಾರಿಗೆ ಬಂದರೆ ಮನುಕುಲದ ಪ್ರಪ್ರಥಮ ಸಾಹಿತ್ಯ, ನಿಜವಾದ, ಸಹಜ ವಾದ ಸಾಹಿತ್ಯ, ಜನಸಾಮಾನ್ಯರ ಸಾಹಿತ್ಯ ಹಾಗೂ ಅತ್ಯಂತ ಜನಪ್ರಿಯ ಪ್ರಕಾರವಾದ ಬಾತ್‌ರೂಮು ಸಾಹಿತ್ಯ ಅಥವಾ ಟಾಯ್ಲೆಟ್ ಸಾಹಿತ್ಯವೇ ನಶಿಸಿಹೋಗುತ್ತದೆ. ಬಾತ್‌ರೂಮು ಸಿಂಗರುಗಳಂತೆ ಬಾತ್‌ರೂಮು ಸಾಹಿತಿಗಳಿಗೂ ಕೊರತೆಯಿಲ್ಲ.
ಟಾಯ್ಲೆಟ್‌ಗೆ ಹೋದಾಗ ಕೈಯಲ್ಲೊಂದು ಪೆನ್ನು ಹಾಗೂ ಅಂದವಾದ ಬಿಳಿಗೋಡೆ ಕಂಡರೆ, ಮೂತ್ರ ವಿಸರ್ಜಿಸುವ
ಸಮಯದಲ್ಲಿ ಒಂದು ಪೋಲಿಚಿತ್ರ ಗೀಚದವರು, ವಕ್ರತುಂಡೋಕ್ತಿ ಬರೆಯದವರು ವಿರಳ. ‘ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ’ ಎಂಬ ವಕ್ರೋಕ್ತಿಯಂತೂ ಬಾತ್‌ರೂಮು ಸಾಹಿತ್ಯದ ಮುನ್ನುಡಿಯೋ, ಘೋಷವಾಕ್ಯವೋ ಎನ್ನುವಷ್ಟು ಜನಪ್ರಿಯತೆ ಹಾಗೂ ಸಾರ್ವತ್ರಿಕತೆಯನ್ನು ಗಳಿಸಿರುವುದು, ಅದು ದೇಶದ ಯಾವುದೇ ರಾಜ್ಯಗಳ ಟಾಯ್ಲೆಟ್‌ಗೆ ಹೋದರೂ ಅಲ್ಲಿನ ಪ್ರಾದೇಶಿಕ ಭಾಷೆಯಲ್ಲಿ ಬರೆದಿರುವುದಕ್ಕೆ ಸಾಕ್ಷಿ.
ಯಾವುದಾದರೂ ಊರಿಗೆ ಹೋದರೆ ಅಲ್ಲಿ ನಿಮಗೆ ಬರಹಗಾರರು ಸಿಗದಿರಬಹುದು. ಆದರೆ ಅದೇ ಊರಿನ
ಟಾಯ್ಲೆಟ್‌ಗೆ ಹೋದರೆ ಈ ಅಭಿಪ್ರಾಯವನ್ನು ಬದಲಿಸಿಕೊಳ್ಳಬೇಕು. ಟಾಯ್ಲೆಟ್ ಸಾಹಿತ್ಯವನ್ನು ಸಹ ಸೃಷ್ಟಿಸದ
ಅರಸಿಕರು, ಅಸಾಹಿತಿಗಳು ಎಲ್ಲೂ ಇರಲಿಕ್ಕಿಲ್ಲ. ಹಿಮಾಲಯ ಪರ್ವತದ ತುತ್ತ ತುದಿಯೇರುವ ಮುನ್ನ ಸಿಗುವ ಕ್ಯಾಂಪ್ ನಲ್ಲಿ ಪುಟ್ಟ ಟಾಯ್ಲೆಟ್‌ನ ಡೇರೆಯ ಬಟ್ಟೆ ಮೇಲೆ ‘ಉಸಿರು ಬಿಗಿಹಿಡಿದು ಹಿಮಾಲಯವನ್ನು ಯಾರು ಬೇಕಾದರೂ ಏರಬಹುದು. ಆದರೆ ಒಮ್ಮೊಮ್ಮೆ ಉಚ್ಚೆ ಕಟ್ಟಿಕೊಳ್ಳಲು ಆಗೊಲ್ಲ’ ಎಂದು ಬರೆದಿದೆಯಂತೆ. ಹಾಗೆಂದು ಖ್ಯಾತ ಪ್ರವಾಸಿ ಲೇಖಕ ಹ್ಯೂ ಗುಂಟರ್ ಕಾಲಿನ್ ಬರೆದಿದ್ದರು.
ಟಾಯ್ಲೆಟ್ ಸಾಹಿತ್ಯ ನಿಜವಾದ ಸ್ವಾನುಭವ ಸಾಹಿತ್ಯ, ಮಣ್ಣಿನ ವಾಸನೆ ಅಲ್ಲಲ್ಲ… ಉಚ್ಚೆ ವಾಸನೆ ಸಾಹಿತ್ಯ, ಮಣ್ಣಿ
ಗಿಂತ nativity, ಸಾಂದ್ರತೆ ಹಾಗೂ ವಾಸನೆಯುಳ್ಳ ಸಾಹಿತ್ಯ. ಮನಸ್ಸು ಹಗುರವಾಗಿ, ಒತ್ತಡವನ್ನೆಲ್ಲ ಕಳಚಿ ಕೊಂಡು ಬರೆದ ಅತ್ಯಂತ ರಿಲೀಫ್ ಆದ ಸಾಹಿತ್ಯ ಅದು. ಇಂಥ ಸಾಹಿತ್ಯಪ್ರಕಾರವೇ ನಾಶವಾದರೆ? ‘ನಿಜವಾದ ಸೃಜನಶೀಲ ಸಾಹಿತ್ಯ ಅಂದ್ರೆ ಯಾವುದು?’ ಎಂಬ ಪ್ರಶ್ನೆಗೆ ಖ್ಯಾತ ಹಾಸ್ಯಸಾಹಿತಿ ಬೀಚಿ ಅವರು ‘ಬಾತ್ ರೂಮ್ ಸಾಹಿತ್ಯ’ ಎಂದು ಚಟಾಕಿ ಹಾರಿಸಿದ್ದರು.
ಉದ್ದಾಮ ಸಾಹಿತಿಗಳಾಗಲಿ, ಬರಹಗಾರರಾಗಲಿ, ಬಾತ್‌ರೂಮಿನಲ್ಲಾಗಲಿ, ಸಾರ್ವಜನಿಕ ಶೌಚಾಲಯಗಳಲ್ಲಾಗಲಿ ಬರೆಯಲು ಹೋಗುವುದಿಲ್ಲ. ಶೌಚಾಲಯದಲ್ಲಿ ಬರೆಯುವಷ್ಟು ಅವರಲ್ಲಿ ಉತ್ಕಟತೆ, ಒತ್ತಾಸೆ ಬರಬೇಕೆಂದರೆ ಅದಕ್ಕೆ ಹಿಡಿದಿಟ್ಟುಕೊಳ್ಳಲಾಗದ ಸೃಜನಶೀಲತೆಯೇ ಕಾರಣ. ಸಾಹಿತ್ಯದ ಉದಯವೇ ಶೌಚಾಲಯದಲ್ಲಾಯಿತು
ಎಂದು ಸಾಹಿತಿ ಮಾರ್ಕ್ ಟ್ವೈನ್ ಹೇಳಿದ್ದು ತಮಾಷೆಯಲ್ಲ. ಅದಕ್ಕೆ ಜಗತ್ತಿನಲ್ಲಿರುವ ಎಲ್ಲ ಟಾಯ್ಲೆಟ್‌ಗಳಲ್ಲಿ ಬರೆದಿರುವ ಸಾಲುಗಳೇ ಸಾಕ್ಷಿ. ಟಾಯ್ಲೆಟ್ ಗೋಡೆ ಎಷ್ಟೇ ಸ್ವಚ್ಛವಾಗಿರಬಹುದು, ಅದು ಕೆಲವು ವಾಕ್ಯಗಳಾದರೂ ಬರೆಯಲಾರದಷ್ಟು ಸ್ವಚ್ಛವಾಗಿರಲು ಸಾಧ್ಯವೇ ಇಲ್ಲ.
ಪಂಚತಾರಾ ಹೋಟೆಲ್‌ನ ಟಾಯ್ಲೆಟ್‌ಗಳು ಸಹ ಇದಕ್ಕೆ ಹೊರತಲ್ಲ. ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯ ಟಾಯ್ಲೆಟ್‌ನಲ್ಲಿ ಒಂದು ಸಾಲು- ‘ನೀವು ಇಲ್ಲಿ ಎಷ್ಟು ಪ್ರೆಶರ್ ಹಾಕುತ್ತೀರೋ ಅಷ್ಟೇ ಪ್ರೆಶರ್ ಅನ್ನು ನಿಮ್ಮ ಕೆಲಸದಲ್ಲೂ ಹಾಕಿದ್ದರೆ, ನೀವು ಹಾಗೂ ನಿಮ್ಮನ್ನು ನೇಮಿಸಿಕೊಂಡ ಕಂಪನಿ ಎಂದೋ ಉದ್ಧಾರವಾಗುತ್ತಿತ್ತು’.
ನ್ಯೂಯಾರ್ಕಿನಲ್ಲಿರುವ ವಿಶ್ವಸಂಸ್ಥೆ ಕಟ್ಟಡದಲ್ಲಿರುವ ಶೌಚಾಲಯವೊಂದರಲ್ಲೂ ಸ್ವಾರಸ್ಯಕರವಾದ ಸಾಲು
ಬರೆದಿರುವುದನ್ನು ವಿಶ್ವಸಂಸ್ಥೆಯ ಮಾಜಿ ನಿರ್ದೇಶಕರಾದ ಬೈಚಂದ್ ಪಟೇಲ್ ಬರೆದಿದ್ದರು- ’This is the only
place in the building where I know what I am doing’.
ಮತ್ತೊಂದು ಸಾಲನ್ನು ಗಮನಿಸಿ- ‘Since writing on toilet walls is done neither for critical acclaim nor financial rewards, it is the purest form of art ’. ಇಸ್ತಾನ್‌ಬುಲ್‌ನ ವಿಮಾನ ನಿಲ್ದಾಣದ ರೆಸ್ಟ್‌ರೂಮ್‌ನಲ್ಲಿ ಬರೆದಿರುವ ಸಾಲು ನನ್ನ ಮನಸ್ಸಿನಲ್ಲಿ ಇಂದಿಗೂ ಕುಳಿತಿದೆ. ಅಲ್ಲಿನ ಟಾಯ್ಲೆಟ್ ಗೋಡೆ ಮೇಲೆ ‘Make love, not
war ’ ಎಂದು ಯಾರೋ ಬರೆದಿದ್ದರು. ಅದರ ಕೆಳಗೆ ಬೇರೊಬ್ಬರ ಹಸ್ತಾಕ್ಷರದಲ್ಲಿ ಬರೆದಿತ್ತು- ’Hell, do both, get married ’.
ಯಾವ ಬುದ್ಧಿವಂತ ಈ ಸಾಲನ್ನು ಬರೆದಿದ್ದಾನೋ ಗೊತ್ತಿಲ್ಲ. ಕಮೋಡ್‌ನೊಳಗೆ ಸರಿಯಾಗಿ ಮಲ ವಿಸರ್ಜಿಸದೇ,
ಸುತ್ತೆಲ್ಲ ರಾಡಿ ಮಾಡಿ ಹೋಗುವವರನ್ನು ದ್ವೇಷಿಸಿ ಬರೆದ ಈ ಸಾಲನ್ನು ನಾನು ನೋಡಿದ್ದು ಅಮೆರಿಕದ ಲಾಸ್ ವೆಗಾಸ್ ನಲ್ಲಿ- ‘How can a man hit a deer at 250 yards keep missing the toilet? ’. ನಾನು ಸಿಂಗಾಪುರದ ಬಹುರಾಷ್ಟ್ರೀಯ ಕಂಪನಿಯೊಂದರ ಪ್ರಧಾನ ಕಚೇರಿಗೆ ಹೋಗಿದ್ದೆ. ಅಲ್ಲಿನ ರೆಸ್ಟ್‌ರೂಮಿನಲ್ಲಿ ಕಾಣಿಸಿದ ಸಾಲು ಹೀಗಿದೆ- ‘No job is finished, untill the paper work is done’.
ಈ ಸಾಲನ್ನು ಬರೆದವನ ಸೃಜನಶೀಲತೆಯನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ. ಕನಿಷ್ಠ ಪಕ್ಷ ಬರೆದವರು
ಯಾರೇ ಆಗಿರಲಿ, ಅವರು ತಮ್ಮ ಹೆಸರನ್ನಾದರೂ ಬರೆದಿದ್ದರೆ, ಅವರ ಹೆಸರಿನಲ್ಲಿ ಈ ಸಾಲು ಅಮರವಾಣಿಯಾಗಿ ಉಳಿಯುತ್ತಿತ್ತು. ಈ ಸಾಲು ನನ್ನ ಕಣ್ಣಿಗೆ ಬಿದ್ದಿದ್ದು ಇಸ್ರೇಲಿನ ಹೋಟೆಲ್‌ನಲ್ಲಿ. ಅದು ಹೀಗಿದೆ- ‘People are assholes. Just make sure you are not the toilet paper ’ ಕೆಲ ವರ್ಷಗಳ ಹಿಂದೆ ನಾನು ಲಂಡನ್‌ನ ಒಂದು ಹೋಟೆಲ್‌ನಲ್ಲಿ ತಂಗಿದ್ದೆ. ಅಲ್ಲಿನ ಟಾಯ್ಲೆಟ್‌ನಲ್ಲಿToilet Rules ಎಂಬ ಬೋರ್ಡ್ ಅನ್ನು ನೇತು ಹಾಕಿದ್ದರು.
ಅದರಲ್ಲಿ ಬರೆದಿತ್ತು- ‘If you lift it up, Put it down, If it runs out, Replace it. If you miss it, Wipe it. If you finished, Flush it. If it smells, Spray it. Ladies- Please remain seated for the whole performance. Gentlemen- Stand closer. It may be shorter than you think ’. ಇಷ್ಟು ಕಡಿಮೆ ವಾಕ್ಯಗಳಲ್ಲಿ ಇಷ್ಟೆಲ್ಲ ಸೂಚನೆಗಳನ್ನು ಇಷ್ಟು ಪರಿಣಾಮಕಾರಿಯಾಗಿ ಬರೆದ ಆ ಬಾತ್‌ರೂಮ್ ಸಾಹಿತಿಗೆ ಶರಣು.
ಈ ವಾಕ್ಯವನ್ನು ಬರೆದವನು ಕಿಲಾಡಿಯೇ ಇರಬೇಕು. ಇದನ್ನು ಎಲ್ಲಿ ನೋಡಿದ್ದೇನೆಂಬುದು ನೆನಪಾಗುತ್ತಿಲ್ಲ.
ಟಾಯ್ಲೆಟ್ ಗೋಡೆ ಮೇಲೆ ಬರೆದಿತ್ತು- ‘”Use me well and keep me clean, I will never tell what I have seen ’. ಒಮ್ಮೆ ದಕ್ಷಿಣ ಆಫ್ರಿಕಾದ ರಾಜಧಾನಿ ಜೋಹಾನ್ಸ್ ಬಗ್ ನ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದೆ. ಅಲ್ಲಿನ ಟಾಯ್ಲೆಟ್ ನಲ್ಲಿ ಅಂದವಾಗಿ ಚೌಕಟ್ಟು ತೊಡಿಸಿ ಒಂದು ಫ್ರೇಮನ್ನು ನೇತು ಹಾಕಿದ್ದರು.
ಅದರಲ್ಲಿ ಬರೆದಿತ್ತು- ‘Whenever you are sad, just remember that somewhere in this building there is
some one who doesn’t even know how to flush the toilet after using it’ ’. ವಕ್ರತುಂಡೋಕ್ತಿ ಮಾದರಿಯ ಸಾಲುಗಳನ್ನು ನಾನು ಗಮನಿಸಿದ್ದು ಜುರಿಕ್‌ನ ಹೋಟೆಲ್‌ನಲ್ಲಿ. ಟಾಯ್ಲೆಟ್ ಪೇಪರ್ ಕುರಿತು ಬರೆದ ಸಾಲು- ‘You never know what you have until its gone. Toilet paper is a good example ’.
ಕಾಲೇಜು ದಿನಗಳಲ್ಲಿ ಎಲ್ಲರೂ ಬಾತ್‌ರೂಮು ಸಾಹಿಗಳೇ. ಅದರಲ್ಲೂ ಹಾಸ್ಟೆಲ್ ಗೋಡೆಗಳ ಮೇಲೆಲ್ಲ ಕ್ಯಾಂಪಸ್
ನಲ್ಲಿರುವ ಹುಡುಗಿಯರ ವಿವರಗಳೇ. ಅವರನ್ನು ಬಣ್ಣಿಸುವಾಗ ಎಲ್ಲರೂ ಕವಿಗಳೇ. ಸಭ್ಯತೆ ಮೀರುವ ಅವಕಾಶ
ಸಿಗುವುದು ಇಲ್ಲೊಂದೇ. ಅಶ್ಲೀಲ ಬರೆದೂ ದಕ್ಕಿಸಿಕೊಳ್ಳುವ ಸ್ವಾತಂತ್ರ್ಯವಿರುವುದು ಸಹ ಇಲ್ಲೊಂದೇ.
ಬಹುತೇಕ ಟಾಯ್ಲೆಟ್ ಸಾಹಿತ್ಯದ ಮೂಲ ಲೇಖಕರು ಯಾರೆಂಬುದೇ ಗೊತ್ತಿಲ್ಲ. ಬರಹಗಾರರಲ್ಲೊಂದು ಅಹಂ
ಇರುತ್ತದೆ. ಏನೇ ಬರೆಯಲಿ, ಒಂದು ಸಾಲು ಬರೆಯಲಿ, ಕೊನೆಯಲ್ಲಿ ಅವರ ಹೆಸರು ಬರೆದಿರಬೇಕು. ಅವರ
ಹೆಸರನ್ನೂ ಬರೆಯದಿದ್ದರೆ, ತೆಗೆದು ಹಾಕಿದರೆ ಲೇಖಕರು ನೊಂದುಕೊಳ್ಳುತ್ತಾರೆ. ಅವರ ‘ಅಹಂ’ಗೆ ದೊಡ್ಡ ಪೆಟ್ಟು
ಕೊಟ್ಟಂತೆ. ಆದರೆ ಟಾಯ್ಲೆಟ್‌ನಲ್ಲಿ ಬರೆಯುವ ಯಾವುದೇ ಸಾಲುಗಳಿಗೂ ಯಾರೂ ತಮ್ಮ ಹೆಸರನ್ನು ಹಾಕಿ ಕೊಳ್ಳದೇ ಹೃದಯ ವೈಶಾಲ್ಯ ಮೆರೆಯುತ್ತಾರೆ. ಹೀಗಾಗಿ ಬಹುತೇಕ ಬಾತ್‌ರೂಮು ಸಾಹಿತಿಗಳು, ತಾಳೆಗರಿಯಲ್ಲಿನ ಬರಹಗಳಂತೆ ‘ಅನಾಮಧೇಯ’ರಾಗಿಯೇ ಉಳಿದುಬಿಟ್ಟಿದ್ದಾರೆ.
ಲಂಡನ್‌ನ ಟ್ಯೂಬ್(ಅಂಡರ್‌ಗ್ರೌಂಡ್ ಟ್ರೇನ್)ನ ಟಾಯ್ಲೆಟ್‌ನಲ್ಲಿ ಸುಮಾರು ನೂರ ಎಂಬತ್ತು ವರ್ಷಗಳ ಹಿಂದೆ ಬರೆದ ಕವನವೊಂದನ್ನು ಹಾಗೇ ಕಾದಿರಿಸಲಾಗಿದೆ. ಆ ಕವನದ ಸುತ್ತಮುತ್ತ ಅನೇಕರು ಗೀಚಿದ್ದಾರೆ. ಆದರೆ ಈ ಕವನವನ್ನು ಸಂರಕ್ಷಿಸುವಂತೆ ರೈಲ್ವೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಇದನ್ನು ಯಾರು ಬರೆದಿರಬಹುದು ಎಂಬ ಬಗ್ಗೆ ಆಗಾಗ ಜಿಜ್ಞಾಸೆ ಮೂಡುತ್ತಿರುತ್ತದೆ.
ಲಂಡನ್‌ನ ಟ್ಯಾಬ್ಲಾಯಿಡ್‌ಗಳಿಗೆ ಯಾವುದೂ ಸುದ್ದಿ ಸಿಗದಿದ್ದಾಗ, ಈ ಕವನವನ್ನು ಇವರು ಬರೆದಿದ್ದು, ಅವರು ಬರೆ
ದಿದ್ದು ಎಂಬ ಊಹಾಪೋಹವನ್ನು ಹರಿಯಬಿಟ್ಟು ಓದುಗರ ಕುತೂಹಲವನ್ನು ಕೆಣಕುತ್ತಾರೆ. ಈ ಕವನವನ್ನು ಯಾರು ಬರೆದಿರಬಹುದು ಎಂಬ ಬಗ್ಗೆ ಕನಿಷ್ಠ ನೂರಾರು ಹೆಸರುಗಳನ್ನು ತೇಲಿಬಿಟ್ಟಿರಬಹುದು. ಈ ಕವನದ ಮೂಲ ಲೇಖಕರ ಬಗ್ಗೆ ನಾಳೆ ಒಂದು ಸುದ್ದಿ ಪ್ರಕಟಿಸಿದರೂ ಅದನ್ನು ಜನ ಆಸ್ಥೆಯಿಂದ ಓದುತ್ತಾರೆ.
ಜಿನೀವಾದ ಮೆರಿಯಟ್ ಹೋಟೆಲ್‌ನ ಲಾಬಿಯಲ್ಲಿರುವ ರೆಸ್ಟ್‌ರೂಮಿನಲ್ಲಿ ಒಂದು ಬೋರ್ಡು ಗಮನ ಸೆಳೆಯುತ್ತದೆ.
‘ನಿಮಗೆ ಏನಾದರೂ ಬರೆಯಬೇಕು ಅಂತೆನಿಸಿದರೆ, ನಮ್ಮ ಗೋಡೆಗಳ ಮೇಲೆ ಬರೆಯಬೇಡಿ. ಅದಕ್ಕಾಗಿಯೇ
ಇಲ್ಲೊಂದು ದೊಡ್ಡ ನೋಟ್‌ಬುಕ್ ಇಟ್ಟಿದ್ದೇವೆ. ಅದರಲ್ಲಿ ಬರೆಯಿರಿ’ ಎಂಬ ಬೋರ್ಡ್ ಓದಿ, ಆ ನೋಟ್‌ಬುಕ್‌ಗೆ
ತಡಕಾಡಿದೆ. ರೆಸ್ಟ್‌ರೂಮಿನ ಒಂದು ಮೂಲೆಯಲ್ಲಿ ಒಂದು ಟೇಬಲ್ ಮೇಲೆ ಹೂದಾನಿ, ಅದರ ಪಕ್ಕ ಈ ನೋಟ್ ಬುಕ್, ಅದರ ಪಕ್ಕದಲ್ಲಿ ಸೋಫಾ. ಅಲ್ಲಿ ಕುಳಿತು ಮನಸ್ಸಿಗೆ ತೋಚಿದ್ದನ್ನು ಗೀಚಬಹುದು. ಸುಮಾರು ಆರುನೂರು ಪುಟಗಳಷ್ಟು ದೊಡ್ಡದಾದ ಆ ನೋಟ್‌ಬುಕ್ಕನ್ನು ಕೈ ತೊಳೆದುಕೊಂಡೇ ಮುಟ್ಟಬೇಕು ಹಾಗೂ ಅಲ್ಲಿಟ್ಟಿರುವ ಪೆನ್ನಿನಲ್ಲಿಯೇ ಬರೆಯಬೇಕು. ಈ ಬುಕ್‌ನಲ್ಲಿ ಯಾರು ಏನೇನು ಗೀಚಿದ್ದಾರೆ ಎಂದು ಆಸಕ್ತಿಯಿಂದ ಎತ್ತಿಕೊಂಡೆ. ಅದನ್ನು ಕೆಳಗಿಡುವ ಮನಸ್ಸಾಗಲಿಲ್ಲ. ಪುಟ್ಟ ಪುಟ್ಟ ಬರಹಗಳು, ಕಚಗುಳಿಯಿಡುವ ಸಾಲುಗಳು. ಕೆಲವು ಪೋಲಿ ಚಿತ್ರಗಳು. ಯಾರೂ ತಮ್ಮ ಹೆಸರನ್ನು ಬರೆದಿಲ್ಲ.
‘ಪ್ರತಿ ಎರಡು ತಿಂಗಳಿಗೊಮ್ಮೆ ಈ ನೋಟ್‌ಬುಕ್ ಭರ್ತಿಯಾಗುತ್ತದೆ. ಇಂಥ ನೂರಾರು ನೋಟ್‌ಬುಕ್‌ಗಳು
ಹೋಟೆಲ್ ಲೈಬ್ರರಿಯಲ್ಲಿವೆ. ವರ್ಷಕ್ಕೊಮ್ಮೆ ಇವುಗಳ ಪ್ರದರ್ಶನ ಏರ್ಪಡಿಸುತ್ತೇವೆ. ಸಾವಿರಾರು ಸಂಖ್ಯೆಯಲ್ಲಿ ಜನ
ಬಂದು ಈ ಸಾಹಿತ್ಯವನ್ನು ಓದಿ ಹೋಗುತ್ತಾರೆ’ ಎಂದು ಹೌಸ್‌ಕೀಪಿಂಗ್ ಸಿಬ್ಬಂದಿ ಹೇಳಿದಾಗ ಅಚ್ಚರಿಯಾಯಿತು. ಅಲ್ಲಿನ ಗೋಡೆಗಳೂ ಅಂದವಾಗಿವೆ. ಆ ನೆಪದಲ್ಲಿ ಒಂದಷ್ಟು ಸಾಹಿತ್ಯವೂ ಸೃಷ್ಟಿಯಾಗಿವೆ. ಈ ನೋಟ್‌ಬುಕ್‌ಗಳಿಗೆ
ಬಂಗಾರದ ಲೇಪವಿರುವ ಹೊದಿಕೆ ಹಾಕಿರುವುದರಿಂದ ಪುರಾತನ ಗ್ರಂಥಗಳಂತೆ ಗೋಚರಿಸುತ್ತವೆ. ‘ಬೆಲೆ ಕಟ್ಟಲಾಗದ
ಸಾಹಿತ್ಯ’ ಎಂದು ಕರೆಸಿಕೊಳ್ಳುತ್ತಿದೆ.
ಇತ್ತೀಚೆಗೆ ಕೆಲವು ಹೋಟೆಲ್‌ಗಳು ಹೊಸ ಸಂಪ್ರದಾಯ ಆರಂಭಿಸಿವೆ. ಟಾಯ್ಲೆಟ್‌ನಲ್ಲಿ ಯಾರಾದರೂ ಅಶ್ಲೀಲ ವಲ್ಲದ, ಸೊಗಸಾದ ಸಾಲುಗಳನ್ನು ಬರೆದು ಹೋದರೆ ಅವುಗಳ ಫೋಟೊ ತೆಗೆದು ಫೇಸ್‌ಬುಕ್ ಅಥವಾ ಟ್ವಿಟರ್ ನಲ್ಲಿ share ಮಾಡುತ್ತಿವೆ. ಇವುಗಳನ್ನು ಇಷ್ಟಪಡುವ ಒಂದು ದೊಡ್ಡ ಓದುಗವಲಯ ಹುಟ್ಟಿಕೊಂಡಿ ರುವುದಕ್ಕೆ ಲೈಕ್, ರೀಟ್ವೀಟ್ ಸಂಖ್ಯೆಯೇ ನಿದರ್ಶನ.
ಮಾನವನ ನಾಗರಿಕತೆ ಹುಟ್ಟಿದ್ದೇ ಬಚ್ಚಲುಮನೆಯಲ್ಲಿ ಅರ್ಥಾತ್ ಟಾಯ್ಲೆಟ್‌ನಲ್ಲಿ. ಅಂತೆಯೇ ಸಾಹಿತ್ಯ ಹುಟ್ಟಿ ದ್ದೂ ಇಲ್ಲಿಯೇ. ಹೀಗಿರುವಾಗ ಮೂಲಸ್ಥಾನದಲ್ಲಿಯೇ ಸಾಹಿತ್ಯವನ್ನು ನಿಷೇಧಿಸಿಬಿಟ್ಟರೆ ಹೇಗೆ? ಒಂದಂತೂ ಸತ್ಯ. ಟಾಯ್ಲೆಟ್ ಇರುವ ತನಕ ಟಾಯ್ಲೆಟ್ ಸಾಹಿತ್ಯ ಜೀವಂತವಾಗಿರುತ್ತದೆ. ಈ ಸಾಹಿತ್ಯದ ಮಣ್ಣಿನ (?) ವಾಸನೆ ಸದಾ ಪಸರಿಸುತ್ತಿರುತ್ತದೆ! ನಾನು ಐವತ್ತು ದೇಶಗಳಿಗೆ ಭೇಟಿ ನೀಡಿದ್ದರೂ, ಲೇಡಿಸ್ ಟಾಯ್ಲೆಟ್‌ಗೆ ಇನ್ನೂ ಭೇಟಿ ಕೊಟ್ಟಿಲ್ಲ. ಹೀಗಾಗಿ ಅಲ್ಲಿನ ಗೋಡೆಗಳ ಮೇಲೆ ಎಂಥ ಬರಹಗಳಿರುತ್ತವೆ ಎಂಬುದನ್ನು ತಿಳಿಯುವ ಕುತೂಹಲ ಹಾಗೇ ಉಳಿದಿದೆ. ‘ಟಾಯ್ಲೆಟ್ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ’ ಎಂಬ ಸಂವಾದ, ವಿಚಾರ ಸಂಕಿರಣ ಏರ್ಪಡಿಸಿದರೆ, ಒಂದಷ್ಟು ಅಮೂಲ್ಯ ಸಂಗತಿಗಳ ವಿಸರ್ಜನೆಯಾಗಬಹುದು!
ಇದನ್ನೂ ಓದಿ: Vishweshwar Bhat Column: 7, ಲೋಕಕಲ್ಯಾಣ ಮಾರ್ಗ