Thursday, 21st November 2024

Vishweshwar Bhat Column: ಮಧು ಬಂಗಾರಪ್ಪ ಕನ್ನಡವೂ, ಶಶಿ ತರೂರ್ ಇಂಗ್ಲಿಷೂ !

vishweshwara bhat column

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ನಮ್ಮ ಮುಂದೆ ಎರಡು ವಿಭಿನ್ನ ಮಾದರಿಗಳಿವೆ. ಈ ಎರಡೂ ಮಾದರಿಗಳು ಒಂದೇ ರಾಜಕೀಯ ಪಕ್ಷಕ್ಕೆ ಸೇರಿದವು. ಒಬ್ಬರು ಕೆಟ್ಟ ಕಾರಣಕ್ಕೆ ಮತ್ತು ಮತ್ತೊಬ್ಬರು ಒಳ್ಳೆಯ ಕಾರಣಕ್ಕೆ ಸುದ್ದಿಯಲ್ಲಿರುವವರು. ಈ ಎರಡೂ ಮಾದರಿಗಳು ಭಾಷೆಗೆ ಸಂಬಂಧಿಸಿದ ವಿಷಯಗಳ ಬಗ್ಗೆಯೇ ಗಮನ ಸೆಳೆದಿರುವುದು ಗಮನಾರ್ಹ. ಅಂದ ಹಾಗೆ ನಾನು ಹೇಳಲು ಹೊರಟಿರುವುದು ನಮ್ಮ ಪ್ರಾಥಮಿಕ ಶಿಕ್ಷಣ ಮತ್ತು ಗ್ರಂಥಾಲಯ ಖಾತೆ ಸಚಿವರಾದ ಮಧು ಬಂಗಾರಪ್ಪ (Madhu Bangarappa) ಮತ್ತು ಲೋಕಸಭಾ ಸದಸ್ಯ ಶಶಿ ತರೂರ್ (Shashi Taroor) ಅವರ ಕುರಿತು.

ಮಧು ಅವರು ನಮ್ಮ ರಾಜ್ಯದ ವರ್ಚಸ್ವಿ ಮತ್ತು ಜನಪ್ರಿಯ ರಾಜಕಾರಣಿಗಳಲ್ಲೊಬ್ಬರೂ, ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದ ಬಂಗಾರಪ್ಪನವರ ಸುಪುತ್ರರು. ಅವರು ಹುಟ್ಟುವಾಗಲೇ ರಾಜಕಾರಣದ ಚಮಚದಲ್ಲಿಯೇ ಹಾಲು ಕುಡಿಯುತ್ತಾ ಬೆಳೆದವರು. ಅವರ ಹೆಸರಿನಲ್ಲಿರುವ ‘ಬಂಗಾರಪ್ಪ’ ಎಂಬುದೇ ಅವರಿಗೆ ಶ್ರೀರಕ್ಷೆ ಮತ್ತು ಬಹು ದೊಡ್ಡ ಬಂಡವಾಳ. ಮಧು ಅವರಿಗೆ ರಾಜಕೀಯಕ್ಕೆ ಬೇಕಾದ ಎಲ್ಲ ಸವಲತ್ತು-ಸೌಲಭ್ಯಗಳು ಅವರ ಮನೆಯಲ್ಲಿಯೇ ಇದ್ದವು. ಅವರ ಪಾಲಿಗೆ ಅಪ್ಪನಿಗಿಂತ ದೊಡ್ಡ ರೋಲ್ ಮಾಡೆಲ್ ಯಾರೂ ಇರಲಿಲ್ಲ. ಮತ್ತೇನೂ ಅಲ್ಲ, ಅವರು ಬಂಗಾರಪ್ಪನವರ ಗುಣಗಳನ್ನು ಮೈಗೂಡಿಸಿಕೊಂಡಿದ್ದರೂ ಸಾಕಿತ್ತು.

ಆದರೆ ಮಧು ಬಂಗಾರಪ್ಪಗೆ ಅಸಲಿಗೆ ಕನ್ನಡವನ್ನೇ ಓದಲು ಸರಿಯಾಗಿ ಬರುವುದಿಲ್ಲವಲ್ಲ? ನಮ್ಮ ರಾಜ್ಯ ಜನ ಅದ್ಯಾವ ಕರ್ಮ ಮಾಡಿದ್ದಾರೋ ನಾ ಕಾಣೆ. ಕರ್ನಾಟಕ ಸರಕಾರದ, ಕನ್ನಡ ಸರಕಾರದ ಪ್ರಾಥಮಿಕ ಶಿಕ್ಷಣ ಸಚಿವರಿಗೆ ಕನ್ನಡವೇ ಬರುವುದಿಲ್ಲ. ‘ಪ್ರಾಥಮಿಕ ಶಿಕ್ಷಣ ಸಚಿವರಿಗೇ ಸರಿಯಾದ ಪ್ರಾಥಮಿಕ ಶಿಕ್ಷಣ ಕೊಟ್ಟು ಪುಣ್ಯ ಕಟ್ಟಿಕೊಳ್ರೋ’ ಎಂದು ಬೊಬ್ಬೆ ಹೊಡೆದು ಬೇಡುವ ದಯನೀಯ ಪಾಡು ರಾಜ್ಯದ ಜನರದ್ದಾಗಿದೆ.

ಮೊನ್ನೆ ರಾಜ್ಯೋತ್ಸವದ ದಿನಂದಂದು ಮಧು ಬಂಗಾರಪ್ಪ ಅವರ ಭಾಷಣವನ್ನು ಕೇಳಿದವರೆಲ್ಲ ಹಣೆ ಹಣೆ ಚಚ್ಚಿಕೊಂಡಿರಬಹುದು. ‘ಕನ್ನಡವ ಕಾಪಾಡು ಕನ್ನಡಿಗರಿಂದ’ ಎಂಬ ಕುಹಕವಾಣಿಯನ್ನು ಮಧು ಅಪ್ಪಟ ನಿಜಗೊಳಿಸಿಬಿಟ್ಟರು. ಹಾಗೆ ನೋಡಿದರೆ, ಅವರ ‘ಕಚಡಾ ಕನ್ನಡ’ ಕನ್ನಡಿಗರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ವೇದಿಕೆಯೇರಿ ಅವರು ಕನ್ನಡದಲ್ಲಿ ಮಾತಾಡಲಾರಂಭಿಸಿದರೆ, ಅದರಲ್ಲೂ ಸಿದ್ಧ ಭಾಷಣವನ್ನು ಓದಲಾರಂಭಿಸಿದರೆ ಕನ್ನಡಕ್ಕೆ ಅಪಾಯದ ಸಿಡಿಲು ಬಡಿಯಿತು ಎಂದೇ ಅರ್ಥ. ಅವರ ‘ಖನ್ನಡ’ ಅಥವಾ ‘ಕನಡ’ ಕೇಳಿ ತಾಯಿ ಭುವನೇಶ್ವರಿ ಕಿಟಾರನೆ ಕಿರುಚಿಕೊಳ್ಳಬಹುದು. ‘ಎಂಥಾ ಮಗನನ್ನು ಹೆತ್ತೆ ನಾನು’ ಎಂದು ಅವಳೂ ವ್ಯಾಕುಲಳಾಗಬಹುದು. ಅವರ ಕನ್ನಡ ಹೇಗೇ ಇರಲಿ, ಅದಕ್ಕೆ ಕನ್ನಡಿಗರಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಹೇಳಿಕೇಳಿ ಅವರು ನಮ್ಮ ಪ್ರಾಥಮಿಕ ಶಿಕ್ಷಣ ಮತ್ತು ಗ್ರಂಥಾಲಯ ಸಚಿವರು! ಅವರ ಕನ್ನಡವೇ ಇಷ್ಟು ಕೆಟ್ಟದ್ದಾಗಿದ್ದರೆ, ಅವರು ನಾಡಿಗೆ ಎಂಥಾ ಸಂದೇಶವನ್ನು ನೀಡಬಹುದು?

madhu bangarappa

ಅಂದು ರಾಜ್ಯೋತ್ಸವ ಸಮಾರಂಭದಲ್ಲಿ ಮಧು ಬಂಗಾರಪ್ಪನವರು ಕನ್ನಡದಲ್ಲಿ ಭಾಷಣವನ್ನು ಸಿದ್ಧಪಡಿಸಿಕೊಂಡು ಬಂದಿದ್ದರು.. ಅಲ್ಲಲ್ಲ.. ಯಾರೋ ಸಿದ್ಧಪಡಿಸಿಕೊಟ್ಟ ಭಾಷಣವನ್ನು ಓದಿ ಒಪ್ಪಿಸಲು ಬಂದಿದ್ದರು. ಅದೇನು ಹಳೆಗನ್ನಡ, ನಡುಗನ್ನಡ, ಸಂಸ್ಕೃತ, ಪಾಲಿ, ದೇವನಾಗರಿ, ಪ್ರಾಕೃತ ಭಾಷೆಗಳಲ್ಲಾಗಲಿ, ಆ ಭಾಷೆಗಳ ಲಿಪಿಯಲ್ಲಾಗಲಿ ಇರಲಿಲ್ಲ. ಸರಳ ಕನ್ನಡದಲ್ಲಿತ್ತು. ಅದನ್ನು (ಕನ್ನಡ ಮಾಧ್ಯಮದ) ನಾಲ್ಕನೇ ಕ್ಲಾಸಿನ ಮಗುವೂ ನಿರರ್ಗಳವಾಗಿ, ತಪ್ಪಿಲ್ಲದೇ, ಸುಲಭವಾಗಿ ಓದಬಲ್ಲುದು. ಬೆಂಗಳೂರಿಗೆ ಸಮೀಪದ ಬಿಡದಿಯಲ್ಲಿ ನೆಲೆಸಿ ಅಲ್ಲಿನ ಟೊಯೋಟಾ ಫ್ಯಾಕ್ಟರಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿರುವ ಕೆಲವು ಜಪಾನಿಯರಿಗೆ ಕೊಟ್ಟಿದ್ದರೂ ಅವರು ನಿರರ್ಗಳವಾಗಿ, ಚೆಂದವಾಗಿ, ಸುಲಭವಾಗಿ ಕನ್ನಡವನ್ನು ಓದಬಲ್ಲರು. ಅಂದು ಮಧು ಬಂಗಾರಪ್ಪನವರು ಓದಲು ಆರಂಭಿಸಿದರು. ಪ್ರತಿ ವಾಕ್ಯದಲ್ಲೂ ತಪ್ಪು, ತಪ್ಪು.. ಅವರ ಸಂಪೂರ್ಣ ಭಾಷಣ ಕೆಟ್ಟ ಕೆಟ್ಟ ಉಚ್ಚಾರ, ಅಪಭ್ರಂಶ, ಏನೋ ಹೇಳಲು ಹೋಗಿ ಇನ್ನೇನೋ ಹೇಳುವುದು, ತಪ್ಪು ಪದ ಪ್ರಯೋಗ, ಅಸಂಬದ್ಧ ಹೃಸ್ವ-ದೀರ್ಘಗಳಿಂದ ಕೂಡಿತ್ತು.

ಬದಲಾವಣೆಗೆ ಬದಾವಣೆ, ಶಾಲಾ ಶಿಕ್ಷಣಕ್ಕೆ ಸಾಲ ಶಿಕ್ಷಣ, ಹೆಮ್ಮೆಯ ಸಂಗತಿ ಆಗಿದೆ ಎನ್ನುವ ಬದಲು ಹೆಮ್ಮೆಯ ಸಂಗಾತಿ ಆಗಿದೆ, ಕರ್ನಾಟಕ ಎಂದು ಓದಲು ಕರಾಟಕ, ಸಹಬಾಳ್ವೆ ಎನ್ನಲು ಸಹಬಾಳ್ಮೆ, ವಿದ್ಯಾರ್ಥಿಗಳು ಎನ್ನುವ ಬದಲು ವಿದ್ಯಾರ್ಥಗಳು, ಆಶಯಗಳನ್ನು ಎಂದು ಹೇಳುವ ಬದಲು ಆಶಗಳನ್ನು, ಜಾರಿಗೊಳಿಸಲಾಗಿದೆ ಎನ್ನುವ ಬದಲು ಜಾರಿಗೊಳ್ಳಲಾಗಿದೆ, ಗುಣಾತ್ಮಕ ಎನ್ನುವ ಬದಲು ಗುಣನಾತ್ಮಕ, ದುರಸ್ತಿ ಬದಲು ದುರಸ್ತಿತಿ, ಗುಣಮಟ್ಟದ ಎಂದು ಹೇಳಲು ಹೋಗಿ ಗುಣಮಟ್ಟಣ… ಹೀಗೆ ಅಡಸಲುಬಡಸಲು, ಅಸಡ್ಡಾಳ ಕನ್ನಡವನ್ನು ಉಚ್ಚರಿಸಿ ಮಾತು ಮುಗಿಸಿದರು. ಅದರ ಬದಲು, ‘ಇದೋ ನನ್ನ ಭಾಷಣದ ಪ್ರತಿ…ದಯವಿಟ್ಟು ನೀವೇ ಓದಿಕೊಳ್ಳಿ’ ಎಂದು ಹೇಳಿದ್ದರೆ ಅವರ ಮರ್ಯಾದೆಯಾದರೂ ಉಳಿಯುತ್ತಿತ್ತು. ಆ ಮೂಲಕ ಕನ್ನಡಮ್ಮನ ಸೇವೆ ಮಾಡಿದ ಶ್ರೇಯಸ್ಸು, ಶ್ರೇಷ್ಠತೆಯೂ ಅವರದ್ದಾಗುತ್ತಿತ್ತು. ಒಂದು ವಾಕ್ಯವನ್ನೂ ಸ್ಪಷ್ಟವಾಗಿ, ಸಮರ್ಪಕವಾಗಿ ಉಚ್ಚರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಹೋಗಲಿ, ನಮ್ಮ ರಾಜ್ಯದ ಹೆಸರನ್ನಾದರೂ ಸರಿಯಾಗಿ ಹೇಳಿದರಾ? ‘ಕರ್ನಾಟಕ’ ಎಂದು ಹೇಳುವ ಬದಲು ‘ಕರಾಟಕ’ ಎಂದು ಹೇಳಿಬಿಟ್ಟರು!

ಇಂಥವರೇನಾದರೂ ಪಕ್ಕದ ಕೇರಳ ಅಥವಾ ತಮಿಳುನಾಡಿನಲ್ಲಿ ಮಂತ್ರಿಯಾಗಿ ತಪ್ಪು ತಪ್ಪು ಮಲಯಾಳಂ ಅಥವಾ ತಮಿಳಿನಲ್ಲಿ ಮಾತಾಡಿದ್ದರೆ, ರಾಜೀನಾಮೆ ಕೊಡುವ ತನಕ ಬಿಡುತ್ತಿರಲಿಲ್ಲ. ಅಸಲಿಗೆ, ರಾಜ್ಯದ ಅಧಿಕೃತ ಭಾಷೆಯಲ್ಲಿ ಸರಿಯಾಗಿ ಉಚ್ಚರಿಸಲು ಬಾರದವರು ಆ ರಾಜ್ಯದಲ್ಲಿ ಮಂತ್ರಿಯೇ ಆಗುತ್ತಿರಲಿಲ್ಲ. ಒಂದು ವೇಳೆ ಆದರೂ, ಅವರಿಗೆ ಪ್ರಾಥಮಿಕ ಶಿಕ್ಷಣ ಮತ್ತು ಗ್ರಂಥಾಲಯ ಖಾತೆಯನ್ನಂತೂ ಕೊಡುತ್ತಲೇ ಇರಲಿಲ್ಲ. ಆದರೆ ಮಧು ಬಂಗಾರಪ್ಪನವರನ್ನು ನಾವು ಸಹಿಸಿಕೊಂಡಿದ್ದೇವೆ. ಇದು ನಮ್ಮ ದೌರ್ಬಲ್ಯವೋ, ದೌರ್ಭಾಗ್ಯವೋ, ಅಸಹಾಯಕತೆಯೋ, ಪಾಪಕರ್ಮವೋ… ಗೊತ್ತಿಲ್ಲ. ಕನ್ನಡದಲ್ಲಿ ಬರೆದ ನಾಲ್ಕು ಸಾಲುಗಳನ್ನು ನೆಟ್ಟಗೆ ಓದಲು ಬಾರದವರಿಗೆ ಪ್ರಾಥಮಿಕ ಶಿಕ್ಷಣದಂಥ ಅತ್ಯಂತ ಮಹತ್ವದ ಮಂತ್ರಿ ಖಾತೆಯನ್ನು ಕೊಟ್ಟರೆ ಅದೆಂಥ ಅನಾಚಾರವಾಗಬಹುದು ಎಂಬುದಕ್ಕೆ ಮಧು ಬಂಗಾರಪ್ಪ ಒಂದು ನಿದರ್ಶನ. ಬ್ರಿಟನ್ ಮೇಯರ್ ಅಥವಾ ಮಂತ್ರಿಯಾದವರು, ಪಾಕಿಸ್ತಾನದ ಪ್ರಧಾನಿಯಾದವರು ಸ್ಪಷ್ಟ ಕನ್ನಡದಲ್ಲಿ ಮಾತಾಡಬೇಕೆಂದು ಯಾರೂ ಬಯಸುವುದಿಲ್ಲ. ಆದರೆ ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಗ್ರಂಥಾಲಯ ಸಚಿವರು ಶುದ್ಧ ಮತ್ತು ಪರಿಶುದ್ಧ ಕನ್ನಡದಲ್ಲಿ ಮಾತಾಡಬೇಕು ಎಂದು ಕನ್ನಡಿಗರೆಲ್ಲರೂ ಬಯಸುತ್ತಾರೆ. ಕಾರಣ ಅದು ಪ್ರಾಥಮಿಕ ಅರ್ಹತೆ.

ನಾವು ಶಾಲೆಯಲ್ಲಿ ಓದುವಾಗ, ಕನ್ನಡದಲ್ಲಿ ತಪ್ಪು ಬರೆದರೆ, ತಪ್ಪು ಓದಿದರೆ, ತಪ್ಪು ಉಚ್ಚರಿಸಿದರೆ, ನಮಗೆ ಮೇಷ್ಟ್ರು ಕೆನ್ನೆಗೆ ‘ಫಟೀರ್, ಛಟೀರ್’ ಎಂದು ಹೊಡೆಯುತ್ತಿದ್ದರು. ಒಂದು ಪದವನ್ನು ನೂರು ಸಲ ಹೇಳು ಎಂದು ಹೇಳಿಸಿ, ಸರಿಯಾಗಿ ಹೇಳುವ ತನಕ ಬಿಡುತ್ತಿರಲಿಲ್ಲ. ಅಷ್ಟಾಗಿಯೂ ತಪ್ಪು ಮಾಡಿದರೆ ಬೆಂಚಿನ ಮೇಲೆ ಕ್ಲಾಸಿನಲ್ಲಿ ಎಲ್ಲರಿಗೂ ಕಾಣುವಂತೆ ಬಗ್ಗಿ ನಿಲ್ಲಿಸುತ್ತಿದ್ದರು. ಮರುದಿನವೂ ತಪ್ಪು ಉಚ್ಚರಿಸಿದ ಪದಗಳನ್ನು ಮತ್ತೊಮ್ಮೆ ಹೇಳುವಂತೆ ಪ್ರಾಣ ಹಿಂಡುತ್ತಿದ್ದರು. ಹಾಗೆ ಮಾಡಿಸಿದರೆ ಮಾತ್ರ ಭಾಷೆ ಹದವಾಗಲು ಸಾಧ್ಯ ಎಂದು ತಿದ್ದುತ್ತಿದ್ದರು.

ಆದರೆ ನಮ್ಮ ಪ್ರಾಥಮಿಕ ಶಿಕ್ಷಣ ಸಚಿವರ ಕನ್ನಡವನ್ನು ತಿದ್ದುವವರು ಯಾರು? ಇವರನ್ನೇಕೆ ಯಾರೂ ಬೆಂಚಿನ ಮೇಲೆ ಹತ್ತಿಸುತ್ತಿಲ್ಲ? ಹಾಗಂತ ಶಾಲೆಯಲ್ಲಿ ಓದುವ ಮಗು, ಮಧು ಬಂಗಾರಪ್ಪನವರನ್ನು ಕೇಳಿದರೆ ಅವರು ಏನು ಹೇಳಬಹುದು? ಈಗ ಹೇಳಿ, ಅವರಿಗೆ ಆ ಖಾತೆ ನಿರ್ವಹಿಸುವ ನೈತಿಕತೆ ಇದೆಯಾ? ಇವರನ್ನು ಒಬ್ಬ ಮಂತ್ರಿ ಎಂದು ನಾವು ಒಪ್ಪಿಕೊಳ್ಳಬೇಕಾ? ಅಷ್ಟಕ್ಕೂ ಅವರನ್ನು ಮಂತ್ರಿಯನ್ನಾಗಿ ಇಟ್ಟುಕೊಳ್ಳಬೇಕು ಅಂದ್ರೆ ಇಟ್ಟುಕೊಳ್ಳಲಿ, ಯಾರು ಬೇಡ ಅಂತಾರೆ. ಆದರೆ ಈಗಿನ ಖಾತೆಯಿಂದ ಅವರನ್ನು ಬರಖಾಸ್ತುಗೊಳಿಸಲಿ. ಬೇಕಾದರೆ ಅವರಿಗೆ, ಪಶು ಸಂಗೋಪನೆ, ರೇಷ್ಮೆ, ಮೀನುಗಾರಿಕೆ, ಬಂದರು, ಜವಳಿ, ಸಕ್ಕರೆ, ಹಾಗಲಕಾಯಿ, ಹೀರೆಕಾಯಿ, ಹಿತ್ತಲ ತೋಟ ಖಾತೆಗಳನ್ನು ನೀಡಲಿ. ಪ್ರಾಥಮಿಕ ಶಿಕ್ಷಣ ಮಂತ್ರಿಯಾಗಿ ಮಧು ಬಂಗಾರಪ್ಪ ಅವರನ್ನು ಮುಂದುವರಿಸುವುದು disgrace.

ನಿಮಗೆ ನೆನಪಿರಬಹುದು, ಮಂತ್ರಿಯಾದ ತರುವಾಯದಲ್ಲಿ, ಕನ್ನಡ ಪುಸ್ತಕ ಪ್ರಕಾಶಕರು ಗ್ರಂಥಾಲಯ ಸಚಿವರೂ ಆಗಿರುವ ಮಧು ಬಂಗಾರಪ್ಪನವರನ್ನು ಸೌಜನ್ಯಕ್ಕಾಗಿ ಭೇಟಿಯಾಗಿದ್ದರು. ಮಂತ್ರಿಗಳನ್ನು ನೋಡಲು ಖಾಲಿ ಕೈಯಲ್ಲಿ ಹೋಗಲಾದೀತೇ? ತಮ್ಮ ಪ್ರಕಾಶನ ಪ್ರಕಟಿಸಿದ ಪ್ರಮುಖ ಪುಸ್ತಕಗಳನ್ನು ಅಂದವಾಗಿ ಪ್ಯಾಕ್ ಮಾಡಿಕೊಂಡು ಮಾನ್ಯ ಸಚಿವರಿಗೆ ಕೊಡಲು ಮುಂದಾದಾಗ, ‘ನಾನು ಪುಸ್ತಕಗಳನ್ನು ಓದುವುದಿಲ್ಲ. ಮನೆಯಲ್ಲಿ ಈ ಪುಸ್ತಕಗಳನ್ನೆಲ್ಲ ಇಟ್ಟುಕೊಳ್ಳಲು ಜಾಗವಿಲ್ಲ. ಹೀಗಿರುವಾಗ ನೀವೇ ಇವುಗಳನ್ನು ವಾಪಸ್ ತೆಗೆದುಕೊಂಡು ಹೋಗಿ, ನನಗೆ ಬೇಡ’ ಎಂದುಬಿಟ್ಟಿದ್ದರು. ಇಂಥ ಮಂತ್ರಿಯ ಬಳಿ ಏನು ಮಾತಾಡೋದು ಎಂದು ಪ್ರಕಾಶಕರೆಲ್ಲ ಪೆಚ್ಚು ಮೊರೆ ಹಾಕಿಕೊಂಡು ಬಂದಿದ್ದರು. ಈ ಮಹಾಶಯ ನಮ್ಮ ಗ್ರಂಥಾಲಯ ಸಚಿವ ಎಂಬ ಕೇಡು ಬೇರೆ. ಇದು ನಿಜಕ್ಕೂ ನಾಚಿಕೆಗೇಡು! ಪ್ರಾಥಮಿಕ ಶಿಕ್ಷಣ ಸಚಿವರಿಗೇ ಪ್ರಾಥಮಿಕ ಶಿಕ್ಷಣ ನೀಡಬೇಕಾದ ಪರಿಸ್ಥಿತಿ. ಗ್ರಂಥಾಲಯ ಸಚಿವರ ಕೈಗೇ ಪುಸ್ತಕವನ್ನಿಡಬೇಕಾಗಿದೆ. ಈಗಲೇ ತಡವಾಯ್ತು, ಇನ್ನಾದರೂ ‘ಸರಸ್ವತಿಯ ಶಾಪಪುತ್ರ’ರಿಂದ ಶಿಕ್ಷಣದಂಥ ಮಹತ್ವದ ಖಾತೆಗಳನ್ನು ಕಿತ್ತುಕೊಳ್ಳಲೇಬೇಕಾಗಿದೆ.

ಕಾಂಗ್ರೆಸ್ಸಿನ ಮತ್ತೊಬ್ಬ ನಾಯಕರಿದ್ದಾರೆ. ಅವರು ತಮ್ಮ ಭಾಷಾ ಪ್ರೇಮದಿಂದ ಭಾರತದ ರಾಜಕಾರಣದಲ್ಲಿಯೇ ಮೇಲ್ಪಂಕಿ ಹಾಕಿಕೊಟ್ಟಿದ್ದಾರೆ. ಅವರ ಭಾಷಾಭಿಮಾನದ ಬಗ್ಗೆ ನನಗೆ ವಿಶೇಷ ಪ್ರೀತಿ. ಲೋಕಸಭಾ ಸದಸ್ಯ ಶಶಿ ತರೂರ್ ಅದ್ಭುತ ಇಂಗ್ಲಿಷ್ ಮಾತುಗಾರರು ಎಂಬುದಕ್ಕಿಂತ, ಅವರಿಗೆ ಆ ಭಾಷೆಯ ಮೇಲಿನ ಮೋಹವನ್ನು ಮೆಚ್ಚಲೇಬೇಕು. ದುಬೈನಿಂದ ಪ್ರಕಟವಾಗುವ ‘ಖಲೀಜ್ ಟೈಮ್ಸ್’ ಪತ್ರಿಕೆಯಲ್ಲಿ ಇಂಗ್ಲಿಷ್ ಭಾಷೆಯ ಬಗ್ಗೆ ವಾರ ವಾರವೂ ತರೂರ್ ಬರೆಯುತ್ತಿದ್ದ ಅಂಕಣವನ್ನು ವರ್ಷಗಟ್ಟಲೆ ತಪ್ಪದೇ ಓದಿದವನು ನಾನು. ಆ ಅಂಕಣವನ್ನು ಓದಲೆಂದೇ ಆ ಪತ್ರಿಕೆಯನ್ನು ತರಿಸಿಕೊಳ್ಳುತ್ತಿದ್ದೆ.

ಇಂದಿನ ದಿನಗಳಲ್ಲಿ ರಾಜಕಾರಣಿಗಳು ಪುಸ್ತಕ ಬರೆಯುವುದು, ಓದುವುದು ಮತ್ತು ಪುಸ್ತಕಗಳ ಕುರಿತು ಮಾತಾಡುವುದು ಅಪರೂಪ. ರಾಜಕಾರಣಿಗಳು ಸಾಹಿತ್ಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅದು ಮತದಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬ ಭಾವನೆ ಬೆಳೆಸಿಕೊಂಡಿರುವವರ ಮಧ್ಯೆ ತರೂರ್ ಭಿನ್ನರಾಗಿ ಎದ್ದು ನಿಲ್ಲುತ್ತಾರೆ. ಹೀಗಾಗಿ ಲೋಕಸಭೆಯ 543 ಸದಸ್ಯರು ಮತ್ತು ರಾಜ್ಯಸಭೆಯ 245 ಸದಸ್ಯರ ಪೈಕಿ ಅಂಥ ಅಭಿರುಚಿಯಿರುವವರ ಸಂಖ್ಯೆ ಎರಡಂಕಿ ದಾಟಲಿಕ್ಕಿಲ್ಲ ಅಂದ್ರೆ ಅಚ್ಚರಿಯಾದೀತು. ಅಷ್ಟರಮಟ್ಟಿಗೆ ‘ಅಕ್ಷರಪ್ರೇಮಿ’ಗಳು ಸಂಸತ್ತಿನಲ್ಲಿ ವಿನಾಶದ ಅಂಚಿನಲ್ಲಿರುವ ‘ಜೀವಿ’ಗಳಾಗಿದ್ದಾರೆ. ಅವರ ಮಧ್ಯೆ ತರೂರ್ ‘ನಕ್ಷತ್ರ’ದಂತೆ ಹೊಳೆಯುತ್ತಾರೆ. ತಮ್ಮ ದೈನಂದಿನ ರಾಜಕೀಯ ಚಟುವಟಿಕೆಗಳ ಮಧ್ಯದಲ್ಲೂ ಅವರು ಲಿಟ್ ಫೆಸ್ಟ್ ಗಳಲ್ಲಿ, ಕಮ್ಮಟಗಳಲ್ಲಿ, ಗೋಷ್ಠಿಗಳಲ್ಲಿ ಭಾಗವಹಿಸುತ್ತಾರೆ, ಪುಸ್ತಕಗಳ ಬಗ್ಗೆ ಬರೆಯುತ್ತಾರೆ, ವಿಮರ್ಶಿಸುತ್ತಾರೆ, ಹತ್ತಾರು ಪುಸ್ತಕಗಳಿಗೆ ಮುನ್ನುಡಿ-ಬೆನ್ನುಡಿ ಬರೆಯುತ್ತಾರೆ, ನಿಯಮಿತವಾಗಿ ಪತ್ರಿಕೆಗಳಿಗೆ ಅಂಕಣ ಬರೆಯುತ್ತಾರೆ, ವರ್ಷಕ್ಕೆರಡು ಪುಸ್ತಕಗಳನ್ನಾದರೂ ಹೆರುತ್ತಾರೆ, ನೂರಾರು ಕೃತಿಗಳನ್ನು ಓದುತ್ತಾರೆ.

ಇತ್ತೀಚೆಗೆ ಪ್ರಕಟವಾದ ತರೂರ್ ಅವರ A Wonderland of Words : Around the Word in 101 Essays ಕೃತಿ ತರೂರ್ ಭಾಷಾ ಪ್ರೇಮಕ್ಕೊಂದು ಕೈಗನ್ನಡಿ. ಇಂಗ್ಲಿಷ್ ಭಾಷೆಯ ವೈಶಿಷ್ಟ್ಯ, ವಿರೋಧಾಭಾಸ, ಭಾಷಾ ಪ್ರಯೋಗದಲ್ಲಾಗುವ ಪ್ರಮಾದ, ಬ್ರಿಟಿಷ್ ವರ್ಸಸ್ ಅಮೆರಿಕನ್ ಇಂಗ್ಲಿಷ್, ಬೇರೆ ಭಾಷೆಗಳಿಂದ ಇಂಗ್ಲಿಷಿಗೆ ಬಳುವಳಿಯಾಗಿ ಬಂದ ಪದಗಳು, ಇಂಗ್ಲಿಷಿನಲ್ಲಿ ಇರಲೇಬೇಕಾದ ಆದರೆ ಇರದ ಪದಗಳು, ಫ್ರೆಂಚ್, ಐರಿಷ್, ಜಪಾನೀಸ್ ಮೂಲದ ಇಂಗ್ಲಿಷ್ ಪದಗಳು, ಬೇರೆ ಭಾಷೆಗಳಿಂದ ಸಾಲ ಪಡೆದ ಪದಗಳು, ಉಕ್ರೇನಿನಿಂದ ಬಂದ ಪದಗಳು, ಹಣಕ್ಕೆ ಸಂಬಂಧಿಸಿದ ಪದಗಳು, ಯುದ್ಧ ಹುಟ್ಟು ಹಾಕಿದ ಪದಗಳು, ಚುನಾವಣಾ ಸಂದರ್ಭದಲ್ಲಿನ ಭಾಷೆ, ಸುದ್ದಿಯಲ್ಲಿರುವ ಪದಗಳು, ಮುದ್ರಣ ದೋಷದಿಂದ ಆಗುವ ಅವಾಂತರಗಳು, ಆಗಾಗ ಅರ್ಥ ಬದಲಿಸಿಕೊಳ್ಳುವ ಪದಗಳು, ಹೊಸ ವರ್ಷಕ್ಕೆ ಹೊಸ ಪದಗಳು, ಲಿಮರಿಕ್ ಗಳು, ಸ್ಪೂನರಿಸಂ, ಪನ್, ಸಂಕ್ಷಿಪ್ತಾಕ್ಷರ, ವಸಹಾತುಶಾಹಿ ಪದಗಳು, ವೈಮಾನಿಕ ಪದಗಳು, ದ್ವೇಷಿಸಲ್ಪಟ್ಟ ಪದಗಳು, ಭಾಷೆ ಮತ್ತು ಲೈಂಗಿಕತೆ.. ಹೀಗೆ ನೂರಾರು ವಿಷಯಗಳ ಬಗ್ಗೆ ತರೂರ್ ಈ ಕೃತಿಯಲ್ಲಿ ಸ್ವಾರಸ್ಯವಾಗಿ ಬರೆದಿದ್ದಾರೆ. ಭಾಷೆಯ ಬಗ್ಗೆ ಉತ್ಕಟ ಮಮತೆಯಿದ್ದವರು ಮಾತ್ರ ಇಂಥ ಪುಸ್ತಕ ಬರೆಯಲು ಸಾಧ್ಯ. ತರೂರ್ ಒಂದು ಪದ ಬಳಸಿದರೆ ಅದು ಗೂಗಲ್ ನಲ್ಲಿ ಟ್ರೆಂಡ್, ವೈರಲ್ ಆಗುವಷ್ಟರ ಮಟ್ಟಿಗೆ ಅವರು ಭಾಷಾ ಪ್ರೇಮವನ್ನು ಬಿತ್ತುತ್ತಿದ್ದಾರೆ.

ಭಾಷೆಯ ದೃಷ್ಟಿಯಿಂದ, ಒಬ್ಬರು ಕೆಟ್ಟ ಕಾರಣಕ್ಕೆ ದೂರವಾದರೆ, ಮತ್ತೊಬ್ಬರು ಒಳ್ಳೆಯ ಕಾರಣಕ್ಕೆ ಹತ್ತಿರವಾಗುತ್ತಾರೆ.