Thursday, 24th October 2024

‌Vishweshwar Bhat Column: ರಾಜಕಾರಣಕ್ಕಿಂತ ಹೊಲಸಾದ ರಾಜ್ಯೋತ್ಸವ, ನೊಬೆಲ್‌ ಎಂಬ ಪ್ರಶಸ್ತಿ ರಾಜಕಾರಣ!

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

ಅಕ್ಟೋಬರ್ ತಿಂಗಳು ಪ್ರಶಸ್ತಿಗಳ ಕಾಲ. ನಾವು ಕನ್ನಡಿಗರು ರಾಜ್ಯೋತ್ಸವ ಪ್ರಶಸ್ತಿಗೆ ಎದುರು ನೋಡಿದರೆ, ಇಡೀ ಜಗತ್ತು ನೊಬೆಲ್ ಪ್ರಶಸ್ತಿ ಘೋಷಣೆಯಾಗುವುದನ್ನು ಆಸಕ್ತಿಯಿಂದ ನಿರೀಕ್ಷಿಸುತ್ತದೆ. ರಾಜ್ಯೋತ್ಸವ ಪ್ರಶಸ್ತಿ ಗಿಟ್ಟಿಸಲು ಕೆಲವರು ಇನ್ನಿಲ್ಲದ ಹರಸಾಹಸ ಮಾಡುತ್ತಾರೆ. ನಾಚಿಕೆಬಿಟ್ಟು ಕಂಡಕಂಡವರ ಮುಂದೆ ಪ್ರಶಸ್ತಿಗಾಗಿ ಅಂಗಲಾಚುತ್ತಾರೆ. ಜೀವನದಲ್ಲಿ ಸಾಧನೆ ಮಾಡುವುದು ಒಂದು ತೂಕವಾದರೆ, ಪ್ರಶಸ್ತಿ ಗಿಟ್ಟಿಸುವುದು
ಆ ಸಾಧನೆಯನ್ನೂ ಮೀರಿಸುವ ಇನ್ನೊಂದು ತೂಕ.

ಹೀಗಾಗಿ ಪ್ರಶಸ್ತಿ ಪಡೆದವರನ್ನು ‘ಪುರಸ್ಕೃತ’ರು ಎನ್ನುವ ಬದಲು ‘ವಿಜೇತ’ರು ಎಂದು ಕರೆಯುವುದೇ ಹೆಚ್ಚು ಸೂಕ್ತ. ಇಲ್ಲಿ ತನಕ ಯಾವ ಸರಕಾರಕ್ಕೂ, ರಾಜ್ಯೋತ್ಸವ ಪ್ರಶಸ್ತಿಯನ್ನು ವಿವಾದಗಳಿಲ್ಲದೇ ಕೊಡಮಾಡುವುದು ಸಾಧ್ಯವಾಗಿಲ್ಲ. ಈ ಪ್ರಶಸ್ತಿಗೆ ಪಾತ್ರರಾದವರನ್ನು ಅನುಮಾನದಿಂದ ನೋಡುವ ಸ್ಥಿತಿ ನಿರ್ಮಾಣವಾಗಿರುವುದು ವಾಸ್ತವ.

ನಾನು ‘ವಿಜಯ ಕರ್ನಾಟಕ’ದಲ್ಲಿದ್ದಾಗ, ಒಂದು ವರ್ಷ ಕೆಲವು ವಿವಾದಾತ್ಮಕ ವ್ಯಕ್ತಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ
ಘೋಷಣೆಯಾದಾಗ, ‘130 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಅರ್ಹರಿಗೆ ಮುಂದಿನ ಬಾರಿ’ ಎಂದು ಕೀಟಲೆ ಹೆಡ್ ಲೈನ್ ಹಾಕಿದ್ದೆ. ಅದರಲ್ಲಿ ಸತ್ಯಾಂಶವೂ ಇತ್ತೆನ್ನಿ. ಪ್ರಶಸ್ತಿ ವಿತರಿಸುವ ಒಂದು ಗಂಟೆ ಮುನ್ನ, ಕೆಲವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿ, ಅದರ ಪಾವಿತ್ರ್ಯವನ್ನೇ ಹಾಳುಗೆಡವಲಾಗಿತ್ತು. ಶಾಮಿಯಾನ ಕಟ್ಟುವವರು, ಪಿಕ್‌ಪಾಕೆಟ್ ಮಾಡಿ ಜೈಲಿಗೆ ಹೋದವರು, ಮರ್ಡರ್ ಕೇಸಿನಲ್ಲಿ ಜೈಲಿನಲ್ಲಿದ್ದು ಬಂದವರು, ಒಂದೂ ಪುಸ್ತಕ ಬರೆಯದಿದ್ದರೂ ‘ಸಾಹಿತ್ಯ’ ಪ್ರಕಾರದಲ್ಲಿ ಸ್ಥಾನ ಪಡೆದುಕೊಂಡವರು ಆ ವರ್ಷದ ಪ್ರಶಸ್ತಿ ಪಟ್ಟಿಯಲ್ಲಿ ಮಿಂಚಿ ದ್ದರು. ಕೊನೆ ಗಳಿಗೆಯಲ್ಲಿ ಪ್ರಶಸ್ತಿ ಪ್ರಕಟಿಸಿದ್ದರಿಂದ, ಎಲ್ಲರಿಗೂ ಚಿನ್ನದ ಪದಕ, ಪ್ರಶಸ್ತಿ ಫಲಕ ನೀಡಲು ಸಾಧ್ಯ ವಾಗಿರಲಿಲ್ಲ.

ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ಜನಜಂಗುಳಿಯಾಗಿ, ಪುರಸ್ಕೃತರೊಬ್ಬರ ಚಿನ್ನದ ಪದಕ ಕಾಣೆಯಾಗಿಬಿಟ್ಟಿತ್ತು.
ಪಿಕ್‌ಪಾಕೆಟ್ ಮಾಡಿದವರಿಗೂ ಆ ವರ್ಷ ಪ್ರಶಸ್ತಿ ಕೊಟ್ಟಿದ್ದರಿಂದ ಅವರೇ ಈ ಕೃತ್ಯ ಎಸಗಿರಬಹುದೆಂದೂ,
ಅವರು ತಮಗೆ ನೀಡಿದ ಕಾರಣಕ್ಕೆ ವೇದಿಕೆಯ ಮೇಲೇ ಚಾಕಚಕ್ಯತೆ ಮೆರೆದು ತಮ್ಮ ಯೋಗ್ಯತೆಯನ್ನು
ಸಾಬೀತುಪಡಿಸಿದರೆಂದೂ ಪತ್ರಿಕೆಯಲ್ಲಿ ವರದಿಯಾಗಿತ್ತು. ಇನ್ನೊಂದು ವರ್ಷ, ಪ್ರಶಸ್ತಿ ನಿರೀಕ್ಷೆಯಲ್ಲಿದ್ದ,
ಮುಖ್ಯಮಂತ್ರಿಯವರಿಗೆ ಆಪ್ತರಾದವರೊಬ್ಬರು, ತಮ್ಮ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದನ್ನು ನೋಡಿ
ನಿರಾಶರಾಗಿ, ‘ಈ ಸಲ ನನಗೆ ಪ್ರಶಸ್ತಿ ಬರುವುದೆಂದು ಎಲ್ಲರಿಗೂ ಹೇಳಿದ್ದೆ. ನೀವು ನನಗೆ ಮೋಸ ಮಾಡಿದಿರಿ.

ನಾನು ನಿಮ್ಮ ಮುಂದೆಯೇ ವಿಷ ಸೇವಿಸುತ್ತೇನೆ’ ಎಂದು ಹೇಳಿದಾಗ, ಮುಖ್ಯಮಂತ್ರಿಯವರು ಆ ಕ್ಷಣವೇ ಅವರಿಗೂ ಪ್ರಶಸ್ತಿ ಘೋಷಿಸಿ ಸಮಾಧಾನಪಡಿಸಿದ್ದು, ‘ರಾಜ್ಯೋತ್ಸವ ಪ್ರಶಸ್ತಿ ಮಹಾತ್ಮೆ’ಯ ಒಂದು ಅಕರಾಳ-ವಿಕರಾಳ ಸಂಗತಿಯೇ. ನನಗೆ ಪರಿಚಿತರಿರುವ ಗಣ್ಯರೊಬ್ಬರು, ಕಳೆದ ಇಪ್ಪತ್ನಾಲ್ಕು ವರ್ಷಗಳಿಂದ ರಾಜ್ಯೋತ್ಸವ ಪ್ರಶಸ್ತಿಗೆ ನಿರಂತರವಾಗಿ ಪ್ರಯತ್ನಿಸುತ್ತಿರುವುದು ಮತ್ತು ಅಷ್ಟೂ ವರ್ಷ ಆ ಪ್ರಶಸ್ತಿಯಿಂದ ವಂಚಿತರಾಗುತ್ತಿರುವುದು ಹಾಗೂ ಛಲ ಬಿಡದ ತ್ರಿವಿಕ್ರಮನಂತೆ ಪ್ರಶಸ್ತಿಗಾಗಿ ಬೇಟೆ ಮುಂದುವರಿಸಿರುವುದು ಈ ಪ್ರಶಸ್ತಿಯ ಹೊಳಪು ಮತ್ತು ಖದರನ್ನು ಇನ್ನೂ ಜೀವಂತವಾಗಿಟ್ಟಿದೆ.

ಒಂದು ವರ್ಷವಂತೂ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾದಾಗ, ಪ್ರಶಸ್ತಿ ನಿರೀಕ್ಷೆಯಲ್ಲಿದ್ದವರೊಬ್ಬರು ಅದು ಸಿಗದೇ ನಿರಾಶರಾಗಿ, ಕೋರ್ಟಿನ ಮೆಟ್ಟಿಲನ್ನೂ ಹತ್ತಿದ್ದರು. ನಂತರ ರಾಜ್ಯೋತ್ಸವ ಪ್ರಶಸ್ತಿಗೆ ಮಾನದಂಡವನ್ನು ರೂಪಿಸು ವಂತೆ ಕೋರ್ಟು ತೀರ್ಪು ನೀಡಬೇಕಾಯಿತು. ಬಳಿಕ ನಿವೃತ್ತ ನ್ಯಾಯಾಽಶರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚನೆ ಯಾಗುತ್ತಿರುವುದೂ, ಈ ಪ್ರಶಸ್ತಿಯ ಇನ್ನೊಂದು ರೂಪವೇ. ಇದರಿಂದ ಪ್ರಶಸ್ತಿಗಳ ಸಂಖ್ಯೆಗೆ ಕಡಿವಾಣವೇನೋ ಬಿದ್ದಿತು. ಆದರೆ ರಾಜ್ಯೋತ್ಸವ ಪ್ರಶಸ್ತಿ ವಿವಾದಗಳಿಂದ ಮುಕ್ತವಾಗಲಿಲ್ಲ. ಈ ಸಲವಂತೂ ರಾಜ್ಯೋತ್ಸವ ಪ್ರಶಸ್ತಿಗೆ ಸಾಧನೆಯ ಜತೆಗೆ ಜಾತಿಯನ್ನೂ ಮುಖ್ಯವಾಗಿ ಪರಿಗಣಿಸಿರುವುದರಿಂದ, ಅದರ ಸಾಚಾತನ ಹೇಗಿರಬಹುದು ಎಂಬುದನ್ನು ಊಹಿಸಬಹುದು.

ಇನ್ನು ನೊಬೆಲ್ ಪ್ರಶಸ್ತಿ. ಪ್ರತಿ ವರ್ಷದ ಅಕ್ಟೋಬರ್ ಮೊದಲ ವಾರದಿಂದ ಎರಡನೇ ವಾರದಲ್ಲಿ ಭೌತಶಾಸ್ತ್ರ,
ರಸಾಯನಶಾಸ್ತ್ರ, ವೈದ್ಯಕೀಯ, ಸಾಹಿತ್ಯ, ಶಾಂತಿ, ಆರ್ಥಿಕ ವಿಜ್ಞಾನ ಕ್ಷೇತ್ರಗಳಲ್ಲಿನ ಸಾಧಕರಿಗೆ ಈ ಪ್ರಶಸ್ತಿಗಳನ್ನು ದಾನ ಮಾಡಲಾಗುತ್ತದೆ. ಇದಕ್ಕಿಂತ ದೊಡ್ಡದಾದ ಬೇರೆ ಪ್ರಶಸ್ತಿಯೇ ಇಲ್ಲ ಎಂಬ ರೀತಿಯ ಬಿಲ್ಡಪ್ ಅನ್ನು ನೊಬೆಲ್ ಪ್ರಶಸ್ತಿಗೆ ನೀಡಲಾಗಿದೆ. ಅದಕ್ಕಿರುವಷ್ಟು hype ಬೇರೆ ಯಾವ ಪ್ರಶಸ್ತಿ ಗಳಿಗೂ ಇಲ್ಲ. ಇನ್ನು ಆ ಪ್ರಶಸ್ತಿಗೆ ಭಾಜನ ರಾದವರನ್ನು ‘ದೇವಾಂಶಸಂಭೂತ’ರಂತೆ ಈ ಜಗತ್ತು ನೋಡುತ್ತದೆ. ನೊಬೆಲ್ ಪ್ರಶಸ್ತಿಗೆ ಕನಿಷ್ಠ ಎರಡು ವರ್ಷ ಗಳಿಂದ ಹುಡುಕಾಟ ಆರಂಭವಾಗುತ್ತದೆ. ಕೆಲವರ ಹೆಸರು ಹತ್ತು ವರ್ಷಗಳಿಂದ ಪರಿಗಣನೆಗೆ ಬಂದು ಹೋಗಿ ದ್ದುಂಟು. ಈ ಪ್ರಶಸ್ತಿಗೆ ಬಹಳ ದೊಡ್ಡ ಮಟ್ಟದಲ್ಲಿ ಲಾಬಿ, ಪ್ರಭಾವ ನಡೆಯುವುದು ಗುಟ್ಟಾಗಿ ಉಳಿದಿಲ್ಲ.

ಆದರೂ ಈ ಪ್ರಶಸ್ತಿ ತನ್ನ ಘನತೆಯನ್ನು ಇಂದಿಗೂ ಉಳಿಸಿಕೊಂಡು ಬಂದಿದೆ. ನೊಬೆಲ್ ಪ್ರಶಸ್ತಿಯನ್ನು ಅಣಕಿಸಲೆಂಬಂತೆ ‘ಇಗ್ ನೊಬೆಲ್ ಪ್ರಶಸ್ತಿ’ (satirical award) ಯನ್ನು ಘೋಷಿಸಲಾಗುತ್ತಿದ್ದರೂ, ನೊಬೆಲ್ ಪ್ರಶಸ್ತಿಯ ಬಗೆಗಿನ ಕುತೂಹಲ ಕಮ್ಮಿಯಾಗಿಲ್ಲ. ಹಾಗೆಯೇ ಈ ಪ್ರಶಸ್ತಿಯ ಸುತ್ತ ಕವಿದಿರುವ ಅನುಮಾನವೂ.
ಡೈನಮೇಟ್ ಅನ್ನು ಕಂಡುಹಿಡಿದ ಸ್ವೀಡಿಶ್ ವಿಜ್ಞಾನಿ ಅಲ್ ಫ್ರೆಡ್ ನೊಬೆಲ್ (1833-1896) ಬದುಕಿದ್ದಾಗಲೇ,
ಪ್ರಮುಖ ಪತ್ರಿಕೆಯೊಂದು, ‘ಸಾವಿನ ವ್ಯಾಪಾರಿ ನೊಬೆಲ್ ನಿಧನ’ ಎಂಬ ಸುದ್ದಿಯನ್ನು ಪ್ರಕಟಿಸಿಬಿಟ್ಟಿತು.

ತಾನು ಸತ್ತ ಬಳಿಕ ಈ ಜಗತ್ತು ತನ್ನನ್ನು ‘ಸಾವಿನ ವ್ಯಾಪಾರಿ (Merchant of Death)’ ಎಂದು ನೆನಪಿಟ್ಟುಕೊ
ಳ್ಳುತ್ತದೆ ಎಂದು ಭಾವಿಸಿದ ನೊಬೆಲ್ ತೀವ್ರ ವ್ಯಾಕುಲಕ್ಕೊಳಗಾಗಿ, ತನ್ನ ಜೀವಮಾನದ ಗಳಿಕೆಗಳನ್ನೆಲ್ಲ ತನ್ನ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ದಾನವಾಗಿ ನೀಡಿದ್ದು ಗೊತ್ತಿರಬಹುದು. ಆತ ನಿಧನನಾಗಿ ಐದು ವರ್ಷಗಳ ನಂತರ, 1901ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಮಾನವ ಸಂಕುಲದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದವರಿಗೆ ಪ್ರಶಸ್ತಿ ನೀಡಬೇಕು ಎಂಬ ಉದಾತ್ತ ಧ್ಯೇಯವನ್ನು ನೊಬೆಲ್ ಪ್ರತಿಪಾದಿಸಿದ್ದರೂ, ಅದನ್ನು ನೀಡುವವರು ಆ ಆಶಯವನ್ನು ಪಾಲಿಸದಿರುವುದು ದುರ್ದೈವ.

1901ರಿಂದ 2024ರವರೆಗೆ ಕಳೆದ 123 ವರ್ಷಗಳಲ್ಲಿ 979 ಸಾಧಕರಿಗೆ ಮತ್ತು 28 ಸಂಘ-ಸಂಸ್ಥೆಗಳಿಗೆ ನೊಬೆಲ್
ಪ್ರಶಸ್ತಿಯನ್ನು ನೀಡಲಾಗಿದೆ. ಈ ಪೈಕಿ ಐದು ಭಾರತೀಯರು ಮಾತ್ರ ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಏಳು
ಮಂದಿ ಭಾರತೀಯ ಮೂಲದವರಿಗೂ ನೊಬೆಲ್ ಸಂದಿದೆ. ಅಂದರೆ ಶೇ.ಒಂದಕ್ಕಿಂತ ಕಮ್ಮಿ ಭಾರತೀಯರು ಮಾನವ
ಸಂಕುಲದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ ಎಂದಂತಾಯಿತು.

ಇಲ್ಲಿ ತನಕ ಸಾಹಿತ್ಯ ಪ್ರಕಾರದಲ್ಲಿ 121 ಮಂದಿಗೆ ನೊಬೆಲ್ ಪ್ರಶಸ್ತಿ ಕೊಡಲಾಗಿದೆ. ಆ ಪೈಕಿ ಭಾರತೀಯರು ಒಬ್ಬೇ (ರವೀಂದ್ರನಾಥ್ ಟಾಗೋರ್) ಒಬ್ಬರು. 1913ರಲ್ಲಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿದ ಬಳಿಕ ಕಳೆದ 111 ವರ್ಷ ಗಳಲ್ಲಿ ಒಬ್ಬನೇ ಭಾರತೀಯನಿಗೂ ಈ ಪ್ರಶಸ್ತಿಯನ್ನು ನೀಡಲಾಗಿಲ್ಲ. ಜಗತ್ತಿನಲ್ಲಿ ಅತಿ ಹೆಚ್ಚು ಅಧಿಕೃತ ಭಾಷೆ ಗಳಿರುವ, ಶ್ರೀಮಂತ ಭಾಷಾ ವೈವಿಧ್ಯವಿರುವ ಭಾರತದಲ್ಲಿ ಕಳೆದ ಒಂದು ಶತಮಾನದ ಅವಧಿಯಲ್ಲಿ ಒಬ್ಬರೂ ಈ ಪ್ರಶಸ್ತಿಗೆ ಅರ್ಹರಿಲ್ಲವೇ? ಈ ತನಕ ಸಾಹಿತ್ಯಕ್ಕೆ ನೀಡಿರುವ 121 ಮಂದಿ ಪೈಕಿ 95 ಮಂದಿ ಯುರೋಪ್ ಮತ್ತು ಅಮೆರಿಕದವರು. ಹದಿನಾರು ಮಂದಿ ಫ್ರೆಂಚ್ ಭಾಷಿಕರು, ಹದಿಮೂರು ಅಮೆರಿಕನ್ನರು, ಒಂಬತ್ತು ಜರ್ಮನ್ನರು, ಸ್ವೀಡನ್‌ನ ಎಂಟು ಮಂದಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬರೀ ಮೂರೂಕಾಲು ಲಕ್ಷ ಜನಸಂಖ್ಯೆ ಇರುವ ಐಸ್‌ಲ್ಯಾಂಡಿನ ಸಾಹಿತ್ಯ ಮತ್ತು ನೂರಾ ನಲವತ್ತು ಕೋಟಿ ಜನಸಂಖ್ಯೆ ಇರುವ ಭಾರತೀಯ ಸಾಹಿತ್ಯ, ನೊಬೆಲ್ ಆಯ್ಕೆ ಸಮಿತಿ ಮುಂದೆ ಒಂದೇ. ಕಾರಣ ಈ ಎರಡೂ
ದೇಶಗಳಿಗೆ ಸಂದಿರುವ ನೊಬೆಲ್ (ಸಾಹಿತ್ಯ) ಪ್ರಶಸ್ತಿ ಒಂದೇ. ಅಂದರೆ ನೊಬೆಲ್ ಆಯ್ಕೆ ಸಮಿತಿ ಪ್ರಕಾರ, ಜಗತ್ತಿನ ಶೇ.ಎಂಬತ್ತರಷ್ಟು ಸಾಹಿತ್ಯ ಪ್ರತಿಭೆಗಳು ಯುರೋಪಿನಲ್ಲಿ ಮಾತ್ರ ಇವೆ ಎಂದಂತಾಯಿತು. ಈ ಸಲ ಸಾಹಿತ್ಯದ ನೊಬೆಲ್ ಪ್ರಶಸ್ತಿ ದಕ್ಷಿಣ ಕೊರಿಯಾದ ಹಾನ್ ಕಾಂಗ್ ಎಂಬುವಳಿಗೆ ಸಂದಿದೆ. ಬರೀ ಐವತ್ಮೂರು ವರ್ಷ
ವಯಸ್ಸಿನ ಅವಳ ಸಾಹಿತ್ಯದ ಪ್ರತಿಭೆ ಬಗ್ಗೆ ಎರಡು ಮಾತಿಲ್ಲ.

ಆದರೆ ಆಕೆ ಬರೆದಿದ್ದು ಕೇವಲ ಆರು ಕಾದಂಬರಿ ಮತ್ತು ಒಂದಷ್ಟು ಕವನಗಳು. ಆದರೆ ನೊಬೆಲ್ ಆಯ್ಕೆ ಸಮಿತಿಗೆ
ಆರ್.ಕೆ.ನಾರಾಯಣ, ಮಹಾಶ್ವೇತಾದೇವಿ, ಮುಲ್ಕ ರಾಜ್ ಆನಂದ್, ರಸ್ಕಿನ್ ಬಾಂಡ್, ಅಮಿತಾವ್ ಘೋಷ್,
ಗುಲ್ಜಾರ್, ಡಾ.ಎಸ್.ಎಲ.ಭೈರಪ್ಪ ಮುಂತಾದವರು ಕಾಣಲೇ ಇಲ್ಲ. ಮಹಾಶ್ವೇತಾದೇವಿ ಏನಿಲ್ಲವೆಂದರೂ
ನೂರಕ್ಕೂ ಹೆಚ್ಚು ಮಹತ್ವದ ಕಾದಂಬರಿ ಮತ್ತು ಇಪ್ಪತ್ತಕ್ಕೂ ಹೆಚ್ಚು ಕಥಾ ಸಂಕಲನಗಳನ್ನು ಬರೆದವರು. ಜಗತ್ತಿನ
ಪ್ರಮುಖ ಭಾಷೆಗಳಿಗೆ ಅನುವಾದಗೊಂಡ ಡಾ.ಭೈರಪ್ಪನವರ ಕೃತಿಗಳು ಜಾಗತಿಕ ಮನ್ನಣೆಗೆ ಪಾತ್ರವಾಗಿವೆ.

ತೊಂಬತ್ತರ ಅಂಚಿನಲ್ಲಿರುವ ಗುಲ್ಜಾರ್ ಸಾಹಿತ್ಯ ಯಾವ ದೃಷ್ಟಿಯಲ್ಲೂ ಕಮ್ಮಿಯಿಲ್ಲ. ಅವರು ಬರೆದಿರುವ ಕವನ, ನಾಟಕ, ಪ್ರಬಂಧ, ಮಕ್ಕಳ ಪುಸ್ತಕಗಳು ಯಾವ ಮಾನದಂಡದ ಮಸೂರದಲ್ಲೂ ಹೊಳೆಯುವ ಮಾಣಿಕ್ಯಗಳೇ. ಆದರೂ ನೊಬೆಲ್ ಸಮಿತಿಗೆ ಆರು ಹೆತ್ತವರಿಗಿಂತ ಮೂರು ಹೆತ್ತವರೇ ದೊಡ್ಡದಾಗಿ ಕಂಡಿದ್ದು ಆಶ್ಚರ್ಯವೇ. ತಾನು ಪಕ್ಷಪಾತಿ ಅಲ್ಲ ಎಂಬುದನ್ನು ತೋರಿಸಿಕೊಳ್ಳಲು ಅಥವಾ ಕಣ್ ಕಟ್ಟಲು, ಆಫ್ರಿಕಾ ದೇಶದ ಕೆಲವು ಸಾಹಿತಿಗಳನ್ನು ಹುಡುಕಿ, ಅವರ ಕೃತಿಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ, ಅವರಿಗೆ ನೊಬೆಲ್ ಆಯ್ಕೆ ಸಮಿತಿ ಪ್ರಶಸ್ತಿ ನೀಡಿದ್ದುಂಟು.

ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ನಡೆಯುವ ರಾಜಕಾರಣ, ಹಗರಣ, ಕರ್ಮಕಾಂಡ ಬೇರೆಲ್ಲೂ ನಡೆಯ ಲಿಕ್ಕಿಲ್ಲ. ಆದರೆ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವುದರಿಂದ ನಮ್ಮಂಥ ‘ಹುಲುಮಾನವ’ರಿಗೆ ಗೊತ್ತಾಗುವುದಿಲ್ಲ. ನೊಬೆಲ್ ಶಾಂತಿ ಪ್ರಶಸ್ತಿಯನ್ನೇ ತೆಗೆದುಕೊಳ್ಳಿ. ಜಗತ್ತಿಗೆ ಶಾಂತಿ ಮತ್ತು ಅಹಿಂಸೆಯನ್ನು ಬೋಧಿಸಿದ ಮಹಾತ್ಮ ಗಾಂಧಿ ಅವರ ಹೆಸರು, 1937ರಿಂದ ಸತತ ಮೂರು ವರ್ಷ ಮತ್ತು 1947ರಲ್ಲಿ ಹಾಗೂ ಹತ್ಯೆಯಾಗುವ ಕೆಲದಿನಗಳ ಮುನ್ನ 1948ರಲ್ಲಿ- ಒಟ್ಟೂ ಐದು ಸಲ, ನೊಬೆಲ್ ಶಾಂತಿ ಪ್ರಶಸ್ತಿಗಾಗಿ ನಾಮಿನೇಟ್ ಆಗಿತ್ತು. ಆದರೆ ಕೊನೆಗೂ ಅವರ ಹೆಸರನ್ನು ಈ ಪ್ರಶಸ್ತಿಗೆ ಪರಿಗಣಿಸಲೇ ಇಲ್ಲ.

ನೊಬೆಲ್ ಪ್ರಶಸ್ತಿಯನ್ನು ನೀಡುವ ಸ್ವೀಡಿಶ್ ಅಕಾಡೆಮಿ 2006ರಲ್ಲಿ, ‘ನೊಬೆಲ್ ಪ್ರಶಸ್ತಿ ಇತಿಹಾಸದಲ್ಲಿಯೇ,
ಮಹಾತ್ಮ ಗಾಂಧಿಗೆ ಈ ಪ್ರಶಸ್ತಿ ನೀಡದಿರುವುದು ಬಹಳ ದೊಡ್ಡ ಪ್ರಮಾದ’ ಎಂದು ಒಪ್ಪಿಕೊಂಡು ಕ್ಷಮೆಯಾಚಿಸಿತು.
ಮಹಾತ್ಮ ಗಾಂಧಿಗೆ ಪ್ರಶಸ್ತಿಯನ್ನು ನೀಡದಂತೆ ಮಾಡಿದ ಆ ಕಾಣದ ಕೈಗಳು ಯಾವವು? ಯಾವ ಕಾರಣಕ್ಕೂ ಗಾಂಧಿಗೆ ನೊಬೆಲ್ ನೀಡಕೂಡದು ಎಂದು ಬ್ರಿಟಿಷ್ ಪರ ಶಕ್ತಿಗಳು ಪ್ರಭಾವ ಬೀರಿದ್ದು ಗೊತ್ತಿರುವ ರಹಸ್ಯವೇ. ಇವನ್ನೆಲ್ಲ ನೋಡಿದರೆ, ಕೈಲಾಶ ಸತ್ಯಾರ್ಥಿ (2014), ಮದರ್ ಥೆರೇಸಾ (1979) ಅವರಷ್ಟು ಮಹಾತ್ಮ ಗಾಂಧಿ ಪುಣ್ಯವಂತರಲ್ಲ ಎನಿಸುತ್ತದೆ.

ಎಂಥ ವಿಚಿತ್ರ ನೋಡಿ, ವಿಯೆಟ್ನಾಮ್ ಯುದ್ಧದಲ್ಲಿ ನಪಾಲ್ಮ್ ಬಾಂಬ್ ಬಳಕೆಯನ್ನು ಪ್ರಚೋದಿಸಿದ ಅಮೆರಿಕದ
ರಾಜತಾಂತ್ರಿಕ ಹೆನ್ರಿ ಕಿಸಿಂಜರ್ ನೊಬೆಲ್ ಪ್ರಶಸ್ತಿಯನ್ನು ಹೊಡೆದುಕೊಂಡರು! ಆಗಲೇ ಆ ಪ್ರಶಸ್ತಿಯ ಸಾಚಾತನ ನೆಗೆದುಬಿದ್ದಿತು. ಆಯಾ ಸಂದರ್ಭದಲ್ಲಿ ಅಽಕಾರದಲ್ಲಿದ್ದ ಬೇರೆ ಬೇರೆ ದೇಶಗಳ ಮುಖ್ಯಸ್ಥರನ್ನು ಓಲೈಸಲು ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡುವ ಪರಿಪಾಠ ಈಗಲೂ ಮುಂದುವರಿದುಕೊಂಡು ಬಂದಿದೆ. ಆಯಾ ವರ್ಷದ ಜಾಗತಿಕ ರಾಜಕಾರಣ ಈ ಪ್ರಶಸ್ತಿಯ ಮೇಲೆ ತನ್ನ ಪ್ರಭಾವವನ್ನು ಬೀರುತ್ತಲೇ ಬಂದಿದೆ. ಈ ವರ್ಷ ನೊಬೆಲ್ ಶಾಂತಿ
ಪ್ರಶಸ್ತಿಯನ್ನು ಯಾರಿಗೆ ಘೋಷಿಸಲಾಗಿದೆ ಎಂಬುದನ್ನು ಮಾಪಕವಾಗಿ ಇಟ್ಟುಕೊಂಡು ಜಾಗತಿಕ ರಾಜಕಾರಣದ ಗಾಳಿ ಯಾವ ದಿಕ್ಕಿನತ್ತ ಬೀಸುತ್ತಿದೆ ಎಂಬುದನ್ನು ಅಳೆಯಬಹುದು ಎಂಬ ಮಾತು ಸತ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಇನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ, ಆರ್ಥಿಕ ವಿಜ್ಞಾನ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೀಡಿರುವ ನೊಬೆಲ್ ಪ್ರಶಸ್ತಿಯ ಬಗ್ಗೆ ಹೇಳದಿರುವುದೇ ಒಳ್ಳೆಯದು. ಈ ಕ್ಷೇತ್ರಗಳಲ್ಲಿ ಯಾರಿಗೆ ಪ್ರಶಸ್ತಿಯನ್ನು
ನೀಡಬೇಕು ಎಂಬುದನ್ನು ವಿಶ್ವದ ಕೆಲವೇ ಕೆಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ನಿರ್ಧರಿಸುತ್ತವೆ. ತನ್ನ ಫ್ಯಾಕಲ್ಟಿ
ಯಲ್ಲಿರುವವರು ಪ್ರಶಸ್ತಿಯನ್ನು ಪಡೆದುಕೊಂಡರು ಎಂದು ಆ ವಿಶ್ವವಿದ್ಯಾಲಯಗಳು ಟಾಮ್ ಟಾಮ್ ಮಾಡಿ‌ ಕೊಳ್ಳುವುದರಿಂದ, ಅವರ ಆಯ್ಕೆಯಲ್ಲಿ ದೊಡ್ಡ ಲಾಬಿ, ಕಾಣದ ಕೈಗಳು ಕೆಲಸ ಮಾಡುತ್ತವೆ.

ರಾಜಕಾರಣದಲ್ಲೂ ಇಷ್ಟೊಂದು ಪ್ರಮಾಣದ ಲಾಬಿ, ಮೇಲಾಟ, ಪ್ರಭಾವ, ಪಕ್ಷಪಾತ, ರಾಜಕೀಯ ಇರಲಾರದು. ಅವೆಲ್ಲವನ್ನೂ ನೊಬೆಲ್ ‘ಪ್ರಶಸ್ತಿಕಾರಣ’ವೊಂದೇ ಮೀರಿಸಬಲ್ಲುದು. ರಾಜಕಾರಣಿಗಳಿಗಿಂತ ಈ ‘ಬುದ್ಧಿಕಾರಣಿ’ಗಳು ಸಾಚಾ ಅಲ್ಲ ಎಂಬುದಕ್ಕೆ ಈ ಪ್ರಶಸ್ತಿಗಳೇ ಸಾಕ್ಷಿ.

ಇದನ್ನೂ ಓದಿ: ‌Vishweshwar Bhat Column: ಸಮುದ್ರದ ಮೇಲೆ ಡ್ರೋನ್‌