Saturday, 28th September 2024

Vishweshwar Bhat Column: ಸಂಬಂಧಗಳೂ ಸತ್ತರೂ ಭಾವನೆಗಳು ಸಾಯುವುದಿಲ್ಲ!

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಬಹಳ ದಿನಗಳಾದರೂ ಫೋನ್ ಕರೆ ಬರದಿದ್ದಾಗ, ನಾನೇ ಮಾಡಿದೆ. ಯೋಗಿ ದುರ್ಲಭಜೀ ಖಿನ್ನರಾಗಿದ್ದರು. ಅವರ ಆತ್ಮೀಯ ಸ್ನೇಹಿತರೊಬ್ಬರು ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು. ಆ ಎಲ್ಲಾ ಬೆಳವಣಿಗೆಯಿಂದ ಯೋಗಿಜೀ ಮನಸ್ಸು ಗಾಳುಮೇಳಾಗಿತ್ತು. ಯೋಗಿಜೀ ಸ್ನೇಹಿತರದು ಹನ್ನೆರಡು ವರ್ಷಗಳ ದಾಂಪತ್ಯ. ಒಬ್ಬಳು ಮುದ್ದಾದ ಹೆಣ್ಣು ಮಗಳಿದ್ದಾಳೆ.

ಇಬ್ಬರೂ ಅನುಕೂಲಸ್ಥರು. ಇಬ್ಬರೂ ವಿದೇಶಗಳಲ್ಲಿ ಓದಿದವರು. ಕೈತುಂಬಾ ಸಂಪಾದಿಸುವವರು. ಮುಂಬೈ, ದಿಲ್ಲಿ,
ಬೆಂಗಳೂರಿನಲ್ಲಿ ಸ್ವಂತ ಮನೆಗಳಿವೆ. ಮನೆಯಲ್ಲಿ ಮೂರು ಕಾರು. ಯಾವುದಕ್ಕೂ ಕೊರತೆಯಿಲ್ಲ. ಈ ಸ್ನೇಹಿತನ ಬಗ್ಗೆ
ಯೋಗಿಜೀ ಆಗಾಗ ಪ್ರಸ್ತಾಪಿಸುತ್ತಿದ್ದರು. ಅವರದ್ದು ಅನುರೂಪ ಜೋಡಿ ಎಂದು ಪ್ರಶಂಸಿಸುತ್ತಿದ್ದರು. ತಮಗೆ ವಿದೇಶ ಗಳಿಂದ ಏನಾದರೂ ಪುಸ್ತಕ, ಸಾಮಾನು ಬೇಕಾದರೆ, ಈ ಸ್ನೇಹಿತನಿಗೆ ಹೇಳುತ್ತಿದ್ದರು. ಆತ ಕೆಲ ದಿನಗಳಲ್ಲಿ ತಂದು ಒಪ್ಪಿಸುತ್ತಿದ್ದ. ಅವರಲ್ಲಿ ಯಾವ ದೋಷಗಳಿರಲಿಲ್ಲ. ಇಬ್ಬರೂ ಒಟ್ಟಿಗೆ ಯೋಗಿಜೀಯನ್ನು ಕಾಣಲು ಬರುತ್ತಿದ್ದರು. ಆಕೆಗೂ ಅವರನ್ನು ಕಂಡರೆ ಆದರ. ಒಮ್ಮೆ ಯೋಗಿಜೀ ಅವರಿಬ್ಬರ ಜತೆ ವಿದೇಶಕ್ಕೂ ಒಂದು ತಿಂಗಳು ಹೋಗಿದ್ದರು.

ಎಲ್ಲಾ ಸಂಬಂಧಗಳು ಮೇಲ್ನೋಟಕ್ಕೆ ಎಷ್ಟೇ ಸರಳವಾಗಿ ಕಂಡರೂ ಎಲ್ಲರಿಗೂ ಅರ್ಥವಾಗುವುದಿಲ್ಲ. ಕೆಲವು ಸಂಬಂಧಗಳ ಸರಪಣಿಯಲ್ಲಿ ಎಲ್ಲಾ ಒಂದೆಡೆ ಕೊಂಡಿ ದುರ್ಬಲವಾಗಿರುತ್ತದೆ. ಅದು ಇಬ್ಬರಿಗೂ ಗೊತ್ತಿರುತ್ತದೆ. ಆದರೆ ಇಬ್ಬರೂ ಹಾಗೇ ಬಿಟ್ಟಿರುತ್ತಾರೆ. ಇಬ್ಬರೂ ಪ್ರತ್ಯೇಕವಾಗಿ ಯೋಗಿಜೀಯನ್ನು ಭೇಟಿ ಮಾಡಿ, ಪ್ರತ್ಯೇಕವಾಗುವ ಇಚ್ಛೆಯನ್ನು ವ್ಯಕ್ತಪಡಿಸಿದರು.

ಯೋಗಿಜೀ ಬಹಳ ಮನ ನೊಂದರು. ಇಬ್ಬರ ನಡುವಿನ ಭಿನ್ನಾಭಿಪ್ರಾಯವನ್ನು ಪರಿಹರಿಸಲು ಶತಾಯ ಗತಾಯ ಪ್ರಯತ್ನಿಸಿದರು. ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಬರುಬರುತ್ತ ಕಂದಕ ಜಾಸ್ತಿಯಾಗುತ್ತಲೇ ಹೋಯಿತು. ಕನ್ನಡಿ ಒಡೆದುಹೋಗಿತ್ತು. ಅದಕ್ಕೆ ಅಂಟು ಹಾಕಿ ಕೂಡಿಸಲು ಪ್ರಯತ್ನಿಸಿದರೆ ಮೊದಲಿನಂತಾಗು ವುದು ಸಾಧ್ಯವೇ ಇರಲಿಲ್ಲ. ಆದರೆ ಅವರಿಬ್ಬರೂ ವಿಚ್ಛೇದನ ತೆಗೆದುಕೊಳ್ಳುವ ಕಾರಣಗಳ ಬಗ್ಗೆ ಯೋಗಿಜೀಗೆ ತೀವ್ರ ಅಸಮಾಧಾನವಿತ್ತು. ನೀವಿಬ್ಬರೂ ಕಾರಣಗಳಿಲ್ಲದೇ ವಿಚ್ಛೇದನ ತೆಗೆದುಕೊಳ್ಳುತ್ತಿದ್ದೀರಿ, ನೀವು ಹೇಳುವ ಕಾರಣ ಗಳಿಂದ ಯಾರೂ ಅಂಥ extreme step ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರೂ, ಅವರಿಬ್ಬರೂ ಕೇಳಲಿಲ್ಲ. ತನಗೆ ಗೊತ್ತಿರದ, ಅರಿವಿಗೆ ಬಾರದ, ಯಾವುದೋ ಗಹನವಾದ ವಿಷಯ ಅವರಿಬ್ಬರನ್ನು ಬೇರ್ಪಡಿಸುತ್ತಿರಬೇಕು ಎಂದು ಯೋಗಿಜೀ ಭಾವಿಸಿದರು.

ನನಗೂ ಅದು ಹಾಗೇ ಇದ್ದಿರಬಹುದು ಎಂದೆನಿಸಿತು. ಈ ಎಲ್ಲಾ ಘಟನೆಗಳಿಂದ ಯೋಗಿ ಮನಸ್ಸು ಕೆಡಿಸಿಕೊಂಡಿ ದ್ದರು. ಇವೆಲ್ಲಕ್ಕಿಂತ ಅವರಿಗೆ ತೀರಾ ಬೇಸರ ಮೂಡಿಸಿದ ಸಂಗತಿಯೇನೆಂದರೆ, ಇಬ್ಬರೂ ಎದುರಾ ಬದುರಾ ಆದರೂ, ಒಬ್ಬರಿಗೊಬ್ಬರು ಮುಖ ಮುಖ ನೋಡಿಕೊಳ್ಳದೇ, ಶ್ಶೀ… ಎಂದು ಕತ್ತು ತಿರುಗಿಸಿ ಹೋಗಿದ್ದು. ಯೋಗಿಜೀ ಆ ದೃಶ್ಯ ವನ್ನು ಕಣ್ಣಾರೆ ಕಂಡು ವ್ಯಾಕುಲರಾಗಿದ್ದರು. ಇಬ್ಬರೂ ಪ್ರೀತಿಸಿ ಮದುವೆಯಾದವರು. ಒಬ್ಬರನ್ನೊಬ್ಬರು ಬಿಟ್ಟಿರು ತ್ತಿರಲಿಲ್ಲ. ಈಗ ಒಬ್ಬರ ಮುಖವನ್ನು ಒಬ್ಬರು ನೋಡಲು ಮನಸ್ಸು ಒಪ್ಪುತ್ತಿಲ್ಲ. ಹೇಗಿದ್ದ ಸಂಬಂಧ ಹೇಗೋ, ಹೇಗೇಗೋ ಆಗಿಬಿಡುತ್ತದೆ. ಯಾರದು ತಪ್ಪೋ, ಯಾರದು ಸರಿಯೋ.. ಇಬ್ಬರೂ ಸರಿಯಿಲ್ಲ ಎಂಬುದು ಮಾತ್ರ ಸತ್ಯ. ಒಂದೇ ಮನೆಯಲ್ಲಿ, ಒಂದೇ ಕೋಣೆಯಲ್ಲಿ, ಒಂದೇ ಹಾಸಿಗೆಯಲ್ಲಿ ಒಟ್ಟಿಗೇ ಜೀವಿಸಿದವರು, ಆ ಸಂಬಂಧದಿಂದ ಮಗುವನ್ನು ಪಡೆದವರು, ಅದು ಹೇಗೆ ವೈರಿಗಳಂತೆ ದೂರವಾಗಿಬಿಡುತ್ತಾರೆ..

ನನಗೆ ಇವೆ ಅರ್ಥವಾಗುವುದಿಲ್ಲ ಎಂದರು ಯೋಗಿಜೀ. ನಿನ್ನೆ ಮೊನ್ನೆ ತನಕ ಪರಸ್ಪರ ಅನ್ಯೋನ್ಯರಾಗಿದ್ದವರು ಇಂದು ಹೇಗೆ ಎ ಸಂಬಂಧ-ಭಾವನೆಗಳನ್ನು ಕಳಚಿಕೊಂಡು ಹಠಾತ್ ದೂರವಾಗಿ ಬಿಡುತ್ತಾರೆ? ಪರಸ್ಪರರು ಒಟ್ಟಿಗೆ ಇರಲು ಸಾಧ್ಯವೇ ಇಲ್ಲ ಎಂಬ ಯಾವ ಘಟನೆಗಳು ಅವರಿಬ್ಬರ ಮಧ್ಯೆ ಘಟಿಸಿ ಅವರಿಬ್ಬರನ್ನು ದೂರ ಮಾಡಿವೆ? ತಮಗೆ ಹುಟ್ಟಿದ ಮಗುವನ್ನು ನೋಡಿಯಾದರೂ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಅದ್ಯಾವ ಸಂಗತಿ ಅವರಿಬ್ಬರ ಕೈ ಜಗ್ಗುತ್ತವೆ?

ನಾನು ಯೋಗಿಜೀ ಹೇಳುವುದೆಲ್ಲವನ್ನೂ ಮೌನವಾಗಿ ಕೇಳಿಸಿಕೊಳ್ಳುತ್ತಿದ್ದೆ. ಕೆಲವು ಸಂಬಂಧ ಮೂಡಲು ಮತ್ತು
ಕೆಡಲು ಗಹನವಾದ ಕಾರಣ ಇರಬೇಕಿಲ್ಲ. ಎಲ್ಲಾ ಅಪಘಾತಗಳನ್ನು ತಪ್ಪಿಸುವುದು ಹೇಗೆ ಸಾಧ್ಯವಿದೆಯೋ, ಎಲ್ಲಾ
ವಿಚ್ಛೇದನಗಳನ್ನೂ ತಪ್ಪಿಸಲು ಸಾಧ್ಯವಿದೆ. ಆದರೆ ಕಾಲನ ಆಟದ ಮುಂದೆ ಯಾರ ಆಟವೂ ನಡೆಯುವುದಿಲ್ಲ. ಕೆಲವು ಸಂಬಂಧಗಳು ಏನೇ ಆದರೂ ಕಡಿದುಹೋಗಬಾರದು.

ಇನ್ನು ಕೆಲವು ಸಂಬಂಧಗಳು ಕಡಿದುಹೋದರೇ ನೆಮ್ಮದಿ. ಆದರೆ ಒಂದು ಕಾಲಕ್ಕೆ ಅನ್ಯೋನ್ಯವಾದವರು, ಪ್ರಸ್ತುತ
ನೆರಳು ಸೋಂಕಿದರೂ ಹಾವು ತುಳಿದವರಂತೆ ಬೆಚ್ಚುವುದು ಮಾತ್ರ ಸಂಬಂಧದ ಇನ್ನೊಂದು ಕರಾಳಮುಖ. ಇವುಗಳಿಗೆ ಹೆಚ್ಚು ಅರ್ಥಗಳಿರುವುದಿಲ್ಲ. ಅರ್ಥವನ್ನೇ ಹಚ್ಚುತ್ತಾ ಕುಳಿತರೆ ಅದು ಮುಗಿಯುವುದೂ ಇಲ್ಲ. ಕೆಲವು ಸಂಬಂಧಗಳು ಮರದ ಎಲೆಗಳಂತೆ ತೊಟ್ಟು ಕಳೆದುಕೊಂಡು, ಎಲ್ಲಿಗೋ ಹಾರಿಹೋಗಿ, ಇನ್ನೆ ಕೊಳೆತುಹೋಗುತ್ತವೆ. ಮರಕ್ಕೆ ಆಸರೆಯಾದ ಎಲೆಯೇ, ಮರದಿಂದ ಕಳಚಿಕೊಂಡು ಹೇಳಹೆಸರಿಲ್ಲದಂತಾಗುತ್ತದೆ.

ನಾನು ಬೋರ್ಡಿಂಗ್ ಪಾಸ್ ತೆಗೆದುಕೊಳ್ಳಲು ಕೌಂಟರ್ ಮುಂದೆ ನಿಂತಿದ್ದೆ. ಹಿಂದಿನಿಂದ ನನ್ನ ಬೆನ್ನಿಗೆ ಜೋರಾಗಿ
ಶಹಬ್ಬಾಸ್ ಹೊಡೆದ ಆತ, ಹಿಂದಿನಿಂದ ನನ್ನನ್ನು ಬಲವಾಗಿ ತಬ್ಬಿಕೊಂಡ. ನಾನು ನೀರಿನಿಂದ ಎದ್ದು ಬಂದ ನಾಯಿ ಬಲವಾಗಿ ಮೈಕೊಡವುವಂತೆ ಬಲವಾಗಿ ಕೊಸರಿಕೊಂಡೆ. ಅವನಿಗೆ ಮಾತ್ರ ಕೇಳಿಸುವಂತೆ, Mind your
behaviour ಎಂದೆ. ಅದನ್ನು ಆತ ನಿರೀಕ್ಷಿಸಿರಲಿಲ್ಲ. ತಕ್ಷಣ ಒಂದು ಮೀಟರ್ ಅಂತರ ದೂರ ಸರಿದು ನಿಂತ. ಆದರೂ ಏನೇನೋ ಗೊಣಗುತ್ತಿದ್ದ. ‘ನನ್ನನ್ನು ಕ್ಷಮಿಸುಬಿಡು, ನಿನಗೆ ಅನ್ಯಾಯ ಮಾಡಿದ್ದೇನೆ’ ಎಂದು ಹೇಳುತ್ತಿದ್ದ. ನಾನು ಅದ್ಯಾವುದಕ್ಕೂ ಪ್ರತಿಕ್ರಿಯಿಸಲೇ ಇಲ್ಲ.

ಮೆಲ್ಲಗೆ ಲಗೇಜ್ ಟ್ರಾಲಿಯಿಂದ ಹಿಂದಿನಿಂದ ನನ್ನ ಕಾಲಿಗೆ ಡಿಕ್ಕಿ ಹೊಡೆದ. ನಾನು ದುರುಗುಟ್ಟಿ ನೋಡಿದೆ, ಆತ ಸುಮ್ಮನಾದ. ನನ್ನದು-ಅವನದು ಬಹಳ ವರ್ಷಗಳ ಸ್ನೇಹ. ಇಬ್ಬರ ಮಧ್ಯೆ ನಗು, ತಮಾಷೆ, ಕುಶಾಲು, ಹಾಸ್ಯ, ಚೋದ್ಯ, ಹರಟೆ, ಮಾತು, ಮಾತು, ಮಾತು ಹೊರತಾಗಿ ಮತ್ತಿನ್ನೇನೂ ಇರಲಿಲ್ಲ. ಅದೊಂದು ನವಿರಾದ ಸಂಬಂಧ. ಆದರೆ ಅದೇನಾಯಿತೋ ಏನೋ, ಆತ ಏಕಾಏಕಿ ಮುನಿಸಿಕೊಂಡ. ನನ್ನದಲ್ಲದ ತಪ್ಪಿಗೆ ನನ್ನನ್ನು ಅಪಾರ್ಥ ಮಾಡಿಕೊಂಡ. ಸಮಯ-ಸಂದರ್ಭಗಳೂ ಹಾಗೇ ಎದುರಾದವು. ನಾನು ಸಂಬಂಧವನ್ನು ರಕ್ಷಿಸಲು ಬಹಳ ಪ್ರಯತ್ನಿಸಿದೆ. ನಾನೇ ಖುದ್ದಾಗಿ ಎಲ್ಲವನ್ನೂ ವಿವರಿಸಿದೆ.

ಆದರೆ ಆತ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಅದೇನಾಯಿತೋ ಏನೋ.. ಕೆಲ ದಿನಗಳ ನಂತರ ಎಲ್ಲವೂ ಸರಿ ಹೋದವು. ನಾನೂ ನಿಟ್ಟುಸಿರುಬಿಟ್ಟೆ. ಆದರೆ ಆತ ಏಕಾಏಕಿ ಕಾಲು ಕೆರೆದು ಜಗಳಕ್ಕೆ ನಿಂತುಬಿಟ್ಟ. ಆಗ ನಾನು ಅತೀವ ಬೇಸರಪಟ್ಟುಕೊಂಡೆ. ಆಗಲೂ ಅವನನ್ನು ಭೇಟಿಯಾಗಿ ಎಲ್ಲವನ್ನೂ ವಿವರಿಸಿದೆ. ಸಮಜಾಯಿಷಿ
ನೀಡಿದೆ. ಅಗತ್ಯವಿರಲಿಲ್ಲ, ಆದರೂ ಒಂದು ಒಳ್ಳೆಯ ಗೆಳೆತನವನ್ನು ಕೈಯಾರ ಕತ್ತು ಹಿಚುಕಬಾರದು ಎಂದು ಪ್ರಯತ್ನಪಟ್ಟೆ. ಆದರೆ ಆತನಿಗೆ ಆ ಗೆಳೆತನವನ್ನು ಸಾಯಿಸುವುದೇ ಬೇಕಿತ್ತು ಎಂದೆನಿಸುತ್ತದೆ, ನಾನು ಹರಸಾಹಸ ಮಾಡಿದರೂ ಪ್ರಯೋಜ ನವಾಗಲಿಕ್ಕಿಲ್ಲ ಎಂದು ಸುಮ್ಮನಾದೆ. ನಾನು ಹೀಗೆ ಯೋಚಿಸುತ್ತಿದ್ದರೆ, ಆತ ಯಾವತ್ತೋ ಸಂಬಂಧ ಕಡಿದುಕೊಂಡು ಬಹುದೂರ ಸಾಗಿದ್ದ.

ಅದು ಅವನ ಧೋರಣೆಯಿಂದ ನನಗೆ ಮನವರಿಕೆಯಾಗಿತ್ತು. ಅಲ್ಲಿಗೆ ನಾನು ‘ಕೃಷ್ಣಾರ್ಪಣ’ ಅಂದೆ! ಯಾಕೋ ಬಹಳ ಬೇಸರವೆನಿಸಿತು. ಆದರೆ ಮುಂದೆ ಯಾವ ಮಾರ್ಗವೂ ಇರಲಿಲ್ಲ ಅಥವಾ ಇರುವ ಮಾರ್ಗಗಳೆಲ್ಲ ಬಂದ್ ಆಗಿದ್ದವು. ಅಲ್ಲಿಗೆ ನಾನು ಭಾರವಾದ ಹೃದಯದಿಂದ ಆ ಸಂಬಂಧಕ್ಕೆ ಎಳ್ಳುನೀರು ಬಿಟ್ಟೆ. ಆದರೆ ಸಂಬಂಧಗಳು ಸತ್ತರೂ ಭಾವನೆಗಳು ಸಾಯುವುದಿಲ್ಲವಲ್ಲ.. ಹಾಗಂತ ಸಂಬಂಧದ ಸಮಾಧಿಯ ಮೇಲೆ ಭಾವನೆಗಳನ್ನು ಪುನಃ ಅರಳಿಸಲೂ ಆಗುವುದಿಲ್ಲ. ಆದರೂ ನಾನು ಆ ಸಂಬಂಧದ ಸುತ್ತಮುತ್ತಲಿನ ಭಾವನೆಗಳನ್ನು ನವಿರಾಗಿಯೇ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಆದರೆ ಅತ್ತ ಕಡೆಯಿಂದ ಅದಕ್ಕೆ ವ್ಯತಿರಿಕ್ತವಾದ ಪ್ರತಿಕ್ರಿಯೆಗಳೇ ಮೂಡಿ ಬರುತ್ತಿದ್ದವು. ಹೀಗಾಗಿ ಎಳ್ಳುನೀರು ಬಿಡಬೇಕಾಗಿ ಬಂದಿತು.

ನಾವಿಬ್ಬರೂ ಒಂದೇ ವಿಮಾನವನ್ನು ಏರಿ ಕುಳಿತೆವು. ನಾನು ಮೊದಲೇ ಹೋಗಿ ಕುಳಿತಿದ್ದೆ. ಆತ ಮೇಲೆ ಲಗೇಜು ಗಳನ್ನು ಇಡಲು ಹರಸಾಹಸ ಮಾಡುತ್ತಿದ್ದ. ಏರ್ ಹೋಸ್ಟೆಸ್ ಬಂದು ಸಹಾಯ ಮಾಡದಿದ್ದರೆ, ಲಗೇಜ್
ಯಾರದ್ದಾದರೂ ಪ್ರಯಾಣಿಕರ ತಲೆ ಮೇಲೆ ಬೀಳುತ್ತಿತ್ತು. ದೇವಾ, ಆತ ನನ್ನ ಪಕ್ಕ ಕುಳಿತುಕೊಳ್ಳದಿರಲಿ ಎಂದು ನಾನು ಮನಸ್ಸಿನ ಅಂದುಕೊಳ್ಳುತ್ತಿದ್ದೆ. ಆದರೆ ಆತ ದಸಕ್ಕನೇ ನನ್ನ ಪಕ್ಕಕ್ಕೆ ಬಂದು ಕುಳಿತ. ಧರೆ ಕುಸಿದಂತಾಯಿತು.
ಹಲೋ ಅಂದ. ನಾನು ಹೇಳಲಿಲ್ಲ. ಘಮ್ ಎಂದು ವಿಸ್ಕಿ ವಾಸನೆ ಅಪ್ಪಳಿಸಿತು. ನಮ್ಮ ಸ್ನೇಹವನ್ನು ಬದುಕಿಸುವುದು ಸಾಧ್ಯವಿಲ್ಲವಾ ಎಂದು ಕೇಳಿದ. ನಾನು ಕೇಳಿಸಿಕೊಂಡರೂ ಕಲ್ಲಿನಂತೆ ಕುಳಿತಿದ್ದೆ. ವಿಮಾನ ಹಾರುವುದನ್ನೇ ಕಾಯುತ್ತಿದ್ದೆ. ನಂತರ ಮುಂದಿನ ಖಾಲಿ ಸೀಟಿನಲ್ಲಿ ಹೋಗಿ ಕುಳಿತೆ.

ಜೋರ್ಡಾನ್ ರಾಜಧಾನಿ ಅಮ್ಮಾನ್ ವಿಮಾನ ನಿಲ್ದಾಣದಲ್ಲಿ ಇಳಿದೆವು. ಇಬ್ಬರನ್ನೂ ಕರೆದುಕೊಂಡು ಹೋಗಲು
ಒಂದೇ ಕಾರು ಬಂದಿತ್ತು. ನನ್ನನ್ನು ಸ್ವಾಗತಿಸಿದ ಡ್ರೈವರ್, ‘ನಿಮ್ಮ ಜತೆ ಇನ್ನೊಬ್ಬರು ಬಂದಿರಬೇಕಲ್ಲ, ಅವರು ಬರುವ ತನಕ ಕಾಯೋಣ’ ಎಂದ. ಥತ್ ಎಂದು ಲೊಚಗುಟ್ಟಿಕೊಂಡೆ. ಮುಂದಿನ ಸೀಟಿನಲ್ಲಿ ಸೂಟ್‌ಕೇಸ್ ಇಟ್ಟಿದ್ದ ರಿಂದ ಇಬ್ಬರೂ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವುದು ಅನಿವಾರ್ಯವಾಯಿತು. ಕಾರು ವಿಮಾನ ನಿಲ್ದಾಣದಿಂದ ಹೊರಟಿತು. ಅಲ್ಲಿಂದ ಹೋಟೆಲಿಗೆ ಮುಕ್ಕಾಲು ಗಂಟೆ ಪ್ರಯಾಣ. ಇಬ್ಬರೂ ಒಂದೇ ಒಂದು ಮಾತಾಡಲಿಲ್ಲ. ನಾನು ಡ್ರೈವರ್ ಜತೆ ಮಾತಾಡುತ್ತಿದ್ದೆ. ಆತನೂ ಅವನ (ಡ್ರೈವರ್) ಜತೆಗೇ ಮಾತಾಡುತಿದ್ದ. ನಾವಿಬ್ಬರೂ ಇಪ್ಪತ್ತು ವರ್ಷ ಗಳ ಸ್ನೇಹಿತರು, ಅಕ್ಕಪಕ್ಕ ಕುಳಿತರೂ ಚಕಾರವಿಲ್ಲ. ಪರಿಚಯವಿಲ್ಲದವರೂ ಆ ಅಪರಿಚಿತ ಊರಿನಲ್ಲಿ ಸ್ನೇಹಿತ ರಾಗುತ್ತಾರೆ. ಆದರೆ ನಾವು ಅನ್ಯೋನ್ಯ ಸ್ನೇಹಿತರಾದವರು ಅವುಡುಗಚ್ಚಿ ಸುಮ್ಮನೆ ಕುಳಿತಿದ್ದೆವು.

ಹೋಟೆಲ್ ಬಂತು. ಅಲ್ಲೂ ಇಬ್ಬರದೂ ಎದುರುಬದುರು ಕೋಣೆ. ಮಾತಿಲ್ಲ ಕತೆಯಿಲ್ಲ. ನಮ್ಮನ್ನು ಆಹ್ವಾನಿಸಿದ ಗಣ್ಯರು ಇಬ್ಬರಿಗೂ ಆಪ್ತರು. ಅವರು ನಮ್ಮಿಬ್ಬರನ್ನು ತಮ್ಮ ರೂಮಿಗೆ ಊಟಕ್ಕೆ ಕರೆದರು. ನಾವು ಮೂವರು ಒಂದೇ ಟೇಬಲ್ಲಿಗೆ ಬಂದೆವು. ಎರಡು ತಾಸು ಒಟ್ಟಿಗೆ ಹರಟೆ ಹೊಡೆಯುತ್ತಾ ಊಟ ಮಾಡಿದೆವು. ನಾನು ಗಣ್ಯರ ಮುಖ ನೋಡಿ ಮಾತಾಡುತ್ತಿz. ಅವನೂ ಅವರ ಮುಖ ನೋಡಿ ಮಾತಾಡುತ್ತಿದ್ದ. ಗಣ್ಯ ಸ್ನೇಹಿತರು ಮಾತ್ರ ನಮ್ಮಿಬ್ಬರನ್ನೂ ಉದ್ದೇಶಿಸಿ ಮಾತಾಡುತ್ತಿದ್ದರು. ಅವರಿಗೆ ನಾವಿಬ್ಬರೂ ಪರಸ್ಪರ ದೂರವಾದ ಜಿಗ್ರಿ ದೋಸ್ತ್‌ಗಳು ಎಂಬುದು ಗೊತ್ತಿತ್ತೋ ಇಲ್ಲವೋ ಎಂಬುದನ್ನು ತೋರಿಸಿಕೊಳ್ಳದೇ ಮಾತಾಡಿದರು.

ಎರಡು ದಿನ ಅಮ್ಮಾನ್‌ನಲ್ಲಿ ಇಬ್ಬರೂ ಒಂದೇ ಕಾರಿನಲ್ಲಿ ತಿರುಗಾಟ. ಮಾತಿಲ್ಲ, ಕತೆಯಿಲ್ಲ. ನಮ್ಮ ಡ್ರೈವರ್ ಅಬ್ಬಾಸ್, ‘ನೀವಿಬ್ಬರೂ ಒಂದೇ ಊರಿನವರಲ್ಲವಾ? ಆದರೂ ಯಾಕೆ ಮಾತಾಡುತ್ತಿಲ್ಲ?’ ಎಂದು ಅವನಿಗೆ ಕೇಳಿಸುವಂತೆ ಪ್ರಶ್ನಿಸಿದ. ಇಬ್ಬರೂ ಏಕಕಾಲಕ್ಕೆ ಒತ್ತಾಯದ ನಗು ಬೀರಿದೆವು ಅಷ್ಟೇ. ಅಕ್ಕಪಕ್ಕ ಕುಳಿತರೂ ಇಬ್ಬರ ನಡುವೆ ಮೌನದ ಚೀನಾ ಮಹಾಗೋಡೆ!

ಮೂರನೇ ದಿನ ಅಲ್ಲಿಂದ ರಸ್ತೆ ಮಾರ್ಗವಾಗಿ ಇಸ್ರೇಲಿನ ರಾಜಧಾನಿ ಜೆರುಸಲೇಮ್‌ಗೆ ಪಯಣ. ನನಗೊಬ್ಬನಿಗೇ
ಬೇರೆ ವಾಹನ ನೀಡುವಂತೆ ವಿನಂತಿಸಿಕೊಂಡೆ ಅಥವಾ ಬೇರೆಯವರ ಜತೆ ಸೇರಿಕೊಳ್ಳುವುದಾಗಿ ಹೇಳಿದೆ. ಈತನ ಜತೆ
ಪಯಣಿಸುವುದೆಂದರೆ ಮುಳ್ಳಿನ ಮೇಲೆ ಕುಳಿತ ಅನುಭವ. ಮೂರು ದಿನಗಳಿಂದ ಅದನ್ನು ಧಾರಾಳ ಅನುಭವಿಸಿದ್ದೆ.

ಆದರೆ ಯಾರು ಯಾವ ವಾಹನದಲ್ಲಿ ಪಯಣಿಸುವುದೆಂದು ಮೊದಲೇ ನಿಗದಿಯಾದ್ದರಿಂದ, ಭದ್ರತಾ ಕಾರಣದಿಂದ ಕೊನೆ ಕ್ಷಣದಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳಿದ್ದರಿಂದ, ಮತ್ತೆ ಅವನ ಜತೆಗೆ ಪಯಣಿಸುವುದು ಅನಿವಾರ್ಯವಾಯಿತು. ಮೂರು ತಾಸು ರಸ್ತೆ ಪ್ರಯಾಣ. ನಾನು ಕಾರಿನ ಹಿಂಬದಿ ಸೀಟಿನ ಎಡಭಾಗದಲ್ಲಿ ಕಿಟಕಿಗೆ ಮುಖವಿಟ್ಟವನು ತಲೆ ಅಡಿಸಲೇ ಇಲ್ಲ. ಆತ ಆ ಅವಧಿಯಲ್ಲಿ ಏನು ಮಾಡಿದನೋ ಪರಮಾತ್ಮನೇ ಬಲ್ಲ! ಇಬ್ಬರ ಮಧ್ಯೆ ಬಾತ್ ನಹೀ, ಪುಕಾರ್ ನಹೀ.

ಈಗ ಬೇರೆ ಡ್ರೈವರ್. ನಾವಿಬ್ಬರೂ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದರೂ, ಪರಸ್ಪರ ಒಂದೇ ಒಂದು ಮಾತಾಡದಿ ರುವುದನ್ನು ಗಮನಿಸಿದ ಆತ, ‘ನೀವು ಭಾರತ-ಪಾಕಿಸ್ತಾನದವರಾ?’ ಎಂದು ಕೇಳಿದ. ನಾನು ಹೌದು-ಅಲ್ಲ ಎಂಬಂತೆ
ತಲೆಯಾಡಿಸಿದೆ. ಆತ ಡ್ರೈವರ್ ಜತೆ ಏನೇನೋ ಮಾತಾಡುತ್ತಿದ್ದ. ನಾನು ಭಾಷೆ ಬರದವನಂತೆ, ಕಿವಿ ಕೇಳದವನಂತೆ
ನಿರ್ಲಿಪ್ತನಾಗಿz. ಈ ನಡುವೆ, ಮಾರ್ಗ ಮಧ್ಯೆ ನನ್ನ ಕಾಲಿಗೆ ಅವನ ಕಾಲು ತಾಕಿತು. ಆತ sorry ಎಂದ. ನನಗೆ ಎಷ್ಟೆಂದರೂ ಭಾಷೆ ಗೊತ್ತಿಲ್ಲವ, ಕಿವಿ ಕೇಳುವುದಿಲ್ಲವಲ್ಲ.. ಜಟುಗ ದೇವರು ಕುಳಿತಿದ್ದಂತೆ ಕುಳಿತಿದ್ದೆ. ಕಾರೊಳಗಿನ
ಅಸಹನೀಯ ಮೌನಕ್ಕಿಂತ, ಹೊರಗಿನ ರಣರಣ ಮರುಭೂಮಿಯ ಬಿಸಿಬಿಸಿ ಗಾಳಿಯೇ ಹಿತವಾಗಿತ್ತು. ಒಂದು ಕಾಲದ ಆಪ್ತ ಸ್ನೇಹಿತರು ಒಂದೇ ಕಾರಿನಲ್ಲಿ, ‘ಝೂ’ದಲ್ಲಿನ ಮೊಸಳೆಗಳ ಥರಾ ಬಿದ್ದುಕೊಂಡಿದ್ದೆವು.

ಜೆರುಸಲೇಮ್ ಬಂತು. ಮತ್ತೆ ಅಲ್ಲೂ ಅಕ್ಕಪಕ್ಕದ ರೂಮು. ಐದು ದಿನ ಓಡಾಡಲು ಒಂದೇ ಕಾರು. ಪುಣ್ಯವಶಾತ್ ಆತ ಐದೂ ದಿನವೂ ರೂಮಿನಿಂದ ಹೊರಬೀಳಲೇ ಇಲ್ಲ. ನನ್ನ ಪ್ರಾರ್ಥನೆ ದೇವರಿಗೆ ಕೇಳಿಸಿತಲ್ಲ ಎಂದು ನಿಟ್ಟುಸಿರು ಬಿಟ್ಟೆ. ನಮ್ಮನ್ನು ಆಹ್ವಾನಿಸಿದ ಗಣ್ಯರು ಅಲ್ಲಿಯೂ ಒಂದು ರಾತ್ರಿ ನಮ್ಮಿಬ್ಬರನ್ನು ಊಟಕ್ಕೆ ಕರೆದರು. ಒಂದೇ ಟೇಬಲ್ಲು. ಮೂರು ಜನ. ಮಾತುಕತೆ, ಹರಟೆಯ ವಿಷಯ ಬೇರೆ, ಆದರೆ ಆ ಅಮ್ಮಾನ್ ಹೋಟೆಲಿನಲ್ಲಿ ನಡೆದ ದೃಶ್ಯಗಳ ರೀಪ್ಲೇ! ಆ ಗಣ್ಯವ್ಯಕ್ತಿ ಬಹಳ ನಾಜೂಕಿನಿಂದ ನಮ್ಮಿಬ್ಬರನ್ನು ನಿಭಾಯಿಸಿದ ರೀತಿ ಅದ್ಭುತ.
ಒಂದು ವಾರ ಒಟ್ಟಿಗೇ ಇದ್ದರೂ, ಒಂದೇ ಕಾರಿನಲ್ಲಿ ಒಟ್ಟಿಗೇ ಪಯಣಿಸಿದರೂ, ದೂರ ದೂರ ಅ ನಿಲ್ಲು ನನ್ನ
ದೇವರೇ !

‘ಇದಕ್ಕೇನಂತೀರಿ ಯೋಗಿಜೀ?’ ಎಂದೆ. ‘ಸಮಾಧಿಯಾದ ಸಂಬಂಧದ ಗೋರಿಯ ಮೇಲೆ ಗೆಳೆತನದ ಹೂವು ಅರಳುವುದಿಲ್ಲ’ ಎಂದರು.

ಇದನ್ನೂ ಓದಿ: Vishweshwar Bhat Column: ಸ್ವರ್ಗದಲ್ಲಿ ಪತ್ರಕರ್ತರಿರುವುದು ಸಾಧ್ಯವೇ ಇಲ್ಲ !