Saturday, 14th December 2024

ಹಲವು ವಿಟಮಿನ್‌ಗಳ ಜೀರ್ಣಿಕೆಗೆ ಕೊಬ್ಬು ಅವಶ್ಯಕ

ಸ್ವಾಸ್ಥ್ಯ ಸಂಪದ

Yoganna55@gmail.com

ವಿಟಮಿನ್‌ಗಳು ಗರಿಷ್ಠ ಪ್ರಮಾಣದಲ್ಲಿ ಲಭಿಸಲು ತಾಜಾ, ಹಸಿ ಆಹಾರ ಪದಾರ್ಥಗಳನ್ನು ಸೇವಿಸುವುದು ಅತ್ಯವಶ್ಯಕ. ಒಂದು ಪಕ್ಷ ಬೇಯಿಸಿದರೂ ಬೇಯಿಸಿದ ನೀರನ್ನು ಹೊರಚೆಲ್ಲದೆ ಸೇವಿಸುವುದರಿಂದ ವಿಟಮಿನ್‌ಗಳು ದೇಹಕ್ಕೆ ಲಭಿಸುತ್ತವೆ.

ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಇ ಮತ್ತು ಕೆ ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳಾಗಿವೆ. ಇವುಗಳು ಜೀರ್ಣಾಂಗದಲ್ಲಿ ರಕ್ತಗತವಾಗಲು ಆಹಾರದಲ್ಲಿ ಕೊಬ್ಬಿನ ಅಂಶ ಇರುವುದು ಅವಶ್ಯಕ. ಜಿಡ್ಡನ್ನು ಸೇವಿಸಿದರೆ, ಅದು ದೇಹಕ್ಕೆ ವಿಷ ತಪ್ಪುಕಲ್ಪನೆ ಕೆಲವರಲ್ಲಿದೆ. ಜಿಡ್ಡು ದೇಹಕ್ಕೆ ಅಲ್ಪ ಪ್ರಮಾಣದಲ್ಲಿ ಅವಶ್ಯಕ. ಅದರಲ್ಲೂ ಜಿಡ್ಡಿನಲ್ಲಿ ಕರಗುವ ಈ ವಿಟಮಿನ್‌ಗಳು ರಕ್ತಗತವಾಗಲು ಜಿಡ್ಡು ಅತ್ಯವಶ್ಯಕ. ಈ ವಿಟಮಿನ್‌ಗಳು ದೇಹದಲ್ಲಿ ಶೇಖರಣೆಯಾಗುವುದರಿಂದ ಅಂತರದಲ್ಲಿ ಇವುಗಳನ್ನು ಸೇವಿಸಬಹುದು. ಬಿ ಗುಂಪಿನ ವಿಟಮಿನ್‌ಗಳಂತೆ ಇವುಗಳನ್ನು ಪ್ರತಿನಿತ್ಯ ಸೇವಿಸುವ ಅವಶ್ಯಕತೆ ಇಲ್ಲ. ಇವು ಸಸ್ಯ ಮತ್ತು ಪ್ರಾಣಿಜನ್ಯ ಆಹಾರ ಪದಾರ್ಥಗಳಲ್ಲಿ ನೇರವಾಗಿ ಕ್ರಿಯಾತ್ಮಕ ರೂಪದಲ್ಲಿರಬಹುದು ಅಥವಾ ನಿಷ್ಕ್ರಿಯಾತ್ಮಕ ಪೂರ್ವ ವಸ್ತುವಿನ ರೂಪದಲ್ಲಿದ್ದು, ದೇಹದೊಳಗೆ ನೈಜ ಕ್ರಿಯಾತ್ಮಕ ರೂಪದ ವಿಟಮಿನ್ ಆಗಿ ಪರಿವರ್ತನೆಯಾಗಬಹುದು.

 ವಿಟಮಿನ್ ಎ ನೈಜ, ನೇರ ರೂಪದಲ್ಲಿ, ಪ್ರಾಣಿಜನ್ಯ ಆಹಾರ ಪದಾರ್ಥಗಳಲ್ಲಿ ಮಾತ್ರಇದೆ. ಈಲಿ, ಹಾಲು, ಮೊಟ್ಟೆ, ಮೀನು, ಕಾರ್ಡ್ ಲಿವರ್ ಆಯಿಲ್, ಬೆಣ್ಣೆ, ತುಪ್ಪ, ಮೊಸರು, ಮೊಟ್ಟೆಯ ಹಳದಿ, ರೀಫೈನ್ಡ್ ಎಣ್ಣೆಗಳು ಮತ್ತು ವನಸ್ಪತಿ ಇವುಗಳಲ್ಲಿ ನೈಜ ನೇರ ರೂಪದಲ್ಲಿದೆ. ವನಸ್ಪತಿ ಮತ್ತು ರೀಫೈನ್ಡ್ ಎಣ್ಣೆಗಳಿಗೆ ವಿಟಮಿನ್ ಎಅನ್ನು ಕೃತಕವಾಗಿ ಸೇರಿಸಲಾಗುತ್ತದೆ. ಇದು ಸಸ್ಯಗಳಲ್ಲಿ ಬೀಟಾ ಕೆರೋಟಿನ್ ರೂಪದಲ್ಲಿ ಮತ್ತು ಪ್ರಾಣಿಜನ್ಯ ಆಹಾರ ಪದಾರ್ಥಗಳಲ್ಲಿ ರೆಟಿನಾಲ್ ರೂಪದಲ್ಲಿದ್ದು, ಜೀರ್ಣಾಂಗದ ಸಣ್ಣ ಕರುಳಿನ ಮ್ಯೂಕಸ್ ಪದರದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆ ಯಾಗುತ್ತದೆ. ಈ ಪರಿವರ್ತನೆಯೂ ಶೇ.೨೫ರಿಂದ ೫೦ರಷ್ಟು ಮಾತ್ರ ಪರಿಪೂರ್ಣವಾಗುತ್ತದೆ.

ಸಂಬಾರಿನ ಸೊಪ್ಪು, ನುಗ್ಗೆ ಸೊಪ್ಪು, ಮಾಗಿದ ಹಣ್ಣುಗಳಾದ ಮಾವಿನ ಹಣ್ಣು, ಪರಂಗಿ, ಹಳದಿ ಕುಂಬಳಕಾಯಿ ಇವುಗಳಲ್ಲಿ ಬೀಟಾ ಕೆರೋಟಿನ್ ಅಧಿಕ ಪ್ರಮಾಣದಲ್ಲಿವೆ. ವಿಟಮಿನ್ ಎ ದೇಹದಲ್ಲಿ ಹಲವಾರು ಕಾರ್ಯಗಳಿಗೆ ಉಪಯುಕ್ತ. ಸಹಜ ಬೆಳವಣಿಗೆ ಮತ್ತು ವೃದ್ಧಿ, ಮೂಳೆಯ ಬೆಳವಣಿಗೆ, ಮೃದು ಅಂಗಾಂಶದ ಬೆಳವಣಿಗೆ, ದೃಶ್ಯ ಮತ್ತು ಕಣ್ಣಿನ ಕಾರ್ಯ, ನಿರೋಧಕ ಶಕ್ತಿಯ ಬೆಳವಣಿಗೆ, ರಕ್ತೋತ್ಪತ್ತಿ, ಶಕ್ತಿಯ ಸಮತೋಲನ ಕಾಪಾಡುವಿಕೆ, ಗರ್ಭಕೂಸಿನಲ್ಲಿ ನರಮಂಡಲದ ಬೆಳವಣಿಗೆ ಇವೆಲ್ಲಕ್ಕೂ ವಿಟಮಿನ್ ಎ ಅತ್ಯವಶ್ಯಕ.

ಪ್ರತಿನಿತ್ಯ ೬೦೦ ಮೈಕ್ರೋಗ್ರಾಂ ರೆಟಿನಾಲ್ ಅಥವಾ ೨೪೦೦ ಮೈಕ್ರೋಗ್ರಾಂ ಬೀಟಾ ಕೆರೋಟಿನ್ ಅವಶ್ಯಕ. ವಿಟಮಿನ್ ಎ ಕೊರತೆಯಿಂದಾಗಿ ಬೆಳವಣಿಗೆಯ ನ್ಯೂನತೆ, ಕಣ್ಣಿನ ಮತ್ತು ದೃಶ್ಯ ಸಮಸ್ಯೆಗಳು, ಚರ್ಮ ತೊಂದರೆಗಳು ಮತ್ತು ನಿರೋಧಕತ್ವದ ಕೊರತೆಗಳುಂಟಾಗುತ್ತವೆ. ರಾತ್ರಿ ಕುರುಡು, ಕಣ್ಣೀರು ಕಡಿಮೆಯಾಗುವಿಕೆ, ಬರಡುಗಣ್ಣುಗಳು, ಕಾರ್ನಿಯಾ ಬರಡಾಗುವಿಕೆ ಮತ್ತು ತದನಂತರ ಶಿಥಿಲವಾಗಿ ಶಾಶ್ವತ ಅಂಧತ್ವ ವುಂಟಾಗುತ್ತದೆ. ಚರ್ಮ ಬರಡಾಗುವಿಕೆ, ನೆರಿಗೆ ಕಟ್ಟುವಿಕೆ, ದಪ್ಪ ನಾಗುವಿಕೆ ಮತ್ತು ಕೂದಲುದುರುವಿಕೆ ತೊಂದರೆಗಳುಂಟಾಗುತ್ತವೆ. ಎದೆ ಮೂಳೆಗಳಲ್ಲಿ ಬೆಳವಣಿಗೆಯ ಅವ್ಯವಸ್ಥೆಗಳು ಕಂಡು ಬರುತ್ತವೆ.

ಕಣ್ಣು, ಮೂಗು, ಮೂತ್ರ ದ್ವಾರಗಳು, ಶ್ವಾಸಕೋಶಗಳು, ಕಿವಿ, ಸೈನಸ್‌ಗಳಲ್ಲಿ ಸೋಂಕುಗಳುಂಟಾಗುತ್ತವೆ. ವಿಟಮಿನ್ ಎ ಅನ್ನು ಚುಚ್ಚುಮದ್ದಾಗಿ
ನೀಡುವುದರಿಂದ, ಇದರ ಕೊರತೆಯನ್ನು ನೀಗಿಸಲಾಗುತ್ತದೆ. ವಿಟಮಿನ್ ಎ ಅನ್ನು ಅಧಿಕ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ತಲೆನೋವು,
ವಾಂತಿ, ಪ್ರಜ್ಞಾ ಅವ್ಯವಸ್ಥೆಗಳುಂಟಾಗುತ್ತವೆ. ನಿಲ್ಲಿಸಿದಲ್ಲಿ ಸಹಜ ತೊಂದರೆಗಳು ಇಲ್ಲವಾಗುತ್ತವೆ.

ವಿಟಮಿನ್ ಡಿ
ವಿಟಮಿನ್ ಡಿಯಲ್ಲಿ ಕೋಲೀಕ್ಯಾಲ್ಸಿ-ರಾಲ್ (ವಿಟಮಿನ್ ಡಿ೩), ಕ್ಯಾಲ್ಸಿ ಡಯಾಲ್(೨೫- ಹೈಡ್ರಾಕ್ಸಿ ವಿಟಮಿನ್ ಡಿ೩), ಕ್ಯಾಲ್ಸಿ ಟ್ರಯಾಲ್
(೧,೨೫-ಡೈ ಹೈಡ್ರಾಕ್ಷಿ ವಿಟಮಿನ್ ಡಿ೩) ಮತ್ತು ಇಗೋರ್ ಕ್ಯಾಲ್ಸಿ -ರಾಲ್ ಎಂಬ ೪ ವಿಧಗಳಿವೆ. ಕೋಲಿಕ್ಯಾಲ್ಸಿ -ರಾಲ್ ಸಹಜವಾಗಿ ಆಹಾರ
ಪದಾರ್ಥಗಳಲ್ಲಿ ಮತ್ತು ಸೂರ್ಯನ ಬೆಳಕಿನಿಂದ ಚರ್ಮದಲ್ಲಿ ಉತ್ಪತ್ತಿಯಾಗುತ್ತದೆ ಹಾಗೂ ವನಸ್ಪತಿ ಎಣ್ಣೆ ಮತ್ತು ಕೃತಕ ಪಾನೀಯಗಳಿಗೆ ಇದನ್ನು
ಸೇರಿಸಿ ಅವುಗಳ ಪೌಷ್ಠಿಕತೆಯನ್ನು ಹೆಚ್ಚಿಸಲಾಗುತ್ತದೆ.

ಕ್ಯಾಲ್ಸಿ ಡಯಾಲ್ ದೇಹದೊಳಗೆ ಈಲಿಯಲ್ಲಿ ಕೋಲಿ ಕ್ಯಾಲ್ಸಿ -ರಾಲ್‌ನಿಂದ ತಯಾರಾಗಿ ರಕ್ತದಲ್ಲಿ ಲಭ್ಯವಿದ್ದು, ಇದರ ಪ್ರಮಾಣವನ್ನು ಅಳೆದು
ವಿಟಮಿನ್ ಡಿ ಕೊರತೆಯನ್ನು ನಿರ್ಧರಿಸಲಾಗುತ್ತದೆ. ಇದು ಪೂರ್ವ ಹಾರ್ಮೋನ್ ಆಗಿದ್ದು, ಈಲಿ ಮತ್ತು ಅಂಗಾಂಶಗಳಲ್ಲಿ ಕ್ರಿಯಾತ್ಮಕ ರೂಪದ
ಹಾರ್ಮೋನ್ ಆದ ಕ್ಯಾಲ್ಸಿ ಟ್ರಯಾಲ್ ಆಗಿ ಪರಿವರ್ತನೆ ಹೊಂದುತ್ತದೆ. ಇದು ಅತ್ಯಂತ ಪರಿಣಾಮಕಾರಿಯಾದ ಕ್ರಿಯಾಶೀಲ ರೂಪದ ವಿಟಮಿನ್ ಡಿ. ಇಗೋರ್ ಕ್ಯಾಲ್ಸಿ-ರಾಲ್ ಲ್ಯಾಬೋರೇಟರಿಯಲ್ಲಿ ಫಂಗಸ್‌ನಿಂದ ತಯಾರು ಮಾಡುವ ವಿಟಮಿನ್ ಡಿ ಕೊರತೆಯಿದ್ದಲ್ಲಿ, ವೈದ್ಯರ ಸಲಹೆ ಮೇರೆಗೆ ನೀಡಲಾಗುವ ವಿಟಮಿನ್ ಡಿ ಇದು. ಚರ್ಮ ಸೂರ್ಯನ ಬೆಳಕಿನ ಅಲ್ಟ್ರಾ ವೈಲೆಟ್ ಬಿ ಕಿರಣಗಳ ಜೊತೆ ಸ್ಪರ್ಶಿಸಿದಾಗ ಚರ್ಮದಲ್ಲಿರುವ ೭-ಡಿ ಹೈಡ್ರಾಕ್ಷಿ ಕೊಲೆಸ್ಟ್ರಾಲ್ ವಿಟಮಿನ್ ಡಿ೩ ಆಗಿ ಪರಿವರ್ತನೆ ಹೊಂದುತ್ತದೆ.

ಸೂರ್ಯನ ಎಲ್ಲಾ ಅವಽಯ ಕಿರಣಗಳು ಈ ಕಾರ್ಯದಲ್ಲಿ ಪರಿಣಾಮಕಾರಿಯಾದರೂ ೧೦-೧೨ಗಂಟೆ ವೇಳೆಯ ಕಿರಣಗಳು ಅತ್ಯಂತ ಪರಿಣಾಮ ಕಾರಿ. ಪ್ರತಿನಿತ್ಯ ಕನಿಷ್ಠ ೨೦ರಿಂರ ೩೦ನಿಮಿಷಗಳ ಕಾಲ ಬರಿ ಮೈಯನ್ನು ಸೂರ್ಯನ ಕಿರಣಗಳಿಗೆ ಒಡ್ಡುವುದರಿಂದ ಪ್ರತಿನಿತ್ಯ ಅವಶ್ಯಕವಿರುವ ವಿಟಮಿನ್ ಡಿ ಅನ್ನು ಪಡೆಯಬಹುದು. ಮೊಟ್ಟೆ, ಮೀನಿನ ಎಣ್ಣೆ, ಈಲಿ, ಕೆಂಪು ಮಾಂಸ, ಮೊಟ್ಟೆ ಹಳದಿ, ಕಿತ್ತಳೆ, ಬಾದಾಮಿ, ಅಣಬೆ, ಡೈರಿ ಹಾಲು ಮತ್ತು ಉತ್ಪನ್ನಗಳು ಇವುಗಳಲ್ಲಿ ಇದು ಅಧಿಕ ಪ್ರಮಾಣದಲ್ಲಿ ಲಭ್ಯ.

ರಕ್ತದಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಪರೆಸ್‌ಗಳ ಸಮತೋಲನವನ್ನು ಕಾಪಾಡಿ ಮೂಳೆಯ ಬೆಳವಣಿಗೆಯನ್ನು ಪ್ರೋತ್ಸಾಹಿಸುವಲ್ಲಿ ಸಹಕಾರಿ ಯಾಗುತ್ತದೆ. ಪ್ಯಾರಾ ಥೈರಾಯಿಡ್ ಹಾರ್ಮೋನ್ ಮತ್ತು ಕ್ಯಾಲ್ಸಿಟೋನಿನ್ ಹಾರ್ಮೋನ್‌ಗಳ ಜೊತೆಗೂಡಿ ದೇಹದ ಕ್ಯಾಲ್ಸಿಯಂ ಮತ್ತು ಫಾಸ್ಪರಸ್‌ಗಳ ಪ್ರಮಾಣಗಳನ್ನು ನಿಯಂತ್ರಿಸಿ, ಮೂಳೆಗಳ ಬೆಳವಣಿಗೆಗೆ ಸಹಕಾರಿ. ಪ್ರತಿನಿತ್ಯ ೧೦ ಮೈಕ್ರೋಗ್ರಾಂ ಅಥವಾ ೪೦೦ ಅಂತಾರಾಷ್ಟ್ರ
ಯೂನಿಟ್‌ಗಳು ದೇಹವನ್ನು ಬಿಸಿಲು ಅವಶ್ಯಕ. ಇದರ ಕೊರತೆಯಿರುವ ಮಕ್ಕಳಲ್ಲಿ ರಿಕೆಟ್ಸ್ ಕಾಯಿಲೆ ಉಂಟಾಗುತ್ತದೆ. ಕುಗ್ಗಿದ ಬೆಳವಣಿಗೆ, ಮೂಳೆಗಳ ವಕ್ರತೆ ಕಾಲುಗಳು ಬಾಗುವಿಕೆ, ಎದೆ ರಿಬ್‌ಗಳಲ್ಲಿ ಗೆಡ್ಡೆಗಳು, ಕೀಲುಗಳ ಊತ ಮತ್ತು ತಲೆಬುರುಡೆಯ ಅವ್ಯವಸ್ಥೆಗಳು, ಹಲ್ಲುಗಳ ಬೆಳವಣಿಗೆಯಾಗದಿರುವಿಕೆ ಮತ್ತು ಅವುಗಳಲ್ಲಿ ತೂತುಗಳಿರುವಿಕೆ ಇವು ರಿಕೆಟ್ಸ್ ಕಾಯಿಲೆಯ ಪ್ರಮುಖ ಲಕ್ಷಣಗಳು.

ವಯಸ್ಕರಲ್ಲಿ ಇದರ ಕೊರತೆಯಿಂದ ಆಸ್ಟಿಯೋ ಮಲೇಷಿಯಾ (ಮೂಳೆಗಳ ಶಿಥಿಲತೆ) ಉಂಟಾಗಿ ಮೂಳೆಗಳಲ್ಲಿ ನೋವು, ಬಹುಬೇಗ ಮುರಿಯುವಿಕೆ, ಬಾಗುವಿಕೆಗಳುಂಟಾಗಬಹುದು. ಇದನ್ನು ಹೆಚ್ಚಾಗಿ ಸೇವಿಸುವುದರಿಂದ ವಿಷಮತೆಯ ಲಕ್ಷಣಗಳುಂಟಾಗಿ ಮಾನಸಿಕ ತಳಮಳ, ವಾಂತಿ, ಮಲಬದ್ಧತೆ
ತೊಂದರೆಗಳು ಉಂಟಾಗುತ್ತವೆ. ವಿಟಮಿನ್ ಡಿ ಕೊರತೆಯಿಂದ ಪ್ಯಾಂಕ್ರಿಯಾಸ್ ಗ್ರಂಥಿ ನಾಶವಾಗಿ ಸಕ್ಕರೆಕಾಯಿಲೆಗೂ ಕಾರಣವಾಗಬಹುದು ಎನ್ನಲಾಗಿದೆ.

ದೇಹದ ಎಲ್ಲ ಜೀವಕೋಶಗಳ ಒಟ್ಟಾರೆ ಆರೋಗ್ಯಸ್ಥಿತಿಗೆ ವಿಟಮಿನ್ ಡಿ ಅತ್ಯವಶ್ಯಕವಾಗಿದ್ದು, ಇದರ ಕೊರತೆಯಿಂದ ಜೀವಕೋಶಗಳ ಚಯಾಪಚಯ ಕ್ರಿಯೆಯಲ್ಲಿ ಅವ್ಯವಸ್ಥೆ ಉಂಟಾಗಿ ಹಲವಾರು ಬಗೆಯ ಕಾಯಿಲೆಗಳಿಗೆ ಕಾರಣವಾಗಬಹುದು ಎನ್ನಲಾಗಿದೆ.

ವಿಟಮಿನ್ ಇ(ಆಲ್ಫಾ- ಟೋಕೋ ಫೆರಾಲ್)

ಇದು ದೇಹದ ಅಂಗಾಂಶಗಳು ನಾಶವಾಗುವುದನ್ನು ತಡೆಗಟ್ಟುತ್ತದೆ. ಜೀವಕೋಶಗಳ ಪದರದಲ್ಲಿರುವ ಜಿಡ್ಡಿನಾಮ್ಲಗಳನ್ನು ನಾಶದಿಂದ ರಕ್ಷಿಸಿ
ಅವುಗಳ ಅನಾರೋಗ್ಯವನ್ನು ತಡೆಗಟ್ಟುತ್ತದೆ. ದೇಹದೊಳಗೆ ಪರಿಣಾಮಕಾರಿಯಾದ ಆಂಟಿಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸಿ ಕ್ಯಾನ್ಸರ್ ಮತ್ತಿತರ
ಕಾಯಿಲೆಗಳ ಉತ್ಪತ್ತಿಯನ್ನು ತಡೆಗಟ್ಟುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸಾಮಾನ್ಯ ಆರೋಗ್ಯ ಸ್ಥಿತಿಯನ್ನು ವೃದ್ಧಿಸುತ್ತದೆ.
ಇದು ಜಿಡ್ಡಿನಾಮ್ಲಗಳನ್ನು ರಕ್ಷಿಸುತ್ತದೆ. ಇದರ ಕೊರತೆ ಸಂತಾನಹೀನತೆಗೂ ಕಾರಣವಾಗಬಹುದು ಎನ್ನಲಾಗಿದೆ. ಸಸ್ಯಜನ್ಯ ಎಣ್ಣೆಗಳಲ್ಲಿ, ಸೊಪ್ಪುಯುಕ್ತ ತರಕಾರಿಗಳು, ಹಾಲು, ಮೊಟ್ಟೆ, ಮಾಂಸ ಮತ್ತು ಮೀನುಗಳಲ್ಲಿ ಸಹಜವಾಗಿ ಲಭಿಸುತ್ತದೆ.

ಇದು ಬಹುಪಾಲು ಎಲ್ಲ ಆಹಾರ ಪದಾರ್ಥಗಳಲ್ಲೂ ಲಭಿಸುವುದರಿಂದ ಇದರ ಕೊರತೆ ಅಪರೂಪ. ರಕ್ತದಲ್ಲಿ ಇದರ ಸಹಜ ಪ್ರಮಾಣ ೦.೫ ಮಿ.ಗ್ರಾಂ/
ಕೆ.ಜಿ./ಎಂ.ಎಲ್. ವಿಟಮಿನ್ ಕೆ ಇದು ರಕ್ತ ಹೆಪ್ಪುಗಟ್ಟುವ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತ ಹೆಪ್ರೋತ್ಪತ್ತಿಗೆ ಅವಶ್ಯಕವಾದ ಪ್ರೋಥ್ರಾಂಬಿನ್ ಈಲಿಯಲ್ಲಿ ಉತ್ಪತ್ತಿಯಾಗಲು ವಿಟಮಿನ್ ಕೆ ಅತ್ಯವಶ್ಯಕ. ಹಸಿರು ಎಲೆಯುಳ್ಳ ತರಕಾರಿಗಳಲ್ಲಿ ಇದು ಯಥೇಚ್ಛವಾಗಿ ಲಭಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಬ್ಯಾಕ್ಟೀರಿಯಾಗಳಿಂದಲೂ ಸಹ ಇದು ತಯಾರಾಗುತ್ತದೆ.

ದೀರ್ಘಕಾಲ ಆಂಟಿಬಯಾಟಿಕ್‌ಗಳನ್ನು ಉಪಯೋಗಿಸುವವರಲ್ಲಿ ಸಹಜ ಬ್ಯಾಕ್ಟೀರಿಯಾಗಳು ಕೊಲ್ಲಲ್ಪಟ್ಟು ಇದರ ಕೊರತೆಯುಂಟಾಗುತ್ತದೆ. ಇದರ ಕೊರತೆಯಿಂದ ರಕ್ತಸ್ರಾವಗಳುಂಟಾಗುತ್ತವೆ. ೦.೫-೧ಮಿ.ಗ್ರಾಂ ವಿಟಮಿನ್ ಕೆ ಅನ್ನು ಚುಚ್ಚುಮದ್ದಾಗಿ ಸ್ನಾಯುವಿಗೆ ನೀಡುವುದರಿಂದ ಇದರ ಕೊರತೆಯನ್ನು ಸರಿದೂಗಿಸಲಾಗುತ್ತದೆ. ಹುಟ್ಟುವ ಮಕ್ಕಳಲ್ಲಿ ಈ ವಿಟಮಿನ್ ಶೇಖರಣೆ ಇಲ್ಲದಿರುವುದರಿಂದ ಹುಟ್ಟಿದ ತಕ್ಷಣ ಎಲ್ಲ ಮಕ್ಕಳಿಗೂ ಇದನ್ನು
ನೀಡಲಾಗುತ್ತದೆ. ಅಲ್ಪ ಪ್ರಮಾಣದಲ್ಲಿ ಈ ವಿಟಮಿನ್ ಈಲಿ ಮತ್ತು ಜಿಡ್ಡಿನ ಅಂಗಾಂಶಗಳಲ್ಲಿ ಶೇಖರಣೆಯಾಗುತ್ತದೆ.

ಒಂದೊಂದು ಆಹಾರ ಪದಾರ್ಥದಲ್ಲಿ ಒಂದೊಂದು ವಿಟಮಿನ್‌ಗಳು ಇದ್ದು, ಪ್ರತಿನಿತ್ಯ ವಿಭಿನ್ನ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ದೇಹಕ್ಕೆ ಅವಶ್ಯಕವಾದ ಎಲ್ಲ ವಿಟಮಿನ್‌ಗಳು ಲಭಿಸುವಂತಾಗಿಸಿಕೊಳ್ಳಬಹುದು. ವಿಟಮಿನ್‌ಗಳು ಗರಿಷ್ಠ ಪ್ರಮಾಣದಲ್ಲಿ ಲಭಿಸಲು ತಾಜಾ, ಹಸಿ ಆಹಾರ ಪದಾರ್ಥಗಳನ್ನು ಸೇವಿಸುವುದು ಅತ್ಯವಶ್ಯಕ. ಒಂದು ಪಕ್ಷ ಬೇಯಿಸಿದರೂ ಬೇಯಿಸಿದ ನೀರನ್ನು ಹೊರಚೆಲ್ಲದೆ ಸೇವಿಸುವುದರಿಂದ ವಿಟಮಿನ್‌ಗಳು ದೇಹಕ್ಕೆ ಲಭಿಸುತ್ತವೆ. ವಿಟಮಿನ್‌ಗಳು ಪ್ರತಿನಿತ್ಯ ಅವಶ್ಯಕವಿರುವುದರಿಂದ ಹಾಗೂ ಇವು ಹಸಿ ತರಕಾರಿಗಳು ಹಣ್ಣುಗಳು ಮತ್ತು ಹಾಲಿನಲ್ಲಿ ಬಹುಪಾಲು ಎಲ್ಲ ವಿಟಮಿನ್ ಗಳು ಲಭ್ಯವಿರುವುದರಿಂದ ಪ್ರತಿನಿತ್ಯ ಈ ಆಹಾರ ಪದಾರ್ಥಗಳನ್ನು ತಪ್ಪದೆ ಸೇವಿಸಿದಲ್ಲಿ ವಿಟಮಿನ್
ಗಳ ಕೊರತೆ ಉಂಟಾಗುವುದಿಲ್ಲ.

ವಿಟಮಿನ್‌ಗಳ ಕೊರತೆಯಿಂದುಂಟಾಗುವ ತೊಂದರೆಗಳು ಪ್ರಾರಂಭದಲ್ಲಿ ಮಂದಗತಿಯಾದುದರಿಂಂದ ಗಮನಕ್ಕೆ ಬಾರದೆ ದೇಹದ ಅಂಗಾಂಗಗಳು
ನಿಧಾನವಾಗಿ ಜಖಂಗೊಂಡು ಗಂಭೀರ ಸ್ವರೂಪ ತಲುಪದ ನಂತರ ತೊಂದರೆಗಳುಂಟಾಗುವುದರಿಂದ ಅಲ್ಲಿಯತನಕ ಕಾಯುವುದು ಸೂಕ್ತವಲ್ಲ.
ವಿಟಮಿನ್‌ಗಳ ಕೊರತೆಯನ್ನು ಸರಿದೂಗಿಸಲು ವಿಟಮಿನ್ ಮಾತ್ರೆಗಳ ಮೊರೆ ಹೋಗುವ ಬದಲು ನೈಜ ಆಹಾರ ಪದಾರ್ಥಗಳ ಮೂಲಕ ಇವುಗಳನ್ನು ಪಡೆಯುವುದು ಸೂಕ್ತ.