ತನ್ನಿಮಿತ್ತ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ವಿವೇಕಾನಂದರ ಹೆಸರೇ ಒಂದು ರೋಮಾಂಚನ. ‘ವಿವೇಕಾಂನದರ ಕ್ರಾಂತಿಕಾರಿ ವಿಚಾರಗಳಿಗೆ ಜನಮನದಲ್ಲಿರುವ ಮೌಢ್ಯದ ಕಾರ್ಗತ್ತಲೆಯನ್ನು ತೊಲಗಿಸಿ ಜ್ಞಾನದ ಬೆಳಕನ್ನು ಹರಡುವ ಶಕ್ತಿಯಿದೆ.’
ಇಂದು ಸಮಾಜ ಅದರಲ್ಲೂ ವಿಶೇಷವಾಗಿ ಯುವಜನತೆ ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಅನೇಕರು ಭಾರತದ ಸ್ವಾತಂತ್ರ್ಯದ ಮೂಲ ಸೂರ್ತಿ ವಿವೇಕಾನಂದರ ಸಂದೇಶದಿಂದ ಪ್ರೇರಿತವಾದ ಆಂದೋಲನ ದಲ್ಲಿದೆ ಎಂದು ಭಾವಿಸುತ್ತಾರೆ. ಅದು ಸತ್ಯವೂ ಹೌದು. ‘ಸ್ವಾಮೀಜಿಯವರು ತೋರಿದ ಮಾರ್ಗ ಯುವಕರಿಗೆ ದಾರಿದೀಪವಾಗಬೇಕು’.
ಅವರು ದೇಶದ ಜನರಿಗಿತ್ತ ಸಂದೇಶ ಏಳಿ! ಎದ್ದೇಳಿ! ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಅವರ ಕರೆಯನ್ನು ಜನರು ಆಲಿಸಿ ದರು. ಜನರು ಅವರ ಕರೆಗೆ ಓಗೊಟ್ಟು ದರಿಂದ ದೊಡ್ಡ ಜಾಗ್ರತೆ ಪ್ರಾರಂಭವಾಯಿತು. ತೀವ್ರ ಚಟುವಟಿಕೆಯ ಕಾಲ ಬಂದಿತು. ಸಾವಿರಾರು ಪುರುಷರು, ಮಹಿಳೆಯರು, ಬಡವರು ವಿವೇಕಾನಂದರು ಆಡಿದ ಮಾತುಗಳಿಂದ, ಬರೆದ ಬರಹಗಳಿಂದ ಪ್ರೇರೇಪಿತ ದರು. ಅವರು ನಡೆಸಿದ ಜೀವನ ಶೈಲಿ ದಕ್ಷತೆ ಮತ್ತು ಸಕರಾತ್ಮಕ ಚಿಂತನೆ ಇಂದಿನ ಯುವಕರಿಗೆ ಮಾರ್ಗದರ್ಶನ ವಾಗಬೇಕು ಎಂಬುದನ್ನು ನಾವು ದೃಢವಾಗಿ ನಂಬಬೇಕು.
‘ಈ ಜಗತ್ತಿಗೆ ಬಂದುದಕ್ಕೆ ಗುರುತೊಂದನ್ನು ಬಿಟ್ಟು ಹೋಗು ಇತರರಿಗಾಗಿ ಬದುಕುವ ಬದುಕು ನಿಜ ಬದುಕು’ ಎಂಬ ಅವರ ಸಂದೇಶಕ್ಕೆ ಎಷ್ಟೋ ಯುವ ಜನರು ಪ್ರಭಾವಿತರಾದರು. ಸ್ವಾಮಿ ವಿವೇಕಾನಂದರು ಶತ ಶತಮಾನಗಳನ್ನು ಪ್ರಭಾವಿಸಿದ ವ್ಯಕ್ತಿ.
ಅಂದಿಗೂ ಇಂದಿಗೂ ಎಂದೆಂದಿಗೂ ಪ್ರಭಾವಶಾಲಿಯಾದ ಮಹಾನ್ ಸಂತ ಮತ್ತು ಮೇಧಾವಿ. ತನ್ನ ತಾಯ್ನಾಡು ಭಾರತವನ್ನು ಅಧ್ಯಾತ್ಮ, ಸಾಮರಸ್ಯ ಮತ್ತು ಸಮೃದ್ಧ ಸಂಸ್ಕ ತಿಯ ತವರೂ ರೆಂದು ಬಣ್ಣಿಸಿ ದೇಶದ ಪ್ರತಿಷ್ಠೆಯನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಉನ್ನತ ಮಟ್ಟಕ್ಕೇರಿಸಿ ಧರ್ಮ ಜಾಗೃತಿಗೂ ಯುವ ಜನರ ಏಳಿಗೆಗೂ ಶ್ರಮಿಸಿದವರು ಸ್ವಾಮಿ ವಿವೇಕಾನಂದರು.
1892ರ ಸೆಪ್ಟೆಂಬರ್ 11ರಂದು ಅಮೆರಿಕಾದ ಶಿಕಾಗೋ ನಗರದ ಸರ್ವ ಧರ್ಮ ಸಮ್ಮೇಳನದಲ್ಲಿ ಪ್ರಪಂಚದ ಸಮಸ್ತ ಧರ್ಮಗಳ ಮೂಲ ತತ್ವಗಳನ್ನು ಭಾರತದ ಧರ್ಮದೊಂದಿಗೆ ಹೋಲಿಸಿ ಧಾರ್ಮಿಕ ಸಮನ್ವತೆಯನ್ನು ಪರಿಚಯಿಸಿದರು. ಎಲ್ಲಾ ಧರ್ಮಗಳು ಬೋಧಿಸುವುದು ಸತ್ಯ ಧರ್ಮವೆಂದು ಭಾಷಣ ಪ್ರಾರಂಭಿಸಿ ಪ್ರತಿಪಾದಿಸಿ, ಸಮರ್ಥಿಸಿಕೊಂಡರು. ವಿಶ್ವವೇ ನಿಬ್ಬೆರಾಗುವಂತೆ ಮಾಡಿದರು.
ಪಾಶ್ಚಾತ್ಯ ಜನರು ಭಾರತದ ಮೇಲೆ ಹೊಂದಿದ್ದ ತಿರಸ್ಕಾರ ಮನೋಭಾವನೆಗೆ ತಮ್ಮ ಪರಧರ್ಮ ಸಹಿಷ್ಣುತೆಯೆಂಬ ಪ್ರತಿಪಾದನೆ ಯಿಂದ ಉತ್ತರಿಸಿದ ರೀತಿ ರೋಮಾಂಚನವಾಗಿತ್ತು. ಭಾರತದ ಭವ್ಯ ಪರಂಪರೆ ಮತ್ತು ಅಸ್ಮಿತೆಗೆ ಕೈಗನ್ನಡಿಯಾಯಿತು. ಇಡೀ ವಿಶ್ವವೇ ಪ್ರಶಂಸಿಸಿತು. ವಿವೇಕಾನಂದರ ಕೆಲವು ವಿವೇಕ ವಾಣಿಗಳನ್ನು ಮತ್ತು ಅವರು ಹೇಳಿದ ಅಣಿ ಮುತ್ತುಗಳನ್ನು ಯುವ ಜನತೆ ಮನದಟ್ಟು ಮಾಡಿಕೊಂಡರೆ ರಾಷ್ಟ್ರೀಯ ಭಾವೈಕ್ಯತೆ ಮತ್ತು ಧಾರ್ಮಿಕ ಸ್ವಾತಂತ್ರ್ಯ ಮತ್ತು ಭವಿಷ್ಯಕ್ಕೆ ಪುಷ್ಠಿ ನೀಡಿ ದಂತಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ವಿವೇಕಾನಂದರು ಯಾವತ್ತೂ ಪರಧರ್ಮ ದ್ವೇಷವನ್ನು ಇಷ್ಟಪಟ್ಟವರಲ್ಲ. ಬದಲಾಗಿ ಪರಧರ್ಮ ಸಹಿಷ್ಣುತೆಯನ್ನು ಪ್ರತಿಪಾ ದಿಸಿದವರು. ‘ಬಾಳಲು ಯೋಗ್ಯವಾದುದು ಪ್ರೇಮ ದ್ವೇಷವಲ್ಲ ವೆಂದು ಸಾರಿದ ಮಹಾನ್ ಸಂತ’. ಜಾತಿ, ಮತ, ವರ್ಣ ಮತ್ತು ವಿವಿಧ ವರ್ಗಗಳನ್ನು ಏಕ ಚಿತ್ತದಿಂದ ಸ್ವೀಕರಿಸಿದ ಮಹಾನ್ ವ್ಯಕ್ತಿ ಎಂಬುದು ಭಾರತೀಯ ರಾದ ನಮಗೆ ಹೆಮ್ಮೆಯ ವಿಚಾರವೇ ಸರಿ. ಇದೀಗ ನಾವು ಪರರ ಧಾರ್ಮಿಕ ನಂಬಿಕೆಗಳನ್ನು ಸಹಾನು ಭೂತಿಯಿಂದ ನೋಡ ಬೇಕಾಗಿರುವುದು ಅತ್ಯವಶ್ಯಕ ಮತ್ತು ಪರಮತ ಸಹಿಷ್ಣುತೆ ನಮ್ಮ ಪ್ರಥಮ ಅದ್ಯತೆಯಾಗಬೇಕು.
ಹಿಂದೂ ಧರ್ಮದ ಬಗ್ಗೆ ವಿವೇಕಾ ನಂದರ ನಿಲುವು ಮತ್ತು ವಿಚಾರಗಳನ್ನು ಅವಲೋಕಿಸುವಾಗ ಅವರ ಸಕಾರಾತ್ಮಕ ಮತ್ತು
ನಕಾರಾತ್ಮಕ ಅನುಭವವನ್ನು ಬಿಚ್ಚಿಟ್ಟಿದ್ದರು. ಪ್ರಪಂಚದ ಯಾವ ಧರ್ಮವೂ ಹಿಂದೂ ಧರ್ಮ ದಷ್ಟು ಭವ್ಯವಾಣಿ ಯಲ್ಲಿ
ಮನುಷ್ಯತ್ವದ ಘನತೆಯನ್ನು ಬೋಧಿಸುವುದಿಲ್ಲ ಎಂದ ಅವರು ಅದೇ ಸಂದರ್ಭದಲ್ಲಿ ಪ್ರಪಂಚದ ಯಾವ ಧರ್ಮವೂ ದೀನ ದಲಿತರ ಕುತ್ತಿಗೆಯನ್ನು ಹಿಂದೂ ಧರ್ಮದಷ್ಟು ಕ್ರೂರವಾಗಿ ತುಳಿಯುವುದಿಲ್ಲ ಎಂಬ ಕಟು ಸತ್ಯವನ್ನು ಹೇಳಿದ್ದರು.
ಅದಕ್ಕೆ ತಪ್ಪು ಹಿಂದೂ ಧರ್ಮದ್ದಲ್ಲ, ಬದಲಾಗಿ ಅಲ್ಲಿರುವ ಸಂಪ್ರದಾಯಸ್ಥರು ಪಾರಮಾರ್ಥಿಕ ಮತ್ತು ವ್ಯವಹಾರಿಕ ಎಂದು ನಾನಾ ರೀತಿಯ ಕ್ರೂರ ವಿಧಾನಗಳನ್ನು ಸೃಷ್ಟಿಸುವ ಠಕ್ಕರು ಎಂದು ಅತ್ಯಂತ ಸ್ವಷ್ಟವಾಗಿ ಹೇಳಿದ್ದಾರೆ. ವಿವೇಕಾನಂದರು ಧರ್ಮವೆಂದರೆ ಸಾಮಾಜಿಕ ಪೂಜೆಗೆ ಹೋಗುವುದಲ್ಲ. ಅದು ಗ್ರಂಥದಲ್ಲಿಲ್ಲ, ಮಾತಿನಲ್ಲಿಲ್ಲ, ಉಪವಾಸ ದಲ್ಲಿಲ್ಲ.
‘ಧರ್ಮವೆಂದರೆ ಸಾಕ್ಷಾತ್ಕಾರ ಎಂದು ಪ್ರತಿಪಾದಿಸಿದ್ದರು’ ಎಲ್ಲಾ ಧರ್ಮಗಳ ಜತೆ ಅನುಸಂಧಾನಿಸಿ ತನ್ನದೇ ನಿಲುವು ಗಳಿಗೆ
ತಲುಪಿದ ವಿವೇಕಾನಂದರು ಯಾವತ್ತೂ ಅನ್ಯ ಧರ್ಮ ದ್ವೇಷಕ್ಕೆ ಎಡೆಮಾಡಲಿಲ್ಲ. ಬದಲಾಗಿ ಧಾರ್ಮಿಕ ಸೌಹಾರ್ದಕ್ಕೆ ಆದ್ಯತೆ
ನೀಡಿದರು. ನಮ್ಮ ದೇಶದಲ್ಲಿ ಇಂದಿಗೂ ನಡೆಯುತ್ತಿರುವ ಕೋಮು ಘರ್ಷಣೆಯ ಸನ್ನಿವೇಶಗಳಿಗೆ ವಿವೇಕಾನಂದರ ವಿಚಾರಧಾರೆ
ಅತ್ಯಂತ ಪ್ರಸ್ತುತವೂ ಮಾನವೀಯವೂ ಆಗಿದೆ. ಧಾರ್ಮಿಕ ಸೌಹಾರ್ದ ಮತ್ತು ಸಹಿಷ್ಣುತೆಯ ವಿಷಯವಷ್ಟೇ ಅಲ್ಲದೇ
ಮತಾಂತರಕ್ಕೆ ಸಂಬಂಧಿಸಿದಂತೆ ವಿವೇಕಾನಂದರು ತಳೆದ ನಿಲುವು ಸ್ವಷ್ಟವಾಗಿದೆ.
ಇದೇ ಸಂದರ್ಭದಲ್ಲಿ ಧರ್ಮ ಬೋಧನೆಗಿಂತ ಹಸಿವಿನ ವಿರುದ್ಧದ ಹೋರಾಟಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕೆಂದರು ಮತ್ತು ದೀನ ದಲಿತರಿಗಾಗಿ ನಿಸ್ವಾರ್ಥ ಭಾವನೆಯಿಂದ ದುಡಿಯಲು ಪ್ರಾರಂಭಿಸಿದ್ದರು. ಸಾಧಕರ ಪಾಲಿಗೆ ಬಹಿರಂಗ ಶುದ್ಧಿಗಿಂತ ಅಂತರಂಗ ಶುದ್ಧಿ ಪ್ರಾಮುಖ್ಯವೆನ್ನುವ ಮೂಲಕ ದುರ್ಗುಣಗಳನ್ನು ಹೋಗಲಾಡಿಸಿ ಸದ್ಗುಣವಾಗುವ ಸುಸಂಸ್ಕೃತನಾಗುವ ಪ್ರಯತ್ನವನ್ನು ಮಾಡಲು ನಾಡಿಗೆ ಕರೆಯಿತ್ತರು. ಇನ್ನೊಬ್ಬರ ಒಳಿತನ್ನು ಕಂಡು ಸಂಕಟಪಡುವುದೇ ಅಸೂಯೆ.
ಇದು ನಮ್ಮ ಒಳಗಿರುವ ಬೆಂಕಿ. ಇದು ನಮ್ಮ ಅಹಂಕಾರದ ಮತ್ತು ಅಜ್ಞಾನದ ಅವತಾರ. ಯುವಕರಿಗೆ ಅವರ ಸಂದೇಶ ಗಳು ಸದಾಕಾಲ ಮಾರ್ಗದರ್ಶನವಾಗಬೇಕು. ಇಂದು ಮತಾಂಧತೆ, ಅಂಧಾಭಿಮಾನ ಮತ್ತು ದುರಭಿಮಾನದ ಫಲವಾಗಿಯೇ ಮೌಲ್ಯ ಗಳೇ ಇಲ್ಲದ ಸಮಾಜವನ್ನು ನಿರ್ಮಿಸುವತ್ತ ಭಾರತ ಸಾಗುತ್ತಿದೆ. ಇದಕ್ಕೆ ಕಾರಣರು ಯಾರು ಎಂಬುದಕ್ಕಿಂತ ಹೇಗೆ ಹೀಗಾಗುತ್ತದೆ ಎನ್ನುವುದನ್ನು ಯೋಚಿಸಬೇಕಾಗಿದೆ.
ನಾವೀಗ ಸಂಘರ್ಷದ ಬದುಕಿನಲ್ಲಿ ಬಾಳುತ್ತಿದ್ದೇವೆ. ಪ್ರಭುತ್ವ, ಪ್ರಾಯೋಜಕ, ಕೋಮುವಾದ, ಜಾತೀಕರಣ, ಪ್ರಾದೇಶಿಕತೆ, ಭಯೋತ್ಪಾದನೆಗಳು ನಮ್ಮ ನೆಲದಲ್ಲಿ ಸಮಸ್ಯೆಗಳಾಗಿ ಬೆಳೆದು ನಮ್ಮ ಬುಡವನ್ನೇ ಅಲ್ಲಾಡಿಸುವಷ್ಟು ಶಕ್ತವಾಗಿವೆ. ಸಂದರ್ಭಕ್ಕೆ ಅನುಗುಣವಾಗಿ ಈ ನಿಟ್ಟಿನಲ್ಲಿ ಯುವಕರು ಕಾರ್ಯ ಪ್ರವೃತ್ತರಾಗಿ ತಮ್ಮ ನಿಲುವಿನಲ್ಲಿನ ಸಂಪೂರ್ಣ ಬದಲಾವಣೆಗೆ ಷರತ್ತು ಬದ್ಧರಾಗಬೇಕು. ವಿವೇಕಾನಂದರ ಚಿಂತನೆ ಮತ್ತು ದಿವ್ಯ ಸಂದೇಶಗಳನ್ನು ಯುವಜನತೆ ಮನದಟ್ಟು ಮಾಡಿಕೊಂಡರೆ ರಾಷ್ಟ್ರೀಯ ಭಾವೈಕ್ಯತೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಭವಿಷ್ಯಕ್ಕೆ ಪುಷ್ಠಿ ನೀಡಿದಂತಾಗುತ್ತಿದೆ.
ಕೇವಲ 39 ವರ್ಷ ಬದುಕಿದರೂ ಬಾಳಿ ಬೋಧಿಸಿದ ವಿಷಯಗಳ ಸಾರಾಂಶ ಇಂದಿಗೂ, ಎಂದೆಂದಿಗೂ ಪ್ರಸ್ತುತ. ‘ಎದ್ದು ನಿಲ್ಲು! ಧೀರರಾಗಿ! ಬಲಾಢ್ಯರಾಗಿ ಜವಾಬ್ದಾರಿಯನ್ನೆಲ್ಲಾ ನೀವು ವಹಿಸಿ ನಿಮ್ಮ ಅದೃಷ್ಟಕ್ಕೆ ನೀವೇ ಹೊಣೆಯೆಂದು ತಿಳಿದುಕೊಳ್ಳಿ. ನಿಮಗೆ ಬೇಕಾದ ಶಕ್ತಿ ಸಹಾಯವೆಲ್ಲಾ ನಿಮ್ಮಲ್ಲೇ ಇದೆ’ ಎಂಬ ಕರೆಯಿತ್ತ ಮಹಾನ್ ಸಂತ. ಯುವಕರು ನಮ್ಮ ವೇದ, ಉಪನಿಷತ್ತು, ಬೈಬಲ್, ಕುರಾನ್, ರಾಮಾಯಣ, ಮಹಾಭಾರತಗಳನ್ನು ಅಜ್ಜಿ ಕತೆಗಳಿಗೆ ಸೀಮಿತಗೊಳಿಸದೇ ಅದರ ತಿರುಳನ್ನು ಜೀವನದ ಮೌಲ್ಯಕ್ಕೆ ಆಧಾರವೆಂದು ಪರಿಗಣಿಸಬೇಕು.
ವಿವೇಕಾನಂದರ ಬೋಧನೆಗಳು ಯುವ ಜನಾಂಗದ ಮೇಲೆ ಪ್ರಭಾವ ಬೀರುವಂತೆ ವಿವೇಚನಾಯುತ ಹಿರಿಯರು ಯುವಕರಿಗೆ ಮಾರ್ಗದರ್ಶಕರಾಗಬೇಕು. ಧರ್ಮವು ಯಾವಾಗಲೂ ಆಚರಣೆಗೆ ಇರುವಂತ ಹದ್ದು. ಆ ಆಚರಣೆಯನ್ನು ಮೌನವಾಗಿ ಮಾಡುವು ದನ್ನು ಬಿಟ್ಟು ಪ್ರಚಾರ ಪ್ರಿಯರಾಗಿ ಮಾಡುವುದು ಡಾಂಭಿಕತೆ. ಧರ್ಮದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳು ವುದು ಡಾಂಭಿಕತನ. ಅಜ್ಞಾನ ಎನ್ನುವುದು ಅಹಂಕಾರದ ಪ್ರತೀಕ.
ಮತಾಂಧತೆ, ಅಂಧಾಭಿಮಾನ ಮತ್ತು ದುರಭಿಮಾನದ ಫಲವಾಗಿಯೇ ಮೌಲ್ಯಗಳೇ ಇಲ್ಲದ ಸಮಾಜವನ್ನು ನಿರ್ಮಿಸುವತ್ತ
ಭಾರತ ಸಾಗುತ್ತಿದೆ ಎಂದು ಆತಂಕಪಟ್ಟರು. ಸ್ವಾಮಿ ವಿವೇಕಾನಂದರ ಬೋಧನೆ ಮತ್ತು ಉಪದೇಶಗಳು ಆಧುನಿಕ ದೃಷ್ಟಿಕೋನ ವನ್ನು ಹೊಂದಿದೆ. ವಿಚಾರಪೂರ್ಣವಾಗಿವೆ. ಇವು ವಿಶ್ವ ವ್ಯಾಪಕವಾಗಿ ಲಿಂಗ, ಜಾತಿ, ಧರ್ಮ, ಪ್ರದೇಶ ಜನಾಂಗ ಉದ್ಯೋಗ ಗಳೆನ್ನದೆ ಎಲ್ಲ ಜನರಿಗೂ, ಎಲ್ಲ ಕಾಲಕ್ಕೂ ಅನ್ವಯ ವಾಗುವಂತವುಗಳು.
ಅವರ ಶಕ್ತಿಶಾಲಿ ಬೋಧನೆಗಳು ಜೀವನದಲ್ಲಿ ಎದುರಾಗುವ ವಿಫಲತೆ, ಟೀಕೆ ಟಿಪ್ಪಣಿಗಳು, ಮಾನಸಿಕ ಖಿನ್ನತೆ ಮುಂತಾದ ಹಲವಾರು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಬೇಕಾಗುವ ಆತ್ಮವಿಶ್ವಾಸ ಮತ್ತು ಆಂತರಿಕ ಸಾಮರ್ಥ್ಯಗಳನ್ನು
ತುಂಬುತ್ತಿವೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಯುವ ಜನತೆ ನೈತಿಕ ಮತ್ತು ಅಧ್ಯಾತ್ಮಿಕ ಜೀವನವನ್ನು ನಡೆಸಲು ಅನುವು ಮಾಡಿ ಕೊಟ್ಟು ಜೀವನದ ಅರ್ಥ ಮತ್ತು ಸಾರ್ಥಕತೆ ಮತ್ತು ಶಾಂತಿಯನ್ನು ಗಳಿಸಲು ಸಹಕಾರಿಯಾಗಿದೆ.
ಅವರ ಉಪದೇಶಗಳು ಯುವ ಜನರ ಬಾಳಿಗೆ ಬೇಕಾದ ಸ್ಫೂರ್ತಿ ಮತ್ತು ಮಾರ್ಗದರ್ಶನಗಳ ಆಕರವೆಂದರೆ ತಪ್ಪಿಲ್ಲ. ‘ಸಾಕ್ಷಾ ತ್ಕರವೇ ಧರ್ಮವೆಂಬುದು ವಿವೇಕಾನಂದರ ಸಂದೇಶವಾಗಿತ್ತು’. ‘ಭರತಖಂಡವನ್ನು ಪುನರುದ್ಧಾರ ಮಾಡಬೇಕಾಗಿದೆ. ಜನ ಸಾಮಾನ್ಯರಿಗೆ ಅವರ ಹಕ್ಕನ್ನು ಕೊಡಬೇಕು. ದೀನ ದಲಿತರ ಮನೆಯ ಬಾಗಿಲಿಗೆ ನೆಮ್ಮದಿ, ನೀತಿ, ಧರ್ಮ ಬರುವಂತೆ ಮಾಡ ಬೇಕು. ಹೀಗೆ ನಾನು ಮಾಡುತ್ತೇನೆ ಇಲ್ಲ ದುಡಿಯುತ್ತೇನೆ ಅಸಹಾಯಕರ ಮತ್ತು ನಿರ್ಗತಿಕರ ಉದ್ಧಾರವೇ ನನ್ನ ಧರ್ಮದ
ಮೊದಲ ತತ್ವ’ ಎಂದರು. ‘ಧರ್ಮ ವೇದದಲ್ಲಿ, ಪುರಾಣಗಳಲ್ಲಿ, ಭಕ್ತಿ ಯಲ್ಲಿಲ್ಲ ಅಥವಾ ಮನೆಯಲಿಲ್ಲ. ಆ ಧರ್ಮವೆಲ್ಲಾ ಅಡುಗೆ
ಮಾಡುವ ಪಾತ್ರೆಯೊಳಗಿದೆ’ ಎಂಬ ಉಪದೇಶದ ಮುಖಾಂತರ ದರಿದ್ರನ ಬಡತನದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದರು.
ಅವರ ಧ್ಯೇಯೋದ್ದೇಶಗಳು ಮತ್ತು ಕನಸುಗಳನ್ನು ನಾಡಿನ ಜನತೆ ಅದರಲ್ಲೂ ಯುವ ಜನತೆ ಸಾಕಾರಗೊಳಿಸಬೇಕು. ಅವರು
ಯುವಕರಿಗೆ ನೀಡಿದ ಕರೆ ಮತ್ತು ನಾಡಿಗೆ ನೀಡಿದ ದಿವ್ಯ ಸಂದೇಶ. ವಿಶ್ವದ ಸರ್ವಧರ್ಮದ ಸಮ್ಮೇಳನದಲ್ಲಿ ‘ಅಮೆರಿಕಾದ
ಸಹೋದರಿಯರೇ ಸಹೋದರರೇ..’ ಎಂದು ಭಾಷಣ ಪ್ರಾರಂಭಿಸಿ ’ಎಲ್ಲಾ ಧರ್ಮಗಳು ಭೋದಿಸುವುದು ಸತ್ಯ ಧರ್ಮ’ ವೆಂದರು.
ಎಲ್ಲರೂ ಅವರವರ ಧರ್ಮದ ಬಗ್ಗೆ ವ್ಯಾಖ್ಯಾನ ಮಾಡಿದರೆ ವಿವೇಕಾನಂದರು ಎಲ್ಲಾ ಧರ್ಮಗಳಲ್ಲಿರುವ ಸತ್ಯದ ಬಗ್ಗೆ ಮಾತನಾಡಿ ವಿಜಯ ಪತಾಕೆ ಹಾರಿಸಿ ವಿಶ್ವದ ಗಮನ ಸೆಳೆದ ಮಹಾನ್ ಸಂತನೆನಿಸಿಕೊಂಡರು.
ಮನುಷ್ಯರೇ ಮನುಷ್ಯರಿಗಾಗಿ ಮರುಗದವರ ಬಗ್ಗೆ ಮಾತನಾಡುತ್ತಾ ‘ಯಾರು ನರಳುವ ಸಹೋದರರಿಗಾಗಿ ಮರುಗಲಾರರೋ ಯಾರು ಕಣ್ಣೆದುರಲ್ಲೇ ಕೂಳಿಲ್ಲದೆ ಸಾಯುವವರನ್ನು ಕಂಡರೂ ಒಂದು ತುತ್ತು ದಾನ ಮಾಡದವನು, ಜಾತಿ ಮತ್ತು ಅಸ್ಪೃಶ್ಯತೆ ಯನ್ನು ಆಚರಣೆ ಮಾಡುವವರನ್ನು ನಾನು ಶುದ್ಧ ಉಳಿದವರೆಲ್ಲಾ ಅಶುದ್ಧ ಎಂಬುದು ಮಾನವೀಯತೆಯಲ್ಲ’ ಎಂದಲ್ಲದೆ ಅಂತಹವರನ್ನು ಉಗ್ರವಾಗಿ ಟೀಕಿಸಿದರು. ವಿವೇಕಾನಂದರು ಉತ್ಪ್ರೇಕ್ಷೆಯ ಮಾತುಗಳನ್ನಾಗಲೀ ಸುಳ್ಳನ್ನಾಗಲೀ ಅಥವಾ ಕಾಲ್ಪನಿ ಕವಾದುದನ್ನು ಹೇಳಲಿಲ್ಲ.
ಅವರು ನುಡಿದ ಪ್ರತಿಯೊಂದು ಪದವೂ ವಾಸ್ತವಾಂಶ ಗಳಿಂದೊಡಗೂಡಿತ್ತು. ಬದುಕಿದ್ದು ಕೇವಲ 39 ವರ್ಷ. ಆದರೆ ಆ ವಯಸ್ಸಿಗೆ ಸಾಧಿಸಿದ್ದು ಅಪಾರ. ವಿವೇಕಾನಂದರು ಶ್ರೀಮಂತ ವ್ಯಕ್ತಿಯಲ್ಲ. ಸಾರ್ವಭೌಮರಲ್ಲ. ಆದರೆ ಅವರು ಕುಳಿತ ಗಾಡಿ ಯನ್ನು ರಾಜ ಮಹಾರಾಜರೂ ಎಳೆಯುತ್ತಿದ್ದರಂತೆ. ಇತಿಹಾಸದ ಉಲ್ಲೇಖದಲ್ಲಿ ಯಾವ ಕಾಲದಲ್ಲಿಯೂ, ಯಾವ ದೇಶ ದಲ್ಲಿಯೂ ಅವರಿಗೆ ಸಿಕ್ಕಿದ ರಾಜ ಮರ್ಯಾದೆ ಮತ್ತೊಬ್ಬರಿಗೆ ಸಿಕ್ಕಿರಲಿಲ್ಲ. ಪಾಶ್ಚಾತ್ಯ ದೇಶವನ್ನು ಸುತ್ತಿ ಭಾರತಕ್ಕೆ ಬಂದಾಗ
ಜನರು ಮಾತೃಭೂಮಿಯ ಬಗ್ಗೆ ಪ್ರಶ್ನಿಸಿದಾಗ ‘ಭಾರತಕ್ಕೆ ಮರಳುವ ಮುನ್ನ ಭರತಖಂಡವನ್ನು ಪ್ರೀತಿಸುತ್ತಿದ್ದೆ. ಈಗ ಭರತ ಭೂಮಿಯ ಧೂಳೂ ಕೂಡಾ ಪವಿತ್ರವಾಗಿದೆ’.
ನೆಲ, ಜಲ, ವಾಯುವೆಲ್ಲವೂ ಪವಿತ್ರವಾಗಿದೆ. ಇದು ಪುಣ್ಯ ಭೂಮಿಯ ಕ್ಷೇತ್ರವೆಂದು ಮಾತೃಭೂಮಿಯ ಬಗೆಗಿನ ಮಮಕಾರ ವನ್ನು ಪ್ರದರ್ಶಿಸುತ್ತಾರೆ. ಪರಿಶುದ್ಧತೆ, ಸಹನೆ ಮತ್ತು ದೃಢತೆ ಇವು ಮೂರೂ ಯಶಸ್ಸಿಗೆ ಅತ್ಯವಶ್ಯಕವಾದುವು. ಎಲ್ಲಕ್ಕಿಂತ ಹೆಚ್ಚಾಗಿ ಬೇಕಾದುದು ಪ್ರೀತಿ. ಹಣ, ಹೆಸರು, ಕೀರ್ತಿ, ವಿದ್ವತ್ತು ಯಾವುದೂ ಸಹಾಯಕ್ಕೆ ಬರಲಾರವು. ಚಾರಿತ್ರ್ಯ ಮಾತ್ರವೇ ಕಷ್ಟಗಳ ಅಭೇದ್ಯ ಗೋಡೆಗಳನ್ನು ಸೀಳಿ ಹಾಕಬಲ್ಲದು ಎಂಬಿತ್ಯಾದಿ ತಮ್ಮ ಸಾವಿರಾರು ದಿವ್ಯ ಸಂದೇಶಗಳಿಂದ ಸಮಾಜದಲ್ಲಿನ ಘೋರ ಅಜ್ಞಾನ, ಅಸೂಯೆ, ಜಾತೀಯತೆ, ಮೂಢನಂಬಿಕೆಗೆ ಕಿಚ್ಚು ಹಚ್ಚಿದರು.
ಇಂದು ಅವರ ಆದರ್ಶ ನಮ್ಮ ಯುವ ಜನಾಂಗಕ್ಕೆ ಮಾದರಿಯಾಗಬೇಕು. ಅವರ ದೇಶ ಪ್ರೇಮ, ಧಾರ್ಮಿಕ ಶ್ರದ್ಧೆ ಮತ್ತು ಆತ್ಮ ವಿಶ್ವಾಸ, ಸೇವಾ ಮನೋಭಾವನೆ ನಮ್ಮ ಯುವಕರಿಗೆ ಪ್ರೇರಣೆಯಾಗಬೇಕು. ದೇಶ ಕಟ್ಟುವ ಅಭಿವೃದ್ಧಿ ಕಾರ್ಯಕ್ಕೆ ಕೈ ಹಾಕಬೇಕು. ಜನರು ಅವರ ಪವಿತ್ರ ಜನ್ಮದಿನದಂದು ದೇಶದ ಪ್ರಗತಿಗಾಗಿ ಅರ್ಪಣ ಮನೋಭಾವದಿಂದ ದೀಕ್ಷೆ ತೊಡಬೇಕಾಗಿದೆ.