Wednesday, 11th December 2024

ಅಧಿಕಾರದ ಕನವರಿಕೆ ನಡುವೆ ಮತದಾರ

ಪ್ರಸ್ತುತ

ಜಿ.ಪ್ರತಾಪ್ ಕೊಡಂಚ

ಬೇಷರತ್ ಆಗಿ ಪಕ್ಷ ತೊರೆದು ಇನ್ನೊಂದು ಪಕ್ಷ ಸೇರಿದ್ದ ಕೆಲವರು ಟಿಕೇಟು ಸಿಕ್ಕಿ ಬೀಗಿದ್ದರೆ, ಇನ್ನು ಕೆಲವರು ಟಿಕೆಟ್
ಸಿಗದೆ ಮರಳಿ ಮನೆಗೆ ಅಥವಾ ಸ್ವತಂತ್ರವಾಗಿ ಸ್ಪರ್ಧಿಸಿ, ತಮ್ಮದೇ ಪಕ್ಷದವರನ್ನು ಸೋಲಿಸುವ ಷರತ್ತು ಬಿಚ್ಚಿಡು ತ್ತಿದ್ದಾರೆ!

ಕರ್ನಾಟಕದಲ್ಲಿ ಚುನಾವಣೆ ಘೋಷಣೆಯಾಗಿ, ರಾಜಕೀಯ ಪಕ್ಷಗಳ ತರೇವಾರಿ ದೊಂಬ ರಾಟ ರಂಗೇರಿದೆ. ನೋಡಿದರೆ ಅಳಬೇಕೊ, ನಗಬೇಕೋ?  ಗೊಂದಲವಾಗುತ್ತಿದೆ. ಅದಿಕಾರದ ಕನಸು ಎಲ್ಲರನ್ನೂ ಬಡಿದೆಚ್ಚರಿಸಿ, ಥಕ ಥೈ ಕುಣಿಸುತ್ತಿದೆ. ಲಜ್ಜೆಗೆಟ್ಟ ನಡೆಗಳು, ಹೆಜ್ಜೆಗೊಂದು ನುಡಿಗಳು, ಸುಸಂಸ್ಕೃತ ಕನ್ನಡಿಗರನ್ನು ದಣಿಸಿದೆ.

ಚುನಾವಣೆ ಘೋಷಣೆಯ ಸ್ವಲ್ಪ ಸಮಯದ ಮುಂಚೆ ಎಚ್ಚೆತ್ತು ಸರ್ಕಾರ ಕೈ ಕಾಲು ಬಡಿದುಕೊಂಡಿದ್ದು ಬಿಟ್ಟರೆ, ಭ್ರಷ್ಟಾಚಾರ, ವೈಫಲ್ಯದ ಆರೋಪ ಉತ್ತರಿಸುವ ಬದಲು, ಇದೇನು ಹೊಸದೇ? ಮುಂಚಿನವರೂ ಮಾಡಿಲ್ಲವೇ? ಅನ್ನುವುದನ್ನೇ ಅಸ್ತ್ರವಾಗಿಸಿ ಏದುರುಸಿರು ಬಿಟ್ಟು ದಿನದೂಡಿಕೊಂಡಿತ್ತು ಎಂಬುದು ಕಹಿ ಸತ್ಯ. ಸರ್ಕಾರದ ಕತೆ ಹೀಗಾದರೆ, ವಿರೋಧ ಪಕ್ಷಗಳದ್ದು ಇನ್ನೊಂದು ಕತೆ. ಒಳ ಜಗಳ, ಗುಂಪುಗಾರಿಕೆಯ ಗುಂಗಿನಲ್ಲಿ ಸರಕಾರದ ವೈಫಲ್ಯ ಎತ್ತಿ ಹಿಡಿದು, ತಾರ್ಕಿಕ ಅಂತ್ಯದ ತನಕ
ಕೊಂಡಯ್ಯ ಬಹುದಾದ ಎಲ್ಲ ಅವಕಾಶಗಳನ್ನು ವ್ಯರ್ಥಗೊಳಿಸಿದ್ದೇ ಅವರೆಲ್ಲರ ಸಾಧನೆ.

ಇವರು ಬಿಟ್ಟ ಕ್ಯಾಚಿನಲ್ಲಿ, ಅವರ ಬೌಂಡರಿ! ಅದರಲ್ಲೂ ಬಹುತೇಕ ಕ್ಯಾಚು ಹಿಡಿದು, ನಂತರ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಳಕ್ಕೆ ಬಿಟ್ಟು ಕೈ ತೊಳೆದುಕೊಂಡ ಹೀನಾಯ ಪ್ರದರ್ಶನ. ಯುವರಾಜ್ ಸ್ವಾಮಿ , ಬಿಟ್ಕಾಯಿನ್ ಶ್ರೀಕಿ, ಸ್ಯಾಂಟ್ರೋ ರವಿ ಪ್ರಕರಣಗಳು, ಪೊಲೀಸ್ ನೇಮಕಾತಿ ಹಗರಣ, ನಲವತ್ತು ಪರ್ಸೆಂಟು ಆರೋಪ, ಸಂತೋಷ್ ಪಾಟೀಲ್ ಪ್ರಕರಣ, ಪೇಸಿಎಂ ಕ್ಯಾಂಪೈನು ಎಲ್ಲದರಲ್ಲೂ ವಿರೋಧ ಪಕ್ಷಗಳು ತೋರಿದ ಆರಂಭ ಶೂರತ್ವ ಕೊನೆ ತನಕ ಉಳಿಯಲಿಲ್ಲ.

ಗುಂಡಿ ಬಿದ್ದ ರಸ್ತೆಗಳು, ಮೂಲಭೂತ ಸೌಕರ್ಯಗಳ ಕಳಪೆ ನಿರ್ವಹಣೆ, ಪ್ರವಾಹ ನಿರ್ವಹಣೆಯಲ್ಲಿ ಎಡವಿದ ಸ್ಥಳೀಯಾಡಳಿತ
ಯಾವೊಂದನ್ನೂ ಸರಿಪಡಿಸುವ ನಡೆ ಸರ್ಕಾರದಿಂದಾಗಲೀ, ಸಮರ್ಪಕವಾಗಿ ವಿರೋಧಿಸಿ ಸರಕಾರವನ್ನು ಸರಿ ದಾರಿಗೆ
ತರುವ ಪ್ರಯತ್ನ ವಿರೋಧ ಪಕ್ಷಗಳಾಗಲಿ ಮಾಡದಿದ್ದದ್ದು ಕನ್ನಡಿಗರ ದೌರ್ಭಾಗ್ಯ.

ಉಳಿದೆರಡು ಪಕ್ಷಗಳು ಬಹುತೇಕ ಅಭ್ಯರ್ಥಿಗಳ ಘೋಷಣೆ ಮಾಡಿದ್ದರೂ, ಬಿಜೆಪಿ ಮಾತ್ರ ಇನ್ನೂ ಕೋರ್ ಕಮಿಟಿ, ಸಮೀಕ್ಷೆ, ಅಭಿಪ್ರಾಯ ಸಂಗ್ರಹದಲ್ಲೇ ಮುಳುಗಿ ಹೋಗಿದೆ. ಕರ್ನಾಟಕ ಬಿಜೆಪಿಯ ಕೆಲವರಂತೂ, ಅಭ್ಯರ್ಥಿ ಯಾರೇ ಆಗಲಿ, ಗೆಲುವು ನಮ್ಮದೆಂದು ಬೊಬ್ಬಿರಿಯುತ್ತಿದ್ದಾರೆ. ಕರ್ನಾಟಕ ಬಿಜೆಪಿಯಂತೂ ಮೋದಿ, ಶಾರ ಮೋಡಿಗೆ ಕಾದು ಕೂತಿದೆ. ದೇಶದ ಅಭಿವೃದ್ಧಿ ನೋಡಿ ಕರ್ನಾಟಕದಲ್ಲಿ ಗೆಲ್ಲಿಸಿ ಎಂಬ ಮಾತು ಆರಂಭಿಸಿದ್ದು ನೋಡಿದರೆ, ಬಾಗುತ್ತಿರುವ ಬಾಳೆ ಗಿಡದಲ್ಲಿ ಬೀಳುತ್ತಿರುವ ಬಾಳೆಗೊನೆಗೆ ಗೂಟ ಕೊಟ್ಟು ನಿಲ್ಲಿಸಿದ ಪರಿಸ್ಥಿತಿ ನೆನಪಾಗುತ್ತಿದೆ.

ಮೊನ್ನೆ ತನಕ ಯೋಗಿ ಮಾದರಿಯ ಮಾತಾಡುತ್ತಿದ್ದ ರಾಜ್ಯ ನಾಯಕರುಗಳು, ಗುಜರಾತ್ ಮಾದರಿ ಅಭ್ಯರ್ಥಿ ಆಯ್ಕೆಯನ್ನು ನೆನೆದು ಕನವರಿಸುತ್ತಿದ್ದಾರೆ. ಯಾರಾದರೇನಂತೆ ಕ್ಯಾಂಡಿಡೇಟು? ಕಮಲಕ್ಕೆ ಕೊಡಿ ಓಟು! ಗೆದ್ದ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿ
ಎಮ್ಮೆಲ್ಲೆ ಯಾರೆಂದು ಹೈಕಮಾಂಡ್ ನಿರ್ಧರಿಸುತ್ತದೆ ಎನ್ನುವ ಮಟ್ಟ ತಲುಪದಿದ್ದರೆ ಸಾಕು! ಬಿಜೆಪಿಗರ ಅತಿಯಾದ ಆತ್ಮವಿಶ್ವಾಸ ಕರ್ನಾಟಕದಲ್ಲಿ ಅವರನ್ನೆಲ್ಲಿಗೆ ತಂದು ಮುಟ್ಟಿಸುತ್ತದೆ ಎಂಬುದೇ ಸದ್ಯಕ್ಕಿರುವ ಕುತೂಹಲ!

ಸೀಟು ಹಂಚಿಕೆಯ ವಿಷಯದಲ್ಲಿ ಕಾಂಗ್ರೆಸ್ಸೇ ಮೇಲೆನಿಸುತ್ತಿದೆ. ಗೊಂದಲದ ಗೂಡುಗಳನ್ನು ಬಿಟ್ಟು ಬೇರೆಲ್ಲೆಡೆ ಅವರ ಅಭ್ಯರ್ಥಿ ಗಳು ನಿರ್ಧರಿಸಿಯಾಗಿದೆ. ಉಳಿದ ಕಡೆಗಳಲ್ಲಿನ ಕಗ್ಗಂಟು ಬಿಡಿಸುವ, ಒಂದು ಗೂಡಿಸಿಕೊಂಡು ಫಲಿತಾಂಶದ ತನಕವಾದರೂ
ಮುನ್ನೆಡೆಸುವ ಅವಶ್ಯಕತೆ ಅವರು ಮರೆತು ಬಿಟ್ಟಾಗಿದೆ. ಅಲ್ಲೀಗ, ಮುಂದಿನ ಮುಖ್ಯಮಂತ್ರಿ ಯಾರೆಂಬ ಗೊಂದಲ,
ದುರಾ ದೃಷ್ಟದ ದೂರದೃಷ್ಟಿ! ರೇಷ್ಮೆ ಸೀರೆ ಸಿಗಲಿದೆಯೆಂದು ಇರುವ ಸೀರೆ ಸುಟ್ಟುಕೊಂಡ ನತ ದೃಷ್ಟರ ಕತೆ ಇವರದ್ದಾಗದಿದ್ದರೆ
ಸಾಕು.

ಕಿಂಗ್ ಮೇಕರ್ ಅಲ್ಲ, ನಾವೇ ಕಿಂಗ್ ಎಂಬ ವಿಶ್ವಾಸ ಜೆಡಿಎಸ್‌ನವರದ್ದು! ವಿಧಾನಸೌಧದ ಆಸನದ ಕನಸಿನಲ್ಲಿರುವ ಇವರಿಗೆ, ಸದ್ಯಕ್ಕೆ ಹಾಸನದ ಅಭ್ಯರ್ಥಿಯದೇ ಜಟಾಪಟಿ! ಉಳಿದ ಪಕ್ಷಗಳಿಗೆ ದೆಹಲಿ ಹೈಕಮಾಂಡಿನ ಚಿಂತೆಯಾದರೆ, ಇವರದ್ದು ಮನೆಯೊಳಗಿನ ಚಿತಾವಣೆಯ ಚಿಂತೆ. ಇನ್ನೀರ್ವರ ಅತಿಯಾದ ಆತ್ಮವಿಶ್ವಾಸವೇ ಇವರಿಗಿರುವ ವಿಶ್ವಾಸದ ಮೂಲ. ಇದೆಲ್ಲದರ ನಡುವೆ ಬೇಷರತ್ ಆಗಿ ಪಕ್ಷ ತೊರೆದು ಇನ್ನೊಂದು ಪಕ್ಷ ಸೇರಿದ್ದ ಕೆಲವರು ಟಿಕೇಟು ಸಿಕ್ಕಿ ಬೀಗಿದ್ದರೆ, ಇನ್ನು ಕೆಲವರು ಟಿಕೆಟ್ ಸಿಗದೆ ಮರಳಿ ಮನೆಗೆ ಅಥವಾ ಸ್ವತಂತ್ರವಾಗಿ ಸ್ಪರ್ಧಿಸಿ, ತಮ್ಮದೇ ಪಕ್ಷದವರನ್ನು ಸೋಲಿಸುವ ಷರತ್ತು ಬಿಚ್ಚಿಡುತ್ತಿದ್ದಾರೆ!

ಸಿನಿಮಾದಲ್ಲಿ ತ್ರಿಭಾಷಾ ತಾರೆಯೆಂಬ ವಿಶೇಷಣಗಳಂತೆ, ತ್ರಿಪಕ್ಷ ನಾಯಕರೆಂಬ ವಿಶೇಷಣಕ್ಕೆ ಕೆಲವರಿನ್ನು ಭಾಜನರಾಗಲಿದ್ದಾರೆ. ‘ಪಕ್ಷವೇ ನನ್ನ ತಾಯಿ-ತಂದೆ’ ಅಂದವರೂ, ಉಸಿರುಗಟ್ಟಿಸುವ ವಾತಾವರಣವೆಂದು ಅನ್ಯ ಪಕ್ಷದ ಸಿದ್ಧಾಂತಕ್ಕೆ ಮಾರು ಹೋಗು ವುದನು ನೋಡುವುದೇ ಒಂದು ವಿಸ್ಮಯ! ಕೆಲವರಂತೂ ಈಗ ಯಾವ ಪಕ್ಷದಲ್ಲಿದ್ದಾರೆಂಬ ವಿಷಯ ಅವರಿಗೇ ತಿಳಿಯದಷ್ಟು ಜಿಗಿದಾಗಿದೆ. ಏನಾದರಾಗಲಿ, ಇವರೆಲ್ಲರಿಂದ ಕರ್ನಾಟಕದಲ್ಲೀಗ ಕರ, ಕಮಲ, ತೆನೆ ಹೊತ್ತ ಮಹಿಳೆಯ ಶಾಲು ಭರ್ಜರಿ ಭರಾಟೆ ಯಲ್ಲಿ ಕಾಲಿಯಾಗುತ್ತಿದೆ!

ಅಭಿವೃದ್ಧಿ ಅಳೆಯಲೋ? ಅಭ್ಯರ್ಥಿಯ ನಂಬಲೋ? ಜಾತಿ ಬೆಂಬಲಿಸಲೋ? ಸಿದ್ಧಾಂತ ಒಪ್ಪಲೋ? ಪಕ್ಷಕ್ಕೆ ಜೋತು ಬೀಳಲೋ? ಎಂಬ ಗೊಂದಲದ ಗೂಡಿನಲ್ಲಿ ಸಿಕ್ಕಿ ನಲುಗುತ್ತಿರುವುದು ಮತದಾರ. ಕೆಲ ಪ್ರಭುಗಳಿಗೆ ಸಿಡಿ ಆತಂಕವಾದರೆ, ಪ್ರಜೆಗಳಿಗೆ ಇದನೆಲ್ಲ ನೋಡಿ ತಲೆ ಸಿಡಿದು ಹೋಗುತ್ತಿದೆ. ಕರ್ನಾಟಕದಲ್ಲಿ ಈ ಭಾರಿ ಬಹುಮತದ ಸರ್ಕಾರ ಸಾಧ್ಯವಾಗ ಲಿಲ್ಲವೆಂದರೆ ಅದರ ಹೊಣೆ, ತನಗಿದ್ದ ಅವಕಾಶ ಸಮರ್ಥವಾಗಿ ಬಳಸಿಕೊಳ್ಳದ ಆಡಳಿತ ಪಕ್ಷ ಮತ್ತು ಸಮರ್ಥ ಪ್ರತಿರೋಧ ಒಡ್ಡದ ವಿರೋಧ ಪಕ್ಷಗಳೆರಡದ್ದೂ ಎಂಬುದಂತೂ ಸ್ಪಷ್ಟ. ಹಾಗಾದರೆ ಬವಣೆ ಮತ್ತೆ ಕನ್ನಡಿಗರಿಗೇ.

ಆಮಿಷಕ್ಕೊಳಗಾಗದಿರಿ, ಭ್ರಷ್ಟರನ್ನು ಬೆಂಬಲಿಸದಿರಿ ಅನ್ನುವ ಪರಿಸ್ಥಿತಿ ಈಗಿಲ್ಲ. ನಮಗಿರುವ ಆಯ್ಕೆಯಲ್ಲಿ ಉತ್ತಮರನ್ನು ಆಯ್ದುಕೊಳ್ಳುವ ಅವಕಾಶ ಮಾತ್ರ ನಮ್ಮದು. ಮತದಾನದ ಮೂಲಕ ಉತ್ತಮರ ಆಯ್ಕೆಯ ಹೊಣೆಗಾರಿಕೆ ತಾವೇ ಹೊತ್ತು ರಾಜಕೀಯ ಶುದ್ಧೀಕರಣದ ಪ್ರಕ್ರಿಯೆಗೆ ಚಾಲನೆ ಕೊಡಬೇಕಾದ ಅನಿವಾರ್ಯತೆ ನಮ್ಮದು. ಜಾತಿ, ಭಾಷೆ, ಆಮಿಷಗಳಿಗೂ ಮೀರಿದ ಸಾಮರ್ಥ್ಯ, ದಕ್ಷತೆಗಳೂ ನಾಯಕತ್ವಕ್ಕೆ ಅನಿವಾರ್ಯ ಎನ್ನುವ ಸಂದೇಶ ಮತದಾರ ಎಲ್ಲ ಪಕ್ಷಗಳಿಗೂ ತಲುಪಿಸಿ, ರಾಜಕೀಯ ಶುದ್ಧೀಕರಣಕ್ಕೆ ನಾಂದಿ ಹಾಡಬೇಕಾಗಿದೆ.