Sunday, 15th December 2024

ಎಲ್ಲರಿಗೂ ಬಹುಮತ ಪಡೆಯೋದೇ ಪ್ರಯಾಸ !

ಅಶ್ವತ್ಥಕಟ್ಟೆ

ranjith.hoskere@gmail.com

ಪಕ್ಷಗಳ ತ್ರಿಕೋನ ಸ್ಪರ್ಧೆಯಿಂದ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತವನ್ನು ಪಡೆಯುವುದು ಈ ಹಂತದಲ್ಲಿ ಕಷ್ಟದ ವಿಷಯ. ಜೆಡಿಎಸ್‌ಗೆ
ಹೋಲಿಸಿದರೆ ಬಿಜೆಪಿ ಅಥವಾ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಬೇಕು ಎಂದರೆ ಮ್ಯಾಜಿಕ್ ನಂಬರ್ ದಾಟಬೇಕು ಎನ್ನುವ ಒತ್ತಡದಲ್ಲಿವೆ.

ಕರ್ನಾಟಕದಲ್ಲಿ ಮತ್ತೆ ಚುನಾವಣಾ ಕಾವು ಜೋರಾಗಿದೆ. ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚುನಾವಣೆ ಘೋಷಣೆ ಯಾಗುವುದು ಬಹುತೇಕ ನಿಶ್ಚಿತ. ಆದರೆ ಚುನಾವಣೆ ಘೋಷಣೆಯಾಗುವ ಮೊದಲೇ ಈಗಾಗಲೇ ಎಲ್ಲ ರೀತಿಯ ಚುನಾವಣಾ ಕಾರ್ಯಗಳು ‘ಅನಧಿಕೃತ’ ವಾಗಿ ಶುರುವಾಗಿದ್ದು, ಇದರಲ್ಲಿ ಸಮೀಕ್ಷೆಗಳು ಒಂದು. ರಾಜ್ಯ ವಿಧಾನಸಭಾ ಚುನವಣೆಗೆ ಸಂಬಂಧಿಸಿದಂತೆ ಈಗಾಗಲೇ ಬಂದಿರುವ ಬಹುತೇಕ ಸಮೀಕ್ಷೆಗಳಲ್ಲಿ ಮತ್ತೊಂದು ‘ಅತಂತ್ರ ಫಲಿತಾಂಶ’ ಎನ್ನುವ ಸ್ಪಷ್ಟ ಸಂದೇಶ ಸಿಕ್ಕಿರುವುದು ಕಾಂಗ್ರೆಸ್-ಬಿಜೆಪಿಗೆ ತಲೆಬಿಸಿಯಾಗಿದೆ.

ಹಾಗೇ ನೋಡಿದರೆ, ಕರ್ನಾಟಕದಲ್ಲಿ ಕಳೆದ ಎರಡು ದಶಕದಿಂದ ನಡೆದಿರುವ ನಾಲ್ಕು ಚುನಾವಣೆ ಯಲ್ಲಿ ಮೂರು ಚುನಾವಣೆಗಳು ಅತಂತ್ರ ಸ್ಥಿತಿಯನ್ನು ಎದುರಿಸಿದೆ. ಈ ಎಲ್ಲ ಸಮಯದಲ್ಲಿಯೂ, ಹಲವು ರಾಜಕೀಯ ಮೇಲಾಟ, ಆಪರೇಷನ್ ಕಮಲ, ರೆಸಾರ್ಟ್ ರಾಜಕೀಯ ಹೀಗೆ ಹಲವು
ಹೈಡ್ರಾಮವನ್ನು ಎದುರಿಸಿದೆ. ಆದ್ದರಿಂದ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಫಲಿತಾಂಶ ಬಾರದೇ, ಮ್ಯಾಜಿಕ್ ನಂಬರ್ ತಲುಪಲು ಮತ್ತೊಂದು ಪಕ್ಷದ (ಕರ್ನಾಟಕದ ಮಟ್ಟಿಗೆ ಅದು ಜೆಡಿಎಸ್) ಮೊರೆ ಹೋದರೆ ಅಲ್ಲಿಗೆ ಮುಂದಿನ ಐದು ವರ್ಷಗಳ ಕಾಲ ‘ಹೋರಾಟ’ವಿದ್ದೇ ಇರುತ್ತದೆ.

ಅತಂತ್ರ ಫಲಿತಾಂಶ ಬಂತೆಂದರೆ, ಕಾಂಗ್ರೆಸ್ -ಬಿಜೆಪಿ ನಡುವಿನ ಜಗಳ ಜೆಡಿಎಸ್‌ಗೆ ಲಾಭ ಎನ್ನುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ೭೫ ವರ್ಷದ ಸ್ವಾತಂತ್ರ್ಯದಲ್ಲಿ ಕರ್ನಾಟಕದಲ್ಲಿ ಮೊದಲ ಆರು ಅವಽಗೆ ಕಾಂಗ್ರೆಸ್ ಪಕ್ಷ ‘ಸೋಲಿಲ್ಲದ ಸರದಾರ’ ನಂತೆ ಮೆರೆಯಿತು. ಅದಾದ ಬಳಿಕ ಒಂದುವರೆ ದಶಕಗಳ ಕಾಲ ಜನತಾದಳ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿಯಿದ್ದರೂ, ಎಲ್ಲಿಯೂ ಅತಂತ್ರ ಎನ್ನುವ ಸ್ಥಿತಿ ನಿರ್ಮಾಣವಾಗಿರಲಿಲ್ಲ. ಆದರೆ ಯಾವಾಗ ಅಖಂಡ ಜನತಾದಳ ಒಡೆದು ‘ಜಾತ್ಯತೀತ ಜನತಾ ದಳ’ದ ಉಗಮವಾಯಿತೋ ಅಲ್ಲಿಗೆ ಕರ್ನಾಟಕದಲ್ಲಿ ಕಾಂಗ್ರೆಸ್-ಜನತಾದಳದೊಂದಿಗೆ ಬಿಜೆಪಿಯ ಹುಟ್ಟು ಹಾಗೂ ಹೋರಾಟ ಆರಂಭವಾಗಿಯು.

ಕೆಲ ವರ್ಷಗಳ ಹಿಂದೆ ಜೆಡಿಎಸ್‌ನ ಹಿರಿಯ ನಾಯಕರಾಗಿದ್ದ ನಾಣಯ್ಯ ಅವರು, ‘ಒಂದು ವೇಳೆ ಜನತಾದಳ ಹೊಡೆದು ಹೋಗದಿದ್ದರೆ, ಕರ್ನಾಟಕ ದಲ್ಲಿ ಬಿಜೆಪಿಗೆ ಅಸ್ತಿತ್ವವೇ ಇರುತ್ತಿರಲಿಲ್ಲ’ ಎನ್ನುವ ಮಾತನ್ನು ಹೇಳಿದ್ದರು. ಒಂದು ವೇಳೆ ಇದಾಗಿದ್ದರೆ, ಕರ್ನಾಟಕದಲ್ಲಿ ‘ಅತಂತ್ರ ಫಲಿತಾಂಶ’ದ ಪರ್ವವೇ ಆರಂಭವಾಗುತ್ತಿರಲಿಲ್ಲ. ಈ ಮಾತು ಹೇಳುವುದಕ್ಕೆ ಬಲವಾದ ಕಾರಣವಿದೆ. ಅದೇನೆಂದರೆ ಮೊದಲ ಆರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇತಿ ಬಾರಿಸಿದ್ದರೆ, ಏಳನೇ ಬಾರಿಗೆ ರಾಮಕೃಷ್ಣ ಹೆಗ್ಡೆ ನೇತೃತ್ವದಲ್ಲಿ ಜೆಡಿಯು ಅಧಿಕಾರದ ಗದ್ದುಗೆಯನ್ನು ಏರಿತ್ತು. ಒಂಬತ್ತನೇ ಅವಧಿಯಲ್ಲಿ ಅಂದರೆ, ೧೯೮೯ರಲ್ಲಿ ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬಂದಿತ್ತು.

1994ರಲ್ಲಿ ಜನತಾದಳ ದೇವೇಗೌಡರ ನೇತೃತ್ವದಲ್ಲಿ ವಿಧಾನಸೌಧದ ಮೂರನೇ ಮಹಡಿಯನ್ನು ಏರಿತ್ತು. ಅದಾದ ಬಳಿಕ 1999ರಲ್ಲಿ ಎಸ್.ಎಂ ಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಆಡಳಿತಕ್ಕೆ ಬಂದಿತ್ತು. 99ರ ಚುನಾವಣೆಯ ಬಳಿಕ ಕರ್ನಾಟಕದಲ್ಲಿ ಬಹುತೇಕ ಅತಂತ್ರ ಫಲಿತಾಂಶವೇ ಬಂದಿದೆ. ಈ ವಾದಕ್ಕೆ 2013ರಲ್ಲಿ ನಡೆದ ೧೪ನೇ ಅವಧಿಯ ಚುನಾವಣೆಯನ್ನು ಹೊರತುಪಡಿಸಬೇಕು. ಆದರೆ ಸಿದ್ದರಾಮಯ್ಯ ನೇತೃತ್ವದಲ್ಲಿ 2013ರಲ್ಲಿ ಅಧಿಕಾರದ ಗದ್ದುಗೆ ಏರುವುದಕ್ಕೆ ಮತ್ತೊಂದು ಕಾರಣವಿದೆ. ಅದನ್ನು ಹೇಳುವ ಮೊದಲು, 2004ರಲ್ಲಿ ಸಮ್ಮಿಶ್ರ ಸರಕಾರ ಬಂದು ಮೊದಲಿಗೆ ಕಾಂಗ್ರೆಸ್-ಜೆಡಿಎಸ್, ಬಳಿಕ ಜೆಡಿಎಸ್ ಬಿಜೆಪಿ ಅಧಿಕಾರವನ್ನು ನಡೆಸಿತ್ತು. ಈ ವೇಳೆ ರೆಸಾರ್ಟ್ ರಾಜಕೀಯ, ಆಪರೇಷನ್ ಕಮಲ ಸೇರಿದಂತೆ ಹತ್ತು ಹಲವು ರಾಜಕೀಯ ಹೈಡ್ರಾಮಕ್ಕೆ ರಾಜ್ಯ ಕಾರಣವಾಗಿತ್ತು.

ಕೊನೆಗೆ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದೇ, ಸಮ್ಮಿಶ್ರ ಸರಕಾರದ ರಚನೆಯೂ ಅಸಾಧ್ಯ ಎನ್ನುವ ಪರಿಸ್ಥಿತಿ ಎದುರಾದ ಸಮಯದಲ್ಲಿ, 2008ರಲ್ಲಿ ಸರಕಾರವನ್ನು ವಿಸರ್ಜನೆ ಮಾಡಿ ಚುನಾವಣೆಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ೨೦೦೮ರ ಚುನಾವಣೆಯಲ್ಲಿ ‘ವಚನ ಭ್ರಷ್ಟ’ ಎನ್ನುವ ಆರೋಪವನ್ನು ಮುಂದಿಟ್ಟುಕೊಂಡು ಜೆಡಿಎಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿಕೊಂಡು ಪ್ರಚಾರ ನಡೆಸಿತ್ತು. ಈ ವೇಳೆ ಬಿಜೆಪಿ ಮೊದಲ ಬಾರಿಗೆ ಸ್ವತಂತ್ರವಾಗಿ ದಕ್ಷಿಣ ಭಾರತದಲ್ಲಿ ಅಧಿಕಾರದ ಗದ್ದುಗೆ ಏರುವ ಅವಕಾಶವಿತ್ತಾದರೂ, ಮ್ಯಾಜಿಕ್ ನಂಬರ್‌ಗೆ ಮೂರು ಸ್ಥಾನಗಳ ಕೊರತೆಯಿತ್ತು. ಈ ಕಾರಣಕ್ಕಾಗಿ ಪಕ್ಷೇತರರನ್ನು ಸೇರಿಸಿಕೊಂಡು, ಅವರಿಗೆಲ್ಲ ಸಚಿವ ಸ್ಥಾನ ನೀಡಿ ಬಹುಮತ ಸಾಬೀತುಪಡಿಸಿದರಾದರೂ, ಪೂರ್ಣ ಬಹುಮತ ಸಿಕ್ಕಿರಲಿಲ್ಲ.

2018ರಲ್ಲಿಯೂ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಮ್ಯಾಜಿಕ್ ನಂಬರ್ ತಲುಪಲು ೧೭ ಸ್ಥಾನಗಳ ವ್ಯತ್ಯಾಸವಿತ್ತು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎನ್ನುವ ಏಕೈಕ ಕಾರಣಕ್ಕಾಗಿ, ಕಾಂಗ್ರೆಸ್ ಜೆಡಿಎಸ್ ಮನೆ ಬಾಗಿಲಿಗೆ ಹೋಗಿ, ಮುಖ್ಯಮಂತ್ರಿ ಆಫರ್ ಅನ್ನು ನೀಡಿ ಸರಕಾರ ರಚಿಸಲು ಮುಂದಾಗಿತ್ತು. ಬಳಿಕ ಆಪರೇಷನ್ ಕಮಲ, ಬಾಂಬೆ ಡೈರಿ ಎಲ್ಲರಿಗೂ ತಿಳಿದಿರುವ ವಿಷಯ.

ಆದರೆ ಸಾಲು ಸಾಲು ಅತಂತ್ರ ಫಲಿತಾಂಶದ ನಡುವೆ ಸುಭದ್ರ ಸರಕಾರ ಎನಿಸಿಕೊಂಡಿದ್ದು ಮಾತ್ರ 2013ರಲ್ಲಿ. ಸಿದ್ದರಾಮಯ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 2014ಕ್ಕಿಂತ ೪೨ ಹೆಚ್ಚುವರಿ ಸ್ಥಾನ ಪಡೆದುಕೊಂಡು ೧೨೨ ಸೀಟುಗಳೊಂದಿಗೆ ಅಧಿಕಾರದ ಚುಕ್ಕಾಣಿಯನ್ನು
ಹಿಡಿದಿತ್ತು. ಇದಕ್ಕೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಕಾರಣ ಎನ್ನುವುದಕ್ಕಿಂತ, ಯಡಿಯೂರಪ್ಪ ಅವರು ಬಿಜೆಪಿಯಿಂದ ಹೊರಬಂದು ಸ್ವಂತ ಪಕ್ಷ ಕಟ್ಟಿ ಎಲ್ಲ ಕ್ಷೇತ್ರದಿಂದ ಸ್ಪರ್ಧಿಸಿದ್ದು. ಕೆಜೆಪಿಯೂ ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನು ಒಡೆದ ಪರಿಣಾಮ ಅದರ ನೇರ ಸಹಾಯ ಕಾಂಗ್ರೆಸ್‌ಗೆ ಆಗಿತ್ತು. ಯಡಿಯೂರಪ್ಪ ನೇತೃತ್ವದ ಕೆಜೆಪಿ ಆರು ಸ್ಥಾನದಲ್ಲಿ ಗೆಲವು ಸಾಧಿಸಿದ್ದರೂ, ರಾಜ್ಯಾದ್ಯಾಂತ ಶೇ.೯.೮ರಷ್ಟು ಮತಗಳನ್ನು ಪಡೆದಿತ್ತು.
ಇದೇ ರೀತಿ ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್ ಸಹ ಶೇ.೨.೭ರಷ್ಟು ಮತಗಳನ್ನು ಕಬಳಿಸಿದ್ದರಿಂದ ಬಿಜೆಪಿಯ ಮತಗಳಿಕೆ ಶೇ.೧೯.೯ಕ್ಕೆ ಇಳಿದಿತ್ತು. ಆದರೆ ಈ ರೀತಿಯ ಮತ ಹಂಚಿಕೆಯಾಗಿದ್ದರಿಂದ ಕಾಂಗ್ರೆಸ್ ಶೇ.೧.೯ರಷ್ಟು ಹೆಚ್ಚುವರಿ ಮತಗಳನ್ನು ಪಡೆದರೂ, 122
ಸ್ಥಾನದಲ್ಲಿ ಗೆಲುವಿನ ನಗೆ ಬೀರಿತ್ತು.

ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ತ್ರಿಕೋನ ಸ್ಪರ್ಧೆಯಿಂದ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತವನ್ನು ಪಡೆಯುವುದು ಈ ಹಂತದಲ್ಲಿ ಕಷ್ಟದ ವಿಷಯ. ಜೆಡಿಎಸ್‌ಗೆ ಹೋಲಿಸಿದರೆ ಬಿಜೆಪಿ ಅಥವಾ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಬೇಕು ಎಂದರೆ ಮ್ಯಾಜಿಕ್ ನಂಬರ್ ದಾಟಬೇಕು ಎನ್ನುವ ಒತ್ತಡದಲ್ಲಿವೆ. ಹಾಗೇ ನೋಡಿದರೆ ಈ ಬಾರಿ ಕಾಂಗ್ರೆಸ್, ಬಿಜೆಪಿ ಹಾಗೂ
ಜೆಡಿಎಸ್ ಮೂರು ಪಕ್ಷಗಳಷ್ಟೇ ಅಲ್ಲದೇ, ಸ್ವತಂತ್ರವಾಗಿ ಈಗಾಗಲೇ ಹತ್ತಾರು ಸಮೀಕ್ಷೆಗಳು ಕರ್ನಾಟಕದಲ್ಲಿ ನಡೆದಿವೆ.

ತೀರಾ ಇತ್ತೀಚಿನ ಸಮೀಕ್ಷೆಯವರೆಗೂ ಈ ಬಾರಿ ಕರ್ನಾಟಕದಲ್ಲಿ ಯಾವ ಪಕ್ಷವೂ ನೂರರ ಗಡಿಯನ್ನು ದಾಟುವುದಿಲ್ಲ ಎನ್ನುವ ವರದಿಯನ್ನು ನೀಡಿದೆ. ಆದರೆ ಒಂದೆರೆಡು ವರದಿಗಳು ಮಾತ್ರ ಕಾಂಗ್ರೆಸ್ 100 ಎಂದಿದ್ದರೆ, ಬಿಜೆಪಿ ೧೦೭ರ ಆಸುಪಾಸು ಎನ್ನುವ ವರದಿಯನ್ನು ಉಲ್ಲೇಖಿಸಿದೆ (ಈ ವರದಿ ಗಳು ಯಾರೂ ಮಾಡಿಸಿದ್ದು ಎನ್ನುವುದರ ಮೇಲೆ ಇದರ ವಿಶ್ವಾಸಾರ್ಹತೆ ನಿಂತಿದೆ). ಆದ್ದರಿಂದ ಈ ಬಾರಿಯೂ ಕರ್ನಾಟಕದಲ್ಲಿ ‘ಅತಂತ್ರ
ಫಲಿತಾಂಶ’ದ ಆತಂಕವಿದೆ. ಕಳೆದ ಚುನಾವಣೆಯ ರೀತಿಯಲ್ಲಿಯೇ ಆದರೆ, ‘ಯಾವುದೇ ಪಕ್ಷ ಹೆಚ್ಚು ಸೀಟು ಪಡೆದು ಮ್ಯಾಜಿಕ್ ನಂಬರ್ ದಾಟದಿದ್ದರೂ, ಜೆಡಿಎಸ್ ಮನೆ ಬಾಗಿಲಿಗೆ ಹೋಗಬೇಕು.

ಕುಮಾರಸ್ವಾಮಿ ಅವರಿಗೆ ಸಿಎಂ ಪಟ್ಟ ಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನುವುದು ಬಹುತೇಕ ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಪ್ರತಿಬಾರಿ ಚುನಾವಣೆ ನಡೆದಾಗ ಅತಂತ್ರ ಫಲಿತಾಂಶ ಬಂದಾಗಲೆಲ್ಲ ಕೊನೆಯವರೆಗೂ ಅನಿಶ್ಚಿತತೆ ಕಾಡುತ್ತಿರುತ್ತದೆ. ಪಕ್ಷದಿಂದ ಪಕ್ಷಕ್ಕೆ ‘ಜಿಗಿದಾಡುವ’ ಶಾಸಕರನ್ನು ಮುಂದಿಟ್ಟುಕೊಂಡು ಅಽಕಾರಕ್ಕೆ ಬರುವ ಅಥವಾ ಇರುವ ಸರಕಾರಗಳನ್ನು ಉರುಳಿಸಿರುವ ಉದಾಹರಣೆ ಗಳು ನಮ್ಮ ಮುಂದಿದೆ. ಈ ರೀತಿಯ ಜಿಗಿದಾಟವನ್ನು ನಿಯಂತ್ರಿಸಬೇಕು ಎನ್ನುವ ಕಾರಣಕ್ಕೆ ರಾಜೀವ್ ಗಾಂಧಿ ಅವರು ‘ಪಕ್ಷಾಂತರ ನಿಷೇಧ ಕಾಯಿದೆ’ಯನ್ನು ಜಾರಿಗೆ ತಂದರು.

ಅಷ್ಟಾದರೂ, ಈ ಕಾಯಿದೆಯಲ್ಲಿರುವ ‘ನ್ಯೂನತೆ’ಗಳನ್ನೇ ಬಳಸಿಕೊಂಡು ‘ಆಪರೇಷನ್’ ಮಾಡಿ ಸರಕಾರಗಳನ್ನುಉರುಳಿಸಿ, ಸರಕಾರಗಳು ರಚನೆಯಾಗಿರುವ ಉದಾಹರಣೆಗಳಿವೆ. ಈ ಬಾರಿಯೂ ಪ್ರಾಥಮಿಕ ಹಂತದಲ್ಲಿರುವ ಸಮೀಕ್ಷೆಗಳ ವರದಿಯ ಪ್ರಕಾರ ಈ ಬಾರಿಗೂ ‘ಅತಂತ್ರ ಫಲಿತಾಂಶ’ ಎನ್ನುವ ಸೂಚನೆಗಳನ್ನು ನೀಡಿದ್ದು, ಸದ್ಯ ಪರಿಸ್ಥಿತಿಯಲ್ಲಿ ಇದೇ ಮುಂದುವರಿಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇದರೊಂದಿಗೆ
ಈಗಿರುವ ರಾಜಕೀಯ ಹವಾಮಾನವೂ, ಇದೇ ರೀತಿಯಲ್ಲಿರುವುದರಿಂದ ಕರ್ನಾಟಕ ಮತ್ತೊಮ್ಮೆ ‘ಅತಂತ್ರ ಸ್ಥಿತಿ’ಯಲ್ಲಿರುವುದೋ ಅಥವಾ ‘ಸರ್ವ ಸ್ವತಂತ್ರ’ವಾಗಿ ಒಂದು ಪಕ್ಷ ಆಡಳಿತ ನಡೆಸುವುದೋ ಎನ್ನುವ ಕುತೂಹಲ ಅನೇಕರಲ್ಲಿದೆ. ಈ ಎಲ್ಲವಕ್ಕೂ ಉತ್ತರ ‘ಫಲಿತಾಂಶ’ದ
ದಿನದವರೆಗೆ ಕಾಯಲೇಬೇಕು.