ಪ್ರತಿಸ್ಪಂದನ
ಪ್ರಕಾಶ ಹೆಗಡೆ
ಕಿರಣ್ ಉಪಾಧ್ಯಾಯರವರ ‘ವಿದೇಶವಾಸಿ’ ಅಂಕಣ (ವಿಶ್ವವಾಣಿ ಮಾ.೧೮) ಸಮಯೋಚಿತವಾಗಿ ಮೂಡಿಬಂದು, ಮತ ಚಲಾಯಿಸದವರನ್ನು ಬಡಿದೆ ಬ್ಬಿಸುವ ರೀತಿಯಲ್ಲಿತ್ತು. ಅಂಕಣಕಾರರೇ ವಿಶ್ಲೇಷಿಸಿರುವಂತೆ, ಜಗತ್ತಿನ ಸುಮಾರು ೧೦ ದೇಶಗಳಲ್ಲಿ ಚಾಲ್ತಿಯಲ್ಲಿರುವಂತೆ ಭಾರತದಲ್ಲೂ ಮತದಾನ ವನ್ನು ಕಡ್ಡಾಯ ಮಾಡಬೇಕು.
ಆಸ್ಟ್ರೇಲಿಯಾದ ಪ್ರಾಂತ್ಯಗಳಲ್ಲಿ ಮತ ಚಲಾಯಿಸದಿರುವುದು ಒಂದು ಅಪರಾಧ. ರಾಜ್ಯ ಚುನಾವಣೆಯಲ್ಲಿ ಮತ ಚಲಾಯಿಸಲು ವಿಫಲರಾದ ಮತ್ತು ಅದಕ್ಕೆ ಯಥೋಚಿತ ಕಾರಣವನ್ನು ಒದಗಿಸದ ಮತದಾರರಿಗೆ ಅಲ್ಲಿ ದಂಡ ವಿಧಿಸಲಾಗುತ್ತದೆ. ಮೊದಲ ಬಾರಿಯ ತಪ್ಪಿಗೆ ೨೦ ಡಾಲರ್ ದಂಡವನ್ನು ವಿಧಿಸಲಾಗುತ್ತದೆ ಮತ್ತು ತಪ್ಪಿತಸ್ಥರು ಈ ಹಿಂದೆಯೂ ಹೀಗೆ ದಂಡವನ್ನು ಪಾವತಿಸಿದ್ದರೆ, ದಂಡದ ಮೊತ್ತವು ೫೦ ಡಾಲರ್‌ಗೆ ಏರುತ್ತದೆ. ನೋಟಿಸ್‌ಗಳಿಗೆ
ಪ್ರತಿಕ್ರಿಯಿಸದ ಅಥವಾ ನಿಗದಿತ ದಂಡವನ್ನು ಪಾವತಿಸದ ಮತದಾರರ ವಿವರವನ್ನು ದಂಡ ಜಾರಿ ನೋಂದಣಿ ವ್ಯವಸ್ಥೆಗೆ ಕಳುಹಿಸಬಹುದು ಮತ್ತು ಅಲ್ಲಿಯ ಅಧಿಕಾರಿಗಳು ಅಂಥ ಮತದಾರರ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಬಹುದು.
ಮತ ಚಲಾಯಿಸಿದ ಬಗ್ಗೆ ಭಾರತದಲ್ಲಿ ಬೆರಳ ಮೇಲಿನ ಶಾಯಿಯ ಗುರುತೊಂದೇ ಹೊರಜಗತ್ತಿಗೆ ಸಾಬೀತುಮಾಡುವ ಸಾಧನವಾಗಿದೆ. ಕೆಲ ಕಂಪನಿಗಳು, ಮತ ಚಲಾಯಿಸದ ಕಾರ್ಮಿಕರಿಗೆ ವಿವಿಧ ರೀತಿಯ ದಂಡ ವಿಽಸುತ್ತಿವೆ. ಮತ ಚಲಾಯಿಸದವರು ದಂಡ ತಪ್ಪಿಸಲು ಅಂಥದೇ ಶಾಯಿಯಿಂದ ಬೆರಳಿಗೆ ಗುರುತು ಮಾಡಿಕೊಂಡು ದಂಡದಿಂದ ಬಚಾವಾಗಲು ಯತ್ನಿಸುತ್ತಾರೆ. ಆದ್ದರಿಂದ, ಇಂಥ ಅಡ್ಡತಂತ್ರಗಳಿಗೆ ಪ್ರತಿರೋಧಿಸಲೆಂದು, ಮತ ಚಲಾಯಿಸಿದ ವ್ಯಕ್ತಿಗೆ ಒಂದು ಪ್ರಮಾಣಪತ್ರ ನೀಡುವ ಅವಶ್ಯಕತೆಯಿದೆ.
ಅಂದರೆ, ವ್ಯಕ್ತಿಯು ಮತ ಚಲಾಯಿಸುತ್ತಿದ್ದಂತೆ ಆತನ ಆಧಾರ್ (ಅಥವಾ ಇನ್ನಾವುದೇ ಗುರುತಿನ ಚೀಟಿಯ) ಸಂಖ್ಯೆಯಿರುವ ಒಂದು ಆನ್‌ಲೈನ್ ಪ್ರಮಾಣಪತ್ರವನ್ನು ಮತಗಟ್ಟೆ ಅಧಿಕಾರಿಯ ವತಿಯಿಂದ ವಿತರಿಸುವಂತಾಗಬೇಕು. ಕೋವಿಡ್ ಸಂದರ್ಭದಲ್ಲಿ ನಾವು ಲಸಿಕೆಯನ್ನು ಪಡೆದುಕೊಂಡಾ ಗಲೂ ಇಂಥದೇ ಪ್ರಮಾಣ ಪತ್ರವನ್ನು ರೂಪಿಸಿ ನೀಡಲಾಗುತ್ತಿತ್ತು. ಹೀಗಾಗಿ, ಮತ ಚಲಾಯಿಸಿದವರಿಗೂ ಸೂಕ್ತ ಆಪ್ ನೆರವಿನಿಂದ ಪ್ರಮಾಣಪತ್ರ ವೊಂದನ್ನು ನೀಡಲು ಸಾಧ್ಯವಿದೆ.
ಇದೇ ರೀತಿಯಲ್ಲಿ, ಮತ ಚಲಾಯಿಸದವರಿಗೂ ಯಥೋಚಿತ ಎಚ್ಚರಿಕೆ ನೀಡಲು ಸಾಧ್ಯವಿದೆ. ಮತದಾನವು ಒಂದು ಜವಾಬ್ದಾರಿಯುತ ಕರ್ತವ್ಯವಾಗ ಬೇಕು. ಇದನ್ನು ನಿಭಾಯಿಸದ ಮತದಾರರಿಗೆ ‘ಹಕ್ಕು ಮತ್ತು ಕರ್ತವ್ಯದ ಉಲ್ಲಂಘನೆ’ ಎಂಬ ಹಣೆಪಟ್ಟಿಯಡಿ ದಂಡನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ಹೀಗಾದಲ್ಲಿ ಮತದಾನದ ಹೊಣೆಯಿಂದ ವಿಮುಖರಾಗುವವರು ಪಾಠ ಕಲಿಯುತ್ತಾರೆ. ನನ್ನ ಚಿಂತಕ ಸ್ನೇಹಿತರೊಬ್ಬರು ಸರಕಾರಕ್ಕೆ ‘ಚುನಾವಣಾ
ಸುಧಾರಣೆ’ ಸಂಬಂಧಿತ ಸಲಹೆಯೊಂದನ್ನು ಕಳಿಸಿದ್ದರು. ಅದು ಮತ ಚಲಾಯಿಸದವರ ಕುರಿತಾದುದಾಗಿತ್ತು. ವ್ಯಕ್ತಿಯೊಬ್ಬನ ಮತ ಚಲಾವಣೆಗೆ ವ್ಯವಸ್ಥೆ ಮಾಡುವುದಕ್ಕೆ ಸರಕಾರಕ್ಕೆ ೧೦೦ ರುಪಾಯಿ ಖರ್ಚಾಗುತ್ತದೆ ಎಂದಿಟ್ಟುಕೊಳ್ಳೋಣ. ಮತ ಚಲಾಯಿಸದವರು ಇದರ ಎರಡು ಪಟ್ಟು ಹಣ ವನ್ನು ಸರಕಾರಕ್ಕೆ ‘ವೋಟ್ ಸರ್ ಚಾರ್ಜ್’ ಎಂದು ಪಾವತಿಸಬೇಕು.
ಇದೊಂದು ರೀತಿಯ ತೆರಿಗೆ ಯಾಗಿದ್ದು, ಪಾವತಿಸದವರಿಗೆ ತೆರಿಗೆ ಪಾವತಿಸದ ದಂಡವೆಂದೇ ಪರಿಗಣಿಸಬೇಕು. ಈ ಸರ್‌ಚಾರ್ಜ್ ಅನ್ನು ಚುನಾವಣೆಯ ಖರ್ಚಿಗಾಗಿ ಮಾತ್ರವೇ ಉಪಯೋಗಿಸಿಕೊಳ್ಳಬೇಕು. ಈ ಸಂಬಂಧದ ನಿಯಮಗಳು ಮತ್ತು ನಿಬಂಧನೆಗಳ ರೂಪುರೇಷೆ ಗಳನ್ನು ಸರಕಾರಿ ಆದೇಶದ ಮೂಲಕ ಜಾರಿಗೊಳಿಸಬೇಕು ಎಂಬುದೇ ನನ್ನ ಚಿಂತಕ ಸ್ನೇಹಿತರು ಕಳಿಸಿದ್ದ ಸಲಹೆ. ಈ ಕುರಿತು ಸಂಬಂಧಪಟ್ಟವರು ಆಲೋಚಿಸಬಹುದಲ್ಲವೇ?
(ಲೇಖಕರು ಹವ್ಯಾಸಿ ಬರಹಗಾರರು)