Tuesday, 10th September 2024

ಈ ಚುನಾವಣೆಯಲ್ಲಿ ಪ್ರತಿಯೊಂದು ಮತಕ್ಕೂ ತೂಕವಿದೆ, ಮೌಲ್ಯವಿದೆ

ಚದುರಂಗ

ಹರೀಶ್ ಬಿಜೂರ್‌

ನಿಮಗೆ ಈಗಾಗಲೇ ಗೊತ್ತಿರುವಂತೆ ಇದು ಲೋಕಸಭಾ ಚುನಾವಣಾ ಪರ್ವ. ಭಾರತದ ಚುನಾವಣಾ ಆಯೋಗವು ಪ್ರಪಂಚದ ಅತಿದೊಡ್ಡ ಚುನಾವಣಾ ಕಸರತ್ತಿನ ಆಯೋಜನೆಯಲ್ಲಿ ವ್ಯಸ್ತವಾಗಿದೆ. ಚುನಾವಣೆಗೆ ಸಂಬಂಧಿಸಿದ ವೈವಿಧ್ಯಮಯ ಸಿದ್ಧತೆಗಳು ಮತ್ತು ಚಟುವಟಿಕೆಗಳಿಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಏಪ್ರಿಲ್ ೧೯ರಂದು ಶುರುವಾಗುವ ಈ ಲೋಕಸಮರ ಜೂನ್ ೧ರಂದು ಸಂಪನ್ನಗೊಳ್ಳಲಿದೆ.

ಜೂನ್ ೪ರಂದು ಫಲಿತಾಂಶ ಪ್ರಕಟಗೊಳ್ಳುವುದರೊಂದಿಗೆ ಈ ಕಸರತ್ತು ನಿರ್ಣಾಯಕ ಘಟ್ಟವನ್ನು ಮುಟ್ಟುತ್ತದೆ. ಹೀಗಾಗಿ, ಒಂದಿಡೀ ಭಾರತವೇ ಈಗ ಚುನಾವಣಾ ಜ್ವರವನ್ನು ಮೈಗೆ ಏರಿಸಿಕೊಂಡಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಬಹುತೇಕರಿಗೆ ಗೊತ್ತಿರುವಂತೆ ಈ ಬಾರಿಯ ಬೇಸಗೆ ಅಸಹನೀಯವಾಗಿದೆ. ಅದರ ನಡುವೆಯೇ ದಾಂಗುಡಿಯಿಟ್ಟಿರುವ ಈ ಚುನಾವಣೆಯಲ್ಲಿ ಪ್ರತಿಯೊಂದು ರಾಜಕೀಯ ಪಕ್ಷದ ರಾಜಕಾರಣಿಗಳು ಬಿಸಿಲಿನ ಬೇಗೆಯಲ್ಲೇ ಪ್ರಚಾರಕ್ಕೆ ಲಗ್ಗೆಯಿಟ್ಟು, ಮತದಾರರ ಹೃದಯ ಗಳಿಗೂ ಲಗ್ಗೆಯಿಡಬೇಕಾದ ಪರಿಸ್ಥಿತಿಯ ‘ಸಾಂದರ್ಭಿಕ ಶಿಶುಗಳು’ ಆಗಿಬಿಟ್ಟಿದ್ದಾರೆ!

ಇದರ ಒಂದು ಭಾಗವಾಗಿ ‘ಸ್ಥಿತಿವಂತ’ ಅಭ್ಯರ್ಥಿಗಳ ಹೆಲಿಕಾಪ್ಟರ್‌ಗಳು ಗಾಳಿಯಲ್ಲಿ ಹಾರಾಡುತ್ತಿದ್ದರೆ, ಪ್ರತಿಯೊಂದು ರಾಜಕೀಯ ಪಕ್ಷದ ಧ್ವಜಗಳೂ ಎಲ್ಲೆಡೆ ರಾರಾಜಿಸುತ್ತಿವೆ. ಮಾತ್ರವಲ್ಲದೆ, ಮುದ್ರಣ-ದೃಶ್ಯ-ಸಾಮಾಜಿಕ ಮಾಧ್ಯಮಗಳಲ್ಲೂ
ಚುನಾವಣೆಯ ಸದ್ದು-ಗದ್ದಲ ತುಂಬಿಹೋಗಿದೆ. ಇವೆಲ್ಲದರ ನಡುವೆ, ಭವ್ಯ ಭಾರತದ ಮಹಾನ್ ಮತದಾರನು ನೋಡ ನೋಡುತ್ತಿದ್ದಂತೆಯೇ ವಿಶೇಷ ಅನುಭೂತಿಯಲ್ಲಿ ತೇಲುತ್ತಿದ್ದಾನೆ ಹಾಗೂ ಸ್ವನಿಯಂತ್ರಣವನ್ನು ಕಾಯ್ದುಕೊಂಡಿದ್ದಾನೆ. ಕಾರಣ ಮತದಾರ ಮಾತ್ರವೇ ‘ಬಾಸ್’ ಎನಿಸಿಕೊಳ್ಳುವ, ಮಿಕ್ಕವರೆಲ್ಲರೂ ಏನೇನೂ ಅಲ್ಲದ ಪರ್ವಕಾಲವೆಂದರೆ ಇಂಥ ಸಾರ್ವತ್ರಿಕ ಚುನಾವಣೆಗಳ ಘಟ್ಟಮಾತ್ರವೇ.

ಈ ಅನುಪಮ ಕ್ಷಣ ಬರುವುದು ೫ ವರ್ಷಕ್ಕೊಮ್ಮೆಯಾದರೂ, ಅದರ ಸುಖದ ಕ್ಷಣಗಳನ್ನು ಆನಂದಿಸುವ ಅವಕಾಶವನ್ನು ಯಾರೂ ಬಿಟ್ಟುಕೊಡುವುದಿಲ್ಲ! ಕಾಕತಾಳೀಯವೆಂಬಂತೆ, ಈ ವರ್ಷ ಬರೋಬ್ಬರಿ ೬೪ ದೇಶಗಳಲ್ಲಿ ಹೀಗೆಯೇ ಚುನಾವಣೆಗಳು ನಡೆಯಲಿವೆ; ಆದರೆ ಅಲ್ಲಿನ ಯಾವುದೇ ಚಟುವಟಿಕೆಗಳು ಭಾರತದಲ್ಲಿ ಕಾಣಬರುವಂಥ ಚುನಾವಣಾ ಕಸರತ್ತುಗಳನ್ನು ಸರಿ ಗಟ್ಟುವುದಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಅದಕ್ಕೆ ಕಾರಣಗಳಿವೆ. ಈ ಸಲದ ಚುನಾವಣೆಯಲ್ಲಿ ಬರೋಬ್ಬರಿ ೯೬.೮ ಕೋಟಿ ಯಷ್ಟು ಅರ್ಹ ಭಾರತೀಯ ಮತದಾರರನ್ನು ತಮ್ಮದೇ ಆದ ರೀತಿಯಲ್ಲಿ ಓಲೈಸಲು ವಿವಿಧ ರಾಜಕೀಯ ಪಕ್ಷಗಳ ಪುಢಾರಿಗಳು ಇನ್ನಿಲ್ಲದಂತೆ ಯತ್ನಿಸುತ್ತಾರೆ.

ಅಮೆರಿಕೆಗೆ ಹೋಲಿಸಿದರೆ ಭಾರತದಲ್ಲಿ ನಡೆಯುವುದು ೪ ಪಟ್ಟು ದೊಡ್ಡ ಗಾತ್ರದ ಚುನಾವಣೆ (ಅಮೆರಿಕದಲ್ಲಿನ ಅರ್ಹ ಮತದಾರರ ಸಂಖ್ಯೆ ೨೪.೪ ಕೋಟಿಯಷ್ಟು). ನಮ್ಮ ಚುನಾವಣೆಯ ಅಗಾಧತೆ ಇಷ್ಟಕ್ಕೇ ನಿಲ್ಲುವುದಿಲ್ಲ. ೧೦.೫ ಲಕ್ಷದಷ್ಟು ಮತದಾನ ಕೇಂದ್ರಗಳು, ಚುನಾವಣಾ ಕರ್ತವ್ಯದ ಮೇಲೆ ನಿಯೋಜಿತರಾಗುವ ಒಂದೂವರೆ ಕೋಟಿಯಷ್ಟು ವಿವಿಧ ಸ್ತರದ ಅಧಿಕಾರಿಗಳು/ಸಿಬ್ಬಂದಿವರ್ಗ, ಮತ್ತು ೧.೮೨ ಕೋಟಿ ಯಷ್ಟಿರುವ ಮೊದಲ ಬಾರಿಯ ಮತದಾರರು ಹೀಗೆ ಅಂಕಿಗಳೊಂದಿಗಿನ ಆಟವಿಲ್ಲಿ ಬಗೆಬಗೆಯಾಗಿದೆ. ಒಟ್ಟಾರೆ ಹೇಳುವುದಾದರೆ, ಈ ಬಾರಿಯ ಲೋಕಸಮರವು ಹಿಂದೆಂದಿಗಿಂತಲೂ ದೊಡ್ಡದಾಗಿದೆ.

ಈ ಚುನಾವಣಾ ಜ್ವರಕ್ಕೆ ಇರುವ ಆಯಾಮಗಳು ಒಂದೆರಡಲ್ಲ. ಒಂದೆಡೆ ಇದು, ಬಿಸಿಲಿನ ಬೇಗೆಯಲ್ಲಿ ಬಳಲಿ ಬೆಂಡಾಗುವ, ಪ್ರತಿಯೊಂದು ರಾಜಕೀಯ ಪಕ್ಷದ ಅಭ್ಯರ್ಥಿ ಮತ್ತು ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವ ಜ್ವರವಾಗಿದ್ದರೆ, ಮತ್ತೊಂದೆಡೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವ ಮಾಧ್ಯಮಗಳ ಚಟುವಟಿಕೆಯಿರುತ್ತದೆ. ಒಂದರ್ಥದಲ್ಲಿ ಈ ೨-೩ ತಿಂಗಳು ಸುದ್ದಿ ವಾಹಿನಿಗಳ ಪಾಲಿಗೆ ಹಬ್ಬದೂಟದ ಅವಧಿ. ಅಂದರೆ ಅವುಗಳ ವೀಕ್ಷಕರ ಸಂಖ್ಯೆ ಉತ್ತುಂಗಕ್ಕೇರುವ ಘಟವಿದು. ಕಾರಣ, ಅಕ್ಷರಶಃ ಪ್ರತಿ ಅರ್ಧಗಂಟೆಗೊಮ್ಮೆ ಈ ವಾಹಿನಿಗಳಲ್ಲಿ ‘ಬ್ರೇಕಿಂಗ್ ನ್ಯೂಸ್’ ಬಿತ್ತರವಾಗುತ್ತಿರುತ್ತದೆ.

ಇನ್ನು ಪತ್ರಿಕೆಗಳ ವಿಷಯಕ್ಕೆ ಬಂದರಂತೂ, ರಾಜಕೀಯ ವಿಶ್ಲೇಷಕರು ಮಂಡಿಸಿದ ಮತಕ್ಷೇತ್ರ ಮಟ್ಟದ ವಿಶ್ಲೇಷಣೆಗಳು ಅವು ಗಳಲ್ಲಿ ತುಂಬಿಕೊಂಡಿರುತ್ತವೆ. ಈ ಘಟ್ಟದಲ್ಲಿ ಯಾವುದೇ ವಾದ ಹೊಮ್ಮಿದರೂ, ಅದಕ್ಕೊಂದು ಪ್ರತಿವಾದವನ್ನು ಹೊಮ್ಮಿ ಸುವ ಮೂಲಕ ಸರಿಹೊಂದಿಸಲಾಗುತ್ತದೆ! ಈಗಂತೂ ರಾಜಕೀಯ ಎದುರಾಳಿಗಳು ಮನಸ್ಸಿಗೆ ಬಂದಂತೆ ಆರೋಪ-ಪ್ರತ್ಯಾರೋಪ ಗಳನ್ನು ಮಾಡುವ ಪರಿಪಾಠಕ್ಕೆ ಇನ್ನಿಲ್ಲದ ವೇಗ ಸಿಕ್ಕಿದೆ. ಮುಖ-ಮೂತಿ ನೋಡದೆ ಒಬ್ಬರನ್ನೊಬ್ಬರು ಮಾತಿನಿಂದ ತಿವಿಯು ವುದು ಇಲ್ಲಿ ವಾಡಿಕೆಯೇ ಆಗಿ ಬಿಟ್ಟಿದೆ.

ಹೀಗೆ ಒಬ್ಬರಾಡಿದ ಮಾತನ್ನು ಮತ್ತೊಬ್ಬರು ಅಥವಾ ಆ ಮಾತಿಗೆ ಸಂಬಂಧಿಸಿದವರು ಸಾರಾಸಗಟಾಗಿ ನಿರಾಕರಿಸುವುದು, ತಮ್ಮನ್ನು ಸಮರ್ಥಿಸಿಕೊಳ್ಳುವುದು ರಾಜಕೀಯದಲ್ಲಿ ಕಾಣಬರುವ ಒಂದು ಕುಶಲಕಲೆಯೇ ಆಗಿಬಿಟ್ಟಿದೆ ಎಂದರೆ ಅತಿಶಯೋಕ್ತಿ ಆಗಲಾರದು. ವದಂತಿಗಳು ಮತ್ತು ಪಿತೂರಿಯ ಸಿದ್ಧಾಂತಗಳು ಒಂಥರಾ ಸ್ನೇಹಿತರು ಹಾಗೂ ಹಿತಶತ್ರುಗಳಿದ್ದ ಹಾಗೆ; ಅವು ನಮ್ಮ
ನಡುವೆಯೇ ಪ್ರತಿಕ್ಷಣವೂ ಗಿರಕಿ ಹೊಡೆಯುತ್ತಲೇ ಇರುತ್ತವೆ. ನಮ್ಮಲ್ಲಿ ಬಹುತೇಕರು ಇಂಥ ಪರಿಸ್ಥಿತಿಗೆ/ಚಿತ್ತಸ್ಥಿತಿಗೆ ಒಗ್ಗಿಕೊಂಡು ಬಿಟ್ಟಿರುವುದರಿಂದ, ವದಂತಿಗಳು ಹರಡಿದಾಗ ಯಾರಿಗೇನೂ ಹೇಳಿಕೊಳ್ಳುವಷ್ಟು ಅಚ್ಚರಿಯಾಗುವುದಿಲ್ಲ.

ಕೆಲವರು ಇದನ್ನು ಚುನಾವಣೆಯಂಥ ಮಹದಾಟದ ಅವಿಭಾಜ್ಯ ಅಂಗ ಎಂದು ಪರಿಗಣಿಸಿ ರಿಯಾಯಿತಿ ನೀಡಿದರೆ, ಮತ್ತಷ್ಟು
ಮಂದಿ ಇಂಥ ವದಂತಿಗಳ ಸೆಳೆತಕ್ಕೆ ಸಿಲುಕುವುದೂ ಉಂಟು. ಅದೇನೇ ಇರಲಿ, ಸುದ್ದಿ-ಗಾಳಿಸುದ್ದಿಗಳು, ಪಿತೂರಿಗಳ ಹರಿವೇ ಮುಖ್ಯವಾಗಿರುವ ಈ ಚುನಾವಣಾ ಅಖಾಡದಲ್ಲಿ ಜಾಹೀರಾತು, ಇವೆಂಟ್ ಮ್ಯಾನೇಜ್‌ಮೆಂಟ್, ಸಾರ್ವಜನಿಕ ಸಂಪರ್ಕ
(ಪಿಆರ್), ಪ್ರಚಾರ ಮತ್ತು ಬ್ರ್ಯಾಂಡ್ ನಿರ್ಮಾಣದಂಥ ಚಟುವಟಿಕೆಗಳು ಭರಪೂರ ಕಾಣಬರುವ ಸಕಾರಾತ್ಮಕ ಚಾಲಕಶಕ್ತಿ
ಗಳಾಗಿರುತ್ತವೆ. ಜನಮನದಲ್ಲಿ ಬೇರೂರಿಸಲಾದ ಸುಳ್ಳು-ವದಂತಿ ಮತ್ತು ಪಿತೂರಿ ಸಿದ್ಧಾಂತದ ನಕಾರಾತ್ಮಕ ಶಕ್ತಿಗಳನ್ನು ಅನೇಕರು ತಮ್ಮ ಹಿತಾಸಕ್ತಿಯ ನೆರವೇರಿಕೆಯ ಸಾಧನಗಳಾಗಿ ಬಳಸಿಕೊಳ್ಳುವುದುಂಟು.

ಹೀಗಾಗಿ, ಚುನಾವಣಾ ಕಣದಲ್ಲಿರುವ ರಾಜಕೀಯ ಪಕ್ಷಗಳು ಇಂಥ ಪ್ರತಿಯೊಂದು ‘ಗಾಳಿಸುದ್ದಿ- ಸ್ಪೋಟ’ವನ್ನೂ ಮತಕ್ಷೇತ್ರಗಳ ಮಟ್ಟದಲ್ಲಿ ಸೂಕ್ಷ್ಮವಾಗಿ ವೀಕ್ಷಿಸುತ್ತವೆ, ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗಲು ಹಾಗೂ ಅದನ್ನು ಪ್ರತಿರೋಧಿಸಲು/ತಟಸ್ಥ ಗೊಳಿಸಲು ತಂತಮ್ಮ ಚುನಾವಣಾ ‘ಸಮರ ಕೊಠಡಿ’ಗಳಿಗೆ ಹಿಂದಿರುಗುತ್ತವೆ. ಪ್ರಸಕ್ತ ವಾತಾವರಣವೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಅಂದರೆ, ಒಟ್ಟಾರೆ ಚುನಾವಣಾ ಅಖಾಡವು ಇಂಥ ಸಾಕಷ್ಟು ವಸ್ತು-ವಿಷಯಗಳಿಂದ ಸನ್ನದ್ಧವಾಗಿದ್ದು ಅದಕ್ಕೆ ಅಗತ್ಯ ವಿರುವ ಶಕ್ತಿಯನ್ನು ತುಂಬಿಕೊಂಡಿದೆ. ಕಾರಣ, ‘ಗೆಲ್ಲಲೇಬೇಕು’ ಎಂಬ ಉತ್ಕಟ ಆಸೆ ಪ್ರತಿಯೊಬ್ಬ ಅಭ್ಯರ್ಥಿಯಲ್ಲೂ, ಎಲ್ಲ ರಾಜಕೀಯ ಪಕ್ಷಗಳಲ್ಲೂ ಭೋರ್ಗರೆಯುತ್ತಿದೆ. ಇದನ್ನು ಕೊಂಚ ಬಿಡಿಸಿ ಹೇಳುವುದಾದರೆ, ‘ಅಬ್ ಕಿ ಬಾರ್, ಚಾರ್ ಸೌ ಪಾರ್’ (ಸ್ಥಾನಗಳಿಕೆಯು ಈ ಬಾರಿ ೪೦೦ನ್ನು ದಾಟಲಿದೆ) ಎಂಬ ಆವೇಶಭರಿತ ಘೋಷವಾಕ್ಯದೊಂದಿಗೆ ಬಿಜೆಪಿ ಮತ್ತು ಅದನ್ನು ಒಳಗೊಂಡಿರುವ ಎನ್‌ಡಿಎ ಒಕ್ಕೂಟ ಭರ್ಜರಿ ಬಲದೊಂದಿಗೆ ನಳನಳಿಸುತ್ತಿರುವಂತೆ ತೋರುತ್ತಿದೆ.

ಮತ್ತೊಂದೆಡೆ, ಬಿಜೆಪಿಯೇತರ ವಿಪಕ್ಷಗಳನ್ನು ಮಡಿಲಲ್ಲಿ ಇಟ್ಟುಕೊಂಡಿರುವ ‘ಇಂಡಿಯ’ ಮೈತ್ರಿಕೂಟವು, ಸದ್ಯಕ್ಕೆ ಶಾಂತವೂ ಅಸ್ಪಷ್ಟವೂ ಆಗಿರುವ ಆದರೆ ನಿರ್ಣಾಯಕವಾಗಿರುವ, ಹುಯಿಲಿನ ಫಸಲನ್ನು ಸಮಯ ನೋಡಿಕೊಂಡು ಕಟಾವು ಮಾಡಿಕೊಳ್ಳಲು ಆಶಿಸುತ್ತಿರುವಂತಿದೆ. ಈ ಕದನದಲ್ಲಿ ಸೆಣಸುತ್ತಿರುವ ಕಲಿಗಳು ಯಾರು ಎಂಬುದು ಸ್ಪಷ್ಟಗೋಚರ. ಆದರಿಲ್ಲಿ ಅಽಕಾರಾರೂಢ ಬಿಜೆಪಿ ವಿರುದ್ಧ ತೊಡೆತಟ್ಟಿರುವುದು ಏಕೈಕ ಪಕ್ಷವಲ್ಲ; ಮೇಲ್ನೋಟಕ್ಕೆ ಸಂಘಟಿತವೆಂದು ಕಂಡರೂ ಆಳದಲ್ಲಿ ವಿಘಟಿತವಾಗಿರುವ ಅನೇಕ ಪಕ್ಷಗಳ ಕೂಡಿಕೆ! ಹೀಗಾಗಿ, ಮುಂಚೂಣಿಯಲ್ಲಿರುವ ಬಿಜೆಪಿಯೊಂದಿಗಿನ ಆಡಳಿತಾರೂಢ ಎನ್‌ಡಿಎ ಒಕ್ಕೂಟವು ನಿರ್ಣಾಯಕ ವಿಜಯವನ್ನು ಹಾಗೂ ಪ್ರಧಾನಿ ಮೋದಿಯವರು ೩ನೇ ಅವಧಿಗೂ ಆಡಳಿತದ ಚುಕ್ಕಾಣಿ ಹಿಡಿಯುವಂತಾಗುವುದನ್ನು ನಿರೀಕ್ಷಿಸುತ್ತಿರುವಂತೆಯೇ, ‘ಇಂಡಿಯ’ ಮೈತ್ರಿಕೂಟವು ಆಶ್ಚರ್ಯಕರ/ಅನಿರೀಕ್ಷಿತ ಫಲಿತಾಂಶವು ದಕ್ಕಬಹುದೇ ಎಂದು ಆಶಿಸುತ್ತಿದೆ.

ಒಂದೆಡೆ ಎನ್‌ಡಿಎ ಒಕ್ಕೂಟವು ಪ್ರಧಾನಿ ಮೋದಿಯವರ ವೈಯಕ್ತಿಕ ಚರಿಷ್ಮಾ ಹಾಗೂ ಅವರ ನೇತೃತ್ವದ ಸರಕಾರದ ಅದ್ಭುತ ಪ್ರದರ್ಶನವನ್ನೇ ತನ್ನ ಗೆಲುವಿಗೆ ಊರುಗೋಲಾಗಿ ನೆಚ್ಚಿದ್ದರೆ, ಮತ್ತೊಂದೆಡೆ ‘ಇಂಡಿಯ’ ಮೈತ್ರಿಕೂಟವು ಸದ್ದಿಲ್ಲದೆ ದಕ್ಕಿಬಿಡಬಹುದಾದ ಬಹುಮತ ಮತ್ತು ಅದರ ಹಿಂದಿರಬಹುದಾದ ವಿವರಿಸಲಾಗದ ಜನಾಭಿಪ್ರಾಯದ ಆಧಾರದ ಮೇಲೆ ಅನಿರೀಕ್ಷಿತ/ಅಚ್ಚರಿದಾಯಕ ಫಲಿತಾಂಶಕ್ಕಾಗಿ ಆಶಿಸುತ್ತಿದೆ. ಇವು, ಮತಗಳ ಎಣಿಕೆಯ ದಿನವು ಬರುವವರೆಗೂ ಬಹಿರಂಗವಾಗದ ರಹಸ್ಯಗಳು ಎಂಬುದು ನಿಮ್ಮ ಗಮನಕ್ಕೆ!

ಇದುವೇ ಪ್ರಜಾಪ್ರಭುತ್ವದ ಮತ್ತು ಸಾರ್ವತ್ರಿಕ ಚುನಾವಣೆಯ ಸೊಬಗು. ಅಂದರೆ, ಸಂಪೂರ್ಣ ರಕ್ಷಿಸಲ್ಪಟ್ಟಿರುವ ಮತ್ತು ಗೌರವಿಸಲ್ಪಟ್ಟಿರುವ ಈ ರಹಸ್ಯ ಮತದಾನವೆಂಬುದೇ ನಮ್ಮ ಚುನಾವಣಾ ವ್ಯವಸ್ಥೆಗೆ ಮೆರುಗು ನೀಡುತ್ತದೆ. ಇದು, ಚುನಾವಣಾ ಅಖಾಡದಲ್ಲಿರುವ ಅತಿರಥ-ಮಹಾರಥರ ಪೈಕಿ ಅಂತಿಮವಾಗಿ ನಗೆ ಬೀರುವುದು ಯಾರು ಎಂಬುದನ್ನು ಹೇಳಬಲ್ಲ ಸಾಮರ್ಥ್ಯ ವಿರುವ ‘ಅಭಿಮತ’. ಇದು, ಹಿಂದೆಲ್ಲಾ ಹಣಬಲ, ಜನಬಲ, ತೋಳ್ಬಲದೊಂದಿಗೆ ಮೆರೆದ ಶಕ್ತಿಶಾಲಿಗಳನ್ನೂ ವಿನೀತರನ್ನಾಗಿಸಿದ ‘ಜನಮತ’. ಮಾತ್ರವಲ್ಲ, ಇದೊಂದು ‘ಪವಿತ್ರವಾದ ಮತ’ ಕೂಡ.

ಮತದಾನದ ದಿನಾಂಕವು ಸಮೀಪಿಸುತ್ತಿದ್ದಂತೆ, ನಾವೊಂದು ವಿಷಯವನ್ನು ಚೆನ್ನಾಗಿ ಮನನ ಮಾಡಿಕೊಳ್ಳಬೇಕಾದ್ದು ಬಹು ಮುಖ್ಯ. ಭವ್ಯ ಭಾರತದ ಪ್ರಜೆಗಳಾಗಿ ನಾವು ನಮ್ಮ ಮತಗಳಿಗಿರುವ ಮೌಲ್ಯವನ್ನು ಅರಿಯಬೇಕಿದೆ ಹಾಗೂ ಅದರಲ್ಲಿ ಅಂತರ್ಗತವಾಗಿರುವ ಶಕ್ತಿಯನ್ನು ಮನಗಂಡು ಅದನ್ನು ಗೌರವಿಸಬೇಕಿದೆ. ಹೀಗಾಗಿ ಮತದಾನವೆಂಬುದು ಸ್ವಯಂ ಪ್ರೇರಣೆ ಯಿಂದ ನಡೆಯಬೇಕೇ ವಿನಾ, ಅದು ಬಲವಂತದ ಮಾಘಸ್ನಾನ ಆಗಬಾರದು.

ಮತದಾನವು ನಮ್ಮ ಹಕ್ಕನ್ನು, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಕರ್ತವ್ಯವನ್ನು ಪ್ರತಿನಿಽಸುತ್ತದೆ. ನಾವು ನಮ್ಮ ಹಕ್ಕನ್ನು
ತ್ಯಜಿಸಿಬಿಡಬಹುದೇನೋ, ಆದರೆ ನಮ್ಮ ಕರ್ತವ್ಯವನ್ನು ತೊರೆಯಲಾದೀತೇ? ಅದನ್ನು ಕಟ್ಟುಬಿದ್ದು ನಿರ್ವಹಿಸಬೇಕಾದ್ದು ನಮ್ಮ ಧರ್ಮ. ಲಭ್ಯ ಅಂಕಿ-ಅಂಶಗಳ ಪ್ರಕಾರ, ೨೦೧೯ರ ವರ್ಷದಲ್ಲಿ ೧೭ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ, ೯೧.೨
ಕೋಟಿಯಷ್ಟು ಅರ್ಹ ಮತದಾರರ ಪೈಕಿ ತಮ್ಮ ಹಕ್ಕನ್ನು ಚಲಾಯಿಸಿದ್ದು ಶೇ.೬೭ರಷ್ಟು ಮಂದಿ ಮಾತ್ರ; ಅಂದರೆ ಶೇ.೩೩ರಷ್ಟು
ಮಂದಿ ಮತದಾನ ಮಾಡದಿರಲು ನಿರ್ಧರಿಸಿದ್ದರು ಅಂತಾಯ್ತು.

ಹಾಗಿದ್ದರೆ ಮತದಾನ ಮಾಡುವುದಾದರೂ ಏತಕ್ಕೆ? ಇದಕ್ಕೆ ಹಲವು ಕಾರಣಗಳಿವೆ. ನಮ್ಮ ಪೈಕಿ ಯಾರು ಮತದಾನಕ್ಕೆ
ಮುಂದಾಗುತ್ತಾರೋ ಅವರು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಬೆಳವಣಿಗೆಗಳಿಗೆ ಸಹಭಾಗಿಗಳಾಗುತ್ತಾರೆ, ಅದರ ಸಮೃದ್ಧಿಗೆ ತಮ್ಮದೇ ಆದ ಬಲವನ್ನು ತುಂಬುತ್ತಾರೆ. ಮತದಾನದಿಂದ ವಿಮುಖರಾಗುವವರು ಭೌತಿಕವಾಗಿ ಈ ವ್ಯವಸ್ಥೆಯ ಭಾಗವಾಗಿದ್ದರೂ, ತಾತ್ವಿಕವಾಗಿ ನಮ್ಮವರಾಗುವುದಿಲ್ಲ.

ಮತದಾನ ಮಾಡುವವರು ತಾವಾಡಿದ ಮಾತಿನಂತೆ ನಡೆಯುವವರಾಗಿದ್ದರೆ, ಅದರಿಂದ ವಿಮುಖರಾದವರು ಬರೀ ಆಡಿದ್ದನ್ನೇ ಆಡುವ ‘ಕಿಸುಬಾಯಿ ದಾಸ’ರಾಗಿ ಉಳಿದುಬಿಡುತ್ತಾರೆಯೇ ವಿನಾ, ವ್ಯವಸ್ಥೆಯ ಸುಧಾರಣೆಗೆ ನಿಜಾರ್ಥದಲ್ಲಿ ಕೊಡುಗೆಯನ್ನೇನೂ ನೀಡುವುದಿಲ್ಲ. ಒಂಥರಾ ಇವರು ಯಾವಾಗಲೂ ಹೆಚ್ಚು ಶಬ್ದ ಮಾಡುವ ಖಾಲಿ ಡಬ್ಬದಂತೆ! ಪ್ರತಿ ಚುನಾವಣೆಯೂ ಜನಾದೇಶ ವನ್ನು ಬಯಸುವ ಒಂದು ಮಹತ್ವದ ಘಟನೆಯಾಗಿರುತ್ತದೆ. ಒಂದು ವೇಳೆ, ನೀವು ಮತ್ತು ನಾನು ಮತದಾನ ಮಾಡದಿದ್ದರೆ, ಅಪಾತ್ರರೆನಿಸಿಕೊಂಡವರು ಈ ಜನಾದೇಶವನ್ನು ಬಲವಂತದಿಂದ ಅಥವಾ ಕುತಂತ್ರದಿಂದ ತಮ್ಮ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಈ ಜನಾದೇಶವೆಂಬುದು ಒಂದು ‘ಬಹುಮತದ ಜನಾದೇಶ’ ಆದರೇನೇ ಸೊಗಸು. ಮತದಾನದಿಂದ ವಿಮುಖ ರಾಗುವವರ ನಿರ್ಲಕ್ಷ್ಯ ಮತ್ತು ಹೊಣೆಗೇಡಿತನದ ಕಾರಣದಿಂದಾಗಿ ಇದು ಅಪಾತ್ರರ ಕೈವಶವಾಗುವುದನ್ನು ನೀವು ಬಯಸುವಿರಾ? ನಿರ್ದಿಷ್ಟವಾಗಿ ಹೇಳುವುದಾದರೆ, ನಾವು ಚಲಾಯಿಸುವ ಪ್ರತಿಯೊಂದು ಮತವೂ, ವಿದ್ಯುನ್ಮಾನ ಮತಯಂತ್ರ ದೊಳಗೆ (ಇವಿಎಂ) ದಾಖಲಾದ ಒಂದು ನೈಜದನಿಯೇ ಆಗಿರುತ್ತದೆ.

ಮತಗಳ ಎಣಿಕೆಯ ದಿನದಂದು ಹೊಮ್ಮುವ ಫಲಿತಾಂಶವು, ದೇಶದ ಮೂಲೆ ಮೂಲೆಗಳಿಂದ ನಿಮ್ಮಂಥ ಹಾಗೂ ನನ್ನಂಥ
‘ನೈಜ-ನಾಗರಿಕರು’ ವ್ಯಕ್ತಪಡಿಸಿದ ಅಂಥ ನೈಜದನಿಗಳ ಸಮಷ್ಟಿರೂಪವೇ ಆಗಿರುತ್ತದೆ. ಮತದಾನದಿಂದ ವಿಮುಖರಾಗುವ
ಮೂಲಕ ನಿಮ್ಮ ಆ ನೈಜದನಿಯು ನಿರ್ಲಕ್ಷಿಸಲ್ಪಡುವುದನ್ನು ನೀವು ಬಯಸುವಿರಾ? ಮತದಾನದ ಮೂಲಕ, ‘ನಾನೂ ಎಲ್ಲರೊ ಳಗೊಬ್ಬ, ಈ ವ್ಯವಸ್ಥೆಯಲ್ಲಿ ನಾನೂ ಸಹಭಾಗಿ’ ಎಂದು ನೀವು ದನಿಯೆತ್ತಿ ಹೇಳಲು ಸಾಧ್ಯವಾಗುತ್ತದೆ.

ಹೌದಲ್ಲವೇ? ಪ್ರತಿ ಚುನಾವಣೆಯೂ ಹೀಗೆ ‘ಹೌದು’ ಅಥವಾ ‘ಇಲ್ಲ’ ಎಂದು ಹೇಳಲು ಇರುವ ಒಂದು ಅವಕಾಶವಾಗಿದೆ. ಒಂದೋ
ನೀವು ಯಥಾಸ್ಥಿತಿಗೆ ಮತ ಚಲಾಯಿಸುತ್ತೀರಿ ಅಥವಾ ಬದಲಾವಣೆಗೆ ಓಗೊಡುತ್ತೀರಿ. ಈ ಎರಡೂ, ೫ ವರ್ಷಗಳಿಗೊಮ್ಮೆ ಮರು ಪರಿಶೀಲನೆಗೆ ಬರುವ ಪ್ರಮುಖ ಅಂಶಗಳಾಗಿರುತ್ತವೆ ಎಂಬುದನ್ನು ಮರೆಯದಿರಿ. ಪ್ರಜಾಪ್ರಭುತ್ವವು ಸಮರ್ಥವಾಗಿ ಸಾಕಾರ ಗೊಳ್ಳುವುದಕ್ಕೆ ಅನುವು ಮಾಡಿಕೊಡುವ ಚುನಾವಣೆ ಎಂಬ ಬಸ್ಸು ಬಂದು ನಮ್ಮೆದುರು ನಿಂತಿರುವಾಗಲೂ ಅದನ್ನು ತಪ್ಪಿಸಿ ಕೊಳ್ಳುವ ಹುಂಬತನವೇಕೆ, ಕುಂಟುನೆಪವೇಕೆ? ನಿಗದಿತ ದಿನಾಂಕದಂದು ಈ ಬಸ್ ಹತ್ತಿಕೊಳ್ಳೋಣ, ಮತದಾನ ಕೇಂದ್ರಕ್ಕೆ
ತೆರಳಿ ನಮ್ಮ ಹಕ್ಕು ಚಲಾಯಿಸೋಣ, ತನ್ಮೂಲಕ ಕರ್ತವ್ಯ ನಿರ್ವಹಿಸಿದ ಸಾರ್ಥಕ್ಯವನ್ನು ಕಂಡುಕೊಳ್ಳೋಣ.

(ಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್)
(ಲೇಖಕರು ಬ್ರ್ಯಾಂಡ್ ಗುರು ಮತ್ತು ‘ಹರೀಶ್ ಬಿಜೂರ್
ಕನ್ಸಲ್ಟ್ಸ್’ ಸಂಸ್ಥೆಯ ಸಂಸ್ಥಾಪಕರು)

Leave a Reply

Your email address will not be published. Required fields are marked *