Thursday, 12th December 2024

ಚುನಾವಣಾ ಚಿಂತೆಗೆ ಬೀಳು ನೀ ಮತದಾರ

ಪ್ರಚಲಿತ

ಹೃತಿಕ್ ಕುಲಕರ್ಣಿ

hrithikulkarni@gmail.com

ಭಾರತದಂಥ ದೇಶದಲ್ಲಿ ವರ್ಷದ 12 ತಿಂಗಳೂ ಚುನಾವಣೆಗಳು ನಡೆಯುತ್ತಿರುತ್ತವೆ. ಯಾವುದೋ ರಾಜ್ಯ, ಜಿಲ್ಲೆ, ತಾಲೂಕು, ಕೊನೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಾದರೂ ಮತದಾರ ಮತಾಸ್ತ್ರ ಪ್ರಯೋಗ ನಿರತನಾಗಿರುತ್ತಾನೆ. ಕೆಲವರು ಈ ಅಸ್ತ್ರವನ್ನು ನಿರ್ದಿಷ್ಟ ಉದ್ದಿಶ್ಯವನ್ನಿಟ್ಟುಕೊಂಡು ಚಲಾಯಿಸಿದರೆ, ಇನ್ನೂ ಕೆಲವರು ಕಾಟಾಚಾರಕ್ಕೋ, ಜವಾಬ್ದಾರಿ ನಿಭಾವಣೆಗೋ ಬತ್ತಳಿಕೆಯಿಂದ ಹೊರಗೆಸೆಯುತ್ತಾರೆ.

ಮತ್ತೆ ಹಲವರಿರುತ್ತಾರೆ- ಅವರೋ ವ್ಯವಸ್ಥೆಗೂ ನನಗೂ ಎತ್ತಣಿಂದೆತ್ತ ಸಂಬಂಧವೆಂದೆಣಿಸಿ ಮತದಾನದ ದಿನ ಮನೆಯ ಮೂರೂ ಬಾಗಿಲುಗಳನ್ನು ಮುಚ್ಚಿ ನಿಶ್ಚಿಂತೆಯಿಂದ ಮಲಗಿರುತ್ತಾರೆ. ಈ ದೇಶದ ಮತದಾರ ಪಂಗಡವನ್ನು ಈ ಮೂರು ರೀತಿ ವಿಭಜಿಸಿ ನೋಡಬಹುದು. ಚುನಾವಣೆ ಎಂಬುದು ರಾಜಕೀಯ ಪಕ್ಷಗಳಿಗೂ, ಮತದಾರ ಪ್ರಭುಗಳಿಗೂ ಸಂಬಂಧಪಟ್ಟ ವಿಷಯ. ಈ ಎರಡೂ ಶಕ್ತಿಗಳು ಪ್ರಜಾಪ್ರಭುತ್ವವನ್ನು ಉನ್ನತಿಗೆತ್ತಬಲ್ಲವು, ಅವನತಿಗೆಳೆಯಬಲ್ಲವು.

ಪ್ರಜಾಶಕ್ತಿ ದುರ್ಬಲವಾಗಿ, ರಾಜ್ಯಶಕ್ತಿ ಸಬಲವಾದರೆ ದೇಶಕ್ಕೆ ಏಕಪ್ರಭುತ್ವದ, ಏಕಸ್ವಾಮ್ಯದ ದಬ್ಬಾಳಿಕೆ ತಪ್ಪಿದ್ದಲ್ಲ. ಒಂದೊಮ್ಮೆ ರಾಜ್ಯಶಕ್ತಿ ದುರ್ಬಲವಾಗಿ, ಪ್ರಜಾಶಕ್ತಿ ಗಟ್ಟಿಯಾದರೆ ಅದು ಅರಾಜಕತೆಗೆ ದಾರಿ. ಅಂದರೆ, ಈ ಎರಡೂ ಶಕ್ತಿಗಳು ಸಮತೆಯನ್ನು ಸಾಧಿಸಿ, ತಂತಮ್ಮ ಜವಾ
ಬ್ದಾರಿ ನಿರ್ವಹಿಸಿದರೆ ಮಾತ್ರ ಸುಭಿಕ್ಷ ಡೆಮಾಕ್ರಸಿ ನೋಡಲು ಸಾಧ್ಯ ಎಂಬುದು ರಾಜತಂತ್ರನಿಪುಣರ ಮತ. ಆದರೆ ಇದು ಎಷ್ಟು ಮಟ್ಟಿಗೆ ಸಾಧ್ಯ ಎಂಬುದು ಕಾಲಾನುಕಾಲಕ್ಕೆ ವಿಚಾರವಂತರು ಆಲೋಚಿಸುತ್ತ ಬಂದಿರುವ ಪ್ರಶ್ನೆ! ಭಾರತದಲ್ಲಿ ಈ ಶಕ್ತಿಗಳ ಸಮಾಗಮ ಸ್ವಲ್ಪ ಕಷ್ಟವೇ ಆದರೂ ಮೋದಿ ಯುಗ ಶುರುವಾದಾಗಿನಿಂದ ರಾಷ್ಟ್ರೀಯ ಚುನಾವಣೆಯ ವಿಚಾರದಲ್ಲಿ ಇವು ಬಹುಮಟ್ಟಿಗೆ ಒಂದಾಗಿವೆ. ಏನೇ ಆಗಲಿ, ಯಾರೇ ಬರಲಿ ‘ಚುನಾವಣಾ ವ್ಯಾಪಾರ’ಕ್ಕೆ ಕೊನೆ ಮೊದಲಿಲ್ಲ!

ಚುನಾವಣಾ ವ್ಯಾಪಾರ: ಐದಾರು ದಿನಗಳ ಹಿಂದಷ್ಟೇ ಭಾರತದ ಉಚ್ಚ ನ್ಯಾಯಾಲಯ ಮಹತ್ವದ ತೀರ್ಪೊಂದನ್ನು ಪ್ರಕಟಿಸಿದೆ. ಅದರನ್ವಯ ಇನ್ನು ಮುಂದೆ ಮುಖ್ಯ ಚುನಾವಣಾ ಆಯುಕ್ತರು(CEC) ಹಾಗೂ ಚುನಾವಣಾ ಆಯುಕ್ತರನ್ನು (EC) ನೇಮಿಸುವ ಕೋಲಿಜಿಯಂನಲ್ಲಿ ಪ್ರಧಾನಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿಗಳು ಇರತಕ್ಕದೆಂದು ತಿಳಿಸಿದೆ. ಸದ್ಯಕ್ಕೆ ಸಿ.ಇ.ಸಿ ಹಾಗೂ ಇ.ಸಿ.ಗಳನ್ನು ನೇಮಿಸುವ ಪೂರ್ಣಾಽಕಾರ ಕೇಂದ್ರ ಸರಕಾರದ ಅಧೀನದಲ್ಲಿದೆ.

ಸುಪ್ರೀಂ ಕೋರ್ಟಿನ ಈ ಐತಿಹಾಸಿಕ ತೀರ್ಪು ಹಲವು ಕಾರಣಗಳಿಂದ ಮಹತ್ವದ್ದು. ಅದರಲ್ಲಿ ಮೊದಲನೆಯದೇ- ಚುನಾವಣಾ ಪ್ರಕ್ರಿಯೆಯಲ್ಲಿ ಆಡಳಿತಾರೂಢ ಪಕ್ಷದ ಹಸ್ತಕ್ಷೇಪ ಇಲ್ಲದಂತೆ ಕಾಯುವುದು. ಹಿಂದೆ ರಾಜೀವ ಗಾಂಧಿ ಪ್ರಧಾನ ಮಂತ್ರಿಯಾಗಿದ್ದ ಕಾಲದಲ್ಲಿ ಚುನಾವಣಾ ಆಯೋಗ
ಏಕ ಸದಸ್ಯ ಸಂಸ್ಥೆಯಾಗಿತ್ತು. ಅಂದರೆ ಸಂಸ್ಥೆಯ ದೇಖುರೇಖುಗಳನ್ನೆಲ್ಲ ಮುಖ್ಯ ಚುನಾವಣಾ ಅಯುಕ್ತರೇ ಗಮನಿಸಿ, ಸಮಂಜಸ ನಿರ್ಧಾರ ತೆಗೆದುಕೊಳ್ಳುವ ಪದ್ಧತಿ ಇತ್ತಷ್ಟೇ. ಆಗ ಸಿ.ಇ.ಸಿ.ಯಾಗಿದ್ದ ಆರ್.ವಿ.ಎಸ್. ಪೇರಿ ಶಾಸ್ತ್ರಿ ಮತ್ತು ಪ್ರಧಾನಿ ರಾಜೀವ ಗಾಂಽ ನಡುವೆ ಶುರುವಾದ
ತಿಕ್ಕಾಟದ ಪರಿಣಾಮ ಚುನಾವಣಾ ಆಯೋಗ ತ್ರಿಸದಸ್ಯ ಸಂಸ್ಥೆಯಾಯಿತು.

ಇನ್ನುಳಿದ ಇಬ್ಬರು ಆಯುಕ್ತರನ್ನು ರಾಜೀವರೇ ನೇಮಿಸಿದರು(ಇದಕ್ಕಾಗಿ ಸಂವಿಧಾನವನ್ನೇ ತಿದ್ದಿದರು)  ಅವರ ಮಾತಿನಂತೆ ನಡೆಯುವವರನ್ನೇ ಅವರು ನೇಮಿಸಿರಲಿಕ್ಕೆ ಸಾಕು. ಒಂದು ಸಾಂವಿಧಾನಿಕ ಸಂಸ್ಥೆ- ಅದರಲ್ಲೂ ಸರಕಾರ ರಚನೆಯಲ್ಲಿ ಅತಿ ಪ್ರಧಾನ ಪಾತ್ರ ವಹಿಸುವ ಸಂಸ್ಥೆ ಹೀಗೆ
ಆಡಳಿತದ ಆಣತಿಗೆ ಬಗ್ಗಿ ಕಾರ್ಯ ನಿರ್ವಹಿಸಹತ್ತಿದರೆ ಸಂವಿಧಾನಕ್ಕೂ, ಪ್ರಜಾಪ್ರಭುತ್ವಕ್ಕೂ ಏಳ್ಳು ಕಾಸಿನಷ್ಟಾದರೂ ಬೆಲೆ ಇರಬೇಕೇಕೆ? ಇಂಥ ಪ್ರಬುದ್ಧ ವಿಚಾರವೊಂದನ್ನು ಸುಪ್ರೀಂ ಕೋರ್ಟ್ ಗಟ್ಟಿಯಾಗಿ ಪ್ರತಿಪಾದಿಸಿದೆ.

ಇನ್ನು ಎರಡನೆಯದು- ಪಾರದರ್ಶಕತೆ. ಸಾರ್ವಜನಿಕ ಹಿತಾಸಕ್ತಿಯ ಉದ್ದಿಶ್ಯ ಹೊಂದಿರುವ ಯಾವ ‘ಸರಕಾರಿ ಸಂಸ್ಥೆ’ಯೂ ಒಂದು ನಿರ್ದಿಷ್ಟ ವ್ಯಕ್ತಿಯ ಅಥವಾ ಸರಕಾರದ ಆಡಳಿತಕ್ಕೆ ಒಳಪಟ್ಟಾಗ ಅಲ್ಲಿ ಪಾರದರ್ಶಕತೆಯ ನಿರೀಕ್ಷೆ ಕಡಿಮೆಯೇ. ಭಾರತದಲ್ಲಂತೂ ಇದು ನೂರರಷ್ಟು ಸತ್ಯ. ಅದಕ್ಕೆಂದೇ ಸರ್ವ ಪಕ್ಷಗಳ ಸದಸ್ಯರಿರುವ ಸದನ ಸಮಿತಿಗಳನ್ನು ರಚಿಸುವುದು. ನ್ಯಾಯಾಲಯದ ಈ ತೀರ್ಪು ಆಯೋಗದ ಪಾರದರ್ಶಕತೆಯನ್ನು ಹಿಂದೆಂದಿ ಗಿಂತಲೂ ಹೆಚ್ಚಿಸುವಲ್ಲಿ ಸಂದೇಹವಿಲ್ಲ.

ಇನ್ನು ಮತದಾರರು. ಚುನಾವಣೆ ಬಂತೆಂದರೆ ರಾಜಕೀಯ ಪಕ್ಷಗಳಿಗೆ ಇವರು ವ್ಯಾಪಾರ ವಸ್ತುಗಳು(ಎಲ್ಲರೂ ಅಲ್ಲ). ಸಮಾವೇಶಕ್ಕೆ, ಮನೆ ಮನೆ ಪ್ರಚಾರಕ್ಕೆ, ರಾಜಕಾರಣಿಗಳ ಕಟ್ಟರ್ ಬೆಂಬಲಿಗರಂತೆ ಬೆನ್ನ ಹಿಂದೆ ಅಲೆದಾಡುವುದಕ್ಕೆ ಈ ಮತದಾರರನ್ನು ಕೊಂಡುಕೊಳ್ಳಲಾಗುತ್ತದೆ. ೫೦೦, ೧೦೦೦, ೨೦೦೦ ಹೆಚ್ಚೆಂದರೆ ೨೫೦೦ ರು.ಗಳಿಗೆ ಇವರೆಲ್ಲ ಬಿಕರಿಯಾಗಿ ಬಿಡುತ್ತಾರೆ. ಇಂಥವರ ಸಂಖ್ಯೆ ಖಂಡಿತ ಕಡಿಮೆಯಿಲ್ಲ. ಇದು ಒಂದು ಹಂತದ ಚುನಾವಣಾ ವ್ಯಾಪಾರವಾದರೆ ಇನ್ನೊಂದು ನಿರ್ಣಾಯಕ ಘಟ್ಟವೂ ಇದೆ. ಅದೇ- ಮತದಾರರ ‘ಮತಾಸ್ತ್ರ’ವನ್ನೇ ಕೊಂಡುಕೊಳ್ಳುವುದು. ಇಲ್ಲೂ ಹಣ ಓಡಾಡುತ್ತದೆ.

ಕುಕ್ಕರ್ ಬ್ಲಾಸ್ಟ್ ಆಗುತ್ತದೆ. ಸೀರೆ ಉಡುವುದಕ್ಕೂ ಮುಂಚೆ ಹರಿದು ಹಿಪ್ಪೆಯಾಗುತ್ತದೆ. ಹೆಂಡ ಧಾರಾಕಾರವಾಗಿ ಹರಿದಾಡುತ್ತದೆ. ಬಿರಿಯಾನಿ ಘಮ ಕ್ಷೇತ್ರಾದ್ಯಂತ ಪಸರಿಸುತ್ತದೆ. ಇಷ್ಟೆಲ್ಲ ಆಗ್ಯೂ ಮತದಾರ ಅದು ಬೇಕು ಇದು ಬೇಕೆಂದರೆ ಅದೂ ಅವನೊಡಲಿಗೆ ಬಂದು ಬೀಳುತ್ತದೆ. ಹೀಗೆ ಮತಾಸ್ತ್ರ
ಬಹು ಸಲ ತನ್ನ ಮೊನಚನ್ನು ಕಳೆದುಕೊಳ್ಳುತ್ತದೆ. ಮೇಲಿನ ಈ ನಿದರ್ಶನಗಳು ಇಂದು ಮೊನ್ನೆ ಚಾಲತಿಗೆ ಬಂದವುಗಳಲ್ಲ. ಇವು ರೂಢಮೂಲಗಳು. ಇದಕ್ಕೆ ಪರಿಹಾರ, ಒಳ್ಳೆಯ ಆಡಳಿತಗಾರನೊಬ್ಬ ಜನರಲ್ಲಿ ಹುಟ್ಟಿಸಬಹುದಾದ ಅಭಿವೃದ್ಧಿ ಪರ ಆಶಯ.

ಇದನ್ನೇ ೨೦೧೪, ೨೦೧೯ರಲ್ಲಿ ನರೇಂದ್ರ ಮೋದಿ ಮಾಡಿದ್ದು. ಮತದಾರ ಅತ್ಯಂತ್ಯ ಪ್ರಬಲವಾಗಿ ಮತಾಸವನ್ನು ಪ್ರಯೋಗ ಮಾಡಿದ ಎರಡು ಚುನಾವಣೆಗಳಿವು(ಇಂದಿರಾಗಾಂಧಿ ಕಾಲದಲ್ಲೂ ಕೊಂಚ ಹೀಗೇ ಇತ್ತು ಎನ್ನಿ).

ಪ್ರಚಾಪ್ರಭುತ್ವದ ಹಬ್ಬವಂತೆ: Democracy is not a spectator sport(ಪ್ರಜಾಪ್ರಭುತ್ವವು ಪ್ರೇಕ್ಷಕನ ಕ್ರೀಡೆ ಯಲ್ಲ) ಎಂಬುದು ಪ್ರಚಲಿತ ಮಾತು. ಇಲ್ಲಿ ಪ್ರಜೆಗಳು ‘ವ್ಯವಸ್ಥೆ’ ಎಂಬ ಕ್ರೀಡಾರಂಗಕ್ಕಿಳಿದು ಅನೂಚಾನವಾಗಿ ಬಂದ ಅವರ ಜವಾಬ್ದಾರಿಯನ್ನು ನಿರ್ವಹಿಸದಿದ್ದರೆ ಅಷ್ಟರ ಮಟ್ಟಿಗೆ ಡೆಮಾಕ್ರಸಿ ತನ್ನ ಸತ್ವ-ಸಾರಗಳನ್ನು ಕಳೆದುಕೊಂಡಂತೆ.

ಪ್ರಜೆಯ ಅಂಥ ಗುರುತರ ಜವಾಬ್ದಾರಿಗಳಲ್ಲಿ ಮತದಾನ ಅಗ್ರಣಿ. ಹಾಗೆಂದೇ ಚುನಾವಣೆಗಳನ್ನು ಹಬ್ಬ ಎಂದು ಕರೆದಿರಲಿಕ್ಕೂ ಸಾಕು. ಈ ಹಬ್ಬದಲ್ಲಿ ನಗರವಾಸಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವವರು ಗ್ರಾಮೀಣರು. ಹಾಗೆ ನೋಡಿದರೆ ಹಳ್ಳಿಗರಿಗಿಂತ ಹತ್ತರಷ್ಟು ಹೆಚ್ಚಿನ ಸರಕಾರಿ
ಸೌಲಭ್ಯಗಳನ್ನು ಬಾಚಿಕೊಳ್ಳುವವರು ನಗರವಾಸಿಗಳು. ಅವರಿಗೆ ಬೇಡೆಂದರೂ ಅನೇಕ ಸುವಿಧಗಳು, ಅನುಕೂಲಗಳು ಮನೆ ಬಾಗಿಲಿಗೇ ಬರುತ್ತವೆ. ಆದರೂ ಮತದಾನದ ವಿಷಯದಲ್ಲಿ ಇವರು ಅನಾಸಕ್ತರು, ಬೇಜವಾಬ್ದಾರರು. ಸಾಮಾನ್ಯವಾಗಿ ಜನಪ್ರತಿನಿಽಗಳಿಗೆ ಹಳ್ಳಿಗಳ, ಕುಗ್ರಾಮಗಳ ನೆನಪಾಗುವುದೇ ಚುನಾವಣಾ ಸಂದರ್ಭದಲ್ಲಿ. ಮತ ಕೇಳಲು ಹೋದಾಗ ಕೊಟ್ಟು ಬರುವ ಆಶ್ವಾಸನೆ ಅದೆಷ್ಟು ಮಟ್ಟಿಗೆ ಈಡೇರಿತೋ ನೋಡಿದ ವನೇ ಬಲ್ಲ. ಹೀಗಿದ್ದರೂ ಗ್ರಾಮೀಣರು ಮತದಾನದಲ್ಲಿ ಹಿಂದೆ ಸರಿವುದಿಲ್ಲ.

ಅನೇಕ ಆಮಿಷಗಳಿಗೆ ಬಲಿಯಾಗಿ ಅವರು ಮತ ಪ್ರಕ್ರಿಯೆಯಲ್ಲಿ ತಳ್ಳಲ್ಪಡುತ್ತಾರೆಂಬುದು ಸತ್ಯವಾದರೂ ಆ ಪರಿಪ್ರಮಾಣ ಇಚೀನ ಕೆಲ ವರ್ಷಗಳಲ್ಲಿ ಕಡಿಮೆ ಆಗಿದೆ, ಬದಲಾಗಿದೆ. ಅವರೂ ಅಭಿವೃದ್ಧಿ ಪರ, ದೇಶದ ಅಸ್ಮಿತೆ, ಪರಂಪರೆಯನ್ನು ಎತ್ತಾಡಿಸುವ ಆಡಳಿತದ ಪರ ವಾಲುತ್ತಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ- ಉತ್ತರ ಪ್ರದೇಶದಲ್ಲಿ ಜಾತಿ, ಧರ್ಮದ ಸಂಕೋಲೆ ಒಡೆದು ಜನರೇ ನಡೆಸಿದ ಕಳೆದೆರಡು ಚುನವಣೆಗಳು. ಭಾರತದಲ್ಲಿ ಚುನಾವಣೆಗಳು ಪ್ರಸ್ತುತ ಕಾಲದಲ್ಲಿ ಹಬ್ಬದಂತೇ ಆಚರಿಸಲ್ಪಡುತ್ತಿರುವುದು ಅನೇಕರು ಒಪ್ಪದ ಸತ್ಯ.

ಭ್ರಷ್ಟಾಚಾರ ಹುಟ್ಟುವ ಸ್ಥಳ: ‘ಚುನಾವಣೆಗಳು ಭ್ರಷ್ಟಾಚಾರವನ್ನು ಹುಟ್ಟಿಸುವಂಥ ಮಾತೃಭೂಮಿಗಳಾಗಿವೆ’ ಎಂಬ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲರ ಸತ್ಯ ಮಾತು ವಿಧಾನ ಸಭಾ ಕಡತದಲ್ಲಿ ಜತನವಾಗಿದೆ. ಅವರು ಹೇಳುತ್ತಾರೆ: ‘ನಾನು 1967ರ ಲೋಕಸಭಾ ಚುನಾವಣೆ ಯಲ್ಲಿ ಕೇವಲ ೨೯,೦೦೦ ರುಪಾಯಿಗಳನ್ನು ಖರ್ಚು ಮಾಡಿ ಗೆದ್ದು ಲೋಕಸಭೆಗೆ ಹೋಗಿದ್ದೆ. ಈಗ ಒಬ್ಬ ಪಂಚಾಯಿತಿ ಸದಸ್ಯ ಕನಿಷ್ಠ 50000 ರುಪಾಯಿಗಳನ್ನು ಎದುರಾಳಿಯನ್ನು ಸೋಲಿಸುವುದಕ್ಕೆ ಖರ್ಚು ಮಾಡುತ್ತಾನೆ.

ಆದರೆ, ಆ ಪಂಚಾಯಿತಿಯಲ್ಲಿ 30000 ರುಪಾಯಿಗಳ ಬಂಡವಾಳ ಇರುವುದಿಲ್ಲ.’ ಚುನಾವಣೆ ಗೆಲ್ಲಲು ಹೀಗೆ ಹಣ ಹರಿಸುವ ವ್ಯಕ್ತಿ ಸಹಜವಾಗಿ ಭ್ರಷ್ಟನಾಗುತ್ತಾನೆ. ಚುನಾವಣೆ ಭ್ರಾಷ್ಟಾಚರದ ಮಾತೃನೆಲವಾಗುತ್ತದೆ. ಮತ್ತೆ ಬಂತು ಚುನಾವಣೆ: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ದಿನಗಣನೆ ಶುರುವಾಗುತ್ತದೆ. ಮೂರೂ ಪಕ್ಷಗಳು ಮತದಾರರ ಓಲೈಕೆಯಲ್ಲಿ ತೊಡಗಿಯಾಗಿದೆ. ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ, ಕಾಂಗ್ರೆಸ್ಸಿನ ಪ್ರಜಾಧ್ವನಿ ಯಾತ್ರೆ ಮತ್ತು ದಳದ ಪಂಚರತ್ನ ಯಾತ್ರೆ ರಾಜ್ಯ ಪೂರ್ತಿ ಸಂಚರಿಸುತ್ತಿದೆ. ಯಾತ್ರೆಯ ರಥವೇರಿ ಹೊರಟಿರುವ ಯಾತ್ರಿಕರ ಮಧ್ಯೆ
ಹೇಳ ತೀರದ ಗುದ್ದಾಟ, ತಿಕ್ಕಾಟ. ಇವೆಲ್ಲದರ ಮಧ್ಯೆಯೂ ಸಂಚಾರ ಸಾಗಿದೆ. ಪ್ರಧಾನಿ ಮೋದಿ ರಾಜ್ಯ ಭೇಟಿ ಆರಂಭಿಸಿದ್ದಾರೆ.

ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಕೂಡ ತಂತ್ರ ಪ್ರತಿತಂತ್ರಗಳ ಆಲೋಚನೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ಸಿಗೆ ಸಿದ್ದರಾಮಯ್ಯ ಇದ್ದಾರೆ. ಸದ್ಯದ ಮಟ್ಟಿಗೆ ಕಾಂಗ್ರೆಸ್ ರಾಜ್ಯದಲ್ಲಿ ಸ್ಪಲ್ವ ಮಟ್ಟಿಗೆ ಗಟ್ಟಿಯಿದೆ. ರಾಹುಲ್ ಗಾಂಧಿ ಬಂದರೆ ಏನಾಗುತ್ತದೋ? ಗೊತ್ತಿಲ್ಲ. ಅವರನ್ನು ಕಾಂಗ್ರೆಸ್ ರಾಜ್ಯಕ್ಕೆ ಕರೆಸದಿರುವುದರಲ್ಲೇ ಅದರ ಹಿತವಿದೆ. ಆದರದು ಸಾಧ್ಯವೇ? ಅದೆಂಥದೋ ಪಾದಯಾತ್ರೆಯಲ್ಲಿ ಬ್ಯುಸಿಯಾಗಿದ್ದ ರಾಹುಲ್ ಹಿಮಾಚಲದಲ್ಲಿ ಪ್ರಚಾರ  ಮಾಡಲಿಲ್ಲ. ಅದರ ಪರಿಣಾಮವೆಂಬಂತೆ ಅಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿತು. ರಾಹುಲ್ ಗಾಂಧಿ ಬರದಿದ್ದರೆ ಕರ್ನಾಟಕದಲ್ಲೂ ಕಾಂಗ್ರೆಸ್ ಆಡಳಿತ ಮಾಡಬಹುದೇನೋ, ಯಾರಿಗೆ ಗೊತ್ತು!

Democracy is not a spectator sport – ನರೇಂದ್ರ ಮೋದಿ