ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ಎಲ್ಲಿಯೇ ಆಗಲಿ ಆಡಳಿತ ಪಕ್ಷಗಳು ಸದ್ದು ಮಾಡುವುದಕ್ಕಿಂತ ಹೆಚ್ಚು ಪ್ರತಿಪಕ್ಷಗಳು ಸದ್ದು ಮಾಡಿದಾಗಲೇ, ರಾಜ್ಯ ಅಥವಾ ದೇಶದ ಅಭಿವೃದ್ಧಿ ಸಾಧ್ಯ. ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಸರಕಾರವನ್ನು ಎಚ್ಚರಿಸುವ ಕೆಲಸವನ್ನು ಪ್ರತಿಪಕ್ಷಗಳು
ಮಾಡುವುದರಿಂದ ಮಾತ್ರ ಆಡಳಿತ ನಡೆಸುವ ಪಕ್ಷಗಳು ತಪ್ಪು ಹೆಜ್ಜೆ ಇಡದಂತೆ ನೋಡಿಕೊಳ್ಳಲು ಸಾಧ್ಯ.
ಆದರೆ ಕಳೆದ ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಪ್ರತಿಪಕ್ಷಗಳು ಈ ನಿಟ್ಟಿನಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಿವೆಯೇ
ಎನ್ನುವ ಪ್ರಶ್ನೆಗೆ ಬಹುತೇಕ ಉತ್ತರ ‘ಇಲ್ಲ’ ಎನ್ನುವುದಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಬಹುಮತವನ್ನು ಕಳೆದುಕೊಂಡು ಬಿದ್ದ ಬಳಿಕ, ಅಧಿಕಾರದ ಚುಕ್ಕಾಣಿ ಹಿಡಿದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ, ಸಮರ್ಥ ಪ್ರತಿಪಕ್ಷ ಇಲ್ಲವೇ ಎನ್ನುವ ಮಾತುಗಳು ಕೇಳಿಬಂದಿತ್ತು.
ಪ್ರಮುಖವಾಗಿ ಕಾಂಗ್ರೆಸ್ ನಾಯಕರು ಬಿಜೆಪಿಯ ಧೋರಣೆಯನ್ನು ರಾಜಕೀಯವಾಗಿ ಟೀಕಿಸುತ್ತಾ ಸಾಗಿದರೇ ಹೊರತು, ಯಾವುದನ್ನೂ ತಾರ್ತಿಕ ಅಂತ್ಯಕ್ಕೆ ತಗೆದುಕೊಂಡು ಹೋಗುವ ಮನಸ್ಸನ್ನೇ ಮಾಡಲಿಲ್ಲ. ಕೇವಲ ಆಡಳಿತ ಪಕ್ಷದ ವಿರುದ್ಧ ಹೋರಾಡುವುದು ಮಾತ್ರವಲ್ಲದೇ, ತಮ್ಮ ಪಕ್ಷದ ಸಂಘಟನೆಯತ್ತಲೇ ಕಾಂಗ್ರೆಸ್ ನಾಯಕರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿ ಕೊಳ್ಳುವುದಕ್ಕೂ ಆಸಕ್ತಿ ವಹಿಸಿರಲಿಲ್ಲ. ಆದರೀಗ ಕಳೆದ ಕೆಲ ದಿನಗಳಿಂದ ರಾಜ್ಯ ಕಾಂಗ್ರೆಸ್ ದಿಢೀರನೇ, ಎಚ್ಚೆತ್ತುಕೊಂಡಂತೆ ಕಾಣಿಸುತ್ತಿದೆ.
ಹೌದು, ರಾಜ್ಯ ಕಾಂಗ್ರೆಸ್ ಏಕ್‌ದಮ್ ಈ ರೀತಿ ಪಕ್ಷ ಸಂಘಟನೆಯತ್ತ ಹಾಗೂ ಸರಕಾರದ ವಿರುದ್ಧದ ಹೋರಾಟ ಕೇವಲ ಹೇಳಿಕೆಗೆ ಸೀಮಿತಗೊಳಿಸದೇ, ದಾಖಲೆ ಅಥವಾ ಸರಕಾರದ ತಪ್ಪು ಹೆಜ್ಜೆಗಳನ್ನು ಎತ್ತಿ ತೋರಿಸುವ ಕೆಲಸವನ್ನು ಮಾಡುತ್ತಿವೆ. ಇದ್ದಕ್ಕಿದ್ದಂತೆ ಜ್ಞಾನೋದಯವಾಗಲು ಕಾರಣ ವೇನು ಎನ್ನುವ ಪ್ರಶ್ನೆಗಳಿಗೆ ಉತ್ತರ ಹಲವಿದೆ. ಈ ರೀತಿ ಬದಲಾವಣೆಗೆ ಕಾರಣ ವೇನು ಎನ್ನುವುದನ್ನು ನೋಡುವ ಮೊದಲು, ಬಿಜೆಪಿ ಸರಕಾರ ಅಽಕಾರಕ್ಕೆ ಬಂದು ಕಳೆದ ಒಂದೂವರೆ ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎನ್ನುವುದನ್ನು ನೋಡಬೇಕಿದೆ.
೨೦೧೯ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಹೀನಾಯ ಫಲಿತಾಂಶ ಕೊಟ್ಟ ಬಳಿಕ ಅಂದಿನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ರಾಜೀನಾಮೆ ನೀಡಿದರು. ಆದರೆ ಆ ರಾಜೀನಾಮೆಗೆ ವರಿಷ್ಠರಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಹಲವು ತಿಂಗಳು ಮುಂದಕ್ಕೆ ಹಾಕಲಾಯಿತು. ಈ ಹಂತದಲ್ಲಿ ಕೆಪಿಸಿಸಿ ಯನ್ನು ಮುನ್ನಡೆಸುವ ಸಾರಥಿ ಯಾರೂ ಇಲ್ಲದೇ, ಸಂಘಟನೆ ಎನ್ನುವುದು ‘ಯಾರಿಗೂ ಬೇಡವಾದ ಕೂಸಾಗಿತ್ತು’.
ಕೆಪಿಸಿಸಿ ಅಧ್ಯಕ್ಷರನ್ನಾಗಿ ಯಾರನ್ನು ಮಾಡಬೇಕು ಎನ್ನುವುದನ್ನು ನಿರ್ಧರಿಸುವುದಕ್ಕೆ ಕಾಂಗ್ರೆಸ್ ವರಿಷ್ಠರು ತಿಂಗಳುಗಟ್ಟಲೆ ತಗೆದು ಕೊಂಡಿತ್ತು. ಈ ಹಂತದಲ್ಲಿ ಪಕ್ಷದ ದೋಣಿಗೆ ‘ನಾವಿಕ’ನಿಲ್ಲದಂತಾಗಿ, ಸಂಘಟನೆ ಸೊರಗಿತು. ಈ ವೇಳೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ರಾಜೀನಾಮೆ ನೀಡಿದ್ದ ದಿನೇಶ್ ಗುಂಡೂರಾವ್ ಅವರಿದ್ದರೂ ‘ನಮಗೇಕೆ ಉಸಾಬರಿ’ ಎನ್ನುವ ಮನಸ್ಥಿತಿಯಲ್ಲಿಯೇ ಎಲ್ಲ ನಾಯಕರು ಸಂಘಟನೆಯನ್ನು ಮರೆತರು.
ಇನ್ನು ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಸರಕಾರದ ವಿರುದ್ಧ ವಿಧಾನಸಭೆಯಲ್ಲಿ ಅಬ್ಬರಿಸುವ ರೀತಿ ಭಾಷಣ ಮಾಡಿದರೂ, ಎಲ್ಲೋ ಒಂದು ಕಡೆ ಅವರ ಅಬ್ಬರದ ಮಾತು, ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುವಷ್ಟು ದೊಡ್ಡ ಮಟ್ಟ ದಲ್ಲಿ ಜನರನ್ನು ತಲುಪಲಿಲ್ಲ. ಬಳಿಕ ಡಿ.ಕೆ. ಶಿವಕುಮಾರ್ ಅವರನ್ನು ಕೆಪಿಸಿಸಿಯ ಅಧ್ಯಕ್ಷರನ್ನಾಗಿ (ಅ)ವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಆಯ್ಕೆಯ ಹಿಂದೆ ಹಲವು ಮುಸುಕಿನ ಗುದ್ದಾಟ, ಆರೋಪ – ಪ್ರತ್ಯಾರೋಪಗಳಿದ್ದರೂ ವರಿಷ್ಠರು ಡಿಕೆಶಿ ಅವರನ್ನು ಒಪ್ಪಿಕೊಳ್ಳುವಂತೆ ವರಿಷ್ಠರಿಂದ ಒತ್ತಡ ಬಂದ ಕಾರಣ ರಾಜ್ಯ ನಾಯಕರು ಒಪ್ಪಿಕೊಂಡರು.
ಆದರೆ ಎಲ್ಲಿಯೂ ಬಿಜೆಪಿ ಅಥವಾ ಸರಕಾರದ ವಿರುದ್ಧದ ಹೋರಾಟಕ್ಕೆ ಎಲ್ಲರೂ ಒಂದಾಗಿ ಕಾಣಿಸಿಕೊಳ್ಳಲಿಲ್ಲ. ಡಿಕೆಶಿ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿದರೂ, ಅವರು ಅಧಿಕೃತವಾಗಿ ಅಧ್ಯಕ್ಷ ಸ್ಥಾನವನ್ನು ಪಡೆಯುವಲ್ಲಿ ಸಾಧ್ಯವಾಗ ಲಿಲ್ಲ. ಈ ಹಂತದಲ್ಲಿ ‘ಹೆಸರಿಗೆ’ ಅಧ್ಯಕ್ಷರಾಗಿದ್ದರಿಂದ ಅವರಿಗೆ ಪಕ್ಷದ ವಿಚಾರದಲ್ಲಿ ಅನಧಿಕೃತವಾಗಿ ನಿರ್ಣಯ ಕೈಗೊಳ್ಳುವುದಕ್ಕೆ ಅವಕಾಶವಿತ್ತಾದರೂ, ಅಧಿಕೃತವಾಗಿ ಯಾವ ನಿರ್ಣಯವನ್ನು ಕೈಗೊಳ್ಳುವಂತಿರಲಿಲ್ಲ.
ಕರೋನಾ ಸಮಯದಲ್ಲಿ ಕಾರ್ಮಿಕರಿಂದ ಹೆಚ್ಚುವರಿ ದರವನ್ನು ಸಾರಿಗೆ ಇಲಾಖೆ ಪಡೆಯುತ್ತಿದೆ ಎನ್ನುವ ಆರೋಪ ಬರು ತ್ತಿದ್ದಂತೆ, ಡಿ.ಕೆ. ಶಿವಕುಮಾರ್ ಅವರು ಒಂದು ಕೋಟಿ ರು. ಚೆಕ್ ಅನ್ನು ಕೆಎಸ್‌ಆರ್‌ಟಿಸಿಗೆ ಕೆಪಿಸಿಸಿ ವತಿಯಿಂದ ನೀಡಲು ಮುಂದಾದರು. ಆದರೆ ಈ ಚೆಕ್‌ಗೆ ದಿನೇಶ್ ಗುಂಡೂರಾವ್ ಅವರ ಸಹಿಯಿತ್ತು!. ಈ ರೀತಿ ತಾಂತ್ರಿಕ ತೊಂದರೆಯಿಂದ ಹೊರ ಬರಲು ಹೆಣಗಾಡಿದ ಕಾಂಗ್ರೆಸ್ ನಂತರ ಉಪಚುನಾವಣೆ, ಗ್ರಾಮ ಪಂಚಾಯಿತಿ ಚುನಾವಣೆ ಯಲ್ಲಿಯೂ ತಮ್ಮ ಸ್ವಯಂಕೃತ ಅಪರಾಧದಿಂದ ಕೆಲ ಕ್ಷೇತ್ರಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ಬಿಜೆಪಿ ಹಲವು ಬಾರಿ ಎಡವಟ್ಟಿನ ಹೆಜ್ಜೆಗಳನ್ನು ಇಡುತ್ತಿದ್ದರೂ, ಕಾಂಗ್ರೆಸ್ ಪಕ್ಷವಾಗಿ ಸಂಘಟಿತ ಹೋರಾಟವನ್ನು ಮಾಡುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ಮಾಡಿತ್ತು.
ಇದು ಪಕ್ಷ ಸಂಘಟನೆಯ ವೈಫಲ್ಯವಾದರೆ, ಸರಕಾರದ ಯೋಜನೆ, ವಿಧೇಯಕ ಅಥವಾ ನಿರ್ಣಯದ ಬಗ್ಗೆ ಧ್ವನಿ ಎತ್ತಬೇಕಿದ್ದ ಪ್ರತಿಪಕ್ಷ ಕಾಂಗ್ರೆಸ್ ಆ ಕೆಲಸವನ್ನು ಮಾಡುವುದಕ್ಕೆ ನಿರಾಸಕ್ತಿ ತೋರಿದಂತೆ ಕಂಡಿತ್ತು. ಅದರಲ್ಲಿಯೂ ಭೂ ಸುಧಾರಣಾ ತಿದ್ದುಪಡಿ ಕಾಯಿದೆ, ಗೋಹತ್ಯೆ ನಿಷೇಧ ಕಾಯಿದೆ, ಎಪಿಎಂಸಿ ಕಾಯಿದೆ ಸೇರಿದಂತೆ ಹಲವು ವಿವಾದಾತ್ಮಕ ವಿಧೇಯಕಗಳನ್ನು ಮಂಡಿಸಿದ್ದರೂ, ಈ ಕಾಯಿದೆಗಳನ್ನಿಟ್ಟುಕೊಂಡು ರಾಜ್ಯಾದ್ಯಂತ ಹೋರಾಟ ಮಾಡುವುದಕ್ಕೆ ಹಾಗೂ ಸರಕಾರದ ವಿರುದ್ಧ ಜನರನ್ನು ಎಬ್ಬಿಸುವುದಕ್ಕೆ ಅವಕಾಶವಿದ್ದರೂ, ಅದನ್ನು ಮಾಡುವ ಪ್ರಯತ್ನಕ್ಕೆ ಕಾಂಗ್ರೆಸ್ ಕೈಹಾಕಲಿಲ್ಲ.
ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿದಾಗ ಕೆಲ ನಾಯಕರು ಸರಕಾರದ ವಿರುದ್ಧ ಘೋಷಣೆ ಕೂಗಿದ್ದು, ಒಂದು ಸುದ್ದಿಗೋಷ್ಠಿ
ಮಾಡಿದ್ದು ಅಥವಾ ಇತರ ಸಂಘಟನೆಗಳಿಗೆ ನೈತಿಕ ಬೆಂಬಲ ನೀಡಿದ್ದು ಬಿಟ್ಟರೆ ಇನ್ಯಾವ ಕೆಲಸವನ್ನು ಮಾಡಲಿಲ್ಲ. ಇದರಿಂದ ಬಿಜೆಪಿ ತಾನು ಮಂಡಿಸಿರುವ ವಿಧೇಯಕಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಸುಲಭವಾಯಿತು. ಕಾಂಗ್ರೆಸ್ ನಿಂದ ಸರಕಾರದ ನಿರ್ಣಯದ ವಿರುದ್ಧ ದೊಡ್ಡಮಟ್ಟದಲ್ಲಿ ಧ್ವನಿ ಎತ್ತದೇ ಇದಿದ್ದರಿಂದ, ಜನರಲ್ಲಿ ವಿರೋಧಿ ಭಾವನೆ ರೂಪಿಸದೇ ಇದ್ದುದರಿಂದ, ಬಿಜೆಪಿಗರಿಗೆ ತಮ್ಮ ನಿಲುವುಗಳನ್ನು convince ಮಾಡಬೇಕಾದ ಅನಿವಾರ್ಯತೆಯೇ ಉದ್ಭವಿಸಲಿಲ್ಲ.
ಈ ರೀತಿ ಹೋರಾಟಗಳನ್ನೇ ಮರೆತಂತೆ ಇದ್ದ ಕಾಂಗ್ರೆಸ್ ಇದೀಗ ಕೆಲದಿನಗಳಿಂದ ಭಾರಿ ಉತ್ಸಾಹದಿಂದ ಕಾಣಿಸುತ್ತಿದೆ. ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷ ಸಂಘಟನೆಗೆ ತಮ್ಮದೇಯಾದ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡಿದ್ದರೆ, ಇತ್ತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರಕಾರ ಜಾರಿಗೊಳಿಸಿರುವ ಐದು ಕಾಯಿದೆಗಳ ಲೋಪದೋಷಗಳ ಪಟ್ಟಿ ಹಾಗೂ ಬಿಜೆಪಿಗರು ಈ ಕಾಯಿದೆಯಲ್ಲಿ ಮುಚ್ಚಿಡುತ್ತಿರುವ ಸತ್ಯಗಳು ಏನು ಎನ್ನುವ ಬಗ್ಗೆ ವರದಿಯೊಂದನ್ನು ಬಿಡುಗಡೆ ಗೊಳಿಸಿದ್ದಾರೆ.
ಚುನಾವಣೆಗೆ ಎರಡೂವರೆ ವರ್ಷ ಇರುವಾಗಲೇ ಈ ರೀತಿ ಚುರುಕಾಗಿರುವ ಕಾಂಗ್ರೆಸ್ ಅನ್ನು ನೋಡಿ ಅನೇಕರಲ್ಲಿ ಅಚ್ಚರಿ ಮೂಡಿಸಿರುವುದು ಸುಳ್ಳಲ್ಲ. ಆದರೆ ಕಾಂಗ್ರೆಸ್‌ನ ಇಂದಿನ ಪರಿಸ್ಥಿತಿಯಲ್ಲಿ, ಎಚ್ಚರಗೊಳ್ಳದೇ ‘ಮುಂದೆ ನೋಡಿಕೊಂಡರೆ ಆಯ್ತು’
ಎನ್ನುವ ಉದಾಸೀನತೆಯನ್ನು ಮುಂದುವರಿಸಿದರೆ ಭವಿಷ್ಯದಲ್ಲಿ ನೆಲೆ ಕಂಡುಕೊಳ್ಳುವುದಕ್ಕೂ ಪರದಾಡುವ ಪರಿಸ್ಥಿತಿ
ಉದ್ಭವಿಸುವುದರಲ್ಲಿ ಅನುಮಾನವಿಲ್ಲ. ಅದರಲ್ಲಿಯೂ ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರವನ್ನು ಕಳೆದುಕೊಂಡು, ಪ್ರತಿಪಕ್ಷವಾಗಿಯೂ ಸದೃಢವಾಗಿ ಕಾಣಿಸದ ಕಾಂಗ್ರೆಸ್‌ಗೆ ಕರ್ನಾಟಕ ಬಹುದೊಡ್ಡ ಆಶಾಕಿರಣವಾಗಿದೆ.
ಕಳೆದ ಹಲವು ವರ್ಷಗಳಿಂದ ಪಕ್ಷ ಸಂಘಟನೆಯತ್ತ ಗಮನವನ್ನೇ ಹರಿಸದ ಕಾಂಗ್ರೆಸ್ ಇದೀಗ, ನಾಲ್ಕು ಜಿಲ್ಲೆಗೊಂದು ಪ್ರತ್ಯೇಕ ತಂಡವನ್ನು ರಚಿಸಿ, ಆ ತಂಡದಿಂದ ಬೇರುಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವ ಕೆಲಸವನ್ನು ಮಾಡುತ್ತಿದೆ. ಹಾಗೆ ನೋಡಿದರೆ, ಬೂತ್ ಮಟ್ಟ ಅಥವಾ ಹೋಬಳಿ ಮಟ್ಟದಲ್ಲಿ ಸಂಘಟನೆ ಮಾಡುವುದರಿಂದ ಮಾತ್ರ ‘ಕೇಡರ್ ಬೇಸ್’ ಪಕ್ಷವಾಗಲಿದೆ ಎನ್ನುವುದನ್ನು ಮೊದಲು ತೋರಿಸಿದ್ದು ಬಿಜೆಪಿ.
ಒಂದು ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕು ಎಂದರೆ, ಚುನಾವಣೆ ಘೋಷಣೆಯಾದ ಬಳಿಕ ಅಲ್ಲಿಗೆ ಹೋಗುವುದಿಲ್ಲ. ಪರಿಹಾರದ ಕಾರ್ಯಕರ್ತರು ಹಾಗೂ ಪಕ್ಷದ ಕಾರ್ಯಕರ್ತರ ಒಂದು ತಂಡವನ್ನು ಸಿದ್ಧಪಡಿಸಿ, ಚುನಾವಣೆ ಘೋಷಣೆಗೂ ತಿಂಗಳ ಮೊದಲೇ, ಅಲ್ಲಿ ಬಿಡಾರ ಹೂಡಿ ಪಕ್ಷದ ಪರ ಬಾಯಿ ಮಾತಿನ ಪ್ರಚಾರವನ್ನು ಆರಂಭಿಸುತ್ತಾರೆ. ಇದರಿಂದ ಒಬ್ಬರಿಂದ ಒಬ್ಬರಿಗೆ ಹೋಗಿ, ಪಕ್ಷದ ಸಂಘಟನೆ ಬಲವಾಗುತ್ತದೆ. ಒಮ್ಮೆ ಕಾರ್ಯಕರ್ತರ ಬಲವನ್ನು ಸದೃಢ ಗೊಳಿಸಿದರೆ, ಖಚಿತವಾಗಿ ಪಕ್ಷದ ಬಲ ಹೆಚ್ಚಾಗುತ್ತದೆ.
ಇದು ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯದಲ್ಲಿ ಬಿಜೆಪಿ ಮಾಡಿದ ಬಹುದೊಡ್ಡ strategy. ಇದೀಗ ಇದೇ ತಂತ್ರಗಾರಿಕೆ ಯನ್ನು ಕಾಂಗ್ರೆಸ್ ಪ್ರಯೋಗಿಸಲು ಪ್ರಯತ್ನಿಸುತ್ತಿದೆ. ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದಕ್ಕಿಂತ ಹೆಚ್ಚಾಗಿ ಪಕ್ಷವಾಗಿ ಕಾಂಗ್ರೆಸ್ ಕರ್ನಾಟಕದಲ್ಲಿ ‘ಪುನಶ್ಚೇತನ’ವಾಗುತ್ತಿದೆ ಎನ್ನುವ ತೃಪ್ತಿಯಾದರೂ ಅನೇಕರಲ್ಲಿದೆ. ಪಕ್ಷವಾಗಿ ದೇಶದಲ್ಲಿ ದಿನದಿಂದ ದಿನಕ್ಕೆ ಸೊರಗುತ್ತಿರುವ ಕಾಂಗ್ರೆಸ್‌ಗೆ ಅಸ್ತಿತ್ವವಿರುವುದು ಕರ್ನಾಟಕದಲ್ಲಿ ಮಾತ್ರ.
ಆದ್ದರಿಂದ ಒಂದು ವೇಳೆ ಪಕ್ಷವನ್ನು ಪುನಃ ರಾಷ್ಟ್ರಮಟ್ಟದಲ್ಲಿ ಗಟ್ಟಿಗೊಳಿಸಬೇಕು ಎನ್ನುವುದಿದ್ದರೆ ಅದು ಕರ್ನಾಟಕದ
ಮೂಲಕವೇ ಆಗಬೇಕು ಎನ್ನುವುದು ಈಗಾಗಲೇ ಪಕ್ಷದ ವರಿಷ್ಠರಿಗೂ ಮನದಟ್ಟಾಗಿದೆ. ಇದಕ್ಕೆ ಪೂರಕವಾಗಿಯೇ ಕೆಲ ದಿನಗಳ ಹಿಂದೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸೋನಿಯಾ ಗಾಂಧಿ ಅವರ ಆಪ್ತ ಮಲ್ಲಿಕಾರ್ಜುನ ಖರ್ಗೆ ಅವರು, ‘ಕರ್ನಾಟಕದಲ್ಲಿ ಕಾಂಗ್ರೆಸ್‌ನಲ್ಲಿ ಈಗಲಾದರೂ ಪುನಶ್ಚೇತನವಾಗದಿದ್ದರೆ ನಾಶವಾಗಲಿದೆ.
ಆದ್ದರಿಂದ ನಾಯಕರು ಸ್ವ ಪ್ರತಿಷ್ಠೆಗಳನ್ನು ಬದಿಗೊತ್ತಿ ಪಕ್ಷ ಸಂಘಟನೆಯತ್ತ ಗಮನಹರಿಸಿ’ ಎನ್ನುವ ಮಾತನ್ನು ಬಹಿರಂಗ
ವಾಗಿಯೇ ಹೇಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಇದೀಗ ಈ ನಿಟ್ಟಿನಲ್ಲಿಯೇ ರಾಜ್ಯ ಕಾಂಗ್ರೆಸ್, ಸಂಘಟನೆಗೆ ಸಿದ್ಧತೆ ನಡೆಸಿಕೊಂಡಿದೆ. ಹಾಗೇ ನೋಡಿದರೆ ಸಾಮಾನ್ಯವಾಗಿ ಕಾಂಗ್ರೆಸ್ ವಿಧಾನಸಭೆ ಅಥವಾ ಲೋಕಸಭಾ ಚುನಾವಣೆಗಳು ಕೆಲ ತಿಂಗಳು ಬಾಕಿಯಿರುವಾಗ ಈ ರೀತಿಯ ಸಂಘಟನೆ, ವಿಸ್ತರಣೆ ಅಥವಾ ಕಾರ್ಯಕರ್ತರ ಅಭಿಯಾನಕ್ಕೆ
ಕೈಹಾಕುತ್ತದೆ. ಆದರೆ ಈಗಿನ ಮಟ್ಟಿಗೆ ಮುಂದಿನ ಎರಡೂವರೆ ವರ್ಷದ ಕಾಲ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಇಲ್ಲ.
ಇಷ್ಟು ಮುಂಚಿತವಾಗಿಯೇ ಪಕ್ಷದ ಪುನಶ್ಚೇತನಕ್ಕೆ ಕೈಹಾಕಿರುವುದಕ್ಕೆ ಮೂಲ ಕಾರಣ, ಕಳೆದ ತಿಂಗಳು ನಡೆದ ಗ್ರಾಮ ಪಂಚಾ ಯಿತಿ ಚುನಾವಣೆಯ ಫಲಿತಾಂಶ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ೨೦೨೦ರ ಡಿಸೆಂಬರ್‌ನಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಒಂದೆಡೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಗೆದ್ದಿದ್ದಾರೆ ಎಂದು ಹೇಳಿಕೊಂಡರೆ, ಇನ್ನೊಂದೆಡೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಗೆಲುವು ಸಾಧಿಸಿದ್ದಾರೆ ಎನ್ನುವ ಮಾತನ್ನು ಬಿಜೆಪಿಗರು ಹೇಳುತ್ತಿದ್ದಾರೆ.
ಈ ಎರಡರಲ್ಲಿ ಯಾವುದು ಸತ್ಯ ಎನ್ನುವುದಕ್ಕಿಂತ, ಕಾಂಗ್ರೆಸ್ ಕಳೆದ ಬಾರಿಗಿಂತ ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಳಪೆ ಸಾಧನೆ ತೋರಿದೆ ಎನ್ನುವುದನ್ನು ಸ್ಪಷ್ಟ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು
ಸೋಲುತ್ತಿದ್ದಾರೆ ಎಂದರೆ, ಕಾಂಗ್ರೆಸ್‌ನ ಬಹುದೊಡ್ಡ ಮತಬ್ಯಾಂಕ್ ಆಗಿರುವ ಗ್ರಾಮೀಣ ಭಾಗದ ಮತದಾರರು ಬಿಜೆಪಿಯತ್ತ ವಾಲುತ್ತಿದ್ದಾರೆ ಎಂದರ್ಥ.
ಉಪಚುನಾವಣೆಗಳಲ್ಲಿ ಸೋಲನುಭವಿಸಿದ್ದ ಕಾಂಗ್ರೆಸ್, ಇದಕ್ಕೆ ‘ಬಿಜೆಪಿಯಿಂದ ಅಧಿಕಾರ ದುರುಪಯೋಗವಾಗಿದೆ’ ಎನ್ನುವ ಸಮರ್ಥನೆಯನ್ನ ನೀಡಿತ್ತು. ಆದರೆ ಗ್ರಾಮ ಪಂಚಾಯಿತಿಗಳಲ್ಲಿಯೂ ಸೋಲನುಭವಿಸಿದ್ದರಿಂದ ಸಂಘಟನೆಯ ವಿಚಾರದಲ್ಲಿ ಇನ್ನು ಎಚ್ಚರ ತಪ್ಪಿದರೆ ಭವಿಷ್ಯದ ದುರಂತಕ್ಕೆ ಹೊಣೆಯಾಗುತ್ತೇವೆ ಎನ್ನುವುದನ್ನು ಅರಿತಿದ್ದಾರೆ. ವಿಧಾನಸಭೆ ಚುನಾವಣೆಗೆ ಇನ್ನು ಎರಡೂವರೆ ವರ್ಷ ಸಮಯವಿದ್ದರೂ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ಮುಂದಿನ ಕೆಲವೇ ತಿಂಗಳಲ್ಲಿ ಎದುರಾಗಲಿದೆ.
ಆದ್ದರಿಂದ ಗ್ರಾಮ ಪಂಚಾಯಿತಿಯಲ್ಲಿ ಸೋಲನುಭವಿಸಿದ್ದಂತೆ, ಇಲ್ಲಿಯೂ ಹಿನ್ನಡೆ ಅನುಭವಿಸಿದರೆ ಅದನ್ನು ಸರಿಪಡಿಸಿ ಕೊಳ್ಳುವುದಕ್ಕೆ ಭಾರಿ ಸಮಸ್ಯೆಯಾಗುತ್ತದೆ ಎನ್ನುವುದನ್ನು ನಾಯಕರು ಅರಿತಿದ್ದಾರೆ. ಆದ್ದರಿಂದಲೇ ಇದೀಗ ರಾಜ್ಯದಲ್ಲಿ ಇದೀಗ ಪ್ರತಿಪಕ್ಷವಾಗಿ ಕಾಂಗ್ರೆಸ್ ಭಾರಿ ದೊಡ್ಡ ಮಟ್ಟದಲ್ಲಿ ಜನಾಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಪುಟ್ಟ ಹೆಜ್ಜೆಯನ್ನು ಇಟ್ಟಿದೆ. ಕೇವಲ ಸ್ಟಾರ್ ಪ್ರಚಾರಕರನ್ನು ತೋರಿಸಿ, ಚುನಾವಣೆ ಗೆಲ್ಲುವ ತಂತ್ರಗಾರಿಕೆಯಿಂದ ಹಿಂದೆ ಸರಿದು ಬೂತ್ ಮಟ್ಟದಿಂದ
ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲವು ಮಹತ್ತರ ನಿರ್ಧಾರವನ್ನು ತಗೆದುಕೊಂಡಿದ್ದಾರೆ.
ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಈಗ ಹೊಸ ಹುರುಪಿನಲ್ಲಿ ಪಕ್ಷ ಸಂಘಟನೆಗೆ ಹೊರಟಿರುವ ರಾಜ್ಯ ನಾಯಕರಿಗೆ, ಒಂದು ವಿಷಯ ಈಗಾಗಲೇ ಸ್ಪಷ್ಟವಾಗಿದೆ. ಬಿಜೆಪಿ ರೀತಿಯಲ್ಲಿ ಕೇಂದ್ರದ ಅಥವಾ ವರಿಷ್ಠ ರಿಂದ ನಿರೀಕ್ಷಿತ ಮಟ್ಟದಲ್ಲಿ ಸಹಾಯ ಸಿಗುವುದಿಲ್ಲ ಎನ್ನುವುದು. ಆದ್ದರಿಂದ ದೆಹಲಿಯತ್ತ ಹೆಚ್ಚು ನೋಡದೇ, ರಾಜ್ಯದಲ್ಲಿರುವ
ನಾಯಕರನ್ನು ಬಳಸಿಕೊಂಡೇ, ಕಳೆದು ಹೋಗಿರುವ ಸಂಘಟನೆಯನ್ನು ಕಟ್ಟಬೇಕು ಎನ್ನುವುದು. ಈ ನಿಟ್ಟಿನಲ್ಲಿ ಪಕ್ಷದ ನಾಯಕರು ಒಂದಾಗಬೇಕಾದ ಅನಿವಾರ್ಯತೆಯಿದೆ.
ಆದ್ದರಿಂದ ಇದೀಗ ಎಲ್ಲ ನಾಯಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾದರೂ ಪಕ್ಷದ ಸಂಘಟನೆಯಲ್ಲಿ ತೊಡಗಲು ಒಪ್ಪಿ ದಂತೆ ಕಾಣುತ್ತಿದೆ. ಆದರೆ ನಾಯಕರಲ್ಲಿ ಈ ಹೊಂದಾಣಿಕೆ ಎಷ್ಟು ದಿನದವರೆಗೆ ಇರಲಿದೆ ಎನ್ನುವುದನ್ನು ನೋಡಬೇಕಿದೆ. ಇನ್ನು ಬಿಜೆಪಿ ರೀತಿ ಯಲ್ಲಿಯೇ ಪಕ್ಷ ಸಂಘಟನೆಗೆ ಕಾಂಗ್ರೆಸ್‌ನಲ್ಲಿ ಜನರಿದ್ದಾರೆಯೇ ಎನ್ನುವ ಪ್ರಶ್ನೆಗೆ ಬಹುತೇಕ ಕಾಂಗ್ರೆಸಿಗರಲ್ಲಿ ಉತ್ತರ ವಿಲ್ಲ. ಕೆಟ್ಟ ಮೇಲಾದರೂ ಬುದ್ಧಿ ಕಲಿತಿರುವ ಕಾಂಗ್ರೆಸ್ ನಾಯಕರು ಇದೀಗ, ಒಂದಾಗಿ ಕರ್ನಾಟಕದ ಮಟ್ಟಿಗೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.
೨೦೨೪ರಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆ ಹಾಗೂ ಮುಂದೆ ಬರಲಿರುವ ತಾಲೂಕು, ಜಿಲ್ಲಾ ಪಂಚಾಯಿತಿ
ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು ಈಗಿನಿಂದಲೇ ತಯಾರಿ ಆರಂಭಿಸಿರುವುದು ಪಕ್ಷದ ಮಟ್ಟಿಗೆ ಉತ್ತಮ ಬೆಳವಣಿಗೆ. ಹುರುಪಿನಲ್ಲಿ ಪಕ್ಷ ಸಂಘಟನೆಯತ್ತ ಮುಖಮಾಡಿರುವ ನಾಯಕರು, ಈ ಹುರುಪನ್ನು ಇದೇ ರೀತಿ ಮುಂದುವರಿಸಿಕೊಂಡು ಹೋಗಲಿ ಎನ್ನುವುದು ಕಾರ್ಯಕರ್ತರ ಬಯಕೆಯಾಗಿದೆ. ಏಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದಷ್ಟೇ, ಪ್ರತಿಪಕ್ಷಗಳು ಬಲವಾಗಿದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ.