Thursday, 31st October 2024

Harish Kera Column: ಬಟ್ಟೆ ಹೇಗಿದ್ದರೂ ಪರವಾಗಿಲ್ಲ, ನಡೆಯಿರಿ !

ಕಾಡು ದಾರಿ

ಹರೀಶ್‌ ಕೇರ

ಇತ್ತೀಚೆಗೆ ಬಿಡುಗಡೆಯಾದ ವಸುಧೇಂದ್ರ ಅವರ ‘ರೇಷ್ಮೆ ಬಟ್ಟೆ’ ಕಾದಂಬರಿಯನ್ನು ಓದುತ್ತ ಒಂದು ವಿಷಯ ನಿಚ್ಚಳವಾಯಿತು: ಪುರಾತನ ನಾಗರಿಕತೆಗಳು ಕಾಲ್ನಡಿಗೆಯಲ್ಲಿಯೇ ಒಂದು ಕಡೆಯಿಂದ ಇನ್ನೊಂದು ಕಡೆಗೆ
ಸಾಗಿದ್ದವು. ಅವರ ಕಾದಂಬರಿಯ ವಿಷಯವಾದ ‘ಸಿಲ್ಕ್ ರೂಟ್’ ಅನ್ನೇ ತೆಗೆದುಕೊಂಡರೆ, ಈ ದಾರಿಯಲ್ಲಿ ಸಾಗಿದ ವಸ್ತು-ಸಂಗತಿಗಳು ಒಂದೆರಡಲ್ಲ. ಈ‌ ಸಿಲ್ಕ್ ರೂಟ್ ಸುಮಾರು 4000 ಮೈಲುಗಳುದ್ದಕ್ಕೆ ಹಬ್ಬಿತ್ತು. ‌

ಅದೇನೂ ಏಕರೂಪದ, ಒಂದೇ ದಾರಿಯಲ್ಲ. ನೂರಾರು ದಾರಿಗಳು ಕವಲೊಡೆಯುತ್ತಾ ಕೂಡುತ್ತಾ ಸಾಗಿದ ಪಥವದು. ಪೂರ್ವದ ಚೀನಾದ ಕರಾವಳಿಯಿಂದ ಪಶ್ಚಿಮದ ಯುರೋಪಿನ ಕರಾವಳಿಯವರೆಗೂ ಹರಡಿದ್ದ ಮಾರ್ಗದಲ್ಲಿ ನಡು ನಡುವೆ ಹಿಮ ಕವಿದ ಘೋರ ಬೆಟ್ಟಗಳು, ಅಬ್ಬರಿಸುವ ನದಿಗಳು, ಹೂಣರಂಥ ದರೋಡೆ ಕೋರರು, ಚೀನಾದ ಮಹಾಗೋಡೆ, ಉಸಿರು ಡುಗಿಸಿ ಕೊಲ್ಲುವ ವಿಸ್ತಾರ ತಕ್ಲಾಮಕಾನ್ ಮರುಭೂಮಿ- ಎಲ್ಲವೂ
ಇದ್ದವು. ಇದೆಲ್ಲವನ್ನೂ ಉತ್ತರಿಸಿಯೇ ನಾಗರಿಕತೆಯ ಅತ್ಯುತ್ತಮ ಸಂಗತಿಗಳೂ ವಾಣಿಜ್ಯದ ವಂಚಕತನ
ಗಳೂ ಧರ್ಮಗಳೂ ಅತ್ತಿತ್ತ ಹರಿದಾಡಿದವು.

ಭಾರತದಲ್ಲಿದ್ದ ಬೌದ್ಧ ಧರ್ಮ ಇದರ ಮೂಲಕವೇ ಉತ್ತರಕ್ಕೆ ಸಾಗಿ ಚೀನಾವನ್ನು ಆವರಿಸಿಕೊಂಡಿತು.
ಚೀನಾದ ರೇಷ್ಮೆ ಬಟ್ಟೆ ದಕ್ಷಿಣದ ಭಾರತಕ್ಕೂ ಪಶ್ಚಿಮದ ಯುರೋಪಿಗೂ ಹಬ್ಬಿತು. ಇದರ ಮೂಲಕವೇ
ಮುದ್ರಣ ಮಾಧ್ಯಮ, ಲಿಪಿಗಳು, ಭಾಷೆ ಎಲ್ಲವೂ ಚಲಿಸಿದವು. ಅದು ಜಗತ್ತು ಕಂಡ ಮೊದಲ ಜಾಗತೀ ಕರಣ.

‘ಕಾಲ್ನಡಿಗೆ’ ಎಂದರೆ ಈ ಪಥದಲ್ಲಿ ಒಂಟೆಗಳು, ಕುದುರೆಗಳು ಬಳಕೆಯಾಗಿದ್ದವು ಎಂಬುದೇನೋ ಸರಿ; ಆದರೆ ಎರಡನೇ ಶತಮಾನದಲ್ಲಿ ಎಲ್ಲರಿಗೂ ಇವು ಲಭ್ಯವಿರಲಿಲ್ಲ. ಆದ್ದರಿಂದ ಕಾಲ್ನಡಿಗೆ ಎನ್ನುವುದೇ ಸರಿ. “ನಾನು ನಡೆಯುತ್ತಾ ಕಾಡಿನೊಳಗೆ ಹೋದೆ; ಕಾಡಿನ ಮರಗಳಿಗಿಂತ ಎತ್ತರದವನಾಗಿ ಬಂದೆ” ಎನ್ನುತ್ತಾನೆ ಹೆನ್ರಿ ಡೇವಿಡ್ ಥೋರೋ ಎಂಬ ಅಮೆರಿಕನ್ ಲೇಖಕ. ಇವನ ‘ವಾಕಿಂಗ್’ ಎಂಬ ಅನುಭವ ಕಥನ ಜನಪ್ರಿಯ. ಅದು ಅವನ ಹತ್ತು ವರ್ಷಗಳ ವಾಕಿಂಗ್ ಜೀವನದ ಪ್ರತಿಫಲನ.

ತನ್ನ ವಾಕಿಂಗ್‌ನ ಲಯವೇ ಸಂಗೀತ, ಸಂಭಾಷಣೆ, ಕ್ರಿಯೇಟಿವ್ ಆಲೋಚನೆಗಳು ಮತ್ತು ಸಾಹಿತ್ಯದ ಮೂಲ ಎಂಬುದು ಅವನ ಭಾವನೆ. ವಾಕಿಂಗ್‌ನಲ್ಲಿ ಸದಾ ಆತ ಪ್ರಕೃತಿಯನ್ನು ಗಮನಿಸುತ್ತಿದ್ದ. ಅಲ್ಲಿ ಬರುತ್ತಿದ್ದ ಆಲೋಚನೆಗಳನ್ನು ಸೇರಿಸಿ ಉಪನ್ಯಾಸ, ಬರಹ ಮಾಡುತ್ತಿದ್ದ. ಇವನ ‘ವಾಲ್ಡೆನ್’ ಎಂಬ ಕೃತಿ ಜಗತ್ಪ್ರಪ್ರಸಿದ್ಧ. ಒಂದು ವರ್ಷ ಕಾಲ ಕಾಡಿನಲ್ಲಿ ಒಂಟಿಯಾಗಿ ಬದುಕಿ, ಓಡಾಡುತ್ತ ಚಿಂತಿಸಿದ ಹಾಗೂ ದಾಖಲಿಸಿದ ಅನುಭವವಿದು.

ಹಾಗೆ ನೋಡಿದರೆ ನಮ್ಮ ಪುರಾಣಗಳು ‘ವಾಕಿಂಗ್ ಪ್ರಶಂಸೆ’ಯೇ ಆಗಿವೆ ಅನ್ನಬೇಕು. ನಮ್ಮ ಎರಡು ಪ್ರಮುಖ ಮಹಾಕಾವ್ಯಗಳಾದ ರಾಮಾಯಣ ಹಾಗೂ ಮಹಾಭಾರತಗಳನ್ನು ಬಿಡಿಸಿ ನೋಡಿದರೆ ಇದು ನಿಚ್ಚಳ. ‘ರಾಮನ ಅಯನ’ವೇ ರಾಮಾಯಣವಾಗಿದೆ ಅನ್ನುತ್ತಾರೆ. ‘ಅಯನ’ ಎಂದರೆ ಪ್ರಯಾಣ. ಅದೂ ಅಂತಿಂಥ ಪ್ರಯಾಣವಲ್ಲ- ಭಾರತದ ಉತ್ತರ ತುದಿಯಿಂದ ದಕ್ಷಿಣ ಕನ್ಯಾಕುಮಾರಿಯವರೆಗೆ, ಅಲ್ಲಿಂದ ಶ್ರೀಲಂಕೆಗೂ ಹೋಗಿ ಬಂದ ಸುದೀರ್ಘ ನಡಿಗೆ ಆತನದು.

ಆಗೇನೂ ಆತ ಕುದುರೆ ಮೇಲೋ, ಒಂಟೆ ಮೇಲೋ ಕುಳಿತು ಸಾಗಿದ ಎಂದು ವಾಲ್ಮೀಕಿ ಬರೆಯುವುದಿಲ್ಲ. ಅಂದರೆ ತಮ್ಮ ಲಕ್ಷ್ಮಣನ ಜತೆಗೆ ಕಾಲ್ನಡಿಗೆಯಲ್ಲಿಯೇ ಅಷ್ಟು ದೂರ ಕ್ರಮಿಸಿದ್ದ. ಇದರಲ್ಲಿ ಅರ್ಧಭಾಗವನ್ನು ಸೀತೆ ಕೂಡ ನಡೆದಿದ್ದಳು. ನಡೆಯುತ್ತಾ ನಡೆಯತ್ತಾ ಆತನ ಜೀವವೇ ಬದಲಾಯಿತು. ಋಷಿಮುನಿಗಳ ಭೇಟಿ, ಸೀತೆಯ ಅಪಹರಣ, ಕಪಿಸಾಮ್ರಾಜ್ಯದ ಸಖ್ಯ, ರಾಕ್ಷಸರ ವೈರ, ಯುದ್ಧ- ಎಲ್ಲವೂ ನಡೆದವು.

ರಾಮನ ವ್ಯಕ್ತಿತ್ವವೇ ಬದಲಾಯಿತು. ಅಯೋಧ್ಯೆಯಿಂದ ಹೊರಟಿದ್ದ ಒಬ್ಬ ಸಾಮಾನ್ಯ ರಾಜಕುಮಾರ, ನಡೆಯುತ್ತಾ ನಡೆಯುತ್ತಾ ವಿಶಿಷ್ಟ ವ್ಯಕ್ತಿಯಾಗಿ ರೂಪುಗೊಂಡ. ಮಹಾಭಾರತದಲ್ಲೂ 12 ವರ್ಷಗಳ ಕಾಲ ವನವಾಸದಲ್ಲಿ ಕಳೆದ ಪಾಂಡವರು ಕಾಡಿನಲ್ಲಿ ನಡಿಗೆಯಲ್ಲಿಯೇ ಆ ಕಾಲವನ್ನು ಕಳೆದ ಬಗೆಯನ್ನು ವೇದವ್ಯಾಸರು ಬಣ್ಣಿಸಿದ್ದಾರೆ.. ಅಲ್ಲೂ ಪಾಂಡವರಿಗೆ ಋಷಿಮುನಿಗಳ ಸಾಂಗತ್ಯ, ಕಥನಶ್ರವಣ, ರಾಕ್ಷಸರು -ಗಂಧರ್ವರು-ಮತ್ತಿತರರ ಜತೆ ಒಡನಾಟ, ದೇವತೆ ಗಳ ಸಖ್ಯ, ಜ್ಞಾನ-ಶೌರ್ಯವೃದ್ಧಿ ಇವೆ ಆಗುತ್ತವೆ. ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರನ್ನು ಗೆಲ್ಲಿಸಿದ, ಮುಂದಿನ ಯುಧಿಷ್ಠಿರನ ಆಳ್ವಿಕೆಯ ಬೀಜಗಳು ಇಲ್ಲಿದ್ದವು ಎಂದು ಹೇಳಬಹುದು.

ಮಹಾಭಾರತದ ಕಾಲಕ್ಕೆ ಕುದುರೆಗಳು, ರಥಗಳಿದ್ದವಾದರೂ ವನವಾಸ ವ್ರತದಲ್ಲಿದ್ದ ಪಾಂಡವರು ಅವುಗಳನ್ನು ಕಾಡಿನಲ್ಲಿ ಬಳಸುವಂತಿರಲಿಲ್ಲವಷ್ಟೆ. ಹೀಗಾಗಿ 12 ವರ್ಷ ಅವರ ಕಾಲುಗಳೇ ಅವರನ್ನು ಮುನ್ನಡೆಸಿದವು ಎನ್ನಬೇಕು. ಹಿಮಾಲಯದಲ್ಲಿ ಹುಟ್ಟಿ ಬೆಳೆದ ಪಾಂಡವರು ಅಲ್ಲಿಯಂತೂ ನಡೆದೇ ದಾರಿ ಸವೆಸಿರಬೇಕು; ಇನ್ನು ತಮ್ಮ ಕೊನೆಗಾಲದಲ್ಲಿ ಅವರು ನಡೆಸಿದ ಸ್ವರ್ಗಾರೋಹಣದ ಕತೆಯಂತೂ ಮೈ ಕೊರೆಯುವ ಹಿಮದ ಅಲುಗಿಂತೆಯೇ ಇದೆ. ಅಂತೂ ಪಾಂಡವರ ಬದುಕೆಂಬುದು ಸುದೀರ್ಘ ವಾಕಿಂಗು.

“ನನ್ನ ಬಳಿ ಇಬ್ಬರು ವೈದ್ಯರಿದ್ದಾರೆ, ಒಬ್ಬ ಎಡಗಾಲು, ಇನ್ನೊಬ್ಬ ಬಲಗಾಲು” ಎನ್ನುತ್ತಾನೆ ಒಬ್ಬ ಲೇಖಕ. ವಾಕಿಂಗ್‌ನ ಆರೋಗ್ಯ ಪ್ರಯೋಜನಗಳು ನಮಗೆ ಗೊತ್ತೇ ಇವೆ. ಗೂಗಲಿಸಿದರೆ ಅವು ಹೇರಳವಾಗಿ ಸಿಗುತ್ತವೆ. ವೈದ್ಯರ ಬಳಿಗೆ ಹೋದರೂ ಅವರು ಸೂಚಿಸುವುದು “ಕಠಿಣ ವ್ಯಾಯಾಮ ಅಗತ್ಯವಿಲ್ಲ, ಆದರೆ ನಿತ್ಯ ಒಂದಷ್ಟು ಸಮಯ ನಡೆಯಿರಿ” ಎಂದೇ. ಅದು ದೈಹಿಕ ಆರೋಗ್ಯವನ್ನು ಗಮನಿಸಿ ಹೇಳುವ ಮಾತು. ನಿತ್ಯ ಕೃಷಿ, ಕೂಲಿ ಮತ್ತಿತರ ದುಡಿಮೆಯ ಕೆಲಸ ಮಾಡುವವರಿಗೆ ವ್ಯಾಯಾಮವಾಗಿ ಈ ನಡಿಗೆಯ ಅಗತ್ಯವೇನೂ ಇಲ್ಲ. ಆದರೆ ಕುಳಿತು ಕೆಲಸ ಮಾಡುವವರಿಗೆ ಇದು ಖಂಡಿತವಾಗಿಯೂ ಬೇಕು. ದೈಹಿಕ ಆರೋಗ್ಯಕ್ಕೂ, ಮಾನಸಿಕ ಪ್ರಫುಲ್ಲತೆಗೂ ಇದು ಬಹಳ ಮುಖ್ಯ.

ನಾವು ಈಗಾಗಲೇ ಬಹಳ ವೇಗದ ಜಗದಲ್ಲಿರುವುದರಿಂದ, ಬದುಕುವ ಅವಧಿ ಚುಟುಕಾಗಿದೆ. ನಮ್ಮ ಕಣ್ಣ ಮುಂದೆ ಹಲವರು ಓಡುತ್ತ, ಹಲವರು ಕಾರಿನಲ್ಲಿ ರೊಂಯ್ಯನೇ ಸಾಗುತ್ತಾರೆ. ಇಂಥ ಹೊತ್ತಿನಲ್ಲಿ ನಡಿಗೆ ನಮ್ಮ ಬದುಕನ್ನು ವಿಸ್ತರಿಸುತ್ತದೆ; ನಿಧಾನವಾಗಿಸುತ್ತದೆ. ಹಾಗೆ ನಿಧಾನವಾದಾಗ, ಬದುಕನ್ನು ವಿವರವಾಗಿ ನೋಡುತ್ತಾ ಆನಂದಿಸಲು ಸಾಧ್ಯವಾಗುತ್ತದೆ. ಹೆಜ್ಜೆಗಳ ಮೇಲೆ ಹೆಜ್ಜೆಗಳು ಬೀಳುತ್ತಾ ಯೋಚನೆಗಳು ಹೆಚ್ಚು ಸ್ಪಷ್ಟವಾಗುತ್ತವೆ. ಚಿಂತನೆಗಳು
ವಿವರವಾಗಿ ಮೂಡುತ್ತವೆ. ಕ್ರಿಯೇಟಿವ್ ಐಡಿಯಾಗಳುಬೇಕಾ, ಹಾಗಾದರೆ ನಡೆಯಿರಿ. ನಡೆಯುವ ಮನುಷ್ಯನ ಕಿವಿಯಲ್ಲಿ ದೇವತೆಗಳು ಪಿಸುಗುಟ್ಟುತ್ತಾರೆ ಎಂಬುದು ಜಾಣನೊಬ್ಬನ ನುಡಿ. ಅಸಮಾಧಾನ, ಅಸಂತೃಪ್ತಿಗಳಿಗೆ ವಾಕಿಂಗ್ ಅತ್ಯುತ್ತಮ ಔಷಧಿ. ಪ್ರಕೃತಿಯ ನಡುವೆ ಸಾಗುವ ಪ್ರತಿಯೊಂದು ನಡಿಗೆಯೂ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ದನ್ನೇ ನಮಗೆ ಕೊಡುತ್ತದೆ.

ವಯಸ್ಸಾದ ಬಳಿಕ ವಾಕಿಂಗ್ ಹೋಗಬಹುದು ಎಂದುಕೊಂಡರೆ ಅದು ಮಿಥ್ಯೆ. ವಯಸ್ಸಿಗೂ ವಾಕಿಂಗ್‌ಗೂ ಸಂಬಂಧವಿಲ್ಲ. ಹಿರಿಯ ನಾಗರಿಕರು ಪಾರ್ಕ್‌ನಲ್ಲಿ ನಡೆಸುವ ವಾಕಿಂಗ್ ಸೀಮಿತ ಉದ್ದೇಶದ್ದು. ಅಲ್ಲಿ ಕೈಕಾಲುಗಳ ಬಿಗಿತ ಸಡಿಲಿಸುವುದು ಮತ್ತು ಸರೀಕರ ಜತೆಗೆ ಹರಟೆ ಮಾತ್ರ ಸಾಧ್ಯ. ನಿತ್ಯ ಅದೇ ಪುಟ್ಟಪಥಗಳಲ್ಲಿ ನಡೆಯುವುದ ರಿಂದಲೂ ಸೀಮಿತ ಲಾಭ ಸಾಧ್ಯ. ಆದರೆ ಮನಸ್ಸು ಅದರ ಎಲ್ಲ ಎಕಟ್ಟುಗಳನ್ನು ಮೀರಿ ವಿಸ್ತರಿಸಬೇಕಿದ್ದರೆ ನಿತ್ಯ ಹೊಸ ದಾರಿಗಳಲ್ಲಿ ಸಾಗಬೇಕು. ಹೊಸ ಸ್ನೇಹಿತರಿದ್ದರೆ ಇನ್ನೂ ಉತ್ತಮ. “ಗೊತ್ತಿರುವ ದಾರಿ ನಡೆಯಲು ಸುಲಭ. ಅದರೆ ಅಲ್ಲಿ ಹೂಗಳು ಬೆಳೆಯುವುದಿಲ್ಲ” ಎನ್ನುತ್ತಾನೆ ಕಲಾವಿದ ವಿನ್ಸೆಂಟ್ ವ್ಯಾನ್‌ಗೋ.

ದಾರಿ ತಪ್ಪಿದಾಗ ಹೊಸ ಆಕಾಶವೂ ತೆರೆದುಕೊಳ್ಳುತ್ತದೆ. ಪ್ರತಿಯೊಂದು ನಡಿಗೆಯೂ ಒಂದೊಂದು ಡಿಸ್ಕವರಿಯೇ. ಕೆಲವು ನಮಗೆ ಗೊತ್ತಾಗುತ್ತದೆ; ಕೆಲವು ಗೊತ್ತಾಗುವುದಿಲ್ಲ. ವಿಯೆಟ್ನಾಮಿನ ಸಂತ ಥಿಚ್ ನಾಟ್ ಹ್ಯಾನ್ ಹೇಳುತ್ತಾನೆ: “ಜನರು ಸಾಮಾನ್ಯವಾಗಿ ನೀರಿನ ಮೇಲೆ ಅಥವಾ ಗಾಳಿಯಲ್ಲಿ ನಡೆಯುವುದನ್ನು ಪವಾಡವೆಂದು ಪರಿಗಣಿಸುತ್ತಾರೆ. ಆದರೆ ನಿಜವಾದ ಪವಾಡವೆಂದರೆ ನೀರಿನ ಮೇಲೆ ಅಥವಾ ಗಾಳಿಯಲ್ಲಿ ನಡೆಯುವುದಲ್ಲ. ಬದಲು, ಭೂಮಿಯ ಮೇಲೆ ನಡೆಯುವುದು. ಪ್ರತಿದಿನ ನಾವು ಗಮನಿಸದ ಪವಾಡವಿದು- ನೀಲಿ ಆಕಾಶ, ಬಿಳಿಯ ಮೋಡಗಳು, ಹಸಿರು ಎಲೆಗಳು, ಮಗುವಿನ ಕಪ್ಪು ಕುತೂಹಲಕಾರಿ ಕಣ್ಣುಗಳು- ಇದನ್ನೆಲ್ಲ ನೋಡುವ ನಮ್ಮದೇ ಎರಡು ಕಣ್ಣುಗಳು. ಎಲ್ಲೋ ಒಂದು ಪವಾಡ”. ಮೈ ಮರೆತು ನಡೆಯುವುದರಿಂದ ಇದೆಲ್ಲ ಕಾಣಲು ಸಾಧ್ಯವೆಂಬುದು ಆತನ ಇಂಗಿತ. ಹ್ಯಾನ್, ಮೈಂಡ್ ಫುಲ್‌ನೆಸ್ ಅರ್ಥಾತ್ ತಾದಾತ್ಮ್ಯದ ಪ್ರತಿಪಾದಕ.

ಮೈಮರೆವಿನ ನಡಿಗೆ ಸಾಧ್ಯವಾದಾಗ ಬೇರೆ ಧ್ಯಾನ ಬೇಡವಂತೆ. ಮಕ್ಕಳು ನಡೆಯುವುದನ್ನು ನಾವು ನೋಡಬೇಕು.
ಅವರು ದೊಡ್ಡವರು ತೋರಿಸಿದ ಹಾದಿಯಲ್ಲಿ ನಡೆಯಲಾರರು; ಎಲ್ಲ ತಲೆಮಾರುಗಳೂ ಹೀಗೇ ಮಾಡುತ್ತವೆ. ದೊಡ್ಡವರು ನಿಗದಿತ ಹಾದಿಯಲ್ಲಿ ಹೆಜ್ಜೆ ಹಾಕಿದರೆ, ಮಕ್ಕಳು ದಿಬ್ಬ ಹಾರಿ, ಮೆಟ್ಟಿಲು ಕುಪ್ಪಳಿಸಿ, ನೀರಿನ ಮೇಲೆ ಜಾರಿ ಕಾಡಿನೊಳಗೆ ನುಗ್ಗಿ ನಡೆಯಲು ಬಯಸುತ್ತವೆ. ದೊಡ್ಡವರು ನೂರಾರು ಬಾರಿ ಒಂದೇ ದಾರಿಯಲ್ಲಿ ನಡೆಯಬಲ್ಲರು. ಆದರೆ ಮಕ್ಕಳು ಹೊಸ ದಾರಿಗಳನ್ನು ಅನ್ವೇಷಿಸುತ್ತವೆ; ಬೇಲಿಯಲ್ಲಿ ನುಸುಳುಕಂಡಿಗಳನ್ನು ಸೃಷ್ಟಿಸಿಕೊಳ್ಳುತ್ತವೆ. ದಾರಿಯಲ್ಲಿ ಸಿಕ್ಕ ಒಂದು ಉರುಟಾದ ಕಲ್ಲನ್ನೂ ಅರಳುಗಣ್ಣಿನಲ್ಲಿ ನೋಡುತ್ತವೆ. ಒಂದು ಮರ ಹೂಬಿಟ್ಟದ್ದನ್ನು ಗಮನಿಸುತ್ತವೆ. ಒಂದು ಹೊಸ ಅನ್ವೇಷಣೆಯನ್ನು ಪ್ರತಿ ಬಾರಿಯ ವಾಕಿಂಗಿನಲ್ಲೂ ನೀವು ಮಾಡಬಲ್ಲವರಾದರೆ ನಿಮ್ಮ ಮನಸ್ಸಿನ್ನೂ ಮಗುವಾಗಿಯೇ ಇದೆ ಎಂದರ್ಥ.

ಮನುಕುಲ ನಡೆಯುತ್ತ ನಡೆಯುತ್ತ ಹೊಸ ದಾರಿಗಳನ್ನು ಸೃಷ್ಟಿಸಿಕೊಂಡಿದೆ. ಒಂದು ಹೆಜ್ಜೆಯಿಂದ ಹೊಸ ದಾರಿ, ಒಂದು ಚಿಂತನೆಯಿಂದ ಹೊಸ ಜಗತ್ತು ಹುಟ್ಟುವುದಿಲ್ಲ. ಹಲವು ದಾರಿಗಳು, ಸಹಸ್ರ ಹೆಜ್ಜೆಗಳು ಹೊಸ ಜಗತ್ತನ್ನು ಸೃಷ್ಟಿಸುತ್ತವೆ. ವಾಕಿಂಗು ಎಂಬುದು ಅತ್ಯಂತ ಹಳೇ ವ್ಯಾಯಾಮ, ಹಾಗೇ ಅತ್ಯಂತ ಆಧುನಿಕವೂ ಹೌದು. ಸದಾ ಕುಳಿತೇ ಇರುವವರು, ಯಾವುದೇ ವ್ಯಾಯಾಮ ಮಾಡದವರು ಅತ್ಯಂತ ಹೆಚ್ಚು ನೆಗೆಟಿವ್ ಯೋಚನೆಗಳನ್ನು
ಹೊಂದಿರುತ್ತಾರೆ ಎಂದು ಕೆಲವು ಅಧ್ಯಯನಗಳು ತೋರಿಸಿವೆ. ಒಂದೇ ಒಂದು ಸರಳ ಬದಲಾವಣೆ ಅವರಲ್ಲಿ ಬಹಳ ವ್ಯತ್ಯಾಸ ತರುತ್ತದೆ. ಅದು ವಾಕಿಂಗು. ಕಾಲ್ನಡಿಗೆ ಹೊರಪ್ರಪಂಚವನ್ನು ಮನುಷ್ಯನ ಒಳಕ್ಕೆ ತರುವ ವಿಧಾನ; ವ್ಯಕ್ತಿಯ ಆನಂದಕ್ಕೆ ಒಂದು ಕೀಲಿಕೈ. ಅದಕ್ಕೆ ನಾವು ಎಲ್ಲಿ ನಡೆಯುತ್ತೇವೆ ಎಂಬುದೂ ಮುಖ್ಯ. ನಗರದ ನಡುವೆ, ಕಿಕ್ಕಿರಿದ ಕಟ್ಟಡಗಳು ಹಾಗೂ ಕಾಂಕ್ರೀಟಿನ ನಡುವೆ ಮಾಡುವ ನಡಿಗೆ ಕಾಡಿನ ವಾಕಿಂಗಿನಷ್ಟು ಉಲ್ಲಾಸದಾಯಕ ವಲ್ಲ ಎಂದು ಹೇಳುವವರಿದ್ದಾರೆ.

ಆದರೆ ಎಲ್ಲೇ ಮಾಡಲಿ, ವಾಕಿಂಗ್ ಮಾಡುವುದು ಮುಖ್ಯ. ನಗರದಲ್ಲಿ ಹೊಸ ಮುಖಗಳು ಎದುರಾಗುತ್ತವೆ; ಹೊಸ ಕಥೆಗಳು ಸಿಗಬಹುದು. ನಡೆಯುವ ಕ್ರಿಯೆ ಎಲ್ಲಿ ನಡೆದರೂ ಲಾಭವೇ. ಆರಂಭಿಸಿದ ‘ರೇಷ್ಮೆ ಬಟ್ಟೆ’ಗೇ ಮತ್ತೆ ಬರುವು
ದಾದರೆ, ‘ಬಟ್ಟೆ’ ಎಂದರೆ ಕನ್ನಡದಲ್ಲಿ ‘ದಿರಿಸು’ ಎಂಬ ಅರ್ಥದ ಜಗೆ ‘ದಾರಿ’ ಎಂಬರ್ಥವಿದೆ. ‘ಬಟ್ಟೆ’ ಹೇಗೇ ಇದ್ದರೂ ಪರವಾಗಿಲ್ಲ, ದೇಹ-ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಲು ಎಲ್ಲೇ ಇರಿ, ನಡೆಯುತ್ತಾ ಇರಿ ಅಂತ ಅನ್ನಬಹುದು.

ಇದನ್ನೂ ಓದಿ: Harish Kera Column: ಮನುಕುಲದ ಕಳವಳಕ್ಕೆ ನೊಬೆಲ್‌ ತಂದವನು