Wednesday, 11th December 2024

ಬೇಕುಗಳಿಲ್ಲದ ಬದುಕನ್ನು ಊಹಿಸಿಕೊಳ್ಳುವುದು ಕಷ್ಟ !

ವಿಶ್ವರಂಗ

ರಂಗಸ್ವಾಮಿ ಮೂಕನಹಳ್ಳಿ

ಬಾರ್ಸಿಲೋನಾಗೆ ಬಂದ ಹೊಸತು ನನಗೆ ಅಡುಗೆ ಮಾಡಿ ಅಭ್ಯಾಸವಿಲ್ಲ. ಮೊದಲು ಮಾಡಲು ಕಲಿತದ್ದು ಉಪಿಟ್ಟು! ನಂತರ ಹಾಗೂ ಹೀಗೂ ಮಾಡಿ ಹೊಟ್ಟೆಯೆಂಬ ಎಂದೂ ತುಂಬದ ಉಗ್ರಾಣವ ತುಂಬಿಸಲು ಹಲವಾರು ಖಾದ್ಯಗಳ ಮಾಡಲು ಕಲಿತೆ ಅದು ಬೇರೆಯ ಕಥೆ.

ಎರಡು ಸಾವಿರದ ಇಸವಿಯಲ್ಲಿ ಪ್ರಥಮ ಬಾರಿಗೆ ಸ್ಪೇನ್‌ನಿಂದ ಮರಳಿ ಭಾರತಕ್ಕೆ ಬಂದಾಗ ಅತ್ಯಂತ ಸಾಮಾನ್ಯ ಪ್ರಶ್ನೆ ಎದುರಿಸಿದ್ದು ಅಲ್ಲಿ ಊಟಕ್ಕೆ
ಏನು ಮಾಡಿಕೊಳ್ಳುತ್ತೀಯ ಎನ್ನುವುದು? ಅಲ್ಲಿ ನಮ್ಮ ಅಡುಗೆ ಪದಾರ್ಥಗಳು ಸಿಗುತ್ತವೆಯೇ? ಎನ್ನುವುದು ಇನ್ನೊಂದು ಅತಿ ಸಾಮಾನ್ಯ ಪ್ರಶ್ನೆ.
ಇವತ್ತಿಗೆ ಜಗತ್ತು ಸಂಪೂರ್ಣ ಬದಲಾಗಿ ಹೋಗಿದೆ. ಬಾರ್ಸಿಲೋನಾ ದಲ್ಲಿ ಬದಲಾವಣೆಯ ಗಾಳಿ ಬೀಸಲು ಶುರುವಾಗಿದ್ದು ೨೦೦೪ ರ ನಂತರ.

ಅಲ್ಲಿಯವರೆಗೆ ಇಲ್ಲಿ ವಲಸಿಗರು ಎಂದರೆ ಅದು ಕೇವಲ ದಕ್ಷಿಣ ಅಮೆರಿದ ಜನರು ಎನ್ನುವಂತಿತ್ತು. ನಿಧಾನವಾಗಿ ಇಲ್ಲಿನ ಡೆಮೋಗ್ರಫಿ ಕೂಡ ಬದಲಾ ಗಿದೆ, ಇನ್ನೂ ಬದಲಾಗುತ್ತಿದೆ. ಅಂದರೆ ಇಂದಿನ ದಿನದಲ್ಲಿ ರಾಗಿ ಬಿಟ್ಟು ಬಹುತೇಕ ವಸ್ತುಗಳು ಸಿಗುತ್ತವೆ. ಮನೆಯಲ್ಲಿ ಮಾಡಿಕೊಂಡು ತಿನ್ನುವ ಸಮಯ ಮತ್ತು ಶಕ್ತಿಯಿದ್ದರೆ ಊಟದ ವಿಷಯದಲ್ಲಿ ಇಂದಿನ ದಿನದಲ್ಲಿ ಅಂತಹ ದೊಡ್ಡ ವ್ಯತ್ಯಾಸವೇನು ಕಾಣುವುದಿಲ್ಲ.

ನಮ್ಮಲ್ಲಿ ರಾಗಿ ಮುದ್ದೆ ಹೇಗೆ ಬಹುತೇಕರ ಉಪಹಾರವೋ ಹಾಗೆ ಇಲ್ಲಿ ಮರದ ತುಂಡು ಹೋಲುವ ಬ್ರೆಡ್ಡನ್ನ (ಇಲ್ಲಿ ಇದಕ್ಕೆ ಪಾನ್ ಅಂತಾರೆ) ಬೆಳಗಿನ ಉಪಹಾರವಾಗಿ ಸೇವಿಸುತ್ತಾರೆ. ಸಾಮಾನ್ಯವಾಗಿ ಈ ಪಾನ್ ಬಹಳ ಗಟ್ಟಿ. ತಿನ್ನುವುದಕ್ಕೆ ಗೊತ್ತಿರದಿದ್ದರೆ ವಸಡು ಕಿತ್ತು ಹೋಗುವುದು ಗ್ಯಾರಂಟಿ. ಇಲ್ಲಿ ಒಂದು ಬ್ರೆಡ್ಡಿಗೆ ಲೆಟಿಸಿಯ ಎಂದು ಹೆಸರಿಟ್ಟಿದ್ದಾರೆ. ಅಂದಹಾಗೆ ಸ್ಪೇನ್‌ನ ಈಗಿನ ಮಹಾರಾಣಿ ಹೆಸರು ಕೂಡ ಸೇಮ್, ಇದೇನಪ್ಪ ಬ್ರೆಡ್ಡಿಗೆ ಮಹಾ ರಾಣಿಯ ಹೆಸರನ್ನ ಇಟ್ಟಿದ್ದಾರೆ ಎಂದು ಮನಸ್ಸಿನಲ್ಲಿ ಅಂದುಕೊಂಡು ಪಾನದೇರಿಯ (ನಮ್ಮ ಬೇಕರಿ ಅಣ್ಣತಮ್ಮ) ದಲ್ಲಿ ಕೆಲಸ ಮಾಡುವ ಮಹಿಳೆ ಯನ್ನ ಇಂತಹ ಹೆಸರೇಕೆ ಇಟ್ಟಿರಿ? ಎಂದದ್ದಕ್ಕೆ ಮಹಾರಾಣಿ ಅಂದ ಮೇಲೆ ಕೋಮಲ, ಮೃದು ಎನ್ನುವ ಅರ್ಥ ಅಲ್ವಾ? ಅದಕ್ಕೆ ಸಾಫ್ಟ್ ಪಾನ್‌ಗೆ ಆ ಹೆಸರು ಎಂದಳು. ಜಗತ್ತು ಬದಲಾಗಿದೆ ಎಂದು ನಾವು ಬೊಬ್ಬೆ ಹೊಡೆಯಬಹುದು ಆದರೆ ಜಗತ್ತಿನಾದ್ಯಂತ ಇಂದಿಗೂ ತಮ್ಮ ರಾಜ ರಾಣಿಯರನ್ನ ಇಂದಿಗೂ ಬಹಳ ಪ್ರೀತಿ ಮತ್ತು ಭಯಭಕ್ತಿಯಿಂದ ಕಾಣುತ್ತಾರೆ.

ಎಲ್ಲಿಂದ ಎಲ್ಲೇ ಹೋಗಲಿ ನಾವು ಸೇಮ್. ನಮ್ಮ ಭಾವನೆಗಳು ಸೇಮ್. ನಮ್ಮನ್ನ ಬಂಧಿಸುವ ವಿಷಯಗಳು ಜಾಸ್ತಿ ಆದರೂ ನಿಕೃಷ್ಟದಲ್ಲಿ  ಬೇರ್ಪಡೆ ಯಾಗುವ ಗುಣ ಕೂಡ ಸೇಮ್ ಎನ್ನುವುದು ಹೆಚ್ಚು ಹೆಚ್ಚು ಮನ ದಟ್ಟಾಗಿರುವ, ಆಗುತ್ತಿರುವ ವಿಷಯ. ಮೆಡಿಟೇರಿಯನ್ ಡಯಟ್ ಇಂದಿಗೆ ಜಗ
ತ್ವಿಖ್ಯಾತ. ಅದಕ್ಕೆ ಕಾರಣ ಆಲಿವ್ ಆಯಿಲ್, ಹಸಿ ತರಕಾರಿ ಸಲಾಡ್, ವೈನ್ ಮತ್ತು ಸಮ ಪ್ರಮಾಣದ ಕಾಳು ಬೇಳೆ ಮತ್ತು ಪ್ರೊಟೀನ್ ಭರಿತ ಆಹಾರದ ಸೇವನೆ. ಮೆಡಿಟೇರಿಯನ್ ಡಯಟ್‌ನಲ್ಲಿ ನನಗೆ ಇಷ್ಟವಾಗುವುದು ಸಲಾಡ್, ಇತರ ಮಾಂಸಾಹಾರ ನನಗೆ ಸೇವಿಸಲು ಆಗಲೇ ಇಲ್ಲ. ನಮಗೆ ಹೇಗೆ ಅವರ
ಆಹಾರ ಇಷ್ಟವಾಗುವುದಿಲ್ಲ ಹಾಗೆ ಅವರಿಗೂ ನಮ್ಮ ಆಹಾರ ಇಷ್ಟವಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ, ನಾವು ತಿನ್ನುವ ಆಹಾರಕ್ಕೆ ಬಹಳಷ್ಟು ವರ್ಷ ಹೊಂದಿಕೊಂಡಿರುತ್ತೇವೆ ಎನ್ನುವುದು ಒಂದಾದರೆ, ಮನಸ್ಥಿತಿ ಇನ್ನೊಂದು ಕಾರಣ.

ನಮ್ಮ ಎಚ್ ನರಸಿಂಹಯ್ಯನವರು ಹಲವಾರು ವರ್ಷ ಮೂರು ಹೊತ್ತು ಉಪ್ಪಿಟ್ಟು ತಿಂದುಕೊಂಡು ಜೀವಿಸಿದ್ದರು ಎನ್ನುವುದು ಓದಿದ್ದು ನೆನಪಿನಲ್ಲಿದೆ. ಬಾರ್ಸಿಲೋನಾಗೆ ಬಂದ ಹೊಸತು ನನಗೆ ಅಡುಗೆ ಮಾಡಿ ಅಭ್ಯಾಸವಿಲ್ಲ. ಮೊದಲು ಮಾಡಲು ಕಲಿತದ್ದು ಉಪಿಟ್ಟು! ನಂತರ ಹಾಗೂ ಹೀಗೂ ಮಾಡಿ
ಹೊಟ್ಟೆಯೆಂಬ ಎಂದೂ ತುಂಬದ ಉಗ್ರಾಣವ ತುಂಬಿಸಲು ಹಲವಾರು ಖಾದ್ಯಗಳ ಮಾಡಲು ಕಲಿತೆ ಅದು ಬೇರೆಯ ಕಥೆ. ಆದರೂ ಮದುವೆಯಾಗು ವವರೆಗೆ ಉಪ್ಪಿಟ್ಟು ತಿನ್ನದ ದಿನವಿಲ್ಲ. ಮಾಡಲು ಬಹಳ ಸುಲಭ ಅಲ್ಲದೆ ಅದನ್ನ ಮಾಡಲು ಹೆಚ್ಚು ಪಾತ್ರೆಯ ಅವಶ್ಯಕತೆಯಿಲ್ಲ. ಮಾಡುವುದು ಮತ್ತು
ತಿನ್ನುವುದು ಒಂದಾದರೆ ಮಾಡಿದ ಪಾತ್ರೆ ತೊಳೆಯುವುದು ಇನ್ನೊಂದು ದೊಡ್ಡ ಯುದ್ಧ.

ಹೀಗಾಗಿ ಉಪಿಟ್ಟು ಮಾಡಲು ಶುರುವಾದದ್ದು ನಂತರದ ದಿನಗಳಲ್ಲಿ ಮುಂದಿನ ಆರೇಳು ವರ್ಷ ಅದಿಲ್ಲದ ದಿನವಿಲ್ಲ ಎನ್ನುವಂತಾಯಿತು. ಈ ವಿಷಯ ಏಕೆ ಬಂತೆಂದರೆ ಕೆಲವರಿಗೆ ಉಪಿಟ್ಟು ಎಂದರೆ ಅಲರ್ಜಿ! ಅದನ್ನ ತಿನ್ನುವುದಿರಲಿ ಅದರ ಹೆಸರು ಕೇಳಿದರೆ ಸಾಕು ಮುಖ ಕಿವುಚಿ ಎದ್ದಾಡ್ಡುತ್ತಾರೆ! ಇದು ಕೇವಲ ಉಪ್ಪಿಟ್ಟಿಗೆ ಸೀಮಿತ ಎನ್ನುವುದಾದರೆ ಅದು ತಪ್ಪು! ಏಕೆಂದರೆ ನಮಗೆ ಅತಿ ಇಷ್ಟವಾದ ತಿಂಡಿ ಅಥವಾ ಊಟ ಇನ್ನೊಬ್ಬರಿಗೆ ಎಳ್ಳಷ್ಟೂ
ರುಚಿಸದೆ ಹೋಗಬಹದು. ಒಮ್ಮೆ ಹೀಗೆ ಆಯ್ತು, ಬೆಂಗಳೂರಿನಿಂದ ಅಮ್ಮ ಮಾಡಿ ಕೊಟ್ಟ ಕೋಡುಬಳೆಯನ್ನ ನನ್ನ ಸಹೋದ್ಯೋಗಿ ಅಲೆಕ್ಸಾಗೆ ಕೊಟ್ಟೆ ಏನಿದು ಅಂದನಾತ, ನಾನು ಕೋಡುಬಳೆ ಎಷ್ಟು ಪ್ರಸಿದ್ಧ ತಿಂಡಿ ಎನ್ನುವುದನ್ನ ವಿವರಿಸಿದೆ ಕೊನೆಗೂ ನನ್ನ ಮಾತಿನಿಂದ ಪ್ರೇರಿತನಾಗಿ ಒಂದು ತುಂಡು ಕೋಡುಬಳೆ ತಿಂದವನು ಅರೆಕ್ಷಣದಲ್ಲಿ ತುಬುಕ್ ಎಂದು ಉಗಿದ.

ಆತನಿಗೆ ಕೋಡುಬಳೆ ಇಷ್ಟವಾಗಲಿಲ್ಲ. ಅಮ್ಮ ಮಾಡುವ ಕೋಡುಬಳೆ ನಮ್ಮ ಬಳಗದಲ್ಲಿ ಜಗತ್ವಿಖ್ಯಾತಿ ಆದರೂ ಅದು ಅಲೆಕ್ಸಿಗೆ ರುಚಿಸಲಿಲ್ಲ.
ಇದೆಲ್ಲದರ ಅರ್ಥ ಬಹಳ ಸರಳ ‘ನಾವು ಯಾವುದು ತುಂಬಾ ಇಷ್ಟ ಎನ್ನುತ್ತೇವೋ ಆ ಖಾದ್ಯ ಇತರಿರಿಗೆ ಹಾಗೆ ಇಷ್ಟವಾಗಬೇಕೆಂದಿಲ್ಲ’ ಅವರವರ ರುಚಿ ಅವರವರದು. ಇದನ್ನೇ ನಮ್ಮ ಹಿರಿಯರು ಲೋಕೋ ಭಿನ್ನ ರುಚಿಃ ಎಂದರು. ಹಾಗೆಯೇ ನಮ್ಮಲ್ಲಿ ‘ಊಟ ತನ್ನಿಚ್ಚೆ ನೋಟ ಪರರಿಚ್ಚೆ’ ಎಂದರು. ಇದರಲ್ಲಿನ ತಿರುಳು ಕೂಡ ಸೇಮ್. ಊಟ ಮಾತ್ರ ಯಾರ ಬಲವಂತಕ್ಕೂ ಮಾಡುವ ವಿಷಯವಲ್ಲ. ಅದೇನಿದ್ದರೂ ನಮ್ಮ ನಾಲಿಗೆ ನಮ್ಮ ಹೊಟ್ಟೆಗೆ ಸಂಬಂದಿಸಿದ್ದು . ಇದೆ ಮಾತನ್ನ ಸ್ಪ್ಯಾನಿಷ್ ಸಮಾಜದಲ್ಲಿ ಕೂಡ ನೀವು ಕೇಳಬಹದು.

ಇಲ್ಲಿನ ಸಮಾಜದಲ್ಲಿ Sobre los gustos no hay nada escrito (ಸೊಬ್ರೆ ಲಾಸ್ ಗುಸ್ತೋಸ್ ನೋ ಹಾಯ್ ನಾದ ಎಸ್ಕ್ರಿತೊ) ಎನ್ನುತ್ತಾರೆ. ಅಂದರೆ ಇಷ್ಟಗಳ ಬಗ್ಗೆ ಇಷ್ಟೇ ಸರಿ ಎಂದು ಏನೂ ಬರೆದಿಟ್ಟಿಲ್ಲ ಎನ್ನುವುದು ಯಥಾವತ್ತು ಅನುವಾದ. ಇದನ್ನ ಬಿಡಿಸಿ ನೋಡಿದರೆ ನಮ್ಮ ಗಾದೆಯ ಅರ್ಥವೇ
ಸಿಗುತ್ತದೆ. ಇಂತವರಿಗೆ ಇದು ಇಷ್ಟ ಅಥವಾ ಹೀಗಿದ್ದರೆ ಹೀಗಾಗುತ್ತೆ ಎಂದು ಇಷ್ಟಗಳ ಅಥವಾ ರುಚಿಯ ಬಗ್ಗೆ ಬರೆದಿಡಲು ಸಾಧ್ಯವೇ? ಇಲ್ಲವಷ್ಟೆ ಹಾಗಾಗಿ ಇಷ್ಟಗಳ ಬಗ್ಗೆ ಇಷ್ಟೇ ಸರಿ ಅಂತ ಯಾರೂ ಬರೆದಿಟ್ಟಿಲ್ಲ ಎನ್ನುತ್ತದೆ ಸ್ಪ್ಯಾನಿಷ್ ಗಾದೆ.

ಇದರ ಜೊತೆಗೆ ದೈಹಿಕವಾಗಿ ಕೂಡ ಇಲ್ಲಿನ ಜನ ಸಾಕಷ್ಟು ಆಕ್ಟಿವ್ ಆಗಿzರೆ. ಪಾರ್ಕುಗಳಲ್ಲಿ ಇಂದಿಗೂ ಮಕ್ಕಳು ಗೋಲಿ, ಬುಗರಿ, ಕುಂಟೆಬಿ ಆಡುವುದನ್ನ ಕಾಣಬಹುದು. ಹಾಗೆಯೇ ದೊಡ್ಡವರು ಕೂಡ ದೇಹಕ್ಕೆ ಒಂದಷ್ಟು ಕಸರತ್ತು ನೀಡುವ ಆಟವನ್ನ ಇಲ್ಲಿ ರೋಢಿಸಿಕೊಂಡಿzರೆ. ಇದಕ್ಕೆ ವಯೋಮಾನದ ಹಂಗಿಲ್ಲ.

ಫೆಟಾನ್ಕೆ (P‚tanque) ಎನ್ನುವುದು ಒಂದು ಆಟ. ಇದನ್ನ ೧೯೦೭ ರಲ್ಲಿ ಪ್ರಥಮ ಬಾರಿಗೆ  – ದೇಶದಲ್ಲಿ ಆಡಲಾಯಿತಂತೆ. ಇದನ್ನ ಒಬ್ಬರು, ಇಬ್ಬರು ಅಥವಾ ಮೂವರು ಆಡಬಹುದು. ಅಲ್ಲದೆ ಗುಂಪುಗಳನ್ನ ಮಾಡಿಕೊಂಡು ಕೂಡ ಆಡಬಹುದು. ಮೊದಲು ಒಂದಷ್ಟು ಕಬ್ಬಿಣದ ಬಾಲ್ ಗಳನ್ನ
ಎಸೆಯಲಾಗುತ್ತೆ. ಅವುಗಳಲ್ಲಿ ಒಂದನ್ನ ಟಾರ್ಗೆಟ್ ಮಾಡಿ ತೋರಿಸುತ್ತಾರೆ. ಯಾರು ಟಾರ್ಗೆಟ್‌ನ ಅತಿ ಸಮೀಪ ತಮ್ಮ ಕಬ್ಬಿಣದ ಬಾಲ್ ಎಸೆಯುತ್ತಾರೆ ಅವರು ಗೆದ್ದ ಹಾಗೆ. ಕಣ್ಣಿಗೆ ಕಂಡರೆ ಸರಿ ಇಲ್ಲದಿದ್ದರೆ ಅಳತೆ ಟೇಪ್ನಿಂದ ಅಳತೆ ಕೂಡ ಮಾಡುತ್ತಾg. ಈ ಆಟದಲ್ಲಿ ಟಾರ್ಗೆಟ್‌ನ ಟಾರ್ಗೆಟ್ ಮಾಡುವ ಬದಲು ಪ್ರತಿಸ್ಪರ್ಧಿಯ ಬಾಲ್ ಅನ್ನು ಹೊಡೆದು ಅದನ್ನ ದೂರ ಕೂಡ ಅಟ್ಟಬಹುದು. ಬಾಲ್ ಹೀಗೆ ಹಿಡಿಯಬೇಕು, ಎಸೆಯಬೇಕು ಎನ್ನುವ
ಸಾಕಷ್ಟು ನಿಯಮಗಳಿವೆ.

ಸ್ಪೇನ್ ದೇಶದ ಯಾವುದೇ ನಗರ/ಹಳ್ಳಿಯ ಯಾವುದೇ ಗಲ್ಲಿಯಲ್ಲಿ ಈ ಆಟ ಆಡುವುದನ್ನ ನೀವು ಕಾಣಬಹುದು. ದೈಹಿಕ ಕ್ಷಮತೆ ಬೇಡುವ ಆಟ,
ಮೆಡಿಟೇರಿಯನ್ ಊಟ ಇವರ ಸರಾಸರಿ ಬದುಕನ್ನ ೮೯ ಕ್ಕೆ ಏರಿಸಿದೆ. ಹೌದು, ಇಲ್ಲಿನ ಸಾಮಾನ್ಯ ಪ್ರಜೆ ಸರಾಗವಾಗಿ ೮೦ ಕ್ಕೂ ಮೀರಿ ಬದುಕುತ್ತಾನೆ/ತ್ತಾಳೆ.
ಇಲ್ಲಿನ ಜನ ತಮ್ಮ ದೇಹಕ್ಕೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ. ಚನ್ನಾಗಿ ಕಾಣಬೇಕು, ಒಳ್ಳೆಯ ಬಟ್ಟೆ ತೊಡಬೇಕು ಹೀಗೆ ಬಯಕೆಗಳ ಪಟ್ಟಿ ಸಾವಿರ. ಬಯಕೆಗಳು ಬದುಕನ್ನ ಹಸನಾಗಿಸುತ್ತವೆ, ಇಂದಿನ ದಿನದಲ್ಲಿ ತಮಗೇನು ಬೇಕು ಎನ್ನುವುದರ ಬಗ್ಗೆ ಜನ ಹೆಚ್ಚು ಹೆಚ್ಚಾಗಿ ಮಾತನಾಡಲು ಶುರು ಮಾಡಿದ್ದಾರೆ.

ಬಯಕೆ ಇರದಿದ್ದರೆ ಬದುಕು ಇಂದಿನಷ್ಟು ಸುಂದರವಾಗಂತೂ ಇರುತ್ತಿರಲಿಲ್ಲ. ಬಯಕೆ ಎನ್ನುವುದು ಒಂಥರಾ ಇಂಧನವಿದ್ದ ಹಾಗೆ, ಬದುಕೆಂಬ
ಬಂಡಿ ಸಾಗಲು ಬಯಕೆ ಬೇಕೇ ಬೇಕು. ಬಯಕೆಗಳು ಇಲ್ಲದಿದ್ದರೆ ಬದುಕಿಲ್ಲ, ಎಲ್ಲವೂ ನಿಂತು ಹೋಗಿಬಿಡುತ್ತದೆ. ನಾಳೆ ನಾನು ಬಯಸಿದ್ದು ಸಾಧಿಸುತ್ತೇನೆ ಅಥವಾ ನನ್ನ ಬಯಕೆ ಪೂರ್ಣಗೊಳ್ಳುತ್ತದೆ ಎನ್ನುವ ನಂಬಿಕೆ ಬದುಕಿಗೆ ಇನ್ನೊಂದು ಇಂಧನ. ಇದನ್ನ ಸ್ಪಾನಿಶರು El querer es todo
en nuestra vida. (ಎಲ್ ಕೆರೇರ್ ಈಸ್ ತೊದೊ ಎನ್ ನ್ಯೂಸ ವಿದಾ) ಎನ್ನುತ್ತಾರೆ.

ಬಯಕೆಗಳೆ ನಮ್ಮ ಜೀವನ ಎನ್ನುವ ಅರ್ಥ ಕೊಡುತ್ತದೆ . ಕೆರೇರ್ ಎಂದರೆ ವಾಂಟ್, ಬೇಕು ಅಥವಾ ಬಯಕೆ ಎನ್ನುವ ಅರ್ಥದ ಜೊತೆಗೆ ಪ್ರೀತಿ, ಲವ್ ಎನ್ನುವ ಅರ್ಥವನ್ನ ಸಹ ಕೊಡುತ್ತದೆ. ಹೌದು ಬಯಕೆಗಳು ಬದುಕಿಗೆ ಬೇಕು. ಬೇಕುಗಳಿಲ್ಲದ ಬದುಕನ್ನ ಊಹಿಸಿಕೊಳ್ಳುವುದು ಕಷ್ಟ. ಬೇಕು ಎನ್ನುವುದು ಹಿತವಾಗಿರಬೇಕು, ಮಿತವಾಗಿರಬೇಕು. ಒಟ್ಟಿನಲ್ಲಿ ಬೇಕು ಎನ್ನುವುದು ಬೇಕೇ ಬೇಕು!