Saturday, 23rd November 2024

ಅಂಬಾನಿಯನ್ನು ಮೀರಿಸಿದ ವಕ್ಫ್ ಮಂಡಳಿ

ವೀಕೆಂಡ್ ವಿತ್ ಮೋಹನ್

camohanbn@gmail.com

ವಕ್ಫ್ ಕಾಯಿದೆಯನ್ನು ನೆಹರು ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ೧೯೫೪ರಲ್ಲಿ ಸಂಸತ್ತು ಅಂಗೀಕರಿಸಿತ್ತು. ನಂತರ ಅದನ್ನು ರದ್ದುಗೊಳಿಸಿ, ೧೯೯೫ರಲ್ಲಿ ನೂತನ ವಕ್ ಕಾಯಿದೆಯನ್ನು ಮತ್ತೊಮ್ಮೆ ಕಾಂಗ್ರೆಸ್ ಅವಧಿಯಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ನೂತನ ಕಾಯಿದೆಯ ಮೂಲಕ ವಕ್ಫ್ ಮಂಡಳಿಗಳಿಗೆ ಮತ್ತಷ್ಟು ಅಧಿಕಾರವನ್ನು ನೀಡಲಾಯಿತು, ೨೦೧೩ರಲ್ಲಿ ಈ ಕಾಯಿದೆಯನ್ನು ಮತ್ತಷ್ಟು ತಿದ್ದುಪಡಿ ಮಾಡಿ, ವಕ್ಫ್ ಮಂಡಳಿಗಳಿಗೆ ಸಿಕ್ಕ ಸಿಕ್ಕ ಆಸ್ತಿಗಳ ಮೇಲೆ ಹಕ್ಕು ಸಾಽಸಲು ಅನಿಯಮಿತ ಅಧಿಕಾರವನ್ನು ನೀಡಲಾಯಿತು.

ವಿಪರ್ಯಾಸವೆಂದರೆ ವಕ್ಫ್ ಮಂಡಳಿ ಹಕ್ಕು ಸಾಧಿಸುವ ಆಸ್ತಿಗಳ ವಿಚಾರವನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದಿಲ್ಲ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮಾರ್ಚ್ ೨೦೧೪ ರಂದು, ಲೋಕಸಭೆ ಚುನಾವಣೆ ಪ್ರಾರಂಭವಾಗುವ ಕೆಲವೇ ದಿನಗಳ ಮೊದಲು, ದೆಹಲಿಯ ೧೨೩ ಪ್ರಮುಖ ಆಸ್ತಿಗಳನ್ನು ದೆಹಲಿ ವಕ್ ಮಂಡಳಿಗೆ ಉಡುಗೊರೆಯಾಗಿ ನೀಡಲಾಗಿತ್ತು. ಈ ಕರಾಳ ಕಾನೂನಿಂದ ದೇಶದಲ್ಲಿ ಇಲ್ಲಿಯವರೆಗೆ ಹಿಂದೂಗಳ ಸಾವಿರಾರು ಎಕರೆ ಭೂಮಿ ಪರರ ಪಾಲಾಗಿದೆ. ೨೦೨೨ರಲ್ಲಿ ತಮಿಳುನಾಡು ವಕ್ ಮಂಡಳಿಯು ೧೫೦೦ ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯ ಸೇರಿದಂತೆ, ತಮಿಳುನಾಡಿನ ಆರು ಗ್ರಾಮಗಳನ್ನು ವಕ್ಫ್ ಆಸ್ತಿ ಎಂದು ಘೋಷಿಸಿತ್ತು. ಗುಜರಾತ್ ವಕ್ಫ್ ಮಂಡಳಿ ‘ಸೂರತ್’ ನಗರಪಾಲಿಕೆಯ ಕಟ್ಟಡ ತನಗೆ ಸೇರಬೇಕೆಂದು ಹೇಳಿತ್ತು.

ಕಂದಾಯ ಇಲಾಖೆಯಲ್ಲಿನ ಕಡತಗಳಲ್ಲಿ ಯಾರ ಹೆಸರೂ ಇಲ್ಲದ ಕಾರಣ, ಹಿಂದೆ ಮೊಘಲರ ಕಾಲದಲ್ಲಿ ಆ ಜಾಗವು ಹಜ್ ಯಾತ್ರಿಗಳ ವಿಶ್ರಾಂತಿ ಸ್ಥಳವಾಗಿತ್ತಂತೆ. ಬ್ರಿಟಿಷರ ಆಡಳಿತದಲ್ಲಿ ಆ ಜಾಗವು ಬ್ರಿಟಿಷ್ ಸರಕಾರದ ವಶಕ್ಕೆ ಹೋಯಿತು. ಸ್ವಾತಂತ್ರ್ಯಾ ನಂತರ ಆ ಜಾಗವು ಭಾರತ ಸರಕಾರಕ್ಕೆ ಸೇರಿತ್ತು. ತದನಂತರ ಕಂದಾಯ ಇಲಾಖೆಯ ದಾಖಲೆಗಳು ತಿದ್ದುಪಡಿಯಾಗದ ಕಾರಣ, ಮೊಘಲರ ಕಾಲದಲ್ಲಿ ಆ ಜಾಗ ‘ವಕ್ಫ್’ ಆದ ಕಾರಣ, ಷರಿಯಾ ಕಾನೂನಿನಲ್ಲಿ ವಕ್ಫ್ ಮಂಡಳಿಗೆ ಸೇರಬೇಕೆಂದು ಹೇಳಲಾಯಿತು. ಗುಜರಾತ್ ವಕ್ಫ್ ಮಂಡಳಿ ಹೈಕೋರ್ಟ್‌ನಲ್ಲಿ, ದ್ವಾರಕದಲ್ಲಿರುವ ದ್ವೀಪಗಳು ತನಗೆ ಸೇರಬೇಕೆಂದು ಅರ್ಜಿ ಹಾಕಿತ್ತು. ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಕೃಷ್ಣ ನಗರದಲ್ಲಿನ ದ್ವೀಪಕ್ಕೂ, ವಕ್ಫ್ ಮಂಡಳಿಗೂ ಎಲ್ಲಿಯ ಸಂಬಂಧವೆಂದು ಛೀಮಾರಿ ಹಾಕಿತ್ತು.

ಸರಳವಾಗಿ ಹೇಳುವುದಾದರೆ, ವಕ್ಫ್ ಮಂಡಳಿಯು ಧರ್ಮದ ಹೆಸರಿನಲ್ಲಿ ಆಸ್ತಿಗಳನ್ನು ಪಡೆಯಲು ಅನಿಯಮಿತ ಅಧಿಕಾರವನ್ನು ಹೊಂದಿದೆ. ಇಸ್ಲಾಮಿನ ಪ್ರಕಾರ ಆಸ್ತಿಯೊಂದು ಒಮ್ಮೆ ವಕ್ಫ್ ನ ಪಾಲಾದರೆ ಅದು ಅಹುವಿನ ಆಸ್ತಿ ಎಂದರ್ಥ. ಷರಿಯಾ ಕಾನೂನಿನ ಪ್ರಕಾರ ಒಮ್ಮೆ ಅಲ್ಲಾಹುವಿಗೆ ನೀಡಿದ ಆಸ್ತಿಯನ್ನು ವಾಪಾಸ್ ಕೇಳುವಂತಿಲ್ಲ. ಆ ಜಾಗದಲ್ಲಿ ಕೇವಲ ಪ್ರಾರ್ಥನೆ ಅಥವಾ ಸೇವಾ ಚಟುವಟಿಕೆಗಳನ್ನಷ್ಟೇ ಮಾಡಬಹುದು. ವಕ್ಫ್ ನ ಇತಿಹಾಸ ಇಂದು ನೆನ್ನೆಯದಲ್ಲ, ದೆಹಲಿಯ ಸುಲ್ತಾನರ ಕಾಲದಿಂದ ಶುರುವಾದಂತಹ ಪದ್ಧತಿಯಿದು. ಅಂದಿನ ಸುಲ್ತಾನರು ಎರಡು ಹಳ್ಳಿಗಳನ್ನು ಜಾಮಿಯಾ ಮಸೀದಿಗೆಂದು ನೀಡಿರುತ್ತಾರೆ. ಅಲ್ಲಿಂದ ಮುಂದೆ ಆಳಿದ ದೆಹಲಿಯ ಸುಲ್ತಾನರು ತಮ್ಮ ಅವಧಿಯಲ್ಲಿ ಹಲವು ಜಾಗಗಳನ್ನು ವಕ್ಫ್ ಹೆಸರಿನಲ್ಲಿ ನೀಡಿದರು. ೧೯ನೇ
ಶತಮಾನದಲ್ಲಿ ಬ್ರಿಟಿಷರ ಅವಧಿಯಲ್ಲಿ ವಕ್ಫ್ ಆಸ್ತಿಯ ವಿವಾದವೊಂದು ಲಂಡನ್‌ನ ನ್ಯಾಯಾಲಯದಲ್ಲಿ ವಿಚಾರಣೆಗೆಂದು ಬಂದಾಗ ನಾಲ್ವರು ಬ್ರಿಟಿಷ್ ನ್ಯಾಯಾಧೀಶರು ವಕ್ಫ್ ಅನ್ನು ವಿನಾಶಕಾರಿ ಅಂಶವೆಂದು ಹೇಳಿದ್ದರು. ಆದರೆ ಬ್ರಿಟಿಷ್ ನ್ಯಾಯಾಧೀಶರ ಆದೇಶವನ್ನು ಮುಸಲ್ಮಾನರು ಒಪ್ಪಲಿಲ್ಲ.

ಅಖಂಡ ಭಾರತ ವಿಭಜನೆಯ ನಂತರ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಹಿಂದೂಗಳ ಆಸ್ತಿಗಳನ್ನು ಅಲ್ಲಿನ ಮುಸ್ಲಿಮರು ಮತ್ತು ಪಾಕಿಸ್ತಾನ ಸರಕಾರ ಆಕ್ರಮಿಸಿಕೊಂಡಿದೆ. ಆದರೆ ಭಾರತದಿಂದ ಪಾಕಿಸ್ತಾನಕ್ಕೆ ಹೋದ ಮುಸ್ಲಿಮರ ಭೂಮಿಯನ್ನು ಅಂದಿನ ಭಾರತ ಸರಕಾರ ವಕ್ ಬೋರ್ಡ್ಗಳಿಗೆ ನೀಡಿತು. ಅದರ ನಂತರ ೧೯೫೪ ರಲ್ಲಿ ವಕ್ಫ್ ಬೋರ್ಡ್ ಕಾಯಿದೆಯನ್ನು ಜಾರಿಗೆ ತರಲಾಯಿತು. ಆದರೆ ೧೯೯೫ರಲ್ಲಿ ವಕ್ಫ್ ಕಾಯಿದೆಯನ್ನು ಬದಲಾಯಿಸುವ ಮೂಲಕ ವಕ್ಫ್ ಮಂಡಳಿಗಳಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅನಿಯಮಿತ ಹಕ್ಕುಗಳನ್ನು ನೀಡಲಾಯಿತು. ಈ ತಿದ್ದುಪಡಿಯ ನಂತರ ದೇಶದಲ್ಲಿ ಅತ್ಯಂತ ವೇಗವಾಗಿ ವಕ್ಫ್ ಮಂಡಳಿಯ ಆಸ್ತಿ ಹೆಚ್ಚಾಗುತ್ತಾ ಹೋಯಿತು.

ವಕ್ಫ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಆಫ್ ಇಂಡಿಯಾದ ಅಂಕಿಅಂಶಗಳ ಪ್ರಕಾರ, ಪ್ರಸ್ತುತ ವಕ್ಫ್ ಬೋರ್ಡ್‌ಗಳು ಹೊಂದಿರುವ ಒಟ್ಟು ೮,೫೪,೫೦೯ ಆಸ್ತಿಗಳು ಎಂಟು ಲಕ್ಷ ಎಕರೆಗೂ ಹೆಚ್ಚಿನ ಭೂಮಿಯಲ್ಲಿ ಹರಡಿಕೊಂಡಿವೆ. ಭಾರತೀಯ ಸೇನೆ ಮತ್ತು ಭಾರತೀಯ ರೈಲ್ವೇಗಳ ನಂತರ ಅತಿ ಹೆಚ್ಚಿನ ಭೂಮಿ ವಕ್ಫ್ ಮಂಡಳಿಗಳ ಬಳಿ ಇದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.
೨೦೦೯ರಲ್ಲಿ ವಕ್ಫ್ ಮಂಡಳಿಯ ಆಸ್ತಿಗಳು ನಾಲ್ಕು ಲಕ್ಷ ಎಕರೆ ಪ್ರದೇಶದಲ್ಲಿ ದೇಶದಾದ್ಯಂತ ಹರಡಿಕೊಂಡಿತ್ತು, ಅದು ೨೦೨೨ರ ವೇಳೆಗೆ ದುಪ್ಪಟ್ಟಾಗಿದೆ. ವಕ್ಫ್ ಮಂಡಳಿಯು ದೇಶದ ಯಾವುದೇ ಮೂಲೆಯಲ್ಲಿ ಸ್ಮಶಾನದ ಗಡಿ ಗೋಡೆಯನ್ನು ನಿರ್ಮಾಣ ಮಾಡಿದರೂ, ಅದರ ಸುತ್ತಲಿನ ಭೂಮಿ ಯನ್ನು ತನ್ನಆಸ್ತಿ ಎಂದು ಪರಿಗಣಿಸುತ್ತದೆ. ಅಂತೆಯೇ ಅಕ್ರಮ ಮಂದಿರ ಮತ್ತು ಮಸೀದಿಗಳನ್ನು ಕ್ರಮೇಣ ವಕ್ಫ್  ಮಂಡಳಿಯು ತಮ್ಮ ಆಸ್ತಿ ಎಂದು ಘೋಷಿಸಿಕೊಂಡಿರುವ ಹಲವು ಉದಾಹರಣೆಗಳಿವೆ.

೧೯೯೫ರ ವಕ್ಫ್ ಕಾಯಿದೆ ಸೆಕ್ಷನ್ ೩ ಪ್ರಕಾರ, ವಕ್ಫ್ ಮಂಡಳಿ ಭೂಮಿಯೊಂದು ಮುಸಲ್ಮಾನರಿಗೆ ಸೇರಿದ್ದು ಎಂದು ‘ಯೋಚಿಸದರೆ’ಸಾಕು. ಅದು ವಕ್ಫ್ ನ ಆಸ್ತಿ ಎಂದು ಪರಿಗಣಿಸಬಹುದು. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ವಕ್ಫ್ ಮಂಡಳಿ ಕೇವಲ ‘ಯೋಚಿಸಿದರೆ’ ಸಾಕು, ಅದರ ಮಾಲೀಕತ್ವವನ್ನು ಸಾಬೀತುಪಡಿಸಲು ಪುರಾವೆ ನೀಡಬೇಕಾದ ಅಗತ್ಯವಿಲ್ಲ. ನಿಮ್ಮ ಆಸ್ತಿ ನಿಮ್ಮದಲ್ಲ, ಮಂಡಳಿಯದ್ದು ಎಂದು ವಕ್ಫ್ ತೀರ್ಮಾನಿಸಿದರೆ, ನೀವು ನ್ಯಾಯಾಲಯದ ಮೊರೆ ಹೋಗುವಂತಿಲ್ಲ. ಕೇವಲ ವಕ್ಫ್ ಕಾಯಿದೆಯಡಿಯಲ್ಲಿರುವ ಟ್ರಿಬ್ಯೂನಲ್ ನ್ಯಾಯಾಲಯವನ್ನು ಮಾತ್ರ ಸಂಪರ್ಕಿಸಬಹುದು.

ವಕ್ಫ್ ಕಾಯಿದೆಯ ಸೆಕ್ಷನ್ ೮೫ ರ ಪ್ರಕಾರ ಇದು ನಿಮ್ಮ ಸ್ವಂತ ಭೂಮಿ ಎಂದು ವಕ್ ಬೋರ್ಡ್ ಟ್ರಿಬ್ಯೂನಲ್ ಅನ್ನು ನೀವು ತೃಪ್ತಿಪಡಿಸಲು ಸಾಧ್ಯವಾಗದಿದ್ದರೆ, ನಂತರ ನೀವು ಭೂಮಿಯನ್ನು ಖಾಲಿ ಮಾಡುವಂತೆ ಆದೇಶಿಸಲಾಗುವುದು. ನ್ಯಾಯಮಂಡಳಿಯ ತೀರ್ಮಾನ ಅಂತಿಮವಾಗಿರುತ್ತದೆ. ವಕ್ ನ್ಯಾಯಮಂಡಳಿಯ ತೀರ್ಪನ್ನು ನ್ಯಾಯಾಲಯಗಳು ಬದಲಾಯಿಸಲು ಸಾಧ್ಯವಿಲ್ಲ. ವಕ್ಫ್ ಕಾಯಿದೆಯ ಸೆಕ್ಷನ್ ೪೦ ಹೇಳುವಂತೆ ವಕ್ಫ್ ಮಂಡಳಿಯು ವ್ಯಕ್ತಿಯೊಬ್ಬನ ಭೂಮಿಯ ಮೇಲಿನ ಹಕ್ಕನ್ನು ಸಲ್ಲಿಸಿದಾಗ, ಅದನ್ನು ಸಾಬೀತುಪಡಿಸುವುದು ವಕ್ಫ್ ಮಂಡಳಿಯ ಜವಾಬ್ದಾರಿಯಲ್ಲ, ಆದರೆ ಭೂಮಿಯ ನಿಜವಾದ ಮಾಲೀಕ ಅದನ್ನು ಸಾಬೀತುಪಡಿಸಬೇಕು. ಭಾರತದಂತಹ ಜಾತ್ಯತೀತ ರಾಷ್ಟ್ರದಲ್ಲಿ ವಕ್ಫ್ ಕಾಯಿದೆಯಂತಹ ಧಾರ್ಮಿಕ ಕಾನೂನನ್ನು ಯಾಕೆ ಜಾರಿಗೆ ತರಲಾಯಿತು? ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಸಿಖ್ಖರಿಗೆ ಇಂತಹ ಕಾಯಿದೆ ಯಾಕಿಲ್ಲ? ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಇದ್ದ ಧಾರ್ಮಿಕ ಸ್ಥಳಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವುದಾಗಿ ೧೯೯೧ರಲ್ಲಿ ಪೂಜಾ ಸ್ಥಳಗಳ ಕಾಯಿದೆಯನ್ನು ರೂಪಿಸಲಾಯಿತು.

ಆದರೆ ಅದೇ ಸಮಯದಲ್ಲಿ,೧೯೯೫ ರಲ್ಲಿ ವಕ್ಫ್ ಕಾಯಿದೆ ಜಾರಿಗೆ ಬಂದಿತು, ಇದು ದೇಶಾದ್ಯಂತ ವಕ್ಫ್ ಮಂಡಳಿಗೆ ಯಾವುದೇ ಆಸ್ತಿಯ ಮೇಲೆ ತನ್ನ ಹಕ್ಕುಗಳನ್ನು ಪಡೆಯಲು ಹಕ್ಕನ್ನು ನೀಡುತ್ತದೆ. ಇದರ ವಿರುದ್ಧ ನೊಂದವರು ದೇಶದ ಯಾವುದೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವಂತಿಲ್ಲ. ಮುಸ್ಲಿಂ ರಾಷ್ಟ್ರಗಳಾದ ಟರ್ಕಿ, ಲಿಬಿಯಾ, ಈಜಿಪ್ಟ್, ಸುಡಾನ್, ಲೆಬನಾನ್, ಸಿರಿಯಾ, ಜೋರ್ಡಾನ್ ಮತ್ತು ಇರಾಕ್‌ನಲ್ಲಿ ವಕ್ ಬೋರ್ಡ್ ಅಥವಾ ವಕ್ಫ್ ಕಾನೂನು ಜಾರಿಯಲ್ಲಿಲ್ಲ. ಷರಿಯಾ ಕಾನೂನಿನನ್ವಯ ಜಾರಿಗೆ ತಂದಿರುವ ಈ ಕಾಯಿದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಬೇಕಿದೆ ? ಅಲ್ಪಸಂಖ್ಯಾತರ ಕಲ್ಯಾಣದ ಹೆಸರಿನಲ್ಲಿ ಬಹುಸಂಖ್ಯಾತ ದೇವಸ್ಥಾನಗಳ ಬಳಿ ಇಲ್ಲದಷ್ಟು ಆಸ್ತಿ ಇಂದು ವಕ್ಫ್ ಮಂಡಳಿ ಯ ಬಳಿ ಇದೆ. ಅಲ್ಪಸಂಖ್ಯಾತರು ಭಾರತದಲ್ಲಿ ಸುರಕ್ಷಿತವಾಗಿಲ್ಲವೆಂದು ಪುಂಗಿ ಊದುವ ಜಾತ್ಯತೀತವಾದಿಗಳು ನಿದ್ದೆ ಮಾಡುತ್ತಿದ್ದಾರೆ. ಎಡಚರರಿಗೆ ಜೈನರು, ಪಾರ್ಸಿಗಳು, ಸಿಖ್ಖರು ಅಲ್ಪಸಂಖ್ಯಾತರಾಗಿ ಕಾಣುವುದಿಲ್ಲ. ಕೇವಲ ಮುಸಲ್ಮಾನರು ಮಾತ್ರ ಅಲ್ಪಸಂಖ್ಯಾತರಾಗಿ ಕಾಣುತ್ತಾರೆ.

ಜೈನರಿಗೆ ಇಲ್ಲದ ವಿಶೇಷ ಸವಲತ್ತುಗಳು ಮುಸಲ್ಮಾನರಿಗೆ ಮಾತ್ರ ಯಾಕೆ? ಪಾರ್ಸಿಗಳಿಗೆ, ಸಿಖ್ಖರಿಗೆ ಇಲ್ಲದ ವಕ್ಫ್ ಮಾದರಿಯ ಮಂಡಳಿ ಕೇವಲ ಮುಸಲ್ಮಾನರಿಗೆ ಯಾಕೆ ? ದೇಶದಲ್ಲಿ ಅತಿ
ಹೆಚ್ಚು ಮುಸಲ್ಮಾನರಿರುವ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರಕ್ಕೆ ವಕ್ಫ್ ಕಾಯಿದೆ ಅನ್ವಯವಾಗುವುದಿಲ್ಲ. ಕಾಶ್ಮೀರದಲ್ಲಿ ಸರಕಾರಿ ಜಾಗಗಳನ್ನು ಅಕ್ರಮ ಸಕ್ರಮ ಮಾಡಲು ‘ರೋಷಿನಿ ಕಾಯಿದೆ’ಯನ್ನು ಜಾರಿಗೆ ತಂದು ಮತ್ತಷ್ಟು ಅಕ್ರಮಗಳನ್ನು ಮಾಡಲಾಗಿತ್ತು. ಸಂವಿಧಾನದ ೩೭೦ ನೇ ವಿಧಿಯ ಮೂಲಕ ತಮ್ಮದೇ ವಿಶೇಷ ಸಂವಿಧಾನ ದಡಿಯಲ್ಲಿ ಅಧಿಕಾರ ನಡೆಸುಕೊಂಡು ಬಂದಂತಹ ಅಬ್ದು ಹಾಗೂ ಮುಫ್ತಿಯ ಸಂತಾನ ಸಾವಿರಾರು ಹೆಕ್ಟೇರು ಸರಕಾರಿ ಭೂ ಭಾಗವನ್ನು ಕೊಳ್ಳೆಹೊಡೆದು ಅಲ್ಲಿನ ಬಡವರನ್ನು ಹೊರಜಗತ್ತಿಗೆ ಬರಲು ಬಿಡದೇ ಭಾರತದ ವಿರುದ್ಧ ಸದಾ ಕತ್ತಿ ಮಸೆ ಯುವಂತೆ ಮಾಡಿದ್ದರು. ಭಾರತದಲ್ಲಿ ಅಂದಾಜು ೨೦ ಕೋಟಿ ಜನಸಂಖ್ಯೆ ಇರುವ ಮುಸಲ್ಮಾನರನ್ನು ಅಲ್ಪಸಂಖ್ಯಾತರೆಂದು ಕರೆಯಲು ಸಾಧ್ಯವಿಲ್ಲ. ಅವರನ್ನು ಕೇವಲ ಮತ ಬ್ಯಾಂಕಿಗಾಗಿ ಕಾಂಗ್ರೆಸ್ ಮತ್ತು ಇತರ ಪ್ರಾದೇಶಿಕ ಪಕ್ಷಗಳು ಬಳಸಿಕೊಳ್ಳುತ್ತಾ ಬಂದಿವೆ. ಅವರನ್ನು ಓಲೈಸುವ ಸಲುವಾಗಿ ವಕ್ಫ್ ಕಾಯಿದೆಯನ್ನು ಜಾರಿಗೆ ತಂದು ಕಾಲ ಕಾಲಕ್ಕೆ ಬದಲಾಯಿಸುತ್ತಾ ಬಂದಿದ್ದಾರೆ. ಮುಸಲ್ಮಾನರನ್ನು ಅಲ್ಪಸಂಖ್ಯಾತರೆಂದು ಕರೆದು ಅವರಿಗೆ ಪ್ರತ್ಯೇಕವಾಗಿ ಸರಕಾರದಿಂದ ಯೋಜನೆಗಳನ್ನು ಜಾರಿಗೆ ತರುವುದರೊಂದಿಗೆ ವಕ್‌ನಂತಹ ಕಾಯಿದೆಯ ಮೂಲಕ ಲಕ್ಷಾಂತರ ಕೋಟಿ ಆಸ್ತಿಯನ್ನು ಮಂಡಳಿಗೆ ಸೇರುವಂತೆ ಮಾಡಲಾಗಿದೆ.

ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿರುವ ಅಂಬಾನಿ ಮತ್ತು ಅದಾನಿಯನ್ನೂ ಮೀರಿಸಿದ ಆಸ್ತಿ, ವಕ್ಫ್ ಮಂಡಳಿಯ ಬಳಿಯಿದೆ. ಅಂದಾಜು ಎಂಟು ಲಕ್ಷ ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು
ಹೊಂದಿರುವ ಇಸ್ಲಾಂ ಧರ್ಮವನ್ನು ಭಾರತದ ಶ್ರೀಮಂತ ಧರ್ಮವೆನ್ನಬೇಕು. ಈ ಮಟ್ಟದ ಅಸ್ತಿ ಇದ್ದರೂ ಸಹ ಮುಸಲ್ಮಾನರನ್ನು ಯಾಕೆ ಹಿಂದುಳಿದವರೆಂದು ಕರೆಯಬೇಕು? ವಕ್ಫ್ ಮಂಡಳಿಯ ಬಳಿ ಇರುವ ಆಸ್ತಿಯನ್ನು ಬಡ ಮುಸಲ್ಮಾನರಿಗೆ ಹಂಚಲು ವಕ್ಫ್ ಮಂಡಳಿ ಯಾಕೆ ಯೋಚಿಸುತ್ತಿಲ್ಲ? ಅಂಬಾನಿ ಮತ್ತು ಅದಾನಿಯ ಹೆಸರೇಳಿದರೆ ಮಾತ್ರ ನಿದ್ದೆ ಬರುವ ಕಾಂಗ್ರೆಸ್ಸಿನ ರಾಹುಲ್ ಗಾಂಧಿ, ದೇಶದ ಶ್ರೀಮಂತ ಮಂಡಳಿಯ ಬಗ್ಗೆ ಮಾತ್ರ ಮಾತನಾಡುವುದಿಲ್ಲ.