Thursday, 12th December 2024

ರಾಮಾಂಜನೇಯ ಯುದ್ದ ಶುರುವಾಗುತ್ತಾ ?

ಮೂರ್ತಿಪೂಜೆ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ ಸಿದ್ದರಾಮಯ್ಯ ಅವರಿಗೆ ಕೋಲಾರದ ನಾಯಕರು ಇಕ್ಕಳ ಹಾಕಿದ್ದಾರೆ. ಮುಂದಿನ ಮುಖ್ಯಮಂತ್ರಿ ಕ್ಯಾಂಡಿಡೇಟು ಅನ್ನಿಸಿಕೊಂಡಿರುವ ಸಿದ್ದರಾಮಯ್ಯ 2023ರ ಚುನಾವಣೆಯಲ್ಲಿ ಸೇಫ್ ಕ್ಷೇತ್ರವನ್ನು ಹುಡುಕುತ್ತಿದ್ದಾರೆ.

ಏಕೆಂದರೆ ಪಕ್ಷಭೇದ ಮರೆತು ಅವರ ಸುತ್ತ ಶತ್ರುಗಳ ಪಡೆ ಆವರಿಸಿ ಕೊಂಡಿದೆ. ಹೀಗಾಗಿ ತಾವು ಪ್ರತಿನಿಧಿಸುತ್ತಿರುವ ಬಾದಾಮಿಯಿಂದ ಹಿಡಿದು ಆಹ್ವಾನ ಬಂದಿರುವ ಬಹುತೇಕ ಕ್ಷೇತ್ರಗಳು ಅವರಿಗೆ ಸೇಫ್ ಅನ್ನಿಸುತ್ತಿಲ್ಲ. ಇದೇ ಕಾರಣಕ್ಕಾಗಿ ಕೆಲ ತಿಂಗಳ ಹಿಂದೆ ಅವರು, ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದೇ ಬೆಟರ್ ಎಂಬ ತೀರ್ಮಾನಕ್ಕೆ ಬಂದಿದ್ದರು. ಸದ್ಯ ಈ ಕ್ಷೇತ್ರವನ್ನು ಅವರ ಪುತ್ರ ಡಾ. ಯತೀಂದ್ರ ಪ್ರತಿನಿಧಿಸುತ್ತಿದ್ದಾರಾದರೂ, ಭವಿಷ್ಯದ ದೃಷ್ಟಿಯಿಂದ ಇಲ್ಲಿ ತಾವೇ ಕಣಕ್ಕಿಳಿಯ ಬೇಕೆನ್ನುವುದು ಸಿದ್ದರಾಮಯ್ಯ ಅವರ ಆಲೋಚನೆ.

ಮುಂದೆ ಪಕ್ಷ ಅಧಿಕಾರಕ್ಕೆ ಬಂದು ತಾವು ಮುಖ್ಯಮಂತ್ರಿಯಾದರೆ ಯತೀಂದ್ರ ಅವರನ್ನು ಎಮ್ಮೆಲ್ಸಿ ಮಾಡುವುದು ಸುಲಭ; ಆದರೆ ಇದು ಸಾಧ್ಯವಾಗಬೇಕು ಎಂದರೆ ಮೊದಲು ಚುನಾವಣೆಯಲ್ಲಿ ತಾವು ಗೆಲುವು ಸಾಧಿಸಬೇಕು.

ಇದಾಗದಿದ್ದರೆ ಮುಂದಿನ ಎಲ್ಲ ದಾರಿಗಳೂ ಬಂದ್ ಆಗುತ್ತವೆ ಎಂಬುದು ಸಿದ್ದರಾಮಯ್ಯ ಅವರಿಗೂ ಗೊತ್ತು, ಅವರ ಪುತ್ರ ಯತೀಂದ್ರರಿಗೂ ಗೊತ್ತು. ಹೀಗೆ ತಂದೆ-ಮಗ ಇಬ್ಬರೂ ಸೇರಿ ವರುಣಾ ಕ್ಷೇತ್ರದಿಂದ ಯಾರು ಸ್ಪರ್ಧಿಸಬೇಕು ಎಂಬ ತೀರ್ಮಾನಕ್ಕೆ ಬಂದ ಕೆಲವೇ ದಿನಗಳಲ್ಲಿ ಕೋಲಾರ ಭಾಗದ ನಾಯಕರು ಸಿದ್ದರಾಮಯ್ಯ ಅವರಿಗೆ ಇಕ್ಕಳ ಹಾಕಿದ್ದಾರೆ.
ಹೀಗೆ ಸಿದ್ದರಾಮಯ್ಯ ಅವರಿಗೆ ಇಕ್ಕಳ ಹಾಕಿದ ಕೋಲಾರದ ನಿಯೋಗಕ್ಕೆ ಮಾಜಿ ವಿಧಾನಸಭಾ ಅಧ್ಯಕ್ಷ ರಮೇಶ್ ಕುಮಾರ್ ಅವರೇ ನಾಯಕ. 2023ರಲ್ಲಿ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳ 8 ಕ್ಷೇತ್ರಗಳ ಮೇಲೆ ಅದರ ಪ್ರಭಾವವಾಗಿ, ಪಕ್ಷದ ಅಭ್ಯರ್ಥಿಗಳ ಗೆಲುವು ಸುಗಮವಾಗುತ್ತದೆ ಎಂಬುದು ರಮೇಶ್ ಕುಮಾರ್ ಮತ್ತಿತರ ನಾಯಕರ ಲೆಕ್ಕಾಚಾರ.

ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು ಸೇರಿದಂತೆ 8 ಕ್ಷೇತ್ರಗಳಲ್ಲಿ ಕುರುಬರ ಸಂಖ್ಯೆ ಸಾಲಿಡ್ಡಾಗಿದೆ. ಕೋಲಾರ ವಿಧಾನಸಭಾ ಕ್ಷೇತ್ರವನ್ನೇ ತೆಗೆದುಕೊಂಡರೆ, ಅಲ್ಲಿರುವ 2 ಲಕ್ಷ ಪ್ಲಸ್ ಮತಗಳ ಪೈಕಿ 80 ಸಾವಿರದಷ್ಟು ಪರಿಶಿಷ್ಟ ಜಾತಿ, ಪಂಗಡದ ವೋಟುಗಳಿವೆ. ಇದೇ ರೀತಿ ಮುಸ್ಲಿಮರು, ಕುರುಬರ 70 ಸಾವಿರ ಮತಗಳು ಸೇರಿ ಒಟ್ಟು ಒಂದೂವರೆ ಲಕ್ಷ ಮತಗಳಿವೆ. ಈ ಪೈಕಿ ಗಣನೀಯ ಮತಗಳನ್ನು ಸಿದ್ದರಾಮಯ್ಯ ಪಡೆದರೆ ನಿರಾಯಾಸವಾಗಿ ಗೆಲ್ಲುತ್ತಾರೆ. ಹೀಗೆ ಅವರು ಗೆಲ್ಲುವುದು ಮಾತ್ರವಲ್ಲ, ಉಳಿದ 7 ಕ್ಷೇತ್ರಗಳಲ್ಲೂ ಮತ ಕ್ರೋಡೀಕರಣಗೊಂಡು ಕಾಂಗ್ರೆಸ್ ಗೆಲುವು ಸುಲಭವಾಗುತ್ತದೆ ಎಂಬುದು ರಮೇಶ್ ಕುಮಾರ್, ಕೃಷ್ಣ ಭೈರೇಗೌಡ, ನಜೀರ್ ಅಹ್ಮದ್ ಅವರಂಥ ನಾಯಕರ ಲೆಕ್ಕಾಚಾರ.

ಹೀಗೆ ಈ ನಾಯಕರೆಲ್ಲ ಸೇರಿ ಕೋಲಾರ ರಣಾಂಗಣದ ವಿವರ ನೀಡಿದ ಮೇಲೆ ಸಿದ್ದರಾಮಯ್ಯ ಅವರಿಗೂ ವಿಶ್ವಾಸ ಮೂಡಿದೆ. ಹಾಗಂತಲೇ ಮುಂದಿನ ವಾರ ಅವರು ಕೋಲಾರ ಜಿಗೆ ಭೇಟಿನೀಡಿ ಸಣ್ಣಪರೀಕ್ಷೆ ಮಾಡಲು ನಿರ್ಧರಿಸಿದ್ದಾರೆ. ಎಲ್ಲರೂ
ಹೇಳಿದರೆಂದು ವಿಶ್ವಾಸ ಬರುವುದು ಬೇರೆ, ತಾವೇ ನಿಂತು ಪರೀಕ್ಷಿಸಿದರೆ ಮೂಡುವ ವಿಶ್ವಾಸವೇ ಬೇರೆ. ಏನೇ ಆದರೂ
ಅವರು ಕೋಲಾರದ ಕಡೆ ನೋಡಲು ಮನಸ್ಸು ಮಾಡಿರುವುದು ಆ ಭಾಗದ ಕಾಂಗ್ರೆಸ್ ನಾಯಕರಿಗೆ ಸಮಾಧಾನ ತಂದಿರುವುದಂತೂ ನಿಜ.

ಅಂದ ಹಾಗೆ, ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸಬೇಕು ಅಂತ ಈ ನಾಯಕರು ಬಯಸುತ್ತಿರುವುದಕ್ಕೆ ಕೆಲ ಕಾರಣ ಗಳಿವೆ. ಈ ಪೈಕಿ ಮುಖ್ಯವಾದುದೆಂದರೆ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಸುಧಾಕರ್ ಅವರು ಮೇಲೆದ್ದು ನಿಂತಿರುವ ರೀತಿ. ಅಗ್ನಿಯ ಕೆನ್ನಾಲಿಗೆಯಂತೆ ಪಸರಿಸುತ್ತಿರುವ ಡಾ. ಸುಧಾಕರ್ ಅವರು ನಾಯಕರಾಗಿ ಬೆಳೆದು ನಿಂತಿದ್ದಾರೆ. ಇದರಿಂದ ತುಂಬ ಕಿರಿಕಿರಿ ಆನುಭವಿಸುತ್ತಿರುವ ನಾಯಕರೆಂದರೆ ರಮೇಶ್ ಕುಮಾರ್. ಅವರಿಗೆ ಜೆಡಿಎಸ್ ಅಭ್ಯರ್ಥಿ ಪ್ರಬಲ ಎದುರಾಳಿಯಾದರೂ ಸುಧಾಕರ್ ಸಜ್ಜುಗೊಳಿಸುತ್ತಿರುವ ಅಭ್ಯರ್ಥಿಯು ಶ್ರೀನಿವಾಸಪುರದಲ್ಲಿ ಆಟವನ್ನು ಉಲ್ಟಾ ಮಾಡುವ ಸಾಧ್ಯತೆಗಳಿವೆ.

ಸಾಲದೆಂಬಂತೆ ದಲಿತ ಮತ ಬ್ಯಾಂಕಿನ ಮೇಲೆ ಈಗಲೂ ಪ್ರಭಾವ ಹೊಂದಿರುವ ಕೇಂದ್ರದ ಮಾಜಿ ಸಚಿವ ಮುನಿಯಪ್ಪ ಅವರು ರಮೇಶ್ ಕುಮಾರ್ ವಿರುದ್ಧ ತಿರುಗಿಬಿದ್ದಿದ್ದಾರೆ. ಇಂಥ ಹಲವು ಕಾರಣಗಳು ರಮೇಶ್ ಕುಮಾರ್ ಅವರ ಶಕ್ತಿಯನ್ನು
ತಗ್ಗಿಸಿವೆ. ಇಂಥ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ಬಂದು ಕೋಲಾರದಲ್ಲಿ ಸ್ಪರ್ಧಿಸಿದರೆ ಆಟ ಬದಲಾಗುತ್ತದೆ. ಎಷ್ಟೇ ಆದರೂ ಅವರು ಭವಿಷ್ಯದ ಸಿಎಂ ಕ್ಯಾಂಡಿಡೇಟ್. ಹೀಗಾಗಿ ಬಿಜೆಪಿ-ವಿರೋಧಿ ಮತಗಳು ಕನ್‌ಸಾಲಿಡೇಟ್ ಆಗುತ್ತವೆ. ಏಕಕಾಲಕ್ಕೆ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಡಾ.ಸುಧಾಕರ್ ಅವರಿಗೂ ಉತ್ತರ ನೀಡಿದಂತಾಗುತ್ತದೆ. ಬಿಜೆಪಿ-ಜೆಡಿಎಸ್‌ಗೂ ಪಾಠ ಕಲಿಸಿದಂತಾಗುತ್ತದೆ ಎಂಬುದು ಅವರ ಲೆಕ್ಕಾಚಾರ.

ಈ ಲೆಕ್ಕಾಚಾರದ ಪ್ರಕಾರ ಕೋಲಾರದ ರಣಾಂಗಣಕ್ಕಿಳಿಯಲು ಸಿದ್ದರಾಮಯ್ಯ ಒಪ್ಪಿದರೆ ಕರ್ನಾಟಕದ ರಾಜಕಾರಣದಲ್ಲಿ ‘ರಾಮಾಂಜನೇಯ ಯುದ್ಧ’ ನಡೆಯುತ್ತದೆ ಎಂದೇ ಅರ್ಥ. ಏಕೆಂದರೆ ಇವತ್ತು ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರಭಾವಿಯಾಗಿ ಬೆಳೆದು ನಿಂತಿರುವ ಡಾ.ಸುಧಾಕರ್ ಅವರು ಸಿದ್ದರಾಮಯ್ಯನವರ ಪರಮಾಪ್ತರು. ಒಂದು ಕಾಲದಲ್ಲಿ ಡಾ. ಜಿ. ಪರಮೇಶ್ವರ್ ಕ್ಯಾಂಪಿನಲ್ಲಿದ್ದ ಸುಧಾಕರ್ 2013ರ ನಂತರ ಸಿದ್ದರಾಮಯ್ಯ ಕ್ಯಾಂಪಿನ ಫ್ರಂಟ್‌ಲೈನಿಗೆ ಬಂದರು. ಕ್ರಮೇಣ ಈ ಕ್ಯಾಂಪಿನಲ್ಲಿ ಸುಧಾಕರ್ ಎಷ್ಟು ಪ್ರಭಾವಿಯಾದರು ಎಂದರೆ ಇಂಧನ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಸಚಿವರಿ ಗಿಂತ ಹೆಚ್ಚಾಗಿ ಸುಧಾಕರ್ ಮಾತು ನಡೆಯುತ್ತಿತ್ತು.

ಇವತ್ತು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವತ್ತು ಇಂಧನ ಸಚಿವರಾಗಿದ್ದರೂ, ತಮ್ಮ ಖಾತೆಯ ವ್ಯವಹಾರ ಗಳಲ್ಲಿ ಸುಧಾಕರ್ ಮಾತು ನಡೆಯುತ್ತಿದ್ದ ರೀತಿಯನ್ನು ಕಂಡು ವಿಸ್ಮಿತರಾಗಿದ್ದರಂತೆ. ಮುಂದೆ 2018ರಲ್ಲಿ ಜೆಡಿಎಸ್ -ಕಾಂಗ್ರೆಸ್ ಸರಕಾರ ರಚನೆಯಾದ ನಂತರ ಕಲ್ಲವಿಲಗೊಂಡ ಸಿದ್ದರಾಮಯ್ಯ ಅದನ್ನು ಉರುಳಿಸಲು ಸ್ಕೆಚ್ ಹಾಕಿದರು. ಅದಕ್ಕನುಸಾರವಾಗಿ ಡಾ. ಸುಧಾಕರ್ ಸೇರಿದಂತೆ ತಮ್ಮ ಆಪ್ತ ಶಾಸಕರನ್ನು ಯಡಿಯೂರಪ್ಪ ಅವರ ಜತೆ ಕಳಿಸಿದರು ಅಂತ ಅವರ ವಿರೋಧಿಗಳು ಈಗಲೂ ಆರೋಪಿಸುತ್ತಾರೆ. ಈ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸಮರ್ಥವಾಗಿ ಎದುರಿಸುವ ಒಬ್ಬ ನಾಯಕರು ಅಂತಿದ್ದರೆ ಅದು ಸಿದ್ದರಾಮಯ್ಯ ಮಾತ್ರ ಅಂತ ಸುಧಾಕರ್ ಹೇಳಿದ ಸಂದರ್ಭವನ್ನೂ ಅವರು ನೆನಪಿಸುತ್ತಾರೆ.

ಇವತ್ತು ಸಿದ್ದರಾಮಯ್ಯ ಅವರು ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ಎಷ್ಟೇ ವಾಗ್ದಾಳಿ ನಡೆಸಲಿ, ಆದರೆ ಸುಧಾಕರ್
ವಿಷಯದಲ್ಲಿ ಅವರು ಸಾಧ್ಯ ಎಂಬುದು ಮಾತ್ರ ನಿಜ. ಇದೆಲ್ಲ ಏನೇ ಇರಲಿ, 2023ರಲ್ಲಿ ಸಿದ್ದರಾಮಯ್ಯ ಕೋಲಾರದಿಂದ ಸ್ಪಽಸಿದರೆ ಅನುಮಾನವೇ ಬೇಡ, ‘ರಾಮಾಂಜನೇಯ ಯುದ್ಧ’ ಶುರುವಾಗುತ್ತದೆ.

ಅರ್ಥಾತ್, ತಮ್ಮ ಅಂತರಂಗದ ಆಪ್ತ ಸುಧಾಕರ್ ವಿರುದ್ಧ ಬಿಲ್ಲು ಎತ್ತುವುದು ಸಿದ್ಧರಾಮಯ್ಯ ಅವರಿಗೆ ಅನಿವಾರ್ಯವಾಗುತ್ತದೆ ಕುತೂಹಲದ ಸಂಗತಿಯೆಂದರೆ ಕೋಲಾರದಿಂದ ಸ್ಪರ್ಧಿಸಲು ಸಿದ್ದರಾಮಯ್ಯ ಮನಸ್ಸು ಮಾಡಿದ್ದಾರೆ ಎಂಬ ಸುದ್ದಿ ಹಲವರಲ್ಲಿ ಭಿನ್ನಯೋಚನೆ ಮೂಡಿಸಿದೆ. ಅಷ್ಟೇ ಅಲ್ಲ, ಅವರ ಮನಸ್ಸು ಕೋಲಾರದ ವಿಷಯದಲ್ಲಿ ಸೆಟ್ಲ್ ಆಗುವ ಮುನ್ನ ಕಳಚಿ ಬೀಳಲಿ ಅಂತ ಅದು ಬಯಸುತ್ತಿದೆ. ಇಂಥವರ ಪ್ರಕಾರ, ಕೋಲಾರದ ಕಣದಲ್ಲಿ ನಿಂತರೆ ಸಿದ್ದರಾಮಯ್ಯ ಅವರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ. ಇವತ್ತು ಕೋಲಾರದ ಮತಬ್ಯಾಂಕ್ ಸ್ವರೂಪ ಸಿದ್ದರಾಮಯ್ಯ ಅವರಿಗೆ ಅನುಕೂಲಕರ ಅನ್ನಿಸಬಹುದು.

ಆದರೆ ಅದು ಸಿದ್ದರಾಮಯ್ಯ ಬಯಸಿದಷ್ಟು ಪೂರಕವಾಗಿ ವರ್ತಿಸುವುದಿಲ್ಲ. ಮೊದಲನೆಯದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾ ರ್ಜುನ ಖರ್ಗೆ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಷಯದಲ್ಲಿ ಸಿದ್ದರಾಮಯ್ಯ ಇಡುತ್ತ ಬಂದಿರುವ ಹೆಜ್ಜೆಯು ದಲಿತ ಮತಬ್ಯಾಂಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮುಖ್ಯಮಂತ್ರಿಯಾಗುವ ಮಲ್ಲಿಕಾರ್ಜುನ ಖರ್ಗೆ ಕನಸಿಗೆ ಅಡ್ಡಬಂದು, ಅವರು ದಿಲ್ಲಿಗೆ ಹೋಗುವಂತೆ ಮಾಡಿದವರೇ ಸಿದ್ದರಾಮಯ್ಯ. ಅವರು ಹೆಜ್ಜೆ ಹೆಜ್ಜೆಗೂ ಅಡ್ಡಗಾಲು ಹಾಕಿದ್ದರಿಂದ ಖರ್ಗೆ 2009ರಲ್ಲಿ ಅನಿವಾರ್ಯವಾಗಿ ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕಾಯಿತು.

ಇವತ್ತು ಅವರು ಎಐಸಿಸಿ ಅಧ್ಯಕ್ಷರಾಗುವ ಮಟ್ಟಕ್ಕೆ ಬೆಳೆದರೂ, ಒಮ್ಮೆ ಮುಖ್ಯಮಂತ್ರಿಯಾಗಬೇಕು ಎಂಬ ಅವರ ಕನಸು
ಮಸುಕಾಗಿ ಹೋಗಿದೆ. ಇದೇ ರೀತಿ 2013ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿದ್ದ
ಪರಮೇಶ್ವರ್ ಅವರು ಸ್ಟೇಜ್ ಕುಸಿದು ಉರುಳಿಬೀಳಲೂ ಸಿದ್ದರಾಮಯ್ಯ ಕಾರಣ. ಹೀಗೆ ಇಬ್ಬರು ದಲಿತ ನಾಯಕರ ಸಿಎಂ ಹುದ್ದೆಯ ಕನಸು ನನಸಾಗದಿರುವುದಕ್ಕೆ ಕಾರಣರಾದ ಸಿದ್ದರಾಮಯ್ಯ ಅವರಿಗೆ ದಲಿತ ಮತಬ್ಯಾಂಕ್‌ನ ಗಣನೀಯ ಷೇರು ಬರುವುದು ಕಷ್ಟ.

ಆದ್ದರಿಂದ ಕುರುಬ, ಮುಸ್ಲಿಂ ಮತಗಳನ್ನು ನಂಬಿ ಕಣಕ್ಕಿಳಿದರೆ ಸಿದ್ದರಾಮಯ್ಯ ಸೋಲುವುದು ಗ್ಯಾರಂಟಿ ಎಂಬುದು ಇಂಥವರ ಮಾತು. ಹೀಗೆ ಎದ್ದಿರುವ ಪರ-ವಿರೋಧ ಅಭಿಪ್ರಾಯಗಳ ಪೈಕಿ ಯಾವುದು ನಿಜ ಅನ್ನುವುದನ್ನು ಪರೀಕ್ಷಿಸಲು ಸಿದ್ದರಾಮಯ್ಯ ಮುಂದಿನ ವಾರ ಕೋಲಾರಕ್ಕೆ ಹೋಗಲಿದ್ದಾರೆ. ಅನಾಗುತ್ತದೆ ಅನ್ನುವುದೇ ಸದ್ಯದ ಕುತೂಹಲ. ಒಂದು ವೇಳೆ ಕೋಲಾರದಲ್ಲಿ ಸ್ಪರ್ಧಿಸಲು ಅವರು ನಿರ್ಧರಿಸಿದರೆ ‘ರಾಮಾಂಜನೇಯ ಯುದ್ಧ’ ನಡೆಯುವುದು ಖಚಿತ; ಅವರು ಸ್ಪರ್ಧಿಲು ಬಯಸದಿದ್ದರೆ
ಆ ಭಾಗದ ಕಾಂಗ್ರೆಸ್ ನಾಯಕರ ಆತ್ಮವಿಶ್ವಾಸ ಕಡಿಮೆಯಾಗಲಿದೆ.