Friday, 22nd November 2024

ಈಗ ಯುದ್ದವಾದರೆ ಚೀನಾಗೆ ಕಲಿಸುವ ಪಾಠವೇ ಬೇರೆ

ಗಡಿ – ಕಿಡಿ

ಡಾ.ಜಗದೀಶ ಮಾನೆ

ಅದೆಷ್ಟು ಬಾರಿ ನೆಲಕ್ಕುರುಳಿದರೂ ಮೀಸೆ ಮಣ್ಣಾಗಲಿಲ್ಲ ಅನ್ನುವ ರೀತಿಯಲ್ಲಿ ಚೀನಾ ವರ್ತಿಸುತ್ತಲೇ ಇದೆ. 2020ರ ಗಲ್ವಾನ್ ಗಲಭೆಯ ನಂತರ ಇದೀಗ ಚೀನಾ ಭಾರತದ ಅರುಣಾಚಲ ಗಡಿಯಲ್ಲಿ ಮತ್ತೆ ತನ್ನ ಹಳೆಯ ವರಸೆಯನ್ನ ಶುರು ಹಚ್ಚಿಕೊಂಡಿದೆ.

ಕಳೆದ ವಾರ ಚೀನಾದ ಸುಮಾರು ಮೂನ್ನೂರಕ್ಕೂ ಹೆಚ್ಚು ಸೈನಿಕರು ಭಾರತದ ಗಡಿ ಯೊಳಕ್ಕೆ ನುಗ್ಗಿ ಅಲ್ಲಿಯೇ ಬೀಡು ಬಿಡೊದಕ್ಕೆ ಪ್ಲ್ಯಾನ್ ಮಾಡಿದ್ದರು. ತಕ್ಷಣ ಅಲರ್ಟ್ ಆದ ನಮ್ಮ ಯೋಧರು ಚೀನಾದ ಸೈನಿಕರನ್ನು ಅಲ್ಲಿಂದ ಓಡಿಸಲು ಯತ್ನಿಸಿದ್ದು ಸುದ್ದಿಯಾಗಿದೆ. ಇಂತಹ ಸಾಕಷ್ಟು ಉದಾಹರಣೆ ಗಳನ್ನು ನಾವಿಲ್ಲಿ ನೋಡಬಹುದು. ಅದು ಡಿಸೆಂಬರ್ 9, 1962. ಆಗ ಇದ್ದಕ್ಕಿದ್ದಂತೆ ಅರುಣಾಚಲ ಪ್ರದೇಶದ ತಬಾಂಗ್ ಸೆಕ್ಟರ್‌ನ ಯಾಂಗಟ್ಸೆ ಎಂಬ ಪ್ರದೇಶದಲ್ಲಿ ಅತ್ತಕಡೆಯಿಂದ ಸೈನಿಕರ ಗುಂಡಿನ ಸದ್ದು ಕೇಳಿ ಬಂತು.

ಹಾಲು ಬಿಳುಪಿನ ಮಂಜುಗಡ್ಡೆಯ ಮೇಲೆ ಕಪ್ಪು ಬೂಟ್ ಧರಿಸಿದ ಐನೂರಕ್ಕೂ ಹೆಚ್ಚಿನ ಕೆಂಪು ಸೈನಿಕರ ಗುಂಪೊಂದು ತಯಾಂಗ್ ಸೆಕ್ಟರಿನಲ್ಲಿ ಭಾರತಕ್ಕೆ ಸೇರಿದ್ದ ಪ್ರದೇಶದ ಮೇಲೆ ನುಗ್ಗಿಬಂದಿತ್ತು. ಆ ಕೆಂಪು ಸೈನಿಕರು ಈ ಪ್ರದೇಶ ನಮಗೆ ಸೇರಿದ್ದು, ನೀವಿಲ್ಲಿಂದ ಜಾಗ ಖಾಲಿ ಮಾಡಿ ಅಂತ ನಮ್ಮ ಯೋಧರ ಮೇಲೆ ಆವಾಜ್ ಹಾಕಿದ್ದರು. ಚೀನಾದ ಸೈನಿಕರು ಬೇಕಂತ ಖ್ಯಾತೆ ತೆಗೆಯಲಿಕ್ಕಾಗಿಯೇ ತಯಾರಾಗಿ ಬಂದಿದ್ದಾರೆಂಬ ವಿಷಯ ಮಾತ್ರ ನಮ್ಮ ಸೈನಿಕರಿಗೆ ಬಹಳ ಚೆನ್ನಾಗಿ ಗೊತ್ತಿತ್ತು. ಆ ವೇಳೆ ಭಾರತೀಯ ಯೋಧರ ಸಂಖ್ಯೆಯ ಪ್ರಮಾಣ ಕೂಡ ಹೆಚ್ಚಿತ್ತು.

ಹಾಗಾಗಿ ಅಂದು ಚೀನಿಯರ ಹಾರಾಟ, ಕೂಗಾಟಕ್ಕೆ ನಮ್ಮ ಯೋಧರು ಜಗ್ಗಿರಲಿಲ್ಲ. ಅಲ್ಲಿ ಎಷ್ಟು ಜನ ಚೀನಿ ಸೈನಿಕರಿದ್ದಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವ ಗೊಜಿಗೆ ಹೋಗದೆ ‘ಜೈ ಮಹಾಕಾಳಿ’ ಎಂಬ ರಣಘೋಷ ಮೊಳಗಿಸುತ್ತ ಅವರನ್ನು ಒಂದೆ ಒಂದು ಹೆಜ್ಜೆ ಮುಂದೆ ಇಡಲೂ ಬಿಡದೆ ಅಡ್ಡಗಟ್ಟಿದರು. ಆದರೆ ಆ ಸಂದರ್ಭದಲ್ಲಿ ಬಂದೂಕುಗಳ ಬಳಕೆ ಆಗಲಿಲ್ಲವಾದರೂ,
ಇಬ್ಬದಿಯ ಸೈನಿಕರ ಮಧ್ಯೆ ದೊಡ್ಡ ಪ್ರಮಾಣದ ತಳ್ಳಾಟ ಹೊಡೆದಾಟಗಳಾಗಿ ಎರಡೂ ಸೈನಿಕರು ಗಾಯಗೊಂಡಿದ್ದರು.

ಇದೀಗ ನಮ್ಮ ಯೋಧರು, ಚೀನಿ ಸೈನಿಕರಿಗೆ ಅದೇ ರೀತಿಯ ಹೊಡೆತವನ್ನು ಕೊಟ್ಟಿದ್ದಾರೆ. 2020 ರ ನಂತರ ಭಾರತ ಮತ್ತು ಚೀನಾದ ಗಡಿಯಲ್ಲಿ ನಡೆದಿರುವ ಅತಿದೊಡ್ಡ ಸಂಘರ್ಷವಿದು. 2021ರ ಅಕ್ಟೋಬರ್‌ನಲ್ಲಿ ಇದೇ ಆಂಗ್ಸೇ ಭಾಗದಲ್ಲಿ ಭಾರತದ ನೆಲಕ್ಕೆ ಅಕ್ರಮವಾಗಿ ಕಾಲಿಟ್ಟಿದ್ದ ಚೀನಾದ ಹತ್ತಾರು ಯೋಧರನ್ನು ಭಾರತೀಯ ಸೈನಿಕರು ತಮ್ಮ ವಶಕ್ಕೆ ಪಡೆದು ಕೆಲಕಾಲದ ನಂತರ ರಿಲೀಸ್ ಮಾಡಿದ್ದರು.

ಒಂದು ವೇಳೆ ನಮ್ಮ ಸೈನಿಕರೇನಾದರೂ ಅವತ್ತು ಮನಸ್ಸು ಮಾಡಿದ್ದರೆ, ಆ ಚೀನಿ ಸೈನಿಕರ ಹೆಣಗಳೂ ಸಿಗದ ಹಾಗೆ ಮಾಡಬಹು ದಿತ್ತು. ಆದರೆ ನಮ್ಮ ಯೋಧರ ಶಿಸ್ತು ಹಾಗೂ ಸಂಯಮ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಚೀನಾದ ಅಧಿಕಾರಿ ಗಳನ್ನು ಕರೆಸಿ ಸೆರೆ ಸಿಕ್ಕ ಯೋಧರನ್ನು ಅವರಿಗೆ ಹಸ್ತಾಂತರಿಸಿ ಈ ರೀತಿಯ ಪ್ರಮಾದಗಳು ಮರುಕಳಿಸದಂತೆ ಅವರನ್ನು ಎಚ್ಚರಿಸಿ ಕಳುಹಿಸಿ ದ್ದರು. ಆದರೆ ಇದೀಗ ಮತ್ತೆ ಅದೇ ಜಾಗದಲ್ಲಿ ನೂರಾರು ಚೀನಿ ಯೋಧರು ನುಗ್ಗಿ ಬಂದಿದ್ದಾರೆ. ಅವರು ಬೇಕಂತಲೇ ಭಾರತ ವನ್ನು ಕೆಣಕಲು ಈ ರೀತಿಯ ನಾಟಕಗಳನ್ನಾಡುತ್ತಿದ್ದಾರೆ ಎಂಬುದು ಸ್ಪಷ್ಟ.

ಗಡಿಗಳಲ್ಲಿ ಸಾಮಾನ್ಯವಾಗಿ ಎರಡೂ ರಾಷ್ಟ್ರಗಳು ಗಸ್ತು ಪಾರ್ಟಿ ನೇಮಕ ಮಾಡಿರುತ್ತವೆ. ಆ ಟಿಮ್‌ಗಳಲ್ಲಿ ಹತ್ತಾರು ಯೋಧರಿರು ತ್ತಾರೆ, ಮತ್ತು ಅಲ್ಲಿನ ಗಡಿ ಪಾಯಿಂಟ್‌ಗಳಿಗೆ ಅವರು ಬಂದು ಹೋಗುವುದು ಸಹಜವಾಗಿ ನಡೆಯುತ್ತಿರುತ್ತದೆ. ಈ ಗಡಿಯಲ್ಲಿ ಎರಡೂ ದೇಶಗಳಿಗೆ ಒಂದಿಷ್ಟು ಗೊಂದಲಗಳಿರುವುದರಿಂದ ಅದನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗದ ಕಾರಣ ಒಮ್ಮೊಮ್ಮೆ ನಮ್ಮ ಯೋಧರು ಚೀನಾದ ಗಡಿಯೊಳಕ್ಕೆ ಮತ್ತು ಚೀನಾದ ಸೈನಿಕರು ನಮ್ಮ ಗಡಿಯೊಳಕ್ಕೆ ಬರುವುದು ನಡೆಯು ತ್ತಿರುತ್ತದೆ. ಆದರೆ ಚೀನಾದ ಸೈನಿಕರು ಅನೇಕ ಬಾರಿ ಬೇಕಂತಲೇ ನಮ್ಮ ಗಡಿಯೊಳಕ್ಕೆ ನುಗ್ಗಿಯೂ ಬರುತಿರುತ್ತಾರೆ. ಹಾಗೆ ಬರುವವರು ಕೇವಲ ಹತ್ತಿಪ್ಪತ್ತು ಜನ ಸೈನಿಕರು ಇರುತ್ತಾರೆಯೇ ಹೊರತು ಹೆಚ್ಚಿನ ಸಂಖ್ಯೆಯಲ್ಲೇನೂ ಇರುವುದಿಲ್ಲ.

ಆದರೆ ಇದೀಗ ಭಾರತದ ಗಡಿಯೊಳಕ್ಕೆ ನುಗ್ಗಿ ಬಂದ ಸೈನಿಕರ ಸಂಖ್ಯೆಯನ್ನು ಗಮನಿಸಿದರೆ ಬಹಳ ಆಶ್ಚರ್ಯವಾಗುತ್ತದೆ. ಐನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದರವರು. ಭಾರತೀಯರನ್ನು ಕೆಣಕುವುದು ಚೀನಿಯರ ಹುಟ್ಟು ಗುಣ. ಮೊನ್ನೆ ಉತ್ತರಾ ಖಂಡದ ಗಡಿಯಲ್ಲಿ ಅಮೆರಿಕ ಹಾಗೂ ಭಾರತ ಜಂಟಿ ಸಮರಾಭ್ಯಾಸ ನಡೆಸಿದ್ದ ಅಂಶ ಚೀನಾದ ಅಸಹನೆಗೆ ಕಾರಣ ವಾಗಿತ್ತು. ಜತೆಗೆ ಪಾಕಿಸ್ತಾನದ ಪಿಓಕೆ ಬಗ್ಗೆ ಭಾರತ ಕೊಟ್ಟ ಹೇಳಿಕೆಗಳ ಹಿನ್ನೆಲೆಯಲ್ಲಿ ಚೀನಾ ಭಾರತವನ್ನು ಪ್ರಚೋದಿಸುವುದಕ್ಕೆ ಗಡಿ ಯಲ್ಲಿ ಇಂತಹ ಸಂಘರ್ಷಗಳನ್ನು ಸೃಷ್ಟಿ ಮಾಡುವ ಪ್ರಯತ್ನವನ್ನು ಚೀನಾ ಮಾಡುತ್ತಿದೆ ಎನ್ನುವುದು ನಮ್ಮ ರಕ್ಷಣಾ ತಜ್ಞರ ಅಭಿಪ್ರಾಯ.

ಭಾರತಕ್ಕೆ ಅಂಟಿದ ಚೀನಾದ ಗಡಿಯನ್ನು ನಾಲ್ಕು ಭಾಗಗಳಲ್ಲಿ ವಿಂಗಡಿಸಲಾಗಿದೆ. ‘Western Sector’ ಇದು ಲಡಾಕ್ ಭಾಗ, ‘”Midl Sector’ ಇದು ಹಿಮಾಚಲ ಮತ್ತು ಉತ್ತರಾಖಂಡ ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿಭಾಗ. ‘Sikkim Secto’ ಕೊನೆ ಯದ್ದು ಅರುಣಾಚಲ ಪ್ರದೇಶ ಅದನ್ನು ‘Eastern Secto’ ಅಂತ ಕರೆಯುತ್ತಾರೆ. ಅರುಣಾಚಲ ಪ್ರದೇಶ ತಮಗೆ ಸೇರಬೇಕೆಂದು ಚೀನಾ ಈ ಹಿಂದಿನಿಂದಲೂ ವಾದಿಸುತ್ತ ಬಂದಿದೆ. ನಮ್ಮ ಪ್ರಧಾನಿಯಾಗಲಿ ಅಥವಾ ರಕ್ಷಣಾ ಸಚಿವ ರಾಗಲಿ ಯಾರೇ ಅರುಣಾ ಚಲ ಪ್ರದೇಶಕ್ಕೆ ಭೇಟಿ ಕೊಟ್ಟಾಗ ಅದನ್ನು ಚೀನಾ ಬಲವಾಗಿ ವಿರೋಧಿಸುತ್ತಿರುತ್ತದೆ.

ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ಕೊಟ್ಟಾಗ ಚೀನಾ ಆಕ್ರೋಶ ವ್ಯಕ್ತಪಡಿಸಿತ್ತು. ಅವರ ಆ ಆಕ್ರೋಶ ಗೊಡ್ಡು ಬೆದರಿಕೆಗಳಿಗೆ ಮನಮೋಹನ್ ಸಿಂಗ್ ಅವರು ತಲೆಕೆಡಿಸಿಕೊಂಡಿರಲಿಲ್ಲ! ಇನ್ನು ಇದೀಗ ಮೋದಿ ಪ್ರಧಾನಿ ಇರುವಾಗಂತೂ ಅವರ ಹಾರಾಟ ಕೂಗಾಟಗಳೂ ಎಷ್ಟೇ ನಡೆದರೂ ಅವು ಯಾವ ಲೆಕ್ಕಕ್ಕೂ ಇಲ್ಲ ಅಂತ ಅನಿಸುತ್ತದೆ. ಆ
ಸ್ಥಳದಲ್ಲಿ ಈಗಾಗಲೇ ಮೋದಿ ಸರಕಾರ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಗಡಿಗೆ ಸಂಪರ್ಕ ಕಲ್ಪಿಸುವ
ರಸ್ತೆಗಳನ್ನು ನಿರ್ಮಿಸುತ್ತಿದೆ. ಅರುಣಾಚಲ ಗಡಿಗಳಲ್ಲಿ ಡ್ಯೂ ವೇಲ್ ವಿಲೇಜ್‌ಗಳ ನಿರ್ಮಾಣ ಕಾಮಗಾರಿಯನ್ನು ಅಬ್ಬರದ
ಪ್ರಮಾಣದಲ್ಲಿ ನಡೆಸಿದೆ. ಈ ಅಭಿವೃದ್ಧಿಯನ್ನ ಸಹಿಸದ ಚೀನಾ ಇದೀಗ ತವಾಂಗ್ ಭಾಗದಲ್ಲಿ ಕಿರಿಕ್ ಮಾಡುತ್ತಿದೆ.

1914ರಲ್ಲಿ ಟಿಬೆಟ್ ಆಡಳಿತ ಮತ್ತು ಬ್ರಿಟಿಷರ ನಡುವೆ ಒಂದು ಒಪ್ಪಂದವಾಗಿತ್ತು. ಅದರ ಪ್ರಕಾರ ತವಾಂಗ್ ಭಾರತಕ್ಕೆ ಸೇರಿ ಕೊಂಡಿತ್ತು. ನಂತರ 1914 ಸಂದರ್ಭದಲ್ಲಿ ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಟಿಬೆಟ್ ಪ್ರದೇಶ ವನ್ನು ಚೀನಾ ಆಕ್ರಮಿಸಿಕೊಂಡಿತು. ಅಷ್ಟೇ ಅಲ್ಲ ಒಂದು ಕಾಲದಲ್ಲಿ ಟಿಬೇಟ್‌ಗೆ ಯಾವ್ಯಾವ ಪ್ರದೇಶಗಳು ಸೇರಿಕೊಂಡಿದ್ದವೊ ಅವೆಲ್ಲವೂ ಇದೀಗ ಮತ್ತೆ ತನಗೆ ಸೇರಬೇಕೆಂದು ಚೀನಾ ಪಟ್ಟು ಹಿಡಿಯುತ್ತಿದೆ.

ಬಲವಂತವಾಗಿ ಚೀನಾ ಹಲವು ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವ ಪ್ರಯತ್ನವನ್ನು ಮಾಡಿತ್ತು. ಆದರೆ ತವಾಂಗ್ ಮತ್ತು
ಅರುಣಾಚಲವನ್ನು ಮಾತ್ರ ಭಾರತ ಬಿಟ್ಟುಕೊಟ್ಟಿರಲಿಲ್ಲ. ಇಂದಿಗೂ ಈ ಎರಡು ಪ್ರದೇಶಗಳ ಬಗ್ಗೆ ನಿರಂತರವಾಗಿ ಕಿರಿಕ್ ಮಾಡುತ್ತಿರುವ ಚೀನಾ 1962ರ ಯುದ್ಧದ ಸಂದರ್ಭ ದಲ್ಲಿ ಈ ಪ್ರದೇಶವನ್ನು ಆಕ್ರಮಿಸಿಕೊಂಡಿತ್ತು. ಆದರೆ ಚೀನಾಗೆ ಅವತ್ತು ಯಾವ ಜ್ಞಾನೋದಯ ಆಗಿತ್ತೊ ಗೊತ್ತಿಲ್ಲ, ತವಾಂಗ್ ಅನ್ನು ವಶಪಡಿಸಿಕೊಂಡ ಕೆಲವು ದಿನಗಳ ನಂತರ ಇದ್ದಕಿದ್ದಂತೆ ಚೀನಿ ಸೈನಿಕರು ಅಲ್ಲಿಂದ ಹಿಂದಕ್ಕೆ ಸರಿದಿದ್ದರು.

ಒಂದು ವೇಳೆ ಅಂದು ತವಾಂಗ್ ಅನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಅಂತ ಚೀನಾ ಬಯಸಿದ್ದರೆ ಅದನ್ನು ಪ್ರತಿರೋ ಧಿಸುವ ಯಾವ ನಾಯಕರೂ ಭಾರತದಲ್ಲಿರಲಿಲ್ಲ!. ಆಗ ಚೀನಾ ಅಕ್ಸಾಯ್ ಚೀನ್ ಭಾಗವನ್ನು ಮಾತ್ರ ತನ್ನ ಹಿಡಿತದಲ್ಲಿ ಇಟ್ಟುಕೊಂಡು ತವಾಂಗ್ ಹಾಗೂ ಅರುಣಾಚಲಗಳಿಂದ ತನ್ನ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಂಡಿತ್ತು. ಆ ಭಾಗದಲ್ಲಿ ಇಂದಿಗೂ ಎರಡೂ ದೇಶದ ಸೈನಿಕರ ಮಧ್ಯೆ ಸಾಕಷ್ಟು ಸಂಘರ್ಷಗಳು ನಡೆಯುತ್ತಲೇ ಇವೆ. 1975ರ ಅಕ್ಟೋಬರ್ 20 ರ ಸಂದರ್ಭದಲ್ಲಿ ಚೀನಾ ಭಯಾನಕ ಕೃತ್ಯ ಎಸಗುವ ಮೂಲಕ ತನ್ನ ಅಟ್ಟಹಾಸವನ್ನು ಮೆರೆದಿತ್ತು.

ಅದು ತಲ್ಲುಂಗ್ಲಾಪಾಸ್ ಬಳಿ ನಲವತ್ತು ಚೀನಾ ಸೈನಿಕರು ಅಡಗಿ ಕುಳಿತು ಏಕಾಏಕಿ ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆ ದಾಳಿಯಲ್ಲಿ ಸುಮಾರು ನಾಲ್ವರು ಭಾರತೀಯ ಯೋಧರು ಪ್ರಾಣವನ್ನು ಕಳೆದುಕೊಂಡಿದ್ದರು. ಭಾರತ ತನ್ನ ಸೈನಿಕರು ಕಳೆದು ಹೋಗಿದ್ದಾರೆಂದು ಭಾವಿಸಿತ್ತು. ಆ ಬಳಿಕ ಚೀನಾ ತನ್ನ ರಾಯಭಾರ ಕಛೇರಿಯ ಮೂಲಕ ನಡೆದಿರುವ ಘಟನೆಯನ್ನು ಭಾರತ ಸರಕಾರಕ್ಕೆ ಗೊತ್ತುಪಡಿಸಿ, ಭಾರತೀಯ ಮೃತ ಯೋಧರ ದೇಹಗಳನ್ನು ಹಸ್ತಾಂತರ ಮಾಡಿತ್ತು. ಈ ಘಟನೆ ಬಳಿಕ 2006 ರಲ್ಲಿ ಚೀನಾದ ಭಾರತೀಯ ರಾಯಭಾರಿ ಇಡೀ ಅರುಣಾಚಲ ಪ್ರದೇಶ ಚೀನಾಗೆ ಸೇರಿದ್ದು ಅಂತ ಹೇಳಿಕೆ ಕೊಟ್ಟಿದ್ದರು. ಅವರ ಆ ಹೇಳಿಕೆಗೆ ಅಂದು ಯಾವುದೇ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿರಲಿಲ್ಲ. ನಂತರ ಸಿಕ್ಕಿಂ ಡೊಕ್ಲಾಮ್ ಬಳಿ 2017ರಲ್ಲಿ ಭಾರತ ಹಾಗೂ ಚೀನಾದ ಯೋಧರು ಪರಸ್ಪರ ಎದುರಾಗಿದ್ದರು.

ಅಲ್ಲಿ ಕೂಡ ಚೀನಾ ಭಾರತದಿಂದ ದೊಡ್ಡ ಅಪಮಾನವನ್ನು ಎದುರಿಸಿತ್ತು. ಹೀಗೆ ಆ ಸಂಘರ್ಷದ ಮೂರು ವರ್ಷಗಳ ನಂತರ ಚೀನಾ ಭಾರತದ ಲಡಾಕ್‌ನಲ್ಲಿ ಗಲ್ ವಾನ್ ಕಣಿವೆಯ ವಿಚಾರವಾಗಿ ಖ್ಯಾತೆ ತೆಗೆದು ಭಾರತೀಯ ಪಡೆಗಳಿಂದ ಸರಿಯಾಗೊ ಹೊಡೆತ ತಿಂದಿತ್ತು. ಅದೇ ರೀತಿಯ ಘಟನೆ ಮತ್ತೊಮ್ಮೆ ಅರುಣಾಚಲದ ಗಡಿಯಲ್ಲಿ ಮರುಕಳಿಸುತ್ತಿದೆ. ಚೀನಾ ಭಾರತದೊಂದಿಗೆ ರಾಜತಾಂತ್ರಿಕ ಮಾರ್ಗದಲ್ಲಿ ತನ್ನ ಸಂಬಂಧಗಳನ್ನು ಸುಧಾರಿಸಿಕೊಳ್ಳುವ ಉತ್ಸಾಹವನ್ನು ತೋರತ್ತಿಲ್ಲ.

ಬದಲಿಗೆ ಕೇವಲ ತನ್ನದೇ ಸೈನ್ಯ ದೊಡ್ಡದು, ನಾವೇ ಬಲಿಷ್ಠರು, ನಾವೇ ಕೆಂಪು ಎಂಬ ಅಹಂಕಾರದಲ್ಲಿ ಗಡಿಯಲ್ಲಿ ಪದೆ ಪದೆ ಖ್ಯಾತೆ ತೆಗೆಯುತ್ತಿದೆ. ಅಲ್ಲಿ ತನ್ನ ಶಾಶ್ವತ ಅಸ್ತಿತ್ವ ಸ್ಥಾಪಿಸುವ ಉದ್ದೇಶದಿಂದ ಗಡಿಯುದ್ದಕ್ಕೂ ರೈಲು ಹಳಿಗಳನ್ನು ಹಾಕಿದೆ. ಅಲ್ಲಿ ಅಚ್ಚುಕಟ್ಟಾದ ರಸ್ತೆ ಹಾಗೂ ಹಳ್ಳಿಗಳನ್ನು ನಿರ್ಮಿಸಿ, ಪಾಂಗಾಂಗ್ ಸೋ ಸರೋವರದ ಮೇಲೆ ಸೇತುವೆ ಯನ್ನ ಕಟ್ಟಿಕೊಂಡಿದೆ. ಅತ್ತ ಚೀನಾ ಇಷ್ಟೆಲ್ಲ ಮಾಡಿದರೆ, ಇತ್ತ ಭಾರತ ಏನು ಸಮ್ಮನೆ ಕುಳಿತಿಲ್ಲ, ಅದು ತನ್ನ ಗಡಿ ಭಾಗದಲ್ಲಿ ರಸ್ತೆ ಹಾಗೂ ಸೇತುವೆ ಗಳನ್ನು ನಿರ್ಮಿಸಿ ಅಗತ್ಯವಿರುವ ಕಡೆ ಮಾರ್ಗಗಳನ್ನು ಸಿದ್ಧ ಮಾಡಿಕೊಂಡಿದೆ.

ಜನ ವಸತಿಗಳನ್ನೂ ಕೂಡ ಬಹಳ ಅಚ್ಚು ಕಟ್ಟಾಗಿ ನಿರ್ಮಿಸಿಕೊಂಡಿದೆ. 1962ರ ಯುದ್ಧದ ಸಂದರ್ಭದಲ್ಲಿ ನಮ್ಮ ವ್ಯವಸ್ಥೆ ಗಳಲ್ಲಿ ಅಷ್ಟೊಂದು ಪ್ರಬಲತೆ ಇರಲಿಲ್ಲ ಅನ್ನೊ ಕಾರಣದಿಂದಾಗಿ ಮಾತ್ರ ಭಾರತ ಸೋತಿತ್ತು. ಇಲ್ಲದೆ ಹೋದರೆ ಭಾರತೀಯ ಸೇನೆ ಯನ್ನು ಎದುರಿಸುವುದು ಬಹಳ ಕಷ್ಟ ಎಂಬ ಸತ್ಯ ಚೀನಿಯರಿಗೆ ೧೯೬೭ರ ಯುದ್ಧದಲ್ಲಿ ಸೋತ ನಂತರ ಗೊತ್ತಾಗಿತ್ತು. ಇದೀಗ ಭಾರತ ರಾಜಕೀಯವಾಗಿ, ಆರ್ಥಿಕವಾಗಿ, ಭೌಗೋಳಿಕವಾಗಿ ಬಹಳ ಮುಂದುವರಿದಿದೆ. ಇದೀಗ ಪೂರ್ಣಪ್ರಮಾಣದ ಯುದ್ಧ ವಾದರೆ ಭಾರತ, ಚೀನಾಗೆ ಕಲಿಸುವ ಪಾಠವೇ ಬೇರೆ.

ಯಾಕೆಂದರೆ ಭಾರತೀಯ ಸೇನೆ ಈಗ ಯುದ್ಧದಲ್ಲಿ ಪಳಗಿರುವ ಸೇನೆ. ಪಕ್ಕದ ಪಾಕಿಸ್ತಾನದ ಜತೆಗಿನ ಕಾಳಗದ ಅನುಭವವೂ ಇದೆ. ನಮ್ಮ ವೆಪನ್‌ಗಳು ಕೂಡ ಟೈಮ್ ಟೆಸ್ಟೆಡ್ ಮತ್ತು ವಾರ್ ಟೆಸ್ಟೆಡ್ ವೆಪನ್‌ಗಳು. ಅವು ಟ್ರಯಲ್ ಮಾಡುವಾಗ ಅಷ್ಟೇ ಅಲ್ಲ ಯುದ್ಧ ಭೂಮಿಯಲ್ಲೂ ಬಳಯಾದಂಥವು. ಆದರೆ ಚೀನಾಗೆ ಯುದ್ಧದ ಅನುಭವ ಸದ್ಯಕ್ಕೆ ಇಲ್ಲ. ಮತ್ತು ಅವರ ಬಳಿ ಇರುವ
ಯುದ್ಧ ವಿಮಾನಗಳ ಮಾಡೆಲ್ ಯಾವುದು? ಅದು ಹೇಗೆಲ್ಲ ಕೆಲಸ ಮಾಡುತ್ತದೆ? ಎಂಬುದು ಜಗತ್ತಿಗೆ ಗೊತ್ತಿಲ್ಲ. ಇದು ಚೀನಾಗೂ ಗೊತ್ತಿರುವ ಸತ್ಯ.