Thursday, 21st November 2024

ಈ ವಾಚಿನ ಸಮಯಕ್ಕೆ ಬೆಲೆ ಕಟ್ಟಲಾಗದು !

ನೂರೆಂಟು ವಿಶ್ವ

vbhat@me.com

ಒಮ್ಮೆ ತಯಾರಾದ ವಾಚು ಯಾವುದೇ ಕಾರಣಕ್ಕೂ ದೋಷಪೂರಿತವಾಗಿರಲು ಸಾಧ್ಯವೇ ಇಲ್ಲ. ಖರೀದಿಸಿದ ನಂತರ ಮಷೀನಿನಲ್ಲಿ ದೋಷ ಕಂಡು ಬಂದರೆ ಅದನ್ನು ರಿಪೇರಿ ಮಾಡಿಕೊಡುವ ಬದಲು ಹೊಸ ವಾಚನ್ನೇ ಕೊಡಲಾಗುತ್ತದೆ. ಹತ್ತು ಲಕ್ಷ ವಾಚುಗಳ ಪೈಕಿ ಒಂದು ವಾಚಿನಲ್ಲಿ ದೋಷ ಕಾಣಿಸಿಕೊಳ್ಳಬಹುದು. ಇದನ್ನೂ ಕಂಪನಿ ಗಂಭೀರವಾಗಿ ಪರಿಗಣಿಸುತ್ತದೆ. ಅದಕ್ಕೆ ಕಾರಣರಾದ ಸಿಬ್ಬಂದಿ ಮೇಲೆ ಕ್ರಮ ಜರುಗಿಸುತ್ತದೆ.

ನನ್ನ ಸ್ನೇಹಿತರಾದ ರವಿತೇಜ ರೆಡ್ಡಿ ಸುಮಾರು ಎಂಬತ್ತು ವರ್ಷಗಳ ಹಳೆಯ ರೊಲೆಕ್ಸ್ ವಾಚು ಕಟ್ಟುತ್ತಾರೆ. ಈ ವಾಚನ್ನು ಅವರಿಗೆ ಅವರ ತಂದೆಯವರು ಕೊಟ್ಟಿದ್ದಂತೆ. ಅವರ ತಂದೆಯವರಿಗೆ ಆ ವಾಚನ್ನು ಅವರ ತಂದೆಯವರು ಕೊಟ್ಟಿದ್ದರಂತೆ. ಅದನ್ನು ಅವರಿಗೆ ಅವರ ತಂದೆಯವರು ಇನ್ನೂ ಮುಂಚೆ ಕೊಟ್ಟಿದ್ದರಂತೆ. ರವಿತೇಜ ಆ ವಾಚಿನ ನಾಲ್ಕನೆಯ ವಾರಸುದಾರರು. ರವಿತೇಜ ಹೇಳುವಂತೆ, ಈ ವಾಚನ್ನು ಅವರ ತಂದೆ, ತಾತ ಮತ್ತು ಮುತ್ತಾತ ಒಂದು ಸಲವೂ ರಿಪೇರಿಗೆ ಕಳಿಸಿಲ್ಲ. ನಾಲ್ವರೂ ಇದನ್ನು ಹೇಗೆ ಧರಿಸಿದ್ದಾರೆಂದರೆ ಸ್ನಾನ ಮಾಡುವಾಗ ಮಾತ್ರ ಇದನ್ನು ಬಿಚ್ಚಿಟ್ಟಿದ್ದಾರೆ. ಮಲಗುವಾಗಲೂ ಕಟ್ಟಿಕೊಂಡೇ ಇದ್ದಾರೆ.

https://www.youtube.com/live/qavXJViJfXE

ಅಂದರೆ ಈ ವಾಚು ಒಂದೇ ಒಂದು ಸಲ ನಿಂತಿಲ್ಲ. ವಾಚಿನ ಬೆಲ್ಟ್ ಅನ್ನು ಕಾಲಕಾಲಕ್ಕೆ ಸರ್ವಿಸ್ ಮಾಡಿಸಲಾಗಿದೆ. ಆದರೆ ವಾಚಿನ ಡೈಲನ್ನು ಒಂದು
ಸಲವೂ ಓಪನ್ ಮಾಡಿಲ್ಲ. ‘ಈ ವಾಚಿನ ತಂತ್ರಜ್ಞಾನ ಹೇಗಿದೆಯೆಂದರೆ, ಇದನ್ನು ಬಿಚ್ಚಿಟ್ಟು ಎಂಟು ತಾಸಿನ ಒಳಗೆ ಅಲುಗಾಡಿಸದಿದ್ದರೆ ಅಥವಾ ಪುನಃ ಧರಿಸದಿದ್ದರೆ ಅದು ನಿಂತು ಹೋಗುತ್ತದೆ. ಆದರೆ ನನ್ನ ಪೂರ್ವಜರು ಒಂದೇ ಒಂದು ಸಲವೂ ಅದು ನಿಂತು ಹೋಗಲು ಬಿಟ್ಟಿಲ್ಲ. ಒಂದು ರೀತಿಯಲ್ಲಿ ಈ ವಾಚನ್ನು ದೀಪ ಎಂದು ಪರಿಗಣಿಸಿದರೆ, ನನ್ನ ಮುತ್ತಾತ ಅಂದು ಹಚ್ಚಿದ ದೀಪ ಒಂದು ದಿನ ಸಹ ಆರದೇ ಇಂದಿಗೂ ಉರಿಯುತ್ತಲೇ ಇದೆ. ಪ್ರಾಯಶಃ ನನ್ನ ಪೂರ್ವಿಕರು ನನಗೆ ಮನೆ, ಆಸ್ತಿ ಎಲ್ಲಾ ಬಿಟ್ಟುಹೋಗಿದ್ದಾರೆ.

ಆದರೆ ಅವೆಲ್ಲಕ್ಕಿಂತ ನನಗೆ ಹೆಚ್ಚು ಖುಷಿ ಕೊಟ್ಟಿರುವುದು ಈ ರೊಲೆಕ್ಸ್ ವಾಚು. ಕಾರಣ ಮನೆ, ಸೈಟು ಸದಾ ನನ್ನ ಜತೆ ಇರುವುದಿಲ್ಲ. ಆದರೆ ಈ ವಾಚು ಹಾಗಲ್ಲ, ಅದು ಸದಾ ನನ್ನ ಮೈಮೇಲೆಯೇ ಇರುತ್ತದೆ .ನನ್ನ ಮಗನಿಗೆ ನಾನು ಕೊಡಬಹುದಾದ ಅತ್ಯುತ್ತಮ ಕೊಡುಗೆಯೆಂದರೆ ಇದೇ ಎಂದು ಭಾವಿಸಿ ದ್ದೇನೆ’ ಎಂದು ಅವರು ಹೇಳುತ್ತಿರುತ್ತಾರೆ. ಆ ವಾಚನ್ನು ನೋಡಿದಾಗಲೆಲ್ಲ ಅವರಿಗೆ ಏನೋ ಪುಳಕ, ಸಂತಸ… ಅವ್ಯಕ್ತ ಧನ್ಯತಾ ಭಾವ. ಈ ವಾಚನ್ನು ವಂಶವಾಹಿನಿ ಎಂದು ಭಾವಿಸಿದರೆ, ಅವರ ಮುತ್ತಾತ, ತಾತ ಮತ್ತು ತಂದೆಯ ರಕ್ತ ಆ ವಾಚಿನಲ್ಲಿ ಹರಿಯುವುದು ಅವರಿಗೆ ಭಾಸವಾಗುತ್ತದೆ.

ಹಾಗೆ ನೋಡಿದರೆ ಅದು ಅವರ ಪಾಲಿಗೆ ವಾಚಲ್ಲ, ಅದು ವಂಶವಾಹಿನಿಯೇ. ಅದು ಅವರ ಪಾಲಿಗೆ legacy. ಬೆಲೆಯೇ ಕಟ್ಟಲಾಗದ ಅಮೂಲ್ಯ ರತ್ನ. ಯಾರಾದರೂ ಹತ್ತು ಕೋಟಿ ರುಪಾಯಿ ಕೊಡ್ತೇನೆ ಅಂದರೂ ಅವರು ಕೊಡಲೊಲ್ಲರು. ಹಣವನ್ನು ಯಾರಾದರೂ ಕೊಡಬಹುದು, ಆದರೆ ಅವರ ಪೂರ್ವಿಕರ ಭಾವನೆ, ಬೆವರು, ವಾಸನೆಯನ್ನು ಕೊಡಲು ಸಾಧ್ಯವೇ? ಇಂಪಾಸಿಬಲ್! ಅವೆಲ್ಲವೂ ಆ ವಾಚಿನಲ್ಲಿ ಮಿಳಿತವಾಗಿವೆ. ಇಂದು ಜಗತ್ತಿನಲ್ಲಿ ಅತಿ ದುಬಾರಿ ಐದು ವಾಚ್ ಬ್ರಾಂಡುಗಳಲ್ಲಿ ರೊಲೆಕ್ಸ್ ಕೂಡ ಒಂದು. ರೊಲೆಕ್ಸ್ ಕಟ್ಟಿದವನ ಖದರೇ ಬೇರೆ. ಈ ವಾಚನ್ನು ಕಟ್ಟಿದರೆ ಅವನು ಸಾಮಾನ್ಯ ನಂತೂ ಅಲ್ಲ ಎಂಬ ನಿರ್ಧಾರಕ್ಕೆ ತಕ್ಷಣ ಬರಬಹುದು.

https://youtube.com/live/YUhHYTtCbjM?feature=share

ಒಂದೋ ಆತ ಶ್ರೀಮಂತ, ಇಲ್ಲವೇ ಆತನಿಗೆ ಒಳ್ಳೆಯ ಅಭಿರುಚಿ ಇದೆ ಎಂದು ಭಾವಿಸಬಹುದು. ಎಲ್ಲ ವಾಚುಗಳು ಸಮಯವನ್ನೇ ತೋರಿಸುತ್ತೇವೆ. ಕಟ್ಟಿದ ವಾಚಿನಿಂದ ಯಾರ ಟೈಮ್ ಬದಲಾಗುವುದಿಲ್ಲ ಅಂತಾರೆ. ಆದರೆ ರಸ್ತೆಯಲ್ಲಿ ನಿಂತು ಅಳುವುದಕ್ಕೂ, ಬೆಂಜ್ ಕಾರಿನಲ್ಲಿ ಕುಳಿತು ಅಳುವುದಕ್ಕೂ ಸಾಕಷ್ಟು ವ್ಯತ್ಯಾಸ ಇರುವಂತೆ, ಎಚ್ ಎಂಟಿ ವಾಚು ಕಟ್ಟಿಕೊಳ್ಳುವುದಕ್ಕೂ ರೊಲೆಕ್ಸ್ ವಾಚ್ ಕಟ್ಟಿಕೊಳ್ಳುವುದಕ್ಕೂ ಬಹಳ ವ್ಯತ್ಯಾಸವಿದೆ, ಅವೆರಡೂ ತೋರಿಸು ವುದು ಸಮಯವೇ ಆದರೂ. ಈ ವಾಚನ್ನು ಕಟ್ಟಿಕೊಂಡರೆ, ಹತ್ತಾರು ಮೀಟರು ದೂರದಿಂದಲೇ ಹೇಳಿಬಿಡಬಹುದು, ಆತ ರೊಲೆಕ್ಸ್ ವಾಚನ್ನು ಕಟ್ಟಿ ಕೊಂಡಿದ್ದಾನೆಂದು.

ಡೈಲಿನಲ್ಲಿ ಇಣುಕಿಯೇ ನೋಡಿ ನಿರ್ಧಾರಕ್ಕೆ ಬರಬೇಕಿಲ್ಲ. ವಾಚಿನ ಬೆಲ್ಟ ನೋಡಿಯೇ ಹೇಳಬಹುದು. ಡೈಲಿನ ವಿನ್ಯಾಸ ನೋಡಿ ದೂರದಿಂದಲೇ ಹೇಳಬಹುದು. ನೂರು ಜನರಿರುವ ಗುಂಪಿನಲ್ಲಿ ಒಬ್ಬನಾದವ ರೊಲೆಕ್ಸ್ ವಾಚನ್ನು ಕಟ್ಟಿದ್ದರೆ ಅವನನ್ನು ಸುಲಭವಾಗಿ ಗುರುತಿಸಬಹುದು. ಅಷ್ಟರ ಮಟ್ಟಿಗೆ ಆ ವಾಚು ಇತರ ವಾಚುಗಳಿಗಿಂತ ಸಂಪೂರ್ಣ ಭಿನ್ನ. ಎಲ್ಲಾ ವಾಚುಗಳಂತೆ ಇದೂ ಸಹ ಟೈಮನ್ನೇ ತೋರಿಸಬಹುದು. ಆದರೆ ಅದಕ್ಕಿಂತ ಹೆಚ್ಚಿನ ಸಂತೃಪ್ತಿ ಮತ್ತು ಆತ್ಮಾಭಿಮಾನವನ್ನು ಕೊಡುವುದು ಸಹ ಅಷ್ಟೇ ನಿಜ. ಅದು ಹಣದಿಂದ ಬರುವಂಥದ್ದೇ ಅಥವಾ ರೊಲೆಕ್ಸ್ ಎಂಬ ಬ್ರಾಂಡ್ ನಿಂದ ಬರುವಂಥz ಅಥವಾ ಇವೆರಡರ ಸಮ್ಮಿಶ್ರ ಭಾವವಾ ಗೊತ್ತಿಲ್ಲ. ಆದರೆ ನೀವು ರೊಲೆಕ್ಸ್ ಕ್ಲಬ್ ಸದಸ್ಯರಾದರೆ ಅದೇ ಭಿನ್ನ ಭಾವ ಸೃಜಿಸುವುದಂತೂ ನಿಜ.

ನೀವು ಎಚ್‌ಎಂಟಿ, ಟೈಟಾನ್ ಅಥವಾ ಇನ್ನಿತರ ಬ್ರಾಂಡ್ ವಾಚುಗಳನ್ನು ಖರೀದಿಸಿದರೆ, ನೀವು ವಾಚುಗಳನ್ನಷ್ಟೇ ಖರೀದಿಸುತ್ತೀರಿ. ಅದೇ ನೀವು ರೊಲೆಕ್ಸ್ ವಾಚ್ ಖರೀದಿಸಿದರೆ ನೀವು ಒಂದು ಸಂಪ್ರದಾಯ ಅಥವಾ legacy ಯನ್ನು ಖರೀದಿಸುತ್ತೀರಿ. ರೊಲೆಕ್ಸ್‌ನ್ನು ಯಾರೂ ಒಂದು ವಾಚು ಎಂದಷ್ಟೇ ಭಾವಿಸುವುದಿಲ್ಲ, ಅದು ಅದಕ್ಕಿಂತ ಮೀರಿದ ಮೌಲ್ಯ ಮತ್ತು ಭಾವನೆಯನ್ನು ಹೊಂದಿರುತ್ತದೆ. ಆ ವಾಚನ್ನು ಖರೀದಿಸಿದರೆ ಅದು ಜೀವನದ ಕೊನೆಯ ತನಕದ ಸಂಗಾತಿಯೇ. ನಿಮ್ಮ ಸ್ಟೇಟಸ್ ಅನ್ನು ಹೆಚ್ಚಿಸುವ ಮೌಲ್ಯವರ್ಧಕ. ರೊಲೆಕ್ಸ್ ವಾಚನ್ನು ಖರೀದಿಸಿದರೆ ಅದನ್ನು ಒಂದೆಡೆ ಕಪಾಟಿನಲ್ಲಿ ಇಡು ವಂತಿಲ್ಲ. ಸದಾ ಕಟ್ಟಿಕೊಳ್ಳಬೇಕು. ಇಲ್ಲದಿದ್ದರೆ ನಿಂತುಹೋಗುತ್ತದೆ. ಇದರ ಉದ್ದೇಶ ಇಷ್ಟೇ. ಅದು ಯಾವತ್ತೂ ನಿಮ್ಮ ಮೈಮೇಲಿರಬೇಕು. ಸದಾ ನಿಮ್ಮಲ್ಲಿ ಒಂದು ಉತ್ತಮ ಭಾವನೆ ಮೂಡಿಸುವಂತಿರಬೇಕು.

ನಿಮ್ಮಲ್ಲಿ ಒಂದು sense of pride (ಬೀಗು ಭಾವ) ತೇಲುತ್ತಿರಬೇಕು. ಕೆಲವರು ರಾತ್ರಿ ಮಲಗುವಾಗಲೂ ಈ ವಾಚನ್ನು ಕಟ್ಟಿಕೊಂಡಿರುತ್ತಾರೆ. ನಿದ್ದೆಯಲ್ಲಿ ವಾಚಿಗೆ ತರಚಿದ ಗಾಯಗಳಾಗಬಹುದೆಂದು ಕೆಲವರು ಇದನ್ನು ಬಿಚ್ಚಿಡುವುದುಂಟು. ಸುಮಾರು ಎಂಟು ತಾಸುಗಳ ಕಾಲ ಬಿಚ್ಚಿಟ್ಟರೂ ಅದು ನಿಂತು ಹೋಗುವುದಿಲ್ಲ. ಡೆಕ್ಕನ್ ಏರ್ ವೇಸ್ ಸಂಸ್ಥಾಪಕ ಕ್ಯಾಪ್ಟನ್ ಜಿ. ಆರ್. ಗೋಪಿನಾಥ್ ಅವರು ಕಳೆದ ಇಪ್ಪತ್ತು ವರ್ಷಗಳಿಗಿಂತ ಹೆಚ್ಚು ಕಾಲದಿಂದ ರೊಲೆಕ್ಸ್ ವಾಚನ್ನು ಧರಿಸುತ್ತಿದ್ದಾರೆ.

ಅವರು ಅದನ್ನು ಬಿಚ್ಚಿಟ್ಟಿದ್ದು ಕಡಿಮೆ. ಪ್ರಗತಿಪರ ರೈತ ಎಂಬ ಕಾರಣಕ್ಕೆ ರೊಲೆಕ್ಸ್ ವಾಚ್ ಕಂಪನಿ ಅವರಿಗೆ ಬಹುಮಾನವಾಗಿ ಅದನ್ನು ನೀಡಿದೆ. ಆ ವಾಚಿನ ಹಿಂಬದಿಗೆ ಅವರ ಹೆಸರನ್ನು ಕೆತ್ತಲಾಗಿದೆ. ಅವರ ಪಾಲಿಗೆ ಇದು ಬಹಳ ಅಪರೂಪದ ಕಾಣಿಕೆಯೇ. ‘ಆಭರಣಗಳ ಹೊರತಾಗಿ ನೀವು ಯಾವುದೇ ಉಪಕರಣವನ್ನೂ, ನಿಮ್ಮ ಮೈಮೇಲೆ ಇಟ್ಟುಕೊಳ್ಳುವುದಿಲ್ಲ. ಕೆಲವು ಉಪಕರಣಗಳನ್ನು ಬಳಸಿ ಇಟ್ಟುಬಿಡುತ್ತೀರಿ. ಆದರೆ ವಾಚು ಹಾಗಲ್ಲ. ಅದನ್ನು ದಿನದ ಬಹಳ ಹೊತ್ತು ಧರಿಸಿರುತ್ತೀರಿ. ವಾಚಿಗೆ ಅಂಥ ವಿಶೇಷ ಸ್ಥಾನಮಾನ. ಅಲ್ಲದೇ ಅದನ್ನು ಪದೇ ಪದೆ ನೋಡುತ್ತಿರುತ್ತೀರಿ. ನೀವು ಧರಿಸಿದ ಆಭರಣ ಗಳನ್ನು ಪದೇ ಪದೇ ನೋಡುವುದಿಲ್ಲ. ಹೀಗಾಗಿ ನಿಮ್ಮಲ್ಲಿ ಸದಾ ಒಂದು ಉತ್ತಮ ಭಾವನೆ ಮೂಡಬೇಕೆಂದರೆ, ನಿಮ್ಮ ಬಗ್ಗೆ ನಿಮಗೆ ಖುಷಿ ಆಗಬೇಕೆಂದರೆ, ಉತ್ತಮವಾದ ವಾಚನ್ನು ಧರಿಸಬೇಕು. ಅದಕ್ಕಾಗಿ ರೊಲೆಕ್ಸ್ ಬಹಳ ಸಂಶೋಧನೆ ಮಾಡಿ ಶ್ರೇಷ್ಠ ದರ್ಜೆ ವಾಚುಗಳನ್ನು ನಿರ್ಮಿಸಿದೆ.

ಅದನ್ನು ಧರಿಸಿದ ನಂತರ ಬಿಚ್ಚಿಡಲು ಮನಸ್ಸಾಗಬಾರದು. ಅದರ ಮಾಟ ಹಾಗಿರಬೇಕು. ಕಾರಣ ಮನುಷ್ಯ ಸದಾ ತನ್ನ ಮೈಮೇಲೆ ಧರಿಸಿರುವ ಉಪಕರಣವೆಂದರೆ ವಾಚು ಮಾತ್ರ. ಈ ಎ ಅಂಶಗಳನ್ನು ಗಮನಿಸಿ ನಾವು ವಾಚನ್ನು ಬಹಳ ಶ್ರದ್ಧೆಯಿಂದ ನಿರ್ಮಿಸುತ್ತೇವೆ’ ಎಂದು ರೊಲೆಕ್ಸ್ ಕಂಪನಿ ಹೇಳಿಕೊಂಡಿದೆ. ಎಲ್ಲ ರೊಲೆಕ್ಸ್ ವಾಚುಗಳು ಹ್ಯಾಂಡ್ ಮೇಡ್. ಒಂದೊಂದು ವಾಚುಗಳನ್ನು ಮಾಡಲು ವರ್ಷಗಟ್ಟಲೆ ಸಮಯ ಹಿಡಿಯುವು ದುಂಟು. ಪ್ರತಿ ವಾಚನ್ನೂ ಸ್ವಿಟ್ಜರ್ ಲ್ಯಾಂಡಿನಲ್ಲಿ ಸಾಕಷ್ಟು ಪರಿಶ್ರಮ, ಪರಿಣತಿಯಿಂದ ತಯಾರಿಸಲಾಗುತ್ತದೆ. ಒಂದು ವಾಚು ಮಾರುಕಟ್ಟೆಗೆ ಬರುವಾಗ ಎಂಬತ್ತೆ
ರಡು ಗುಣಮಟ್ಟ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು.

ಅದಾದ ನಂತರವೇ ಅದನ್ನು ಉತ್ಪಾದನಾ ಘಟಕದಿಂದ ಮಾರುಕಟ್ಟೆಗೆ ಕಳಿಸಲಾಗುತ್ತದೆ. ಹೀಗಾಗಿ ದೋಷಪೂರಿತ ವಾಚು ಮಾರುಕಟ್ಟೆಗೆ ಬರಲು ಸಾಧ್ಯವೇ ಇಲ್ಲ. ವಾಚಿಗೆ ಬಳಸಲಾಗುವ ಎ ಬಿಡಿ ಭಾಗಗಳನ್ನು ಇನ್ -ಹೌಸ್ ತಯಾರಿಸಲಾಗುತ್ತದೆ. ಆನಂತರ ಅವೆಲ್ಲವನ್ನೂ ಕೈಯಿಂದಲೇ (ಅಸೇಂಬಲ್) ಜೋಡಿಸಲಾಗುತ್ತದೆ. ಈ ಕಾರಣದಿಂದ ಪ್ರತಿ ವಾಚನ್ನು ಸ್ವತಂತ್ರವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಗ್ರಾಹಕರು ಬಯಸಿದ ವಿನ್ಯಾಸವನ್ನು ಸಹ ಮಾಡಿಕೊಡುವ ಸಂಪ್ರದಾಯವಿದೆ.

ಇರಾಕ್ ಅಧ್ಯಕ್ಷ ಸದ್ದಾಮ್ ಹುಸೇನ್ ರೊಲೆಕ್ಸ್ ವಾಚುಗಳ ಲೋಲುಪನಾಗಿದ್ದ. ತನ್ನಲ್ಲಿರುವ ರೊಲೆಕ್ಸ್ ವಾಚು ಬೇರೆ ಯಾರಲ್ಲೂ ಇರಕೂಡದೆಂದು ತಾಕೀತು ಮಾಡುತ್ತಿದ್ದ. ಇದಕ್ಕೆ ‘ಕನೈಷರ್ಸ್ ಕಲೆಕ್ಷನ್’ ಅಂತಾರೆ. ಆತನಿಗಾಗಿ ರೊಲೆಕ್ಸ್ ಕಂಪನಿ ವಾಚುಗಳನ್ನು ತಯಾರಿಸುತ್ತಿತ್ತು. ಆತ ಇಷ್ಟಪಟ್ಟ ಒಂದೇ ಒಂದು ಪೀಸನ್ನು ತಯಾರಿಸುತ್ತಿತ್ತು. ಅದಾಗಿ ಐದು ವರ್ಷಗಳ ನಂತರ ಸzಮ್ ಕಲೆಕ್ಷನ್ ಎಂದು ಕಂಪನಿ ಬಿಡುಗಡೆ ಮಾಡುತ್ತಿತ್ತು. ಆತನ ಮರಣದ ನಂತರ ಆತ ಇಷ್ಟಪಟ್ಟಿದ್ದ ಕೆಲವೇ ಕೆಲವು (ಲಿಮಿಟೆಡ್ ಎಡಿಷನ್) ವಾಚುಗಳನ್ನು ಬಿಡುಗಡೆ ಮಾಡಿತು. ಮಷೀನುಗಳಿಂದ ತಯಾರಿಸುವು ದಾದರೆ ಇವೆಲ್ಲ ಸಾಧ್ಯವಿಲ್ಲ. ಆದರೆ ಇಂದಿಗೂ ರೊಲೆಕ್ಸ್ ಕಂಪನಿ ಯಂತ್ರಗಳ ಮೊರೆ ಹೋಗಿಲ್ಲ.

ರೊಲೆಕ್ಸ್ ಕಂಪನಿ ವೈಶಿಷ್ಟ್ಯ ಅಂದರೆ, ವಾಚ್ ತಯಾರಿಕೆ ಯಲ್ಲಿ ಬಳಸುವ ಪ್ರತಿಯೊಂದೂ ಬಿಡಿ ಭಾಗ ಅಥವಾ ವಸ್ತುವೂ ಕನಿಷ್ಠ ನೂರು ವರ್ಷ ಬಾಳಿಕೆ ಬರಬೇಕು, ಆ ರೀತಿಯ ಗುಣಮಟ್ಟವನ್ನು ಕಾಪಾಡಿಕೊಂಡಿದೆ. ಅದಕ್ಕಾಗಿ ವಿಶ್ವದಲ್ಲಿಯೇ ಅತಿ ದುಬಾರಿಯಾದ ೯೦೪ ಎಲ್ ಸ್ಟೈನ್‌ಲೆಸ್ ಸ್ಟೀಲನ್ನು ಬಳಸುತ್ತದೆ. ಈ ಸ್ಟೀಲ್ ಯಾವುದೇ ಕಾರಣಕ್ಕೂ ತುಕ್ಕು ಹಿಡಿಯುವುದಿಲ್ಲ, ಸವೆಯುವುದಿಲ್ಲ ಮತ್ತು ತೀವ್ರ ಉಷ್ಣಕ್ಕೆ ಸ್ವಲ್ಪವೂ ಕರಗುವುದಿಲ್ಲ. ಇದರಿಂದ ಸಮಯ ವ್ಯತ್ಯಾಸ ಆಗುವುದಿಲ್ಲ. ಈ ವಾಚನ್ನು ವರ್ಷಗಟ್ಟಲೆ ಸಮುದ್ರದ ನೀರಿನಲ್ಲಿ ಮುಳುಗಿಸಿಟ್ಟರೂ ಏನೂ ಆಗುವುದಿಲ್ಲ. ವಾಚಿಗೆ ಬಳಸಲಾಗುವ ಬಂಗಾರವನ್ನು ಬೇರೆಡೆಯಿಂದ ತರುವುದಿಲ್ಲ. ಅದನ್ನು ತನ್ನ ಎರಕಗಾರದಲ್ಲಿಯೇ ತಯಾರಿಸುತ್ತದೆ. ಜಗತ್ತಿ ನಲ್ಲಿ ರೊಲೆಕ್ಸ್ ಮಾತ್ರ ತನ್ನ ಬಂಗಾರವನ್ನು ತಾನೇ ತಯಾರಿಸುತ್ತದೆ.

ಒಮ್ಮೆ ತಯಾರಾದ ವಾಚು ಯಾವುದೇ ಕಾರಣಕ್ಕೂ ದೋಷಪೂರಿತವಾಗಿರಲು ಸಾಧ್ಯವೇ ಇಲ್ಲ. ಖರೀದಿಸಿದ ನಂತರ ಮಷೀನಿನಲ್ಲಿ ದೋಷ ಕಂಡು ಬಂದರೆ ಅದನ್ನು ರಿಪೇರಿ ಮಾಡಿಕೊಡುವ ಬದಲು ಹೊಸ ವಾಚನ್ನೇ ಕೊಡಲಾಗುತ್ತದೆ. ಹತ್ತು ಲಕ್ಷ ವಾಚುಗಳ ಪೈಕಿ ಒಂದು ವಾಚಿನಲ್ಲಿ ದೋಷ ಕಾಣಿಸಿ ಕೊಳ್ಳಬಹುದು. ಇದನ್ನೂ ಕಂಪನಿ ಗಂಭೀರವಾಗಿ ಪರಿಗಣಿಸುತ್ತದೆ. ಅದಕ್ಕೆ ಕಾರಣರಾದ ಸಿಬ್ಬಂದಿ ಮೇಲೆ ಕ್ರಮ ಜರುಗಿಸುತ್ತದೆ. ರೊಲೆಕ್ಸ್ ವಾಚಿನ ಕ್ರಿಸ್ಟಲ್ ಗಾಜಿನ ಮೇಲೆ ಒಂದು ಹನಿ ನೀರನ್ನಿಟ್ಟಾಗ, ಅದರ ಆಪ್ಟಿಕ್ ಸೆನ್ಸರ್ ಘನೀಕರಣ (condensation) ಸೂಚನೆಯನ್ನು ನೀಡಿದರೂ ವಾಚನ್ನು
ದೋಷಪೂರಿತ ಎಂದು ಭಾವಿಸಲಾಗುತ್ತದೆ.

ಒಂದು ವಾಚನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಯಾವುದೇ ಕಾಲಮಿತಿ ಇಲ್ಲ. ಸಿಬ್ಬಂದಿ ಮೇಲೆ ಅನಗತ್ಯ ಒತ್ತಡ ಹೇರಿದರೆ ಗುಣಮಟ್ಟ ಕೆಡಿಸಬಹುದೆಂದು ಅವರಿಗೆ ಸಾಕಷ್ಟು ಕಾಲಾವಕಾಶ ನೀಡಲಾಗುತ್ತದೆ. ಒಂದು ವಾಚು ನಿರ್ಮಾಣಕ್ಕೆ ವರ್ಷಗಟ್ಟಲೆ ಸಮಯ ತೆಗೆದುಕೊಳ್ಳುವುದು ಆ
ಕಾರಣಕ್ಕೆ. ಪರಿಣತಿ, ನೈಪುಣ್ಯ, ಅತಿ ಶ್ರೇಷ್ಠ ಗುಣಮಟ್ಟ, ಪರಿ ಪೂರ್ಣತೆ, ಗರಿಷ್ಠ ಗ್ರಾಹಕ ಸಂತೃಪ್ತಿ ಕಾಪಾಡುವುದು ಸಾಧ್ಯವಾಗಿದ್ದರೆ ಅದಕ್ಕೆ ಕಾರಣ ಇವೇ.

ಖ್ಯಾತ ಮುಳುಗು ತಜ್ಞ ಜೇಮ್ಸ ಕ್ಯಾಮೆರೋನ್ ಡೀಪ್ ಸ್ತ್ರೀ ಚಾಲೆಂಜ್‌ನಲ್ಲಿ ಭಾಗವಹಿಸಿದಾಗ ಆತ ರೊಲೆಕ್ಸ್ ವಾಚನ್ನು ಧರಿಸಿದ್ದ. ಆತ ಸುಮಾರು ಮೂವತ್ತೊಂಬತ್ತು ಸಾವಿರ ಅಡಿ (ಹನ್ನೆರಡು ಸಾವಿರ ಮೀಟರ್) ಆಳದವರೆಗೆ ಮುಳುಗು ಹಾಕಿ ಸುಮಾರು ಏಳು ಗಂಟೆಗಳ ಕಾಲ ಈಜಿದ. ಆ ಸಂದರ್ಭ ದಲ್ಲಿ ಆತ ರೊಲೆಕ್ಸ್ ವಾಚನ್ನು ಧರಿಸಿದ್ದ. ರೊಲೆಕ್ಸ್ ತಂತ್ರಜ್ಞಾನಕ್ಕೆ ಇದು ಅತ್ಯುತ್ತಮ ನಿದರ್ಶನ. ವಾಚು ಅತ್ಯಂತ ಕರಾರುವಾಕ್ಕಾಗಿ ಕಾರ್ಯ ನಿರ್ವಹಿಸಿತು. ಸಾಮಾನ್ಯ ವಾಚುಗಳು ಮುನ್ನೂರು ಅಡಿ ಆಳದವರೆಗಿನ ಒತ್ತಡವನ್ನು ತಾಳಿದರೆ, ರೊಲೆಕ್ಸ್ ನಲವತ್ತು ಸಾವಿರ ಅಡಿ ಆಳದ ಒತ್ತಡವನ್ನು ತಾಳುತ್ತದೆ. ಅಂದರೆ ರೊಲೆಕ್ಸ್ ವಾಚಿನ ಗಟ್ಟಿಮುಟ್ಟುತನ ಯಾವ ದರ್ಜೆಯದಿರಬಹುದು ಎಂಬುದನ್ನು ಊಹಿಸಬಹುದು.

ಖ್ಯಾತ ಟೆನಿಸ್ ಆಟಗಾರ ರೋಜರ್ ಫೆಡರರ್ ನೋಡಿದಾಗೆಲ್ಲ ನನ್ನ ಕಣ್ಣ ಮುಂದೆ ಬರುವುದು ರೊಲೆಕ್ಸ್ ವಾಚ್. ರೊಲೆಕ್ಸ್ ವಾಚನ್ನು ನೋಡಿದಾಗ ಆತನೂ ನೆನಪಾಗುತ್ತಾನೆ. ಅಷ್ಟರಮಟ್ಟಿಗೆ ಅವರಿಬ್ಬರ ಇಮೇಜ್ ಒಂದರಂದು ಮಿಳಿತವಾಗಿದೆ. ಸುಮಾರು ಇಪ್ಪತ್ತು ಅಂತಾರಾಷ್ಟ್ರೀಯ ಟೈಟಲ್ಲು ಗಳನ್ನು (Grand Slam) ಮುಡಿಗೇರಿಸಿಕೊಂಡಿರುವ ಆತ ಕಳೆದ ಹನ್ನೆರಡು ವರ್ಷಗಳಿಂದ ರೊಲೆಕ್ಸ್ ಬ್ರಾಂಡ್ ಅಂಬಾಸಿಡರ್. ಹತ್ತು ವರ್ಷಗಳ ಕಾಲ ಆತ ಬ್ರಾಂಡ್ ಅಂಬಾಸಿಡರ್ ಆಗಿ ಕರಾರಿಗೆ ಒಪ್ಪಿದಾಗ ರೊಲೆಕ್ಸ್ ಕಂಪನಿ ಅವನಿಗೆ ೧೫೦ ಲಕ್ಷ ಡಾಲರ್ ಹಣವನ್ನು ನೀಡಿತ್ತು. ಸಾಮಾನ್ಯವಾಗಿ ಯಾವ ಕಂಪನಿಯೂ ಕ್ರೀಡಾಪಟುವಿನ ಜತೆ ಹತ್ತು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ. ಮುಂದಿನ ವರ್ಷವೇ ಆತ ಸೋತು ಮೂಲೆ ಗುಂಪಾದರೆ ಎಂಬ ಕಾರಣಕ್ಕೆ ಯಾರೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ.

ಆದರೆ ಫೆಡೆರರ್ ಅದೃಷ್ಟ ಚೆನ್ನಾಗಿದೆ ಅಂತ ಕಾಣುತ್ತದೆ. ರೊಲೆಕ್ಸ್ ಬ್ರಾಂಡ್ ಅಂಬಾಸಿಡರ್ ಆದ ನಂತರ ಆತನ ಗೆಲುವಿನ ನಾಗಾಲೋಟ ಮುಂದುವರಿ
ಯುತ್ತಲೇ ಹೋಗುತ್ತಿದೆ. ಫೆಡೆರರ್ ಮೈದಾನಕ್ಕೆ ಇಳಿದರೆ ಸಾಕು, ಆತ ಯಾವ ಮಾಡೆಲ್ ರೊಲೆಕ್ಸ್ ಧರಿಸಿ ಆಡುತ್ತಾನೆ ಎಂಬ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೊಲೆಕ್ಸ್ ಪ್ರಿಯರು ತಲೆ ಕೆಡಿಸಿಕೊಳ್ಳುತ್ತಾರೆ.

ಆತ ಪಂದ್ಯ ಆಡುವಾಗ ಒಂದು ವಾಚನ್ನು ಕಟ್ಟಿದರೆ, ಪಂದ್ಯ ಗೆದ್ದು ಟ್ರಾಫಿಯನ್ನು ಎತ್ತುವಾಗ ಮತ್ತೊಂದು ವಾಚನ್ನು ಕಟ್ಟುತ್ತಾನೆ. ಪ್ರತಿ ಸಲ ಫೆಡೆರರ್ ಮೈದಾನಕ್ಕೆ ಇಳಿದಾಗಲೂ ಈ ವಾಚಿನ ಮಾರಾಟ ಜಾಸ್ತಿ ಆಗುತ್ತದೆ. ಅದಕ್ಕಿಂತ ದೊಡ್ಡ ಬ್ಯುಸಿನೆಸ್ ಅಂದ್ರೆ ಫೆಡೆರರ್ ಕಟ್ಟಿದ ವಾಚಿನ ಹರಾಜು.
ವಿಂಬಲ್ಡನ್ ಪಂದ್ಯಾವಳಿಯಲ್ಲಿ ಆತ ಕಟ್ಟಿದ ರೊಲೆಕ್ಸ್ ವಾಚನ್ನು ಹರಾಜು ಹಾಕಿದರೆ, ಆ ವಾಚಿನ ಮೂಲ ಬೆಲೆಗಿಂತ ಮುನ್ನೂರು- ನಾನೂರು ಪಟ್ಟು ಹೆಚ್ಚಿನ ಬೆಲೆಗೆ ಅದು ಹರಾಜಾಗುತ್ತದೆ. ಆ ಹಣವೆಲ್ಲ ಚಾರಿಟಿಗೆ ನೀಡಲಾಗುತ್ತದೆ ಎಂಬುದು ಬೇರೆ ಮಾತು. ಈ ವಾಚಿನ ಬಗ್ಗೆ ಅಂಥ ಮೋಹ, ಹುಚ್ಚು ಬೆಳೆಸಿಕೊಂಡವರಿದ್ದಾರೆ.

ಕೆಲವು ವರ್ಷಗಳ ಹಿಂದೆ ನಾನು ಝುರಿಕ್‌ನಲ್ಲಿರುವ ಬೆಯೆರ್ ವಾಚ್ ಅಂಡ್ ಕ್ಲಾಕ್ ಮ್ಯೂಸಿಯಂಗೆ ಹೋಗಿದ್ದೆ. ಅಲ್ಲಿ ಸರ್ ಎಡಮಂಡ್ ಹಿಲರಿ ಮತ್ತು ತೇನ್‌ಸಿಂಗ್ ಹಿಮಾಲಯ ಪರ್ವತವನ್ನು ಏರುವಾಗ ಕಟ್ಟಿದ ರೊಲೆಕ್ಸ್ ವಾಚನ್ನು ನೋಡಿ ಆಶ್ಚರ್ಯವಾಯಿತು. ಜಗತ್ತಿನಲ್ಲಿಯೇ ಅತಿ ಎತ್ತರದ
(ಇಪ್ಪತ್ತೊಂಬತ್ತು ಸಾವಿರ ಅಡಿ) ಪರ್ವತವನ್ನು ಏರುವಾಗ ರೊಲೆಕ್ಸ್ ಕಂಪನಿ ಅವರಿಗೆ ಈ ವಾಚನ್ನು ನೀಡಿತ್ತು. ಅಷ್ಟು ಎತ್ತರದ ಪ್ರದೇಶದಲ್ಲೂ ಈ ವಾಚು ಸಮರ್ಪಕವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಸಾಬೀತುಪಡಿಸುವ ದೃಷ್ಟಿಯಿಂದ ಆ ವಾಚನ್ನು ನೀಡಲಾಗಿತ್ತು. ಕೆಲವು ವರ್ಷಗಳ ನಂತರ ತೇನ್ ಸಿಂಗನಿಗೆ ಹಣಕಾಸಿನ ತೊಂದರೆ ಎದುರಾದಾಗ, ಆತ ಈ ವಾಚನ್ನು ಮಾರಲು ಮುಂದಾದ. ಸಾಮಾನ್ಯವಾಗಿ ಗಣ್ಯ ರೊಲೆಕ್ಸ್ ವಾರಸುದಾರರು ವಾಚನ್ನು ಮಾರುತ್ತಾರೆಂಬ ಸುದ್ದಿ ಗೊತ್ತಾದರೆ ಕಂಪನಿಯೇ ಖರೀದಿಸುತ್ತದೆ. ತೇನ್‌ಸಿಂಗನ ವಾಚನ್ನು ಕಂಪನಿಯೇ ಖರೀದಿಸಿ ಮ್ಯೂಸಿಯಂನಲ್ಲಿ ಇಟ್ಟಿದೆ.

ಈ ವಾಚಿಗೆ ಇಂದು ಬೆಲೆ ಕಟ್ಟಲಾಗದು. ನನ್ನ ಸ್ನೇಹಿತರೊಬ್ಬರಿದ್ದಾರೆ. ಅವರ ಬಳಿ ಕನಿಷ್ಠ ಇಪ್ಪತ್ತಾದರೂ ರೊಲೆಕ್ಸ್ ವಾಚುಗಳಿರಬಹುದು. ಈ ಕಾರಣ ಕ್ಕಾಗಿಯೇ ಅವರ ಹೆಸರನ್ನು ಹೇಳಿಲ್ಲ. ಏಕಕಾಲದಲ್ಲಿ ಅವರು ಕಟ್ಟುವುದು ಒಂದೇ ವಾಚಾದರೂ ಉಳಿದ ವಾಚುಗಳನ್ನು ವಿಶೇಷ ತಿರುಗಣೆಯ
ಮೇಲಿಟ್ಟು, ಅವು ನಿಲ್ಲದಂತೆ ಕಾಳಜಿ ವಹಿಸಿದ್ದಾರೆ. ನಿಂತು ಹೋದ ರೊಲೆಕ್ಸ್ ವಾಚನ್ನು ನೋಡಲಾಗುವುದಿಲ್ಲ ಎನ್ನುವ ಅವರು ನಿತ್ಯವೂ ಅವೆಲ್ಲ ವನ್ನೂ ಒರೆಸಿ ಅತೀವ ಕಾಳಜಿ ಮೆರೆಯುತ್ತಾರೆ. ಈ ಜಗತ್ತಿನ ಅದ್ಭುತ ಸೃಷ್ಟಿಗಳಲ್ಲಿ ರೊಲೆಕ್ಸ್ ವಾಚಿಗೆ ಒಂದನೇ ಸ್ಥಾನ ಎಂಬುದು ಅವರ ಸಿಗ್ನೇಚರ್ ಸ್ಟೇಟ್ಮೆಂಟ್.

ಕಾರಿನಲ್ಲಿ ಬೆಂಜ್, ಆಡಿಯನ್ನು ಮೀರಿಸಿದ ಕಾರುಗಳಿರಬಹುದು. ಆದರೆ ಕಾರೆಂದರೆ ಬೆಂಜ್ ಎನ್ನುವ ಅಭಿಪ್ರಾಯ ಹಲವರದ್ದು. ಇದೇ ಮಾತು ರೊಲೆಕ್ಸ್‌ಗೂ ಅನ್ವಯ. ಅದೇನೇ ಇರಲಿ, ಪಕ್ಕದವರನ್ನು ಕೇಳಿದರೂ ಟೈಮ್ ಹೇಳುತ್ತಾರೆ. ಸಮಯ ತಿಳಿಯಲು ವಾಚನ್ನೇ ಕಟ್ಟಬೇಕಿಲ್ಲ. ಆದರೆ ರೊಲೆಕ್ಸ್
ಕಟ್ಟಿದರೆ ಪಕ್ಕದವರು ಸಹ ನಿಮ್ಮನ್ನು ದಿಟ್ಟಿಸದೇ ಹೋಗುವುದಿಲ್ಲ.