ತನ್ನಿಮಿತ್ತ
ಸಂಗಮೇಶ ಆರ್.ನಿರಾಣಿ
ನೀರಾವರಿ ತಜ್ಞ, ರೈತಪರ ಹೋರಾಟಗಾರ, ಇತಿಹಾಸ ಸಂಶೋಧಕ, ಸಾಹಿತಿ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರಿಗೆ ಈಗ
ಎಂಬತ್ತರ ಸಂಭ್ರಮ. ವಯಸ್ಸು ಕೆಲವರಿಗೆ ಬರೀ ಸಂಖ್ಯೆ ಎಂದು ಹೇಳುತ್ತಾರೆ. ಆ ಮಾತಿಗೆ ಸಾಕ್ಷಿರೂಪದಂತಿರುವ ಅವರು ತುಂಬ ಉತ್ಸಾಹದಿಂದ ನಳನಳಿಸುತ್ತಿದ್ದಾರೆ.
ಕೆಲವು ಜನರು ತಾವು ಇರುವುದಕ್ಕಿಂತ ಹೆಚ್ಚು ಕಾಣುತ್ತಾರೆ. ಇನ್ನು ಕೆಲವರು ತಾವು ಕಾಣವುದ ಕ್ಕಿಂತಲೂ ಹೆಚ್ಚು ಇರುತ್ತಾರೆ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಈ ದ್ವಿತೀಯ ವರ್ಗಕ್ಕೆ ಸೇರಿದ ಅದ್ವಿತೀಯರು. ಕರ್ನಾಟಕದ ನೀರು, ನೀರಾವರಿ, ನದಿಗಳ ಬಗ್ಗೆ ಅವರಷ್ಟು ನಿಖರವಾಗಿ ಮಾತನಾಡುವವರು ಮತ್ತೊಬ್ಬರಿಲ್ಲ. ಯಾವುದೇ ಪಕ್ಷದ ಸರಕಾರ ಇರಲಿ, ಯಾರೇ ನೀರಾವರಿ
ಮಂತ್ರಿಯಾಗಿರಲಿ, ನೀರಿನ ಹಂಚಿಕೆ ವ್ಯಾಜ್ಯ ಹುಟ್ಟಿಕೊಂಡಾಗ ಕುಲಕರ್ಣಿಯವರ ಮಾರ್ಗದರ್ಶನ ಪಡೆಯುವುದು ಅನಿವಾರ್ಯ ಮತ್ತು ಅವಶ್ಯಕ. ಕುಲಕರ್ಣಿಯವರ ಬದುಕು ಒಂದು ಸೂರ್ತಿಯ ಕಥೆ. ಬರೀ ಮ್ಯಾಟ್ರಿಕ್ ಪರೀಕ್ಷೆ ಪಾಸಾಗಿ ‘ತಂತಿ ಮಾಸ್ತರ’
(Telegram Assistant) ಆಗಿದ್ದ ಅವರು ಪದವಿ ಕಾಲೇಜು ಪ್ರಾಚಾರ್ಯರಾಗುತ್ತಾರೆ.
ವಿಶ್ವವಿದ್ಯಾಲಯಗಳ ಪಿ.ಎಚ್.ಡಿ. ವಿದ್ಯಾರ್ಥಿಗಳಿಗೆ ಗೈಡ್ ಆಗುತ್ತಾರೆ. ಇತಿಹಾಸ ಸಂಶೋಧನೆಗೆ ಸರಕಾರ ರಚಿಸಿದ ಅನೇಕ ಸಮಿತಿ ಗಳಿಗೆ ಅಧ್ಯಕ್ಷ- ನಿರ್ದೇಶಕರಾಗುತ್ತಾರೆ. ಅವರು ನಿಜವಾದ ಅರ್ಥದಲ್ಲಿ ಓದಿ, ಬ್ರಾಹ್ಮಣ ಆದವರು. ಅವರ ಜ್ಞಾನದ ವಿಸ್ತಾರ, ಸ್ಮರಣ ಶಕ್ತಿ ಮತ್ತು ಅವರ ಕ್ರಿಯಾಶೀಲತೆ ನಿಜಕ್ಕೂ ಮೆಚ್ಚುವಂತದ್ದು.
ಹುಟ್ಟೂರಿನ ಕಾಳಜಿ ನೀರಾವರಿ ಹೋರಾಟಗಾರ ರನ್ನಾಗಿಸಿತು. ಹಿರಿಯರಾದ ಕೃಷ್ಣ ಕೊಲ್ಹಾರ ಕುಲಕರ್ಣಿಯವರ ಬಗ್ಗೆ ನನಗೆ ಯಾಕಿಷ್ಟು ಪ್ರೀತಿಯೆಂದರೆ ಕೃಷ್ಣೆಯ ಮಡಿಲೇ ನಮ್ಮಿಬ್ಬರಿಗೂ ಬಾಲ್ಯದಲ್ಲಿ ತೊಟ್ಟಿಲಾಗಿತ್ತು. ಅವರ ಹುಟ್ಟೂರು ಕೊಲ್ಹಾರ ಹಾಗೂ ನನ್ನದು ಹಂಚಿನಾಳ ಎಂಬ ಪುಟ್ಟ ಗ್ರಾಮ. ಈ ಎರಡು ಹಳ್ಳಿಗಳು ಆಲಮಟ್ಟಿ ಜಲಾಶಯ ನಿರ್ಮಾಣದ ಅಬ್ಬರದಲ್ಲಿ ಮುಳುಗಿ ಹೋಗಿವೆ. ಒಂದು ಅರ್ಥದಲ್ಲಿ ನಾವಿಬ್ಬರೂ ಸಮಾನ ದುಃಖಿಗಳು. ನಾವಿಬ್ಬರೂ ನದಿ ಮತ್ತು ನೀರು ಆರಾಧಿಸುವು ದಕ್ಕೂ ಇದು ಕಾರಣವಾಗಿರಬಹುದು.
ಮುಳುಗಡೆ ಸಂಕಷ್ಟದಿಂದ ತೊಂದರೆಗೆ ಸಿಲುಕಿದ ತಮ್ಮ ಹುಟ್ಟೂರು ಕೊಲ್ಹಾರದ ಜನತೆಗೆ ನೆರವಾಗಬೇಕು ಎಂದು ತರುಣ ರಾಗಿದ್ದ ಕುಲಕರ್ಣಿ ಅವರು ಹೋರಾಟಕ್ಕಿಳಿಯುತ್ತಾರೆ. ಇಡೀ ಯೋಜನೆಯನ್ನು ಅಭ್ಯಸಿಸಿ, ಸತ್ಯಾ ಸತ್ಯತೆಯನ್ನು ಹೊರತೆಗೆದರು. ಈ ಹೋರಾಟ ಹಾಗೂ ಪರಿಶ್ರಮವೇ ಮುಂದಿನ ದಿನಗಳಲ್ಲಿ ಕರ್ನಾಟಕ ನದಿಗಳು ಮತ್ತು ನೀರಾವರಿ ಯೋಜನೆಗಳ ಬಗ್ಗೆ ಅಧ್ಯ ಯನ ಮಾಡಿ ಪುಸ್ತಕ ಬರೆಯಲು ಸಹಕಾರಿ ಯಾಯಿತು.
ಯು.ಕೆ.ಪಿ-1ರಲ್ಲಿ 1984ರಷ್ಟು ಹಿಂದಿನ ಬೆಲೆ ಜಮೀನಿಗೆ ಪಾವತಿಯಾಗಿತ್ತು. ಮುಳುಗಡೆ ಮನೆಗಳಿಗೆ ಬೇರೆ ನೀವೇಶನಗಳನ್ನು ಹಂಚಿರಲಿಲ್ಲ. ಸರಕಾರದ ನಿರ್ಲಕ್ಷ್ಯ, ದಲ್ಲಾಳಿಗಳ ಹಾವಳಿ, ಭ್ರಷ್ಟಾಚಾರ ಎಲ್ಲವನ್ನೂ ಅಧ್ಯಯನ ಮಾಡಿ ತ್ರಿಶಂಕು ಸ್ಥಿತಿಯಲ್ಲಿ ಕೃಷ್ಣಾ ಯೋಜನೆ ಎಂಬ ಸಚಿತ್ರ ಲೇಖನ ಬರೆದರು. ಆ ಲೇಖನ ಬೆಳಗಾಗುವುದರಲ್ಲಿಯೇ ದೊಡ್ಡ ಆಂದೋಲನವನ್ನೆ ರೂಪಿಸಿತು. ಆಳುವ ದೊರೆಗಳನ್ನು ನಡು ರಸ್ತೆಯಲ್ಲಿ ಬೆತ್ತಲೆ ಮಾಡಿ ನಿಲ್ಲಿಸಿತು.
ಕೃಷ್ಣಾ ಮೇಲ್ದಂಡೆ ಯೋಜನೆ, ಪುನರ್ವಸತಿ ಅದ್ವಾನಗಳು, ಮುಳುಗಡೆ ಊರಿಗೆ ಒಂದೂ ಹನಿ ನೀರಿಲ್ಲ!, ಕೃಷ್ಣಾ ನೀರಿಗಾಗಿ ಮಾಡ ಬೇಕಾದ್ದೇನು?, ಸಮಾಧಿಯಿಂದ ಎದ್ದ ಮುಳುವಾಡ ಏತ ನೀರಾವರಿ ಯೋಜನೆ, ಸಮಗ್ರ ನೀರಾವರಿ ಹೋರಾಟ ಎಂದರೇನು? ಕಾವೇರಿ ಕಾವಿನಲ್ಲಿ ಭೀಮೆಯ ಕೂಗು ಮಾಯ, ಸುಪ್ರೀಂ ಕೊರ್ಟ್‌ನಲ್ಲಿ ಭೋರ್ಗರೆಯುತ್ತಿರುವ ನೀರು, ಹೀಗೆ ಹತ್ತು ಹಲವಾರು ಮಹತ್ವಪೂರ್ಣ ಲೇಖನಗಳನ್ನು ಅವರು ಬರೆದಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಮುಳುಗಡೆ, ಪುನರ್ವಸತಿ ಸಮಸ್ಯೆ – ಪರಿಹಾರಕ್ಕಾಗಿ ಕೊಲ್ಹಾರದಲ್ಲಿ ಪುನರ್ವಸತಿ ಗ್ರಾಮ ವಿಕಾಸ ಸಂಘವನ್ನು ಹುಟ್ಟು ಹಾಕಿ ಹಲವಾರು ಹೋರಾಟ ಹಾಗೂ ಕಾರ್ಯಕ್ರಮಗಳನ್ನು ರೂಪಿಸಿದರು.
1988ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಪುನರ್‌ನಿರ್ಮಾಣ ಸಮಿತಿ ಸದಸ್ಯರನ್ನಾಗಿ ಸರಕಾರ ನೇಮಿಸಿತು. ಈ ಸಂದರ್ಭದಲ್ಲಿ ಅವರು ನೀಡಿದ ಉಪಯುಕ್ತವಾದ ಸಲಹೆಗಳು ರಾಜ್ಯ, ರಾಷ್ಟ್ರ ಮಟ್ಟದ ತಜ್ಞರ ಮನ್ನಣೆಗೆ ಪಾತ್ರವಾಗಿವೆ.
ಪ್ರೊ.ಎಸ್. ಆರ್. ರೋಡೆಕರ್ ಹೇಳುವಂತೆ ಕೃಷ್ಣ ಕೊಲ್ಹಾರ ಕುಲಕರ್ಣಿಯವರು ಕೃಷಿ, ನೀರಾವರಿ ಅಧ್ಯಯನ, ಕೃಷ್ಣಾ ಕೊಳ್ಳದ ಯೋಜನೆಗಳ ಕುರಿತು ಸರಕಾರಿ ಅಧಿಕಾರಿಗಳು ನಡೆಸಿದ ಅಧ್ಯಯನಕ್ಕಿಂತ ಆಳವಾಗಿವೆ ಮತ್ತು ಅಧಿಕಾರಯುಕ್ತವಾಗಿವೆ ಎಂಬುದು ಕೃಷ್ಣ ಕೊಲ್ಹಾರ ಕುಲಕರ್ಣಿಯವರಿಗೆ ಇರುವ ಕೃಷಿ ಮತ್ತು ನೀರಾವರಿ ಕುರಿತು ಇರುವ ಆಳವಾದ ಪಾಂಡಿತ್ಯವನ್ನು ಪ್ರತಿಬಿಂಬಿ ಸುತ್ತದೆ.
ಹೈದ್ರಾಬಾದ್‌ನ ಅಡ್ಮಿಸ್ಟ್ರೇಟಿವ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾದಲ್ಲಿ ಉಪನ್ಯಾಸ ನೀಡಿ ಪುನರ್ವಸತಿ ಸಮಸ್ಯೆಯಲ್ಲಿ ಬಿಡಿಸು ವಲ್ಲಿ ಅಂತಾರಾಷ್ಟ್ರೀಯ ನೀತಿ ನಿಯಮಾವಳಿಗಳನ್ನು ತುಲನೆ ಮಾಡಿ ರಾಜ್ಯ ಹಾಗೂ ರಾಷ್ಟ್ರದಲ್ಲಿ ನಡೆದ ಪುನರ್ವಸತಿ – ಪುನರ್ ನಿರ್ಮಾಣದಲ್ಲಿ ಆದ ಲೋಪಗಳನ್ನು ಎತ್ತಿ ತೋರಿಸಿದರು.
ಮುಳವಾಡ ಏತ ನೀರಾವರಿ ಅನುಷ್ಠಾನಕ್ಕೆ ಆಗ್ರಹಿಸಿ ಜಯಪುರದಲ್ಲಿ ಉಗ್ರ ಹೋರಾಟ ನಡೆಯಿತು. ಆಗ ನಡೆದ ಸಭೆಯಲ್ಲಿ ನೀರಾವರಿ ಸಚಿವರಾಗಿದ್ದ ಮಲ್ಹಾರಿಗೌಡ ಪಾಟೀಲ ಭಾಗವಹಿಸಿದ್ದರು. ಈ ಸಭೆಯಲ್ಲಿ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರ ವಾದ ಆಲಿಸಿದ ಸಚಿವರು ನಮ್ಮ ನೀರಾವರಿ ಇಲಾಖೆಯ ಅಽಕಾರಿಗಳ ಕಿವಿ ಹಿಂಡಿ ನೀರಾವರಿಯ ಕುರಿತು ನೀವು ಪಾಠ ಮಾಡಬೇಕು ಎಂದು ಸಲಹೆ ನೀಡಿದರು.
ಭೀಮೆಗಾಗಿ ಮಿಡಿದ ಮನ: ಭೀಮಾ ನೀರು ರಕ್ಷಣಾ ರೈತ ಸಂಘದ ಮೂಲಕ ಮೂಲಭೂತ ಹಕ್ಕನ್ನು ಮುಂದೆ ಮಾಡಿ, ವಾಸ್ತವ ವನ್ನು ಸುಪ್ರಿಂಕೋರ್ಟ್ ಮುಂದೆ ಬಿಚ್ಚಿಟ್ಟು ಮಹಾರಾಷ್ಟ್ರದ ಅಧಿಕೃತ ಹಾಗೂ ಅನಧಿಕೃತ ಯೋಜನೆಗಳಿಗೆ ಭೀಮಾ ನೀರು ಬಳಕೆ ಮಾಡಿಕೊಂಡಿರುವುದನ್ನು ಅನಾವರಣಗೊಳಿಸಿ ಯಶಸ್ವಿಯಾದರು. ನೀರಿಗಾಗಿ ಕೋರ್ಟ್ ಕಟ್ಟೆ ಹತ್ತುವುದು ಹೆಮ್ಮೆಯ ವಿಷಯವಲ್ಲ. ನೀರು ಜೀವನಾಂಶ, ಅದು ಸರಿಯಾಗಿ ಪೂರೈಕೆಯಾಗಬೇಕು ಎಂಬುದು ಕುಲಕರ್ಣಿಯವರ ಆದರ್ಶ ನಿಲುವು. ಇದನ್ನು ಸರಕಾರ ಹಾಗೂ ಜನರೂ ಅರ್ಥಮಾಡಿಕೊಳ್ಳಬೇಕು.
ವಿಜಯಪುರದ ಮೇಲಿನ ಅಭಿಮಾನ: ವಿಜಯಪುರದ ಬಗ್ಗೆ ಸಾಕಷ್ಟು ಅಭಿಮಾನ ಹೊಂದಿರುವ ಅವರು ವಿಜಯಪುರ ಅಂತಾ ರಾಷ್ಟ್ರೀಯ ಪ್ರವಾಸಿ ತಾಣವಾಗಿ ಬೆಳೆಯಬೇಕೆಂಬ ಹಂಬಲದಿಂದ ಹಲವಾರು ಕಾರ್ಯಚಟುವಟಿಕೆಗಳಲ್ಲಿ ನಿರತರಾ ಗಿದ್ದಾರೆ. ವಿಜಯಪುರ ಜಿಲ್ಲಾಡಳಿತ ‘ಕೃಷ್ಣ ಕೊಲ್ಹಾರ ಕುಲಕರ್ಣಿಯವರಿಂದ ವಿಸ್ಮಯ; ಇದು ವಿಜಯಪುರ’ ಎಂಬ ಪುಸ್ತಕವನ್ನು ಬರೆಸಿ ಪ್ರಕಟಿಸಿದೆ. ಇಂಡಿಯನ್ ಕೌನ್ಸಿಲ್ ಆ- ನ್ಯೂದಿಲ್ಲಿ ವತಿಯಿಂದ ಆದಿಲ್‌ಷಾ ಕಾಲದಲ್ಲಿ ಹಿಂದೂ – ಮುಸ್ಲಿಂ ಸಂಬಂಧದ ವಿಷಯದ ಮೇಲೆ ಇಂಗ್ಲಿಷ್‌ನಲ್ಲಿ ಪ್ರಬಂಧ ಬರೆದು ಸಾದರಪಡಿಸಿದರು.
ವಿಜಯಪುರವು ಅಂತಾರಾಷ್ಟ್ರೀಯ ಖ್ಯಾತಿಯ ಅವಶೇಷಗಳನ್ನೊಳಗೊಂಡ ಪ್ರವಾಸಿ ತಾಣ. ಇದು ಸರಕಾರ ಹಾಗೂ ನಾಗರಿಕರ ನಿರ್ಲಕ್ಷ್ಯದಿಂದಾಗಿ ಅಭಿವೃದ್ಧಿಯಾಗಿಲ್ಲ. ರಾಜ್ಯ, ರಾಷ್ಟ್ರ ಪುರಾತತ್ವ ಇಲಾಖೆ ಅಧಿಕಾರಿಗಳ ಸಂಪರ್ಕ ಸಾಧಿಸಿ ಹೊಸ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಂತೆ ಮಾಡಲು ಪ್ರಯತ್ನಿಸಿದರು. ಇಂಟ್ಯಾಚ್ ಸಂಸ್ಥೆ ಮೂಲಕ ಅಪರೂಪದ ವಾಸ್ತುಶಿಲ್ಪ ವನ್ನು ಒಳಗೊಂಡ 6 ವರ್ಷ (2005-2010)ದ ಕ್ಯಾಲೆಂಡರ್ ಸಿದ್ದಪಡಿಸಿ ಪ್ರಕಟಿಸಿದರು.
ಈ ದಿನದರ್ಶಿಕೆಯನ್ನು ರಾಜ್ಯಪಾಲರು ರಾಜಭವನದಲ್ಲಿ ಸಮಾರಂಭ ಆಯೋಜಿಸಿ ಬಿಡುಗಡೆ ಮಾಡಿದ್ದು ಅಭಿಮಾನದ ಸಂಗತಿ. 1997-2000 ಅವಧಿಯಲ್ಲಿ ಅವರು ಕರ್ನಾಟಕ ಸರಕಾರದ ಗ್ಯಾಜೆಟಿಯರ್ ಇಲಾಖೆಯ ಸಂಪಾದನಾ ಕಾರ್ಯದಲ್ಲಿ ವಿಜಯಪುರ ಜಿಲ್ಲೆಯ ಗ್ಯಾಜಿಟಿಯರ್ ಸಲಹಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದರು.
ಧಾರ್ಮಿಕ ಕ್ಷೇತ್ರದ ಆಸಕ್ತಿ: ಸಂಶೋಧನೆ ನೀರಾವರಿಯೊಂದಿಗೆ ಧಾರ್ಮಿಕ ಕ್ಷೇತ್ರದಲ್ಲೂ ತುಂಬ ಆಸಕ್ತಿ ಹೊಂದಿರುವ ಅವರು 1987ರಲ್ಲಿ ಕಾಖಂಡಕಿ ಮಹಿಪತಿರಾಯರು ವಿಷಯದ ಮೇಲೆ ಪ್ರಬಂಧ ಮಂಡಿಸಿದರು. ವಿಜಯ ಪ್ರಮೋದ ಸ್ಮರಣ ಸಂಚಿಕೆ ಹಾಗೂ ಮಧ್ವ ಮಠಗಳು ಸಂಶೋಧನಾ ಗ್ರಂಥ ಇವರು ಬರೆದ 2 ಪ್ರಮುಖ ಪುಸ್ತಕಗಳಾಗಿವೆ. 1998-2001ರವರೆಗೆ ಕರ್ನಾಟಕ ಉರ್ದು ಅಕಾಡಮಿಗೆ ಸದಸ್ಯರಾಗಿ ನಾಮಕರಣಗೊಂಡಿದ್ದರು. ಈ ಸಂದರ್ಭದಲ್ಲಿಯೇ ಬಸವಣ್ಣ, ಅಕ್ಕಮಹಾದೇವಿಯವರ ವಚನಗಳು ಉರ್ದುವಿಗೆ ಅನುವಾದಗೊಂಡಿವೆ.
ಕರ್ನಾಟಕ ಸರಕಾರವು ಸಮಗ್ರ ವಚನ ಸಾಹಿತ್ಯದಂತೆಯೇ ಸಮಗ್ರ ದಾಸ ಸಾಹಿತ್ಯ ಪ್ರಕಟಿಸಲು ನಿರ್ಧರಿಸಿದಾಗ ಕೃಷ್ಣ ಕೊಲ್ಹಾರ ಕುಲಕರ್ಣಿ ಯವರು ಪ್ರಕಟಣ ಮಂಡಳಿಯ ಪ್ರಮುಖ ಸದಸ್ಯರಾಗಿದ್ದರು. ಕರ್ನಾಟಕ ಪಠ್ಯ ಪುಸ್ತಕ ರಚನಾ ಮಂಡಳಿಯು ಅವರ
ಪಾಂಡಿತ್ಯವನ್ನು ಸಮರ್ಪಕವಾಗಿ ಬಳಸಿಕೊಂಡಿದೆ. ಅವರ ಪರಮಾಣು ಶಿಲ್ಪಿ ಹೋಮಿ ಬಾಬಾ ಲೇಖನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ಪ್ರಕಟವಾಗಿ 9ನೇ ವರ್ಗದ ಸಾಹಿತ್ಯ ಮಂದಾರ ಪಠ್ಯ ಪುಸ್ತಕದಲ್ಲಿ 10 ವರ್ಷಗಳ ಮಕ್ಕಳು ಓದಿದರು. ಮುಂದೆ ಅವರು ಕರ್ನಾಟಕ ಪಠ್ಯಪುಸ್ತಕ ನಿರ್ದೇಶನಾಲಯಕ್ಕೆ ಎರಡನೇ ಮಹಾಯುದ್ಧ ಪುಸ್ತಕ ಬರೆದುಕೊಟ್ಟರು.
ಎಂ.ಎಂ.ಜೋಶಿಯವರ ಜೀವನ ಸಾಧನೆಯ ಕುರಿತು ಅವರ 70ನೇ ಹುಟ್ಟುಹಬ್ಬದ ಪ್ರಯುಕ್ತ ನಯನ ಬ್ರಹ್ಮ ಅಭಿನಂದನಾ ಗ್ರಂಥವನ್ನು ಬರೆದಿದ್ದಾರೆ. ಕುಲಕರ್ಣಿ ಯವರು ಅರ್ಪಿತ ಮನೋಭಾವದಿಂದ ನಾಡಿನ ಹಿತಕ್ಕಾಗಿ ಸದಾ ಚಿಂತಿಸುತ್ತಾರೆ. ಅವರ ಅಪಾರ ಅನುಭವ, ಶ್ರದ್ಧೆ, ತ್ಯಾಗವನ್ನು ಸರಕಾರ ಸಮರ್ಪಕವಾಗಿ ಬಳಸಿಕೊಳ್ಳುವುದು ಅವಶ್ಯ.
ಇತಿಹಾಸ, ಸಂಶೋಧನೆ, ಸಾಹಿತ್ಯ ಸಂಪಾದನೆ, ಅನುವಾದ, ಪತ್ರಿಕಾ ಅಂಕಣ, ಗಮಕ, ಜಾನಪದ, ಪರಂಪರೆ, ರಕ್ಷಣೆ, ನೀರಾವರಿ, ಕೃಷಿ, ಪುನರ್ವಸತಿ ಹೀಗೆ ಸಮಾಜವನ್ನು ಸುಂಸ್ಕೃತವಾಗಿಸುವ ಕಣ್ಣಿಗೆ ಕಾಣುವ ವಿಷಯದ ಬಗ್ಗೆ ಅವರು ಬರೆಯುತ್ತಾರೆ. ಇಂದಿಗೂ ಕ್ರಿಯಾಶೀಲರಾಗಿರುವ ಅವರು ನಮ್ಮ ಮಧ್ಯದಲ್ಲಿ ನಡೆದಾಡುವ ನೀರಾವರಿ ಎನ್‌ಸೈಕ್ಲೋಪಿಡಿಯಾ ಎನಿಸಿಕೊಂಡಿ ದ್ದಾರೆ. ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.