Thursday, 12th December 2024

ಮನೆ ಸುತ್ತಲೂ ಅವೆಷ್ಟು ಜಲಮೂಲಗಳು !

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ಹಳ್ಳಿಗಳಲ್ಲಿದ್ದ ಜಲಮೂಲಗಳಿಗೆ ನೀರಿನಾಶ್ರಯಗಳಿಗೆ ಹಿಂದೆ ಇದ್ದ ಪ್ರಾಶಸ್ತ್ಯ ಇಂದಿಲ್ಲ. ಹಿಂದೆ ಇದ್ದ ವೈವಿಧ್ಯವೂ ಇಂದು ಇಲ್ಲ. ನಲ್ಲಿ ನೀರು, ಓವರ್ ಹೆಡ್ ಟ್ಯಾಂಕ್, ಆರ್. ಒ. ವಾಟರ್ ಮೊದಲಾದ ಸೌಲಭ್ಯಗಳಿಂದಾಗಿ, ಇಂದು ಎಲ್ಲಾ ನೀರೂ ಒಂದೇ ರೀತಿಯ ರುಚಿ.

ನಮ್ಮ ಹಳ್ಳಿಯ ಮನೆ ಸುತ್ತಲೂ ಮರಗಳಿದ್ದವು ಎಂದು ಹಿಂದೊಮ್ಮೆ ಬರೆದಿದ್ದೆ. ಈಗಲೂ ಮಲೆನಾಡು, ಕರಾವಳಿಯ ಹಳ್ಳಿಗಳಲ್ಲಿ ಮನೆ ಸುತ್ತಲೂ ಮರಗಳಿರುವುದು
ವಿಶೇಷವೇನೂ ಅಲ್ಲ. ಆದರೂ, ಹಿಂದೆಲ್ಲ ಮನೆಗೆ ತಾಗಿಕೊಂಡೇ ಮನೆಗಳಿರುತ್ತಿದ್ದವು, ಮರದ ಕೊಂಬೆಗಳು ಮನೆಯ ಮೇಲೆ ಚಾಚಿಕೊಂಡಿರುತ್ತಿದ್ದವು.

ಈಗಿನ ಕಾಲದ ಮನೆಗಳು ತಂತ್ರಜ್ಞರ ವಿನ್ಯಾಸದೊಂದು ಚಂದವಾಗಿ ಮೇಲೇಳುವುದರಿಂದಾಗಿ, ಮನೆಯ ಅಂದವು ಊರಿನವರಿಗೆಲ್ಲಾ ಕಾಣಿಸಬೇಕೆಂದು, ಮನೆಯ ಹತ್ತಿರದ ಮರಗಿಡಗಳನ್ನು ಕಡಿದು ಹಾಕುವುದು ಸಾಮಾನ್ಯ. ಹಿಂದೆಲ್ಲಾ ಮನೆಗೆ ಅಂಟಿಕೊಂಡಂತಿದ್ದ ಮರಗಿಡಗಳನ್ನು, ಅವುಗಳ ದಟ್ಟಣೆಯನ್ನು ನೆನಪಿಸಿ
ಕೊಂಡರೆ, ಬಹುಷಃ ಆ ತಲೆಮಾರಿನ ಜನರಿಗೆ ಮನೆ ಸುತ್ತಲೂ ಮರಗಿಡಗಳಿದ್ದರೆ ಅದೇ ಹೆಮ್ಮೆ ಎನಿಸು ತ್ತಿತ್ತೇನೋ ಎಂಬ ಗುಮಾನಿ ನನಗಿದೆ.

ಅಂದು ನಮ್ಮ ಮನೆಗೆ ತಾಗಿಕೊಂಡಂತಿದ್ದ ಮರ ಗಿಡಗಳೆಂದರೆ, ಮಾವು, ಹಲಸು, ಕರಿಬೇವು, ಬಿಂಬಲ, ನಂದಿಬಟ್ಟಲು, ತೇಗ, ಬಾಗಾಳು, ಅಮಟೆ, ದಾಸವಾಳ, ಪೇರಲೆ, ನಿತ್ಯಪುಷ್ಪ, ಮಧ್ಯಾಹ್ನ ಮಲ್ಲಿಗೆ, ಮಂದಾರ ಇತ್ಯಾದಿ! ಈ ಮರಗಿಡಗಳ ರೀತಿಯೇ, ಪ್ರಕೃತಿಯ ತುಣುಕಿನಂತೆ ಕಾಣುತ್ತಿದ್ದ ಇನ್ನೊಂದು ಅಚ್ಚರಿಯೆಂದರೆ ಜಲಮೂಲಗಳು – ಅಂದರೆ ಮನೆಯ ಸುತ್ತಮುತ್ತ, ಹಳ್ಳಿಯ ನಡುವೆ, ಅಂಚಿನಲ್ಲಿ ಇದ್ದ ನೀರಿನಾಶ್ರಯಗಳು. ಹಾಗೆ ನೋಡಿದರೆ, ಈಗಲೂ ಹಳ್ಳಿಗಳಲ್ಲಿ ಹಲವು ನೀರಿನಾಶ್ರ ಯಗಳಿರುತ್ತವೆ, ಇರಲೇ ಬೇಕು. ಆದರೆ, ಈಗ ನಲ್ಲಿ ನೀರು, ಓವರ್ ಹೆಡ್ ಟ್ಯಾಂಕ್, ಪಂಪ್ ಸೆಟ್ ಮೊದಲಾದ ಸೌಕರ್ಯಗಳು ಲಭ್ಯವಿರು ವುದರಿಂದ,
ಅಂದಿನಂತೆ ಜಲಮೂಲಗಳಲ್ಲಿ ವೈವಿ ಧ್ಯವಿಲ್ಲ, ಹಿಂದಿನಷ್ಟು ಪ್ರಾಮುಖ್ಯತೆಯೂ ಇಲ್ಲ.

ಹಿಂದೆ ನಮ್ಮ ಮನೆಯ ಸುತ್ತ, ನಮ್ಮೂರಿನಲ್ಲಿ ಇದ್ದ ಜಲಮೂಲಗಳ ಅನನ್ಯತೆ ಬೆರಗು ಮೂಡಿಸುತ್ತದೆ. ತೋಡು, ಗುಮ್ಮಿ, ಕೆರೆ, ಬಗ್ಗು ಬಾವಿ, ದೊಡ್ಡ ಬಾವಿ, ಸಣ್ಣ ಹೊಳೆ, ದೊಡ್ಡ ಹೊಳೆ, ಕಲ್ಯಾಣಿ – ಈ ರೀತಿಯ ಜಲ ಮೂಲಗಳು ಹಳ್ಳಿಯ ತುಂಬಾ ಹರಡಿದ್ದವು. ಒಂದು ಹಳ್ಳಿಯಲ್ಲಿ ಸರಾಸರಿ 100 ಮನೆಗಳಿದ್ದರೆ, ಅಂದು ಸರಿ ಸುಮಾರು ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಜಲಮೂಲಗಳಿರುತ್ತಿದ್ದವು ಎಂದರೆ ಅಚ್ಚರಿಯೇ? ನಮ್ಮ ಮನೆಯನ್ನೇ ತೆಗೆದುಕೊಂಡರೆ, ಮನೆಯ ಸುತ್ತಲೂ ಹಲವು ನೀರಿನಾಶ್ರಯಗಳು!

ನಮ್ಮ ಮನೆಯು ಹಳೆಯ ಕಾಲದ, ದಪ್ಪ ಗೋಡೆಯ ಕಟ್ಟಡ. ನಮ್ಮ ಅಮ್ಮಮ್ಮ ನೆನಪಿಸಿಕೊಂಡು ಹೇಳುತ್ತಿದ್ದಂತೆ, ಸುಮಾರು 70 ವರ್ಷಗಳ ಹಿಂದೆ ಹಿಸ್ಸೆಯಾಗಿ, ಎರಡು ಮನೆಗ ಳಾದವು. ಈ ಎರಡೂ ಮನೆಗಳಿಗೆ ಸೇರಿದಂತೆ ಮೂರು ಬಾವಿಗಳಿವೆ! ಜತೆಗೆ ಮನೆ ಎದುರು ಒಂದು ಪುಟ್ಟ ತೋಡು, ತೋಟದಾಚೆ ಒಂದು ಸಣ್ಣ ತೋಡು, ಬೈಲಿನಾಚೆ ಒಂದು ದೊಡ್ಡ ತೋಡು! ಅಂದರೆ, ನಮ್ಮ ಮನೆಗೆ ಆರು ಜಲ ಮೂಲಗಳು! ಈ ಬಗ್ಗು ಬಾವಿಯ ವಿಚಾರ ಸ್ವಾರಸ್ಯಕರ. ಮನೆ ಮುಂದಿನ ಅಂಗಳದಲ್ಲೇ ತೋಡಲಾಗಿದ್ದ ಬಗ್ಗು ಬಾವಿಯು ಹೆಚ್ಚು ಕಡಿಮೆ ನೆಲ ಮಟ್ಟದ್ದು.

ಅಂದರೆ ಅದಕ್ಕೆ ತಡೆಗೋಡೆಗಳಿರಲಿಲ್ಲ, ಒಂದಡಿ ಎತ್ತರದ ಒರಟು ಕಲ್ಲುಗಳ ತಡೆಯೇ ಅದರ ಪರಿಧಿ. ಬಾವಿಯ ಒಂದು ಭಾಗದಲ್ಲಿ ಅಡ್ಡಲಾಗಿ ಹಾಕಿದ್ದ ಮರದ ತೊಲೆಗಳ ಮೇಲೆ ನಿಂತು, ಹಗ್ಗ ಇಳಿಬಿಟ್ಟು ತಾಮ್ರದ ಕೊಡದಿಂದ ನೀರನ್ನು ಎತ್ತುವ ಪರಿಪಾಠ. ಬಗ್ಗಿ ನಿಂತು ನೀರೆತ್ತುವುದರಿಂದಾಗಿ, ಬಗ್ಗು ಬಾವಿ ಎಂಬ ಹೆಸರು. ಸುಮಾರು ಎಂಟು ಅಡಿ ಅಗಲದ ಆ ಬಾವಿಯ ಆಳ ಸುಮಾರು 20 ಅಡಿ. ಗುಡ್ಡದಲ್ಲಿ ಸಿಗುವ ಕಲ್ಲುಗಳನ್ನೇ ಆರಿಸಿ ತಂದು, ಅದಕ್ಕೆ ಕಟ್ಟೋಣ ಮಾಡಿದ್ದರು. ಒರಟು
ಕಲ್ಲುಗಳ ಕಟ್ಟೋಣದ ಸಂದಿಯಲ್ಲಿ ತಲೆ ಎತ್ತಿ ನೋಡುತ್ತಿದ್ದ ‘ಒಳ್ಳೆ ಹಾವು’ಗಳನ್ನು ನೋಡುವುದೇ ಒಂದು ಮಜ. ಈ ಬಗ್ಗು ಬಾವಿಯಿಂದ ನೀರೆತ್ತಲು ವರ್ಷದ ನಾಲ್ಕು ತಿಂಗಳುಗಳ ಕಾಲ ಹಗ್ಗವೇ ಬೇಕಾಗುತ್ತಿರಲಿಲ್ಲ!

ಜೂನ್‌ನಿಂದ ಸೆಪ್ಟೆಂಬರ್ ತನಕ, ಕೊಡ ಹಿಡಿಗು ಬಗ್ಗಿದರೆ ನೀರು ಕೈಗೆಟಗುತ್ತಿತ್ತು! ಆ ನಂತರ ತುಸು ಕೆಳಗೆ ನೀರು ಸರಿದಾಗ, ನಾಲ್ಕಾರು ಅಡಿ ಅಗಲದ ಹಗ್ಗ ಸಾಕಿತ್ತು. ಮಳೆಗಾಲವಿಡೀ ಸುರಿವ ಮಳೆಯಿಂದಾಗಿ, ಅಂತರ್ಜಲದ ಮಟ್ಟ ಅಷ್ಟು ಮೇಲಕ್ಕೇರುತ್ತಿತ್ತು. ಇಷ್ಟಾದರೂ, ಎಪ್ರಿಲ್ ತಿಂಗಳು ಬಂತೆಂದರೆ ಈ ಬಾವಿಯ ನೀರು ಬತ್ತುತ್ತಿತ್ತು. ಬೇಸಗೆಯಲ್ಲಿ ಕೆಸರು, ಬಗ್ಗಡ ತುಂಬಿದ ಹತ್ತೆಂಟು ಕೊಡ ನೀರು ಮಾತ್ರ ಲಭ್ಯ. ಆಗ ಎರಡು ಫರ್ಲಾಂಗು ದೂರದ ಹಂಜಾರರ ಮನೆಯಿಂದ ಕುಡಿಯುವ ನೀರನ್ನು ಕೊಡದಲ್ಲಿ ಹೊತ್ತು ತರುವುದು ನನ್ನ ಕೆಲಸ!

ಅದೇಕೋ, ನಮ್ಮ ಮನೆಯ ಬಾವಿ ನೀರಿಗಿಂತಲೂ, ಹಂಜಾರರ ಮನೆ ಬಾವಿಯ ನೀರು ಸಿಹಿ ಜಾಸ್ತಿ. ಈ ರೀತಿ ಒಂದೊಂದು ಬಾವಿಯ ನೀರು ಒಂದೊಂದು ರುಚಿ ಇರುವುದು ಪ್ರಕೃತಿಯ ವಿಸ್ಮಯವೆ! ಹಾಲಾಡಿ ಪೇಟೆಯಲ್ಲಿದ್ದ ಹಿರಿಯಣ್ಣ ನಾಯಕರ ಮನೆಯ ಬಾವಿಯ ನೀರು ಕುಡಿದರೆ, ಇನ್ನೂ ಸಿಹಿ ಮತ್ತು ನೀರು ತುಂಬಿದ ಚೊಂಬಿನ ತಳದಲ್ಲಿದ್ದ ನೀರು ಸಿಹಿ ಸಿಹಿ, ಸಕ್ಕರೆ ಹಾಕಿದಂತೆ! ಅದು ಹೇಗೆ ಆ ರುಚಿ ಎಂದು ನನಗಿನ್ನೂ ಸ್ಪಷ್ಟವಿಲ್ಲ. ಬೇಸಗೆಯಲ್ಲಿ ಮನೆ ಮುಂದಿನ ಬಗ್ಗುಬಾವಿಯ
ನೀರು ಒಣಗುವ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು 1980ರ ದಶಕದಲ್ಲಿ ನಮ್ಮ ಅಮ್ಮಮ್ಮ, ಮನೆ ಮುಂದೆ ಒಂದು ದೊಡ್ಡ ಬಾವಿ ತೋಡಿಸಿರದು.

ಅದು ರಾಟೆ ಹಾಕಿ ನೀರೆತ್ತುವ ಬಾವಿ. ನಮ್ಮ ಮನೆ ಎದುರಿನ ಬೈಲಿನಲ್ಲಿ ನಮ್ಮ ದಾಯವಾದಿಗಳು ಒಂದು ಬಗ್ಗುಬಾವಿ ತೋಡಿಸಿದ್ದರು. ಚೇರ್ಕಿಗೆ ಹೋಗುವ ಬೈಲುದಾರಿಯ ಪಕ್ಕದಲ್ಲೇ ತೋಡಿಸಿದ್ದ ಆ ಬಾವಿಗೆ, ಒಮ್ಮೊಮ್ಮೆ ರಾತ್ರಿಯಲ್ಲಿ ಸಾಗುವ ದಾರಿಹೋಕರು ಬೀಳುತ್ತಿದ್ದುದೂ ಉಂಟು! ಸಂಜೆಯ ನಶೆಯ ಪ್ರಭಾವ!
ನಮ್ಮ ತೋಟದಾಚೆ ಇರುವ ಸಣ್ಣತೋಡಿನ ಕಥೆ ಭಲೇ ಮಜವಾಗಿದೆ. ಆಗಿನ್ನೂ ಶೌಚಾಲಯಕ್ಕೆಂದು ಪುಟ್ಟ ಕಟ್ಟಡ ಕಟ್ಟುವ ಸಂಪ್ರದಾಯ ನಮ್ಮೂರಿನಲ್ಲಿರಲಿಲ್ಲ. ಬೆಳಗಿನ ಮೊದಲ ಕರ್ತವ್ಯಕ್ಕೆ ತೋಟದಾಚೆಯ ತೋಡೇ ಪ್ರಶಸ್ತ!

ಹರಿಯುವ ನೀರಿನಲ್ಲಿ ಕುಕ್ಕರಗಾಲು ಹಾಕಿ ಕುಳಿತು, ಬೆಳಗಿನ ಕೆಲಸ ಮುಗಿಸುವಾಗ, ಸುತ್ತಲೂ ಕವಿದುಕೊಂಡಿದ್ದ ಮರಗಿಡಗಳ ಮೇಲಿಂದ ಹಕ್ಕಿಗಳ ಸುಪ್ರಭಾತ!
ತೋಡಿನ ನೀರಿನ ಜುಳು ಜುಳು ಸದ್ದು. ಆದರೆ ಆ ಹರಿವ ನೀರಿನಲ್ಲಿ ಆಡುತ್ತಿದ್ದ ಪುಟಾಣಿ ಮೀನುಗಳು ಕುಳಿತವರಿಗೆ ಕಚ್ಚಲು ಬಂದು, ಕಾಟ ಕೊಡುತ್ತಿದ್ದವು! ಆದ್ದ ರಿಂದ, ಅದೇ ತೋಡಿನಲ್ಲಿದ್ದ ಎರಡು ಕಲ್ಲುಗಳನ್ನು ಆರಿಸಿ, ಅದರ ಮೇಲೆ ಕೂರುತ್ತಿದ್ದೆವು! ಡಿಸೆಂಬರ್ ಬಂದಂತೆ, ಆ ತೋಡಿನಲ್ಲಿ ಹರಿದು ಸಾಗುವ ನೀರಿನ ಪ್ರಮಾಣ ಕಡಿಮೆಯಾಗಿ, ಅಲ್ಲಲ್ಲಿ ನೀರು ನಿಲ್ಲತೊಡಗುತ್ತದೆ.

ಆಗ ಬೆಳಗಿನ ಕೆಲಸಕ್ಕೆ ಪಕ್ಕದ ಗುಡ್ಡೆಯೇ ಗತಿ. ನಮ್ಮ ಹಳ್ಳಿಯ ಜಲಮೂಲಗಳ ಪೂರ್ಣ ಸ್ವರೂಪ ಅರಿಯಲು, ಒಂದೆರಡು ಕಿಮೀ ನಡೆಯಬೇಕು. ಆ ಕೆಲಸವನ್ನು ನಾವು ಶಾಲೆ ಹೋಗುವಾಗ ಎಂತಿದ್ದರೂ ಮಾಡುತ್ತಿದ್ದೆವಲ್ಲ. ನಾನು ಹೋಗುತ್ತಿದ್ದ ಗೋರಾಜೆ ಪ್ರಾಥಮಿಕ ಶಾಲೆಗೆ ೨ ಕಿಮೀ ದೂರ. ಬೆಳಗ್ಗೆ ಗಂಜಿ ತಿಂದು,
ಸ್ಲೇಟು ಬಳಪಗಳನ್ನು ಚೀಲಕ್ಕೆ ತುಂಬಿ, ಬಗಲಿಗೆ ಹಾಕಿಕೊಂಡು ಬೈಲು ದಾರಿ ಹಿಡಿದು ಹೊರಟರೆ, ಮೊದಲು ಅಡ್ಡವಾಗುತ್ತಿದ್ದುದು ಬೈಲಿನಿಂದಾಚೆ ಇದ್ದ ದೊಡ್ಡ ತೋಡು. ಅದನ್ನು ದಾಟಲು ಒಂದು ಉದ್ದನೆಯ ಮರ. ಅದರ ಮೇಲೆ ಬ್ಯಾಲೆನ್ಸ್ ಮಾಡುತ್ತಾ, ಕೆಳಗೆ ಹರಿಯತ್ತಿದ್ದ ನೀರನ್ನು ನೋಡಿ ಗಾಬರಿಗೊಳ್ಳದೇ ದಾಟಿದರೆ, ಹಕ್ಕಲು ಸಿಗುತ್ತಿತ್ತು.

ಆ ಹಕ್ಕಲಿನ ಗಿಡಮರಗಳ ನಡುವೆ ಸಾಗಿದ್ದ ದಾರಿಯಲ್ಲಿ ನಡೆಯುತ್ತಾ, ಗಿಡಗಳಲ್ಲಿ ಕುಳಿತ ಕಾಯಿಕಳ್ಳಗಳಿಗೆ ಕಲ್ಲಿನಿಂದ ಹೊಡೆಯುತ್ತಾ, ಐದು ನಿಮಿಷ ಸಾಗಿದರೆ ಗುಡ್ಡೆ ದಾರಿ; ಆ ಗುಡ್ಡವನ್ನು ದಾಟಿ, ಕೆಳಗಿಳಿದರೆ ಮತ್ತೊಂದು ಪುಟ್ಟ ತೋಡು. ಅದಕ್ಕೆ ಅಡ್ಡಲಾಗಿ ಹಾಕಿದ್ದ ಮರದ ಸಂಕದ ಮೇಲೆ ನಡೆದು ದಾಟಿದರೆ, ಗುಡಿ ದೇವಸ್ಥಾನದ ಹತ್ತಿರ ಬಯಲಿನಲ್ಲಿ, ದಾರಿಯ ಪಕ್ಕದಲ್ಲೇ ಒಂದು ನೀರಿನ ಗುಮ್ಮಿ (ಪುಟಾಣಿ ಕೊಳ). ಬಹುಮಟ್ಟಿಗೆ ನೆಲದ ಮಟ್ಟದಲ್ಲಿ ನೀರಿರುತ್ತಿದ್ದ ಆ ಗುಮ್ಮಿಯಲ್ಲಿ ಪುಟಾಣಿ ಕಮಲಗಳನ್ನು ನೋಡುತ್ತಾ ಶಾಲೆಗೆ ಹೋಗುವ ಅನುಭವ ಅನನ್ಯ.

ಐದನೆಯ ತರಗತಿಗೆ ಹಾಲಾಡಿಯಲ್ಲಿದ್ದ ಮಾಧ್ಯಮಿಕ ಶಾಲೆಗೆ ಸೇರಿಕೊಂಡೆ. ಸುಮಾರು ಮೂರು ಕಿ.ಮೀ. ನಡಿಗೆ. ಮನೆಯಲ್ಲಿ ಬೆಳಗ್ಗೆ ಗಂಜಿ ತಿಂದು, ಅದೇ ಗಂಜಿಯನ್ನು ಪುಟ್ಟ ಬಾಕ್ಸ್‌ಗೆ ತುಂಬಿಕೊಂಡು ಹೊರಟರೆ, ಅರ್ಧ ಕಿ.ಮೀ. ಬೈಲು ದಾರಿಯ ನಂತರ, ದೊಡ್ಡ ತೋಡು ಅಡ್ಡಲಾಗಿ ಸಿಗುತ್ತದೆ. ಅದನ್ನು ದಾಟಲು ಎರಡು ಅಡಿ ಅಗಲದ ಮರದ ಹಲಗೆಗಳ ಪುಟ್ಟ ಸೇತುವೆ. ಆ ತೋಡಿ ಎಪ್ರಿಲ್ ತನಕ ನೀರಿರುತ್ತಿತ್ತು. ಮಳೆಗಾಲದಲ್ಲಂತೂ, ರಭಸದಿಂದ ಹರಿವ ಕೆಂಪನೆಯ ನೀರು. ಚಳಿಗಾಲದಲ್ಲಿ ಅಲ್ಲಿನ ತಿಳಿನೀರಿನಲ್ಲಿ ಮೀನುಗಳು, ಕಪ್ಪೆಗಳು, ಏಡಿಗಳು ಆಟವಾಡುತ್ತಿರುತ್ತವೆ. ಆಗ ಆ ನೀರು ಅದೆಷ್ಟು ತಿಳಿ ಎಂದರೆ, ಬೊಗಸೆಯಲ್ಲಿ ಹಿಡಿದು ಕುಡಿಯಬಹುದಾದಷ್ಟು!

ಆ ದೊಡ್ಡತೋಡನ್ನು ದಾಟಿ, ಹಂದಿಕೊಡ್ಲು ಹಾಡಿಯ ದಾರಿಯಲ್ಲಿ ನಡೆದು, ಬೈಲಿಗೆ ಇಳಿದರೆ ಒಂದು ಪುಟ್ಟ ತೋಡು. ತೋಡಿನ ಪಕ್ಕ ಉದ್ದಕ್ಕೆ ಬೆಳೆದು ನಿಂತಿದ್ದ ಆರೆಂಟು ಅಡಕೆ ಮರಗಳಲ್ಲಿ, ತನ್ನ ಹಳದಿ ನಾಲಿಗೆಯನ್ನು ಚಾಚಿ ಅಣಕಿಸುತ್ತಿದ್ದ ಹಾರುವ ಓತಿಗಳ ದರ್ಶನವೂ ಒಮ್ಮೊಮ್ಮೆ ಆಗುತ್ತಿತ್ತು! ಅಲ್ಲಿಂದ ಅರ್ಧಕಿಮೀ ನಡೆದು, ಇನ್ನೊಂದು ತೋಡನ್ನು ದಾಟಿ, ಹಾಲಾಡಿ ಬಸ್ ಸ್ಟಾಪ್ ಹಾದು, ಟಾರು ರಸ್ತೆಯ ಮೇಲೆ ಶಾಲೆಯ ದಾರಿ ಹಿಡಿದಾಗ, ಒಮ್ಮೆಗೇ ಎರಡು ಜಲಮೂಲ ಗಳ ದರ್ಶನ. ಒಂದು ನಾವು ದಾಟಿ ನಡೆಯಬೇಕಾಗಿದ್ದ ಸಣ್ಣ ಹೊಳೆ; ಎರಡನೆಯದು ಅನತಿ ದೂರದಲ್ಲಿ ಉತ್ತರ ದಿಕ್ಕಿನಲ್ಲಿ ದೊಡ್ಡ ಹೊಳೆ.

ಸಣ್ಣಹೊಳೆಯನ್ನು ದಾಟಲು ಸಿಮೆಂಟಿನ ಸೇತುವೆ. ಆ ಸೇತುವೆಯ ಮೇಲೆ ನಿಂತು ಉತ್ತರಕ್ಕೆ ದಿಟ್ಟಿಹಾಯಿಸಿದರೆ, ದೊಡ್ಡ ಸೇತುವೆ ಕಾಣಿಸುತ್ತಿತ್ತು. ಸಣ್ಣ ಸೇತುವೆ ಮತ್ತು ದೊಡ್ಡ ಸೇತುವೆ – ಇವೆರಡೂ ನನ್ನ ದೃಷ್ಟಿಯಲ್ಲಿ ಅಕ್ಕತಂಗಿಯರಿದ್ದಂತೆ. ಸಣ್ಣ ಸೇತುವೆ ಒಮ್ಮೊಮ್ಮೆ ಮುಳುಗಿ ಹೋಗುತ್ತಿತ್ತು! ಜುಲೈ ತಿಂಗಳಿನ ಆಷಾಡದ ಸಮಯದಲ್ಲಿ, ಘಟ್ಟದಲ್ಲಿ ಭಾರೀ ಮಳೆ ಬಂದರೆ, ದೊಡ್ಡ ಹೊಳೆಯಲ್ಲಿ ನೆರೆ ಬರುತ್ತಿತ್ತು. ಸಹಜವಾಗಿ ಅಕ್ಕನ ನೆರೆಯ ನೀರು ತಂಗಿಯನ್ನೂ ಕಾಡುತ್ತಿತ್ತು, ಹಿನ್ನೀರಿನ ರೂಪದಲ್ಲಿ. ಒಂದೊಂದು ದಿನ ನೆರೆ ಏರಿದಾಗ, ಸಣ್ಣ ಸೇತುವೆ ಪೂರ್ತಿ ಮುಳುಗುಷ್ಟು ಕೆಂಪನೆಯ ನೀರು! ಬೆಳಗ್ಗೆ ಶಾಲೆಗೆ ಹೋಗುವಾಗ, ರಸ್ತೆಯ ಹತ್ತಿರದ ತನಕವೂ ನೀರಿದ್ದರೂ, ಸೇತುವೆ ಮುಳುಗಿರುವುದಿಲ್ಲ.

ಶಾಲೆಗೆ ಹೋದ ನಂತರ, ಮಧ್ಯಾಹ್ನದ ಹೊತ್ತಿಗೆ ಭಾರೀ ಮಳೆಯಿಂದಾಗ ಶಾಲೆಗೆ ರಜಾ ಘೋಷಣೆ! ರಜಾ ಎಂಬ ಸಂಭ್ರಮದಲ್ಲಿ, ಚೀಲವನ್ನು ಬಗಲಿಗೆ ಹಾಕಿ ಕೊಂಡು ಮೂರು ಕಿಮೀ ದೂರದ ಮನೆಯತ್ತ ಚುರುಕಾಗಿ ಹೊರಟರೆ, ಸಣ್ಣ ಸೇತುವೆಯ ಬಳಿ ನೆರೆ ಏರಿದೆ! ಸೇತುವೆ ಮುಳುಗಿ ಹೋಗಿದೆ! ಸೇತುವೆ ಆಚೀಚೆ ಇದ್ದ ನಾಲ್ಕು ಕಂಬಗಳು ಮಾತ್ರ ಕಾಣುತ್ತಿವೆ. ದೊಡ್ಡ ಸೇತುವೆ ಮುಳುಗಿಲ್ಲದಿದ್ದರೂ, ಆ ನದಿಯಲ್ಲಿ ರಭಸವಾಗಿ ಹರಿವ ಕೆಂಪನೆಯ ನೀರು, ಅದರಲ್ಲಿ ವೇಗವಾಗಿ ತೇಲಿ ಹೋಗುತ್ತಿದ್ದ ಮರಗಳ ಬೊಡ್ಡೆಗಳು! ಸಣ್ಣ ಸೇತುವೆ ಪೂರ್ತಿ ಮುಳುಗಿದ್ದರೂ, ಅದು ಹಿನ್ನೀರಾಗಿದ್ದರಿಂದ, ಅಲ್ಲಿ ಪ್ರವಾಹವಿಲ್ಲ.

ನಾವು ಶಾಲಾಮಕ್ಕಳು ನೀರಿನಲ್ಲಿ ಮುಳುಗಿರುವ ರಸ್ತೆಯ ಮೇಲೆ, ದಿನ ನಿತ್ಯ ನಡೆದ ಅಂದಾಜಿನ ನೆನಪಿನಿಂದ ನಡೆದು, ಮನೆಯತ್ತ ಸಾಗುತ್ತಿದ್ದೆವು. ಇತ್ತ ನಮ್ಮ ಮನೆಯಿರುವ ಬೈಲಿಗೆ ಬಂದರೆ, ಅಲ್ಲೂ ನೆರೆ! ಸಣ್ಣ ತೋಡು ಮತ್ತು ದೊಡ್ಡ ತೋಡಿನ ತುಂಬಾ ಕೆಂಪನೆಯ ನೀರು. ತೋಡುಗಳು ಉಕ್ಕಿ, ಗದ್ದೆಯ ಅಂಚಿನ ದಾರಿಯ ಮೇಲೂ ನೀರು! ಆಗ ನಮ್ಮನ್ನೆಲ್ಲಾ ಕೈಹಿಡಿದು, ಕೆಂಪನೆಯ ನೀರಿನಲ್ಲಿ ಮುಳುಗಿದ್ದ ಗದ್ದೆ ಅಂಚಿನ ದಾರಿಯನ್ನು ಅಂದಾಜಿನ ಮೇಲೆ ಹುಡುಕಿ, ಮನೆಗೆ ಕರೆದೊಯ್ಯುತ್ತಿದ್ದ ಧೀರನೆಂದರೆ ಸತ್ಯನಾರಾಯಣ. ನೆರೆಯ ನೀರಿಗೂ ಬೆದರದೆ ನಡೆವ ಅವನ ಧೈರ್ಯ ಕಂಡು ನಮಗೆಲ್ಲಾ ಅಚ್ಚರಿ. ನೀರಿನಲ್ಲೇ ತೊಯ್ದು ಮನೆಗೆ ಬಂದಾಗ, ಕೈಗೆ ಸಿಗುವ ಬೆಚ್ಚನೆಯ ಟವಲ್‌ನಿಂದ ಮೈ ಕೈ ವರೆಸಿಕೊಂಡಾಗ ಅದೊಂದು ರೀತಿಯ ಸುಖ.

ನಮ್ಮ ಹಳ್ಳಿಯ ಜಲಮೂಲಗಳನ್ನು ಪಟ್ಟಿಮಾಡುವಾಗ ನೆನಪಾಗುವ ಮತ್ತೊಂದು ವಿಷಯವೆಂದರೆ, ಹಳ್ಳಿಯ ಜನರು ಈ ಜಲಮೂಲಗಳ ನೀರನ್ನು ನೇರವಾಗಿ ಕುಡಿಯುತ್ತಿದ್ದ ವಿಚಾರ. ನಮ್ಮ ಮನೆಯ ಬಗ್ಗು ಬಾವಿ, ಬೈಲು ಬಾವಿ, ದೊಡ್ಡ ತೋಡು, ಸಣ್ಣ ಹೊಳೆ ಎಲ್ಲಾ ನೀರನ್ನೂ ಹಿಂದೆ ಮುಂದೆ ನೋಡದೇ ನಾವು ಕುಡಿಯು
ತ್ತಿದ್ದೆವು. ಕಾಡಿನ ದಾರಿಯಲಿ ಬಂಧುಗಳ ಮನೆಗೆ ಹೋಗುವಾಗ, ಬಾಯಾರಿದಾಗ, ದಾರಿಗಡ್ಡಲಾಗಿಸಿರುವ ತೊರೆಯ ನೀರನ್ನು ಕುಡಿಯುವಲ್ಲಿ ಭಯವೂ ಇರಲಿಲ್ಲ, ಸಂಕೋಚವೂ ಇರಲಿಲ್ಲ.

ಇಂದಿನ ಜನರಿಗೆ ಹೋಲಿಸಿದಾಗ, ನಮಗೆ ಅಂದು ಅದೆಷ್ಟು ಧೈರ್ಯ! ‘ಸಾವಿರ ಕೊಡ ನೀರಿಗೆ, ಹರಿಯುವ ನೀರಿಗೆ ಯಾವುದೇ ಕಟ್ಟುಪಾಡಿಲ್ಲ’ ಎಂದು ಹೇಳು ತ್ತಲೇ ಆ ನೀರನ್ನು ಕುಡಿಯುತ್ತಿದ್ದ ಅಂದಿನ ಹಳ್ಳಿ ಜನರು ಒಂದು ರೀತಿಯಲ್ಲಿ ನಿಸರ್ಗದ ಸಹಜ ಶಿಶುಗಳೇ ಸರಿ.