Thursday, 12th December 2024

ಹಳ್ಳಿಗೆ ಬೇಕಿರುವುದು ಮೀಟರ್‌ ನೀರಲ್ಲ, ಜಲಸಂಪತ್ತಿನ ವೃದ್ದಿ

ಸುಪ್ತ ಸಾಗರ

rkbhadti@gmail.com

ನಗರ ಕೇಂದ್ರಿತ ಸಮಾಜದಲ್ಲಿ ‘ನೀರಿನ ಮೀಟರ್’ ಅನಿವಾರ್ಯ ಮಾತ್ರವಲ್ಲ, ಅಗತ್ಯ. ಆದರೆ ಹಳ್ಳಿಗಳಲ್ಲಿ ಇಂಥ ಮೀಟರ್‌ಗಳು ಬದುಕಿನ ಮುಗ್ಧತೆಯನ್ನೇ ಕಸಿದುಬಿಡುವುದು ಸುಳ್ಳಲ್ಲ. ಅಲ್ಲಿ ಹಿತ್ತಲಿನಲ್ಲಿ ಬೆಳೆದ ಹೂವು, ತರಕಾರಿಗೆ ಭರಪೂರ ನೀರು ಹಾಯಿಸಬೇಕು. ಗದ್ದೆ ತೋಟಕ್ಕೆ ಹೋಗಿಬಂದು ಮನಸೋಚ್ಛೆ ಮೀಯಬೇಕು. ದನ-ಕರುಗಳು, ಕುರಿ, ಮೇಕೆಗಳನ್ನು ಸಮೃದ್ಧವಾಗಿಡಬೇಕು.

ಸರಿಸುಮಾರು ಏಳು ವರ್ಷದ ಹಿಂದೆ; ಇಂಥದ್ದೇ ಬೇಸಗೆಯ ಆರಂಭದ ದಿನಗಳು. ಆಗಿನ್ನೂ ‘ವಿಶ್ವವಾಣಿ’ ರಾಜ್ಯ ಮಟ್ಟದ ಪತ್ರಿಕೆಯಾಗಿ ಕಣ್ಣುಬಿಡುತ್ತಿತ್ತು. ಕೆರೆ ಕಾಯಕಕ್ಕೇ ತಮ್ಮನ್ನು ತಾವು ಸಮರ್ಪಿಸಿಕೊಂಡಿರುವ ಜಲಮಿತ್ರ ಶಿವಾನಂದ ಕಳವೆ ಕಾಲಿಗೆ ಚಕ್ರ ಕಟ್ಟಿಕೊಂಡು ಇಡೀ ರಾಜ್ಯವನ್ನು ಸುತ್ತುತ್ತಿದ್ದರು. ಅದ್ಯಾವುದೋ ಕೃಷಿ ಪ್ರಶಸ್ತಿಗಾಗಿ ಸೂಕ್ತ ವ್ಯಕ್ತಿಗಳನ್ನು ಹುಡುಕಿಕೊಡುವ ಹೊಣೆಯೊಂದು ಅವರ ಹೆಗಲೇರಿತ್ತು.

ಅದೊಂದು ನೆಪವಷ್ಟೇ, ಹಾಗಲ್ಲದಿದ್ದರೂ, ನೀರಿನ ಕೆಲಸ ಮಾಡುವವರ ಬೆನ್ನುಹತ್ತಿ ಹೋಗುವುದು, ಮಾತನಾಡಿ ಸುವುದು, ಅವರ ಬಗ್ಗೆ ಬರೆಯುವುದು ಕಾಸರಗೋಡಿನ ಶ್ರೀಪಡ್ರೆ ಹಾಗೂ ಶಿರಸಿಯ ಕಳವೆಗೆ ಜೀವನದ ಅವಿಭಾಜ್ಯ ಅಂಗ. ಅದೊಂದು ಸಂಜೆ ಐದರ ಸುಮಾರಿಗೆ ಕರೆ ಮಾಡಿದರು. ಪ್ರತಿಭಾರಿ ಒಂದಿಲ್ಲೊಂದು ಹೊಸ ವಿಚಾರಗಳನ್ನು ಹೇಳುವ ಅವರ ಸಂಪ್ರದಾಯ ಅಂದೂ ಮುಂದುವರಿದಿತ್ತು. ‘ನೀವು ಬೆಂಗಳೂರಿನವರು ಬಾತ್‌ಟಬ್ ನೋಡಿರು ತ್ತೀರಿ, ಬುಟ್ಟಿ ಸ್ನಾನ ನಿಮಗೆ ಗೊತ್ತಾ?’ ಎಂದು ಕೇಳಿದರು.

‘ವಾಟ್ಸಾಪ್‌ನಲ್ಲಿ ಒಂದೆರಡು ಫೋಟೋ ಕಳುಹಿಸಿದ್ದೇನೆ, ನೋಡಿ’ ಎಂದರು. ಲಾರಿ ಟಯರ್‌ನಿಂದ ಮಾಡಿರುವ ಅಗಲವಾದ ಬುಟ್ಟಿಯೊಂದರಲ್ಲಿ ಅರ್ಧಷ್ಟು ನೀರಿತ್ತು. ಪುಟ್ಟದೊಂದು ಗುಡಿಸಿಲಿನ ಮುಂದೆ ಕೂಲಿ ಮಹಿಳೆಯಂತೆ ಕಾಣುವವಳೊಬ್ಬಳು ತನ್ನ ಮಗುವನ್ನು ಅದರೊಳಗೆ ಕೂರಿಸಿಕೊಂಡು, ಮೇಲಿಂದ ಸಣ್ಣದೊಂದು ಬಾಯಿಕೊರೆದ ಪೇಂಟ್ ಡಬ್ಬದಿಂದ ಮಗುವಿಗೆ ಸ್ನಾನ ಮಾಡಿಸುತ್ತಿದ್ದಳು. ಬಡವರ ಕ್ರಿಯೇಟಿವಿಟಿ ಎಂದುಕೊಂಡು, ಭೇಷ್ ಎನ್ನೋಣವೆಂದು ಮತ್ತೆ ಫೋನ್ ಮಾಡಿದೆ.

ಆದರೆ ಹಾಗಾಗಿರಲಿಲ್ಲ. ಅವರು ಆ ಚಿತ್ರದ ಬಗ್ಗೆ ವಿವರಣೆ ನೀಡಿದಾಗ, ನಿಜಕ್ಕೂ ಮರುಕ ಹುಟ್ಟಿತ್ತು. ಅದು ಯಾದಗಿರಿ ಜಿಲ್ಲೆಯ ಯಾವುದೋ ಹಳ್ಳಿ, ಹೆಸರೀಗ ನೆನಪಿಲ್ಲ. ಫೆಬ್ರವರಿ, ಮಾರ್ಚ್ ತಿಂಗಳಲ್ಲೇ ಯಾವ ಪರಿ ಬರ ಅವರನ್ನು ಕಾಡುತ್ತಿತ್ತೆಂದರೆ, ಸ್ನಾನಕ್ಕೆ ಹಾಗಿರಲಿ, ಕುಡಿಯಲೂ ನೀರನ್ನು ಕಿಲೋಮೀಟರ್ ದೂರದಿಂದ ಹೊತ್ತು ತರಬೇಕಿತ್ತು. ಹೀಗಾಗಿ ಮಕ್ಕಳಿಗೆ ವಾರಕ್ಕೊಮ್ಮೆ ಮಾತ್ರ ಸ್ನಾನ. ನೀರುಳಿಸಲು ಅಲ್ಲಿನ ಮಹಾ ತಾಯಂದಿರು
ಈ ‘ಬುಟ್ಟಿ ಸ್ನಾನ’ದ ಉಪಾಯ ಕಂಡುಕೊಂಡಿದ್ದರು. ಒಂದೇ ಬುಟ್ಟಿಯಲ್ಲಿ ಒಂದು ಕೊಡ ನೀರು ಹಾಕಿ, ಮನೆಯ ಎಲ್ಲ ಮಕ್ಕಳನ್ನೂ ಸರದಿಯಂತೆ ಅದರಲ್ಲಿಳಿಸಿ ಅದೇ ನೀರಿನಿಂದ ಎಲ್ಲರ ಮೈ ತೊಳೆದುಬಿಟ್ಟರೆ, ವಾರದ ಅಭ್ಯಂಜನ ಮುಗಿದಿರುತ್ತಿತ್ತು; ಬೆಂಗಳೂರಿನ ಹೋಟೆಲ್ ಗಳ ಟಬ್‌ಗಳಲ್ಲಿ ಅದ್ದಿ ಪಾತ್ರೆ ತೊಳೆದಂತೆ.

ಅದೇ ದೃಶ್ಯವನ್ನು ಸೆರೆ ಹಿಡಿದು ಕಳುಹಿಸಿದ್ದರು ಕಳವೆ. ಇಂಥ ಅಮಾನವೀಯ ಸನ್ನಿವೇಶಕ್ಕೆ ಅವರನ್ನು ದೂಡಿರುವ ಬರಗಾಲದ ಬಗ್ಗೆ ಸರಣಿ ಲೇಖನ ಗಳನ್ನು ಅನಂತರ ಕಳವೆ ಬರೆದರು, ‘ವಿಶ್ವವಾಣಿ’ ಮುಖಪುಟದ -ಯರ್ ಆಗಿ (ಮುಖಪುಟದ ಮೇಲ್ಭಾಗ ಎಂಟೂ ಕಾಲಮ್ಮಿಗೆ ಹರವಿ ಪ್ರಕಟಿಸುವುದು) ಅಷ್ಟೂ ದಿನ ದಿನ ಪ್ರಕಟಿಸಿತ್ತು; ಮತ್ತದು ರಾಜ್ಯಾದ್ಯಂತ ಚರ್ಚೆಗೆ ಒಳಗಾಗಿತ್ತು. ಅವತ್ತಿಂದ ಇವತ್ತಿನವರೆಗೂ ಯಾದಗಿರಿಯ ನೀರಿನ ಪರಿಸ್ಥಿತಿ ಬದಲಾ ಗಿಲ್ಲ. ಇತ್ತೀಚೆಗಷ್ಟೇ ಜಿಲ್ಲೆಯ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಊರಿಗೆ ಊರೇ ಅಸ್ವಸ್ಥಗೊಂಡಿದ್ದಲ್ಲದೇ ಮೂವರು ಮಹಿಳೆಯರು ಮೃತಪಟ್ಟರು.

ಕಳೆದ ಎಂಟು ತಿಂಗಳ ಅವಧಿಯಲ್ಲಿ ಕಲುಷಿತ ನೀರು ಹತ್ತಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿದೆ. ದುರಂತವೆಂದರೆ ಬಹುತೇಕ
ಮಾಧ್ಯಮಗಳಲ್ಲಿ ಇದು ಸ್ಥಳೀಯ ಸುದ್ದಿಯಾಗಿ ಪ್ರಕಟಗೊಂಡಿತು. ಹೆಚ್ಚೆಂದರೆ ಕೆಲವೇ ಕೆಲವು ಪತ್ರಿಕೆಗಳು ಎಲ್ಲ ಆವೃತ್ತಿಗಳಲ್ಲಿ ಪ್ರಕಟಿಸಿದ್ದೇ ಸಾಧನೆ. ಇನ್ನು ಎಲೆಕ್ಟ್ರಾನಿಕ್ಸ್ ಮಾಧ್ಯಮಗಳು ರಾಜಕೀಯ ಚರ್ಚೆಗಳಲ್ಲಿ ಬ್ಯುಸಿ. ಮಾಧ್ಯಮಗಳದ್ದೇ ಈ ಸ್ಥಿತಿಯಾದರೆ, ಚುನಾವಣೆಯ ಸಿದ್ಧತೆಯಲ್ಲಿರುವ ಜನಪ್ರತಿನಿಧಿಗಳಿಗೆ ಇಂಥವಕ್ಕೆಲ್ಲ ಪುರುಸೊತ್ತೆಲ್ಲಿಂದ ಬರಬೇಕು? ನೀರಿನ ಸಮಸ್ಯೆಯೊಂದು ಇಂದಿಗೂ ಜೀವಬಲಿಯ ಮಟ್ಟಿಗೆ ಕಾಡುತ್ತಿದೆ ಎಂದರೆ ದೇಶದ ಪ್ರಗತಿಗೇನು ಅರ್ಥ? ನಾವೀಗ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಐದನೇ ಸ್ಥಾನದಲ್ಲಿದ್ದೇವಂತೆ. ಹಾಗೆಂದು ಕಾಲರ್ ನೀವಿಕೊಳ್ಳುತ್ತೇವೆ. ನಾಚಿಕೆ ಯಾಗಬೇಕು. ಹಳ್ಳಿಹಳ್ಳಿಗಳ ಮನೆಮನೆಗೂ ನಲ್ಲಿಯ ಮೂಲಕ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸಲು ಕೇಂದ್ರ ಸರಕಾರ, ತನ್ನ ಮಹತ್ವಾ ಕಾಂಕ್ಷಿ ‘ರಾಷ್ಟ್ರೀಯ ಜಲಜೀವನ್ ಮಿಷನ್’ ಜಾರಿಗೊಳಿಸುತ್ತಿದೆ.

ನಮ್ಮಲ್ಲೂ ಇದು ೨೦೧೯ರಿಂದಲೇ ‘ಮನೆಮನೆಗೆ ಗಂಗೆ’ ಹೆಸರಿನಲ್ಲಿ ಜಾರಿಯಲ್ಲಿದೆ. ಸರಕಾರಿ ಅಂಕಿ-ಅಂಶಗಳ ಪ್ರಕಾರ ಈವರೆಗೆ ೩೮ ಲಕ್ಷಕ್ಕೂ ಹೆಚ್ಚು
ಮನೆಗಳಿಗೆ ಹೊಸದಾಗಿ ನಲ್ಲಿ ನೀರಿನ ಸಂಪರ್ಕ ಒದಗಿಸಲಾಗಿದೆಯಂತೆ. ಈ ಮೊದಲು ೨೪.೫೧ ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿತ್ತು. ಸರಕಾರವೇ
ಹೇಳುತ್ತದೆ ನಮ್ಮಲ್ಲಿರುವುದು ಒಟ್ಟು ೧.೦೧ ಕೋಟಿ ಮನೆಗಳು. ನಾಲ್ಕು ವರ್ಷಗಳಲ್ಲಿ ನಾವು ಸಾಽಸಿದ್ದು ಮೂರನೇ ಎರಡು ಭಾಗ. ಇನ್ನೂ ಶೇ.೩೭.೮ ರಷ್ಟು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಸಿಗಬೇಕಿದೆ.

ಇರಲಿ, ಹಾಗಾದರೆ ಯಾದಗಿರಿ ಇವೆಲ್ಲವುಗಳಿಂದ ಹೊರತಾಗಿದೆಯೇ? ಅಥವಾ ಕಾರ್ಯಕ್ರಮ ಅನುಷ್ಠಾನಗೊಂಡ ಬಳಿಕವೂ ‘ಕಲುಷಿತ ಗಂಗೆ’ಯನ್ನೇ ಮನೆಮನೆಗೆ ಪೂರೈಸಲಾಗುತ್ತಿದೆಯೇ? ಯಾದಗಿರಿಯ ಪ್ರಕರಣದಲ್ಲಿ ಪೂರೈಕೆಯಾದ ನಲ್ಲಿಯ ನೀರೇ ಕಲುಷಿತಗೊಂಡಿದ್ದು, ಮಲಮಿಶ್ರಿತ ನೀರಿನಿಂದಾಗಿ ಸಾವು ಸಂಭವಿಸಿದೆ ಎಂದು ವೈದ್ಯಕೀಯ ವರದಿಗಳೇ ಸಾಕ್ಷಿ ನುಡಿದಿವೆ.

ಹಾಗಿದ್ದರೆ ‘ಜಲಜೀವನ್ ಮಿಷನ್’ ನ ಔಚಿತ್ಯವೇನು? ಇದರ ಕ್ರಿಯಾಯೋಜನೆ ಪ್ರಕಾರ ರಾಜ್ಯದಲ್ಲಿ ಒಟ್ಟು ೨೮,೩೩೩ ಗ್ರಾಮಗಳಿವೆ. ಈ ಪೈಕಿ ೪,೪೧೦ ಹಳ್ಳಿಗಳಲ್ಲಿ ಎಲ್ಲ ಮನೆಗಳಿಗೂ ನಲ್ಲಿ ನೀರಿನ ಸಂಪರ್ಕ ಇದೆ. ಆದರೆ, ಈ ಎಲ್ಲದಕ್ಕೂ ಕೇಂದ್ರ ಸರಕಾರ ಶೇ.೧೦೦ ಸಂಪರ್ಕದ ಮಾನ್ಯತೆ ನೀಡಿಲ್ಲ. ಬದಲಾಗಿ ಮಾನ್ಯತೆ ಪಡೆದಿರುವ ಗ್ರಾಮಗಳ ಸಂಖ್ಯೆ ೧,೧೧೭ ಮಾತ್ರ ಏನಿದರ ಅರ್ಥ? ಇನ್ನಂತೂ ಬೇಸಗೆ. ರಾಜ್ಯಾದ್ಯಂತ ಅದರಲ್ಲೂ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ನೀರಿನ ಬರದ ಬೆನ್ನಲ್ಲೇ ಮಾಲಿನ್ಯಯುಕ್ತ ನೀರಿನ ಸಮಸ್ಯೆ ಉಣಿಸುತ್ತಲೇ ಹೋಗುತ್ತದೆ.

ಮಳೆಗಾಲದ ಅಂಚಿನಲ್ಲೇ ಕಲುಷಿತ ನೀರಿಗೆ ಜನ ಸತ್ತರೆಂದ ಮೇಲೆ ಬೇಸಗೆಯ ಪಾಡೇನು? ಯಾದಗಿರಿ ಅಂತಲೇ ಅಲ್ಲ, ಕಲಬುರಗಿ ಜಿಲ್ಲೆಯ ೪೧ ಗ್ರಾಮ ಗಳೂ ಮೇಲಿಂದ ಮೇಲೆ ಇಂಥ ಸಮಸ್ಯೆಗೆ ತುತ್ತಾಗುತ್ತಲೇ ಇವೆ. ಹೊಸಪೇಟೆಯೂ ಇದಕ್ಕೆ ಹೊರತಲ್ಲ; ಕಳೆದ ಜನವರಿಯಲ್ಲಷ್ಟೇ ರಾಣಿಪೇಟೆಯಲ್ಲಿ
200 ಮಂದಿ ಅಸ್ವಸ್ಥಗೊಂಡು ಒಬ್ಬ ಮಹಿಳೆ ಮೃತಪಟ್ಟಿದ್ದಳು. ೨೨ರ ನವೆಂಬರ್‌ನಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗದ ಮುದೇನೂರ ಗ್ರಾಮದಲ್ಲಿ
ಮೂವರು ಅಸುನೀಗಿದ್ದಕ್ಕೆ ಕಾರಣವೂ ಮತ್ತದೇ ಕಲುಷಿತ ನೀರೇ.

ಯಾದಗಿರಿ, ಕಲಬುರಗಿ, ಬಳ್ಳಾರಿ, ರಾಯಚೂರು, ವಿಜಯನಗರ, ಚಾಮರಾಜನಗರ, ಚಿತ್ರದುರ್ಗ, ಕೊಪ್ಪಳ, ಬೆಳಗಾವಿಯಲ್ಲಿ ಇನ್ನು ಮೂರು-ನಾಲ್ಕು ತಿಂಗಳು ನೀರೇ ವಿಷವಾಗಿ ಕಾಡುತ್ತದೆ. ಏಕೆಂದರೆ ಈ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿನ ನೀರು ಕಲುಷಿತ ಮಾತ್ರವಲ್ಲ, ನಿಗದಿಗಿಂತ ಹೆಚ್ಚು ಆಮ್ಲೀಯ (ಪಿಚ್)ಮಟ್ಟವನ್ನು ಹೊಂದಿವೆ. ಭಾರತೀಯ ಮಾನಕ ಬ್ಯೂರೊ (ಐಎಸ್‌ಐ) ಪ್ರಕಾರ ೧೦೦ ಮಿಲಿಲೀಟರ್‌ನಲ್ಲಿ ಇ-ಕೊಲಿ ಬ್ಯಾಕ್ಟೀರಿಯಾ ಪತ್ತೆಯಾಗಲೇ ಬಾರದು.

ಮಾತ್ರವಲ್ಲ, ಪಿಎಚ್‌ಮಟ್ಟ ೬.೫ರಿಂದ ೮.೫ರಷ್ಟು ಮಾತ್ರ ಇರಬೇಕು. ಆದರೆ ಈ ಜಿಲ್ಲೆಗಳಲ್ಲಿ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಇಂಥ ಮಾನದಂಡಕ್ಕೆ ತಕ್ಕನಾಗಿದೆಯೇ? ಒಂದೊಮ್ಮೆ ಇಂಥ ಪರೀಕ್ಷಿಸದ ನೀರನ್ನು ನಾವು ಧೈರ್ಯವಾಗಿ ಕುಡಿಯಬಲ್ಲೆವೇ? ಸಹವಾಸವೇ ಬೇಡ ಎಂದು ಬ್ರಹ್ಮ
ಕಪಾಲದಂತೆ ಬಿಸ್ಲೇರಿ ಬಾಟಲಿ ಹಿಡಿದು ಓಡಾಡಿಬಿಡುತ್ತೇವೆ. ಹಾಗಾದರೆ ಆ ಗ್ರಾಮಗಳ ಕಾಯಂ ನಿವಾಸಿಗಳು ದಿನಾ ಬಿಸ್ಲೇರಿಯನ್ನೇ ಕುಡಿಯಲಾದೀತೇ?
ಒಮ್ಮೆ ಮೂವತ್ತು ವರ್ಷಗಳ ಹಿಂದಕ್ಕೆ ಹೋಗಿ ನೋಡಿ, ಇವತ್ತಿನ ಸೋ ಕಾಲ್ಡ್ ಅಭಿವೃದ್ಧಿ, ನಾವೀಗ ವ್ಯಾಖ್ಯಾನಿಸುತ್ತಿರುವ ನಗರಾಧಾರಿತ ನಾಗರಿಕತೆ ಯಿಂದ ಬಲು ದೂರವಿದ್ದ ನಮ್ಮ ಹಳ್ಳಿಗಳಲ್ಲಿ ಎಲ್ಲೆಂದರಲ್ಲಿ, ಬಾಯಾರಿದ ತಕ್ಷಣ ಎದರಿದ್ದ ಹೋಟೆಲ್‌ಗೋ, ಯಾರದ್ದೋ ಮನೆಗೋ ಹೋಗಿ ಒಂದು ಲೋಟ ತಣ್ಣನೆಯ ನೀರು ಕೇಳಿ ಪಡೆದು, ಧೈರ್ಯವಾಗಿ ಕುಡಿದು ಬಾಯಾರಿಕೆ ತಣಿಸಿಕೊಂಡು ಬರುತ್ತಿದ್ದೆವಲ್ಲಾ, ಅಂಥ ಸುರಕ್ಷಿತ ನೀರು ಈಗೆಲ್ಲಿ ಹೋಯಿತು? ಊರಿನ ಕೆರೆಯೆಂದರೆ ಅಲ್ಲಿ ಹಸುಗಳ ಮೈ ತೊಳೆಸುತ್ತ, ಬಟ್ಟೆ ಒಗೆಯುತ್ತ, ಕೊನೆಗೆ ‘ಹೊರಕಡೆ’ಗೆ ಹೋಗಿ ಬಂದ ಮಕ್ಕಳ ಅಂಡನ್ನೂ ಅದರಲ್ಲೇ ಅದ್ದಿ ತೊಳೆಯುತ್ತ ಇದ್ದೆವಲ್ಲಾ; ಆದರೂ ನೀರಿನ ಶುದ್ಧತೆಗೆ ಭಂಗ ಬಂದಿರಲಿಲ್ಲವೇಕೆ? ನಮ್ಮ ಮನೆಯ ಬಾವಿ ಬತ್ತಿ ಹೋದರೆ, ಊರಿನ ಇನ್ಯಾರದ್ದೋ(ದಲಿತರ ಮನೆಗಳದ್ದೂ) ಮನೆಯ ಬಾವಿಯಿಂದ ಕುಡಿಯುವ ನೀರನ್ನು ಸೇದಿ ತಂದು ಕುಡಿಯುತ್ತಿದ್ದೆವಲ್ಲಾ; ಅಂಥ ಸಂಬಂಧಗಳು ಸಡಿಲಾದದ್ದು ಎಲ್ಲಿ? ಉತ್ತರ ಇಷ್ಟೇ, ನೀರು ಎಂಬುದು ತನ್ನ ‘ನಂಬಿಕೆ’ಯನ್ನೇ ಕಳೆದುಕೊಂಡಿದೆ. ಹೀಗಾಗಿ ಶುದ್ಧ ನೀರಿನ ಪೂರೈಕೆಯ ಹೆಸರಿನಲ್ಲಿ ಯೋಜನೆಗಳು ರೂಪುಗೊಳ್ಳಬೇಕಿದೆ. ಇಂಥ ಭಾವನಾತ್ಮಕ ಹಳ್ಳಿಗಳ ಶುದ್ಧ ಪರಿಸರವನ್ನು, ಸಹಬಾಳ್ವೆಯ ಭದ್ರ ಬುನಾದಿಯನ್ನು ಹೊಂದಿದ್ದ ಜಲವ್ಯವಸ್ಥೆಯನ್ನೇ ಕೇಂದ್ರವಾಗಿಟ್ಟುಕೊಂಡಿದ್ದ ಸುಂದರ ಸಮಾಜಕ್ಕೆ ಕಲ್ಲು ಹಾಕಿದ ಈ ಅಭಿವೃದ್ಧಿ, ಆಧುನಿಕ ನಾಗರಿಕತೆ ನಮಗೆ ಅಗತ್ಯವಿತ್ತೇ? ನೀರನ್ನೂ ದುಡ್ಡುಕೊಟ್ಟು ಕೊಂಡು ಕುಡಿಯಬೇಕಾದ ಯೋಜನೆಗಳು ಸಮೃದ್ಧ ಮಳೆ ದಿನಗಳನ್ನು ಹೊಂದಿರುವ ಭಾರತದಂಥ ದೇಶಕ್ಕೆ ಅನಿವಾ ರ್ಯವೇ? ವ್ಯಾವಹಾರಿಕತೆಯನ್ನೇ ರೂಢಿಸುವ ಜಲಜೀವನ್ ಮಿಷನ್‌ನಂಥ ಯೋಜನೆಗಳು ಹಳ್ಳಿಗಳನ್ನೂ ಪಟ್ಟಣಗಳ ರೀತಿಯಲ್ಲೇ ‘ಅಪರಿಚಿತ ಬದುಕಿಗೆ’ ತಳ್ಳುತ್ತಿದೆಯೇ ಹೊರತೂ ನೀರಿನ ವಿಚಾರದಲ್ಲಿ ನೈಜ ಸುರಕ್ಷೆಯನ್ನು ಕಟ್ಟಿಕೊಡುತ್ತಿಲ್ಲ.

ಹಾಗಿದ್ದರೆ ಕಲುಷಿತ ನೀರಿನಿಂದ ಇನ್ನೂ ಜನ ಸಾಯುವ ಪ್ರಮೇಯ ಇರಲಿಲ್ಲ. ನಗರ ಕೇಂದ್ರಿತ ಸಮಾಜದಲ್ಲಿ ‘ನೀರಿನ ಮೀಟರ್’ ಅನಿವಾರ್ಯ ಮಾತ್ರವಲ್ಲ, ಅಗತ್ಯ. ಆದರೆ ಹಳ್ಳಿಗಳಲ್ಲಿ ಇಂಥ ಮೀಟರ್‌ಗಳು ಬದುಕಿನ ಮುಗ್ಧತೆಯನ್ನೇ ಕಸಿದುಬಿಡುವುದು ಸುಳ್ಳಲ್ಲ. ಅಲ್ಲಿ ಹಿತ್ತಲಿನಲ್ಲಿ ಬೆಳೆದ ಹೂವು, ತರಕಾರಿಗೆ ಭರಪೂರ ನೀರು ಹಾಯಿಸಬೇಕು. ಗದ್ದೆ ತೋಟಕ್ಕೆ ಹೋಗಿಬಂದು ಮನಸೋಚ್ಛೆ ಮೀಯಬೇಕು. ದನ-ಕರುಗಳು, ಕುರಿ, ಮೇಕೆಗಳನ್ನು
ಸಮೃದ್ಧವಾಗಿಡಬೇಕು. ದಿನನಿತ್ಯ ಹಟ್ಟಿ-ಅಂಗಳವನ್ನು ಗುಡಿಸಿ, ಸಾರಿಸಿ, ನೀರು ಹಾಕಿ ಸ್ವಚ್ಛಗೊಳಿಸಿ ರಂಗೋಲಿ ಇಡಬೇಕು.

ಇಂಥವೆಲ್ಲದರ ನಡುವೆ ‘ಮೀಟರ್ ನೀರು’ ಹಳ್ಳಿಗರ ಗಂಟಲಲ್ಲಿ ಇಳಿದೀತೇ? ಹಾಗೂ ಇಳಿದ ನೀರು ಮೈಗೆ ಹಿಡಿದೀತೇ? ನೀರಿನ ಹೆಸರಿನಲ್ಲಿ ಗ್ರಾಮ ಪಂಚಾಯತ್ ಮಟ್ಟಕ್ಕೂ ಭ್ರಷ್ಟಾಚಾರ ವಿಕೇಂದ್ರೀಕರಣಗೊಳಿಸುವ ಕೆಲಸ ಮಾತ್ರ ಇಂಥ ಯೋಜನೆಗಳಿಂದ ಆಗುತ್ತಿದೆ ಎಂಬುದು ಕೇವಲ ಅತೃಪ್ತ
ಆತ್ಮದ ಗೊಣಗಾಟವಲ್ಲ; ಬದಲಿಗೆ ವಾಸ್ತವ. ಪ್ರತಿ ಹನಿ ನೀರಿನ ಬಳಕೆಯಲ್ಲೂ ಲೆಕ್ಕಾಚಾರ ಬೇಕೇ ಬೇಕು, ನೀರಿನ ಆಡಿಟಿಂಗ್ ಆಗಬೇಕು ಎಂಬುದನ್ನು
ಬಹಳ ಹಿಂದಿನಿಂದಲೂ ನಾವೇ ಹೇಳಿಕೊಂಡು ಬಂದಿದ್ದೇವೆ, ಸತ್ಯ. ಆದರೆ ನೀರಿಗೆ ‘ಮೀಟರ್’ ಅಳವಡಿಸುವ ಸ್ವರೂಪದಲ್ಲಲ್ಲ ಅದು. ನೀರಿನ ಮಿತ
ಬಳಕೆ, ಸಮಾನ ಹಂಚಿಕೆ, ನೀರಿನ ಸಂರಕ್ಷಣೆ, ಜಲಸಂಪತ್ತಿನ ವೃದ್ಧಿ ಇಂಥವುಗಳು ಹಳ್ಳಿಗಳಲ್ಲಿ ಆಗಬೇಕೇ ವಿನಾ, ಇಡೀ ಗ್ರಾಮ ವ್ಯವಸ್ಥೆಯನ್ನೇ ವಿಘಟಿತಗೊಳಿಸುವ, ಮನಸುಗಳನ್ನು ದೂರ ಮಾಡುವ ‘ನಲ್ಲಿ’ಯ ಪೈಪುಗಳ ಹಂದರ ಗ್ರಾಮೀಣ ರಸ್ತೆಗಳಡಿ ಅಡಗಿಕೊಳ್ಳುವ ಯೋಜನೆಗಳಿಂದ ಯಾವುದೇ ಪರುಷಾರ್ಥ ಸಾಧನೆ ಆಗುವುದಿಲ್ಲ.

ಬದಲಿಗೆ ಮತ್ತೊಂದು ಸುಲಿಗೆಯ ಮಾರ್ಗ ಗ್ರಾಮೀಣರನ್ನು ಕಿತ್ತು ತಿನ್ನುತ್ತದೆ. ಮತ್ತಷ್ಟು ಭ್ರಷ್ಟಾಚಾರ ತಾಂಡವವಾಡುತ್ತದೆ. ಉದಾಹರಣೆಗೆ ಹಳ್ಳಿಗಳಲ್ಲಿ ಯಾರದ್ದೋ ಮನೆಯಲ್ಲಿ ಮದುವೆಯೋ, ಮುಂಜಿಯೋ ಆದರೆ, ಊರಿನವರೆಲ್ಲ ಸೇರಿ ಅಲ್ಲಿ ಸಮಾವೇಶಗೊಳ್ಳಬಹುದಾದ ಜನರಿಗೆ ದಿನದ ಬಳಕೆಗೆ
ಆಗುವಷ್ಟು ನೀರನ್ನು ಹೊಂದಿಸುತ್ತಿದ್ದರು. ಅದು ಆ ಮನೆಯ ಬಾವಿಯಿಂದಲೇ ಆಗಿದ್ದಿರಬಹುದು, ಅಲ್ಲಿ ನೀರು ಸಾಲದೆನಿಸಿದರೆ, ಅಕ್ಕಪಕ್ಕದ ಮನೆಗಳಿಂದಲೋ, ಊರ ಕೊನೆಯ ಕೆರೆಯಿಂದಲೋ… ಒಟ್ಟಾರೆ ನೀರಿನ ಬರ ಕಾಡದಂತೆ ನೋಡಿಕೊಳ್ಳಲಾಗುತ್ತಿತ್ತು.

ಇದೀಗ ‘ಮೀಟರ್ ನಲ್ಲಿ’ಗಳಿಂದ ಇಂಥ ಪರಸ್ಪರ ಸಹಕಾರ-ಸೌಹಾರ್ದ ನಿರೀಕ್ಷಿಸಲು ಸಾಧ್ಯವೇ? ಆಗ ಅನಿವಾರ್ಯವಾಗಿ ಗ್ರಾಮಪಂಚಾಯತಿಗಳ ‘ವಾಟರ್‌ಮ್ಯಾನ್ ’ನ ಕೈ ಬೆಚ್ಚಗಾಗುತ್ತದೆ. ನಿಧಾನಕ್ಕೆ ನೀರು ಪೂರೈಕೆಯ ಇಡೀ ವ್ಯವಸ್ಥೆ ಖಾಸಗಿಯವರಿಗೆ ಹೋಗುತ್ತದೆ. ಆಮೇಲಂತೂ ಅವರು
ನಿಗದಿಪಡಿಸಿದ್ದೇ ದರ, ನೀಡಿದ್ದೇ ನೀರು. ಇಂಥ ದಿನಗಳನ್ನು ನಮ್ಮ ಹಳ್ಳಿಗಳು ಕಾಣುವುದು ದೂರವಿಲ್ಲ. ಅಂದರೆ ಈವರೆಗೆ ಬಿಸ್ಲೇರಿಯಂಥ ಶುದ್ಧ(?) ನೀರಿನ ಹಕ್ಕಷ್ಟೇ ಶ್ರೀಮಂತರದ್ದಾಗಿತ್ತು. ಇನ್ನುಸಾಮಾನ್ಯ ನೀರು ಸಹ ಹಣವಂತರ ಸ್ವತ್ತಾಗುತ್ತದೆ.

ಹಣವಿದ್ದರೆ ನೀರು ಕುಡಿ, ಇಲ್ಲದಿದ್ದರೆ ಬಾಯಾರಿ (ಕಲುಷಿತ ನೀಡು ಕುಡಿದು) ಸಾಯಿ ಎಂಬುದೇ ನಮ್ಮ ಸರಕಾರಿ ಯೋಜನೆಗಳ ಉದ್ದೇಶ? ಈಗ
ಂi i z ಗಿ ರಿ ಂi ಂ x U ಲಿ ಆಗುತ್ತಿರುವುದೂ ಇದೇ ಅಲ್ಲವೇ? ಗ್ರಾಮೀಣಾ ಭಾಗದ ಪ್ರತಿ ಮನೆ ಮನೆಗೂ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ
ಮಾಡಬೇಕೆಂಬ ಸರಕಾರದ ಚಿಂತನೆ ಒಳ್ಳೆಯದ್ದೇ. ‘ಜಲ ಜೀವನ ಮಿಷನ್’ ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯೇ. ಚಿಂತನೆಯಲ್ಲಿ
ದೋಷವಿಲ್ಲ. ಆದರೆ ಅದರ ನೀತಿ ನಿರೂಪಣೆ ಬದಲಾಗಬೇಕಿದೆ. ದೇಶದಲ್ಲಿನ ಪ್ರತಿ ಪ್ರಜೆಗೂ ಶುದ್ಧ ನೀರಿನ ನಲ್ಲಿ ಸಂಪರ್ಕ ಕಲ್ಪಿಸುವುದು ನಿಜಕ್ಕೂ
ಜಾಬ್ದಾರಿಯುತ ಸರಕಾರದ ಕರ್ತವ್ಯದ ಭಾಗ. ಆದರೆ ಇದು ಪೈಪುಗಳ ಜಾಲದ ಮೂಲಕ ಆಗಬೇಕಾದುದಲ್ಲ.

ಸ್ಥಳೀಯ ಅಗತ್ಯದ ಆಧಾರದ ಮೇಲೆ ಲಭ್ಯವಿರುವ ಜಲ ಮೂಲಗಳನ್ನು ಸದೃಢಗೊಳಿಸುವ ಕೆಲಸ ಆಗಬೇಕಿದೆ. ಕೆರೆ-ಕಟ್ಟೆಗಳ ಪುನರುಜ್ಜೀವನ ಆಗಬೇಕಿದೆ. ಏಕೆಂದರೆ ಕೆರೆಗಳೆಂದರೆ ಅದೊಂದು ಕೇವಲ ಭೌತಿಕ ನಿರ್ಮಾಣವಲ್ಲ, ಸಾಂಸ್ಕೃತಿಕ ಸಾಮಾಜಿಕ ಕೇಂದ್ರ. ವ್ಯಕ್ತಿಗತ ನೆಲೆಯಲ್ಲಿ ನೀರು ಕೊಡುವ ಬದಲು, ಸಂಬಂಧಗಳನ್ನು ಇನ್ನಷ್ಟು  ಬೆಸೆಯುವ ಇಂಥ ಸಾಮೂಹಿಕ ಜಲಸಂರಕ್ಷಣಾ ವ್ಯವಸ್ಥೆಯ ಹೊಣೆಗಾರಿಕೆಗೆ ಸ್ಥಳೀಯ ಆಡಳಿತಗಳನ್ನು
ಸಜ್ಜುಗೊಳಿಸಬೇಕಿದೆ.

ನಿಗದಿತ ಆದಾಯವಿಲ್ಲದ ಹಳ್ಳಿಗರಿಗೆ ಅದರಲ್ಲೂ ರೈತಾಪಿ, ಕೃಷಿ ಕಾರ್ಮಿಕರು, ವೃದ್ಧರೇ ಉಳಿದಿರುವ ಹಳ್ಳಿಗಳಿಗೆ ಇಂಥ ನೀರಿನ ಬಿಲ್, ಸೆಸ್‌ಗಳು ವಿಹಿತವಲ್ಲವೇ ಅಲ್ಲ. ಹಾಗೆಂದು ನೀರಿನ ಉಚಿತ ಸಂಪರ್ಕವೂ ಸಲ್ಲ. ಇದರ ಬದಲಿಗೆ ನೆಲದ ನೀರು, ಮಣ್ಣುಗಳ ರಕ್ಷಣೆಯ ಜಾಗೃತಿ ಮೂಡಲಿ. ಅಂಥ ಸಾಮೂಹಿಕ ಪ್ರಯತ್ನ, ಸಮುದಾಯ ಪಾಲ್ಗೊಳ್ಳಬಹುದಾದ ಯೋಜನೆಗಳು ಜಾರಿಗೊಳ್ಳಲಿ. ನೆಲದೊಳಗಣ ನೀರಿನ ಮಟ್ಟ ಹೆಚ್ಚಿಸುವ ನೀರಿಂಗಿಸುವ ಚಳವಳಿಗಳು ರೂಪುಗೊಳ್ಳಲಿ. ಆಗ ಮಾತ್ರ ಬಡವರ ಜೀವ ಕಲುಷಿತ ನೀರಿಗೆ ಬಲಿಯಾಗುವುದು ತಪ್ಪೀತು.