Sunday, 15th December 2024

ಕುಳಿತು ಕುಡಿದರೆ ಭೂಮಂಡಲದ ನೀರೂ ಸಾಲದು !

ಸುಪ್ತ ಸಾಗರ

rkbhadti@gmail.com

ಇನ್ನೊಂದು ವಿಶ್ವಜಲ ದಿನ ( ಮಾ.೨೨) ಕಾಲಿಡುತ್ತಿದೆ. ಇಂಥ ದಿನಗಳು ಬರುತ್ತಿವೆ ಹೋಗುತ್ತಿವೆ. ಆದರೆ ಇವುಗಳ ಆಚರಣೆಯಿಂದ ನಾವೆಷ್ಟು ಜಾಗೃತ ರಾಗಿದ್ದೇವೆ, ಪರಿಸ್ಥಿತಿ ಎಷ್ಟು ಬದಲಾಗಿದೆ ಎಂಬುದಕ್ಕೆ ಉತ್ತರ ಮಾತ್ರ ಸಿಕ್ಕಿಲ್ಲ. ಪ್ರತಿವರ್ಷ ನೀರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಿ, ಪಟ್ಟಿ ಮಾಡಿ, ಆ ವರ್ಷದ ಆದ್ಯತೆಯನ್ನು ಪರಿಗಣಿಸಿ ವಿಶ್ವ ಜಲ ದಿನದಂದು ವಿಶ್ವ ಸಂಸ್ಥೆ ಘೋಷಣೆಯೊಂದನ್ನು ಹೊರಡಿಸುತ್ತದೆ.

೧೯೯೨ರಲ್ಲಿ ರಿಯೋ ಡಿ ಜನೇರೋದಲ್ಲಿ ಮೊತ್ತಮೊದಲಿಗೆ ನೀರಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಶ್ವ ಮಟ್ಟದ ಸಭೆಯೊಂದನ್ನು ಕರೆಯಲಾಯಿತು. ಅಲ್ಲಿಯೇ ಮಾ೨೨ನ್ನು ವಿಶ್ವಜಲದಿನವಾಗಿ ಪ್ರತಿ ವರ್ಷ ಆಚರಿಸಬೇಕೆಂಬ ನಿರ್ಧಾರವನ್ನು ಕೈಗೊಳ್ಳಲಾಯಿತಲ್ಲದೇ, ಭೂಮಿಯ ಮೇಲಿನ ಲಭ್ಯ
ನೀರಿನಲ್ಲಿ ಬಳಕೆಗೆ ಯೋಗ್ಯವಾದ ಶೇ೨.೭ ಸಂರಕ್ಷಿಸಿಕೊಳ್ಳಲು ಹಲವು ಯೋಜನೆಗಳನ್ನು ಕೈಗೊಳ್ಳಲಾಯಿತು. ಇದರನ್ವಯ ೧೯೯೩ರಿಂದ ಈವರೆಗೆ ವಿಶ್ವ ಜಲದಿನದಂದು ಪ್ರತಿ ವರ್ಷ ಒಂದಲ್ಲ ಒಂದು ಘೋಷಣೆಗಳೊಂದಿಗೆ ಜಲ ಸಂರಕ್ಷಣೆಯ ಅಭಿಯಾನವನ್ನು ನಡೆಸಲಾಗುತ್ತದೆ.

ಜನ ಜಾಗೃತಿ ಇದರ ಮೂಲ ಉದ್ದೇಶ. ವಿಶೇಷವೆಂದರೆ, ಈಗ್ಗೆ ಐದಾರು ವರ್ಷಗಳ ಹಿಂದೆ, ಬಹುಶಃ ೨೦೧೭ರಲ್ಲಿ ವಿಶ್ವಸಂಸ್ಥೆಯ ಗಮನ ಸೆಳೆದ ಸಂಗತಿ ‘ನೀರಿನ ಉದ್ಯಮ’ವಾಗಿತ್ತು. ‘ಬೆಟರ್ ವಾಟರ್, ಬೆಟರ್ ಜಾಬ್ಸ್’ ಆ ವರ್ಷದ ಘೋಷಣೆ. ನಿಮಗೆ ಅಚ್ಚರಿಯಾಗಬಹುದು, ನೀರಿಗೂ ಉದ್ಯೋಗಕ್ಕೂ
ಸಂಬಂಧವೇನಿದೆ? ನಮ್ಮಲ್ಲಿ ನೀರಿಲ್ಲದೇ ಅಥವಾ ನೀರು ತರಲಿಕ್ಕಾಗಿಯೇ ಅದೆಷ್ಟೋ ಮಂದಿ ತಮ್ಮ ದಿನದ ಅದೆಷ್ಟೋ ಗಂಟೆಗಳನ್ನು ವ್ಯಯಿಸುತ್ತಿದ್ದಾರೆ. ಮೈಲುಗಟ್ಟಲೆ ದೂರದಿಂದ ನೀರು ಹೊತ್ತು ತರಲಿಕ್ಕಾಗಿ ಪ್ರಯಾಸಪಡುತ್ತಿದ್ದಾರೆ. ಇಷ್ಟಾದರೂ ಮನೆಯ ಸನಿಹದಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.

ಸುಲಭದಲ್ಲಿ ಸಿಗುತ್ತಿರುವ ನೀರನ್ನು ನೇರವಾಗಿ ಕುಡಿಯುವ ಧೈರ್ಯ ಯಾರಿಗೂ ಇಲ್ಲವಾಗಿದೆ. ಏಕೆಂದರೆ ವರ್ಷದಿಂದ ವರ್ಷಕ್ಕೆ ನೀರಿನಿಂದ ಹುಟ್ಟಿ ಕೊಳ್ಳುತ್ತಿರುವ ರೋಗಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿಯೇ ಹೋಟೆಲ್‌ಗಳಲ್ಲಿ, ಆಹಾರ ಉದ್ದಿಮೆಗಳಲ್ಲಿ, ಐಸ್‌ಕ್ರೀಂ, ಜ್ಯೂಸ್ ಅಂಗಡಿಗಳಲ್ಲಿ ’
ಮಿನರಲ್ ವಾಟರ್ ಬಳಸಲಾಗುತ್ತದೆ’ ಎಂಬ ಭರವಸೆಯನ್ನು ನೀಡಿದರೆ ಮಾತ್ರ ಜನ ಅಲ್ಲಿ ಧೈರ್ಯವಾಗಿ ಕೊಳ್ಳಲು ಮುಂದಾಗುವಂತಾಗಿದೆ. ಇವತ್ತು ಜಗತ್ತಿನಲ್ಲಿ ಕುಡಿಯುವ ನೀರಿನ ಉದ್ಯಮವನ್ನು ಹೊಂದಿರದ ದೇಶಗಳೇ ಇಲ್ಲ.

ಕೆಲ ಕಂಪನಿಗಳು ಪ್ರತಿ ದಿನ ಏನಿಲ್ಲವೆಂದರೂ ಲಕ್ಷ ಲೀಟರ್ ಬಾಟಲಿ ನೀರನ್ನು ಮಾರಾಟ ಮಾಡುತ್ತವೆ. ಖನಿಜಯುಕ್ತ ನೀರಿನ ಹೆಸರಿನಲ್ಲಿ ಇಂದು ನೂರಾರು ಬಾಟಲಿ ನೀರಿನ ಕಂಪನಿಗಳು ಜನ್ಮ ತಾಳಿವೆ. ಶುದ್ಧ ಕುಡಿಯುವ ನೀರಿನ ಅಲಭ್ಯತೆಯೇ ಇಂಥ ಕಂಪನಿಗಳ ಬಂಡವಾಳ. ನೀರು ಇವತ್ತು ಕೇವಲ ಜೀವನಾವಶ್ಯಕ ವಸ್ತುವಾಗಿಯಷ್ಟೇ ಉಳಿದಿಲ್ಲ. ಅದೊಂದು ಪ್ರಾಡಕ್ಟ್. ಜನರ ಖರೀದಿಯ ಶಕ್ತಿಯನ್ನವಲಂಬಿಸಿ ನೀರಿನ ದರ ನಿಗದಿಯಾಗುತ್ತಿದೆ.
ಸಾಮಾನ್ಯ ಕಿರಾಣಿ ಅಂಗಡಿಗಳಲ್ಲಿ ಮಾರಾಟವಾಗುತ್ತಿರುವ ನೀರಿನ ದರ ಕಡಿಮೆ ಇರುತ್ತದೆ. ಹೋಟೆಲ್‌ಗಳಲ್ಲಿ ತುಸು ಜಾಸ್ತಿ.

ಇನ್ನು ರೈಲು ನಿಲ್ದಾಣ, ಬಸ್ ನಿಲ್ದಾಣಗಳ ದರದಲ್ಲಿ ಇನ್ನೂ ತುಸು ವ್ಯತ್ಯಾಸವಾಗುತ್ತದೆ. ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ, ಮಾಲ್‌ಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ ನೀವು ಕೊಳ್ಳುವ ನೀರಿಗೆ ಅವರು ನಿಗದಿ ಮಾಡಿದ್ದೇ ದರ. ಹೀಗಾಗಿ ವ್ಯಾಪಾರಿ ಉತ್ಪನ್ನವಾಗಿರುವ ನೀರನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ನಿಮ್ಮ ಕೊಳ್ಳವ ಶಕ್ತಿಯನ್ನವಲಂಬಿಸಿ ನೀರಿನ ಲಭ್ಯತೆ ನಿರ್ಧಾರವಾಗುವಂತಾಗಿರುವುದು ದುರದೃಷ್ಟಕರ. ಒಂದು ಕಾಲದಲ್ಲಿ ’ಹರಿಯುವ ನೀರಿಗೆ ದೊಣೆ ನಾಯಕನ ಅಪ್ಪಣೆಯೇ?’ ಎಂಬ ಮಾತು ಚಾಲ್ತಿಯಲ್ಲಿತ್ತು. ಮೊದಲು ನೀರಿಗಾಗಿ ಯಾರನ್ನೂ ಕೇಳಬೇಕಾಗಿರಲಿಲ್ಲ. ಅದು ಎಲ್ಲರ ಹಕ್ಕಾಗಿತ್ತು.

ಸಮುದಾಯದ ಆಸ್ತಿಯಾಗಿತ್ತು. ಆದರೆ ಇದೀಗ ಮಾತಾಗಿದೆ. ಹರಿಯವು ನೀರನ್ನು ಮುಟ್ಟುವ ದೈರ್ಯ ಯಾರಿಗೂ ಇಲ್ಲ. ಬದಲಾಗಿ ಕುಡಿಯುವ ನೀರಿಗೆ ಕಂಪನಿ ಮಾಲೀಕನ ಅಪ್ಪಣೆಯನ್ನು ಕಾಯಲೇಬೇಕಾಗಿದೆ. ಆಧುನಿಕ ಜೀವನ ಶೈಲಿಯ ಕರಾಳ ಕೊಡುಗೆಯಿದು. ಇಂಥ ಸನ್ನಿವೇಶದಲ್ಲಿ ನೀರು ಮತ್ತು ಉದ್ದಿಮೆ, ಉದ್ಯೋಗದ ಪರಾಮರ್ಶೆ ಆಗಲೇ ಬೇಕಿತ್ತು, ಆಗುತ್ತಿದೆ.

***
ಪ್ರಾಥಮಿಕ ಶಾಲೆಯಲ್ಲಿ ಕಲಿತ ವಿಷಯವಿದು. ದೇಶದಲ್ಲಿ ಅತಿಹೆಚ್ಚು ಮಳೆಬೀಳುವ ಪ್ರದೇಶ ಎಂದರೆ ಚಿರಾಪುಂಜಿ. ಬಹುತೇಕ ಎಲ್ಲ ವರ್ಷ ಇದೊಂದು ಪ್ರಶ್ನೆ ಇರುವುದು ಖಚಿತವೆನ್ನುವಷ್ಟು ಮಾಸ್ತರರು ಇದನ್ನು ಹೇಳಿರುತ್ತಾರೆ. ಗಿನ್ನೆಸ್ ದಾಖಲೆಯಲ್ಲಿ ಈ ಊರಿನ ಹೆಸರು ಬಂದದ್ದು ಇಲ್ಲಿನ ರಚ್ಚೆ ಹಿಡಿದು ಹೊಯ್ಯುವ ಮಳೆಯಿಂದಲೇ. ಇಂಥ ದಾಖಲೆ ಏನೆಂದರೆ, ಆಗಸ್ಟ್ ೧೮೮೦ ರಿಂದ ಜುಲೈ ೧೮೮೧ರವರೆಗೆ ಇಲ್ಲಿ ಸುರಿದ ಮಳೆಯದ್ದು. ಈ ಅವಧಿಯಲ್ಲಿ
೨೨೯೮೨ ಮಿ.ಮೀ. ಮಳೆ ಬಿದ್ದಿತ್ತು. ಜಗತ್ತಿನಲ್ಲಿ ಈವರೆಗೆ ಒಂದೇ ಪ್ರದೇಶದಲ್ಲಿ ಇಷ್ಟು ಮಳೆ ಸುರಿದೇ ಇಲ್ಲ.

ಇನ್ನೂ ವಿಶೇಷವೆಂದರೆ ೧೯೭೪ರಲ್ಲಿ ಒಂದೇ ದಿನ ೨೪೫೫ ಮಿ.ಮೀ ಮಳೆ ಸುರಿದ ದಾಖಲೆಯೂ ಚಿರಾಪುಂಜಿಯ ತೆಕ್ಕೆಯಲ್ಲಿದೆ. ಇಂಥಾ ಚಿರಾಪುಂಜಿಗೆ ಚಿರಾಪುಂಜಿ ಇಂದು ಕುಡಿಯುವ ನೀರಿನ ದಾಹಕ್ಕೆ ತುತ್ತಾಗಿದೆ ಎಂದರೆ ನೀವು ನಂಬಬೇಕು. ಹೌದು, ನೀವು ಊಹಿಸಿದಂತೆ ಅಲ್ಲಿ ಸುರಿಯುತ್ತಿದ್ದ ಮಳೆ
ಅಲ್ಲಿಂದ ಕಾಲ್ತೆಗೆದಿದೆ. ಸರಾಸರಿಗಿಂತ ಶೇ. ೩೫ರಷ್ಟು ಮಳೆ ಕಡಿಮೆ ಆಗಿದೆ. ಗುವಾಹಟಿಯ ಪ್ರಾದೇಶಿಕ ಹವಾಮಾನ ಕೇಂದ್ರದ ದಾಖಲೆಗಳೇ ಇದನ್ನು ಸಾರುತ್ತಿವೆ. ಕಳೆದೆರಡು ದಶಕಗಳಲ್ಲಿ ಚಿರಾಪುಂಜಿಯ ವಾರ್ಷಿಕ ಸರಾಸರಿ ಮಳೆ ಪ್ರಮಾಣ ೧೧,೦೭೦ ಮಿ.ಮೀ. ೨೦೦೬ರ ಅಂಕಿ ಅಂಶಗಳ ಪ್ರಕಾರ ಆ ವರ್ಷ ಬಿದ್ದ ಮಳೆ ಕೇವಲ ೮,೭೩೦ ಮಿ.ಮೀ. ೭೦,೦೦೦ ಜನಸಂಖ್ಯೆಯಿರುವ ಮಳೆಯ ತವರಲ್ಲಿ ಬೇಸಿಗೆಯಲ್ಲಿ ಕುಡಿಯಲೇ ನೀರಿರುವುದಿಲ್ಲ.

ಮನೆಗಳಲ್ಲಿ ಹೆಂಗಸರು ಮೈಲುಗಟ್ಟಲೆ ಕೊಡ ಹಿಡಿದು ತಿರುಗಬೇಕಾದ ಸ್ಥಿತಿ ಇದೆ. ಇಷ್ಟಕ್ಕೆಲ್ಲ ಕಾರಣ ಎಂದಿನಂತೆ ನಮ್ಮ ನಿರ್ಲಕ್ಷ್ಯ. ದಟ್ಟ ಕಾನನದಿಂದ ಆವೃತ್ತವಾಗಿದ್ದ ಚಿರಾಪುಂಜಿಯ ಬೆಟ್ಟಗಳು ಈಗ ಬೋಳಾಗಿವೆ. ಎಲ್ಲೆ ಮೀರಿ ಕಾಡನ್ನು ಕಡಿದಿದ್ದರಿಂದ ಹಲವು ಅಪರೂಪದ, ಅತ್ಯಂತ ಪುರಾತನ  ಮರಗಳು ಕಣ್ಮರೆಯಾಗಿವೆ. ಹೀಗಾಗಿ ಮಳೆಯ ಪ್ರಮಾಣವೂ ಕುಸಿದಿದೆ. ಮಾತ್ರವಲ್ಲ ಬೀಳುವ ಮಳೆಯನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನೂ ಅಲ್ಲಿನ ಬೆಟ್ಟ ಗುಡ್ಡಗಳು ಕಳಕೊಂಡಿವೆ. ವರ್ಷಾವಧಿ ಸುರಿಯುವ ಮಳೆಯ ರಭಸ ತಗ್ಗಿಸಲು ಮತ್ತು ಬಿದ್ದ ಮಳೆ ನೀರನ್ನು ಇಂಗಿಸಲು ದಟ್ಟ ಕಾನನ ನೆರವಾಗುತ್ತಿತ್ತು.

ಆದರಿಂದು ಕಾಡೇ ಇಲ್ಲವಾಗಿ ತೊರೆಗಳು ಜನವರಿ, -ಬ್ರವರಿಯಲ್ಲೇ ಬತ್ತುತ್ತಿವೆ. ಹೀಗಾಗಿ ಬಿದ್ದ ಮಳೆಯಲ್ಲ ಕೆಳಗಿಳಿದು, ಗಡಿಯಲ್ಲಿ ನುಸುಳಿ ನೆರೆಯ
ಬಾಂಗ್ಲಾಕ್ಕೆ ಸೇರುತ್ತಿದೆ. ನಿಜವಾದ ನುಸುಳುಕೋರ ಸಮಸ್ಯೆ ಸೃಷ್ಟಿಸಿಕೊಂಡದ್ದು ನಾವೇ ಅಲ್ಲವೇ? ನೀರಿನ ಕೊರತೆಯಿಂದ ಕೃಷಿ ಕಳೆದು ಹೋಗುತ್ತಿದೆ.
ರೈತರು ಕಲ್ಲು ಕ್ವಾರಿಗಳಲ್ಲಿ ಕೂಲಿಗೆ ನಿಂತಿದ್ದಾರೆ. ಬದುಕು ದುಸ್ತರವಾಗುತ್ತಿದೆ. ವರ್ಷಕಾಲ ಚಿಲ್ಲನೆ ಚಿಮ್ಮುತ್ತಿದ್ದ ನೀರಿನ ಒರತೆಗಳು ಇಲ್ಲವಾದ ಮೇಲೆ ಇದರಿಂದ ಬಂದ ’ಚಿರಾಪುಂಜಿ’ ಎಂಬ ಹೆಸರನ್ನಿಟ್ಟುಕೊಂಡು ಮಾಡುವುದೇ ನಿದೆ ಎಂಬ ತೀರ್ಮಾನಕ್ಕೆ ಬಂದ ಜನ ತಮ್ಮೂರನ್ನು ಮೊದಲಿನ ಸೊಹಾರ್ ಎಂದೇ ಕರೆಯಲಾರಂಭಿಸಿದ್ದಾರೆ.

ಇದ್ದ ಭಾಗ್ಯವನ್ನು ಕಳಕೊಂಡ ಜನ ಹಲುಬಲಾರಂಭಿಸಿದ್ದಕ್ಕೆ ಯಾರು ಹೊಣೆ? ಇದಕ್ಕಿಂತ ದುರಂತ ಮನುಕುಲಕ್ಕೆ ಇನ್ನೇನಿದ್ದೀತು?

***
ನಮ್ಮಲ್ಲಿ ಭೂಮಿಯ ಮೇಲಿನ ನದಿಗಳು, ಭೂಮಿಯೊಳಗಣ ಒಂದಷ್ಟು ಸೆಲೆಗಳು ರಾಷ್ಟ್ರದ ಆಸ್ತಿ. ಹೀಗಾಗಿ ಅವೆಲ್ಲವೂ ಸಹಜವಾಗಿಯೇ ಕೇಂದ್ರ ಸರಕಾರದ ಅಽನಕ್ಕೊಳಪಟ್ಟಿರುತ್ತದೆ. ರಾಜ್ಯದ ಪಾಲಿನ ಹಕ್ಕಿಗೆ ಆಯಾ ರಾಜ್ಯದ ವ್ಯಾಪ್ತಿಯಲ್ಲಿ ಹರಿಯುವ ಹೋಳೆಗಳು, ತೊರೆಗಳು, ಹಳ್ಳಗಳು. ಮೂರನೇ ಹಂತದಲ್ಲಿ ಕೆರೆಗಳು, ಬಾವಿಗಳನ್ನು ಆಳಲು ಸ್ಥಳೀಯ ಜಿಲ್ಲಾ, ತಾಲೂಕು, ಗ್ರಾಮಾಡಳಿತ ಸಂಸ್ಥೆಗಳಿವೆ. ಒಟ್ಟಾರೆ ಅಷ್ಟೂ ಜಲ ಮೂಲಗಳ ಮೇಲಿನ ಅಽಕಾರ ಆಳುವವರ ಕೈಯಲ್ಲಿ. ಕುಡಿಯವ ನೀರಿನ ನಿರ್ವಹಣೆ ನಮ್ಮಲ್ಲಿ ಜಿಲ್ಲಾಡಳಿತ, ಸ್ಥಳೀಯ ಗ್ರಾಮಪಂಚಾಯಿತಿಗಳ ಹೊಣೆ. ಹರಿಯುವ
ನೀರಿಗೆ ಅಪ್ಪಣೆ ಕೊಡಬೇಕಿರುವುದು, ಆ ಬಗ್ಗೆ ನೀತಿ ನಿಯಮಗಳನ್ನು ರೂಪಿಸುವವರೆಲ್ಲ ಆಡಳಿತ ಸೌಧಗಳಲ್ಲಿ ಕುಳಿತಿರುವವವರೇ ವಿನಃ ಸ್ಥಳೀಯರಿಗೆ
ಯಾವುದೇ ಅಧಿಕಾರವಿಲ್ಲ.

ಆಳುವವರು ಯೋಜನೆಗಳನ್ನು ರೂಪಿಸುವುದರಲ್ಲೇ ಸಮಯವನ್ನು ಕಳೆಯುತ್ತಿದ್ದಾರೆ. ಅವರ ಗುರಿಯೇನಿದ್ದರೂ ಇರುವ ನೀರನ್ನು ಬಹಸಿ ಬರಿದಾಗಿಸುವುದರ ಕಡೆಗೆ. ಈವರೆಗಿನ ಯಾವುದೇ ಬೃಹತ್ ಯೋಜನೆಗಳೂ ಜಲ ಮರುಪೂರಣದ ಹೆಸರಿನಲ್ಲಿ, ನೆಲದಡಿಯ ನೀರನ್ನು ಹೆಚ್ಚಿಸುವ ಬಗೆಗಾಗಲೀ, ಹರಿಯುವ ನೀರನ್ನು ಸಂರಕ್ಷಿಸುವುದಕ್ಕಾಗಲೀ ರೂಪುಗೊಂಡೇ ಇಲ್ಲ. ನಮ್ಮದೇನಿದ್ದರೂ ಅಣೆ ಕಟ್ಟು ಕಟ್ಟುವುದು, ಹರಿಯವು ನೀರಿಗೆ ತಡೆಯೊಡ್ಡಿ ಅದನ್ನು ಬಳಸುವುದು, ಕಾಲುವೆ-ಕಂದಕಗಳನ್ನು ಕೊರೆದು ನೀರನ್ನು ತಿರಿಗಿಸುವುದು, ನದಿಗಳನ್ನು ಜೋಡಿಸುವುದು ಇತ್ಯಾದಿಗಳೇ ಹೊರತು ಎಲ್ಲಿಯೂ ನೀರ ನೆಮ್ಮದಿಗೆ ದಾರಿಗಳೇ ಹೊಳೆಯುತ್ತಿಲ್ಲ.

ಇತ್ತೀಚಿನ ದಿನಗಳಲ್ಲಿ ನೀರಿಗೆ ಹಾಹಾಕಾರವೆದ್ದ ಮೇಲೆ ಅಲ್ಲೊಂದು ಇಲ್ಲೊಂದು, ಇಂಗುಗುಂಡಿ, ಕೆರೆ ಸಂರಕ್ಷಣೆ, ಮಳೆ ನೀರು ಕೊಯ್ಲಿನಂಥ ಮಾತುಗಳು ಕೇಳಿ ಬರುತ್ತಿದೆ. ಅದೂ ಸಹ ಸರಕಾರದ ಯೋಜನೆಗಳೆಂದರೆ ಇಷ್ಟೇ ಎನ್ನುವ ನಿರಾಶದಾಯಕ ಭಾವ ಬರುವಂತೆ ಸಾಗಿರುವುದು ದುರದೃಷ್ಟ. ಇಲ್ಲ
ದಕ್ಕೆ ಹೊರತಾಗಿ ಇಡೀ ಜಲ ಮೂಲ ಇರುವುದು ನೀರಿನ ದಂಧೆಕೋರರ ಕೈಯಲ್ಲಿ. ನೀರಿನ ಶುದ್ಧತೆಯ ಬಗೆಗಾಗಲೀ, ಸಂರಕ್ಷಣೆಯ ಕುರಿತಾಗಲೀ  ಚಕಾರವೆತ್ತದ ನೀರಿನ ಕಂಪನಿಗಳು ಕಳೆದೊಂದು ದಶಕದಲ್ಲಿ ಅಂತರ್ಜಲವನ್ನು ಮನ ಬಂದಂತೆ ಹೀರಿ ಬರಿದಾಗಿಸುತ್ತಿವೆ.

ಇತ್ತೀಚಿನ ದಿನಗಳಲ್ಲಿ ನೀರು ಎಂಬುದು ಜಗತ್ತಿನ ಬಹು ದೊಡ್ಡ ಉದ್ಯಮಗಳಲ್ಲಿ ಒಂದಾಗಿ ಬೆಳೆದು ನಿಂತಿದೆ. ಖನಿಜಯುಕ್ತ ಬಾಟಲಿಗಳು, ಸ್ಯಾಷೆಗಳಲ್ಲಿನ ನೀರು ಕೋಟಿಗಟ್ಟಲೆ ಹಣದ ವ್ಯವಹಾರವಾಗಿದೆ. ಮಾತ್ರವಲ್ಲ ದೊಡ್ಡ ದೊಡ್ಡ ಕಂಟೈನರ್ ಗಳು ಖನಿಜ ನೀರಿನ ಪೂರೈಕೆಯ ಸೇವೆಗೆ ನಿಂತಿವೆ. ಭಾರತದ
ಬಹುತೇಕ ನಗರಗಳಲ್ಲಿ ಕುಡಿಯುವ ನೀರಿಗೆ ಇಂಥ ಉದ್ಯಮವನ್ನೇ ಅವಲಂಬಿಸುವುದು ಅನಿವಾರ್ಯ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪ್ರತಿ
ನಗರಗಳಲ್ಲೂ ಬಹುರಾಷ್ಟ್ರೀಯ ಕಂಪನಿಗಳು ಬೀಡುಬಿಟ್ಟಿವೆ. ಮಾತ್ರವಲ್ಲ ಸ್ಥಳೀಯ ನೀರಿನ ಕಂಪನಿಗಳೂ ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ.

ನೀರಿನ ಉದ್ಯಮದ ಬೆಳವಣಿಗೆ ಪ್ರತಿ ವರ್ಷ ಶೇ ೨೫ರಷ್ಟು ಹೆಚ್ಚುತ್ತಿದೆ ಎಂದರೆ ಇದರ ಅಗಾಧತೆಯ ಕಲ್ಪನೆ ಮೂಡಬಹುದು. ಪ್ರತಿ ಕಂಪನಿಯ ನೀರಿನ ಬಾಟಲಿಗಳು ದಿನಕ್ಕೆ ಲಕ್ಷದ ಲೆಕ್ಕದಲ್ಲಿ ಬಿಕರಿಯಾಗುತ್ತಿವೆ. ೨೦೧೩ರಲ್ಲಿ ೬ ಸಾವಿರ ಕೋಟಿಯಿದ್ದ ನೀರಿನ ಕಂಪನಿಗಳ ವಹಿವಾಟು ಮುಂದಿನ ಎರಡು ವರ್ಷಗಳಲ್ಲಿ ಇನ್ನೂ ಹತ್ತು ಸಾವಿರ ಕೋಟಿಯಷ್ಟು ಹೆಚ್ಚಲಿದೆ. ವೆಲ್ಲದರ ನಡುವೆ ಸಾಮಾನ್ಯನ ದಾಹವನ್ನು ಕೇಳುವವರೇ ಇಲ್ಲವಾಗಿದೆ. ಈ ಹಂತದಲ್ಲಾ ದರೂ ನೀರಿನ ಸ್ವಾವಲಂಬನೆಯ ಬಗೆಗೆ ಯೋಚಿಸದಿದ್ದರೆ ನೀರೆ ನಮ್ಮನ್ನು, ನಮ್ಮ ದೇಶವನ್ನು ಮತ್ತೊಮ್ಮೆ ದಾಸ್ಯಕ್ಕೆ ದೂಡುವುದರಲ್ಲಿ ಅನುಮಾನವಿಲ್ಲ.

***
ಅಂತರ್ಜಲವನ್ನು ನಮ್ಮಷ್ಟು ಶೋಷಿಸುವ ದೇಶ ಜಗತ್ತಿನಲ್ಲಿ ಮತ್ತೊಂದು ಇಲ್ಲ. ನಮಗೆ ಏನೂ ಅನ್ನಿಸುತ್ತಲೇ ಇಲ್ಲ. ಕನಿಷ್ಠ ಅಮೈಲ್ಯ ಸಂಪತ್ತು ಇನ್ನಿಲ್ಲದಂತೆ ಬರಿದಾಗುತ್ತಿರುವ ಆತಂಕವೂ ಕಾಡುತ್ತಿಲ್ಲ. ಮುಂದಿನ ತಲೆ ಮಾರಿಗೆ ಕುಡಿಯುವ ನೀರೆಂಬುದೇ ಮರೀಚೆಕೆಯಾಗಲಿದೆ ಎಂಬುದರ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲ. ಭಾರತ ಮಳೆಯನ್ನೇ ಅವಲಂಬಿಸಿರುವ ದೇಶ. ಈ ದೇಶದ ಕೃಷಿಯೂ ಮಳೆಯಾಧಾರಿತ. ಈ ವರೆಗೆ ಸಮೃದ್ಧ ಅಂತರ್ಜಲವನ್ನು ಹೊಂದಿದ್ದಾಗಲೂ ದೇಶದ ಕೃಷಿ ನಿಂತಿದ್ದುದು ಇಡೀ ವರ್ಷ ದೇಶದ ನೆಲೆದ ಮೇಲೆ ಸುರಿಯುವ ಮಳೆಯ ಮೇಲೆಯೇ. ಅಂಥದ್ದರಲ್ಲಿ ಇರುವ ಅಂತರ್ಜಲವನ್ನೂ ಬರಿದು ಮಾಡಿ ಕುಳಿತುಕೊಳ್ಳುತ್ತಿದ್ದೇವೆ.

ಇದು ಹೀಗೆಯೇ ಮುಂದುವರಿದರೆ ಇನ್ನೊಂದು ದಶಕದಲ್ಲಿ ಇಡೀ ಭೂಮಿಯ ಒಡಲು ಖಾಲಿಯಾಗಿ ಬೋರಲು ಬೀಳುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ತಜ್ಞರು. ಒಂದೊಮ್ಮೆ ಹಾಗೊಂದು ಸನ್ನಿವೇಶ ಸೃಷ್ಟಿಯಾದರೆ ಮಳೆ ಬಂದರೆ ಮಾತ್ರವೇ ಅದನ್ನು ಹಿಡಿದಿಟ್ಟುಕೊಂಡಷ್ಟೇ ನೀರು, ಇಲ್ಲದಿದ್ದರೆ ಬಾಯಾರಿಯೇ ಕುಳಿತುಕೊಳ್ಳಬೇಕಾಗುತ್ತದೆ. ಇದರಲ್ಲಿ ಯಾವುದೇ ಅತಿಶಯವಿಲ್ಲ.

ದೇಶದಲ್ಲಿ ಹೊಸದಾಗಿ ಕೊರೆದಿರುವ ಕೊಳವೆ ಬಾವಿಗಳು ಸೇರಿದಂತೆ ಸದ್ಯಕ್ಕೆ ೩೦ ದಶಲಕ್ಷ ಬಾವಿಗಳಿವೆ ಎನ್ನುತ್ತವೆ ಅಧಿಕೃತ ಅಂಕಿ ಅಂಶ. ಇವುಗಳಿಂದ ಪ್ರತಿ ನಿತ್ಯ ನಿರಂತರ ನೀರನ್ನು ಹೀರಿ ತೆಗೆಯಲಾಗುತ್ತಲೇ ಇದೆ. ಭಾರತದ ಒಟ್ಟಾರೆ ಕುಡಿಯುವ ನೀರಿನ ಬಳಕೆಯ ಶೇ.೮೦ರಷ್ಟನ್ನು ಅಂತರ್ಜಲದಿಂದಲೇ ಪಡೆಯಲಾಗುತ್ತಿದೆ. ಇನ್ನು ಶೇ ೬೦ರಷ್ಟು ಕೃಷಿ ಬಳಕೆಗೆ, ನಗರ ಬಳಕೆಯ ಶೇ ೫೦ರಷ್ಟ ಪ್ರಮಾಣಕ್ಕೆ ಅವಲಂಬಿಸಿರುವುದು ಸಹ ಅಂತರ್ಜಲವನ್ನೇ.

ಅಧಿಕೃತ ಅಂಕಿ ಅಂಶಗಳ ಪ್ರಕಾರ ಕರ್ನಾಟಕವೊಂದರಲ್ಲೇ ೧.೭೫ ಲಕ ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಆದರೆ ಅಧಿಕೃತವಾಗಿ ನೋಂದಣಿಯಾದವುಗಳು ೪೯ ಸಾವಿರ ಮಾತ್ರ. ಉಳಿದೆಲ್ಲವೂ ಮನಬಂದಂತೆ ಕೊರೆದವುಗಳು. ಇಂದಿಗೂ ರಾಜ್ಯದಲ್ಲಿ ಕೊಳವೆ ಬಾವಿಗಳ ಮೇಲೆ ಸರಕಾರಕ್ಕಾಗಿಲಿ, ಸ್ಥಳೀಯ ಆಡಳಿತಕ್ಕಾಗಲಿ ಯಾವುದೇ ನಿಯಂತ್ರಣವಿಲ್ಲ. ಒಂದು ಬಾವಿಯಲ್ಲಿ ನೀರು ಸಿಗಲಿಲ್ಲ ಅಥವಾ ಹೊಲದಲ್ಲಿನ ಒಂದು ಕೊಳವೆಬಾವಿ ಬತ್ತಿತು ಎಂದರೆ ಪರ್ಯಾಯ ಯೋಚನೆಯನ್ನೂ ಮಾಡದೇ ಇನ್ನೊಂದು ಕೊಳವೆಬಾವಿ ಕೊರೆಸುವುದು ಸಂಪ್ರದಾಯವಾಗಿಬಿಟ್ಟಿದೆ. ಕನಿಷ್ಠ ಬತ್ತಿದ ಕೊಳವೆ ಬಾವಿಗಳಿಗೆ ಜಲಮರು ಪೂರಣ ಮಾಡುವ ಬಗ್ಗೆಯೂ ನಮ್ಮ ರೈತರು ಯೋಚಿಸುತ್ತಿಲ್ಲ.

೮೦ರ ದಶಕದಲ್ಲಿ ರಾಜ್ಯವನ್ನು ಇನ್ನಿಲ್ಲದಂತೆ ಕಾಡಿದ ಬರದ ಸಂದರ್ಭದಲ್ಲಿ ವಿಶ್ವ ಬ್ಯಾಂಕ್ ನೆರವಿನೊಂದಿಗೆ ಕುಡಿಯುವ ನೀರಿಗಾಗಿ ಪರಿಚಯಗೊಂಡ ಕೊಳವೆಬಾವಿಗಳು, ನಂತರದ ದಿನಗಳಲ್ಲಿ ರೈತರ ಹೊಲಕ್ಕೆ ಲಗ್ಗೆಯಿಟ್ಟವು. ಅಲ್ಲಿಯವರೆಗೆ ಕೃಷಿಗೆ ಈ ಪ್ರಮಾಣದ ಅಂತರ್ಜಲ ಬಳಕೆ ಆಗುತ್ತಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ನೀರು ಎಂಬ ಪ್ರಶ್ನೆ ಬಂದಾಗಲೆಲ್ಲ ಕೊಳವೆ ಬಾವಿಯನ್ನುಳಿದು ಬೇರೆ ಯಾವುದೇ ಯೋಚನೆ ನಮಗೆ ಬರುತ್ತಿಲ್ಲ. ಅಚ್ಚರಿಯ ಸಂಗತಿಯೆಂದರೆ ಅಮೆರಿಕ, ಚೀನಾದವರಿಗಿಂತಲೂ ಹೆಚ್ಚಿನ ಅಂತರ್ಜಲವನ್ನು ನಾವು ಶೋಷಿಸುತ್ತಿದ್ದೇವೆ. ಅತಿ ವೇಗದಲ್ಲಿ ಬರಿದಾಗುತ್ತಿರುವ ನೈಸರ್ಗಿಕ ಸಂಪನ್ಮೂಲಗಳಲ್ಲಿ ಅಂತರ್ಜಲಕ್ಕೆ ಮೊದಲ ಸ್ಥಾನ.

ನಮ್ಮಲ್ಲಿ ಹಳೆಯ ಗಾದೆ ಮಾತೊಂದಿದೆ- ಕುಳಿತು ತಿಂದರೆ ಕುಡಿಕೆ ಹೊನ್ನೂ ಸಾಲದು ಎಂದು. ಅದನ್ನು ಸ್ವಲ್ಪ ಬದಲಿಸಿ ಕುಳಿತು ಕುಡಿದರೆ ಭೂಮಂಡಲದ ನೀರೂ ಸಾಲದು ಎನ್ನಬಹುದೇನೋ? ಇನ್ನಾದರೂ ಎಚ್ಚೆತ್ತು ಜಲ ಮರುಪೂರಣಕ್ಕೆ ಯೋಚಿಸದಿದ್ದರೆ ದೇವರೂ ಮನುಕುಲವನ್ನು ರಕ್ಷಿಸಲು ಸಾಧ್ಯವಿಲ್ಲ. ಇಡೀ ಮನುಷ್ಯ ಸಂಕುಲದ ನಾಶಕ್ಕೇ ನೀರು ಕಾರಣವಾಗಬಹುದು.