ವಿದೇಶವಾಸಿ
dhyapaa@gmail.com
What is in a name – ಇದು ವಿಲಿಯಂ ಶೇಕ್ಸ್‌ಪಿಯರ್ ಬರೆದ ರೋಮಿಯೋ ಅಂಡ್ ಜೂಲಿಯಟ್ ನಾಟಕದ ಜನಪ್ರಿಯ ವಾಕ್ಯಗಳಂದು. ಹೆಸರು ಎನ್ನುವುದು ಯಾವುದಾದರೂ ಒಂದು ವ್ಯಕ್ತಿಯನ್ನು, ಸ್ಥಳವನ್ನು, ವಸ್ತುವನ್ನು ಗುರುತಿಸಲು ಬೇಕಾಗಿರುವುದು, ಹಾಗಂತ ಒಂದು ನಿರ್ದಿಷ್ಟ ವಸ್ತುವನ್ನು ಬೇರೆ ಹೆಸರಿನಿಂದ ಕರೆದರೆ ಅದರ ಗುಣಧರ್ಮ ಬದಲಾಗುವುದಿಲ್ಲ.
ಹಾಗೆಯೇ, A rose is a rose is a rose ಎಂಬ ಇನ್ನೊಂದು ಜನಪ್ರಿಯ ಕವಿನುಡಿಯಿದೆ. ಸಂಕ್ಷಿಪ್ತವಾಗಿ, ಗುಲಾಬಿ ಹೂವನ್ನು ಏನೆಂದು ಕರೆದರೂ ಅದು ಗುಲಾಬಿಯೇ, ಬೇರೆ ಯಾವ ಹೆಸರಿನಲ್ಲಿ ಕರೆದರೂ ಅದು ತನ್ನ ಗುಣ ಧರ್ಮ ಬದಲಿಸುವುದಿಲ್ಲ, ವಸ್ತುಗಳ ಹೆಸರು ಬದಲಾಯಿಸಿದರೂ ಅವು ಅದೇ ಆಗಿರುತ್ತದೆ
ಎಂಬುದು ತಾತ್ಪರ್ಯ. ಆದರೆ ಈಗ ನಾನು ಹೇಳ ಹೊರಟಿರುವುದು ವಸ್ತುಗಳ ವಿಷಯವಲ್ಲ, ರಸ್ತೆಗಳ ವಿಷಯ. ಯಾವುದೇ ಒಂದು ಪ್ರದೇಶವನ್ನೋ, ಮಾರ್ಗ ವನ್ನೋ ಗುರುತಿಸಲು ಬರೇ ಹೆಸರಿಟ್ಟರೆ ಸಾಕಾ? ಅದಕ್ಕೊಂದು ಕಾರಣ, ಇತಿಹಾಸ, ಕತೆ ಏನಾದರೂ ಬೇಡವಾ? ಹಾಗೆಯೇ ಹೆಸರಿಟ್ಟಾದ ಮೇಲೆ ಅದಕ್ಕೊಂದು ಮರ್ಯಾದೆ ಬೇಡವಾ? ಸುಮ್ಮನೇ ಕಾಟಾಚಾರಕ್ಕೆ ಹೆಸರಿಡುವ ಬದಲು ಆ ಹೆಸರು ತನ್ನ ಕತೆ ಹೇಳುವಂತಿದ್ದರೆ ಸಾರ್ಥಕ ಎಂದೆನಿಸುವುದಿಲ್ಲವಾ? ಒಂದು ಸ್ಥಳಕ್ಕೆ ಅಥವಾ ಮಾರ್ಗಕ್ಕೆ ನಾಮಕರಣ ಮಾಡುವಾಗ ಸ್ವಲ್ಪವಾದರೂ ತಾಳ-ಮೇಳ ಬೇಡವಾ? ನೀರು ಇರದ ವಸಾಹತಿಗೆ ವಿಶ್ವೇಶ್ವರಯ್ಯ ಕಾಲೋನಿ, ವಿದ್ಯುತ್ ಇಲ್ಲದ ರಸ್ತೆಗೆ ಫ್ರಾಂಕ್ಲಿನ್ ಮಾರ್ಗ ಅಥವಾ ಎಡಿಸನ್ ರಸ್ತೆ, ಒಂದು ಸಣ್ಣ ಗರಿಕೆ ಹುಲ್ಲೂ ಇರದ ರಸ್ತೆಗೆ ಸಾಲುಮರದ ತಿಮ್ಮಕ್ಕ ಮಾರ್ಗವೆಂದು ಹೆಸರಿಟ್ಟರೆ, ರಾಜೀವ್ ಗಾಂಧಿ ಖೇಲ್ ರತನ್ ಎಂದು ಕೇಳುವಾಗ ಎಷ್ಟು ಹಿಂಸೆಯಾಗುತ್ತದೆಯೋ ಅಷ್ಟೇ ಹಿಂಸೆಯಾಗುತ್ತದೆ.
ಬಹಳಷ್ಟು ಪ್ರದೇಶಗಳಲ್ಲಿ ಗಮನಿಸಿ, ಮಾರ್ಗಕ್ಕೆ, ಬಡಾವಣೆಗೆ ಇರುವ ಹೆಸರೇ ಒಂದು, ಅಲ್ಲಿ ನಡೆಯುವ ಚಟುವಟಿಕೆಗಳೇ ಇನ್ನೊಂದು. ಮುಂಬೈನಲ್ಲಿ ಅಂಧೇರಿ ಎಂಬ ಹೆಸರಿನ ಒಂದು ಸ್ಥಳವಿದೆ. ಅಂಧೇರಾ ಎಂದರೆ ಕತ್ತಲೆ ಎಂದರ್ಥ. ಮೊದಲು ಇಲ್ಲಿ ವಿದ್ಯುತ್ ದೀಪವಿಲ್ಲದೇ ಕತ್ತಲೆಯಾಗಿ ರುತ್ತಿದ್ದುದರಿಂದ ಊರಿಗೆ ಈ ಹೆಸರು ಬಂದಿದೆಯೆಂಬುದು ಕೆಲವರ ಅಂಬೋಣ, ಸರಿಯೇ ಬಿಡಿ. ಸಾಮಾನ್ಯವಾಗಿ ಕತ್ತಲೆಯ ಪ್ರದೇಶದಲ್ಲಿ ಅವ್ಯವಹಾರ ಗಳು ಹೆಚ್ಚು. ಅರವತ್ತು ಮತ್ತು ಎಪ್ಪತ್ತರ ದಶಕದ ಹಿಂದಿ ಸಿನಿಮಾಗಳಲ್ಲಿ ಬಹುತೇಕ ಖಳನಾಯಕರ ‘ಅಡ್ಡಾ’ ಅಂಧೇರಿಯಾಗಿರುತ್ತಿತ್ತು ಎಂದರೆ ಸುಲಭವಾಗಿಯೇ ಅದರ ಕುಖ್ಯಾತಿಯನ್ನು ಊಹಿಸ ಬಹುದು.
ಇಂತಿರ್ಪ ಅಂಧೇರಿ ಪ್ರಾಂತ್ಯದ ಕೊನೆಯಲ್ಲಿ ‘ಯಾರೀ ರೋಡ್’ ಎಂಬುದು ಬಹಳ ಜನಪ್ರಿಯವಾಗಿತ್ತು. ಡ್ರಗ್ಸ್, ಸುಲಿಗೆ, ಜೂಜು, ವೇಶ್ಯಾವಾಟಿಕೆಗಳಿಗೆ ಕೇಂದ್ರವಾಗಿದ್ದ ರಸ್ತೆಗೆ ಯಾರೀ ರೋಡ್ ಎಂಬ ಹೆಸರು ಹೇಗೆ ಬಂತೋ, ಯಾರಿಟ್ಟರೋ ದೇವರೇ ಬಲ್ಲ. ಕಾಲ ಕ್ರಮೇಣ ಅಂಧೇರಿ ಮತ್ತು ಯಾರೀ ರೋಡ್‌ನ
ಚಿತ್ರಣ ಬದಲಾಯಿತು. ಇಂದು ಅಂಧೇರಿಯಲ್ಲಿ ದೀಪವಿಲ್ಲದ ಒಂದೇ ಒಂದು ಮನೆಯೂ ಇರಲಿಕ್ಕಿಲ್ಲ. ಯಾರೀ ರೋಡ್‌ನ ಸ್ಥಿತಿಯೂ ಬದಲಾಗಿದೆ. ಒಂದು ದಶಕದ ಹಿಂದೆ ಕೆಲವು ಅಡೆತಡೆಯ ನಡುವೆಯೇ ಈ ಮಾರ್ಗಕ್ಕೆ ಮರುನಾಮಕರಣ ಮಾಡಲಾಯಿತು. ಆ ಮಾರ್ಗಕ್ಕೆ ಈಗಿರುವ ಹೆಸರು ಯಾರದ್ದು ಅಂತೀರಾ, ಖ್ಯಾತ ಬಾಲಿವುಡ್ ತಾರೆ ಪ್ರಿಯಾಂಕ ಚೋಪ್ರಾಳ ತಂದೆ ದಿ. ಅಶೋಕ್ ಚೋಪ್ರಾ ಅವರದ್ದು.
ಮುಂಬೈನ ಗ್ರಾಂಟ್ ರೋಡ್ ಹೆಸರು ಕೇಳಿರಬಹುದಲ್ಲ, ಸ್ವಾತಂತ್ರ್ಯ ಪೂರ್ವದಲ್ಲಿ ಸರ್ ರಾಬರ್ಟ್ ಗ್ರಾಂಟ್ ಎಂಬ ಹೆಸರಿನ ಬ್ರಿಟಿಷ್ ಗವರ್ನರ್‌ನ ನೆನಪಿ ಗೋಸ್ಕರ ಗೌರವದಿಂದ ಸ್ಥಳೀಯರು ಇಟ್ಟ ಹೆಸರು ಅದು. ಪಕ್ಕದಲ್ಲಿಯೇ ಎಲೆಕ್ಟ್ರಾನಿಕ್ ವಸ್ತುಗಳ ವಹಿವಾಟಿಗೆ ಹೆಸರಾದ ಲ್ಯಾಮಿಂಗ್ಟನ್ ರೋಡ್ ಇದ್ದರೂ, ಗ್ರಾಂಟ್ ರೋಡ್ ವೇಶ್ಯಾವಾಟಿಕೆಗೆ ಹೆಸರಾದದ್ದು ದುರಂತ. ಅಂತೆಯೇ ಇನ್ನೊಬ್ಬ ಗವರ್ನರ್ ಲಾರ್ಡ್ -ಕ್ಲ್ಯಾಂಡ್ ಎಂದೇ ಖ್ಯಾತನಾದ, ಮುಂಬೈನಲ್ಲಿ ಭಾರತದ ಮೊದಲ ರೇಲ್ವೇ ಮಾರ್ಗಕ್ಕೆ ಕಾರಣನಾದ ಲೂಸಿಯಸ್ ಕ್ಯಾರಿಯ ಗೌರವ ಸೂಚಕವಾಗಿ ಇಟ್ಟ -ಕ್ಲ್ಯಾಂಡ್ ಮಾರ್ಗ್ ಕೂಡ ಇದೇ ಕಳಂಕ ಕಟ್ಟಿಕೊಂಡಿತು. ಕೊಲ್ಕತ್ತಾದಲ್ಲಿ ಮೋತಿ ಸಿಲ್ ಹೆಸರಿನ ಮಾರ್ಗ ವಿದೆಯಂತೆ.
ಈ ಮಾರ್ಗ ಔಷಽಯ ಅಂಗಡಿಗಳಿಂದ ತುಂಬಿದ್ದು, ಅಲ್ಲಿ ಹೆಚ್ಚಿನಂಶ ಗರ್ಭನಿರೋಧಕಗಳು ಮಾರಲ್ಪಡುವುದರಿಂದ ಆ ಮಾರ್ಗಕ್ಕೆ ಕಾಂಡೋಮ್ ಸ್ಟ್ರೀಟ್ ಎಂದು ಹೆಸರು ಬಿದ್ದಿರುವುದು ವಿಪರ್ಯಾಸ ವಲ್ಲದೇ ಇನ್ನೇನು? ಡಾರ್ಜಿಲಿಂಗ್‌ನಲ್ಲಿ ಒಂದು Hooker oad ಇದೆ. ಇಂದಿನ ಯುವ ಪೀಳಿಗೆ ಇಂಗ್ಲೀಷ್ ಶಬ್ದಕ್ಕೆ ನಿಜ ಅರ್ಥ ಕೊಡುವ ಹೂಕರ್ ರೋಡ್ ಎಂದು ತಿಳಿದು ಅಲ್ಲಿ ಹೋದರೆ ನಿರಾಸೆ ಖಚಿತ. ಇದು ಬ್ರಿಟಿಷ್ ಪ್ರವಾಸಿ, ಸಸ್ಯಶಾಸ್ತ್ರಜ್ಞ ಸರ್ ಜೋಸೆಫ್ ಡಿ. ಹೂಕರ್ ಅವರ ನೆನಪಿ ಗಾಗಿ ಇಟ್ಟಿರುವಂ ಥದ್ದು. ಪೂರ್ವ ಹಿಮಾಲಯದ ತಪ್ಪಲಿನಲ್ಲಿರುವ ಸಸ್ಯಗಳ ಕುರಿತು ಅಧ್ಯಯನ ನಡೆಸಿ “Flora of British India’ ಎಂಬ ಜನ ಪ್ರಿಯ ಪುಸ್ತಕವನ್ನು ಲೋಕಾರ್ಪಣೆಗೈದುದಕ್ಕಾಗಿ ಅದು ಅವನಿಗೆ ನೀಡಿದ ಗೌರವ ಎಂದು ಎಷ್ಟು ಜನರಿಗೆ ಗೊತ್ತಿರಬಹುದು? ಕುಡಿಯಲು ನೀರಿಲ್ಲದ ಉತ್ತರ ಪ್ರದೇಶದ ಒಂದು ಗ್ರಾಮವನ್ನು ಸ್ನಾಪ್ಡೀಲ್ ಸಂಸ್ಥೆಯವರು ದತ್ತಕ್ಕೆ ಪಡೆದು ಹದಿನೈದು ಕೊಳವೆ ಬಾವಿ ತೋಡಿ, ನೀರಿನ ಸೌಕರ್ಯ ಒದಗಿಸಿಕೊಟ್ಟಿದ್ದರ ಗೌರವಾರ್ಥ ಗ್ರಾಮ ನಿವಾಸಿಗಳು ಆ ಗ್ರಾಮಕ್ಕೆ Snapdeal.com ನಗರ ಎಂದು ನಾಮಕರಣ ಮಾಡಿದ್ದಾರಂತೆ.
ಕೆಲವು ತಿಂಗಳುಗಳ ಹಿಂದಿನ ಶ್ರೀವಿಶ್ವೇಶ್ವರ ಭಟ್ ಅವರ ಒಂದು ಟ್ವೀಟ್ ಮತ್ತು ಬರಹ ನೆನಪಿಗೆ ಬರುತ್ತಿದೆ. ಬೆಂಗಳೂರಿನ ಲಾಂಗರ್ಡ್ ಟೌನ್‌ನ ಗಾರ್ಡನ್
ಪಕ್ಕದಲ್ಲಿ ಹಾದು ಹೋಗುವ, ಉಚ್ಛರಿಸಲು ಕಷ್ಟಕರವಾದ O Shaugh nessy Road’ ಎಂಬ ಹೆಸರನ್ನು ಯಾರಿಟ್ಟರೋ, ಯಾಕಿಟ್ಟರೋ ಎಂದು ಟ್ವೀಟಿಸಿದ್ದರು. ಆ ಮಾರ್ಗದ ಹೆಸರನ್ನು ಹುಚ್ಚುಚ್ಚಾಗಿ ಹೇಳುವ ಬದಲಾಗಿ ಯಾವುದಾದರೂ ಸುಲಭದ, ಕನ್ನಡದ ಹೆಸರಿಡಬಹುದಿತ್ತು ಎಂದು ಹೇಳಿದ್ದರು. ಇದು ಪತ್ರಿಕಾವಲಯ ದಲ್ಲಿ ಸಣ್ಣ ಚರ್ಚೆಗೆ ಗ್ರಾಸವಾಗಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಒಂದು ಬರಹ ಪ್ರಕಟವಾಯಿತು. ಬರಹದ ಕೊನೆಯಲ್ಲಿ ಆ ವ್ಯಕ್ತಿ (ಹೆಸರು ಹೇಳಿದರೆ ಅಪಭ್ರಂಶ ವಾದೀತು) ಟೆಲಿಕಮ್ಯುನಿಕೇಟರ್ ಆಗಿದ್ದ ಎಂದು ಬರೆದದ್ದನ್ನು ಕಂಡು ಹೆಚ್ಚಿನ ಮಾಹಿತಿಗಾಗಿ ಶೇಷಾದ್ರಿ ವಾಚನಾಲಯಕ್ಕೆ ಹೋಗಿ ‘ರಸ್ತೆ ಹೇಳುವ ಕತೆಗಳು’ ಎಂಬ ಬರಹಗಳನ್ನು ಹುಡುಕುತ್ತಿದ್ದರಂತೆ. ಆಗ ಅಲ್ಲಿಯ ಲೈಬ್ರೆರಿಯನ್ ಬೆಂಗಳೂರಿನ ಒಂದು ಗೆಜೆಟಿಯರ್ ತಂದು ಕೊಟ್ಟನಂತೆ.
ನಾವೆಲ್ಲ ಬಾಲ್ಯದಲ್ಲಿ ಓದಿದ ‘ಕಡಕಡ ಕಟ್ಟಕಡ’ದ ಟೆಲಿಗ್ರಾಂ ವ್ಯವಸ್ಥೆಗೆ ಭಾರತದ ಪ್ರಮುಖ ನಗರಗಳಿಗೆ ಮಾತ್ರ ವಲ್ಲದೆ ಕೋಲ್ಕತಾದಿಂದ ಲಂಡನ್‌ವರೆಗೆ ತಂತಿ ಎಳೆದು ಸಂಪರ್ಕ ಒದಗಿಸಿದ ಐರಿಶ್ ಪ್ರಜೆ ಎಂದು ತಿಳಿದು ‘ನಾನು ಮಾಡಿದ ಟ್ವೀಟ್‌ಗೆ ಕ್ಷಮೆ ಕೇಳುತ್ತಾ’ ಎಂಬ ಬರಹದಲ್ಲಿ ವಿವರವಾಗಿ ಬರೆದಿದ್ದರು. ಅವನ ಜೀವನ ಗಾಥೆ ಒಂದು ಬಯೋಪಿಕ್ ಮಾಡಲು ಯೋಗ್ಯ ಎಂದು ವಿವರಿಸಿದ್ದರು. ಈ ವಿಷಯ ಎಷ್ಟು ಮಂದಿ ಬೆಂಗಳೂರಿಗರಿಗೆ ತಿಳಿದಿರಬಹುದು? ಹೆಸರು ಹೊತ್ತ
ಪ್ರತಿಯೊಂದು ಮಾರ್ಗಕ್ಕೂ ಒಂದು ಕತೆಯಿರಬೇಕು, ಅದು ಕತೆ ಹೇಳುವಂತಿರಬೇಕು. ಇಲ್ಲವಾದರೆ ಸುಮ್ಮನೆ ವರ್ಣಮಾಲೆಯ ಅಕ್ಷರದಿಂದಲೋ, ಸಂಖ್ಯೆಯಿಂ
ದಲೋ ಗುರುತಿಸುವುದು ಒಳಿತಲ್ಲವೇ? ಅನೇಕ ದೇಶಗಳಲ್ಲಿ ಇಂತಹ ಉದಾಹರಣೆಗಳೂ ಸಾಕಷ್ಟಿವೆ.
ಜಪಾನ್ ಅಭಿವೃದ್ಧಿ ಹೊಂದಿದ ದೇಶವೆಂದು ನಾವೆ ಒಪ್ಪುತ್ತೇವೆ. ತಂತ್ರಜ್ಞಾನದ ವಿಷಯ ಬಂದಾಗ ಮೊದಲ ಸ್ಥಾನದಲ್ಲಿ ನಿಲ್ಲುವುದೇ ಜಪಾನ್. ಅಂತಹ ಜಪಾನ್ ದೇಶದಲ್ಲಿ ಬೆರಳೆಣಿಕೆಯ ಪ್ರಮುಖ ಮಾರ್ಗಗಳನ್ನು ಬಿಟ್ಟರೆ ಬಹುತೇಕ ಮಾರ್ಗಗಳನ್ನು ಗುರುತಿಸುವುದು ಸಂಖ್ಯೆಯಿಂದ. ಅಷ್ಟೇ ಅಲ್ಲ, ಮನೆಗಳಿಗೂ, ಅಪಾರ್ಟ್ ಮೆಂಟ್‌ಗಳಿಗೂ ಹೆಸರಿರುವುದಿಲ್ಲ. ಅವನ್ನೂ ಸಂಖ್ಯೆಯಿಂದಲೇ ಗುರುತಿಸುತ್ತಾರೆ. ಸಿಂಗಪೂರ್‌ನಲ್ಲಿ ಈಗಲೂ ಶೇಕಡಾ ಐವತ್ತರಷ್ಟು ರಸ್ತೆಗಳಿಗೆ ಸಂಖ್ಯೆಯೇ ಗುರುತು. ಇನ್ನುಳಿದ ಮಾರ್ಗ ಗಳಿಗೆ, ಅಲ್ಲಿಯ ಮರಗಳ, ಹಣ್ಣಿನ, ಹೂವಿನ, ವಾದ್ಯ ಗಳ, ರತ್ನ ಸಮಾನವಾದ ಅತ್ಯಮೂಲ್ಯ ಗುಣವುಳ್ಳ ಕಲ್ಲಿನ ಹೆಸರಿಡಲಾಗಿದೆ. ಬಾತು, ರಾಜ, ಹಿಜಾವು ಹೀಗೆ ಆ ದೇಶದಲ್ಲಿ ಬೆಳೆಯುವ ಬಾಳೇ ಹಣ್ಣಿನ ತಳಿಗಳ, ರೂಬಿ, ಟೋಪಾಜ್ ಇತ್ಯಾದಿ ಹರಳಿನ, ಚಂಪಕ, ಜಾಸ್ಮಿನ್ ಇತ್ಯಾದಿ ಹೂವುಗಳ, ಲಿಯೋ ಡ್ರೈವ್, ಕೆಪ್ರಿಕಾರ್ನ್ ಡ್ರೈವ್, ಲಿಬ್ರಾ ಡ್ರೈವ್ ಇತ್ಯಾದಿ ರಾಶಿಚಕ್ರಗಳ ಹೆಸರನ್ನು ಹೊಂದಿದ ಮಾರ್ಗಗಳೂ ಇವೆ.
ಫಿಲಿಪೈನ್ಸ್ ದೇಶದ ರಾಜಧಾನಿ ಮನಿಲಾದಲ್ಲಿ ವ್ಯಕ್ತಿಗಳಿಗಿಂತ ಹೆಚ್ಚಾಗಿ Happy Road, Honest Street, Generous Street, Clean Road,
Prosperous Street, Friendly Street, Protective Street ಹೀಗೆ ವಿಶೇಷಣಗಳಿಂದ ಕೂಡಿದ ಹೆಸರನ್ನೇ ಹೆಚ್ಚಾಗಿ ಇಟ್ಟು ಮಹತ್ವ ಕೊಡಲಾಗಿದೆ ಎಂದು ನನ್ನ ಮಿತ್ರರೊಬ್ಬರು ಹೇಳುತ್ತಿದ್ದರು. ನಾರ್ವೆ ದೇಶದ ಚಳಿಗಾಲದ ಕ್ರೀಡೆ ಸ್ಕೀಯಿಂಗ್‌ನ ಕೇಂದ್ರವಾದ ಟ್ರೈಸಿಲ್ ಪಟ್ಟಣದಲ್ಲಿನ ಎಲ್ಲಾ ಮಾರ್ಗ ಗಳೂ ಸಂಖ್ಯೆಯಿಂದಲೇ ಗುರುತಿಸಲ್ಪಟ್ಟಿವೆ. ಅಲ್ಲಿ ಯಾವುದೇ ಹೆಸರಿರುವ ಮಾರ್ಗ ಔಷಽಗೆ ಬೇಕೆಂದರೂ ಸಿಗಲಿಕ್ಕಿಲ್ಲ.
ಸೌದಿ ಅರೇಬಿಯಾದ ಎಲ್ಲಾ ನಗರಗಳಲ್ಲೂ ಅಲ್ಲಿಯ ದೊರೆ, ಯುವರಾಜರ ಹೆಸರಿನ ಮತ್ತು ಬೇರೆ ಬೇರೆ ಊರಿನ ಹೆಸರಿನ ಮಾರ್ಗಗಳಿರುವುದು ಸಾಮಾನ್ಯ. ಇದೇ ರೀತಿಯ ಮಾರ್ಗಗಳ ಹೆಸರನ್ನು ಬೆಹರೇನ್, ಯುಎಇ, ಕುವೈತ್ ದೇಶ ಗಳಲ್ಲೂ ಕಾಣಬಹುದಾಗಿದೆ. ಈ ದೇಶಗಳಲ್ಲಿ ವಸಾಹತುಗಳಿಗೆ ಭಾರತ ದಲ್ಲಿರುವಂತೆ ಎಣ್ಣೆ ಹೊಯ್ಕ ಬಡಾವಣೆ, ಕುಮ್ಮಿ ಕುಯ್ಕ ಕಾಲೋನಿ ಎಂದು ಹೆಸರಿಲ್ಲ, ಬದಲಾಗಿ ಬಡಾವಣೆಗಳು ಬ್ಲಾಕ್ ನಂಬರ್ ಗಳಿಂದ ಗುರುತಿಸಲ್ಪಡುತ್ತವೆ. ಅಂತೆಯೇ ಅನೇಕ ಯೂರೋಪಿಯನ್, ಪೂರ್ವ ಏಷ್ಯಾ, ಅರಬ್ ರಾಷ್ಟ್ರಗಳಲ್ಲಿ ಮಾರ್ಗಗಳು ಮತ್ತು ಬ್ಲಾಕ್‌ಗಳನ್ನು ಗುರುತಿಸಲು ವರ್ಣಮಾಲೆಯ ‘ಅ’ ಯಿಂದ ‘ಘ’ ವರೆಗಿನ ಅಕ್ಷರಗಳು ಮತ್ತು ಸಂಖ್ಯೆಗಳೇ ಬಳಕೆಯಲ್ಲಿವೆ.
ಮುಂದುವರಿದ ದೇಶಗಳಲ್ಲಿ ಈ ಕಥೆಯಾದರೆ, ಆಫ್ರಿಕಾದ ಘಾನಾ, ನಿಕಾರಾಗುವಾ, ಕೊಸ್ಟಾರಿಕಾದಂಥ ದೇಶಗಳಲ್ಲಿ ಒಂದು ದಶಕದ ಕೆಳಗೆ ಮಾರ್ಗಗಳಿಗೆ
ಹೆಸರೂ ಇರಲಿಲ್ಲ, ಸರಿಯಾದ ಸಂಖ್ಯೆಯೂ ಇರಲಿಲ್ಲ. ಲೆಬನಾನ್, ಜೋರ್ಡಾನ್‌ನಂತಹ ದೇಶದಲ್ಲಿ ಮಾರ್ಗ ಗಳಿಗೆ ಸಂಖ್ಯೆ ಇದ್ದರೂ ಯಾರೂ ಅದನ್ನು ಉಖಿ
ಸುವುದಿಲ್ಲ. ಈ ದೇಶಗಳಲ್ಲಿ ‘ದೊಡ್ಡ ಮಸೀದಿಯ ಮುಂಭಾಗದಲ್ಲಿ’, ಚಿತ್ರಮಂದಿರದ ಹಿಂಭಾಗದಲ್ಲಿ’, ‘ದೊಡ್ಡ ಮರದ ಪಕ್ಕದಲ್ಲಿ’ ಹೀಗೆ ಹತ್ತಿರದ ಕಟ್ಟಡವನ್ನೋ, ಇನ್ಯಾವುದನ್ನೋ ಉಲ್ಲೇಖಿಸಿಯೇ ಹೇಳುವ ಪದ್ಧತಿಯಿದೆ. ಕೆಲವೊಮ್ಮೆ ಆ ಹೆಗ್ಗುರುತುಗಳು ಇಲ್ಲದಿದ್ದರೂ ಹೆಸರು ಹಾಗೆಯೇ ಉಳಿದುಕೊಂಡಿರುತ್ತದೆ!
ಕರೋನಾದಿಂದ ಕುಖ್ಯಾತಿಗೊಳಗಾದ ಚೀನಾದಲ್ಲಿ ಗುವಾಂಜು ಎಂಬ ಪ್ರದೇಶವಿದೆ. ಅಲ್ಲಿ ಹೆಸರಿರುವ ಪ್ರಮುಖ ಮಾರ್ಗದಲ್ಲಿಯೂ ಪುತ್ಥಳಿ ಅಥವಾ ಫಲಕ,
ಅದರಲ್ಲಿ ಕಿರು ಪರಿಚಯ ಅಥವಾ ಇತಿಹಾಸವನ್ನು ಬರೆದಿಟ್ಟಿದ್ದನ್ನು ನಾನು ಕಂಡಿದ್ದೇನೆ. ಇದು ಕೇವಲ ಚೀನಾಕ್ಕಷ್ಟೇ ಸೀಮಿತವಾಗಿಲ್ಲ, ಇನ್ನೂ ಅನೇಕ ಕಡೆ ಈ
ಪದ್ಧತಿಯಿದೆ. ಈ ಕಾರ್ಯವನ್ನು ನಮ್ಮ ದೇಶದ ಲ್ಲಿಯೂ, ನಮ್ಮ ರಾಜ್ಯದಲ್ಲಿಯೂ ಮಾಡಬಹುದಿತ್ತು. ಆದರೆ ನಮ್ಮಲ್ಲಿ ಹಾಗಲ್ಲ, ಒಮ್ಮೆ ನಾಮಕರಣ ಮಾಡಿದ ರೆಂದರೆ ಮುಗಿಯಿತು, ಮತ್ತೆ ಆ ದಿಕ್ಕಿಗೆ ತಿರುಗಿಯೂ ನೋಡುವುದಿಲ್ಲ. ವರ್ಷಕ್ಕೊಮ್ಮೆ ಆ ಮಹಾನುಭಾವರ ಜನ್ಮದಿನದಂದೋ ಅಥವಾ ಪುಣ್ಯತಿಥಿಯಂದೋ ಆ ಮಾರ್ಗವನ್ನು ಶುದ್ಧಗೊಳಿಸುವುದಾಗಲೀ, ಸುಣ್ಣ ಬಣ್ಣ ಬಳಿಯುವುದಾಗಲೀ ಏನೂ ಇಲ್ಲ.
ಹೆಸರಿನ ಒಂದು ಫಲಕ ಹಾಕಿ ಹೋದರೆ ಅವರ ಕೆಲಸ ಮುಗಿಯಿತು. ನಂತರ ಅದರ ಮೇಲೆ ಎಲೆ ಅಡಿಕೆ, ಗುಟ್ಕಾ ಅಗೆದು ಉಗಿದರೂ, ಬೀಡಿ ಸಿಗರೇಟಿನ
ಉರಿ ಆರಿಸಿದರೂ ಹೇಳುವವರಿಲ್ಲ, ಅಲ್ಲಿಯೇ ಮೂತ್ರ ವಿಸರ್ಜನೆ ಮಾಡಿ, ಸಿಂಬಳ ಒರೆಸಿ ಹೋದರೂ ಕೇಳುವವರಿಲ್ಲ. ಹಾಗಾದರೆ ಯಾವ ಘನಂದಾರಿ ಕೆಲಸಮಾಡಿ ದಂತಾಯಿತು? ಮಾರ್ಗಕ್ಕೆ ಹೆಸರಿಟ್ಟ ವ್ಯಕ್ತಿಗೆ ಗೌರವ ಸೂಚಿಸಿದಂತಾಯಿತೆ ಅಥವಾ ಅವಮಾನಿಸಿದಂತಾಯಿತೆ ಎಂದು ಯೋಚಿಸಬೇಕಾದ ವಿಷಯವಲ್ಲವೆ? ಒಂದು ಮಾರ್ಗಕ್ಕೆ ವ್ಯಕ್ತಿಯ ನಾಮಕರಣಮಾಡುವಾಗ ಆ ಮಾರ್ಗದಲ್ಲಿ ಮಹಾನುಭಾವರ ಒಂದು ಸಣ್ಣ ಪ್ರತಿಮೆ, ಕಿರು ಪರಿಚಯ ಅಥವಾ ಸಣ್ಣ ಇತಿಹಾಸ ಇದ್ದರೆ ಒಳಿತಲ್ಲವೇ? ವರ್ಷಕ್ಕೊಮ್ಮೆ ಅವರ ಜಯಂತಿ ಯಂದು, ಪುಣ್ಯತಿಥಿಯಂದು ಸುತ್ತಮುತ್ತಲಿನ ಪರಿಸರವನ್ನು ಶುಚಿಗೊಳಿಸಿ, ಪ್ರತಿಮೆಗೊಂದು ಮಾಲಾರ್ಪಣೆ ಮಾಡಿ, ಅಕ್ಕಪಕ್ಕದವರಿಗೆ ಆ ಮಾರ್ಗದ ಬಗ್ಗೆ ತಿಳಿಸಿದರೆ ಪ್ರಯೋಜನವಾದೀತು.
ಇದೆಂಥ ಮಹಾ ಕಷ್ಟದ ಕಾರ್ಯವೇ? ಮನಸ್ಸಿದ್ದರೆ ಮಾರ್ಗ, ಅಲ್ಲವೇ! ಇದು ಸಾಧ್ಯವಿಲ್ಲದಿದ್ದರೆ ಮಾರ್ಗಗಳಿಗೆ ವ್ಯಕ್ತಿಗಳ ಹೆಸರನ್ನೇ ಯಾಕೆ ಇಡಬೇಕು? ಆ ಸ್ಥಳವನ್ನು ಗುರುತಿಸುವುದಕ್ಕೆ ಹೆಸರೇ ಬೇಕೆಂದಾದರೆ ಟೊಕ್ಯೋ, ಟ್ರೈಸಿಲ್ ಪಟ್ಟಣದಂತೆ ಸಂಖ್ಯೆಯನ್ನೋ, ಫಿಲಿಪೈನ್ಸ್, ಸಿಂಗಾಪುರದಂತೆ ಇನ್ಯಾವುದೋ ವ್ಯಕ್ತಿಯೇತರ ಹೆಸರನ್ನೋ ಇಡ ಬಹುದಲ್ಲ.
ಕರ್ನಾಟಕಕ್ಕೆ ಸೀಮಿತಗೊಳಿಸಿ ಹೇಳುವುದಾದರೆ ಕಾವೇರಿ, ಕೃಷ್ಣಾ, ವರದಾ, ತುಂಗಾ, ಶರಾವತಿಯಂಥ ನದಿಗಳ ಹೆಸರನ್ನೋ, ಚಾಮುಂಡಿ, ಸಹ್ಯಾದ್ರಿ, ಕೊಡ
ಚಾದ್ರಿಯಂಥ ಪರ್ವತಗಳ ಹೆಸರನ್ನೋ, ಮಲ್ಲಿಗೆ, ಸಂಪಿಗೆ, ಕೇದಗೆ, ಸೇವಂತಿಗೆ, ಜಾಜಿಯಂತ ಹೂವಿನ ಹೆಸರನ್ನೋ (ಬೆಂಗಳೂರಿನ ಮಶ್ವರಂನಲ್ಲಿ ಹೂವಿನ
ಹೆಸರಿನ ಕೆಲವು ಮಾರ್ಗಗಳಿವೆ) ಮಾವು, ಹಲಸು, ಸೀಬೆಯಂತ ಹಣ್ಣಿನ ಹೆಸರನ್ನೋ, ರಸಾಯನ, ಪಾಯಸ, ಮೋದಕ, ಪಾನಕ ಹೀಗೆ ಸಿಹಿ ತಿಂಡಿ-
ಪೇಯಗಳ ಹೆಸರನ್ನೋ, ಪ್ರಾಣಿ-ಪಕ್ಷಿಗಳ ಹೆಸರನ್ನೋ, ಬಣ್ಣಗಳ ಹೆಸರನ್ನೋ ಇಡಬಹುದಲ್ಲ? ಸ್ಫೂರ್ತಿ ರಸ್ತೆ, ಕೀರ್ತಿಮಾರ್ಗ, ಯುಕ್ತಿ ಪಥ, ಶಕ್ತಿ ವೀಥಿ ಯಾಕಾಗ
ಬಾರದು? ಕನ್ನಡದಲ್ಲಿ ಅದೆಷ್ಟೋ ವಿಶೇಷ ಗುಣವಾಚಕ ಗಳಿವೆ, ಅದರಲ್ಲಿ ಯಾವುದಾದರೂ ಒಂದನ್ನು ಇಡಲಿ.
ಯಾಕೆಂದರೆ ಇದ್ಯಾವುದಕ್ಕೂ ರಾಜ್ಯದ ಸೀಮೆಯಿಲ್ಲ, ಪಕ್ಷದ ಬೇಧವಿಲ್ಲ, ಜಾತಿಯ ಅರಿವಿಲ್ಲ. ವೀರ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರಾ, ಧೀಮಂತ
ಜನಪ್ರತಿನಿಽಯಾಗಿದ್ದರಾ, ಒಳ್ಳೆಯ ಕವಿಯಾಗಿದ್ದರಾ, ಲೇಖಕರಾಗಿದ್ದರಾ, ಕಲಾವಿದರಾಗಿದ್ದರಾ ಈ ಎಲ್ಲ ಗೊಂದಲಗಳೇ ಇರುವುದಿಲ್ಲ. ಮೇಲಿಂದ ಮೇಲೆ
ಮರುನಾಮಕರಣ ಮಾಡುವ ಪ್ರಮೇಯವೂ ಇರುವುದಿಲ್ಲ. ಜಾತಿ, ಧರ್ಮ, ಪಕ್ಷವೇ ಜಗಳಕ್ಕೆ, ಅಪಸ್ವರಕ್ಕೆ ಕಾರಣವಾಗುವುದಾದರೆ ಇದೆಲ್ಲವನ್ನೂ ತಾಳೆ ನೋಡಿ,
ತಾಳಿ ನೋಡಿ ನಾಮಕರಣ ಮಾಡುವ ಹೊತ್ತಿಗೆ ಹರೋ ಹರ; ಹೊಸ ರಸ್ತೆಯೂ ಕಿತ್ತೆದ್ದು ಹಳ್ಳ ಹಿಡಿದಿರುತ್ತದೆ.
ಆದ್ದರಿಂದ ಯಾವುದೇ ಜಾತಿಗೆ, ಧರ್ಮಕ್ಕೆ, ಪಕ್ಷಕ್ಕೆ ಸೇರಿದವರ ಹೆಸರು ಬೇಡವೇ ಬೇಡ. ಇದಕ್ಕೆ ಎಲ್ಲರೂ ಒಪ್ಪಿಯಾರಾ ಅಥವಾ ಯಾರಾದರೂ ಆಕ್ಷೇಪ ವ್ಯಕ್ತಪಡಿಸಿಯಾರಾ? ವೆಂಕಟೇಶ್ವರ, ಮಂಜುನಾಥ ದೇವರ ಹೆಸರಿನಲ್ಲಿ, ಬಸವೇಶ್ವರ, ರಾಘವೇಂದ್ರ ಸ್ವಾಮಿಯಂತಹ ಸಾಧು ಸಂತರ ಹೆಸರಿನಲ್ಲಿ ಮದ್ಯದ ಅಂಗಡಿಗಳೇ ಇರುವಾಗ ಮಾರ್ಗಕ್ಕೆ ಯಾರ ಹೆಸರಿಟ್ಟರೇನು ಅಂತೀರಾ ?