ಶಶಾಂಕಣ
ಶಶಿಧರ ಹಾಲಾಡಿ
ನಮ್ಮ ದೇಶದ ಚುನಾವಣಾ ಪ್ರಕ್ರಿಯೆಯೇ ಒಂದು ವಿಸ್ಮಯ. ಕಾಲದಿಂದ ಕಾಲಕ್ಕೆ ನಡೆಯುವ ವಿವಿಧ ಚುನಾವಣೆಗಳಲ್ಲಿ
ಹೊರ ಹೊಮ್ಮುವ ಫಲಿತಾಂಶಗಳು ಹಲವು ಬಾರಿ ಅಚ್ಚರಿಯ ಆಗರ. 2011ರ ತನಕ ಚಾಲ್ತಿಯಲ್ಲಿದ್ದ ಒಂದು ಬಿಡುಬೀಸಾದ ಹೇಳಿಕೆಯನ್ನೇ ನೋಡೋಣ.
ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ ಕಮ್ಯುನಿಸ್ಟ್ ಸಿದ್ಧಾಂತದ ಪಕ್ಷಗಳನ್ನು ಸೋಲಿಸುವುದು ಬಹಳ ಕಷ್ಟ ಎಂಬ, ಅಷ್ಟೇನೂ ವೈಜ್ಞಾನಿಕವಲ್ಲದ ಹೇಳಿದೆ ಅದು. ಅದಕ್ಕೆ ಮೇಲ್ನೋಟದ ಹಲವು ಕಾರಣಗಳೂ ಇದ್ದವು. ಪಶ್ಚಿಮ ಬಂಗಾಳದ ಚುನಾವಣಾ ಇತಿಹಾಸವನ್ನು ಗಮನಿಸಿದರೆ, ಇಡೀ ಜಗತ್ತಿನಲ್ಲೇ ಸತತವಾಗಿ 34 ವರ್ಷಗಳ ಕಾಲ ಚುನಾವಣೆಯ ಮೂಲಕ ಕಮ್ಯುನಿಸ್ಟ್ ಸಿದ್ಧಾಂತ ಅನುಸರಿದ ಪಕ್ಷವೊಂದು ಅಲ್ಲಿ ಚುನಾಯಿತಗೊಂಡು, ಆಡಳಿತ ನಡೆಸುತ್ತಿತ್ತು.
ಪಶ್ಚಿಮ ಬಂಗಾಳದಲ್ಲಿ ಸತತವಾಗಿ ಗೆದ್ದು, 34 ವರ್ಷ ಆಡಳಿತ ನಡೆಸಿದ್ದ ಸಿಪಿಐ (ಎಂ) ಪಕ್ಷವನ್ನು ಅಧಿಕಾರದಿಂದ ಕೆಳಗೆ ಬೀಳಿಸಿದ್ದು, ಮಮತಾ ಬ್ಯಾನರ್ಜಿಯವರು ತೃಣಮೂಲ ಕಾಂಗ್ರೆಸ್ (ಟಿಎಂಸಿ). ಬಹುಷಃ, ನಿರಂತರವಾಗಿ ಅಲ್ಲಿ ಕಮ್ಯುನಿಸ್ಟ್ ಸಿದ್ಧಾಂತದ ಪಕ್ಷವೊಂದು ಮಾತ್ರ ಅಧಿಕಾರ ನಡೆಸಲು ಸಾಧ್ಯ ಎಂಬ ನಂಬಿಕೆಯನ್ನು 2011ರಲ್ಲಿ ಮಮತಾ ಬ್ಯಾನರ್ಜಿ ತಲೆಕೆಳಗು ಮಾಡಿದ್ದರು.
ಅಂದು ಕೆಳಗೆ ಬಿದ್ದ ಸಿಪಿಐ (ಎಂ), ಇಂದಿಗೂ ಅಲ್ಲಿ ತನ್ನ ನೆಲೆಯನ್ನು ಮರುಗಳಿಸಲು ಸಾಧ್ಯವಾಗಿಲ್ಲ. ಈಗ ಅಲ್ಲಿ ನಡೆಯು ತ್ತಿರುವ ಚುನಾವಣೆಯಲ್ಲೂ ಆ ಪಕ್ಷ ಬಹುಮತ ಗಳಿಸುವ ಸಾಧ್ಯತೆ ಇಲ್ಲವೆಂದೇ ಎಲ್ಲಾ ಸಮೀಕ್ಷೆಗಳೂ ತಿಳಿಸಿವೆ. 2011ರಲ್ಲಿ ಪಶ್ಚಿಮ ಬಂಗಾಳದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದು, ತನ್ನದೇ ರೀತಿಯ ಆಡಳಿತವನ್ನು ನಡೆಸುತ್ತಿರುವ ಟಿಎಂಸಿ ಪಕ್ಷದ ಮಮತಾ ಬ್ಯಾನರ್ಜಿಯವರು, ಹತ್ತು ವರ್ಷಗಳ ನಂತರ ಮೊದಲ ಬಾರಿ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಯಲ್ಲಿದ್ದಾರೆ ಎಂದು ಚುನಾವಣಾ ಸಮೀಕ್ಷೆಗಳು ಹೇಳುತ್ತಿವೆ.
ಸರಳ ನಡೆನುಡಿ, ಬಡವರ ಪರವಾದ ನಿಲುವು, ರಾಜ್ಯದ ಹಿತಕ್ಕಾಗಿ ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳುವ ಧೈರ್ಯ, ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತ ಗಳಿಸಲು ಏನು ಬೇಕಾದರೂ ಮಾಡಲು ತಯಾರಿರುವ ಮನಸ್ಥಿತಿ, ಸುರಕ್ಷಿತ ಚುನಾವಣೆ
ನಡೆಸಲು ಸಹಾಯ ಮಾಡಲು ಬಂದಿರುವ ಸಿಆರ್‌ಪಿಎಫ್ ನಂತಹ ರಕ್ಷಣಾ ಪಡೆಯನ್ನೇ ಬೆದರಿಸಲು ನಡೆಸುವ ಯತ್ನ ಮೊದಲಾದ ನಡೆಗಳಿಂದ, ಆ ರಾಜ್ಯದಲ್ಲಿ ಬಹು ಜನಪ್ರಿಯ ನಾಯಕಿ ಎನಿಸಿರುವ ಮಮತಾ ಬ್ಯಾನರ್ಜಿ, ಅಲ್ಲಿ ಒಂದು ದಾಖಲೆಯನ್ನೇ ಮಾಡಿದ್ದಾರೆ.
ಅವರ ಜನಪ್ರಿಯ ಅಲೆಯ ಎದುರು ಯಾವುದೇ ರಾಜಕೀಯ ಪಕ್ಷವೂ ನಿಲ್ಲಲಾರದು ಎಂದೇ ಮೊನ್ನೆ ಮೊನ್ನೆ ತನಕ ಎಲ್ಲರೂ ತಿಳಿದಿದ್ದರು. ಆದರೆ 2019ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಬೇರೊಂದೇ ಕಥೆಯನ್ನು ಹೇಳಿದವು. ಮಮತಾ ಬಿರುಗಾಳಿಯ ನಡುವೆಯೇ, 2019ರ ಆ ಐತಿಹಾಸಿಕ ಚುನವಣೆಯಲ್ಲಿ, ಬಿಜೆಪಿ 18 ಸ್ಥಾನ ಗಳಿಸಿತು, ಟಿಎಂಸಿ 22 ಸ್ಥಾನ ಮತ್ತು ಕಾಂಗ್ರೆಸ್ 2 ಸ್ಥಾನ ಗಳಿಸಿದವು.
ಮೊದಲ ಬಾರಿ ಟಿಎಂಸಿಗೆ ಸಮರ್ಥ ಸವಾಲು ಹಾಕಿದ ಬಿಜೆಪಿಯ ಈ ಸಾಧನೆಯನ್ನು ಕಂಡ ನಂತರ, ಓಹ್, ತೃಣಮೂಲ ಕಾಂಗ್ರೆಸ್‌ಗೆ ಮತ್ತು ಮಮತಾ ಬ್ಯಾನರ್ಜಿಗೆ ಎದುರಾಗಿ ನಿಲ್ಲುವ ಪಕ್ಷವೊಂದಿದ್ದರೆ ಅದು ಬಿಜೆಪಿ ಎಂದು ಕೆಲವರಾದರೂ
ನಂಬತೊಡಗಿದರು. ಈ ಎರಡು ಪಕ್ಷಗಳ ಹೋರಾಟದ ನಡುವೆ, ಹಿಂದೆ ಅಲ್ಲಿ ಪ್ರಬಲ ಪಕ್ಷಗಳಾಗಿದ್ದ ಸಿಪಿಐ (ಐ), ಕಾಂಗ್ರೆಸ್ ಪಕ್ಷಗಳು ಇಂದು ನಗಣ್ಯ ಎನಿಸಿದ್ದು ಸಹ ಬಹುಮುಖ್ಯ.
ಈಗ ಪಶ್ಚಿಮ ಬಂಗಾಳದಲ್ಲಿ ಆರು ಹಂತದ ಮತದಾನ ಮುಗಿದಿದೆ. ಇನ್ನೂ ಎರಡು ಹಂತದ ಚುನಾವಣೆ ಬಾಕಿ ಇದೆ. ಬೇಸಿಗೆಯಲ್ಲಿ ಆ ರಾಜ್ಯದ ವಾತಾವರಣ ಬೆಂಕಿ ಇದ್ದಂತೆ; ಮಮತಾ ಬ್ಯಾನರ್ಜಿಯವರು ಸಹ ಬೆಂಕಿಯಂತಾಗಿದ್ದಾರೆ. ಅವರ ಮಾತುಗಳು, ನಡೆ ನುಡಿಗಳು ಕಿಡಿ ಕಾರುತ್ತಿವೆ! ಪ್ರಾಯಶಃ, ಅಲ್ಲಿನ ರಹಸ್ಯ ಸಮೀಕ್ಷೆಗಳು ಅದಾಗಲೇ ಮತದಾನ ನಡೆದಿರುವ
ಕ್ಷೇತ್ರಗಳಲ್ಲಿ ಯಾವ ಪಕ್ಷ ಮುಂದಿದೆ ಎಂಬ ಸೂಚನೆ ನೀಡಿರಬೇಕು; ಅದರಲ್ಲಿ ತಮಗೆ ಹಿನ್ನಡೆಯ ಸಾಧ್ಯತೆ ಇದೆ ಎಂಬ ಸೂಚನೆ ಅವರಿಗೆ ದೊರಕಿರಬಹುದೇ, ಏನೋ ಗೊತ್ತಿಲ್ಲ.
ಆದರೆ, ಕಳೆದ ವಾರದಿಂದ ತೃಣಮೂಲ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ಸಲ್ಲಿಸುತ್ತಿರುವ ಮನವಿಯನ್ನು ಕಂಡರೆ, ಅಂತಹದೊಂದು ಅನುಮಾನ ಮೂಡುತ್ತದೆ. ಅದುವರೆಗೆ ಬಿಜೆಪಿ ಮತ್ತು ಕೇಂದ್ರ ಸರಕಾರದ ವಿರುದ್ಧ ಕಟುವಾದ ಮತ್ತು ಕೆಲವು
ವಿವಾದಾಸ್ಪದ ಎನಿಸುವ ಆರೋಪಗಳನ್ನು ಮಾಡುತ್ತಿದ್ದ ಮಮತಾ ಬ್ಯಾನರ್ಜಿಯವರು, ಒಮ್ಮೆಗೇ ಒಂದು ಅಚ್ಚರಿಯ ಮನವಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದರು. ‘ಇನ್ನೂ ಬಾಕಿ ಇರುವ ಮೂರು ಹಂತದ ಚುನಾವಣೆಗಳನ್ನು ಒಂದೇ ಹಂತದಲ್ಲಿ ಮಾಡಿಮುಗಿಸಿ’ ಎಂಬ ವಿಚಿತ್ರ ಮನವಿ ಅದು.
ಅದಕ್ಕೆ ನೀಡಿರುವ ಕಾರಣವೆಂದರೆ, ಕೋವಿಡ್ ಸೋಂಕು ಹರಡುವುದನ್ನು ತಡೆಯುವಿಕೆ! ನಮ್ಮ ದೇಶದ ಯಾವುದೇ ರಾಜಕೀಯ
ಪಕ್ಷವೂ ಈ ರೀತಿಯ ಕಾರಣ ನೀಡಿ, ಚುನಾವಣಾ ಪ್ರಕ್ರಿಯೆಯನ್ನು ಬದಲಿಸಿ ಎಂದರೆ ಅನುಮಾನ ಮೂಡಿಸುತ್ತದೆ. ಪಕ್ಷ ಯಾವುದೇ ಇರಲಿ, ರಾಜಕಾರಣಿ ಗಳಿಗೆ ಚುನಾವಣೆ ಗೆಲ್ಲುವುದು ಮುಖ್ಯವೇ ಹೊರತು, ಆ ಗುರಿಗೆ ಹೋಲಿಸಿದಾಗ, ಜನಸಾಮಾನ್ಯರ ಆರೋಗ್ಯ ಮತ್ತು ಕೋವಿಡ್ ಸೋಂಕು ಪ್ರಮುಖ ಕಾಳಜಿಯೇ ಅಲ್ಲ!
ತೃಣಮೂಲ ಕಾಂಗ್ರೆಸ್‌ನ ಈ ಮನವಿಯನ್ನು ಚುನಾವಣಾ ಆಯೋಗ ಪುರಸ್ಕರಿಸಲಿಲ್ಲ ಎಂಬುದು ಬೇರೆ ಮಾತು. ಇನ್ನು ಎರಡು ಹಂತದ ಚುನಾವಣೆ ನಡೆದು, ಮೇ 2ರಂದು ಫಲಿತಾಂಶ ಹೊರಬೀಳಲಿದೆ. ಅಂದು ಬಿಜೆಪಿ ಬಹುಮತ ಗಳಿಸಲಿ ಅಥವಾ ಟಿಎಂಸಿ ಬಹುಮತ ಗಳಿಸಲಿ, ಅದು ನಮ್ಮ ದೇಶದ ಚುನಾವಣಾ ವಿದ್ಯಮಾನದಲ್ಲಿ ಬಹು ಪ್ರಮುಖ ಮತ್ತು ಕುತೂಹಲಕಾರಿ ಎನಿಸುತ್ತದೆ. ಒಂದು ವೇಳೆ ಬಿಜೆಪಿ ಬಹುಮತ ಗಳಿಸಿದರೆ, ಸಿಪಿಐ(ಎಂ) ಮತ್ತು ಟಿಎಂಸಿಯ 44 ವರ್ಷಗಳ ಆಡಳಿತ ಕೊನೆಗೊಂಡ ದಾಖಲೆ ಎನಿಸುತ್ತದೆ. ಟಿಎಂಸಿ ಬಹುಮತ ಗಳಿಸಿದರೆ, 34 ವರ್ಷ ಅಧಿಕಾರ ನಡೆಸಿದ ಪಕ್ಷವನ್ನು ಕೆಳಗೆ ಬೀಳಿಸಿದ ಪಕ್ಷವೊಂದು ಮೂರನೆಯ ಬಾರಿ ಅಧಿಕಾರ ಹಿಡಿದ ಅಪರೂಪದ ದಾಖಲೆ ಬರೆಯುತ್ತದೆ.
ಕಳೆದ 44 ವರ್ಷಗಳ ಕಾಲ ಪಶ್ಚಿಮ ಬಂಗಾಳದ ಅಧಿಕಾರವನ್ನು ಹಿಡಿದಿಟ್ಟುಕೊಳ್ಳಲು ಸಿಪಿಐ(ಎಂ) ಮತ್ತು ಟಿಎಂಸಿ ಪಕ್ಷಗಳು ಹಲವು ವಿಪರೀತ ಎನಿಸುವ ಕ್ರಮ ಕೈಗೊಂಡಿವೆ. ಪಶ್ಚಿಮ ಬಂಗಾಳದ ಇತಿಹಾಸವನ್ನು ನೋಡಿದರೆ, ಅಂತಹದೊಂದು ಅನಿವಾರ್ಯತೆ ಆ ರಾಜಕೀಯ ಪಕ್ಷಗಳಿಗೆ ಇತ್ತೋ ಎನೋ ಎಂಬ ಅನುಮಾನವೂ ಮೂಡುತ್ತದೆ. ಪಶ್ಚಿಮ ಬಂಗಾಲದ
ಇತಿಹಾಸವೇ ರಕ್ತಸಿಕ್ತ. ಅದರ ಮೂಲ ಹುಡುಕುತ್ತಾ ಹೋದರೆ, ಕೊಲ್ಕೊತ್ತಾವನ್ನು ರಾಜಧಾನಿ ಮಾಡಿಕೊಂಡಿದ್ದ ಬ್ರಿಟಿಷರ ಕುಕೃತ್ಯಗಳು, ಕುತಂತ್ರಗಳು ಕಣ್ಣಿಗೆ ರಾಚುತ್ತವೆ.
ಬಂಗಾಳದಲ್ಲಿ ಬ್ರಿಟಿಷರು ಸೃಷ್ಟಿಸಿದ ಕೃತಕ ಬರಗಾಲ, ತಮ್ಮ ಆಡಳಿತ ಲಾಭಕ್ಕಾಗಿ 1905ರಲ್ಲಿ ರಾಜ್ಯವನ್ನು ವಿಭಜಿಸಿದ್ದು, ಹಲವು ಬಾರಿ ಜನಸಾಮಾನ್ಯರ ಮೇಲೆ ನಡೆಸಿದ ಗೋಲಿಬಾರ್ ಮೊದಲಾದವು ಅಲ್ಲಿನ ತಲ್ಲಣಗಳು. ಬಂಗಾಳದ ವಿಭಜನೆ ಎಂಬ ಮೋಸವನ್ನು ಆರು ವರ್ಷಗಳ ನಂತರ ಸರಿಪಡಿಸಲಾಯಿತು. ಆದರೆ ಆ ವಿಭಜನೆಯು 1947ರ ಭಾರತದ ವಿಭಜನೆಗೆ ಬುನಾದಿ
ಹಾಕಿತ್ತು. ಆಗ ಸಾಕಷ್ಟು ರಕ್ತ ಹರಿಯಿತು. ಕೊಲ್ಕೊತ್ತಾದಲ್ಲಿ 1946ರಲ್ಲಿ ನಡೆದ ‘ನೇರ ಕ್ರಮ’ದಲ್ಲಿ ಸತ್ತವರ ಖಚಿತ ಸಂಖ್ಯೆ ಇಂದಿಗೂ ಸ್ಪಷ್ಟವಿಲ್ಲ. 1971ರಲ್ಲಿ ಬಾಂಗ್ಲಾ ಯುದ್ಧವಾದಾಗ, ಮತ್ತಷ್ಟು ರಕ್ತ ಹರಿಯಿತು.
ಒಂದುಕೋಟಿಗೂ ಹೆಚ್ಚಿನ ನಿರ್ಗತಿಕರು ಬಾಂಗ್ಲಾದಿಂದ ಪಶ್ಚಿಮ ಬಂಗಾಳಕ್ಕೆ ಬಂದು, ಅಲ್ಲಿನ ಡೆಮೊಗ್ರಾಫಿಯನ್ನೇ ಬದಲಿಸಿದರು. ಆ ಕೂಡಲೆ, 1929ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದದ್ದು ಕಾಂಗ್ರೆಸ್. 1975ರ ತುರ್ತುಪರಿಸ್ಥಿತಿಯ ನಂತರ, 1977ರಲ್ಲಿ
ನಡೆದ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದದ್ದು ಸಿಪಿಐ (ಎಂ). ಜ್ಯೋತಿ ಬಸು ಅವರು ಮುಖ್ಯಮಂತ್ರಿಯಾದರು. ಆ ಪಕ್ಷ ಅಧಿಕಾರದಲ್ಲಿ ಉಳಿಯಲು ಅನುಸರಿಸಿದ್ದು ಬಿಗಿಯಾದ ಆಡಳಿತ ಮತ್ತು ಅಲ್ಪಸಂಖ್ಯಾತರ ಮೆಚ್ಚುಗೆ ಗಳಿಸುವ ತಂತ್ರ. ೩೪ ವರ್ಷಗಳ ಕಾಲ ಅಧಿಕಾರ ನಡೆಸಿದ ಸಿಪಿಐ (ಎಂ) ನ್ನು ಸೋಲಿಸಲು ಮಮತಾ ಬ್ಯಾನರ್ಜಿ ಎಂಬ ಬಿರುಗಾಳಿ ಸದೃಶ ನಾಯಕಿ
ಬರಬೇಕಾಯಿತು.
2011ರಿಂದ ಸುಮಾರು ಹತ್ತು ವರ್ಷಗಳ ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವ ಅನುಭವಿ ನಾಯಕಿ ಮಮತಾ ಬ್ಯಾನರ್ಜಿಯವರಿಂದ ಆ ರಾಜ್ಯವನ್ನು ಉದ್ಧಾರ ಮಾಡಲು ಸಾಧ್ಯವಾಯಿತೆ? ಇದಕ್ಕೆ ಇತಿಹಾಸವೇ ಉತ್ತರಿಸಬೇಕು. ಏಕೆಂದರೆ ಅಲ್ಲಿನ ಸ್ಥಿತಿ ಬಹು ಸಂಕೀರ್ಣ. ಆರಂಭದಲ್ಲಿ ಅವರ ಎದುರಿದ್ದ ಪ್ರಮುಖ ಸವಾಲೆಂದರೆ ದೀರ್ಘ ಕಾಲ ಆಳ್ವಿಕೆ ನಡೆಸಿದ್ದ ಸಿಪಿಐ (ಎಂ) ನ ಪ್ರಭಾವ ತಗ್ಗಿಸುವುದು. ಜತೆಗೆ ಕಾಂಗ್ರೆಸ್ ನ್ನು ಹದ್ದುಬಸ್ತಿನಲ್ಲಿಡುವುದು.
ಇದಕ್ಕಾಗಿ ಅವರು ಜನರ ಪ್ರೀತಿ ಗಳಿಸಲು ತನ್ನ ಸರಳತೆಯನ್ನೇ ಪ್ರಮುಖ ಅಸವನ್ನಾಗಿಸಿದರು. ಜತೆಗೆ ಅಲ್ಪಸಂಖ್ಯಾತರ ವಿಶ್ವಾಸ
ಗಳಿಸಲು ಹಲವು ವಿವಾದಾಸ್ಪದ ಹೆಜ್ಜೆಗಳನ್ನೂ ಇಟ್ಟಿದ್ದಾರೆ. ಪಶ್ಚಿಮ ಬಂಗಾಲದಲ್ಲಿ ಶೇ.30ರಷ್ಟು ಅಲ್ಪಸಂಖ್ಯಾತರ ಮತಗಳಿವೆ. ಕೆಲವು ಕ್ಷೇತ್ರಗಳಲ್ಲಿ ಇದು ಶೇ.50ರ ಹತ್ತಿರವೂ ಇದೆ! ಅವರ ಪ್ರೀತಿ, ವಿಶ್ವಾಸ ಗಳಿಸಲು ಮಮತಾ ಬ್ಯಾನರ್ಜಿ ಯವರು ಕೈಗೊಂಡ ಕ್ರಮಗಳು, ಮಾಡಿದ ಉಪಾಯಗಳು, ಹೂಡಿದ ತಂತ್ರಗಳು ಅದೆಷ್ಟು!
ಅವರ ಕೆಲವು ನಡೆಗಳು ಪ್ರಜಾಪ್ರಭುತ್ವ ವಿರೋಧಿ ಎಂದುನ್ಯಾಯಾಲಯವೇ ವಜಾ ಮಾಡಿದ ಉದಾಹರಣೆಗಳಿವೆ. ಇಮಾಂ ಬ್ಯಾಟಾ (ಭಕ್ಷೀಸು) ಎಂಬ ಹಣ ವಿತರಣೆಯ ಯೋಜನೆಯು ಅಂತಹವುಗಳಲ್ಲಿ ಒಂದು. ದುರ್ಗಾಪೂಜೆಯ ಸಮಯ ಮಿತಿ, ಕೆಲವು ಬಾರಿ ವಿಸರ್ಜನೆಗೆ ನಿರ್ಬಂಧ, ಅಲ್ಪಸಂಖ್ಯಾತರಿಗೆ ವಿಶೇಷ ಸವಲತ್ತುಗಳು, ಸಿಎಎ ವಿರುದ್ಧ ಮಾತಿನ ದಾಳಿ ಇಂತಹ
ಹಲವು ಕ್ರಮಗಳು ಅವರನ್ನು 2019ರ ತನಕ ಅಲ್ಲಿನ ಅತಿ ಜನಪ್ರಿಯ ಪುಡಾರಿಯನ್ನಾಗಿಸಿದ್ದಂತೂ ನಿಜ.
ಮಮತಾ ಬ್ಯಾನರ್ಜಿಯವರ ರಾಜಕೀಯ ಇತಿಹಾಸವನ್ನು ಗಮನಿಸಿದರೆ, ಜನರ ವಿಶ್ವಾಸ ಗಳಿಸಲು, ಅಧಿಕಾರದಲ್ಲಿರಲು ಅವರು ಯಾವುದೇ ರೀತಿಯ ನಾಟಕೀಯ ಕ್ರಮ ಕೈಗೊಳ್ಳಲು, ಹೊಂದಾಣಿಕೆ ಮಾಡಿಕೊಳ್ಳಲು ಹಿಂಜರಿಯುವವರಲ್ಲ. ಬಡ ಕುಟುಂಬ
ದಿಂದ ಬಂದ ಅವರು, 15ನೆಯ ವಯಸ್ಸಿನಿಂದಲೇ ವಿದ್ಯಾರ್ಥಿ ನಾಯಕಿಯಾಗಿ ರೂಪುಗೊಂಡರು. 1975ರಲ್ಲಿ ಯುವ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡರು. ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ವಿರುದ್ಧ ಪ್ರತಿಭಟನೆಯ ಅಂಗವಾಗಿ, ಜೆಪಿಯವರ ಕಾರಿನ ಮೇಲೆ ನರ್ತನ ಮಾಡಿ ಎಲ್ಲರ ಗಮನ ಸೆಳೆದವರು!
1976ರಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ. 1984ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ, ಮೊದಲ ಬಾರಿ ಲೋಕಸಭೆ ಯನ್ನು ಪ್ರವೇಶಿಸಿ, ಅತಿ ಕಿರಿಯ ಮಹಿಳಾ ಎಂಪಿ ಎಂಬ ದಾಖಲೆ ಬರೆದರು. ನಂತರದ ವರ್ಷಗಳಲ್ಲಿ ಸತತವಾಗಿ ಲೋಕಸಭೆಗೆ ಆಯ್ಕೆಯಾಗಿ ಬರುತ್ತಿದ್ದರು. ಪಿವಿ ನರಸಿಂಹರಾವ್ ಪ್ರಧಾನಿಯಾಗಿದ್ದಾಗ, ಮಂತ್ರಿಯಾಗುವ ಅವಕಾಶ.
ಆದರೆ ಕಾಂಗ್ರೆಸ್ ಜತೆಗಿನ ಸಖ್ಯ ಕೊನೆಗೊಂಡು, 1999ರಲ್ಲಿ ತಮ್ಮದೇ ಪಕ್ಷ ತೃಣಮೂಲ ಕಾಂಗ್ರೆಸ್ ಸ್ಥಾಪಿಸಿದರು. ಮರುವರ್ಷವೇ, ಅಂದರೆ 1999ರಲ್ಲಿ ಎನ್‌ಡಿಎ ಸೇರಿ, ವಾಜಪೇಯಿ ಸರಕಾರದಲ್ಲಿ ರೈಲ್ವೆ ಮಂತ್ರಿಯಾದರು. ತಕ್ಷಣ ಅವರು ಮಾಡಿದ ಕೆಲಸವೆಂದರೆ, ಹಲವು ಪ್ರಮುಖ ರೈಲುಗಳನ್ನು ಪಶ್ಚಿಮ ಬಂಗಾಳಕ್ಕೆ ಓಡಿಸಿದ್ದು. 2009-11ರ ನಡುವ ಪುನಃ ಕಾಂಗ್ರೆಸ್ ಸಖ್ಯ. ಮನಮೋಹನ್ ಸಿಂಗ್ ಸಂಪುಟದಲ್ಲಿ ಎರಡನೆಯ ಬಾರಿ ರೈಲ್ವೆ ಮಂತ್ರಿಯಾದರು. ಪುನಃ ಇನ್ನಷ್ಟು ರೈಲುಗಳು
ಪಶ್ಚಿಮ ಬಂಗಾಳಕ್ಕೆ ಓಡಿದವು! ಕಟುವಾದ, ನೇರ ಮಾತು, ಸರಳ ನಡೆ ನುಡಿ, ಭ್ರಷ್ಟಾಚಾರ ರಹಿತ ರಾಜಕೀಯ ಜೀವನ ಇವರ ಜನಪ್ರಿಯತೆಯ ಗುಟ್ಟು.
ಪಶ್ಚಿಮ ಬಂಗಾಳದ ಜನ ಬಹಳಷ್ಟು ಮೆಚ್ಚಿ, ಇವರ ಪಕ್ಷವನ್ನು 2011ರ ಚುನಾವಣೆಯಲ್ಲಿ ಗೆಲ್ಲಿಸಿದರು. 34 ವರ್ಷಗಳ
ಸತತ ಅಧಿಕಾರದ ನಂತರ, ಸಿಪಿಐ (ಎಂ)ನ್ನು ಸೋಲಿಸಿದ ಖ್ಯಾತಿ ಮಮತಾ ಬ್ಯಾನರ್ಜಿಯವರದಾಯಿತು. ಮುಖ್ಯಮಂತ್ರಿ ಯ ಗಾದಿಯೇರಿದ ಮಮತಾ ಅವರು, 2016ರಲ್ಲಿ ಮತ್ತೆ ಜಯಭೇರಿ ಬಾರಿಸಿದರು. 2018ರ ತನಕ ಆ ರಾಜ್ಯದಲ್ಲಿ ಮಮತಾ ಬಿಟ್ಟರೆ ಬೇರಾರು ಎಂಬ ಪ್ರಶ್ನೆಯೇ ಇರಲಿಲ್ಲ.
2019ರ ಲೋಕಸಭಾ ಚುನಾವಣೆಯ ಫಲಿತಾಂಶವು ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿತು. ಯಾವ ರಾಜ್ಯದಲ್ಲಿ ಬಿಜೆಪಿಯ ಎಂದಿಗೂ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳಲು ಅಸಾಧ್ಯ ಎಂದ ತಿಳಿಯಲಾಗಿತ್ತೋ ಅಲ್ಲಿ 18 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗಳಿಸಿ, ದಾಖಲೆ ಬರೆಯಿತು! 2019ರ ಆ ವಿಜಯದ ಅಲೆಯ ಸಹಾಯ ಪಡೆದು, 2021ರ ಚುನಾವಣೆಯಲ್ಲಿ, ಬಿರುಸಾಗಿ ಪ್ರಚಾರ ನಡೆಸಿದೆ.
ಬಿಜೆಪಿ ಮತ್ತು ಟಿಎಂಸಿ ಎರಡೂ ಪಕ್ಷಗಳು ಹಿಂದೆಂದೂ ಕಾಣದಂತಹ ಪ್ರಚಾರ ತಂತ್ರಗಳನ್ನು ಬಳಸುತ್ತಿರುವುದರಿಂದಾಗಿ, ಆ ರಾಜ್ಯದಲ್ಲಿ ಮತಗಳ ಪೋಲರೈಸೇಷನ್ ಆಗುತ್ತಿದೆ ಎಂದು ಕೆಲವು ಚುನಾವಣಾ ಪಂಡಿತರು ಅಭಿಪ್ರಾಯ ಪಡುತ್ತಿದ್ದಾರೆ. ಮಮತಾ
ಬ್ಯಾನರ್ಜಿಯವರಂತೂ, ಅಲ್ಪಸಂಖ್ಯಾತರೆಲ್ಲರೂ ಮತ ಒಡೆಯದಂತೆ ನೋಡಿಕೊಂಡು ತಮ್ಮ ಪಕ್ಷಕ್ಕೇ ಮತ ಹಾಕಬೇಕು ಎಂಬ ವಿಪರೀತ ಎನಿಸುವ ಮನವಿ ಮಾಡಿದ್ದಾರೆ. ಈ ನಡುವೆ ಅಬ್ಬಾಸ್ ಸಿದ್ದಿಕಿ ಮತ್ತು ಅಸಾದುದ್ದೀನ್ ಓವೈಸಿಯವರು, ಅಲ್ಪಸಂಖ್ಯಾ ತರ ಮತಗಳ ಬೆಂಬಲದಿಂದ ತಮ್ಮದೇ ಅಭ್ಯರ್ಥಿಗಳು ಗೆಲ್ಲಬೇಕೆಂದು ತುರುಸಿನಿಂದ ಓಡಾಡುತ್ತಿದ್ದಾರೆ. ಟಿಎಂಸಿಯ ಹತ್ತು ವರ್ಷಗಳ ಭದ್ರಕೋಟೆ ಅಲುಗಾಡುತ್ತಿದೆ.
ಇನ್ನೂ ಎರಡು ಹಂತಗಳ ಚುನಾವಣೆ ನಡೆದು, ಮೇ 2 ರಂದು ಹೊರಬೀಳಲಿರುವ ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶಗಳು ಬಹಳ ಕುತೂಹಲ ಹುಟ್ಟಿಸಿವೆ. ಸಿಪಿಐ(ಎಂ) ಮತ್ತು ಟಿಎಂಸಿಯ 44 ವರ್ಷಗಳ ಆಡಳಿತ ಕೊನೆಗೊಳ್ಳುತ್ತದೋ ಅಥವಾ ಟಿಎಂಸಿಯು ಮೂರನೆಯ ಬಾರಿ ಗೆಲ್ಲುತ್ತದೋ ಎಂಬುದೇ ಆ ಬಹು ಕುತೂಹಲದ ವಿಚಾರ.