ಅವಲೋಕನ
ಗಣೇಶ್ ಭಟ್, ವಾರಣಾಸಿ
ದಶಕದ ಹಿಂದೆ ವಿವಿಧ ಸಾಮಾಜಿಕ ಮಾಧ್ಯಮಗಳು ಚಾಲ್ತಿಗೆ ಬಂದಾಗ ಸಾಮಾನ್ಯ ಜನರ ದನಿಗೊಂದು ಬಲ ಬಂತೆಂದು ಸಂಭ್ರಮಿಸಲಾಗಿತ್ತು. ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಪೂರ್ವಾಗ್ರಹಪೂರಿತ ಹಾಗೂ ಪಕ್ಷಪಾತಿ ವರದಿಗಳು ಪ್ರಕಟ ವಾಗುತ್ತಿದ್ದಾಗ ಇವುಗಳಿಗೆ ಸೆಡ್ಡುಹೊಡೆದಂತೆ ಸಾಮಾಜಿಕ ಮಾಧ್ಯಮಗಳು ಬೆಳೆದವು.
ಪತ್ರಿಕೆ ಹಾಗೂ ಟೀವಿಗಳಲ್ಲಿ ಆಯ್ದ ಹಾಗೂ ಕೆಲವೇ ಕೆಲವು ವ್ಯಕ್ತಿಗಳ ಅಭಿಪ್ರಾಯಗಳು ಪ್ರಕಟವಾಗುತ್ತಿದ್ದರೆ, ಸಾಮಾಜಿಕ
ಮಾಧ್ಯಮಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅವಕಾಶ ಒದಗಿ ಬಂತು. ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆ ನಿಜದ ಅರ್ಥದಲ್ಲಿ ಸಾಕಾರವಾಗುತ್ತಿದೆ ಎಂದು ಭಾವಿಸಲಾಯಿತು.
ಸಾಮಾನ್ಯ ಪ್ರಜೆಗಳು ತಮ್ಮ ಪ್ರತಿನಿಧಿಯನ್ನು ಸೋಶಿಯಲ್ ಮೀಡಿಯಾದ ಮೂಲಕ ತಲುಪಬಲ್ಲ ವ್ಯವಸ್ಥೆಯನ್ನು ರೂಪು ಗೊಂಡಿತು. ಪ್ರಧಾನಮಂತ್ರಿ, ನಾನಾ ಮಂತ್ರಿಗಳು, ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು, ವಿರೋಧ ಪಕ್ಷದ ನಾಯಕರು ಇವರೆ ಸಾಮಾಜಿಕ ಮಾಧ್ಯಮಗಳಲ್ಲೂ ಸಕ್ರಿಯರಾದರು. ಸಾಮಾಜಿಕ ಮಾಧ್ಯಮಗಳ ಮೂಲಕ ಜನರ ಅಹವಾಲುಗಳನ್ನು ಹಾಗೂ ಸಮಸ್ಯೆಗಳನ್ನು ಅರಿತುಕೊಂಡು ಸ್ಪಂದಿಸಲು ತೊಡಗಿದರು.
ಭಾರತದ ಡಿಜಿಟಲ್ ಇಂಡಿಯಾ ಕ್ರಾಂತಿ ಹಾಗೂ ಅಂತರ್ಜಾಲವು ಅಗ್ಗವಾದ ನಂತರ ಸಾಮಾಜಿಕ ಮಾಧ್ಯಮಗಳು ಇನ್ನಷ್ಟು
ಜನಪ್ರಿಯವಾದವು. ಇಲ್ಲಿ 53 ಕೋಟಿ ಜನರು ವಾಟ್ಸಾಪ್, 48.8 ಕೋಟಿ ಮಂದಿ ಯೂಟ್ಯೂಬ್, 41 ಕೋಟಿ ಮಂದಿ ಫೇಸ್ ಬುಕ್, 21 ಕೋಟಿ ಜನರು ಇನ್ಸ್ಟಾಗ್ರಾಂ ಹಾಗೂ 1.75 ಕೋಟಿ ಜನರು ಟ್ವೀಟರ್‌ಗಳನ್ನು ಬಳಸುತ್ತಿದ್ದಾರೆ.
50 ಕೋಟಿ ಭಾರತೀಯರು ಗೂಗಲ್‌ಅನ್ನು ಸಕ್ರಿಯವಾಗಿ ಬಳಸುತ್ತಿದ್ದಾರೆ. ಈ ಅಂಕಿ ಅಂಶಗಳು ದೇಶದಲ್ಲಿ ಸಾಮಾಜಿಕ
ಮಾಧ್ಯಮಗಳು ಗಳಿಸಿಕೊಂಡ ಜನಪ್ರಿಯತೆಗೆ ಸಾಕ್ಷಿ. ದೇಶದಲ್ಲಿ ವಿವಿಧ ರೀತಿಯ ಮಾಧ್ಯಮಗಳು ಇವೆ. ಸಂವಿಧಾನದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಲೇಖನಗಳು, ವರದಿಗಳು, ಸಂದರ್ಶನ, ಲೈವ್ ಶೋ ಗಳನ್ನು ನಡೆಸಲು ಅಥವಾ ಪ್ರಸಾರ ಮಾಡಲು ಮುಖ್ಯವಾಹಿನಿ ಮಾಧ್ಯಮಗಳಿಗೆ ಸ್ವಾತಂತ್ರ್ಯವಿದೆ. ಆದರೆ ಈ ಸ್ವಾತಂತ್ರ್ಯದ ದುರ್ಬಳಕೆ ಆಗದಂತೆ ತಡೆಯಲು ಅಥವಾ ಇತರರ ಭಾವನೆಗಳಿಗೆ ಘಾಸಿ ಮಾಡುವ, ಮಾನಹಾನಿ ಮಾಡುವ ವಿಷಯಗಳ ಪ್ರಕಟಣೆ ಮತ್ತು ಪ್ರಸಾರವು ನಡೆಯದಂತೆ
ನಿಯಂತ್ರಿಸಲು ನಮ್ಮ ದೇಶದಲ್ಲಿ ಉಸ್ತುವಾರಿ ವ್ಯವಸ್ಥೆ ಇದೆ.
1978ರಲ್ಲಿ ಜಾರಿಗೆ ಬಂದ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವು (ಪಿಸಿಐ) ಪತ್ರಿಕೆಗಳು ಹಾಗೂ ಪತ್ರಕರ್ತರು ಪತ್ರಿಕೋದ್ಯಮ ನಡವಳಿಕೆ ನಿಯಮಗಳನ್ನು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಗಮನಿಸುತ್ತದೆ. ಸುದ್ದಿ ಟಿವಿಗಳ ಮೇಲೆ ದ ನ್ಯೂಸ್ ಬ್ರಾಡ್ ಕಾಸ್ಟಿಂಗ್ ಸ್ಟ್ಯಾಂಡರ್ಸ್ ಅಥಾರಿಟಿ(ಎನ್ ಬಿಸಿಎಸ್‌ಎ) ಎನ್ನುವ ಸಾಂವಿಧಾನಿಕ ಸಂಸ್ಥೆಯು ಕಣ್ಗಾವಲಿಡುತ್ತದೆ. 1995ರಲ್ಲಿ ಜಾರಿಗೆ ಬಂದ ಕೇಬಲ್ ಟೆಲಿವಿಶನ್ ನೆಟ್‌ವರ್ಕ್ಸ್ ರೆಗ್ಯುಲೇಶನ್ ಕಾಯಿದೆಯ ಅಡಿಯಲ್ಲಿ ಟಿವಿ ಕಾರ್ಯಕ್ರಮಗಳ ಹಾಗೂ
ಜಾಹೀರಾತುಗಳ ನಿಯಂತ್ರಣ ಕಾನೂನುಗಳನ್ನು ರೂಪಿಸಲಾಗಿದೆ. ಸಿನೆಮಾಗಳ ನೈತಿಕ ಗುಣಮಟ್ಟವನ್ನು ಕಾಯಲು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್ಸಿ) ಇದೆ.
ಇವುಗಳಾವುವೂ ಹೊಸತಾಗಿ ರೂಪಿಸಲ್ಪಟ್ಟ ವ್ಯವಸ್ಥೆಗಳಲ್ಲ. ಈ ಎಲ್ಲ ನಿಯಂತ್ರಣ ಸಂಸ್ಥೆಗಳು ಹಾಗೂ ಕಾಯಿದೆಗಳು ಜಾರಿಗೆ ಬಂದು ಕೆಲವು ದಶಕಗಳೇ ಕಳೆದವು. ಭಾರತದಲ್ಲಿ ಜನಪ್ರಿಯವಾಗಿರುವ ಬಹುತೇಕ ಸಾಮಾಜಿಕ ಮಾಧ್ಯಮಗಳು ವಿದೇಶಿ ಮೂಲದವುಗಳು ಹಾಗೂ ತೀರಾ ಇತ್ತೀಚೆಗೆ ಬಂದವುಗಳು. ಸಾಮಾಜಿಕ ಮಾಧ್ಯಮಗಳಿಂದಾಗಿ ಎಷ್ಟು ಒಳಿತು ಇದೆಯೋ ಅಷ್ಟೇ
ಕೆಡುಕೂ ಇದೆ. ಇವುಗಳನ್ನು ನಿಯಂತ್ರಿಸಲು ಯಾವುದೇ ರೀತಿಯ ಕಾಯಿದೆಗಳು ಭಾರತದಲ್ಲಿರಲಿಲ್ಲ. ಇದರ ಪರಿಣಾಮವಾಗಿ ಸಾಮಾಜಿಕ ಮಾಧ್ಯಮಗಳ ದುರುಪಯೋಗವು ಕೂಡಾ ನಡೆಯುತ್ತಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹಾಗೂ ತಪ್ಪು ಸಂದೇಶಗಳನ್ನು ಹರಡಲಾಗುತ್ತಿದೆ. ಆದರೆ ಈ ಮಾಧ್ಯಮ ಗಳಲ್ಲಿ ಪ್ರಕಟವಾಗುವ ವಸ್ತುಗಳು ಸತ್ಯವೇ ಅಥವಾ ಸುಳ್ಳೇ ಅನ್ನುವ ಸಂಗತಿಗಳನ್ನು ಪರಾಮರ್ಶಿಸುವ ಹಾಗೂ ನಿಯಂತ್ರಿಸುವ ವ್ಯವಸ್ಥೆ ಇಲ್ಲ. ಹೀಗಾಗಿ ಗಲಭೆ ಹಾಗೂ ಕೋಮು ಗಲಭೆ ನಡೆಯುವ ಸೂಕ್ಷ್ಮ ಪ್ರದೇಶಗಳಲ್ಲಿ ಕೆಲವು ವಿಚ್ಛಿದ್ರಕಾರಿ ಶಕ್ತಿಗಳು ಸಾಮಾಜಿಕ ಮಾಧ್ಯಮ ಗಳ ಮೂಲಕ ಸುದ್ದಿಗಳನ್ನು ಹಬ್ಬಿಸಿ ಗಲಭೆಗಳು ಉದ್ವಿಗ್ನವಾಗುವಂತೆ ಮಾಡುತ್ತಿವೆ.
ಗಲಭೆಗಳನ್ನು ನಿಯಂತ್ರಿಸಲು ಬೇರೆ ದಾರಿ ಇಲ್ಲದೆ ಸರಕಾರಗಳು ನಿರ್ದಿಷ್ಟ ಅವಽಯ ಕಾಲ ಅಂತರ್ಜಾಲ ಸಂಪರ್ಕ ವ್ಯವಸ್ಥೆ ಯನ್ನೇ ಕಡಿದುಹಾಕಬೇಕಾಗುತ್ತದೆ. ಇದರಿಂದಾಗಿ ಆ ಪ್ರದೇಶದಲ್ಲಿನ ಇಂಟರ್ನೆಟ್ ಆಧಾರಿತ ಹಣಕಾಸು, ಬ್ಯಾಂಕಿಂಗ್, ವ್ಯಾಪಾರ, ವಹಿವಾಟುಗಳೂ ನಿಂತು ಹೋಗುತ್ತವೆ. ಒಂದು ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಗಳಿಗೆ ಕಡಿವಾಣ ಹಾಕುವ ವ್ಯವಸ್ಥೆ ಇದ್ದಲ್ಲಿ ಇಂಥ ಸಮಸ್ಯೆಗಳು ಉದ್ಭವಿಸುವುದಿಲ್ಲ.
ಆದರೆ ತಾವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬದ್ಧರಾಗಿದ್ದೇವೆ ಎಂದು ಹೇಳುವ ಈ ಸೋಶಿಯಲ್ ಮೀಡಿಯಾಗಳು ತಮ್ಮ ವೇದಿಕೆಯ ಮುಖಾಂತರ ಆದ ಅವಾಂತರಗಳಿಗೆ ಮಾತ್ರ ತಾವು ಯಾವುದೇ ರೀತಿಯಲ್ಲಿ ಜವಾಬ್ದಾರರಲ್ಲ ಎಂಬಂತೆ ವರ್ತಿಸುತ್ತಿವೆ. ಹೀಗಾಗಿ ದಾರಿ ತಪ್ಪುತ್ತಿರುವ ಸಾಮಾಜಿಕ ಮಾಧ್ಯಮಗಳನ್ನು ಹಾಗೂ ಡಿಜಿಟಲ್ ವೇದಿಕೆಗಳನ್ನು ನಿಯಂತ್ರಿಸಲು ಕೇಂದ್ರ ಸರಕಾರವು ಹೊಸ ಮಾಹಿತಿ ತಂತ್ರಜ್ಞಾನ ಕಾಯಿದೆ (ಇಂಟರ್ಮೀಡಿಯರಿ ಗೈಡ್ಲೈನ್ಸ್ ಆಂಡ್ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) 2021ನ್ನು ಜಾರಿಗೆ ತಂದಿದೆ.
ಕೇಂದ್ರ ಸರಕಾರವು ಹೊಸ ಮಾಹಿತಿ ತಂತ್ರಜ್ಞಾನ ಕಾಯಿದೆಯ ಮಾರ್ಗ ಸೂಚಿಗಳನ್ನು ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಗೊಳಿಸಿದ್ದು, ಫೇಸ್ ಬುಕ್, ಟ್ವಿಟರ್, ವಾಟ್ಸಾಪ್, ಕೂ, ಇನ್ಸ್ಟಾಗ್ರಾಂ, ಯೂಟ್ಯೂಬ್ ಮೊದಲಾದ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ 3 ತಿಂಗಳುಗಳ ಒಳಗಾಗಿ ಈ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿತ್ತು. ಹೊಸ ಐಟಿ ಆಕ್ಟ್ ಪ್ರಕಾರ ಪ್ರತಿ ಸೋಶಿಯಲ್ ಮೀಡಿಯಾ ಸಂಸ್ಥೆಯೂ ಒಬ್ಬ ಮುಖ್ಯ ಬಾಧ್ಯಸ್ಥ ಅಧಿಕಾರಿ (ಭಾರತದಲ್ಲಿ ವಾಸಿಸುತ್ತಿರುವ ವ್ಯಕ್ತಿಯೇ ಆಗಬೇಕು), ನೋಡಲ್ ಸಂಪರ್ಕಾಧಿಕಾರಿ ಹಾಗೂ ಸ್ಥಳೀಯ ಕುಂದುಕೊರತೆ ನಿವಾರಣಾ ಅಧಿಕಾರಿಯನ್ನು ನೇಮಕಾತಿ ಮಾಡಿಕೊಳ್ಳಬೇಕು.
ವೇದಿಕೆಯಲ್ಲಿ ಪ್ರಕಟವಾಗುವ ವಿಷಯಗಳ ಸತ್ಯಾಸತ್ಯತೆಯ ಬಗ್ಗೆ ಮೇಲುಸ್ತುವಾರಿಯನ್ನು ಮಾಡುವುದು ಈ ಅಧಿಕಾರಿಗಳ
ಜವಾಬ್ದಾರಿಯಾಗಿರುತ್ತದೆ. ಅಧಿಕಾರಿಗಳು ವೇದಿಕೆಯ ಬಳಕೆದಾರರಿಂದ ಬರುವ ದೂರು ದುಮ್ಮಾನಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕಾಗಿರುವುದಲ್ಲದೆ, ಪ್ರತೀ ತಿಂಗಳು ಬಂದ ದೂರುಗಳು ಹಾಗೂ ದೂರು ಪರಿಹಾರಕ್ಕೆ ತೆಗೆದುಕೊಂಡ ಕ್ರಮಗಳ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಬೇಕು. ವೇದಿಕೆಯಲ್ಲಿ ಪ್ರಕಟವಾಗುವ ವಿಚಾರಗಳ ಬಗ್ಗೆ ಬಳಕೆದಾರನಿಗೆ ಯಾವುದೇ ರೀತಿಯ ದೂರುಗಳು ಇದ್ದಲ್ಲಿ ಅದನ್ನು ಹೇಗೆ ಸಲ್ಲಿಸುವುದು ಎನ್ನುವ ಬಗ್ಗೆ ಸಾಮಾಜಿಕ ಮಾಧ್ಯಮ ಸಂಸ್ಥೆಯು ತನ್ನ ಆಪ್‌ನಲ್ಲಿ ವಿವರಣೆ
ಕೊಡಬೇಕು.
ದೂರು ಸಲ್ಲಿಕೆಯಾದ 24 ಗಂಟೆಗಳ ಒಳಗಡೆ ದೂರು ಸ್ವೀಕೃತಿಯ ಮಾಹಿತಿಯನ್ನು ಸಂಸ್ಥೆಯು ದೂರುದಾತನಿಗೆ ಕೊಡಬೇಕು ಹಾಗೂ 15 ದಿವಸಗಳ ಒಳಗಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ವೇಳೆ ದೂರುಗಳಿಗೆ ಸಮರ್ಪಕವಾದ ಪರಿಹಾರ ವನ್ನು ದೊರಕಿಸುವಲ್ಲಿ ಸಂಸ್ಥೆಯು ವಿಫಲವಾದಲ್ಲಿ ಹೊಸ ಐಟಿ ನಿಯಮಾವಳಿ ೭೯ರ ೧ನೇ ಉಪವಿಭಾಗದ ಅನುಸಾರ
ಶಿಕ್ಷಾರ್ಹವಾಗುತ್ತದೆ. ಹೊಸ ಐಟಿ ನೀತಿ ನಿಯಮಗಳ ಅನ್ವಯ ಸೋಶಿಯಲ್ ಮೀಡಿಯಾ ವೇದಿಕೆಗಳು ತಮ್ಮ ಜವಾಬ್ದಾರಿ ಯಿಂದ ನುಣುಚಿಕೊಳ್ಳುವಂತೆ ಇಲ್ಲ. ಈ ನಿಯಮಗಳು ಅನ್ವಯವಾಗುವುದು ಸೋಶಿಯಲ್ ಮೀಡಿಯಾ ಸಂಸ್ಥೆಗಳಿಗೆ ಮಾತ್ರ. ಇವುಗಳು ಬಳಕೆದಾರನಿಗೆ ಅನ್ವಯವಾಗುವುದಿಲ್ಲ.
ಹೊಸ ಐಟಿ ನಿಯಮಾವಳಿಗಳು ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಒಂದಿಷ್ಟು ಇರುಸುಮುರುಸಿಗೆ ಕಾರಣವಾಗಿದೆ. ಮೂರು ತಿಂಗಳ ಕಾಲಾವಕಾಶ ಕೊಡಲಾಗಿದ್ದರೂ ಬಹುತೇಕ ಸಾಮಾಜಿಕ ಮಾಧ್ಯಮ ವೇದಿಕೆಗಳು ಹೊಸ ಐಟಿ ನೀತಿಗಳನ್ನು ಅಳವಡಿಸಿ ಕೊಳ್ಳದೇ ಇದ್ದುದು ಈ ಸಂಸ್ಥೆಗಳಿಗೆ ಭಾರತೀಯ ಕಾನೂನು ಸುವ್ಯವಸ್ಥೆಯ ಬಗೆಗೆ ಇರುವ ಉಡಾಫೆಯ ಮನೋಭಾವವನ್ನು ತೋರಿಸುತ್ತದೆ. ಭಾರತೀಯರಿಂದಲೇ ನಿರ್ಮಿತವಾದ ಮೈಕ್ರೋ ಬ್ಲಾಗಿಂಗ್ ಸಂಸ್ಥೆಯಾದ ಕೂ ಆಪ್ ಮಾತ್ರ ಹೊಸ ಐಟಿ ಕಾನೂನನ್ನು ಸಂಪೂರ್ಣವಾಗಿ ಜಾರಿಗೆ ತಂದ ಮೊದಲ ಸಾಮಾಜಿಕ ಮಾಧ್ಯಮ ಸಂಸ್ಥೆಯಾಗಿ ರೂಪುಗೊಂಡಿದೆ.
ಗೂಗಲ್, ಫೇಸ್ ಬುಕ್, ಇನ್ಸ್ಟಾಗ್ರಾಂ ಸಂಸ್ಥೆಗಳು ಹೊಸ ನೀತಿಯನ್ನು ತಮ್ಮಲ್ಲಿ ಜಾರಿಗೊಳಿಸಲಿದ್ದೇವೆ ಎಂದು ಹೇಳಿವೆ. ವಾಟ್ಸಾಪ್ ಸಂಸ್ಥೆಯು ಹೊಸ ಐಟಿ ಕಾಯಿದೆಯ ವಿರುದ್ಧವಾಗಿ ದೆಹಲಿ ಹೈಕೋರ್ಟ್‌ಗೆ ದೂರು ಕೊಂಡು ಹೋಗಿದ್ದು, ಹೊಸ ಕಾಯಿದೆಯು ಬಳಕೆದಾರರ ಖಾಸಗೀತನ ಹಾಗೂ ಗೌಪ್ಯತೆಗೆ ಭಂಗವನ್ನು ತರಲಿದೆ ಎನ್ನುವ ಆಕ್ಷೇಪವನ್ನು ಸಲ್ಲಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಭಾರತದ ಸರಕಾರವು ವಾಟ್ಸಾಪ್‌ನ ಬಳಕೆದಾರರು ಈ ಕಾಯಿದೆಯ ವಿಚಾರವಾಗಿ ಗೌಪ್ಯತೆಯ ಬಗ್ಗೆ ಭಯಪಡುವ ಅವಶ್ಯಕತೆಯಿಲ್ಲ, ಆಕ್ಷೇಪಣೀಯ ಪೋಸ್ಟ್‌ಗಳು ಯಾವ ಮೂಲದಿಂದ ಬಂತು ಎಂಬುದನ್ನು ಪತ್ತೆಹಚ್ಚಿ ಅಪರಾಧವನ್ನು ತಡೆಗಟ್ಟುವುದು ಈ ಕಾಯಿದೆಯ ಉದ್ದೇಶವಾಗಿದೆ ಎಂದು ಸ್ಪಷ್ಟೀಕರಣ ನೀಡಿದೆ.
ಫೇಸುಕ್, ವಾಟ್ಸಾಪ್, ಕೂ ಆಪ್, ಇನ್ಸ್ಟಾಗ್ರಾಂ, ಗೂಗಲ್, ಯೂಟ್ಯೂಬ್‌ಗಳು ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಲಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಟ್ವಿಟರ್ ಮಾತ್ರ ತನ್ನ ತಕರಾರನ್ನು ಮುಂದುವರಿಸಿದೆ. ಇತ್ತೀಚೆಗೆ ಕಾಂಗ್ರೆಸ್ ಪಕ್ಷವು ಸರಕಾರ ವನ್ನು ಹಾಗೂ ಆಡಳಿತ ಪಕ್ಷವನ್ನು ಮುಜುಗರಗೊಳಿಸುವ ಉದ್ದೇಶದೊಂದಿಗೆ ಟೂಲ್ ಕಿಟ್ ಅನ್ನು ರೂಪಿಸಿ ಹಂಚಿತ್ತು ಎಂದು ಭಾರತೀಯ ಜನತಾ ಪಕ್ಷವು ಆರೋಪಿಸಿತ್ತು. ಈ ಕುರಿತಾಗಿ ಭಾಜಪಾ ಮಾಧ್ಯಮ ವಕ್ತಾರರಾದ ಸಂಬೀತ್ ಪಾತ್ರಾ ಅವರು
ಮಾಧ್ಯಮಗಳಿಗೆ ದಾಖಲೆಯನ್ನು ಬಿಡುಗಡೆಗೊಳಿಸಿದ್ದರು ಹಾಗೂ ಈ ಮಾಹಿತಿಗಳನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದರು.
ಇದನ್ನು ಕೆಲವು ಭಾಜಪಾ ನಾಯಕರೂ ಹಂಚಿಕೊಂಡಿದ್ದರು. ಆದರೆ ಟ್ವಿಟರ್ ಸಂಸ್ಥೆಯು ಸಂಬಿತ್ ಪಾತ್ರಾ ಅವರ ಟ್ವೀಟ್‌ಗೆ ಮ್ಯಾನಿಪ್ಯುಲೇಟೆಡ್ ಮೀಡಿಯಾ (ಹಸ್ತಕ್ಷೇಪಿತ) ಅನ್ನುವ ಟ್ಯಾಗ್ ಅನ್ನು ಟ್ವಿಟರ್ ಸೇರಿಸಿತ್ತು. ಇದು ಬಿಜೆಪಿಯು ಉಂಟು ಮಾಡಿ ರುವ ಕಪೋಲಕಲ್ಪಿತ ಸುದ್ದಿ ಎನ್ನುವ ಅರ್ಥವನ್ನು ಕೊಡುತ್ತದೆ. ಟ್ವಿಟರ್‌ನ ಈ ನಡೆಗೆ ಕೇಂದ್ರ ಸರಕಾರವು ಆಕ್ಷೇಪ ಸಲ್ಲಿಸಿ ಮ್ಯಾನಿಪ್ಯುಲೇಟೆಡ್ ಮೀಡಿಯಾ ಟ್ಯಾಗ್ ಅನ್ನು ತೆಗೆಯಲು ಸೂಚಿಸಿತ್ತು. ಆದರೆ ಕೇಂದ್ರದ ಸೂಚನೆಯನ್ನು ಪರಿಗಣಿಸದ ಟ್ವಿಟರ್ ಟೂಲ್ ಕಿಟ್ ಸುದ್ದಿಯನ್ನು ಹಂಚಿಕೊಂಡ ಭಾಜಪಾದ ಇನ್ನೂ ಹಲವು ನಾಯಕರ ಟ್ವಿಟರ್ ಪೋಸ್ಟ್‌ಗಳಿಗೆ ಮ್ಯಾನಿಪ್ಯುಲೇಟೆಡ್
ಮೀಡಿಯಾ ಟ್ಯಾಗ್ ಅನ್ನು ಹಚ್ಚಿದೆ.
ಈ ನಿಟ್ಟಿನಲ್ಲಿ ದೆಹಲಿ ಪೊಲೀಸರು ಟ್ವಿಟರ್‌ನ ಕಚೇರಿಗೆ ತೆರಳಿ ನೋಟೀಸು ಕೊಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಟ್ವಿಟರ್ ಭಾರತ ಸರಕಾರವು ಪೊಲೀಸ್ ಬಲ ಪ್ರಯೋಗದೊಂದಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿತು. ಹೊಸ
ಐಟಿ ಕಾಯಿದೆಯೂ ಬೆದರಿಕೆ ತಂತ್ರದ ಒಂದು ಭಾಗವೇ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿದೆ ಟ್ವಿಟರ್. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಭಾರತ ಸರಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಟ್ವಿಟರ್ ಈ ಹಿಂದೆ ನಕಾಶೆಯಲ್ಲಿ ಲಡಾಕ್ ಅನ್ನು ಚೀನಾದ ಭಾಗವಾಗಿ ತೋರಿಸಿದುದನ್ನು ಹಾಗೂ ಸರಕಾರದ ಸೂಚನೆಯ ನಂತರವೂ ಆ ಪ್ರಮಾದವನ್ನು ಸರಿಪಡಿಸಲು ಹಲವು
ದಿವಸಗಳನ್ನು ತೆಗೆದುಕೊಂಡಿರುವ ಅದರ ನಿರ್ಲಕ್ಷ್ಯದ ನಡೆ, ಅಮೆರಿಕಾದ ಕ್ಯಾಪಿಟೊಲ್ ಹಿಲ್ ನದ ಹಿಂಸಾಚಾರದಿಂದ
ಸ್ವಯಂ ಪ್ರೇರಿತವಾಗಿ ಡೊನಾಲ್ಡ್ ಟ್ರಂಪ್‌ರ ಟ್ವಿಟರ್ ಅಕೌಂಟ್‌ಅನ್ನು ಶಾಶ್ವತವಾಗಿ ನಿಷೇಧಿಸಿದ್ದ ಟ್ವಿಟರ್, ಜನವರಿ 26ರಂದು ರೈತರ ಹೋರಾಟದ ಹೆಸರಿನಲ್ಲಿ ಭಾರತದ ಐತಿಹಾಸಿಕ ಕೆಂಪುಕೋಟೆಗೆ ನುಗ್ಗಿ ದಾಂಧಲೆ ಮಾಡಿದವರಿಗೆ ಪ್ರೇರೇಪಿಸಿದ ವ್ಯಕ್ತಿಗಳ ಟ್ವಿಟರ್ ಅಕೌಂಟ್ ಅನ್ನು ನಿಷೇಧಿಸಲು ಮೀನಾಮೇಷ ಎಣಿಸದಿರುವುದು ಭಾರತೀಯ ಕಾನೂನು ವ್ಯವಸ್ಥೆಯ ಬಗೆಗಿನ ಅಗೌರವದ ನಡೆಗಳನ್ನು ಎತ್ತಿ ತೋರಿಸಿದೆ.
ಭಾರತಕ್ಕೆ ಹಣ ಮಾಡುವ ಉದ್ಯಮವಾಗಿ ಬಂದಿರುವ ಟ್ವಿಟರ್ ಇಲ್ಲಿ ಕಾರ್ಯಾಚರಿಸಬೇಕಿದ್ದರೆ ಭಾರತದ ಕಾನೂನುಗಳನ್ನು ಜಾರಿಗೊಳಿಸಲೇಬೇಕೆಂದು ಉತ್ತರಿಸಿದೆ ಭಾರತ ಸರಕಾರ. ಟ್ವಿಟರ್ ಮೊದಲಿನಿಂದಲೂ ನಿರ್ದಿಷ್ಟ ಕಾರ್ಯಸೂಚಿಯೊಂದಿಗೇ ಕೆಲಸ ಮಾಡುತ್ತಿದೆ. ಈ ಹಿಂದೆ ಟ್ವಿಟರ್ ಸಿಇಒ ಜ್ಯಾಕ್ ಡೋರ್ಸೆ ಮಾತನಾಡುತ್ತಾ ಟ್ವಿಟರ್‌ನಲ್ಲಿ ಎಡ ಚಿಂತನೆಗಳ ಬಗ್ಗೆ ಮೃದು ಧೋರಣೆಯಿರುವ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಒಪ್ಪಿಕೊಂಡಿದ್ದರು.
ಭಾರತದ ರಾಷ್ಟ್ರೀಯವಾದಿಗಳ ಅಕೌಂಟ್ ಗಳ ವಿಷಯವಾಗಿ ಟ್ವಿಟರ್ ಬಹಳ ಕಠಿಣವಾಗಿ ನಡೆದುಕೊಳ್ಳುತ್ತಿದೆ. ಇತ್ತೀಚೆಗೆ ಬಂಗಾಲದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರಗಳ ಬಗ್ಗೆ ಮಾತನಾಡಿದ್ದ ಬಾಲಿವುಡ್ ನಟಿ ಕಂಗನಾರ ಟ್ವಿಟರ್ ಅಕೌಂಟ್ ಅನ್ನು ಟ್ವಿಟರ್ ಶಾಶ್ವತವಾಗಿ ನಿಷೇಧಿಸಿದೆ. 2018ರಲ್ಲಿ ಶಬರಿಮಲೆ ದೇವಸ್ಥಾನದ ಮಹಿಳಾ ಪ್ರವೇಶದ ವಿಷಯದಲ್ಲಿ ಭಾರತದ ಪತ್ರಕರ್ತೆಯೊಬ್ಬಳು ಉಡುಗೊರೆಯಾಗಿ ಕೊಟ್ಟ, ಸ್ಮ್ಯಾಶ್ ಬ್ರಾಹ್ಮಿನಿಕಲ್ ಪಾಟ್ರಿಯಾರ್ಕಿ (ಬ್ರಾಹ್ಮಣ ಪುರುಷ ಪ್ರಧಾನ ವ್ಯವಸ್ಥೆ ಯನ್ನು ಪುಡಿಗಟ್ಟಿ) ಅನ್ನುವ ಪೋಸ್ಟರ್ ಅನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಟ್ವಿಟ್ಟರ್ ಸಿಇಒ ಜ್ಯಾಕ್‌ನ ನಿರ್ದಿಷ್ಟ ಜನಾಂಗೀಯ ದ್ವೇಷದ ನಡೆ ಬಹಳ ಟೀಕೆಗೆ ಒಳಗಾಗಿತ್ತು.
ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಚೌಕೀದಾರ್ ಚೋರ್ ಹೆ ಎನ್ನುವ ಟ್ವೀಟ್ ಮಾಡಿದ್ದಾಗ ಅಥವಾ ಕರೋನಾದ ಬಗ್ಗೆ ಭಯ ಹುಟ್ಟಿಸುವ ಸುಳ್ಳೇಸುಳ್ಳು ಪೋಸ್ಟ್‌ಗಳನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದಾಗ ಯಾವುದೇ ಕ್ರಮ ಕೈಗೊಳ್ಳದಿದ್ದ ಟ್ವಿಟರ್‌ನ ಪಕ್ಷಪಾತ ಪೂರ್ವಕವಾದ ನಡೆ ಸಂಶಯ ಹುಟ್ಟಿಸಿರುವುದಂತೂ ಸತ್ಯ. ಟ್ವಿಟರ್ ಒಂದು ಖಾಸಗಿ ಸಂಸ್ಥೆ. ಲಾಭ ಮಾಡಿಕೊಳ್ಳಲು ಭಾರತಕ್ಕೆ ಬಂದ ಒಂದು ಸಂಸ್ಥೆ. ಜಗತ್ತಿನ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅಥವಾ ಪ್ರಜಾ ಪ್ರಭುತ್ವ ರೀತಿಯ ಅಧಿಕಾರಕ್ಕೆ ಬಂದ ಸರಕಾರಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪಾಠ ಹೇಳುವ ಯೋಗ್ಯತೆ ಟ್ವಿಟರ್ ಅಥವಾ ಯಾವುದೇ ಇತರ ವಿದೇಶಿ ಮೂಲದ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಇಲ್ಲ.
ಇಲ್ಲಿ ಉಳಿದುಕೊಳ್ಳಬೇಕಾದರೆ ಟ್ವಿಟರ್ ಇಲ್ಲಿನ ಕಾನೂನನ್ನು ಪಾಲಿಸಬೇಕಾಗುತ್ತದೆ. ಇಲ್ಲವಾದರೆ ಭಾರತದಿಂದ ಗಂಟುಮೂಟೆ ಕಟ್ಟಿಕೊಂಡು ಹೊರ ನಡೆಯಬೇಕಾಗುತ್ತದೆ.