Thursday, 12th December 2024

ಷಡ್ಯಂತ್ರದ ವಿರುದ್ಧ ಒಂದಾಗಬೇಕಿದೆ

– ಮೋಹನ್ ಗೌಡ
ಇತ್ತೀಚೆಗೆ ತಮಿಳುನಾಡಿನಲ್ಲಿ, ಸನಾತನ ಧರ್ಮವನ್ನು ನಾಶಮಾಡುವ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿಯವರ ಮಗ ಉದಯನಿಧಿ ಸ್ಟಾಲಿನ್ ಎಂಬ ಕ್ರೈಸ್ತ ಶಾಸಕ, ‘ಸನಾತನ ಧರ್ಮವು ಮಲೇರಿಯಾ, ಡೆಂಘೀ ವೈರಸ್ ಇದ್ದಂತೆ. ಇದನ್ನು ಕೇವಲ ವಿರೋಧಿಸಿದರೆ ಸಾಲದು, ಸಂಪೂರ್ಣ ನಿರ್ಮೂಲನೆ ಮಾಡಬೇಕು’ ಎಂದಿದ್ದರ ವಿರುದ್ಧ ದೇಶದಾದ್ಯಂತ ಆಕ್ರೋಶವು ಭುಗಿಲೆದ್ದಿದೆ. ಈ ಹೇಳಿಕೆ ನೀಡುವಾಗ
ತಮಿಳುನಾಡಿನ ೪೦,೦೦೦ ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಳ ಉಸ್ತುವಾರಿಯನ್ನು ನೋಡುವ ಇಲಾಖೆಯ ಸಚಿವರಾದ ಶೇಖರ್‌ಬಾಬು ಸಹ ವೇದಿಕೆಯಲ್ಲಿದ್ದು, ಏನೂ ವಿರೋಧಿಸದೆ ಮೂಕಸಮ್ಮತಿ ವ್ಯಕ್ತಮಾಡಿರುವುದು ಅತ್ಯಂತ ಖೇದನೀಯ ವಿಷಯ. ದೇಶದ ಸಂವಿಧಾನಬದ್ಧವಾದ ಹುದ್ದೆಯಲ್ಲಿದ್ದು, ೧೨೦ ಕೋಟಿ ಜನಸಂಖ್ಯೆಯನ್ನು ಪ್ರತಿನಿಧಿಸುವ ಸನಾತನ ಧರ್ಮವನ್ನು ನಾಶಮಾಡುವ ಹೇಳಿಕೆ ಅತ್ಯಂತ
ದ್ವೇಷಪೂರ್ಣವಾಗಿದೆ. ಸನಾತನ ಧರ್ಮವನ್ನು ನಾಶಮಾಡುವುದು ಎಂದರೆ ೧೨೦ ಕೋಟಿ ಸನಾತನ ಧರ್ಮೀಯರ ಹತ್ಯೆ ಮಾಡಬೇಕು ಎಂಬ ಅರ್ಥವನ್ನು ನೀಡುತ್ತದೆ. ಅನ್ಯರಾಜ್ಯಗಳ ತುಲನೆಯಲ್ಲಿ ತಮಿಳುನಾಡಿನಲ್ಲಿ ಅತಿಹೆಚ್ಚು ದೇವಸ್ಥಾನಗಳಿವೆ (ಸರಿಸುಮಾರು ೭೫ ಸಾವಿರಕ್ಕೂ ಹೆಚ್ಚು). ಸನಾತನ ಧರ್ಮದ ಸರ್ವೋತ್ಕೃಷ್ಠ ಸಂತರಾದ ಪೂಜ್ಯ ರಮಣ ಮಹರ್ಷಿಗಳು ಜನಿಸಿದ, ಜಗದ್ಗುರು ಶಂಕರಚಾರ್ಯರಾದ ಕಾಂಚಿಕಾಮ ಕೋಟಿ ಪೀಠ ಇರುವ, ಸಂತ ಅಪ್ಪಾರ್, ಸುಂದರರ್, ಸಂಬಂದರ್, ನಾಲ್ವರ್‌ರಂಥ ಅನೇಕ ಸಂತರನ್ನು ನೀಡಿದ ನಾಡು ತಮಿಳುನಾಡು. ಇಂದಿಗೂ ಅವರ ಅಚರಣೆಗಳನ್ನು ಶ್ರದ್ಧೆಯಿಂದ ಪಾಲನೆ ಮಾಡುತ್ತಾರೆ.

ಇಂದು ತಮಿಳುನಾಡಿನಲ್ಲಿ ಶೇ.೮೫ರಷ್ಟು ಹಿಂದೂ ಸಮುದಾಯದವರಿದ್ದಾರೆ. ಸನಾತನ ಧರ್ಮವನ್ನು ನಾಶ ಮಾಡಬೇಕೆಂದರೆ ಈ ಎಲ್ಲರನ್ನೂ ನಾಶಮಾಡಬೇಕು ಎಂದರ್ಥ. ಅಂಥ ಹೇಳಿಕೆಯನ್ನು ಉದಯನಿಧಿ ನೀಡಿದ್ದಾರೆ. ದ್ವೇಷಪೂರ್ಣ ಭಾಷಣಗಳ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ಆದೇಶಿಸಿತ್ತು. ಇದರ ಪ್ರಕಾರ ಉದಯನಿಧಿ ನಿದರ್ಶನ ಗಂಭೀರ ಪ್ರಕರಣವಾಗಿದ್ದು, ಮದ್ರಾಸ್ ಉಚ್ಚ ನ್ಯಾಯಾಲಯವು ಕೂಡಲೇ ಸ್ವಯಂಪ್ರೇರಿತ ದೂರು ದಾಖಲಿಸುವುದು ಅಪೇಕ್ಷಣೀಯವಾಗಿತ್ತು. ಮಹಾರಾಷ್ಟ್ರದ ಸಭೆಯೊಂದರಲ್ಲಿ ಭಾಗ್ಯನಗರದ ಶಾಸಕರಾದ ಟಿ.ರಾಜಾ ಸಿಂಗ್ ಮತ್ತು ಸುದರ್ಶನ್ ನ್ಯೂಸ್ ಚಾನೆಲ್ ಸಂಪಾದಕ ಸುರೇಶ ಚೌಹಾಣ್ ಅವರು ನೀಡಿದ ಚಿಕ್ಕ ಹೇಳಿಕೆ ವಿರುದ್ಧ ಮುಂಬಯಿ ಉಚ್ಚ ನ್ಯಾಯಾಲಯವು ಸ್ವಯಂಪ್ರೇರಿತ ದೂರು ದಾಖಲಿಸಿತ್ತು. ಆದರೆ ಉದಯನಿಧಿ ಹೇಳಿಕೆ ಅದಕ್ಕಿಂತ ಗಂಭೀರ ಸ್ವರೂಪದ್ದಾಗಿದ್ದರೂ ನ್ಯಾಯಾಲಯಗಳು ಸಂಪೂರ್ಣ ಮೌನವಾಗಿರುವುದು ಅತ್ಯಂತ ಆಶ್ಚರ್ಯಕರ ವಾಗಿದೆ.

ಬೆಂಬಲಿಸುವ ಸನಾತನ ವಿರೋಧಿಗಳು:
ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ ಕೂಡಲೇ ತಥಾಕಥಿತ ಬಹುಭಾಷಾ ನಟ ಪ್ರಕಾಶರಾಜ್ ಬೆಂಬಲ ವ್ಯಕ್ತಪಡಿಸಿದರು ಮತ್ತು ತಮಿಳುನಾಡು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಕೂಡ ಸ್ಟಾಲಿನ್ ಹೇಳಿಕೆಯನ್ನು ಸಮರ್ಥಿಸಿದರು. ಅದಲ್ಲದೆ ಡಿಎಂಕೆ ಮುಖಂಡರು ಕೂಡ ಇಂಥ ಸಂವಿಧಾನಬಾಹಿರ ಹೇಳಿಕೆಯನ್ನು ಸಮರ್ಥನೆ ಮಾಡಿರುವುದು ಅತ್ಯಂತ ಅಪಾಯಕಾರಿ ನಡೆ. ಈ ಹಿಂದೆ ಡಿಎಂಕೆ ಸಂಸದ ಎ. ರಾಜಾ ಅವರು ಹಿಂದೂ ಎಂದರೆ ವೈಶ್ಯರು ಎಂದು ಹೇಳಿಕೆ ನೀಡಿದ್ದರು. ಡಿಎಂಕೆಯ ಕರುಣಾನಿಧಿಯವರು ರಾಮಸೇತು ಬಗ್ಗೆ ಹೇಳಿಕೆ ನೀಡುವಾಗ ‘ಶ್ರೀರಾಮ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿತಿದ್ದ’ ಎಂದು ಪ್ರಶ್ನಿಸಿದ್ದರು. ಹೀಗೆ ಡಿಎಂಕೆ ಇತಿಹಾಸವೇ ಹಿಂದೂ-ವಿರೋಧಿ ಮಾನಸಿಕತೆಯಿಂದ ಕೂಡಿದೆ.

ಇಂದು ದೇಶದಾದ್ಯಂತ ಈ ರೀತಿ ಯಾದ ಸನಾತನ- ವಿರೋಧಿ ಮಾನಸಿಕತೆ ನಿರ್ಮಾಣವಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ನಾನು ಹಿಂದುತ್ವದ ವಿರೋಧಿ’ ಎಂದು ಹೇಳಿಕೆ ನೀಡಿದ್ದರು. ರಾಹುಲ್ ಗಾಂಧಿಯವರು ಕೂಡ ‘ಹಿಂದುತ್ವವು ಅತ್ಯಂತ ಅಪಾಯಕಾರಿ’ ಎಂದು ಹೇಳಿಕೆ ನೀಡಿದ್ದರು. ಶಾಸಕ ಸತೀಶ್ ಜಾರಕಿಹೊಳಿಯವರು ‘ಹಿಂದೂ ಶಬ್ದವು ಪರ್ಷಿಯನ್ ಮೂಲದಿಂದ ಬಂದಿದ್ದು, ಅದರ ಅರ್ಥ ಕೆಟ್ಟದಿದೆ’ ಎಂದು ಹೇಳಿಕೆ ನೀಡಿದ್ದರು. ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಅವರು ರಾಮಚರಿತ ಮಾನಸ ಗ್ರಂಥದ ಬಗ್ಗೆ ಅತ್ಯಂತ ಕೆಟ್ಟ ಹೇಳಿಕೆ ನೀಡಿದ್ದರು. ಹೀಗೆ ಸನಾತನ ಹಿಂದೂಧರ್ಮದ ವಿರುದ್ಧ ಕಾಂಗ್ರೆಸ್ ನೇತಾರರು ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡಿ, ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿ ಅನ್ಯ ಸಮುದಾಯದವರನ್ನು ಒಲೈಸುವ ರಾಜ ಕಾರಣದಲ್ಲಿ ವ್ಯಸ್ತರಾಗಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಯಾಗಿದೆ. ಇವರಿಗೆ ಅನ್ಯ ಸಮುದಾಯದ ಬಗ್ಗೆ ಮಾತನಾಡುವ ಧಾರ್ಷ್ಟ್ಯ ಇಲ್ಲ. ಹಿಂದೂಗಳ ಸಹಿಷ್ಣುತೆ ಯನ್ನು ಹಿಂದೂ ವಿರೋಧಿಗಳು ದುರುಪಯೋಗಡಿಸಿ ಕೊಳ್ಳುತ್ತಿದ್ದಾರೆ.

ಡಿಎಂಕೆ ಮೇಲೆ ಚರ್ಚ್‌ಗಳ ಪ್ರಭಾವ?:
ಕ್ರೈಸ್ತಮತವು  ತಮಿಳುನಾಡಿನಲ್ಲಿ ಎರಡನೇ ಅತಿದೊಡ್ಡ ಮತವಾಗಿದೆ. ಇಲ್ಲಿ ರೋಮನ್ ಕ್ಯಾಥಲಿಕ್ ಚರ್ಚ್ ಹಾಗೂ ಪ್ರೊಟೆಸ್ಟ್ಂಟ್ ಚರ್ಚ್, ಚರ್ಚಸ್ ಆಫ್ ಸೌತ್ ಇಂಡಿಯಾ ಪ್ರಭಾವ ಅಧಿಕವಾಗಿದೆ. ಚುನಾವಣೆಯ ಸಮಯದಲ್ಲಿ ಅಲ್ಲಿ ಅರ್ಚ್ ಬಿಷಪ್ ಅವರು ಡಿಎಂಕೆ ಪಕ್ಷಕ್ಕೆ ಮತ ನೀಡುವಂತೆ ನೇರವಾಗಿ ಆದೇಶಿಸುತ್ತಾರೆ. ತಮಿಳುನಾಡು ಅತಿಹೆಚ್ಚು ಮತಾಂತರ ನಡೆಯುವ ರಾಜ್ಯವಾಗಿದೆ. ಇಲ್ಲಿ ಚರ್ಚ್‌ಗಳ ಪ್ರಭಾವ ಎಷ್ಟು
ಇದೆಯೆಂದರೆ, ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾಂದರ ಪ್ರತಿಮೆ ಸ್ಥಾಪನೆ ಮಾಡಲು ಸ್ಥಳೀಯ ಕ್ರೈಸ್ತರು ವಿರೋಧ ಮಾಡಿದ್ದರು. ಸ್ವತಃ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ರವರು ‘ಚರ್ಚ್ ಆಫ್ ಸೌತ್ ಇಂಡಿಯಾ’ದ ೭೫ನೇ ವರ್ಷಾ ಚರಣೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಷ್ಟೇ ಅಲ್ಲದೆ, ತಮಿಳುನಾಡಿನಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರುವುದಿಲ್ಲ, ಕ್ರೈಸ್ತರ ಮತಾಂತರ ಪ್ರಕ್ರಿಯೆಯು ಕಾನೂನುಬದ್ಧವಾಗಿದೆ ಎಂದು ಹೇಳಿದ್ದರು. ಮುಖ್ಯಮಂತ್ರಿಯ ಮಗ ಉದಯನಿಧಿ ಸ್ಟಾಲಿನ್, ‘ನಾನು ಹೆಮ್ಮೆಯ ಕ್ರೈಸ್ತ ಮತ್ತು ಕ್ರೈಸ್ತ ಯುವತಿಯನ್ನೇ ಮದುವೆ ಯಾಗಿದ್ದೇನೆ’ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು.


ಈ ಎಲ್ಲ ಘಟನೆಗಳನ್ನು ನೋಡಿದಾಗ, ತಮಿಳುನಾಡಿನ ಡಿಎಂಕೆ ರಾಜಕಾರಣದ ಮೇಲೆ ಕ್ರೈಸ್ತ ಮತದ ಪ್ರಭಾವ ಹೆಚ್ಚಿರುವುದು ತೋರುತ್ತದೆ. ಈ ಸನಾತನ-ವಿರೋಧಿ ಕೃತ್ಯದ ಹಿಂದೆ ಅವರ ಕೈವಾಡವಿರುವ ಸಂಶಯವಿದೆ. ಸನಾತನದ ನಾಶ ಅಸಾಧ್ಯ: ‘ನಿತ್ಯನೂತನ ಇತಿ ಸನಾತನ’, ಅಂದರೆ ಯಾವುದು ಎಂದಿಗೂ ಹಳೆಯದಾಗುವುದಿಲ್ಲವೋ, ನಾಶವಾಗುವುದಿಲ್ಲವೋ ಅದುವೇ ಸನಾತನವಾಗಿದೆ. ಹಾಗಾಗಿ ಸನಾತನ ಧರ್ಮದ ಮೇಲೆ ಅಲೆಕ್ಸಾಂಡರ್‌ನಿಂದ ಹಿಡಿದು ಡಚ್ಚರು, ಫ್ರೆಂಚರು, ಪೋರ್ಚು ಗೀಸರು, ಬ್ರಿಟಿಷರು, ಘಜ್ನಿ, ಘೋರಿ, ಮೊಘಲ್, ಟಿಪ್ಪು ಸುಲ್ತಾನ ಹೀಗೆ ಅನೇಕ ಆಕ್ರಮಣಕಾರರು ದಾಳಿ ಮಾಡಿದರೂ, ಯಾರಿಂದಲೂ ಏನೂ ಮಾಡಲು ಸಾಧ್ಯ ವಾಗಿಲ್ಲ. ಇಂದು ಸನಾತನ ಧರ್ಮವು ಇಡೀ ಪ್ರಪಂಚದಲ್ಲಿ ಪ್ರಜ್ವಲಿಸುತ್ತಿದೆ. ಇಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್. ಮುಂದಿನ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ವಿವೇಕ ರಾಮಸ್ವಾಮಿ ತಮಿಳು ನಾಡಿನ ಸನಾತನಿಯಾಗಿದ್ದಾರೆ. ಬ್ರಿಟನ್ ಮತ್ತು ನೇಪಾಳದ ಪ್ರದಾನಿ, ವಿಶ್ವದ ೨೫ಕ್ಕೂ ಅಽಕ ವಿದೇಶಿ ದೈತ್ಯ ಕಂಪನಿಗಳ ಸಿಎಒಗಳು ಸನಾತನ ಧರ್ಮೀಯರೇ ಆಗಿದ್ದಾರೆ.

ಯುರೋಪ್ ಮತ್ತು ಅಮೆರಿಕದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಸನಾತನ ಧರ್ಮದ ಕಡೆಗೆ ಜನರು ಆಕರ್ಷಿತರಾಗುತ್ತಿದ್ದಾರೆ. ಹಾಗಾಗಿ ಸನಾತನ ಧರ್ಮವು ಮತ್ತೊಮ್ಮೆ ವಿಶ್ವಗುರುವಾಗುವತ್ತ ಮಾರ್ಗಕ್ರಮಣ ಮಾಡು ತ್ತಿದೆ. ‘ಧರ್ಮವನ್ನು ಯಾರು ರಕ್ಷಿಸುತ್ತಾರೋ ಅವರನ್ನು ಧರ್ಮವೇ ರಕ್ಷಣೆ ಮಾಡುತ್ತದೆ ಮತ್ತು ಯಾರು ಧರ್ಮವನ್ನು ನಾಶ ಮಾಡುತ್ತಾರೋ ಅವರನ್ನು ಧರ್ಮವೇ ನಾಶ ಮಾಡುತ್ತದೆ’ ಎಂದಿದ್ದಾರೆ ನಮ್ಮ ಪೂರ್ವಜರು. ಹಾಗಾಗಿ ಸನಾತನ ಧರ್ಮವು ನಿತ್ಯನೂತನವಾಗಿದೆ, ಅದನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ‘ಕೃಣ್ವಂತೋ ವಿಶ್ವಂ ಆರ್ಯಮ್’ ಎಂಬಂತೆ  ಇಡೀ ವಿಶ್ವವು ಸನಾತನ ಧರ್ಮಮಯವಾಗುತ್ತಿದೆ!
(ಲೇಖಕರು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರು)