Sunday, 8th September 2024

ಇದೊಂದು ಹೋರಾಟವನ್ನು ನಾವು ಮರೆಯಬಾರದಿತ್ತು !

ಶಶಾಂಕಣ

shashidhara.halady@gmail.com

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ, ದೇಶಕ್ಕಾಗಿ ಹೋರಾಡಿದವರನ್ನು ನೆನಪಿಸಿಕೊಳ್ಳುವ ಕೆಲಸ ಎಲ್ಲೆಡೆ ನಡೆಯುತ್ತಿದೆ. ಮಹಾತ್ಮಾ ಗಾಂಧೀಜಿಯವರು ಅಸಹಕಾರ, ಅಹಿಂಸೆ ಮತ್ತು
ಸತ್ಯಾಗ್ರಹ ಗಳೆಂಬ ಅಸ್ತ್ರಗಳ ಮೂಲಕ ಬ್ರಿಟಿಷರ ಬಂದೂಕಿನ ತುದಿಯ ಆಡಳಿತವನ್ನು ಎದುರಿಸುವ ತಂತ್ರ ಹೂಡಿದರು.

ಸುಮಾರು 1915ರಿಂದ 1947ರ ತನಕ ಮಹಾತ್ಮಾ ಗಾಂಧೀಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಹೋರಾಟವನ್ನು ಚಾಲ್ತಿಯಲ್ಲಿಟ್ಟಿತ್ತು. ಸುಭಾಷ್ ಚಂದ್ರ ಬೋಸರು 43000ಕ್ಕೂ ಅಧಿಕ ಸೈನಿಕರಿದ್ದ ಸೇನೆಯನ್ನು ಕಟ್ಟಿ, ಜಪಾನ್ ಮತ್ತು ಜರ್ಮನರ ಸಹಕಾರ ಪಡೆದು ಬ್ರಿಟಿಷರ ಮೇಲೆ ಯುದ್ಧ ಹೂಡಿದರು. ಆದರೆ ಸುಭಾಷರ ಕಣ್ಮರೆಯೊಂದಿಗೆ, ಅವರ ಸೇನೆ ಬ್ರಿಟಿಷರಿಗೆ ಶರಣಾಗಬೇಕಾಯಿತು.

ಈ ಸಂಕೀರ್ಣ ಕಾಲಘಟ್ಟದಲ್ಲಿ, ಬ್ರಿಟಿಷರ ವಿರುದ್ಧ ತಿರುಗಿ ಬಿದ್ದ ಸುಮಾರು 20000 ಸೈನಿಕರ ದಿಟ್ಟ ಹೋರಾಟವು, ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು ಮತು ಈ ಒಂದು ಹೋರಾಟವೇ ಬ್ರಿಟಿಷರು ಭಾರತವನ್ನು 1947ರಲ್ಲಿ ಬಿಟ್ಟು ಹೋಗಲು ಪ್ರಮುಖ ಕಾರಣ ಎಂದು ಹಲವು ಈಚೆಗಿನ ಬ್ರಿಟಿಷ್ ಇತಿಹಾಸಕಾರರು ಬರೆದಿದ್ದಾರೆ. ಆ ಹೋರಾಟವೇ ಭಾರತೀಯ ನೌಕಾ ಸೇನೆಯ ಸಶಸ್ತ್ರ ದಂಗೆ.

1946ರ -ಬ್ರವರಿಯಲ್ಲಿ ನಡೆದ ಈ ಹೋರಾಟದ ಪರಿಣಾಮವಾಗಿಯೇ, ಒಂದು ವರ್ಷದ ನಂತರ ಬ್ರಿಟಿಷರು ಭಾರತವನ್ನು
ಬಿಟ್ಟು ಹೊರಡಬೇಕಾಯಿತು ಎಂದು ಖಚಿತವಾಗಿ ವಿಶ್ಲೇಷಿಸುವ ತಜ್ಞರೂ ಇದ್ದಾರೆ. ಆದರೆ, ದೇಶಕ್ಕೆ ಸ್ವಾತಂತ್ರ್ಯ ದೊರಕುವ ಕೇವಲ ಒಂದು ವರ್ಷ ಮುಂಚೆ ನಡೆದ ಈ ಅಭೂತಪೂರ್ವ ಹೋರಾಟದ ವಿವರಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ
ನಮ್ಮವರು ಪೂರ್ಣ ವಿಫಲಗೊಂಡಿದ್ದಾರೆ.

ಜತೆಗೆ, 20000 ನೌಕಾಸೈನಿಕರು ನಡೆಸಿದ ಈ ಹೋರಾಟ ಮತ್ತು ಅದರಲ್ಲಿ ಭಾಗವಹಿಸಿದ ಕೆಲವರ ತ್ಯಾಗದ ವಿವರಗಳನ್ನು ಉದ್ದೇಶಪೂರ್ವಕವಾಗಿ ಹಿನ್ನೆಲೆಗೆ ಸರಿಸಲಾಗಿದೆ ಎಂಬ ವಾದವೂ ಇದೆ. ಈ ಹೋರಾಟದ ವಿವರಗಳನ್ನು ನೋಡಿದಾಗ, ಅದನ್ನು ವಿಫಲಗೊಳಿಸಲು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಾಯಕರು ಮಾಡಿದ ಪ್ರಯತ್ನವನ್ನು ನೋಡಿದಾಗ, ಅಂತಹ ಒಂದು ವಾದದಲ್ಲಿ ಹುರುಳಿದೆ ಎನಿಸುತ್ತದೆ.

ನಮ್ಮ ದೇಶದಲ್ಲಿ ಬ್ರಿಟಿಷರ ವಿರುದ್ಧ ನಡೆದ ಹಲವು ಹೋರಾಟಗಳನ್ನು ಗಮನಿಸಿದಾಗ, 1946ರಲ್ಲಿ ನೌಕಾಪಡೆಯು ನಡೆಸಿದ ಸಶಸ ಹೋರಾಟವು ಕೊನೆಯ ಮತ್ತು ನಿರ್ಣಾಯಕ ಹೋರಾಟದ ಸ್ವರೂಪವನ್ನು ಪಡೆಯುತ್ತದೆ. 1930ರ ದಶಕದ ಉಪ್ಪಿನ
ಸತ್ಯಾಗ್ರಹ, 1942ರ ಕ್ವಿಟ್ ಇಂಡಿಯಾ ಹೋರಾಟದ ನಂತರ, ನಡೆದ ಬಹು ಮುಖ್ಯ ಹೋರಾಟ ಈ ನೌಕಾ ಪಡೆಯ ಹೋರಾಟ.

ಆದರೆ, ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳವಳಿಗೆ ದೊರಕಿದ ಪ್ರಚಾರವು ನೌಕಾ ಪಡೆಯ ಹೋರಾಟಕ್ಕೆ ದೊರಕಲೇ ಇಲ್ಲ ಎಂಬುದು ಕಟು ಸತ್ಯ. ಈ ಹೋರಾಟವನ್ನು ಬಗ್ಗುಬಡಿಯಲು
ಬ್ರಿಟಿಷ್ ಸೈನಿಕರು ಮುನ್ನೂರಕ್ಕು ಹೆಚ್ಚು ಜನರನ್ನು ಗುಂಡಿಟ್ಟು ಸಾಯಿಸಿದರು ಎಂಬ ವಿಚಾರವೇ ಸಾಕು, ಅದರ ಗಂಭೀರತೆ ಯನ್ನು ಗುರುತಿಸಲು.

ಮುಂಬಯಿ, ಕರಾಚಿ, ಕೊಲ್ಕೊತ್ತಾ, ವಿಶಾಖ ಪಟ್ಟಣ, ಕೊಚ್ಚಿ, ಏಡನ್, ಬಹ್ರೈನ್, ಹಾಂಗ್‌ಕಾಂಗ್ ಮೊದಲಾದ ಕಡೆ ಬೀಡುಬಿಟ್ಟಿದ್ದ ಭಾರತೀಯ ನೌಕಾದಳದ ಸೈನಿಕರು 18.2.1946ರಂದು ತಮಗೆ ಚಿತ್ರಹಿಂಸೆ ಕೊಡುತ್ತಿದ್ದ ಬ್ರಿಟಿಷ್ ಸೇನಾಧಿಕಾರಿಗಳ ವಿರುದ್ಧ ಬಂಡಾಯದ ಬಾವುಟ ಹಾರಿಸುವದರೊಂದಿಗೆ ಈ ಸಶಸ್ತ್ರ ಹೋರಾಟ ಆರಂಭವಾಯಿತು. ಗುಣ
ಮಟ್ಟದ ಆಹಾರ ಮತ್ತು ಬ್ರಿಟಿಷ್ ಸೈನಿಕರಿಗೆ ಸಮಾನ ಎನಿಸುವ ಸಂಬಳ ಮತ್ತು ಇತರ ಸೌಲಭ್ಯಗಳು ಬೇಕು ಎಂಬುದು ಆರಂಭಿಕ ಬೇಡಿಕೆಯಾಗಿತ್ತು. ಆದರೆ ಒಂದೇ ದಿನದಲ್ಲಿ, ಇದು ‘ಕ್ವಿಟ್ ಇಂಡಿಯಾ’ ಸ್ವರೂಪವನ್ನು ಪಡೆದು, ಸುಮಾರು 20000 ನೌಕಾ ಸೈನಿಕರು ಬ್ರಿಟಿಷ್ ಅಽಕಾರಿಗಳ ಆಜ್ಞೆಯನ್ನು ತಿರಸ್ಕರಿಸಿದರು.

78 ನೌಕೆ ಮತ್ತು ದಡದಲ್ಲಿದ್ದ ಸೇನಾ ಘಟಕಗಳು ತಮ್ಮನ್ನು ತಾವು ಸ್ವತಂತ್ರ ಎಂದು ಘೋಷಿಸಿಕೊಂಡವು ಮಾತ್ರವಲ್ಲ, ಈ ಹೋರಾಟ ನಡೆಸಲು ಒಂದು ಸಮಿತಿಯ ರಚನೆಯೂ ಆಯಿತು. ಅವರು ಮಂಡಿಸಿದ ಬೇಡಿಕೆಗಳಲ್ಲಿ ಉತ್ತಮ ಆಹಾರಕ್ಕೆ ಪ್ರಾಮುಖ್ಯತೆ ಇರಲಿಲ್ಲ. ಬ್ರಿಟಿಷ್ ಸೈನಿಕರಂತೆ ಸಮಾನ ವೇತನ, ರಾಜಕೀಯ ಕೈದಿಗಳ ಬಿಡುಗಡೆ, ಸುಭಾಷ್ ಚಂದ್ರ ಬೋಸ್‌ರ ಸೈನ್ಯದಲ್ಲಿದ್ದು ಬಂಧನಕ್ಕೆ ಒಳಗಾಗಿದ್ದ ಸೈನಿಕರ ಬಿಡುಗಡೆ ಮೊದಲಾದವೇ ಪ್ರಮುಖ ಬೇಡಿಕೆಗಳಾಗಿದ್ದವು.

18.2.1946ರಂದು ಮುಂಬಯಿಯ ಕೊಲಾಬದಲ್ಲಿದ್ದ ಎಚ್‌ಎಂಐಎಸ್ ತಲ್ವಾರ್ ಘಟಕದ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ತಮ್ಮ ಅಽಕಾರಿಗಳ ಆಜ್ಞೆಯನ್ನು ಽಕ್ಕರಿಸುವ ಮೂಲಕ ಈ ಹೋರಾಟಕ್ಕೆ ನಾಂದಿ ಹಾಡಿದರು. ಬ್ರಿಟಿಷರ ವಿರುದ್ಧ ನಡೆದ ಈ
ದಂಗೆಯ ವಿವರಗಳನ್ನು ಸಂದೇಶದ ಮೂಲಕ ಎಲ್ಲಾ ಹಡಗುಗಳಿಗೂ ಕಳಿಸಲಾಯಿತು. ಒಂದೇ ದಿನದಲ್ಲಿ ಮುಂಬಯಿಯಲ್ಲಿದ್ದ 22 ಹಡಗುಗಳು ಮತ್ತು ದಡದಲ್ಲಿದ್ದ 12 ಘಟಕಗಳು ಬ್ರಿಟಿಷರ ವಿರುದ್ಧ ಸೆಟೆದು ನಿಂತರು. ದೂರದ ಏಡನ್ ಮತ್ತು ಬಹರೇನ್‌ ನಲ್ಲಿದ್ದ ಭಾರತೀಯ ನೌಕಾದಳದ ಸಿಬ್ಬಂದಿ ಸಹ ತಮ್ಮ ಅಽಕಾರಿಗಳ ಆಜ್ಞೆಯನ್ನು ಸ್ವೀಕರಿಸುವುದನ್ನು ನಿಲ್ಲಿಸಿದರು.
19.2.1946ರಂದು ಮುಂಬಯಿ ಬಂದರು ಬ್ರಿಟಿಷರ ಕೈ ತಪ್ಪಿತು.

ಎಚ್‌ಎಂಐಎಸ್ ತಲ್ವಾರ್ ಘಟಕದ ಸಿಬ್ಬಂದಿ ಆರಂಭಿಸಿದ ಹೋರಾಟವು ಎಲ್ಲಾ ಹಡಗುಗಳಿಗೂ ತಲುಪಿ, ನೌಕಾ ಸಿಬ್ಬಂದಿ
ಬ್ರಿಟಿಷರನ್ನು ಒದ್ದೋಡಿಸಬೇಕು ಎಂಬ ಘೋಷಣೆ ಕೂಗತೊಡಗಿದರು. ಹಾಕಿ ಸ್ಟಿಕ್ ಮತ್ತು ಫಾರ್ ಏಕ್ಸ್ ಹಿಡಿದ ನೌಕಾ ಸಿಬ್ಬಂದಿ ಮುಂಬಯಿಯ ಬೀದಿಗಳಲ್ಲಿ ಸಂಚರಿಸುತ್ತಾ, ಟ್ರಾಫಿಕ್ ಜಾಂ ಮಾಡಿದರು! ಬಂದರಿನಲ್ಲಿ ಮೋಟಾರ ಲಾಂಚ್‌ಗಳ ಮೆರವಣಿಗೆ
ಮಾಡಿದಾಗ, ಮುಂಬಯಿಯ ನಾಗರಿಕರು ಜೈಕಾರ ಹಾಕಿದರು. ಟ್ರಕ್ ಮತ್ತು ಟ್ರಾಮ್ ರೈಲ್ವೆ ಟ್ರಾಕ್ ಗಳಿಗೆ ಅಗ್ನಿಸ್ಪರ್ಷ ಮಾಡಲಾಯಿತು.

ಮುಂಬಯಿಯಲ್ಲಿದ್ದ ಅಮೆರಿಕದ ಮಾಹಿತಿ ಕೇಂದ್ರಕ್ಕೆ ದಾಳಿ ಮಾಡಿ, ಅಮೆರಿಕದ ಬಾವುಟವನ್ನು ಬೀದಿಯಲ್ಲಿ ಸುಡಲಾಯಿತು.
20.2.1946ರಂದು ಮುಂಬಯಿಯಲ್ಲಿದ್ದ 45 ಯುದ್ಧ ನೌಕೆಗಳು, 10 ದಡದಲ್ಲಿದ್ದ ಘಟಕಗಳು ಹೋರಾಟಗಾರರ ವಶಕ್ಕೆ ಬಂದಿದ್ದವು. ಸುಮಾರು 10000 ನೌಕಾ ಸೈನಿಕರು ಮುಂಬಯಿ ಬಂದರನ್ನು ವಶಪಡಿಸಿಕೊಂಡಿದ್ದರು. ಇವರ ನಾಯಕತ್ವ ವನ್ನು ವಹಿಸಿದ್ದವರು 1. ಎಂ.ಎಸ್.ಖಾನ್ 2. ಮದನ್ ಸಿಂಗ್ ಮತ್ತು ಇತರರು. ಇವರ ಹೋರಾಟವನ್ನು ಹತ್ತಿಕ್ಕಲು ಬ್ರಿಟಿಷರು ಕಳಿಸಿದ್ದ ಸೈನಿಕರ ಮೇಲೆ ಇವರು ಗುಂಡಿನ ಮಳೆಗೆರೆದರು.

ತಮ್ಮ ಹಡಗುಗಳ ಮೇಲೆ ವಿಮಾನದಿಂದ ಆಕ್ರಮಣ ಮಾಡುವ ಸಾಧ್ಯತೆಯನ್ನರಿತು, ಯುದ್ಧನೌಕೆಯಲ್ಲಿದ್ದ ಆಂಟಿ ಏರ್
ಗನ್‌ಗಳನ್ನು ಸಿದ್ಧಪಡಿಸಿದ್ದರು. ಆದರೆ, ಇವರೆಲ್ಲರ ಅಭಿಲಾಷೆಯಿದ್ದುದು ತಾವೂ ರಾಷ್ಟ್ರೀಯ ವಾಹಿನಿಯಲ್ಲಿ ಬೆರೆತು, ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬೇಕು ಎಂದು. ತಮ್ಮ ಹೋರಾಟಕ್ಕೆ ಮಾರ್ಗದರ್ಶನ ನೀಡಿ, ನಾಯಕತ್ವ ವಹಿಸಿಕೊಳ್ಳುವಂತೆ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಾಯಕರನ್ನು ವಿನಂತಿಸಿದರು.

ಕಮ್ಯುನಿಸ್ಟ್ ಪಾರ್ಟಿ ಆ- ಇಂಡಿ ಯಾವು ಈ ಹೋರಾಟದ ಮುಂಚೂಣಿಯಲ್ಲಿತ್ತು. ಮೊದಲ ದಿನ ಹೋರಾಟ ಆರಂಭವಾದಾಗ,
19.2.1946ರಂದು ಬ್ರಿಟಿಷರ ಯೂನಿಯನ್ ಜಾಕ್ ಬಾವುಟವನ್ನು ಕೆಳಗಿಳಿಸಿ, ಕಾಂಗ್ರೆಸ್ ಪಕ್ಷ, ಮುಸ್ಲಿಂ ಲೀಗ್ ಮತ್ತು ಕಮ್ಯುನಿಸ್ಟ್ ಪಾರ್ಟಿಯ ಬಾವುಟಗಳನ್ನು ಹಾರಿಸಲಾಗಿತ್ತು. ಆದರೆ, ಸಶಸ್ತ್ರ ಹೋರಾಟಕ್ಕೆ ಸಿದ್ಧರಾಗಿದ್ದ ನೌಕಾ ಸೈನಿಕರ ಈ ಅಭಿಲಾಷೆಗೆ ತಣ್ಣೀರೆರೆದವರು ಮಹಾತ್ಮಾ ಗಾಂಽಜಿ, ಸರ್ದಾರ್ ಪಟೇಲ್ ಮತ್ತು ಜಿನ್ನಾ.

ಯಾವ ಕಾರಣಕ್ಕೂ ಈಗ ಬ್ರಿಟಿಷರ ವಿರುದ್ಧ ಹೋರಾಟ ಮಾಡುವಂತಿಲ್ಲ, ತಕ್ಷಣ ಈ ಹೋರಾಟವನ್ನು ಹಿಂದೆಗೆದುಕೊಳ್ಳಿ ಎಂದು ಬಹಿರಂಗವಾಗಿ ಕಾಂಗ್ರೆಸ್ ನಾಯಕರು ಕರೆ ನೀಡಿದರು. ಅಷ್ಟು ಮಾತ್ರವಲ್ಲ, ತಕ್ಷಣ ಶರಣಾಗತಿಯನ್ನು ಘೋಷಿಸಿ
ಎಂದೂ ಹೇಳಿದರು. ಈ ಒಂದು ವಿದ್ಯಮಾನದ ಕುರಿತು ಸಾಕಷ್ಟು ವಿಶ್ಲೇಷಣೆಗಳಾಗಿವೆ ಮತ್ತು ಆ ಒಂದು ಸಂಕ್ರಮಣ ಸಂದರ್ಭದಲ್ಲಿ, ಗಾಂಧೀಜಿಯವರು ನೌಕಾ ಸೈನಿಕರ ಬೆಂಬಲಕ್ಕೆ ನಿಂತು, ಬ್ರಿಟಿಷರ ವಿರುದ್ಧ ಹೋರಾಟಕ್ಕೆ ದೇಶವಾಸಿಗಳಿಗೆ ಕರೆ ನೀಡಿದ್ದರೆ, ದೇಶ ವಿಭಜನೆಯಾಗದೇ ನಮಗೆ ಸ್ವಾತಂತ್ರ್ಯ ದೊರಕುತ್ತಿತ್ತು ಎಂದು ಕೆಲವು ಇತಿಹಾಸಕಾರರು ವಿಶ್ಲೇಷಿಸಿದ್ದಾರೆ.

ಈ ನಡುವೆ ಮುಂಬಯಿಯ ನಾಗರಿಕರು ನೌಕಾ ಸೈನಿಕರ ಬೆಂಬಲಕ್ಕೆ ನಿಂತು, ಆಹಾರ ಮತ್ತಿತರ ಸಾಮಗ್ರಿಯನ್ನು ಅವರಿಗೆ ಸರಬರಾಜು ಮಾಡಿದರು. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಾಯಕರು ನೌಕಾಸೈನಿಕರ ಹೋರಾಟವನ್ನು ದಮನಿಸಲು, ಶರಣಾಗುವಂತೆ ಕರೆ ನೀಡಿದರೆ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾವು ಆ ಹೋರಾಟಕ್ಕೆ ಪೂರ್ಣ ಬೆಂಬಲ ನೀಡಿತು.

22.2.1946ರಂದು ಮುಂಬಯಿ ಮತ್ತು ದೇಶದ ಎಲ್ಲಾ ಭಾಗಗಳಲ್ಲಿ ಮುಷ್ಕರ ನಡೆಸುವಂತೆ ಸಿಪಿಐ ಕರೆನೀಡಿದಾಗ, ಮುಂಬಯಿ, ಕಲ್ಕತ್ತಾ, ಕರಾಚಿ, ಮದರಾಸ್ ಮೊದಲಾದ ಕಡೆ ಭಾರಿ ಬೆಂಬಲ ವ್ಯಕ್ತವಾಗಿತ್ತು. ಆದರೆ, ಇಷ್ಟು ಹೊತ್ತಿಗೆ ಬ್ರಿಟಿಷರು ನಮ್ಮ ನಾಯಕರ ಹೋರಾಟದ ನಾಡಿಮಿಡಿತ ಅರಿತಿದ್ದರು. ನೌಕಾ ಸೈನಿಕರನ್ನು ನಮ್ಮ ಪ್ರಮುಖ ನಾಯಕರು ಬೆಂಬಲಿಸದೇ ಇದ್ದುದನ್ನು ಕಂಡ ಬ್ರಿಟಿಷರು, ತಮ್ಮ ಸೈನಿಕರನ್ನು ಮುಂಬಯಿಯ ನಾಗರಿಕರ ಮೇಲೆ ಹರಿಬಿಟ್ಟರು.

22.2.1946ರ ಮುಷ್ಕರದ ದಿನದಂದು ಇಡೀ ಮುಂಬಯಿಯಲ್ಲಿ ಸೈನಿಕರ ಅಟ್ಟಹಾಸವೇ ಮೆರೆಯಿತು. ಅಽಕೃತ ಅಂಕಿಸಂಕಿಗಳ ಪ್ರಕಾರ 250ಕ್ಕೂ ಹೆಚ್ಚು ಜನರನ್ನು ಸೈನಿಕರು ಗುಂಡಿಟ್ಟು ಕೊಂದರು. ನೌಕಾ ಸೈನಿಕರ ಹೋರಾಟಕ್ಕೆ ನಾಯಕತ್ವ ವಹಿಸಿದ್ದ ಎಂ.ಎಸ್.ಖಾನ್‌ರನ್ನು ಕಾಂಗ್ರೆಸ್ ನಾಯಕ ವಲ್ಲಭಬಾಯಿ ಪಟೇಲರು ಭೇಟಿಯಾಗಿ, ಚರ್ಚೆ
ನಡೆಸಿದರು. ಈ ಕ್ಷಣದಲ್ಲಿ ಮುಷ್ಕರ ಹಿಂದೆಗೆದುಕೊಳ್ಳಿ ಎಂದ ಪಟೇಲರು, ಯಾವುದೇ ನೌಕಾ ಸಿಬ್ಬಂದಿಯನ್ನೂ ಬ್ರಿಟಿಷ್ ಸರಕಾರವು ಶಿಕ್ಷೆಗೆ ಗುರಿಪಡಿಸುವುದಿಲ್ಲ ಎಂಬ ಭರವಸೆ ನೀಡಿದರು.

ಮುಂಬಯಿಯಲ್ಲಿ ನಡೆದ ಈ ಸಭೆಯು ನಿರ್ಣಾಯಕ ಎನಿಸಿತು. ನೌಕಾಸೇನೆಯ ಬಹುಪಾಲು ಬಲವನ್ನು ತನ್ನ ವಶಕ್ಕೆ
ತೆಗೆದುಕೊಂಡಿದ್ದ ಹೋರಾಟಗಾರರು, ರಾಷ್ಟ್ರೀಯ ಪಕ್ಷಗಳ ನಾಯಕರ ಮಾರ್ಗದರ್ಶನ ಬಯಸಿದ್ದೇ ಅವರಿಗೆ ಮುಳುವಾ ಯಿತು. ವಲ್ಲಭಬಾಯಿ ಪಟೇಲರು ನೀಡಿದ ಭರವಸೆಯಂತೆ, ನೌಕಾಸೈನಿಕರು ತಮ್ಮ ಹೋರಾಟವನ್ನು ಹಿಂದೆಗೆದು ಕೊಂಡರು. ಆದರೆ, ಅವರ ಮೇಲೆ ಬ್ರಿಟಿಷ್ ಸರಕಾರವು ಕಾನೂನಿನ ಕ್ರಮ ಕೈಗೊಳ್ಳುವುದಿಲ್ಲ ಎಂದು ಪಟೇಲರು ನೀಡಿದ್ದ ವಾಗ್ದಾನವು ಹುಸಿಯಾಯಿತು.

ನೌಕಾ ಸೈನಿಕರ ಈ ಹೋರಾಟವನ್ನು ಒಂದು ಅಪರಾಧ ಎಂದು ಪರಿಗಣಿಸಿದ ಬ್ರಿಟಿಷ್ ಸರಕಾರವು, ತನಿಖೆ ನಡೆಸಿ, ನೌಕಾದಳದ 476 ಜನರನ್ನು ಕೆಲಸದಿಂದ ವಜಾ ಮಾಡಿತು. ಇನ್ನೂ ದುರಂತವೆಂದರೆ, ಬ್ರಿಟಿಷರು ನಮ್ಮ ದೇಶವನ್ನು
ಬಿಟ್ಟು ಹೋದ ನಂತರವೂ ಅವರನ್ನು ಕೆಲಸಕ್ಕೆ ವಾಪಸು ತೆಗೆದುಕೊಳ್ಳಲಾಗಿಲ್ಲ. ಈಚಿನ ವರ್ಷಗಳಲ್ಲಿ ನೌಕಾಸೈನಿಕರ ಈ ಅಭೂತ ಪೂರ್ವ ಹೋರಾಟವನ್ನು ನಮ್ಮ ಸರಕಾರ ನೆನಪಿಸಿಕೊಳ್ಳುತ್ತಿದೆ.

ಮುಂಬಯಿ ಮತ್ತು ಕೊಲ್ಕೊತ್ತಾಗಳಲ್ಲಿ ಅವರ ತ್ಯಾಗವನ್ನು ಸ್ಮರಿಸುವ ಕೆಲಸಗಳಾಗಿವೆ, ಸ್ಮಾರಕಗಳ ನಿರ್ಮಾಣವಾಗಿವೆ. ಜತೆಗೆ, ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಲು, ಈ ನೌಕಾಸೈನಿಕರ ಹೋರಾಟ ಪ್ರಮುಖ ಪಾತ್ರ ವಹಿಸಿತ್ತು ಎಂದು
ಈಚೆಗಿನ ಇತಿಹಾಸಕಾರರು ವಿಶ್ಲೇಷಿಸಿದ್ದಾರೆ. ನೌಕಾ ಸೈನಿಕರ ಕೈ ಮೇಲಾಗಿದ್ದರೆ ಮತ್ತು ಅವರ ಜತೆ ಭೂ ಮತ್ತು ವಾಯು ಸೈನಿಕರು ಕೈಜೋಡಿಸಿದ್ದರೆ, ಬ್ರಿಟಿಷ್ ಅಧಿಕಾರಿಗಳನ್ನು ಮತ್ತು ನಾಗರಿಕರನ್ನು ಸಾಯಿಸುವ ಸಾಧ್ಯತೆಯ ಭಯ ಬ್ರಿಟಿಷರಲ್ಲಿ
ಹುಟ್ಟಿತ್ತು ಎಂದೂ ತಿಳಿಯಲಾಗಿದೆ.

ಫೆಬ್ರವರಿ 1946 ಸಮಯವು ನಿಜಕ್ಕೂ ಸಂಕೀರ್ಣ. ಎರಡನೆಯ ಮಹಾಯುದ್ಧ ಮುಗಿದು, ಬ್ರಿಟಿಷರು ದುರ್ಬಲರಾಗಿದ್ದರು.
ನಮ್ಮ ದೇಶದ ಸೈನಿಕರು ವಿಶ್ವಯುದ್ಧದಲ್ಲಿ ಭಾಗವಹಿಸಿ, ಹೊರಗಿನ ಜಗತ್ತನ್ನು ನೋಡಿಕೊಂಡು ಬಂದಿದ್ದರು. ಅವರೆಲ್ಲರೂ
ಬ್ರಿಟಿಷರನ್ನು ಒದ್ದೋಡಿಸಲು ತುದಿಗಾಲಲ್ಲಿ ನಿಂತಿದ್ದರು. 2000 ನೌಕಾಸಿಬ್ಬಂದಿ ಹೋರಾಟ ಆರಂಭಿಸಿದಾಗ, ವಾಯು ಸೇನೆಯ ಕೆಲವು ಘಟಕಗಳು ಬೆಂಬಲ ಸೂಚಿಸಿದ್ದವು, ಇತರ ಸೈನಿಕರು ಸಹ ಬೆಂಬಲ ಸೂಚಿ, ಅವರ ವಿರುದ್ಧ
ಹೋರಾಡಲು ಬಹಿರಂಗವಾಗಿಯೇ ನಿರಾಕರಿಸಿದ್ದರು.

ಆ ಒಂದು ಸಂದರ್ಭದಲ್ಲಿ, ಗಾಂಧೀಜಿ ಮೊದಲಾದ ನಾಯಕರು ಇವರ ಬೆಂಬಲಕ್ಕೆ ಬಂದಿದ್ದರೆ, ಆಗಲೇ ಬ್ರಿಟಿಷರನ್ನು
ಓಡಿಸಬಹುದಾಗಿತ್ತು. ಇದರಿಂದ ಆಗಬಹುದಾಗಿದ್ದ ಪ್ರಮುಖ ಲಾಭವೆಂದರೆ, ದೇಶ ವಿಭಜನೆಯಾಗದೇ, ಸ್ವಾತಂತ್ರ್ಯ
ದೊರೆಕುತ್ತಿತ್ತು. 1946ರ ಸಮಯಕ್ಕೆ ಬ್ರಿಟಿಷರು ಭಾರತವನ್ನು ಬಿಟ್ಟು ಹೊರಡುವ ಇಂಗಿತ ವ್ಯಕ್ತಿಪಡಿಸಿದ್ದರು. ಆದರೆ, ಆಗ ದೇಶವನ್ನು ವಿಭಜಿಸುವ ಕುರಿತು ಸ್ಪಷ್ಟ ತಿಳಿವಳಿಕೆಗಳು ರೂಪುಗೊಂಡಿರಲಿಲ್ಲ.

ನೌಕಾದಳದ ಹೋರಾಟಕ್ಕೆ ಪ್ರಮುಖ ಪಕ್ಷಗಳೂ ಕೈಜೋಡಿಸಿದ್ದರೆ, ಬ್ರಿಟಿಷರು ತರಾತುರಿಯಲ್ಲಿ ಭಾರತ ಬಿಟ್ಟು ಹೋಗ ಬೇಕಾಗುತ್ತಿತ್ತು. ದೇಶವನ್ನು ಎರಡು ಅಥವಾ ಹೆಚ್ಚು ಭಾಗ ಮಾಡುವ ಅವರ ತಂತ್ರವು ವಿಫಲಗೊಳ್ಳುತ್ತಿತ್ತು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಲು ತ್ಯಾಗ ಮಾಡಿದವರನ್ನು ನೆನಪಿಸಿಕೊಳ್ಳುವಾಗ, 1946ರಲ್ಲಿ ಹೋರಾಡಿದ ನೌಕಾ ಸಿಬ್ಬಂದಿಯನ್ನೂ ಅವಶ್ಯವಾಗಿ ನೆನಪಿಸಿಕೊಳ್ಳಲೇಬೇಕು. ಜತೆಗೆ ಇದು ನಮ್ಮ ದೇಶದಲ್ಲಿ ಬ್ರಿಟಿಷರ ವಿರುದ್ಧ ನಡೆದ ಕೊನೆಯ
ಹೋರಾಟವೂ ಹೌದು!

error: Content is protected !!