Friday, 20th September 2024

ವಾರ ವಾರವೂ ಗರ್ಭ ಧರಿಸಿ, ಹಡೆಯುವ ನೋವು – ನಲಿವು !

ನೂರೆಂಟು ವಿಶ್ವ
ವಿಶ್ವೇಶ್ವರ ಭಟ್

ಜ್ಞಾನವನ್ನು ಸಂಪಾದಿಸಲು ಅಧ್ಯಯನ ಮಾಡಬೇಕು. ವಿವೇಕವನ್ನು ಗಳಿಸಲು ಲೋಕಜ್ಞಾನ ಸಂಪಾದಿಸಿಕೊಳ್ಳ ಬೇಕು. ಉಪದೇಶ ಕೊಡಲು ಒಂದೋ ಸಂಪಾದಕೀಯ ಬರಹಗಾರರಾಗಬೇಕು, ಇಲ್ಲವೇ ಅಂಕಣಕಾರರಾಗಬೇಕು.

– ವಕ್ರತುಂಡೋಕ್ತಿ

ಈ ವಾರ ಏನು ಬರೆಯುವುದು? ಇದು ಅಂಕಣಕಾರರ ದೊಡ್ಡ ಸಮಸ್ಯೆ. ಎಲ್ಲಾ ವಾರವೂ ವಿಷಯಗಳು ಸಿಗುವುದಿಲ್ಲ. ಸಿಕ್ಕ ವಿಷಯಗಳ ಬಗೆಗೆಲ್ಲ ಬರೆಯಲಾಗುವುದಿಲ್ಲ, ಬರೆಯಲೂ ಬಾರದು. ಪ್ರತಿಯೊಬ್ಬ ಅಂಕಣಕಾರ ತನ್ನ ಬರಹಕ್ಕೆ ಒಂದು
ಹಸನಾದ ಪಿಚ್ ಸಿದ್ಧಪಡಿಸಿಕೊಂಡಿರುತ್ತಾನೆ. ಅದಕ್ಕೆ ಮನಸ್ಸು ಮತ್ತು ವಿಷಯ ಹದವಾಗಿರಬೇಕು. ಬರೆಯುವ ವಿಷಯದ
ಬಗ್ಗೆ ಸ್ಟ್ರಾಂಗ್‌ ಪಾಯಿಂಟ್ಸ್  ಇರಬೇಕು. ಇಲ್ಲದಿದ್ದರೆ ಬರಹ ಘಟ್ಟ ಹತ್ತುವುದಿಲ್ಲ. ಶಿರಾಡಿ ಘಾಟಿನಲ್ಲಿ ಏದುಸಿರು ಬಿಡುತ್ತಾ ಏರುವ
ಲಾರಿಗಳಂತಾಗುತ್ತವೆ. ಓದುಗನಿಗೆ ‘ಇಂದು ಅಂಕಣಕಾರ ಏಕೋ ಸಿದ್ಧನಾಗಿಲ್ಲ, ಏನೋ ರಾಂಗ್ ಹೊಡೆಯುತ್ತಿದ್ದಾನಲ್ಲ’
ಎಂಬುದು ಮೂರು ಪ್ಯಾರ ಓದುತ್ತಿದ್ದಂತೆ ಗೊತ್ತಾಗುತ್ತದೆ.

ಮೊದಲ ಓವರಿನಲ್ಲಿ ಮೂರು ವೈಡ್ ಬಾಲ್ ಎಸೆದರೆ ಬೌಲರನ ಮನಸ್ಥಿತಿಯಂತೆ, ಅಂಕಣಕಾರನೂ ಪೇಚಾಡುವುದು ಅನು ಭವಕ್ಕೆೆ ಬರುತ್ತದೆ. ಹಾಗಂತ ಅದೇನು ಪ್ರಮಾದವಲ್ಲ.  ಮಾಲ್ಕಮ್ ಮಾರ್ಷಲ್ ನಂಥ ಅದ್ಭುತ ಬೌಲರುಗಳು ಸಹ ಓವರಿನಲ್ಲಿ ಐದು ವೈಡ್ ಬಾಲ್ ಎಸೆದಿದ್ದಾರೆ. ಅದು ಅವನ ಅಂದಿನ ಮನಸ್ಥಿತಿ ಅಷ್ಟೇ. ಅಂಕಣಕಾರನೂ ಒಮ್ಮೊಮ್ಮೆ ಇಂಥದೇ ವೈಡ್ ಬಾಲ್ ಎಸೆಯುತ್ತಾನೆ. ಅಂಪೈರುಗಳಾದ ಓದುಗರು ತಟ್ಟನೆ ‘ವೈಡ್ ಬಾಲ್’ ಎಂದು ನಿರ್ಧರಿಸಿಬಿಡುತ್ತಾರೆ.

ಅಂಕಣ ಬರಹ ಏಕಾಏಕಿ ಹುಟ್ಟುವಂಥದ್ದಲ್ಲ. ವಿಷಯ ಆಗಾಗ ಅಂಕಣಕಾರನ ಎದೆಯೊಳಗೆ ತುರಿಸುತ್ತಿರಬೇಕು. ಹಲವಾರು ದಿನಗಳಿಂದ ಕಾಡಬೇಕು. ಆ ವಿಷಯದ ಬಗ್ಗೆ ಮತ್ತಷ್ಟು ಅಧ್ಯಯನ ಮಾಡುವಂತೆ ಪ್ರೇರೇಪಿಸಬೇಕು. ಕೆಲವು ಆಪ್ತರ ಜತೆ, ಪರಿಣತರ ಜತೆ ಚರ್ಚೆಗೆ ಕರೆದುಕೊಂಡು ಹೋಗಬೇಕು. ಆಗಾಗ ತೊಟ್ಟಿಕ್ಕುತ್ತಾ ತುಂಬುವ ಕೊಡದಂತೆ ವಿಷಯಗಳೂ ಹನಿಹನಿ ಗರೆದು ತುಂಬುತ್ತಿರಬೇಕು. ಅದಿಲ್ಲದೆ ಏಕಾಏಕಿ, ಸಂತೆಗೆ ಮೂರು ಮೊಳ ನೇಯ್ದರೆ, ಹುಡುಗಾಟಿಕೆ ಎನಿಸಿಕೊಳ್ಳುತ್ತದೆ. ಅಷ್ಟಕ್ಕೂ ಪತ್ರಿಕೆಯಲ್ಲಿ ಅಂಕಣಕಾರನಿಗೆ, ಸಂಪಾದಕನ ನಂತರ, ಅಭಿಪ್ರಾಯ ರೂಪಿಸುವ ಮಹತ್ವದ ಹೊಣೆಗಾರಿಕೆಯಿರುತ್ತದೆ. ಪತ್ರಿಕೆಯೊಂದು ಬರಹಗಾರನಿಗೆ ಕೊಡಬಹುದಾದ ದೊಡ್ಡ ಹುದ್ದೆ ಅಥವಾ ಗೌರವವೆಂದರೆ ಅಂಕಣಕಾರನದು. ಹೀಗಾಗಿ ಈ ಜವಾಬ್ದಾರಿಯಿಂದಲೇ ವಾರವಾರವೂ ಬರೆಯಲು ಕುಳಿತುಕೊಳ್ಳಬೇಕು. ಒಂದು ಬರಹ ಸೋತರೆ, ಅಷ್ಟರಮಟ್ಟಿಗೆ ಓದುಗರಿಗೆ ನಿರಾಸೆಯಾಗುತ್ತದೆ.

ವಿರಾಟ್ ಕೊಹ್ಲಿ ಎಲ್ಲಾ ಪಂದ್ಯಗಳಲ್ಲಿ ಸೆಂಚುರಿ ಹೊಡೆಯದಿರಬಹುದು, ಅನೇಕ ಸಲ ಜೀರೋಕ್ಕೆೆ ಔಟ್ ಆಗಿರಬಹುದು. ಆದರೆ ಪ್ರೇಕ್ಷಕ ಮಾತ್ರ ಪ್ರತಿ ಸಲವೂ ಆತ ಸೆಂಚುರಿ ಹೊಡೆಯಲಿ ಎಂದೇ ನಿರೀಕ್ಷಿಸುತ್ತಾನೆ. ಈ ಸಂಗತಿ ಅಂಕಣಕಾರನಿಗೆ ಹೇಳಿ ಮಾಡಿಸಿ ದಂತಿದೆ.

ಹಾ.ಮಾ.ನಾಯಕರು ಅಂಕಣಕಾರರ ತಳಮಳ ಎಂಬ  ಲೇಖನದಲ್ಲಿ ತಾವು ‘ಪ್ರಜಾವಾಣಿ’ ಅಂಕಣಕಾರರಾಗಿ ಅನುಭವಿಸಿದ ಬರೆಯುವ ಸಂಕಷ್ಟಗಳ ಬಗ್ಗೆ ಬರೆದಿದ್ದಾರೆ. ಅವರು ‘ಸಂಪ್ರತಿ’ ಎಂಬ ಅಂಕಣ ಬರೆಯುತ್ತಿದ್ದರು. ಅದು ಆ ದಿನಗಳಲ್ಲಿ ಜನಪ್ರಿಯ ವಾಗಿತ್ತು. ಕೆಲವೊಮ್ಮೆ ಡೆಡ್ ಲೈನ್ ಸಮೀಪಿಸಿದರೂ ಯಾವ ವಿಷಯದ ಬಗ್ಗೆ ಬರೆಯಬೇಕು ಎಂಬುದು ಗೊತ್ತಾಗದೇ ಚಡಪಡಿಸು ತ್ತಿದ್ದರು. ಒಮ್ಮೆ ವಿಷಯ ಸಿಕ್ಕರೆ ಚೌಕಟ್ಟನ್ನು ಹದಗೊಳಿಸಬಹುದು, ಮಾರ್ಗವನ್ನು ರೂಪಿಸಬಹುದು. ವಿಷಯ ಆಯ್ಕೆಯೇ ಸಮಸ್ಯೆಯಾಗಿ ಅವರು ಪರದಾಡುತ್ತಿದ್ದರು.

ಈ ವಾರ ಹೇಗೋ ಮುಗಿಯಿತಲ್ಲ ಎಂದು ನಿಟ್ಟುಸಿರು ಬಿಟ್ಟು ಎರಡು ದಿನ ಕಳೆಯುತ್ತಿದ್ದಂತೆ, ಮತ್ತೆ ಶುರು, ಮುಂದಿನ ವಾರ
ಯಾವ ವಿಷಯದ ಬಗ್ಗೆೆ ಬರೆಯುವುದು ಎಂಬ ಗುಂಗಿಹುಳದ ಕೊರೆತ. ವಾರ ವಾರವೂ ಬಸಿರಾಗುವುದು ಮತ್ತು ವಾರ ವಾರವೂ ಹಡೆಯುವುದು ಕಷ್ಟ ಕಷ್ಟ. ಒಮ್ಮೆಯೂ ಪ್ರಸೂತಿ ವೈರಾಗ್ಯ ಬರಲೇಕೂಡದು. ಹೀಗಾಗಿ ಕೆಲವು ಅಂಕಣಕಾರರು ಐದಾರು ತಿಂಗಳು ಬರೆದು ಸುಸ್ತಾಗಿ ಹೋಗುತ್ತಾರೆ. ಅವರಲ್ಲಿ ಲಿತನ ಕಾಡಲಾರಂಭಿಸುತ್ತದೆ. ಅನಂತರ ಅವರು ಏನೋ ನೆಪ ತೆಗೆದು ಕೈಚೆಲ್ಲಿಬಿಡುತ್ತಾರೆ. ಇನ್ನು ಕೆಲವು ಅಂಕಣಕಾರರ ಬರಹಗಳಲ್ಲಿ ಸುಸ್ತು ಇಣುಕಲಾರಂಭಿಸುತ್ತದೆ. ಅವರ ಬರಹ ನೋಡಿಯೇ, ಓದುಗರು ದಣಿಯುತ್ತಾರೆ. ನಾನು ‘ವಿಜಯ ಕರ್ನಾಟಕ’ದಲ್ಲಿದ್ದಾಗ, ಕನ್ನಡದ ಪ್ರಮುಖ ಸಾಹಿತಿಯೊಬ್ಬರಿಂದ ಅಂಕಣ ಬರೆಯಿಸ ಬೇಕೆಂದು ಬಹಳ ಉತ್ಸುಕನಾಗಿದ್ದೆ. ಅವರು ಬರೆದರೆ ಬಹಳ ಚೆನ್ನಾಗಿರುತ್ತದೆ ಎಂದು ಅನಿಸಿತು. ನಮ್ಮ ಸಂಪಾದಕೀಯ ಸಹೋದ್ಯೋಗಿಗಳೂ ಅವರು ಬರೆಯುವುದಾದರೆ ನಿಜಕ್ಕೂ ಅದು ಗಮನ ಸೆಳೆಯುತ್ತದೆ ಮತ್ತು ಪತ್ರಿಕೆಯ ಮೌಲ್ಯವನ್ನು ಹೆಚ್ಚಿಸುತ್ತದೆ ಅಂದರು. ಒಂದು ದಿನ ಅವರ ಮನೆಗೆ ಹೋಗಿ ಸುದೀರ್ಘ ಹರಟೆ ಹೊಡೆದು, ಅವರ ತಲೆಯೊಳಗೆ ಹುಳು ಬಿಟ್ಟು ಬಂದೆ.

ಅವರು ಉತ್ಸಾಹದಿಂದ, ‘ಆಯಿತು ಬರೆಯುತ್ತೇನೆ, ಇಷ್ಟು ವರ್ಷಗಳಾದರೂ ಕನ್ನಡದ ಯಾವ ಸಂಪಾದಕನೂ ನಮ್ಮ ಮನೆಗೆ ಬಂದು ಈ ಆಹ್ವಾನ ನೀಡಿರಲಿಲ್ಲ’ ಎಂದರು. ನಾನು ಒಂದು ತಿಂಗಳು ಸುಮ್ಮನಿದ್ದೆ. ಅವರಿಂದ ಯಾವ ಉತ್ತರವೂ ಬರಲಿಲ್ಲ. ಅವರಿಗೆ ನೆನಪಿಸಲು ಫೋನ್ ಮಾಡಿದೆ. ಆಶ್ಚರ್ಯ!

ಅವರು ಆ ವಿಷಯವನ್ನೇ ಮರೆತು ಬಿಟ್ಟಿದ್ದರು. ಅವರ ಮನೆಗೆ ಹೋಗಿದ್ದು, ಹರಟೆ ಹೊಡೆದಿದ್ದು, ಅಂಕಣ ಬರೆಯುವಂತೆ
ಕೇಳಿದ್ದು… ಎಲ್ಲವನ್ನೂ ಫ್ಲಾಶ್ ಬ್ಯಾಕ್ ಮಾಡಿದೆ. ಆಗ ಅವರು, ‘ಅದಾ? ಮರೆತೇ ಬಿಟ್ಟಿದ್ದೆ ನೋಡಿ, ಈಗ ನಾನು ದಿಲ್ಲಿಯಲ್ಲಿ ದ್ದೇನೆ, ಮುಂದಿನ ವಾರ ಬರುತ್ತೇನೆ, ಅದಾಗಿ ನಾಲ್ಕು ದಿನ ಬಿಟ್ಟು ಭೋಪಾಲ್‌ಗೆ ಹೋಗಬೇಕು. ಮುಂದಿನ ತಿಂಗಳು ಯಾವ ಕಾರ್ಯಕ್ರಮವಿಲ್ಲ. ಆಗ ಬರೆಯಲು ಆರಂಭಿಸುತ್ತೇನೆ. ಒಮ್ಮೆೆ ಶುರುವಾದರೆ ಸರಾಗವಾಗಿ ಮುಂದುವರಿಸಿಕೊಂಡು ಹೋಗಬ ಹುದು. ನನಗೆ ಸ್ವಲ್ಪ ಸ್ಟಾರ್ಟಿಂಗ್ ಟ್ರಬಲ್. ಇನ್ನು ನೀವು ಕೇಳಿದರೆ ಇಲ್ಲ ಎನ್ನುವುದುಂಟೇ ?’ ಎಂದರು. ಎರಡು ತಿಂಗಳು ಅವರ ತಂಟೆಗೆ ಹೋಗಲಿಲ್ಲ. ಅದಾಗಿ ಕೆಲ ದಿನಗಳಲ್ಲಿ ಒಂದು ಪಾರ್ಟಿಯಲ್ಲಿ ಇಬ್ಬರೂ ಒಂದೇ ಟೇಬಲ್ಲಿಗೆ ಬಂದೆವು. ಅದೂ ಇದೂ ಹರಟೆ ಬಳಿಕ, ಕೊನೆಯಲ್ಲಿ ಅಂಕಣದ ವಿಷಯ ಪ್ರಸ್ತಾಪಿಸಿದೆ.

ಮತ್ತೆ action replay! ‘ಒಹೋ ಅದಾ ? ಮರೆತೇ ಬಿಟ್ಟಿದ್ದೆ ನೋಡಿ’ ಎಂದು ತೌಡು ಕುಟ್ಟಲಾರಂಭಿಸಿದರು. ‘ನಾಳೆ ಅದೇನೇ ಆಗಲಿ, ಪ್ರಳಯವೇ ಸಂಭವಿಸಲಿ, ಅಂಕಣ ನಿಮ್ಮ ಟೇಬಲ್ಲಿನ ಮೇಲಿರುತ್ತದೆ, ಪ್ರಾಮಿಸ್’ ಎಂದರು. ನಾನು ಹತ್ತು ವರ್ಷಗಳ ಕಾಲ ‘ವಿಜಯ ಕರ್ನಾಟಕ’ದಲ್ಲಿದ್ದೆ. ಕೊನೆಗೂ ಅವರಿಂದ ಬರೆಯಿಸಲು ಆಗಲಿಲ್ಲ. ಅಂಕಣ ಬರೆಯಲು ಪ್ರಳಯವೇ ಆಗಲಿ ಎಂದು ಅವರು ಕಾಯುತ್ತಿರಬಹುದಾ, ಗೊತ್ತಿಲ್ಲ.

ಆನಂತರ ನಾನು ‘ಕನ್ನಡಪ್ರಭ’ದಲ್ಲಿದ್ದಾಗ, ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ, ಅಲ್ಲಿ ಅಕ್ಕ-ಪಕ್ಕ ಕುಳಿತುಕೊಳ್ಳುವ
ಅವಕಾಶ ಬಂದಿತು. ಪುನಃ ಪ್ರಸ್ತಾಪಿಸಿದೆ. ನನ್ನ ಪುಣ್ಯ (?), ಅವರು ಹಿಂದಿನ ಎಲ್ಲಾ ಸಂಭಾಷಣೆಗಳನ್ನು ಮರೆತಿದ್ದರು. ಮತ್ತೆ
ಶ್ರೀಗಣೇಶಾಯನಮಃ ! ನನ್ನ ಮಾತುಗಳನ್ನೆಲ್ಲಾ ಕೇಳಿಸಿಕೊಂಡ ನಂತರ, ‘ಭಟ್ರೇ, ನೀವು ನನ್ನ ಆತ್ಮೀಯ ಸ್ನೇಹಿತರು. ನೀವು
ನನಗೆ ಕಷ್ಟ ಕೊಡಬೇಕು, ಶಿಕ್ಷೆ ವಿಧಿಸಬೇಕು ಎಂದು ನಿರ್ಧಾರ ಮಾಡಿದ್ದರೆ ಹೇಳಿ, ನಾನು ಬರೆಯುತ್ತೇನೆ. ಅದು ನನಗೆ ಒಗ್ಗದ
ಬರವಣಿಗೆ ಪ್ರಕಾರ. ನೀವೆಲ್ಲಾ ಹೇಗೆ ಬರೆಯುತ್ತೀರೋ ಗೊತ್ತಿಲ್ಲ.

ನನ್ನಿಂದ ಅದು ಅಸಾಧ್ಯ. ನನ್ನನ್ನು ಬಿಟ್ಟುಬಿಡಿ’ ಎಂದು ಅಸಲಿ ಸಂಗತಿ ಹೇಳಿದರು. ಅದೇ ಕೊನೆ. ಮತ್ತೊಮ್ಮೆ ಅವರನ್ನು
ಕೇಳಲಿಲ್ಲ. ಅದಾದ ನಂತರ ಅವರನ್ನು ಅನೇಕ ಸಲ ಭೇಟಿ ಮಾಡಿದ್ದೇನೆ, ನನ್ನ ಪುಸ್ತಕ ಬಿಡುಗಡೆಗೂ ಬಂದಿದ್ದರು, ಆದರೆ ಆ
ಬೇಡಿಕೆಯನ್ನು ಇಡಲಿಲ್ಲ. ಅವರೇ ಆಗಾಗ ನೆನಪಿಸಿಕೊಳ್ಳುವುದುಂಟು. ನಿಜ, ಅದು ಅವರಿಗೆ ಕೈಗೆಟುಕದ ಪ್ರಕಾರ. ಅದು ಅವರಿಗೆ ಒಲಿಯದ ಶಿಸ್ತು. ಹಾಗಂತ ಅದೇನು ಅಪರಾಧವಲ್ಲ ಅಥವಾ ಅದು ಅವರ ದೌರ್ಬಲ್ಯವಲ್ಲ, ಬರಹಗಾರರಾಗಿ ಗುಣಹೀನತೆಯೂ ಅಲ್ಲ. ಒಟ್ಟಾರೆ, ಅಂಕಣ ಪ್ರಕಾರ ಅವರಿಗೆ ಹೇಳಿ ಮಾಡಿಸಿದ್ದಲ್ಲ.

ನಾನು ‘ಕನ್ನಡಪ್ರಭ’ ಸೇರುವುದೆಂದು ನಿರ್ಧಾರವಾಗಿತ್ತು. ಆದರೆ ಇನ್ನೂ ಸೇರಿರಲಿಲ್ಲ. ಆ ಸಂದರ್ಭದಲ್ಲಿ ನನ್ನ ನೇಮಕದ ಬಗ್ಗೆ ಕನ್ನಡದ ಖ್ಯಾತ ಕಾದಂಬರಿಕಾರ, ಚಿಂತಕ, ಹಿತೈಷಿ, ಮಾರ್ಗದರ್ಶಕರಾದ ಡಾ.ಎಸ್.ಎಲ್.ಭೈರಪ್ಪ ಅವರಿಗೆ ಹೇಳಿದೆ. ಅವರು ಅತೀವ ಸಂತಸಪಟ್ಟರು. ‘ಸಾರ್, ನನ್ನದೊಂದು ಕೋರಿಕೆಯಿದೆ. ನೀವು ನೆರವೇರಿಸಿಕೊಡಬೇಕು’ ಎಂದೆ. ‘ಹೇಳಿ, ಏನಾಗಬೇಕು?’ ಎಂದು ಕೇಳಿದರು. ‘ಸಾರ್, ನೀವು ಅಂಕಣಕಾರರಲ್ಲ ಎಂಬುದು ಗೊತ್ತು, ಆದರೂ ಕೇಳುತ್ತೇನೆ, ನೀವು ಕನ್ನಡಪ್ರಭಕ್ಕೆ ಬರೆಯ ಬೇಕು. ಇದು ನನ್ನ ಒತ್ತಾಸೆ’ ಎಂದೆ. ಡಾ.ಭೈರಪ್ಪ ಅವರ ಸ್ವಭಾವ ಗೊತ್ತಿರಲಿಕ್ಕೆೆ ಸಾಕು. ಅವರು ಈ ರೀತಿಯ ಒತ್ತಾಸೆ, ಒತ್ತಡ ಗಳಿಗೆಲ್ಲ ಮಣಿಯುವವರಲ್ಲ. ಅವರು ತಮ್ಮದೇ ಆದ ಒಂದು ಅಂತರ್ಶಿಸ್ತೀಯ ಬರಹ ಕ್ರಮಕ್ಕೆೆ ಪಳಗಿದವರು. ಅವರು ಕಾದಂಬರಿ ಬರೆದು ಮುಗಿಸಿ, ತಕ್ಷಣ ಮುದ್ರಣಕ್ಕೆೆ ಕಳಿಸುವವರಲ್ಲ. ಅದನ್ನು ತಮ್ಮ ಆಪ್ತರಿಗೆ ಕೊಟ್ಟು, ಓದಿಸಿ, ಅವರ ಅಭಿಪ್ರಾಯ ಕೇಳಿ, ಒಪ್ಪಿತವಾದ ಸಲಹೆಗಳಂತೆ ಕರಡು ಮಾರ್ಪಡಿಸಿ, ಮತ್ತೆ ಕೆಲವು ದಿನ ಕಾದು, ಯೋಚನೆಯ ಗಿರಣಿಯೊಳಗೆ ಇಡೀ ಬರಹವನ್ನು ತಿರುಗಿಸಿ, ಪೂರ್ತಿ ಸಮಾಧಾನವಾದಾಗಲೇ ಮುದ್ರಣಕ್ಕೆ ಕಳಿಸುವವರು. ಇದು ಡಾ.ಭೈರಪ್ಪ ಅವರ ಶ್ರದ್ಧೆ, ಶಿಸ್ತು ಮತ್ತು ಅಳವಡಿಸಿ ಕೊಂಡ ಕಟ್ಟರ್ ಸಂಸ್ಕಾರ. ಇದರೊಂದಿಗೆ ಅವರು ಎಂದೂ ರಾಜಿಯಾಗುವವರಲ್ಲ. ಬೇರೆಯವರ ಅಗತ್ಯಕ್ಕೆ ಅನುಗುಣವಾಗಿ ತಮ್ಮ ಬರಹದ ಬದುವನ್ನು ಬದಲಿಸಿಕೊಂಡವರಲ್ಲ.

ಈ ಸಂಗತಿಗಳೆಲ್ಲ ಗೊತ್ತಿದ್ದೇ ನಾನು ಆ ಬೇಡಿಕೆಯಿಟ್ಟಿದ್ದೆ. ಅವರಿಗೆ ತುಸು ಕಸಿವಿಸಿಯಾಗಿರಲಿಕ್ಕೂ ಸಾಕು. ‘ಅಂಕಣ ಬರಹ
ನನಗೆ ಒಲಿಯುವಂಥದ್ದಲ್ಲ. ನಾನು ಡೆಡ್ ಲೈನ್ ವಿರೋಧಿ. ಅಂಕಣ ರೂಪುಗೊಳ್ಳುವುದೇ ಒತ್ತಡದಲ್ಲಿ’ ಎಂಬ ಸಣ್ಣ discomfort ನಿಂದಲೇ ಒಪ್ಪಿಕೊಂಡರು. ಅದು ಅವರು ನನ್ನ ಮೇಲಿನ ಪ್ರೀತಿಗೆ ಕಟ್ಟುಬಿದ್ದು ಒಪ್ಪಿಕೊಂಡಿದ್ದು ಎಂದು ನನ್ನ
ಒಳಮನಸ್ಸು ಹೇಳುತ್ತಿತ್ತು. (ಸುಮಾರು ಐವತ್ತು ವರ್ಷಗಳ ಹಿಂದೆ, ಅವರ ಕಾದಂಬರಿ ಧಾರಾವಾಹಿಯಾಗಿ ಮೊದಲು
ಪ್ರಕಟ ವಾಗಿದ್ದೂ ‘ಕನ್ನಡಪ್ರಭ’ದಲ್ಲಿ.) ಅಂತೂ ಡಾ.ಭೈರಪ್ಪ ಬರೆಯಲು ಒಪ್ಪಿದರು.

ಡಾ.ಭೈರಪ್ಪ ವಾರ ವಾರ ಕಾಲಂ ಬರೆಯುತ್ತಾರಂತೆ ಎನ್ನುವುದೇ ಕನ್ನಡ ಸಾರಸ್ವತ ಲೋಕಕ್ಕೆ ದೊಡ್ಡ ಅಚ್ಚರಿ. ‘ಕಾದಂಬರಿ ಬರೆಯುತ್ತಿದ್ದವರು ಕಾಲಂಬರಿಯುತ್ತಾರೆ’ ಎಂದು ನಾವು ಪ್ರಚಾರ ಮಾಡಿದ್ದೆವು. ಅಂಕಣ ಶುರುವಾಯಿತು. ಡಾ.ಭೈರಪ್ಪನವರ ಅಂಕಣವನ್ನು ಸ್ವಾಗತಿಸಿ, ಸಂಭ್ರಮಿಸಿ ಸಹಸ್ರಾರು ಓದುಗರು ಬರೆದರು. ಪತ್ರಿಕೆ ಪ್ರಸಾರ ಒಂದೇ ವಾರದಲ್ಲಿ ಐದು ಸಾವಿರ ಹೆಚ್ಚು ಎತ್ತರಕ್ಕೆ ಜಿಗಿಯಿತು. ಅವರು ಅಂಕಣ ಬರಹಕ್ಕೊಂದು ಶ್ರೇಷ್ಠತೆಯನ್ನು ತಂದುಕೊಟ್ಟರು. ಅದು ಸಂತೆಯಲ್ಲಿ ನೇಯ್ದ ಬರಹವಾಗಿರಲಿಲ್ಲ.

ಅವರು ಇಡೀ ವಾರ ಈ ಅಂಕಣಕ್ಕಾಗಿ ತಮ್ಮ ಓದು, ಅಧ್ಯಯನ, ಸಂಶೋಧನೆಯನ್ನು ಮೀಸಲಿರಿಸಬೇಕಾಯಿತು. ವಾರ ವಾರ
ಹೊಸ ಹೊಸ ವಿಷಯ ಎತ್ತಿಕೊಳ್ಳುವುದು, ಅದರ ಬಗ್ಗೆ ಆಳ ಅಧ್ಯಯನ ಮಾಡುವುದು, ಬರೆದು ಪುನಃ ಕಾವು ಕೊಡುವುದು,
ಆನಂತರ ಅಂಕಣವನ್ನು ಪತ್ರಿಕೆಗೆ ಕಳಿಸುವುದು… ಇವನ್ನೆಲ್ಲ ಡಾ.ಭೈರಪ್ಪ ಅತ್ಯಂತ ಪ್ರೀತಿಯಿಂದ ಮಾಡಿದರು.

ಆದರೆ ಇದರಿಂದ ಅವರ ಇಷ್ಟದ ಕಾದಂಬರಿ ಬರಹ ಅವಜ್ಞೆಗೊಳಗಾಯಿತು. ಇದು ಅವರ ಸುತ್ತಾಟ, ಪ್ರವಾಸದ ಮೇಲೂ ಪರಿಣಾಮ ಬೀರಿತು. ಅಂಕಣ ಬರಹ ಅವರನ್ನು ಎಲ್ಲೂ ಹೋಗದಂತೆ, ಮತ್ತಿನ್ನೇನನ್ನೂ ಮಾಡದಂತೆ ಕಟ್ಟಿ ಹಾಕಿತು. ಇದು ಅವರಿಗೆ ಖುಷಿ ಕೊಡುವ ಬದಲು, ಆಯಾಸವನ್ನುಂಟು ಮಾಡಿತು. ಆದರೂ ಸುಮಾರು ಎಂಟು ತಿಂಗಳು ಪಟ್ಟಾಗಿ ಬರೆದರು. (ಅವನ್ನೆಲ್ಲ ಸೇರಿಸಿ ಅವರು ಪುಸ್ತಕ ರೂಪದಲ್ಲಿ ತಂದಿದ್ದಾರೆ. ಅದರಲ್ಲಿ ಅಂಕಣ ಬರಹದ ಹಸಿತನ ಎಲ್ಲೂ ಕಾಣುವುದಿಲ್ಲ) ಕೊನೆಗೊಂದು ದಿನ ಸಾಕು ಎಂದುಬಿಟ್ಟರು. ಅವರು ಅಷ್ಟು ಬರೆದಿದ್ದೇ ಹೆಚ್ಚು. ಅವರು ಲಕ್ಷಕ್ಕೂ ಅಧಿಕ ಹಾಳೆಗಳನ್ನು ತುಂಬಿಸಿರಬಹುದು. ಆದರೆ ಅಂಕಣ ಬರೆಯಿರಿ ಅಂದರೆ, ಅದು ನಾವು ಅವರಿಗೆ ಕೊಡುವ ಅತ್ಯುಗ್ರ ಶಿಕ್ಷೆ !

ಇದೇ ಅಂಕಣ ಕೃಷಿಯನ್ನು ಖುಷವಂತ್ ಸಿಂಗ್ ಬರೋಬ್ಬರಿ ಐವತ್ತು ವರ್ಷ ಮಾಡಿದರು! ಅವರು ವಾರದಲ್ಲಿ ಎರಡು ಅಂಕಣ ಗಳನ್ನು ಬರೆಯುತ್ತಿದ್ದರು. ಅದು ನಲವತ್ತಕ್ಕೂ ಅಧಿಕ ಪತ್ರಿಕೆಗಳಲ್ಲಿ ಶುಕ್ರವಾರ ಮತ್ತು ಭಾನುವಾರ ಪ್ರಕಟವಾಗುತ್ತಿತ್ತು. ನಾನು ‘ವಿಜಯ ಕರ್ನಾಟಕ’ದಲ್ಲಿದ್ದಾಗ, ಅವರ ಅಂಕಣವನ್ನು ಇಂಗ್ಲಿಷಿನಿಂದ ಕನ್ನಡಕ್ಕೆೆ ಅನುವಾದ ಮಾಡಿ ಪ್ರಕಟಿಸುತ್ತಿದ್ದೆ.

ಅವರು ಭಾನುವಾರಕ್ಕಾಗಿ ಬರೆಯುತ್ತಿದ್ದ ಅಂಕಣವನ್ನು ಶುಕ್ರವಾರ ಸಿದ್ಧಗೊಳಿಸುತ್ತಿದ್ದರು. ಮಧ್ಯಾಹ್ನ ಒಂದು ಗಂಟೆ
ಐವತ್ತೈದು ನಿಮಿಷಕ್ಕೆ ಅವರ ಮನೆಗೆ ಹೋದರೆ, ಅಂಕಣ ಸಿದ್ಧವಾಗಿರುತ್ತಿರಲಿಲ್ಲ. ಎರಡು ಗಂಟೆಗೆ ಬೆಲ್ ಮಾಡಿದರೆ, ಅವರ ಕಾರ್ಯದರ್ಶಿ ಲಕ್ಷ್ಮಣ್ ಸಿಂಗ್ ಲಕೋಟೆಯನ್ನು ಕೈಗಿಡುತ್ತಿದ್ದ. ಈ ವಿಷಯದಲ್ಲಿ ಅವರದು ಅಂಥ ಸೈನಿಕ ಶಿಸ್ತು. ಅವರು ಒಂದು ವಾರವೂ ನೆಪ ಹೇಳದೇ ಬರೆದರು. ಅನಾರೋಗ್ಯದಲ್ಲಿದ್ದಾಗ, ಪ್ರವಾಸದಲ್ಲಿದ್ದಾಗ ಸಹ ಅವರ ಅಂಕಣ ನಿಲ್ಲಲಿಲ್ಲ. ಪ್ರತಿದಿನ ಬೆಳಗ್ಗೆ ಎರಡು ಗಂಟೆ ಓದದೇ ಮತ್ತು ಎರಡು ಗಂಟೆ ಬರೆಯದೇ ಅವರು ಮನೆಯಿಂದ ಹೊರ ಬೀಳುತ್ತಿರಲಿಲ್ಲ. ಸಣ್ಣ ಸಣ್ಣ ಸಂಗತಿಗಳನ್ನೂ ಸ್ವಾರಸ್ಯವಾಗಿ ಬರೆಯುವ ಮತ್ತು ಅಂಕಣ ತೋರಣ ಕಟ್ಟುವ ಕಲೆ ಸಿದ್ಧಿಸಿತ್ತು.

ಅವರ ಅಂಕಣಕ್ಕೆ ಸತ್ವ ಮತ್ತು ಸಾಹಿತ್ಯಕ ಗುಣವಿದ್ದುದರಿಂದಲೇ ಪುಸ್ತಕಗಳಾಗಿ ಹೊರಬಂದವು. ಅವರು ದಣಿವಿಲ್ಲದೇ,
ವಿಶ್ರಾಂತಿಯಿಲ್ಲದೇ, ಆದರೆ ಸ್ವಲ್ಪವೂ ಸುಸ್ತಾಗದೇ ಸ್ವಾರಸ್ಯವಾಗಿ ಬರೆದರು. ಅಂಕಣಕಾರರೆಲ್ಲರಿಗೆ ಪ್ರಾತಃಸ್ಮರಣೀಯನೆಂದರೆ ಆರ್ಟ್ ಬುಕವಾಲ್ಡ್. ಆತ ವಾರಕ್ಕೆ ಮೂರು ಅಂಕಣ ಬರೆಯುತ್ತಿದ್ದ. ಕೆಲವು ಪತ್ರಿಕೆಗಳಿಗೆ ದೈನಿಕ ಅಂಕಣವನ್ನೂ ಬರೆಯುತ್ತಿದ್ದ.
ಒಂದು ಸಂದರ್ಭದಲ್ಲಿ ಆತನ ದೈನಿಕ ಅಂಕಣ ಜಗತ್ತಿನ ಮುನ್ನೂರಕ್ಕೂ ಅಧಿಕ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು.

ಅದು ‘ದಿ ಹಿಂದೂ’ ಪತ್ರಿಕೆಯಲ್ಲೂ ಸೋಮವಾರ ಪ್ರಕಟವಾಗುತ್ತಿತ್ತು. ಆತ ಎಂದೂ ಬತ್ತದ ಅಂತರಗಂಗೆ! ಆತ ಸುಮಾರು ಐವತ್ತೆರಡು ವರ್ಷಗಳ ಕಾಲ ಸುಮಾರು ಹತ್ತು ಸಾವಿರ ಅಂಕಣಗಳನ್ನು ಬರೆದ. ಆತ ಬರೆದಿದ್ದನ್ನೆಲ್ಲಾ ಸೇರಿಸಿದರೆ ಸುಮಾರು ಐನೂರು ಪುಸ್ತಕಗಳಾಗಬಹುದು! ಕೊನೆಗಾಲದಲ್ಲಿ ಐದು ತಿಂಗಳು ಆಸ್ಪತ್ರೆಯಲ್ಲಿದ್ದ. ವಾರಕ್ಕೆ ಮೂರು ಸಲ ಡಯಾಲಿಸಿಸ್
ಮಾಡಬೇಕಿತ್ತು. ಗ್ಯಾಂಗ್ರಿನ್‌ನಿಂದ ಪಾದವನ್ನು ಕತ್ತರಿಸಲಾಗಿತ್ತು. ಆದರೂ ಬುಕವಾಲ್ಡ್ ಅಂಕಣ ನಿಲ್ಲಲಿಲ್ಲ. ಆತನ ಉಸಿರಾಟ
ನಿಂತಾಗಲೇ ಅದೂ ನಿಂತಿತು! ಅಂಕಣದ ಜತೆಗೆ ಮೂವತ್ತು ಪುಸ್ತಕಗಳನ್ನೂ ಬರೆದ. ಹಾಗಂತ ಅವನೇನು ಬಹಳ ಓದಿಕೊಂಡವ ನಲ್ಲ. ಆತ ಹೈಸ್ಕೂಲನ್ನು ಸಹ ಮುಗಿಸಿರಲಿಲ್ಲ. ಆದರೆ ಕೈಗೆ ಸಿಕ್ಕ ಪುಸ್ತಕಗಳನ್ನೆಲ್ಲಾ ಓದಿ ಓದಿ ಬರೆಯುವುದನ್ನು ರೂಢಿಸಿ ಕೊಂಡ, ಬರಹವನ್ನು ಬದುಕಾಗಿಸಿಕೊಂಡ. ಆತನ ಅಂಕಣಗಳಿಗೆ ಪ್ರತಿಷ್ಠಿಿತ ಪುಲಿಟ್ಜರ್ ಪ್ರಶಸ್ತಿಯೂ ಬಂತು.

ಖರೆ ಹೇಳ್ತೇನೆ, ರಾತ್ರಿ ಏಳೂವರೆಯ ತನಕ ನಾನು ಏನು ಬರೆಯುತ್ತೇನೆ ಎಂಬುದೇ ಗೊತ್ತಿರಲಿಲ್ಲ. ರಾತ್ರಿ ಒಂಬತ್ತೂವರೆಗೆ
ಡೆಡ್ ಲೈನ್. ಒಂದೂವರೆ ಗಂಟೆಯೊಳಗೆ ಬಸಿರಾಗಿ ಹೆರಬೇಕಿತ್ತು, ಹೆತ್ತಿದ್ದೇನೆ. ಶನಿವಾರದಂದು ಭಾನುವಾರದ ‘ಇದೇ ಅಂತರಂಗ ಸುದ್ದಿ’ ಬರೆಯುವ ತನಕ ಇನ್ನೆರಡು ದಿನ ಅಂಕಣ ಪ್ರಸವ ವೈರಾಗ್ಯ!