Sunday, 13th October 2024

ಪಾಶ್ಚಾತ್ಯ ಬ್ರ‍್ಯಾಂಡುಗಳ ಗಂಜಿಕೇಂದ್ರ

ಶಿಶಿರ ಕಾಲ

shishirh@gmail.com

ಅಮೆರಿಕದಲ್ಲಿ ಚೀಪ್ ಎನ್ನುವ ಬ್ರಾಂಡುಗಳು, ಭಾರತದಲ್ಲಿ ಹೆಸರುವಾಸಿಯಾಗಿವೆ. ಭಾರತದ ರುಚಿ ಹತ್ತಿಸಿಕೊಂಡ ಅಮೆರಿಕದ ಬ್ರಾಂಡುಗಳು ಅಮೆರಿಕದಲ್ಲಿ ಈಗ 25 ವರ್ಷದ ಹಿಂದೆ ತಂದ ಯೋಜನೆ, ಮಾರ್ಕೆಟಿಂಗ್ ತಂತ್ರಗಳನ್ನು ಭಾರತದಲ್ಲಿ ಯಥಾವತ್ತು ಬಳಸಿ ಯಶಸ್ಸನ್ನೂ ಪಡೆಯುತ್ತಿವೆ.

ವ್ಯಕ್ತಿಯೇ ಬ್ರಾಂಡ್ ಆಗಿ ಪ್ರಭಾವ ಬೀರುವವರು ನಮ್ಮ ಸುತ್ತ ಹಲವರಿದ್ದಾರೆ. ಸಚಿನ್, ಧೋನಿ, ವಿರಾಟ್, ಶಾರುಖ್, ಸಲ್ಮಾನ್, ಅಮಿತಾಬ್ ಇವರೆಲ್ಲ ಖುದ್ದು ಬ್ರಾಂಡ್‌ಗಳು. ಇವರು ಅನುಮೋದಿಸಿದರೆ ಬ್ರಾಂಡೇ ಅಲ್ಲದ್ದೂ ಬ್ರಾಂಡ್ ಅನ್ನಿಸಿಕೊಳ್ಳಲು ಶುರುವಾಗುತ್ತದೆ.

ಇನ್ನು ಬಟ್ಟೆ, ಶೂ, ವಾಚು, ಮೊಬೈಲ, ಕಂಪ್ಯೂಟರ್, ಐಸ್‌ಕ್ರೀಮ, ಎಂಟಿಆರ್- ಹೀಗೆ, ವಸ್ತುಗಳನ್ನು ತಯಾರಿಸುವ ಬ್ರಾಂಡ್ ಇನ್ನೊಂದು ಕಡೆ. ಬ್ರಾಂಡ್ ಎಂದರೆ ಲೋಗೋ ಅಲ್ಲ, ಹೆಸರೂ ಅಲ್ಲ. ಬ್ರಾಂಡ್ – ಅದು ಗ್ರಾಹಕನನ್ನು ತನ್ನತ್ತ ಸೆಳೆಯುವ, ಹಿಡಿದಿಟ್ಟು ಕೊಳ್ಳುವ ಶಕ್ತಿ. ಗ್ರಾಹಕ ಕಣ್ಣು ಮುಚ್ಚಿ ಆ ಹೆಸರಿನಡಿಯಲ್ಲಿ ಕೊಟ್ಟದ್ದನ್ನು ಅನುಮಾನ ವಿಲ್ಲದೇ – ಮಾರಾಟಗಾರ ನಿಂದ ಸ್ವೀಕರಿಸುವ ಒಂದು ಲಗಾಮು. ಹಲವು ಬಾರಿ ಇದೆಲ್ಲ ಅಷ್ಟಕ್ಕೇ ಸೀಮಿತವಾಗಿದ್ದರೆ ಒಳ್ಳೆಯದಿತ್ತು ಅನ್ನಿಸುವುದಿದೆ. ಆದರೆ ಬ್ರಾಂಡ್‌ನ ವ್ಯಾಪ್ತಿ ಅದರಾಚೆ ಹರಡಿಕೊಳ್ಳುತ್ತದೆ.

ಇದು ವೈಯಕ್ತಿಕ ಬ್ರಾಂಡ್ ಅನ್ನು ಇನ್ನೊಂದು ಬ್ರಾಂಡಿನ ಬೆಲೆ ಹೆಚ್ಚಿಸಲು ವ್ಯಾವಹಾರಿಕ ವಾಗಿ ಬಳಸುವ ಕೆಲಸ. ಇವು ಮಿತಿ ಮೀರಿದಾಗ ಸಮಾಜ ಅದಕ್ಕೆ ವ್ಯತಿರಿಕ್ತವಾಗಿ ಸ್ಪಂದಿಸಿ ದ್ದಿದೆ, ಅಪಹಾಸ್ಯಕ್ಕೆ ಗುರಿಯಾಗಿರುವುದೂ ಇದೆ. ಆದರೂ ಅದು ಚಾಲ್ತಿಯಲ್ಲಿದೆ – ಜಾಗತಿಕ ವಾಗಿ. ಬ್ರಾಂಡ್ ಗ್ರಾಹಕನ ಖರೀದಿಯನ್ನು ನಿರ್ದೇಶಿಸುತ್ತದೆ. ಇಂದು ಬ್ರಾಂಡ್ ಎಂದರೆ ಕೇವಲ ನಂಬಿಕೆ ಯಾಗಿ ಉಳಿದಿಲ್ಲ. ಇಂದು ಗ್ರಾಹಕ ಬ್ರಾಂಡಿನೊಂದಿಗೆ ಅದೆಷ್ಟು ಥಳುಕು ಹಾಕಿಕೊಳ್ಳುತ್ತಾನೆ ಎಂದರೆ ಆ ಬ್ರಾಂಡ್ ಕ್ರಮೇಣ ಆತನ ಭಾಗವಾಗಿ, ನಡತೆ – ಹಾವ ಭಾವವನ್ನು ನಿರ್ದೇಶಿಸುವ ಮಟ್ಟಿಗೆ ಆವರಿಸಿರುತ್ತದೆ – ಹೆಚ್ಚಿನ ಬಾರಿ ಆತನ ವ್ಯಕ್ತಿತ್ವವನ್ನೇ ಮೀರಿ ಬಿಟ್ಟಿರುತ್ತದೆ.

ನೀವು ಆಪಲ್ ಫೋನ್ ಹೊಂದಿರುವವರ ಬಳಿ ಮಾತಾಡುತ್ತ ‘ಕಿಡ್ನಿ ಮಾರಿ ತಗೊಂಡ್ಯಾ’ ಎಂದು ಕಿಚಾಯಿಸಿದರೆ ಆತನಿಗೆ ಕಿರಿಕಿರಿ ಯಾಗುವುದಕ್ಕೆ ಕುಹಕವನ್ನು ಮೀರಿದ ಕಾರಣವಿದೆ. ಆಪಲ್ ಅಂತ ಅಲ್ಲ, ಯಾವುದೇ ಬ್ರಾಂಡ್‌ನ ಜತೆ ವ್ಯಕ್ತಿತ್ವವನ್ನು ಜತೆಯಾಗಿಸಿಕೊಳ್ಳುವ ಯಾರನ್ನೇ ಆ ಬ್ರಾಂಡಿನ ಬಗ್ಗೆ ಹಗುರವಾಗಿ ಮಾತನಾಡಿಸಿದಾಗ ಆತ ತಕ್ಷಣ ಅದನ್ನು ಪ್ರತಿರೋಧಿಸುತ್ತಾನೆ – ಏಕೆಂದರೆ ಆತ ಆ ಬ್ರಾಂಡ್ ತನ್ನ ವ್ಯಕ್ತಿತ್ವದ ಭಾಗವಾಗಿದೆ ಎಂದೇ ಅಲ್ಲಿ ಸ್ವೀಕರಿಸಿಯಾಗಿರುತ್ತದೆ.

ಹಾಗಾಗಿ ಸಂಬಂಧವೇ ಇಲ್ಲದ, ಅದ್ಯಾವುದೋ ಒಂದು ಕಂಪನಿಯ ಬ್ರಾಂಡ್‌ನ ಪರವಾಗಿ ವಕಾಲತ್ತು ವಹಿಸುತ್ತಾನೆ. ಮಾರ್ಟಿ ನಿಯುಮೆರ್‌ನ ‘ದಿ ಬ್ರಾಂಡ್ ಗ್ಯಾಪ್’ ಪುಸ್ತಕದಲ್ಲಿ ಒಂದು ಕಡೆ ಬ್ರಾಂಡ್ ಎಂದರೇನು ಎನ್ನುವಾಗ ಕಂಪನಿ, ಲೋಗೋ ಇವೆಲ್ಲ ಬ್ರಾಂಡ್ ಅಲ್ಲ, ನಿಜವಾದ ಬ್ರಾಂಡ್ ಗ್ರಾಹಕ ಎನ್ನುತ್ತಾನೆ. ಬ್ರಾಂಡಿಂಗ್ ಎಂದರೆ ಅದೊಂದು ಸಾಮೂಹಿಕ – ಸಾಮಾಜಿಕ ಮೈಂಡ್ ಗೇಮ. ಬಿಸಿನೆಸ್‌ಗೆ ಬ್ರಾಂಡ್ ವ್ಯಾಲ್ಯೂ ಸರ್ವಸ್ವ. ಅದನ್ನು ಅರಿತ ಕಂಪನಿ ಉಳಿದುಕೊಳ್ಳುತ್ತವೆ.

ಉಳಿದವು ಮಕಾಡೆ ಮಲಗುತ್ತವೆ. ಇವತ್ತು ಹೇಳಲು ಹೊರಟಿರುವುದು ಬ್ರಾಂಡಿಂಗ್ ತಂತ್ರದ ಬಗ್ಗೆ ಅಲ್ಲ. ಅದು ಪುಸ್ತಕ ವಾಗು ವಷ್ಟು ದೊಡ್ಡ ವಿಷಯ. ಬದಲಿಗೆ ಬ್ರ್ಯಾಂಡ್ – ಈ ನಂಬಿಕೆಯನ್ನೇ ಬಂಡವಾಳವಾಗಿಸಿಕೊಳ್ಳುವುದರ ಬಗ್ಗೆ. ಭಾರತ ಜಾಗತಿಕ, ಅದರಲ್ಲಿಯೂ ಅಮೆರಿಕದ ಬ್ರಾಂಡುಗಳ ನಿರಾಶ್ರಿತರ ಶಿಬಿರವಾಗುತ್ತಿರುವುದರ ಬಗ್ಗೆ. ಇತ್ತೀಚೆಗೆ ಕೆಲವು ವಿಡಿಯೋ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದೆ. ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ‘ಐಕಿಯಾ’ ಎಂಬ ಫರ್ನಿಚರ್ ಅಂಗಡಿ ತೆರೆದ ಸನ್ನಿವೇಶ.

ಐಕಿಯಾ ಸ್ವೀಡನ್ನಿನದು. ಅದು ಬೆಂಗಳೂರಿನಲ್ಲಿ ಆರಂಭವಾದ ದಿನ ಜನರು ಮೈಲುಗಟ್ಟಲೆ ಸರತಿಯಲ್ಲಿ ನಿಂತಿದ್ದರು. ಖರೀದಿ ಸುವುದಕ್ಕಿಂತ ಹೇಗಿದೆ, ಏನಿದೆ ಎನ್ನುವ ಕುತೂಹಲವಿತ್ತೇನೋ? ಈ ಅಂಗಡಿ ಬಹುಶಃ ಹೈದರಾಬಾದಿನಲ್ಲಿ ಶಾಖೆ ತೆರೆದಾಗ ಕೂಡ ಇಂಥದ್ದೇ ಸನ್ನಿವೇಶ ಅಲ್ಲಿ ನಿರ್ಮಾಣವಾಗಿತ್ತು. ಈಗ ಸುಮಾರು ವರ್ಷದ ಹಿಂದೆ ಸ್ಟಾರ್ ಬಕ್ಸ್ ಎಂಬ ಕಾಫಿ ಶಾಪ್ ಮುಂಬಯಿ ಯಲ್ಲಿ ತೆರೆದಿತ್ತು.

ಇನ್ನು‘ಡಂಕಿನ್ ಡೋನಟ್’ ಎನ್ನುವ ಸಕ್ಕರೆ ತುಂಬಿದ ಬನ್ನು ಮತ್ತು ಕಾಫಿ ಮಾರುವ ಅಂಗಡಿ ಬೆಂಗಳೂರಿನಲ್ಲಿ ತೆರೆದಾಗ
ಕೂಡ ಇಂಥದ್ದೇ ಸನ್ನಿವೇಶ. ಟ್ಯಾಕೋಬೆಲ, ಓಊಇ ಕರಿದ ಚಿಕನ್ ಮಾರುವ ಅಮೆರಿಕದ ಫಾಸ್ಟ್ ಫುಡ್ ತೆರೆದಾಗ, ಮೊದಲ ಬಾರಿ ಸಬ್ ವೇ, ಮ್ಯಾಕ್ ಡೊನಾಲ್ಡ್ ತೆರೆದಾಗ – ಹೀಗೆ ಉದ್ದಕ್ಕೆ ಪಟ್ಟಿ ಮಾಡುತ್ತ ಹೋಗಬಹುದು. ಇವೆಲ್ಲದರಲ್ಲಿ ಅಮೆರಿಕನ್ ಬ್ರಾಂಡು ಗಳದ್ದೇ ಹೆಚ್ಚಿನ ಸಂಖ್ಯೆ.

ಅದೇಕೋ ಗೊತ್ತಿಲ್ಲ – ಭಾರತೀಯರಂತೂ ಈ ಬ್ರಾಂಡುಗಳಿಗೆ ಮುಗಿಬೀಳುತ್ತಾರೆ. ಇದೆಲ್ಲ ಪ್ರಾಡಕ್ಟ್‌ನ ಗುಣವಿಶೇಷಕ್ಕಿಂತ  ಒಂದು ರೀತಿಯ ಬದುಕಿನ ಸ್ಟೇಟಸ್ ಅನ್ನು ಬಿಂಬಿಸುವ ಬ್ರಾಂಡ್‌ಗಳಾಗಿ ಭಾರತಕ್ಕೆ ನುಗ್ಗುತ್ತಿವೆ. ಭಾರತಕ್ಕೆ ಬಂದಾಗ ಇವೆಲ್ಲ ವ್ಯಕ್ತಿತ್ವ ರೂಪಕವಾಗಿ ಬಿಡುತ್ತವೆ. ಮಸಾಲೆ ದೋಸೆ ತಿಂದೆ ಎನ್ನುವುದಕ್ಕಿಂತ ಡಂಕಿನ್‌ನಲ್ಲಿ ಕಾಫಿ ಕುಡಿದೆ ಎಂದರೆ ಏನೋ ಒಂದು ಹಮ್ಮು – ಬಿಮ್ಮು.

ಅಸಲಿಗೆ ಈ ಹೇಳಿದ, ಹೇಳದಿರದ ಇನ್ನುಳಿದ ಕೆಲವು ಬ್ರಾಂಡುಗಳಿಗೆ ಭಾರತದಲ್ಲಿದ್ದಷ್ಟು ಕಿಮ್ಮತ್ತು ಅದರ ಹುಟ್ಟೂರು ಅಮೆರಿಕ ದಲ್ಲಿ ಇಲ್ಲ. ಭಾರತದಲ್ಲಿ ಮ್ಯಾಕ್ ಡೊನಾಲ್ಡ್ ಶ್ರೀಮಂತರ, ಮೇಲ್ಮಧ್ಯಮ ವರ್ಗದವರ ಆಹಾರ, ಅಲ್ಲಿ ಒಂದು ಫ್ಯಾಶನ್. ಆದರೆ ಅಮೆರಿಕದಲ್ಲಿ ಮ್ಯಾಕ್ ಡೊನಾಲ್ಡ್ ತಿನ್ನುವವರೆಂದರೆ ಅವರು ಬಡವರು, ಅಥವಾ ಅನ್ಯ ಆಹಾರ ಸಿಗದ ಅನಿವಾರ್ಯ ಉಳ್ಳವರು ಎಂದರ್ಥ. ಅಮೆರಿಕದಲ್ಲಿ ಎಲ್ಲಿ ಅತಿ ಹೆಚ್ಚು ಬಡತನವಿದೆಯೋ ಅಲ್ಲ ಮ್ಯಾಕ್ ಡೊನಾಲ್ಡ್ ಹೆಚ್ಚಿನ  ಖ್ಯೆಯಲ್ಲಿರುತ್ತದೆ.

ವಾಷಿಂಗ್ಟನ್ ಡಿಸಿ – ವೈಟ್ ಹೌಸ್‌ನ ಕೆಲ ಮೈಲು ದೂರದಲ್ಲಿ ಅಮೆರಿಕದಲ್ಲಿನ ಅತ್ಯಂದ ಬಡ ಬಡಾವಣೆಗಳಿವೆ. ಅಲ್ಲಿ ಮ್ಯಾಕ್ ಡೊನಾಲ್ಡನ ಸಂಖ್ಯೆ ಪ್ರತೀ ಚದರ ಮೈಲಿಗೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿದೆ. ಅಮೆರಿಕದಲ್ಲಿ ಒಳ್ಳೆಯ ರೆಸ್ಟೋರೆಂಟ್‌ನಲ್ಲಿ ಊಟ ಮಾಡಬೇಕೆಂದರೆ ಅಜಮಾಸು ಐವತ್ತು ಡಾಲರ್ ಬೇಕು – ಆದರೆ ಮ್ಯಾಕ್ ಡೊನಾಲ್ಡ್ ನಲ್ಲಿ ನಾಲ್ಕೈದು ಡಾಲರ್‌ಗೆ ಹೊಟ್ಟೆ ತುಂಬಿಸಿಕೊಳ್ಳಬಹುದು.

ಮಾಲುಗಳಲ್ಲಿ ನೀರಿನ ಬಾಟಲಿ ಡಾಲರ್‌ಗೆ ಮಾರಾಟವಾಗುತ್ತದೆ – ಮ್ಯಾಕ್ ಡೊನಾಲ್ಡನ ಬರ್ಗರ್‌ನ ಬೆಲೆಯೂ ಅಷ್ಟೇ.
ಅಮೆರಿಕದ ಮೂಲೆ ಮೂಲೆಗಳಲ್ಲಿ ಸಬ್ ವೇ ಸಿಗುತ್ತದೆ. ಅಮೆರಿಕದ ಉದ್ದಗಲಕ್ಕೆ ಇಪ್ಪತ್ತೆರಡು ಸಾವಿರ ಸಬ್ ವೇ ಗಳಿವೆ. ಸಬ್ ವೇ ಅಮೆರಿಕದಲ್ಲಿ ಇಂದು ವ್ಯವಹಾರ ಮಾಡಲು ಅಕ್ಷರಶಃ ಒzಡುತ್ತಿದೆ. ಕಳೆದ ಒಂದೇ ವರ್ಷದಲ್ಲಿ ಸುಮಾರು ಎರಡು ಸಾವಿರ ಸಬ್ ವೇ ದುಕಾನುಗಳು ಇಲ್ಲಿ ಮುಚ್ಚಿವೆ. ಒಂದು ಕಾಲದಲ್ಲಿ ಸಬ್ ವೇಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮ್ಯಾಕ್ ಡೊನಾಲ್ಡ್ ಗಳು ಅಮೆರಿಕ ದಲ್ಲಿದ್ದವು.

ಇಂದು ಉಳಿದುಕೊಂಡಿರುವುದು ಕೇವಲ ಹದಿನೈದು ಸಾವಿರ. ಇನ್ನು ಐಕಿಯಾ – ಅಮೆರಿಕದಲ್ಲಿ ಪೀಠೋಪಕರಣವನ್ನು ಐಕಿಯಾ
ದಿಂದ ತಂದದ್ದು ಎಂದರೆ ಅದು ಚೀಪ್ ಎನ್ನುವ ಭಾವನೆ ಬಹುತೇಕರಲ್ಲಿದೆ. ಕಾಫಿ ಪ್ರಿಯರಿಗೆ ಸ್ಟಾರ್ ಬಕ್ಸ್ ಇಷ್ಟವಾದದ್ದೇ ಆದರೂ ಅದನ್ನೂ ಮೀರಿದ ಕೆಲವು ಬ್ರಾಂಡುಗಳತ್ತ ಇಲ್ಲಿನ ಜನರು ಮುಖಮಾಡಿರುವುದು ಪ್ರಸ್ತುತ. ಅಮೆರಿಕನ್ನರು ಬ್ರಾಂಡಿಂಗ್‌ ನಲ್ಲಿ ಎತ್ತಿದ ಕೈ – ಅನುಮಾನವೇ ಇಲ್ಲ.

ಇಂದು ಜಗತ್ತಿನ ಅತ್ಯಂತ ಬೆಲೆಯುಳ್ಳ ಬ್ರಾಂಡುಗಳಲ್ಲಿ ಹೆಚ್ಚಿನವೆಲ್ಲ ಅಮೆರಿಕದವೇ. ಅದರಲ್ಲಿಯೂ ಫಾಸ್ಟ್ ಫುಡ್ ಬ್ರಾಂಡ್ ಎಂದರೆ ಅದು ಅಮೆರಿಕದ್ದೇ ಇರುತ್ತದೆ. ಭಾರತಕ್ಕೆ ಇನ್ನೂ ಕಾಲಿಡದ ಬಹಳಷ್ಟು ಅಮೇರಿಕನ್ ಫಾಸ್ಟ್ ಫುಡ್‌ಗಳಿವೆ. ಅಮೆರಿಕ ದಲ್ಲಿ ಫಾಸ್ಟ್ಫುಡ್ ಬಳಕೆ ಅತ್ಯಂತ ಹೆಚ್ಚು. ಇದು ಮಿತಿ ಮೀರಿದ್ದು ಈಗ ಇಪ್ಪತ್ತೈದು ತೈದು ವರ್ದಿಂದೀಚೆ. ಆ ಕಾರಣಕ್ಕೇ ಇಂದು ಇಲ್ಲಿನ ಶೇ.೭೦ ಜನ ಒಂದೋ ಅಧಿಕ ತೂಕದವರು ಅಥವಾ ಸ್ಥೂಲಕಾಯದವರು.

ಕೆಲವರು ಎಷ್ಟು ಸ್ಥೂಲಕಾಯ ಎಂದರೆ ವಿಮಾನದಲ್ಲಿ ಎರಡು ಸೀಟ್ ಕಾದಿರಿಸುವಷ್ಟು, ತಮಾಷೆಗಲ್ಲ! ಏಕೆಂದರೆ ಅವರು ಒಂದೇ ಸೀಟಿನಲ್ಲಿ ಹಿಡಿಯುವುದಿಲ್ಲ. ಗಿಗಿಗಿಔ ಸೈಜ್ ಬಟ್ಟೆಗಳು ಅತಿ ಹೆಚ್ಚು ಮಾರಾಟವಾಗುವುದು ಬಹುಶಃ ಅಮೆರಿಕದಲ್ಲಿ ಹೆಚ್ಚು. ಇದೆಲ್ಲದರ ಕ್ರೆಡಿಟ್ ನೇರವಾಗಿ ಸಲ್ಲಬೇಕಾದದ್ದು ಈ ಫಾಸ್ಟ್ ಫುಡ್ ಕಂಪನಿಗಳಿಗೆ. ಅಗ್ಗದ, ಅತಿಹೆಚ್ಚು ಕ್ಯಾಲೊರಿಯಿರುವ ಆಹಾರವನ್ನು ಇವು ಬ್ರಾಂಡಿಂಗ್ ಮಾಡುವ ರೀತಿ ಹಾಗಿದೆ.

ಆದರೆ ಈಗೀಗ, ಅದರಲ್ಲಿಯೂ ಕರೋನಾ ಸಾವಿನ ಪ್ರಮಾಣವನ್ನು ಕಂಡ ನಂತರ ಅಮೆರಿಕದ ಜನರಲ್ಲಿ ಎಲ್ಲಿಲ್ಲದ ಮಟ್ಟಿಗೆ ಆರೋಗ್ಯದತ್ತ ಎಚ್ಚರಿಕೆ ಮೂಡಿದೆ. ಕ್ರಮೇಣ ಈ ಫಾಸ್ಟ್ ಫುಡ್‌ಗಳು, ಕೊಕ್, ಪೆಪ್ಸಿ ಮೊದಲಾದ ಸಕ್ಕರೆ ತುಂಬಿದ ಪೇಯಗಳನ್ನು ಲೆಕ್ಕ ಮೀರಿ ಸೇವಿಸಬಾರದು ಎನ್ನುವ ಅರಿವು ದಿನಕಳೆದಂತೆ ಹೆಚ್ಚುತ್ತಿದೆ. ಇವೆಲ್ಲವುಗಳ ಸರಾಸರಿ ಬಳಕೆ ದಿನಗಳೆದಂತೆ ಕ್ಷೀಣಿಸು ತ್ತಿದೆ.

ಇಲ್ಲಿನ ಫಾಸ್ಟ್ ಫುಡ್‌ನ ಹಾವಳಿ ಎಷ್ಟಿದೆಯೆಂದರೆ ಮಕ್ಕಳಿಗೆ ಏನನ್ನು ತಿನ್ನಬೇಕು – ಏನನ್ನು ತಿನ್ನಬಾರದು ಎಂದು ಪಾಠದ ಭಾಗವಾಗಿಸುವಷ್ಟು. ಆ ಕಾರಣಕ್ಕೆ ಮತ್ತು ಮಾರಾಟ ವಿಸ್ತರಣೆಗೆ ಇಂದು ಅಮೇರಿಕನ್ ಫಾಸ್ಟ್ ಫುಡ್‌ಗಳು ಭಾರತದತ್ತ ಮುಖ
ಮಾಡಿವೆ. ಕೇವಲ ಫಾಸ್ಟ್ ಫುಡ್‌ಗಳಷ್ಟೇ ಅಲ್ಲ, ಬಹಳಷ್ಟು ಅಮೆರಿಕದಲ್ಲಿ ಚೀಪ್ ಎನ್ನುವ ಬ್ರಾಂಡುಗಳು ಕೂಡ ಇಂದು
ಭಾರತದಲ್ಲಿ ಹೆಸರುವಾಸಿಯಾಗಿವೆ. ಭಾರತದ ರುಚಿ ಹತ್ತಿಸಿಕೊಂಡ ಅಮೆರಿಕಾದ ಬ್ರಾಂಡುಗಳು ಅಮೆರಿಕದಲ್ಲಿ ಈಗ ಇಪ್ಪತ್ತೈದು ವರ್ಷದ ಹಿಂದೆ ತಂದ ಯೋಜನೆ, ಮಾರ್ಕೆಟಿಂಗ್ ತಂತ್ರಗಳನ್ನು ಭಾರತದಲ್ಲಿ ಯಥಾವತ್ತು ಬಳಸುತ್ತಿವೆ ಮತ್ತು ಯಶಸ್ಸನ್ನೂ ಪಡೆಯುತ್ತಿವೆ.

ಇದೆಲ್ಲದರ ಹಿಂದೆ ಕೆಲಸ ಮಾಡುತ್ತಿರುವುದು ಭಾರತೀಯ ಯುವವರ್ಗದ ಅತಿ ಎನ್ನಿಸುವಷ್ಟು ಪಾಶ್ಚಾತ್ಯ ಒಲವು ಎನ್ನುವುದು ಬಿಡಿಸಿ ಹೇಳಬೇಕಿಲ್ಲ. ಇದಕ್ಕೆಲ್ಲ ಕಾರಣ ಸ್ಟೇಟಸ್ಸು ಮತ್ತು ನಾವು ಮಾಡರ್ನ್ ಎಂದು ಗುರುತಿಸಿಕೊಳ್ಳಬೇಕೆಂದರೆ ಇದನ್ನೆಲ್ಲ ಸೇವಿಸಬೇಕು, ಖರೀದಿಸಬೇಕೆನ್ನುವ ಅಪ್ರಬುದ್ಧತೆಯಲ್ಲದೇ ಇನ್ನೊಂದಲ್ಲ. ಈ ಅಮೇರಿಕನ್ ಬ್ರಾಂಡುಗಳ ಕ್ರೇಜ್ ಕೇವಲ ಭಾರತ
ದಲ್ಲಷ್ಟೇ ಇದೆಯೆಂದೇನೂ ಅಲ್ಲ. ಬಹಳಷ್ಟು ದೇಶಗಳಲ್ಲಿ ಈ ಬ್ರಾಂಡುಗಳ ಹಾವಳಿಯಿದೆ – ಜನರಲ್ಲಿ ಅಷ್ಟೇ ಉತ್ಕಟತೆಯಿದೆ.

ಉದಾಹರಣೆಗೆ ಗಾಜಾದಲ್ಲಿ ಓಊಇ ಚಿಕನ್ ಅನ್ನು ಟನೆಲ್ಲುಗಳಲ್ಲಿ ಕಳ್ಳ ಸಾಗಣೆ ಮಾಡಿ ಮಾರಲಾಗುತ್ತದೆ ಎನ್ನುವ ವರದಿ ಕೆಲ ವರ್ಷಗಳ ಹಿಂದೆ ಬಂದಿತ್ತು. ಚೀನಾದಲ್ಲಿ ಕೊಕ್ ಮತ್ತು ಕೆಲವು ಅಮೆರಿಕನ್ ಫಾಸ್ಟ್ ಫುಡ್ ನ ಹಾವಳಿ ಎಷ್ಟಿದೆಯೆಂದರೆ ಅಲ್ಲಿನ ಸರಕಾರ ಕೆಲ ಬ್ರಾಂಡ್‌ಗಳನ್ನು ನಿಷೇಧಿಸಿದೆ, ಇನ್ನು ಕೆಲವು ಬ್ರಾಂಡುಗಳ ಜಾಹೀರಾತುಗಳಿಗೆ ನಿಷೇಧವಿದೆ. ಒಟ್ಟಾರೆ ಇತ್ತೀಚೆಗೆ ಖುದ್ದು ಅಮೆರಿಕನ್ನರೇ ಇಷ್ಟಪಡದ, ಇಲ್ಲಿ ಅಗ್ಗವೆನ್ನಿಸಿಕೊಂಡ, ಕ್ರಮೇಣ ಸಮಾಜ ದೂರ ತಳ್ಳುತ್ತಿರುವ ಬ್ರಾಂಡ್ ಗಳು ಭಾರತ ವನ್ನು ನಿರಾಶ್ರಿತ ಶಿಬಿರವಾಗಿಸಿಕೊಳ್ಳುತ್ತಿವೆ. ಎಲ್ಲಿಯವರೆಗೆ ಪಾಶ್ಚಾತ್ಯ ಎಂದರೆ ಆಧುನಿಕತೆ ಎನ್ನುವ ಭ್ರಮೆಯಿರುತ್ತದೆಯೋ ಅಲ್ಲಿಯವರೆಗೆ ಇದು ಹೀಗೆಯೇ ಮುಂದುವರಿಯುತ್ತದೆ.

ಇದಕ್ಕೆ ಸೆಡ್ಡು ಹೊಡೆಯುವ ಭಾರತೀಯ ಬ್ರಾಂಡ್‌ಗಳು ಬೆಳೆಯಬೇಕಿದೆ, ಮುಖ್ಯವಾಗಿ ನಾವು ಅದನ್ನು ಸ್ವೀಕರಿಸಿ ಬೆಳೆಸಬೇಕಾ ಗಿದೆ. ಗಾಂಧಿಯಿಂದ ರಾಜೀವ್ ದೀಕ್ಷಿತ್‌ವರೆಗೆ ಎಲ್ಲರೂ ಹೇಳಿದ್ದೂ ಇದನ್ನೇ. ನಾವು ಮಾತ್ರ ಇನ್ನೂ ಪಾಶ್ಚಿಮಾತ್ಯ ಮಾನಸಿಕ ದಾಸ್ಯದಿಂದ ಹೊರಬಂದಂತಿಲ್ಲ.