ವೀಕೆಂಡ್ ವಿತ್ ಮೋಹನ್
camohanbn@gmail.com
ಪಾಶ್ಚಿಮಾತ್ಯ ದೇಶಗಳು ಸಣ್ಣ ವಿಷಯಗಳನ್ನು ದೊಡ್ಡ ಮಟ್ಟದಲ್ಲಿ ಮಾರ್ಕೆಟಿಂಗ್ ಮಾಡುವುದರಲ್ಲಿ ನಿಸ್ಸೀಮರು, ಸಣ್ಣದೊಂದು ವಿಷಯವನ್ನು ದೊಡ್ಡದೆಂಬಂತೆ ಬಿಂಬಿಸಿ ತಮ್ಮ ಬೆನ್ನು ತಟ್ಟಿಕೊಂಡು ಜಗತ್ತಿನ ದೊಡ್ಡಣ್ಣನಂತೆ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಾರೆ. ಅಮೆರಿಕದ ದೊಡ್ಡ ಕುಳಗಳು ೨೦ ನೆಯ ಶತಮಾನದಲ್ಲಿ ತಮ್ಮ ಪಕ್ಕದ ದಕ್ಷಿಣ ಅಮೆರಿಕ ಖಂಡದ ದೇಶಗಳು ಅಭಿವೃದ್ಧಿ ಕಾಣದಂತೆ ಸುಳ್ಳು ವಿಷಯಗಳನ್ನು ದೊಡ್ಡ ಮಟ್ಟದಲ್ಲಿ ಮಾರ್ಕೆಟಿಂಗ್ ಮೂಲಕ ಆಳವಾಗಿ ಬಿತ್ತಿದ್ದರು.
ಜಗತ್ತಿನ ಇತರ ದೇಶಗಳೊಂದಿಗೆ ದಕ್ಷಿಣ ಅಮೆರಿಕದ ಉತ್ಪನ್ನಗಳ ವ್ಯವಹಾರಗಳು ಮರೀಚಿಕೆಯಾಗಿದ್ದವು, ಬ್ರೆಜಿಲ್, ಅರ್ಜೆಂಟಿನಾ, ಚಿಲಿ, ಪನಾಮ, ಪೆರಗ್ವೆ, ಗ್ವಾಟೆಮಾಲಾ, ವೆನೆಜುಲಾ, ಕ್ಯೂಬಾ ದೇಶಗಳಲ್ಲಿ ೧೦೦ ವರ್ಷಗಳ ಕಾಲ ಒಂದಿಂದು ವಿವಾದಗಳು ಸದಾ ಚಾಲ್ತಿಯಲ್ಲಿರುತ್ತಿದ್ದವು. ಗ್ವಾಟೆಮಾಲ ದಲ್ಲಿ ರೈತರು ಬೆಳೆಯುವ ಬಾಳೆಹಣ್ಣಿನ ಮೇಲೆ ಕಣ್ಣುಹಾಕಿದ್ದ ಅಮೆರಿಕದ ಕಾರ್ಪೊರೇಟ್ ಕುಳಗಳು, ತಮ್ಮ ವ್ಯವಹಾರವನ್ನು ಅಮೆರಿಕದಿಂದ ಗ್ವಾಟೆಮಾಲಕ್ಕೆ ವಿಸ್ತರಿಸಿ ಬಾಳೆಹಣ್ಣುಗಳನ್ನು ಆಮದು ಮಾಡಿಕೊಂಡು ಅಮೆರಿಕದಲ್ಲಿ ವಿವಿಧ ರೀತಿಯಲ್ಲಿ ಮಾರ್ಕೆಟಿಂಗ್ ಮಾಡಿ ಬಿಲಿಯನ್ ಗಟ್ಟಲೆ ಹಣಮಾಡಿ ಗ್ವಾಟೆಮಾಲಾದ ರೈತರಿಗೆ ಕವಡೆಕಾಸನ್ನು ಮಾತ್ರ ನೀಡುತ್ತಿದ್ದರು.
ದಕ್ಷಿಣ ಅಮೆರಿಕದ ಬಹುತೇಕ ದೇಶಗಳು ಹೊರಜಗತ್ತಿಗೆ ತಮ್ಮ ವ್ಯವಹಾರವನ್ನು ವಿಸ್ತರಿಸುವುದನ್ನು ಅಮೆರಿಕದ ಕುಳಗಳು ಸುಳ್ಳುಗಳ ಮಾರ್ಕೆಟಿಂಗ್ ಮೂಲಕ ತಡೆದಿದ್ದವು. ಕ್ಯೂಬಾ ದೇಶದವಂತೂ ಅಕ್ಷರಶಃ ನಲುಗಿಹೋಗಿತ್ತು, ಅಮೆರಿಕದ ಕಾರ್ಪೊರೇಟ್ ಕುಳಗಳು ಹೇಳಿದಂತೆ ಕೇಳುವವರನ್ನು ಅಲ್ಲಿನ ಅಧ್ಯಕ್ಷರ ಗದ್ದುಗೆಗೆ ಕೂರಿಸಲಾಗುತ್ತಿತ್ತು. ಅಮೆರಿಕ ವಿರುದ್ಧ ಮಾತನಾಡಿದವರ ವಿರುದ್ಧ ಮತ್ತೊಬ್ಬನ್ನು ಎತ್ತಿಕಟ್ಟಿ ಅಧಿಕಾರಕ್ಕೆ ತರಲಾಗುತ್ತಿತ್ತು. ‘ಫಿಡೆಲ್
ಕ್ಯಾಸ್ಟ್ರೊ’ನ ವರೆಗೂ ಕ್ಯೂಬಾ ದೇಶದಲ್ಲಿ ಅಸ್ಥಿರತೆ ಕಾಡುತ್ತಲೇ ಇತ್ತು, ದಕ್ಷಿಣ ಅಮೆರಿಕವನ್ನು ಇಂದಿಗೂ ‘ಬನಾನಾ ರಿಪಬ್ಲಿಕ್’ ಎಂತಲೇ ಕರೆಯುತ್ತಾರೆ, ಒಂದು ಕಾಲದಲ್ಲಿ ದಕ್ಷಿಣ ಅಮೆರಿಕ ಖಂಡದ ಉತ್ತರ ಭಾಗದ ದೇಶಗಳಲ್ಲಿನ ರೈತರು ಬಾಳೆಹಣ್ಣುಗಳನ್ನು ಬೆಳೆಯುತ್ತಿದ್ದರು.
ಮೊದಮೊದಲು ಅಮೆರಿಕನ್ನರು ತಮ್ಮ ದೇಶಗಳಿಗೆ ಆಮದು ಮಾಡಿಕೊಂಡು ದುಡ್ಡು ಮಾಡಿದ ನಂತರ, ಅಲ್ಲಿನ ರೈತರ ಜಮೀನುಗಳ ಮೇಲೆ ಕಣ್ಣು ಹಾಕಿದ್ದರು. ನಂತರ ಅವರನ್ನು ಜೀತದಾಳುಗಳಂತೆ ಕಂಡರು, ಕಾರ್ಮಿಕರು ಮತ್ತು ರೈತರು ತಿರುಗಿ ಬಿದ್ದ ನಂತರ ಮೂರನೆಯವರ ಮೂಲಕ ಸುಳ್ಳು ಗಳನ್ನು ಮಾರ್ಕೆಟಿಂಗ್ ಮಾಡಿ ರಾಜಕೀಯ ಅಸ್ಥಿರತೆ ನಿರ್ಮಾಣವಾಗುವಂತೆ ಮಾಡಿದರು. ಜಗತ್ತಿನ ಇತರ ದೇಶಗಳ ವಸ್ತುಗಳನ್ನು ಅಥವಾ ವಿಷಯ ಗಳನ್ನು ತಮಗಿಷ್ಟ ಬಂದಂತೆ ಮಾರ್ಕೆಟಿಂಗ್ ಮಾಡುವುದರಲ್ಲಿ ನಿಸ್ಸೀಮರಾಗಿರುವ ಪಾಶ್ಚಿಮಾತ್ಯರು, ಇಟಲಿಯ ರೈತರು ಪ್ರತಿನಿತ್ಯ ಹೊಲದಿಂದ ಮನೆಗೆ ಬಂದ ನಂತರ ಮನೆಯಲ್ಲಿ ಅಳಿದುಳಿದ ತರಕಾರಿಯನ್ನು ಮೈದಾ ಹಿಟ್ಟಿನ ಜೊತೆ ಕಲಿಸಿ, ಬೇಯಿಸಿ ತಿನ್ನುತ್ತಿದ್ದಂತಹ ‘ಪಿಜ್ಜಾ’ವನ್ನು ಇಡೀ ಜಗತ್ತಿಗೆ ಬೇರೆ ಬೇರೆ ಮಾದರಿಯಲ್ಲಿ ಪರಿಚಯಿಸಿಬಿಟ್ಟರು.
ಸಾಮಾನ್ಯ ಪಿಜ್ಜಾಕ್ಕೆ ಬೆಣ್ಣೆ ಸೇರಿಸಿ, ಪನೀರ್ ಸೇರಿಸಿ ವಿವಿಧ ರೀತಿಯಲ್ಲಿ ಮಾರ್ಕೆಟಿಂಗ್ ಮಾಡಿ, ಪಿಜ್ಜಾವನ್ನು ಬಹುತೇಕ ಜಾಗತಿಕ ತಿನಿಸನ್ನಾಗಿಸಿಬಿಟ್ಟರು. ನಮ್ಮ ಪೂರ್ವಜರ ಖಾದ್ಯಗಳನ್ನೇ ಬಳಸಿಕೊಂಡು, ಅದಕ್ಕೆ ಆಧುನಿಕ ವಿನ್ಯಾಸ ನೀಡಿ ಪುನಃ ನಮ್ಮ ಮಕ್ಕಳೇ ತಿನ್ನುವಂತೆ ಮಾಡಿರುತ್ತಾರೆ. ಕಳೆದ ನಾಲ್ಕು ದಶಕಗಳಲ್ಲಿ ಪಾಶ್ಚಿಮಾತ್ಯರ ಸಿನಿಮಾಗಳು ಮತ್ತು ಕಾರ್ಟೂನ್‌ಗಳು ನಮ್ಮ ಮಕ್ಕಳ ಮೇಲೆ ದೊಡ್ಡಮಟ್ಟದ ಪರಿಣಾಮ ಬೀರಿವೆ. ಮಹಾಭಾರತ ಮತ್ತು ರಾಮಾಯಣದಲ್ಲಿನ ಅನೇಕ ವ್ಯಕ್ತಿಗಳನ್ನು ಹಾಲಿವುಡ್ ಅಂಗಳದಲ್ಲಿ ಬೇರೆ ಹೆಸರಿನಲ್ಲಿ ಬಳಸಿಕೊಂಡು ಜಗತ್ತಿಗೆ ಮಾರ್ಕೆಟಿಂಗ್ ಮಾಡಿ ನಮ್ಮ ಮಕ್ಕಳಿಗೆ
ಭಾರತದ ಸಂಸ್ಕೃತಿಯನ್ನು ಮರೆಮಾಚುವ ಕೆಲಸವಾಗಿತ್ತು.
ಮಹಾಭಾರತದ ಭೀಮನ ಪರಾಕ್ರಮವನ್ನು ಮಕ್ಕಳಿಗೆ ಹೇಳುವುದರ ಬದಲು, ಆತನ ಮಾದರಿಯನ್ನೇ ಅನುಸರಿಸಿಕೊಂಡು ಪಾಶ್ಚಿಮಾತ್ಯರು ಸೃಷ್ಟಿಸಿರುವ ‘ಹಲ್ಕ’ ಎಂಬ ಬಾಲಿವುಡ್ ಪಾತ್ರದ ಬಗ್ಗೆ ಪೋಷಕರು ಹೇಳುತ್ತಾರೆ. ಮಹಾಭಾರತದಲ್ಲಿ ಕರ್ಣನ ಕವಚ ಕುಂಡಲಗಳನ್ನು ಸೀಳಿ ದೇಹ ಹೊಕ್ಕುವ ಆಯುಧವಿರಲಿಲ್ಲ, ದ್ರೋಣಾಚಾರ್ಯರ ಕವಚವನ್ನು ಸೀಳುವ ಆಯುಧಗಳು ಇರಲಿಲ್ಲ. ಮಹಾಭಾರತ ಯುದ್ಧದಲ್ಲಿ ದ್ರೋಣಾಚಾರ್ಯರು ತಮ್ಮ ಕವಚವನ್ನು ದುರ್ಯೋಧನನಿಗೆ ನೀಡಿ ಅರ್ಜುನನ ವಿರುದ್ಧ ಯುದ್ಧ ಮಾಡಲು ಹೇಳಿದ್ದರು, ಅರ್ಜುನನ ಬಾಣಗಳು ದುರ್ಯೋಧನನು ಧರಿಸಿದ್ದಂತಹ ದ್ರೋಣಾಚಾರ್ಯರ ಕವಚವನ್ನು ಸೀಳಿ ದುರ್ಯೋಧನನ ದೇಹವನ್ನು ಹೊಕ್ಕಿರಲಿಲ್ಲ.
ಮಹಾಭಾರತದ ವೀರರು ಬಳಸುತ್ತಿದ್ದಂತಹ ಆಯುಧಗಳಿಗೆ ಆಧುನಿಕ ಸ್ಪರ್ಶ ನೀಡಿ ಹಾಲಿವುಡ್ ಅಂಗಳದಲ್ಲಿ ಚಲನಚಿತ್ರಗಳನ್ನು ನಿರ್ಮಾಣ ಮಾಡಿ, ಪಾತ್ರಗಳಿಗೆ ಕವಚದ ಮಾದರಿಯನ್ನು ದೇಹದ ಮೇಲೆ ಧರಿಸಿ ಆಧುನಿಕ ಆಯುಧಗಳಿಂದ ಪಾರಾಗುವುದನ್ನು ಪರದೆಯ ಮೇಲೆ ತೋರಿಸುತ್ತಾರೆ. ಹಲವು ಪೋಷಕರು ತಮ್ಮ ಮಕ್ಕಳಿಗೆ ಇಂತಹ ಸಿನಿಮಾ ತೋರಿಸಿ, ಮಹಾಭಾರತದ ಪರಾಕ್ರಮಿಗಳ ಸಾಹಸಗಾಥೆಯನ್ನು ಹೇಳಿಕೊಟ್ಟಿರುವುದಿಲ್ಲ.
ಬಿಲ್ಲುವಿದ್ಯೆಯಲ್ಲಿ ಪ್ರವೀಣನಾಗಿದ್ದ ಅರ್ಜುನನನ್ನು ರಣರಂಗದಲ್ಲಿ ಮಣಿಸಿದವರಿಲ್ಲ, ಆತನ ಮಗ ಅಭಿಮನ್ಯು ಮತ್ತು ಬಬ್ರುವಾಹನ ಮಾತ್ರ ಅವನಿಗೆ ಸರಿಸಾಟಿಯಾಗಿದ್ದರು. ಅರ್ಜುನನ ಬಿಲ್ಲುವಿದ್ಯೆಯನ್ನೇ ಹೈಜಾಕ್ ಮಾಡಿ ನೂತನ ಪಾತ್ರವನ್ನು ಹಾಲಿವುಡ್ ಅಂಗಳದಲ್ಲಿ ನಿರ್ಮಿಸುತ್ತಾರೆ. ಅದೃಷ್ಟವಶಾತ್ ದಕ್ಷಿಣ ಭಾರತದ ಚಲನಚಿತ್ರಗಳು ಭಾರತೀಯ ಇತಿಹಾಸವನ್ನು ಬಿಂಬಿಸುವ ಪೌರಾಣಿಕ ಚಿತ್ರಗಳನ್ನು ಕಳೆದ ಒಂದು ದಶಕಗಳಿಂದ ಮಾಡುತ್ತಾ ಬಂದಿವೆ. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಲನಚಿತ್ರ ಇದಕ್ಕೊಂದು ಉತ್ತಮ ಉದಾಹರಣೆ, ಭಾರತೀಯ ಪರಾಕ್ರಮಿಗಳನ್ನು ಬಿಂಬಿಸುವ ಈ ಚಿತ್ರದಲ್ಲಿ ಮಕ್ಕಳಿಗೆ ಹೇಳುವ ಹಲವು ವಿಷಯಗಳಿದ್ದವು.
ಇತ್ತೀಚಿಗೆ ಬಿಡುಗಡೆಯಾದ ‘ಕಲ್ಕಿ’ಚಲನಚಿತ್ರ ಮಹಾ ಭಾರತದ ಕೊನೆಯ ಅಧ್ಯಾಯದಿಂದ ಪ್ರಾರಂಭವಾಗಿ ಕಲಿಯುಗದ ಅಂತ್ಯದ ಕಥೆಯನ್ನು ಹೇಳುತ್ತದೆ. ರಣರಂಗದಲ್ಲಿ ದ್ರೋಣಾಚಾರ್ಯರ ಮಗ ಆಶ್ವತ್ಥಾಮನಿಗೆ ಶ್ರೀಕೃಷ್ಣ ನೀಡುವ ಶಾಪದಿಂದ, ಕಲಿಯುಗದಲ್ಲಿ ವಿಷ್ಣುವಿನ ಕಲ್ಕಿ ಅವತಾರದ ಹುಟ್ಟಿಗೆ ಕಾಯುವ ರಕ್ಷಕನ ಕಥೆ ‘ಕಲ್ಕಿ’. ಕಲಿಯುಗ ಅಂತ್ಯದ ವರ್ಷಗಳನ್ನು ಹಾಲಿವುಡ್ ಮಾದರಿಯಲ್ಲಿ ಚಿತ್ರೀಕರಿಸಲಾಗಿದೆ, ಅಶ್ವತ್ಥಾಮನ ಪರಾಕ್ರಮದ ಮುಂದೆ ಕಲಿಯುಗದ ಆಧುನಿಕ ವೈeನಿಕ ಆಯುಧಗಳು ನಿಶ್ಯಕ್ತವಾಗುತ್ತವೆ. ಏಳು ಅಡಿಯ ಅಜಾನುಬಾಹು ಅಶ್ವತ್ಥಾಮನ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಅದ್ಭುತವಾಗಿ ನಟಿಸಿದ್ದಾರೆ.
ತನ್ನೆಡೆಗೆ ನುಗ್ಗಿ ಬರುವ ಆಧುನಿಕ ಆಯುಧಗಳನ್ನು ಒಂದೇ ಏಟಿಗೆ ತುಂಡರಿಸುವ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿವೆ. ಮಕ್ಕಳಿಗೆ ಇಂತಹ ಚಲನಚಿತ್ರಗಳನ್ನು ಹೆಚ್ಚಾಗಿ ತೋರಿಸುವುದರಿಂದ ಭಾರತೀಯ ಇತಿಹಾಸದ ಪರಾಕ್ರಮಿಗಳ ಸಾಹಸ ಸಣ್ಣ ವಯಸ್ಸಿನಿಂದಲೇ ಪರಿಚಯವಾಗುತ್ತದೆ.
ಕಲಿಯುಗದಲ್ಲಿ ಸ್ವಾರ್ಥಕ್ಕೆ ಬಿದ್ದ ಮಾನವ ಹಣಕ್ಕಾಗಿ ಪ್ರಕೃತಿಯನ್ನೇ ಆವಿ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಂಡು ಖಾಸಗಿ ಪ್ರಪಂಚವನ್ನು ಕಟ್ಟಿಕೊಂಡು ಜನಸಾಮಾನ್ಯರನ್ನು ಕತ್ತಲಿಗೆ ದೂಡುವ ಕಲಿಗಾಲದ ಅಂತ್ಯದ ಕಥೆ ‘ಕಲ್ಕಿ’ ಚಿತ್ರದಲ್ಲಿದೆ. ಕಲಿಗಾಲದ ಅಂತ್ಯದ ಸಮಯದಲ್ಲಿ ಜನಸಾಮಾನ್ಯರನ್ನು ಕಾಪಾಡಲು ವಿಷ್ಣು ಭಗವಾನ್ ಕಲ್ಕಿಯ ಅವತಾರದಲ್ಲಿ ಹುಟ್ಟುವ ಕಥೆಯನ್ನು ಕಲ್ಕಿಯಲ್ಲಿ ಕಾಣಬಹುದು. ದೇವರ ಅನುಗ್ರಹವಿಲ್ಲದೆ ವಿಜ್ಞಾನದ ಪ್ರಯೋಗಗಳು ನಡೆಯುವುದಿಲ್ಲವೆಂಬುದು ಆಧುನಿಕ ವಿಜ್ಞಾನಿಗಳಿಗೂ ಗೊತ್ತಿದೆ.
ಪಾಶ್ಚಿಮಾತ್ಯರು ಪುರಾಣಗಳಲ್ಲಿನ ಭಗವಂತನ ಕೃಪೆಯನ್ನು ಮರೆತು ವಿಜ್ಞಾನವೇ ಅಂತಿಮವೆಂಬ ನಿರೂಪಣೆಯನ್ನು ಮಾಡುತ್ತಿರುತ್ತಾರೆ. ಹಿಂದೂ ಧರ್ಮದ ಆಚರಣೆಗಳನ್ನೇ ಬಳಸಿಕೊಂಡು ಆಧುನಿಕ ಸ್ಪರ್ಶ ನೀಡಿ ಮಾರ್ಕೆಟಿಂಗ್ ಮೂಲಕ, ಹಿಂದೂಗಳು ತಮ್ಮ ಮೂಲ ಆಚರಣೆಗಳನ್ನು
ಮರೆಯುವಂತೆ ಮಾಡುತ್ತಾರೆ. ನನ್ನ ಅಪ್ಪ ನನಗೆ ಯಾವಾಗಲು ಒಂದು ಮಾತು ಹೇಳುತ್ತಿದ್ದರು, ‘ಜೀವನದಲ್ಲಿ ಏನನ್ನೇ ಮರೆತರೂ ಮನೆದೇವರ ಪೂಜೆ ಮತ್ತು ಪಿತೃಗಳ ಪೂಜೆಯನ್ನು ಮರೆಯಬಾರದು’ ಎಂದು.
ವರ್ಷಕ್ಕೊಮ್ಮೆ ಪಕ್ಷ ಮಾಸದಲ್ಲಿ ಪಿತೃಗಳನ್ನು ನೆನೆದು ಅವರಿಗೆ ಪೂಜೆ ಮಾಡುವ ಸಂಸ್ಕೃತಿ ಹಿಂದೂ ಧರ್ಮದಲ್ಲಿದೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ‘ಮಾರ್ನವಮಿ’ ಹಬ್ಬವೆಂದರೆ ಎಲ್ಲಿಲ್ಲದ ಸಂಭ್ರಮ, ಇಹಲೋಕ ತ್ಯಜಿಸಿದ ಪಿತೃಗಳನ್ನು ನೆನೆದು ಆಶೀರ್ವಾದ ಪಡೆದುಕೊಳ್ಳಲಾಗುತ್ತದೆ. ಪಾಶ್ಚಿಮಾತ್ಯರು ‘ಹಾಲೋವೀನ್’ ಹೆಸರಿನಲ್ಲಿ ಮಾರ್ಕೆಟಿಂಗ್ ಮಾಡಿ ಪ್ರೇತಗಳ ವಿಚಿತ್ರ ವೇಷ ಹಾಕಿ ರಸ್ತೆಗಳಲ್ಲಿ ಮೆರವಣಿಗೆ ಹೋಗುತ್ತಾರೆ, ಅಮೆರಿಕದಲ್ಲಿ ನೆಲೆಸಿರುವ ಕೆಲವು ಭಾರತೀಯರು ತಮ್ಮ ಮಕ್ಕಳಿಗೆ ಪ್ರೇತಗಳ ವೇಷ ಹಾಕಿಸಿ ಮೂಲ ಭಾರತೀಯ ಸಂಸ್ಕೃತಿಯನ್ನೇ ಮರೆಸಿಬಿಡುತ್ತಾರೆ.
ಭಾರತಕ್ಕೂ ಕಾಲಿಟ್ಟಿರುವ ಹಾಲೊವೀನ್ ಭೂತ ಮಕ್ಕಳಿಗೆ ಹಿಂದೂ ಸಂಸ್ಕೃತಿಯನ್ನೇ ಮರೆಯುವಂತೆ ಮಾಡಿದೆ. ಸತ್ತವರನ್ನು ವಿವಿಧ ಪ್ರೇತಗಳ ವೇಷಭೂಷಣದ ಮೂಲಕ ನೆನಪಿಸಿಕೊಳ್ಳುವ ಕರ್ಮ ಯಾಕಾದರೂ ಬೇಕು? ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಪೂರ್ವಜರ ನೆನಪಾಗುವಂತೆ ಮಾಡಬೇಕು, ಅವರ ಆಶೀರ್ವಾದ ಜೀವನದಲ್ಲಿ ಎಷ್ಟು ಅವಶ್ಯವೆಂಬ ವಿಚಾರವನ್ನು ಆಗಾಗ್ಗೆ ಹೇಳುತ್ತಿರಬೇಕು. ಕಳೆದ ಒಂದು ಶತಮಾನದಿಂದ ಬ್ರಿಟಿಷರು ಅಡಿಪಾಯ
ಹಾಕಿದ್ದ ಮೆಕಾಲೆ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಣ ಪಡೆದು ಭಾರತೀಯ ಸಂಸ್ಕೃತಿಯ ಕಲಿಕೆಯೇ ಇಲ್ಲದಂತಾಗಿದೆ. ಅವರು ಬಿಟ್ಟುಹೋದ ಶಿಕ್ಷಣದ ಜತೆಗೆ ಪಾಶ್ಚಿಮಾತ್ಯರ ಮಾರ್ಕೆಟಿಂಗ್ ಮೋಹಕ್ಕೆ ಸಿಕ್ಕು ಹಲವು ಸಂಗತಿಗಳನ್ನು ತಿಳಿಯುವುದರಲ್ಲಿ ವಿಫಲರಾಗಿದ್ದೇವೆ.
ಮಹಾಭಾರತದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಉಪದೇಶ ಮಾಡುವ ‘ಭಗವದ್ಗೀತೆ’ ಯನ್ನು ಉನ್ನತ ಶಿಕ್ಷಣದಲ್ಲಿ ಅಧ್ಯಯನ ಮಾಡುವ ಬದಲು ವಿದೇಶಿ ವಿಷಯಗಳನ್ನು ಅಧ್ಯಯನ ಮಾಡುತ್ತೇವೆ, ಮಕ್ಕಳು ಶಾಲೆಗೆ ಸೇರಿದ ಮೊದಲ ದಿನದಿಂದಲೇ ಇಂತಹದ್ದೇ ಸಂಸ್ಥೆಯಲ್ಲಿ ಕೆಲಸ ಸಿಕ್ಕು ಇಷ್ಟೇ ಸಂಬಳ ಪಡೆಯಬೇಕೆಂಬ ಗುರಿಯನ್ನಿಟ್ಟುಕೊಂಡು ಪಾಶ್ಚಿಮಾತ್ಯರ ಮೋಹಕ್ಕೆ ಸಿಲುಕಿ ಬಿಡುತ್ತೇವೆ. ಜೀವನೋಪಾಯವನ್ನು ಸಾರುವ ಭಗವದ್ಗೀತೆ ಯನ್ನು ತಿಳಿಯುವ ಪ್ರಯತ್ನವನ್ನು ಕೈಬಿಟ್ಟು, ಪಾಶ್ಚಿಮಾತ್ಯರ ಮ್ಯಾನೇಜ್ಮೆಂಟ್ ಗುರು ‘ಪೀಟರ್ ಡ್ರಕ್ಕರ್’ ಹೇಳಿರುವ ಪಾಠಗಳನ್ನು ಅಳವಡಿಸಿಕೊಳ್ಳುತ್ತೇವೆ. ಚಾಣಕ್ಯನ ನೀತಿಪಾಠಗಳನ್ನು ಮಕ್ಕಳಿಗೆ ಹೇಳಿಕೊಡುವ ಕೆಲಸ ಆಗಲಿಲ್ಲ, ಬದಲಾಗಿ ಅಮೆರಿಕದ ಮತ್ಯಾವುದೋ ಬಿಸಿನೆಸ್ ಗುರುವಿಗೆ ಡಾಲರ್
ನಲ್ಲಿ ಹಣ ನೀಡಿ ವ್ಯವಹಾರ ಮಾಡುವುದನ್ನು ಕಲಿಯುತ್ತೇವೆ.
ನಮ್ಮ ವಿಚಾರಧಾರೆಗಳನ್ನೇ ಬಳಸಿಕೊಂಡು ಅದಕ್ಕೊಂದು ಆದುನಿಕ ಸ್ಪರ್ಶ ನೀಡಿ, ಹೆಸರು ಬದಲಾಯಿಸಿ ಮಾರ್ಕೆಟಿಂಗ್ ಮಾಡಿ ನಮ್ಮವರ ಮೇಲೆ ಹೇರಿ ದುಪ್ಪಟ್ಟು ಹಣ ಮಾಡುತ್ತಾರೆ. ನೂರಾರು ವರ್ಷಗಳ ಹಿಂದೆಯೇ ಜಗತ್ತಿನ ಅನೇಕ ದೇಶದ ಜನರು ‘ನಳಂದಾ’ ವಿಶ್ವವಿದ್ಯಾಲಯಕ್ಕೆ ಕಲಿಯಲು
ಬರುತ್ತಿದ್ದರು. ಪಾಶ್ಚಿಮಾತ್ಯರು ತಮಗೆ ಬೇಕಾದಂತೆ ಮಾರ್ಕೆಟಿಂಗ್ ಮಾಡುವುದರಲ್ಲಿ ನಿಸ್ಸೀಮರು, ಸ್ವದೇಶಿ ವಿಷಯಗಳ ಚರ್ಚೆಗಳು ಹೆಚ್ಚಾದಾಗ ದೇಶದ ಒಳಗಿರುವವರಿಂದಲೇ ಅದರ ವಿರುದ್ಧ ಪಿತೂರಿ ನಡೆಸಲು ಬಿಲಿಯನ್ ಗಟ್ಟಲೆ ಹಣ ಖರ್ಚು ಮಾಡುತ್ತಾರೆ.
ಭಾರತದ ಕಳೆದ ಹತ್ತು ವರ್ಷಗಳ ಬದಲಾವಣೆಯನ್ನು ಸಹಿಸದ ಪಾಶ್ಚಿಮಾತ್ಯ ಕಾರ್ಪೊರೇಟ್ ಕುಳಗಳು ೨೦೨೪ ರ ಚುನಾವಣೆಯಲ್ಲಿ ಮೋದಿ ಯವರನ್ನು ಸೋಲಿಸಲು ಸುಳ್ಳುಗಳ ಮಾರ್ಕೆಟಿಂಗ್ ವೆಚ್ಚಕ್ಕೆಂದು ಬಿಲಿಯನ್ ಗಟ್ಟಲೆ ಹಣ ಖರ್ಚು ಮಾಡಿರುವ ವರದಿಗಳಿವೆ.