Friday, 15th November 2024

ಅಯ್ಯಬ್ಬಾ! ಎಂಥಾ ಚಳಿ ಮಾರಾಯ್ರೆ !!

ಶಿಶಿರ ಕಾಲ

ಶಿಶಿರ್‌ ಹೆಗಡೆ, ನ್ಯೂಜೆರ್ಸಿ

ಹತ್ತಾರು ವೈರಾಗ್ಯಗಳಲ್ಲಿ ಪ್ರತೀ ವರ್ಷ ಬರುವ ವೈರಾಗ್ಯ ಇದು. ಆಗೆಲ್ಲ ಊರಿನಲ್ಲಿದ್ದಾಗ ಪ್ರತೀ ವರ್ಷ ಬೇಸಿಗೆ ಬಂತೆಂದರೆ ಯಾವತ್ತಾದರೂ ಮುಗಿಯುತ್ತೋ ಈ ಸೆಖೆಗಾಲ ಎಂದೆನಿಸುತ್ತಿತ್ತು.

ಕರಾವಳಿಯಲ್ಲಿ ವೈಶಾಖದಲ್ಲಿ ಸಮುದ್ರ ಸಾಮೀಪ್ಯದ ಕಾರಣದಿಂದ ಉಷ್ಣಾಂಶ ಹೆಚ್ಚಿದಂತೆ ವಾತಾವರಣದಲ್ಲಿ ಆರ್ದ್ರತೆ ಹೆಚ್ಚಿ
ಸೆಖೆಯ ವಿಪರೀತ ಅನುಭವವಾಗುವುದು ಸಾಮಾನ್ಯ. ವೈಶಾಖ ಸ್ನಾನ ಮಾತ್ರೇಣ ನ ಪುನಃ ಚಾರ್ಯತೆ ಭುವಿ’ ಎನ್ನುವುದು ಉಕ್ತಿ. ಅದೆಷ್ಟು ಸತ್ಯ ಎಂದು ಪ್ರಶ್ನಿಸುವುದಕ್ಕಿಂತ ವೈಶಾಖದಲ್ಲಿ ತಣ್ಣೀರ ಸ್ನಾನ ಮಾಡುವುದೇ ಪರಮ ಸುಖ, ತಣ್ಣೀರ ಸ್ನಾನ ಮಾಡದಿದ್ದಲ್ಲಿ ಮೋಕ್ಷವೇ ಗತಿ ಎನ್ನುವುದು ನನ್ನ ಅಧಿಕಪ್ರಸಂಗದ ತಾತ್ಪರ್ಯ.

ಕರಾವಳಿಯದು ಆರ್ದ್ರ ಸೆಖೆಯಾದರೆ ರಾಯಚೂರು, ಬೀದರ್, ಕಲಬುರ್ಗಿ ಉತ್ತರ ಕರ್ನಾಟಕದ ಕಡೆಯಂತೂ ಒಣ ಸೆಖೆ. ಅದರ ಅನುಭವಕ್ಕೂ ಕರಾವಳಿಯ ಸೆಖೆಯ ಅನುಭವಕ್ಕೂ ವ್ಯತ್ಯಾಸವಿದೆ. ಕರಾವಳಿಯಗಲಿ ಅಥವಾ ಉತ್ತರ ಕರ್ನಾಟಕದ ಬಯಲು ಸೀಮೆಯಗಲಿ – ಅಲ್ಲಿಯೇ ಹುಟ್ಟಿ ಬೆಳೆದವರಾದರೂ ದೇಹ ಈ ವೈಪರೀತ್ಯಕ್ಕೆ ಅಷ್ಟು ಸುಲಭದಲ್ಲಿ ಒಗ್ಗಿಕೊಳ್ಳುವುದಿಲ್ಲ.

ವಾತಾವರಣಕ್ಕೆ ಶಪಿಸುತ್ತಲೇ ಬದುಕಬೇಕು. ಹವಾಮಾನ ವೈಪರೀತ್ಯದ ಅಥವಾ ತೀವ್ರತೆಯ ಒಂದೇ ಒಂದು ಲಾಭವೆಂದರೆ ಅದು ಯಾರ ಜತೆಯ ಸಂಭಾಷಣೆಯನ್ನು ಪ್ರಾರಂಭಿಸಲು ಅದ್ಭುತವಾದ ವಿಷಯ. ಸೆಖೆಗಾಲದಲ್ಲಿ ಎಂಥಾ ಸೆಖೆ ಮಾರಾಯಾ’ ಎಂದು ಶುರುವಾಗುವ ಸಂಭಾಷಣೆಗಳು ಮಳೆಗಾಲದಲ್ಲಿ ಎಂಥಾ ಮಳೆ ಮಾರಾಯಾ’ ಎಂದು ಬದಲಾಗುತ್ತವೆ. ಇಂತಹ ಒಂದು ವಾಕ್ಯ ಸಾಕು ಕನ್ವೆರ್ಸೇಷನ್ ಶುರುವಾಗಲು.

ಈಗ ನಾನಿರುವ ನ್ಯೂಜೆರ್ಸಿಯಲ್ಲಿ, ಪ್ರತೀ ವರ್ಷ ಚಳಿಗಾಲದಲ್ಲಿ ‘ಎಂಥಾ ಚಳಿ ಮಾರಾಯ್ರೆ’ ಎನ್ನುವ ಸ್ಥಿತಿ. ಈ ಚಳಿ ಯಾವತ್ತು ಮುಗಿಯುತ್ತದಪ್ಪಾ ಎಂದು ಚಳಿಗಾಲವಿಡೀ ಕಾಯುವುದೇ. ಚಳಿ ಪ್ರದೇಶಗಳಲ್ಲಿ ಇದ್ದಾಗ ಸೆಖೆಯಾದರೂ ಬೇಕು – ಚಳಿ ಬೇಡ ಎಂದೆನಿಸುತ್ತದೆ. ಇನ್ನು ಸೆಖೆ ಪ್ರದೇಶಕ್ಕೆ ಹೋದಾಗ ಎಷ್ಟು ಚಳಿಯಾದರೂ ತಡೆದುಕೊಂಡೇನು, ಈ ಸೆಖೆ ಮಾತ್ರ ಬೇಡವಪ್ಪ ಎಂದೆನಿಸುವುದು. ಇದೊಂದು ರೀತಿ ತಲೆ ನೋವು ಬಂದಾಗ – ಕಾಲು ನೋವಾದರೂ ಬೇಕು ಎಂದೂ – ಕಾಲು ನೋವು ಬಂದಾಗ ತಲೆನೋವಾದರೂ ಬೇಕು ಎಂದೆನಿಸಿದಂತೆ.

ಎರಡೂ ಸಹ್ಯವಲ್ಲ – ಆದರೆ ಒಂದು ಅಸಹ್ಯವನ್ನು ಅನುಭವಿಸುವಾಗ ಇನ್ನೊಂದು ಅಸಹ್ಯವೇ ಒಳಿತಿತ್ತು ಎಂದೆನಿಸುವುದು. ಮನುಷ್ಯನನ್ನು ಉಳಿದ ಪ್ರಾಣಿಗಳಿಂದ ಪ್ರತ್ಯೇಕಿಸುವುದೇ ಇಂತಹ ಕೆಲವು ಭಾವನೆಗಳಿರಬೇಕು. ಪ್ರಾಣಿ ಪಕ್ಷಿಗಳು ನಮ್ಮಂತೆಯೇ ಹವಾಮಾನವನ್ನು ಶಪಿಸುತ್ತವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅವು ನಮಗಿಂತ ಸುಲಭವಾಗಿ ಒಗ್ಗಿಕೊಂಡು – ಪ್ರಕೃತಿಯಲ್ಲಿ
ಒಂದಾಗಿ ಬದುಕಿಬಿಡುತ್ತವೆ ಎಂದೆನಿಸುತ್ತದೆ. ಸಾಮಾನ್ಯವಾಗಿ ನೇಟಿವ್ ಪ್ರಾಣಿಗಳ ಬದುಕು ಹವಾಮಾನದಿಂದ ಅಷ್ಟಾಗಿ
ಬದಲಾಗುವುದಿಲ್ಲ. ಅವು ಋತುಮಾನಕ್ಕೆ ತಕ್ಕಂತೆ ತಮ್ಮನ್ನು ತಾವು ಒಗ್ಗಿಸಿಕೊಂಡು ಬದುಕಿದಷ್ಟು ಸುಲಭದಲ್ಲಿ ಮನುಷ್ಯನಿಗೆ ಬದುಕಲು ಸಾಧ್ಯವಿಲ್ಲ.

ಈಗಂತೂ ಇಲ್ಲಿ, ಅಮೆರಿಕಾದಲ್ಲಿ ಚಳಿಗಾಲ. ನೀವು ಕೂಡ ವಿಪರೀತ ಚಳಿ ಮತ್ತು -ಟುಗಟ್ಟಲೆ ಹಿಮ ಬೀಳುವ ವಿಡಿಯೋ, ಫೋಟೋಗಳನ್ನು ಮಾಧ್ಯಮದಲ್ಲಿ,  ಸೋಷಿಯಲ್ ಮೀಡಿಯಾದಲ್ಲಿ ನೋಡಿರುತ್ತೀರಿ. ಅಲ್ಲದೆ ಈ ವಾರದ ಅಮೆರಿಕಾದ ಚಳಿ ಮತ್ತು ಉಂಟಾದ ಸ್ಥಿತಿಯ ಬಗ್ಗೆ ಜಗತ್ತಿನ ಬಹುತೇಕ ಮಾಧ್ಯಮಗಳು ವರದಿ ಬಿತ್ತರಿಸುತ್ತಿವೆ. ಸುಮಾರು ನಲವತ್ತು ಲಕ್ಷ ಮನೆ ಗಳಲ್ಲಿ ಎಲೆಕ್ಟ್ರಿಸಿಟಿಯಿಲ್ಲದ ಸ್ಥಿತಿ. ಅದೆಷ್ಟೋ ಮಿಲಿಯನ್ ಜನರನ್ನು ಚಳಿ – ಹಿಮ ಬಾಧಿಸಿದೆ.

ಅಮೆರಿಕಾದ ದಕ್ಷಿಣ ಭಾಗದ ಅದೆಷ್ಟೋ ರಾಜ್ಯಗಳಲ್ಲಿ ಸ್ಥಿತಿ ತಲೆಕೆಳಗಾಗಿದೆ, ಪರಿಸ್ಥಿತಿ ಬುಡಮೇಲಾಗಿದೆ. ಚಳಿಗಾಲ ಪ್ರತೀ ವರ್ಷ ಬರುತ್ತಿದ್ದರೂ ಈ ಸಲದ ಉಂಟಾದ ಸ್ಥಿತಿ ಸ್ವಲ್ಪ ವಿಭಿನ್ನ. ಅಮೆರಿಕಾದ ಉತ್ತರದ ರಾಜ್ಯಗಳು ಸಮಭಾಜಕ ವೃತ್ತದಿಂದ ದೂರ ಸರಿದಂತೆ ಚಳಿ ಹೆಚ್ಚುತ್ತ ಹೋಗುತ್ತದೆ. ಉತ್ತರದ ರಾಜ್ಯಗಳಲ್ಲಿ, ಇನ್ನೂ ಉತ್ತರಕ್ಕಿರುವ ಕೆನಡಾದಲ್ಲಿ ಹಿಮಪಾತ ವಾಗುವುದು ಸಾಮಾನ್ಯ. ಹೆಚ್ಚು ಉತ್ತರಕ್ಕೆ ಹೋದಂತೆ ಹಿಮ ಮತ್ತು ಚಳಿ ಜಾಸ್ತಿ.

ಆದರೆ ಈ ವಾರ ಹಿಮಪಾತವಾಗಿದ್ದು ದಕ್ಷಿಣದ ಟೆಕ್ಸಸ್, ಲೂಸಿಯಾನಾ, ನಾರ್ತ್ ಕೆರೊಲಿನಾ ರಾಜ್ಯಗಳಲ್ಲಿ. ಈ ಯಾವ ರಾಜ್ಯಗಳೂ ಇಂಥದ್ದೊಂದು ಚಳಿ – ಹಿಮ ನೋಡದೇ ಏಳೆಂಟು ದಶಕವೇ ಆಗಿತ್ತು. ಅಮೆರಿಕಾದ ಉತ್ತರ ರಾಜ್ಯಗಳಲ್ಲಿ ಹಿಮ ಬೀಳುವುದು ವಾರ್ಷಿಕ. ಹಾಗಾಗಿ ಇಲ್ಲಿನ ಬಿಲ್ಡಿಂಗ್, ಬ್ರಿಡ್ಜ್‌ನಿಂದ ಹಿಡಿದು ರಸ್ತೆಯವರೆಗೆ ಎಲ್ಲವೂ ಈ ಹವಾಮಾನಕ್ಕೆ ತಕ್ಕಂತೆಯೇ
ವಿನ್ಯಾಸಗೊಳಿಸಲಾಗುತ್ತದೆ. ಅಲ್ಲದೆ ಚಳಿಗಾಲಕ್ಕೆ ಬೇಕಾಗುವ ಎಲ್ಲ ತಯಾರಿಗಳು ಚಳಿಗಾಲಕ್ಕಿಂತ ಮುಂಚೆಯೇ ಶುರುವಾಗ ಬೇಕು.

ಹಿಮವಾಗುವ ರಾಜ್ಯಗಳ ಸರಕಾರಗಳು ಚಳಿಗಾಲದ ನಿರ್ವಹಣೆಗೆಂದೇ ಒಂದಿಷ್ಟು ವಾರ್ಷಿಕ ಬಜೆಟ್ ಪ್ರತ್ಯೇಕವಾಗಿ ತೆಗೆದಿಟ್ಟಿರು ತ್ತವೆ. ಹಿಮ ಬೀಳುವ ಜಾಗದಲ್ಲಿ ಅತ್ಯವಶ್ಯಕ ದಾಸ್ತಾನು ಮಾಡಿಟ್ಟುಕೊಳ್ಳಬೇಕಾದ ವಸ್ತುಗಳಲ್ಲಿ ಒಂದು ಉಪ್ಪು. ಉಪ್ಪಿಗೊಂದು ವಿಶೇಷ ಗುಣವಿದೆ. ಉಪ್ಪನ್ನು ಹಿಮದ ಅಥವಾ ಐಸ್‌ನ ಮೇಲೆ ಹಾಕಿದರೆ ಅದು ಘನೀಕೃತ ನೀರನ್ನು ಕರಗಿಸುತ್ತದೆ. ಈ ಪ್ರಕ್ರಿಯೆ ಯನ್ನು freezing point depression ಎನ್ನುತ್ತಾರೆ. ಐಸ್ ಮೇಲೆ ಉಪ್ಪನ್ನು ಹಾಕಿದಾಗ ಅದು ಮೇಲ್ಪದರವನ್ನು ಕರಗಿಸಿ ನಂತರ ಹಾಗೆ ಕರಗಿದ ಮೇಲ್ಪದರದ ನೀರು ಕೆಳಸ್ಥರದ ಐಸ್ ಅನ್ನು ಕರಗಿಸುತ್ತ ಹೋಗುತ್ತದೆ.

ಸಾಮಾನ್ಯವಾಗಿ ಹಿಮ ಬೀಳುವ ಪ್ರದೇಶಗಳಲ್ಲಿ ರಸ್ತೆಗಳು ಓಡಾಡದಂತೆ ಹೆಪ್ಪುಗಟ್ಟಿರುತ್ತವೆ. ಹಾಗಾಗಿ ರಸ್ತೆಯ ಮೇಲೆ ಓಡಾಡು ವಂತೆ ಮಾಡಿಕೊಳ್ಳಲು – ವಾಹನ ಚಲಾಯಿಸುವಂತೆ ಐಸ್ ಕರಗಿಸಲು – ನಿರ್ವಹಣೆಗೆ ಚಳಿಗಾಲದಲ್ಲಿ ಉಪ್ಪು ಬೇಕು. ಈ ಕಾರಣ ದಿಂದ ಯಥೇಚ್ಛ ಉಪ್ಪನ್ನು ಮೊದಲೇ ಶೇಖರಿಸಿಟ್ಟುಕೊಂಡಿರಬೇಕು. ಅಲ್ಲದೆ ರಸ್ತೆಯ ಮೇಲೆ ಬಿದ್ದ ಹಿಮವನ್ನು ಸರಿಸಲು ಮತ್ತು ಉಪ್ಪು ಸಿಂಪಡಿಸಲು ವಿಶೇಷ ವಾಹನಗಳ ತಯಾರಿಯೂ ಆಗಿರಬೇಕು.

ರಸ್ತೆಯೊಂದೇ ಅಲ್ಲ – ನಾವು ಓಡಾಡುವ ಎಲ್ಲ ಕಾಲು ದಾರಿಗಳಲ್ಲೂ ಉಪ್ಪು ಬೀರುವ ಮತ್ತು ಸ್ವಚ್ಛಗೊಳಿಸುವ ತಯಾರಿ ಯಾಗಿರಬೇಕು. ಇಷ್ಟೆ ತಯಾರಿ ಮಾಡಿಕೊಂಡರೂ ಕೆಲವೊಮ್ಮೆ ಲೆಕ್ಕ ಮೀರಿ ಹಿಮ ಬಿದ್ದಲ್ಲಿ ಎಲ್ಲ ಲೆಕ್ಕಾಚಾರ ತಲೆಕೆಳಗಾಗುತ್ತದೆ. ಅಲ್ಲದೆ ಕೆಲವೊಮ್ಮೆ ತೀವ್ರ ಉಷ್ಣಾಂಶ ಇಳಿದುಬಿಟ್ಟರೆ ಎಷ್ಟೇ ತಯಾರಿ ಮಾಡಿಕೊಂಡರೂ ಜೀವನ ಅಸ್ತವ್ಯಸ್ತವಾಗಿ ಬಿಡುತ್ತದೆ. ಇನ್ನು ಕೆಲವೊಮ್ಮೆ ಹಿಮ ಬಿದ್ದ ನಂತರ ಮಳೆಬಂದರೆ, ಅಥವಾ ಐಸ್ ಮಳೆಯಾದರೆ (ಆಲೀಕಲ್ಲು ಅಲ್ಲ – ಐಸ್ ಮಳೆಯೆಂದರೆ ತುಂತುರು ಐಸ್ ಬೀಳುವುದು), ಮಳೆಯ ನಂತರ ಉಷ್ಣಾಂಶ ಇನ್ನಷ್ಟು ಇಳಿದುಬಿಟ್ಟರೆ ನೆಲದ ಮೇಲೆಲ್ಲ ತೆಳ್ಳನೆಯ ಐಸ್ ಕಟ್ಟಿ
ಬಿಡುತ್ತದೆ.

ಹಾಗಾದಾಗ ನೆಲ ನೋಡಲು ಸಹಜವಾಗಿ ಕಂಡರೂ, ಅಲ್ಲಿ ಕಟ್ಟಿದ ತೆಳ್ಳನೆಯ ಐಸ್‌ನಿಂದಾಗಿ ಕಾಲಿಟ್ಟರೆ ಫಸಕ್ಕನೆ ಜಾರಿ ಬೀಳು ವುದು ಪಕ್ಕಾ. ಇದಷ್ಟೇ ಅಲ್ಲ – ವಾಹನಗಳಿಗೆ ಕೂಡ ಹಿಮಕ್ಕೆ ಒಗ್ಗಿಕೊಳ್ಳುವ ಟೈಯರ್ ಹಾಕಿಕೊಳ್ಳಬೇಕಾದ ಸ್ಥಿತಿ ಕೆಲವು  ಕಡೆ ಇರುತ್ತದೆ. ಹಿಮ ಸ್ಥಿತಿಗೆಂದೇ ತಯಾರಿಸಿದ ದೊಡ್ಡ ಗ್ರೂವ್ ಇರುವ ಚಕ್ರಗಳನ್ನು ಹಾಕಿಕೊಂಡರೆ ವಾಹನ ಐಸ್‌ನಿಂದ
ಜಾರುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು.

ಚಳಿಗಾಲದಲ್ಲಿ ವೈಪರ್‌ಗೆ ಸಿಂಪಡಿಸಲು ನೀರು ಬಳಸುವಂತಿಲ್ಲ. ತೀವ್ರ ಕಡಿಮೆ freezing point ಇರುವ ವಿಶೇಷ ದ್ರಾವಣವನ್ನೇ ಬಳಸಬೇಕು. ಇಲ್ಲದಿದ್ದರೆ ವಾಹನದಲ್ಲಿರುವ ನೀರೇ ಐಸ್ ಆಗಿ ನಂತರ ನೀರು ಹಿಗ್ಗಿದಾಗ ಪೈಪ್‌ಗಳು ಒಡೆದುಬಿಡುತ್ತವೆ. ಇನ್ನು ಮನೆಯ ನೀರಿನ ಪೈಪ್‌ಗಳು ವಿಶೇಷದ್ದೇ ಆಗಿರಬೇಕು. ಎಲ್ಲ ಮನೆಯಲ್ಲೂ ಸಹಜ ಬಳಕೆಗೆ ಬಿಸಿ ನೀರೇ ಬೇಕು. ನಲ್ಲಿಯಿಂದ ಬರುವ ನೀರು ಬಿಸಿಮಾಡಿಕೊಳ್ಳದಿದ್ದಲ್ಲಿ ಮುಟ್ಟಲಿಕ್ಕೂ ಆಗದಷ್ಟು ತಂಪಾಗಿರುತ್ತವೆ.

ಒಂದು ಹಂತಕ್ಕಿಂತ ಉಷ್ಣಾಂಶ ಕೆಳಕ್ಕಿಳಿದರೆ ಅದೆಂತಹ ವ್ಯವಸ್ಥೆ ಯಿದ್ದರೂ ನೀರು ಪೈಪ್‌ನಲ್ಲಿಯೇ ಹೆಪ್ಪುಗಟ್ಟುತ್ತವೆ. ಹಾಗಾಗ ದಿರಲು ನಲ್ಲಿಗಳಲ್ಲಿ ಅಂತಹ ಸಂದರ್ಭದಲ್ಲಿ ಸಣ್ಣಗೆ ನೀರು ಹರಿಯುತ್ತಿರುವಂತೆ ಬಿಟ್ಟೇ ಇಡಬೇಕಾಗುತ್ತದೆ. ನೀರನ್ನು ದೀರ್ಘ ಕಾಲ ಬಿಡದಿದ್ದಲ್ಲಿ ಬಿಸಿನೀರಾದರೂ ಹರಿಯದಿದ್ದಲ್ಲಿ ತಂಪಾಗಿ ನಿಂತ ಹೆಪ್ಪುಗಟ್ಟಿಬಿಡುತ್ತದೆ. ಚಳಿಗಾಲದಲ್ಲಿ ಒಂದೊಮ್ಮೆ ಮನೆ ಬಿಟ್ಟು ಕೆಲ ದಿನ ಹೋಗುವಂತಾದರೆ ಸ್ವಲ್ಪ ಪ್ರಮಾಣದಲ್ಲಿ ನೀರು ಹರಿದು ಹೋಗುವಂತೆ ನಲ್ಲಿಯನ್ನು ಬಿಟ್ಟೇ ಹೋಗಬೇಕು.
ಇನ್ನು ಮನೆಯಲ್ಲಿ ಸದಾ ಹೀಟರ್ ವ್ಯವಸ್ಥೆ ಓಡುತ್ತಲೇ ಇರಬೇಕು.

ಮನೆಯಲ್ಲಿ ಜನರಿರಲಿ – ಇಲ್ಲದಿರಲಿ ಹೀಟರ್ ಉರಿಯುತ್ತಲೇ ಇರಬೇಕು. ಇಲ್ಲದಿದ್ದರೆ ಮನೆಯಲ್ಲಿನ ಎಲ್ಲ ಎಲೆಕ್ಟ್ರಾನಿಕ್ ವಸ್ತುಗಳಿಂದ ಹಿಡಿದು ಬಹುತೇಕ ವಸ್ತುಗಳು ಹಾಳಾಗಿಬಿಡುತ್ತವೆ. ಅಲ್ಲದೇ ಕಿಟಕಿ ಬಾಗಿಲಿಗೆ ಚಿಕ್ಕ ಸಂದಿಯೂ ಇರುವಂತಿಲ್ಲ. ಇಂತಹ ಚಳಿಗೆ ನಾವು ಕಟ್ಟಿಕೊಳ್ಳುವ ಮನೆ, ಓಡಾಡುವ ವಾಹನ, ರಸ್ತೆ ಎಲ್ಲವೂ ತಕ್ಕುದಾದ ರೀತಿಯಲ್ಲಿರಬೇಕು. ಒಂದಿಡೀ ವ್ಯವಸ್ಥೆಯೇ ಛಳಿಯ – ಹಿಮದ ಹಿನ್ನೆಲೆಯಲ್ಲಿ ತಯಾರಾಗಿರಬೇಕು. ಆಗ ಮಾತ್ರ ಬದುಕು ಸಾಧ್ಯ.

ಈ ಇಡೀ ವ್ಯವಸ್ಥೆಯ ಪ್ರತಿಯೊಂದು ಭಾಗವೂ ಕೆಲಸಮಾಡಬೇಕು ಎಂದರೆ ನಿರಂತರ ಎಲೆಕ್ಟ್ರಿಸಿಟಿಯ ಸರಬರಾಜಾಗುತ್ತಿರಬೇಕು. ಒಂದು ಗಂಟೆ ಕರೆಂಟ್ ಹೋಯಿತು ಎಂದರೂ ಮನೆಯೊಳಗೆ ಹತ್ತು ಹದಿನೈದು ಡಿಗ್ರಿ ಉಷ್ಣಾಂಶ ಇಳಿದುಬಿಡುವ ಪರಿಸ್ಥಿತಿ. ಇದು ತೀವ್ರ ಚಳಿಯಿರುವ, ಹಿಮವಾಗುವ ಪ್ರದೇಶದ ಬದುಕು. ಈಗ ಟೆಕ್ಸಸ್ ಮೊದಲಾದ ರಾಜ್ಯಗಳಲ್ಲಿ ಇಷ್ಟೆ ಅವ್ಯವಸ್ಥೆಯಾಗಲು ಕಾರಣ ಅಲ್ಲಿನ ವ್ಯವಸ್ಥೆ ಹಿಮಕ್ಕೆ – ಚಳಿಗೆ ಬೇಕಾದ ರೀತಿಯಲ್ಲಿ ಇಲ್ಲದಿರುವುದು.

ಅಲ್ಲಿ ಇಷ್ಟೊಂದು ಪ್ರಮಾಣದ ಹಿಮ, ಇಷ್ಟು ಕಡಿಮೆ ಚಳಿಯಾಗದೇ ಏಳೆಂಟು ದಶಕವೇ ಆಗಿ ಹೋಗಿತ್ತು. ಈಗ ಉಂಟಾಗಿರುವ ಸ್ಥಿತಿಯಿಂದಾಗಿ ಇಡೀ ಬದುಕೇ ಬುಡಮೇಲಾಗಿದೆ. ಅದೆಲ್ಲದರ ಜತೆ ಬಹುಮುಖ್ಯ ಎಲೆಕ್ಟ್ರಿಕ್ ಗ್ರಿಡ್ ಕೂಡ ಕೈ ಕೊಟ್ಟಿದೆ.
ಮನುಷ್ಯನ ಸ್ಥಿತಿಯೇ ಹಾಗೆ. ಆತ ಬದುಕಬೇಕೆಂದರೆ ಅಂದು ಇಡೀ ವ್ಯವಸ್ಥೆಯೇ ತಯಾರಾಗಿ ನಿಲ್ಲಬೇಕು. ಅದರಲ್ಲಿ ಸ್ವಲ್ಪವೇ ಹೆಚ್ಚು ಕಡಿಮೆಯಾದರೂ ಮನುಷ್ಯನ ಬದುಕೇ ಅಸ್ತವ್ಯಸ್ತ. ಮನುಷ್ಯನ ದೇಹರಚನೆ ತೀವ್ರ ಚಳಿ ಹಿಮವಾಗುವ ಪ್ರದೇಶಕ್ಕೆ ಒಗ್ಗಿಕೊಳ್ಳುವಂತದ್ದಲ್ಲ. ಅದೇ ಕಾರಣಕ್ಕೆ ಕೃತಕ ವ್ಯವಸ್ಥೆ ಬೇಕು.

ಆದರೆ ಪ್ರಾಣಿಗಳಿಗೆ ಈ ಎಲ್ಲ ಲಕ್ಷುರಿ ಇಲ್ಲ. ಅವು ಆ ಕಾರಣಕ್ಕೆ ತಮ್ಮ ದೇಹವನ್ನೇ ಬದಲಿಸಿಕೊಂಡು ಬದುಕುತ್ತವೆ ಇಲ್ಲವೇ ಅದಕ್ಕನುಗುಣವಾಗಿ ಜೀವನಕ್ರಮವನ್ನು ರೂಪಿಸಿಕೊಂಡಿರುತ್ತವೆ. ಕೆಲವು ಪ್ರಾಣಿ ಪಕ್ಷಿಗಳು ಚಳಿಗಾಲ ಶುರುವಾಗುತ್ತಿದ್ದಂತೆ ಉಷ್ಣ ಪ್ರದೇಶಕ್ಕೆ ವಲಸೆ ಹೋಗುತ್ತವೆ. ಇನ್ನು ಕೆಲವು ಅಲ್ಲಿಯೇ ಇದ್ದು – ದೇಹವನ್ನು ಋತುಮಾನಕ್ಕೆ ತಕ್ಕಂತೆ ಬದಲಿಸಿಕೊಂಡು
ಬದುಕುತ್ತವೆ.

ಅಮೆರಿಕಾದ ಉತ್ತರ ರಾಜ್ಯಗಳ ಕಾಡುಗಳಲ್ಲಿ ಕರಡಿಗಳು ಸಾಮಾನ್ಯ. ಈ ಕರಡಿಗಳ ಚಳಿಗಾಲದ ಬದುಕು ತೀರಾ ವಿಚಿತ್ರ. ಸಾಮಾನ್ಯವಾಗಿ ಬೇಸಿಗೆ ಮುಗಿದು ಚಳಿಗಾಲ ಶುರುವಾಗುವ ಸಮಯದಲ್ಲಿ ಈ ಕರಡಿಗಳು ನೋನ್ ಸ್ಟಾಪ್ ತಿನ್ನುವ ಕುಡಿಯುವ ಪ್ರಕ್ರಿಯೆಯಲ್ಲಿ ತೊಡಗುತ್ತವೆ. ಹೀಗೆ ತಿನ್ನುವ ಮೂಲಕ ತಮ್ಮ ದೇಹದಲ್ಲಿ ಕೊಬ್ಬನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ತೂಕ ಹೆಚ್ಚಿಸಿಕೊಳ್ಳುತ್ತವೆ. ಇದನ್ನು Hyperphagia ಎನ್ನಲಾಗುತ್ತದೆ. ಇದು ಕರಡಿ ಚಳಿಗಾಲಕ್ಕೆ ಮಾಡಿಕೊಳ್ಳುವ ತಯಾರಿ. ಕೆಲವೊಮ್ಮೆ ಆಹಾರ ಕಾಡಿನಲ್ಲಿ ಸಿಗದಿದ್ದರೆ ಊರಿಗೂ ಲಗ್ಗೆಯಿಡುತ್ತವೆ. ಈ ಸಮಯದಲ್ಲಿ ಕರಡಿಗಳು ತೀರಾ ಅಗ್ರೆಸ್ಸಿವ್.

ಕಾಡಿನ ಅಂಚಿನಲ್ಲಿರುವ ಮನೆಗಳ ಕಿಟಕಿ ಒಡೆದು ಒಳ ನುಗ್ಗುವುದು, ಕಸದ ಬುಟ್ಟಿಗಳನ್ನು ಚೆಪಿಲ್ಲಿ ಮಾಡುವುದು ಇವೆಲ್ಲ ಸಾಮಾನ್ಯ. ಹೀಗೆ ಕೊಬ್ಬಿಕೊಂಡ ನಂತರ ಕರಡಿಗಳು ಗುಹೆ ಸೇರಿಕೊಳ್ಳುತ್ತವೆ. ಹಾಗೆ ಸೇರಿಕೊಂಡ ಕರಡಿಗಳು ಬಹಳಷ್ಟು ಕಾಲ ಊಟ ನೀರಿಲ್ಲದೇ ಅಲ್ಲಿಯೇ ನಿದ್ರಿಸುತ್ತವೆ. ಇದನ್ನು hibernation ಅನ್ನುವುದು. ಅವು ಕೆಲವು ವಾರಗಳಿಂದ ಕೆಲವು ತಿಂಗಳುಗಳ ಕಾಲ ಇದ್ದಲ್ಲಿಯೇ ಇದ್ದುಬಿಡುತ್ತವೆ.

ಉತ್ತರಕ್ಕೆ ಹೋದಂತೆಲ್ಲ ಕರಡಿಯ ಹೈಬೆರ್ನೇಷನ್ ಕಾಲ ಚಳಿಗಾಲ ದೀರ್ಘವಾದಂತೆ ಹೆಚ್ಚುತ್ತ ಹೋಗುತ್ತದೆ. ಈ ಸಮಯದಲ್ಲಿ ಕರಡಿಯ ದೇಹದ ಉಷ್ಣಾಂಶ ತೀವ್ರ ಇಳಿದುಬಿಡುತ್ತದೆ. ಉಸಿರಾಟ, ಹೃದಯ ಮಿಡಿತ ಎಲ್ಲವೂ ನಿಧಾನವಾಗುತ್ತದೆ. ದೇಹದಲ್ಲಿ ಶೇಖರಿಸಿಟ್ಟುಕೊಂಡ ಕೊಬ್ಬನ್ನು ದೇಹ ಲೆಕ್ಕಾಚಾರ ಮಾಡಿ ಬಳಸಿಕೊಳ್ಳುವ ಸಮಯವಿದು. ಅಲ್ಲದೇ ಒಂದು ಚೂರೂ ಅಲುಗಾಡದೇ ಇರುವುದರಿಂದ ಅವುಗಳ ಸುತ್ತಲಿನ ದೇಹದ ಶಾಖ ಅಷ್ಟು ಪೋಲಾಗುವುದಿಲ್ಲ. ಹೀಗೆಲ್ಲ ಸರ್ಕಸ್ ಮಾಡಿ ಚಳಿಗಾಲ
ವನ್ನು ಕಳೆಯುತ್ತವೆ. ಅವು ಗುಹೆಯಿಂದ ಹೊರಗಡೆ ಬರುವುದು ಚಳಿಗಾಲ ಮುಗಿಯುವ ಸಮಯದಲ್ಲಿ. ಆಗ ಮತ್ತೆ ಆಹಾರಕ್ಕಾಗಿ ಹೋರಾಟ. ದೇಹ ಕೃಶವಾಗಿರುತ್ತದೆ – ಮತ್ತೆ ದೇಹದ ರಿಕವರಿಯಾಗಬೇಕು. ಈ ರೀತಿ ಕಾಲಕ್ಕೆ ತಕ್ಕಂತೆ ಜೀವನ ಕ್ರಮ ಬದಲಿಸಿ ಕೊಳ್ಳುವುದರ ಮೂಲಕ ದೇಹವನ್ನು ಒಗ್ಗಿಸಿಕೊಳ್ಳುವುದು ಒಂದು ರೀತಿ.

ಜಿಂಕೆ ಮೊದಲಾದ ಪ್ರಾಣಿಗಳು ಕೂಡ ಈ ರೀತಿ ಹೈಬರ್ನೇಟ್ ಆಗದಿದ್ದರೂ ಮೊದಲೇ ದೇಹದ ಕೊಬ್ಬನ್ನು (ಹೆಚ್ಚಿಗೆ ತಿಂದು) ಹೆಚ್ಚಿಸಿಕೊಳ್ಳುವುದರ ಮೂಲಕ ಮತ್ತು ಮೈಮೇಲಿನ ಕೂದಲನ್ನು ಬೆಳೆಸಿಕೊಳ್ಳುವುದರ ಮೂಲಕ ಚಳಿಗೆ ತಯಾರಿ ಮಾಡಿ ಕೊಳ್ಳುತ್ತವೆ. ಇನ್ನು ಹಕ್ಕಿಗಳ ಕಥೆ. ಹಲವಾರು ಹಕ್ಕಿಗಳು ಪ್ರತೀ ವರ್ಷ ಚಳಿಗಾಲ ಶುರುವಾಗುತ್ತಿದ್ದಂತೆ ದಕ್ಷಿಣಕ್ಕೆ – ಸಮಭಾಜಕ
ವೃತ್ತದ ಕಡೆಗೆ ವಲಸೆ ಹೋಗುತ್ತವೆ. ಅಲ್ಲಿ ಹೋಗಿ, ಇದ್ದು, ಪುನಃ ಚಳಿ ಕಡಿಮೆಯಾಗುತ್ತಿದ್ದಂತೆ ಉತ್ತರಕ್ಕೆ ಪ್ರಯಾಣಿಸುತ್ತವೆ.

ಹಕ್ಕಿಗಳ ವಲಸೆ ನಮ್ಮ ಕಡೆಯಲ್ಲೂ ಸಾಮಾನ್ಯ. ಆದರೆ ಕೆಲವು ಚಳಿ ಪ್ರದೇಶದ ಹಕ್ಕಿಗಳು ವಲಸೆ ಹೋಗುವುದಿಲ್ಲ. ವಲಸೆ ಎಲ್ಲ ಹಕ್ಕಿಗಳಿಗೆ ಅಷ್ಟು ಸುಲಭವೂ ಕೂಡ ಅಲ್ಲ. ಸಾವಿರಾರು ಮೈಲಿ ಹಾರಿ ಹೋಗುವುದು ಎಲ್ಲ ಹಕ್ಕಿಗಳಿಗೆ ಶಕ್ಯವಿರುವುದಿಲ್ಲ. ಹೀಗೆ ಉಳಿದುಕೊಳ್ಳುವ ಹಕ್ಕಿಗಳು ಕೂಡ ಕರಡಿ, ಜಿಂಕೆಗಳಂತೆ ದೇಹದ ಕೊಬ್ಬನ್ನು ಹೆಚ್ಚಿಸಿಕೊಳ್ಳುತ್ತವೆ. ಅಲ್ಲದೆ ದೇಹದಲ್ಲಿ ಉತ್ಪತ್ತಿಯಾಗುವ ಎಣ್ಣೆಯನ್ನು ಸವರಿಕೊಳ್ಳುವುದರ ಮೂಲಕ ಅವು ರೆಕ್ಕೆ ಪುಕ್ಕಗಳನ್ನು ಒದ್ದೆಯಾಗದಂತೆ ನೋಡಿಕೊಳ್ಳುತ್ತವೆ. ಚಳಿಗಾಲದಲ್ಲಿ ಮೈ ಒದ್ದೆಯಾಯಿತೆಂದರೆ ದೇಹದ ಉಷ್ಣತೆಯನ್ನು ಹೆಚ್ಚಿಗೆ ಯಿಟ್ಟುಕೊಳ್ಳಲು ಇನ್ನಷ್ಟು ಶಕ್ತಿಯನ್ನು ವ್ಯಯಿಸ ಬೇಕು.

ಕೆಲವು ಪ್ರಾಣಿಗಳು – ಹಕ್ಕಿಗಳು ಇನ್ನೊಂದು ರೀತಿ ವಿಚಿತ್ರವಾಗಿ ಚಳಿಗಾಲವನ್ನು ಕಳೆಯುತ್ತವೆ. ಅರ್ಕಿಟಿಕ್ ಇಣಚಿ ಸಾಮಾನ್ಯ ವಾಗಿ ಉತ್ತರ ಅಮೆರಿಕಾ ಮತ್ತು ಕೆನಡಾದಲ್ಲಿ ವಾಸಿಸುತ್ತವೆ. ಅದು ಚಳಿಗಾಲದಲ್ಲಿ ಭೂಮಿಯಲ್ಲಿ ಆಳವಾದ ಬಿಲ ಕೊರೆದು ಅಲ್ಲಿ ಸುಮಾರು ಎಂಟು ತಿಂಗಳುಗಳ ಕಾಲ ಬದುಕುತ್ತವೆ. ಈ ಸಮಯದಲ್ಲಿ ಅವು ತಮ್ಮ ದೇಹವನ್ನು 6’C ಗೆ ಇಳಿಸಿಕೊಂಡು, ಅಷ್ಟೇ
ಉಷ್ಣಾಂಶವನ್ನು ಕಾಯ್ದುಕೊಳ್ಳುವುದರ ಮೂಲಕ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ. ಈ ಸಮಯದಲ್ಲಿ  ಅವುಗಳ ದೈಹಿಕ ಪ್ರಕ್ರಿಯೆ ಬಾಹ್ಯದಲ್ಲಿ ಇರುವುದೇ ಇಲ್ಲ.

ಪ್ರತೀ ಮೂರು ವಾರಕ್ಕೊಮ್ಮೆ ಅವು ಎಚ್ಚರಗೊಳ್ಳುತ್ತವೆ. ಈ ಮೂಲಕ ಅವು ತಮ್ಮ ಮೆದುಳು ಕ್ರಿಯಾಶೀಲವಾಗುವಂತೆ
ನೋಡಿ ಕೊಳ್ಳುತ್ತವೆ. ಇನ್ನೊಂದು ವಿಚಿತ್ರ ಜೀವಿ – ಕೀಟ ಎಂದರೆ Red Flat Bark Beetle. ಈ ಕೀಟ ಚಳಿಗಾಲ ಬಂತೆಂದರೆ ದೇಹದಲ್ಲಿನ ಸುಮಾರು ಶೇ.40 ನೀರನ್ನು ಹೊರ ಹಾಕಿ ಆ ಜಾಗದಲ್ಲಿ ಹೆಪ್ಪುಗಟ್ಟದ ಪ್ರೊಟೀನ್ ದ್ರವ್ಯವನ್ನು ತಯಾರಿಸಿ ತುಂಬಿಸಿ ಕೊಳ್ಳುತ್ತವೆ. ಈ ಮೂಲಕ ಅವುಗಳ ದೇಹದಲ್ಲಿನ ರಕ್ತ ಮತ್ತು ಅಂಗಾಂಗಗಳು ಘನೀಕೃತಗೊಳ್ಳುವುದಿಲ್ಲ.

ಅಲ್ಲದೆ ಅವುಗಳ ದೇಹ ದ್ರವ್ಯಗಳು ಅತಿ ಚಿಕ್ಕ ಹರಳು ಗಳಂತಾಗುತ್ತವೆ. ಈ ರೀತಿಯ ಮಾರ್ಪಾಡುಗಳಿಂದಾಗಿ ಅವು ಸುಮಾರು
-೧೫೦’ ಸೆಲ್ಸಿಯಸ್‌ನಲ್ಲೂ ಬದುಕಿರ ಬಹುದಾಗಿದೆ. ಆಧುನಿಕ ಮನುಷ್ಯ ಉಷ್ಣತೆಯನ್ನು ಅಳೆಯಲು ಶುರುಮಾಡಿದಾಗಿನಿಂದ ಅತಿ ಕಡಿಮೆ ದಾಖಲಾಗಿದ್ದು – ೮೯.೪’ ಸೆಲ್ಸಿಯಸ್. ಇದರರ್ಥ ಈ ಕೀಟ ಭೂಮಿಯ ಅದ್ಯಾವ ಚಳಿ ಪ್ರದೇಶದಲ್ಲಿ ಬೇಕಾದರೂ ಜೀವಂತ ವಿರಬಹುದು. ಇನ್ನು ಚಳಿ ಪ್ರದೇಶದಲ್ಲಿ ಬದುಕುವ ಮೊಸಳೆಗಳದ್ದು ಇನ್ನೊಂದು ರೀತಿ. ಮೊಸಳೆಗಳು ನೀರಿನಲ್ಲಿದ್ದರೂ ಉಸಿರಾಡಬೇಕೆಂದರೆ ಮೇಲಕ್ಕೆ ಬರಬೇಕು.

ಕೆರೆ – ನದಿಗಳ ನೀರಿನ ಮೇಲ್ಸ್ಥರ ಹೆಪ್ಪುಗಟ್ಟಿದರೂ ಕೆಳಗಿನ ನೀರು ಬೆಚ್ಚಗಿರುತ್ತವೆ. ಮೊಸಳೆಗೆ ಮೇಲೆ ಬಂದರೆ ವಿಪರೀತ
ಚಳಿ. ಹಾಗಂತ ನೀರಿನೊಳಗೇ ಇದ್ದರೆ ಉಸಿರುಗಟ್ಟುತ್ತದೆ. ಈ ಕಾರಣಕ್ಕೆ ಅವು ನೀರಿನಿಂದ ಹೊರಗೆ ಮೂಗನ್ನು – ಮೂತಿಯನ್ನು ಇಟ್ಟು ದೀರ್ಘ ನಿದ್ರೆಗೆ ಜಾರಿಬಿಡುತ್ತವೆ. ಈ ಮೂಲಕ ಅವುಗಳ ದೇಹ ನೀರಿನೊಳಗೆ ಬೆಚ್ಚಗಿರುತ್ತವೆ.

ಮುಖ ಮೂಗು ಹೊರಗೆ ಹೆಪ್ಪುಗಟ್ಟಿದ ಐಸ್‌ನ ನಡುವೆ ಸಿಕ್ಕಿಕೊಂಡಿರುತ್ತವೆ. ಇವುಗಳಿಗೆ ಈ ತ್ರಿಶಂಕು ಸ್ಥಿತಿಯಿಂದ ಮುಕ್ತಿ ಹೆಪ್ಪುಗಟ್ಟಿದ ನೀರಿನ ಆಕರದ ಮೇಲ್ಪದರ ಕರಗಿದ ಮೇಲೆಯೇ. ಅಮೆರಿಕಾದ ಮರ ಕಪ್ಪೆಗಳು ಚಳಿಗಾಲ ಸಂಭಾಳಿಸುವ
ರೀತಿಯೇ ಬೇರೆ. ಈ ಮರ ಕಪ್ಪೆಗಳು ಚಳಿಗಾಲ ಬಂತೆಂದರೆ ಮೂತ್ರ ತಯಾರಿಸಲು ಶುರುಮಾಡುತ್ತವೆ (!). ಆದರೆ ಈ ಮೂತ್ರವನ್ನು ಅವು ದೇಹದಿಂದ ಹೊರ ಹಾಕುವುದಿಲ್ಲ. ಬದಲಿಗೆ ತಮ್ಮ ರಕ್ತದಲ್ಲಿಯೇ ಇಟ್ಟುಕೊಳ್ಳುತ್ತವೆ. ಉಷ್ಣಾಂಶ ಕಡಿಮೆಯಾದಂತೆ ಈ ಕಪ್ಪೆಯ ರಕ್ತ ಅರೆಹೆಪ್ಪುಗಟ್ಟುತ್ತದೆ.

ಅದೇ ಸಮಯದಲ್ಲಿ ಕಪ್ಪೆಯ ಲಿವರ್ ಗ್ಲುಕೋಸ್ ಅನ್ನು ತಯಾರಿಸಲು ಶುರುಮಾಡುತ್ತದೆ. ಈ ಗ್ಲುಕೋಸ್ (ಸಕ್ಕರೆ) ರಕ್ತ ಮತ್ತು ರಕ್ತದ ಒಂದಾಗಿರುವ ಮೂತ್ರ (ಉಪ್ಪು)ದ ಜತೆ ಸೇರಿ ಹೆಪ್ಪುಗಟ್ಟದ ದ್ರವ್ಯ ಅಲ್ಲಿ ತಯಾರಾಗುತ್ತದೆ. ಈ ಹೆಪ್ಪು ತಡೆಯುವ ದ್ರವ್ಯ ಕಪ್ಪೆಯ ದೇಹದ ಜೀವ ಕೋಶಗಳ ಸುತ್ತ ಒಂದು ರೀತಿಯ ಕವಚವನ್ನು ನಿರ್ಮಿಸುತ್ತದೆ. ಈ ಮೂಲಕ ಅವುಗಳ ಎಲ್ಲ ಜೀವಕೋಶ ಗಳು ಸುರಕ್ಷಿತವಾದ ನಂತರ ಕಪ್ಪೆ ಒಂದು ವಿಚಿತ್ರ ಸ್ಥಿತಿಗೆ ತಲುಪುತ್ತದೆ. ಈ ಸಮಯದಲ್ಲಿ ಅವುಗಳ ರಕ್ತ ಸಂಚಲನ ಸಂಪೂರ್ಣ ನಿಲ್ಲುತ್ತದೆ. ಶ್ವಾಸಕೋಶ ಮತ್ತು ಹೃದಯ ಕೂಡ ಸ್ತಬ್ಧವಾಗುತ್ತದೆ.

ಕಪ್ಪೆ ಒಂದು ಮರದ ಕೊರಡಂತೆ ಮರದ ಕೊಂಬೆಗೆ ಅಂಟಿಕೊಂಡಿರುತ್ತದೆ. ಈ ರೀತಿಯ ದೇಹದ ಸ್ಥಿತಿಗೆ ಶಬ್ಧವೇ ಇಲ್ಲ. ಇದು ಜೀವಂತ ಸ್ಥಿತಿಯೂ ಅಲ್ಲ ಅಥವಾ ಮೃತ ಸ್ಥಿತಿಯೂ ಅಲ್ಲ. ಸುಮಾರು ಎಂಟು ತಿಂಗಳುಗಳ ಕಾಲ ಇದೇ ಸ್ಥಿತಿಯಲ್ಲಿ ಅವು
ಇರುತ್ತವೆ. ನಂತರ ವಾತಾವರಣದ ಉಷ್ಣಾಂಶ ಹೆಚ್ಚಿದಂತೆ ಅವು ಘನೀಕೃತ ಸ್ಥಿತಿಯಿಂದ ಸಹಜಕ್ಕೆ ಮರಳಿ ಕೇವಲ ಮೂವತ್ತು ನಿಮಿಷದಲ್ಲಿ ಅವುಗಳ ಹೃದಯ ಬಡಿತ, ರಕ್ತಸಂಚಲನ ಎಲ್ಲ ಶುರುವಾಗುತ್ತವೆ. ಅವು ಎಂಟು ತಿಂಗಳ ಮೃತ ಸಾದೃಶ ಸ್ಥಿತಿ ಯಿಂದ ಈಚೆ ಬಂದು ಸಹಜಕ್ಕೆ ಮರಳುತ್ತವೆ – ಪುಟಿದು ಸಹಜ ಕಪ್ಪೆಯಂತಾಗುತ್ತವೆ.

ಈ ರೀತಿ ಫ್ರೀಜ್ ಆಗಿಬಿಡುವ ಪ್ರಾಣಿಗಳಲ್ಲಿ ಇನ್ನೊಂದು ಎಂದರೆ ಟಾರ್ಡಿಗ್ರೇಡ್ಸ್ ಎನ್ನುವ ಪ್ರಾಣಿ. ಇದೊಂದು ಅಸಾಮಾನ್ಯ ಪ್ರಾಣಿಯೇ ಸೈ. ಈ ಟಾರ್ಡಿಗ್ರೇಡ್‌ಗಳು ಸಮುದ್ರದ ಅತ್ಯಂತ ಆಳದಲ್ಲಿ, ನಿರ್ವಾತದಲ್ಲಿ, ಅತೀ ಕಡಿಮೆ ಉಷ್ಣಾಂಶದಲ್ಲಿ ಬದುಕ ಬಲ್ಲವು. ಜಪಾನ್‌ನ ವಿಜ್ಞಾನಿಗಳು ಈ ಟಾರ್ಡಿಗ್ರೇಡ್ಸ್ ಅನ್ನು ಬರೊಬ್ಬರಿ ಮೂವತ್ತು ವರ್ಷ ಜೀವಂತ ಫ್ರೀಜ್ ಮಾಡಿಟ್ಟಿದ್ದರಂತೆ. ಮೂರು ದಶಕದ ನಂತರ, 2016ರಲ್ಲಿ ಹೀಗೆ ಕೃತಕ ಶೀತಲೀಕರಿಸಿಟ್ಟ ಟಾರ್ಡಿಗ್ರೇಡ್ಸ್ ಅನ್ನು ಸಹಜ ವಾತಾವರಣಕ್ಕೆ ತಂದಾಗ ಅವು ಮತ್ತೆ ಜೀವ ಪಡೆದುಕೊಂಡವಂತೆ.

ನೋಮಟೋಡ್ಸ್ ಮೊದಲಾದ ಅತಿ ಚಿಕ್ಕ ಹುಳುಗಳು ಅದೆಷ್ಟೋ ವರ್ಷಗಳ ಕಾಲ ಈ ರೀತಿ ಸತ್ತಂತೆ ಬದುಕಿರಬಲ್ಲವು. ಸೈಬೀರಿ ಯಾದ ಐಸ್‌ನಲ್ಲಿ ಈ ನೋಮಟೋಡ್ಸ್ ಎಂಬ ಅತಿ ಚಿಕ್ಕ ಹುಳುಗಳು ಬರೋಬ್ಬರಿ 32000 ವರ್ಷಗಳಿಂದ ಸಿಲುಕಿಕೊಂಡಿ ದ್ದವು. ಅವನ್ನು ವಿಜ್ಞಾನಿಗಳು ಲ್ಯಾಬ್‌ಗೆ ತಂದು ಬಿಸಿನೀರಲ್ಲಿ ಹಾಕಿದಾಗ ಅವು ಪುನರ್ಜೀವ ಪಡೆದುಕೊಂಡವು. ಪುನರ್ಜೀವ ಎನ್ನುವುದೇ ಸಮಂಜಸವಲ್ಲ – ಏಕೆಂದರೆ ಅವು ಸತ್ತೇ ಇರಲಿಲ್ಲ. ಸಂತಂತಿದ್ದವು ಅಷ್ಟೇ. ಇದೊಂದು ರೀತಿ ಸತ್ತಂತಿಹರನು ಬಡಿದೆಬ್ಬಿಸು ಎಂದಂತೆ.

ಇವೆಲ್ಲ ಜೀವಿ – ಪ್ರಾಣಿಗಳನ್ನು ನೋಡಿದಾಗ ಮನುಷ್ಯ ದೈಹಿಕವಾಗಿ ತೀರಾ ದುರ್ಬಲ ಎಂದೆನಿಸುವುದಿಲ್ಲವೇ? ಅದೇ ಕಾರಣಕ್ಕೆ ಸ್ವಲ್ಪವೇ ಚಳಿ ಆದರೂ ನಾವು ಉದ್ಗಾರ ತೆಗೆಯುವುದು – ಅಯ್ಯಬ್ಬಾ ! ಎಂಥಾ ಚಳಿ ಮಾರಾಯ್ರೆ!!