Saturday, 14th December 2024

ಇಂಗ್ಲೆಂಡಿನ ರಾಣಿ ಹ್ಯಾಂಡ್‌ ಬಾಗಿನೊಳಗೆ ಏನು ಇಟ್ಟುಕೊಂಡಿರುತ್ತಾಳೆ ?

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಸೆಸಿಲ್ ಅಡಮ್ಸ್ ತನ್ನ ಅಂಕಣದಿಂದ ಒಂದು ವಿಶ್ವಾಸ ಮತ್ತು ಭರವಸೆಯನ್ನಂತೂ ನೀಡಿದ್ದ. ಅದೇನೆಂದರೆ, ಓದುಗರ ಮನಸ್ಸಿನಲ್ಲಿ ಯಾವುದೇ ಪ್ರಶ್ನೆ ಮೂಡಿ ದರೂ, ಆಡಮ್ಸ್ ನಿಂದ ಸಮರ್ಪಕ ಉತ್ತರ ಪಡೆಯಬಹುದು. ಸೂರ್ಯನ ಅಡಿಯಲ್ಲಿನ ಯಾವುದೇ ವಿಷಯದ ಬಗ್ಗೆ ಪ್ರಶ್ನೆ ಕೇಳಿದರೂ ಸಮರ್ಪಕ ಉತ್ತರ ನಿರೀಕ್ಷಿಸಬಹುದು. ಆತ ಎಂದೂ ಹಾರಿಕೆಯ ಉತ್ತರ ಕೊಡುವುದಿಲ್ಲ.

ಕಳೆದ ಇಪ್ಪತ್ತೆರಡು ವರ್ಷಗಳಿಂದ ನಾನು ಬೇರೆ ಬೇರೆ ಪತ್ರಿಕೆಗಳ ಸಂಪಾದಕನಾದರೂ ನನಗೆ ಇಂಥದ್ದೊಂದು ಅಂಕಣವನ್ನು ಬರೆಯಲು ಮತ್ತು ಬರೆಯಿಸಲು ಇಲ್ಲಿ ತನಕ ಸಾಧ್ಯವಾಗಿಲ್ಲ. ಹಾಗಂತ ನಾನು ಸುಮ್ಮನೆ ಕುಳಿತಿಲ್ಲ. ಅಂಥ ಒಬ್ಬ ಅಂಕಣಕಾರನಿಗಾಗಿ ಇಂದಿನ ತನಕ ಹುಡುಕುತ್ತಲೇ ಇದ್ದೇನೆ, ಆದರೆ ಸಿಕ್ಕಿಲ್ಲ. ಅಂತೆಯೇ ಹುಡುಕುವುದನ್ನೂ ನಿಲ್ಲಿಸಿಲ್ಲ. ಮುಂದೊಂದು ದಿನ ಅಂಥ ಅಂಕಣಕಾರ ಸಿಗಬಹುದು ಎಂಬ ಆಸೆ ನನ್ನದು. ಹಾಗಾದರೆ ಅದು ಎಂಥ ಅಂಕಣ ಅಂತೀರಿ? ಅದನ್ನು ಬರೆಯುತ್ತಿರುವ ಅಂಕಣಕಾರ ಯಾರಪ್ಪಾ ಎಂದು ನಿಮಗೆ ಅನಿಸಬಹುದು.

ನೀವು ಸೆಸಿಲ್ ಅಡಮ್ಸ ಎಂಬುವವನ ಹೆಸರನ್ನು ಕೇಳಿರ ಬಹುದು. ಆತ ‘ದಿ ಚಿಕಾಗೋ ರೀಡರ್’ ಎಂಬ ವಾರಪತ್ರಿಕೆಗೆ 1973ರಿಂದ ಒಂದು ಅಂಕಣ ಬರೆಯುತ್ತಿದ್ದಾನೆ. ಅದರ ಹೆಸರು The Straight Dope ಅಂತ. ಕಳೆದ ನಾಲ್ಕು ವರ್ಷಗಳ (2018) ತನಕ ಆ ಅಂಕಣ ಆ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಅಮೆರಿಕ ಮತ್ತು ಕೆನಡದ ಸುಮಾರು ನಲವತ್ತು ಪತ್ರಿಕೆಗಳು ಸೆಸಿಲ್ ಅಡಮ್ಸ ನ ಈ ಅಂಕಣವನ್ನು ಪ್ರಕಟಿಸುತ್ತಿದ್ದವು. ಅಂಕಣ ಕಾರರಲ್ಲಿಯೇ ಈತನಿಗೆ ವಿಶೇಷ ಸ್ಥಾನಮಾನ. ಈತನನ್ನು World’s Smartest Human ಮತ್ತು The Smartest Columnist ಎಂದೂ ಕರೆಯುವುದುಂಟು.

ಆತನನ್ನು ಇಲ್ಲಿ ತನಕ ಯಾರೂ ನೋಡಿಲ್ಲ. ಅಸಲಿಗೆ ಸೆಸಿಲ್ ಅಡಮ್ಸ್ ಅಂದ್ರೆ ಯಾರು, ಅದು ಪೆನ್ ನೇಮ್ ಇರಬಹುದಾ, ಇದು ಯಾರದ್ದೇ ಕಾವ್ಯನಾಮವಾ, The Straight Dope ಅಂಕಣವನ್ನು ಸೆಸಿಲ್ ಅಡಮ್ಸ್ ಒಬ್ಬನೇ ಬರೆಯುತ್ತಾನಾ ಅಥವಾ ಮೂರ್ನಾಲ್ಕು ಜನರ ಒಂದು ತಂಡ ಇದರ ನಿರ್ವಹಣೆ ಮಾಡು ತ್ತಿದೆಯಾ… ಮುಂತಾದ ಪ್ರಶ್ನೆಗಳಿಗೆ ಇಲ್ಲಿ ತನಕ ಉತ್ತರ ಸಿಕ್ಕಿಲ್ಲ. ಸೆಸಿಲ್ ಅಡಮ್ಸ್ ಅದು ನಿಜವಾದ ನಾಮಧೇಯ ಇರಲಿಕ್ಕಿಲ್ಲ ಎಂದು ವಾದಿಸುವವರೂ ಇದ್ದಾರೆ. ಕಾರಣ ಈ ಅಂಕಣಗಳೆಲ್ಲವನ್ನೂ ಸೇರಿಸಿ ಮೂರು ಪುಸ್ತಕಗಳನ್ನು ಮಾಡಲಾಗಿದೆ. ಅದಕ್ಕೆ ಎಡ್ ಝೋಟ್ಟಿ ಎಂಬಾತ ‘ಲೇಖಕನ ಮಾತು’ ಬರೆದಿದ್ದಾನೆ.

ಹೀಗಾಗಿ ಎಡ್ ಝೋಟ್ಟಿಯೇ ಸೆಸಿಲ್ ಅಡಮ್ಸ್ ಇರಬಹುದು ಎಂಬುದು ಅವರ ತರ್ಕ. ಹಾಗಂತ ಎಡ್ ಝೋಟ್ಟಿ ಕೊನೆಯಲ್ಲಿ, ‘ನಿಮ್ಮ ಪ್ರಶ್ನೆ, ಪ್ರಶಂಸೆ ಮತ್ತು
ಹೂಗುಚ್ಛಗಳನ್ನು ಸೆಸಿಲ್ ಅಡಮ್ಸ್ ಗೆ ಕಳಿಸಿ’ ಎಂದು ಅಡಮ್ಸ್ ವಿಳಾಸವನ್ನು ಕೊಟ್ಟು ಮತ್ತಷ್ಟು ಸಂದೇಹವನ್ನು ಎಬ್ಬಿಸುತ್ತಾನೆ. ಇಲ್ಲಿ ತನಕ ಯಾರೂ ಸೆಸಿಲ್ ಅಡಮ್ಸ್ ನನ್ನು ನಾನು ನೋಡಿದ್ದೇ ನೆಂದು ಹೇಳಿಲ್ಲ. ಒಂದು ವೇಳೆ ಯಾರಾದರೂ ನೋಡಿದ್ದರೆ, ಅವರಾದರೂ ಹೇಳಬೇಕಿತ್ತು. ಅವರಾರೂ ಹೇಳಿಲ್ಲ. ಎಡ್ ಝೋಟ್ಟಿಯೇ ಸೆಸಿಲ್ ಅಡಮ್ಸ್ ಇದ್ದಿರಬಹುದು ಎಂದು ಭಾವಿಸಿರುವುದರಿಂದ, ಆತನ ಒಂದೇ ಒಂದು ಫೋಟೋ ಇದೆ. ಅದು ಬಿಟ್ಟರೆ ಆತ ಎಂದೆಂದೂ ಕ್ಯಾಮೆರಾ
ಕಣ್ಣಿಗೆ ಬಿದ್ದೇ ಇಲ್ಲ. ಅಡಮ್ಸ್ ತನ್ನ ಖಾಸಗಿ ವಿವರಗಳನ್ನು ಪುಸ್ತಕದಲ್ಲೂ ಹೇಳಿಕೊಂಡಿಲ್ಲ.

Mrs.Adams ಎಂದು ಒಂದು ಕಡೆ ಹೇಳಿಕೊಂಡಿzನೆ. ಆಕೆ ತನ್ನ ತಾಯಿ ಇದ್ದಿರಬಹುದು ಎಂದು ಹೇಳಿ ಮತ್ತಷ್ಟು ಗೊಂದಲ ಮೂಡಿಸಿದ್ದಾನೆ. ಅವನ ಬರಹದಲ್ಲಿ ಒಮ್ಮೆ ಆತ ಐರಿಶ್ ಇದ್ದಿರಬಹುದು ಎಂಬ ಸುಳಿವನ್ನು ನೀಡಿದ್ದ. ಹಾಗೆ ಆತನಿಗೆ ಒಬ್ಬ ಸಹೋದರ ಇದ್ದಿರಬಹುದು ಎಂದು ಊಹಿಸಲಾಗಿದೆ. ಕಳೆದ 45  ವರ್ಷ ಗಳಿಂದ ಸೆಸಿಲ್ ಅಡಮ್ಸ್ ಸುಮಾರು 3400 ಅಂಕಣಗಳನ್ನು ಬರೆದಿದ್ದಾನೆ. ಈತನಿಗೆ ಜಗತ್ತಿನಾದ್ಯಂತ ಓದುಗರಿದದ್ದಾರೆ. ಅವನ ಹೆಸರಿನಲ್ಲಿ ಅಭಿಮಾನಿ ಸಂಘ ಗಳಿವೆ. ಯಾರಿಗೂ ಗೊತ್ತಿರದ ವಿಷಯವನ್ನು ಯಾರಾದರೂ ಹೇಳಿ ಎನ್ನುವಾಗ, ‘ನಮ್ಮೊಳಗಿನ ಸೆಸಿಲ್ ಅಡಮ್ಸ್ ಯಾರು?’ ಎಂದು ಹೇಳುವುದುಂಟು.

ಅಷ್ಟರಮಟ್ಟಿಗೆ ಈತ ಪ್ರಸಿದ್ಧ ಮತ್ತು ಜನಪ್ರಿಯ. ಇಲ್ಲಿ ತನಕ ಈತ ಅನಾಮಧೇಯನಾಗಿರುವುದೇಕೆ ಎಂಬುದು ಗೊತ್ತಿಲ್ಲ. ಸತತ ನಲವತೈದು ವರ್ಷಗಳ ತನಕ, ಜನಪ್ರಿಯ ಅಂಕಣಗಳನ್ನು ಬರೆದವನ ಒಂದು ಒಳ್ಳೆಯ ಫೋಟೋ ಸಹ ಸುದ್ದಿಮನೆಯಲ್ಲಿ ಇಲ್ಲ ಎನ್ನುವುದು ಸೋಜಿಗವೇ. ನಾನೂ ಹತ್ತು ವರ್ಷಗಳಿಂದ ಓದುಗರ ಪ್ರಶ್ನೆಗಳಿಗೆ ಉತ್ತರ ನೀಡುವ ‘ಕೇಳ್ರಪ್ಪೋ ಕೇಳಿ’ (‘ಕನ್ನಡಪ್ರಭ’ದಲ್ಲಿದ್ದಾಗ) ಮತ್ತು ಈಗ ‘ವಿಶ್ವವಾಣಿ’ಯಲ್ಲಿ ‘ಭಟ್ಟರ ಸ್ಕಾಚ್’ ಅಂಕಣಗಳಲ್ಲಿ ನಿತ್ಯವೂ ಓದುಗರ ಹತ್ತು ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡುತ್ತೇನೆ. ಓದುಗರು ತಮಾಷೆಯ, ಚೋದ್ಯದ ಪ್ರಶ್ನೆ ಕೇಳುತ್ತಾರೆ.

ನಾನು ಸಹ ಅಷ್ಟೇ ತಮಾಷೆ, ಲವಲವಿಕೆಯಿಂದ ಉತ್ತರಿಸುತ್ತೇನೆ. ಒಂದು ಸಾಲಿನ ಪ್ರಶ್ನೆಗೆ, ಒಂದು ಸಾಲಿನ ಉತ್ತರ. ಆ ಒಂದು ಸಾಲಿನ ಉತ್ತರ ನೀಡುವುದು ಎಷ್ಟೋ ಸಲ ಸುಲಭವಲ್ಲ. ಕೆಲವು ಸಲ ಉತ್ತರಕ್ಕಾಗಿ ತಡಕಾಡಬೇಕಾಗುತ್ತದೆ. ಅಲ್ಲಿ ತಮಾಷೆಯೇ ಮುಖ್ಯ. ಹಾಗಂತ ಬೇರೆಯವರನ್ನು ನೋಯಿಸುವಂತಿಲ್ಲ. ಒಂದು ತಿಳಿ, ಆರೋಗ್ಯಕರ ಹಾಸ್ಯದ ಚೌಕಟ್ಟಿನಲ್ಲಿ ಉತ್ತರ ನೀಡಬೇಕಾಗುತ್ತದೆ. ಸೆಸಿಲ್ ಅಡಮ್ಸ್ ಸಹ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ. ಅವನ ಉತ್ತರ ದಲ್ಲೂ ಹಾಸ್ಯ, ವ್ಯಂಗ್ಯ, ವಿಡಂಬನೆ, ಚೋದ್ಯ, ತಮಾಷೆ..ಎಲ್ಲವೂ ಇರುತ್ತವೆ. ಓದುಗರೂ ಅಂಥ ತರಲೆ ಪ್ರಶ್ನೆಗಳನ್ನೂ ಕೇಳುತ್ತಾರೆ.

ಹಾಗಾದರೆ ಸೆಸಿಲ್ ಅಡಮ್ಸ್ ಅಂಕಣ ಹೇಗೆ ಭಿನ್ನ ? ಅಸಲಿಗೆ ಅವನ ಅಂಕಣದ ಸ್ವರೂಪವೇನು? ಓದುಗರು ಸೆಸಿಲ್ ಆಡಮ್ಸ್ ಗೆ ತರಹೇವಾರಿ ಪ್ರಶ್ನೆಗಳನ್ನು
ಕೇಳುತ್ತಾರೆ. ಆದರೆ ಆತ ಒಂದು ಸಾಲಿನ ಉತ್ತರ ಕೊಡುವುದಿಲ್ಲ. ಆತ ಅದಕ್ಕಾಗಿ ಒಂದು ಪುಟ್ಟ ಸಂಶೋಧನೆಯನ್ನೇ ಮಾಡುತ್ತಾನೆ. ಪ್ರಶ್ನೆಗೆ ಸಂಬಂಧಿಸಿದಂತೆ ಹತ್ತಾರು ಮಂದಿಯನ್ನು ಕೇಳುತ್ತಾನೆ, ಪುಸ್ತಕಗಳನ್ನು ರೆಫರ್ ಮಾಡುತ್ತಾನೆ, ಸಂಬಂಧಪಟ್ಟವರ ಜತೆ ಚರ್ಚಿಸುತ್ತಾನೆ.

ಪತ್ರ-ವ್ಯವಹಾರ ಮಾಡುತ್ತಾನೆ, ನಂತರ ಸಮಾಧಾನಕರ ಉತ್ತರ ನೀಡುತ್ತಾನೆ. ‘ವರ್ಲ್ಡ್ ಟ್ರೇಡ್ ಸೆಂಟರ್‌ನ ತುದಿಯಿಂದ ಬಿಸಾಕಿದ ಒಂದು ನಾಣ್ಯ ಕೆಳಗೆ ರಸ್ತೆ ಯಲ್ಲಿ ಹೋಗುವ ಒಬ್ಬ ವ್ಯಕ್ತಿಯ ಮೇಲೆ ಬಿದ್ದರೆ ಆತ ಸಾಯಬಹುದೇ?’ ಎಂಬ ಓದುಗನೊಬ್ಬನ ಪ್ರಶ್ನೆಗೆ, ಸೆಸಿಲ್ ಅಡಮ್ಸ್ ಪ್ರಾಯೋಗಿಕ ಪರೀಕ್ಷೆಯನ್ನು ಮಾಡಿ ಉತ್ತರಿಸಿದ್ದ. ‘ಕಾರಿನ ಹವಾನಿಯಂತ್ರಣ (ಏರ್ ಕಂಡೀಷನ್) ವ್ಯವಸ್ಥೆಯನ್ನು ಚಾಲೂ ಮಾಡಿದರೆ, ಪೆಟ್ರೋಲ್/ಡಿಸೇಲ್ ವೆಚ್ಚ ಕಡಿಮೆಯಾಗುವುದೋ ಅಥವಾ ಕಾರಿನ ಕಿಟಕಿಗಳನ್ನು ತೆರೆದು ಓಡಿಸಿದಾಗಲೋ?’ ಎಂಬ ಓದುಗನ ಪ್ರಶ್ನೆಗೆ, ಅಡಮ್ಸ ಹಾರಿಕೆ ಉತ್ತರ ಕೊಡದೇ, ಇದಕ್ಕೆ ಸರಿಯಾದ ಉತ್ತರವನ್ನು ಕಂಡು ಕೊಳ್ಳಲು, ಎರಡೂ ಬಗೆಯಲ್ಲಿ ಕಾರನ್ನು ನೂರಾರು ಕಿಮಿ ಓಡಿಸಿಕೊಂಡು ಹೋಗಿ ನಂತರ ಉತ್ತರ ಬರೆದಿದ್ದ.

ಕೆಲವು ವರ್ಷಗಳ ಹಿಂದೆ, ಓದುಗನೊಬ್ಬ, ‘ಇಂಗ್ಲೆಂಡಿನ ರಾಣಿ ಎಲಿಜಬೆತ್ ತಮ್ಮೊಂದಿಗೆ ಸದಾ ಒಂದು ಪರ್ಸ್ ಅಥವಾ ಹ್ಯಾಂಡ್ ಬ್ಯಾಗ್ ಹಿಡಿದಿರುತ್ತಾರಲ್ಲ, ಅದರೊಳಗೆ ಏನನ್ನು ಇಟ್ಟುಕೊಂಡಿರುತ್ತಾರೆ?’ ಎಂದು ಕೇಳಿದ್ದ. ಅದಕ್ಕೆ ಅಡಮ್ಸ್ ನೀಡಿದ ಉತ್ತರ – ಕೆಲವು ವರ್ಷಗಳ ಹಿಂದೆ, ನನಗೆ ರಾಣಿಯನ್ನು ಭೇಟಿ ಯಾಗುವ ಅವಕಾಶ ಸಿಕ್ಕಿತ್ತು. ಆಗ ಈ ಪ್ರಶ್ನೆ ಕೇಳಿದ್ದಿದ್ದರೆ, ಅದಕ್ಕೆ ಅವರಿಂದಲೇ ಉತ್ತರ ಪಡೆದು ನಿಮಗೆ ತಿಳಿಸುತ್ತಿದ್ದೆ. ಈಗ ಆ ಸಾಧ್ಯತೆಯಂತೂ ಇಲ್ಲ. ರಾಣಿ ಯನ್ನೇ ಭೇಟಿ ಮಾಡಲು ಸಾವಿರಾರು ಕಿಮಿ ಟ್ರಾನ್ಸ್ ಅಟ್ಲಾಂಟಿಕ್ ಪ್ರಯಾಣ ಮಾಡುವ ಬದಲು, ನಾನು ವಾಷಿಂಗ್ಟನ್ ಡಿಸಿಯಲ್ಲಿರುವ ಬ್ರಿಟಿಷ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿದೆ. ಅವರಿಂದ ಪೂರಕ ಉತ್ತರ ಬರಲಿಲ್ಲ. ಫ್ರೀಡಂ ಆಫ್ ಇನರ್ಮೇಷನ್ ಅಂದ್ರೆ ಏನು ಎಂಬುದು ಗೊತ್ತಿಲ್ಲದಂತೆ ಅವರು ವರ್ತಿಸಿದರು. ನಂತರ ನಾನು ಲಂಡನ್‌ನ ಬಕಿಂಗ್ ಹ್ಯಾಮ್ ಅರಮನೆಯನ್ನು ಸಂಪರ್ಕಿಸಿದೆ.

ಇದೇನು ಸಣ್ಣ ಸಾಹಸವಲ್ಲ. ಅರಮನೆಯ ಪತ್ರಿಕಾ ವಿಭಾಗದ ಮೇಲ್ವಿಚಾರಕಿಯೊಬ್ಬಳನ್ನು ಸಂಪರ್ಕಿಸಿದಾಗ, ಆಕೆ ನನ್ನ ಪ್ರಶ್ನೆಗೆ, she carries items of a personal nature, but not money ಎಂದು ಹೇಳಿದಳು. ಇನ್ನಷ್ಟು ವಿವರ ನೀಡುವಂತೆ ಒತ್ತಾಯಿಸಿದಾಗ, ನೀವು ಬಯಸಿದ ಉತ್ತರ ರಾಣಿಯವರ ಹ್ಯಾಂಡ್ ಬ್ಯಾಗ್ ಒಳಗೆ ಇದೆ, ನೀವು ಅದರೊಳಗೆ ಇಣುಕಿ ನೋಡಬಹುದು ಎಂದು ಹಾಸ್ಯ ಚಟಾಕಿ ಹಾರಿಸಿ ಫೋನ್ ಇಟ್ಟುಬಿಟ್ಟಳು. ಕೆಲವು ವರ್ಷಗಳ ಹಿಂದೆ, ‘ಮೆಜೆಸ್ಟಿ’ ಪತ್ರಿಕೆಯಲ್ಲಿ ಈ ಬಗ್ಗೆ ಒಂದು ಸಣ್ಣ ಲೇಖನ ಪ್ರಕಟವಾಗಿತ್ತು. ರಾಣಿ ತನ್ನ ಹ್ಯಾಂಡ್ ಬ್ಯಾಗ್‌ನಲ್ಲಿ ಬಾಚಣಿಕೆ, ಕರವಸ, ಲಿಪ್‌ಸ್ಟಿಕ್, ಸಣ್ಣ ಕನ್ನಡಿಯನ್ನು ಇಟ್ಟುಕೊಳ್ಳು ತ್ತಾಳೆ ಎಂದು ಆ ಲೇಖನದಲ್ಲಿ ಹೇಳಲಾಗಿತ್ತು. ಅಷ್ಟೇ ಅಲ್ಲ, ಸ್ವಲ್ಪ ಹಣವನ್ನು ಸಹ ಇಟ್ಟುಕೊಳ್ಳುತ್ತಾಳಂತೆ. ರಾಣಿ ತಮ್ಮ ಹ್ಯಾಂಡ್ ಬ್ಯಾಗ್ ಅನ್ನು ಸೆಕ್ಯೂರಿಟಿ ಬ್ಲಾಂಕೆಟ್ ಆಗಿಯೂ ಉಪಯೋಗಿಸುತ್ತಾಳಂತೆ.

ಅಷ್ಟೇ ಅಲ್ಲ, ರಾಣಿ ಎಲ್ಲಿಗೇ ಹೋಗಲಿ, ಇಡೀ ದಿನ ಆ ಹ್ಯಾಂಡ್ ಬ್ಯಾಗ್ ಅನ್ನು ಹಿಡಿದೇ ಇರುತ್ತಾಳೆ. ಹ್ಯಾಂಡ್ ಬ್ಯಾಗ್ ಇಲ್ಲದ ರಾಣಿಯ ಫೋಟೋವನ್ನು ನೋಡು ವುದು ಸಾಧ್ಯವಿಲ್ಲ, ಅಷ್ಟರ ಮಟ್ಟಿಗೆ ಅದು ಅವರ ಭಾಗವೇ ಆಗಿದೆ. ಬಕಿಂಗ್ ಹ್ಯಾಮ್ ಅರಮನೆ ಮತ್ತು ಇನ್ನಿತರ ರಾಯಲ್ ರೆಸಿಡೆನ್ಸಿಯಲ್ಲಿ ಅವರು ಹೋಗುವ ಕೋಣೆಗಳಲ್ಲಿರುವ ಎಲ್ಲ ಟೇಬಲ್ ಮತ್ತು ಡೆಸ್ಕ್‌ಗಳಲ್ಲಿ ಹ್ಯಾಂಡ್ ಬ್ಯಾಗ್ ಅನ್ನು ಇಡಲು ಹುಕ್ (ಕೊಕ್ಕೆ) ವ್ಯವಸ್ಥೆಯನ್ನು ಮಾಡಲಾಗಿದೆ. ರಾಣಿ ಎಂದೂ ಭುಜಕ್ಕೆ ನೇತು ಹಾಕಿಕೊಳ್ಳುವ ಶೌಲ್ಡರ್ ಬ್ಯಾಗ್ ಅಥವಾ ಕ್ಲಚ್ ಬ್ಯಾಗ್‌ಗಳನ್ನು ಹಿಡಿಯುವುದಿಲ್ಲ. ಯಾವ ಸಂದರ್ಭದಲ್ಲಿ ರಾಣಿ ಹಸ್ತಲಾಘವ ಮಾಡಬೇಕಾದ ಮತ್ತು ಹೂಗುಚ್ಛವನ್ನು ಸ್ವೀಕರಿಸಬೇಕಾದ ಸಂದರ್ಭ ಬರುತ್ತದೆ ಎಂಬುದನ್ನು ನಿರೀಕ್ಷಿಸುವುದು ಸಾಧ್ಯವಿಲ್ಲದ್ದರಿಂದ, ಅದಕ್ಕೆ ತೊಡಕಾಗುವ ಶೌಲ್ಡರ್ ಬ್ಯಾಗ್ ಅಥವಾ ಕ್ಲಚ್ ಬ್ಯಾಗ್ ಅನ್ನು ಅವರು ಹಿಡಿಯುವುದಿಲ್ಲ. ಇನ್ನು ರಾಣಿಯ ಹ್ಯಾಟ್ ಮತ್ತು ಕೈಗವಸು ಬಗ್ಗೆ ಹೇಳೋದು ಬಹಳಷ್ಟಿದೆ. ಇಷ್ಟು ಸಾಕು.

ಸೆಸಿಲ್ ಅಡಮ್ಸ್ ತನ್ನ ಅಂಕಣದಿಂದ ಒಂದು ವಿಶ್ವಾಸ ಮತ್ತು ಭರವಸೆಯನ್ನಂತೂ ನೀಡಿದ್ದ. ಅದೇನೆಂದರೆ, ಓದುಗರ ಮನಸ್ಸಿನಲ್ಲಿ ಯಾವುದೇ ಪ್ರಶ್ನೆ ಮೂಡಿ ದರೂ, ಸೆಸಿಲ್ ಆಡಮ್ಸ್ ನಿಂದ ಸಮರ್ಪಕ ಉತ್ತರ ಪಡೆಯಬಹುದು. ಸೂರ್ಯನ ಅಡಿಯಲ್ಲಿನ ಯಾವುದೇ ವಿಷಯದ ಬಗ್ಗೆ ಪ್ರಶ್ನೆ ಕೇಳಿದರೂ ಆತನಿಂದ ಸಮರ್ಪಕ ಉತ್ತರ ನಿರೀಕ್ಷಿಸಬಹುದು. ಆತ ಎಂದೂ ಹಾರಿಕೆಯ ಉತ್ತರ ಕೊಡುವುದಿಲ್ಲ. ಇದೇ ಅವನ ಅಂಕಣದ ಹೆಚ್ಚುಗಾರಿಕೆ. ಪ್ರತಿ ಉತ್ತರದಲ್ಲೂ ಆತ ಅದಕ್ಕಾಗಿ ಪಟ್ಟ ಪರಿಶ್ರಮ ಮತ್ತು ನಡೆಸಿದ ಪ್ರಯತ್ನಗಳನ್ನು ಕಾಣಬಹುದು. ಓದುಗರು ಉದ್ದೇಶಪೂರ್ವಕವಾಗಿ ಅಸಂಬದ್ಧ ಎನಿಸುವಂಥ ಪ್ರಶ್ನೆಗಳನ್ನು ಕೇಳಿದರೂ, ಆತ ಅದಕ್ಕೆ ಸಂಯಮದಿಂದ ಉತ್ತರಿಸುವುದು ಆ ಅಂಕಣದ ಘನತೆಯನ್ನು ಹೆಚ್ಚಿಸಲು ಸಹಕಾರಿಯಾಯಿತು.

ಓದುಗನೊಬ್ಬ ‘ಮನುಷ್ಯನ ಮರ್ಮಾಂಗಗಳ ಮೇಲೆ ಬೆಳೆಯುವ ಕೂದಲುಗಳ ಕಾರ್ಯವೇನು? ಅದರಿಂದ ಏನು ಪ್ರಯೋಜನ?’ ಎಂಬ ಪ್ರಶ್ನೆಯನ್ನು ಕೇಳಿ ದಾಗಲೂ ಅಡಮ್ಸ ಸುದೀರ್ಘ ವೈಜ್ಞಾನಿಕ ಉತ್ತರವನ್ನು ನೀಡಿ, ಕೊನೆಯಲ್ಲಿ, ‘ನಿನಗೆ ಒಂದಷ್ಟು ಕತ್ತರಿಸುವ ಕೆಲಸ ಕೊಡಲು, ದೇವರು ಅಲ್ಲಿ ಅವುಗಳನ್ನು ಬೆಳೆಸಿ ದ್ದಾನೆ. ಮೈಯೆಲ್ಲ ಕೂದಲನ್ನೇ ತುಂಬಿಕೊಂಡಿರುವ ಕರಡಿಯನ್ನು ನೋಡಿದ್ದರೆ, ಅದರ ಕಷ್ಟವನ್ನು ಅರಿತಿದ್ದರೆ, ನೀವು ಈ ಪ್ರಶ್ನೆ ಕೇಳುತ್ತಿರಲಿಲ್ಲ’ ಎಂದು ಕಿಚಾ ಯಿಸಿದ್ದ.

ಈ ಅಂಕಣದಲ್ಲಿ ಅಡಮ್ಸನ ಉತ್ತರಗಳಷ್ಟೇ ಅಲ್ಲ, ಓದುಗರ ಪ್ರಶ್ನೆಗಳೂ ಅಷ್ಟೇ bright ಆಗಿ ಇರುವುದು ಗಮನಾರ್ಹ. ಪ್ರಶ್ನೆಗಳೇ ಅವನಲ್ಲಿ ಉತ್ತರ ಕಂಡುಹಿಡಿಯಲು ಪ್ರೇರೇಪಿಸುತ್ತಿರಬಹುದು. ಅಂಥ ಕೆಲವು ಪ್ರಶ್ನೆಗಳು – ನಾವು ನಮ್ಮ ಕಾರನ್ನು ಬೆಳಕಿನ ವೇಗದಲ್ಲಿ ಚಲಾಯಿಸಿದರೆ, ಆಗ ಕಾರಿನ ಹೆಡ್ ಲೈಟ್ ಆನ್ ಮಾಡಿಟ್ಟುಕೊಂಡರೆ, ಏನಾಗಬಹುದು?, ವಿಮಾನದಲ್ಲಿರುವ ಪ್ರಯಾಣಿಕರು ಆಹಾರವನ್ನು ಸೇವಿಸಿದ ನಂತರ ವಿಮಾನದ ತೂಕ ಅಥವಾ ಭಾರ ಕಡಿಮೆಯಾಗುವುದಾ ಅಥವಾ ಅಷ್ಟೇ ಇರುವುದಾ?, ಚಂದ್ರನ ಮೇಲೆ ಒಂದು ಮಗು ಹುಟ್ಟುತ್ತದೆ ಎಂದು ಭಾವಿಸಿ, ಅಲ್ಲಿ ಅದು ಸುಮಾರು ಇಪ್ಪತ್ತು ವರ್ಷಗಳನ್ನು ಕಳೆದು ಭೂಮಿಗೆ ಬಂದರೆ ಇಲ್ಲಿನ ಗುರುತ್ವಾಕರ್ಷಣ ಶಕ್ತಿಗೆ ಹೊಂದಿಕೊಳ್ಳುವುದಾ?, ಮಸಾಲೆ ಪದಾರ್ಥಗಳ ಅಡುಗೆಯನ್ನು ಊಟ ಮಾಡಿದ ನಂತರ, ನೀರನ್ನು ಕುಡಿದರೆ ಅದು ರುಚಿಸುವುದಿಲ್ಲ ಏಕೆ?, Tit for tat ನಲ್ಲಿ Tat ಅಂದ್ರೆ ಏನು?, ಹೆಂಗಸರು ಮತ್ತು ಗಂಡಸರ ಅಂಗಿಯಲ್ಲಿ ಬಟನ್‌ಗಳು ಏಕೆ ಬೇರೆ ಬೇರೆ ಕಡೆಗಳಲ್ಲಿರುತ್ತವೆ?, ಸೊನ್ನೆಯಿಂದ ಕೊನೆಗೊಳ್ಳುವ ವರ್ಷದಲ್ಲಿ ಅಮೆರಿಕದ ಅಧ್ಯಕ್ಷರು ಆಯ್ಕೆಯಾದರೆ, ಅವರು ಅಧಿಕಾರದಲ್ಲಿದ್ದಾಗ ಸಾಯುತ್ತಾರಂತೆ ಅಥವಾ ಹತ್ಯೆಯಾಗುತ್ತಾರೆ ಎಂಬ ಪ್ರತೀತಿ ಇದೆಯಲ್ಲ, ಇದು ನಿಜವಾ?, ಮುಳ್ಳುಹಂದಿಗಳು ಹೇಗೆ ಪರಸ್ಪರ ಆಲಂಗಿಸಿಕೊಳ್ಳುತ್ತವೆ ಮತ್ತು ಪ್ರೀತಿ ಮಾಡುತ್ತವೆ?, Hip Hip Hurrah ಪದ ಹೇಗೆ ಹುಟ್ಟಿಕೊಂಡಿತು? ಇಂಗ್ಲಿಷಿನ Shameful ಮತ್ತು Shameless ಪದದ ಅರ್ಥ ಒಂದೇ.

Full ಹೇಗೆ less ಆಗುತ್ತದೆ?, Colonel  ಪದವನ್ನು ಕೊಲೊನೆಲ್ ಎಂದು ಉಚ್ಚರಿಸದೇ, ಕರ್ನಲ್ ಎಂದು ಏಕೆ ಉಚ್ಚರಿಸುತ್ತೇವೆ?, ಕೆಂಪು ದೀಪ ಕಂಡಾಗ ನಿಲ್ಲಬೇಕು ಮತ್ತು ಹಸಿರು ದೀಪ ಕಂಡಾಗ ಮುನ್ನಡೆಯಬೇಕು ಎಂಬ ನಿಯಮ ಮಾಡಿದವರು ಯಾರು?, ಚುನಾವಣೆಗಳಲ್ಲಿ ಗೆಲ್ಲುವ ಮತ್ತು ಸೋಲುವ ಅಭ್ಯರ್ಥಿ ಗಳ ಎತ್ತರದ ಬಗ್ಗೆ ಯಾರಾದರೂ ತುಲನಾತ್ಮಕ ಅಧ್ಯಯನ ಮಾಡಿದ್ದಾರೆ?, ಗಗನಚುಂಬಿ ಕಟ್ಟಡಗಳ ಆಯುಷ್ಯ ತೀರಿದ ನಂತರ ಏನಾಗುತ್ತದೆ?, ರೆಸ್ಟ್
ರೂಮ್‌ನಲ್ಲಿ ಯಾರೂ ರೆಸ್ಟ್ ಮಾಡುವುದಿಲ್ಲ, ಆದರೂ ರೆಸ್ಟ್ ರೂಮ್ ಎಂದು ಯಾಕೆ ಕರೆಯುತ್ತಾರೆ?, ಆನೆ- ಖಡ್ಗಮೃಗವನ್ನು ಸಂಭೋಗಿಸಿದರೆ ಏನಾಗುತ್ತದೆ?, ಇಬ್ಬರೋ, ಮೂವರೋ ಚುನಾವಣೆಗೆ ನಿಂತಾಗ ಎತ್ತರದ ಅಭ್ಯರ್ಥಿಯೇ ಗೆಲ್ಲುತ್ತಾನಂತೆ, ಹೌದಾ?, ಯುದ್ಧವಾದಾಗ ಹಳದಿ ರಿಬ್ಬನ್ ಕಟ್ಟಬೇಕೆಂದು ಯಾರು ತೀರ್ಮಾನಿಸುತ್ತಾರೆ ಮತ್ತು ಬಿಳಿ ಅಥವಾ ಬೇರೆ ಬಣ್ಣದ ರಿಬ್ಬನ್ ಯಾಕೆ ಕಟ್ಟುವುದಿಲ್ಲ?, ಆಹಾರವನ್ನು ಹುಡುಕಿಕೊಂಡು ಇರುವೆಗಳು ಎಷ್ಟು ದೂರ ನಡೆದು
ಹೋಗುತ್ತವೆ? ಕಿತ್ತಳೆಗೆ ಕಿತ್ತಳೆ ಎಂದು ಹೆಸರಿಟ್ಟರು ಯಾರು? ಈ ಎಲ್ಲ ಪ್ರಶ್ನೆಗಳಿಗೂ ಅಡಮ್ಸ ಅತ್ಯಂತ ಸಮಂಜಸ ಮತ್ತು ಕುತೂಹಲಕರ ಉತ್ತರಗಳನ್ನು ನೀಡಿದ್ದಾನೆ.

ಕೆಲವೊಂದು ಪ್ರಶ್ನೆಗಳಿಗೆ ಆತ ನೀಡಿದ ಉತ್ತರ ಸಾವಿರ ಪದಗಳಿಗಿಂತ ದೀರ್ಘವಾಗಿವೆ. ತಾನು ನೀಡಿದ ಉತ್ತರದಲ್ಲಿ ಓದುಗರು ತಪ್ಪುಗಳನ್ನು ಪತ್ತೆ ಹಚ್ಚಿದರೆ, ತಪ್ಪೊಪ್ಪಿಗೆ (mea culpa) ಬರೆದು, mea culpa ಎಂಬ ಪದದ ವ್ಯುತ್ಪತ್ತಿ, ಪ್ರಯೋಗದ ಬಗ್ಗೆ ಉದ್ದದ ವಿವರಣೆ ನೀಡುತ್ತಾನೆ. ‘ನಾನು ಹೇಳಿದ್ದೇ ಅಂತಿಮ ಸತ್ಯವಲ್ಲ. ನನ್ನ ಉತ್ತರದಲ್ಲಿ ತಪ್ಪಿರಬಾರದು ಎಂದು ನಾನು ಬಹಳ ಎಚ್ಚರವಹಿಸುತ್ತೇನೆ. ಆದರೂ ತಪ್ಪುಗಳು ಕಂಡು ಬಂದರೆ, ಅದನ್ನು ಒಪ್ಪಿಕೊಳ್ಳಲು ನನಗೆ ಸ್ವಲ್ಪವೂ ಹಿಂಜರಿಕೆ ಇಲ್ಲ. ಆದರೆ ನನ್ನನ್ನು ಅನಗತ್ಯವಾಗಿ ಕಟ್ಟಿಹಾಕುವ ಪ್ರಯತ್ನ ಮಾಡಿದರೆ, ನನಗೆ ಬಿಡಿಸಿಕೊಳ್ಳುವುದು ಗೊತ್ತು’ ಎಂದೂ ಅಡಮ್ಸ್ ಹೇಳಿದ್ದಾನೆ.
ಓದುಗರ ಪ್ರಶ್ನೆಗಳಿಗೆ ನೀಡಿದ ಉತ್ತರಗಳನ್ನೆಲ್ಲ ಸೇರಿಸಿ, ಸೆಸಿಲ್ ಅಡಮ್ಸ್ The Straight Dope ಎಂಬ ಮೂರು ಪುಸ್ತಕಗಳನ್ನು ಪ್ರಕಟಿಸಿದ್ದಾನೆ.

ಈ ಕೃತಿಯ ಕೊನೆಯಲ್ಲಿ ಲೇಖಕರ ಪರಿಚಯ (About the Author) ದಲ್ಲಿ ಆತ ತನ್ನ ಬಗ್ಗೆ ಹೀಗೆ ಬರೆದುಕೊಂಡಿದ್ದಾನೆ – Cecil Adams is the author. You got a problem with that? ಅಷ್ಟೇ. ಓದುಗರ ತರಹೇವಾರಿ ಪ್ರಶ್ನೆಗಳಿಗೆಲ್ಲ ಆಡಮ್ಸ್ ನೇನೋ ಉತ್ತರಿಸುತ್ತಾನೆ. ಆದರೆ ಮೊದಲು ಮತ್ತು ಕೊನೆ ಯಲ್ಲೂ ಓದುಗರ ಮನಸ್ಸಿನಲ್ಲಿ ಕಾಡುವ ಪ್ರಶ್ನೆ ಅಂದ್ರೆ ಯಾರು ಈ ಸೆಸಿಲ್ ಅಡಮ್ಸ್? ಹೀಗೂ ಉಂಟೇ?