ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾವಾಗ ಮರಾಠ ಅಭಿವೃದ್ಧಿ ಪ್ರಾಧಿಕಾರದ ಘೋಷಣೆ ಮಾಡಿದರೋ, ಆಗ ರಾಜ್ಯ ದಲ್ಲಿ ಸರಕಾರದ ವಿರುದ್ಧ ವಿರೋಧದ ಅಲೆ ಏಳಲು ಶುರುವಾಯಿತು.
ಕೇವಲ ಪ್ರತಿಪಕ್ಷಗಳು ಮಾತ್ರವಲ್ಲದೇ, ಪಕ್ಷದಲ್ಲಿಯೇ ಅನೇಕರು ಮುಖ್ಯಮಂತ್ರಿ ಗಳ ಈ ನಿರ್ಧಾರವನ್ನು ವಿರೋಧಿಸಲು ಶುರು ಮಾಡಿದರು. ಅಧಿಕೃತ ಘೋಷಣೆ ಬಳಿಕ ಮರಾಠ ಅಭಿವೃದ್ಧಿ ಪ್ರಾಧಿಕಾರದಿಂದ(ಈಗ ಮರಾಠ ಸಮುದಾಯ ಅಭಿವೃದ್ಧಿ ನಿಗಮ) ಸರಕಾರಕ್ಕೆ ಹಾಗೂ ವೈಯಕ್ತಿಕವಾಗಿ ಯಡಿಯೂರಪ್ಪ ಅವರಿಗೆ ಆದ ‘ಡ್ಯಾಮೇಜ್’ನ ಪ್ರಮಾಣ ಗ್ರಹಿಸಿದರು. ಆದರೆ ಆ ವೇಳೆ ಗಾಗಲೇ ರೈಲು ಹೋಗಿಯಾಗಿತ್ತು. ಆದ ಡ್ಯಾಮೇಜ್ ಸರಿಪಡಿಸಿಕೊಳ್ಳಲು, ಕೆಲ ವರ್ಷಗಳ ಬೇಡಿಕೆಯಾಗಿರುವ ಲಿಂಗಾಯತ ಅಭಿವೃದ್ಧಿ ಮಂಡಳಿ ಯನ್ನು ರಚಿಸಲು ಸರಕಾರ ಮುಂದಾಗಿದೆ.
ಇದರಿಂದ ಸಮಸ್ಯೆ ಸರಿ ಹೋಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ಸರಕಾರವಿತ್ತು. ಆದರೆ ಯಡಿಯೂರಪ್ಪ ಅವರು ಹಾಕಿದ
ಯೋಚನೆ ಉಲ್ಟಾ ಹೊಡೆದು, ಜಾತಿಗೊಂದು ಮಂಡಳಿ, ಧರ್ಮಕ್ಕೊಂದು ಪ್ರಾಧಿಕಾರ ನೀಡಲು ಸಾಧ್ಯವೇ ಎನ್ನುವ ಪ್ರಶ್ನೆ ಶುರುವಾಯಿತು. ಇಲ್ಲಿಂದ ಶುರುವಾದ ನಿಗಮ ಮಂಡಳಿಯ ರಚನೆ ಗುದ್ದಾಟ ಈಗಲೂ ಮುಕ್ತಾಯವಾಗಿಲ್ಲ. ಲಿಂಗಾಯತರಿಗೆ
ನಿಗಮ ಮಂಡಳಿ ನೀಡುತ್ತಿದ್ದಂತೆ, ಇತ್ತ ಒಕ್ಕಲಿಗರು, ಅತ್ತ ಕುರುಬರು ಹೀಗೆ, ಜಾತಿ, ಉಪಜಾತಿ, ಉಪಜಾತಿಯಲ್ಲಿರುವ ಪಂಗಡ ಹೀಗೆ ಒಬ್ಬೊಬ್ಬರು ಒಂದೊಂದು ನಿಗಮ, ಪ್ರಾಧಿಕಾರಿ, ಮಂಡಳಿ ಕೇಳಲು ಶುರು ಮಾಡಿದರು.
ಈ ರೀತಿ ಅಭಿವೃದ್ಧಿ ನಿಗಮ ಕೇಳುತ್ತಿರುವುದು ಹೊಸತಲ್ಲ. ಆದರೆ ಜಾತಿಗೊಂದು ನಿಗಮ ಮಂಡಳಿ ಘೋಷಿಸುತ್ತಾ ಹೋದರೆ, ಮುಂದೊಂದು ದಿನ ಸರಕಾರದ ಅರ್ಧ ಬಜೆಟ್ ಈ ನಿಗಮ ಮಂಡಳಿಗಳಿಗೆ ನೀಡಬೇಕಾದ ಅನಿವಾರ್ಯತೆ ಎದುರಾದರೂ ಅಚ್ಚರಿಯಿಲ್ಲ. ರಾಜ್ಯದಲ್ಲಿ ನಿಗಮ ಮಂಡಳಿ, ಅಭಿವೃದ್ಧಿ ಪ್ರಾಧಿಕಾರ, ವಿವಿಧ ಅಕಾಡೆಮಿಗಳು ಸೇರಿಸಿದರೆ ಇವುಗಳ ಸಂಖ್ಯೆ
200ಕ್ಕಿಂತಲೂ ಹೆಚ್ಚಾಗಲಿದೆ. ಈ 200 ಮಂಡಳಿ ಅಥವಾ ಅಕಾಡೆಮಿಗಳಿಗೆ 200 ಅಧ್ಯಕ್ಷ, ಉಪಾಧ್ಯಕ್ಷರು, ಅವರಿಗೆ ಆಪ್ತ ಸಹಾಯಕರು, ಕಾರು, ಕಾರಿಗೆ ಚಾಲಕ, ಡಿಸೇಲ್, ಇವಕ್ಕೊಂದು ಕಚೇರಿ, ಒಂದಿಷ್ಟು ಮಂದಿ ಕೆಲಸಗಾರರು ಹೀಗೇ, ರಾಜಕೀಯ ಒತ್ತಡಕ್ಕೆ ಮಣಿದು ನಿಗಮ ಮಂಡಳಿಗಳನ್ನು ಆರಂಭಿಸುತ್ತಾ ಹೋದರೆ, ‘ಸಂನ್ಯಾಸಿ ಸಂಸಾರ’ ಆಗುವುದರಲ್ಲಿ ಅನುಮಾನವೇ ಇಲ್ಲ.
ಈ ರೀತಿ ಸ್ಥಾಪನೆಯಾಗುವ ಮಂಡಳಿ ಅಥವಾ ಪ್ರಾಧಿಕಾರಗಳಿಂದ ಆಡಳಿತ ನಡೆಸುವ ರಾಜಕೀಯ ಪಕ್ಷಗಳ ಶಾಸಕರು ಅಥವಾ
ಕಾರ್ಯಕರ್ತರ ಅಸಮಾಧಾನವನ್ನು ತಣಿಸಲು ಇರುವ ‘ಖುರ್ಚಿಯಾಗುವುದು’ ಬಿಟ್ಟರೆ ಮತ್ಯಾವ ಸಾಧನೆ ಆಗುವುದಿಲ್ಲ.
ಉಪಚುನಾವಣೆ ಮೊದಲು ಕಾಡುಗೊಲ್ಲ ಅಭಿವೃದ್ಧಿ ಮಂಡಳಿ ಸ್ಥಾಪಿಸಿ, ಬಳಿಕ ಲಿಂಗಾಯತ ಅಭಿವೃದ್ಧಿ ಮಂಡಳಿ ಸ್ಥಾಪಿಸು ತ್ತಿದ್ದಂತೆ, ಪ್ರತಿಪಕ್ಷಗಳು ಆಕ್ಷೇಪವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ‘ರಾಜ್ಯದಲ್ಲಿ 512 ಜಾತಿಗಳಿದ್ದರೆ, ಅವೆಲ್ಲಕ್ಕೂ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲು ಸಾಧ್ಯವೇ?’ ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ಅವರು ಪ್ರಶ್ನಿಸಿದಂತೆ, ಎಲ್ಲರಿಗೂ ಒಂದೊಂದು ನಿಗಮ ಮಂಡಳಿ ನೀಡುತ್ತಾ ಹೋದರೆ ಸರಕಾರ ನಡೆಸುವುದಾದರೂ ಹೇಗೆ? ಎಲ್ಲವನ್ನು ನಿಗಮ ಮಂಡಳಿ ಕೈಯಿಂದಲೇ ಮಾಡಿಸಲು ಸಾಧ್ಯವೇ
ಎನ್ನುವುದನ್ನು ನೋಡಬೇಕಿದೆ.
ಇನ್ನು ಈ ಎಲ್ಲವನ್ನು ಮೀರಿ, ಸಮುದಾಯಗಳ ಅಭಿವೃದ್ಧಿಗೆ ನಿಗಮ ಮಂಡಳಿ ಸ್ಥಾಪಿಸಲಾಗುವುದು ಎಂದು ಹೇಳುವ ಆಡಳಿತ ನಡೆಸುವವರು ಒಂದು ವಿಷಯವನ್ನು ಯೋಚಿಸಬೇಕಿದೆ. 20ರಿಂದ 30 ಲಕ್ಷ ಜನಸಂಖ್ಯೆಯಿರುವ ಸಮುದಾಯಕ್ಕಾಗಿ ಒಂದು ಮಂಡಳಿ ಸ್ಥಾಪಿಸಿ, ಅದಕ್ಕೆ 10 ಕೋಟಿ ರು. ಅನುದಾನ ನೀಡಿ, ಅದರಲ್ಲಿ ನಾಲ್ಕೈದು ಕೋಟಿ ಬದ್ಧ ಖರ್ಚಿಗೆ ಬಳಸಿದರೆ, ಉಳಿಯು ವುದೇ ಐದು ಕೋಟಿ. ರು. ಈ ಐದು ಕೋಟಿ ರು.ಗಳಲ್ಲಿ 20 ಲಕ್ಷ ಜನಸಂಖ್ಯೆಯ ಎಲ್ಲವನ್ನು ತಗೆದುಕೊಂಡರೂ, ಒಬ್ಬರಿಗೆ ವರ್ಷಕ್ಕೆ 250 ರು. ಖರ್ಚು ಮಾಡಬಹುದು. ಹೋಗಲಿ, 20 ಲಕ್ಷದಲ್ಲಿ 10 ಲಕ್ಷ ಮಂದಿ ಅನೂಲಸ್ಥರಿದ್ದರೂ, ಇನ್ನುಳಿದ 10 ಲಕ್ಷ ಜನರಿಗೆ ಐದು ಕೋಟಿ ರು. ಹಂಚಿದರೆ ಒಬ್ಬೊಬ್ಬರಿಗೆ 500 ರು. ನೀಡಬಹುದು. ಇದರಿಂದ ಯಾವ ಸಮುದಾಯ ಅಥವಾ ವ್ಯಕ್ತಿಯ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಸರಕಾರ ಯೋಚಿಸಬೇಕು.
ರಾಜಕೀಯ ಅಥವಾ ಆಡಳಿತ ಪಕ್ಷದಲ್ಲಿರುವವರ ಕೆಲವರನ್ನು ಒಲೈಸುವುದಕ್ಕಾಗಿ ಆರಂಭಿಸುವ ನಿಗಮ ಮಂಡಳಿಗಳಿಂದ ಆಗುವ ಸಮಸ್ಯೆಗಳೇನು ಎನ್ನುವುದಕ್ಕೆ ಉದಾಹರಣೆ ನೀಡುವುದಾದರೆ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿಯನ್ನು ನೀಡ ಬಹುದು. ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ಘೋಷಿಸಿದರು.
ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ಬಳಿಕ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಿಸಿದರು. ಅದಕ್ಕಾಗಿ 5 ಕೋಟಿ ರು. ಬಜೆಟ್ ಅನ್ನು ನೀಡಲಾಯಿತು. ಆದರೆ ಈ ಮಂಡಳಿಗೆ ಬೇಕಿರುವ ಕಚೇರಿ, ಅಧ್ಯಕ್ಷರಿಗೆ ನೀಡುವ ಸೌಲಭ್ಯವನ್ನು ಪಡೆಯಲು ಹಲವು ತಿಂಗಳ ಕಾಲ ಅಧ್ಯಕ್ಷರಾದವರು ಅಲೆದಾಡಿರುವುದನ್ನು ನಾವೆಲ್ಲ ನೋಡಿದ್ದೇವೆ. ಇದೇ ರೀತಿ
ಇನ್ನೂ ಹಲವು ಅಭಿವೃದ್ಧಿ ಮಂಡಳಿಗಳು, ತಮ್ಮ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ವೇತನ ನೀಡಲು ಸಾಧ್ಯವಾಗದಷ್ಟು ವಾರ್ಷಿಕ ಅನುದಾನವನ್ನು ಪಡೆದು ಕೊಂಡಿರುತ್ತವೆ. ಈ ರೀತಿಯ ನಿಗಮ ಮಂಡಳಿಗಳಿಂದ, ಆ ನಿರ್ದಿಷ್ಟ ಸಮುದಾಯದ ಅಭಿವೃದ್ಧಿ ಮಾಡುವುದಾದರೂ ಸಾಧ್ಯವೇ ಎನ್ನುವುದನ್ನು ಯೋಚಿಸಬೇಕಿದೆ.
ಇಲ್ಲಿ ಪ್ರಸ್ತಾಪಿಸಿದ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಉದಾಹರಣೆ ಅಷ್ಟೇ. ಸರಕಾರದಿಂದ ಸ್ಥಾಪಿಸಲಾಗಿರುವ ಬಹುತೇಕ ನಿಗಮ ಮಂಡಳಿಗಳ ಸಮಸ್ಯೆ ಇದೇ ಆಗಿದೆ. ಸಮುದಾಯಗಳ ಅಭಿವೃದ್ಧಿಗೆಂದು ಸ್ಥಾಪಿಸಲಾಗುವ ಈ ನಿಗಮ ಮಂಡಳಿಗಳಿಗೆ 5 ರಿಂದ 10 ಕೋಟಿ ರು. ಅನುದಾನವನ್ನು ಸರಕಾರ ವಾರ್ಷಿಕವಾಗಿ ಬಿಡುಗಡೆ ಮಾಡುತ್ತದೆ.
ಕೆಎಸ್‌ಆರ್‌ಟಿಸಿ, ವಾಯುವ್ಯ ಸಾರಿಗೆ ನಿಗಮ ಸೇರಿದಂತೆ ಕೆಲವು ನಿಗಮಗಳನ್ನು ಹೊರತುಪಡಿಸಿದರೆ, ಇನ್ನುಳಿದ ಬಹುತೇಕ ನಿಗಮ ಮಂಡಳಿಗೆ Returns ಇರುವುದಿಲ್ಲ. ಇನ್ನು ಬಿಡುಗಡೆಯಾಗುವ ಐವತ್ತು ಕೋಟಿ ರು.ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಅನುದಾನ, ಮಂಡಳಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ವೇತನ ಸೇರಿದಂತೆ ಇನ್ನಿತರೆ ವೆಚ್ಚವನ್ನು ಭರಿಸುವಲ್ಲಿಯೇ ಮುಗಿದು ಹೋಗುತ್ತದೆ.
ಇನ್ನುಳಿದ ಹಣವನ್ನು ಆ ಸಮುದಾಯಗಳ ಅಭಿವೃದ್ಧಿ ಹೇಗೆ ಸಾಧ್ಯ ಎನ್ನುವುದನ್ನು ಯೋಚಿಸಬೇಕು. ಈ ರೀತಿ ಬಿಳಿಯಾನೆ ಗಳಾಗಿರುವ ನಿಗಮ ಮಂಡಳಿಗಳನ್ನು ಆರಂಭಿಸುವುದರಿಂದ, ರಾಜ್ಯದ ಜನರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಪ್ರತಿ ನಿಗಮ ಮಂಡಳಿ ಆರಂಭದ ವೇಳೆ ಖರ್ಚಾಗುವ, ಅಲ್ಲಿನ ಅಧ್ಯಕ್ಷ ಉಪಾಧ್ಯಕ್ಷರಿಗೆ ನೀಡುವ ಗೌರವಧನ, ವಿವಿಧ ಭತ್ಯೆಗಳೆಲ್ಲವನ್ನು ರಾಜ್ಯದ ಜನರು ಕಟ್ಟಿದ ತೆರಿಗೆ ಹಣದಿಂದಲೇ ಸಂದಾಯವಾಗುತ್ತದೆ.
ಆದರೆ ಸ್ಥಾಪನೆಯಿಂದ ಆ ಸಮುದಾಯಗಳಿಗೆ ಪೂರ್ಣ ಪ್ರಮಾಣದಲ್ಲಿ ಯಾವುದೇ ಪ್ರಯೋಜವಾಗುವುದಿಲ್ಲ ಎನ್ನುವುದನ್ನು ಒಪ್ಪಲೇಬೇಕು. ಈ ರೀತಿ ಜಾತಿಗೊಂದು ನಿಗಮ ಮಂಡಳಿಯನ್ನು ರಚಿಸುತ್ತಾ ಹೋದರೆ, ಮುಂದೆ ಸಾವಿರ ಜಾತಿಗಳಿಗೆ ಸಾವಿರ
ನಿಗಮ ಮಂಡಳಿಗಳಿರುತ್ತವೆ. ಈ ಸಾವಿರ ಮಂಡಳಿ ಐದು ಕೋಟಿಯಂತೆ ಅನುದಾನ ನೀಡಿದರೆ, ಸರಕಾರ ಖಜಾನೆಯ ಸ್ಥಿತಿಯಲ್ಲಿ ಎಲ್ಲಿಗೆ ಬರುತ್ತದೆ? ಈಗಾಗಲೇ ರಾಜ್ಯ ಸರಕಾರದ ಬೊಕ್ಕಸದ ಬಹುಪಾಲು committed expenditure ಗೆ ಹೋಗುತ್ತಿದೆ.
ಇದರಲ್ಲಿ ಪಿಂಚಣಿ, ವತನ, ಸಾಲ ಮರುಪಾವತಿ ಸೇರಿದಂತೆ ಹಲವು ಬದ್ಧ ಖರ್ಚುಗಳಿವೆ. ಈ ಖರ್ಚು ಹೆಚ್ಚಾಗುತ್ತಾ ಹೋಗು ತ್ತಿದ್ದಂತೆ, ರಾಜ್ಯದ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನವೂ ತಗ್ಗುತ್ತಾ ಹೋಗುತ್ತದೆ. ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ
ಕಡಿತವಾಗುತ್ತ ಹೋದರೆ, ರಾಜ್ಯ ಅಭಿವೃದ್ಧಿಗೆ ಎಲ್ಲಿಂದ ಅನುದಾನ ತರಬೇಕು. ಇನ್ನು ಲಿಂಗಾಯತ, ಒಕ್ಕಲಿಗ, ಕುರುಬ ಸಮುದಾಯದಂತ ದೊಡ್ಡ ಸಮುದಾಯಗಳ ಅಭಿವೃದ್ಧಿ ಮಂಡಳಿಗಳಿಗೆ ಕನಿಷ್ಠ ನೂರು ಕೋಟಿ ಅನುದಾನ ನೀಡಬೇಕು ಎನ್ನುವ ಒತ್ತಡ ಬರುವುದು ಸಹಜ. ಈ ರೀತಿ ನೂರಾರು ಕೋಟಿ ರು. ಅನುದಾನವನ್ನು ಒಂದು ಸಮುದಾಯದ ಅಭಿವೃದ್ಧಿ ಮೀಸಲಿಟ್ಟಿರೆ, ಇನ್ನುಳಿದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕ್ರೊಢೀಕರಣ ಹೇಗೆ ಸಾಧ್ಯ? ಇದರಿಂದ ಮುಂದಿನ ಕೆಲ ವರ್ಷದಲ್ಲಿಯೇ ರಾಜ್ಯ ಸರಕಾರಕ್ಕೆ ಜಿಎಸ್‌ಟಿ ಮಂಡಳಿಯಿಂದ ಪ್ರತಿವರ್ಷ ಬರುವ ಸುಮಾರು 10 ರಿಂದ 12 ಸಾವಿರ ಕೋಟಿ ಜಿಎಸ್‌ಟಿ ಪರಿಹಾರ ಮೊತ್ತವೂ ಸ್ಥಗಿತವಾಗಲಿದೆ.
ಅದನ್ನು ನಿಭಾಯಿಸುವುದರೊಂದಿಗೆ, ಹೆಚ್ಚುವರಿ ಅನವಶ್ಯಕ ಖರ್ಚುನ್ನು ಹೊತ್ತುಕೊಳ್ಳುವುದು ಸರಿಯಲ್ಲ. ಇನ್ನು ಲಿಂಗಾಯತ ನಿಗಮ ಮಂಡಳಿಗಿಂತ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು, ವಿವಾದಕ್ಕೆ ಕಾರಣವಾಗಿದ್ದು ಮರಾಠ ಅಭಿವೃದ್ಧಿ ಪ್ರಾಧಿಕಾರ. ಈ ಪ್ರಾಧಿಕಾರದ ಸ್ಥಾಪನೆಗೆ ಕೇವಲ ಪ್ರತಿಪಕ್ಷಗಳು ಮಾತ್ರವಲ್ಲದೇ, ಕನ್ನಡ ಪರ ಹೋರಾಟಗಾರರು, ಬಿಜೆಪಿಯಲ್ಲಿಯೇ ಇರುವ ಅನೇಕರು ವಿರೋಧಿಸಿದರು. ಮರಾಠ ಅಭಿವೃದ್ಧಿ ಪ್ರಾಧಿಕಾರದಿಂದ ರಾಜ್ಯಕ್ಕೆ ಲಾಭಕ್ಕಿಂತ ಭವಿಷ್ಯದಲ್ಲಿ ಭಾರಿ ಆಘಾತವೇ ಇರಲಿದೆ ಎನ್ನುವ ಆತಂಕವನ್ನು ಅನೇಕರು ಹೊರಹಾಕಿದರು.
ಮುಂದಿನ ಕೆಲ ತಿಂಗಳಲ್ಲಿ ಎದುರಾಗಲಿರುವ ಬೆಳಗಾವಿ ಉಪಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ನಿರ್ಧಾರ ಕೈಗೊಂಡಿರಬಹುದು ಎನ್ನುವ ಮಾತನ್ನು ಬಹುತೇಕರು ಹೇಳಿದರು. ಈ ಮಾತನ್ನು ಪೂರ್ಣವಾಗಿ ಇಲ್ಲ ಎನ್ನುವುದಕ್ಕೂ ಸಾಧ್ಯವಿಲ್ಲ. ಬೆಳಗಾವಿ ಸಂಸದ ಸುರೇಶ್‌ಅಂಗಡಿ ಅವರ ನಿಧನದಿಂದ ತೆರವಾಗಿರುವ ಸ್ಥಾನವನ್ನು ಉಳಿಸಿಕೊಳ್ಳಲು, ಮರಾಠರನ್ನು ಒಲಿಸಿಕೊಳ್ಳಲು ಈ ನಿರ್ಧಾರ ಮಾಡಿರಬಹುದು.
ರಾಜಕೀಯವಾಗಿ ನೋಡಿದರೆ ಇದು ಒಳ್ಳೆಯ ನಡೆ. ಆದರೆ ರಾಜ್ಯದ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ನೋಡುವು ದಾದರೆ, ಮುಂದೆ ಒಂದಲ್ಲ ಒಂದು ದಿನ ರಾಜ್ಯದ ಭಾಷೆಗೆ ಇದು ಮಾರಕ ಎಂದರೆ ತಪ್ಪಾಗುವುದಿಲ್ಲ. ಪ್ರಾಧಿಕಾರ ಎನ್ನುವುದು ಸ್ವಾಯತ್ತ ಸಂಸ್ಥೆಗಳು. ಒಮ್ಮೆ ಈ ಸಂಸ್ಥೆಗೆ ಸಾಂವಿಧಾನಿಕ ಮಾನ್ಯತೆ ಸಿಕ್ಕರೆ, ಮುಂದಿನ ದಿನದಲ್ಲಿ ಇವುಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿವೆ. ಮರಾಠ ಅಭಿವೃದ್ಧಿ ಪ್ರಾಧಿಕಾರವೆಂದು ಸ್ಥಾಪಿಸಿರುವ ಸರಕಾರ, ಮುಂದೆ ಆ ಪ್ರಾಧಿಕಾರ ತಗೆದುಕೊಳ್ಳುವ ಎಲ್ಲ ನಿರ್ಣಯಗಳನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಗಲಿದೆ.
ಮರಾಠ ಪ್ರಾಧಿಕಾರದ ಹೆಸರಲ್ಲಿ ಮುಂದೊಂದು ದಿನ ಕರ್ನಾಟಕ ವಿರೋಧಿ ನಿರ್ಣಯ ಕೈಗೊಂಡರೆ ಏನು ಮಾಡಬೇಕು?
ಕರ್ನಾಟಕದ ಮಾತೃಭಾಷೆಯಾಗಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಐದು ಕೋಟಿ ರು. ಅನುದಾನ ನೀಡಲಾಗಿದ್ದು,
ಗಡಿನಾಡ ಅಭಿವೃದ್ಧಿ ಪ್ರಾಧಿಕಾರ ಇದ್ದೂ, ಇಲ್ಲವಾಗಿದೆ. ಹೀಗಿರುವಾಗ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವುದಷ್ಟೇ
ಅಲ್ಲದೇ, 50 ಕೋಟಿ ರು. ಅನುದಾನ ನೀಡಲಾಗಿದೆ. ಇದು ರಾಜ್ಯದ ಮಾತೃಭಾಷೆಯಾಗಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಬರೋಬ್ಬರಿ 10 ಪಟ್ಟು ಹೆಚ್ಚು ಅನುದಾನ. ಬಿಜೆಪಿ ಪಕ್ಷವಾಗಿ ಅಥವಾ ಯಡಿಯೂರಪ್ಪ ಅವರು ಇದೇ ನಿರ್ಣಯವನ್ನು
ಕರ್ನಾಟಕ ಹೊರತು ಬೇರೆ ಯಾವುದೇ ರಾಜ್ಯದಲ್ಲಿ ತಗೆದುಕೊಂಡಿದ್ದರೂ, ಅಲ್ಲಿನ ಜನರನ್ನು ಇಷ್ಟು ಸುಲಭಕ್ಕೆ ಒಪ್ಪಿ ಕೊಳ್ಳುತ್ತಿದ್ದರೇ? ಬೆಳಗಾವಿಯಲ್ಲಿ ಉಪಚುನಾವಣೆ ಇದೆ ಎನ್ನುವ ಕಾರಣಕ್ಕೆ, ಯಡಿಯೂರಪ್ಪ ಅವರು ಈ ರೀತಿ ಪ್ರಾಧಿಕಾರ ರಚಿಸಲು ಮುಂದಾದರು.
ಆದರೆ ಅಲ್ಲಿ ಇಷ್ಟು ವರ್ಷಗಳ ಕಾಲ ಈ ಘೋಷಣೆ ಇಲ್ಲದೆಯೂ ಬಿಜೆಪಿ ಗೆಲ್ಲುತ್ತಲೇ ಬಂದಿತ್ತು. ಆದರೀಗ ಮರಾಠ ಅಭಿವೃದ್ಧಿ ಪ್ರಾಧಿಕಾರ (ಇದೀಗ ಸಮುದಾಯವೆಂದು ಮಾಡಲಾಗಿದೆ) ಎಂದು ಘೋಷಣೆಯಾದ ಬಳಿಕ ಒಂದು ಕನ್ನಡಿಗರ ವಿರೋಧವನ್ನು
ಕಟ್ಟಿಕೊಳ್ಳಲಾಗಿದೆ. ಇದೀಗ ಮರಾಠ ಪ್ರಾಧಿಕಾರದ ಘೋಷಣೆಯಿಂದ ಆಗಿರುವ ಡ್ಯಾಮೇಜ್ ಕಂಟ್ರೋಲ್‌ಗೆ ವಾಪಸು ಪಡೆದರೆ, ಮರಾಠಿಗರು ವಿರುದ್ಧವಾಗುವ ಸಾಧ್ಯತೆಯಿದೆ. ಆದ್ದರಿಂದ ಇದೀಗ ಈ ಪ್ರಾಧಿಕಾರ ನುಂಗಲಾರದ ತುತ್ತಾಗಿದೆ ಎಂದರೆ ತಪ್ಪಾಗ ಲಿಕ್ಕಿಲ್ಲ.
ಈ ರೀತಿ ಸಮುದಾಯಗಳಿಗೊಂದು ನಿಗಮ ಮಂಡಳಿಗಳನ್ನು ಸ್ಥಾಪಿಸುವ ಬದಲು, ಈ ಎಲ್ಲ ಸಮುದಾಯಗಳನ್ನು ಸೇರಿಸಿ, ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಏನಾದರೂ ಯೋಜನೆ ರೂಪಿಸಬಹುದೇ ಎನ್ನುವುದನ್ನು ಯೋಚಿಸ ಬಹುದಾಗಿದೆ. ಜಾತಿ ಗೊಂದು ನಿಗಮ ಮಂಡಳಿ ಎನ್ನುವ ಯೋಚನೆ ಬದಿಗಿಟ್ಟು, ಆರ್ಥಿಕವಾಗಿ ಹಿಂದುಳಿದಿರುವ ಎಲ್ಲ ಸಮುದಾಯದ ಜನರ
ಅಭಿವೃದ್ಧಿ ಪ್ರತ್ಯೇಕ ಸಚಿವಾಲಯವನ್ನೇ ಸ್ಥಾಪಿಸಬಹುದು.
ಇದಕೆ ಬೇಕಿದ್ದರೆ ನೂರಲ್ಲ ಸಾವಿರ ಕೋಟಿ ಅನುದಾನವನ್ನು ನೀಡಿ, ಎಲ್ಲ ಸಮುದಾಯಗಳ ಅಭಿವೃದ್ಧಿ ಆಗಬೇಕಿರುವ ಕೆಲಸ ವನ್ನು ಒಂದೇ ವೇದಿಕೆಯಿಂದ ಮಾಡಬಹುದು. ಈ ರೀತಿ ಜಾತಿಗೊಂದು ನಿಗಮ ಮಂಡಳಿ ಸ್ಥಾಪಿಸುವ ಬದಲು, ಕೇಂದ್ರ ಸರಕಾರ ಜಾರಿಗೆ ತಂದಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲು ಕೋಟ ಮಾದರಿಯಲ್ಲಿ ರಾಜ್ಯದಲ್ಲಿಯೂ ಏನಾದರೂ ಯೋಜನೆ ಜಾರಿಗೊಳಿಸಬಹುದೇ ಎನ್ನುವುದನ್ನು ಯೋಚಿಸಬಹುದು. ಹಣವನ್ನು ಖರ್ಚು ಮಾಡಿಕೊಂಡು, ಬಡವ ಬಡವನಾಗಿಯೇ
ಉಳಿಯುವುದಕ್ಕಿಂತ ಅಥವಾ ತಾತ್ಕಾಲಿಕ ಸಹಾಯ ನೀಡುವುದಕ್ಕಿಂತ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಪೂರಕವಾಗಿರುವ ಯೋಜನೆಗಳನ್ನು ರೂಪಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಆಡಳಿತ ನಡೆಸುವವರು ಯೋಚಿಸಬೇಕಿದೆ.