Thursday, 12th December 2024

ಇಬ್ಬರನ್ನು ಸೋಲಿಸಲು ಇನ್ನೇನು ಮಾಡಬೇಕಿತ್ತು ?

ಪ್ರಚಲಿತ

ಪ್ರಕಾಶ್ ಶೇಷರಾಘವಾಚಾರ್‌

sprakashbjp@gmail.com

ಅದ್ಯಾವ ಮೋಡಿಯನ್ನು ಮೋದಿ ಮತ್ತು ಯೋಗಿ ಜೋಡಿ ಉತ್ತರಪ್ರದೇಶದ ಜನರ ಮೇಲೆ ಮಾಡಿದ್ದಾರೆ. 2014 ರಿಂದ ನಡೆದಿರುವ ನಾಲ್ಕು ಚುನಾವಣೆಯಲ್ಲಿಯೂ ಪ್ರತಿಪಕ್ಷಗಳನ್ನು ಧೂಳಿಪಟ ಮಾಡುತ್ತಿರುವ ಜಾದೂವಾದರು ಏನು ಎಂಬುದನ್ನು ಅರ್ಥೈಸಲಾಗದೆ ವಿರೋಧಿಗಳು ದಿಗ್ಮೂಢರಾಗಿದ್ದಾರೆ. 

ಮತ್ತೊಮ್ಮೆ ಪಂಚ ರಾಜ್ಯಗಳ ಫಲಿತಾಂಶ ದೇಶದಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಪಾರಮ್ಯವನ್ನು ನಿಚ್ಚಳ ವಾಗಿ ಸಾಬೀತುಪಡಿಸಿದೆ. ವಿಶೇಷವಾಗಿ ಉತ್ತರ ಪ್ರದೇಶದಲ್ಲಿ 37 ವರ್ಷಗಳ ತರುವಾಯ ಎರಡನೆಯ ಅವಧಿಗೆ ಮತ್ತೆ ಅಧಿಕಾರ ಹಿಡಿದಿರುವ ಯೋಗಿ ಆದಿತ್ಯನಾಥ್ ಅವರು, ಆಡಳಿತ ವಿರೋಧಿ ಅಲೆಯನ್ನೂ ಮೆಟ್ಟಿ ನಿಂತು ಪುನಃ ಅಧಿಕಾರದ ಗದ್ದುಗೆಯನ್ನು ಹಿಡಿದು ಕಮಾಲ್ ಮಾಡಿದ್ದಾರೆ.

ಉದಾರವಾದಿಗಳು ಬಿಜೆಪಿಯ ಈ ಅಭೂತಪೂರ್ವ ಸಾಧನೆಯಿಂದ ಕಂಗಾಲಾಗಿದ್ದಾರೆ. ಮೋದಿಯವರ ನಿತ್ಯ ದೂಷಕರು ಮಾತಿಲ್ಲದೆ ಗಾಢ ಮೌನಕ್ಕೆ ಶರಣಾಗಿದ್ದಾರೆ. ಡೋಂಗಿ ಜಾತ್ಯತೀತವಾದಿಗಳು ತಲೆಯ ಮೇಲೆ ಕೈ ಹೊತ್ತು ರೋದಿಸುತ್ತಿದ್ದಾರೆ. ಪ್ರತಿಪಕ್ಷ ಗಳು ಇವಿಎಂಗಳನ್ನು ದೂಷಿಸಲು ಸಾಧ್ಯವಿಲ್ಲದೆ ಮುಂದೇನು ಎಂದು ದಿಕ್ಕು ತೋಚದೆ ಆಘಾತದಲ್ಲಿದ್ದಾರೆ. ಅಯ್ಯೋ, ಯೋಗಿ ಆದಿತ್ಯನಾಥ್ ಪುನರಾಯ್ಕೆಯಾಗಬಾರದು ಎಂದು ಏನೆಲ್ಲ ಮಾಡಿದವು.

ಕೋವಿಡ್ ಸಂಕಷ್ಟವನ್ನು ಯುಪಿ ಸರಕಾರದ ವೈಫಲ್ಯ ಎಂದು ಹೇಗೆಲ್ಲ ಬಣ್ಣ ಬಣ್ಣ ವಾಗಿ ಪ್ರಚಾರ ಮಾಡಲಾಯಿತು. ರಾಯಿಟರ್ ಛಾಯಾಗ್ರಾಹಕನ ಮೂಲಕ ಅಂತ್ಯ ಸಂಸ್ಕಾರದ ಚಿತ್ರ ತೆಗೆಸಿ ದೇಶ ವಿದೇಶಗಳೆಲ್ಲ ಪ್ರಚಾರ ಮಾಡಿ ಮಸಿ ಬಳಿದವು. ನದಿಯಲ್ಲಿ ಹೆಣಗಳು ತೇಲುತ್ತಿರುವುದನ್ನು ಅದೆಷ್ಟು ಉತ್ಪ್ರೇಕ್ಷೆ ಮಾಡಿ ಜನರನ್ನು ಮನಸ್ಸನ್ನು ಬದಲಾಯಿಸಲು ಶ್ರಮ ಹಾಕಲಾಗಿತ್ತು. ಆದರೂ ಏನೂ ಪ್ರಯೋಜನವಾಗಿಲ್ಲ.

ಮಹಾರಾಷ್ಟ್ರದಲ್ಲಿ 1.5 ಲಕ್ಷ ಮತ್ತು ಕೇರಳದಲ್ಲಿ 66 ಸಾವಿರ ಕೋವಿಡ್ ಸೋಂಕಿನಿಂದ ಸಾವು ಸಂಭವಿಸಿದ್ದರೂ ಅದನ್ನು ಮುಚ್ಚಿಟ್ಟು ಯುಪಿಯಲ್ಲಿ ಆಗಿರುವ 23 ಸಾವಿರ ಕೊವಿಡ್ ಸಾವನ್ನು ವೈಭವೀಕರಿಸಲಾಯಿತು. ಜನರ ಕಣ್ಣಿಗೆ ಯುಪಿಯಲ್ಲಿ ಆರೋಗ್ಯ ವ್ಯವಸ್ಥೆಯು ಸಂಪೂರ್ಣವಾಗಿ ಕುಸಿದು ಹೋಗಿದೆ ಎಂದು ಕಾಣುವಂತೆ ಮಾಡಿ, ಸರಕಾರ ಕೋವಿಡ್ ನಿರ್ವಹಣೆಯಲ್ಲಿ ಸೋತಿದೆ ಎಂದು ಜನರಿಗೆ ಪದೇ ಪದೇ ನೆನಪು ಮಾಡಿದ್ದರೂ ನಿರೀಕ್ಷೀತ ಫಲ ಚುನಾವಣೆಯಲ್ಲಿ ಸಿಕ್ಕಲಿಲ್ಲ.

ಜಾಪನೀಸ್ ಎನ್ಸಾ-ಲಿಟೀಸ್‌ನಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಷೇತ್ರದಲ್ಲಿ ನೂರಾರು ಮಕ್ಕಳು ಮೃತಪಟ್ಟಾಗ ವೈದ್ಯ ಕಫೀಲ್ ಖಾನ್ ಮೂಲಕ ಸರಕಾರಕ್ಕೆ ಮಸಿ ಬಳೆಯಲು ತಂತ್ರ ರೂಪಿಸಲಾಗಿತ್ತು. ಗೋರಖ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಣೆ ಯಲ್ಲಿ ವಿಫಲವಾಗಿ ವಜಾಗೊಂಡಿದ್ದ ವೈದ್ಯ ಕಫೀಲ್ ಖಾನ್ ಮೂಲಕ ಪುಸ್ತಕವನ್ನು ಬರೆಸಿ ದುಡ್ಡು ಕಳೆದುಕೊಂಡರು.
ಆದರೆ ಯೋಗಿ ಸರಕಾರವು ಮತ್ತೆಂದು ಈ ದುರ್ಘಟನೆ ಮರುಕಳಿಸಬಾರದ ಹಾಗೆ ಲಸಿಕೆ ಮತ್ತು ಉತ್ತಮ ಚಿಕಿತ್ಸೆ ದೊರೆಯುವಂತೆ ಮಾಡಿ ಆ ಪಿಡುಗನ್ನೆ ನಿವಾರಿಸಿ ಬಿಟ್ಚರ!.

ಕೊವಿಡ್ ಮೊದಲನೆಯ ಅಲೆಯ ವೇಳೆ ವಿಧಿಸಿದ್ದ ಲಾಕ್ ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರು ವಾಪಸ್ ತಮ್ಮ ಮನೆಗಳನ್ನು ತಲುಪಲು ದೂರ ದೂರದ ನಗರಗಳಿಂದ ನಡೆದರು, ಸೈಕಲ್ ತುಳಿದರು ಹೇಗಾದರು ಮಾಡಿ ಮನೆ ಸೇರಬೇಕು ಎಂಬ ತವಕದಲ್ಲಿ ನಾನಾ ಸಂಕಷ್ಟವನ್ನು ಅನುಭವಿಸಿದರು. ಇವರ ಬವಣೆಯನ್ನು ಚರ್ವಿತ ಚರ್ವಣವಾಗಿ ಸಾಮಾಜಿಕ ತಾಣದಲ್ಲಿ ವೈಭವೀ ಕರಿಸಲಾಯಿತು. ನೂರಾರು ಲೇಖನಗಳನ್ನು ನಾನಾ ಅಂಕಣಕಾರರ ಮೂಲಕ ಬರೆಸಲಾಯಿತು.

ಇವರ ಬವಣೆಯನ್ನು ಮೋದಿ ಮಣಿಸುವ ಪ್ರಚಾರದ ಸರಕು ಮಾಡಿಕೊಂಡು ಅದಕ್ಕಾಗಿ ಎಷ್ಟೆಲ್ಲ ಕಷ್ಟಪಟ್ಟರು. ಇಷ್ಟೆಲ್ಲ ಕುತಂತ್ರದ ತರುವಾಯವೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದಿಂದ ಗೆಲ್ಲುತ್ತದೆ. ಬಿಟ್ಟ ಬಾಣಗಳೇನು ಕಡಿಮೆಯೇ? ಮೋದಿಯವರ ಸಣ್ಣ ಸಣ್ಣ ತಪ್ಪುಗಳನ್ನೂ ಉತ್ಪ್ರೇಕ್ಷಿಸಿ ಟೀಕೆ ಮಾಡಿದ್ದು ಜನಕ್ಕೆ ಕೇಳಲಿಲ್ಲವಾ? ಸಿಎಎ ಹೋರಾಟ ವನ್ನು ಅದೆಷ್ಟು ಕಾಲ ಜೀವಂತವಾಗಿ ಇಟ್ಟಿದ್ದರು ಕೂಡ ಫಲ ನೀಡಿಲ್ಲವಲ್ಲ?! ಮತಾಂತರ ನಿಷೇಧ ಕಾಯಿದೆ ಮತ್ತು ಲವ್ ಜಿಹಾದ್ ಕಾಯಿದೆ ಮುಂದಿಟ್ಟು ಕೊಂಡು ಸರಕಾರವನ್ನು ಪೇಚಿಗೆ ಸಿಲುಕಿಸುವ ಪ್ರಯತ್ನವು ಸೋತಿತು.

ಇವೆಲ್ಲ ಬಿಡಿ, ರೈತರ ಹಿತಕ್ಕಾಗಿ ಜಾರಿಗೆ ತಂದ ಮೂರು ಕೃಷಿ ಕಾಯಿದೆಯನ್ನು ರೈತ ವಿರೋಧಿ ಕಾಯಿದೆಗಳು ಎಂದು ಆರೋಪಿಸಿ ರೈತರ ದಾರಿ ತಪ್ಪಿಸಿ ರೈತರನ್ನು ದೆಹಲಿಗೆ ಕರತಂದು ಒಂದು ವರ್ಷಗಳ ಕಾಲ ಬೀದಿಯಲ್ಲಿ ಚಳಿ,ಮಳೆ ಮತ್ತು ಸುಡು ಬಿಸಿಲಿನ ನಡುವೆ ಇರುವಂತೆ ಮಾಡಲಾಯಿತು. ಹೆದ್ದಾರಿಗಳಿಗೆ ಅಡ್ಡ ಕೂತು ವಾಹನ ಸಂಚಾರ ನಡೆಯದಂತೆ ಮಾಡಿದೆವು. ವಯೋ
ಸಹಜ ಕಾರಣಗಳಿಗೆ ಮೃತಪಟ್ಟಿದ್ದ ರೈತರನ್ನು ಸರಕಾರವೇ ಅವರ ಸಾವಿಗೆ ಕಾರಣ ಎಂದು ಆರೋಪಿಸಿ ವ್ಯಾಪಕ ಪ್ರಚಾರ ನಡೆಸಿದರು. ಆದರೆ ಚುನಾವಣೆಯಲ್ಲಿ ಇದರಿಂದ ಬಿಜೆಪಿಗೆ ಯಾವ ದುಷ್ಪರಿಣಾಮವೂ ಆಗಲಿಲ್ಲ.

ಪಶ್ಚಿಮ ಉತ್ತರ ಪ್ರದೇಶದಲ್ಲಿ ರೈತರ ಆಕ್ರೋಶ ದಿಂದ ಜಾಟ್ ಸಮುದಾಯವು ಬಿಜೆಪಿಯನ್ನು ಈ ಬಾರಿ ಕೈ ಹಿಡಿಯುವುದಿಲ್ಲ ಎಂದು ವಿಶ್ಲೇಷಿಸಿದ್ದರು. ಕಳೆದ ಬಾರಿ ಬಿಜೆಪಿಗೆ 126 ಸೀಟುಗಳ ಪೈಕಿ 100 ಸೀಟು ಗಳಿಸಿತ್ತು. ಈ ಬಾರಿ ಸಮಾಜವಾದಿ ಪಕ್ಷ
ಆರ್‌ಎಲ್‌ಡಿ ನಾಯಕ ಜಯಂತ್ ಸಿಂಗ್ ಜತೆ ಮೈತ್ರಿಕೂಟ ಮಾಡಿಕೊಂಡ ಕಾರಣ ಬಿಜೆಪಿಗೆ ಹಿನ್ನಡೆ ಖಚಿತ; ಈ ಬಾರಿ ಹಿಂದುತ್ವ ಕೆಲಸ ಮಾಡುವುದಿಲ್ಲ ಎಂದು ಭಾವಿಸಿದ್ದರು.

ಫಲಿತಾಂಶ ನೋಡಿದರೆ ಪಶ್ಚಿಮ ಉತ್ತರಪ್ರದೇಶದಲ್ಲಿ ಈ ಬಾರಿ ಬಿಜೆಪಿ 92 ಸೀಟು ಗೆದ್ದಿದೆ. ಜಾಟರು ಹಿಂದುತ್ವವನ್ನು ಕೈಹಿಡಿದರೇ ವಿನಹ ಮೈತ್ರಿಕೂಟವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ರೈತ ಮುಖಂಡ ಮಹೇಂದ್ರ ಟಿಕಾಯತ್ ವಿಧಾನಸಭಾ ಚುನಾವಣೆಯಲ್ಲಿ ‘ಬಿಜೆಪಿ ರೈತ ವಿರೋಧಿ’ ಎಂದು ಪಟ್ಚಿ ಕಟ್ಟಿ ಸೋಲುವಂತೆ ಮಾಡಲು ಶ್ರಮಪಟ್ಟರು. ವಿಪರ್ಯಾಸವೆಂದರೆ
ಟಿಕಾಯತ್ ಮನೆ ಇರುವ ಬೂತ್‌ನಲ್ಲಿ ಬಿಜೆಪಿಗೆ ೫೨೧ ವೋಟು, ಆರ್‌ಎಲ್‌ಡಿಗೆ ಕೇವಲ 185 ವೋಟು ಬಂದಿದೆ.

ಹತ್ರಾಸ್‌ನಲ್ಲಿ ನಡೆದ ಘೋರ ಅತ್ಯಾಚಾರ ಮತ್ತು ಅದಕ್ಕೆ ಬಲಿಯಾದ ದಲಿತ ಹೆಣ್ಣಿನ ಸಾವನ್ನು ಮುಂದಿಟ್ಟಕೊಂಡು ದಲಿತ ಸಮುದಾಯವನ್ನು ಬಿಜೆಪಿಯಿಂದ ದೂರ ಸರಿಸಲು ಮಾಡಿದ ಪ್ರಯತ್ನಗಳು ಯಾವ ಕೆಲಸಕ್ಕೂ ಬರಲಿಲ್ಲ. ಬದಲಿಗೆ ಹಿಂದಿನ ಚುನಾವಣೆಗಿಂತ ಹೆಚ್ಚಾಗಿ ದಲಿತರು ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ದಲಿತರು ಶೇಕಡಾ ೫೧ರಷ್ಟು ಮತ್ತು ಜಾತವ
ದಲಿತರು ಶೇಕಡಾ ೨೧ರಷ್ಟು ಮತಗಳನ್ನು ನೀಡಿ ಬಿಜೆಪಿಗೆ ಬೆಂಬಲಿಸಿದ್ದಾರೆ.

ಜಾಟ್ ಸಮುದಾಯದ ಹಿಂದುಳಿದವರು ಕೂಡ ಶೇಕಡಾ 47ರಷ್ಟು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಲಖೀಂಪುರ ಜಿಲ್ಲೆಯ ಬನ್ ಬೀರ್‌ಪುರದಲ್ಲಿ ಧರಣಿ ನಿರತ ರೈತರ ಮೇಲೆ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್ ಮಿಶ್ರ ತೇನಿ ಅವರ ಪುತ್ರ ಅಶೀಷ್ ಮಿಶ್ರ ಅವರು ತಮ್ಮ ಎಸ್‌ಯುವಿಯನ್ನು ಧರಣಿ ನಿರತರ ಮೇಲೆ ಹರಿಸಿ ೪ ರೈತರ ಕೊಂದ ಆರೋಪವನ್ನು ಎದುರಿಸುತ್ತಿದ್ದಾರೆ.

ಚುನಾವಣೆಗೆ ಮುನ್ನ ನಡೆದ ಈ ಘಟನೆಯು ಸಂಪೂರ್ಣ ರಾಜಕೀಯ ಬಣ್ಣವನ್ನು ಪಡೆಯಿತು. ಬಹು ದೊಡ್ಡ ವಿವಾದವಾಗಿ ರೈತ ಸಮುದಾಯವನ್ನು ಬಿಜೆಪಿ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನ ಸತತವಾಗಿ ಮಾಡಲಾಯಿತು. ಈ ಬಾರಿಯ ಚುನಾವಣೆಯಲ್ಲಿ ನಿಶ್ಚಿತವಾಗಿ ಲಖೀಂಪುರ ಜಿಲ್ಲೆಯಲ್ಲಿ ಸೋಲು ಖಚಿತ ಎಂಬ ಲೆಕ್ಕಾಚಾರವಿತ್ತು. ಆದರೆ, ಎಲ್ಲರೂ ಚಕಿತಗೊಳ್ಳುವಂತೆ ಲಖೀಂಪುರ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಿ ಪ್ರಚಾರ ನಿರತ ವಿರೋಧಿಗಳು ದಿಕ್ಕೆಟ್ಚು ಹೋಗುವ ಫಲಿತಾಂಶ ಬಂದಿದೆ.

ಸ್ವರಾಜ್ ಪಕ್ಷದ ಯೊಗೇಂದ್ರ ಯಾದವ್ ಬಿಜೆಪಿಯ ಗೆಲುವು ದೇಶಕ್ಕೆ ಮಾರಕ, ನಾವು ಪುನಃ ದೇಶವನ್ನು ಮರಳಿಪಡೆಯಬೇಕು ಎಂದು ಬಡಬಡಿಸುತ್ತಿದ್ದರೆ. ಟಿಎಂಸಿ ನಾಯಕಿ ತನ್ನ ಹೆಜ್ಜೆ ಗುರುತನ್ನು ಪಶ್ಚಿಮ ಬಂಗಾಳದ ಹೊರಗೂ ವಿಸ್ತರಿಸಲು ವಾರಾಣಸಿಗೆ ಬಂದು ಪ್ರಚಾರ ಮಾಡಿ ಮುಖಭಂಗಿತರಾದ ತರುವಾಯ ಇವಿಎಂ ಹ್ಯಾಕ್ ಆಗಿರುವ ಸಾಧ್ಯತೆಯ ಕಾರಣ ಅದನ್ನು ಫಾರೆನ್ಸಿಕ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಹಲಬುತ್ತಿದ್ದಾರೆ.

ಇನ್ನು ರೈತ ನಾಯಕ(?) ಮಹೇಂದ್ರ ಟಿಕಾಯತ್ ಪರಿಸ್ಥಿತಿಯು ತೀರಾ ಚಿಂತಾಜನಕವಾಗಿದೆ. ತನ್ನ ಪ್ರಭಾವದಿಂದ ಬಿಜೆಪಿ ಮಣಿಸುವೆ ಎಂದು ಬೀಗುತ್ತಿದ್ದವರು ತಮ್ಮ ನಕಾರಾತ್ಮಕ ಚಟುವಟಿಕೆಯು ತಿರುಗುಬಾಣವಾಗಿ ಬಿಜೆಪಿಗೆ ಚುನಾವಣೆ ಗೆಲ್ಲುವುದು ತಿಳಿದಿದೆ ಎಂದು ಹೇಳುವ ಮೂಲಕ ಸೋಲನ್ನು ಅನಿವಾರ್ಯವಾಗಿ ಒಪ್ಪಿಕೊಂಡಿದ್ದಾರೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರು ಮಹಿಳಾ ಮತಗಳ ಮೇಲೆ ಕಣ್ಣಿಟ್ಟು ‘ಮೈ ಲಡ್ಕಿ ಹೂಂ ಲಡ್ ಸಕ್ತೀ ಹೂಂ’ ಎಂಬ ಪ್ರಚಾರ ಕೈಗೊಂಡು ಚುನಾವಣೆಯಲ್ಲಿ 148 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ಆದರೆ ಒಬ್ಬರು ಮಾತ್ರ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಿ ಉಳಿದ 147 ಅಭ್ಯರ್ಥಿಗಳಲ್ಲಿ ಯಾರೊಬ್ಬರು 3000 ಮತಗಳ ಗಡಿಯನ್ನು ದಾಟಲಿಲ್ಲ.
ದಶಕಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ರಾಯ್‌ಬರೇಲಿ ಮತ್ತು ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಒಂದೂ ವಿಧಾನಸಭಾ ಸೀಟು ಗೆಲ್ಲಲಾಗದೆ ಗಾಂಧಿ ಕುಟುಂಬದ ಕೈಯಿಂದ ಈ ಎರಡೂ ಕ್ಷೇತ್ರಗಳು ಜಾರಿ ಹೋಗುವಂತಾಗಿದೆ.

ಜಾತವ್ ದಲಿತ ಸಮುದಾಯದ ಮೇಲೆ ಬಲವಾದ ಹಿಡಿತವಿದ್ದ ಬಿಎಸ್‌ಪಿ ನಾಯಕಿ ಮಾಯಾವತಿಯವರು ಚುನಾವಣಾ ಕಣದಲ್ಲಿ ಕಾಟಾಚಾರಕ್ಕಿದ್ದರು. ಪ್ರಾಯಶಃ ಇವರನ್ನು ನಿಷ್ಕ್ರಿಯಗೊಳಿಸಿ ಅವರ ಮತ ಸಮಾಜವಾದಿ ಪಕ್ಷಕ್ಕೆ ದೊರೆಯುವ ತಂತ್ರಗಾರಿಕೆ ಮಾಡಿರುವ ಸಾಧ್ಯತೆ ಯನ್ನು ತಳ್ಳಿ ಹಾಕಲಾಗದು ಎಂದು ಚುನಾವಣಾ ವಿಶ್ಲೇಷಕರ ಅಂಬೋಣ. ಆದರೆ ಈ ತಂತ್ರವೂ ಮೋದಿ-ಯೋಗಿಯವರ ಬುಲ್ಡೋಜರ್‌ಗೆ ಅಡ್ಡ ಹಾಕಲು ಶಕ್ಯವಾಗಲಿಲ್ಲ.

ಅದ್ಯಾವ ಮೋಡಿಯನ್ನು ಮೋದಿ ಮತ್ತು ಯೋಗಿ ಜೋಡಿಯು ಉತ್ತರಪ್ರದೇಶದ ಜನರ ಮೇಲೆ ಮಾಡಿದ್ದಾರೆ. ನಾನಾ ಬಗೆಯ ಕುತಂತ್ರ ಕೈಗೊಂಡರು ಫಲಿತಾಂಶದಲ್ಲಿ ಬದಲಾವಣೆ ಕಾಣುತ್ತಿಲ್ಲ. 2014ರಿಂದ 2022ರತನಕ ನಡೆದಿರುವ ನಾಲ್ಕು ಚುನಾವಣೆ ಯಲ್ಲಿಯೂ ಮೋದಿ ಮತ್ತು ಯೋಗಿ ಪ್ರತಿಪಕ್ಷಗಳನ್ನು ಧೂಳಿಪಟ ಮಾಡುತ್ತಿರುವ ಜಾದೂವಾದರು ಏನು ಎಂಬುದು ಬಿಜೆಪಿ ವಿರೋಧಿಗಳು ಅರ್ಥೈಸಲಾಗದೆ ದಿಗ್ಮೂಢರಾಗಿದ್ದಾರೆ. ಇತ್ತ, ನರೇಂದ್ರ ಮೋದಿಯವರ ವರ್ಚಸ್ಸು , ಜನಪ್ರಿಯತೆ ಮತ್ತು ಯೋಗಿ ಆದಿತ್ಯ ನಾಥ್ ರವರ ದಕ್ಷ ಆಡಳಿತದ ಫಲವಾಗಿ ವಿರೋಧಿಗಳು ಇವರಿಬ್ಬರನ್ನು ಮಣಿಸಲು 2022ರಲ್ಲಿಯೂ ಸೋತಿದ್ದಾರೆ.